Tag: health

  • ಧಮ್ ಹೊಡೆದು ಕೊರೊನಾಗೆ ತುತ್ತಾಗದಿರಿ

    ಧಮ್ ಹೊಡೆದು ಕೊರೊನಾಗೆ ತುತ್ತಾಗದಿರಿ

    ದ್ಯ ಎಲ್ಲೆಡೆ ಕೇಳಿ ಬರುತ್ತಿರುವ ಮಾತು ಕೊರೊನಾ ವೈರಸ್ ಮಾತ್ರ. ವಿಶ್ವವ್ಯಾಪಿ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್‍ಗೆ ಘಟಾನುಘಟಿ ರಾಷ್ಟ್ರಗಳು ತತ್ತರಿಸಿ ಹೋಗಿವೆ. ಭಾರತ ಕೂಡ ಕೊರೊನಾ ವೈರಸ್ ಹಾವಳಿಗೆ ತುತ್ತಾಗಿದ್ದು, ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಂದಿಗೆ ಕೊರೊನಾ ಸೋಂಕು ಬಹುಬೇಗ ತಗಲುತ್ತದೆ. ಅದರಲ್ಲೂ ಧೂಮಪಾನ ಪ್ರಿಯರಿಗೆ ಕೊರೊನಾ ವೈರಸ್ ತಟ್ಟುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನಗಳು ತಿಳಿಸಿವೆ.

    ಆಗಾಗ ಬಾಯಿ, ಮೂಗು, ಕಣ್ಣು ಮುಟ್ಟಬೇಡಿ ಇದರಿಂದ ಕೊರೊನಾ ವೈರಸ್ ಬಹುಬೇಗ ಹರಡುತ್ತದೆ ಎಂದು ವೈದ್ಯರು, ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ. ಆದರೆ ಧೂಮಪಾನ ಮಾಡುವಾಗ ಕೈ ಬಾಯಿಗೆ ತಾಗುತ್ತದೆ, ಬಾಯಿ ಮೂಲಕ ವೈರಸ್ ದೇಹವನ್ನು ಸೇರಿ ಶ್ವಾಸಕೋಶಕ್ಕೆ ಹಾನಿ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.

    ಧೂಮಪಾನ ಮಾಡಿದ್ದರಿಂದ ಶ್ವಾಸಕೋಶಕ್ಕೆ ಮೊದಲೇ ಹಾನಿಯಾಗಿರುತ್ತದೆ. ಈಗ ಕೊರೊನಾ ವೈರಸ್ ತಗಲಿದರೆ ಉಸಿರಾಟದ ತೊಂದರೆ ಜಾಸ್ತಿಯಾಗುತ್ತದೆ. ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಉತ್ತಮವಾಗಿರಬೇಕು. ಆದರೆ ಧೂಮಪಾನಿಗಳ ಶ್ವಾಸಕೋಶ ಮೊದಲೇ ಹಾನಿಯಾಗಿತ್ತದೆ ಹೀಗಾಗಿ ಸೋಂಕು ಕಾಣಿಸಿಕೊಂಡರೆ ಅವರ ದೇಹದಲ್ಲಿ ಸೋಂಕನ್ನು ಎದರಿಸುವ ಶಕ್ತಿ ತೀರ ಕಡಿಮೆ ಇರುತ್ತದೆ. ಪರಿಸ್ಥಿತಿ ಮತ್ತಷ್ಟು ಗಂಭೀರವಾದರೆ ಶ್ವಾಸನಾಳದಲ್ಲಿ ದ್ರವ ತುಂಬಿಕೊಂಡು, ಆಮ್ಲಜನಕ ಸರಿಯಾಗಿ ದೊರೆಯದೆ ನ್ಯೋಮೋನಿಯಾ ಉಂಟಾಗಿ ಉಸಿರಾಡಲು ಕಷ್ಟವಾಗಿ ಸಾವಿಡೀಡಾಗುವ ಸಾಧ್ಯತೆ ಹೆಚ್ಚಾಗಿದೆ.

    ಧೂಮಪಾನ ಮಾಡುವವರು ಹೆಚ್ಚಾಗಿ ಆರೋಗ್ಯ ಸಮಸ್ಯೆ ಎದರಿಸುತ್ತಾರೆ ಎಂದು ಅಧ್ಯಯನ ವರದಿಗಳು ತಿಳಿಸಿವೆ. ಅದರಲ್ಲೂ ಕ್ಯಾನ್ಸರ್, ಹೃದಯ ಸಮಸ್ಯೆ ಮತ್ತಿತರ ಗಂಭೀರ ಸಮಸ್ಯೆ ಎದರಿಸುವ ರೋಗಿಗಳಲ್ಲಿ ಶೇ. 51ರಷ್ಟು ಧೂಮಪಾನಿಗಳ, ಶೇ. 17ರಷ್ಟು ಮಂದಿ ಧೂಮಪಾನಿಗಳು ಎಳೆದು ಬಿಟ್ಟ ಹೊಗೆ ಸೇವಿಸುವವರು(ಪ್ಯಾಸಿವ್ ಸ್ಮೋಕರ್ಸ್) ಆಗಿರುತ್ತಾರೆ ಎಂದು ತಿಳಿಸಲಾಗಿದೆ.

    ಇತ್ತ ಇ ಸಿಗರೇಟ್ ಸೇದುವ ಮಂದಿಯಲ್ಲೂ ರೋಗ ನಿರೋಧಕ ಶಕ್ತಿ ಕುಗ್ಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಶ್ವಾಸಕೋಶ ಮಾತ್ರವಲ್ಲ ಇದು ದೇಹದ ಜೀನ್‍ಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಇದು ದೇಹದಲ್ಲಿ 60ಕ್ಕೂ ಹೆಚ್ಚು ಜೀನ್‍ಗಳಿಗೆ ಹಾನಿ ಮಾಡುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿ ದೇಹದಲ್ಲಿ ಕಡಿಮೆಯಾಗಿ ರೋಗಗಳಿಗೆ ಬಹುಬೇಗ ಧೂಮಪಾನಿಗಳು ತುತ್ತಾಗುತ್ತಾರೆ.

  • ಕೊರೊನಾವೈರಸ್: ಮಧುಮೇಹಿಗಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು

    ಕೊರೊನಾವೈರಸ್: ಮಧುಮೇಹಿಗಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು

    ವಿಶ್ವವ್ಯಾಪಿ ಹರಡುತ್ತಿರುವ ಕೊರೊನಾವೈರಸ್ ಸೋಂಕನ್ನು ತಡೆಗಟ್ಟಲು ಜನರು ತುಂಬಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಭಾರತವನ್ನು ಕೂಡ ಕಾಡುತ್ತಿರುವ ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟಲು ದೇಶಾದ್ಯಂತ ಲಾಕ್‍ಡೌನ್ ಮಾಡಲಾಗಿದೆ. ಕೊರೊನಾವೈರಸ್ ಮಧುಮೇಹಿಗಳಿಗೆ ಸೋಂಕಿದರೆ ಗುಣವಾಗಲು ಕಷ್ಟವಾಗಿರುವ ಕಾರಣಕ್ಕೆ ಮಧುಮೇಹ ಇದ್ದವರು ಹೆಚ್ಚು ಜಾಗೃತರಾಗಿರಬೇಕು.

    ಮಧುಮೇಹಿಗಳ ದೇಹದಲ್ಲಿ ಗ್ಲೈಸೆಮಿಕ್ ನಿಯಂತ್ರಣ ಸಾಮರ್ಥ್ಯ ಕಡಿಮೆ ಇರುತ್ತದೆ. ಹೀಗಾಗಿ ಮಧುಮೇಹಿಗಳಿಗೆ ಕೊರೊನಾ ಸೋಂಕು ತಗುಲುವ ಸಾಮರ್ಥ್ಯ ಹೆಚ್ಚು ಎಂದು ಸಿಡಿಸಿ (Centers for Disease Control and Prevention) ಮಾಹಿತಿ ನೀಡಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಿಗೆ ಸೋಂಕು ತಗುಲಿದರೆ ಅವರ ಪರಿಸ್ಥಿತಿ ಜಿಂತಾಜನಕವಾಗುತ್ತದೆ. ಹೀಗಾಗಿ ಮಧುಮೇಹಿಗಳು ಕೆಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.

    ಅಮೆರಿಕದ ಡಯಾಬಿಟಿಕ್ ಅಸೋಸಿಯೇಷನ್ ಕೊರೊನಾ ವೈರಸ್ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿದೆ. ಈ ವರದಿಯನ್ನು ನೋಡಿದಾಗ ವಯಸ್ಸಾದವರಿಗೆ, ಮಧುಮೇಹಿಗಳಿಗೆ, ಹೃದಯ ಹಾಗೂ ಇತರ ಶ್ವಾಸಕೋಶ ಸಮಸ್ಯೆ ಇರುವ ಮಂದಿಗೆ ಕೊರೊನಾವೈರಸ್ ಸೋಂಕಿನ ಅಪಾಯ ಹೆಚ್ಚು ಎಂಬುದು ತಿಳಿದುಬಂದಿದೆ. ಒಂದು ವೇಲೆ ಈ ಆರೋಗ್ಯ ಸಮಸ್ಯೆಗಳು ಇದ್ದವರಿಗೆ ಸೋಂಕು ತಟ್ಟಿದರೆ ಚೇತರಿಸಿಕೊಳ್ಳೋದು ಕಷ್ಟವಾಗುತ್ತದೆ ಎಂದು ತಿಳಿಸಿದೆ

    ಮಧುಮೇಹ ಕಾಯಿಲೆ ಬಂದರೆ ಅದನ್ನು ನಿಯಂತ್ರಿಸಬಹುದೇ ಹೊರತಾಗಿ ಅದರಿಂದ ಸಂಪೂರ್ಣ ಗುಣಮುಖರಾಗಲು ಸಾಧ್ಯವಿಲ್ಲ. ಹೀಗಾಗಿ ಸದ್ಯ ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾವೈರಸ್ ದೇಹ ಹೊಕ್ಕದಂತೆ ಮಧುಮೇಹಿಗಳು ಎಚ್ಚರವಹಿಸಬೇಕು.

    ಅನುಸರಿಸಬೇಕಾದ ಕ್ರಮಗಳೇನು?

    1. ಮೊದಲು ಮಧುಮೇಹಿಗಳೂ ತೆಗೆದುಕೊಳ್ಳುತ್ತಿರುವ ಔಷಧಿಯ ಬಗ್ಗೆ ನಿಗವಹಿಸಬೇಕು. ಅವುಗಳ ಹೆಸರು ಹಾಗೂ ಡೋಸೇಜ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಿರಬೇಕು.

    2. ಒಂದು ತಿಂಗಳಿಗೆ ಬೇಕಾಗುವಷ್ಟು ಔಷಧಿಯನ್ನು ಮಧುಮೇಹಿಗಳು ತಂದು ಇಟ್ಟುಕೊಳ್ಳುವುದು ಒಳ್ಳೆಯದು, ಯಾಕೆಂದರೆ ಪದೇ ಪದೇ ಔಷಧಿಗಾಗಿ ಆಸ್ಪತ್ರೆ ಅಥವಾ ಮೆಡಿಕಲ್ ಶಾಪ್‍ಗೆ ಹೋಗೋದು ತಪ್ಪುತ್ತದೆ.

    3. ನಿಮ್ಮಗೆ ತಪಾಸಣೆ ನಡೆಸುವ ವೈದ್ಯರ ನಂಬರ್ ಇಟ್ಟುಕೊಂದು ಅಗ್ಯತ ಬಿದ್ದಾಗ, ಆರೋಗ್ಯದಲ್ಲಿ ಏರುಪೇರಾದಾಗ ಮಾತ್ರ ಕರೆ ಸಲಹೆ ಪಡೆಯಿರಿ.

    4. ಹ್ಯಾಂಡ್ ವಾಶ್, ಸೋಪ್ ಅಥವಾ ಸ್ಯಾನಿಟೈಸರ್‍ನಿಂದ ಆಗಾಗ ಕೈಗಳನ್ನು ತೊಳೆದುಕೊಳ್ಳೋದು ಒಳ್ಳೆಯದು. ದೇಹದಲ್ಲಿ ಸಕ್ಕರೆಯಂಶ ಕಡಿಮೆ ಆಗದಂತೆ ನೋಡಿಕೊಳ್ಳುವುದು ಅಗತ್ಯವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಗ್ಲೂಕೋಸ್ ಟ್ಯಾಬ್ಲೆಟ್ ಇಟ್ಟುಕೊಳ್ಳುವುದು ಒಳ್ಳೆಯದು.

    5. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಬಗ್ಗೆ ಗಮನ ಹರಿಸಿ. ದೇಹಕ್ಕೆ ಪೌಷ್ಟಿಕಾಂಶ ಸಿಗುವ ಆಹಾರ ಪಾನೀಯಗಳನ್ನು ಸೇವಿಸಿ, ಚೆನ್ನಾಗಿ ನಿದ್ರೆ ಮಾಡಿ, ವ್ಯಾಯಾಮ ಮಾಡಿ, ಸರಿಯಾದ ಸಮಯಕ್ಕೆ ಆಹಾರ ಸೇವಿಸಿ ಔಷಧಿಗಳನ್ನು ತೆಗೆದುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಿ.

    ಸೋಂಕು ತಗುಲುವುದನ್ನು ತಡೆಗಟ್ಟಲು ಏನು ಮಾಡಬೇಕು?

    1. ನಿಮ್ಮ ಕೈಗಳನ್ನು ಸೋಪ್, ಹ್ಯಾಂಡ್ ವಾಶ್ ಬಳಸಿ ಆಗಾಗ ತೊಳೆದುಕೊಳ್ಳಿ. ಅಥವಾ ಆಗಾಗ ಸ್ಯಾನಿಟೈಸರ್ ಬಳಸುತ್ತಿರಿ.

    2. ಒಂದು ವೇಳೆ ನಿಮ್ಮ ಕೈಗಳಿಗೆ ವೈರಸ್ ತಗುಲಿದ್ದರೆ ಅದು ನಿಮ್ಮ ದೇಹವನ್ನು ಸೇರುವ ಸಾಧ್ಯತೆ ಇರುತ್ತದೆ. ಹೀಗಾಗಿ ಕಣ್ಣು, ಮೂಗು, ಬಾಯಿಯನ್ನು ಆಗಾಗ ಮುಟ್ಟದಿರಿ. ನೀವು ಮುಟ್ಟುವ ವಸ್ತುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ.

    3. ಗುಂಪು ಗುಂಪಾಗಿ ಓಡಾಡಬೇಡಿ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ. ಯಾರಾದರೂ ಕೆಮ್ಮುತ್ತಿದ್ದರೆ, ಜ್ವರ ಇದ್ದರೆ ಅವರಿಂದ ದೂರವಿರಿ.

    4. ಒಂದು ವೇಲೆ ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ ಆದರೆ ತಕ್ಷಣ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಿಕೊಳ್ಳಿ, ನಿರ್ಲಕ್ಷಿಸಿದರೆ ಅಪಾಯ ಆಗುವ ಸಾಧ್ಯತೆ ಹೆಚ್ಚಿರುತ್ತದೆ.

  • ಮತ್ತೆ 5 ಪಾಸಿಟಿವ್ ಕೇಸ್ – ಕೊರೊನಾ ಪೀಡಿತರ ಸಂಖ್ಯೆ 38ಕ್ಕೆ ಏರಿಕೆ

    ಮತ್ತೆ 5 ಪಾಸಿಟಿವ್ ಕೇಸ್ – ಕೊರೊನಾ ಪೀಡಿತರ ಸಂಖ್ಯೆ 38ಕ್ಕೆ ಏರಿಕೆ

    ಬೆಂಗಳೂರು: ಇಂದು ಹೊಸದಾಗಿ 5 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಈ ಮೂಲಕ ಕರ್ನಾಟಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.

    ರೋಗಿ 34 – 32 ವರ್ಷದ ಕಾಸರಗೋಡಿನ ವ್ಯಕ್ತಿ ಮಾರ್ಚ್ 20 ರಂದು ದುಬೈಯಿಂದ ಮಂಗಳೂರಿಗೆ ಬಂದಿದ್ದ. ಈ ವ್ಯಕ್ತಿಯನ್ನು ನೇರವಾಗಿ ವಿಮಾನ ನಿಲ್ದಾಣದಿಂದಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೋಗಿ 35 – 40 ವರ್ಷದ ಉತ್ತರ ಕನ್ನಡ ವ್ಯಕ್ತಿ ಮರ್ಚ್ 21 ರಂದು ದುಬೈಯಿಂದ ಬಂದಿದ್ದು, ಉತ್ತರ ಕನ್ನಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ರೋಗಿ 36 – 40 ವರ್ಷದ ಉತ್ತರ ಕನ್ನಡ ಮೂಲದ ವ್ಯಕ್ತಿ ಮಾರ್ಚ್ 21 ರಂದು ಆಗಮಿಸಿದ್ದು, ಉತ್ತರ ಕನ್ನಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ರೋಗಿ 37 – ಚಿಕ್ಕಬಳ್ಳಾಪುರದ 56 ವರ್ಷದ ಮಹಿಳೆ ರೋಗಿ 19 ಮತ್ತು ರೋಗಿ 22ರ ಜೊತೆ ಸೌದಿ ಅರೇಬಿಯದ ಮೆಕ್ಕಾಗೆ ಸಹ ಪ್ರಯಾಣಿಕರಾಗಿ ತೆರಳಿದ್ದರು. ಮಾರ್ಚ್ 14 ರಂದು ಹೈದರಾಬಾದ್ ನಲ್ಲಿ ಇಳಿದಿದ್ದರು. ಚಿಕ್ಕಬಳ್ಳಾಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ರೋಗಿ 38 – ಬೆಂಗಳೂರು ಮೂಲದ 56 ವರ್ಷದ ಮಹಿಳೆ ರೋಗಿ 13ರ ಸಂಪರ್ಕಕ್ಕೆ ಬಂದಿದ್ದು, ಈಗ ಇವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಮನೆಯಲ್ಲೇ ಮಾಡಿ ಕುಡಿಯಿರಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಜ್ಯೂಸ್

    ಮನೆಯಲ್ಲೇ ಮಾಡಿ ಕುಡಿಯಿರಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಜ್ಯೂಸ್

    ಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ಹಾವಳಿ ಬಗ್ಗೆ ಎಲ್ಲರಿಗೂ ಗೊತ್ತಿದೆ. ಸದ್ಯ ಭಾರತ ಸ್ಟೇಜ್ 2ನಲ್ಲಿದೆ. ಈಗಲೇ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಸೋಂಕಿನ ಭೀಕರತೆಯನ್ನು ಎದುರಿಸಿಬೇಕಾಗುತ್ತೆ. ಯಾಕೆಂದರೆ ಈವರೆಗೂ ಈ ಸೋಂಕಿಗೆ ಔಷಧಿ ಲಭ್ಯವಿಲ್ಲ. ಔಷಧಿ ಕಂಡುಹಿಡಿಯುವಲ್ಲಿ ಸಂಶೋದಕರು ನಿರತರಾಗಿದ್ದಾರೆ. ಹೀಗಾಗಿ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳುವುದು ಅಗತ್ಯವಾಗಿದ್ದು, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಿದೆ.

    ಶೀತ, ನೆಗಡಿ, ಕೆಮ್ಮು, ಜ್ವರ, ಉಸಿರಾಟದ ತೊಂದರೆಗಳಂತಹ ಯಾವುದೇ ಲಕ್ಷಣಗಳು ಗೋಚರಿಸದಂತೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಮನೆ ಮದ್ದುಗಳು ಮೂಲಕ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯ ವೃದ್ಧಿಸಿಕೊಳ್ಳಬಹುದು.

    ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆಹಾರ ಪದ್ಧತಿಯಲ್ಲಿ ಹಣ್ಣು ಮತ್ತು ತರಕಾರಿಗಳು ಸೇರಿಕೊಂಡರೆ ಒಳ್ಳೆಯದು. ಹಣ್ಣು, ತರಕಾರಿಗಳನ್ನು ಸೇವಿಸಿದರೆ ಅದರಲ್ಲಿರುವ ಹೆಚ್ಚಿನ ಪೌಷ್ಟಿಕ ಸತ್ವಗಳು ದೇಹ ಸೇರಿ, ಆರೋಗ್ಯ ರಕ್ಷಣೆ ಮಾಡುತ್ತದೆ. ಅದರಲ್ಲೂ ಹಣ್ಣು ಮತ್ತು ತರಕಾರಿಗಳು ಎರಡನ್ನೂ ಮಿಶ್ರಣ ಮಾಡಿ ತಯಾರಿಸುವ ಪಾನೀಯಗಳಲ್ಲಿ ಪೋಷಕಾಂಶಗಳು ಯಥೇಚ್ಛವಾಗಿರುತ್ತದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ರೋಗ ನಿರೋಧಕ ಶಕ್ತಿ ವೃದ್ಧಿಸುವ ಜ್ಯೂಸ್‍ಗಳನ್ನು ಮಾಡೋದು ಹೇಗೆ? ಅದರಿಂದ ಏನು ಲಾಭ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

    ಯಾವ ಜ್ಯೂಸ್ ಕುಡಿದರೆ ಏನು ಲಾಭ?

    1. ಕ್ಯಾರೆಟ್, ಸೇಬು ಮತ್ತು ಕಿತ್ತಳೆ ಹಣ್ಣಿನ ಜ್ಯೂಸ್
    ಕ್ಯಾರೆಟ್‍ನಲ್ಲಿ ಬೀಟಾ-ಕ್ಯಾರೋಟಿನ್ ಅಂಶ ಹೆಚ್ಚಿದ್ದು, ಉಸಿರಾಟದ ವ್ಯವಸ್ಥೆಯ ಉತ್ತಮಗೊಳಿಸುತ್ತದೆ. ಸೇಬು ಹಣ್ಣುಗಳಲ್ಲಿ ಆಂಟಿ-ಆಕ್ಸಿಡೆಂಟ್ ಅಂಶವಿದ್ದು, ಇದು ದೇಹದಲ್ಲಿ ಪ್ರಮುಖ ಕೋಶಗಳನ್ನು ಮತ್ತು ಅಂಗಾಂಶಗಳನ್ನು ರಕ್ಷಣೆ ಮಾಡುತ್ತದೆ. ಕಿತ್ತಳೆ ಹಣ್ಣಿನಲ್ಲಿ ಇರುವ ಪೌಷ್ಟಿಕ ಸತ್ವಗಳು ಯಾವುದೇ ಬಗೆಯಲ್ಲಿ ವೈರಾಣುಗಳ ಸೋಂಕನ್ನು ತಡೆಯುವಲ್ಲಿ ಸಹಾಯಕವಾಗಿದೆ. ಇವುಗಳ ಸೇವನೆಯಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಅಂಶಗಳು ಮತ್ತು ಪೌಷ್ಟಿಕ ಸತ್ವಗಳು ಸಿಗುತ್ತದೆ.

    ಜ್ಯೂಸ್ ಮಾಡುವ ವಿಧಾನ:
    ಮೊದಲು ಕತ್ತರಿಸಿದ 1 ಕ್ಯಾರೆಟ್, 1 ಸೇಬು ಹಣ್ಣನ್ನು ಚೆನ್ನಾಗಿ ತೊಳೆದು, 1 ಕಿತ್ತಳೆ ಹಣ್ಣನ್ನು ಸುಲಿದು ಸೊಳೆಗಳನ್ನು ಒಂದು ಮಿಕ್ಸರ್ ಜಾರ್‍ನಲ್ಲಿ ಹಾಕಿ ರುಬ್ಬಿಕೊಳ್ಳಿ.

    ಬಳಿಕ ಅದರಿಂದ ರಸವನ್ನು ತೆಗೆದು ಲೋಟದಲ್ಲಿ ಹಾಕಿಕೊಂಡು ಕುಡಿಯಿರಿ ಅಥವಾ ರುಬ್ಬಿಕೊಂಡ ಮಿಶ್ರಣವನ್ನು ಹಾಗೆಯೇ ಗಟ್ಟಿಯಾಗಿ ಕೂಡ ಸೇವಿಸಬಹುದು. ನಿಯಮಿತವಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಸೇವಿಸೋದು ಉತ್ತಮವಾಗಿದ್ದು, ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

    2. ನಿಂಬೆ ಹಣ್ಣು, ಶುಂಠಿ ಮತ್ತು ಜೇನು ತುಪ್ಪ ಪಾನೀಯ
    ಜೇನು ತುಪ್ಪದಲ್ಲಿ ಆಂಟಿ ಆಕ್ಸಿಡೆಂಟ್‍ಗಳು ಹೆಚ್ಚಾಗಿ ಇರುತ್ತದೆ. ಜೇನು ತುಪ್ಪದ ಜೊತೆ ಶುಂಠಿ ಮತ್ತು ನಿಂಬೆ ಹಣ್ಣಿನ ರಸ ಸೇರಿದರೆ ದೇಹದಲ್ಲಿ ಶೀತ ಮತ್ತು ಜ್ವರದ ಲಕ್ಷಣಗಳನ್ನು ಇಲ್ಲವಾಗಿಸುತ್ತದೆ. ನಿಂಬೆ ಹಣ್ಣಿನಲ್ಲಿ ವಿಟಮಿನ್ ‘ಸಿ’ ಅಂಶವಿದ್ದು, ಇದು ಜೀರ್ಣಾಂಗದ ವ್ಯವಸ್ಥೆ ಉತ್ತಮಗೊಳಿಸಿ ಅಜೀರ್ಣತೆ ದೂರಮಾಡಲು ಸಹಕಾರಿಯಾಗಿದೆ. ಶುಂಠಿಯಲ್ಲಿ ಆಂಟಿ-ಇನ್ಫಾಮೇಟರಿ ಗುಣವಿದ್ದು ಇದು ಆರೋಗ್ಯಕ್ಕೆ ಒಳ್ಳೆಯದು.

    ಶೀತಾ ಮತ್ತು ಜ್ವರದ ಲಕ್ಷಣಗಳನ್ನು ದೂರ ಮಾಡಲು ನಿಂಬೆ ಹಣ್ಣು, ಶುಂಠಿ, ಜೇನು ತುಪ್ಪ ಸಹಾಯಕವಾಗಿದ್ದು, ಇವುಗಳನ್ನು ಮಿಶ್ರಣ ಮಾಡಿ ಸೇವಿಸುವುದರಿಂದ ಬೆಳಗಿನ ಅಸ್ವಸ್ಥತೆಯನ್ನು, ವಾಕರಿಕೆ ಮತ್ತು ವಾಂತಿಯ ಸಮಸ್ಯೆಯನ್ನು, ಮಾಂಸ ಖಂಡಗಳ ನೋವುಗಳನ್ನು ನಿವಾರಣೆ ಆಗುತ್ತದೆ. ಜೇನು ತುಪ್ಪ ದೇಹದ ತೂಕ ಕಡಿಮೆ ಮಾಡುವಲ್ಲಿ, ಜೀರ್ಣಾಂಗ ವ್ಯವಸ್ಥೆಯನ್ನು ಸರಿಯಾಗಿ ನೋಡಿಕೊಳ್ಳಲು ಮತ್ತು ಕೆಮ್ಮಿನ ಸಮಸ್ಯೆಯನ್ನು ದೂರ ಮಾಡುವಲ್ಲಿ ಉಪಯುಕ್ತವಾಗಿದೆ.

    ಜ್ಯೂಸ್ ತಯಾರು ಮಾಡುವ ವಿಧಾನ:
    ಒಂದು ಗ್ಲಾಸ್ ಕುದಿಯುವ ನೀರಿನಲ್ಲಿ ಸ್ವಲ್ಪ ತುರಿದ ಶುಂಠಿ, 1 ಚಿಟಿಕೆ ಅರಿಶಿನ, 2ರಿಂದ 3 ಟೇಬಲ್ ಚಮಚ ನಿಂಬೆ ರಸ ಹಾಕಿ ಚೆನ್ನಾಗಿ ಕಲಿಸಿ. ಬಳಿಕ ಸ್ವಲ್ಪ ಹೊತ್ತು ತಣ್ಣಗಾಗಲು ಬಿಟ್ಟು, ಆ ಬಳಿಕ ಒಂದು ಟೇಬಲ್ ಚಮಚದಷ್ಟು ಜೇನು ತುಪ್ಪವನ್ನು ನಿಂಬೆ ರಸದ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಹೀಗೆ ತಯಾರಿಸಿದ ಜ್ಯೂಸ್ ಅನ್ನು ನಿಯಮಿತವಾಗಿ ಸೇವನೆ ಮಾಡಿ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ.

    4. ಶುಂಠಿ, ಅರಿಶಿನ ಮತ್ತು ಕ್ಯಾರೆಟ್ ಜ್ಯೂಸ್
    ಅರಿಶಿನದಲ್ಲಿ ಆಂಟಿ-ಆಕ್ಸಿಡೆಂಟ್ ಅಂಶವಿರುತ್ತದೆ, ಶುಂಠಿ ಒಣ ಕೆಮ್ಮನ್ನು ತಡೆಯಲು ಸಹಾಯಕವಾಗಿದ್ದು, ಆಹಾರವನ್ನು ಜೀರ್ಣಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ. ನಿಂಬೆ ಹಣ್ಣಿನಲ್ಲಿ ವಿಟಮಿನ್ ‘ಸಿ’ ಹೆಚ್ಚಾಗಿದ್ದು, ರೋಗನಿರೋಧಕ ವರ್ಧಕವಾಗಿದೆ.

    ಜ್ಯೂಸ್ ಮಾಡುವ ವಿಧಾನ:
    ಮೊದಲು ಶುಂಠಿ, ಕ್ಯಾರೆಟ್ ಅನ್ನು ಚೆನ್ನಾಗಿ ತೊಳೆಯಿರಿ. ಬಳಿಕ 1 ಅಥವಾ 2 ಕ್ಯಾರೆಟ್‍ಗಳನ್ನು ಮಿಕ್ಸಿ ಜಾರ್‍ಗೆ ಹಾಕಿ ರುಬ್ಬಿಕೊಳ್ಳಿ, ಬಳಿಕ ರಸವನ್ನು ತೆಗೆಯಿರಿ. ಈ ಕ್ಯಾರೆಟ್ ರಸಕ್ಕೆ ನಿಂಬೆ ಹಾಗೂ ಶುಂಠಿ ರಸವನ್ನು ಸೇರಿಸಿ ಜೊತೆಗೆ ಸ್ವಲ್ಪ ಅರಿಶಿನ ಪುಡಿಯನ್ನು ಬೆರೆಸಿ ಜ್ಯೂಸ್ ಮಾಡಿ. ಅದಕ್ಕೆ ಒಂದು ಚಿಟಿಕೆ ಕರಿಮೆಣಸು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಿರಿ.

  • ಎಲ್ಲರಲ್ಲಿ ತಂದೆಯನ್ನ ನೋಡಿದೆ: ಅಭಿಮಾನಿಗಳಿಗೆ ಅರ್ಜುನ್ ಜನ್ಯ ಧನ್ಯವಾದ

    ಎಲ್ಲರಲ್ಲಿ ತಂದೆಯನ್ನ ನೋಡಿದೆ: ಅಭಿಮಾನಿಗಳಿಗೆ ಅರ್ಜುನ್ ಜನ್ಯ ಧನ್ಯವಾದ

    -ರಾಜೇಶ್ ಕೃಷ್ಣನ್ ಸಹಾಯ, ವಿಜಯ್ ಪ್ರಕಾಶ್ ಮಮತೆ ತಿಳಿಸಿದ್ರು

    ಬೆಂಗಳೂರು: ಮ್ಯಾಜಿಕಲ್ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯ ಗುಣಮುಖರಾಗಿದ್ದು, ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗೆ ಕಮ್ ಬ್ಯಾಕ್ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ ಅರ್ಜುನ್ ಜನ್ಯ, ತಮ್ಮ ಚೇತರಿಕೆಗಾಗಿ ಪ್ರಾರ್ಥಿಸಿದ ಎಲ್ಲ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

    ತಮಗಾಗಿ ಪ್ರಾರ್ಥಿಸಿದವರಿಗೆ ಎಷ್ಟು ಧನ್ಯವಾದ ಹೇಳಿದ್ರೂ ಕಡಿಮೆ. ನಾಡಿನ ಪ್ರತಿಯೊಬ್ಬರ ಆಶೀರ್ವಾದ, ಪ್ರಾರ್ಥನೆಯಿಂದ ಗುಣಮುಖವಾಗಿದ್ದೇನೆ. ಈ ವೇದಿಕೆಯನ್ನು ಸಹ ಮಿಸ್ ಮಾಡಿಕೊಂಡಿದ್ದೇನೆ. ಆರೋಗ್ಯದಲ್ಲಿ ಏರುಪೇರು ಕಂಡ ತಕ್ಷಣ ಎಲ್ಲರೂ ನನ್ನ ಬಳಿ ಬಂದರು. ನಾನು ಒಪ್ಪಿಕೊಂಡಿದ್ದ ಕಾರ್ಯಕ್ರಮವನ್ನ ರಾಜೇಶ್ ಕೃಷ್ಣನ್ ನಡೆಸಿಕೊಟ್ಟರು. ಇನ್ನು ವಿಜಯ್ ಪ್ರಕಾಶ್ ಮನೆಗೆ ಬಂದು ಗಾಳಿ ಆಂಜನೇಯ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ತಾಯತ ಕಟ್ಟಿಸಿದರು ಎಂದು ಅರ್ಜುನ್ ಜನ್ಯ ಹೇಳಿದರು. ಇದನ್ನೂ ಓದಿ:   ಅರ್ಜುನ್ ಜನ್ಯ ಆರೋಗ್ಯದ ಬಗ್ಗೆ ರಾಜೇಶ್ ಕೃಷ್ಣನ್ ಹೇಳಿದ್ದು ಹೀಗೆ

    ನಮ್ಮ ತಂದೆ ಅಗಲಿ 25 ರಿಂದ 26 ವರ್ಷ ಆಯ್ತು. ಕೆಲವು ದಿನಗಳಲ್ಲಿ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಮತ್ತು ನನಗಾಗಿ ಹಾರೈಸಿದವರಲ್ಲಿ ನಮ್ಮ ತಂದೆಯನ್ನು ನೋಡಿದೆ ಎಂದು ಭಾವುಕರಾದರು. ಕೊನೆಗೆ ನಿರೂಪಕಿ ಅನುಶ್ರೀ, ಸ್ನೇಹಿತರಲ್ಲಿ ತಂದೆಯನ್ನು ಕಾಣುವ ನಿಮ್ಮ ಮನಸ್ಸು ನಿಜಕ್ಕೂ ದೊಡ್ಡದು ಚಪ್ಪಾಳೆ ಮೂಲಕ ಕೊಂಡಾಡಿದರು. ಇದನ್ನೂ ಓದಿ: I am OK, Nothing to Worry: ಅರ್ಜುನ್ ಜನ್ಯ

  • ಸೀನೋದನ್ನ ತಡೆಹಿಡಿದಷ್ಟೂ ಆರೋಗ್ಯಕ್ಕೆ ಅಪಾಯ

    ಸೀನೋದನ್ನ ತಡೆಹಿಡಿದಷ್ಟೂ ಆರೋಗ್ಯಕ್ಕೆ ಅಪಾಯ

    ಸೀನುವಿಕೆ ಅಂದರೆ ಅದು ರೋಗವಲ್ಲ, ರೋಗದ ಲಕ್ಷಣವೂ ಅಲ್ಲ. ಸೀನುವಿಕೆ ಮಾನವನ ದೇಹದ ರೋಗ ನಿರೋಧಕ ವ್ಯವಸ್ಥೆಯ ಒಂದು ಕ್ರಮ.

    ಸೀನುವಿಕೆ ಎಂದರೇನು?
    ಮೂಗಿನ ಮೂಲಕ ದೇಹದೊಳಗೆ ಯಾವುದಾದರೂ ವೈರಾಣುಗಳು ಪ್ರವೇಶಿಸಿದರೆ ಅವನ್ನು ಭಾರೀ ಒತ್ತಡದಿಂದ ದೇಹದಿಂದ ಹೊರಹಾಕುವ ಪ್ರಕ್ರಿಯೆಯೇ ಸೀನುವಿಕೆ ಎನ್ನಲಾಗುತ್ತದೆ.

    ಕೇವಲ ವೈರಾಣುಗಳು ಮಾತ್ರವಲ್ಲ, ಉಸಿರಾಟದ ಸಮಯದಲ್ಲಿ ದೇಹದ ಒಳಬರುವ ಧೂಳು, ಹೊಗೆ, ಬ್ಯಾಕ್ಟೀರಿಯಾ, ಹೂವಿನ ಪರಾಕ ಮೊದಲಾದ ಸೂಕ್ಷ್ಮ ಕಣಗಳನ್ನು ನಿವಾರಿಸಲೂ ಸೀನುವಿಕೆ ಅಗತ್ಯ ಎನ್ನಲಾಗುತ್ತೆ.

    ಸೀನುವಾಗ ದೇಹದಿಂದ ದ್ರವ ಸಿಡಿಯಲು ಕಾರಣವೇನು?
    ಈ ಪ್ರಕ್ರಿಯೆಯಲ್ಲಿ ಅತಿ ಕ್ಷಿಪ್ರವಾಗಿ ಸಂಕುಚಿಸಿ ವಿಕಸಿಸುವ ಸ್ನಾಯುಗಳು ಒಳಗಿನ ಗಾಳಿಯನ್ನು ಘಂಟೆಗೆ 160 ಕಿ.ಮೀ ವೇಗದಲ್ಲಿ ಹೊರಬಿಳುತ್ತದೆ. ಈ ವೇಳೆ ಅಷ್ಟೂ ಕ್ರಿಮಿ ಮತ್ತು ಧೂಳಿನ ಅಂಶ ಹೊರಹೋಗುತ್ತವೆ. ಗಂಭೀರ ಸೋಂಕಿನಿಂದ ರಕ್ಷಣೆ ಪಡೆಯಲು ಸೀನು ಬರುತ್ತದೆ.

    ಸೀನುವಿಕೆ ತಡೆಹಿಡಿದರೆ ಆರೋಗ್ಯದ ಮೇಲೆ ಬೀರುವ ಅಡ್ಡ ಪರಿಣಾಮಗಳೇನು?

    1. ನಡು ಕಿವಿಯ ಸೋಂಕು
    ಸೀನುವಿಕೆಯನ್ನು ತಡೆಹಿಡಿದರೆ ನಡು ಕಿವಿಯ ಸೋಂಕು ಕಾಣಿಸಿಕೊಳ್ಳುತ್ತದೆ. ಸೀನುವುದರಿಂದ ಮೂಗಿನಲ್ಲಿರುವ ಬ್ಯಾಕ್ಟೀರಿಯಾಗಳೆಲ್ಲಾ ಹೊರಹೋಗುತ್ತವೆ. ಆದರೆ ಸೀನುವಿಕೆಯನ್ನು ತಡೆದರೆ ಆ ಬ್ಯಾಕ್ಟೀರಿಯಾಗಳು ಹೋಗದೇ ದ್ರವ ಒತ್ತಡದಿಂದ ನೇರವಾಗಿ ಕಿವಿಯತ್ತ ನುಗ್ಗುತ್ತದೆ. ಈ ಸೋಂಕುಪೀಡಿತ ದ್ರವ ಕಿವಿಯ ಮಧ್ಯಭಾಗಕ್ಕೆ ಹೋಗುವ ಪರಿಣಾಮ ಒಳಗಿವಿ ಸೋಂಕು ಶುರುವಾಗುತ್ತದೆ.

    2. ಎದೆ ಮೂಳೆ ಮುರಿಯುವುದು
    ಸೀನುವಿಕೆ ತಡೆಹಿಡಿದರೆ ಎದೆ ಮೂಳೆ ಮುರಿಯುವ ಸಾಧ್ಯತೆ ಇರುತ್ತದೆ. ಕೆಲ ವ್ಯಕ್ತಿಗಳಲ್ಲಿ, ಅದರಲ್ಲೂ ವಿಶೇಷವಾಗಿ ವೃದ್ಧರಲ್ಲಿ ಹೀಗೆ ಸೀನುವಿಕೆಯನ್ನು ತಡೆಯುವ ಪ್ರಯತ್ನದಿಂದ ಎದೆಗೂಡಿನ ಮೂಳೆಗಳು ಮುರಿದಿರುವ ಪ್ರಕರಣಗಳು ವರಿದಿಯಾಗಿದೆ.

    3. ಕಿವಿ ತಮಟೆ ಹರಿಯುವ ಸಾಧ್ಯತೆ
    ಸೀನುವಾಗ ಬರುವ ಗಾಳಿಯ ಒತ್ತಡವನ್ನು ತಡೆಹಿಡಿದರೆ ಕಿವಿ ತಮಟೆ ಹರಿದು ಹೋಗುವ ಸಾಧ್ಯತೆ ಹೆಚ್ಚಿದೆ. ಸ್ವಾಭಾವಿಕವಾಗಿ ಸೀನುಬಾದ ದುರ್ಬಲ ಮತ್ತು ತೆರೆದಿರುವ ಸ್ಥಳಗಳ ಮೂಲಕವೇ ದ್ರವ ಹಾದು ಹೋಗುತ್ತದೆ. ಆದ್ದರಿಂದ ಸೀನುವಿಕೆಯನ್ನು ತಡೆಹಿಡಿದರೆ ಕಿವಿಗೆ ತೊಂದರೆ ಹೆಚ್ಚು ಎನ್ನಲಾಗುತ್ತೆ.

    4. ಅನ್ಯೂರಿಸಂ(Aneurysm)
    ಸೀನುವಾಗ ದೇಹದಿಂದ ದ್ರವವೊಂದು ಹೊರಬರುತ್ತದೆ. ಆದರೆ ಸೀನುವುದನ್ನ ತಡೆದರೆ ಆ ದ್ರವದ ಒತ್ತಡ ರಕ್ತನಾಳಗಳ ಮೂಲಕ ಮೆದುಳನ್ನೂ ತಲಪುವ ಸಾಧ್ಯತೆ ಇದೆ. ಹೀಗಾದರೆ ಮೆದುಳನ್ನು ಸಂಪರ್ಕಿಸಿರುವ ಸೂಕ್ಷ್ಮ ಭಾಗ ಹರಿದುಹೋಗುತ್ತದೆ. ಪರಿಣಾಮ ಮೆದುಳಿನ ಸುತ್ತ, ತಲೆಬುರುಡೆಯ ಒಳಗೆ ರಕ್ತಸ್ರಾವವಾಗುತ್ತದೆ.

    5. ಕಣ್ಣಿನ ನರಕ್ಕೆ ತೊಂದರೆ
    ಸೀನುವಿಕೆಯನ್ನು ತಡೆಹಿಡಿಯುವ ಪ್ರಯತ್ನದಲ್ಲಿ ಗಾಳಿಯ ಒತ್ತಡ ಒಳಗೇ ಉಳಿದು ಕಿವಿಯ ಮಾತ್ರವಲ್ಲ ಕಣ್ಣಿನ ನರದ ಮೇಲೂ ಪರಿಣಾಮ ಬೀರುತ್ತದೆ.

  • ಪಾಟೀಲ ಪುಟ್ಟಪ್ಪರಿಗೆ ಶೀಘ್ರ ಬಸವ ರಾಷ್ಟ್ರೀಯ ಪುರಸ್ಕಾರ- ಸಿಎಂ

    ಪಾಟೀಲ ಪುಟ್ಟಪ್ಪರಿಗೆ ಶೀಘ್ರ ಬಸವ ರಾಷ್ಟ್ರೀಯ ಪುರಸ್ಕಾರ- ಸಿಎಂ

    – ಪಾಪು ಆರೋಗ್ಯ ವಿಚಾರಿಸಿದ ಸಿಎಂ

    ಹುಬ್ಬಳ್ಳಿ: ಹಿರಿಯ ಪತ್ರಕರ್ತ, ರಾಜ್ಯಸಭೆಯ ಮಾಜಿ ಸದಸ್ಯ ನಾಡೋಜ ಪಾಟೀಲ ಪುಟ್ಟಪ್ಪನವರಿಗೆ ರಾಜ್ಯ ಸರ್ಕಾರದಿಂದ ಕೊಡಮಾಡುವ 2017ನೇ ಸಾಲಿಗಾಗಿ ಘೋಷಿಸಿದ್ದ ಬಸವ ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿಯನ್ನು ಶೀಘ್ರದಲ್ಲೇ ಪ್ರದಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

    ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರ ಆರೋಗ್ಯ ವಿಚಾರಿಸಿದ ನಂತರ ಮಾತನಾಡಿದ ಅವರು, ರಾಷ್ಟ್ರೀಯ ಬಸವ ಪುರಸ್ಕಾರದೊಂದಿಗೆ ಹತ್ತು ಲಕ್ಷ ರೂ. ನಗದು ನೀಡಲಾಗುವುದು. ಅಲ್ಲದೆ ಡಾ.ಪಾಟೀಲ ಪುಟ್ಟಪ್ಪ ಅವರ ಆರೋಗ್ಯ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಪುಟ್ಟಪ್ಪನವರು ಸದ್ಯ ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದು, ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವದಾಗಿ ಮುಖ್ಯಮಂತ್ರಿ ತಿಳಿಸಿದರು.

    ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಕಳೆದ ಫೆ.10ರಿಂದ ಚಿಕಿತ್ಸೆ ಪಡೆಯುತ್ತಿರುವ ಡಾ.ಪಾಟೀಲ ಪುಟ್ಟಪ್ಪ ಅವರ ಆರೋಗ್ಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಖುದ್ದಾಗಿ ಭೇಟಿ ನೀಡಿ ವಿಚಾರಿಸಿದರು. ಇದೇ ವೇಳೆ ಪಾಪು ಕುಟುಂಬಸ್ಥರೊಂದಿಗೆ ಸಮಾಲೋಚನೆ ನಡೆಸಿದರು.

  • ನಾಡೋಜ ಪಾಟೀಲ ಪುಟ್ಟಪ್ಪ ಆರೋಗ್ಯ ವಿಚಾರಿಸಿದ ಸಿಎಂ ಬಿಎಸ್‍ವೈ

    ನಾಡೋಜ ಪಾಟೀಲ ಪುಟ್ಟಪ್ಪ ಆರೋಗ್ಯ ವಿಚಾರಿಸಿದ ಸಿಎಂ ಬಿಎಸ್‍ವೈ

    ಹುಬ್ಬಳ್ಳಿ: ಜಿಲ್ಲೆಯ ಕಿಮ್ಸ್‌ನಲ್ಲಿ ಕಳೆದ ಫೆ.10 ರಿಂದ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಪತ್ರಕರ್ತ, ರಾಜ್ಯಸಭೆ ಮಾಜಿ ಸದಸ್ಯ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರ ಆರೋಗ್ಯವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಖುದ್ದಾಗಿ ಭೇಟಿ ನೀಡಿ ವಿಚಾರಿಸಿದರು.

    ಕಿಮ್ಸ್‌ನಲ್ಲಿ ಪಾಟೀಲ ಪುಟ್ಟಪ್ಪನವರಿಗೆ ಉತ್ತಮ ಚಿಕಿತ್ಸೆ ದೊರೆಯುತ್ತಿದೆ. ಸಾಧ್ಯವಾದಷ್ಟು ಇನ್ನೂ ಹೆಚ್ಚಿನ ಪ್ರಯತ್ನ ಮಾಡಿ ಎಂದು ಯಡಿಯೂರಪ್ಪ ಸಲಹೆ ನೀಡಿದರು. ಪಾಟೀಲ ಪುಟ್ಟಪ್ಪನವರ ಮಕ್ಕಳಾದ ಅಶೋಕ, ಮಂಜುಳಾ ಹಾಗೂ ಶೈಲಜಾ ಅವರಿಂದಲೂ ಮುಖ್ಯಮಂತ್ರಿಗಳು ಮಾಹಿತಿ ಪಡೆದರು.

    ಕಿಮ್ಸ್ ವೈದ್ಯಶಾಸ್ತ್ರ ಒಳರೋಗಿ ವಿಭಾಗದಲ್ಲಿ ದಾಖಲಾಗಿರುವ ನಾಡೋಜ ಪಾಪು ಅವರು, ವಿಪರೀತ ಜ್ವರ, ಉಸಿರಾಟ ತೊಂದರೆ ಹಾಗೂ ಆಯತಪ್ಪಿ ಬಿದ್ದ ಪರಿಣಾಮ ತಲೆಗೆ ಪೆಟ್ಟಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೀರ್ಘಕಾಲದ ಪುಪ್ಪಸ ತೊಂದರೆ ಹಾಗೂ ತಲೆಯಲ್ಲಿ ರಕ್ತಸ್ರಾವ ಉಂಟಾಗಿದ್ದರಿಂದ ಚಿಕಿತ್ಸೆ ಮಾಡಲಾಗಿದೆ. ಕಿಡ್ನಿ ತೊಂದರೆ, ರಕ್ತ ಹೀನತೆ ಹಾಗೂ ಸೋಂಕು ಕಂಡು ಬಂದಿದ್ದು, ಎಲ್ಲಾ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗಿದೆ.

    ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಲಾಯಿತು. ಆದರೆ ಶಸ್ತ್ರಚಿಕಿತ್ಸೆ ನಂತರ ಆರೋಗ್ಯ ಗಂಭೀರವಾಗಿದೆ. ಕೃತಕ ಉಸಿರಾಟ ಯಂತ್ರ (ವೆಂಟಿಲೇಟರ್) ಅಳವಡಿಸಲಾಗಿದೆ. ದೀರ್ಘಕಾಲ ಹಾಸಿಗೆ ಹಿಡಿದ ಪರಿಣಾಮ ಪಲ್ಮನರಿ ಥ್ರಂಬೋ ಎಂಬೋಲಿಸಂ ಆಗಿದೆ ಎಂದು ತಜ್ಞ ವೈದ್ಯ ಪ್ರೊ.ಡಿ.ಎಂ.ಕಬಾಡಿ ವಿವರಿಸಿದರು.

    ಸಚಿವ ಜಗದೀಶ ಶೆಟ್ಟರ್, ಗೃಹಸಚಿವ ಬಸವರಾಜ ಬೊಮ್ಮಾಯಿ, ಸಂಸದೆ ಶೋಭಾ ಕರಂದ್ಲಾಜೆ, ಜಿಲ್ಲಾಧಿಕಾರಿ ದೀಪಾ ಚೋಳನ್, ಪೊಲೀಸ್ ಆಯುಕ್ತ ಆರ್.ದಿಲೀಪ್, ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂತರಠಾಣಿ, ವೈದ್ಯಕೀಯ ನಿರ್ದೇಶಕ ಡಾ.ಅರುಣಕುಮಾರ್, ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ್, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ಸುಜಾತಾ ಹಸವಿಮಠ ಮತ್ತಿತರರು ಇದ್ದರು.

  • ಏನು ಆಗಿಲ್ಲ, ನಾನು ಫಸ್ಟ್ ಕ್ಲಾಸ್ ಆಗಿ ಇದ್ದೀನಿ: ದರ್ಶನ್

    ಏನು ಆಗಿಲ್ಲ, ನಾನು ಫಸ್ಟ್ ಕ್ಲಾಸ್ ಆಗಿ ಇದ್ದೀನಿ: ದರ್ಶನ್

    ಮೈಸೂರು: ನನಗೆ ಏನು ಆಗಿಲ್ಲ, ನಾನು ಫಸ್ಟ್ ಕ್ಲಾಸ್ ಆಗಿ ಇದ್ದೇನೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

    ಇಂದು ಮುಂಜಾನೆ ಅನಾರೋಗ್ಯದ ಸಮಸ್ಯೆಯಿಂದ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಸಂಜೆ ಡಿಸ್ಚಾರ್ಜ್ ಆಗಿರುವ ಅವರು ನನಗೆ `ಏನೂ ಆಗಿಲ್ಲ ನಾನು ಫಸ್ಟ್ ಕ್ಲಾಸ್ ಆಗಿ ಇದ್ದೀನಿ. ಸ್ವಲ್ಪ ಗ್ಯಾಸ್ಟ್ರಿಕ್ ಆಗಿತ್ತು ಅಷ್ಟೇ ಎಂದು ಮಾಧ್ಯಮದವರಿಗೆ ಹೇಳಿದ್ದಾರೆ.

    ಇಂದು ಚಿಕಿತ್ಸೆ ಪಡೆದು ಹೊರ ಬಂದ ಡಿ ಬಾಸ್, ಸರಿಯಾದ ಸಮಯಕ್ಕೆ ಊಟ ತಿಂಡಿ ನೋಡಿಕೊಳ್ಳದ ಕಾರಣ ಸ್ವಲ್ಪ ಗ್ಯಾಸ್ಟ್ರಿಕ್ ಆಗಿತ್ತು. ನಮ್ಮ ಅಜೇಯ್ ಹೆಗಡೆ ಡಾಕ್ಟರ್ ಇದ್ದಾರೆ ಅವರು ನೋಡಿಕೊಂಡಿದ್ದಾರೆ. ಈಗ ಏನು ಅಗಿಲ್ಲ. ನಾನು ಆರಾಮಾಗಿ ಇದ್ದೀನಿ ಎಂದು ತಿಳಿಸಿದರು. ಹೊಟ್ಟೆ ನೋವಿನ ಹಿನ್ನೆಲೆಯಲ್ಲಿ ದರ್ಶನ್ ಆಸ್ಪತ್ರೆಗೆ ದಾಖಲಾಗಿದ್ದರು. ಗ್ಯಾಸ್ಟ್ರೋ ಎಂಟರಾಲಜಿಸ್ಟ್ ತಜ್ಞರಾದ ಡಾ.ಅನೂಪ್ ಆಳ್ವಾ ಅವರಿಗೆ ಚಿಕಿತ್ಸೆ ನೀಡಿ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಸ್ಪಷ್ಟಪಡಿಸಿದ್ದರು.

    ಇಂದು ಮುಂಜಾನೆ 4 ಗಂಟೆ ವೇಳೆಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ದರ್ಶನ್ ಅವರಿಗೆ ಕೊಲಂಬಿಯಾ ಏಷಿಯಾ ಆಸ್ಪತ್ರೆ ಸ್ಪೆಷಲ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ದರ್ಶನ್ ಅವರಿಗೆ ಒಂದು ದಿನ ಚಿಕಿತ್ಸೆ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದರು. ವೈದ್ಯರ ಸಲಹೆ ಮೇರೆಗೆ ಇಂದು ಆಸ್ಪತ್ರೆಯಲ್ಲೇ ಡಿ ಬಾಸ್ ಸಂಜೆವರೆಗೂ ಉಳಿದಿದ್ದು ವಿಶ್ರಾಂತಿ ಪಡೆದಿದ್ದಾರೆ.

  • ದರ್ಶನ್ ಆರೋಗ್ಯ ಸ್ಥಿರ: ಹೆಲ್ತ್ ಬುಲೆಟಿನ್ ಬಿಡುಗಡೆ

    ದರ್ಶನ್ ಆರೋಗ್ಯ ಸ್ಥಿರ: ಹೆಲ್ತ್ ಬುಲೆಟಿನ್ ಬಿಡುಗಡೆ

    ಮೈಸೂರು: ಅನಾರೋಗ್ಯದ ಕಾರಣ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಾಗಿರುವ ನಟ ದರ್ಶನ್ ಆರೋಗ್ಯ ಕುರಿತು ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.

    ಹೊಟ್ಟೆ ನೋವಿನ ಹಿನ್ನೆಲೆಯಲ್ಲಿ ದರ್ಶನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ಯಾಸ್ಟ್ರೋ ಎಂಟರಾಲಜಿಸ್ಟ್ ತಜ್ಞರಾದ ಡಾ.ಅನೂಪ್ ಆಳ್ವಾ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಇಂದು ಮುಂಜಾನೆ 4 ಗಂಟೆ ವೇಳೆಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ದರ್ಶನ್ ಅವರಿಗೆ ಕೊಲಂಬಿಯಾ ಏಷಿಯಾ ಆಸ್ಪತ್ರೆ ಸ್ಪೆಷಲ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇಂದು ಗ್ರಾಸ್ಟ್ರಿಕ್ ಪರಿಣಾಮ ತೀವ್ರ ತರವಾದ ಹೊಟ್ಟೆನೋವಿನಿಂದಾಗಿ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ದರ್ಶನ್ ಅವರಿಗೆ ಒಂದು ದಿನ ಚಿಕಿತ್ಸೆ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಇಂದು ಆಸ್ಪತ್ರೆಯಲ್ಲೇ ಡಿ ಬಾಸ್ ಉಳಿದಿದ್ದಾರೆ. ವೈದ್ಯರ ಸಲಹೆ ಮೇರೆಗೆ ಒಂದು ದಿನ ವಿಶ್ರಾಂತಿ ಪಡೆಯುತ್ತಿದ್ದಾರೆ.