Tag: health

  • ಹಾಸನದಲ್ಲಿ ಹುಚ್ಚು ನಾಯಿಯ ಕಾಟ – 30 ಮಂದಿಗೆ ಕಚ್ಚಿ ಗಾಯ

    ಹಾಸನದಲ್ಲಿ ಹುಚ್ಚು ನಾಯಿಯ ಕಾಟ – 30 ಮಂದಿಗೆ ಕಚ್ಚಿ ಗಾಯ

    ಹಾಸನ: ಹುಚ್ಚು ನಾಯಿಯೊಂದು ಸಿಕ್ಕಸಿಕ್ಕವರ ಮೇಲೆ ದಾಳಿ ಮಾಡಿ (Mad Dog Bite) ಸುಮಾರು ಮೂವತ್ತಕ್ಕೂ ಹೆಚ್ಚು ಮಂದಿಗೆ ತೀವ್ರವಾಗಿ ಕಚ್ಚಿ ಗಾಯಗೊಳಿಸಿರುವ ಘಟನೆ ಹಾಸನದ (Hassan) ಸಿದ್ದಯ್ಯನಗರದಲ್ಲಿ ನಡೆದಿದೆ.

    ಹುಚ್ಚು ನಾಯಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಗಾಯಾಳುಗಳು ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ರಾತ್ರಿ ವೇಳೆ ಹಾಸನ ನಗರ ಸೇರಿದಂತೆ ಹಲವೆಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಮಳೆಯ ಪರಿಣಾಮ ಹಲವೆಡೆ ವಿದ್ಯುತ್ ವ್ಯತ್ಯಯವಾಗಿತ್ತು. ಈ ವೇಳೆ ಹುಚ್ಚು ನಾಯಿಯೊಂದು ನಡೆದು ಹೋಗುತ್ತಿದ್ದ, ಮಹಿಳೆಯರು, ಪುರುಷರು, ಮಕ್ಕಳು ಸೇರಿ ಸುಮಾರು ಮೂವತ್ತಕ್ಕೂ ಹೆಚ್ಚು ಮಂದಿಗೆ ಭೀಕರವಾಗಿ ಕಚ್ಚಿ ಗಾಯಗೊಳಿಸಿದೆ. ಮುಖ, ಕೈ, ಕಾಲು ತೀವ್ರವಾಗಿ ಕಚ್ಚಿ ಮಾಂಸ ಕಂಡವನ್ನೇ ಕಿತ್ತು ಹಾಕಿದೆ. ಈ ವೇಳೆ ನಾಯಿಯ ದಾಳಿಯಿಂದ ಹೆದರಿದ ಬಡಾವಣೆಯ ನಿವಾಸಿಗಳು ಮನೆಯೊಳಗೆ ಓಡಿ ಹೋಗಿದ್ದಾರೆ. ಇಷ್ಟೇ ಅಲ್ಲದೇ ಶನಿವಾರ ಬೆಳಿಗ್ಗೆಯೂ ಹಲವರ ಮೇಲೆ ಹುಚ್ಚು ನಾಯಿ ದಾಳಿ ಮಾಡಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಭೀಕರ ಅಪಘಾತ – ಕಲಬುರಗಿಯ ಮೂವರು ದುರ್ಮರಣ

    ಹುಚ್ಚು ನಾಯಿ ಸೆರೆ ಹಿಡಿಯಲು ನಗರಸಭೆ ಸಿಬ್ಬಂದಿ (Hassan City Municipal Council) ಹುಡುಕಾಟ ನಡೆಸಿದ್ದಾರೆ. ಆದರೆ ನಾಯಿ ಪತ್ತೆಯಾಗಿಲ್ಲ. ಹುಚ್ಚು ನಾಯಿ ಕಾಟದಿಂದ ಮನೆಯಿಂದ ಹೊರಗೆ ಬರಲು ನಿವಾಸಿಗಳು ಹೆದರುತ್ತಿದ್ದಾರೆ. ಅಲ್ಲದೇ ನಾಯಿಗಳ ಹಾವಳಿಗೆ ಕಡಿವಾಣ ಹಾಕದ ನಗರಸಭೆಯ ವಿರುದ್ಧ ಸಿದ್ದಯ್ಯನಗರದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಡಾವಣೆಯ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದು ಹುಚ್ಚು ನಾಯಿ ದಾಳಿಗೆ ಒಳಗಾಗಿರುವವರೆ ಸೂಕ್ತ ಚಿಕಿತ್ಸೆ ಹಾಗೂ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಅಲ್ಲದೇ ಹಾಸನ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು ಇದಕ್ಕೆ ಶೀಘ್ರದಲ್ಲಿಯೇ ಕಡಿವಾಣ ಹಾಕಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಿಮ್ಮ ಮಗ ವಿದೇಶಕ್ಕೆ ಹೋಗುವಾಗ ನಿಮ್ಮ ಅನುಮತಿ ಪಡೆದಿದ್ದರೇ – ಸಿಎಂಗೆ ಹೆಚ್‍ಡಿಕೆ ಪ್ರಶ್ನೆ

  • ಕೇರಳದಲ್ಲಿ ವೆಸ್ಟ್‌ನೈಲ್‌ ಆತಂಕ; ಏನಿದು ವೈರಸ್?‌

    ಕೇರಳದಲ್ಲಿ ವೆಸ್ಟ್‌ನೈಲ್‌ ಆತಂಕ; ಏನಿದು ವೈರಸ್?‌

    ದಿನಕಳೆದಂತೆ ನಾನಾರೀತಿಯ ವೈರಸ್‌ಗಳು ಸೃಷ್ಠಿಯಾಗುತ್ತಿದ್ದು, ಮನುಷ್ಯರಲ್ಲಿ ಆತಂಕ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನೆರೆಯ ರಾಜ್ಯವಾದ ಕೇರಳದಲ್ಲಿ (Kerala) ಹಕ್ಕಿಜ್ಚರ ಕಾಣಿಸಿಕೊಂಡಿತ್ತು. ಅದು ಮಾಸುವ ಮುನ್ನವೇ  ವೆಸ್ಟ್‌ನೈಲ್‌ (West Nile Virus) ಎಂಬ ವೈರಸ್‌ ಕೇರಳದ ಜನರನ್ನು ಕಾಡುತ್ತಿದ್ದು, ಈಗಾಗಲೇ ಮಕ್ಕಳು ಸೇರಿದಂತೆ ಕನಿಷ್ಟ ಐವರಲ್ಲಿ ಸೋಂಕು ದೃಢಪಟ್ಟಿದೆ. ವೆಸ್ಟ್‌ನೈಲ್‌ ವೈರಸ್‌ ಎಂದರೇನು? ರೋಗಲಕ್ಷಣಗಳೇನು ಎಂಬುದರ ಕುರಿತು ಸಣ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. 

    ಕೇರಳದ ತ್ರಿಶೂರ್‌, ಮಲಪ್ಪುರಂ ಹಾಗೂ ಕೋಝಿಕ್ಕೋಡ್‌ನಲ್ಲಿ ವೆಸ್ಟ್‌ನೈಲ್‌ ಜ್ವರ ಹರಡುತ್ತಿದೆ. ಇದು ಸೊಳ್ಳೆಯಿಂದ (Mosquito) ಹರಡುವ ರೋಗವಾಗಿದ್ದು, ಸೊಳ್ಳೆಗಳ ನಿಯಂತ್ರಣಕ್ಕೆ ರಾಜ್ಯದಾದ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ವಹಿಸಲಾಗಿದೆ. ಮುಂಗಾರು ಪೂರ್ವ ಸಮಯದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗುವ ಕಾರಣ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

    ಏನಿದು ವೈರಸ್?‌
    ವೆಸ್ಟ್‌ನೈಲ್‌ ವೈರಸ್‌ 1937ರಲ್ಲಿ ಮೊದಲ ಬಾರಿಗೆ ಉಗಾಂಡಾದ ವೆಸ್ಟ್‌ನೈಲ್‌ ಜಿಲ್ಲೆಯಲ್ಲಿ ಮಹಿಳೆಯೊಬ್ಬರಲ್ಲಿ ಕಾಣಿಸಿಕೊಂಡಿತು. ಕೇರಳವು 2011ರಲ್ಲಿ ವೆಸ್ಟ್‌ನೈಲ್ ಜ್ವರದ ಮೊದಲ ಪ್ರಕರಣವನ್ನು ವರದಿ ಮಾಡಿದೆ. 2019 ರಲ್ಲಿ ಮಲಪ್ಪುರಂನ ಆರು ವರ್ಷದ ಬಾಲಕ ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾನೆ. 2022ರಲ್ಲಿ, ತ್ರಿಶೂರ್ ಜಿಲ್ಲೆಯ 47 ವರ್ಷದ ವ್ಯಕ್ತಿಯೊಬ್ಬರು ಈ ರೋಗದಿಂದ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. 

    ರಾಜ್ಯ ಆರೋಗ್ಯ ಇಲಾಖೆಯ ಪ್ರಕಾರ, ಈ ವೈರಸ್ ಮಾನವರಲ್ಲಿ ಮಾರಣಾಂತಿಕ ನರವೈಜ್ಞಾನಿಕ ಕಾಯಿಲೆಗೆ ಕಾರಣವಾಗಬಹುದು. ಆದರೆ, ಕೆಲವೊಮ್ಮೆ ಸೋಂಕಿಗೆ ಒಳಗಾದ ಹೆಚ್ಚಿನ ವ್ಯಕ್ತಿಗಳಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬರುವುದಿಲ್ಲ. ಇದು ಮುಖ್ಯವಾಗಿ ಸೋಂಕಿತ ಸೊಳ್ಳೆಗಳ ಕಡಿತದ ಮೂಲಕ ಮನುಷ್ಯರಿಗೆ ಹರಡುತ್ತದೆ. 

    ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ವೆಸ್ಟ್‌ನೈಲ್ ವೈರಸ್ ಮುಖ್ಯವಾಗಿ ಆಫ್ರಿಕಾ, ಯುರೋಪ್, ಮಧ್ಯಪ್ರಾಚ್ಯ, ಉತ್ತರ ಅಮೆರಿಕ ಮತ್ತು ಪಶ್ಚಿಮ ಏಷ್ಯಾದಲ್ಲಿ ಕಂಡುಬರುತ್ತದೆ.  ಈ ಜ್ವರವು ಕ್ಯೂಲೆಕ್ಸ್ ಜಾತಿಯ ಸೊಳ್ಳೆಗಳಿಂದ ಹರಡುತ್ತದೆ.

    ರೋಗಲಕ್ಷಣಗಳೇನು?
    ಸಾಮಾನ್ಯವಾಗಿ ಮೊಟ್ಟಮೊದಲ ಬಾರಿಗೆ ಈ ಸೋಂಕಿಗೆ ಒಳಗಾದ 80% ಜನರಲ್ಲಿ ಯಾವುದೇ ಬಗೆಯ ರೋಗ ಲಕ್ಷಣಗಳು ಕಂಡುಬರುವುದಿಲ್ಲ. ಕೆಲವರಲ್ಲಿ ಜ್ವರ, ತಲೆನೋವು, ಸುಸ್ತು, ದೇಹದ ನೋವು, ವಾಕರಿಕೆ, ವಾಂತಿ, ಚರ್ಮದ ದದ್ದುಗಳು ಮತ್ತು ಊದಿಕೊಂಡ ದುಗ್ಧರಸ ಗ್ರಂಥಿಗಳು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದಲ್ಲದೆ, ಕೆಲವು ರೋಗಿಗಳಲ್ಲಿ ಕುತ್ತಿಗೆ ಬಿಗಿತ, ಮೂರ್ಖತನ, ದಿಗ್ಭ್ರಮೆ, ಕೋಮಾ, ನಡುಕ, ಸೆಳೆತ, ಸ್ನಾಯು ದೌರ್ಬಲ್ಯ ಮತ್ತು ಪಾರ್ಶ್ವವಾಯು ಸೇರಿದಂತೆ ತೀವ್ರವಾದ ರೋಗಲಕ್ಷಣಗಳು ಸಹ ಕಾಣಿಸಿಕೊಳ್ಳಬಹುದು.

    ಈ ಸೋಂಕು ತಗುಲಿದವರಲ್ಲಿ 1%ಕ್ಕಿಂತ ಕಡಿಮೆ ಪ್ರಕರಣದಲ್ಲಿ ಗಂಭೀರತೆ ಗೋಚರವಾಗಬಹುದು. ಸೋಂಕು ತಗುಲಿ ಸಮಸ್ಯೆ ಗಂಭೀರವಾದರೆ ಮೆದುಳಿನಲ್ಲಿ ಉರಿಯೂತ ಅಥವಾ ಮೆನಿಂಜೈಟಿಸ್‌ನಂತಹ ನರವೈಜ್ಞಾನಿಕ ತೊಡಕುಗಳು ಉಂಟಾಗಬಹುದು. ಇದು ಮೆದುಳು ಮತ್ತು ಬೆನ್ನುಹುರಿಯ ಸುತ್ತಲಿನ ಪೊರೆಗಳ ಉರಿಯೂತಕ್ಕೆ ಕಾರಣವಾಗಬಹುದು ಎಂದು ಡಾ.ರಾಕೇಶ್‌ ಗುಪ್ತಾ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಈ ವೈರಸ್‌ನ ಪ್ರಭಾವ ಸಾಮಾನ್ಯವಾಗಿ ಮೂರರಿಂದ 14 ದಿನಗಳ ವರೆಗೆ ಇರುತ್ತದೆ.

    ವೆಸ್ಟ್‌ನೈಲ್‌ ರೋಗಕ್ಕೆ ಇಲ್ಲ ಚಿಕಿತ್ಸೆ:
    ವೆಸ್ಟ್‌ನೈಲ್ ರೋಗಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ ಎಂದು ಡಾ ಗುಪ್ತಾ ತಿಳಿಸಿದ್ದಾರೆ. ಸೌಮ್ಯವಾದ ಪ್ರಕರಣಗಳಲ್ಲಿ, ನೋವು ಮತ್ತು ಜ್ವರ ಪರಿಹಾರಕ್ಕಾಗಿ ಪ್ರತ್ಯಕ್ಷವಾದ ಔಷಧಿಗಳ ಮೂಲಕ ರೋಗಲಕ್ಷಣಗಳನ್ನು ನಿರ್ವಹಿಸಬಹುದು.

    ತೀವ್ರತರವಾದ ಪ್ರಕರಣಗಳಿಗೆ ಆಸ್ಪತ್ರೆಗೆ ಸೇರಿಸುವುದು, ಅಭಿದಮನಿ ದ್ರವಗಳು, ಉಸಿರಾಟದ ಬೆಂಬಲ ಮತ್ತು ದ್ವಿತೀಯಕ ಸೋಂಕುಗಳ ತಡೆಗಟ್ಟುವಿಕೆ ಅಗತ್ಯವಾಗಬಹುದು.

    ಅನಾರೋಗ್ಯದಿಂದ ಚೇತರಿಸಿಕೊಳ್ಳುವುದು ವ್ಯಕ್ತಿಯ ವಯಸ್ಸು ಮತ್ತು ಒಟ್ಟಾರೆ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತದೆ, ವಯಸ್ಸಾದ ವಯಸ್ಕರು ಮತ್ತು ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವವರು ತೀವ್ರ ತೊಡಕುಗಳಿಗೆ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.

    ತಡೆಗಟ್ಟುವುದು ಹೇಗೆ?
    ವೆಸ್ಟ್‌ನೈಲ್‌ ರೋಗಕ್ಕೆ ಯಾವುದೇ ಔಷಧಿ ಅಥವಾ ಚಿಕಿತ್ಸೆ ಇಲ್ಲದ ಕಾರಣ ಆದಷ್ಟು ನಮ್ಮ ಆರೋಗ್ಯದ ಕಾಳಜಿಯನ್ನು ವಹಿಸಬೇಕು. ಮನೆಗೆ ಸೊಳ್ಳೆಗಳು ಬರದಂತೆ ನೋಡಿಕೊಳ್ಳುವುದು, ಶುಚಿತ್ವ ಕಾಪಾಡಿಕೊಳ್ಳುವುದರಿಂದ ಸೋಂಕು ತಗುಲದಂತೆ ನೋಡಿಕೊಳ್ಳಬಹುದು. ಅಲ್ಲದೇ ಮಲಗುವ ವೇಳೆ ಸೊಳ್ಳೆ ಪರದೆಯನ್ನು ಬಳಸುವುದು ಉತ್ತಮ. ಇನ್ನು ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ದೂರವಿರುವುದರಿಂದ ಸೋಂಕು ಹರಡುವುದನ್ನು ತಡೆಗಟ್ಟಬಹುದು. 

  • ಮಾಜಿ ಸಿಎಂ ಎಸ್‌.ಎಂ ಕೃಷ್ಣರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಕೆ

    ಮಾಜಿ ಸಿಎಂ ಎಸ್‌.ಎಂ ಕೃಷ್ಣರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಕೆ

    ಬೆಂಗಳೂರು: ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಎಸ್‌.ಎಂ ಕೃಷ್ಣ (S.M Krishna) ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ.

    ವಯೋಸಹಜ ಕಾಯಿಯಲೆಯಿಂದ ಕೆಲ ದಿನಗಳ ಹಿಂದೆ ಎಸ್‌ಎಂಕೆ ಅವರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಮಾಜಿ ಮುಖ್ಯಮಂತ್ರಿಗಳಿಗೆ ಡಾ.ಸತ್ಯನಾರಾಯಣ ಮೈಸೂರು ಮತ್ತು ಡಾ.ಸುನೀಲ್ ಕಾರಂತ್ ನೇತೃತ್ವದ ಕ್ರಿಟಿಕಲ್ ಕೇರ್ ತಂಡ ಚಿಕಿತ್ಸೆ ನೀಡುತ್ತಿದೆ.

    ಏಪ್ರಿಲ್ 21ರಂದು ಜ್ವರ, ಕೆಮ್ಮು ಕಾಣಿಸಿಕೊಂಡ ಹಿನ್ನೆಲೆ 91 ವರ್ಷ ವಯಸ್ಸಿನ ಎಸ್‌ಎಂಕೆಯವರನ್ನು ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯ ವೈದೇಹಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಚಿಕಿತ್ಸೆ ನಂತರ ಅವರು ಡಿಸ್ಟಾರ್ಜ್ ಸಹ ಆಗಿದ್ದರು. ಕೆಲ ದಿನಗಳ ಬಳಿಕ ಮತ್ತೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಮುಂದಿನ 3 ಗಂಟೆಯಲ್ಲಿ ರಾಜ್ಯದ ಹಲವು ಕಡೆ ಭಾರೀ ಗಾಳಿ, ಮಳೆ ಸಾಧ್ಯತೆ

  • ಹಸಿವಿನ ಬಗ್ಗೆ ನಿಮಗೆಷ್ಟು ಗೊತ್ತು? – ನೀವು ನಿಜವಾಗಿಯೂ ಹಸಿದಿದ್ದೀರಾ or ಇಲ್ಲವಾ?; ತಜ್ಞರು ಏನು ಹೇಳ್ತಾರೆ?

    ಹಸಿವಿನ ಬಗ್ಗೆ ನಿಮಗೆಷ್ಟು ಗೊತ್ತು? – ನೀವು ನಿಜವಾಗಿಯೂ ಹಸಿದಿದ್ದೀರಾ or ಇಲ್ಲವಾ?; ತಜ್ಞರು ಏನು ಹೇಳ್ತಾರೆ?

    ಸಿವು (Hungry) ಯಾರ ಅನುಭವಕ್ಕೆ ಬಾರದೇ ಇದೆ ಹೇಳಿ? ಈ ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಸಕಲ ಜೀವರಾಶಿಗೂ ಹಸಿವು ಎನ್ನುವುದ ಇದ್ದೇ ಇರುತ್ತದೆ. ಮನುಷ್ಯ ಬುದ್ದಿಜೀವಿ. ತನಗೆ ಹಸಿವಾದಾಗ ಬಾಯಿ ಬಿಟ್ಟು ಹೇಳಿಕೊಳ್ಳುತ್ತಾನೆ. ಆದರೆ ಇತರೆ ಜೀವಿಗಳಿಗೆ ಹಸಿವಾದರೂ ಅದನ್ನು ಹೇಳಿಕೊಳ್ಳಲು ಆಗುವುದಿಲ್ಲ. ಅದಕ್ಕೆ ಒಂದು ಮತ್ತೊಂದನ್ನು ಅವಲಂಬಿಸಿ, ಬೇಟೆಯಾಡಿ ತಿಂದು ಹಸಿವನ್ನು ನೀಗಿಸಿಕೊಳ್ಳುತ್ತವೆ.

    ಋತುಚಕ್ರ ಬದಲಾವಣೆಯೊಂದಿಗೆ ಜಗತ್ತು ಕ್ರಿಯಾಶೀಲವಾಗಿದೆ. ಮನುಷ್ಯನ ಅಸ್ತಿತ್ವಕ್ಕೆ ಜೀವನಚಕ್ರ ಆಕಾರ. ಅಂತೆಯೇ ಮಾನವ ದೇಹದ ಬೆಳವಣಿಗೆಯಲ್ಲಿ ಜೀರ್ಣಕ್ರಿಯೆ ಆಧಾರ. ಮಾನವನಿಗೆ ಹಸಿವಾಗಲು ಜೀರ್ಣಕ್ರಿಯೆಯೇ ಪ್ರಮುಖ ಕಾರಣ. ಇದನ್ನೂ ಓದಿ: PublicTV Explainer: ಬೆಂಗಳೂರಿನ ಕುದುರೆಗಳಲ್ಲಿ ಗ್ಲ್ಯಾಂಡರ್ಸ್‌ ರೋಗ; ಏನಿದು ಮಾರಕ ಕಾಯಿಲೆ – ಮನುಷ್ಯರಿಗೂ ಹರಡುತ್ತಾ?

    ಹಸಿವು ಕೇವಲ ಹೊಟ್ಟೆಗೆ ಸೀಮಿತವಾದದ್ದು ಎಂದು ಕೆಲವರು ತಪ್ಪಾಗಿ ಭಾವಿಸುತ್ತಾರೆ. ಹೊಟ್ಟೆ ಹಸಿದಾಗ ಊಟ ಮಾಡಬೇಕು ಎಂದಷ್ಟೇ ಯೋಚಿಸುವವರೂ ಇದ್ದಾರೆ. ಹಸಿವಿನ ಸಂಕೇತ ಹೊಟ್ಟಿಯಿಂದಷ್ಟೇ ವ್ಯಕ್ತವಾಗುತ್ತದೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು ಕಲ್ಪನೆ. ಹಸಿವು ಅನ್ನೋದು ಸಂಕೀರ್ಣ ವಿಷಯ. ಅದು ಇಡೀ ದೇಹಕ್ಕೆ ಸಂಬಂಧಿದ್ದು. ಅಷ್ಟೇ ಅಲ್ಲ, ಹಸಿವಿಗೂ ಮನುಷ್ಯನ ಆರೋಗ್ಯಕರ ಮಾನಸಿಕತೆ ಮತ್ತು ಭಾವನೆಗಳಿಗೂ ಸಂಬಂಧಿಸಿದ್ದಾಗಿದೆ. ನೀವು ನಿಜವಾಗಿಯೂ ಹಸಿದಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಇದು ದೈಹಿಕ ಸೂಚನೆಗಳು, ಭಾವನಾತ್ಮಕ ಸ್ಥಿತಿಗಳು ಮತ್ತು ಅಭ್ಯಾಸದ ನಡವಳಿಕೆಗಳ ಸೂಕ್ಷ್ಮ ಸಮತೋಲನವನ್ನು ಒಳಗೊಂಡಿರುತ್ತದೆ.

    ಹಸಿವು ಹೇಗಾಗುತ್ತೆ?
    ನಾವು ತಿಂಡಿ ಅಥವಾ ಊಟ ಸೇವಿಸಿದಾಗ ಹೊಟ್ಟೆಯೊಳಗಡೆ ಒಂದು ಪ್ರಕ್ರಿಯೆ ನಡೆಯುತ್ತದೆ. ಹಿಂದಿನ ಊಟದ ಜೀರ್ಣಕ್ರಿಯೆಯು ಸಂಪೂರ್ಣವಾಗಿ ಮುಗಿದಾಗ, ಹೊಟ್ಟೆಯೊಳಗೆ ಆಹಾರದ ಮಂಥನವಾಗುತ್ತದೆ. ದೇಹದ ಜೀವಕೋಶಗಳು ಆಹಾರದಲ್ಲಿನ ಪೋಷಕಾಂಶಗಳನ್ನು ಹೀರಿಕೊಳ್ಳುವ ಕೆಲಸ ಮಾಡುತ್ತವೆ. ವೇಸ್ಟ್ ಎನ್ನುವಂತಹದ್ದನ್ನು ಹೊರಕ್ಕೆ ತಳ್ಳಲಾಗುತ್ತದೆ. ಈ ಕೆಲಸ ಮುಗಿದಂತೆಯೇ ಅಂಗಗಳಿಗೆ ವಿಶ್ರಾಂತಿ ಬೇಕಾಗುತ್ತದೆ. ಹೊಟ್ಟೆಯ ಚೀಲವು ಎಲ್ಲವನ್ನೂ ಸಂಪೂರ್ಣವಾಗಿ ತೆರವುಗೊಳಿಸಿದ ನಂತರ ಹಸಿವುಂಟಾಗುತ್ತದೆ.

    ದೇಹದಲ್ಲಿ ಹಸಿವಾದಾಗ ಮನಸ್ಸು ಅದನ್ನು ಅರ್ಥೈಸಿಕೊಳ್ಳುತ್ತದೆ. ಆಹಾರ ಬೇಕೆಂಬ ಸೂಚನೆ ಬುದ್ಧಿಗೆ ರವಾನೆಯಾಗುತ್ತದೆ. ದೇಹದ ದೀರ್ಘಾಯುಷ್ಯ, ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಮತ್ತು ಮನಸ್ಸು ಚೈತನ್ಯದಿಂದ ಕೂಡಿರಲು ಆಹಾರ ಅತ್ಯವಶ್ಯಕ. ಹಸಿವಾದಾಗ ಮಾತ್ರ ನಾವು ಆಹಾರ ಸರಿಯಾದ ಪ್ರಮಾಣದಲ್ಲಿ ಸೇವಿಸಬಹುದು. ಇದನ್ನೂ ಓದಿ: ತೀವ್ರವಾಗಿರುವ ಬಿಸಿಲಿನಿಂದ ನಿಮ್ಮನ್ನು ನೀವು ಹೀಗೆ ರಕ್ಷಿಸಿಕೊಳ್ಳಿ

    ಹಸಿವಾದಾಗ ತಿನ್ನುವುದು ಎಷ್ಟು ಉತ್ತಮ?
    ತಿನ್ನುವುದನ್ನೇ ಹೆಚ್ಚು ಹವ್ಯಾಸ ಮಾಡಿಕೊಂಡವರು ಬೇಸರದಲ್ಲಿದ್ದಾಗ, ಕೆಲಸದ ಒತ್ತಡದಲ್ಲಿ ಬ್ರೇಕ್ ತೆಗೆದುಕೊಳ್ಳಲು.. ಹೀಗೆ ಯಾವಾಗ ಬೇಕೆಂದರಾವಾಗ ಏನನ್ನಾದರು ತಿನ್ನುತ್ತಿರುತ್ತಾರೆ. ಇದು ದೇಹದ ಆರೋಗ್ಯಕ್ಕೆ ಪೂರಕವಾಗಲ್ಲ. ಬದಲಾಗಿ ಮಾರಕವಾಗುತ್ತದೆ. ಹಸಿವಾದಾಗ ತಿನ್ನುವುದು ದೇಹಕ್ಕೆ ಅಗತ್ಯ ಪೋಷಕಾಂಶವನ್ನು ಒದಗಿಸುತ್ತದೆ.

    ಹಸಿವಿನ ಸಾಮಾನ್ಯ ಸೂಚನೆಗಳೇನು?
    * ದೇಹದಲ್ಲಿ ಪೋಷಕಾಂಶದಂತಹ ನಿಕ್ಷೇಪಗಳು ಖಾಲಿಯಾದಾಗ, ದೇಹ ದುರ್ಬಲಗೊಂಡಂತೆ ಭಾಸವಾಗುತ್ತದೆ. ಶಕ್ತಿ ಕುಂದುತ್ತದೆ. ಆಯಾಸದ ಭಾವನೆಗೆ ಕಾರಣವಾಗುತ್ತದೆ.
    * ಖಾಲಿ ಡಬ್ಬ ಸದ್ದು ಮಾಡುತ್ತದೆ. ಹಾಗೆಯೇ ಹಸಿವಾದಾಗ ಹೊಟ್ಟೆ ಸದ್ದು ಮಾಡುತ್ತದೆ.
    * ದೇಹದ ಆರೋಗ್ಯಕ್ಕೆ ಸಾತ್ವಿಕ, ಶುದ್ಧ ಆಹಾರ ತುಂಬಾ ಅವಶ್ಯಕ. ಇಂತಹ ಆಹಾರ ಸೇವನೆಯಿಂದ ಸಾಮಾನ್ಯವಾಗಿ 4 ಗಂಟೆ ಅವಧಿಯಲ್ಲಿ ಹಸಿವು ಪ್ರಾರಂಭವಾಗುತ್ತದೆ.

    ನೀವು ನಿಜವಾಗಿಯೂ ಹಸಿದಿದ್ದೀರಾ?
    ಮೇಲೆ ತಿಳಿದಿದ್ದು ಸಾಮಾನ್ಯ ಹಸಿವಿನ ಸೂಚನೆಗಳಷ್ಟೆ. ಆದರೆ ನಿಜವಾಗಿಯೂ ಹಸಿವಾಗುವಿಕೆ ಬಗ್ಗೆ ಕೆಲವೊಂದು ಅಚ್ಚರಿಯ ಅಧ್ಯಯನದ ಅಂಶಗಳನ್ನು ತಜ್ಞರು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಮಗು ಆರೋಗ್ಯವಾಗಿ, ಫಿಟ್ ಆಗಿರಲು ಗರ್ಭಿಣಿಯರು ಈ ಆಹಾರಗಳನ್ನು ಸೇವಿಸಿ

    ಬಾಯಾರಿಕೆ
    ಕೆಲವೊಮ್ಮೆ ಕೇವಲ ಬಾಯಾರಿಕೆಯಿಂದ ನಿಜವಾಗಿಯೂ ಹಸಿವಾಗಿದೆ ಎಂದು ಭಾವಿಸಿ ಕೆಲವರು ಆಹಾರ ಸೇವಿಸಲು ಮುಂದಾಗುತ್ತಾರೆ. ಅಂತಹ ಸನ್ನಿವೇಶದಲ್ಲಿ ಆಹಾರ ತಿನ್ನುವ ಮೊದಲು ಒಂದು ಲೋಟ ನೀರು ಕುಡಿಯಬೇಕು. ಬಾಯಾರಿಕೆ ನೀಗಲು ಕೆಲ ನಿಮಿಷ ತೆಗೆದುಕೊಳ್ಳುತ್ತದೆ.

    ಬಾಯಲ್ಲಿ ಹೆಚ್ಚು ನೀರೂರುವುದು
    ದೇಹಕ್ಕೆ ತುಂಬಾ ಆಯಾಸವಾಗಿ ಹಸಿವು ಉತ್ತುಂಗಕ್ಕೇರಿದಾಗ ಬಾಯಲ್ಲಿ ಜೊಲ್ಲು ಹೆಚ್ಚಾಗಿ ಆವರಿಸಲು ಪ್ರಾರಂಭವಾಗುತ್ತದೆ. ಅದು ಹೊಟ್ಟೆಯನ್ನು ಸೇರುತ್ತದೆ. ಇದು ಕೂಡ ಹಸಿವಿನ ಒಂದು ಸೂಚನೆ. ಇದನ್ನೂ ಓದಿ: ಎಲೆಗಳು ಮಾತ್ರವಲ್ಲದೆ ತುಳಸಿ ಬೀಜಗಳೂ ಆರೋಗ್ಯಕ್ಕೆ ಒಳ್ಳೆಯದು!

    ತಲೆನೋವು
    ಎಷ್ಟೋ ಜನ ಹೆಚ್ಚು ಒತ್ತಡ ಆದಾಗ ತಲೆನೋವು ಬರುತ್ತದೆ ಎಂದು ಭಾವಿಸುತ್ತಾರೆ. ಆದರೆ ಕೆಲವೊಮ್ಮೆ ತುಂಬಾ ಹಸಿವಾದಾಗಲೂ ತಲೆನೋವು ಬರುತ್ತದೆ. ಅಂತಹವರಿಗೆ ಆಹಾರ ಸೇವಿಸಿದಾಗ ತಲೆನೋವು ಕಡಿಮೆಯಾಗುತ್ತದೆ.

    ಸಿಟ್ಟು
    ಸಿಟ್ಟಾದವರನ್ನು ಕಂಡಾಗ, ಯಾರೋ ಕಿಚಾಯಿಸಿರಬಹುದು ಅಥವಾ ಬೇಸರವಾಗುವಂತೆ ನಡೆದುಕೊಂಡಿರಬಹುದು ಎಂದುಕೊಳ್ಳುವವರೇ ಹೆಚ್ಚು. ಆದರೆ ತೀವ್ರತರ ಹಸಿವು ಸಹ ಸಿಟ್ಟಿಗೆ ಕಾರಣವಾಗಬಹುದು ಎಂಬುದನ್ನು ಗಮನದಲ್ಲಿಡಿ. ಹಸಿವು ತಾಳ್ಮೆಯನ್ನು ಕೆಡಿಸುತ್ತದೆ. ಆಗ ಸಣ್ಣಪುಟ್ಟ ವಿಚಾರಗಳಿಗೂ ವ್ಯಕ್ತಿ ಸಿಟ್ಟಾಗಲು ಕಾರಣವಾಗುತ್ತದೆ.

  • ಕೋವಿಶೀಲ್ಡ್ ಲಸಿಕೆ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ: ದಿನೇಶ್ ಗುಂಡೂರಾವ್

    ಕೋವಿಶೀಲ್ಡ್ ಲಸಿಕೆ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ: ದಿನೇಶ್ ಗುಂಡೂರಾವ್

    ಬೆಂಗಳೂರು/ಧಾರವಾಡ: ಕೋವಿಶೀಲ್ಡ್ ಲಸಿಕೆ (Covishield Vaccine) ಪಡೆದವರಲ್ಲಿ ಅಡ್ಡಪರಿಣಾಮಗಳು ಉಂಟಾಗುತ್ತಿದೆ ಎಂಬುದರ ಕುರಿತು ಜನರು ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ.

    ಈ ಕುರಿತು ಧಾರವಾಡದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕೆಲವರಿಗೆ ಅಡ್ಡ ಪರಿಣಾಮಗಳು ಆಗಿರುವ ಬಗ್ಗೆ ಮಾಹಿತಿ ಇದೆ. ಲಸಿಕೆ ಎಂದ ಮೇಲೆ ಸಣ್ಣ ಪ್ರಮಾಣದ ಸೈಡ್ ಎಫೆಕ್ಟ್ ಇರುತ್ತೆ. ಆದರೆ ಜನರು ಏನೋ ಆಗಿಬಿಡುತ್ತೆ ಎಂದು ಭಯಪಡಬಾರದು ಎಂದು ಹೇಳಿದರು. ಇದನ್ನೂ ಓದಿ: ಪ್ರಜ್ವಲ್ ಅಂತಹ ಸ್ವಭಾವದ ಹುಡುಗ ಅಲ್ಲ: ಜಿ.ಎಸ್ ಬಸವರಾಜ್

    ಕರ್ನಾಟಕದಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಗಂಭೀರ ಆರೋಗ್ಯ ಸಮಸ್ಯೆಗಳು ಕಂಡುಬಂದಿದೆ. ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಪರಿಶೀಲನೆ ನಡೆಸಲಾಗಿದೆ. ನಾಲ್ಕೈದು ಜನರಿಗೆ ವ್ಯಾಕ್ಸಿನ್ ಪಡೆದ ಬಳಿಕ ಗಂಭೀರ ಆರೋಗ್ಯ ಸಮಸ್ಯೆ ಎದುರಿಸಿರುವ ಬಗ್ಗೆ ಮಾಹಿತಿ ಇದೆ. ಆದರೆ ಇದು ಲಸಿಕೆಯಿಂದಲೇ ಆಗಿದೆಯಾ ಅಥವಾ ಬೇರೆ ಆರೋಗ್ಯದ ಸಮಸ್ಯೆಗಳು ಕೂಡ ಕಾರಣವಾ ಎಂಬುದನ್ನ ನೋಡಬೇಕು ಎಂದರು. ಇದನ್ನೂ ಓದಿ: ಪ್ರಜ್ವಲ್‌ ಪೆನ್‌ಡ್ರೈವ್‌ ಕೇಸ್‌ ವಿಚಾರದಲ್ಲಿ ದೇವೇಗೌಡರು ಸಾಕಷ್ಟು ನೊಂದಿದ್ದಾರೆ: ನಿಖಿಲ್‌ ಕುಮಾರಸ್ವಾಮಿ

    ಕೋವಿಶೀಲ್ಡ್ ವಾಕ್ಸಿನ್ ಪಡೆದವರೆಲ್ಲರಿಗೂ ಆರೋಗ್ಯ ತೊಂದರೆಗಳಾಗುತ್ತವೆ ಎಂದು ಭಯ ಪಡುವ ಅಗತ್ಯವಿಲ್ಲ. ಏನೋ ಆಗಿಬಿಡುತ್ತೆ ಎಂದು ಸಾರ್ವತ್ರಿಕವಾಗಿ ಭಯದ ವಾತವಾರಣ ಸೃಷ್ಟಿಯಾಗುತ್ತಿರುವುದನ್ನ ಗಮನಿಸಿದ್ದೇನೆ. ಆದರೆ ಈಗಾಗಲೇ ವ್ಯಾಕ್ಸಿನ್ ಪಡೆದು ಎರಡು ವರ್ಷಗಳು ಕಳೆದು ಹೋಗಿವೆ. ಹೀಗಿರುವಾಗ ಈಗ ಅಷ್ಟೊಂದು ಅಡ್ಡಪರಿಣಾಮ ಆಗಲ್ಲ ಎಂಬ ಅಭಿಪ್ರಾಯಗಳು ಕೂಡ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಮೋದಿಯವರನ್ನು ಎಳೆದು ತರಬೇಡಿ: ನಿಖಿಲ್ ಮನವಿ

    ವದಂತಿಗಳಿಗೆ ಜನರು ಕಿವಿಗೊಡಬಾರದು. ಯಾರಿಗೆ ದೇಹದಲ್ಲಿ ಸಮಸ್ಯೆಗಳು ಕಂಡುಬಂದು, ಅನುಮಾನಗಳಿದ್ದರೆ ಅವರು ಆಸ್ಪತ್ರೆಗಳಿಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯಾವ ನಿರ್ದೇಶನ ನೀಡಲಿದೆ ನೋಡೋಣ. ವ್ಯಾಕ್ಸಿನೇಷನ್ ಮಾಡುವುದನ್ನ ಕೇಂದ್ರ ಸರ್ಕಾರವೇ ನೋಡಿಕೊಳ್ಳುತ್ತದೆ. ಕೇಂದ್ರ ಸರ್ಕಾರದ ಬಳಿ ಈ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಹೀಗಾಗಿ ರಾಜ್ಯಗಳು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನ ಪಾಲಿಸುತ್ತವೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಕೋವಿಡ್ ಲಸಿಕೆ ಪಡೆದವರಲ್ಲಿ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಆರೋಗ್ಯದಲ್ಲಿ ಸಮಸ್ಯೆಗಳಾಗಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಇನ್ನೂ ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಎಳನೀರು ಸೇವಿಸಿ ದಲಿತರೊಂದಿಗೆ ನಾವಿದ್ದೇವೆ ಅಂದ್ರು ಯದುವೀರ್

  • ಕೇರಳದಲ್ಲಿ ಹಕ್ಕಿ ಜ್ವರ ಪತ್ತೆ; ರೋಗದ ಲಕ್ಷಣಗಳೇನು? ಮುಂಜಾಗ್ರತಾ ಕ್ರಮ ಹೇಗಿರಬೇಕು?

    ಕೇರಳದಲ್ಲಿ ಹಕ್ಕಿ ಜ್ವರ ಪತ್ತೆ; ರೋಗದ ಲಕ್ಷಣಗಳೇನು? ಮುಂಜಾಗ್ರತಾ ಕ್ರಮ ಹೇಗಿರಬೇಕು?

    ನೆರೆ ರಾಜ್ಯ ಕೇರಳದಲ್ಲಿ (Kerala) ಹಕ್ಕಿ ಜ್ವರ (Bird Flu) ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ. ಅಲ್ಲದೇ ಗಡಿಭಾಗದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಈ ಸೋಂಕು ದೇಶೀಯ ಕೋಳಿಗಳಿಗೆ ಸುಲಭವಾಗಿ ಹರಡುತ್ತದೆ. ಸೋಂಕಿತ ಪಕ್ಷಿಗಳ ಮಲ, ಮೂಗಿನ ಸ್ರಾವ ಅಥವಾ ಬಾಯಿ ಅಥವಾ ಕಣ್ಣುಗಳಿಂದ ಸ್ರವಿಸುವಿಕೆಯ ಸಂಪರ್ಕದ ಮೂಲಕ ಈ ರೋಗವು ಮನುಷ್ಯರಿಗೆ ಹರಡುತ್ತದೆ. ಹಾಗಿದ್ರೆ ಈ ರೋಗದ ಲಕ್ಷಣಗಳೇನು? ಮುಂಜಾಗ್ರತಾ ಕ್ರಮ ಹೇಗೆ ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ. 

    ಹಕ್ಕಿ ಜ್ವರ ಎಂದರೇನು?
    ಏವಿಯನ್ ಇನ್ ಫ್ಲುಯೆಂಜಾ (Avian Influenza) ಎಂದು ಕರೆಯಲಾಗುವ ಬರ್ಡ್ ಫ್ಲೂ ಅಥವಾ ಹಕ್ಕಿ ಜ್ವರ ಮೂಲಭೂತವಾಗಿ ಪಕ್ಷಿಗಳ (ಕೋಳಿ, ಬಾತುಕೋಳಿ ಇತ್ಯಾದಿ) ಮೇಲೆ ಪರಿಣಾಮ ಬೀರುವ ಒಂದು ವೈರಾಣು ಸೋಂಕು. ಆದರೆ ಇದು ಮನುಷ್ಯರಿಗೆ ಕೂಡ ಹಬ್ಬುವ ಕಾರಣದಿಂದಾಗಿ ತುಂಬಾ ಭೀತಿಯ ವಾತಾವರಣ ಸೃಷ್ಟಿಯಾಗಿದೆ.

    ಹಲವಾರು ರೀತಿಯ ಹಕ್ಕಿ ಜ್ವರದ ಮಾದರಿಗಳನ್ನು ಪತ್ತೆ ಮಾಡಲಾಗಿದ್ದು, ಇದರಲ್ಲಿ ನಾಲ್ಕು ಮಾದರಿಯಾಗಿರುವಂತಹ H5N1, H7N9, H5N6 ಮತ್ತು H5N8 ಮಾದರಿಯ ಹಕ್ಕಿ ಜ್ವರಗಳು ಇತ್ತೀಚಿನ ವರ್ಷಗಳಲ್ಲಿ ಆತಂಕ ಸೃಷ್ಟಿಸಿದೆ.

    H5N1, H7N9, H5N6 ಮಾದರಿಯ ಹಕ್ಕಿ ಜ್ವರದ ವೈರಸ್ ವಿಶ್ವದ ಹಲವು ದೇಶಗಳಲ್ಲಿ ಕಂಡುಬಂದಿದ್ದು, ಇದರಿಂದಾಗಿ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ H5N1 ಸಾಮಾನ್ಯ ಮಾದರಿಯ ಹಕ್ಕಿ ಜ್ವರವಾಗಿದೆ. ಇದು ಮನುಷ್ಯರಲ್ಲಿ 1997ರಲ್ಲಿ ಪತ್ತೆ ಮಾಡಲಾಗಿದ್ದು, ಇದು ಪೀಡಿತರಲ್ಲಿ ಶೇ.60ರಷ್ಟು ಮಂದಿಯ ಪ್ರಾಣಕ್ಕೆ ಹಾನಿ ಉಂಟು ಮಾಡಿದೆ. ಹಕ್ಕಿಗಳಿಗೆ ಇದು ತುಂಬಾ ಮಾರಣಾಂತಿಕ ವೈರಸ್ ಆಗಿದ್ದು, ಮನುಷ್ಯರು ಹಾಗೂ ಪ್ರಾಣಿಗಳಿಗೆ ಕೂಡ ಇದು ಸುಲಭವಾಗಿ ಹಬ್ಬುತ್ತದೆ.

    ಆದರೆ ಈ ಸೋಂಕು ಮನುಷ್ಯರಿಂದ ಮನುಷ್ಯರಿಗೆ ಇದುವರೆಗೆ ಹಬ್ಬಿರುವುದು ತಿಳಿದುಬಂದಿಲ್ಲ. H5N8 ಮಾದರಿಯ ಹಕ್ಕಿ ಜ್ವರದ ವೈರಸ್ ಇದುವರೆಗೆ ವಿಶ್ವದಲ್ಲಿ ಮನುಷ್ಯರಲ್ಲಿ ಕಂಡುಬಂದಿಲ್ಲ ಎಂದು ರಾಷ್ಟ್ರೀಯ ಆರೋಗ್ಯ ಇಲಾಖೆ ತಿಳಿಸಿದೆ.

    2020ರಿಂದ H5N1 ವೈರಸ್ ಪ್ರಪಂಚದಾದ್ಯಂತ ಹೆಚ್ಚು ಹೆಚ್ಚು ಹರಡುತ್ತಿದೆ.  80ಕ್ಕೂ ಹೆಚ್ಚು ದೇಶಗಳಲ್ಲಿ (ಡಿಸೆಂಬರ್ 2023 ರಂತೆ) ಪಕ್ಷಿಗಳಿಗೆ ಈ ಸೋಂಕು ತಗುಲಿದೆ.  ಈ ವೈರಸ್‌ ಕಾಣಿಸಿಕೊಂಡ ಹಿನ್ನೆಲೆ ವಾಣಿಜ್ಯ ಕೋಳಿ ಸಾಕಣೆ ಕೇಂದ್ರಗಳಲ್ಲಿ ಲಕ್ಷಾಂತರ ಕೋಳಿಗಳನ್ನು ಕೊಲ್ಲಲಾಗಿದೆ.

    ಈ ವೈರಸ್ ಮೊದಲಿಗೆ 1996ರಲ್ಲಿ ಚೀನಾದಲ್ಲಿ ಪತ್ತೆಯಾಗಿದ್ದು, ನಂತರ ಜಗತ್ತಿನಾದ್ಯಂತ ಹರಡಿತು. ಇತ್ತೀಚಿನ ವರ್ಷಗಳಲ್ಲಿ ಪಕ್ಷಿಗಳು ಮತ್ತು ಸಸ್ತನಿಗಳಲ್ಲಿ ಈ ರೋಗದಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. ಹಕ್ಕಿ ಜ್ವರವು ಸೋಂಕಿತ ಪಕ್ಷಿಗಳು ಅಥವಾ ಅವುಗಳ ಹಿಕ್ಕೆಗಳ ನೇರ ಸಂಪರ್ಕದ ಮೂಲಕ ಹರಡುತ್ತದೆ. ಇಲ್ಲಿಯವರೆಗೆ ಮನುಷ್ಯನಿಂದ ಮನುಷ್ಯನಿಗೆ ಹರಡಿರುವ ಯಾವುದೇ ಪುರಾವೆಗಳಿಲ್ಲ.

    ರೋಗ ಲಕ್ಷಣಗಳೇನು?
    -ಕೆಮ್ಮು
    -ಉಸಿರಾಟದಲ್ಲಿ ತೊಂದರೆ
    -ತೀವ್ರ ಜ್ವರ
    -ತಲೆನೋವು
    -ಸ್ನಾಯುಗಳ ನೋವು
    -ಮೂಗು ಸೋರುವಿಕೆ
    -ಗಂಟಲಿನ ಊತ
    -ಮೂಗು ಮತ್ತು ಒಸಡಿನಿಂದ ರಕ್ತ ಸೋರುವಿಕೆ

    *ಕೆಲವರಲ್ಲಿ ವಾಕರಿಕೆ, ವಾಂತಿ ಮತ್ತು ಬೇಧಿಯು ಕಂಡುಬರುತ್ತದೆ ಎಂದು ಹೇಳಲಾಗಿದೆ. ಇನ್ನು ಕೆಲವರಲ್ಲಿ ಕಣ್ಣು ಕೆಂಪಾಗುವ ಸಮಸ್ಯೆ ಕೂಡ ಕಾಣಿಸಿಕೊಳ್ಳಬಹುದು. ಸೋಂಕು ದೇಹವನ್ನು ಒಗ್ಗಿಕೊಂಡು 2-5 ದಿನಗಳಲ್ಲಿ ಇದರ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಇದಕ್ಕೆ ತಕ್ಷಣವೇ ಚಿಕಿತ್ಸೆ ಪಡೆದುಕೊಂಡರೆ ಅಪಾಯದಿಂದ ಪಾರಾಗಬಹುದು.

    *ಕೆಲವೊಂದು ವೈರಲ್ ವಿರೋಧಿ ಔಷಧಿಗಳಿಂದ ಇದಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ಸೋಂಕಿನ ತೀವ್ರತೆ ಕಡಿಮೆ ಆಗುತ್ತದೆ.

    ಮನುಷ್ಯರಿಗೆ ಹಕ್ಕಿ ಜ್ವರ ಹರಡುವುದು ಹೇಗೆ?
    ಸೋಂಕು ತಗುಲಿರುವಂತಹ ಹಕ್ಕಿಯನ್ನು ಸ್ಪರ್ಶಿಸುವುದು, ಅದರ ಹಿಕ್ಕೆಗಳು ಮತ್ತು ಹಾಸನ್ನು ಮುಟ್ಟುವುದು, ಸೋಂಕಿತ ಹಕ್ಕಿಯನ್ನು ಕೊಲ್ಲುವುದು ಅಥವಾ ಅದನ್ನು ಅಡುಗೆಗೆ ಬಳಸುವುದು ಇತ್ಯಾದಿಯಿಂದ ಸೋಂಕು ಹರಡುತ್ತದೆ.

    ಮಾಂಸಾಹಾರ ಸೇವಿಸುವವರು ಸರಿಯಾಗಿ ಬೇಯಿಸಿದ ಕೋಳಿ ಅಥವಾ ಮೊಟ್ಟೆಗಳನ್ನು ಸೇವಿಸುವುದರಿಂದ ಹಕ್ಕಿ ಜ್ವರ ಹರಡುವುದಿಲ್ಲ. ಸರಿಯಾಗಿ ಬೇಯಿಸದೆ ಇರುವ ಕೋಳಿ ಅಥವಾ ಮೊಟ್ಟೆಗಳನ್ನು ಸೇವಿಸಬಾರದು.

    ರೋಗ ಬಾರದಂತೆ ತಡೆಯುವುದು ಹೇಗೆ?
    *ಕೈಗಳನ್ನು ನಿರಂತರವಾಗಿ ತೊಳೆಯುತ್ತಿರಿ. ಬಿಸಿ ನೀರು ಮತ್ತು ಸೋಪು ಬಳಸಿ. ಆಹಾರ ಸೇವನೆಗೆ ಮೊದಲು ಅಥವಾ ಅದನ್ನು ತಯಾರಿಸುವ ಮೊದಲು ಕೈಗಳನ್ನು ಸರಿಯಾಗಿ ತೊಳೆಯಿರಿ.
    *ಆಲ್ಕೋಹಾಲ್ ಇರುವ ಸ್ಯಾನಿಟೈಸರ್ ನ್ನು ಪ್ರಯಾಣದ ವೇಳೆ ಬಳಸಿ.
    *ತೆರೆದ ಮಾರುಕಟ್ಟೆ ಅಥವಾ ಹಕ್ಕಿಗಳು ಹೆಚ್ಚಿರುವಂತಹ ಮಾರುಕಟ್ಟೆಯಿಂದ ದೂರವಿರಿ.
    *ಸರಿಯಾಗಿ ಬೇಯಿಸದೆ ಇರುವ ಕೋಳಿ ಅಥವಾ ಬಾತುಕೋಳಿ ತಿನ್ನಬೇಡಿ.
    *ಹಸಿ ಮೊಟ್ಟೆ ಸೇವಿಸಬೇಡಿ.
    *ಪ್ರಯಾಣಕ್ಕೆ ಮೊದಲು ಜ್ವರದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆಯಿರಿ. ನೀವು ಹಕ್ಕಿ ಜ್ವರ ಬರದಂತೆ ತಡೆಯಲು ಸಾಧ್ಯವಿಲ್ಲದೆ ಇದ್ದರೂ ಅದರ ಅಪಾಯವನ್ನು ಕಡಿಮೆ ಮಾಡಬಹುದು.
    *H5N1 ಹಕ್ಕಿಜ್ವರದ ವೈರಸ್ ಗೆ ಈಗಾಗಲೇ ಲಸಿಕೆ ಕಂಡು ಹಿಡಿಯಲಾಗಿದ್ದು, ಇದಕ್ಕೆ ಅಮೆರಿಕಾದ ಎಫ್ ಡಿಎಯಿಂದ ಅನುಮತಿ ಕೂಡ ಸಿಕ್ಕಿದೆ. ಆದರೆ ಇದನ್ನು ಸಾರ್ವಜನಿಕ ಬಳಕೆಗೆ ಇದುವರೆಗೆ ನೀಡಲಾಗಿಲ್ಲ.
    *ಪಾಶ್ಚರೀಕರಿಸಿದ ಡೈರಿ ಉತ್ಪನ್ನಗಳನ್ನೇ ಹೆಚ್ಚು ಬಳಸಬೇಕು.
    *ಮೊಟ್ಟೆ ಮತ್ತು ಹಾಲಿನಿಂದ ಹಕ್ಕಿಜ್ವರ ಬರುವ ಅಪಾಯ ತೀರಾ ಕಡಿಮೆ. 

  • ಕೇಜ್ರಿವಾಲ್ ಆರೋಗ್ಯವಾಗಿದ್ದಾರೆ, ಇನ್ಸುಲಿನ್ ಡೋಸ್ ಮುಂದುವರಿಸಲು ಏಮ್ಸ್ ಮೆಡಿಕಲ್ ಬೋರ್ಡ್ ಸಲಹೆ

    ಕೇಜ್ರಿವಾಲ್ ಆರೋಗ್ಯವಾಗಿದ್ದಾರೆ, ಇನ್ಸುಲಿನ್ ಡೋಸ್ ಮುಂದುವರಿಸಲು ಏಮ್ಸ್ ಮೆಡಿಕಲ್ ಬೋರ್ಡ್ ಸಲಹೆ

    ನವದೆಹಲಿ: ಹೊಸ ಅಬಕಾರಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟು ತಿಹಾರ್ ಜೈಲಿನಲ್ಲಿರುವ (Tihar Jail) ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಆರೋಗ್ಯ (Health) ಉತ್ತಮವಾಗಿದ್ದು, ಈಗಾಗಲೇ ನೀಡಿರುವ ಔಷಧಿಗಳನ್ನೇ ಮುಂದುವರಿಸುವಂತೆ ಏಮ್ಸ್‌ನ (AIIMS) ತಜ್ಞ ವೈದ್ಯರ ತಂಡ ತಿಳಿಸಿದೆ.

    ದೆಹಲಿ ನ್ಯಾಯಾಲಯದ ನಿರ್ದೇಶನದ ಮೇರೆಗೆ ರಚಿಸಲಾದ ಐದು ಸದಸ್ಯರ ವೈದ್ಯಕೀಯ ಮಂಡಳಿಯು ವಿಡಿಯೋ ಕಾನ್ಫರೆನ್ಸ್ (Video Conference) ಮೂಲಕ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯ ತಪಾಸಣೆ ನಡೆಸಿದೆ. ತಿಹಾರ್ ಜೈಲಿನ ಇಬ್ಬರು ವೈದ್ಯರು ಕೂಡ ಭಾಗವಹಿಸಿದ್ದು, ಸುಮಾರು ಅರ್ಧ ಗಂಟೆ ಕಾಲ ನಡೆಯಿತು. ತಪಾಸಣೆ ಬಳಿಕ ಕೇಜ್ರಿವಾಲ್ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಅವರು ಈಗಾಗಲೇ ತೆಗೆದುಕೊಳ್ಳುತ್ತಿರುವ ಔಷಧಿಗಳನ್ನು ಮುಂದುವರಿಸಲಿ. ಜೈಲಿನಲ್ಲಿ ಎರಡು ಯೂನಿಟ್ ಇನ್ಸುಲಿನ್ ಡೋಸ್ (Insulin Dose) ಅನ್ನು ಮುಂದುವರಿಸುವಂತೆ ಏಮ್ಸ್ ವೈದ್ಯರು ಸಲಹೆ ನೀಡಿದರು ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ಹೆಲಿಕಾಪ್ಟರ್‌ ಒಳಗೆ ಆಯತಪ್ಪಿ ಬಿದ್ದ ದೀದಿ- ಸಣ್ಣಪುಟ್ಟ ಗಾಯ

    ಈ ವಾರದ ಆರಂಭದಲ್ಲಿ ಅವರ ಸಕ್ಕರೆ ಮಟ್ಟವು (Sugar Level) 320ಕ್ಕೆ ಏರಿದ ನಂತರ ಎಎಪಿ ಮುಖ್ಯಸ್ಥರಿಗೆ ತಿಹಾರ್ ಜೈಲಿನಲ್ಲಿ ಮೊದಲ ಇನ್ಸುಲಿನ್ ಡೋಸೇಜ್ ನೀಡಲಾಯಿತು. ಇದಕ್ಕೂ ಮುನ್ನ ಸಕ್ಕರೆ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ ತಜ್ಞ ವೈದ್ಯರೊಂದಿಗೆ ನಿತ್ಯ ವಿಡಿಯೋ ಕಾನ್ಫರೆನ್ಸ್ ಮೂಲಕ ಸಲಹೆ ಪಡೆಯಲು ಕೋರಿ ಕೇಜ್ರಿವಾಲ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಜಾ ಮಾಡಿದ್ದ ಕೋರ್ಟ್ ಏಮ್ಸ್ ವೈದ್ಯರ ಸಹಕಾರ ಕೋರಿತ್ತು. ನ್ಯಾಯಾಲಯವು ಮನೆಯಲ್ಲಿ ಬೇಯಿಸಿದ ಆಹಾರವನ್ನು ಸಹ ಅನುಮತಿಸದೆ ಕೇಜ್ರಿವಾಲ್ ಅವರು ವೈದ್ಯರು ನೀಡಿದ ಆಹಾರದ ಚಾರ್ಟ್ ಅನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದೆ. ಮಧುಮೇಹಕ್ಕೆ ಇನ್ಸುಲಿನ್ ಮತ್ತು ಇತರ ಔಷಧಿಗಳನ್ನು ನಿರಾಕರಿಸುವ ಮೂಲಕ ದೆಹಲಿ ಸಿಎಂ ಅವರನ್ನು ಜೈಲಿನಲ್ಲಿ ಕೊಲ್ಲಲು ಸಂಚು ರೂಪಿಸಲಾಗಿದೆ ಎಂದು ಎಎಪಿ ಆರೋಪಿಸಿತ್ತು. ಇದನ್ನೂ ಓದಿ: ಆಪ್ ಶಾಸಕ ಅಮಾನತುಲ್ಲಾ ಖಾನ್‌ಗೆ ಜಾಮೀನು

  • ತೀವ್ರವಾಗಿರುವ ಬಿಸಿಲಿನಿಂದ ನಿಮ್ಮನ್ನು ನೀವು ಹೀಗೆ ರಕ್ಷಿಸಿಕೊಳ್ಳಿ

    ತೀವ್ರವಾಗಿರುವ ಬಿಸಿಲಿನಿಂದ ನಿಮ್ಮನ್ನು ನೀವು ಹೀಗೆ ರಕ್ಷಿಸಿಕೊಳ್ಳಿ

    ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ಮಧ್ಯಾಹ್ನ ವೇಳೆ ಮನೆಯಿಂದ ಹೊರಬರಲು ಆತಂಕವಾಗುತ್ತದೆ. ಬಿಸಿಲ ತಾಪದಿಂದ ಜನರ ಆರೋಗ್ಯ ಹದಗೆಡುತ್ತಿದೆ. ಮೇ ಮತ್ತು ಜೂನ್ ತಿಂಗಳಿನಲ್ಲಿ ಬೇಸಿಗೆಯ ಬಿಸಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಹೀಟ್ ಸ್ಟ್ರೋಕ್‌ಗೆ ತಕ್ಷಣವೇ ಚಿಕಿತ್ಸೆ ನೀಡದಿದ್ದರೆ ವ್ಯಕ್ತಿಯ ಸಾವಿಗೆ ಕಾರಣವಾಗಬಹುದು. ಹೀಗಾಗಿ ಮನೆಯಿಂದ ಹೊರಡುವ ಮುನ್ನ ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ವಹಿಸಿ.

    * ಉಡುಪು ಆರಾಮದಾಯಕವಾಗಿರಲಿ: ಬೇಸಿಗೆಯಲ್ಲಿ ಹೊರಗೆ ಹೋಗುವಾಗ ಆರಾಮದಾಯಕವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ಅತಿಯಾದ ಬೆವರುವಿಕೆ ಉಂಟಾಗುತ್ತದೆ. ಹೀಗಾಗಿ ಸಡಿಲವಾದ ಮತ್ತು ಹತ್ತಿ ಬಟ್ಟೆಗಳನ್ನು ಧರಿಸುವುದು ಉತ್ತಮ. ಹತ್ತಿ ಬಟ್ಟೆಗಳು ಹೆಚ್ಚು ಶಾಖವನ್ನು ಉಂಟುಮಾಡುವುದಿಲ್ಲ.

    * ದೇಹವನ್ನು ಮುಚ್ಚಿಕೊಂಡು ಹೋಗಿ: ಮಧ್ಯಾಹ್ನದ ವೇಳೆ ಮನೆಯಿಂದ ಹೊರಗೆ ಹೋಗಬೇಕಾದರೆ ನಿಮ್ಮ ದೇಹವನ್ನು ಪೂರ್ಣವಾಗಿ ಮುಚ್ಚಿಕೊಳ್ಳಿ. ಮನೆಯಿಂದ ಹೊರಡುವಾಗ ಸ್ಕಾರ್ಫ್, ಛತ್ರಿ, ಪೂರ್ಣ ತೋಳಿನ ಅಂಗಿ, ಕ್ಯಾಪ್ ಇತ್ಯಾದಿಗಳನ್ನು ಧರಿಸಿಕೊಳ್ಳಿ. ಹೊರಗೆ ಹೋಗುವಾಗ ಬಾಟ್ಲಿಯಲ್ಲಿ ನೀರು ತೆಗೆದುಕೊಂಡು ಹೋಗಿ. ಇನ್ನು ಎಸಿಯಲ್ಲಿ ಕುಳಿತು ಕೆಲಸ ಮಾಡುವವರಾದರೆ ತಕ್ಷಣವೇ ಬಿಸಿಲಿಗೆ ಹೋಗುವುದನ್ನು ತಪ್ಪಿಸಿ. ಇದು ಶಾಖದ ಹೊಡೆತಕ್ಕೂ ಕಾರಣವಾಗಬಹುದು. ಇದನ್ನೂ ಓದಿ: ಕರ್ನಾಟಕದಲ್ಲಿ ಮುಂದಿನ 3 ದಿನ ಒಣಹವೆ – ಏ.18 ರಿಂದ ವಿವಿಧೆಡೆ ಮಳೆ

    * ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳಿ: ವಿಪರೀತ ಬಿಸಿಲು ಇರುವುದರಿಂದ ನಿಮ್ಮ ದೇಹವನ್ನು ನೀವು ಹೈಡ್ರೇಟ್‌ ಆಗಿಟ್ಟುಕೊಳ್ಳಿ. ಇದಕ್ಕಾಗಿ ಆಗಾಗ ನೀರು ಕುಡಿಯಿರಿ. ದಿನಕ್ಕೆ ಒಂದು ಬಾರಿಯಾದರೂ ಜ್ಯೂಸ್‌ ಕುಡಿಯಿರಿ. ದೇಹದಲ್ಲಿ ನೀರಿನ ಕೊರತೆಯಾದರೆ ನಿರ್ಜಲೀಕರಣ ಉಂಟಾಗುತ್ತದೆ. ಈ ಸಮಸ್ಯೆ ಉಂಟಾದರೆ ತಲೆತಿರುಗುವಿಕೆ ಮತ್ತು ಆಯಾಸದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

    * ಸನ್‌ಸ್ಕ್ರೀನ್‌ ಬಳಸಿ: ಬೇಸಿಗೆಯಲ್ಲಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಚರ್ಮದ ಸನ್ಬರ್ನ್ ಮತ್ತು ಟ್ಯಾನ್ ಸಮಸ್ಯೆ ಹೆಚ್ಚಾಗುತ್ತದೆ. ಆದ್ದರಿಂದ ಮನೆಯಿಂದ ಹೊರಡುವಾಗ ಉತ್ತಮ ಗುಣಮಟ್ಟದ ಸನ್‌ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳಿ. ಇದನ್ನು ಹಚ್ಚಿಕೊಂಡು 15 ನಿಮಿಷಗಳ ನಂತರ ಮಾತ್ರ ಮನೆಯಿಂದ ಹೊರಹೋಗಿ. ಇದು ಸೂರ್ಯನ ಕಿರಣಗಳಿಂದ ಚರ್ಮಕ್ಕೆ ಹಾನಿಯಾಗದಂತೆ ತಡೆಯುತ್ತದೆ.

    * ಹೊರಗಡೆ ಹೋಗೋದನ್ನು ತಪ್ಪಿಸಿ: ಸುಖಾಸುಮ್ಮನೆ ಬಿಸಿಲಿಗೆ ಹೊರಗಡೆ ಹೋಗುವುದನ್ನು ತಪ್ಪಿಸಿ. ಯಾಕೆಂದರೆ ಬಿಸಿಲಿನ ತಾಪದಲ್ಲಿ ಹೊರಗೆ ಹೋಗುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಹೀಗಾಗಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾದಷ್ಟು ಮನೆಯಲ್ಲಿಯೇ ಇರಲು ಪ್ರಯತ್ನಿಸಿ. ಇದನ್ನೂ ಓದಿ: ಮಗು ಆರೋಗ್ಯವಾಗಿ, ಫಿಟ್ ಆಗಿರಲು ಗರ್ಭಿಣಿಯರು ಈ ಆಹಾರಗಳನ್ನು ಸೇವಿಸಿ

    * ಮಸಾಲೆಯುಕ್ತ ಆಹಾರ ಕಡಿಮೆ ಮಾಡಿ: ಈ ಋತುವಿನಲ್ಲಿ ಹೆಚ್ಚು ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ನಿಮ್ಮ ಹೊಟ್ಟೆಯಲ್ಲಿ ಕೆಲವೊಂದು ಸಮಸ್ಯೆಯನ್ನು ಎದುರಿಸಬಹುದು. ಹೀಗಾಗಿ ಆದಷ್ಟು ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಿ. ಅಲ್ಲದೇ ನಿಮ್ಮ ಆಹಾರದಲ್ಲಿ ತರಕಾರಿಗಳು ಮತ್ತು ಹಣ್ಣುಗಳನ್ನು ಹೆಚ್ಚಾಗಿರಲಿ.

  • ಮಗು ಆರೋಗ್ಯವಾಗಿ, ಫಿಟ್ ಆಗಿರಲು ಗರ್ಭಿಣಿಯರು ಈ ಆಹಾರಗಳನ್ನು ಸೇವಿಸಿ

    ಮಗು ಆರೋಗ್ಯವಾಗಿ, ಫಿಟ್ ಆಗಿರಲು ಗರ್ಭಿಣಿಯರು ಈ ಆಹಾರಗಳನ್ನು ಸೇವಿಸಿ

    ವೈದ್ಯರು ಗರ್ಭಿಣಿಯರಿಗೆ (Pregnant) ಮನೆಯಲ್ಲಿ ತಯಾರಿಸಿದ ಆಹಾರ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಲು ಸಲಹೆ ನೀಡುತ್ತಾರೆ. ಈ ಸಮಯದಲ್ಲಿ ಆರೋಗ್ಯದ ಹೊರತಾಗಿ, ಮಗುವಿನ ಸರಿಯಾದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಆಹಾರವನ್ನು ತೆಗೆದುಕೊಳ್ಳಬೇಕು. ಆದ್ದರಿಂದ ಗರ್ಭಿಣಿಯರು ಸೇವಿಸುವ ಆಹಾರದಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಆರೋಗ್ಯಕರ (Health) ಕೊಬ್ಬನ್ನು ಒಳಗೊಂಡಿರುವುದು ಮುಖ್ಯವಾಗಿದೆ. 9 ತಿಂಗಳವರೆಗೆ ಮಗುವಿನ ಸರಿಯಾದ ಬೆಳವಣಿಗೆಗೆ ಸಹಾಯ ಮಾಡುವ ಆಹಾರದಲ್ಲಿ ಈ ಕೆಳಗಿನವುಗಳನ್ನು ಕೂಡ ಸೇರಿಸಿ.

    ಗರ್ಭಾವಸ್ಥೆಯಲ್ಲಿ ಏನು ತಿನ್ನಬೇಕು?:
    ಡೈರಿ ಉತ್ಪನ್ನಗಳು: ಇವುಗಳಿಂದ ದೇಹವು ಜೀವಸತ್ವಗಳು ಮತ್ತು ಕ್ಯಾಲ್ಸಿಯಂನಂತಹ ಅಗತ್ಯವಾದ ಪೋಷಕಾಂಶಗಳನ್ನು ಸುಲಭವಾಗಿ ಪಡೆಯುತ್ತದೆ. ಈ ಪೋಷಕಾಂಶಗಳು ಗರ್ಭಾವಸ್ಥೆಯಲ್ಲಿ ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕಾಟೇಜ್ ಚೀಸ್, ಮೊಸರು, ಹಾಲು, ಬೆಣ್ಣೆ ಮತ್ತು ಚೀಸ್ ಅನ್ನು ಸೇರಿಸಿಕೊಳ್ಳಿ.

    ಬೆರ್ರಿ ಹಣ್ಣುಗಳು ಮತ್ತು ಸಿಹಿ ಆಲೂಗಡ್ಡೆ: ಬೆರ್ರಿ ಹಣ್ಣುಗಳು ವಿಟಮಿನ್ ಸಿ ಮತ್ತು ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳನ್ನು ಒಳಗೊಂಡಿರುತ್ತವೆ. ಅಲ್ಲದೇ ಅನೇಕ ಇತರ ಪೋಷಕಾಂಶಗಳು ಸಹ ದೊರೆಯುತ್ತದೆ. ಅದೇ ಸಮಯದಲ್ಲಿ ಸಿಹಿ ಆಲೂಗಡ್ಡೆ ತಿನ್ನುವ ಮೂಲಕ ದೇಹದಲ್ಲಿ ಬೀಟಾ ಕ್ಯಾರೋಟಿನ್ ಕೊರತೆಯನ್ನು ತೆಗೆದುಹಾಕಬಹುದು. ಇದು ಮಗುವಿನ ಬೆಳವಣಿಗೆಗೂ ಸಹಾಯ ಮಾಡುತ್ತದೆ.

    ದ್ವಿದಳ ಧಾನ್ಯಗಳು: ಇದರಿಂದ ದೇಹಕ್ಕೆ ಕಬ್ಬಿಣ, ಪ್ರೋಟೀನ್, ಫೈಬರ್ ಮತ್ತು ಕ್ಯಾಲ್ಸಿಯಂ ದೊರೆಯುತ್ತದೆ. ಇವು ಸಸ್ಯ ಆಧಾರಿತ ಆಹಾರದ ಅತ್ಯುತ್ತಮ ಮೂಲವಾಗಿದೆ. ಇನ್ನು ಬೀನ್ಸ್ ಸೇವನೆಯಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸುಲಭವಾಗಿ ಸಿಗುತ್ತವೆ. ಇದನ್ನೂ ಓದಿ: ಎಲೆಗಳು ಮಾತ್ರವಲ್ಲದೆ ತುಳಸಿ ಬೀಜಗಳೂ ಆರೋಗ್ಯಕ್ಕೆ ಒಳ್ಳೆಯದು!

    ಹಸಿರು ತರಕಾರಿಗಳು: ಆಹಾರದಲ್ಲಿ ಹಸಿರು ಎಲೆಗಳ ತರಕಾರಿಗಳು ಮತ್ತು ಬ್ರೊಕೊಲಿಯನ್ನು ಸೇರಿಸಿ. ಹಸಿರು ತರಕಾರಿಗಳಿಂದ ದೇಹವು ಫೋಲೇಟ್, ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಎ, ಬಿ 6, ಸಿ ಮತ್ತು ಕೆ ಪಡೆಯುತ್ತದೆ. ಇದು ಹಿಮೋಗ್ಲೋಬಿನ್ ಅನ್ನು ಆರೋಗ್ಯಕರವಾಗಿ ಮತ್ತು ಮೂಳೆಗಳನ್ನು ಆರೋಗ್ಯಕರವಾಗಿರಿಸುತ್ತದೆ.

    ನೀರು: ದಿನಕ್ಕೆ ಕನಿಷ್ಠ 10-12 ಗ್ಲಾಸ್ ನೀರನ್ನು ಕುಡಿಯಬೇಕು. ಸಾಕಷ್ಟು ನೀರು ಕುಡಿಯುವುದರಿಂದ ಆಮ್ನಿಯೋಟಿಕ್ ದ್ರವವು ಮಗುವಿನ ಸುತ್ತಲೂ ಇರುತ್ತದೆ. ಇದರಿಂದ ಜೀರ್ಣಕ್ರಿಯೆಯು ಸಹ ಉತ್ತಮವಾಗಿರುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆ ಇರುವುದಿಲ್ಲ.

    ಒಣ ಹಣ್ಣುಗಳು: ಗರ್ಭಿಣಿಯರು ಪ್ರತಿದಿನ ಒಂದು ಹಿಡಿ ಒಣ ಹಣ್ಣುಗಳನ್ನು ತಿನ್ನಬೇಕು. ಬಾದಾಮಿ, ಗೋಡಂಬಿ, ಪಿಸ್ತಾ ಮತ್ತು ವಾಲ್‌ನಟ್‌ಗಳಂತಹ ಒಣ ಹಣ್ಣುಗಳನ್ನು ಸೇವಿಸಬೇಕು. ಇದರಿಂದ ದೇಹಕ್ಕೆ ಶಕ್ತಿ ಬರುತ್ತದೆ.

  • ಕೊಳವೆ ಬಾವಿಗೆ ಬಿದ್ದು ಸಾವುಗೆದ್ದ ಸಾತ್ವಿಕ್ ಕ್ಷೇಮ-  ಶೀಘ್ರವೇ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಕೊಳವೆ ಬಾವಿಗೆ ಬಿದ್ದು ಸಾವುಗೆದ್ದ ಸಾತ್ವಿಕ್ ಕ್ಷೇಮ- ಶೀಘ್ರವೇ ಆಸ್ಪತ್ರೆಯಿಂದ ಡಿಸ್ಚಾರ್ಜ್

    ವಿಜಯಪುರ: ಕೊಳವೆ ಬಾವಿಗೆ ಬಿದ್ದು ಸಾವು ಗೆದ್ದ 2 ವರ್ಷದ ಪುಟ್ಟ ಕಂದಮ್ಮ ಸಾತ್ವಿಕ್ (Sathwik) ಕ್ಷೇಮವಾಗಿದ್ದು, ಶೀಘ್ರವೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾನೆ.

    ಈ ಸಂಬಂಧ ಜಿಲ್ಲಾಧಿಕಾರಿ ಭೂಬಾಲನ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮಗು ಅರೋಗ್ಯವಾಗಿದ್ದಾನೆ. ಸಣ್ಣ-ಪುಟ್ಟ ಗಾಯ ಬಿಟ್ಟರೆ ಯಾವುದೇ ಗಾಯಗಳು ಇಲ್ಲ. ಘಟನೆ ಬಳಿಕ ಜಿಲ್ಲಾ ಆಸ್ಪತ್ರೆಯಲ್ಲಿನ ಚಿಕಿತ್ಸೆಗೆ ಮಗು ಸಂದ್ಪಿಸಿದೆ. ಮಗು ಚಟುವಟಿಕೆಯಿಂದ ಕೂಡಿದೆ. ಸದ್ಯಕ್ಕೆ ಯಾವುದೇ ತೊಂದರೆಯಿಲ್ಲ. ನಾಳೆ ಒಂದು ದಿನ ನೋಡಿಕೊಂಡು ಮಗುವನ್ನ ಡಿಸ್ಚಾರ್ಜ್ ಮಾಡಲಾಗುತ್ತೆ ಎಂದು ಸ್ಪಷ್ಟಪಡಿಸಿದರು.

    ಸಾತ್ವಿಕ್‍ಗೆ ಮರು ನಾಮಕರಣ: ಮಗನ ಆರೋಗ್ಯದ ಕುರಿತು ತಂದೆ ಸತೀಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮಗ ಸಂಪೂರ್ಣ ಆರೋಗ್ಯದಿಂದ ಇದ್ದಾನೆ. ನಿನ್ನೆ ಎಂಆರ್‍ಐ ಸೇರಿದಂತೆ ಎಲ್ಲಾ ತಪಾಸಣೆ ನಡೆಸಿದ್ದಾರೆ. ಎಲ್ಲವೂ ಸಾಮಾನ್ಯವಾಗಿದೆ ಅಂತಾ ವೈದ್ಯರು ಹೇಳಿದ್ದಾರೆ. ನಮ್ಮ ಮಗನನ್ನ ಉಳಿಸಿಕೊಟ್ಟ ಸಂಪೂರ್ಣ ಜಿಲ್ಲಾಡಳಿತಕ್ಕೆ ಧನ್ಯವಾದಗಳು ಎಂದರು. ಇದನ್ನೂ ಓದಿ: ಕೊಳವೆ ಬಾವಿ ದುರಂತ- ಸಾವು ಗೆದ್ದ ಸಾತ್ವಿಕ್‌

    ಲಚ್ಯಾಣ ಗ್ರಾಮದ ಆರಾಧ್ಯ ದೈವ ಸಿದ್ಧಲಿಂಗ ಮಹಾರಾಜರ ಕೃಪೆಯಿಂದಲೇ ನಮ್ಮ ಮಗ ಮರಳಿದ್ದಾನೆ. ಕಾರಣ ಸಿದ್ಧಲಿಂಗ ಮುತ್ಯಾನ ಹೆಸರನ್ನ ಸಾತ್ವಿಕ್ ಗೆ ಮರು ನಾಮಕರಣ ಮಾಡಲಿದ್ದೇವೆ. ಇದೇ ತಿಂಗಳ 28 ರಂದು ಸಿದ್ಧಲಿಂಗ ಮಹರಾಜರ ಜಾತ್ರಾ ಮಹೋತ್ಸವ ಇದೆ. ಆಗ ಸಾತ್ವಿಕ್ ಮರುನಾಮಕರಣ ಕಾರ್ಯ ಮಾಡಲಿದ್ದೇವೆ. ಸಮಸ್ತ ಕುಟುಂಬಸ್ಥರು, ಸಂಬಂಧಿಕರು, ಗ್ರಾಮಸ್ಥರು ಮರುನಾಮಕರಣ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

    ಸಾತ್ವಿಕ್ ತಪಾಸಣೆಗೆ ಬಂದ ಜಿಲ್ಲಾ ಸರ್ಜನ್ ಶಿವಾನಂದ ಮಾಸ್ತಿಹೊಳಿ ಪ್ರತಿಕ್ರಿಯಿಸಿ, ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಸಾತ್ವಿಕ್‍ಗೆ ಚಿಕಿತ್ಸೆ ನಡೆಯುತ್ತಿದ್ದು, ನಿನ್ನೆಯಿಂದಲೆ ತಪಾಸಣೆ ಕಾರ್ಯ ನಡೆದಿದೆ. ಸಾತ್ವಿಕ್ ನನ್ನ ತೀವ್ರ ನಿಗಾ ಘಟಕದಲ್ಲಿ ಇಡಲಾಗಿದ್ದು, ಸಂಪೂರ್ಣ ಆರೋಗ್ಯವಾಗಿದ್ದಾನೆ. ಎರಡು ದಿನ ನಿಗಾದಲ್ಲಿ ಇಡಲಾಗಿದೆ. ಸದ್ಯ ವೈದ್ಯರ ತಂಡದಿಂದ ನಡೆಯುತ್ತಿರುವ ತಪಾಸಣೆ ಕಾರ್ಯ ನಡೆಸುತ್ತಿದೆ ಎಂದಿದ್ದಾರೆ.

    ಉಪ್ಪಿಟ್ಟು ಅಂದ್ರೆ ಇಷ್ಟ: ಸಾತ್ವಿಕ್ ಆರೋಗ್ಯವಾಗಿದ್ದಾನೆ, ಭಯಪಡುವ ಅವಶ್ಯಕತೆ ಇಲ್ಲ. ಆತನಿಗೆ ಉಪ್ಪಿಟ್ಟು ಅಂದ್ರೆ ಇಷ್ಟ. ಹೀಗಾಗಿ ಬೆಳಗ್ಗೆ ಉಪ್ಪಿಟ್ಟು, ರಾಗಿ ಗಂಜಿ ಸೇವಿಸಿದ್ದಾನೆ. ಸದ್ಯ ಯಾವುದೇ ತೊಂದರೆ ಇಲ್ಲ. ಏನೇ ಹೆಚ್ಚು ಕಮ್ಮಿ ಆಗುವುದಿದ್ದರೆ 48 ಗಂಟೆ ಒಳಗೆ ಆಗುತ್ತೆ. ಕಾರಣ 48 ಗಂಟೆ ನಿಗಾದಲ್ಲಿ ಇಟ್ಟಿದ್ದೇವೆ ಅಷ್ಟೆ. ಮಗುವಿನ ಆರೋಗ್ಯ ಸ್ಥಿತಿ ನೋಡಿ ಡಿಸ್ಚಾರ್ಜ್ ಮಾಡುತ್ತೇವೆ. ಇದೊಂದು ವಿಸ್ಮಯ ಅಂತಾನೆ ಹೇಳಬೇಕು. ಈ ರೀತಿ 16 ತಿಂಗಳ ಮಗು ಯಾವುದೆ ತೊಂದರೆ ಇಲ್ಲದೆ ಬದುಕುಳಿದಿದ್ದು ದೇವರ ಕೃಪೆ ಅಂತಾನೇ ಹೇಳಬೇಕು ಎಂದು ಅವರು ತಿಳಿಸಿದರು.