Tag: health

  • ಹಾಟ್ ಬೇಸಿಗೆಯಲ್ಲಿ ಕರ್ಬೂಜ ತಿನ್ನಿ ಕೂಲ್ ಆಗಿರಿ

    ಹಾಟ್ ಬೇಸಿಗೆಯಲ್ಲಿ ಕರ್ಬೂಜ ತಿನ್ನಿ ಕೂಲ್ ಆಗಿರಿ

    ಬೇಸಿಗೆಯಲ್ಲಿ ಕರ್ಬೂಜ ಹಣ್ಣು ಕಲ್ಲಂಗಡಿಯಂತೆಯೇ ಸಿಕ್ಕಾಪಟ್ಟೆ ಫೇಮಸ್. ಈ ಹಣ್ಣಿನ ಸೇವನೆಯಿಂದ ವಿಶೇಷವಾಗಿ ಬೇಸಿಗೆಯಲ್ಲಿ ಎದುರಾಗುವ ನಿರ್ಜಲೀಕರಣದಿಂದ ಪಾರಾಗಬಹುದು. ಅಷ್ಟೇ ಅಲ್ಲದೇ ಕರ್ಬೂಜ ಹಣ್ಣು, ಜ್ಯೂಸ್ ಸೇವನೆಯಿಂದ ಸಿಗುವ ಆರೋಗ್ಯಕ ಲಾಭಗಳ ಬಗ್ಗೆ ಬಹುತೇಕ ಮಂದಿಗೆ ತಿಳಿದಿಲ್ಲ. ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ ಕರ್ಬೂಜ ಹಣ್ಣು ತನ್ನಲ್ಲಿ ಅನೇಕ ಆರೋಗ್ಯಕರ ಅಂಶವನ್ನು ಅಡಗಿಸಿ ಇಟ್ಟುಕೊಂಡಿದೆ.

    ಹೌದು. ಕರ್ಬೂಜ ಹಣ್ಣು ಸೇವನೆಯಿಂದ ಅನೇಕ ಆರೋಗ್ಯ ಲಾಭವನ್ನು ಪಡೆಯಬಹುದಾಗಿದೆ. ದೇಹದ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಕರ್ಬೂಜ ಹಣ್ಣನ್ನು ಸೇವಿಸಿದರೆ ಒಳ್ಳೆದು. ಈ ಹಣ್ಣಿನಲ್ಲಿ ನೀರಿನಂಶ ಮತ್ತು ವಿವಿಧ ಪೋಷಕಾಂಶಗಳು ಹೆಚ್ಚಿದ್ದರೂ ಕ್ಯಾಲೋರಿಗಳು ಕಡಿಮೆ ಇದೆ. ಹೀಗಾಗಿ ಇದನ್ನು ಸೇವಿಸಿದರೆ ಕೊಬ್ಬು ಹೆಚ್ಚಿಸದೇ ದೇಹಕ್ಕೆ ಶಕ್ತಿ ಒದಗಿಸುತ್ತದೆ.

    ಕರ್ಬೂಜ ಹಣ್ಣಿನಲ್ಲಿ ಕರಗುವ ನಾರು, ಬೀಟಾ ಕ್ಯಾರೋಟೀನ್, ಪೊಟ್ಯಾಶಿಯಂ, ಕಬ್ಬಿಣ, ಮ್ಯಾಂಗನೀಸ್, ಫೋಲಿಕ್ ಆಮ್ಲ, ವಿಟಮಿನ್ ಎ, ಸಿ ಹಾಗೂ ಇತರ ಪ್ರಮುಖ ಪೋಷಕಾಂಶಗಳಿವೆ. ಹೀಗಾಗಿ ಕರ್ಬೂಜ ಹಣ್ಣು ರುಚಿಕರ ಮಾತ್ರವಲ್ಲ, ಇದರ ವಿಶಿಷ್ಟ ಪರಿಮಳವೂ ಎಲ್ಲರ ಮನ ಸೆಳೆಯುತ್ತದೆ. ಕರ್ಬೂಜ ಹಣ್ಣು ಸೇವನೆ ಆರೋಗ್ಯಕ್ಕೆ ಎಷ್ಟು ಲಾಭದಾಯಕ ಎಂಬ ಮಾಹಿತಿ ಇಲ್ಲಿದೆ.

    ಕರ್ಬೂಜ ಹಣ್ಣಿನ ಆರೋಗ್ಯಕಾರ ಲಾಭವೇನು?

    1. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
    ಕರ್ಬೂಜ ಹಣ್ಣಿನಲ್ಲಿ ವಿಟಮಿನ್ ಸಿ ಅಂಶವಿದ್ದು, ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕ್ಷಮತೆ ಹೊಂದಿದೆ. ಈ ಹಣ್ಣಿನ ಸೇವನೆಯಿಂದ ದೇಹದಲ್ಲಿ ಹೆಚ್ಚಿನ ಪ್ರಮಾಣದ ಬಿಳಿರಕ್ತಕಣಗಳನ್ನು ಉತ್ಪತ್ತಿ ಆಗುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

    2. ಮಧುಮೇಹಕ್ಕೆ
    ಕರ್ಬೂಜ ಹಣ್ಣಿನ ರಸವು ಮಧುಮೇಹ ರೋಗಿಗಳಿಗೆ ಒಳ್ಳೆಯ ಪೂರಕ ಆಹಾರವಾಗಿದ್ದು, ಕರ್ಬುಜ ಹಣ್ಣು ದೇಹದಲ್ಲಿರುವ ಸಕ್ಕರೆಯಂಶವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಹೀಗಾಗಿ ವೈದ್ಯರು ಮಧುಮೇಹಿಗಳಿಗೆ ಸ್ವಲ್ಪ ಕಹಿಯಾದ ಕರ್ಬೂಜ ಹಣ್ಣಿನ ರಸವನ್ನು ಸೇವಿಸಲು ಸೂಚಿಸುತ್ತಾರೆ.

    3. ಕಿಡ್ನಿ ಸಮಸ್ಯೆಗೆ
    ಕರ್ಬೂಜ ಹಣ್ಣು ಅತ್ಯುತ್ತಮ ಮೂತ್ರವರ್ಧಕ ಶಕ್ತಿಯನ್ನು ಹೊಂದಿದೆ. ಆದ್ದರಿಂದ ಮೂತ್ರಪಿಂಡ ಸಂಬಂಧಿ ಕಾಯಿಲೆಗೆ ಒಂದೊಳ್ಳೆ ಮದ್ದಾಗಿದೆ. ಅಲ್ಲದೆ ಕಜ್ಜಿ, ತುರುಕೆ ಆಗುವುದನ್ನು ಸಹ ತಡೆಯುತ್ತದೆ. ನಿಂಬೆಹಣ್ಣಿನ ಜೊತೆಗೆ ಕರ್ಬೂಜ ಹಣ್ಣನ್ನು ಸೇವಿಸುವುದರಿಂದ ಸಂಧಿವಾತದ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.

    4. ಜೀರ್ಣಶಕ್ತಿಗೆ ವೃದ್ಧಿಸುತ್ತೆ
    ಜೀರ್ಣಕ್ರಿಯೆಯಲ್ಲಿ ಏನಾದರು ತೊಂದರೆ ಇದ್ದಲ್ಲಿ ಕರ್ಬೂಜವನ್ನು ತಿನ್ನುವುದು ಒಳ್ಳೆದು. ಯಾಕೆಂದರೆ ಜೀರ್ಣಕ್ರಿಯೆ ಸರಾಗವಾಗಿ ಆಗುವಾಗುತ್ತದೆ. ಈ ಹಣ್ಣಿನಲ್ಲಿರುವ ನೀರಿನಂಶ ಜೀರ್ಣಕ್ರಿಯೆಗೆ ನೆರವು ನೀಡುತ್ತದೆ. ಇದರಲ್ಲಿರುವ ಖನಿಜಾಂಶವು ಜಠರದಲ್ಲಿ ಜೀರ್ಣಕ್ರಿಯೆಗೆ ತಡೆಯೊಡ್ಡುವ ಆಮ್ಲೀಯತೆ(ಅಸಿಡಿಟಿ) ಯನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ.

    5. ತ್ವಚೆಯ ಸೌಂದರ್ಯಕ್ಕೆ ಒಳ್ಳೆದು
    ಸೌಂದರ್ಯ ಹೆಚ್ಚಿಸಲೂ ಕರ್ಬೂಜದ ಹಣ್ಣನ್ನು ಬಳಸಬಹುದಾಗಿದೆ. ಒಂದು ಮಧ್ಯಮ ಗಾತ್ರದ ಕರ್ಬೂಜ ಹಣ್ಣಿನ ಕಾಲುಭಾಗದ ತಿರುಳು, ಮೂರು ಸ್ಟ್ರಾಬೆರಿ ಹಣ್ಣು, ಒಂದು ದೊಡ್ಡಚಮಚ ಓಟ್ಸ್, ಒಂದು ಚಿಕ್ಕ ಚಮಚ ಜೇನು ತುಪ್ಪ ಸೇರಿಸಿ ಚೆನ್ನಾಗಿ ಕಲಿಸಿಕೊಂಡು. ಆ ಲೇಪನವನ್ನು ಮುಖ, ಕತ್ತು, ಕೈ ಕಾಲುಗಳಿಗೆ ಹಚ್ಚಿ ಸುಮಾರು 15 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಚರ್ಮಕ್ಕೆ ಪೋಷಕಾಂಶಗಳನ್ನು ಒದಗಿಸಿ ಕೋಮಲತೆ ಮತ್ತು ಕಾಂತಿಯನ್ನು ಹೆಚ್ಚಿಸುತ್ತದೆ.

    6. ತೂಕ ಇಳಿಸಲು ಸಹಕಾರಿ
    ಕರ್ಬೂಜ ಹಣ್ಣು ತೂಕ ಇಳಿಸಲು ಸಹಕಾರಿಯಾಗಿದೆ. ಏಕೆಂದರೆ ಇದರಲ್ಲಿ ಸೋಡಿಯಂ ಅಂಶ ಮಿತವಾಗಿರುತ್ತದೆ. ಇದು ಕೊಬ್ಬು ರಹಿತ, ಕೊಲೆಸ್ಟ್ರಾಲ್ ರಹಿತ ಹಣ್ಣು ಮತ್ತು ಇದರಲ್ಲಿರುವ ಕ್ಯಾಲೋರಿಗಳು ಸಹ ಕಡಿಮೆ. ಹೀಗಾಗಿ ಇದನ್ನು ತಿಂದರೆ ಇದರಲ್ಲಿರುವ ನೀರಿನಂಶವು ನಿಮಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ಹೀಗೆ ತೂಕ ಇಳಿಸಲು ಸಹಕಾರಿಯಾಗುತ್ತದೆ.

    7. ಹೃದಯದ ಆರೋಗ್ಯಕ್ಕೆ
    ಕರ್ಬೂಜ ಹಣ್ಣಿನಲ್ಲಿರುವ ಪೊಟ್ಯಾಶಿಯಂ ಹೃದಯದ ಕ್ಷಮತೆ ಹೆಚ್ಚಿಸಲು ನೆರವಾಗುತ್ತದೆ. ಇದರಲ್ಲಿರುವ ಅಡಿನೋಸಿನ್ ಪೋಷಕಾಂಶಕ್ಕೆ ರಕ್ತವನ್ನು ಹೆಪ್ಪುಗಟ್ಟಿಸುವುದನ್ನು ತಡೆಯುವ ಗುಣವಿದೆ. ಇದು ರಕ್ತನಾಳಗಳಲ್ಲಿ ರಕ್ತ ಸರಾಗವಾಗಿ ಸಂಚರಿಸಲು ನೆರವಾಗುವ. ಈ ಮೂಲಕ ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡಿ ಹಲವು ಹೃದಯ ಸಂಬಂಧಿ ಕಾಯಿಲೆಗಳು ಬಾರದಂತೆ ನೋಡಿಕೊಳ್ಳುತ್ತದೆ.

    8. ಗರ್ಭಿಣಿಯರ ಆರೋಗ್ಯಕ್ಕೆ ಕರ್ಬೂಜ
    ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ದೇಹಕ್ಕೆ ಹೆಚ್ಚಿನ ಪ್ರಮಾಣದ ಫೋಲಿಕ್ ಆಮ್ಲದ ಅಗತ್ಯವಿರುತ್ತದೆ. ಈ ಹಣ್ಣಿನಲ್ಲಿ ಫೋಲಿಕ್ ಆಮ್ಲ ಉತ್ತಮ ಪ್ರಮಾಣದಲ್ಲಿದ್ದು, ಗರ್ಭಿಣಿಯ ದೇಹಕ್ಕೆ ಅಗತ್ಯ ಪೋಷಣೆ ಒದಗಿಸುತ್ತದೆ.

    9. ಮಲಬದ್ಧತೆ ಸಮಸ್ಯೆಗೆ
    ಕರ್ಬೂಜ ಹಣ್ಣಿನ ನೀರು ಮತ್ತು ಕರಗುವ ನಾರು ಅತ್ಯಂತ ಸಂತುಲಿತ ಅನುಪಾತದಲ್ಲಿವೆ. ಇದು ಮಲಬದ್ಧತೆಯ ತೊಂದರೆಯನ್ನು ನಿವಾರಿಸಲು ಸಹಕಾರಿಯಾಗಿದೆ. ಅಲ್ಲದೇ ಜೀರ್ಣಕ್ರಿಯೆಯನ್ನು ಸುಲಭಗೊಳಿ ಆರೋಗ್ಯ ವೃದ್ಧಿಸುತ್ತದೆ.

    10. ಕ್ಯಾನ್ಸರ್ ನಿಂದ ರಕ್ಷಣೆ
    ಕರ್ಬೂಜ ಹಣ್ಣು ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುತ್ತದೆ ಎನ್ನಲಾಗುತ್ತದೆ. ಈ ಹಣ್ಣಿನಲ್ಲಿರುವ ವಿಟಮಿನ್ ಸಿ ಹಾಗೂ ಬೀಟಾ ಕ್ಯಾರೋಟೀನ್ ಎಂಬ ಆಂಟಿ ಆಕ್ಸಿಡೆಂಟ್ ದೇಹದಲ್ಲಿ ಕ್ಯಾನ್ಸರ್ ಉಂಟುಮಾಡಬಹುದಾದ ಫ್ರೀ ರ್ಯಾಡಿಕಲ್ ಕಣಗಳನ್ನು ಹಿಮ್ಮೆಟ್ಟುತ್ತದೆ. ದೇಹದ ಜೀವಕೋಶಗಳಿಗೆ ಈ ಕಣಗಳು ಹಾನಿ ಮಾಡುವುದರಿಂದ ರಕ್ಷಿಸುತ್ತದೆ. ಹೀಗೆ ಕರ್ಬೂಜ ಹಣ್ಣು ಕ್ಯಾನ್ಸರ್ ಬರುವುದನ್ನು ತಡೆದು ರಕ್ಷಣೆ ನೀಡುತ್ತದೆ.

  • ಆರೋಗ್ಯದ ಬೆಸ್ಟ್‌ಫ್ರೆಂಡ್‌ ಆಲೂಗಡ್ಡೆ

    ಆರೋಗ್ಯದ ಬೆಸ್ಟ್‌ಫ್ರೆಂಡ್‌ ಆಲೂಗಡ್ಡೆ

    ಲೂಗಡ್ಡೆ ಅಂದ ತಕ್ಷಣ ನೆನಪಾಗೋದು ಅದರಿಂದ ತಯಾರಿಸುವ ಚಿಪ್ಸ್, ರುಚಿಕರ ತಿಂಡಿ. ಒಂದೆಡೆ ಆಲೂಗಡ್ಡೆಯಿಂದ ತಯಾರಾದ ರುಚಿಕರ ತಿಂಡಿಗೆ ಮನಸೋಲುವವರು ಇದ್ದರೆ, ಇನ್ನೊಂದೆಡೆ ಹೆಚ್ಚು ಆಲೂಗಡ್ಡೆ ತಿಂದರೆ ಕೈ ಕಾಲುಗಳು ಹಿಡಿದುಕೊಳ್ಳುತ್ತೆ, ಗ್ಯಾಸ್ಟಿಕ್ ಸಮಸ್ಯೆ ಆಗುತ್ತೆ, ಇದರ ಸಹವಾಸವೇ ಬೇಡಪ್ಪಾ ಎಂದು ಮೂಗು ಮುರಿಯುವವರೂ ಇರುತ್ತಾರೆ. ಆದರೆ ಆಲೂಗಡ್ಡೆಯನ್ನು ನಿತ್ಯವು ನಿಯಮಿತ ಸೇವಿಸಿದರೆ ಸಿಗುವ ಆರೋಗ್ಯಕರ ಲಾಭದ ಬಗ್ಗೆ ಬಹುತೇಕ ಮಂದಿಗೆ ಅರಿವಿರಲ್ಲ.

    ಆಲೂಗಡ್ಡೆಯಲ್ಲಿ ಇರುವ ಅನೇಕ ಬಗೆಯ ಪೌಷ್ಟಿಕ ಸತ್ವಗಳು ಮನುಷ್ಯನ ದೇಹಕ್ಕೆ ಒಳ್ಳೆದು. ಆಲೂಗಡ್ಡೆ ಸೇವನೆಯಿಂದ, ಅದರ ಜ್ಯೂಸ್ ಕುಡಿಯುವುದರಿಂದ ಆಗುವ ಲಾಭವೇನು? ಯಾವ ಸಮಸ್ಯೆಗೆ ಇದು ಮದ್ದು? ಎನ್ನುವುದರ ಮಾಹಿತಿ ಇಲ್ಲಿದೆ.

    ಆಲೂಗಡ್ಡೆ ಜ್ಯೂಸ್ ಕುಡಿಯಬಹುದೇ?
    ಅಧ್ಯಯನ ಹಾಗೂ ತಜ್ಞರ ಪ್ರಕಾರ, ಆಲೂಗಡ್ಡೆ ಜ್ಯೂಸ್ ಆರೋಗ್ಯಕ್ಕೆ ಒಳ್ಳೆದು. ಇದನ್ನು ನಿತ್ಯವು ಮಿತವಾಗಿ ಸೇವಿಸಿದರೆ ಆರೋಗ್ಯದ ಹಲವು ಸಮಸ್ಯೆಗಳು ನಿವಾರಣೆ ಆಗುತ್ತದೆ. ಇದು ಜೀರ್ಣ ಪ್ರಕ್ರಿಯೆ, ಎದೆಯುರಿ, ಚರ್ಮದ ಆರೋಗ್ಯ ಹೀಗೆ ಹಲವು ಸಮಸ್ಯೆಗಳನ್ನು ದೂರ ಮಾಡುತ್ತದೆ.

    ಅಲ್ಲದೆ ಹಸಿ ಆಲೂಗಡ್ಡೆ ಜ್ಯೂಸ್ ವಿಷಕಾರಿ ಅಂತ ಕೆಲವರು ಹೇಳುತ್ತಾರೆ. ಆದರೆ ಅದು ತಪ್ಪು ಕಲ್ಪನೆ. ಹಸಿ ಆಲೂಗಡ್ಡೆ ಜ್ಯೂಸ್ ಕುಡಿಯುವುದರಿಂದ ದೇಹದ ಮೇಲೆ ಯಾವುದೇ ಕೆಟ್ಟ ಪರಿಣಾಮಗಳು ಉಂಟಾಗುವುದಿಲ್ಲ. ಆದರೆ ಹಸಿ ಆಲೂಗಡ್ಡೆ ಜ್ಯೂಸ್ ಅನ್ನು ನಿಯಮಿತವಾಗಿ ಸೇವಿಸಬೇಕು, ಹೆಚ್ಚಾಗಿ ಸೇವಿಸಿದರೆ ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

    ಆಲೂಗಡ್ಡೆಯ ಆರೋಗ್ಯಕರ ಲಾಭವೇನು?

    1. ಹೃದಯದ ಆರೋಗ್ಯಕ್ಕೆ ಒಳ್ಳೆದು
    ಆಲೂಗಡ್ಡೆಯಲ್ಲಿ ಪೊಟ್ಯಾಶಿಯಂ ಅಂಶ ಇರುತ್ತದೆ. ಇದು ಕಟ್ಟಿಕೊಂಡಿರುವ ಹೃದಯ ರಕ್ತ ನಾಳಗಳನ್ನು ತೆರವುಗೊಳಿಸಿ ಹೃದಯಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯದ ಕಾಯಿಲೆಗಳು ದೂರಾಗಿ ಆರೋಗ್ಯ ವೃದ್ಧಿಯಾಗುತ್ತದೆ.

    2. ಎದೆಯುರಿ ನಿವಾರಿಸುತ್ತೆ
    ಆಲೂಗಡ್ಡೆ ಜ್ಯೂಸ್‍ನಲ್ಲಿ ಹೊಟ್ಟೆಯ ಒಳ ಪದರಕ್ಕೆ ಬೇಕಾದ ಅಗತ್ಯ ಸಂಯುಕ್ತಗಳು ಬಹಳಷ್ಟಿವೆ. ಇವುಗಳು ಹೊಟ್ಟೆಯ ಆಮ್ಲವನ್ನು ಹೆಚ್ಚಾಗದಂತೆ ತಡೆದು, ಜಠರದಲ್ಲಿ ಕಾಣಿಸುವ ಉರಿಯೂತವನ್ನು ಗುಣ ಪಡಿಸುತ್ತದೆ. ಆದ್ದರಿಂದ ಊಟಕ್ಕೆ ಅರ್ಧ ಗಂಟೆ ಮುಂಚೆ ಪ್ರತಿ ದಿನ 3 ರಿಂದ 4 ಟೇಬಲ್ ಚಮಚಗಳಷ್ಟು ಆಲೂಗಡ್ಡೆ ಜ್ಯೂಸ್ ಕುಡಿಯುವುದು ಒಳ್ಳೆದು. ಇದರಿಂದ ಎದೆಯುರಿ ಸಮಸ್ಯೆ ನಿವಾರಣೆಯಾಗುತ್ತೆ.

    3. ತೂಕ ಇಳಿಸಲು ಸಹಕಾರಿ
    ಹಸಿ ಆಲೂಗಡ್ಡೆ ಜ್ಯೂಸ್‍ನಲ್ಲಿ ವಿಟಮಿನ್ ‘ಸಿ’ ಅಂಶ ಇರುತ್ತದೆ, ಇದು ದೇಹದ ಮೆಟಬಾಲಿಸಂ ಹೆಚ್ಚಿಸುತ್ತದೆ. ಇದರಿಂದ ತೂಕ ಕಡಿಮೆ ಆಗುತ್ತದೆ. ಹೀಗಾಗಿ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ಊಟದ ನಂತರ ಆಲೂಗಡ್ಡೆ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಆಲೂಗಡ್ಡೆ ಜ್ಯೂಸ್ ಹೆಚ್ಚು ಹಸಿವಾಗದಂತೆ ನೋಡಿಕೊಳ್ಳುವುದರಿಂದ ದೇಹದ ತೂಕ ಇಳಿಯುತ್ತದೆ.

    4. ಜೀರ್ಣಕ್ರಿಯೆ ಉತ್ತಮಗೊಳ್ಳುತ್ತೆ
    ಆಲೂಗಡ್ಡೆಗಳಲ್ಲಿ ಆಲ್ಕಲೈನ್ ಅಂಶ ಬಹಳಷ್ಟಿದೆ. ಇದು ಮನುಷ್ಯನ ದೇಹದ ಅನ್ನನಾಳವನ್ನು ಶುಚಿಗೊಳಿಸಿ, ಅದಕ್ಕೆ ಬೇಕಾದ ಪೌಷ್ಟಿಕ ಸತ್ವಗಳನ್ನು ಒದಗಿಸುತ್ತದೆ. ಇದರಿಂದ ಜೀರ್ಣ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ.

    5. ಗಾಯಗಳು ಬೇಗ ಮಾಗುತ್ತವೆ
    ಆಲೂಗಡ್ಡೆ ಜ್ಯೂಸ್‍ನಲ್ಲಿ ಜಿಂಕ್ ಮತ್ತು ವಿಟಮಿನ್ ‘ಸಿ’ ಅಂಶವಿದ್ದು, ಇದು ಗಾಯ ವಾಸಿಯಾಗುವ ಪ್ರಕ್ರಿಯೆಯನ್ನು ಚುರುಕುಗೊಳಿಸಿ. ಅಲ್ಲದೇ ಗಾಯವಾದ ಭಾಗದಲ್ಲಿ ಊದಿಕೊಂಡ ಮಾಂಸ ಖಂಡಗಳನ್ನು ಸಹಜ ಸ್ಥಿತಿಗೆ ಮರಳಿಸುತ್ತದೆ. ಇದರಿಂದ ಗಾಯಗಳು ಬೇಗನೇ ಮಾಗುತ್ತದೆ.

    6. ಮೂತ್ರ ಪಿಂಡಗಳ ಆರೋಗ್ಯಕ್ಕೆ
    ಆಲೂಗಡ್ಡೆ ಜ್ಯೂಸ್‍ನಲ್ಲಿ ಪೊಟ್ಯಾಷಿಯಂ ಅಂಶವನ್ನು ಅಡಗಿದ್ದು, ಇದು ಕಿಡ್ನಿಗಳ ಕಾರ್ಯ ಚಟುವಟಿಕೆಯನ್ನು ಬಲಪಡಿಸುತ್ತದೆ. ಪೊಟ್ಯಾಶಿಯಂ ಒಂದು ಎಲೆಕ್ಟ್ರೋಲೈಟ್ ಆಗಿದ್ದು, ಇದು ದೇಹದಲ್ಲಿರುವ ದ್ರವಗಳನ್ನು ನಿಯಂತ್ರಿಸುತ್ತದೆ.

    7. ರೋಗ ನಿರೋಧಕ ಶಕ್ತಿ ವೃದ್ಧಿಸುತ್ತೆ
    ಆಲೂಗಡ್ಡೆ ಜ್ಯೂಸ್‍ನಲ್ಲಿ ಆಂಟಿ – ಆಕ್ಸಿಡೆಂಟ್ ಎಂದು ಗುರುತಿಸಿಕೊಂಡ ವಿಟಮಿನ್ ‘ ಸಿ ‘ ಅಂಶವಿದೆ. ಇದು ದೇಹದ ಸೋಂಕು ಮತ್ತು ಸಾಮಾನ್ಯ ಶೀತದ ನಿವಾರಣೆಗೆ ಸಹಾಯಕವಾಗಿದೆ. ಈ ಅಂಶ ರೋಗ ನಿರೋಧಕ ವ್ಯವಸ್ಥೆಯನ್ನು ಹೊರಗಿನ ಹಾನಿಕಾರಕ ರೋಗಕಾರಕಗಳಿಂದ ರಕ್ಷಿಸುತ್ತದೆ. ಅಲ್ಲದೇ ದೀರ್ಘ ಕಾಲದ ಕಾಯಿಲೆಗಳನ್ನು ನಿಧಾನವಾಗಿ ಗುಣ ಪಡಿಸುತ್ತದೆ.

    8. ಲಿವರ್ ಆರೋಗ್ಯಕ್ಕೆ
    ಆಲೂಗಡ್ಡೆ ಜ್ಯೂಸ್ ಪಿತ್ತಕೋಶದ ಸೋಂಕುಗಳನ್ನು ಗುಣಪಡಿಸಿ ಲಿವರ್‍ನ ಶುದ್ಧೀಕರಿಸುತ್ತೆ. ಆಲೂಗಡ್ಡೆ ಜ್ಯೂಸ್ ದೇಹದ ತ್ಯಾಜ್ಯ ವಸ್ತುಗಳನ್ನು ಮತ್ತು ವಿಷಕಾರಿ ಅಂಶಗಳನ್ನು ಹೊರಹಾಕುವ ಲಿವರ್‍ನ ಸಾಮರ್ಥ್ಯವನ್ನು ಹೆಚ್ಚಿಸುತ್ತೆ. ಆದ್ದರಿಂದ ಇದು ನಿರ್ವಿಷಕಾರಿ ಏಜೆಂಟ್ ಎನ್ನಿಸಿಕೊಂಡಿದೆ.

  • 130 ಪುರುಷರೊಂದಿಗೆ ಮಲಗಿದ್ದೆ ಎಂದ 28ರ ಮಹಿಳೆ

    130 ಪುರುಷರೊಂದಿಗೆ ಮಲಗಿದ್ದೆ ಎಂದ 28ರ ಮಹಿಳೆ

    – ಸಂದರ್ಶನದಲ್ಲಿ ರಹಸ್ಯ ಬಿಚ್ಚಿಟ್ಟ ಮಹಿಳೆ
    – 13ನೇ ವಯಸ್ಸಿನಲ್ಲಿ ಪೋಷಕರು ವಿಚ್ಛೇದನ

    ಲಂಡನ್: 28 ವರ್ಷದ ಮಹಿಳೆ ತಾನು 130 ಪುರುಷರೊಂದಿಗೆ ಸಂಬಂಧ ಹೊಂದಿದ್ದೆ. ಇದರಿಂದಾಗಿ ನಾನು ಕೆಲ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ ಎಂದು ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದಾಳೆ.

    ಬ್ರಿಟನ್ ನಿವಾಸಿ ಫ್ರಾಂಕಿ ಕೊನ್ಸಿಡಿನ್ 130 ಪುರುಷರೊಂದಿಗೆ ಮಲಗಿದ್ದ ಮಹಿಳೆ. ಈಕೆ ಅನೇಕ ಜನರೊಂದಿಗೆ ಸಂಬಂಧ ಹೊಂದಿದ್ದರಿಂದ ಈಗ ದೈಹಿಕ ಮತ್ತು ಮಾನಸಿಕವಾಗಿ ಬಳಲುತ್ತಿದ್ದಾಳೆ. ಸದ್ಯಕ್ಕೆ ಲೈಂಗಿಕ ವ್ಯಸನದಿಂದ ಬಳಲುತ್ತಿದ್ದು, ತಾನೂ ಯಾರೊಂದಿಗೆ ಮಲಗಿದ್ದೇನೆ ಎಂಬುದು ಕೂಡ ಅವಳಿಗೆ ತಿಳಿಯುತ್ತಿಲ್ಲವಂತೆ. ಇದನ್ನೂ ಓದಿ: ವಾರದಲ್ಲಿ ಏಳು ಪುರುಷರ ಜೊತೆ ಸೆಕ್ಸ್ – ಸ್ವಾತಂತ್ರ್ಯದ ಅನುಭವವಾಯ್ತು ಎಂದ ಮಹಿಳೆ

    ಫ್ರಾಂಕಿ ಅಲ್ಲದೇ ಅನೇಕ ಮಹಿಳೆಯರು ಲೈಂಗಿಕ ವ್ಯಸನದಿಂದ ಬಳಲುತ್ತಿದ್ದಾರೆ. ಬ್ರಿಟನ್‍ನಲ್ಲಿ ಸುಮಾರು 6 ಲಕ್ಷ 60 ಸಾವಿರ ಮಹಿಳೆಯರು ಲೈಂಗಿಕ ವ್ಯಸನದಿಂದ ಬಳಲುತ್ತಿದ್ದಾರೆ. ಪ್ರಸಿದ್ಧ ವ್ಯಕ್ತಿಗಳಿಗೂ ಕೂಡ ಈ ಸಮಸ್ಯೆ ಕಾಡುತ್ತಿದೆ ಎಂದು ಹೇಳಲಾಗುತ್ತಿದೆ.

    ಲೈಂಗಿಕ ವ್ಯಸನದಿಂದ ಬಳಲುತ್ತಿರುವ ಜನರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಫ್ರಾಂಕಿ ಕೂಡ ಖಿನ್ನತೆಗೆ ಒಳಗಾಗಿದ್ದಾಳೆ. ದೇಶದ ಶೇ.4 ರಷ್ಟು ಜನರು ಲೈಂಗಿಕ ವ್ಯಸನಿಯಾಗಿದ್ದಾರೆ. ಅವರಲ್ಲಿ ಕಾಲು ಭಾಗ ಮಹಿಳೆಯರು. ಯಾವ ಕಾರಣದಿಂದ ಲೈಂಗಿಕ ವ್ಯಸನಿಯಾಗುತ್ತಿದ್ದಾರೆ ಎಂದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ ಎಂದು ವರದಿಯಾಗಿದೆ.

    ಫ್ರಾಂಕಿ 13 ವರ್ಷದವಳಿದ್ದಾಗಲೇ ಪೋಷಕರು ವಿಚ್ಛೇದನ ಪಡೆದುಕೊಂಡಿದ್ದರು. ನಂತರ ತಾಯಿ ಕೂಡ ಕ್ಯಾನ್ಸರಿನಿಂದ ಮೃತಪಟ್ಟಿದ್ದಾರೆ.

  • ತಿನ್ನಲು ಕಹಿಯಾದ್ರು ಆರೋಗ್ಯಕ್ಕೆ ಸಿಹಿಯಾದ ಬೇವು

    ತಿನ್ನಲು ಕಹಿಯಾದ್ರು ಆರೋಗ್ಯಕ್ಕೆ ಸಿಹಿಯಾದ ಬೇವು

    ಬೇವು ಎಂದಾಕ್ಷಣ ನೆನಪಾಗೋದು ಕಹಿ. ಆದರೆ ಈ ಬೇವಿನಲ್ಲಿರುವ ಕಹಿ ಅಂಶ ಆರೋಗ್ಯಕ್ಕೆ ಎಷ್ಟು ಸಿಹಿ ಎನ್ನುವ ಬಗ್ಗೆ ಹಲವರಿಗೆ ತಿಳಿದಿರಲ್ಲ. ಜೀವನದಲ್ಲಿ ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸಲು ಸಾಂಕೇತಿಕವಾಗಿ ಬೇವು, ಬೆಲ್ಲವನ್ನು ಪ್ರತಿ ಯುಗಾದಿಯಂದು ಹಂಚಲಾಗುತ್ತೆ. ಇದರ ಹಿಂದೆ ಒಂದು ಆರೋಗ್ಯಕರ ಕಾರಣವೂ ಅಡಗಿದೆ. ಪುರಾತನ ಗ್ರಂಥದಲ್ಲಿ ಬೇವಿನ ಆರೋಗ್ಯಕರ ಲಾಭದ ಬಗ್ಗೆ ಉಲ್ಲೇಖವಿದೆ.

    ಬೇವಿನ ಉತ್ತಮ ಗುಣಗಳಲ್ಲಿ ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ನಿವಾರಕ ಮತ್ತು ಶಿಲೀಂಧ್ರ ನಿವಾರಕಗಳೂ ಸೇರಿದ್ದು, ಈ ಗುಣಗಳು ಮಾನವನ ಆರೋಗ್ಯಕ್ಕೆ ಒಳ್ಳೆದು ಎನ್ನಲಾಗುತ್ತೆ. ಅಷ್ಟೇ ಅಲ್ಲದೇ ಬೇವಿನ ಎಲೆಗಳನ್ನು ಅರೆದು ಅದನ್ನು ಗಾಯಗಳಿಗೆ ಹಚ್ಚಿದರೆ ಗಾಯ ಬೇಗನೇ ಮಾಗುತ್ತವೆ.

    ಸಿಡುಬು (chicken pox), ಅಮ್ಮ (small pox), ದದ್ದು, ಕಾಲಿನ ಮೊಳೆ ಮೊದಲಾದ ತೊಂದರೆಗಳು ಬೇವಿನಿಂದ ಬೇಗನೇ ನಿವಾರಣೆಯಾಗುತ್ತದೆ. ಸುಲಭವಾಗಿ ಬಗ್ಗದ ಹರ್ಪೆಸ್ ವೈರಸ್ (herpes virus) ಕೂಡ ಬೇವು ನಾಶ ಮಾಡುತ್ತದೆ. ಕಹಿ ಬೇವನ್ನು ತಿನ್ನುವುದರ ಲಾಭವೇನು? ಯಾವೆಲ್ಲ ಸಮಸ್ಯೆಗೆ ಇದು ಮದ್ದು ಎನ್ನುವ ಮಾಹಿತಿ ಇಲ್ಲಿದೆ.

    ಬೇವಿನ ಆರೋಗ್ಯಕರ ಲಾಭವೇನು?

    ಲಿವರ್ ಸಮಸ್ಯೆಗೆ ಮದ್ದು:
    ಬೇವಿನ ಎಲೆಗಳನ್ನು ಸೇವಿಸುವುದರಿಂದ ಲೀವರ್ ಕ್ಷಮತೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚುತ್ತದೆ. ಅಲ್ಲದೇ ರಕ್ತದಿಂದ ವಿಷಕಾರಿ ಅಂಶವನ್ನು ಹೊರಹಾಕಲು ನೆರವಾಗುತ್ತದೆ. ಜೊತೆಗೆ ಜೀರ್ಣ ಮತ್ತು ಶ್ವಾಸಕೋಶದ ವ್ಯವಸ್ಥೆಯನ್ನು ಇದು ಉತ್ತಮಗೊಳಿಸುತ್ತದೆ. ಅಲ್ಲದೇ ಬೇವಿನ ಎಣ್ಣೆ ಮತ್ತು ಬೇವಿನ ರಸಗಳನ್ನು ಸೇವಿಸುವುದರಿಂದ ದೇಹದಲ್ಲಿದ್ದ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶವಾಗುತ್ತದೆ.

    ಚರ್ಮದ ಸಮಸ್ಯೆಗೆ:
    ಬೇವಿನ ಎಣ್ಣೆಯನ್ನು ಬಿಸಿ ನೀರಿನಲ್ಲಿ ಸೇರಿಸಿ ಸ್ನಾನ ಮಾಡುವುದರಿಂದ ವಿವಿಧ ಚರ್ಮರೋಗಗಳು, ತುರಿಕೆ, ಹುಳಕಡ್ಡಿ ಮೊದಲಾದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಶೀತ ಮತ್ತು ಎಕ್ಸಿಮಾದಂತಹ ಚರ್ಮರೋಗವೂ ಕೂಡ ಇದರಿಂದ ವಾಸಿಯಾಗುತ್ತದೆ.

    ತ್ವಚೆಯ ಕಲೆ ನಿವಾರಿಸುತ್ತದೆ:
    ಗಾಯ ಮತ್ತು ಮೊಡವೆಗಳು ಮಾಗಿದ ಬಳಿಕ ಚರ್ಮದ ಮೇಲೆ ಕಲೆಗಳು ಉಳಿದು ಬಿಡುತ್ತದೆ. ಈ ಕಲೆಗಳನ್ನು ನಿವಾರಿಸಲು ಬೇವು ಸಹಕಾರಿಯಾಗಿದ್ದು, ಮುಖದಲ್ಲಿ ಮತ್ತೆ ಮೊಡವೆಗಳು ಆಗದಂತೆ ತಡೆಯುತ್ತದೆ.

    ಚಿಕ್ಕಪುಟ್ಟ ಗಾಯಗಳಾದರೆ ಬೇವಿನ ಎಲೆಗಳ ರಸ ಅಥವಾ ಎಲೆಗಳನ್ನು ಅರೆದ ಹಚ್ಚಿದರೆ ಗಾಯಗಳು ಬೇಗ ಮಾಗುತ್ತದೆ. ಅಲ್ಲದೆ ಮೊಡವೆಗಳನ್ನು ನಿಯಂತ್ರಿಸಲು ನಿತ್ಯವೂ ಸ್ನಾನ ಮಾಡುವ ನೀರಿಗೆ ಬೇವಿನ ಎಣ್ಣೆಯ ಕೆಲವು ಹನಿಗಳನ್ನು ಸೇರಿಸಿದರೆ ತ್ವಚೆಯ ದುರ್ಗಂಧ, ಸೋಂಕುಗಳು ನಿವಾರಣೆಯಾಗುತ್ತದೆ ಹಾಗೂ ಚರ್ಮದಲ್ಲಿ ದದ್ದು, ಮೊಡವೆಗಳು ಆಗದಂತೆ ಇದು ನೋಡಿಕೊಳ್ಳುತ್ತದೆ.

    ಮುಖದ ಕಾಂತಿ ಹೆಚ್ಚಿಸುತ್ತದೆ:
    ಬೇವಿನ ಎಲೆಗಳನ್ನು ಹಾಕಿ ಕುದಿಸಿದ ನೀರಿನಲ್ಲಿ ಅದ್ದಿದ ಬಟ್ಟೆಯನ್ನು ಇಡೀ ರಾತ್ರಿ ಮುಖದ ಮೇಲೆ ಇಟ್ಟುಕೊಂಡು ಮಲಗಿದರೆ ಮುಖದ ಕಾಂತಿ ಹೆಚ್ಚಾಗುತ್ತೆ. ಹಾಗೆಯೇ ಈ ನೀರನ್ನು ತಲೆಗೆ ಹಚ್ಚಿ ಸ್ನಾನ ಮಾಡಿದರೆ ಕೂಡಲು ಉದುರುವಿಕೆ, ತಲೆಹೊಟ್ಟಿನ ಸಮಸ್ಯೆ ನಿವಾರಣೆ ಆಗುತ್ತದೆ.

    ರಕ್ತ ಶುದ್ಧೀಕರಣಗೊಳಿಸುತ್ತೆ:
    ಬೇವನ್ನು ತಿಂದರೆ ರಕ್ತ ಶುದ್ಧೀಕರಣಗೊಳ್ಳುತ್ತದೆ ಹಾಗೂ ರಕ್ತದೊತ್ತಡ ಕಡಿಮೆಯಾಗುತ್ತದೆ. ರಕ್ತದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರ ಹಾಕಿ, ರಕ್ತಸಂಚಾರ ಉತ್ತಮಗೊಳ್ಳುತ್ತದೆ. ವೃದ್ಧಾಪ್ಯ ಬೇಗನೇ ಆವರಿಸಲು ಕಾರಣವಾಗುವ free radical ಎಂಬ ಕಣಗಳನ್ನು ಬೇವು ಕೊಲ್ಲುವುದರಿಂದ ತಾರುಣ್ಯ ಬಹುಕಾಲ ಉಳಿಯುತ್ತದೆ. ಅಲ್ಲದೇ ಬೇವನ್ನು ಸೇರಿಸಿದರೆ ರಕ್ತನಾಳಗಳಲ್ಲಿ ಸಂಗ್ರಹವಾಗಿದ್ದ ಕೆಟ್ಟ ಕೊಲೆಸ್ಟ್ರಾಲ್ ನಿವಾರಣೆಯಾಗಿ, ದೇಹದಲ್ಲಿ ರಕ್ತಸಂಚಾರ ಸುಗಮಗೊಳ್ಳುತ್ತದೆ. ಇದರಿಂದ ಹೃದಯದ ಮೇಲೆ ಬೀಳುವ ಒತ್ತಡ ಕಡಿಮೆಯಾಗುತ್ತದೆ.

    ಮಲೇರಿಯಾ ಜ್ವರಕ್ಕೆ:
    ಬೇವಿನಲ್ಲಿರುವ ಜೆಡ್ಯುನಿನ್ (Gedunin) ಎಂಬ ರಾಸಾಯನಿಕ ಮಲೇರಿಯಾ ಜ್ವರವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಬೇವಿನ ಎಲೆಗಳನ್ನು ಜಜ್ಜಿ ಮನೆಯ ಸುತ್ತ ಮುತ್ತ ಹರಡುವುದರಿಂದ ಆ ವಾಸನೆಗೆ ಸೊಳ್ಳೆಗಳು ಕಡಿಮೆ ಆಗುತ್ತದೆ. ಅಲ್ಲದೆ ಬೇವಿನ ಎಲೆಗಳನ್ನು ತಿಂದರೆ ಅಥವಾ ಅದರ ರಸವನ್ನು ಕುಡಿದರೆ ಮಲೇರಿಯಾ ಜ್ವರ ಕಡಿಮೆ ಆಗುತ್ತದೆ.

    ಕ್ಯಾನ್ಸರ್ ನಿಯಂತ್ರಿಸಲು:
    ನಿಯಮಿತವಾಗಿ ಬೇವಿನ ಎಲೆಗಳನ್ನು ಹಸಿಯಾಗಿ ಸೇವಿಸುವವರಲ್ಲಿ ಕ್ಯಾನ್ಸರ್ ಕಾಯಿಲೆ ಕಾಣಿಸಿಕೊಳ್ಳು ಸಾಧ್ಯತೆ ಕಡಿಮೆ. ಬೇವಿನ ಮರದ ತೊಗಟೆಯಲ್ಲಿ ಕಂಡುಬರುವ Limonoids ಮತ್ತು polysaccharides ಎಂಬ ರಾಸಾಯನಿಕಗಳು ದೇಹದಲ್ಲಿ ಕ್ಯಾನ್ಸರ್ ಮತ್ತು ಗಡ್ಡೆಯುಂಟಾಗುವುದನ್ನು ತಡೆಯುತ್ತದೆ.

    ಸಂಧಿವಾತಕ್ಕೆ:
    ಸಂಧಿವಾತ ಸಮಸ್ಯೆಗೆ ಬೇವಿನ ಎಲೆ ಮತ್ತು ಬೇವಿನ ತೊಗಟೆಯನ್ನು ಅರೆದು ತಯಾರಿಸಿದ ಲೇಪನ ಉತ್ತಮ ಪರಿಹಾರ ನೀಡುತ್ತದೆ. ಇದರಿಂದ ಸಂದುಗಳಲ್ಲಿ ಬಾವು, ನೋವು ಕೂಡ ಕಡಿಮೆಯಾಗುತ್ತದೆ.

    ಬೇವಿನ ಎಣ್ಣೆಯ ಮಸಾಜ್:
    ಬೇವಿನ ಎಣ್ಣೆ ಚರ್ಮಕ್ಕೆ ಒಳ್ಳೆದು. ಈ ಎಣ್ಣೆಯಲ್ಲಿ ಮೈಯನ್ನು ಮಸಾಜ್ ಮಾಡುವುದರಿಂದ ಕೆಳಬೆನ್ನಿನ ನೋವು, ಸಂಧಿವಾತ, ಸ್ನಾಯುಗಳಲ್ಲಿ ನೋವು ಹೀಗೆ ವಿವಿಧ ನೋವುಗಳು ಕಡಿಮೆಯಾಗುತ್ತವೆ.

  • ನಾಡೋಜ ಪಾಪು ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

    ನಾಡೋಜ ಪಾಪು ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

    ಹುಬ್ಬಳ್ಳಿ: ಹಿರಿಯ ಸಾಹಿತಿ, ನಾಡೋಜ ಶತಾಯುಷಿ ಪಾಟೀಲ ಪುಟ್ಟಪ್ಪ ಅವರ ಆರೋಗ್ಯದಲ್ಲಿ ಏರುಪೇರು ಆಗಿದೆ. ವಯೋ ಸಹಜ ಸಮಸ್ಯೆಯಿಂದ ಬಳಲುತ್ತಿರುವ ಪಾಟೀಲ ಪುಟ್ಟಪ್ಪ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಕೆಮ್ಮು ಹಾಗೂ ಕಫದ ಸಮಸ್ಯೆಯಿಂದಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ಸಾಹಿತಿಗೆ ಕಳೆದ ನಾಲ್ಕು ದಿನಗಳಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಕೆಮ್ಮು, ಕಫ ಹೆಚ್ಚಾದ ಕಾರಣ ಇನ್ಫೆಕ್ಷನ್ ಆಗಿರುವ ಸಾಧ್ಯತೆ ಹೆಚ್ಚಾಗಿದ್ದು, ಅವರಿಗೆ ಆಸ್ಪತ್ರೆಯ ವಿಶೇಷ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಪಾಪು ಆರೋಗ್ಯದ ಬಗ್ಗೆ ಸಾಕಷ್ಟು ನಿಗಾವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ.

  • ಹೆಚ್ಚು ನಿಂಬೆರಸ ಸೇವನೆ ಆರೋಗ್ಯಕ್ಕೆ ಹಾನಿಕರ

    ಹೆಚ್ಚು ನಿಂಬೆರಸ ಸೇವನೆ ಆರೋಗ್ಯಕ್ಕೆ ಹಾನಿಕರ

    ನಿಂಬೆಹಣ್ಣು ಆರೋಗ್ಯಕ್ಕೆ ಒಳ್ಳೆದು ಎನ್ನುವ ವಿಚಾರ ಸಾಮಾನ್ಯವಾಗಿ ಎಲ್ಲರಿಗು ತಿಳಿದಿದೆ. ಆದ್ರೆ ಅತಿಯಾದರೆ ಅಮೃತವೂ ವಿಷ ಎನ್ನುವ ಹಾಗೆ ಒಳ್ಳೆದು ಎಂದು ಹೆಚ್ಚು ನಿಂಬೆರಸ ಸೇವಿಸಿದರೆ ಆರೋಗ್ಯ ಹಾನಿಕರ ಎನ್ನುವ ಬಗ್ಗೆ ಹಲವರಿಗೆ ತಿಳಿದಿಲ್ಲ.

    ಹೌದು. ಅನೇಕ ಮನೆಮದ್ದುಗಳಲ್ಲಿ ನಿಂಬೆರಸ ಬಳಸಲಾಗುತ್ತದೆ. ಬೆಳಗ್ಗೆ ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಹಾಕಿ ಕುಡಿದರೆ ದೇಹದ ಕೊಬ್ಬು ಕರಗುವುದರ ಜೊತೆಗೆ ಕ್ಯಾನ್ಸರ್ ತಡೆಗಟ್ಟಬಹುದೆಂದು ಅಧ್ಯಯನಗಳು ಹೇಳಿವೆ. ಇದರ ಜೊತೆಗೆ ಅತಿಯಾಗಿ ನಿಂಬೆರಸ ಸೇವಿಸಿದರೆ ಎಷ್ಟು ಅಪಾಯಕಾರಿ ಎನ್ನುವುದನ್ನ ಕೂಡ ಅಧ್ಯಯನಗಳೇ ತಿಳಿಸಿವೆ.

    ಆರೋಗ್ಯಕರ ಗುಣವಿರುವ ನಿಂಬೆಹಣ್ಣಿನ ರಸವನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದು ತಿಳಿಯದಿದ್ದರೆ ಅಪಾಯ ತಪ್ಪಿದ್ದಲ್ಲ. ನಿಂಬೆ ಹಣ್ಣಿನಲ್ಲಿರುವ ಆಮ್ಲೀಯ ಗುಣ ಹೆಚ್ಚಾಗಿ ದೇಹ ಸೇರಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

    ಎಷ್ಟು ಪ್ರಮಾಣದಲ್ಲಿ ನಿಂಬೆರಸ ಸೇವನೆ ಮಾಡಬೇಕು?
    ನಿಂಬೆರಸ ಎಷ್ಟು ಸೇವಿಸಬೇಕು ಎಂಬುದು ವ್ಯಕ್ತಿಯ ವಯಸ್ಸು, ಆರೋಗ್ಯ ಮುಂತಾದವುಗಳ ಮೇಲೆ ಅವಲಂಬಿತವಾಗಿರುತ್ತೆ. ನಿಂಬೆರಸವನ್ನು ಇಷ್ಟೇ ಪ್ರಮಾಣದಲ್ಲಿ ಸೇವಿಸಬೇಕು ಎಂದು ನಿರ್ಧರಿಸಲು ಸಾಕಷ್ಟು ವೈಜ್ಞಾನಿಕ ಮಾಹಿತಿಗಳಿಲ್ಲ. ಆದರೆ ವೈದ್ಯರ ಪ್ರಕಾರ, ದಿನಕ್ಕೆ ಒಂದು ಲೋಟ ಅಥವಾ ಎರಡು ಲೋಟ ನಿಂಬೆರಸ (ಸುಮಾರು 120 ಮಿಲಿ) ಸುರಕ್ಷಿತವೆಂದು ಸೂಚಿಸಲಾಗಿದೆ. ಅದಕ್ಕಿಂತ ಹೆಚ್ಚು ನಿಂಬೆರಸ ಸೇವಿಸುವುದು ಒಳ್ಳೆಯದಲ್ಲ ಎನ್ನಲಾಗುತ್ತೆ.

    ಹೆಚ್ಚು ನಿಂಬೆರಸ ಸೇವಿಸಿದ್ರೆ ಏನಾಗುತ್ತೆ?

    1. ಹಲ್ಲಿನ ಸಮಸ್ಯೆ
    ಅತಿಯಾದ ನಿಂಬೆರಸ ಸೇವನೆಯಿಂದ ಅದರಲ್ಲಿರುವ ಆಮ್ಲೀಯ ಗುಣ ಹಲ್ಲಿನ ಮೆರುಗನ್ನು ನಾಶಗೊಳಿಸಬಹುದು. ಇತರೆ ತಂಪು ಪಾನೀಯಗಳಂತೆ ನಿಂಬೆರಸ ಕೂಡ ಹಲ್ಲಿನ ಸಮಸ್ಯಗೆ ಕಾರಣವಾಗಿದೆ. ಆದರೆ ನಿಂಬೆರಸ ಸೇವನೆಯ ಬಳಿಕ ಹಲ್ಲನ್ನು ಉಜ್ಜುವುದರಿಂದ ಹಲ್ಲಿನ ಸವೆತವನ್ನು ತಡೆಗಟ್ಟಬಹುದು.

    2. ಎದೆಯುರಿ ಉಂಟುಮಾಡುತ್ತದೆ
    ಕೆಲವು ಸಂಶೋಧನೆಗಳ ಪ್ರಕಾರ, ಸಿಟ್ರಸ್ ಅಂಶ ಒಳಗೊಂಡ ಹಣ್ಣುಗಳು ಎದೆಯುರಿ ಅಥವಾ ಆಸಿಡ್ ರಿಫ್ಲಕ್ಸ್ ಗೆ ಕಾರಣವಾಗಬಹುದು. ನಿಂಬೆರಸ ಎದೆಯುರಿಯನ್ನು ಹೆಚ್ಚಿಸಬಹುದು ಮತ್ತು ಕಡಿಮೆ ಮಾಡಲೂ ಬಹುದು. ಆದರೆ ಅತೀಯಾಗಿ ನಿಂಬೆರಸ ಸೇವಿಸಿದರೆ ಎದೆಯುರಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಎದೆಯುರಿ ಸಮಸ್ಯೆ ಇದ್ದರೆ ನಿಂಬೆರಸ ಅಥವಾ ಯಾವುದೇ ಸಿಟ್ರಿಕ್ ಅಂಶದ ಪಾನಿಯ ಕುಡಿಯುವ ಮೊದಲು ವೈದ್ಯರ ಸಲಹೆ ಪಡೆಯೋದು ಸೂಕ್ತ.

    3. ಮೈಗ್ರೇನ್ ಹೆಚ್ಚಿಸುತ್ತದೆ
    ಸಿಟ್ರಸ್ ಹಣ್ಣುಗಳು ಮೈಗ್ರೇನ್ ಅನ್ನು ಹೆಚ್ಚು ಮಾಡುತ್ತದೆ. ಸಿಟ್ರಸ್ ಹಣ್ಣುಗಳನ್ನು ಮಿತಿಮೀರಿ ಸೇವಿಸಿದರೆ ಆರೋಗ್ಯಕ್ಕೆ ಹಾನಿಕಾರಕ. ಈ ಹಣ್ಣುಗಳು ಅಲರ್ಜಿ ಉಂಟುಮಾಡುವುದರ ಮೂಲಕ ಮೈಗ್ರೇನ್‍ಗೆ ಕಾರಣವಾಗಬಹುದು. ಸಿಟ್ರಸ್ ಹಣ್ಣುಗಳಲ್ಲಿ ಟೈರಮೈನ್ ಅಂಶ ಇರುತ್ತದೆ. ಇದು ಮೈಗ್ರೇನ್ ಗೆ ಪ್ರಮುಖ ಕಾರಣವಾಗಿದೆ.

    4. ಬಾಯಿ ಹುಣ್ಣನ್ನು ಉಲ್ಬಣಗೊಳಿಸಬಹುದು
    ಬಾಯಿ ಹುಣ್ಣುಗಳಲ್ಲಿ ಕ್ಯಾಂಕರ್ ಹುಣ್ಣುಗಳು ಒಂದು ರೂಪ. ಇವು ಬಾಯಿಯೊಳಗೆ ಉಂಟಾಗುವ ಹುಣ್ಣುಗಲಾಗಿದ್ದು, ಹೆಚ್ಚು ನೋವಿನಿಂದ ಕೂಡಿರುತ್ತವೆ. ಸಿಟ್ರಿಕ್ ಆಮ್ಲವು ಬಾಯಿಯ ಹುಣ್ಣುಗಳನ್ನು ಇನ್ನಷ್ಟು ಹೆಚ್ಚು ಮಾಡುವುದರಿಂದ ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

  • ಚಾಮರಾಜನಗರದಲ್ಲಿ ಕೊರೊನಾ ಕಟ್ಟೆಚ್ಚರ- ಗಡಿಯಲ್ಲಿ ತೀವ್ರ ತಪಾಸಣೆ

    ಚಾಮರಾಜನಗರದಲ್ಲಿ ಕೊರೊನಾ ಕಟ್ಟೆಚ್ಚರ- ಗಡಿಯಲ್ಲಿ ತೀವ್ರ ತಪಾಸಣೆ

    ಚಾಮರಾಜನಗರ: ನೆರೆಯ ಕೇರಳದಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಕೇರಳದಿಂದ ಬರುವ ಪ್ರತಿಯೊಬ್ಬ ಪ್ರಯಾಣಿಕರನ್ನು ಆರೋಗ್ಯ ಇಲಾಖೆಯಿಂದ ತಪಾಸಣೆಗೆ ಗುರಿಪಡಿಸಲಾಗುತ್ತಿದೆ. ಕೊರೊನಾ ವೈರಸ್ ಹರಡದಂತೆ ಜಾಗೃತಿ ಮೂಡಿಸಲು ಯತ್ನಿಸಲಾಗುತ್ತಿದ್ದು, ಕೇರಳಕ್ಕೆ ಸನಿಹದಲ್ಲಿರುವ ಗುಂಡ್ಲುಪೇಟೆ ಹಾಗೂ ಚಾಮರಾಜನಗರ ಸರ್ಕಾರಿ ಆಸ್ಪತ್ರೆಗಳಲ್ಲಿ ತಲಾ ಒಂದು ಐಸೋಲೇಷನ್ ವಾರ್ಡ್ ತೆರೆಯುವ ಮೂಲಕ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಆರೋಗ್ಯ ಇಲಾಖೆ ಸರ್ವ ಸನ್ನದ್ಧವಾಗಿದೆ.

    ಮಾರಕ ಕೊರೊನಾ ವೈರಸ್ ಕೇರಳದ ಮೂಲಕ ಭಾರತಕ್ಕೂ ಕಾಲಿಟ್ಟಿದೆ. ಈಗಾಗಲೇ ಕೇರಳದಲ್ಲಿ ಮೂವರಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಕೇರಳ ರಾಜ್ಯದ ಗಡಿಗೆ ಹೊಂದಿಕೊಂಡಂತಿರುವ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಚಾಮರಾಜನಗರ ಜಲ್ಲೆ ಗುಂಡ್ಲುಪೇಟೆ ಮಾರ್ಗವಾಗಿ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766 ನಿತ್ಯ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ ಮೂಲೆಹೊಳೆ ಚೆಕ್ ಪೋಸ್ಟ್ ಹಾಗು ಬಂಡೀಪುರ ಚೆಕ್ ಪೋಸ್ಟ್ ಗಳಲ್ಲಿ ಕೇರಳದಿಂದ ಬರುವ ಪ್ರತಿಯೊಬ್ಬ ಪ್ರಯಾಣಿಕರನ್ನು ಆರೋಗ್ಯ ಇಲಾಖೆಯಿಂದ ತಪಾಸಣೆಗೆ ಒಳಪಡಿಸಲಾಗುತ್ತಿದೆ.

    ಕೇರಳದ ತ್ರಿಶೂರ್ ಬಳಿ ಒಬ್ಬ ವ್ಯಕ್ತಿಗೆ ಕೊರೊನ ವೈರಸ್ ಇದೆ ಇರುವದು ಪತ್ತೆಯಾಗಿದ್ದು, ತ್ರಿಶೂರ್ ನಿಂದ ಬರುವ ಜನರ ಮೇಲೆ ಹೆಚ್ಚಿನ ಕಣ್ಗಾವಲು ಇಡಲಾಗಿದೆ. ಮೂಲೆಹೊಳೆ ಹಾಗೂ ಬಂಡೀಪುರ ಚೆಕ್ ಪೋಸ್ಟ್ ಬಳಿ ವೈದ್ಯಕೀಯ ಸಿಬ್ಬಂದಿ ಪ್ರಯಾಣಿಕರ ಆರೋಗ್ಯದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಯಾರಿಗಾದರು ಜ್ವರ, ಶೀತ ನೆಗಡಿ, ಕೆಮ್ಮು ಬೇಧಿಯ ಲಕ್ಷಣ ಇದೆಯಾ ಎಂಬುದರ ಬಗ್ಗೆ ನಿಗಾ ವಹಿಸಿದ್ದಾರೆ. ಅಲ್ಲದೆ ಕೊರೊನಾ ವೈರಸ್ ಹರಡದಂತೆ ಜಾಗೃತಿ ಮೂಡಿಸುವ ಕರಪತ್ರ ಹಂಚುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಗುಂಡ್ಲುಪೇಟೆ ಹಾಗೂ ಚಾಮರಾಜನಗರ ಸರ್ಕಾರಿ ಆಸ್ಪತ್ರೆಗಳಲ್ಲಿ ತಲಾ ಒಂದು ಐಸೋಲೇಷನ್ ವಾರ್ಡ್ ತೆರೆಯಲಾಗಿದೆ. ಇದನ್ನೂ ಓದಿ: ಚೀನಾದಿಂದ ಬಂದ ಹುಬ್ಬಳ್ಳಿ ಟೆಕ್ಕಿಗೆ ಕರೋನಾ ವೈರಸ್ ಶಂಕೆ – ವರದಿಗಾಗಿ ಕಾಯ್ತಿರೋ ವೈದ್ಯರು

    ಚೀನಾದಲ್ಲಿ ಮುನ್ನೂರಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡು ನೆರೆಯ ಕೇರಳಕ್ಕೂ ಕಾಲಿಟ್ಟಿರುವ ಕೊರೊನಾ ವೈರಸ್ ಗಡಿ ಜಿಲ್ಲೆಯ ಜನರನ್ನು ಆತಂಕಕ್ಕೀಡು ಮಾಡಿರುವುದು ಸುಳ್ಳಲ್ಲ. ಆದರೆ ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಇದನ್ನೂ ಓದಿ:  ಕೊರೊನಾ ವೈರಸ್ ಎಂದರೇನು? ಹೇಗೆ ಹರಡುತ್ತೆ? ರೋಗ ಲಕ್ಷಣವೇನು?

  • ಪ್ರತಿ ದಿನ ಮೊಸರು ತಿಂದು ಆರೋಗ್ಯವಾಗಿರಿ

    ಪ್ರತಿ ದಿನ ಮೊಸರು ತಿಂದು ಆರೋಗ್ಯವಾಗಿರಿ

    ನೀರು ಬಿಟ್ಟರೆ ನಮ್ಮ ದೇಹ ಅತಿ ಸುಲಭವಾಗಿ ಜೀರ್ಣಿಸಿಕೊಳ್ಳುವ ಆಹಾರವೆಂದರೆ ಮೊಸರು. ಮೊಸರಿನಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಾಗಳು ದೇಹಕ್ಕೆ ಒಳ್ಳೆದು. ಇದು ಆಹಾರವನ್ನು ಜೀರ್ಣಿಕೊಳ್ಳಲು ಸಹಕಾರಿಯಾಗಿದೆ. ಆದ್ದರಿಂದ ಮೊಸರು ಒಂದು ಆರೋಗ್ಯಕರ ಆಹಾರವಾಗಿದ್ದು, ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

    ಜೀರ್ಣ ಸಮಸ್ಯೆ ಇರುವ ರೋಗಿಗಳಿಗೆ ವೈದ್ಯರು ಕೂಡ ಹೆಚ್ಚಾಗಿ ಮೊಸರನ್ನೇ ತಿನ್ನಲು ಸೂಚಿಸುತ್ತಾರೆ. ಅದರಲ್ಲೂ ದಕ್ಷಿಣ ಭಾರತದ ಆಹಾರ ಪದ್ಧತಿಯಲ್ಲಿ ಮೊಸರಿಗೆ ವಿಶೇಷ ಸ್ಥಾನವಿದ್ದು, ಊಟದಲ್ಲಿ ಮೊಸರು ಇಲ್ಲವೆಂದರೆ ಊಟ ಪರಿಪೂರ್ಣವಾಗಲ್ಲ. ಊಟದ ಕೊನೆಯಲ್ಲಿ ನೀವು ಸೇವಿಸುವ ಮೊಸರು ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಲಾಭ ನೀಡುತ್ತದೆ. ಆದ್ದರಿಂದಲೇ ಹಿರಿಯರು, ವೈದ್ಯರು ಆರೋಗ್ಯವಾಗಿರಲು ಮೊಸರು ತಿನ್ನಿ ಎನ್ನುತ್ತಾರೆ. ಜೊತೆಗೆ ರಾತ್ರಿ ಹೊತ್ತು ಮೊಸರು ಸೇವಿಸುವುದು ಅಷ್ಟು ಸೂಕ್ತವಲ್ಲ ಎಂಬ ಮಾತುಗಳು ಕೂಡ ಇದೆ.

    ಮೊಸರಿನ ಆರೋಗ್ಯಕರ ಲಾಭವೇನು?

    ನಿಶ್ಯಕ್ತಿಯಿಂದ ಬಳಲುವವರು ಮೊಸರು ತಿನ್ನಿ:
    ನಿಶ್ಯಕ್ತಿಯಿಂದ ಬಳಲುವವರು ಮಿತವಾಗಿ ಮೊಸರನ್ನು ಸೇವಿಸಿದರೆ ದೇಹದಲ್ಲಿ ನಿಶ್ಯಕ್ತಿಯಾಗದಂತೆ ತಡೆಯುತ್ತದೆ. ಮೊಸರು ಜೀರ್ಣಿಸಿಕೊಳ್ಳಲು ಸುಲಭವಾಗಿರುವುದಕ್ಕೆ ನಿಶ್ಯಕ್ತಿಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮೊಸರು ಅತ್ಯುತ್ತಮವಾದ ಆಹಾರವಾಗಿದೆ.

    ನಿದ್ರಾಹೀನತೆಗೆ:
    ನಿದ್ರಾಹೀನತೆಯಿಂದ ಬಳಲುವವರು ರಾತ್ರಿ ಮಲಗುವ ಮುನ್ನ ಮೊಸರನ್ನು ಸೇವಿಸಿ ಮಲಗಬೇಕು. ಇದು ನಿದ್ರಾಹೀನತೆಯನ್ನು ದೂರಮಾಡಿ, ಆರೋಗ್ಯವನ್ನು ವೃದ್ಧಿಸುತ್ತದೆ.

    ಬಾಯಿ ಹುಣ್ಣಿಗೆ:
    ಬಾಯಿ ಹುಣ್ಣಿನ ಸಮಸ್ಯೆ ಇದ್ದವರು ರಾತ್ರಿ ಮಲಗುವ ಮುನ್ನ ಮತ್ತು ಬೆಳಗ್ಗೆ ಎದ್ದ ತಕ್ಷಣ ಗಟ್ಟಿ ಮೊಸರನ್ನು ಬಾಯಿಯ ಒಳಭಾಗದಲ್ಲಿ ಸವರಿಕೊಳ್ಳಬೇಕು. ಇದರಿಂದ ಶೀಘ್ರವೇ ಬಾಯಿ ಹುಣ್ಣಿನ ಸಮಸ್ಯೆ ಗುಣವಾಗುತ್ತದೆ.

    ಕರುಳು ಹಾಗೂ ಜಠರದ ತೊಂದರೆಗಳಿಗೆ:
    ದಿನವು ಮೊಸರನ್ನು ಆಹಾರದ ಒಂದು ಭಾಗವಾಗಿ ಸೇವಿಸುವ ವ್ಯಕ್ತಿಗಳಲ್ಲಿ ಕರುಳು ಹಾಗೂ ಜಠರದ ತೊಂದರೆಗಳು ಉಂಟಾಗುವ ಸಾಧ್ಯತೆ ಕಡಿಮೆ. ಒಂದು ವೇಳೆ ಹೊಟ್ಟೆಯೊಳಗೆ ಬಿಸಿಯಾಗಿರುವಂತೆ ಅನುಭವವಾದರೆ ಅನ್ನಕ್ಕೆ ಮೊಸರು ಕಲಸಿಕೊಂಡು ಸೇವಿಸುವು ಒಳ್ಳೆದು.

    ಮೂಲವ್ಯಾಧಿಯ ಸಮಸ್ಯೆಗೆ:
    ಮೂಲವ್ಯಾಧಿಯಿಂದ ಬಳಲುವವರು ಮೊಸರಿಗೆ ಸ್ವಲ್ಪ ನೀರು ಬೆರೆಸಿ, ಇದರಲ್ಲಿ ಕೆಲವು ಪಿಸ್ತಾಗಳನ್ನು ನೆನೆಸಿಟ್ಟು, ಅದನ್ನು ಅರೆದು ಕುಡಿದರೆ ಮೂಲವ್ಯಾಧಿ ನೋವಿನಿಂದ ಮುಕ್ತಿ ದೊರಕುತ್ತದೆ.

    ಮೂಳೆಗಳ ಆರೋಗ್ಯಕ್ಕೆ ಬೆಸ್ಟ್:
    ಮೂಳೆಗಳನ್ನು ದೃಢಗೊಳಿಸಲು ಹಾಲಿಗಿಂತಲೂ ಮೊಸರು ಬೆಸ್ಟ್. ಯಾಕೆಂದರೆ ಹಾಲಿನಲ್ಲಿರುವ ಕ್ಯಾಲ್ಸಿಯಂ ಅನ್ನು ನೇರವಾಗಿ ಪಡೆದುಕೊಳ್ಳಲು ನಮ್ಮ ದೇಹಕ್ಕೆ ಸಾಧ್ಯವಿಲ್ಲ. ಆದ್ದರಿಂದ ಹಾಲಿಗೆ ಜೇನು ತುಪ್ಪ ಸೇರಿಸಬೇಕಾಗುತ್ತದೆ. ಆದ್ರೆ ಮೊಸರಿನ ವಿಷಯದಲ್ಲಿ ಹಾಗಿಲ್ಲ. ಮೊಸರಿನಲ್ಲಿರುವ ಕ್ಯಾಲ್ಸಿಯಂ ಅನ್ನು ಜೇನು ತುಪ್ಪದ ಅಗತ್ಯವಿಲ್ಲದೇ ದೇಹ ಹೀರಿಕೊಳ್ಳುತ್ತದೆ. ಹೀಗಾಗಿ ಮೂಳೆಗಳ ಆರೋಗ್ಯಕ್ಕೆ ಇದು ಒಳ್ಳೆದು ಎನ್ನಲಾಗುತ್ತೆ.

    ಹೃದಯದ ಕಾಯಿಲೆ, ರಕ್ತದೊತ್ತಡಕ್ಕೆ:
    ಹೃದಯದ ಕಾಯಿಲೆ, ಅಧಿಕ ರಕ್ತದೊತ್ತಡಗಳಿಂದ ರಕ್ಷಣೆ ದೊರಕಲು ಮೊಸರನ್ನು ಸೇವಿಸಿ. ಮೊಸರು ದೇಹದಲ್ಲಿ ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ ಹೃದಯದ ಬಡಿತದ ವೇಗ ಹಾಗೂ ಒತ್ತಡವನ್ನೂ ನಿಯಂತ್ರಿಸಲು ಸಹಕಾರಿಯಾಗಿದೆ.

  • ರಾಜ್ಯದಲ್ಲಿ ಡೆಡ್ಲಿ ಕರೋನಾ ಭೀತಿ- ಶಂಕಿತ ಪ್ರಕರಣ ದಾಖಲು

    ರಾಜ್ಯದಲ್ಲಿ ಡೆಡ್ಲಿ ಕರೋನಾ ಭೀತಿ- ಶಂಕಿತ ಪ್ರಕರಣ ದಾಖಲು

    – ಹೆದರುವ ಅವಶ್ಯಕತೆ ಇಲ್ಲ: ಡಾ. ಪಾಟೀಲ್ ಓಂ ಪ್ರಕಾಶ್

    ಬೆಂಗಳೂರು: ಚೀನಾದ ಡೆಡ್ಲಿ ಕರೋನಾ ವೈರಸ್ ರಾಜ್ಯದಲ್ಲಿ ಆತಂಕವನ್ನ ಸೃಷ್ಟಿಸಿದೆ. ರಾಜ್ಯದಲ್ಲಿ ಇಬ್ಬರಲ್ಲಿ ಶಂಕಿತ ವೈರಸ್ ಪ್ರರಕಣಗಳು ಬೆಳಕಿಗೆ ಬಂದಿದ್ದು, ಬೆಂಗಳೂರಿನ ಎದೆರೋಗಿಗಳ ಆಸ್ಪತ್ರೆಗೆ ದಾಖಲಿಸಲಾಗಿದೆ.

    ವೈರಸ್ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ನಿರ್ದೇಶಕ ಡಾ. ಪಾಟೀಲ್ ಓಂ ಪ್ರಕಾಶ್, ಶಂಕಿತ ಪ್ರಕರಣದಲ್ಲಿ ಒಟ್ಟು 9 ಜನರನ್ನು ನಿಗಾದಲ್ಲಿಟ್ಟಿದ್ದೇವೆ. ಈ ಪೈಕಿ ಇಬ್ಬರ ಸ್ಯಾಂಪಲ್ಸ್ ಅನ್ನು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಲಾಜಿ ಕಳುಹಿಸಲಾಗಿದೆ. ಒಬ್ಬರ ಹೆಲ್ತ್ ರಿಪೋಟ್9 ರಿಸಲ್ಟ್ ಬಂದಿದ್ದು, ಅವ್ರಿಗೆ ಯಾವುದೇ ಸಮಸ್ಯೆಯಿಲ್ಲ. ನೆಗಟಿವ್ ಇದೆ ಎಂದು ಸ್ಪಷ್ಟಪಡಿಸಿದರು.

    ಹೊರ ರಾಷ್ಟ್ರಗಳಿಂದ ಬಂದವರನ್ನು ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ರಕ್ತ ಪರೀಕ್ಷೆ ಮಾಡಿ, ಹೆಲ್ತ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ರಾಜ್ಯದಲ್ಲಿ ಈ ವೈರಸ್ ಬಗ್ಗೆ ಹೆದರುವ ಅವಶ್ಯಕತೆ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಚೀನಾದಲ್ಲಿ ಸಾವಿನ ಭೀತಿ ಸ್ಟಷ್ಟಿಸಿರುವ ಕರೋನಾ ವೈರಸ್ ಕುರಿತು ವಿಶ್ವದೆಲ್ಲಡೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

  • ಸಚಿವ ಸಿ.ಸಿ ಪಾಟೀಲ್ ಆರೋಗ್ಯದಲ್ಲಿ ಏರುಪೇರು – ಖಾಸಗಿ ಆಸ್ಪತ್ರೆಗೆ ದಾಖಲು

    ಸಚಿವ ಸಿ.ಸಿ ಪಾಟೀಲ್ ಆರೋಗ್ಯದಲ್ಲಿ ಏರುಪೇರು – ಖಾಸಗಿ ಆಸ್ಪತ್ರೆಗೆ ದಾಖಲು

    ಗದಗ: ಸಚಿವ ಸಿ.ಸಿ ಪಾಟೀಲ್ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಗದಗ ಜಿಲ್ಲಾ ಉಸ್ತುವಾರಿ ಹಾಗೂ ಗಣಿ ಮತ್ತು ಭೂವಿಜ್ಞಾನ, ಪರಿಸರ, ಜೀವಶಾಸ್ತ್ರ ಇಲಾಖೆ ಸಚಿವ ಸಿ.ಸಿ ಪಾಟೀಲ್ ಆಸಿಡಿಟಿ ಹಾಗೂ ಹೈಬಿಪಿ ಸಮಸ್ಯೆಯಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿರಾಯು ಖಾಸಗಿ ಆಸ್ಪತ್ರೆ ವೈದ್ಯರಾದ ಡಾ. ಶ್ವೇತಾ ಸಂಕನೂರ, ಗದಗ ಜಿಮ್ಸ್ ಆಸ್ಪತ್ರೆಯ ಫಿಜಿಸಿಯನ್ ಡಾ.ಸಂಗಮೇಶ್ ಅಸೂಟಿ, ಸರ್ಜನ್ ಡಾ. ಬಸನಗೌಡ ಕರಿಗೌಡ ಚಿಕಿತ್ಸೆ ನೀಡಿದ್ದಾರೆ.

    ಸಚಿವ ಸಿ.ಸಿ ಪಾಟೀಲ್ ಅವರಿಗೆ 180/100 ವರೆಗೆ ಹೈಬಿಪಿ ಏರಿಕೆಯಾಗಿತ್ತು. ಆಸಿಡಿಟಿಗೆ ಪ್ಯಾನ್-ಡಿ ಮಾತ್ರೆ, ಬಿಪಿಗೆ ಎನ್ವಾಸ್ ಮಾತ್ರೆ, ಅಮ್ಲೋಡಿಪಿನ್ 5 ಎಂಜಿ ಮಾತ್ರೆಯನ್ನು ವೈದ್ಯರು ನೀಡಿದ್ದಾರೆ. ಯಾವುದೇ ಅಪಾಯವಿಲ್ಲ, ಸದ್ಯ ಗುಣಮುಖರಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳಿಂದ ದೃಢಪಟ್ಟಿದೆ. ಚಿಕಿತ್ಸೆ ಪಡೆದು ವೈದ್ಯರುಗಳ ಸಲಹೆ ಮೇರೆಗೆ ಸ್ವಗ್ರಾಮ ನರಗುಂದಕ್ಕೆ ತೆರಳಿ ವಿಶ್ರಾಂತಿ ಪಡೆಯಲಿದ್ದಾರೆ.