Tag: health

  • ಖುಷ್ಬೂ ಆರೋಗ್ಯ ಹೇಗಿದೆ? ಅಭಿಮಾನಿಗಳ ಆತಂಕ ಅರ್ಥ ಮಾಡಿಕೊಂಡ ನಟಿ

    ಖುಷ್ಬೂ ಆರೋಗ್ಯ ಹೇಗಿದೆ? ಅಭಿಮಾನಿಗಳ ಆತಂಕ ಅರ್ಥ ಮಾಡಿಕೊಂಡ ನಟಿ

    ವಿಪರೀತ ಜ್ವರ ಹಾಗೂ ತುಂಬಾ ನೋವಿನಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ನಟಿ ಖುಷ್ಬೂ (Khushboo) ಈಗ ಹೇಗಿದ್ದಾರೆ ಎನ್ನುವ ಆತಂಕ ಅವರ ಅಭಿಮಾನಿಗಳಲ್ಲಿತ್ತು. ನಿನ್ನೆಯಿಂದಲೇ ಹೈದರಾಬಾದ್ ಆಸ್ಪತ್ರೆಯ (Hospital) ಮುಂದೆ ಅಭಿಮಾನಿಗಳು ಜಮಾಯಿಸಿ, ನಟಿಯ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದಾರೆ. ಅಭಿಮಾನಿಗಳ ಆತಂಕವನ್ನು ಗಮನಿಸಿದ ಖುಷ್ಬೂ ತಮ್ಮ ಆರೋಗ್ಯದ ಅಪ್ ಡೇಟ್ ಕೊಟ್ಟಿದ್ದಾರೆ.

    ವಿಪರೀತ ಜ್ವರದಿಂದ ಬಳಲಿ ಹೋಗಿದ್ದೆ. ಅಸಾಧರಣ ನೋವಿತ್ತು. ನನ್ನಿಂದ ತಡೆದುಕೊಳ್ಳಲು ಆಗದೇ ಆಸ್ಪತ್ರೆಗೆ ದಾಖಲಾದೆ. ಈಗ ಜ್ವರ ಕಡಿಮೆ ಆಗಿದೆ. ಆರೋಗ್ಯ ಸುಧಾರಿಸುತ್ತಿದೆ. ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ. ನನಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ ಖುಷ್ಬೂ.

    ಇತ್ತೀಚಿನ ದಿನಗಳಲ್ಲಿ ಖುಷ್ಬೂ ಅವರು ಜ್ವರ ಮತ್ತು ಬಾಡಿ ವೀಕ್‌ನೆಸ್‌ನಿಂದ ಬಳಲುತ್ತಿದ್ದರಂತೆ. ಈ ಬಗ್ಗೆ ಸ್ವತಃ ಸೋಷಿಯಲ್ ಮೀಡಿಯಾ ಮೂಲಕ ನಟಿ ತಿಳಿಸಿದ್ದರು. ವಿಪರೀತ ಜ್ವರ, ತುಂಬಾ ನೋವು ಮತ್ತು ದೌರ್ಬಲ್ಯ ನನನ್ನು ಕೊಲ್ಲುತ್ತಿದೆ. ಆದರೆ ನಾನು ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ದಯವಿಟ್ಟು ಆರೋಗ್ಯವನ್ನು ನಿರ್ಲಕ್ಷಿಸಬೇಡಿ ಎಂದು ಬರೆದುಕೊಂಡಿದ್ದಾರೆ.

    ಕನ್ನಡದ ರಣಧೀರ, ಶಾಂತಿ ಕ್ರಾಂತಿ, ಹೃದಯಗೀತೆ, ಪಾಳೇಗಾರ ಸೇರಿದಂತೆ ಪರಭಾಷೆಗಳಲ್ಲೂ ನಟಿ ಖುಷ್ಬೂ ಸುಂದರ್ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸಿನಿಮಾ- ರಾಜಕೀಯ ಎರಡು ಕ್ಷೇತ್ರಗಳಲ್ಲೂ ಗುರುತಿಸಿಕೊಂಡಿದ್ದಾರೆ.

  • ಕರ್ನಾಟಕದ 865 ಹಳ್ಳಿಗಳಿಗೆ ಆರೋಗ್ಯ ವಿಮೆ – ಮಹಾರಾಷ್ಟ್ರದ ಸರ್ಕಾರದಿಂದ ಆದೇಶ

    ಕರ್ನಾಟಕದ 865 ಹಳ್ಳಿಗಳಿಗೆ ಆರೋಗ್ಯ ವಿಮೆ – ಮಹಾರಾಷ್ಟ್ರದ ಸರ್ಕಾರದಿಂದ ಆದೇಶ

    ಬೆಳಗಾವಿ/ ಬೆಂಗಳೂರು: ಮಹಾರಾಷ್ಟ್ರದ (Maharashtra ) ಗಡಿಕ್ಯಾತೆ ಮುಂದುವರಿದಿದ್ದು ಕರ್ನಾಟಕದ (Karnataka) 865 ಹಳ್ಳಿಗಳಿಗೆ ಅನ್ವಯವಾಗುವಂತೆ ಆರೋಗ್ಯ ವಿಮೆಯನ್ನು (Health Insurance) ಮಹಾರಾಷ್ಟ್ರ ಸರ್ಕಾರ ಜಾರಿ ಮಾಡಿ ಆದೇಶ ಹೊರಡಿಸಿ ಉದ್ಧಟತನ ಮೆರೆದಿದೆ.

    ಈ ಬೆನ್ನಲ್ಲೇ ಸಿಎಂ ಬೊಮ್ಮಾಯಿ (CM Bommai) ಟ್ವೀಟ್ ಮಾಡಿ, ಮಹಾರಾಷ್ಟ್ರ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ. ಗಡಿವಿವಾದ ಸುಪ್ರೀಂಕೋರ್ಟ್‍ನಲ್ಲಿದ್ದರೂ (Supreme Court) ಮಹಾ ಸರ್ಕಾರ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಮಹಾರಾಷ್ಟ್ರ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ. ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು. ಇಲ್ಲವಾದರೆ ಮಹಾರಾಷ್ಟ್ರದ ಕನ್ನಡ ಭಾಷಿಕ ಹಳ್ಳಿಗಳಿಗೆ ನಾವೂ ಯೋಜನೆಗಳನ್ನು ಪ್ರಕಟಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಕಿಚ್ಚ ಸುದೀಪ್ ಈಗ ಸ್ಟಾರ್ ಪ್ರಚಾರಕ – ಬಿಜೆಪಿ ಲೆಕ್ಕಾಚಾರ ಏನು?

    ಸಿಎಂ ಏಕ್‍ನಾಥ್ ಶಿಂಧೆ (Eknath Shinde) ವಿರುದ್ಧ ಸಿದ್ದರಾಮಯ್ಯ (Siddaramaiah) ಆಕ್ರೋಶ ಹೊರಹಾಕಿದ್ದಾರೆ. ಇದನ್ನು ಸಹಿಸಲು ಸಾಧ್ಯವೇ ಇಲ್ಲ. ಈ ಆದೇಶವನ್ನು ತಕ್ಷಣ ವಾಪಸ್ ಪಡೆಯದೇ ಇದ್ದರೇ ಪರಿಣಾಮ ನೆಟ್ಟಗಿರದು ಎಂದು ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ ನೀಡಿದ ಎಚ್ಚರಿಕೆಯನ್ನು ಮಹಾರಾಷ್ಟ್ರ ಸರ್ಕಾರ ಧಿಕ್ಕರಿಸಿದೆ. ಮುಖ್ಯಮಂತ್ರಿ ಬೊಮ್ಮಾಯಿ ಈಗ ಬದ್ಧತೆ ತೋರಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

    ಹೆಚ್‍ಡಿ ಕುಮಾರಸ್ವಾಮಿ (HD Kumaraswamy) ಕೂಡ ಟ್ವೀಟ್ ಮಾಡಿ ಮಹಾರಾಷ್ಟ್ರ ಸರ್ಕಾರದ ಕ್ರಮನ್ನು ಖಂಡಿಸಿ ಮೋದಿ ಮೌನವನ್ನೂ ಪ್ರಶ್ನೆ ಮಾಡಿದ್ದಾರೆ.

  • ಬೇಸಿಗೆಯಲ್ಲಿ ಕಬ್ಬಿನ ಹಾಲನ್ನು ಕುಡಿಯೋದ್ರಿಂದ ಅದ್ಭುತ ಪ್ರಯೋಜನ

    ಬೇಸಿಗೆಯಲ್ಲಿ ಕಬ್ಬಿನ ಹಾಲನ್ನು ಕುಡಿಯೋದ್ರಿಂದ ಅದ್ಭುತ ಪ್ರಯೋಜನ

    ಬೇಸಿಗೆಯ (Summer) ತಾಪಮಾನ ಅಧಿಕಗೊಳ್ಳುತ್ತಿದೆ. ಅತಿಯಾದ ಬಿಸಿಲಿನಿಂದಾಗಿ ಜನರಲ್ಲಿ ನಾನಾ ರೀತಿಯ ಸಮಸ್ಯೆಗಳು ಉಂಟಾಗುತ್ತಿವೆ. ಈ ಸಮಯದಲ್ಲಿ ನೀರು, ಜ್ಯೂಸ್ ಸೇರಿದಂತೆ ಇತರೆ ತಂಪು ಪಾನೀಯಗಳನ್ನು ಸೇವಿಸುವುದು ದೇಹಕ್ಕೆ ಒಳ್ಳೆಯದು. ಅದರಲ್ಲೂ ಪ್ರತಿನಿತ್ಯ ಒಂದು ಗ್ಲಾಸ್ ಕಬ್ಬಿನ ಹಾಲನ್ನು (Sugarcane) ಸೇವಿಸುವುದರಿಂದ ಅನೇಕ ಸಮಸ್ಯೆಗಳಿಂದ ದೂರ ಇರಬಹುದಾಗಿದೆ.

    ಚರ್ಮಕ್ಕೆ ಒಳ್ಳೆಯದು: ಕಬ್ಬಿನ ರಸದಲ್ಲಿ ಉತ್ಕರ್ಷಣ ನಿರೋಧಕಗಳು, ಮೆಗ್ನೀಸಿಯಮ್, ಕಬ್ಬಿಣ ಹಾಗೂ ಇತರ ಎಲೆಕ್ಟ್ರೋಲೈಟ್‍ಗಳು ಹೇರಳವಾಗಿರುತ್ತದೆ. ಇವೆಲ್ಲವೂ ಕಾಂತಿಯುತ ಚರ್ಮಕ್ಕೆ (Skin) ಅವಶ್ಯಕವಾಗಿರುತ್ತದೆ. ಜೊತೆಗೆ ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹಾಗೂ ದೇಹದಲ್ಲಿನ ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವಯಸ್ಸಾದಂತೆ ಕಾಣುವುದನ್ನು ಕಡಿಮೆಗೊಳಿಸುತ್ತದೆ.

    ಮೂತ್ರದ ಸೋಂಕನ್ನು ತಡೆಯುತ್ತೆ: ಬೇಸಿಗೆಯಲ್ಲಿ ನೀರಿನಾಂಶ ಕಡಿಮೆಯಾಗುವುದರಿಂದ ಮೂತ್ರ ಸೋಂಕಿನ ಸಮಸ್ಯೆ ಉಂಟಾಗುವುದು ಸಾಮಾನ್ಯವಾಗಿದೆ. ಆದರೆ ಕಬ್ಬಿನ ಜ್ಯೂಸ್ ಕುಡಿಯುವುದರಿಂದ ಮೂತ್ರ ಸೋಂಕನ್ನು ತಡೆಗಟ್ಟಬಹುದು, ಕಿಡ್ನಿ ಸ್ಟೋನ್ ತಡೆಗಟ್ಟಲು ಸಹಕಾರಿಯಾಗಿದೆ.

    ಮೊಡವೆಗೆ ಮುಕ್ತಿ: ಬೇಸಿಗೆಯಲ್ಲಿ ಬೇವರುವುದರಿಂದ ಮೊಡವೆ ಸಮಸ್ಯೆ ಹೆಚ್ಚಾಗುವುದು ಸಹಜ. ಆದರೆ ನೀವು ದಿನಾ ಒಂದು ಲೋಟ ಕಬ್ಬಿನ ರಸ ಕುಡಿಯುವುದರಿಂದ ಮೊಡವೆ ಸಮಸ್ಯೆ ತಡೆಗಟ್ಟಬಹುದು. ಅಲ್ಲದೇ ಕಬ್ಬಿನ ರಸವನ್ನು ಅರಿಶಿಣದೊಂದಿಗೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷದ ಬಳಿಕ ತಣ್ಣೀರಿನಲ್ಲಿ ಮುಖ ತೊಳೆಯಿರಿ.

    ಕ್ಯಾನ್ಸರ್ ವಿರುದ್ಧ ಹೋರಾಡುತ್ತೆ: ಕಬ್ಬಿನ ರಸದಲ್ಲಿ ಕಂಡುಬರುವ ಫ್ಲೇವೊನ್‍ಗಳು ಕ್ಯಾನ್ಸರ್ ಕೋಶಗಳ ಉತ್ಪಾದನೆ ಹಾಗೂ ಹರಡುವಿಕೆಯನ್ನು ನಿಲ್ಲಿಸುವಲ್ಲಿ ಪರಿಣಾಮಕಾರಿಯಾಗಿದೆ ಎಂದು ಅಧ್ಯಯನಗಳು ತಿಳಿಸಿವೆ. ಇದನ್ನೂ ಓದಿ: ಖಿನ್ನತೆಯಿಂದ ಬಳಲುತ್ತಿದ್ದೀರಾ ಹಾಗಾದ್ರೆ ಈ ಆಹಾರ ಸೇವಿಸಿ

    ಬಾಯಿಯ ದುರ್ವಾಸನೆ ತಡೆ: ಬಾಯಿಯ ದುರ್ವಾಸನೆ ಪೋಷಕಾಂಶಗಳ ಕೊರತೆಯಿಂದಲೂ ಉಂಟಾಗುತ್ತದೆ. ಪ್ರತಿದಿನ ಕಬ್ಬಿನ ರಸ ಕುಡಿಯುವುದರಿಂದ ಈ ಸಮಸ್ಯೆಯನ್ನು ತಡೆಯಬಹುದು. ಇದನ್ನೂ ಓದಿ: PCOD ನಿವಾರಣೆಗೆ ಇಲ್ಲಿವೆ ಕೆಲವು ಮನೆ ಮದ್ದುಗಳು

  • ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಖ್ಯಾತ ಗಾಯಕಿ ಬಾಂಬೆ ಜಯಶ್ರೀ

    ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಖ್ಯಾತ ಗಾಯಕಿ ಬಾಂಬೆ ಜಯಶ್ರೀ

    ಖ್ಯಾತ ಗಾಯಕಿ ಬಾಂಬೆ ಜಯಶ್ರೀ (Bombay Jayashree) ಪ್ರಜ್ಞಾಹೀನ (Unconscious) ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬ್ರಿಟನ್ (Britain) ದೇಶದ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಅವರಿಗೆ ಮೆದುಳಿನಲ್ಲಿ ರಕ್ತಸ್ರಾವವಾಗಿದ್ದು, ಉಳಿದುಕೊಂಡಿದ್ದ ಹೋಟೆಲ್ ನಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದರು ಎಂದು ಹೇಳಲಾಗುತ್ತಿದೆ. ಕೂಡಲೇ ಅವರು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಆಪ್ತ ಮೂಲಗಳ ಪ್ರಕಾರ ಬಾಂಬೆ ಜಯಶ್ರೀ ಅವರು ಶಸ್ತ್ರ ಚಿಕಿತ್ಸೆಗೆ ಒಳಲಾಗಿದ್ದು, ಶಸ್ತ್ರ ಚಿಕಿತ್ಸೆ ಯಶಸ್ಸಿಯಾಗಿ ನೆರವೇರಿದೆ ಎಂದು ಹೇಳಲಾಗುತ್ತಿದೆ.  ನಿನ್ನೆ ರಾತ್ರಿಯೇ ಬಳಲಿದಂತೆ ಕಂಡು ಬಂದಿದ್ದ ಅವರು, ತೀವ್ರ ಕುತ್ತಿಗೆ ನೋವಿನ ಬಗ್ಗೆಯೂ ಮಾತನಾಡಿದ್ದರು ಎಂದು ಆಪ್ತರು ತಿಳಿಸಿದ್ದಾರೆ. ಇದನ್ನೂ ಓದಿ: ಮಗಳ ನಟನೆ ಬಗ್ಗೆ ತಂದೆ-ತಾಯಿಗೆ ಖುಷಿ ಇದ್ಯಾ? ಅಸಲಿ ವಿಚಾರ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ

    ಇಂದು ಬೆಳಗ್ಗೆ ಉಪಹಾರ ಮತ್ತು ಊಟಕ್ಕೆ ಜಯಶ್ರೀ ಅವರು ಬಾರದೇ ಹೋದಾಗ, ಹೋಟೆಲ್ ಕೋಣೆಗೆ ಹೋಗಿ ನೋಡಿದಾಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಚಿಕಿತ್ಸೆಯ ನಂತರ ಅವರನ್ನು ಚೆನ್ನೈಗೆ ಕರೆತರಲಾಗುತ್ತಿದೆ ಎನ್ನುವ ಮಾಹಿತಿ ಇದೆ.

    ಜಯಶ್ರೀ ಹೆಸರಾಂತ ಕರ್ನಾಟಕಿ ಗಾಯಕಿ. ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಿದ್ದಾರೆ. ಸಾಕಷ್ಟು ಕಾರ್ಯಕ್ರಮಗಳನ್ನೂ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗುವುದಕ್ಕಾಗಿಯೇ ಅವರು ಬ್ರಿಟನ್ ದೇಶದ ಪ್ರವಾಸದಲ್ಲಿ ಇದ್ದರು. ಪದ್ಮಶ್ರೀ ಸೇರಿದಂತೆ ಹಲವು ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬಂದಿವೆ.

  • ದೀರ್ಘಕಾಲದ ಅನಾರೋಗ್ಯ- ಆಸ್ಪತ್ರೆ ಬಿಲ್ ನೋಡಿ ಯುವಕ ಆತ್ಮಹತ್ಯೆ

    ದೀರ್ಘಕಾಲದ ಅನಾರೋಗ್ಯ- ಆಸ್ಪತ್ರೆ ಬಿಲ್ ನೋಡಿ ಯುವಕ ಆತ್ಮಹತ್ಯೆ

    ನವದೆಹಲಿ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೊಬ್ಬ ಆಸ್ಪತ್ರೆಯ ಬಿಲ್ ನೋಡಿ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ನವದೆಹಲಿ (NewDelhi)ಯಲ್ಲಿ ನಡೆದಿದೆ.

    ಮೃತ ಯುವಕನನ್ನು ನಿತೇಶ್ (24) ಎಂದು ಗುರುತಿಸಲಾಗಿದೆ. ಈತ ಖಾಸಗಿ ಹೋಟೆಲ್‍ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ನಿತೇಶ್ ತನ್ನ ಆರೋಗ್ಯಕ್ಕಾಗಿ ಸಾಕಷ್ಟು ಖರ್ಚು ಮಾಡಿದ್ದನು. ಇದಲ್ಲದೆ ನನ್ನ ಅನಾರೋಗ್ಯದಿಂದ ತನ್ನ ತಂದೆ-ತಾಯಿಗೆ ಆರ್ಥಿಕ ಹೊರೆಯಾಗುವುದು ಬೇಡ ಎಂದು ನಿತೀಶ್ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದಾನೆ.  ಇದನ್ನೂ ಓದಿ: ಮಗುವಿಗೆ ಹೊಡೆದ ಅಂತ ಶಿಕ್ಷಕನಿಗೆ ಅಟ್ಟಾಡಿಸಿ, ಹಿಗ್ಗಾಮುಗ್ಗ ಥಳಿಸಿದ ಪೋಷಕರು

    ಸಾಂದರ್ಭಿಕ ಚಿತ್ರ

    ದೆಹಲಿಯ ಆದರ್ಶ ನಗರದಲ್ಲಿರುವ ಖಾಸಗಿ ಹೋಟೆಲೊಂದರಲ್ಲಿ ನಿತೇಶ್ ಮೃತದೇಹ ಪ್ಲಾಸ್ಟಿಕ್‍ನಿಂದ ಮುಖ ಮುಚ್ಚಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಕ್ಸಿಜನ್ ಗ್ಯಾಸ್ ಬಳಸಿಕೊಂಡು ಆತ್ನಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ನಿತೇಶ್ ಮಂಗಳವಾರ ಹೋಟೆಲ್‍ನಲ್ಲಿ ಕೊಠಡಿಯೊಂದನ್ನು ಕಾಯ್ದಿರಿಸಿದ್ದಾನೆ. ಕೊಠಡಿಯೊಳಗೆ ಸಣ್ಣ ಬ್ಯಾಗೊಂದು ಪತ್ತೆಯಾಗಿದೆ. ಇದನ್ನು ಪರಿಶೀಲಿಸಿದಾಗ ಅದರಲ್ಲಿ ಸುಮಾರು ಆಸ್ಪತ್ರೆ ಬಿಲ್ ಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಅನಾರೋಗ್ಯದಿಂದಾಗಿ ಚಿಕಿತ್ಸೆಯ ಬಿಲ್ (Hospital Bill) ಹೆಚ್ಚಾಗುತ್ತಿರುವುದೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.

  • ಡಿನೋಟಿಫಿಕೇಶನ್‌ ಕೇಸ್‌ – ಅಧಿಕ ರಕ್ತದೊತ್ತಡ ಕಾರಣ ನೀಡಿ ಕೋರ್ಟ್‌ ವಿಚಾರಣೆಗೆ ಎಚ್‌ಡಿಕೆ ಗೈರು

    ಡಿನೋಟಿಫಿಕೇಶನ್‌ ಕೇಸ್‌ – ಅಧಿಕ ರಕ್ತದೊತ್ತಡ ಕಾರಣ ನೀಡಿ ಕೋರ್ಟ್‌ ವಿಚಾರಣೆಗೆ ಎಚ್‌ಡಿಕೆ ಗೈರು

    ಬೆಂಗಳೂರು: ಹಲಗೇವಡೇರಹಳ್ಳಿ ನೋಟಿಫಿಕೇಶನ್ ಪ್ರಕರಣದ (Halagevaderahalli Denotification Case) ವಿಚಾರಣೆಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಮತ್ತೊಮ್ಮೆ ಗೈರಾಗಿದ್ದಾರೆ.

    ಅಧಿಕ ರಕ್ತದೊತ್ತಡ ಕಾರಣ ನೀಡಿ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ (Special Courts for MP/MLA) ವಿಚಾರಣೆಯನ್ನು ಏಪ್ರಿಲ್ 18ಕ್ಕೆ ಮುಂದೂಡಿದೆ.

    ಫೆ.16ರ ವಿಚಾರಣೆಗೆ ಕುಮಾರಸ್ವಾಮಿ ಗೈರಾಗಿದ್ದರು. ಈ ಸಂದರ್ಭದಲ್ಲಿ ಕೋರ್ಟ್‌ ವಿಚಾರಣೆಯನ್ನು ಮಾರ್ಚ್‌ 21ಕ್ಕೆ ಮುಂದೂಡಿ ಕಡ್ಡಾಯವಾಗಿ ಹಾಜರಾಗಬೇಕೆಂದು ಸೂಚಿಸಿತ್ತು. ಹಲವು ಬಾರಿ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಖುದ್ದು ಹಾಜರಾಗುವಂತೆ ಸೂಚಿಸಿತ್ತು.  ಇದನ್ನೂ ಓದಿ: ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ : ನಟನ ನಿವಾಸಕ್ಕೆ ಫುಲ್ ಸೆಕ್ಯೂರಿಟಿ

    court order law

    ಕುಮಾರಸ್ವಾಮಿ ಸಿಎಂ ಆಗಿದ್ದಾಗ 2006 ರಲ್ಲಿ ಕಾನೂನು ಬಾಹಿರವಾಗಿ ಬನಶಂಕರಿ 5ನೇ ಹಂತದ ಹಲಗೆವಡೇರಹಳ್ಳಿ ಬಳಿ ಸರ್ವೇ ನಂಬರ್ 128, 130 ರಲ್ಲಿ 2.24 ಎಕರೆ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಿದ್ದರು. ಈ ಡಿನೋಟಿಫಿಕೇಶನ್‌ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಚಾಮರಾಜನಗರ ಮೂಲದ ರೈತ ಮಹದೇವಸ್ವಾಮಿ ಲೋಕಾಯುಕ್ತದಲ್ಲಿ 2012ರಲ್ಲಿ ದೂರು ನೀಡಿದ್ದರು. ಈ ಪ್ರಕರಣದ ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು 2018ರಲ್ಲಿ ಬಿ ರಿಪೋರ್ಟ್‌ ಸಲ್ಲಿಸಿದ್ದರು. ಇದನ್ನೂ ಓದಿ: ಅಮೆಜಾನ್‌ನಲ್ಲಿ 2ನೇ ಸುತ್ತಿನ ವಜಾ ಪ್ರಕ್ರಿಯೆ ಆರಂಭ – 3 ತಿಂಗಳೊಳಗೆ 27 ಸಾವಿರ ಮಂದಿ ಮನೆಗೆ

    ಬಿ ರಿಪೋರ್ಟ್ ಪ್ರಶ್ನಿಸಿ ಮಹದೇವಸ್ವಾಮಿ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯಕ್ಕೆ ದೂರು ನೀಡಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಬಿ ರಿಪೋರ್ಟ್ ವಜಾಗೊಳಿಸಿ ವಿಚಾರಣೆ ಕೈಗೆತ್ತಿಕೊಂಡು ವಿಚಾರಣೆಗೆ ಖುದ್ದು ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿತ್ತು.

  • ಸ್ವಲ್ಪ ನಕ್ಕುಬಿಡಿ – ಮಾ.19 ರಾಷ್ಟ್ರೀಯ ನಗುವಿನ ದಿನ; ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ..?

    ಸ್ವಲ್ಪ ನಕ್ಕುಬಿಡಿ – ಮಾ.19 ರಾಷ್ಟ್ರೀಯ ನಗುವಿನ ದಿನ; ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ..?

    ನಕ್ಕರೆ ಅದೇ ಸ್ವರ್ಗ.. ಅನ್ನೋದು ಸಹಜ. ಅದೆಷ್ಟೇ ಬೇಜಾರಿದ್ದರೂ ಒಂದು ಸಣ್ಣನೆಯ ನಗು ಎಲ್ಲವನ್ನೂ ದೂರಮಾಡುತ್ತದೆ. ಅದಕ್ಕಾಗಿಯೇ ʻನಗು ನಗುತಾ ನಲಿ ನಲಿ ಏನೇ ಆಗಲಿʼಎಂದು ಹೇಳಿರುವುದು. ನಗುವಿನಲ್ಲಿ ಅಷ್ಟೊಂದು ಶಕ್ತಿಯಿದೆ. ನಗುವುದು ಒಂದು ಕಲೆಯಾದರೆ, ನಗಿಸುವುದು ಇನ್ನೊಂದು ಕಲೆ. ಈ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಇತ್ತೀಚಿನ ದಿನಗಳಲ್ಲಂತೂ ತಾಂತ್ರಿಕ ಬದುಕಿಗೆ ಹೊಂದಿಕೊಂಡಿರುವ ಜನ ನಗುವನ್ನೇ ಮರೆತುಬಿಟ್ಟಿದ್ದಾರೆ. ಆ ನಡುವೆಯೂ ಮಾತುಗಾರ ಮಲ್ಲರು ಆಗಾಗ್ಗೆ ಹಾಸ್ಯ ಮಾಡಿ ಎಲ್ಲರನ್ನೂ ನಕ್ಕು ನಲಿಯುವಂತೆ ಮಾಡುತ್ತಾರೆ.

    ಈ ನಗುವಿನ ಮಹತ್ವ ಗಮನಿಸಿಯೇ ಕೆಲವರು ನಗುವಿಗಾಗಿಯೇ ಒಂದು ದಿನವನ್ನ ಮೀಸಲಾಗಿಟ್ಟಿದ್ದಾರೆ. ಪ್ರತಿವರ್ಷ ಮೇ ತಿಂಗಳ ಮೊದಲನೇ ಭಾನುವಾರವನ್ನ ʻವಿಶ್ವ ನಗು ದಿನʼವನ್ನಾಗಿ ಆಚರಿಸಿದರೆ, ಮಾರ್ಚ್‌ 19ರ ದಿನವನ್ನು ರಾಷ್ಟ್ರೀಯ ನಗುವಿನ ದಿನವನ್ನಾಗಿ (National Laughter Day) ಆಚರಿಸಲಾಗುತ್ತದೆ. ಮೊದಲ ಬಾರಿಗೆ ವಿಶ್ವ ನಗು ದಿನವನ್ನು 1998, ಜನವರಿ 10 ರಂದು ಮುಂಬೈಯಲ್ಲಿ ಆಚರಿಸಲಾಯಿತು.

    ನಗುವಿನ ದೀರ್ಘಾವಧಿ ಪ್ರಯೋಜನಗಳೇನು?

    ಮಾನಸಿಕ ಸಮಸ್ಯೆ ದೂರ:
    ಕೆಲವೊಮ್ಮೆ, ದೀರ್ಘಕಾಲದ ಆರೋಗ್ಯ (Health) ಸಮಸ್ಯೆಗಳು ಅಥವಾ ಮಾನಸಿಕ ಒತ್ತಡದಿಂದಾಗಿ ಜನರು ಖಿನ್ನತೆ ಮತ್ತು ಆತಂಕ ಅನುಭವಿಸುತ್ತಾರೆ. ಮುಖದ ಮೇಲಿನ ಸಣ್ಣ ನಗು ಈ ಮಾನಸಿಕ ಸಮಸ್ಯೆಗಳನ್ನ ದೂರ ಮಾಡುತ್ತದೆ. ಇದನ್ನೂ ಓದಿ: ಖಿನ್ನತೆಯಿಂದ ಬಳಲುತ್ತಿದ್ದೀರಾ ಹಾಗಾದ್ರೆ ಈ ಆಹಾರ ಸೇವಿಸಿ

    ನೋವು ನಿವಾರಕ ನಗು:
    ದೀರ್ಘಾವಧಿಯಲ್ಲಿ, ನೀವು ಅವಕಾಶ ಸಿಕ್ಕ ತಕ್ಷಣ ನಗುವ ವ್ಯಕ್ತಿಯಾಗಿದ್ದರೆ, ನಗುವು ನೋವು ನಿವಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಇದರಿಂದ ದೈಹಿಕ ಸಾಮರ್ಥ್ಯ ಕುಗ್ಗುವುದು ಕಡಿಮೆಯಾಗುತ್ತದೆ. ಜೊತೆಗೆ ಅತಿಯಾದ ಆಲೋಚನೆಗಳಿಂದ ತಲೆಕೂದಲು ಉದುರುವಿಕೆಯೂ ಕಡಿಮೆಯಾಗುತ್ತದೆ. ಇದನ್ನೂ ಓದಿ: ಲೈಂಗಿಕ ಆಸಕ್ತಿ ಹೆಚ್ಚಾಗ್ತಿದೆಯೇ? – ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ವಿಷಯಗಳಿವು..

    ಸಕಾರಾತ್ಮಕ ಆಲೋಚನೆ:
    ನಗುವಿನಿಂದ ದೇಹದಲ್ಲಿ ನ್ಯೂರೋಪೆಪ್ಟೈಡ್‌ (ರೋಗ ನಿರೋಧಕ ಅಂಶ) ಬಿಡುಗಡೆಯಾಗಿ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಜೊತೆಗೆ ಸಕಾರಾತ್ಮಕ ಆಲೋಚನೆಗಳನ್ನೂ ಹೆಚ್ಚಿಸಲು ಸಹಾಯ ಮಾಡುತ್ತದೆ.

    ತಕ್ಷಣದ ಪ್ರಯೋಜನಗಳು:
    ನಗು ನಿಮ್ಮ ದೇಹದಲ್ಲಿನ ಸ್ನಾಯುಗಳನ್ನು ಉಲ್ಲಾಸಗೊಳಿಸಿ, ಉದ್ವೇಗ ಹೆಚ್ಚಾಗುವುದನ್ನು ತಡೆಯುತ್ತದೆ. ದೈಹಿಕ ಒತ್ತಡ ಕಡಿಮೆ ಮಾಡಿ, ರಕ್ತ ಪರಿಚಲನೆ ಉತ್ತೇಜಿಸುತ್ತದೆ. ಜೊತೆಗೆ ಆಮ್ಲಜನಕ ಹೀರಿಕೊಳ್ಳಲು ಸಹಾಯ ಮಾಡುತ್ತದೆ. 

  • ಖಿನ್ನತೆಯಿಂದ ಬಳಲುತ್ತಿದ್ದೀರಾ ಹಾಗಾದ್ರೆ ಈ ಆಹಾರ ಸೇವಿಸಿ

    ಖಿನ್ನತೆಯಿಂದ ಬಳಲುತ್ತಿದ್ದೀರಾ ಹಾಗಾದ್ರೆ ಈ ಆಹಾರ ಸೇವಿಸಿ

    ತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿ, ಕೆಲಸದಿಂದಾಗಿ ಹೆಚ್ಚಾಗಿ ಯುವಜನರ ಮೇಲೂ ಹೆಚ್ಚು ಒತ್ತಡ ಬೀರುತ್ತಿದೆ. ಒತ್ತಡದಿಂದಾಗಿ ಅನೇಕ ಜನರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದರಿಂದ ಹೊರಬರಲು ಅನೇಕ ದಿನಗಳೇ ಬೇಕಾಗುತ್ತದೆ. ಈ ಮಾನಸಿಕ ಖಿನ್ನತೆಯಿಂದಾಗಿ ಜನರು ತಮ್ಮ ಸಂತೋಷವನ್ನೇ ಮರೆಯುತ್ತಿದ್ದಾರೆ. ಮಾ.19 ಅಂತಾರಾಷ್ಟ್ರೀಯ ಸಂತೋಷದ ದಿನ. ಆಹಾರ (Food) ಪದ್ಧತಿ ಮೂಲಕ ನಿಮ್ಮನ್ನು ನೀವು ಸಂತೋಷವಾಗಿಡಲು ಒಂದಿಷ್ಟು ಮಾಹಿತಿ ಇಲ್ಲಿದೆ.

    ಮೀನು ತಿನ್ನಿ: ಆಲ್ಬಕೋರ್ ಹಾಗೂ ಸಾಲ್ಮನ್‍ಗಳಂತಹ ಮೀನುಗಳಲ್ಲಿ (Fish) ಒಮೆಗಾ – 3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಇದನ್ನು ತಿನ್ನುವುದರಿಂದ ನಿಮ್ಮ ಖಿನ್ನತೆಯ ಮಟ್ಟ ಕಡಿಮೆಗೊಳಿಸುತ್ತದೆ. ಅಷ್ಟೇ ಅಲ್ಲದೇ ದಿನವಿಡೀ ಸಂತೋಷದಿಂದ ಕಳೆಯಹುದು. ಈ ಆಮ್ಲಗಳು ಸೆಲ್ ಸಗ್ನಲಿಂಗ್ ಮತ್ತು ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗಿದೆ.

    ಚಾಕಲೇಟ್‍ಗಳು: ಚಾಕಲೇಟಿನಲ್ಲಿ (Chocolate) ಸಕ್ಕರೆಯ ಅಂಶವಿರುವುದರಿಂದ ನಿಮ್ಮ ಮನಸ್ಸನ್ನು ಖುಷಿಯಿಂದ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಚಾಕೊಲೇಟ್ ಅನ್ನು ಸೇವಿಸಿದಾಗ, ಇದು ಕ್ಯಾನಬಿನಾಯ್ಡ್‍ಗಳಂತೆಯೇ ಇರುವಂತಹ ಉತ್ತಮ ಸಂಯೋಜನೆಗಳ ಕ್ಯಾಸ್ಕೇಡ್ ಅನ್ನು ಬಿಡುಗಡೆ ಮಾಡುತ್ತದೆ. ಇದರಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗುವುದನ್ನು ತಪ್ಪಿಸುತ್ತದೆ. ಚಾಕಲೇಟ್ ಅನ್ನು ಇತಿ ಮಿತಿಯಾಗಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು.

    ಮೊಸರು, ಯೋಗಾರ್ಟ್ ಸೇವಿಸಿ: ಮೊಸರು, ಯೋಗಾರ್ಟ್‍ನಂತಹ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ಮನಸ್ಸನ್ನು ಉಲ್ಲಾಸವಾಗಿರಲು ಮಾತ್ರವಲ್ಲದೇ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಅವುಗಳಲ್ಲಿರುವ ಪ್ರೋಬಯಾಟಿಕ್‍ಗಳಿಂದ ಕರುಳಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಜೊತೆಗೆ ಸೆರೊಟೋನಿನ್ ಎಂಬ ಭಾವನೆಯ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದನ್ನೂ ಓದಿ: ಲೈಂಗಿಕ ಆಸಕ್ತಿ ಹೆಚ್ಚಾಗ್ತಿದೆಯೇ? – ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ವಿಷಯಗಳಿವು..

    ಬಾಳೆಹಣ್ಣು: ಬಾಳೆಹಣ್ಣುಗಳು (Banana) ವಿಟಮಿನ್ ಬಿ 6 ಅನ್ನು ಹೊಂದಿರುತ್ತವೆ. ಇದು ಡೋಪಮೈನ್ ಮತ್ತು ಸಿರೊಟೋನಿನ್ ಎಂಬ ಹಾರ್ಮೋನುಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಬಾಳೆಹಣ್ಣುಗಳು ನೈಸರ್ಗಿಕ ಸಕ್ಕರೆ ಮತ್ತು ಪ್ರಿಬಯಾಟಿಕ್ ಫೈಬರ್‍ನ ಉತ್ತಮ ಮೂಲವಾಗಿದೆ. ಇದು ಆರೋಗ್ಯಕರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುತ್ತದೆ ಮತ್ತು ನಿಮ್ಮ ಮನಸ್ಥಿತಿಯನ್ನು ಸ್ಥಿರವಾಗಿರಿಸುತ್ತದೆ. ಇದನ್ನೂ ಓದಿ: PCOD ನಿವಾರಣೆಗೆ ಇಲ್ಲಿವೆ ಕೆಲವು ಮನೆ ಮದ್ದುಗಳು

  • 48 ಗಂಟೆಯ ಒಳಗಡೆ ಕೆಲಸಕ್ಕೆ ಹಾಜರಾಗಿ, ಇಲ್ಲದಿದ್ದರೆ ಕಾನೂನು ಕ್ರಮ: NHM ಸಿಬ್ಬಂದಿಗೆ ಡೆಡ್‌ಲೈನ್‌

    48 ಗಂಟೆಯ ಒಳಗಡೆ ಕೆಲಸಕ್ಕೆ ಹಾಜರಾಗಿ, ಇಲ್ಲದಿದ್ದರೆ ಕಾನೂನು ಕ್ರಮ: NHM ಸಿಬ್ಬಂದಿಗೆ ಡೆಡ್‌ಲೈನ್‌

    ಬೆಂಗಳೂರು: ಮುಷ್ಕರ ನಿರತ ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಸಿಬ್ಬಂದಿಗೆ ಸರ್ಕಾರ ಡೆಡ್‌ಲೈನ್‌ (Deadline) ನೀಡಿದ್ದು 48 ಗಂಟೆಗಳ‌ ಒಳಗೆ ಕೆಲಸಕ್ಕೆ ಹಾಜರಾಗುವಂತೆ ಆರೋಗ್ಯ ಇಲಾಖೆ (Health Ministry) ಖಡಕ್‌ ಸೂಚನೆ ನೀಡಿದೆ.

    ಎನ್‌ಎಚ್‌ಎಂ ನಿರ್ದೇಶಕರು ನೋಟಿಸ್‌ ಕಳುಹಿಸಿದ್ದು, 48 ಗಂಟೆಯ ಒಳಗಡೆ ಕರ್ತವ್ಯಕ್ಕೆ ಹಾಜರಾಗಬೇಕೆಂದು ಸೂಚಿಸಲಾಗಿದೆ. ಒಂದು ವೇಳೆ ಹಾಜರಾಗದೇ ಇದ್ದಲ್ಲಿ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಲಾಗಿದೆ.

    ಆರೋಗ್ಯ ಇಲಾಖೆ ತುರ್ತುಸೇವೆ ನೀಡುವ ಇಲಾಖೆಯಾಗಿದ್ದು ಮುಷ್ಕರದಿಂದ ರೋಗಿಗಳಿಗೆ ತೊಂದರೆ ಆಗುತ್ತಿದೆ. ಈ ಹಿನ್ನಲೆ ಎನ್‌ಹೆಚ್‌ಎಂ ಸಿಬ್ಬಂದಿಗೆ ನೋಟಿಸ್‌ ಜಾರಿಯಾಗಿದೆ. ಇದನ್ನೂ ಓದಿ: ಆಲೂಗಡ್ಡೆ ಕೋಲ್ಡ್ ಸ್ಟೋರೇಜ್‍ನ ಮೇಲ್ಛಾವಣಿ ಕುಸಿತ – 8 ಮಂದಿ ದುರ್ಮರಣ

    ಕಳೆದ ಒಂದು ತಿಂಗಳಿನಿಂದ ಕರ್ತವ್ಯಕ್ಕೆ ಹಾಜರಾಗದೇ ವೇತನ ಹೆಚ್ಚಳ ಮತ್ತು ಹುದ್ದೆ ಖಾಯಂಗೊಳಿಸುವಂತೆ ಆಗ್ರಹಿಸಿ ಎನ್‌ಹೆಚ್‌ಎಂ ಸಿಬ್ಬಂದಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ನೋಟಿಸ್‌ನಲ್ಲಿ ಏನಿದೆ?
    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮವು 2005 ರಿಂದ ಜಾರಿಯಲ್ಲಿದ್ದು ಇದು ಕೇಂದ್ರ ಸರ್ಕಾರದ ಪ್ರಾಯೋಜಿತ ಕಾರ್ಯಕ್ರವಾಗಿದೆ. ಇದು ಮಿಷನ್‌ ಮೋಡ್‌ ಪ್ರಾಜೆಕ್ಟ್‌ ಆಗಿರುವುದರಿಂದ ನಿಗದಿಪಡಿಸಿದ ಉದ್ದೇಶ ಹಾಗೂ ಗುರಿಗಳು ಸಫಲವಾದ ನಂತರ ಕಾರ್ಯಕ್ರಮ ಮುಕ್ತಾಯಗೊಳ್ಳುವುದರ ಬಗ್ಗೆ ಕೇಂದ್ರ ಸರ್ಕಾರವು ತಿರ್ಮಾನಿಸುತ್ತದೆ.

    ಈ ಯೋಜನೆಯಲ್ಲಿ ಸುಮಾರು 53 ಕಾರ್ಯಕ್ರಮಗಳು ರಾಜ್ಯದಲ್ಲಿ ವಿವಿಧ ಹಂತದಲ್ಲಿ ಜಾರಿಯಲ್ಲಿರುತ್ತವೆ. ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಲ್ಲಿ ಒಳಗುತ್ತಿಗೆ ಆಧಾರದ ಮೇಲೆ 26,943 ಮತ್ತು 3,631 ಹೊರಗುತ್ತಿಗೆ ಒಟ್ಟು 30,574 ಕ್ಕೂ ಹೆಚ್ಚು ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನೌಕರರ ಪ್ರಮುಖ ಬೇಡಿಕೆಯಂದ ಸಂಬಳವನ್ನು ಏರಿಸಲಾಗಿದ್ದು, ಮಾರ್ಚ್‌ 4 ರಂದು ಶೇ.15 ರಷ್ಟು ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಉಳಿದ ಬೇಡಿಕೆಗಳ ಈಡೇರಿಕೆ ಸಂಬಂಧ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು ಆಶ್ವಾಸನೆ ನೀಡಿದ್ದಾರೆ.

  • PCOD ನಿವಾರಣೆಗೆ ಇಲ್ಲಿವೆ ಕೆಲವು ಮನೆ ಮದ್ದುಗಳು

    PCOD ನಿವಾರಣೆಗೆ ಇಲ್ಲಿವೆ ಕೆಲವು ಮನೆ ಮದ್ದುಗಳು

    ತ್ತೀಚಿನ ದಿನಗಳಲ್ಲಿ ಅನೇಕ ಮಹಿಳೆಯರ ಜೀವನ ಶೈಲಿಯಿಂದಾಗಿ ಪಿಸಿಓಡಿ ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ಮನೆ, ಕೆಲಸದ ಒತ್ತಡದಿಂದಾಗಿ ಮಹಿಳೆಯರಲ್ಲಿ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOD) ಬರುತ್ತಿದೆ. ಶೇಕಡಾ 25 ರಿಂದ 30ರಷ್ಟು ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಧಿಕ ತೂಕ, ಕೂದಲು ಉದುರುವಿಕೆ, ಮೊಡವೆ, ಪುರುಷರಿಗಿರುವಂತೆ ರೋಮಗಳ ಬೆಳವಣಿಗೆ ಮೊದಲಾದ ಸಮಸ್ಯೆಗಳನ್ನು ಪಿಸಿಓಡಿ ಸಮಸ್ಯೆಗೊಳಗಾದವರಲ್ಲಿ ಕಾಣಬಹುದು. ಅಷ್ಟೇ ಅಲ್ಲದೇ ಬಂಜೆತನಕ್ಕೂ ಕಾರಣವಾಗಬಲ್ಲ ಈ ಸಮಸ್ಯೆಯಿಂದ ಚಿಂತೆ ಮತ್ತು ಖಿನ್ನತೆಯಂತಹ ಬೇರೆ ಬೇರೆ ತೊಂದರೆಗಳು ಕಾಣಿಸಿಕೊಳ್ಳಬಹುದು.

    ಈ ಸಮಸ್ಯೆಯಿಂದ ಬಳಲುತ್ತಿರುವ ಪ್ರತಿಯೊಂದು ಮಹಿಳೆಯು (Woman) ಸತತವಾಗಿ ವ್ಯಾಯಾಮ ಮಾಡುವುದು ಹಾಗೂ ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ನಡೆಸಬೇಕು. ಈ ಪಿಸಿಓಡಿ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಲು ಕೆಲವು ಪ್ರೋಟೀನ್ ಹಾಗೂ ಫೈಬರ್ ಪ್ರಮಾಣ ಹೊಂದಿರುವ ಜ್ಯೂಸ್‍ಗಳು ಇಲ್ಲಿವೆ.

    ಮೆಂತ್ಯ, ದಾಲ್ಚಿನ್ನಿ ಮತ್ತು ಕಪ್ಪು ಒಣದ್ರಾಕ್ಷಿ ಜ್ಯೂಸ್: ಮೆಂತ್ಯ ಸಾಮಾನ್ಯವಾಗಿ ಋತುಚಕ್ರದ ಸಮಯದಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದರಿಂದಾಗಿ ಋತುಚಕ್ರದ ಸಮಯದಲ್ಲಿ ಉಂಟಾಗುವ ಹೊಟ್ಟೆ ನೋವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ದಾಲ್ಚಿನಿ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೂ ಕಪ್ಪು ಒಣ ದ್ರಾಕ್ಷಿಯು ಪಿಸಿಓಡಿ ಚಿಕಿತ್ಸೆಯಲ್ಲಿ ಸಹಾಯ ಮಾಡುವ ಹಾಗೂ ರಕ್ತ ಶುದ್ಧೀಕರಣ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಇದರಿಂದಾಗಿ ಒಣದ್ರಾಕ್ಷಿ, ದಾಲ್ಚಿನ್ನಿ ಹಾಗೂ ಮೆಂತ್ಯ ಬೀಜವನ್ನು ಮಿಶ್ರಣ ಮಾಡಿ 8 ದಿನಗಳವರೆಗೆ ಕುಡಿದರೆ ಪಿಸಿಒಡಿ ಕಡಿಮೆ ಮಾಡಿಕೊಳ್ಳಬಹುದು.

    ಅಲೋವರಾ (ಲೋಳೆರಸ): ಅಲೋವರಾ (Aloe Vera) ಜೀರ್ಣಾಂಗ ವ್ಯವಸ್ಥೆಗೆ ಸಹಾಯ ಮಾಡುತ್ತದೆ. ಅದರಲ್ಲೂ ಹೆಚ್ಚಾಗಿ ಪಿಸಿಓಡಿಯಿಂದ ಬಳಲುತ್ತಿರುವ ಮಹಿಳೆಯರು ಬೆಳಗ್ಗೆ ಸಮಯದಲ್ಲಿ ಅಲೋವರವನ್ನು ಉಪ್ಪು, ಜೇನುತುಪ್ಪ ಹಾಗೂ ನೀರಿನೊಂದಿಗೆ ಮಿಶ್ರಣ ಮಾಡಿ ಜ್ಯೂಸ್ ಮಾಡಿ ಕುಡಿಯಿರಿ.

    ಆಪಲ್ ಸೈಡರ್ ವಿನೆಗರ್: ಈ ಪೌಷ್ಟಿಕ ಜ್ಯೂಸ್ ದೇಹದ ಸಮತಲೋನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೇ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜೊತೆಗೆ ಪಿಸಿಓಡಿ ಸಮಸ್ಯೆಯನ್ನು ನಿವಾರಿಸುತ್ತದೆ. ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ತ್ವಚೆ ರಕ್ಷಣೆಗೆ ಹೀಗೆ ಮಾಡಿ

    ಬೀಟ್ರೂಟ್ ಕ್ಯಾರೆಟ್ ಜ್ಯೂಸ್: ಬೀಟ್ರೂಟ್ ಹಾಗೂ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ರಕ್ತಹೀನತೆಯಿಂದ ಚೇತರಿಸಿಕೊಳ್ಳಬಹುದು. ಋತುಚಕ್ರವನ್ನು ಕ್ರಮಬದ್ಧಗೊಳಿಸಲು ಸಹಾಯ ಮಾಡುವ ಮೂಲಕ ರಕ್ತವನ್ನು ಶುದ್ಧಿಗೊಳಿಸುತ್ತದೆ.

    ಪುದಿನಾ ಟೀ: ಪುದಿನಾ ಟೀ ಮಹಿಳೆಯರಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಪಿಸಿಓಡಿ ಹೊಂದಿರುವ ಮಹಿಳೆಯರು ಹೆಚ್ಚು ಟೆಸ್ಟೋಸ್ಟೆರಾನ್ ಮಟ್ಟವನ್ನು ಹೊಂದಿದೆ. ಇದರಿಂದಾಗಿ ಕೂದಲು ಉದುರುವಿಕೆಯು ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಪುದಿನಾ ಟೀ ಪಿಸಿಓಡಿ ಕಡಿಮೆ ಮಾಡುವ ಜೊತೆಗೆ ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ: ತೂಕ ಇಳಿಸಲು ತಲೆಕೆಡಿಸಿಕೊಳ್ಳಬೇಡಿ ತಿನ್ನಿ ಕಲ್ಲಂಗಡಿ ಹಣ್ಣು