Tag: health

  • ಮಲೆನಾಡನ್ನು ಬಿಟ್ಟು ಬಿಡದೆ ಕಾಡುತ್ತಿರುವ ಕೆಎಫ್‌ಡಿ – ಪ್ರಕೃತಿಯ ಮಡಿಲ ಮಕ್ಕಳ ಆತಂಕ ತಪ್ಪುವುದೆಂದು?

    ಮಲೆನಾಡನ್ನು ಬಿಟ್ಟು ಬಿಡದೆ ಕಾಡುತ್ತಿರುವ ಕೆಎಫ್‌ಡಿ – ಪ್ರಕೃತಿಯ ಮಡಿಲ ಮಕ್ಕಳ ಆತಂಕ ತಪ್ಪುವುದೆಂದು?

    ಲೆನಾಡಿಗರನ್ನು ಬಿಟ್ಟು ಬಿಡದೇ ಕಾಡುತ್ತಿರುವ ಕೆಎಫ್‌ಡಿ (Kyasanur Forest Diseas) ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಅದೇ ರೀತಿ ಈ ವರ್ಷವೂ ಮಲೆನಾಡಿನ ಜಿಲ್ಲೆಗಳಾದ ಉತ್ತರಕನ್ನಡ, ಶಿವಮೊಗ್ಗ (Shivamogga) ಹಾಗೂ ಚಿಕ್ಕಮಗಳೂರು ಭಾಗಗಳಲ್ಲಿ ಕೆಎಫ್‌ಡಿ ಹೆಚ್ಚಾಗುತ್ತಿದೆ. ಇದೀಗ ಕೆಎಫ್‌ಡಿ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದ್ದು, ಮಲೆನಾಡಿಗರನ್ನು ಮತ್ತೆ ಆತಂಕಕ್ಕೆ ಒಳಪಡಿಸಿದೆ.

    ಕೇವಲ ಆರೋಗ್ಯದ ಮೇಲಷ್ಟೇ ಅಲ್ಲದೇ, ಮಲೆನಾಡಿಗರ ಆರ್ಥಿಕತೆ, ಕೃಷಿ ಸೇರಿದಂತೆ ದಿನನಿತ್ಯದ ಕೆಲಸಗಳ ಮೇಲೆ ಕೆಎಫ್‌ಡಿ ತನ್ನ ಕರಿ ನೆರಳನ್ನು ಚೆಲ್ಲಿದೆ. ಈ ಮೂಲಕ ನೆಮ್ಮದಿಯ ಮಲೆನಾಡಿಗೆ ಆತಂಕದ ಅಲೆಯೊಂದ ಬಂದು ಅಪ್ಪಳಿಸಿದಂತಾಗಿದೆ. ಈ ವರ್ಷ ಜನವರಿಯಿಂದ ಇಲ್ಲಿಯವರೆಗೂ ಶಿವಮೊಗ್ಗದಲ್ಲಿ 39, ಉತ್ತರ ಕನ್ನಡದಲ್ಲಿ 43, ಚಿಕ್ಕಮಗಳೂರಿನಲ್ಲಿ 36 ಹಾಗೂ ಉಡುಪಿಯಲ್ಲಿ 1 ಕೆಎಫ್‌ಡಿ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. 2019ರ ಬಳಿಕ ಇಳಿಮುಖವಾಗಿದ್ದ ಕೆಎಫ್‌ಡಿ ಸೋಂಕು ಈ ಬಾರಿ ಹಠಾತ್‌ ಏರಿಕೆ ಕಂಡಿದೆ. ಉಡುಪಿ ಜಿಲ್ಲೆಯಲ್ಲಿ ನಾಲ್ಕು ವರ್ಷಗಳ ಬಳಿಕ ಈ ಕಾಯಿಲೆ ಕಾಣಿಸಿಕೊಂಡಿದೆ. ಈ ಹಿಂದೆ 2019ರಲ್ಲಿ ಸಿದ್ದಾಪುರ ಹಾಗೂ ಬೈಂದೂರಲ್ಲಿ ಇಬ್ಬರಿಗೆ ಕಾಣಿಸಿಕೊಂಡಿತ್ತು.

    ರಾಜ್ಯದಲ್ಲಿ 120 ಸಕ್ರಿಯ ಮಂಗನ ಕಾಯಿಲೆ ಪ್ರಕರಣಗಳಿದ್ದು, ಈ ಬಾರಿ ಇದುವರೆಗೆ ನಾಲ್ವರು ಸಾವಿಗೀಡಾಗಿದ್ದಾರೆ.  ಶಿವಮೊಗ್ಗ ಹಾಗೂ ಚಿಕ್ಕಮಗಳೂರಲ್ಲಿ ತಲಾ ಒಂದು ಹಾಗೂ ಉತ್ತರ ಕನ್ನಡದಲ್ಲಿ ಇಬ್ಬರು ರೋಗದಿಂದ ಮೃತಪಟ್ಟಿದ್ದಾರೆ.

    ಏನಿದು ಕೆಎಫ್‌ಡಿ?: ಮಂಗನ ಜ್ವರವನ್ನು ಕ್ಯಾಸನೂರು ಫಾರೆಸ್ಟ್‌ ಡಿಸೀಸಸ್‌ (ಕೆಎಫ್‌ಡಿ) ಎನ್ನಲಾಗುತ್ತದೆ. ಈ ರೋಗವು  ಕೆಎಫ್‌ಡಿ ಸೋಂಕಿತ ಉಣ್ಣೆಗಳ ಕಡಿತದಿಂದ ಮಂಗಗಳಿಗೆ, ವಿಶೇಷವಾಗಿ ಲಾಂಗರ್‌ಗಳು ಮತ್ತು ಬಾನೆಟ್ ಮಕಾಕ್‌ಗಳಿಗೆ ಅರಣ್ಯ ಪ್ರದೇಶಗಳಲ್ಲಿ ಹರಡುತ್ತದೆ. ಸೋಂಕಿತ ಮಂಗಗಳು ಅರಣ್ಯ ಪ್ರದೇಶಗಳ ಮೂಲಕ ಚಲಿಸಿದಾಗ ಅವು ವೈರಸ್ ಇತರ ಉಣ್ಣೆಗಳಿಗೆ ಸಹ ಹರಡುತ್ತವೆ.

    ಈ ಸೋಂಕಿತ ಉಣ್ಣೆ ಕಚ್ಚುವುದರಿಂದ ಹಾಗೂ ಸೋಂಕಿತ ಪ್ರಾಣಿಗಳ ಸಂಪರ್ಕದಿಂದ ಮನುಷ್ಯನಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಕಲುಷಿತ ವಸ್ತುಗಳನ್ನು ಸ್ಪರ್ಶಿಸುವ ಮೂಲಕ ಅಥವಾ ಸೋಂಕಿತ ಪ್ರಾಣಿಗಳಿಂದ ಪಾಶ್ಚರೀಕರಿಸದ ಹಾಲನ್ನು ಸೇವಿಸುವ ಮೂಲಕವೂ ಸೋಂಕು ಸಂಭವಿಸಬಹುದು. ಆದರೆ ಮನುಷ್ಯರಿಂದ ಮನುಷ್ಯರಿಗೆ ರೋಗ ಹರಡುವುದು ಅಪರೂಪ.

    ಮಂಗನ ಕಾಯಿಲೆ ಲಕ್ಷಣಗಳು: ಚಳಿ ಜ್ವರ, ತಲೆನೋವು, ಸ್ನಾಯು ಸೆಳತ, ವಾಂತಿ ಮತ್ತು ರಕ್ತಸ್ರಾವ, ತೀವ್ರತರವಾದ ಪ್ರಕರಣಗಳಲ್ಲಿ, ನರಮಂಡಲದ ಸಮಸ್ಯೆಗಳು ಎದುರಾಗುತ್ತದೆ. ಈ ಹಂತದಲ್ಲಿ ಪ್ಯಾರಾಸಿಟಮಲ್ ಮಾತ್ರೆ ಹೊರತಾಗಿ ಸ್ಟಿರಾಯ್ಡ್, ಡೈಕ್ಲೋಫಿನ್ ಚುಚ್ಚುಮದ್ದು ತೆಗೆದುಕೊಳ್ಳಬಾರದು ಎಂಬುದು ವೈದ್ಯರ ಸಲಹೆ.

    ಮೊದಲ ಹಂತದಲ್ಲಿ ಚೇತರಿಸಿಕೊಳ್ಳದ ರೋಗಿಗಳಿಗೆ ಎರಡನೇ ಹಂತದಲ್ಲಿ ಬಿಳಿರಕ್ತ ಕಣಗಳು ಕಡಿಮೆಯಾಗಿ ತೀವ್ರ ರಕ್ತಸ್ರಾವವಾಗುತ್ತದೆ. ಈ ಹಂತದಲ್ಲಿ ಕಾಯಿಲೆ ಉಲ್ಬಣಗೊಂಡರೆ ಕಿಡ್ನಿ ವೈಫಲ್ಯ ಸೇರಿದಂತೆ ಅಂಗಾಂಗಗಳು ವೈಫಲ್ಯವಾಗಿ ರೋಗಿ ಮರಣ ಹೊಂದುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. 

    ಕೆಎಫ್‌ಡಿ ಕಬಂಧ ಬಾಹು: ಐದು ವರ್ಷಗಳಲ್ಲಿ 24 ಜನ ಕೆಎಫ್‌ಡಿಯಿಂದ ಸಾವಿಗೀಡಾಗಿದ್ದಾರೆ. 2019ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 12 ಮಂದಿ ಕೆಎಫ್‌ಡಿ ಸೋಂಕಿಗೆ ಬಲಿಯಾಗಿದ್ದರು. ಅಲ್ಲದೇ 344 ಜನರಲ್ಲಿ ಸೋಂಕು ದೃಢಪಟ್ಟಿತ್ತು. ಉತ್ತರ ಕನ್ನಡ ಜಿಲ್ಲೆಯ 85 ಜನರಿಗೆ ಸೋಂಕು ಕಾಣಿಸಿಕೊಂಡಿತ್ತು. ಇದರಲ್ಲಿ 3 ಜನ ಸಾವಿಗೀಡಾಗಿದ್ದರು. ಉಡುಪಿಯಲ್ಲಿ ಇಬ್ಬರು, ಮೈಸೂರು, ಬೆಳಗಾವಿ, ಚಿಕ್ಕಮಗಳೂರು ಹಾಗೂ ಹಾವೇರಿಯಲ್ಲಿ ಕ್ರಮವಾಗಿ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇನ್ನೂ 2020ರಲ್ಲಿ ಶಿವಮೊಗ್ಗದಲ್ಲಿ 184 ಪ್ರಕರಣ ಕಾಣಿಸಿಕೊಂಡಿತ್ತು. ನಾಲ್ಕು ಜನ ಸಾವಿಗೀಡಾಗಿದ್ದರು.ಉತ್ತರ ಕನ್ನಡ ಜಿಲ್ಲೆಯಲ್ಲಿ 91 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಈ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದರು. ಚಿಕ್ಕಮಗಳೂರಿನಲ್ಲಿ 12 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. 2021ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 13, ಚಿಕ್ಕಮಗಳೂರು ಜಿಲ್ಲೆಯಲ್ಲಿ 2, ಉತ್ತರ ಕನ್ನಡ ಜಿಲ್ಲೆಯಲ್ಲಿ 8 ಪ್ರಕರಣಗಳು ಪತ್ತೆಯಾಗಿದ್ದವು. 2022ರಲ್ಲಿ ಶಿವಮೊಗ್ಗದಲ್ಲಿ 35 ಪಾಸಿಟಿವ್ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 14 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿತ್ತು. ಎರಡೂ ಜಿಲ್ಲೆಗಳಲ್ಲಿ ಒಬ್ಬೊಬ್ಬರು ಸಾವನ್ನಪ್ಪಿದ್ದರು. 2023ರಲ್ಲಿ ಶಿವಮೊಗ್ಗ 15, ಚಿಕ್ಕಮಗಳೂರು 2 ಜನರಿಗೆ ಸೋಕು ಕಾಣಿಸಿಕೊಂಡಿತ್ತು.

    ಇನ್ನೂ ಇತ್ತೀಚೆಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ (Dinesh Gundu Rao) ಅವರು, ಒಂದು ವರ್ಷದೊಳಗೆ ಸೂಕ್ತ ಔಷಧವನ್ನು ಸರ್ಕಾರ ಒದಗಿಸಲಿದೆ ಎಂದು ಭರವಸೆಯನ್ನು ನೀಡಿದ್ದರು.

  • ಕೇವಲ 100 ರೂ. ಕ್ಯಾನ್ಸರ್‌ಗೆ ಚಿಕಿತ್ಸೆ – ಟಾಟಾ ಸಂಸ್ಥೆಯಿಂದ ಮಾತ್ರೆ ಅಭಿವೃದ್ಧಿ

    ಕೇವಲ 100 ರೂ. ಕ್ಯಾನ್ಸರ್‌ಗೆ ಚಿಕಿತ್ಸೆ – ಟಾಟಾ ಸಂಸ್ಥೆಯಿಂದ ಮಾತ್ರೆ ಅಭಿವೃದ್ಧಿ

    – ಎರಡನೇ ಬಾರಿ ಕ್ಯಾನ್ಸರ್‌ ಬರುವುದನ್ನು ತಡೆಯುತ್ತೆ ಮಾತ್ರೆ
    – 10 ವರ್ಷಗಳ ಕಾಲ ದೀರ್ಘ ಸಂಶೋಧನೆ
    – FSSAI ಅನುಮೋದನೆಗಾಗಿ ಕಾಯುತ್ತಿದ್ದಾರೆ ಸಂಶೋಧಕರು

    ಮುಂಬೈ: ಎರಡನೇ ಬಾರಿಗೆ ಕ್ಯಾನ್ಸರ್ (Cancer) ಬರುವುದನ್ನು ತಡೆಯುವ ಮಾತ್ರೆಯನ್ನು (Tablet) ನಾವು ಅಭಿವೃದ್ಧಿ ಪಡಿಸಿರುವುದಾಗಿ ಭಾರತದ ಪ್ರಸಿದ್ಧ ಕ್ಯಾನ್ಸರ್‌ ಸಂಶೋಧನಾ ಸಂಸ್ಥೆ ಟಾಟಾ ಸ್ಮಾರಕ ಕೇಂದ್ರ (TMC) ಹೇಳಿಕೊಂಡಿದೆ.

    ಸಂಶೋಧಕರು 10 ವರ್ಷಗಳ ಕಾಲ ಸಂಶೋಧನೆ ನಡೆಸಿದ ಬಳಿಕ ಮಾತ್ರೆ ಅಭಿವೃದ್ಧಿ ಪಡಿಸಿದ್ದು ವಿಕಿರಣ (Radiation) ಮತ್ತು ಕೀಮೋಥೆರಪಿಯಂತಹ (Chemotherapy) ಚಿಕಿತ್ಸೆಗಳ ಅಡ್ಡಪರಿಣಾಮಗಳನ್ನು 50% ರಷ್ಟು ಮಾತ್ರೆ ಕಡಿಮೆ ಮಾಡುತ್ತದೆ. ಕ್ಯಾನ್ಸರ್‌ ಚಿಕಿತ್ಸೆಗೆ ಲಕ್ಷದಿಂದ ಕೋಟಿ ರೂ. ವೆಚ್ಚವಾಗುತ್ತಿದ್ದು, ಈ ಮಾತ್ರೆಯ ಬೆಲೆ ಕೇವಲ 100 ರೂ. ಇರಲಿದೆ ಎಂದು ಟಾಟಾ ಸಂಸ್ಥೆ ಹೇಳಿದೆ.

    ಸಂಶೋಧನಾ ಗುಂಪಿನ ಭಾಗವಾಗಿದ್ದ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಹಿರಿಯ ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ.ರಾಜೇಂದ್ರ ಬದ್ವೆ ಪ್ರತಿಕ್ರಿಯಿಸಿ, ಸಂಶೋಧನೆಗಾಗಿ ಆರಂಭದಲ್ಲಿ ಇಲಿಗಳಲ್ಲಿ (Rat) ಮಾನವನ ಕ್ಯಾನ್ಸರ್ ಕೋಶಗಳನ್ನು ಸೇರಿಸಲಾಯಿತು. ಆ ಕೋಶಗಳು ಇಲಿಗಳಲ್ಲಿ ಗೆಡ್ಡೆಯನ್ನು ರೂಪಿಸಿತು. ನಂತರ ಇಲಿಗಳಿಗೆ ವಿಕಿರಣ ಚಿಕಿತ್ಸೆ, ಕೀಮೋಥೆರಪಿ ಮತ್ತು ಶಸ್ತ್ರಚಿಕಿತ್ಸೆಯ ಮೂಲಕ ಚಿಕಿತ್ಸೆ ನೀಡಲಾಯಿತು. ಈ ಕ್ಯಾನ್ಸರ್ ಕೋಶಗಳು ಸತ್ತಾಗ ಅವು ಕ್ರೊಮಾಟಿನ್ ಕಣಗಳೆಂದು ಕರೆಯಲ್ಪಡುವ ಸಣ್ಣ ತುಂಡುಗಳಾಗಿ ಒಡೆಯುತ್ತವೆ. ಈ ಸಣ್ಣ ತುಂಡುಗಳು ರಕ್ತದೊಂದಿಗೆ ಸೇರಿ ಆರೋಗ್ಯ ಹೊಂದಿದ ಜೀವಕೋಶಗಳನ್ನು ಪ್ರವೇಶಿಸಿದಾಗ ಕ್ಯಾನ್ಸರ್‌ ಬರುತ್ತದೆ ಎಂದು ತಿಳಿಸಿದರು.

    ಈ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು, ವೈದ್ಯರು ಇಲಿಗಳಿಗೆ ರೆಸ್ವೆರಾಟ್ರೊಲ್ ಮತ್ತು ತಾಮ್ರದ (R+Cu) ಪ್ರೊ-ಆಕ್ಸಿಡೆಂಟ್ ಮಾತ್ರೆಗಳನ್ನು ನೀಡಲಾಯಿತು. R+Cu ಆಮ್ಲಜನಕ ಮುಕ್ತ ಕಣಗಳನ್ನು ಉತ್ಪಾದಿಸುತ್ತದೆ, ಇದು ಕ್ರೊಮಾಟಿನ್ ಕಣಗಳನ್ನು ನಾಶಪಡಿಸುತ್ತದೆ ಎಂದು ವಿವರಿಸಿದರು.  ಇದನ್ನೂ ಓದಿ: ಗೆದ್ದ ಬೆನ್ನಲ್ಲೇ ನಾಸೀರ್ ಹುಸೇನ್ ಬೆಂಬಲಿಗರಿಂದ ಪಾಕಿಸ್ತಾನ್ ಜಿಂದಾಬಾದ್‌ ಘೋಷಣೆ

    R+Cu ಅನ್ನು ಸೇವಿಸಿದಾಗ ಹೊಟ್ಟೆಯಲ್ಲಿ ಆಮ್ಲಜನಕ ಮುಕ್ತ ಕಣಗಳನ್ನು ಉತ್ಪಾದಿಸುತ್ತದೆ. ಈ ಆಮ್ಲಜನಕ ಮುಕ್ತ ಕಣಗಳನ್ನು ಚಲಾವಣೆಯಲ್ಲಿರುವ ಕ್ರೊಮಾಟಿನ್ ಕಣಗಳನ್ನು ನಾಶಮಾಡುತ್ತವೆ ಮತ್ತು ‘ಮೆಟಾಸ್ಟೇಸ್’ಗಳನ್ನು ತಡೆಯುತ್ತವೆ. ಇದು ದೇಹದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಕ್ಯಾನ್ಸರ್ ಕೋಶಗಳ ಚಲನೆ ತಡೆಯುತ್ತದೆ ಎಂದು ಹೇಳಿದರು.

    ಈ ಟ್ಯಾಬ್ಲೆಟ್ ಕ್ಯಾನ್ಸರ್ ಚಿಕಿತ್ಸೆಯ ಚಿಕಿತ್ಸೆಯ ಅಡ್ಡಪರಿಣಾಮಗಳನ್ನು ಸುಮಾರು 50 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ ಮತ್ತು ಎರಡನೇ ಬಾರಿಗೆ ಇದು ಕ್ಯಾನ್ಸರ್ ತಡೆಗಟ್ಟುವಲ್ಲಿ ಸುಮಾರು 30% ಪರಿಣಾಮಕಾರಿಯಾಗಿದೆ. ಇದು ಮೇದೋಜೀರಕ ಗ್ರಂಥಿ, ಶ್ವಾಸಕೋಶ ಮತ್ತು ಬಾಯಿಯ ಕ್ಯಾನ್ಸರ್‌ನ ಮೇಲೂ ಪರಿಣಾಮಕಾರಿಯಾಗಬಲ್ಲದು ಎಂದು ತಿಳಿಸಿದರು.

    ಟಾಟಾ ವೈದ್ಯರು ಸುಮಾರು ಒಂದು ದಶಕದಿಂದ ಈ ಮಾತ್ರೆಯ ಮೇಲೆ ಸಂಶೋಧನೆ ಮಾಡುತ್ತಿದ್ದು ಈಗ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅನುಮೋದನೆಗೆ ಕಾಯತ್ತಿದ್ದಾರೆ. ಈಗಾಲೇ ಟಿಐಎಫ್‌ಆರ್ ವಿಜ್ಞಾನಿಗಳು ಈ ಮಾತ್ರೆಯನ್ನು ಅನುಮೋದಿಸಲು ಎಫ್‌ಎಸ್‌ಎಸ್‌ಎಐಗೆ ಅರ್ಜಿ ಸಲ್ಲಿಸಿದ್ದಾರೆ. ಅನುಮೋದನೆ ಪಡೆದ ನಂತರ ಜೂನ್-ಜುಲೈನಿಂದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.  ಇದನ್ನೂ ಓದಿ: ಗಗನಯಾನ ಕೈಗೊಳ್ಳುವ 4 ಗಗನಯಾತ್ರಿಗಳ ಹೆಸರು ಬಹಿರಂಗಪಡಿಸಿದ ಮೋದಿ

    ಈ ಮಾತ್ರೆ ಸೇವನೆಯ ಬಳಿಕ ಇಲಿಗಳು ಮತ್ತು ಮನುಷ್ಯರ ಮೇಲೆ ಆಗುವ ಅಡ್ಡ ಪರಿಣಾಮವನ್ನು ಪರೀಕ್ಷಿಸಲಾಗಿದೆ. ಮಾನವನ ಮೇಲಿನ ಪ್ರಯೋಗಗಳನ್ನು ಪೂರ್ಣಗೊಳಿಸಲು ಸುಮಾರು ಐದು ವರ್ಷ ಬೇಕಾಯಿತು. ಸಂಶೋಧನೆಯ ಸಮಯದಲ್ಲಿ ಸವಾಲುಗಳು ಇದ್ದವು. ಈ ಸಂಶೋಧನೆ ಮಾಡುವಾಗ ಸಮಯ ಮತ್ತು ಹಣ ವ್ಯರ್ಥ ಎಂದು ಹಲವರು ಹೇಳಿದ್ದರು. ಆದರೆ ಇಂದು ನಾವೆಲ್ಲ ಸಂತೋಷವಾಗಿದ್ದು ದೊಡ್ಡ ಯಶಸ್ಸು ಸಿಕ್ಕಿದೆ ಎಂದು ವೈದ್ಯರು ಬಣ್ಣಿಸಿದರು.

    ಕ್ಯಾನ್ಸರ್‌ ಎರಡನೇ ಬಾರಿ ಹೇಗೆ ಬರುತ್ತೆ?
    ಕೆಲವೊಮ್ಮೆ ಕ್ಯಾನ್ಸರ್ ಚಿಕಿತ್ಸೆಯ ನಂತರ ಕ್ಯಾನ್ಸರ್ ಮತ್ತೆ ಬರುತ್ತದೆ. ಇದನ್ನು ಕ್ಯಾನ್ಸರ್ ಮರುಕಳಿಸುವಿಕೆ ಎಂದು ಕರೆಯಲಾಗುತ್ತದೆ. ಮೂಲ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಿದ ವಾರ, ತಿಂಗಳುಗಳು ಅಥವಾ ವರ್ಷಗಳ ನಂತರವೂ ಇದು ಬರಹುದು.

    ಕೆಲವು ರೀತಿಯ ಕೀಮೋಥೆರಪಿ ಮತ್ತು ವಿಕಿರಣ ಚಿಕಿತ್ಸೆಯು ಎರಡನೇ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಮಗು, ಹದಿಹರೆಯ ಅಥವಾ ಯುವ ವಯಸ್ಕರಲ್ಲಿ ಕ್ಯಾನ್ಸರ್‌ ಚಿಕಿತ್ಸೆ ಪಡೆದಿದ್ದರೆ ಅಪಾಯವು ಹೆಚ್ಚು. ರೋಗಿಗೆ ಚಿಕಿತ್ಸೆ ಮುಗಿದ ನಂತರ ಕ್ಯಾನ್ಸರ್ ಮತ್ತೆ ಬರುತ್ತದೆಯೇ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

     

  • 50ರ ಹರೆಯದಲ್ಲೂ ಹೀರೋಯಿನ್‌ನಂತೆ ಫಿಟ್ ಆಗಿರಲು ಈ 5 ಆಹಾರವನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿ

    50ರ ಹರೆಯದಲ್ಲೂ ಹೀರೋಯಿನ್‌ನಂತೆ ಫಿಟ್ ಆಗಿರಲು ಈ 5 ಆಹಾರವನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿ

    ತ್ತೀಚಿನ ದಿನಗಳಲ್ಲಿ ಜನರು ಫಿಟ್ನೆಸ್ ಬಗ್ಗೆ ತುಂಬಾ ತಲೆ ಕೆಡಿಸಿಕೊಳ್ಳುತ್ತಾರೆ. ಇದಕ್ಕಾಗಿ ಜಿಮ್‌ (Gym), ಡಯಟ್‌ (Diet) ಮೊರೆ ಹೋಗುತ್ತಾರೆ. ಹೀಗಾಗಿ ಇಂದು ಒಬ್ಬರನ್ನು ನೋಡಿ ವಯಸ್ಸನ್ನು ನಿರ್ಧರಿಸುವುದು ಈಗ ಕಷ್ಟವಾಗಿದೆ. ಅದರಲ್ಲೂ ಬಾಲಿವುಡ್ ನಟಿಯರು ಈ ವಿಚಾರದಲ್ಲಿ ಎಲ್ಲರನ್ನೂ ದಂಗಾಗಿಸುತ್ತಾರೆ. ಇದರ ದೊಡ್ಡ ರಹಸ್ಯವೆಂದರೆ ಅವರ ಆಹಾರ, ಜೀವನಶೈಲಿ ಮತ್ತು ಫಿಟ್‌ನೆಸ್ ದಿನಚರಿ. ನೀವು ಸಹ 50 ವರ್ಷಗಳ ಕಾಲ ನಿಮ್ಮನ್ನು ಯೌವನವಾಗಿರಿಸಲು ಬಯಸಿದರೆ, ನಿಮ್ಮ ಆಹಾರ ಮತ್ತು ಪಾನೀಯಗಳಲ್ಲಿ ಕೆಲವು ವಿಶೇಷ ವಿಷಯಗಳನ್ನು ಸೇರಿಸಿ. ನೀವು ಈ ರೀತಿಯ ಆಹಾರವನ್ನು ತೆಗೆದುಕೊಂಡರೆ, 50 ಅಥವಾ 60 ವರ್ಷಗಳ ನಂತರವೂ ನಿಮ್ಮ ಮುಖದಲ್ಲಿ ವಯಸ್ಸು ಕಾಣಿಸುವುದಿಲ್ಲ.

    ಹಾಗಿದ್ರೆ ಆಹಾರ ಕ್ರಮ ಹೇಗಿರಬೇಕು?:
    * ಹಣ್ಣುಗಳು ಮತ್ತು ಹಸಿರು ತರಕಾರಿಗಳು: 50 ವರ್ಷ ವಯಸ್ಸಿನಲ್ಲೂ ನಿಮ್ಮನ್ನು ನೀವು ಆರೋಗ್ಯಕರವಾಗಿ (Health) ಮತ್ತು ಯೌವನವಾಗಿ ಇರಿಸಿಕೊಳ್ಳಲು ಬಯಸಿದರೆ, ನಿಮ್ಮ ಆಹಾರದಲ್ಲಿ ಋತುಮಾನದ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ. ಹಸಿರು ಎಲೆಗಳ ತರಕಾರಿಗಳನ್ನು ತಿನ್ನುವುದರಿಂದ ದೇಹವು ಕಡಿಮೆ ಕ್ಯಾಲೋರಿಗಳನ್ನು ಮತ್ತು ಹೆಚ್ಚಿನ ವಿಟಮಿನ್‌ಗಳನ್ನು ಪಡೆಯುತ್ತದೆ. ವಿಟಮಿನ್ ಸಿ, ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ಪೊಟ್ಯಾಷಿಯಂ ಮತ್ತು ಮೆಗ್ನೀಸಿಯಂ ತರಕಾರಿಗಳು ಮತ್ತು ಹಣ್ಣುಗಳಲ್ಲಿ ಕಂಡುಬರುತ್ತವೆ. ಇದು ನಿಮ್ಮನ್ನು ಆರೋಗ್ಯವಂತರನ್ನಾಗಿ ಮಾಡಲು ಸಹಾಯ ಮಾಡುತ್ತದೆ.

    * ಮೊಸರು: ವಯಸ್ಸು ಜಾಸ್ತಿಯಾಗುತ್ತಿದ್ದಂತೆಯೇ ಮೂಳೆಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಹೆಚ್ಚು ಕ್ಯಾಲ್ಸಿಯಂ ಇರುವ ಆಹಾರವನ್ನು ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ. ಪ್ರತಿದಿನ ನಿಮ್ಮ ಆಹಾರದಲ್ಲಿ 1 ಬೌಲ್ ಮೊಸರು (Curd) ಸೇರಿಸಿ. ಜೀರ್ಣಕ್ರಿಯೆಯನ್ನು ಬಲಪಡಿಸಲು ಮತ್ತು ಕ್ಯಾಲ್ಸಿಯಂ ಕೊರತೆಯನ್ನು ನಿವಾರಿಸಲು, ಮೊಸರು ಸೇವಿಸಬೇಕು.

    * ಮೊಟ್ಟೆ: ವಯಸ್ಸು ಹೆಚ್ಚಾದಂತೆ ದೇಹಕ್ಕೆ ಹೆಚ್ಚಿನ ಪ್ರೊಟೀನ್ ಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ದಿನಕ್ಕೆ 1-2 ಮೊಟ್ಟೆಗಳನ್ನು (Egg) ತಿನ್ನಬೇಕು. ಮೊಟ್ಟೆಯಲ್ಲಿ ಹೆಚ್ಚಿನ ಪ್ರೊಟೀನ್‌ ಇದೆ. ಮೊಟ್ಟೆಗಳು ಅಮೈನೋ ಆಮ್ಲಗಳನ್ನು ಹೊಂದಿದೆ. ಇದು ನಿಮ್ಮ ಸ್ನಾಯುಗಳನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ.

    * ಧಾನ್ಯಗಳು: ವಯಸ್ಸಾದಂತೆ ನಿಮ್ಮ ಆಹಾರದಲ್ಲಿ ಧಾನ್ಯಗಳನ್ನು ಸೇರಿಸಿಕೊಳ್ಳಬೇಕು. ಈ ಧಾನ್ಯಗಳಲ್ಲಿ ಫೈಬರ್ ನ ಅಂಶ ಜಾಸ್ತಿಯಾಗಿರುತ್ತದೆ. ಇದು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಧಾನ್ಯಗಳು ನಿಮ್ಮ ಜೀರ್ಣಕ್ರಿಯೆಗೆ ಉತ್ತಮವಾಗಿರುತ್ತದೆ. ಇದನ್ನೂ ಓದಿ: ಬೆಳ್ಳುಳ್ಳಿ ಹೆಚ್ಚು ತಿಂದ್ರೆ ಬರುತ್ತೆ ಈ ತೊಂದರೆಗಳು- ದಿನಕ್ಕೆ ಎಷ್ಟು ಸೇವಿಸಬೇಕು ಗೊತ್ತಾ?

    * ಬಾದಾಮಿ ಮತ್ತು ವಾಲ್‌ನಟ್ಸ್: ವಯಸ್ಸು ಹೆಚ್ಚಾದಂತೆ ಬಾದಾಮಿ ಮತ್ತು ವಾಲ್‌ನಟ್‌ಗಳನ್ನು (Badam and Walnut) ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಬಾದಾಮಿ ತಿನ್ನುವುದರಿಂದ ದೇಹವು ವಿಟಮಿನ್ ಇ ಅನ್ನು ಪಡೆಯುತ್ತದೆ. ಇದು ನಿಮ್ಮ ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿರಿಸುತ್ತದೆ. ವಾಲ್‌ನಟ್ಸ್ ತಿನ್ನುವುದರಿಂದ ಒಮೆಗಾ -3 ಕೊಬ್ಬಿನಾಮ್ಲಗಳು ದೊರೆಯುತ್ತವೆ. ಇದು ಮಧುಮೇಹ, ಹೃದಯ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆಗಳನ್ನು ನಿಯಂತ್ರಣದಲ್ಲಿಡುತ್ತದೆ. ಜೊತೆಗೆ ಬಾದಾಮಿಯನ್ನು ದಿನವೂ ತಿನ್ನುವುದರಿಂದ ಬೊಜ್ಜು ಕಡಿಮೆಯಾಗುತ್ತದೆ.

  • ನಟನೆ ಬಿಟ್ಟು ಹೊಸ ಕೆಲಸ ಒಪ್ಪಿಕೊಂಡ ಸಮಂತಾ

    ನಟನೆ ಬಿಟ್ಟು ಹೊಸ ಕೆಲಸ ಒಪ್ಪಿಕೊಂಡ ಸಮಂತಾ

    ಮೊನ್ನೆಯಷ್ಟೇ ಅಭಿಮಾನಿಗಳಿಗೆ ವಿಡಿಯೋ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದರು ನಟಿ ಸಮಂತಾ (Samantha). ಸದ್ಯದಲ್ಲೇ ಕೆಲಸಕ್ಕೆ ಮರಳುವುದಾಗಿ ಹೇಳಿದ್ದರು. ಯಾವ ಸಿನಿಮಾವನ್ನು ಸಮಂತಾ ಒಪ್ಪಿಕೊಂಡಿದ್ದಾರೆ ಎನ್ನುವ ಹುಡುಕಾಟ ಕೂಡ ಶುರುವಾಗಿತ್ತು. ಆದರೆ, ಸದ್ಯಕ್ಕೆ ಅವರು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಆದರೆ, ಹೊಸ ಕೆಲಸವನ್ನು (New Job) ಅವರು ಒಪ್ಪಿಕೊಂಡಿದ್ದು ಬಹಿರಂಗವಾಗಿದೆ.

    ಹಲವು ವರ್ಷಗಳಿಂದ ಅವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವಿಚಾರ ಗೊತ್ತೇ ಇದೆ. ಅನೇಕರು ನಾನಾ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ಸಮಾಧಾನ ನೀಡುವ ನಿಟ್ಟಿನಲ್ಲಿ ಪಾಡ್ ಕಾಸ್ಟ್ (Podcast) ಶುರು ಮಾಡಲಿದ್ದಾರಂತೆ ಸಮಸ್ಯೆ. ಆರೋಗ್ಯದ (Health) ಕುರಿತಂತೆ ಅದರಲ್ಲಿ ಮಾಹಿತಿಯನ್ನು ಅವರು ನೀಡಲಿದ್ದಾರೆ.

    ವಿವಾದ, ಅನಾರೋಗ್ಯ, ಯಶಸ್ಸು ಎಲ್ಲವೂ ಅನುಭವಿಸಿರುವ ಜೀವ ಸಮಂತಾ. ನಾಗಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಸಮಂತಾ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಎಲ್ಲಾ ವಿಚಾರಕ್ಕೂ ಸಮಂತಾ ಕಡೆಯೇ ಬೆಟ್ಟು ಮಾಡಿ ತೋರಿಸುತ್ತಿದ್ದರು. ಸಹವಾಸವೇ ಬೇಡ ಅಂತ ವೃತ್ತಿರಂಗದಲ್ಲಿ ಬ್ಯುಸಿಯಾದರು. ‘ಪುಷ್ಪ’ (Pushpa) ಚಿತ್ರದಲ್ಲಿ ಸೊಂಟ ಬಳುಕಿಸಿದ ಮೇಲೆ ಸಮಂತಾ ಲಕ್ ಬದಲಾಯ್ತು.

    ಆದರೆ ಯಶೋದ (Yashoda) ಮತ್ತು ಖುಷಿ (Kushi) ಸಿನಿಮಾ ಆದ್ಮೇಲೆ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿರಲಿಲ್ಲ. ಎರಡೂ ಹೀನಾಯವಾಗಿ ಸೋತ ಚಿತ್ರಗಳು. ಸೋಲಿನ ಹೊಡೆತಕ್ಕೆ ಅನಾರೋಗ್ಯದ ಆಘಾತ ಎರಡನ್ನೂ ಸಹಿಕೊಳ್ಳೋಕೆ ಸ್ಯಾಮ್‌ಗೆ 6 ತಿಂಗಳು ಹಿಡಿಯಿತು. ಇದೀಗ ಮತ್ತೆ ಕೆಲಸಕ್ಕೆ ಮರಳಿದ್ದಾರೆ.

     

    ಸದ್ಯ ಸಮಂತಾಗೆ ಟಾಲಿವುಡ್ ಮಾತ್ರವಲ್ಲ ಬಾಲಿವುಡ್‌ನಿಂದಲೂ ಬಂಪರ್ ಅವಕಾಶಗಳು ಅರಸಿ ಬರುತ್ತಿವೆ. ಹಾಗಾಗಿ ಸಮಂತಾ ಸಿನಿಮಾ ಮತ್ತು ಲುಕ್ ಹೇಗಿರಲಿದೆ ಎಂಬ ಚರ್ಚೆ ಕೂಡ ನಡೆದಿದೆ. ಹೊಸ ಕೆಲಸ ಅವರನ್ನು ಕೈ ಹಿಡಿಯಲಿ ಎನ್ನುತ್ತಿದ್ದಾರೆ ಸ್ಯಾಮ್ ಫ್ಯಾನ್ಸ್.

  • ಮಾನವನ ದೇಹಕ್ಕೆ ಕೃತಕ ಉಸಿರಾಟ ಒದಗಿಸುವ ಕಬ್ಬಿಣದ ಶ್ವಾಸಕೋಶ – ಹೇಗೆ ಕೆಲಸ ಮಾಡುತ್ತೆ?

    ಮಾನವನ ದೇಹಕ್ಕೆ ಕೃತಕ ಉಸಿರಾಟ ಒದಗಿಸುವ ಕಬ್ಬಿಣದ ಶ್ವಾಸಕೋಶ – ಹೇಗೆ ಕೆಲಸ ಮಾಡುತ್ತೆ?

    ವಿಜ್ಞಾನ-ತಂತ್ರಜ್ಞಾನ (Science And Technology) ಬೆಳೆದಂತೆ ಮನುಷ್ಯ ಹೊಸ ಹೊಸ ಆವಿಷ್ಕಾರಗಳಿಗೆ ಮುಂದಾಗುತ್ತಿರುವುದು ಅಚ್ಚರಿಯೇನಲ್ಲ. ವೈದ್ಯಕೀಯ ಲೋಕದಲ್ಲೂ ಹೊಸ ಹೊಸ ಆವಿಷ್ಕಾರಗಳು ಹಾಗೂ ತಂತ್ರಜ್ಞಾನ ಅಳವಡಿಕೆಯಿಂದಾಗಿ ಮನುಷ್ಯ ತನ್ನ ಜೀವಿತಾವಧಿಯನ್ನ ಹೆಚ್ಚಿಸಿಕೊಳ್ಳುತ್ತಿದ್ದಾನೆ. ಅಂದ್ರೆ 60 ವರ್ಷ ಜೀವಿತಾವಧಿ ಹೊಂದಿದ ಮನುಷ್ಯ ಕನಿಷ್ಠ ಐದತ್ತು ವರ್ಷ ಆರೊಗ್ಯದಲ್ಲಿ ಸುಧಾರಣೆ ಕಾಣಬಹುಗಿದೆ.

    ಈ ಹಿಂದೆ ಹಲವಾರು ಮಾರಣಾಂತಿಕ ಕಾಯಿಲೆಗಳು ವಿಶ್ವವನ್ನು ಕಾಡಿವೆ. ಅದರಲ್ಲಿ ಪೋಲಿಯೋ (Polio) ಸಹ ಒಂದು. ಈಗಿನ ಮಟ್ಟಿಗೆ ಪೋಲಿಯೋಗೆ ಲಸಿಕೆ ಲಭ್ಯವಿದ್ದರೂ ಈ ಹಿಂದೆ ಜನರನ್ನ ಬಲಿ ಪಡೆದ ಉದಾಹರಣೆಯೂ ಇದೆ.

    ಪೋಲೀಯೋ ಸಾಮಾನ್ಯ ಲಕ್ಷಣ ಹೊಂದಿದವರು ಸಾಮಾನ್ಯವಾಗಿ 1-2 ವಾರಗಳಲ್ಲಿ ಗುಣಮುಖರಾಗುತ್ತಾರೆ. ಕೆಲವೊಮ್ಮೆ ಪೋಲಿಯೋ ಪೀಡಿತರು ನಿರ್ದಿಷ್ಟ ಕಾಲಾವಧಿಯಲ್ಲಿ ಚಿಕಿತ್ಸೆ ಪಡೆದುಕೊಳ್ಳದೇ ಇದ್ದರೆ, 30-40 ವರ್ಷಗಳ ನಂತರ ಅಂಗವೈಕಲ್ಯ ಕಾಣಿಸಿಕೊಳ್ಳಬಹುದು ಎಂದು ಈ ಹಿಂದೆಯೇ ತಜ್ಞರು ಹೇಳಿದ್ದಾರೆ. ಇದರ ಮರಣ ಪ್ರಮಾಣ ಮಕ್ಕಳಲ್ಲಿ 15% ರಿಂದ 30% ವರೆಗೆ ಇರುತ್ತದೆ. 1940 ಮತ್ತು 1950ರ ನಡುವೆ ಪೋಲಿಯೋ ಮರಣ ಪ್ರಮಾಣ ಹೆಚ್ಚಾಗಿ ಕಂಡುಬಂದಿತ್ತು. ಈ ಸಮಯದಲ್ಲಿ ಪ್ರತಿ ವರ್ಷ ಸರಿ ಸುಮಾರು 5 ಲಕ್ಷ ಜನ ಪೋಲಿಯೋಗೆ ತುತ್ತಾಗುತ್ತಿದ್ದರು, ಕೆಲವರು ಪೋಲಿಯೋದಿಂದ ಅಂಗವೈಕಲ್ಯ ಅನುಭವಿಸಿದ್ರೆ ಇನ್ನೂ ಕೆಲವರು ಸಾವನ್ನಪ್ಪುತ್ತಿದ್ದರು. 1916ರಲ್ಲಿ ನ್ಯೂಯಾರ್ಕ್‌ನಲ್ಲಿ 2,000 ಮಂದಿ, 1952ರಲ್ಲಿ ಅಮೆರಿಕದಾದ್ಯಂತ ಒಟ್ಟು 3,000 ಮಂದಿ ಸಾವನ್ನಪ್ಪಿದ್ದರು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

    ಆದ್ರೆ ಅಮೆರಿಕದ ವ್ಯಕ್ತಿಯೊಬ್ಬರು ಚಿಕ್ಕ ವಯಸ್ಸಿನಲ್ಲೇ ಪೋಲಿಯೋಗೆ ತುತ್ತಾಗಿ ಅಂಗಾಗ ಸ್ವಾಧೀನ ಕಳೆದುಕೊಂಡರೂ ಕಬ್ಬಿಣದ ಶ್ವಾಸಕೋಶದ (Iron Lungs) ಮೂಲಕ ಉಸಿರಾಡುತ್ತಾ, ಪವಾಡವನ್ನೇ ಸೃಸ್ಟಿಸಿದ್ದಾರೆ. ಹೌದು. ಅಮೆರಿಕದ ಟೆಕ್ಸಾಸ್ ನಿವಾಸಿ ಪೌಲ್ ಅಲೆಕ್ಸಾಂಡರ್ ಎಂಬವರು ಅವರು ತನ್ನ 6ನೇ ವಯಸ್ಸಿನಲ್ಲಿಯೇ ಪೋಲಿಯೋಗೆ ತುತ್ತಾದರು. ಈ ಕಾರಣದಿಂದಾಗಿ, 1952 ರಿಂದ ಅವರ ದೇಹದ ಒಂದೊಂದೇ ಭಾಗ ಸ್ವಾಧೀನ ಕಳೆದುಕೊಳ್ಳಲಾರಂಭಿಸಿತು. ಕುಟುಂಬಸ್ಥರು ಅವರನ್ನು ವೈದ್ಯರ ಬಳಿ ಕರೆದೊಯ್ದರು. ನಂತರ ಅಲ್ಲಿನ ವೈದ್ಯರು ಅವರಿಗೆ ‘ಟ್ರಾಕಿಯೊಸ್ಟೊಮಿ’ ಎಂಬ ಆಪರೇಷನ್ ಮಾಡಿದರು. ಆಗ ಪಾಲ್ ಅಲೆಕ್ಸಾಂಡರ್‌ಗೆ ಸಿಲಿಂಡರ್‌ ಆಕಾರದ ‘ಕಬ್ಬಿಣದ ಶ್ವಾಸಕೋಶ’ವನ್ನು ಅಳವಡಿಸಲಾಯಿತು. ಸದ್ಯ ಇಂದಿಗೂ ಅವರು ಇದೇ ಕಬ್ಬಿಣದ ಶ್ವಾಸಕೋಶವನ್ನು ಬಳಸಿಕೊಂಡು ಉಸಿರಾಡುತ್ತಿದ್ದಾರೆ.

    ಅಷ್ಟಕ್ಕೂ ಏನಿದು ಕಬ್ಬಿಣದ ಶ್ವಾಸಕೋಶ, ಹೇಗೆ ಕಾರ್ಯ ನಿರ್ವಹಿಸುತ್ತದೆ? ಇಂದಿಗೂ ಅದು ಯಾವ ದೇಶದಲ್ಲಿ ಬಳಕೆಯಲ್ಲಿದೆ ಎಂಬುದನ್ನ ತಿಳಿಯುವ ಮುನ್ನ ಪೋಲಿಯೋ ಎಂದರೇನು? ಅದಕ್ಕೆ ಚಿಕಿತ್ಸೆ ಏನು? ಮಾನವನ ಶ್ವಾಸಕೋಶ ಎಂದರೇನು? ಅದು ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ…..

    ಪೋಲಿಯೋ ಎಂದರೇನು?
    ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಪೋಲಿಯೋ ಅಥವಾ ಪೋಲಿಯೋಮೈಲಿಟಿಸ್ ಅನ್ನು ಹೆಚ್ಚು ಸಾಂಕ್ರಾಮಿಕ ವೈರಲ್ ಕಾಯಿಲೆಯೆಂದು ವ್ಯಾಖ್ಯಾನಿಸುತ್ತದೆ, ಇದು ವ್ಯಕ್ತಿಯಿಂದ ವ್ಯಕ್ತಿಗೆ ಮುಖ್ಯವಾಗಿ ಮಲ-ಮೌಖಿಕ ಮಾರ್ಗದ ಮೂಲಕ ಮತ್ತು ಕೆಲವೊಮ್ಮೆ ಕಲುಷಿತ ನೀರು ಆಹಾರದ ಮೂಲಕ ಹರಡುತ್ತದೆ. ಸೋಂಕು ಹೆಚ್ಚಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ನಂತರದಲ್ಲಿ ಇದು ಮಕ್ಕಳ ಅಂಗವಿಕಲತೆಗೆ ಕಾರಣವಾಗುತ್ತದೆ.

    ಪೊಲೀಯೋಗೆ ಚಿಕಿತ್ಸೆ ಏನು?
    ವೈರಸ್ ಸೋಂಕು ಎಂದಿಗೂ ಬೇರು ಬಿಡದಂತೆ ತಡೆಯಲು ಪೋಲಿಯೋ ಲಸಿಕೆಯನ್ನು ಮಕ್ಕಳಿಗೆ ನೀಡಲಾಗುತ್ತದೆ. ಪೋಲಿಯೋಗೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲದ ಕಾರಣ, ಲಸಿಕೆ ಪಡೆಯದಿದ್ದರೆ ಚಿಕಿತ್ಸೆಯು ಇತರ ವೈರಲ್ ಸೋಂಕುಗಳಿಗೆ ಹೋಲುತ್ತದೆ. ಇದರರ್ಥ ಜ್ವರ ಮತ್ತು ದೇಹದ ನೋವು ಕಡಿಮೆ ಮಾಡಲು ನೋವು ನಿವಾರಕಗಳು ಮತ್ತು ಔಷಧಿಗಳನ್ನು ತೆಗೆದುಕೊಳ್ಳುವುದು, ದ್ರವಗಳ ಹೆಚ್ಚಳ, ಸೌಮ್ಯ ಜ್ವರ ತರಹದ ರೋಗಲಕ್ಷಣಗಳನ್ನು ನಿರ್ವಹಿಸಲು ಬೆಡ್ ರೆಸ್ಟ್ ಮತ್ತು ಅಂಗವೈಕಲ್ಯ ಮತ್ತು ಪಾರ್ಶ್ವವಾಯು ಅಪಾಯದಲ್ಲಿರುವವರಲ್ಲಿ ಸ್ನಾಯುವಿನ ಚಲನಶೀಲತೆಯನ್ನು ಸುಧಾರಿಸಲು ದೈಹಿಕ ಚಿಕಿತ್ಸೆ. ಉಸಿರಾಡಲು ತೊಂದರೆ ಇರುವವರಿಗೆ ವೆಂಟಿಲೇಶನ್‌ನ ಅಗತ್ಯ ಬೀಳಬಹುದು.

    ಶ್ವಾಸಕೋಶ ಎಂದರೇನು?
    ಶ್ವಾಸಕೋಶ ಎನ್ನುವುದು ಮನುಷ್ಯನ ದೇಹಕ್ಕೆ ಉಸಿರಾಟ ಪೂರೈಸುವ ಪ್ರಮುಖವಾದ ಅಂಗ. ಇದು ವಾತಾವರಣದಿಂದ ಮಾನವನ ದೇಹಕ್ಕೆ ಆಮ್ಲಜನಕವನ್ನು ಪೂರೈಸುವ ಜೊತೆಗೆ ಮಾನವನ ದೇಹದಲ್ಲಿರುವ ಇಂಗಾಲದ ಡೈ ಆಕ್ಸೈಡ್‌ ಅನ್ನು ವಾತಾವರಣಕ್ಕೆ ಹೊರಸೂಸುತ್ತದೆ. ಇದರ ಕಾರ್ಯ ಚಟುವಟಿಕೆ ಚೆನ್ನಾಗಿದ್ದರೆ, ಮನುಷ್ಯ ಕೂಡ ಆರೋಗ್ಯವಾಗಿ ಇರುತ್ತಾನೆ.

    ಕಬ್ಬಿಣದ ಶ್ವಾಸಕೋಶ ಎಂದರೇನು?
    ಹೆಸರೇ ಹೇಳುವಂತೆ ಶವ ಪೆಟ್ಟಿಗೆಯನ್ನೇ ಹೋಲುವ ಹಾಗೂ ಕಬ್ಬಿಣದಿಂದ ಸಿದ್ಧಪಡಿಸಲಾದ ಒಂದು ಸಾಧನ. 1955ರಲ್ಲಿ ಪೊಲೀಯೋ ಲಸಿಕೆ ಕಂಡು ಹಿಡಿಯುವ ಮೊದಲು ಪೊಲೀಯೋ ಅಮೆರಿಕದಲ್ಲಿ ಸಾವಿರಾರು ಜನರನ್ನ ಬಲಿ ಪಡೆದಿತ್ತು. ಜನರು ಉಸಿರಾಟದ ತೊಂದರೆ ಅನುಭವಿಸುತ್ತಿದ್ದರು, ಅಂದಿನ ಪರಿಸ್ಥಿತಿ ಊಹಿಸುವುದಕ್ಕೂ ಕಷ್ಟಕರವಾಗಿತ್ತು. ಜ್ವರದ ಲಕ್ಷಣಗಳೊಂದಿಗೆ ಸ್ನಾಯು ಬಿಗಿತ, ಪಾರ್ಶ್ವವಾಯು (ಸ್ಟ್ರೋಕ್‌) ಉಂಟು ಮಾಡುತ್ತಿತ್ತು ಎಂದು ತಜ್ಞರು ಹೇಳುತ್ತಾರೆ. ಪೋಲಿಯೋ ರೋಗಪೀಡಿತರಲ್ಲಿ ಹೆಚ್ಚಿನವರು ಮಕ್ಕಳೇ ಆಗಿರುತ್ತಿದ್ದರು. ಅದಕ್ಕೆ ಚಿಕಿತ್ಸೆ ಫಲಿಸದೇ ಇದ್ದಾಗ ಅದು ವಯಸ್ಕರಾದವರಿಗೂ ತಗುಲುತ್ತಿತ್ತು. ಹಾಗಾಗಿ ಸ್ನಾಯು ಶಕ್ತಿ ಕಳೆದುಕೊಳ್ಳುತ್ತಿದ್ದರು. ಇದರ ಚೇತರಿಕೆಗಾಗಿ ಕನಿಷ್ಠ ಎರಡು ವಾರಗಳ ವರೆಗೆ ದೀರ್ಘ ಉಸಿರಾಟದ ಅವಶ್ಯಕತೆಯಿತ್ತು. ಅದನ್ನು ಪೂರೈಸಲು ಕಂಡುಹಿಡಿದಿದ್ದೇ ಈ ಐರಲ್‌ ಲಂಗ್ಸ್‌ (ಕಬ್ಬಿಣದ ಶ್ವಾಸಕೋಶ).

    ಕಬ್ಬಿಣದ ಶ್ವಾಸಕೋಶವು ಹೇಗೆ ಕೆಲಸ ಮಾಡುತ್ತದೆ?
    ಕಬ್ಬಿಣದ ಶ್ವಾಸಕೋಶವನ್ನು 1927ರಲ್ಲಿ ಫಿಲಿಪ್ ಡ್ರಿಂಕರ್ ಅಮೆರಿಕದಲ್ಲಿ ಅಭಿವೃದ್ಧಿಪಡಿಸಿದರು. ಮೊದಲಬಾರಿಗೆ 1928ರಲ್ಲಿ ಕ್ಲಿನಿಕಲ್‌ ಪ್ರಯೋಗಕ್ಕೆ ಬಳಸಲಾಯಿತು, ಈ ವಿಧಾನದಿಂದ ಒಂದು ಹುಡುಗಿಯ ಜೀವವೂ ಉಳಿಯಿತು. ನಂತರ ತಜ್ಞರು ಪೋಲಿಯೋ ಪೀಡಿತರಿಗೆ ಕೃತಕ ಉಸಿರಾಟ ಕಲಿಸಲು ಇದು ಸಹಾಯಕವಾಗಲಿದೆ ಎಂಬುದನ್ನು ಕಂಡುಕೊಂಡರು.

    ರೋಗಿಯನ್ನು ಇದರೊಳಗೆ ಇರಿಸಲು ಉಕ್ಕಿನಿಂದ ಸಿದ್ಧಪಡಿಸಲಾದ ಗಾಳಿಯಾಡದ ಕೋಣೆ ಒಳಗೊಂಡಿರುತ್ತದೆ. ಎಲೆಕ್ಟ್ರಿಕ್‌ ಮೋಟಾರ್‌ ಹಾಗೂ ವ್ಯಾಕ್ಯೂಮ್‌ ಕ್ಲೀನರ್‌ನಂತಹ ಏರ್‌ಪಂಪ್‌ಗಳಿಂದ ಚಾಲಿತವಾಗಿರುತ್ತದೆ. ಮುಂಭಾಗದಲ್ಲಿರುವ ದ್ವಾರವನ್ನು ರಬ್ಬರ್‌ ಡಾಲರ್‌ ಎಂದು ಕರೆಯಲಾಗುತ್ತದೆ. ತಲೆ ಭಾಗವನ್ನು ಹೊರತುಪಡಿಸಿ ಉಳಿದೆಲ್ಲ ಭಾಗವನ್ನು ಈ ದ್ವಾರ ಮುಚ್ಚಿಕೊಳ್ಳುತ್ತದೆ. ವ್ಯಕ್ತಿಯನ್ನು ಇದರ ಒಳಗೆ ಇರಿಸಿ, ಚಾಲನೆ ಮಾಡಿದಾಗ ಇದು ಇಂಭಾಗದ ರಬ್ಬರ್‌ ಅನ್ನು ಪಂಪ್‌ ಮಾಡುವ ಮೂಲಕ‌ ವ್ಯಕ್ತಿಯ ದೇಹಕ್ಕೆ ಕೃತಕ ಉಸಿರಾಟ ಕಲ್ಪಿಸುತ್ತದೆ. ಬಳಿಕ ಬರುವ ಗಾಳಿಯನ್ನು ವ್ಯಕ್ತಿಯ ದೇಹ ಹೀರಿಕೊಂಡು ಶ್ವಾಸಕೋಶಕ್ಕೆ ಆಮ್ಲಜನಕ ಸಿಗುವಂತೆ ಮಾಡುತ್ತದೆ. ಇದರಿಂದ ರೋಗಿಯ ಅಂಗಾಗಗಳು ಸ್ವಾಧೀನ ಕಳೆದುಕೊಂಡಿದ್ದರೂ ಶ್ವಾಸಕೋಶಕ್ಕೆ ಉಸಿರಾಟ ಪೂರೈಕೆ ಮಾಡಲಿದ್ದು, ರೋಗಿಯನ್ನೂ ಜೀವಂತವಾಗಿರಿಸಬಹುದು ಎಂದು ತಜ್ಞರ ವರದಿ ಹೇಳಿದೆ.

    ಈಗ ಬಳಕೆಯಲ್ಲಿದೆಯೇ?
    ಸದ್ಯ ಇದು ಭಾರತದಲ್ಲಿ ಬಳಕೆಯಲ್ಲಿರುವ ಬಗ್ಗೆ ಮಾಹಿತಿ ಇಲ್ಲ. ಆದ್ರೆ ಅಮೆರಿಕದಲ್ಲಿ ಬಳಕೆಯಲ್ಲಿದೆ. ಪಾಲ್‌ ಅಲೆಕ್ಸಾಂಡರ್‌ ಅವರು ಬದುಕುಳಿಯಲು ಕಬ್ಬಿಣದ ಶ್ವಾಸಕೋಶ ಬಳಸಿಕೊಂಡಿದ್ದಾರೆ. ಇದು ಆಧುನಿಕ ವೆಂಟಿಲೇಟರ್‌ಗಳಿಗಿಂತಲೂ ಉತ್ತಮ ಚಿಕಿತ್ಸಾ ಸೌಕರ್ಯಗಳನ್ನು ನೀಡುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

  • ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ಗೆ ಕೊರೊನಾ ದೃಢ

    ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ಗೆ ಕೊರೊನಾ ದೃಢ

    ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನ ಕೊರೊನಾ (Corona) ಪ್ರಕರಣಗಳು ಹೆಚ್ಚುತ್ತಿವೆ. ಈ ನಡುವೆ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ (Thawar Chand Gehlot) ಅವರಿಗೂ ಕೊರೊನಾ ದೃಢಪಟ್ಟಿರುವುದಾಗಿ ರಾಜ್ಯಪಾಲರ ಕಚೇರಿ ಮಾಹಿತಿ ನೀಡಿದೆ.

    ದಿನಕಳೆದಂತೆ ಕೊರೊನಾ ಕೇಸ್‌ಗಳು ಹೆಚ್ಚುತ್ತಿದೆ. ಇದೀಗ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಕೊರೊನಾ ದೃಢಪಟ್ಟಿದೆ ಎಂದು ರಾಜ್ಯಪಾಲ ಕಚೇರಿ ತಿಳಿಸಿದೆ. ಕೊರೊನಾ ಹಿನ್ನೆಲೆ ರಾಜ್ಯಪಾಲರನ್ನು ರಾಜಭವನದಲ್ಲಿ (Raja Bhavan) ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಇದನ್ನೂ ಓದಿ: ದುಡ್ಡು ಇದ್ದವರು ದೇವಸ್ಥಾನ ಕಟ್ಟುತ್ತಾರೆ, ಇಲ್ಲದವರು ಇರುವಲ್ಲೇ ಪೂಜಿಸಿ: ಸಿದ್ದರಾಮಯ್ಯ

    ಮಾತ್ರವಲ್ಲದೇ ಮುಂದಿನ ದಿನಾಂಕದವರೆಗೂ ರಾಜ್ಯಪಾಲರ ನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಿರುವುದಾಗಿ ರಾಜ್ಯಪಾಲ ಕಚೇರಿ ಹೇಳಿದೆ. ಇದನ್ನೂ ಓದಿ: ಲೋಕಸಭೆ ಟಿಕೆಟ್‍ಗಾಗಿ ಸೋಮಣ್ಣ ಲಾಬಿ- ಬುಧವಾರ ಅಮಿತ್ ಶಾ ಭೇಟಿ

    ಕೊರೊನಾ ಸೋಂಕಿಗೆ ಒಳಗಾಗಿರುವ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಟ್ವೀಟ್‌ ಮಾಡಿದ್ದಾರೆ.‌ ಇದನ್ನೂ ಓದಿ: ಸಂವಿಧಾನದ ತಿದ್ದುಪಡಿ ಮಾಡಿ 224 ಕ್ಷೇತ್ರಗಳಲ್ಲೂ ಸಿಎಂ, ಡಿಸಿಎಂ ಘೋಷಿಸಿ – ಈಶ್ವರಪ್ಪ ಲೇವಡಿ

  • ಮತ್ತೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಹೆಗಡೆ

    ಮತ್ತೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಹೆಗಡೆ

    ಕಾರವಾರ: ಲೋಕಸಭಾ ಚುನಾವಣೆಗೆ (Lok Sabha Election) ಸ್ಪರ್ಧಿಸುವಂತೆ ಕಾರ್ಯಕರ್ತರು ಒತ್ತಾಯ ಮಾಡಿದಾಗ ತಿರಸ್ಕರಿಸುವುದು ಮೂರ್ಖತನವಾಗುತ್ತದೆ ಎಂದು ಉತ್ತರ ಕನ್ನಡದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ (Ananth Kumar Hegde) ಹೇಳಿದ್ದಾರೆ.

    ಆರೋಗ್ಯದ (Health) ಸಮಸ್ಯೆಯಿಂದಾಗಿ ಚುನಾವಣಾ ರಾಜಕಾರಣ, ಪಕ್ಷದ ರಾಜಕಾರಣದಿಂದ ದೂರವಿದ್ದೆ. ಅಭಿಮಾನಿಗಳಿಂದ ಚುನಾವಣೆಗೆ ನಿಲ್ಲಬೇಕೆಂಬ ಒತ್ತಡ ಬರುತ್ತಿದೆ ಎಂದು ಅವರು ಹೇಳಿದರು.  ಇದನ್ನೂ ಓದಿ: ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಪೂಜಾ ಗಾಂಧಿ ದಂಪತಿ

    ಪಕ್ಷ ಹಾಗೂ ರಾಜಕಾರಣದಿಂದ ಮೂರು ವರ್ಷದಿಂದ ದೂರ ಉಳಿದಿದ್ದ ಅನಂತ್‌ಕುಮಾರ್ ಹೆಗಡೆ ಇಂದು ಶಿರಸಿಯ ಕೆ.ಹೆಚ್.ಬಿ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರು.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ಅಲ್ಪಸಂಖ್ಯಾತರ ವೋಟುಗಳು ಇಲ್ಲದೇ ಕಾಂಗ್ರೆಸ್ ಬದುಕಲು ಸಾಧ್ಯವಿಲ್ಲ. ಯಾವತ್ತೂ ಕಾಂಗ್ರೆಸ್ ಬಹುಸಂಖ್ಯಾತರ ರಾಜಕಾರಣ ಮಾಡಿಲ್ಲ.ಕಾಂಗ್ರೆಸ್‌ನವರು ಮನಸ್ಸಿಗೆ ಬಂದಂತೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

  • ನಟಿ ಹೇಮಾ ಚೌಧರಿ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ

    ನಟಿ ಹೇಮಾ ಚೌಧರಿ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ

    ನ್ನಡದ ಹೆಸರಾಂತ ನಟಿ ಹೇಮಾ ಚೌಧರಿ ಅವರ ಆರೋಗ್ಯದಲ್ಲಿ (Health) ಮತ್ತಷ್ಟು ಚೇತರಿಕೆ ಕಂಡಿದೆ. ಈ ಕುರಿತಂತೆ ನಿನ್ನೆಯಷ್ಟೇ ಅವರ ಪುತ್ರ ಮಾತನಾಡಿದ್ದರು. ಅಮ್ಮನಿಗೆ ರೆಸ್ಟ್ ಬೇಕಾಗಿದೆ. ಹಾಗಾಗಿ ಅವರಿಗೆ ತೊಂದರೆ ಮಾಡಲಿಕ್ಕೆ ಹೋಗಲಿಲ್ಲ. ಚಿಕಿತ್ಸೆಗೆ ಅವರು ಸ್ಪಂದಿಸುತ್ತಿದ್ದಾರೆ ಎಂದು ನಿನ್ನೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಜೊತೆಗೆ ದೊಡ್ಡಣ್ಣ ಸೇರಿದಂತೆ ಹಲವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.

    ರಡು ದಿನಗಳ ಹಿಂದೆ ಬ್ರೈನ್ ಹ್ಯಾಮರೇಜ್ (Brain Hemorrhage) ಗೆ ತುತ್ತಾಗಿದ್ದ ಹಿರಿಯ ನಟಿ ಹೇಮಾ ಚೌಧರಿ (Hema Chaudhary) ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ. ನಗರ ಪ್ರತಿಷ್ಠಿತ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು ನಿನ್ನೆ ಬೆಳಗ್ಗೆಗಿಂತ ಸಂಜೆ ಅವರ ಆರೋಗ್ಯದಲ್ಲಿ ಅಲ್ಪ ಚೇತರಿಕೆ ಕಂಡಿದೆ ಎಂದು ಹೇಳಲಾಗುತ್ತಿದೆ.

    ನಿನ್ನೆ ಬೆಳಗ್ಗೆ ಹೇಮಾ ಚೌಧರಿ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು, ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮೂರು ದಿನಗಳ ಹಿಂದೆ ಅವರಿಗೆ ಬ್ರೈನ್ ಹ್ಯಾಮರೇಜ್ ಆಗಿದ್ದು,  ಕೂಡಲೇ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು.

     

    ನಾಲ್ಕು ದಿನಗಳ ಹಿಂದೆಯಷ್ಟೇ ಅವರು ಲೀಲಾವತಿ ಅವರ 11ನೇ ದಿನದ ಕಾರ್ಯದಲ್ಲಿ ಭಾಗಿಯಾಗಿದ್ದರು. ವಿನೋದ್ ರಾಜ್ ಅವರಿಗೆ ಸಾಂತ್ವನ ಕೂಡ ಹೇಳಿದ್ದರು. ಆಸಮಯದಲ್ಲಿ ಆರೋಗ್ಯವಾಗಿದ್ದ ಹೇಮಾ ಅವರು, ಅಲ್ಲಿಂದ ಬಂದ ನಂತರ ಏಕಾಏಕಿ ಮೆದುಳಿನಲ್ಲಿ ರಕ್ತಸ್ರಾವ ಆಗಿದೆ ಎಂದು ಹೇಳಲಾಗುತ್ತಿದೆ. ಕನ್ನಡ, ಮಲಯಾಳಂ, ತೆಲುಗು, ತಮಿಳು ಹೀಗೆ ನಾನಾ ಭಾಷೆಗಳಲ್ಲಿ ಹೇಮಾ ಚೌಧರಿ ನಟಿಸಿದ್ದಾರೆ. ಕಿರುತೆರೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹೀಗಾಗಿ ಹೇಮಾ ಅವರ ಅನಾರೋಗ್ಯ ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

  • ಪ್ಯಾಕಿಂಗ್ ಆಹಾರ ಉತ್ಪನ್ನಗಳಿಂದ ಜೀರ್ಣಾಂಗಕ್ಕೆ ಹಾನಿ- ಏಮ್ಸ್ ವೈದ್ಯರಿಂದ ಹೊಸ ವರದಿ

    ಪ್ಯಾಕಿಂಗ್ ಆಹಾರ ಉತ್ಪನ್ನಗಳಿಂದ ಜೀರ್ಣಾಂಗಕ್ಕೆ ಹಾನಿ- ಏಮ್ಸ್ ವೈದ್ಯರಿಂದ ಹೊಸ ವರದಿ

    ನವದೆಹಲಿ: ಪ್ಯಾಕಿಂಗ್ ಆಹಾರ (Packed Foods) ಉತ್ಪನ್ನಗಳು ಜಠರದಲ್ಲಿರುವ ಪ್ರೋಬಯಾಟಿಕ್ ಬ್ಯಾಕ್ಟೀರಿಯಾವನ್ನು ಹಾನಿಗೊಳಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳು ಬರುವ ಸಾಧ್ಯತೆ ಇದೆ ಎಂದು ದೆಹಲಿ ಏಮ್ಸ್‌ (Delhi AIIMS) ಲ್ಯಾಬ್ ವರದಿ ತಿಳಿಸಿದೆ.

    ಜಠರದಲ್ಲಿರುವ ಪ್ರೋಬಯಾಟಿಕ್ ಬ್ಯಾಕ್ಟೀರಿಯಾ ಆಹಾರವನ್ನು ಜೀರ್ಣಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸತ್ತದೆ. ಅಲ್ಲದೇ ಇದನ್ನು ಉತ್ತಮ ಬ್ಯಾಕ್ಟೀರಿಯಾ ಎಂದು ಪರಿಗಣಿಸಲಾಗುತ್ತದೆ. ನಿರಂತರವಾಗಿ ಪ್ಯಾಕಿಂಗ್ ಆಹಾರಗಳನ್ನು ಸೇವಿಸುವುದರಿಂದ ಈ ಆಹಾರ ಪ್ರೋಬಯಾಟಿಕ್ ಬ್ಯಾಕ್ಟೀರಿಯಾ ದೇಹದಿಂದ ಹೊರ ಹಾಕುತ್ತದೆ ಎಂದು ದೆಹಲಿ ಏಮ್ಸ್ ವೈದ್ಯರು (Doctors) ನಡೆಸಿದ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದ್ದಾರೆ.ಇದನ್ನೂ ಓದಿ: ಚಂಡಮಾರುತ ಆವಾಂತರ: ನಟಿ ನಮಿತಾ ಮನೆಗೆ ನುಗ್ಗಿದ ನೀರು

    ಆಹಾರವನ್ನು ಜೀರ್ಣಿಸಿಕೊಳ್ಳುವುದು ಮತ್ತು ಅದರಿಂದ ಪೋಷಕಾಂಶಗಳನ್ನು ಹೊರತೆಗೆದು ದೇಹದ ವಿವಿಧ ಭಾಗಗಳಿಗೆ ತಲುಪಿಸುವುದು ಪ್ರೋಬಯಾಟಿಕ್ ಬ್ಯಾಕ್ಟೀರಿಯಾದ ಕೆಲಸವಾಗಿದೆ. ಸಂಸ್ಕರಿಸಿದ ಆಹಾರದಲ್ಲಿ ಇರುವ ಹೆಚ್ಚಿನ ಕೊಬ್ಬು ಮತ್ತು ಹೆಚ್ಚಿನ ಸಕ್ಕರೆ ಈ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

    ಇಂತಹ ಸಂದರ್ಭಗಳಲ್ಲಿ ಪೌಷ್ಠಿಕ ಆಹಾರ ಸೇವಿಸಿದರೂ ದೇಹಕ್ಕೆ ಸರಿಯಾದ ಪೋಷಣೆ ಸಿಗುವುದಿಲ್ಲ. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಬರುತ್ತವೆ. ಮೊದಲಿಗೆ ದೇಹದಲ್ಲಿ ಊತವಿರುತ್ತದೆ. ಬಳಿಕ ಕ್ರಮೇಣ ವ್ಯಕ್ತಿಗೆ ಮಧುಮೇಹ, ರಕ್ತದೊತ್ತಡ, ಶ್ವಾಸಕೋಶದ ಸೋಂಕು, ಕ್ಯಾನ್ಸರ್, ನರಸಂಬಂಧಿ ಸಮಸ್ಯೆಗಳು ಅಲ್ಲದೇ ಬೇರೆ ಸಮಸ್ಯೆಗಳು ಪ್ರಾರಂಭವಾಗುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.

    ದೇಹದಲ್ಲಿ ಪ್ರೋಬಯಾಟಿಕ್ ಬ್ಯಾಕ್ಟೀರಿಯಾಗಳು ದೇಹವನ್ನು ಆರೋಗ್ಯಕರವಾಗಿಡಲು ಮಾತ್ರವಲ್ಲದೇ ಅದರ ಸಹಾಯದಿಂದ ಬೊಜ್ಜು, ಅಲರ್ಜಿಯಂತಹ ಇತರ ಸಮಸ್ಯೆಗಳನ್ನು ಸಹ ತಡೆಯಬಹುದು. ಇದರ ಹೊರತಾಗಿ ಇದು ನೇರವಾಗಿ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಸಂಭವಿಸುವ ಅನೇಕ ರೀತಿಯ ಬ್ಯಾಕ್ಟೀರಿಯಾದ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.

    ಮೊಮೊಸ್, ನೂಡಲ್ಸ್, ಫ್ರೈಡ್ ರೈಸ್‍ನಂತಹ ಮೊದಲೇ ತಯಾರಿಸಿದ ಆಹಾರವನ್ನು ಸೇವಿಸಬಾರದು. ಪ್ರೋಬಯಾಟಿಕ್ ಬ್ಯಾಕ್ಟೀರಿಯಾವನ್ನು ಹೆಚ್ಚಿಸಲು ಮೊಸರು, ಹಾಲಿನಂತಹ ಇತರ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಇದರ ಹೊರತಾಗಿ ಬ್ಯಾಕ್ಟೀರಿಯಾವನ್ನು ಹೆಚ್ಚಿಸಲು ಅನೇಕ ರೀತಿಯ ಔಷಧಿಗಳು ಮತ್ತು ಇತರ ವಸ್ತುಗಳು ಸಹ ಲಭ್ಯವಿದೆ. ಪ್ರೋಬಯಾಟಿಕ್ ಬ್ಯಾಕ್ಟೀರಿಯಾದ ಕೊರತೆಯಿಂದ ದೇಹಕ್ಕೆ ಆಗುವ ಹಾನಿಯ ಬಗ್ಗೆ ಹೆಚ್ಚಿನ ಅಧ್ಯಯನವನ್ನು ಮಾಡಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಐಸಿಸ್‌ನೊಂದಿಗೆ ನಂಟಿದ್ದವರು ಯಾರೂ ಇರಲಿಲ್ಲ – ಮುಸ್ಲಿಂ ಧರ್ಮಗುರು ಸಯ್ಯದ್ ತಾಜುದ್ದೀನ್ ಖಾದ್ರಿ ಸ್ಪಷ್ಟನೆ

  • 262 ಅಂಬುಲೆನ್ಸ್‌ ಸೇರ್ಪಡೆ – ವ್ಯವಸ್ಥೆ ಬಲಪಡಿಸುವತ್ತ ಇದು ನಮ್ಮ ಮೊದಲ ಹೆಜ್ಜೆ : ದಿನೇಶ್ ಗುಂಡೂರಾವ್

    262 ಅಂಬುಲೆನ್ಸ್‌ ಸೇರ್ಪಡೆ – ವ್ಯವಸ್ಥೆ ಬಲಪಡಿಸುವತ್ತ ಇದು ನಮ್ಮ ಮೊದಲ ಹೆಜ್ಜೆ : ದಿನೇಶ್ ಗುಂಡೂರಾವ್

    ಬೆಂಗಳೂರು: 108 ಅಂಬುಲೆನ್ಸ್‌ (Ambulance) ಆರೋಗ್ಯ ಸೇವೆಗೆ 262 ನೂತನ ಅಂಬುಲೆನ್ಸ್‌ ಸೇರ್ಪಡೆಗೊಂಡಿವೆ. ವಿಧಾನ ಸೌಧದ (Vidhan Soudha) ಮುಂಭಾಗದಲ್ಲಿ ಇಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ನೂತನ ಅಂಬುಲೆನ್ಸ್‌ಗಳಿಗೆ ಚಾಲನೆ ನೀಡಿದರು.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ, 262 ನೂತನ ಅಂಬುಲೆನ್ಸ್‌ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಪಾಲ್ಗೊಂಡು ನೂತನ ಅಂಬುಲೆನ್ಸ್‌ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, 108 ಆರೋಗ್ಯ ಕವಚ ಅಂಬುಲೆನ್ಸ್‌ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ತರುವ ಅಗತ್ಯವಿದೆ. ಪ್ರಸ್ತುತ 262 ನೂತನ ಅಂಬುಲೆನ್ಸ್‌ಗಳನ್ನು ಸೇರ್ಪಡೆಗೊಳಿಸುತ್ರಿರುವುದು ಅಂಬುಲೆನ್ಸ್‌ ಸೇವೆ ಬಲಪಡಿಸುವತ್ತ ನಮ್ಮ ಮೊದಲ ಹೆಜ್ಜೆ ಅಷ್ಟೇ ಎಂದರು.‌  ಇದನ್ನೂ ಓದಿ: ಹೆಚ್ಚುವರಿ ಅಂಬುಲೆನ್ಸ್ ಖರೀದಿಗೆ ಹಣ ಒದಗಿಸ್ತೇವೆ: ಸಿದ್ದರಾಮಯ್ಯ

    ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ 108 ಅಂಬುಲೆನ್ಸ್‌ ಸೇವೆಯನ್ನ ಸುವ್ಯವಸ್ಥಿತಗೊಳಿಸಲು ಎಲ್ಲ ರೀತಿಯ ಅವಕಾಶಗಳಿವೆ. ಅಂಬುಲೆನ್ಸ್‌ ಸ್ಥಳಕ್ಕೆ ತಲುಪುವ ವೇಳೆಗೆ ವೈದ್ಯರಿಗೆ ರೋಗಿಯ ಮಾಹಿತಿ ತಲುಪಬೇಕು. ಹೊಸ ಹೊಸ ತಂತ್ರಜ್ಞಾನ ಉಪಯೋಗ ಮಾಡಿಕೊಂಡು ರೋಗಿಯ ಪರಿಸ್ಥಿತಿ ಆದಷ್ಟು ಬೇಗ ಆಸ್ಪತ್ರೆಗೆ ಮುಟ್ಟಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಅಂಬುಲೆನ್ಸ್‌ ಆರೋಗ್ಯ ಸೇವೆ ಬಲಪಡಿಸುವತ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

    ಆರೋಗ್ಯ ಕವಚ ಸೇವೆ ಗುಣಮಟ್ಟದ ವೃದ್ಧಿಯಲ್ಲಿ ಕುಂಠಿತವಾಗಿರುವುದು ನಿಜ.‌ ಈ ಸೇವೆಯಲ್ಲಿ ಸಾಕಷ್ಟು ಕುಂದುಕೊರತೆಗಳಿವೆ. ಲೋಪದೋಷಗಳನ್ನು ಸರಿಪಡಿಸಲು ಆರೋಗ್ಯ ಇಲಾಖೆ ಕಠಿಬದ್ಧವಾಗಿದೆ. 262 ಹೊಸ ಅಂಬುಲೆನ್ಸ್‌ ಆರೋಗ್ಯ ಕವಚ ಸೇವೆಗೆ‌ ಒದಗಿಸಿ ನಾವು ಸುಮ್ಮನಾಗಲ್ಲ. ಇವುಗಳ ನಿರ್ವಹಣೆಯತ್ತ ಹೆಚ್ವು ಗಮನ ಹರಿಸಲಿದ್ದೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು. ಇದನ್ನೂ ಓದಿ: 108 ಅಂಬುಲೆನ್ಸ್‌ನವ್ರು ಖಾಸಗಿ ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿಕೊಳ್ತಾರೆ: ಡಿಕೆಶಿ ಅಸಮಾಧಾನ

    ಈ ನಿಟ್ಟಿನಲ್ಲಿ ಈಗಾಗಲೇ ತಾಂತ್ರಿಕ ಸಲಹಾ ಸಮಿತಿ ರಚನೆ ಮಾಡಲಾಗಿದೆ. ಅಲ್ಲದೇ ಇಲಾಖೆಯ ಹಿರಿಯ ಅಧಿಕಾರಿಗಳ ತಂಡವನ್ನ ಬೇರೆ ರಾಜ್ಯಗಳಲ್ಲಿರುವ ಉತ್ತಮ ಮಾದರಿಗಳ ಅದ್ಯಾಯನಕ್ಕೆ ಕಳಿಸಲಾಗಿದೆ. ಹಿರಿಯ ಅಧಿಕಾರಿಗಳ ತಂಡ ಹಾಗೂ ತಾಂತ್ರಿಕ ಸಲಹಾ ಸಮಿತಿ ನೀಡುವ ವರದಿ ಆಧರಿಸಿ 108 ಅಂಬುಲೆನ್ಸ್‌ ಆರೋಗ್ಯ ಸೇವೆಯಲ್ಲಿ ಸುಧಾರಣೆಗಳನ್ನ ಜಾರಿಗೆ ತರುವುದಾಗಿ ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.