Tag: health

  • ರಾಜ್ಯದಲ್ಲಿ ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಹೆಚ್ಚಳ: ದಿನೇಶ್ ಗುಂಡೂರಾವ್

    ರಾಜ್ಯದಲ್ಲಿ ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಹೆಚ್ಚಳ: ದಿನೇಶ್ ಗುಂಡೂರಾವ್

    ಬೆಂಗಳೂರು: ರಾಜ್ಯದಲ್ಲಿ ಸ್ತನ ಕ್ಯಾನ್ಸರ್ (Breast cance) ಮತ್ತು ಗರ್ಭಕಂಠದ ಕ್ಯಾನ್ಸರ್ (Cervical cancer) ಹೆಚ್ಚಳವಾಗಿದ್ದು, ತಪಾಸಣೆಯಲ್ಲಿ ಸ್ತನ, ಗರ್ಭಕಂಠದ ಕ್ಯಾನ್ಸರ್ ಧೃಢವಾದರೆ ಚಿಕಿತ್ಸೆ ನೀಡುವ ಕೆಲಸ ಆಗುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದ್ದಾರೆ.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್‍ನ ತಿಪ್ಪೇಸ್ವಾಮಿಯವರ ಪ್ರಶ್ನೆಗೆ ಅವರು ಉತ್ತರಿಸಿದರು. ಈ ವೇಳೆ ಮನೆ ಮನೆಗೆ ಭೇಟಿ ನೀಡಿ ಕ್ಯಾನ್ಸರ್ ಪರೀಕ್ಷೆ ಮಾಡುವ ಚಿಂತನೆ ನಡೆಸಿದ್ದೇವೆ. ಕೇಂದ್ರದಿಂದ ಹೆಚ್‍ಪಿವಿ ವ್ಯಾಕ್ಸಿನೇಷನ್ ಘೋಷಣೆ ಮಾಡಿದೆ. ಆದರೆ ಇದೂವರೆಗೆ ಅನುಷ್ಠಾನಕ್ಕೆ ಬಂದಿಲ್ಲ. ಬಜೆಟ್‍ನಲ್ಲಾದರೂ ನೀಡಬಹುದು ಎಂಬ ನಿರೀಕ್ಷೆ ಇದೆ. ಇನ್ನೂ ಮನೆ ಮನೆಗೆ ಹೋಗಿ ಕ್ಷಯ ರೋಗ ತಪಾಸಣೆಗೆ ವಿಶೇಷ ಕಾರ್ಯಕ್ರಮ ಜಾರಿಗೆ ತರುವ ಬಗ್ಗೆ ಚಿಂತನೆ ಮಾಡಲಾಗಿದೆ. ರಾಜ್ಯ ಸರ್ಕಾರ 9 ರಿಂದ 14 ವರ್ಷದ ಹೆಣ್ಣು ಮಕ್ಕಳಿಗೆ ನೀಡಲಾಗುತ್ತಿರುವ ಹೆಚ್‍ಪಿವಿ ಲಸಿಕೆಯನ್ನು ರಾಜ್ಯದಲ್ಲಿ ಕಡ್ಡಾಯ ಮಾಡಿಲ್ಲ. ಲಸಿಕೆ ಸರಬರಾಜಿಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಕೇಂದ್ರ ಸಹಕಾರ ಕೊಟ್ಟರೆ ರಾಜ್ಯದಲ್ಲಿ ಲಸಿಕೆ ಹಾಕುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ರಾಜ್ಯದಲ್ಲಿ ಧೃಡವಾಗಿರೋ ಕ್ಯಾನ್ಸರ್ ಮಾದರಿ
    ಗರ್ಭಕಂಠದ ಕ್ಯಾನ್ಸರ್- 5473 (ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ – 2066)
    ಸ್ತನ ಕ್ಯಾನ್ಸರ್- 2213 (ಚಿಕಿತ್ಸೆ – 2213)
    ಬಾಯಿ ಕ್ಯಾನ್ಸರ್- 5787 (ಚಿಕಿತ್ಸೆ – 5787)

  • ನಕಲಿ ಡಾಕ್ಟರ್ ವಿರುದ್ದ ಸರ್ಕಾರದಿಂದ ಕಠಿಣ ಕ್ರ‌ಮ : ದಿನೇಶ್ ಗುಂಡೂರಾವ್

    ನಕಲಿ ಡಾಕ್ಟರ್ ವಿರುದ್ದ ಸರ್ಕಾರದಿಂದ ಕಠಿಣ ಕ್ರ‌ಮ : ದಿನೇಶ್ ಗುಂಡೂರಾವ್

    ಬೆಂಗಳೂರು: ರಾಜ್ಯದಲ್ಲಿ ನಕಲಿ ಡಾಕ್ಟರ್ (Fake Doctor) ಹಾವಳಿ ಹೆಚ್ಚಾಗಿದ್ದು, ನಕಲಿ ವೈದ್ಯರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದ್ದಾರೆ.

    ವಿಧಾ‌ನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ತಿಪ್ಪಣ್ಣ ಕಮಕನೂರು ಅವರು, ಕಲಬುರಗಿಯಲ್ಲಿ ನಕಲಿ ವೈದ್ಯರ ಹಾವಳಿ ಜಾಸ್ತಿಯಾಗಿದೆ. ನೂರಾರು ಜನ ನಕಲಿ ವೈದ್ಯರ ಚಿಕಿತ್ಸೆಯಿಂದ ಸತ್ತು ಹೋಗಿದ್ದಾರೆ. ಕಲಬುರಗಿ ಡಿಹೆಚ್‌ಒ ಶಾಮೀಲಾಗಿದ್ದಾರೆ. ಹೀಗಾಗಿ ಕೂಡಲೇ ಸಮಿತಿ ರಚನೆ ಮಾಡಿ ನಕಲಿ ವೈದ್ಯರ ಪತ್ತೆ ಹಚ್ಚಿ ಶಿಕ್ಷೆ ಕೊಡಿ ಎಂದು ಒತ್ತಾಯಿಸಿದರು.

     

    ಈ ಪ್ರಶ್ನೆಗೆ ದಿನೇಶ್ ಗುಂಡೂರಾವ್ ಉತ್ತರ ನೀಡಿ, ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಜಾಸ್ತಿಯಿದೆ. ನಕಲಿ ವೈದ್ಯರನ್ನ ಹುಡುಕಿ ಅವರ ಕ್ಲಿನಿಕ್‌ ಬಂದ್‌ ಮಾಡಿಸುವ ಕೆಲಸ‌ ಮತ್ತು ಅವರ ವಿರುದ್ದ ಕ್ರಮ ಕೈಗೊಳ್ಳುವ ಕೆಲಸ ಮಾಡಿದ್ದೇವೆ. ಇದಲ್ಲದೆ ಅಯುಷ್ ವೈದ್ಯರು ಕ್ಲಿನಿಕ್ ಮುಂದೆ ಗ್ರೀನ್ ಬೋರ್ಡ್ ಹಾಕೋದು ಕಡ್ಡಾಯ ಮಾಡಲಾಗಿದೆ ಎಂದರು.  ಇದನ್ನೂ ಓದಿ: ರಾಜ್ಯದ ಎಲ್ಲಾ ಮಾಲ್‌ಗಳಿಗೂ ಮಾರ್ಗಸೂಚಿ: ಡಿಕೆಶಿ ಘೋಷಣೆ

    ಇಂಗ್ಲಿಷ್ ‌ಔಷಧಿ ನೀಡುವ ಕ್ಲಿನಿಕ್‌ನವರು ನೀಲಿ ಬೋರ್ಡ್ ಹಾಕಲು ಕಡ್ಡಾಯವಾಗಿ ಸೂಚನೆ ನೀಡಲಾಗಿದೆ. ನಕಲಿ ವೈದ್ಯರಿಗೆ 3 ವರ್ಷ ಜೈಲು ಶಿಕ್ಷೆಯೂ ನಿಯಮದಲ್ಲಿ ಇದೆ.1 ಲಕ್ಷ ರೂ. ದಂಡ ವಿಧಿಸುವ ನಿಯಮ ‌ಇದೆ. ನಕಲಿ ವೈದ್ಯರ ಬಂಧನ ಮಾಡಿದಾಗ ಅವರ ಪರವಾಗಿ ರಾಜಕಾರಣಿಗಳೇ ಅವರನ್ನ ಬಿಡಿಸಿ ಬರುತ್ತಾರೆ. ನಕಲಿ ವೈದ್ಯರ ಹಾವಳಿ ಕಡಿವಾಣಕ್ಕೆ ಮತ್ತಷ್ಟು ಕ್ರಮಗಳನ್ನ ಸರ್ಕಾರ ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದರು.

     

  • ರಾಮನಗರದಲ್ಲಿ ಡೆಂಗ್ಯೂಗೆ 19 ವರ್ಷದ ಯುವತಿ ಬಲಿ

    ರಾಮನಗರದಲ್ಲಿ ಡೆಂಗ್ಯೂಗೆ 19 ವರ್ಷದ ಯುವತಿ ಬಲಿ

    ರಾಮನಗರ: ಡೆಂಗ್ಯೂ (Dengue) ಜ್ವರದಿಂದ ಮಾಗಡಿಯ ಕುದೂರು ಪಟ್ಟಣದಲ್ಲಿ ಯುವತಿಯೊಬ್ಬಳು ಸಾವಿಗೀಡಾಗಿದ್ದು, ಜಿಲ್ಲೆಯಲ್ಲಿ ಡೆಂಗ್ಯೂಗೆ ಮೊದಲ ಬಲಿಯಾಗಿದೆ.

    ಪಟ್ಟಣದ ಮಹಾತ್ಮನಗರ ಬಡಾವಣೆಯ ಸುರೇಶ್ ಹಾಗೂ ನಳಿನ ದಂಪತಿಯ ಪುತ್ರಿ ಹೇಮಾ (19) ಮೃತ ಯುವತಿ. ಪ್ರಥಮ ಬಿ.ಕಾಂ ವಿದ್ಯಾಭ್ಯಾಸ ಮಾಡುತ್ತಿದ್ದ ಯುವತಿ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಳು. ಇದರ ಜೊತೆಗೆ ಕಳೆದ 15 ದಿನಗಳಿಂದ ಡೆಂಗ್ಯೂವಿನಿಂದ ಬಳಲುತ್ತಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಆಕೆಯನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಧಾರವಾಡದಲ್ಲಿ ಶಂಕಿತ ಡೆಂಗ್ಯೂಗೆ 5 ತಿಂಗಳ ಮಗು ಬಲಿ

    ಡೆಂಗ್ಯೂನಿಂದ ಯುವತಿ ಸಾವನ್ನಪ್ಪಿದ ಹಿನ್ನೆಲೆ ಕುದೂರಿಗೆ ತಾಲೂಕು ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಡಾವಣೆ ಸುತ್ತಮುತ್ತ ಸ್ವಚ್ಚತಾ ಕಾರ್ಯ ನಡೆಸಿ, ಸೊಳ್ಳೆ ಉತ್ಪತಿಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸ್ಥಳೀಯರಲ್ಲಿ ಜಾಗೃತಿ ಮೂಡಿಸಿದ್ದಾರೆ. ಇದನ್ನೂ ಓದಿ: ಅಫ್ಜಲ್‌ ಖಾನ್‌ ಕೊಲ್ಲಲು ಛತ್ರಪತಿ ಶಿವಾಜಿ ಬಳಿಸಿದ್ದ ‘ವಾಘ್‌ ನಖ್‌’ ಅಸ್ತ್ರ ಜು.19ಕ್ಕೆ ಲಂಡನ್‌ನಿಂದ ಭಾರತಕ್ಕೆ

  • ಧಾರವಾಡದಲ್ಲಿ ಶಂಕಿತ ಡೆಂಗ್ಯೂಗೆ 5 ತಿಂಗಳ ಮಗು ಬಲಿ

    ಧಾರವಾಡದಲ್ಲಿ ಶಂಕಿತ ಡೆಂಗ್ಯೂಗೆ 5 ತಿಂಗಳ ಮಗು ಬಲಿ

    ಧಾರವಾಡ: ಶಂಕಿತ ಡೆಂಗ್ಯೂ ಜ್ವರದಿಂದ (Dengue fever) ಬಳಲುತ್ತಿದ್ದ 5 ತಿಂಗಳ ಮಗುವೊಂದು ಮೃತಪಟ್ಟಿರುವ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ.

    ಶಂಕಿತ ಡೆಂಗ್ಯೂ ಜ್ವರಕ್ಕೆ ಬಲಿಯಾದ ಮಗುವನ್ನು ನಗರದ ಪೊಲೀಸ್ ಠಾಣೆಯ ಕಾನ್‍ಸ್ಟೇಬಲ್ ಆಗಿರುವ ಗೋಪಾಲ ಲಮಾಣಿ ಎಂಬವರ ಮಗಳು ಆರಾಧ್ಯ ಎಂದು ಗುರುತಿಸಲಾಗಿದೆ.

    ಮಗು ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿತ್ತು. ಇದರಿಂದ ಮಗುವನ್ನು ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ. ಇದನ್ನೂ ಓದಿ: ತುಂಗಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲು ಸೂಚನೆ

    ಗೋಪಾಲ ಲಮಾಣಿಯವರು ಮೂಲತಃ ಗದಗ ಜಿಲ್ಲೆಯ ಗಜೇಂದ್ರಗಡದವರಾಗಿದ್ದಾರೆ. ಈ ಹಿಂದೆ ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ಬಾಲಕಿಯೋರ್ವಳು ಶಂಕಿತ ಡೆಂಗ್ಯೂಗೆ ಬಲಿಯಾಗಿದ್ದಳು. ಇದನ್ನೂ ಓದಿ: Valmiki Corporation Scam | ಮಾಜಿ ಸಚಿವ ನಾಗೇಂದ್ರಗೆ ಮತ್ತೆ 5 ದಿನ ಇಡಿ ಕಸ್ಟಡಿ – ಕೋರ್ಟ್ ಆದೇಶ

  • ತ್ರಿಪುರಾದಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ HIV ಪತ್ತೆ; ಶ್ರೀಮಂತರ ಮಕ್ಕಳಲ್ಲಿ ವೈರಸ್‌ ಕಂಡುಬಂದಿದ್ದು ಹೇಗೆ?

    ತ್ರಿಪುರಾದಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ HIV ಪತ್ತೆ; ಶ್ರೀಮಂತರ ಮಕ್ಕಳಲ್ಲಿ ವೈರಸ್‌ ಕಂಡುಬಂದಿದ್ದು ಹೇಗೆ?

    ಗಿನ ಮಕ್ಕಳು ಹಾಗೂ ವಿದ್ಯಾರ್ಥಿಗಳ ಪೈಕಿ ಅನೇಕರು ಮಾದಕ ವ್ಯಸನದ ದಾಸರಾಗುತ್ತಿದ್ದಾರೆ. ಈ ಕುರಿತು ಪ್ರತಿನಿತ್ಯ ಮಾಧ್ಯಮಗಳು, ಪತ್ರಿಕೆಗಳು ವರದಿ ಮಾಡುತ್ತಲೇ ಇರುತ್ತವೆ. ಆದರೂ ಕ್ಯಾರೇ ಎನ್ನದೇ ವಿದ್ಯಾರ್ಥಿಗಳು ತಮ್ಮ ಪಾಡಿಗೆ ತಾವು ಮಾದಕ ವಸ್ತುಗಳ ಮೊರೆಹೋಗುತ್ತಿದ್ದಾರೆ. ಅದರಲ್ಲೂ ಶ್ರೀಮಂತರ ಮಕ್ಕಳು ದುಡ್ಡಿದೆ ಎಂದು ಸ್ಟೈಲ್‌ ಮಾಡಲು ಹೋಗಿ ಕೆಟ್ಟ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇತ್ತೀಚಿಗೆ ತ್ರಿಪುರಾ ಜರ್ನಲಿಸ್ಟ್ ಯೂನಿಯನ್, ವೆಬ್ ಮೀಡಿಯಾ ಫೋರಮ್ ಮತ್ತು ಟಿಎಸ್‌ಎಸಿಎಸ್ (TSACS) ಜಂಟಿಯಾಗಿ ಆಯೋಜಿಸಿದ್ದ ಮಾಧ್ಯಮ ಕಾರ್ಯಾಗಾರದಲ್ಲಿ ಆತಂಕಕಾರಿ ವಿಷಯವೊಂದು ಹೊರಬಿದ್ದಿದೆ. ತ್ರಿಪುರಾದಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ HIV ವೈರಸ್‌ ಪತ್ತೆಯಾಗಿದ್ದು, 47 ಮಂದಿ ವಿದ್ಯಾರ್ಥಿಗಳು ಏಡ್ಸ್‌ಗೆ ಬಲಿಯಾಗಿದ್ದಾರೆ ಎಂದು ತ್ರಿಪುರಾ (Tripura) ರಾಜ್ಯದ ಏಡ್ಸ್ ನಿಯಂತ್ರಣ ಸೊಸೈಟಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ಕಾರಣವೇನು? ವಿದ್ಯಾರ್ಥಿಗಳಲ್ಲಿ HIV ಸೋಂಕು ಹೇಗೆ ಬಂತು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ. 

    HIV ಎಂದರೇನು?
    HIV (ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್) ಒಂದು ರೀತಿಯ ವೈರಸ್ ಆಗಿದೆ. ಅದು ದೇಹವನ್ನು ಪ್ರವೇಶಿಸಿದಾಗ ಅದನ್ನು HIV ಸೋಂಕು ಎಂದು ಕರೆಯಲಾಗುತ್ತದೆ. ಸಮಯಕ್ಕೆ ಸರಿಯಾಗಿ ರೋಗನಿರ್ಣಯ ಮಾಡದಿದ್ದರೆ ಅಥವಾ ಚಿಕಿತ್ಸೆಯನ್ನು ಪ್ರಾರಂಭಿಸದಿದ್ದರೆ, ರೋಗವು ಕ್ರಮೇಣ ಹೆಚ್ಚಾಗಲು ಪ್ರಾರಂಭಿಸುತ್ತದೆ ಮತ್ತು ಸೋಂಕಿನ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವು ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದಾಗಿ ಏಡ್ಸ್‌ ರೋಗ ಉಂಟಾಗುತ್ತದೆ.

    ತ್ರಿಪುರಾದ ವಿದ್ಯಾರ್ಥಿಗಳಲ್ಲಿ HIV ಕಂಡುಬಂದಿದ್ದು ಹೇಗೆ?
    ತ್ರಿಪುರಾ ರಾಜ್ಯದ 220 ಶಾಲೆಗಳು ಹಾಗೂ 24 ಕಾಲೇಜು ಮತ್ತು ವಿವಿಗಳಲ್ಲಿ ವಿದ್ಯಾರ್ಥಿಗಳು ಇಂಜೆಕ್ಷನ್ ಮೂಲಕ ಮಾದಕ ವಸ್ತುಗಳನ್ನು ತೆಗೆದುಕೊಳ್ಳುವುದು ಪತ್ತೆಯಾಗಿದೆ ಎಂದಿರುವ ತ್ರಿಪುರಾ ಏಡ್ಸ್ ನಿಯಂತ್ರಣ ಸೊಸೈಟಿ, HIV ಸೋಂಕು ಹರಡಲು ಇದೂ ಕಾರಣ ಆಗಿರಬಹುದು ಎಂದು ಊಹಿಸಿದೆ.

    ಈ ಸಂಬಂಧ ತ್ರಿಪುರಾ ರಾಜ್ಯಾದ್ಯಂತ ಸುಮಾರು 164 ಆರೋಗ್ಯ ಸಂಸ್ಥೆಗಳಿಂದ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದು, ಸಮಗ್ರ ತನಿಖೆ ಬಳಿಕ ಹೆಚ್ಚಿನ ಮಾಹಿತಿ ಹೊರ ಬೀಳಲಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಪ್ರತಿದಿನ ಐದರಿಂದ ಏಳು ಹೊಸ HIV ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಟಿಎಸ್‌ಎಸಿಎಸ್ ಅಧಿಕಾರಿಗಳು ತಿಳಿಸಿದ್ದಾರೆ. 

    ಮೇ 2024ರ ವೇಳೆಗೆ ತ್ರಿಪುರಾದ ART (ಆಂಟಿರೆಟ್ರೋವೈರಲ್ ಥೆರಪಿ) ಕೇಂದ್ರ ಒಟ್ಟು 8,729 HIV ಸೋಂಕಿತ ವ್ಯಕ್ತಿಗಳನ್ನು ನೋಂದಾಯಿಸಿವೆ. ಅದರಲ್ಲಿ 4,570 ಪುರುಷರು, 1,103 ಮಹಿಳೆಯರು ಮತ್ತು ಒಬ್ಬರು ಮಂಗಳಮುಖಿ ಒಳಗೊಂಡಿದ್ದಾರೆ. HIV ಸೋಂಕಿತರ ಪೈಕಿ 5,674 ಜನರು ಜೀವಂತವಾಗಿದ್ದಾರೆ ಎಂದು TSACS ಅಧಿಕಾರಿ ಬಹಿರಂಗಪಡಿಸಿದ್ದಾರೆ.

    ಎಲ್ಲರೂ ಶ್ರೀಮಂತರ ಮನೆ ಮಕ್ಕಳು:
    ಏಡ್ಸ್ ಸೋಂಕಿಗೆ ತುತ್ತಾಗಿರುವ ವಿದ್ಯಾರ್ಥಿಗಳ ಪೈಕಿ ಬಹುತೇಕರು ಶ್ರೀಮಂತರ ಮನೆ ಮಕ್ಕಳು. ಈ ವಿದ್ಯಾರ್ಥಿಗಳ ಪೋಷಕರು ಸ್ಥಿತಿವಂತರು. ಸಾಕಷ್ಟು ಮನೆಗಳಲ್ಲಿ ತಂದೆ – ತಾಯಿ ಇಬ್ಬರಿಗೂ ಸರ್ಕಾರಿ ನೌಕರಿ ಇದೆ. ಪೋಷಕರು ತಮ್ಮ ಮಕ್ಕಳಿಗೆ ಸಾಕಷ್ಟು ಹಣ ನೀಡುತ್ತಾರೆ. ಮಕ್ಕಳ ಎಲ್ಲ ಬೇಕು, ಬೇಡಗಳನ್ನೂ ಈಡೇರಿಸುತ್ತಾರೆ. ಹೀಗಾಗಿ, ಮಕ್ಕಳ ಕೈನಲ್ಲಿ ಸಾಕಷ್ಟು ಹಣ ಓಡಾಡುವ ಕಾರಣ ಅವರು ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ.

    ಈ ವಿದ್ಯಾರ್ಥಿಗಳು ಮಾದಕ ವಸ್ತುಗಳನ್ನ ತಮ್ಮ ರಕ್ತನಾಳಗಳಿಗೆ ಚುಚ್ಚುಮದ್ದಿನ ಮೂಲಕ ತೆಗೆದುಕೊಳ್ಳುತ್ತಾರೆ. ಒಬ್ಬರು ಬಳಸುವ ಇಂಜೆಕ್ಷನ್ ನೀಡಲ್‌ ಅನ್ನೇ ಬಹುತೇಕರು ಬಳಕೆ ಮಾಡುತ್ತಿದ್ದ ಕಾರಣ ಸುಲಭವಾಗಿ ಎಚ್‌ಐವಿ ಏಡ್ಸ್ ರೋಗಾಣು ಹರಡಿದೆ ಎಂದು ವೈದ್ಯರು ವಿವರಿಸಿದ್ದಾರೆ.

    ಉನ್ನತ ಹುದ್ದೆ ಹೊಂದಿರುವ ಶ್ರೀಮಂತ ಪೋಷಕರು ತಮ್ಮ ಮಕ್ಕಳ ಬೇಡಿಕೆಯನ್ನು ಪೂರೈಸುವ ಸಲುವಾಗಿ ಅವರ ಕೈಗೆ ಹೆಚ್ಚೆಚ್ಚು ಹಣ ನೀಡುತ್ತಾರೆ. ಆದರೆ ಮಕ್ಕಳು ಅದನ್ನು ಒಳ್ಳೆಯ ವಿಷಯಕ್ಕೆ ಬಳಸಿಕೊಳ್ಳದೇ ಈ ರೀತಿಯ ಚಟಗಳನ್ನು ಕಲಿತು ತಮ್ಮ ಅಮೂಲ್ಯ ಜೀವನವನ್ನು ಹಾಳುಮಾಡಿಕೊಳ್ಳುತ್ತಾರೆ. ಪೋಷಕರು ತಮ್ಮ ಮಕ್ಕಳು ಕೆಟ್ಟ ಚಟಗಳ ದಾಸರಾಗಿದ್ದಾರೆ ಎಂದು ತಿಳಿದುಕೊಳ್ಳುವ ಹೊತ್ತಿಗಾಗಲೇ ಕಾಲ ಮೀರಿರುತ್ತದೆ. ಇದರಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿಯೂ ಬರಬಹುದು.

    HIV ಹರಡುವುದು ಹೇಗೆ?
    ಲೈಂಗಿಕ ಸಂಪರ್ಕ, ರಕ್ತ ವರ್ಗಾವಣೆ,ಸೂಜಿಗಳು ಅಥವಾ ಸಿರಿಂಜಿಗಳನ್ನು ಹಂಚಿಕೊಳ್ಳುವುದು, ಗರ್ಭಾವಸ್ಥೆಯಲ್ಲಿ, ಹೆರಿಗೆಯ ಸಮಯದಲ್ಲಿ ಅಥವಾ ಹಾಲುಣಿಸುವ ಸಮಯದಲ್ಲಿ ತಾಯಿಯಿಂದ ಮಗುವಿಗೆ HIV ಹರಡುವ ಸಾಧ್ಯತೆಗಳು ಹೆಚ್ಚು.

    ರೋಗಲಕ್ಷಣಗಳೇನು?
    ಚಳಿ, ಗಂಟಲು ಕೆರತ, ಹುಣ್ಣುಗಳು, ದೇಹದ ನೋವು, ಸ್ನಾಯು ನೋವು, ಸುಸ್ತು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ. ಈ ರೋಗಲಕ್ಷಣಗಳು ಒಂದೂವರೆ ತಿಂಗಳವರೆಗೆ ಇರುತ್ತದೆ. ಏಡ್ಸ್ ಸಂಭವಿಸಿದಾಗ, ಎಲ್ಲಾ ರೀತಿಯ ಸೋಂಕುಗಳು ರೋಗಿಯ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತವೆ ಮತ್ತು ಈ ಹಂತದಲ್ಲಿ ಅಸಂಖ್ಯಾತ ರೋಗಲಕ್ಷಣಗಳನ್ನು ಕಾಣಬಹುದು.

    ಏಡ್ಸ್ HIV ಸೋಂಕಿನ ಅಂತಿಮ ಮತ್ತು ಅತ್ಯಂತ ಗಂಭೀರ ಹಂತವಾಗಿದೆ. ಏಡ್ಸ್ ಹೊಂದಿರುವ ಜನರು ಕೆಲವು ಬಿಳಿ ರಕ್ತ ಕಣಗಳ ಕಡಿಮೆ ಎಣಿಕೆಗಳನ್ನು ಹೊಂದಿರುತ್ತಾರೆ ಮತ್ತು ತೀವ್ರವಾಗಿ ಹಾನಿಗೊಳಗಾದ ಪ್ರತಿರಕ್ಷಣಾ ವ್ಯವಸ್ಥೆಗಳನ್ನು ಹೊಂದಿರುತ್ತಾರೆ.

    ಏಡ್ಸ್ ತೂಕ ನಷ್ಟ, ತೀವ್ರ ಸುಸ್ತು, ಬಾಯಿ ಅಥವಾ ಜನನಾಂಗದ ಹುಣ್ಣುಗಳು, ಜ್ವರ, ರಾತ್ರಿ ಬೆವರುವಿಕೆ ಮತ್ತು ಚರ್ಮದ ಬಣ್ಣದಲ್ಲಿ ವ್ಯತ್ಯಾಸ ಆಗಲು ಕಾರಣವಾಗಬಹುದು.

    ಚುಂಬನ ಮತ್ತು ತಬ್ಬಿಕೊಳ್ಳುವುದರಿಂದ HIV ಬರುತ್ತಾ?
    ಪರಸ್ಪರ ಚುಂಬಿಸುವುದು ಮತ್ತು ತಬ್ಬಿಕೊಳ್ಳುವುದರಿಂದ HIV ಬರುವುದಿಲ್ಲ. ಆದರೆ ನಿಮ್ಮ ಬಾಯಲ್ಲಿ ಹುಣ್ಣು ಅಥವಾ ಒಸಡುಗಳಲ್ಲಿ ರಕ್ತಸ್ರಾವ ಆಗಿದ್ದು, ನೀವು ಬಾಯಿಗೆ ಬಾಯಿ ಕೊಟ್ಟು ಚುಂಬಿಸುವುದರಿಂದ HIV ಸೋಂಕು ಉಂಟಾಗುವ ಸಾಧ್ಯತೆಗಳಿವೆ. 

    ಇನ್ನು HIV/AIDS ಹೊಂದಿರುವ ವ್ಯಕ್ತಿಯನ್ನು ಸ್ಪರ್ಶಿಸುವುದು ಅಥವಾ ತಬ್ಬಿಕೊಳ್ಳುವುದು, ಸಾರ್ವಜನಿಕ ಸ್ನಾನಗೃಹಗಳು ಅಥವಾ ಈಜುಕೊಳಗಳನ್ನು ಬಳಸುವುದು, HIV/AIDS ಹೊಂದಿರುವ ಯಾರೊಂದಿಗಾದರೂ ಕಪ್‌, ಪಾತ್ರೆಗಳನ್ನು ಹಂಚಿಕೊಳ್ಳುವುದರಿಂದರಿಂದಲೂ ಯಾವುದೇ ರೀತಿಯ ಸೋಂಕು ತಗುಲುವುದಿಲ್ಲ.

    ಚಿಕಿತ್ಸೆ ಏನು?
    ಡಾ.ಉಮಂಗ್ ಅಗರ್ವಾಲ್ ಪ್ರಕಾರ, ಏಡ್ಸ್‌ಗೆ ಯಾವುದೇ ಚಿಕಿತ್ಸೆ ಇಲ್ಲ ಎಂಬುದು ಸುಳ್ಳು. ವಾಸ್ತವವಾಗಿ, ನಿರಂತರವಾಗಿ ಎಚ್ಐವಿ ಚಿಕಿತ್ಸೆಯನ್ನು ತೆಗೆದುಕೊಳ್ಳುವುದರಿಂದ, ಈ ವೈರಸ್ ಅನ್ನು ನಿಯಂತ್ರಣದಲ್ಲಿ ಇರಿಸಬಹುದು. ಅದರ ಚಿಕಿತ್ಸೆಯನ್ನು ಮುಂದುವರಿಸುವ ಮೂಲಕ, ಏಡ್ಸ್ ಅನ್ನು ತಪ್ಪಿಸಬಹುದು.

    HIV ಯ ಚಿಕಿತ್ಸೆಯನ್ನು ಆಂಟಿರೆಟ್ರೋವೈರಲ್ ಥೆರಪಿ (ART) ಎಂದು ಕರೆಯಲಾಗುತ್ತದೆ. HIV ಹೊಂದಿರುವ ಪ್ರತಿಯೊಬ್ಬರಿಗೂ ART ಅನ್ನು ಶಿಫಾರಸು ಮಾಡುತ್ತಾರೆ. HIV ಇರುವವರು ಆದಷ್ಟು ಬೇಗ  ಔಷಧಿಗಳನ್ನು ತೆಗೆದುಕೊಳ್ಳಬೇಕು. ಆಂಟಿರೆಟ್ರೋವೈರಲ್ ಥೆರಪಿ HIV ಅನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೆ  HIV ಯೊಂದಿಗಿನ ಜನರು ದೀರ್ಘ, ಆರೋಗ್ಯಕರ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ. ಅಲ್ಲದೇ HIV ಪ್ರಸರಣದ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.

    ಚಿಕಿತ್ಸೆಯನ್ನು ಮಧ್ಯದಲ್ಲಿ ಬಿಡುವುದರಿಂದ ಏಡ್ಸ್ ಮರುಕಳಿಸುವಿಕೆಗೆ ಕಾರಣವಾಗಬಹುದು. ಎಚ್ಐವಿ ಚಿಕಿತ್ಸೆಯನ್ನು ಸಮಯಕ್ಕೆ ಪ್ರಾರಂಭಿಸಿದರೆ, ಇತ್ತೀಚಿನ ದಿನಗಳಲ್ಲಿ ಹಲವಾರು ಔಷಧಿಗಳಿವೆ. ಇದು ರೋಗಿಯನ್ನು ಏಡ್ಸ್‌ಗೆ ಬಲಿಯಾಗದಂತೆ ತಡೆಯುತ್ತದೆ.

  • ಚಿಕ್ಕಬಳ್ಳಾಪುರದಲ್ಲಿ ಶಂಕಿತ ಡೆಂಗ್ಯೂಗೆ 18 ವರ್ಷದ ಯುವತಿ ಬಲಿ

    ಚಿಕ್ಕಬಳ್ಳಾಪುರದಲ್ಲಿ ಶಂಕಿತ ಡೆಂಗ್ಯೂಗೆ 18 ವರ್ಷದ ಯುವತಿ ಬಲಿ

    ಚಿಕ್ಕಬಳ್ಳಾಪುರ: ಶಂಕಿತ ಡೆಂಗ್ಯೂಗೆ (Suspected Dengue) 18 ವರ್ಷದ ಯುವತಿ (Young Woman) ಬಲಿಯಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಾಮಗೊಂಡ್ಲು ಗ್ರಾಮದಲ್ಲಿ ನಡೆದಿದೆ.

    ಯಶಸ್ವಿನಿ (18) ಮೃತ ಯುವತಿ. ಕಳೆದ ಒಂದು ವಾರದಿಂದ ತೀವ್ರತರನಾದ ಜ್ವರದಿಂದ ಬಳಲುತ್ತಿದ್ದ ಯಶಸ್ವಿನಿಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಯಶಸ್ವಿನಿ ಮೃತಪಟ್ಟಿದ್ದಾಳೆ. ದ್ವಿತೀಯ ಪಿಯುಸಿಯಲ್ಲಿ 95% ಅಂಕ ಗಳಿಸಿದ್ದ ಯಶಸ್ವಿನಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಇದನ್ನೂ ಓದಿ: ರಾಮನಗರ ಹೆಸರು ಮರುನಾಮಕರಣಕ್ಕೆ ಜೆಡಿಎಸ್ ವಿರೋಧ ಇಲ್ಲ, ಹಾಸನದವರ ವಿರೋಧ ಇದೆ: ಹೆಚ್‌ಸಿ ಬಾಲಕೃಷ್ಣ

    ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ 400ಕ್ಕೂ ಹೆಚ್ಚು ಡೆಂಗ್ಯೂ ಕೇಸ್ ಪತ್ತೆಯಾಗಿದೆ. ಶುಕ್ರವಾರ ರಾಜ್ಯದಲ್ಲಿ 437 ಡೆಂಗ್ಯೂ ಕೇಸ್ ದಾಖಲಾಗಿತ್ತು. ರಾಜ್ಯದಲ್ಲಿ ಒಟ್ಟು ಡೆಂಗ್ಯೂ ಕೇಸ್ 8,658ಕ್ಕೆ ಏರಿಕೆಯಾಗಿದೆ. ಶುಕ್ರವಾರದವರೆಗೆ ಡೆಂಗ್ಯೂಗೆ ಏಳು ಜನರು ಬಲಿಯಾಗಿದ್ದು, ಇದು ಎಂಟನೇ ಬಲಿಯಾಗಿದೆ. ಇದನ್ನೂ ಓದಿ: ದೇವೇಗೌಡರ ಕುಟುಂಬದಲ್ಲಿ ಉಳಿದವನು ನಿಖಿಲ್ ಅಂತಾ ಅರೆಸ್ಟ್ ಮಾಡೋಕೆ ಪ್ಲ್ಯಾನ್‌ ಮಾಡಿದ್ರು: ಹೆಚ್‌ಡಿಕೆ‌ ಕಿಡಿ

  • ರಾಜ್ಯದಲ್ಲಿ ಡೆಂಗ್ಯೂ ತಾಂಡವ – ಮಹದೇವಪುರ ಟೆಕ್ ಹಬ್‍ನಲ್ಲಿ ಹೆಚ್ಚಿದ ಕೇಸ್

    ರಾಜ್ಯದಲ್ಲಿ ಡೆಂಗ್ಯೂ ತಾಂಡವ – ಮಹದೇವಪುರ ಟೆಕ್ ಹಬ್‍ನಲ್ಲಿ ಹೆಚ್ಚಿದ ಕೇಸ್

    ಬೆಂಗಳೂರು: ಮಹದೇವಪುರದ ಟೆಕ್ ಹಬ್‍ನಲ್ಲಿ ಡೆಂಗ್ಯೂ (Dengue) ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ (Bengaluru) ವರದಿಯಾಗುತ್ತಿರುವ ಪ್ರತಿ 4 ಡೆಂಗ್ಯೂ ಪ್ರಕರಣಗಳಲ್ಲಿ 1 ಪ್ರಕರಣ ಮಹದೇವಪುರ ವಲಯದ್ದಾಗಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

    ಬಿಬಿಎಂಪಿ (BBMP) ಅಂಕಿ ಅಂಶಗಳ ಪ್ರಕಾರ, ನಗರದಲ್ಲಿ ಮಂಗಳವಾರದವರೆಗೆ 4,194 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಮಹದೇವಪುರ ವಲಯದಲ್ಲಿ 1,126 ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಮಹದೇವಪುರ ಮೊದಲನೇ ಸ್ಥಾನದಲ್ಲಿದೆ. ಇನ್ನೂ 970 ಕೇಸ್ ವರದಿಯಾಗುವ ಮೂಲಕ ಪೂರ್ವ ವಲಯ 2ನೇ ಸ್ಥಾನದಲ್ಲಿದೆ.

    ಬೊಮ್ಮನಹಳ್ಳಿ ವಲಯದಲ್ಲಿ ಕಳೆದ 9 ದಿನಗಳಲ್ಲಿ ಒಟ್ಟು 256 ಪ್ರಕರಣ ವರದಿಯಾಗಿದೆ. ವರ್ತೂರು, ದೊಡ್ಡನೆಕ್ಕುಂದಿ, ಮಾರತ್ತಹಳ್ಳಿ, ಬೆಳ್ಳಂದೂರು, ಕೆಆರ್‍ಪುರ, ಜೋಗುಪಾಳ್ಯ ಹಾಗೂ ಈಜಿಪುರ ಭಾಗದಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ.

    ರಾಜ್ಯದಲ್ಲಿ ಬುಧವಾರ 293 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 118 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ರಾಜ್ಯದಲ್ಲಿ ಒಟ್ಟು ಡೆಂಗ್ಯೂ ಪ್ರಕರಣಗಳ ಸಂಖ್ಯೆ 7,840ಕ್ಕೆ ಏರಿಕೆ ಕಂಡಿದೆ. ಇದುವರೆಗೂ ಡೆಂಗ್ಯೂಗೆ 07 ಜನರು ಬಲಿಯಾಗಿದ್ದಾರೆ.

    ಬಿಬಿಎಂಪಿ ವ್ಯಾಪ್ತಿಯ ವಲಯವಾರು ಪ್ರಕರಣ

    ಮಹಾದೇವಪುರ – 1126
    ದಕ್ಷಿಣ ವಲಯ – 522
    ಪೂರ್ವ ವಲಯ – 970
    ಪಶ್ಚಿಮ ವಲಯ – 388
    ಯಲಹಂಕ – 258
    ಆರ್‍ಆರ್ ನಗರ – 311
    ದಾಸರಹಳ್ಳಿ – 43
    ಬೊಮ್ಮನಹಳ್ಳಿ – 576
    ಒಟ್ಟು – 4194

  • ಶಿವಮೊಗ್ಗದಲ್ಲಿ ಶಂಕಿತ ಡೆಂಗ್ಯೂಗೆ ಮಹಿಳೆ ಬಲಿ

    ಶಿವಮೊಗ್ಗದಲ್ಲಿ ಶಂಕಿತ ಡೆಂಗ್ಯೂಗೆ ಮಹಿಳೆ ಬಲಿ

    ಶಿವಮೊಗ್ಗ: ಶಂಕಿತ ಡೆಂಗ್ಯೂಗೆ (Suspected Dengue) ಮಹಿಳೆಯೊಬ್ಬರು ಬಲಿಯಾದ ಘಟನೆ ಶಿವಮೊಗ್ಗ (Shivamogga) ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯಲ್ಲಿ (Ripponpet) ನಡೆದಿದೆ.

    ರಶ್ಮಿ ಆರ್.ನಾಯಕ್ (42) ಮೃತ ಮಹಿಳೆ. ಕಳೆದ 15 ದಿನಗಳಿಂದ ರಶ್ಮಿ ತೀವ್ರ ಜ್ವರದಿಂದ ಬಳಲುತ್ತಿದ್ದು, ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದನ್ನೂ ಓದಿ: ಖರ್ಗೆಗೆ ಒಂದು ಕಡೆ ಲ್ಯಾಂಡ್‌ ಅಲಾಟ್‌ ಆಗಿದೆಯಂತೆ: ರಮೇಶ್‌ ಜಿಗಜಿಣಗಿ ಹೊಸ ಬಾಂಬ್‌

    ಇಂದು ಚಿಕಿತ್ಸೆ ಫಲಕಾರಿಯಾಗದೇ ರಶ್ಮಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಸೂರಜ್‌ ರೇವಣ್ಣ ಜಾಮೀನು ಅರ್ಜಿ ವಜಾ

  • ಡೆಂಗ್ಯೂ ನಿಯಂತ್ರಣದಲ್ಲಿ ಸರ್ಕಾರ ವಿಫಲ: ಶೋಭಾ ಕರಂದ್ಲಾಜೆ ಕಿಡಿ

    ಡೆಂಗ್ಯೂ ನಿಯಂತ್ರಣದಲ್ಲಿ ಸರ್ಕಾರ ವಿಫಲ: ಶೋಭಾ ಕರಂದ್ಲಾಜೆ ಕಿಡಿ

    – ಸಿಎಂ ಹುದ್ದೆಯ ಹಗ್ಗ ಜಗ್ಗಾಟದಿಂದ ಅಭಿವೃದ್ಧಿ ಇಲ್ಲ

    ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ (Dengue fever) ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸರ್ಕಾರ ಡೆಂಗ್ಯೂ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಕಿಡಿಕಾರಿದ್ದಾರೆ.

    ಶೇಷಾದ್ರಿಪುರದಲ್ಲಿ ಕರ್ನಾಟಕ ಮೆಮೊರಿ ಚಾಂಪಿಯನ್‍ಶಿಪ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹುದ್ದೆ ಜಗಳದಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತವಾಗಿವೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಇದರ ನಡುವೆ ಡೆಂಗ್ಯೂ ಹಾಗೂ ಝಿಕಾ ಹೆಚ್ಚಾಗುತ್ತಿದೆ. ಸರ್ಕಾರ ಡೆಂಗ್ಯೂ ನಿಯಂತ್ರಣದ ಬಗ್ಗೆ ಕ್ರಮಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಶಂಕಿತ ಡೆಂಗ್ಯೂಗೆ ಯುವತಿ ಬಲಿ

    ಮುಂದಿನ ಅಧಿವೇಶನದಲ್ಲಿ ಡೆಂಗ್ಯೂ ಹಾಗೂ ಝಿಕಾ ಬಗ್ಗೆ ಚರ್ಚೆ ನಡೆಸಲಿದ್ದೇವೆ. ಆಸ್ಪತ್ರೆಗಳಲ್ಲಿ ಬಹಳಷ್ಟು ಜನರು ದಾಖಲಾಗುತ್ತಿದ್ದು, ಸರಿಯಾಗಿ ಔಷಧಿ ಸಿಗುತ್ತಿಲ್ಲ. ಔಷಧಿಯ ದರ ಹೆಚ್ಚಿಸಿದ್ದಾರೆ. ಡೆಂಗ್ಯೂ ಪರೀಕ್ಷೆಗೆ ಸರ್ಕಾರ ನಿಗದಿಪಡಿಸಿದ ಮೊತ್ತವನ್ನು ಯಾರೂ ಪಾಲಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಡೆಂಗ್ಯೂ ಅಬ್ಬರದ ನಡುವೆ ಹಾವೇರಿಯಲ್ಲಿ ಇಲಿ ಜ್ವರ ಪತ್ತೆ

  • ಹಾಸನದಲ್ಲಿ ಶಂಕಿತ ಡೆಂಗ್ಯೂಗೆ ಯುವತಿ ಬಲಿ

    ಹಾಸನದಲ್ಲಿ ಶಂಕಿತ ಡೆಂಗ್ಯೂಗೆ ಯುವತಿ ಬಲಿ

    ಹಾಸನ: ಶಂಕಿತ ಡೆಂಗ್ಯೂಗೆ (Suspected Dengue) ಯುವತಿ (Young Woman) ಬಲಿಯಾದ ಘಟನೆ ಹಾಸನ (Hassan) ಜಿಲ್ಲೆಯಲ್ಲಿ ನಡೆದಿದೆ.

    ಸುಪ್ರೀತಾ (26) ಶಂಕಿತ ಡೆಂಗ್ಯೂನಿಂದ ಸಾವನ್ನಪ್ಪಿದ ಯುವತಿ. ಈಕೆ ಹಾಸನ ಜಿಲ್ಲೆ ಅರಸಿಕೆರೆ (Arasikere) ತಾಲೂಕಿನ ಮುದುಡಿ ತಾಂಡ್ಯ ಗ್ರಾಮದವಳಾಗಿದ್ದು, ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಸುಪ್ರೀತಾ ಜೂಲುನಾಯ್ಕ-ಸುಮಿತ್ರಾದೇವಿ ಎಂಬವರ ಪುತ್ರಿಯಾಗಿದ್ದಾಳೆ. ನಾಲ್ಕು ದಿನಗಳ ಹಿಂದೆ ತೀವ್ರ ಜ್ವರದಿಂದ ಬಳಲುತ್ತಿದ್ದ ಸುಪ್ರೀತಾ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಳು. ಇದನ್ನೂ ಓದಿ: ಡೆಂಗ್ಯೂ ಅಬ್ಬರದ ನಡುವೆ ಹಾವೇರಿಯಲ್ಲಿ ಇಲಿ ಜ್ವರ ಪತ್ತೆ

    ಚಿಕಿತ್ಸೆ ಪಡೆಯುತ್ತಿರುವಾಗಲೇ ಸುಪ್ರೀತಾಗೆ ಬಹು ಅಂಗಾಂಗ ವೈಫಲ್ಯ ಕಾಣಿಸಿಕೊಂಡಿದೆ. ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆ ಆಕೆಯ ಪೋಷಕರು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸುಪ್ರೀತಾ ಸಾವನ್ನಪ್ಪಿದ್ದಾಳೆ. ಹಾಸನ ಜಿಲ್ಲೆಯಲ್ಲಿ ಶಂಕಿತ ಡೆಂಗ್ಯೂ ಸಾವಿನ ಸಂಖ್ಯೆ ಏಳಕ್ಕೆ ಏರಿದೆ. ಈ ಪೈಕಿ ಮೂರು ಮಕ್ಕಳು ಡೆಂಗ್ಯೂವಿನಿಂದ ಸಾವನ್ನಪ್ಪಿರುವುದು ದೃಢವಾಗಿದೆ. ಇದನ್ನೂ ಓದಿ: ಗದಗದಲ್ಲಿ ಡೆಂಗ್ಯೂಗೆ 5 ವರ್ಷದ ಬಾಲಕ ಬಲಿ