Tag: health

  • ಬರ್ತ್ ಡೇ ಸಂಭ್ರಮದಲ್ಲಿ ಧೋನಿ- 40 ಆದ್ರೂ ಫಿಟ್ ಆಗಿರೋ ‘ಎಂಎಸ್‍ಡಿ’ ಸೀಕ್ರೆಟ್ ಇಲ್ಲಿದೆ

    ಬರ್ತ್ ಡೇ ಸಂಭ್ರಮದಲ್ಲಿ ಧೋನಿ- 40 ಆದ್ರೂ ಫಿಟ್ ಆಗಿರೋ ‘ಎಂಎಸ್‍ಡಿ’ ಸೀಕ್ರೆಟ್ ಇಲ್ಲಿದೆ

    ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಇಂದು ತಮ್ಮ 40ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಯಸ್ಸು 40 ಆದ್ರೂ ಧೋನಿ ಯಾವ ಯುವಕರಿಗೆ ತಾವೇನು ಕಡಿಮೆ ಇಲ್ಲ ಅನ್ನೋದನ್ನ ಕ್ರೀಡಾಂಗಣದಲ್ಲಿ ಪ್ರೂವ್ ಮಾಡುತ್ತಿರುತ್ತಾರೆ. ಒಮ್ಮೆ ಧೋನಿಯ ಚಿರತೆ ಓಟ ಕಂಡು ಸಹ ಆಟಗಾರರು ಶಾಕ್ ಆಗಿದ್ದರು.

    ಧೋನಿ ತಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾರೆ. ದೇಹ ದಂಡನೆ, ನಿಯಮಿತ ಆಹಾರ ಹೀಗೆ ಹಲವು ವಿಧಾನಗಳನ್ನು ಧೋನಿ ಅಳವಡಿಸಿಕೊಂಡಿದ್ದಾರೆ. ಇಂದು ಧೋನಿ ಹುಟ್ಟುಹಬ್ಬದ ಹಿನ್ನೆಲೆ ಹೆಲ್ತ್ ಸೀಕ್ರೆಟ್ ಇಲ್ಲಿದೆ.

    ಸದೃಢ ದೇಹಕ್ಕಾಗಿ ಧೋನಿ ತಮ್ಮ ಕೆಲ ಸಮಯವನ್ನು ಜಿಮ್ ನಲ್ಲಿ ಕಳೆಯುತ್ತಾರೆ. ಈ ಹಿಂದೆ ಒಂದು ಸಂದರ್ಶನದಲ್ಲಿ ತಾವು ಒನ್ ಲೆಗ್ ಡೆಡ್ ಲಿಫ್ಟ್, ರಿವರ್ಸ್ ಲಂಗ್ಸ್, ಲ್ಯಾಟರಲ್ ಪುಲ್ ಡೌನ್, ವಿ ಗ್ರೂಪ್ ಪುಲ್ ಡೌನ್, ಡಬಲ್ ಲಂಗ್ಸ್, ಡಬಲ್ ಚೆಸ್ಟ್ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಕೇವಲ ಜಿಮ್ ನಲ್ಲಿ ದೇಹ ದಂಡಿಸದೇ ಕ್ರೀಡಾಂಗಣದಲ್ಲಿಯೂ ಧೋನಿ ಕಾಣಿಸಿಕೊಳ್ಳುತ್ತಾರೆ. ಕ್ರಿಕೆಟ್ ಜೊತೆಗೆ ಫುಟ್ಬಾಲ್, ಟೆನ್ನಿಸ್, ಬ್ಯಾಡ್ಮಿಂಟನ್ ಆಟಗಳನ್ನು ಧೋನಿ ಆಡುತ್ತಾರೆ.

    ಡಯಟ್ ಫುಡ್: ಪ್ರತಿದಿನ ಬೆಳಗ್ಗೆ ಬ್ರೆಡ್ ಅಥವಾ ಪರೋಟಾ ಜೊತೆ ಒಂದು ಗ್ಲಾಸ್ ಹಾಲು ಕುಡಿಯಲು ಧೋನಿ ಇಷ್ಟಪಡುತ್ತಾರೆ. ದೇಹ ದಂಡನೆ ಬಳಿಕ ಪ್ರೋಟಿನ್‍ನಿಂದ ಕೂಡಿದ ಜ್ಯೂಸ್ ಕುಡಿಯುತ್ತಾರೆ. ಇನ್ನೂ ಊಟಕ್ಕೆ ದಾಲ್, ಚಿಕನ್, ಹಸಿರು ತರಕಾರಿಯಿಂದ ಮಾಡಿದ ರೊಟ್ಟಿ ಮತ್ತು ಸಲಾಡ್ ಸೇವಿಸುತ್ತಾರೆ.

    ದೇಹದಂಡನೆ ಮತ್ತು ಆಹಾರ ಶೈಲಿಯೊಂದಿಗೆ ನಿದ್ದೆಗೂ ಪ್ರಮುಖ ಆದ್ಯತೆ ನೀಡುತ್ತಾರೆ. ರಾತ್ರಿ ಚೆನ್ನಾಗಿ ನಿದ್ದೆ ಮಾಡಿದ್ರೆ ವ್ಯಕ್ತಿ ಬೆಳಗ್ಗೆ ಆ್ಯಕ್ಟಿವ್ ಇರಲು ಸಾಧ್ಯ. ಹಾಗಾಗಿ ಧೋನಿ ರಾತ್ರಿ ನಿದ್ದೆ ಹೆಚ್ಚು ಮಹತ್ವ ಕೊಡುತ್ತಾರೆ. ಈ ಹಿಂದೆ ಹಲವು ಬಾರಿ ಫ್ಲೈಟ್ ತಡವಾಗಿದ್ದಕ್ಕೆ ವಿಮಾನ ನಿಲ್ದಾಣದ ಆವರಣದಲ್ಲಿಯೇ ಧೋನಿ ವಿಶ್ರಾಂತಿ ತೆಗೆದುಕೊಂಡಿದ್ದರು.

  • ಕೋವಿಡ್‌ 19 – ಬೆಳಕಿಗೆ ಬಂತು ಚೀನಾದ ಮತ್ತೊಂದು ಮಹಾ ಕಳ್ಳಾಟ

    ಕೋವಿಡ್‌ 19 – ಬೆಳಕಿಗೆ ಬಂತು ಚೀನಾದ ಮತ್ತೊಂದು ಮಹಾ ಕಳ್ಳಾಟ

    ಜಿನಿವಾ: ಕೊರೊನಾ ವಿಚಾರದಲ್ಲಿ ಪದೇ ಪದೇ ಸುಳ್ಳು ಹೇಳುತ್ತಿರುವ ಚೀನಾ ಮತ್ತೊಂದು ಮಹಾ ಕಳ್ಳಾಟ ಈಗ ಬಯಲಾಗಿದೆ. ಹುಬೆ ಪ್ರಾಂತ್ಯದ ವುಹಾನ್‌ನಲ್ಲಿ ವೈರಸ್‌ ಇದೆ ಎಂಬ ವಿಚಾರ ವಿಶ್ವ ಆರೋಗ್ಯ ಸಂಸ್ಥೆಗೆ ಗೊತ್ತಾಗಿದ್ದು ಚೀನಾದಲ್ಲಿರುವ ತನ್ನ ಸಂಸ್ಥೆಯ ಕಚೇರಿಯಿಂದ ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು. ಯಾವುದೇ ಮಾರಣಾಂತಿಕ ಕಾಯಿಲೆ ಬಂದಾಗ ಸರ್ಕಾರಗಳು ಡಬ್ಲ್ಯೂಎಚ್‌ಒಗೆ ಮಾಹಿತಿ ನೀಡಬೇಕು. ಆದರೆ ಕೊರೊನಾ ವೈರಸ್‌ ಬಂದಿರುವ ವಿಚಾರವನ್ನು ಆರಂಭದಲ್ಲೇ ಚೀನಾ ಮರೆಮಾಚಿತ್ತು.

    ಕೊರೊನಾ ವೈರಸ್‌ ವಿಚಾರದಲ್ಲಿ ಮೊದಲ ಮಾಹಿತಿ ಚೀನಾ ಸರ್ಕಾರದಿಂದ ಬಂದಿರಲಿಲ್ಲ. ಚೀನಾದಲ್ಲಿರುವ ನಮ್ಮ ಕಚೇರಿಯಿಂದ ಮಾಹಿತಿ ಸಿಕ್ಕಿತ್ತು ಎಂದು ಡಬ್ಲ್ಯೂಎಚ್‌ಒ ತಿಳಿಸಿದೆ.

    ಡಬ್ಲ್ಯೂಎಚ್‌ಒ ಹೇಳಿದ್ದು ಏನು?
    2019ರ ಡಿಸೆಂಬರ್‌ 31 ರಂದು ಚೀನಾ ಮಾಧ್ಯಮಗಳಲ್ಲಿ ಉಲ್ಲೇಖಿಸಲ್ಪಟ್ಟಿದ್ದ ನ್ಯೂಮೋನಿಯಾ ಮಾದರಿಯ ಸೋಂಕು ಹರಡುವಿಕೆಯ ಬಗ್ಗೆ ಮಾಹಿತಿ ನೀಡುವಂತೆ ಜನವರಿ 1 ಮತ್ತು 2 ರಂದು ಸರ್ಕಾರವನ್ನು ಕೇಳಿದ್ದೇವು. ಜ. 3 ರಂದು ಚೀನಾ ನಮಗೆ ಈ ರೀತಿಯ ಸೋಂಕಿನ ಮಾಹಿತಿಯನ್ನು ತಿಳಿಸಿತ್ತು ಎಂದು ಡಬ್ಲ್ಯೂಎಚ್‌ಒ ಹೇಳಿದೆ. ಇದನ್ನೂ ಓದಿ: ಉದ್ದೇಶಪೂರ್ವಕವಾಗಿ ಚೀನಾದಿಂದ ಸುಳ್ಳು ಮಾಹಿತಿ – 5 ದೇಶಗಳ ಗುಪ್ತಚರ ವರದಿಯಲ್ಲಿದೆ ಸ್ಫೋಟಕ ವಿಷಯ

    ವುಹಾನ್​ನಲ್ಲಿ ಸಾರ್ಸ್​ ರೀತಿಯ ರೋಗ ಹರಡುತ್ತಿದೆ ಎಂದು ವೈದ್ಯ ಲಿ ವೆನ್ಲಿಯಾಂಗ್ ಶಂಕೆ ವ್ಯಕ್ತಪಡಿಸಿದ್ದರು. 34 ವರ್ಷದ ಕಣ್ಣಿನ ವೈದ್ಯರಾಗಿದ್ದ ಲಿ ವೆನ್ಲಿಯಾಂಗ್ ಡಿಸೆಂಬರ್ 30ರ ವೇಳೆ ಈ ಮಾರಕ ವೈರಸ್ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಮೆಸೆಜಿಂಗ್​ ಆ್ಯಪ್​ ವೀಚ್ಯಾಟ್​ ಮೂಲಕವು ಇತರೆ ವೈದ್ಯರಿಗೂ ಮಾಹಿತಿಯನ್ನು ತಿಳಿಸಿದ್ದರು.

    ಸಾರ್ಸ್ ರೀತಿಯ ಹೊಸ ರೋಗ ಲಕ್ಷಣ ಹೊಂದಿರುವ 7 ಮಂದಿ ರೋಗಿಗಳನ್ನು ನಾನು ಗುರುತಿಸಿದ್ದೇನೆ. ಹೀಗಾಗಿ ಸುರಕ್ಷಾ ಸಾಧನಗಳನ್ನು ಬಳಸಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ಈ ಜಾಗೃತಿ ಸುದ್ದಿಗಳನ್ನು ಹರಡಿದ್ದಕ್ಕಾಗಿ ಜನವರಿ 1 ರಂದು ಡಾ. ಲಿ ವೆನ್ಲಿಯಾಂಗ್ ಸಾರ್ವಜನಿಕ ಶಾಂತಿಗೆ ಭಂಗ ತರುವಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಖಂಡಿಸಲಾಗಿತ್ತು. ವುಹಾನ್ ಮುನ್ಸಿಪಾಲ್ ಆರೋಗ್ಯ ಆಯೋಗ ಪ್ರಾಥಮಿಕ ತನಿಖೆಯಲ್ಲಿ ಮನುಷ್ಯರಿಂದ ಮನುಷ್ಯರಿಗೆ ಹರಡುವ ಬಗ್ಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ ಎಂದು ಹೇಳಿತ್ತು.

    ಚೀನಾದ ಹೇಳಿಕೆಯನ್ನು ಜನವರಿ 14ರಂದು ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಸಮರ್ಥಿಸಿಕೊಂಡು ಪ್ರಾಥಮಿಕ ತನಿಖೆಯಲ್ಲಿ ಈ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತಿರುವ ಬಗ್ಗೆ ಯಾವುದೇ ದಾಖಲೆ ಸಿಕ್ಕಿಲ್ಲ ಎಂದು ಟ್ವೀಟ್ ಮಾಡಿತ್ತು. ಇದಾದ ಬಳಿಕ ಫೆ.6 ರಂದು ಕೊರೊನಾ ವೈರಸ್ ಬಗ್ಗೆ ಮೊದಲ ಬಾರಿಗೆ ಎಚ್ಚರಿಕೆ ನೀಡಿದ್ದ ವೈದ್ಯ ಲಿ ವೆನ್ಲಿಯಾಂಗ್ ಮೃತಪಟ್ಟಿದ್ದರು.

    ಆರಂಭದಲ್ಲಿ ಕೊರೊನಾ ವೈರಸ್‌ ಕುರಿತ ಸುದ್ದಿ ತಡೆಗಟ್ಟಲು ಚೀನಾ ಸರ್ಕಾರ ಇಂಟರ್‌ನೆಟ್‌ ಸೆನ್ಸಾರ್‌ ಮಾಡಿತ್ತು. ಕೊರೊನಾ ವೈರಸ್‌ ಕುರಿತ ಸುದ್ದಿಗಳು, ಕೀ ವರ್ಡ್‌ಗಳು ಓಪನ್‌ ಆಗದೇ ಬ್ಲಾಕ್‌ ಮಾಡಿತ್ತು.

  • ಧ್ರುವ ಸರ್ಜಾ ಆರೋಗ್ಯವಾಗಿದ್ದು, ಮನೆಯಲ್ಲಿದ್ದಾರೆ

    ಧ್ರುವ ಸರ್ಜಾ ಆರೋಗ್ಯವಾಗಿದ್ದು, ಮನೆಯಲ್ಲಿದ್ದಾರೆ

    ಬೆಂಗಳೂರು: ನಟ ಧ್ರುವ ಸರ್ಜಾ ಅವರಿಗೆ ಆರೋಗ್ಯ ಸಮಸ್ಯೆ ಆಗಿದೆ. ಲೋ ಬಿಪಿಯಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಂತ ಗಾಂಧಿನಗರದಲ್ಲಿ ಸುದ್ದಿಯಾಗಿತ್ತು. ಈ ಎಲ್ಲಾ ಗಾಸಿಪ್ ಗಳಿಗೆ ಧ್ರುವ ಆಪ್ತ ವಲಯ ಉತ್ತರ ಕೊಟ್ಟಿದೆ.

    ಧ್ರುವ ಸರ್ಜಾ ಆರೋಗ್ಯವಾಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕಳೆದ ತಿಂಗಳು ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ಆರಾಮಾಗಿದ್ದಾರೆ. ತಂದೆ, ತಾಯಿ ಕೂಡ ಆರಾಮಾಗಿದ್ದಾರೆ ಅಂತ ಧ್ರುವ ಆಪ್ತವಲಯ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದೆ.

    ಕಳೆದ ತಿಂಗಳು ಚಿರು ಸಾವು ಕುಟುಂಬ ವರ್ಗಕ್ಕೆ ಭರಿಸಲಾಗದ ನೋವು ತಂದುಕೊಟ್ಟಿದೆ. ಸದ್ಯ ಅರ್ಜುನ್ ಸರ್ಜಾ ಕುಟುಂಬ ಸದಸ್ಯರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

  • ಕೊರೊನಾದಿಂದ ಗುಣಮುಖನಾದ ವೃದ್ಧ ಮನನೊಂದು ಆತ್ಮಹತ್ಯೆ

    ಕೊರೊನಾದಿಂದ ಗುಣಮುಖನಾದ ವೃದ್ಧ ಮನನೊಂದು ಆತ್ಮಹತ್ಯೆ

    ರಾಯಚೂರು: ಮಹಾಮಾರಿ ಕೋವಿಡ್-19 ಸೋಂಕಿನಿಂದ ಗುಣಮುಖನಾಗಿದ್ದ ವ್ಯಕ್ತಿ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ರಾಗಲಪರ್ವಿ ಗ್ರಾಮದಲ್ಲಿ ನಡೆದಿದೆ.

    65 ವರ್ಷದ ವ್ಯಕ್ತಿ ತಮ್ಮ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಬಳ್ಳಾರಿಯಲ್ಲಿ ಕ್ವಾರಂಟೈನ್ ಆಗಿದ್ದ ವೃದ್ಧನಿಗೆ ಕೋವಿಡ್-19 ಪಾಸಿಟಿವ್ ದೃಢವಾಗಿತ್ತು. ಕ್ವಾರಂಟೈನ್ ಅವಧಿ ಮುಗಿದು ಸೋಂಕಿನಿಂದ ಗುಣಮುಖನಾಗಿದ್ದ. ಆದರೆ ಗುಣಮುಖರಾದರೂ ಜನರು ಬೇರೆ ದೃಷ್ಟಿಯಿಂದ ನೋಡುತ್ತಿದ್ದ ಕಾರಣ ಮಾನಸಿಕವಾಗಿ ನೊಂದಿದ್ದರು ಎಂಬ ಮಾಹಿತಿ ಲಭಿಸಿದೆ.

    ಸೋಂಕಿನಿಂದ ಗುಣಮುಖರಾಗಿ ಕ್ವಾರಂಟೈನ್ ಅವಧಿ ಮುಗಿಸಿ ರಾಗಲಪರ್ವಿ ಆಗಮಿಸಿದ ಬಳಿಕ ಮನನೊಂದು ಸಾವಿಗೆ ಶರಣಾಗಿದ್ದಾನೆ. ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಕುರಿತು ತನಿಖೆ ನಡೆಸಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ದಾಖಲಾದ ಮೊದಲ ಕೋವಿಡ್-19 ಪ್ರಕರಣ ಇದಾಗಿತ್ತು.

  • ಬೇಯಿಸಿ ತಿಂದ್ರೆ ಪೋಷಕಾಂಶ ಸಿಗಲ್ಲ- ಹೆಸರುಕಾಳನ್ನ ಮೊಳಕೆ ಬರಿಸೋ ವಿಧಾನ

    ಬೇಯಿಸಿ ತಿಂದ್ರೆ ಪೋಷಕಾಂಶ ಸಿಗಲ್ಲ- ಹೆಸರುಕಾಳನ್ನ ಮೊಳಕೆ ಬರಿಸೋ ವಿಧಾನ

    – ಇಮ್ಯೂನಿಟಿ ಪವರ್ ಹೆಚ್ಚಿಸೋ ಮೊಳಕೆ ಕಾಳು

    ದೇಶದೆಲ್ಲೆಡೆ ಕೊರೊನಾ ವೈರಸ್ ಮಾರಕವಾಗಿ ಕಾಡುತ್ತಿದೆ. ಹೀಗಾಗಿ ಮಕ್ಕಳು, ವೃದ್ಧರು ಸೇರಿದಂತೆ ಎಲ್ಲ ವಯಸ್ಸಿನವರು ಇಮ್ಯೂನಿಟಿ ಪವರ್ ಹೆಚ್ಚಿಸುವ ವಿಧವಿಧದ ಫುಡ್ ಸವಿದರೇ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಪ್ರತಿಯೊಬ್ಬರ ಮನೆಯಲ್ಲೂ ಹೆಸರುಕಾಳು ಇದ್ದೆ ಇರುತ್ತೆ. ಆದ್ದರಿಂದ ಹೆಸರುಕಾಳನ್ನು ಬೇಯಿಸಿ ತಿನ್ನುವುದಕ್ಕಿಂತ ಮೊಳಕೆ ಮಾಡಿ ತಿಂದರೆ ಆರೋಗ್ಯವೂ ವೃದ್ಧಿಯಾಗುತ್ತದೆ.

    ಹೆಸರುಕಾಳಿನಲ್ಲಿ ವಿಟಮಿನ್ ಸಿ, ಪ್ರೋಟೀನ್, ಕಬ್ಬಿಣದ ಅಂಶ, ಫೈಬರ್ ಪೋಷಕಾಂಶ ಇರುತ್ತದೆ. ಹೀಗಾಗಿ ಮೊಳಕೆ ಕಾಳನ್ನು ಸೇವಿಸಿದರೆ ರಕ್ತದೊತ್ತಡವನ್ನು ಕೂಡ ಕಡಿಮೆ ಮಾಡುತ್ತದೆ. ಒಂದು ವೇಳೆ ಹೆಸರುಕಾಳನ್ನು ಬೇಯಿಸಿ ಸೇವಿದರೆ ಅದರ ಪೋಷಕಾಂಶ ದೇಹಕ್ಕೆ ಸಿಗುವುದಿಲ್ಲ. ಹೀಗಾಗಿ ಅದನ್ನು ಮೊಳಕೆ ಬರಿಸಿ ಸೇವಿಸಿ. ನಿಮಗಾಗಿ ಹೆಸರುಕಾಳನ್ನು ಮೊಳಕೆ ಮಾಡುವ ವಿಧಾನ…

    ಹೆಸರುಕಾಳು ಮೊಳಕೆ ಮಾಡುವ ವಿಧಾನ
    * ಮೊದಲಿಗೆ ಹೆಸರು ಕಾಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆದುಕೊಳ್ಳಿ
    * ಈಗ ಒಂದು ಬೌಲ್‍ಗೆ ನೀರು ಹಾಕಿ ಹೆಸರುಕಾಳನ್ನು ಸುಮಾರು 8 ರಿಂದ 12 ಗಂಟೆಗಳವರೆಗೂ ನೆನೆಸಿಡಿ
    * 12 ಗಂಟೆಯ ನಂತರ ಕಾಳನ್ನು ಸೋಸಿಕೊಂಡು ಒಂದು ಬಟ್ಟೆ ತೆಗೆದುಕೊಂಡು ನೆನೆಸಿದ ಕಾಳು ಹಾಕಿಕೊಳ್ಳಿ
    * ನಂತರ ಬಟ್ಟೆಯನ್ನು ಬಿಗಿಯಾಗಿ ಕಟ್ಟಿಡಿ. ನಂತರ ಅದನ್ನು ಸುಮಾರು 12 ಗಂಟೆಯವರೆಗೂ ಬಿಡಿ
    * 12 ಗಂಟೆಯ ನಂತರ ಬಟ್ಟೆ ಬಿಚ್ಚಿ ನೋಡಿದರೆ ಹೆಸರುಕಾಳು ಮೊಳಕೆ ಬಂದಿರುತ್ತದೆ.
    * ನಂತರ ಇದನ್ನು ಹಸಿಯಾಗಿಯೇ ಸೇವಿಸಬೇಕಾಗುತ್ತದೆ.

    ಹೆಸರು ಕಾಳನ್ನು ನೀರಿನಲ್ಲಿ ನೆನಸಿಟ್ಟು, ಬಳಿಕ ಮೊಳಕೆ ಬಂದ ಮೇಲೆ ಸೇವಿಸುವುದರಿಂದ ಜೀರ್ಣಶಕ್ತಿ ಉತ್ತಮವಾಗುತ್ತೆ. ಇದರಲ್ಲಿರೋ ಪೌಷ್ಟಿಕಾಂಶ ಜೀರ್ಣಕ್ರಿಯೆಯನ್ನು ಸರಾಗ ಮಾಡುತ್ತದೆ. ಅಲ್ಲದೆ ಫೈಬರ್ ಅಂಶವು ದೇಹದಲ್ಲಿ ಆಹಾರದ ಸಂಚಾರ ಸರಿಯಾಗಿ ಆಗುವಂತೆ ನೋಡಿಕೊಂಡು ಮಲಬದ್ಧತೆ ತೊಂದರೆಯನ್ನು ನಿವಾರಿಸುತ್ತದೆ.

    ಜೊತೆಗೆ ಇದರಲ್ಲಿರುವ ವಿಟಮಿನ್ ಸಿ ದೇಹಕ್ಕೆ ಇನ್ಫೆಕ್ಷನ್ ಆಗೋದನ್ನ ತಡೆಯುತ್ತದೆ. ಇದರ ಜೊತೆ ವಿಟಮಿನ್ ಎ ಅಂಶ ಕೂಡ ಹೆಚ್ಚಾಗಿ ಇರೋದ್ರಿಂದ ದೇಹಕ್ಕೆ ಹೆಚ್ಚಿನ ಆಂಟಿ ಆಕ್ಸಿಡೆಂಟ್ಸ್ ಸಿಗುವ ರೀತಿ ನಿಗಾವಹಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

  • ಜುಲೈವರೆಗೆ ಉಡುಪಿ ಕೃಷ್ಣನ ದರ್ಶನ ಇಲ್ಲ

    ಜುಲೈವರೆಗೆ ಉಡುಪಿ ಕೃಷ್ಣನ ದರ್ಶನ ಇಲ್ಲ

    – ನಮಗೆ ಭಕ್ತರ ಆರೋಗ್ಯ ಮುಖ್ಯ ಎಂದ ಸ್ವಾಮೀಜಿ

    ಉಡುಪಿ: ಸರ್ಕಾರ ಜೂನ್ 8ರ ನಂತರ ದೇವಸ್ಥಾನ ತೆರೆಯುವ ಅವಕಾಶ ಕೊಟ್ಟಿದೆ. ಆದರೆ ಉಡುಪಿ ಕೃಷ್ಣನ ದರ್ಶನ ಸಿಗೋದಕ್ಕೆ ಜುಲೈ ತನಕ ಕಾಯಬೇಕಾಗಿದೆ. ಯಾಕಂದರೆ ಉಡುಪಿ ಕೃಷ್ಣ ಮಠ ಸೋಮವಾರ ಓಪನ್ ಆಗಲ್ಲ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅದಮಾರು ಶ್ರೀ ಈಶಪ್ರೀಯ ತೀರ್ಥ ಸ್ವಾಮೀಜಿ, ನಾವು ಇನ್ನೂ 20 ರಿಂದ 30 ದಿನ ಕಾಯುತ್ತೇವೆ. ಮುಂದಿನ ಬೆಳವಣಿಗೆಗಳನ್ನು ನೋಡಿ ದರ್ಶನ ವ್ಯವಸ್ಥೆ ಮಾಡುತ್ತೇವೆ. ದರ್ಶನ ಆರಂಭಿಸಿದರೆ ಎಲ್ಲೆಡೆಯಿಂದ ಭಕ್ತರು ಬರುತ್ತಾರೆ. ಹೀಗಾಗಿ ನಮಗೆ ಭಕ್ತರ ಮತ್ತು ಕೃಷ್ಣ ಮಠದ ಸಿಬ್ಬಂದಿ ಆರೋಗ್ಯ ಮುಖ್ಯ ಎಂದರು.

    ಕೃಷ್ಣಮಠದಲ್ಲಿ ಬಹಳ ಹಿಂದಿನಿಂದ ನಡೆದುಕೊಂಡ ಪರಂಪರೆ ಇದೆ. ಯತಿಗಳೇ ಪೂಜೆ ಮಾಡಿಕೊಂಡು ಬರುವ ಸಂಪ್ರದಾಯ ಇದೆ. ಯಾರಿಗೂ ಸಮಸ್ಯೆ ಆಗಬಾರದು. ಹೀಗಾಗಿ ಸೋಮವಾರ ನಾವು ದೇವಸ್ಥಾನವನ್ನು ತೆರೆಯುವುದಿಲ್ಲ ಎಂದು ಸ್ವಾಮೀಜಿ ಹೇಳಿದರು.

    ಶ್ರೀಕೃಷ್ಣ ಮಠಕ್ಕೆ ಪ್ರತಿದಿನ 1 ಲಕ್ಷ ರೂಪಾಯಿಯಷ್ಟು ಖರ್ಚು ಇದೆ. ಲಾಕ್‍ಡೌನ್ ಸಂದರ್ಭದಲ್ಲಿ ಕೂಡ ನಮ್ಮೆಲ್ಲಾ ಸಿಬ್ಬಂದಿಗೆ ಸಂಬಳ ಕೊಡುತ್ತಿದ್ದೇವೆ. ಅದೇನೆ ಇದ್ದರೂ ಮಠ ತೆರೆಯುವ ಬಗ್ಗೆ ಮುಂದೆ ತೀರ್ಮಾನ ಮಾಡುತ್ತೇವೆ. ಕೊರೊನಾ ಸೋಂಕು ಶೀಘ್ರ ದೂರವಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ. ಕಳೆದ ಎರಡು ತಿಂಗಳು ಸರ್ಕಾರ ಮತ್ತು ಅಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದು ಈಶಪ್ರೀಯ ತೀರ್ಥ ಸ್ವಾಮೀಜಿ ಹೇಳಿದರು.

  • ಆರೋಗ್ಯ ಇಲಾಖೆ ಎಡವಟ್ಟು- ವರದಿ ಬರುವ ಮುನ್ನವೇ ಸೋಂಕಿತ ಮನೆಗೆ

    ಆರೋಗ್ಯ ಇಲಾಖೆ ಎಡವಟ್ಟು- ವರದಿ ಬರುವ ಮುನ್ನವೇ ಸೋಂಕಿತ ಮನೆಗೆ

    ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನ ಆರೋಗ್ಯ ಅಧಿಕಾರಿಗಳು ಮಾಡಿರೋ ಎಡವಟ್ಟಿಗೆ ಇಡೀ ಶೃಂಗೇರಿ ತಾಲೂಕಿನಾದ್ಯಂತ ಆತಂಕ ಹೆಚ್ಚಾಗಿದೆ.

    ಮೇ 17ರಂದು ದೆಹಲಿಯಿಂದ ಬಂದು ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿಯ ಕೊರೊನಾ ಪರೀಕ್ಷೆಯ ವರದಿ ಬರುವ ಮುನ್ನವೇ ಅಧಿಕಾರಿಗಳು ಆತನನ್ನ ಮನೆಗೆ ಕಳಿಸಿ ಮಹಾ ಎಡವಟ್ಟು ಮಾಡಿದ್ದಾರೆ. ಇದರಿಂದ ಇಡೀ ಶೃಂಗೇರಿ ತಾಲೂಕಿನಾದ್ಯಂತ ಆತಂಕ ಹೆಚ್ಚಾಗಿದೆ.

    ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿಗೆ ಕೊರೊನಾ ನೆಗೆಟಿವ್ ಎಂದು ಅಧಿಕಾರಿಗಳು ಆತನನ್ನ ಮನೆಗೆ ಕಳುಹಿಸಿದ್ದರು. ಆದರೆ ಗುರುವಾರದ ಹೆಲ್ತ್ ಬುಲೆಟಿನ್‍ನಲ್ಲಿ ಶೃಂಗೇರಿ ತಾಲೂಕಿನ ಬೇಗಾರು ಗ್ರಾಮದ 37 ವರ್ಷದ ವ್ಯಕ್ತಿಗೆ ಸೋಂಕಿರುವುದು ಸಾಬೀತಾಗಿದೆ.

    ಮೇ 17ರಂದು ದೆಹಲಿಯಿಂದ ಬಂದಿರುವ ಶೃಂಗೇರಿ ಮೂಲದ ವ್ಯಕ್ತಿ ಅಂದಿನಿಂದ ಕೊಪ್ಪದ ಕ್ವಾರಂಟೈನ್ ಘಟಕದಲ್ಲಿದ್ದರು. ಆದರೆ ಇದೀಗ ಅಧಿಕಾರಿಗಳು ವ್ಯಕ್ತಿಯ ವರದಿ ಬರುವ ಮುನ್ನವೇ ಮನೆಗೆ ಕಳುಹಿಸಿದ್ದರಿಂದ ಇಡೀ ಗ್ರಾಮದಲ್ಲಿ ಆತಂಕ ಶುರುವಾಗಿದೆ. ಜೊತೆಗೆ ವ್ಯಕ್ತಿಯ ಮನೆಯವರು, ಸಂಬಂಧಿಕರು ಹಾಗೂ ಅಕ್ಕಪಕ್ಕದ ಜನರಲ್ಲಿ ಆತಂಕ ಇಮ್ಮಡಿಗೊಂಡಿದೆ.

    ಯಾವಾಗ ವ್ಯಕ್ತಿಗೆ ಕೊರೊನಾ ಸೋಂಕಿರೋದು ದೃಢವಾಯ್ತೋ ಶೃಂಗೇರಿ ತಹಶೀಲ್ದಾರ್ ಹಾಗೂ ತಾಲೂಕು ವೈದ್ಯಾಧಿಕಾರಿ ಸೇರಿದಂತೆ ಅಧಿಕಾರಿ ವರ್ಗ ಬೇಗೂರಿಗೆ ತೆರಳಿ ಕೊರೊನಾ ಸೋಂಕಿತ ವ್ಯಕ್ತಿಯ ಪ್ರಥಮ ಹಾಗೂ ದ್ವೀತಿಯ ಸಂಪರ್ಕ ಹೊಂದಿದವರಿಗಾಗಿ ಹುಡುಕಾಟದಲ್ಲಿದ್ದಾರೆ. ಆರೋಗ್ಯ ಅಧಿಕಾರಿಗಳು ವರದಿ ಬರುವ ಮುನ್ನವೇ ಹೇಗೆ ಆತನನ್ನ ಮನೆಗೆ ಕಳುಹಿಸಿದ್ದಾರೆಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈಗಾಗಲೇ ಕಾಫಿನಾಡ ಆರೋಗ್ಯ ಇಲಾಖೆ ವಿರುದ್ಧ ಈಗಾಗಲೇ ಜಿಲ್ಲೆಯ ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಯಾಕಂದರೆ ಸೋಂಕೇ ತಗುಲದ ಮೂಡಿಗೆರೆ ವೈದ್ಯ ಹಾಗೂ ತರೀಕೆರೆ ಗರ್ಭೀಣಿ ಸೋಂಕಿಲ್ಲದಿದ್ದರೂ ಸೋಂಕು ತಗುಲಿದೆ ಎಂದು ಮಾಹಿತಿ ನೀಡಿ, ನಂತರ ಇಲ್ಲ ಅವರಿಗೆ ಪಾಸಿಟಿವ್ ಇಲ್ಲ ನೆಗೆಟಿವ್ ಎಂದು ಮಾಹಿತಿ ನೀಡಿದ್ದರಿಂದ ಜಿಲ್ಲೆಯ ಜನ ಆತಂಕದ ಸಂದರ್ಭದಲ್ಲೇ ಆರೋಗ್ಯ ಇಲಾಖೆ ಹುಡುಗಾಟ ಆಡುತ್ತಿದ್ಯಾ ಎಂದು ಅಸಮಾಧಾನ ಹೊರಹಾಕಿದ್ದಾರೆ.

  • ಉತ್ತಮ ಆರೋಗ್ಯಕ್ಕಾಗಿ ನೆನೆಸಿದ ನೆಲಗಡಲೆ ತಿನ್ನಿ

    ಉತ್ತಮ ಆರೋಗ್ಯಕ್ಕಾಗಿ ನೆನೆಸಿದ ನೆಲಗಡಲೆ ತಿನ್ನಿ

    ಡವರ ಬಾದಾಮಿ ಎಂದು ಕರೆಯಲ್ಪಡುವ ನೆಲಗಡಲೆ ಒಂದು ಆರೋಗ್ಯಕರ ಸ್ನ್ಯಾಕ್ಸ್ ಎನ್ನಬಹುದು. ಕೆಲವರಿಗೆ ನೆಲಗಡೆಲೆಯನ್ನು ಬೇಯಿಸಿ ತಿನ್ನಲು ಇಷ್ಟವಾದರೆ, ಇನ್ನು ಕೆಲವರಿಗೆ ಅದನ್ನು ಹುರಿದು ತಿನ್ನಲು ಇಷ್ಟ. ಅಲ್ಲದೇ ಅವಲಕ್ಕಿ, ಚಿತ್ರನ್ನ, ಪುಳಿಯೋಗರೆ ಸೇರಿದಂತೆ ಅನೇಕ ಅಡುಗೆ ಮಾಡುವಾಗ ಸ್ವಲ್ಪ ನೆಲಗಡೆಲೆ ಹಾಕಿದರೆ ಅಡುಗೆಯ ರುಚಿಯೂ ಹೆಚ್ಚುತ್ತದೆ. ಇದರಲ್ಲಿ ಅತ್ಯುತ್ತಮವಾದ ಕೊಬ್ಬಿನಂಶ, ನಾರಿನಂಶ, ಪೊಟಾಷ್ಯಿಯಂ, ರಂಜಕ, ವಿಟಮಿನ್ ಬಿ, ಮೆಗ್ನಿಷ್ಯಿಯಂ ಇದೆ. ಹೀಗಾಗಿ ನೆಲಗಡೆಲೆಯನ್ನು ನೆನೆಸಿ ತಿಂದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು.

    ಬಾದಾಮಿಯನ್ನು ನೆನೆಸಿ ತಿಂದರೆ ಆರೋಗ್ಯಕ್ಕೆ ಒಳ್ಳೆದು ಎನ್ನುವುದು ಸಮಾನ್ಯವಾಗಿ ಗೊತ್ತಿರುವ ವಿಚಾರ. ಆದರೆ ನೆಲಗಡಲೆಯನ್ನು ನೆನೆಸಿ ತಿಂದರೆ ಎಷ್ಟು ಆರೋಗ್ಯಕರ ಲಾಭ ಸಿಗುತ್ತದೆ ಎಂದು ಹಲವರಿಗೆ ತಿಳಿದಿಲ್ಲ. ಈ ಬಗ್ಗೆ ಮಾಹಿತಿ ಇಲ್ಲಿದೆ ಓದಿ.

    ನೆನೆ ಹಾಕಿದ ನೆಲಗಡೆಲೆಯ ಆರೋಗ್ಯಕರ ಲಾಭವೇನು?

    1. ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ
    ಸಾಮಾನ್ಯವಾಗಿ ಹಲವರಿಗೆ ಅಜೀರ್ಣ ಸಮಸ್ಯೆ ಕಾಡುತ್ತಿರುತ್ತದೆ. ಈ ರೀತಿ ಸಮಸ್ಯೆ ಇರುವವರು ಪ್ರತಿದಿನ ಸ್ವಲ್ಪ ನೆಲಗಡಲೆ ನೆನೆ ಹಾಕಿ ತಿಂದರೆ ಹೊಟ್ಟೆ ಉಬ್ಬುವ ಸಮಸ್ಯೆ, ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗುತ್ತದೆ. ಅಲ್ಲದೆ ಜೀರ್ಣಕ್ರಿಯೆ ಸರಿಯಾಗುವಂತೆ ನೋಡಿಕೊಳ್ಳುತ್ತದೆ.

    2. ಹೃದಯ ಸಮಸ್ಯೆಗೆ
    ನೆಲಗಡಲೆಯಲ್ಲಿ ಹೃದಯದ ಆರೋಗ್ಯ ವೃದ್ಧಿಸುವ ಗುಣವಿದೆ. ಹೃದಯ ಸಂಬಂಧಿ ಸಮಸ್ಯೆ ಇರುವವರು ಆಹಾರಕ್ರಮದ ಕಡೆಗೆ ಹೆಚ್ಚಿಗೆ ನಿಗಾ ವಹಿಸಬೇಕು. ನೆಲಗಡಲೆಯನ್ನು ನೀರಿನಲ್ಲಿ ನೆನೆ ಹಾಕಿ ತಿಂದರೆ, ಅದು ಹೃದಯದ ಸಮಸ್ಯೆ ತಡೆಗಟ್ಟುವಲ್ಲಿ ಸಹಕರಿಸುತ್ತದೆ. ಅಲ್ಲದೇ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯುವಂತೆ ಮಾಡುತ್ತದೆ.

    3. ಬೆನ್ನು ನೋವುಗೆ
    ಇತ್ತೀಚಿನ ಜೀವನ ಶೈಲಿಯಿಂದ ಬೆನ್ನುನೋವು ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಬೆನ್ನು ನೋವು ಬರಲು ವಯಸ್ಸಾಗಬೇಕು ಎನ್ನುವ ಹಾಗಿಲ್ಲ, ಚಿಕ್ಕ ಪ್ರಾಯದಲ್ಲಿಯೇ ಬೆನ್ನು ನೋವಿನ ಸಮಸ್ಯೆ ಹಲವರಿಗೆ ಕಾಡುತ್ತದೆ. ನಾವು ಕೂರುವ ಭಂಗಿ ಮತ್ತಿತರ ಕಾರಣಗಳಿಂದ ಬೆನ್ನು ನೋವು ಬರುತ್ತದೆ. ನೆನೆ ಹಾಕಿದ ನೆಲಗಡಲೆ ಜೊತೆ ಸ್ವಲ್ಪ ಬೆಲ್ಲ ಸೇರಿಸಿ ತಿಂದರೆ ಇಂತಹ ಬೆನ್ನು ನೋವು ಕಡಿಮೆ ಆಗುತ್ತದೆ.

    4. ಕಟ್ಟು ಮಸ್ತಿನ ಮೈಕಟ್ಟಿಗಾಗಿ
    ಕಟ್ಟು ಮಸ್ತಿನ ಮೈಕಟ್ಟು ಬೇಕೆಂದು ಹಲವರು ಜಿಮ್‍ನಲ್ಲಿ ತಾಸುಗಟ್ಟೆಲೆ ವರ್ಕೌಟ್ ಮಾಡುತ್ತಾರೆ. ಹೀಗೆ ವರ್ಕೌಟ್ ಮಾಡುವವರು ತಾವು ಸೇವಿಸುವ ಪೌಷ್ಠಿಕ ಆಹಾರಗಳ ಜೊತೆಗೆ ಸ್ವಲ್ಪ ನೆನೆಸಿದ ನೆಲಗಡಲೆಯನ್ನು ಸೇವಿಸುವುದು ಒಳ್ಳೆದು. ಸದೃಢ ಮೈಕಟ್ಟು ಪಡೆಯುವಲ್ಲಿ ನೆಲಗಡಲೆಯಲ್ಲಿರುವ ಪೋಷಕಾಂಶ ಸಹಾಯ ಮಾಡುತ್ತದೆ. ಇದನ್ನು ನೀರಿನಲ್ಲಿ ಹಾಕಿ ಮೊಳಕೆ ಬರಿಸಿ ತಿಂದರೆ ಆರೋಗ್ಯಕ್ಕೆ ಇನ್ನೂ ಉತ್ತಮ.

    5. ಕ್ಯಾನ್ಸರ್ ಕಣಗಳ ಬೆಳವಣಿಗೆಯನ್ನು ತಡೆಯುತ್ತದೆ
    ಕಲುಷಿತ ವಾತಾವರಣ ಹಾಗೂ ರಾಸಾಯನಿಕ ಸಿಂಪಡಿಸಿದ ಆಹಾರ ವಸ್ತುಗಳ ಸೇವನೆಯಿಂದ ಕ್ಯಾನ್ಸರ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ನಮ್ಮ ದೇಹದಲ್ಲಿರುವ ಫ್ರೀ ರ‌್ಯಾಡಿಕಲ್ಸ್ ಹೋಗಲಾಡಿಸುವಲ್ಲಿ ನೆನೆಸಿದ ನೆಲಗಡಲೆ ಸೇವನೆ ಉಪಯುಕ್ತವಾಗಿದೆ. ಇದರಲ್ಲಿ ಕಬ್ಬಿಣದಂಶ, ಫೋಲೆಟ್, ಕ್ಯಾಲ್ಸಿಯಂ ಇದ್ದು ಕ್ಯಾನ್ಸರ್ ಕಣಗಳು ದೇಹದಲ್ಲಿ ಉತ್ಪತ್ತಿಯಾಗದಂತೆ ತಡೆದು, ಆರೋಗ್ಯವಾಗಿರಲು ಸಹಕರಿಸುತ್ತದೆ.

  • ಮುತ್ತಪ್ಪ ರೈ ಆರೋಗ್ಯ ಸ್ಥಿತಿ ಗಂಭೀರ

    ಮುತ್ತಪ್ಪ ರೈ ಆರೋಗ್ಯ ಸ್ಥಿತಿ ಗಂಭೀರ

    ಬೆಂಗಳೂರು: ಮಾಜಿ ಭೂಗತ ಪಾತಕಿ ಮತ್ತು ಜಯಕರ್ನಾಟಕ ಸಂಘಟನೆಯ ಮುಖ್ಯಸ್ಥ ಮುತ್ತಪ್ಪ ರೈ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದು, ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕಳೆದ ಕೆಲ ವರ್ಷಗಳಿಂದ ಮುತ್ತಪ್ಪ ರೈ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಜೊತೆಗೆ ದೈಹಿಕವಾಗಿ ಕುಗ್ಗಿ ಹೋಗಿದ್ದರು. ಈಗ ಅವರ ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಮೇಲೆ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

    ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಮುತ್ತಪ್ಪ ರೈ ಸಾವಿನ ಬಗ್ಗೆ ಉಹಾಪೋಹಗಳು ಹರಿದಾಡುತ್ತಿದ್ದು, ಕೆಲವರು ಮುತ್ತಪ್ಪ ರೈ ಅವರು ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ಮುತ್ತಪ್ಪ ರೈ ಅವರು ಚೆನ್ನಾಗಿ ಇದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಯಾರೋ ಸಾಮಾಜಿಕ ಜಾಲತಾಣದಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

    ಕೆಲ ವರ್ಷಗಳ ಹಿಂದೆ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ಮುತ್ತಪ್ಪ ರೈ ಅದಕ್ಕಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಈ ನಡುವೆ ಬಹಳ ಕುಗ್ಗಿ ಹೋಗಿದ್ದ ಮುತ್ತಪ್ಪ ರೈ ಅವರು, ಕಳೆದ ಕೆಲ ದಿನಗಳಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಸದ್ಯ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದು, ಅವರು ಬದುಕಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಈ ಹಿಂದೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಮುತ್ತಪ್ಪ ರೈ, ನನಗೆ ಹುಷಾರಿಲ್ಲದಿರುವುದು ನಿಜ. ನನಗೆ ಕ್ಯಾನ್ಸರ್ ಇರುವುದು ನಿಜ. ಮಿರಾಕಲ್ ನಡೆಯುತ್ತಿರುವುದು ನಿಜವಾಗಿದ್ದು, ವಿಲ್ ಪವರ್ ನಿಂದ ಆರೋಗ್ಯವಾಗಿದ್ದೇನೆ. ಅಲ್ಲದೇ ಟಿಕೆಟ್ ಯಾವಾಗಲೋ ಕನ್ಫರ್ಮ್ ಆಗಿದ್ದು, ಓಕೆ ಆದ್ಮೇಲೆ ಫ್ಲೈಟ್ ಹತ್ತಬೇಕು ಅಷ್ಟೇ ಎಂದು ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ್ದರು.

  • ಯಾವುದೇ ಕಾಯಿಲೆಯಿಂದ ಬಳಲುತ್ತಿಲ್ಲ, ನಾನು ಚೆನ್ನಾಗಿದ್ದೇನೆ – ಅಮಿತ್ ಶಾ

    ಯಾವುದೇ ಕಾಯಿಲೆಯಿಂದ ಬಳಲುತ್ತಿಲ್ಲ, ನಾನು ಚೆನ್ನಾಗಿದ್ದೇನೆ – ಅಮಿತ್ ಶಾ

    ನವದೆಹಲಿ: ನನಗೆ ಏನೂ ಆಗಿಲ್ಲ. ನಾನು ಚೆನ್ನಾಗಿದ್ದು, ಯಾವುದೇ ಕಾಯಿಲೆಯಿಂದ ಬಳಲುತ್ತಿಲ್ಲ ಎಂದು ಗೃಹ ಮಂತ್ರಿ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.

    ಅಮಿತ್ ಶಾ ಅವರಿಗೆ ಆರೋಗ್ಯ ಹಾಳಾಗಿದೆ. ಹೀಗಾಗಿ ಅವರು ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾದ ಬೆನ್ನಲ್ಲೇ ಅಮಿತ್ ಶಾ ಟ್ವಿಟ್ಟರ್ ನಲ್ಲಿ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ.

    ದೇಶ ಈಗ ಮಾರಣಾಂತಿಕ ಕಾಯಿಲೆಯಾದ ಕೊರೊನಾ ವಿರುದ್ಧ ಹೋರಾಡುತ್ತಿದ್ದು, ನಾನು ಗೃಹ ಸಚಿವನಾಗಿ ಮಾಡಬೇಕಾದ ಕೆಲಸಗಳನ್ನು ಮಾಡುತ್ತಿದ್ದೇನೆ. ಈ ವಿಚಾರ ನನ್ನ ಗಮನಕ್ಕೆ ಬಂದರೂ ನಾನು ತಲೆ ಕೆಡಿಸಿಕೊಳ್ಳದ ಕಾರಣ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ ಎಂದು ಹೇಳಿದ್ದಾರೆ.

    ಕಳೆದ ಎರಡು ದಿನಗಳಿಂದ ಬಿಜೆಪಿಯ ಲಕ್ಷಾಂತರ ಕಾರ್ಯಕರ್ತರು ಮತ್ತು ನನ್ನ ಹಿತೈಷಿಗಳು ನನ್ನ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದಾರೆ. ಹೀಗಾಗಿ ನಾನೇ ಈಗ ಸ್ಪಷ್ಟನೆ ನೀಡುತ್ತಿದ್ದು, ನಾನು ಆರೋಗ್ಯವಾಗಿದ್ದು, ನನಗೆ ಯಾವುದೇ ಕಾಯಿಲೆ ಇಲ್ಲ ಎಂದು ಹೇಳಿದ್ದಾರೆ.

    ನನ್ನ ವಿರುದ್ಧವಾಗಿ ಯಾರೆಲ್ಲ ವದಂತಿ ಹಬ್ಬಿಸಿದ್ದಾರೋ ಅದರಿಂದಾಗಿ ನನ್ನ ಆರೋಗ್ಯ ಹೆಚ್ಚಾಗುತ್ತದೆ ಎಂದು ನಂಬಿದ್ದೇನೆ. ಅರ್ಥವಿಲ್ಲದ ಆಲೋಚನೆಯನ್ನು ಬಿಟ್ಟು ಬಿಡಿ. ನಾನು ನನ್ನ ಕೆಲಸ ಮಾಡುತ್ತೇನೆ. ನೀವು ನಿಮ್ಮ ಕೆಲಸ ಮಾಡಿ ಎಂದು ಟ್ವೀಟ್ ಮಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಇರಬಹುದು ಸಭೆ ಇರಬಹುದು ಪ್ರತಿ ದಿನ ಸುದ್ದಿಯಾಗುತ್ತಲೇ ಇರುತ್ತಾರೆ. ಆದರೆ ಅಮಿತ್ ಶಾ ಇದೂವರೆಗೂ ಒಂದೇ ಒಂದು ಸುದ್ದಿಗೋಷ್ಠಿ ನಡೆಸಿರಲಿಲ್ಲ. ದೇಶದ ಆಂತರಿಕ ವಿಚಾರ ಬಂದಾಗ ಗೃಹ ಸಚಿವರೆ ಸಾಧಾರಣವಾಗಿ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಆದರೆ ಅಮಿತ್ ಶಾ ಬಹಿರಂಗವಾಗಿ ಕಾಣಿಸದ ಕಾರಣ ಸಾಮಾಜಿಕ ಜಾಲತಾಣದಲ್ಲಿ ಆರೋಗ್ಯ ಸಮಸ್ಯೆ ವಿಚಾರ ಪ್ರಸ್ತಾಪವಾಗಿತ್ತು.