Tag: health

  • ನೆಗಡಿ, ಕೆಮ್ಮು, ಕಫದ ಸಮಸ್ಯೆಗೆ ಮನೆಮದ್ದು

    ನೆಗಡಿ, ಕೆಮ್ಮು, ಕಫದ ಸಮಸ್ಯೆಗೆ ಮನೆಮದ್ದು

    ಣ ಕೆಮ್ಮು, ಕಫ ಇದು ಸಾಮಾನ್ಯವಾಗಿ ಎಲ್ಲರಲ್ಲಿಯೂ ಕಾಣಿಸಿಕೊಳ್ಳುತ್ತದೆ. ಮನೆಯಲ್ಲಿ ಇರುವ ವಸ್ತುಗಳನ್ನು ಉಪಯೋಗಿಸಿ ಇದನ್ನು ನಿವಾರಣೆ ಮಾಡಬಹುದಾಗಿದೆ. ಶುಂಠಿ, ಜೇನುತುಪ್ಪ, ಅರಿಶಿಣ ಆಯುರ್ವೇದ ಔಷಧಿಗುಣಗಳನ್ನು ಹೊಂದಿದೆ.

    ಕೆಮ್ಮು ದೀರ್ಘಕಾಲದವರೆಗೆ ಉಳಿದುಕೊಂಡು ಬೇರೆ ಬೇರೆ ಆರೋಗ್ಯ ಸಮಸ್ಯೆಗಳನ್ನುಂಟು ಮಾಡುತ್ತದೆ. ಶೀತ, ಕೆಮ್ಮು ಮತ್ತು ಕಫದ ಸಮಸ್ಯೆಗಳಿಗೆ ಮನೆಯಲ್ಲಿಯೇ ಸಿಗುವ ಕೆಲವು ವಸ್ತುಗಳನ್ನು ಬಳಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

    * ಬ್ಲ್ಯಾಕ್ ಟೀ, ಶುಂಠಿ ಚಹಾ ಕುಡಿಯುವುದರಿಂದ ಸಹ ನೆಗಡಿ ಮತ್ತು ಕಫವನ್ನು ನಿವಾರಿಸಿಕೊಳ್ಳಬಹುದು. ಪ್ರತಿನಿತ್ಯ ಆಹಾರದಲ್ಲಿ ಶುಂಠಿಯ ಉಪಯೋಗ ಇದ್ದರೆ ಆರೋಗ್ಯಕ್ಕೆ ಒಳ್ಳೆಯದು.

    * ಒಂದು ಲೋಟ ನೀರಿಗೆ ಶುಂಠಿ, ನಿಂಬೆ ರಸ, ಕಾಳು ಮೆಣಸು ಹಾಗೂ ಬೆಲ್ಲವನ್ನು ಹಾಕಿ ಕುದಿಸಬೇಕು. ಇದನ್ನು ಬಿಸಿ ಆರುವ ಮುನ್ನವೇ ಕುಡಿಯುವುದರಿಂದ ನೆಗಡಿ ಮತ್ತು ಕಫ ಕಡಿಮೆಯಾಗುತ್ತದೆ.

    * ಶುಂಠಿ ರಸ ಜೊತೆಯಲ್ಲಿ 1 ಟೇಬಲ್ ಸ್ಪೂನ್ ಜೇನುತುಪ್ಪ ಬೆರೆಸಿ ದಿನಕ್ಕೆ ಒಂದು ಬಾರಿಯಂತೆ ಸೇವಿಸುವುದರಿಂದ ಗಂಟಲಲ್ಲಿ ಕಫ ಕಟ್ಟುವ ಸಮಸ್ಯೆ ನಿವಾರಣೆಯಾಗುತ್ತದೆ.

    * ಬಿಸಿ ನೀರಿಗೆ ಉಪ್ಪನ್ನು ಸೇರಿಸಿ ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ.

    * ಉಪ್ಪು, ಶುಂಠಿ, ಲವಂಗವನ್ನು ಸೇರಿಸಿ ಅಗಿಯುವುದರಿಂದ ಕಫ ಮತ್ತು ಗಂಟಲ ಕೆರೆತದಿಂದ ದೂರ ಇರಬಹುದಾಗಿದೆ.

    * ಬಿಸಿ ನೀರಿನ ಆವಿಯನ್ನು ತಲೆಮೇಲೆ ಬಟ್ಟೆ ಮುಚ್ಚುಕೊಂಡು ಬಿಸಿ ಬಿಸಿಯಾದ ಆವಿಯನ್ನು ತೆಗೆದುಕೊಳ್ಳಬೇಕು. ಆಗ ಕಫ ಕರಗಿ ನಿರಾಗುತ್ತದೆ. ಸರಾಗವಾಗಿ ಉಸಿರಾಡಬಹುದಾಗಿದೆ.

    * ಏಲಕ್ಕಿ, ಶುಂಠಿ ಪುಡಿಯನ್ನು ಒಟ್ಟಿಗೆ ಸೇರೆಸಿ ನೀರಿನಲ್ಲಿ ಹಾಕಿ ಕುದಿಸಿ ಕುಡಿಯುವುದರಿಂದ ಒಣ ಕೆಮ್ಮು ನಿವಾರಣೆಯಾಗುತ್ತದೆ.

    * ಬಿಸಿ ಹಾಲಿಗೆ ಅರಿಶಿಣ ಮತ್ತು ಕಲ್ಲುಸಕ್ಕರೆಯನ್ನು ಬೆರೆಸಿ ರಾತ್ರಿ ಮಲಗುವ ಮುನ್ನ ಕುಡಿದರೆ ಕಫ ಮತ್ತು ನೆಗಡಿ ಹತ್ತಿರವೂ ಸುಳಿವುದಿಲ್ಲ.

    ಕೆಮ್ಮು ಹೆಚ್ಚುದಿನಗಳ ಕಾಲ ಉಳಿದುಕೊಂಡರೆ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಭೆಟಿಯಾಗಬೇಕು. ಸೂಕ್ತವಾದ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಅಗತ್ಯವಾಗಿದೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆಗೆ ಮುಂದಾದ ಆರೋಗ್ಯ ಇಲಾಖೆ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆಗೆ ಮುಂದಾದ ಆರೋಗ್ಯ ಇಲಾಖೆ

    ಮಡಿಕೇರಿ: ಕೇರಳದಲ್ಲಿ ಕೋವಿಡ್ ಮತ್ತೆ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಕೇರಳ ಚೆಕ್‍ಪೋಸ್ಟ್ ನಲ್ಲಿ ಯಾವುದೇ ತಪಾಸಣೆ ನಡೆಸದ ಕುರಿತು ಪಬ್ಲಿಕ್ ಟಿವಿ ವರದಿ ಬಿತ್ತರಿಸಿತ್ತು. ಇದರಿಂದ ಕೂಡಲೇ ಎಚ್ಚೆತ್ತುಕೊಂಡಿರುವ ಕೊಡಗು ಜಿಲ್ಲಾಡಳಿತ ಕರಿಕೆ ಚೆಕ್‍ಪೋಸ್ಟ್ ನಲ್ಲಿ ಕೇರಳದಿಂದ ಆಗಮಿಸುವವರ ಕೋವಿಡ್ ಟೆಸ್ಟ್ ಗೆ ಮುಂದಾಗಿದೆ. ಈ ಮೂಲಕ ಪಬ್ಲಿಕ್ ಟಿವಿ ವರದಿಯು ಫಲಶ್ರುತಿ ಗೊಂಡಿದೆ.

    ಬೆಳಗ್ಗೆ ಗಡಿಗಳಲ್ಲಿ ಜಿಲ್ಲಾಡಳಿತ ಯಾವ ರೀತಿ ಕ್ರಮಕ್ಕೆ ಮುಂದಾಗಿದೆ ಎನ್ನುವ ಕುರಿತು ಪಬ್ಲಿಕ್ ಟಿವಿ ವಿರಾಜಪೇಟೆ ತಾಲೂಕಿನ ಮಾಕುಟ್ಟ ಚೆಕ್‍ಪೋಸ್ಟ್ ನ ಪೆರುಂಬಾಡಿ ಸ್ಥಳದ ರಿಯಾಲಿಟಿ ಚೆಕ್ ಮಾಡಿತ್ತು. ಬಳಿಕ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕೇರಳಕ್ಕೆ ಸಂಚರಿಸುವ ಗಡಿಭಾಗವಾದ ಕರಿಕೆ ಚೆಕ್‍ಪೋಸ್ಟ್ ನಲ್ಲಿ ಕೋವಿಡ್ ಟೆಸ್ಟ್ ಗೆ ಮುಂದಾಗಿದೆ.

    ಸದ್ಯ ಕರಿಕೆ ಚೆಕ್‍ಪೋಸ್ಟ್ ನಲ್ಲಿ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಕೇರಳಕ್ಕೆ ಹೋಗಿ ಬರುತ್ತಿರುವವರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಕೋವಿಡ್ ಲಕ್ಷಣಗಳು ಕಂಡು ಬರುವವರಿಗೆ ಸ್ಥಳದಲ್ಲಿಯೇ ಆ್ಯಂಟಿಜೆನ್ ಟೆಸ್ಟ್ ಮಾಡಿ ಕೋವಿಡ್ ಹರಡದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.

  • ರಾಘಣ್ಣ ಆರೋಗ್ಯದಲ್ಲಿ ಚೇತರಿಕೆ- ನಾಳೆ ಡಿಸ್ಚಾರ್ಜ್ ಸಾಧ್ಯತೆ

    ರಾಘಣ್ಣ ಆರೋಗ್ಯದಲ್ಲಿ ಚೇತರಿಕೆ- ನಾಳೆ ಡಿಸ್ಚಾರ್ಜ್ ಸಾಧ್ಯತೆ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಾಘವೇಂದ್ರ ರಾಜಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.

    ನಿನ್ನೆ ಶೂಟಿಂಗ್ ವೇಳೆ ಅಸ್ವಸ್ಥಗೊಂಡು ಯಶವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದು, ರಾಘಣ್ಣ ಆರೋಗ್ಯದಲ್ಲಿ ಯಾವುದೇ ತೊಂದರೆ ಇಲ್ಲ. ಚೇತರಿಕೆ ಕಂಡು ಬಂದಿದೆ. ನಾಳೆ ಡಿಸ್ಚಾರ್ಜ್ ಆಗಲಿದ್ದಾರೆ ಅಂದಿದ್ದಾರೆ.

    ರಾಘಣ್ಣನ ಯೋಗಕ್ಷೇಮ ವಿಚಾರಿಸಲು ರಾಜಕುಮಾರ್ ಕುಟುಂಬಸ್ಥರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಶಿವರಾಜ್ ಕುಮಾರ್ ಮಾತನಾಡಿ, 2 ವರ್ಷದಿಂದ ತುಂಬಾ ಬ್ಯುಸಿಯಾಗಿದ್ರು. ರೆಸ್ಟ್ ಲೆಸ್ ಆಗಿ ಕೆಲಸ ಮಾಡಿದ್ರಿಂದ ಹೀಗಾಗಿದೆ. ಹೃದಯಕ್ಕೆ ಸಂಬಂಧಿಸಿದ ಚಿಕ್ಕ ಶಸ್ತ್ರಚಿಕಿತ್ಸೆ ಆಗಿದೆ. ರಾಘು ನಗ್ ನಗುತ್ತಾ ಮಾತನಾಡ್ತಿದ್ದಾರೆ ಎಂದ್ರು.

    ಪುನೀತ್ ಕೂಡ ಶೂಟಿಂಗ್‍ಗೆ ಹೋಗಿ ಸುಸ್ತು ಆಗಿದೆ ಅಂದ್ರು. ರಾಘವೇಂದ್ರ ರಾಜ್‍ಕುಮಾರ್ ಸೋದರಮಾವ ಚಿನ್ನೇಗೌಡ ಮಾತನಾಡಿ ಅಭಿಮಾನಿಗಳ ಹಾರೈಕೆ ಅವರಿಗಿದೆ. ಸದ್ಯ ಯಾವುದೇ ತೊಂದರೆ ಇಲ್ಲ ಅಂದ್ರು.

  • ಕೊರೊನಾ ಸ್ಫೋಟ – ಅಪಾರ್ಟ್‍ಮೆಂಟ್ ನಿವಾಸಿಗಳಿಗೆ ಬಿಬಿಎಂಪಿಯಿಂದ ಹೊಸ ರೂಲ್ಸ್

    ಕೊರೊನಾ ಸ್ಫೋಟ – ಅಪಾರ್ಟ್‍ಮೆಂಟ್ ನಿವಾಸಿಗಳಿಗೆ ಬಿಬಿಎಂಪಿಯಿಂದ ಹೊಸ ರೂಲ್ಸ್

    – 103 ಮಂದಿಗೆ ಕೊರೊನಾ
    – ಬಿಳೇಕಳ್ಳಿ ಅಪಾರ್ಟ್‍ಮೆಂಟ್ ನಿವಾಸಿಗಳಿಗೆ ಮಾತ್ರ ನಿಯಮ

    ಬೆಂಗಳೂರು: ಒಂದೇ ಅಪಾರ್ಟ್‍ಮೆಂಟ್‍ನಲ್ಲಿದ್ದ 103 ಮಂದಿಗೆ ಕೊರೊನಾ ಬಂದಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಈಗ ಹೊಸ ನಿಯಮ ಜಾರಿ ಮಾಡಿದೆ.

    ಫೆ.6 ರಂದು 40 ಜನ ಬೊಮ್ಮನಹಳ್ಳಿ ಬಿಳೇಕಳ್ಳಿಯ ಖಾಸಗಿ ಅಪಾರ್ಟ್‍ಮೆಂಟ್‍ನಲ್ಲಿ ನಡೆದ ಪಾರ್ಟಿ ಮಾಡಿದ್ದರು. ಈ ಪಾರ್ಟಿಗೆ ಡೆಹ್ರಾಡೂನ್‍ನಿಂದ ಬಂದವರು ಭಾಗಿಯಾಗಿದ್ದರು.

    ಅಪಾರ್ಟ್‍ಮೆಂಟ್‍ನಲ್ಲಿ 435 ಫ್ಲ್ಯಾಟ್‍ಗಳಿವೆ. 1052 ಮಂದಿ ಟೆಸ್ಟ್ ಕೊರೋನಾ ಪರೀಕ್ಷೆ ಮಾಡಲಾಗಿದೆ. ಈವರೆಗೂ 103 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಹೊಸ ರೂಲ್ಸ್ ಮಾಡಿದೆ.

    ಅಪಾರ್ಟ್‍ಮೆಂಟ್‍ಗೆ ಹೊರಗಿನವರು ಪ್ರವೇಶ ಮಾಡುವಂತಿಲ್ಲ. ಹೋಂ ಕ್ವಾರಂಟೈನ್ ಅವಧಿ ಮುಗಿಸಿಯೇ ನಿವಾಸಿಗಳು ಹೊರಗೆ ಬರಬೇಕು. ಅಪಾರ್ಟ್‍ಮೆಂಟ್ ಒಳಗಡೆ ಯಾವುದೇ ಪಾರ್ಟಿಗಳು, ಸಭೆ ಮಾಡುವಂತಿಲ್ಲ. ತಂತ್ರಜ್ಞಾನ ಬಳಸಿ ಮೀಟಿಂಗ್ ಮಾಡಬೇಕೆಂದು ಸೂಚನೆ ನೀಡಲಾಗಿದೆ. ಸೊಂಕು ಹರಡಿದ ಅಪಾರ್ಟ್ ಮೆಂಟ್ ಕಾಮನ್ ಏರಿಯಾ ಬಳಕೆಗೂ ಹಲವು ನಿಬರ್ಂಧಗಳನ್ನು ಹೇರಲಾಗಿದೆ.

    50 ವರ್ಷ ಮೇಲ್ಪಟ್ಟವರು 96 ಜನರಿಗೆ ಕೊರೋನಾ ಪಾಸಿಟಿವ್ ಹಾಗೂ ಡಯಾಬಿಟಿಕ್ ಇರುವ 43 ಮಂದಿಗೂ ಬಂದಿದೆ ಎಂದು ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ವಿಜಯೇಂದ್ರ ಹೇಳಿದ್ದಾರೆ.

    ಜ್ವರ, ಕೆಮ್ಮು ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡುವಂತೆ ಅಪಾರ್ಟ್‍ಮೆಂಟ್‍ನಿಂದ ಕರೆ ಬಂದಿತ್ತು. ಕರೆ ಬಂದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿದಾಗ ಸೋಂಕು ಬಂದಿರುವುದು ದೃಢಪಟ್ಟಿದೆ. ಒಟ್ಟು 2 ಸಾವಿರ ಮಂದಿ ಅಪಾರ್ಟ್‍ಮೆಂಟ್‍ನಲ್ಲಿಲ್ಲಿದ್ದಾರೆ.

    ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಅಪಾರ್ಟ್‍ಮೆಂಟ್‍ನ ನಿವಾಸಿಗಳಿಗೆ ಆರೋಗ್ಯ ಸಿಬ್ಬಂದಿ ಸೋಮವಾರದಿಂದ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. ಈ ವೇಳೆ 103 ಮಂದಿಗೆ ಸೋಂಕು ಇರುವುದು ತಿಳಿದುಬಂದಿದೆ.

  • ಅನಾರೋಗ್ಯದಿಂದ ಕರ್ತವ್ಯನಿರತ ಹಾಸನದ ಯೋಧ ಛತ್ತಿಸ್‍ಗಡದಲ್ಲಿ ನಿಧನ

    ಅನಾರೋಗ್ಯದಿಂದ ಕರ್ತವ್ಯನಿರತ ಹಾಸನದ ಯೋಧ ಛತ್ತಿಸ್‍ಗಡದಲ್ಲಿ ನಿಧನ

    – ನಾಳೆ ಹುಟ್ಟೂರಿಗೆ ಮೃತದೇಹ ಆಗಮನ

    ಹಾಸನ: ಕರ್ತವ್ಯದಲ್ಲಿರುವಾಗ ಅನಾರೋಗ್ಯದಿಂದ ಹಾಸನ ಜಿಲ್ಲೆಯ ಯೋಧ ಸಾವನ್ನಪ್ಪಿದ್ದಾರೆ.

    ಅರಕಲಗೂಡು ತಾಲೂಕಿನ ಬಾಣದಹಳ್ಳಿ ಗ್ರಾಮದ ಬಿ.ಆರ್.ರಾಕೇಶ್ (22) ಮೃತ ಯೋಧ. ಅರಕಲಗೂಡು ಪ.ಪಂ.ನೌಕರರಾಗಿರುವ ಶಿವಮ್ಮ, ರಾಜು ದಂಪತಿ ಪುತ್ರ ರಾಕೇಶ್ ಹಾಸನದ ಎನ್.ಡಿ.ಆರ್.ಕೆ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾಗಲೇ ಭಾರತೀಯ ಸೇನೆ ಸೇರಿದ್ದರು. ಕಳೆದ ಮೂರು ವರ್ಷಗಳ ಹಿಂದೆ ಬೆಳಗಾವಿ ಸೈನಿಕ ಶಾಲೆಯಲ್ಲಿ (2018) ಮಿಲಿಟರಿ ಸೇನೆ ತರಬೇತಿ ಪಡೆದು ಹಿಮಾಚಲ ಪ್ರದೇಶದಲ್ಲಿ ದೇಶ ಸೇವೆ ಸಲ್ಲಿಸುತ್ತಿದ್ದರು.

    ಕಳೆದ ನಾಲ್ಕು ದಿನಗಳ ಹಿಂದೆ ಕರ್ತವ್ಯದಲ್ಲಿದ್ದಾಗಲೇ ಆರೋಗ್ಯ ಸಮಸ್ಯೆಯಿಂದ ಅಸ್ವಸ್ಥರಾಗಿದ್ದು, ಬಳಿಕ ಛತ್ತಿಸ್‍ಗಡದ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಯೋಧ ಇಂದು ಮೃತಪಟ್ಟಿದ್ದಾರೆ. ಇತ್ತೀಚೆಗಷ್ಟೇ ಸೇನಾಧಿಕಾರಿಗಳು ರಾಕೇಶ್ ಅನಾರೋಗ್ಯದ ಬಗ್ಗೆ ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದು, ತಾಯಿ ಶಿವಮ್ಮ ಮತ್ತು ಸಹೋದರ ರಕ್ಷಿತ್ ಛತ್ತಿಸ್‍ಗಡ್ ಗೆ ತೆರಳಿದ್ದರು. ಯೋಧನ ಪಾರ್ಥೀವ ಶರೀರವು ನಾಳೆ ಹುಟ್ಟೂರಿಗೆ ಆಗಮಿಸಲಿದೆ ಎಂದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

  • ಸ್ವಚ್ಛತಾ ಕಾರ್ಯ ಮಾಡಿ ಜಾಗೃತಿ ಮೂಡಿಸಿದ ಶ್ರೀಗಳು

    ಸ್ವಚ್ಛತಾ ಕಾರ್ಯ ಮಾಡಿ ಜಾಗೃತಿ ಮೂಡಿಸಿದ ಶ್ರೀಗಳು

    ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಾಸೂರಿನಲ್ಲಿ ಗ್ರಾಮಪಂಚಾಯ್ತಿ ವತಿಯಿಂದ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸ್ವಚ್ಛತಾ ಕಾರ್ಯದಲ್ಲಿ ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀ, ಮಾಸೂರಿನ ಮಹಾಂತ ಶ್ರೀ ಹಾಗೂ ಕೂಡಲಮಠದ ಶ್ರೀಗಳು ಪೂರಕೆ ಹಿಡಿದು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

    ಮಾಸೂರಿನ ವರಕವಿ ಸರ್ವಜ್ಞನ ಪ್ರತಿಮೆ ಸುತ್ತಮುತ್ತವಿರುವ ಕಸ ತೆಗೆದು ಸ್ವಚ್ಛಗೊಳಿಸಲಾಯಿತು. ಹುಕ್ಕೇರಿ ಮಠದ ಶ್ರೀಗಳಿಗೆ ತಿಪ್ಪಾಯಿಕೊಪ್ಪದ ಮಹಂತದೇವರು, ಹಾವೇರಿ ಕೂಡಲದ ಗುರುನಂಜೇಶ್ವರ ಮಠದ ಮಹೇಶ್ವರ ಸ್ವಾಮೀಜಿಗಳು ಸ್ವಚ್ಛತಾ ಕಾರ್ಯಕ್ಕೆ ಸಾಥ್ ನೀಡಿದರು. ಅಲ್ಲದೆ ಈ ಕಾರ್ಯದಲ್ಲಿ ಗ್ರಾಮ ಪಂಚಾಯ್ತಿ ಸಿಬ್ಬಂದಿ ಹಾಗೂ ಕೆಲ ಜನರು ಭಾಗವಹಿಸಿದ್ದು ವಿಶೇಷವಾಗಿತ್ತು.

    ಈ ಸಂದರ್ಭದಲ್ಲಿ ಹುಕ್ಕೇರಿಮಠದ ಸದಾಶಿವಶ್ರೀಗಳು ಮಾತನಾಡಿ, ಪ್ರತಿಯೊಬ್ಬರು ಸ್ವಚ್ಛತಾ ಕಾರ್ಯಕ್ರಮ ನಡೆಸುವ ಮೂಲಕ ಆರೋಗ್ಯಕರ ವಾತಾವರಣ ನಿರ್ಮಿಸಿಕೊಳ್ಳುವಂತೆ ತಿಳಿಸಿದರು.

  • ಸ್ತನ ಕ್ಯಾನ್ಸರ್‌ಗೆ ಮದ್ದು ಕಂಡುಹಿಡಿದ ಮೈಸೂರು ವಿಜ್ಞಾನಿ!

    ಸ್ತನ ಕ್ಯಾನ್ಸರ್‌ಗೆ ಮದ್ದು ಕಂಡುಹಿಡಿದ ಮೈಸೂರು ವಿಜ್ಞಾನಿ!

    ಮೈಸೂರು: ಜಗತ್ತಿನ ಅನೇಕ ಮಹಿಳೆಯರು ಸ್ತನ  ಕ್ಯಾನ್ಸರ್‌ನಿಂದ ನಲುಗುತ್ತಿದ್ದಾರೆ. ಈ ರೋಗದಿಂದ ಪಾರಾಗಲು ಔಷಧಿಗಳು ಇದ್ದರೂ ಅದು ಅಲ್ಪ ಪ್ರಮಾಣದಲ್ಲಿ ಮಾತ್ರ ರೋಗ ಶಮನ ಮಾಡುತ್ತಿದೆ. ಇದೀಗ ಇದಕ್ಕೆ ಅಲ್ಪ ಪ್ರಮಾಣಕ್ಕಿಂತ ದೊಡ್ಡ ಮಟ್ಟದಲ್ಲಿ ಔಷಧ ಲಭ್ಯವಾಗಿದ್ದು, ಮೈಸೂರು ವಿವಿಯ ರಾಸಾಯನಿಕ ವಿಭಾಗದ ಪ್ರೊಫೆಸರ್ ಇದನ್ನ ಕಂಡು ಹಿಡಿದಿದ್ದಾರೆ.

    ಸ್ತನ ಕ್ಯಾನ್ಸರ್ ಜಾಗತಿಕ ಕಾಲಮಾನದಲ್ಲಿ ಹೆಚ್ಚು ಸಮಸ್ಯೆ ಒಡ್ಡುತ್ತಿದೆ. ಕಳೆದ ವರ್ಷ ಜಗತ್ತಿನಲ್ಲಿ 6,84,996 ಈ ರೋಗದಿಂದ ಮೃತಪಟ್ಟಿದ್ದಾರೆ. ಈ ರೋಗಕ್ಕೆ ಈಗ ಮೈಸೂರಿನ ವಿಜ್ಞಾನಿಯೊಬ್ಬರ ಸಂಶೋಧನೆ ಮಾಡಿದ್ದಾರೆ. ಈಗಿರುವ ಔಷಧಕ್ಕಿಂತ ಹೆಚ್ಚಿನ ಪಟ್ಟು ಸಮಸ್ಯೆ ನೀಗಿಸುವಲ್ಲಿ ಕೆಲಸ ಮಾಡಲಿದ್ದು, ಇದಕ್ಕಾಗಿ ಹೊಸದಾದ ಸಂಶೋಧನೆ ಮಾಡಿದ್ದಾರೆ. ಮೈಸೂರಿನ ವಿಶ್ವವಿದ್ಯಾಲಯದ ಸಾವಯವ ರಸಾಯನ ಶಾಸ್ತ್ರ ವಿಭಾಗದ ಅಧ್ಯಕ್ಷ ಡಾ.ಬಸಪ್ಪ ರೋಗಕ್ಕೆ ಮದ್ದು ಕಂಡು ಹಿಡಿದಿದ್ದಾರೆ.

    ಸ್ತನ ಕ್ಯಾನ್ಸರ್ ಹೋಗಲಾಡಿಸಲು ಔಷಧ ಬೀಜವನ್ನು ಪತ್ತೆ ಹಚ್ಚಿ, ಈ ಹಿಂದಿನ ಔಷಧಿಯಾದ ಟ್ಯಾಮೊಕ್ಸಿಫೆನ್‍ಗೆ ಹೋಲಿಸಿದಾಗ ಇದಕ್ಕಿಂತ ತಾವು ಕಂಡು ಹಿಡಿದ ಔಷಧ ಹೆಚ್ಚು ಉಪಯುಕ್ತವಾಗಿದೆ. ಎಎಂಟಿಎ ಎಂಬ ಹೆಸರಿನ ಔಷಧಿ ಬೀಜವನ್ನ ಪ್ರಯೋಗಾಲಯದಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಗೊಳಿಸಿದ್ದೇವೆ. ಇದು ಟ್ಯಾಮೊಕ್ಸಿಫೆನ್‍ಗಿಂತ ಹೆಚ್ಚು ಸಾಂದ್ರತೆ ಹಾಗೂ ಸ್ತನ ಕ್ಯಾನ್ಸರ್ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ನಮ್ಮ ತಂಡದ ಸಾಧನೆ ಎಂದು ಬಸಪ್ಪ ಅವರು ಹೇಳಿದ್ದಾರೆ.

    ಫ್ರೋ.ಪೀಟರ್, ಲೋಬಿ, ಡಾ.ವಿಜಯ್, ಜೊತೆಯಲ್ಲಿ ವಿಶನ್ ಗ್ರೂಪ್ ಆನ್ ಸೈನ್ಸ್ ಅಂಡ್ ಟೆಕ್ನಾಲಜಿ ಜೊತೆಯಾಗಿದೆ. ಕರ್ನಾಟಕ ಮತ್ತು ಭಾರತ ಸರ್ಕಾರದ ನಿಧಿ ಹಾಗೂ ಸಹಕಾರ ನೀಡಿದೆ. ಈ ಔಷಧ ಸ್ತನ ಕ್ಯಾನ್ಸರ್ ಇದ್ದವರಿಗೆ ಚೇತರಿಕೆಗೆ ಹೆಚ್ಚು ವೇಗವಾಗಿ ಸಹಕಾರಿಯಾಗಲಿದೆ ಎಂದು ಡಾ.ಬಸಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.

    ಒಟ್ಟಾರೆ, ಮೈಸೂರು ವಿವಿಯ ಪ್ರೊಫೆಸರ್‍ಗಳು ಹಾಗೂ ವಿಜ್ಞಾನಿಗಳು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುವ ಹೆಜ್ಜೆ ಇಡುತ್ತಿದ್ದಾರೆ. ಇದು ಮೈಸೂರಿಗೆ ಮತ್ತೊಂದು ಹೆಮ್ಮೆಯನ್ನ ತಂದುಕೊಟ್ಟಿದೆ. ಮೈಸೂರು, ರಾಜ್ಯ ಮಾತ್ರವಲ್ಲದೇ ದೇಶ ವಿದೇಶದಲ್ಲಿಯೂ ಮತ್ತಷ್ಟು ಹೆಸರು ಮಾಡುತ್ತಿದೆ. ಈ ಔಷಧ ಜಗತ್ತಿನಲ್ಲಿ ದೊಡ್ಡ ಪಿಡುಗಿಗಾಗಿ ಕಾಡುತ್ತಿರುವ ಬ್ರೆಸ್ಟ್ ಕ್ಯಾನ್ಸರ್‌ನಿಂದ ಬಳಲುತ್ತಿರುವವರ ಆರೋಗ್ಯ ಚೇತರಿಕೆಗೆ ಸಹಾಯಕವಾಗಲಿದೆ.

  • ಚೊಚ್ಚಲ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮಕೊಟ್ಟ ಮಹಿಳೆ

    ಚೊಚ್ಚಲ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮಕೊಟ್ಟ ಮಹಿಳೆ

    ತಿರುವನಂತಪುರಂ: ಚೊಚ್ಚಲ ಹೆರಿಗೆಯಲ್ಲಿ ನಾಲ್ಕು ಗಂಡು ಮಕ್ಕಳಿಗೆ ಜನ್ಮನೀಡಿ ಸುದ್ದಿಯಾಗಿರುವ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ.

    ಪಲಕ್ಕಾಡ್‍ನ ಛಲಾವರ ಮೂಲದ ದಂಪತಿ ಮುಸ್ತಫ ಮತ್ತು ಮಬೀನಾ ಅವರಿಗೆ ಚೊಚ್ಚಲ ಹೆರಿಗೆಯಲ್ಲಿ ನಾಲ್ಕು ಗಂಡು ಮಕ್ಕಳು ಜನಿಸಿವೆ. ಮಬೀನಾ ಕಳೆದ ವರ್ಷ ಮುಸ್ತಫ ಅವರನ್ನು ಮದುವೆಯಾಗಿದ್ದರು. ಗರ್ಭಿಣಿಯಾದ ಬಳಿಕ ವೈದ್ಯರಲ್ಲಿ ಹೋದಾಗ ಅವರು ನಿಮಗೆ ನಾಲ್ಕು ಮಕ್ಕಳು ಜನಿಸುತ್ತವೆ ಎಂದು ಹೇಳಿದ್ದರು.

    ಮಬೀನಾಗೆ ಮಕ್ಕಳು ಅರೋಗ್ಯವಾಗಿ ಹುಟ್ಟಿದರೆ ಸಾಕು ಎನ್ನುವ ಭಯ ಇತ್ತು. ಗರ್ಭಧರಿಸಿದ ದಿನದಿಂದ ಮಹಿಳೆ ಪೆರಿಂಥಲ್ ಮನ್ನದ ಮೌಲಾನಾ ಆಸ್ಪತ್ರೆಗೆ ಸ್ತ್ರೀರೋಗತಜ್ಷರಾದ ಡಾ. ಅಬ್ದುಲ್ ವಾಹಾಬ್ ಅವರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು.

    8 ತಿಂಗಳ ನಂತರ ಸರ್ಜರಿ ಮೂಲಕವಾಗಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ನಾಲ್ಕು ಮಕ್ಕಳು 1.100 ರಿಂದ 1.600 ಗ್ರಾಂ ತೂಕವನ್ನು ಹೊಂದಿವೆ. ಮಕ್ಕಳು ಆರೋಗ್ಯವಾಗಿವೆ. ನವಜಾತ ಶಿಶುಗಳಾಗಿದ್ದರಿಂದ ಸಣ್ಣ ಪುಟ್ಟ ಚಿಕಿತ್ಸೆಯನ್ನು ನೀಡುತ್ತಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.

  • ಶಶಿಕಲಾ ಆರೋಗ್ಯದಲ್ಲಿ ಏರುಪೇರು

    ಶಶಿಕಲಾ ಆರೋಗ್ಯದಲ್ಲಿ ಏರುಪೇರು

    ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ನಟರಾಜನ್ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ತಿಳಿದು ಬಂದಿದೆ.

    ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಚಿನ್ನಮ್ಮ ನಿನ್ನೆ ರಾತ್ರಿಯಿಂದ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು. ಇಂದೂ ಕೂಡಾ ಆರೋಗ್ಯ ಸುಧಾರಿಸದೇ ಜೈಲಿನ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಲಾಗಿದೆ.

    ಜೈಲಿನ ವೈದ್ಯೆ ಉಮಾ ನೇತೃತ್ವದ ನಾಲ್ವರ ವೈದ್ಯರ ತಂಡ ತಪಾಸಣೆ ನಡೆಸಿದೆ. ತೀವ್ರ ಉಸಿರಾಟದ ತೊಂದರೆ ಆಗಿರುವುದರಿಂದ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡುವ ಸಾಧ್ಯತೆಯಿದೆ. ಈ ಬಗ್ಗೆ ಜೈಲಾಧಿಕಾರಿಗಳು ವೈದ್ಯರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ಜೈಲಿನ ಮೂಲಗಳಿಂದ ತಿಳಿದುಬಂದಿದೆ.

    ಇದೇ ತಿಂಗಳ 27ರಂದು ಜೈಲಿನಿಂದ ಶಶಿಕಲಾ ಬಿಡುಗಡೆಯಾಗಲಿದ್ದಾರೆ. ಜೊತೆಗೆ ಜೈಲಿಂದ ಹೊರಗಡೆ ಬಂದ ನಂತರ ಅದ್ಧೂರಿ ಮೆರವಣಿಗೆ ಮಾಡುವ ಮುಖಾಂತರ ತಮಿಳುನಾಡಿಗೆ ಹೋಗಬೇಕೆಂದು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು.

  • ಶಾಸಕ ಎಂ.ಸಿ.ಮನಗೂಳಿ ಅಸ್ವಸ್ಥ

    ಶಾಸಕ ಎಂ.ಸಿ.ಮನಗೂಳಿ ಅಸ್ವಸ್ಥ

    ವಿಜಯಪುರ: ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಶಾಸಕ ಎಂ.ಸಿ.ಮನಗೂಳಿ ಆರೋಗ್ಯ ಸಮಸ್ಯೆ ಹಿನ್ನೆಲೆ ಬೆಂಗಳೂರಿನ ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಕಲಬುರಗಿಯಿಂದ ಏರ್ ಲಿಫ್ಟ್ ಮೂಲಕ ಬೆಂಗಳೂರಿಗೆ ಕರೆದೊಯ್ದು ಕುಟುಂಬದವರು ಚಿಕಿತ್ಸೆ ಕೊಡಿಸುತ್ತಿದ್ದಾರೆ

    ತೀವ್ರತರವಾದ ಕಫ ಕಟ್ಟಿದ ಹಿನ್ನೆಲೆ ಉಸಿರಾಟದ ಸಮಸ್ಯೆಯಾಗಿ ಅಸ್ವಸ್ಥರಾಗಿದ್ದರು ಎಂದು ತಿಳಿದು ಬಂದಿದೆ. ಸದ್ಯ ಚಿಕಿತ್ಸೆ ಮುಂದುವರಿದಿದ್ದು, ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

    ಕ್ಷೇತ್ರದ ಜನರು, ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಎಂ.ಸಿಮನಗೂಳಿ ಅವರ ಪುತ್ರ ಶಾಂತವೀರ ಮನಗೂಳಿ ಹೇಳಿದ್ದಾರೆ.