ಗಾಂಧಿನಗರ: ಭಾರೀ ಮಳೆಯಿಂದ ಜರ್ಜರಿತವಾಗಿರುವ ಗುಜರಾತ್‍ನ (Fever) ಕಚ್ ಜಿಲ್ಲೆಯ ಲಖ್‍ಪತ್ ತಾಲೂಕಿನಲ್ಲಿ ಸೆಪ್ಟೆಂಬರ್ 3 ರಿಂದ 9ರ ವರೆಗೆ ಜ್ವರದಿಂದ (Fever) 12 ವರ್ಷದೊಳಗಿನ ನಾಲ್ವರು ಮಕ್ಕಳು ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ.
ಜ್ವರದಿಂದ ಬಳಲುತ್ತಿರುವವರ ಉಸಿರಾಟಕ್ಕೂ ತೊಂದರೆಯಾಗುತ್ತಿದೆ. ಆದರೆ ಜ್ವರವನ್ನು ನಿಖರವಾಗಿ ಪತ್ತೆ ಹಚ್ಚಲು ವೈದ್ಯರಿಗೆ ಸಾಧ್ಯವಾಗಿಲ್ಲ. ಜನರ ಸಾವಿಗೆ ಪ್ರಾಥಮಿಕವಾಗಿ ನ್ಯುಮೋನಿಟಿಸ್ ಕಾರಣ ಇರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಪಾಕಿಸ್ತಾನದ ಗಡಿಗೆ ಸಮೀಪದಲ್ಲಿರುವ ತಾಲೂಕಿನಲ್ಲಿ ವೈದ್ಯಕೀಯ ಸೇವೆಗಳನ್ನು ಹೆಚ್ಚಿಸಲಾಗಿದೆ. ಎಚ್1ಎನ್1, ಮಲೇರಿಯಾ ಮತ್ತು ಡೆಂಗ್ಯೂ ಸಾಧ್ಯತೆಯನ್ನು ನಿಯಂತ್ರಿಸಲು 22 ವೈದ್ಯರ ತಂಡವನ್ನು ನಿಯೋಜಿಸಿ ಗ್ರಾಮಸ್ಥರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಪ್ರಾಥಮಿಕವಾಗಿ, ಸಾವುಗಳು ನ್ಯುಮೋನಿಟಿಸ್‍ನಿಂದ ಉಂಟಾಗಿವೆ ಎಂಬ ಶಂಕೆ ವ್ಯಕ್ತವಾಗಿದೆ. ಇದು ಮಾಲಿನ್ಯದಿಂದ ಕಾಣಿಸಿಕೊಂಡಿಲ್ಲ. ಅಲ್ಲದೇ ಸಾಂಕ್ರಾಮಿಕ ರೋಗದಂತೆ ತೋರುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೋಗಿಗಳಿಗೆ ಜ್ವರ, ನೆಗಡಿ, ಕೆಮ್ಮು, ನ್ಯುಮೋನಿಯಾ ಮತ್ತು ಉಸಿರಾಟದ ತೊಂದರೆ ಇದೆ ಎಂದು ಸ್ಥಳೀಯರು ಅಧಿಕಾರಿಗಳ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರು: ಕೆಲ ದಿನಗಳ ಹಿಂದೆ ಮಾಜಿ ಸಚಿವ, ಬಿಜೆಪಿ (BJP) ಶಾಸಕ ಸುರೇಶ್‌ಕುಮಾರ್ (S Sureshkumar) ಅನಾರೋಗ್ಯದ ಹಿನ್ನೆಲೆ ಶೇಷಾದ್ರಿಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಐಸಿಯು ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಿದ್ದು ಈಗ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ತಮ್ಮ ಅನಾರೋಗ್ಯ ಸಂಬಂಧ ವದಂತಿ ಹಬ್ಬಿದ ಹಿನ್ನೆಲೆ ಸುರೇಶ್‌ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ತನಗಾದ ಆರೋಗ್ಯ ಸಮಸ್ಯೆಯ ಬಗ್ಗೆ ದೀರ್ಘವಾದ ಪೋಸ್ಟ್ ಹಾಕಿ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾ
ಪೋಸ್ಟ್ನಲ್ಲಿ ಏನಿದೆ?
ನನ್ನ ಆರೋಗ್ಯ ಕಳೆದ ಆಗಸ್ಟ್ 20 ರಿಂದ ತೀವ್ರ ಸಮಸ್ಯೆಗೆ ಒಳಗಾಗಿತ್ತು. ಆಗಸ್ಟ್ 15 ರವರೆಗೆ ನಮ್ಮ ಕ್ಷೇತ್ರದಲ್ಲಿ ಸುಮಾರು 3 ಕಡೆ ಜನಸ್ಪಂದನ, ಆಗಸ್ಟ್ 14 ರಂದು ಮಧ್ಯರಾತ್ರಿ ರಾಷ್ಟ್ರಧ್ವಜ ಹಾರಿಸುವ ಭರ್ಜರಿ ಕಾರ್ಯಕ್ರಮ, ನಮ್ಮ ಕ್ಷೇತ್ರದ ಪ್ರೌಢಶಾಲಾ ಮಕ್ಕಳಿಗಾಗಿ ಆಯೋಜಿಸಿದ ಅತ್ಯಂತ ಯಶಸ್ವಿ ಆಶು ಭಾಷಣ ಸ್ಪರ್ಧೆ, ಆಗಸ್ಟ್ 15 ರಂದು ಬೆಳಗ್ಗೆಯಿಂದ ಸಂಜೆಯವರೆಗೂ ಸ್ವಾತಂತ್ರ‍್ಯ ದಿನಾಚರಣೆಯ ಕಾರ್ಯಕ್ರಮಗಳು, ಆಗಸ್ಟ್ 16 ರಂದು ಕ್ಷೇತ್ರದ ರಾಮ ಮಂದಿರ ವಾರ್ಡಿನಲ್ಲಿ ಕೈಗೊಂಡ ಜನ ಸ್ಪಂದನ ಕಾರ್ಯಕ್ರಮ ಹೀಗೆ ಸಂಪೂರ್ಣವಾಗಿ ಕ್ಷೇತ್ರದ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೆ. ಇದನ್ನೂ ಓದಿ: ನಾಗಾಲ್ಯಾಂಡ್‌ನಲ್ಲಿ ಭಾರೀ ಮಳೆಗೆ ಹೆದ್ದಾರಿ ಕುಸಿತ – ಮೃತರ ಸಂಖ್ಯೆ 6ಕ್ಕೆ ಏರಿಕೆ
ಆಗಸ್ಟ್ 16, ವರಮಹಾಲಕ್ಷ್ಮಿ ಹಬ್ಬದಂದು ರಾಮಮಂದಿರ 4ನೇ ಬ್ಲಾಕ್‌ನ ಎಬಿಸಿ ಪಾರ್ಕ್ನಲ್ಲಿ ಮುಂಜಾನೆ ಜನಸ್ಪಂದನ ಕಾರ್ಯಕ್ರಮ ಯೋಜಿಸಲಾಗಿತ್ತು. ಅಂದು ಸಂಜೆ ಐದು ಗಂಟೆಯ ವೇಳೆಗೆ ನನ್ನ ಆರೋಗ್ಯ ಸ್ವಲ್ಪ ಹೆಚ್ಚೇ ಹದಗೆಟ್ಟಿತು. ಸಂಜೆ ವೇಳೆಗೆ ಎರಡು ಕಾಲುಗಳು ತುಂಬಾ ನೋಯಲು ಪ್ರಾರಂಭಿಸಿದವು. ಮಾರನೆಯ ದಿನ ಇಡೀ ದೇಹದಲ್ಲಿ ಒಂದಿಂಚು ಸಹ ನೋವು ಇಲ್ಲದ ಜಾಗ ನನಗೆ ಲಭ್ಯವಿರಲಿಲ್ಲ. ಅದರ ಮಾರನೆಯ ದಿನ ನನ್ನ ರಕ್ತ ಪರೀಕ್ಷೆ ಮಾಡಲಾಯಿತು. ಅದರಲ್ಲೂ ಯಾವುದೇ ಚಿನ್ಹೆ ಗೊತ್ತಾಗಲಿಲ್ಲ. ಇದನ್ನೂ ಓದಿ: ನ್ಯಾಯಾಲಯದ ತೀರ್ಪು ಬರುವ ಮೊದಲು ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಬಿಎಸ್‌ವೈ
ಆಗಸ್ಟ್ 19 ರಂದು ನೋವು ತಡೆಯಲಾರದೆ ಬಾಧೆ ಎದುರಿಸಲಾಗದೇ ಆಸ್ಪತ್ರೆಗೆ ಸೇರಲೇಬೇಕಾಯಿತು. ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ಕೊಟ್ಟು ಬುಧವಾರ ಅಂದರೆ 23 ಆಗಸ್ಟ್ ರಂದು ನನ್ನ ಡಿಸ್ಚಾರ್ಜ್ ಮಾಡಲಾಯಿತು. ಆದರೆ ಮಾರನೆಯ ದಿನ ಮತ್ತು ವಿಪರೀತ ದೇಹದಲ್ಲಿ ಅಸ್ತವ್ಯಸ್ತ ಉಂಟಾಯಿತು ಆಗ ವೈದ್ಯರು ತಪಾಸಣೆ ಮಾಡಿದ ಮೇಲೆ ನನಗೆ ಚಿಕನ್ ಗುನ್ಯಾ ಸಮಸ್ಯೆ ಗಂಭೀರ ಸ್ವರೂಪ ತಾಳಿದ್ದು ವೈದ್ಯರಿಂದ ತಿಳಿಯಿತು. ಇದನ್ನೂ ಓದಿ: ಗುಂಡ್ಲುಪೇಟೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಗಾದಿ ಹಿಡಿದ ಕಾಂಗ್ರೆಸ್ – ಬಿಜೆಪಿಗೆ ಮುಖಭಂಗ
ಅಲ್ಲಿಂದ ಪ್ರಾರಂಭವಾದ ನನ್ನ ಚಿಕನ್ ಗುನ್ಯಾ (Chikungunya) ವಿರುದ್ಧದ ಹೋರಾಟ ಇಂದು ಬೆಳಗ್ಗೆ ಒಂದು ಹಂತ ತಲುಪಿ, ಎಲ್ಲಾ ವೈದ್ಯರ ಉತ್ತಮ ಆರೈಕೆ, ಅಗತ್ಯ ಚಿಕಿತ್ಸೆ ಮೂಲಕ, ಆಸ್ಪತ್ರೆಯ ನರ್ಸ್ಗಳ ಕಾಳಜಿಯಿಂದ ಕೂಡಿದ ಸೇವೆಯ ಪರಿಣಾಮವಾಗಿ ಇಂದು ನಾನು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದೇನೆ. ತಮಗೆಲ್ಲ ಗೊತ್ತು ಚಿಕನ್ ಗುನ್ಯಾ ನಂತರದ ಪರಿಣಾಮ ಸುಧಾರಿಸಲು ಕನಿಷ್ಠ 3 ವಾರಗಳು ಬೇಕು. ವೈದ್ಯರುಗಳ ಸಲಹೆಯ ಮೇರೆಗೆ ನಾನು ಸುಧಾರಣೆಗಾಗಿ ನನ್ನ ಸಂಬಂಧಿಕರ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೇನೆ. ಗುಣಮುಖವಾಗುವ ಹಾದಿಯಲ್ಲಿ ನನಗೆ ಮತ್ತೊಮ್ಮೆ ತಮ್ಮೆಲ್ಲರ ಆಶೀರ್ವಾದ ಹಾರೈಕೆ ಅಗತ್ಯವಿದೆ. ಇದನ್ನೂ ಓದಿ: ರಾಜಸ್ಥಾನ ಪೊಲೀಸ್ ಅಧೀನ ಸೇವೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ
ಬೆಂಗಳೂರು: ರೂಪಾಂತರಿ ಚಿಕುನ್ ಗುನ್ಯಾದಿಂದ (Chikungunya) ಬಳಲುತ್ತಿದ್ದ ಬಿಜೆಪಿ ಶಾಸಕ ಸುರೇಶ್ ಕುಮಾರ್ (S Suresh Kumar) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರೂಪಾಂತರಿ ಚಿಕುನ್ ಗುನ್ಯಾ ಸೋಂಕು ತಗುಲಿದ ಕಾರಣ ಸುರೇಶ್ ಕುಮಾರ್ ಕೆಲ ದಿನಗಳ ಹಿಂದೆ ಶೇಷಾದ್ರಿಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಐಸಿಯು ಘಟಕದಲ್ಲಿ ಸುರೇಶ್ ಕುಮಾರ್‌ಗೆ ಚಿಕಿತ್ಸೆ ನೀಡಿದ್ದಾರೆ. ಈಗ ಸುರೇಶ್ ಕುಮಾರ್ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರದಲ್ಲಿ ಮಂಜುನಾಥ್ ಭರ್ಜರಿ ಗೆಲುವು – ಗ್ರಾಮಸ್ಥರ ಹರಕೆ ತೀರಿಸಿದ ಅನುಸೂಯ ಮಂಜುನಾಥ್
ಇನ್ನು ತಮ್ಮ ಅನಾರೋಗ್ಯ ಸಂಬಂಧ ವದಂತಿ ಹಬ್ಬಿದ ಹಿನ್ನೆಲೆ ಸುರೇಶ್ ಕುಮಾರ್ ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ. ನಾನು ಆರೋಗ್ಯವಾಗಿದ್ದೇನೆ. ಚಿಕುನ್ ಗುನ್ಯಾ ನನ್ನನ್ನು ಕೆಲ ದಿನಗಳಿಂದ ಬಾಧಿಸಿದ್ದು, ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದೇನೆ. ಜ್ವರದಿಂದ ಈಗ ಸಂಪೂರ್ಣ ಚೇತರಿಕೆ ಕಂಡಿದ್ದು, ಗುಣಮುಖನಾಗಿದ್ದೇನೆ ಹಾಗೂ ಸದ್ಯಕ್ಕೆ ವಿಶ್ರಾಂತಿಯಲ್ಲಿದ್ದೇನೆ. ಹಿತೈಶಿಗಳು ಅನಗತ್ಯ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಮಾಧ್ಯಮ ಪ್ರಕಟಣೆ ಮೂಲಕ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಚುನಾವಣೆಗೂ ಮುನ್ನ ಮಹಾ ವಿಕಾಸ್ ಅಘಾಡಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಅಗತ್ಯವಿಲ್ಲ: ಶರದ್ ಪವಾರ್
ಜಗತ್ತಿನಲ್ಲಿ ಕೋವಿಡ್ -19, ಎಂಪಾಕ್ಸ್, ಝಿಕಾ ವೈರಸ್ ಹೀಗೆ ದಿನಕ್ಕೊಂದು ಹೊಸಹೊಸ ರೋಗಗಳು ಹುಟ್ಟಿಕೊಳ್ಳುತ್ತಿವೆ. ಇದೀಗ ಯುರೋಪ್‌ನಲ್ಲಿ ಮೊದಲ ಬಾರಿಗೆ ʼಸ್ಲಾತ್ ವೈರಸ್ʼ ಎಂಬ ಹೊಸ ವೈರಸ್ ಪತ್ತೆಯಾಗಿದ್ದು,ಈಗಾಗಲೇ 19 ಜನರಲ್ಲಿ ಈ ವೈರಸ್ ಕಾಣಿಸಿಕೊಂಡಿದೆ. ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ECDC) ಓರೊಪೌಚೆ ವೈರಸ್ (ಸ್ಲಾತ್ ಫೀವರ್) ವರದಿ ಪ್ರಕಾರ, ಸ್ಪೇನ್‌ನಲ್ಲಿ 12, ಇಟಲಿಯಲ್ಲಿ ಐದು ಮತ್ತು ಜರ್ಮನಿಯಲ್ಲಿ ಎರಡು ಸೇರಿದಂತೆ ಯುರೋಪ್‌ನಲ್ಲಿ 19 ಪ್ರಕರಣಗಳು ಪತ್ತೆಯಾಗಿದೆ. ಇಷ್ಟು ಮಾತ್ರವಲ್ಲದೇ ಬ್ರೆಜಿಲ್‌ನಲ್ಲಿ ಈ ವೈರಸ್‌ನಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಏನಿದು ʼಸ್ಲಾತ್ ಫೀವರ್ʼ? ರೋಗಲಕ್ಷಣಗಳೇನು ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.
ಓರೊಪೌಚೆ ವೈರಸ್ (ಸ್ಲಾತ್ ಫೀವರ್) ಎಂದರೇನು?
ಈ ರೋಗವು ಸಾಮಾನ್ಯವಾಗಿ ಕೀಟಗಳ ಕಡಿತದಿಂದ ಹರಡುತ್ತದೆ. ಆದರೆ ಕೆಲವು ಜಾತಿಯ ಸಸ್ತನಿಗಳು ಮತ್ತು ಪಕ್ಷಿಗಳಲ್ಲಿ ಕೂಡ ಈ ವೈರಸ್ ಹುಟ್ಟಿಕೊಳ್ಳುತ್ತದೆ. ಸ್ಲಾತ್ ವೈರಸ್ ಎಂಬುದು ಓರೊಪೌಚೆ ವೈರಸ್‌ನ ಇನ್ನೊಂದು ಹೆಸರು.
ಇದು ಯಾವುದೇ ವಯಸ್ಸಿನ ಜನರಿಗೆ ಹರಡಬಹುದಾದ ವೈರಲ್ ಕಾಯಿಲೆಯಾಗಿದೆ. ಇದನ್ನು ಸಾಮಾನ್ಯವಾಗಿ ಡೆಂಗ್ಯೂ ಎಂದು ತಪ್ಪಾಗಿ ಗ್ರಹಿಸಲಾಗುತ್ತದೆ .ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (CDC) ಪ್ರಕಾರ ಸೊಳ್ಳೆಗಳಿಂದ ಜನರಿಗೆ ಹರಡುವ ಗಂಭೀರ ಸೋಂಕು ಇದಾಗಿದದೆ. ಕೆಮ್ಮುವುದು, ಸ್ಪರ್ಶಿಸುವುದು ಅಥವಾ ಸೀನುವ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಈ ವೈರಸ್ ಹರಡುವುದಿಲ್ಲ ಸಿಡಿಸಿ ವರದಿಗಳು ತಿಳಿಸಿವೆ.
ಓರೊಪೌಚೆ ವೈರಸ್ ಸ್ಲಾತ್ ಪ್ರಾಣಿ, ಕೋತಿಗಳು ಮತ್ತು ಪಕ್ಷಿಗಳಂತಹ ಮಾನವರಲ್ಲದ ಸಸ್ತನಿಗಳಲ್ಲಿ ಸಾಮಾನ್ಯವಾಗಿದೆ. ಆದರೆ ಇದು ಕೆಲವು ಕೀಟಗಳ ಮೂಲಕ ಜನರಿಗೆ ಹರಡಬಹುದು. ಇದನ್ನು ಸಾಮಾನ್ಯವಾಗಿ ರಕ್ತ ಪರೀಕ್ಷೆಯಿಂದ ನಿರ್ಣಯಿಸಲಾಗುತ್ತದೆ.
ಒರೊಪೌಚೆ ವೈರಸ್ ಮೊದಲು 1955ರಲ್ಲಿ ಕಾಣಿಸಿಕೊಂಡಿತು. ಬಳಿಕ ದಕ್ಷಿಣ ಅಮೆರಿಕ ಹಾಗೂ ಮಧ್ಯ ಅಮೆರಿಕದಲ್ಲಿ ಹೆಚ್ಚಾಗಿ ಕಾಣಿಸತೊಡಗಿತು.ಈಗ ಯುರೋಪ್‌ನಿಂದ ಅಮೆರಿಕ, ಅಥವಾ ವೈರಸ್ ಹೆಚ್ಚಿರುವ ದೇಶಗಳಿಗೆ ಪ್ರಯಾಣ ಬೆಳೆಸಿದವರಲ್ಲಿ ಈ ರೋಗ ಕಾಣಿಸಿಕೊಂಡಿದ್ದು,ಮರಳಿ ಬಂದವರ ಜೊತೆ ಯುರೋಪ್‌ಗೂ ಈ ವೈರಸ್ ಕಾಲಿಟ್ಟಿದೆ ಎಂದು ಡಾ.ಅಡಾಲ್ಜಾ ಹೇಳಿದ್ದಾರೆ.
ರೋಗಲಕ್ಷಣಗಳೇನು?
*ತಲೆನೋವು
*ಜ್ವರ
*ಸ್ನಾಯು ನೋವುಗಳು
*ಗಟ್ಟಿಯಾದ ಕೀಲುಗಳು
*ವಾಕರಿಕೆ
*ವಾಂತಿ
*ಚಳಿ
*ಬೆಳಕಿಗೆ ಒಗ್ಗಿಕೊಳ್ಳದಿರುವುದು ಮುಂತಾದವುಗಳು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ.
ಈ ರೋಗಕ್ಕೆ ತುತ್ತಾಗಿ 4ರಿಂದ 8 ದಿನಗಳ ಒಳಗೆ ರೋಗಲಕ್ಷಣಗಳು ಕಾಣಿಸಿಕೊಳ್ಳತೊಡಗುತ್ತವೆ. ಈ ವೈರಸ್ ಹಲವು ವಾರಗಳವೆಗೆ ಕಾಣಿಸಿಕೊಳ್ಳಬಹುದು ಎಂದು ಡಾ.ಶಾಫ್ನರ್ ತಿಳಿಸಿದ್ದಾರೆ. ಅಲ್ಲದೇ ಹಲವು ವಾರಗಳವರೆಗೆ ಆಯಾಸ ಮತ್ತು ಕೀಲುನೋವುಗಳು ಕಾಣಿಸಿಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
ಚಿಕಿತ್ಸೆ ಏನು?
ವೈರಸ್‌ಗೆ ಯಾವುದೇ ಲಸಿಕೆ ಇಲ್ಲ. ಈ ವೈರಸ್ ಝಿಕಾ ಮತ್ತು ಡೆಂಗ್ಯೂ ವೈರಸ್‌ಗಳ ತಳಿಯಿಂದ ಬಂದಿದೆ ಎಂದು ವೈದ್ಯರು ಶಂಕಿಸಿದ್ದಾರೆ. ಇನ್ನು ಜ್ವರ ಮತ್ತು ಸ್ನಾಯು ನೋವುಗಳಿಗೆ ಸಹಾಯ ಮಾಡಲು ಪೈನ್ ರಿಲೀಫ್ ಔಷಧಗಳನ್ನು ಒಳಗೊಂಡಿರುತ್ತದೆ, ಜೊತೆಗೆ ವಾಕರಿಕೆ ಮತ್ತು ವಾಂತಿಗೆ ನೀಡುವ ಔಷಧಿಗಳನ್ನು ಚಿಕಿತ್ಸೆ ಒಳಗೊಂಡಿರುತ್ತದೆ.
ಇನ್ನು ಈ ರೋಗ ಹೆಚ್ಚಾದರೆ ಮಾರಣಾಂತಿಕವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಈ ವೈರಸ್ ನರಮಂಡಲದ ಮೇಲೆ ಆಕ್ರಮಣ ಮಾಡಬಹುದು. ಇದು ಸಿಡಿಸಿ ಪ್ರಕಾರ ಮೆನಿಂಜೈಟಿಸ್, ಎನ್ಸೆಫಾಲಿಟಿಸ್ ಅಥವಾ ಇತರ ಗಂಭೀರ ನರವೈಜ್ಞಾನಿಕ ತೊಡಕುಗಳನ್ನು ಈ ವೈರಸ್ ಉಂಟುಮಾಡುತ್ತದೆ. ಈ ಸೋಂಕಿಗೆ ಒಳಗಾದವರ ಪೈಕಿ 4% ಜನರಲ್ಲಿ ಇದು ಸಂಭವಿಸುತ್ತದೆ.
ಇನ್ನು ಈ ರೋಗವನ್ನು ತಡೆಗಟ್ಟುವ ಸಲುವಾಗಿ ಸೊಳ್ಳೆ ಪರದೆ, ಕೀಟನಾಶಕ ಔಷಧಿಗಳನ್ನು ಬಳಸಿದರೆ ಉತ್ತಮ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ (Dengue) ಪ್ರಕರಣ ಹಚ್ಚುತ್ತಿರುವ ಬೆನ್ನಲ್ಲೆ ಶಾಲೆಗಳಲ್ಲಿ (School) ಮುಂಜಾಗ್ರತೆ ಕ್ರಮ ಕೈಗೊಳ್ಳಲು ಸರ್ಕಾರ ಮಹತ್ವದ ಆದೇಶ ಹೊಡಿಸಿದೆ. ಡೆಂಗ್ಯೂ ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತೆಯ ಕ್ರಮವಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಕಡ್ಡಾಯವಾಗಿ ಡಿಡಿಪಿಐಗಳು, ಬಿಇಓಗಳು ಶಾಲೆಗಳಲ್ಲಿ ಮಾರ್ಗಸೂಚಿ ಪಾಲನೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.
ಡೆಂಗ್ಯೂ ನಿಯಂತ್ರಣಕ್ಕೆ ಮಾರ್ಗಸೂಚಿಗಳೇನು?
ವಿದ್ಯಾರ್ಥಿಗಳು (Students) ಕೈ ಕಾಲು ಮುಚ್ಚುವಂತಹ ಸಮವಸ್ತ್ರ, ಬಟ್ಟೆಗಳನ್ನ ಧರಿಸುವುದು. ಶಾಲೆಗೆ ಬರುವ ಮುನ್ನ Mosquito Repellent ಗಳನ್ನು ಕೈಕಾಲುಗಳಿಗೆ ಹಚ್ಚಿಕೊಳ್ಳುವುದು. ಡೆಂಗ್ಯೂ ನಿಯಂತ್ರಣ ಕ್ರಮದ ಕುರಿತು Do’s & Don’t’s ಶಾಲೆಯ ಶಾಲಾ ಕೊಠಡಿಯ ನೋಟಿಸ್ ಬೋರ್ಡ್‌ಗಳಲ್ಲಿ ಪ್ರದರ್ಶಿಸುವುದು. ಶುದ್ಧ ನೀರಿನ ಸಂಗ್ರಹಣ ಪರಿಕರಗಳನ್ನು ಭದ್ರವಾಗಿ ಮುಚ್ಚುವುದು ಹಾಗೂ ಕಡ್ಡಾಯವಾಗಿ ವಾರಕ್ಕೊಮ್ಮೆ ತೊಳೆದು ಸ್ವಚ್ಛಗೊಳಿಸಿ ನಂತರ ನೀರನ್ನು ತುಂಬಿಸುವುದು.
ಘನತ್ಯಜ್ಯ ವಸ್ತುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಕಡ್ಡಾಯವಾಗಿ ಶೀಘ್ರ ವಿಲೇವಾರಿ ಮಾಡುವುದು. ಶಾಲಾ ಆವರಣದ ಕಟ್ಟಡಗಳ ಟೆರೇಸ್‌ನ ಮೇಲೆ ಬೀಳುವ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮವಹಿಸುವುದು. ಡೆಂಗ್ಯೂ ಜ್ವರ ನಿಯಂತ್ರಣ ಕುರಿತು ಮಾಹಿತಿಯನ್ನು ಬೆಳಗಿನ ಪ್ರಾರ್ಥನಾ ಸಮಯದಲ್ಲಿ ಪ್ರಚಾರ ಪಡಿಸುವುದು.
ಪೋಷಕರ ಸಭೆಗಳಲ್ಲಿ ಡೆಂಗ್ಯೂ ಜ್ವರ ನಿಯಂತ್ರಣ ಕುರಿತು ಅರಿವು ಮೂಡಿಸುವುದರೊಂದಿಗೆ ಪೋಷಕರ ವಾಟ್ಸಪ್ ಗ್ರೂಪ್‌ಗಳಲ್ಲಿ ಮಾಹಿತಿ ಹಂಚುವುದು. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಎಸ್ಡಿಎಂಸಿ ಸಹಕಾರದೊಂದಿಗೆ ಸೊಳ್ಳೆ ನಿರೋಧಕಗಳನ್ನ ವಿದ್ಯಾರ್ಥಿಗಳಿಗೆ ಆದ್ಯತೆ ಮೇಲೆ ಪೂರೈಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು. ಶಾಲೆಯ ಅಕ್ಕಪಕ್ಕದಲ್ಲಿರುವ ಖಾಲಿ ನಿವೇಶನಗಳಲ್ಲಿ ಘನ ತ್ಯಾಜ್ಯ ವಸ್ತುಗಳು ಸಂಗ್ರಹವಾಗದಂತೆ ಕ್ರಮವಹಿಸುವುದು ಅಗತ್ಯವಿದ್ದಲ್ಲಿ ಪಂಚಾಯಿತಿ ವತಿಯಿಂದ ಅಗತ್ಯ ಸಹಕಾರ ಪಡೆಯುವುದು.
ಹಾವೇರಿ: ಶಂಕಿತ ಡೆಂಗ್ಯೂನಿಂದ (Dengue) ಬಳಲುತ್ತಿದ್ದ ಬಾಲಕಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಹಾವೇರಿಯಲ್ಲಿ (Haveri) ನಡೆದಿದೆ.
ಮೃತ ಬಾಲಕಿಯನ್ನು ರೇಖಾ ದೊಡ್ಡಮನಿ (11) ಎಂದು ಗುರುತಿಸಲಾಗಿದೆ. ಕಳೆದ ಒಂದು ವಾರದಿಂದ ಬಾಲಕಿ ನಿರಂತರವಾಗಿ ಜ್ವರದಿಂದ ಬಳುತ್ತಿದ್ದಳು. ಆಕೆಗೆ ಶಿಗ್ಗಾಂವಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೆ ಬಾಲಕಿ ಬಲಿಯಾಗಿದ್ದಾಳೆ.
ಬಾಲಕಿಯ ಸಾವಿನಿಂದಾಗಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಅಲ್ಲದೇ ಶಾಲೆಯಲ್ಲಿ ಬಹಳ ಚುರುಕಾಗಿದ್ದ ಬಾಲಕಿಯ ಸಾವಿನಿಂದ ಶಿಕ್ಷಕರು ಹಾಗೂ ಗ್ರಾಮಸ್ಥರು ಕಣ್ಣೀರು ಹಾಕಿದ್ದಾರೆ.
ಸ್ಥಳಕ್ಕೆ ತಾಲೂಕು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ (Karnataka) ಡೆಂಗ್ಯೂ (Dengue) ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಇಲ್ಲಿಯವರೆಗೂ ರಾಜ್ಯದಲ್ಲಿ 19,923 ಡೆಂಗ್ಯೂ ಪ್ರಕರಣ ದಾಖಲಾಗಿ 20 ಸಾವಿರ ಸನಿಹದತ್ತ ಮುನ್ನುಗ್ಗುತ್ತಿದೆ.
ರಾಜ್ಯದಲ್ಲಿ ಇದುವರೆಗೂ 10 ಜನ ಡೆಂಗ್ಯೂಗೆ ಬಲಿಯಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂರು ಸಾವು, ಶಿವಮೊಗ್ಗದಲ್ಲಿ ಇಬ್ಬರು, ಹಾಸನದಲ್ಲಿ ಇಬ್ಬರು ಸಾವು ಮತ್ತು ಧಾರವಾಡ ಮತ್ತು ಹಾವೇರಿಯಲ್ಲಿ ಒಂದೊಂದು ಸಾವಾಗಿದೆ. ಜೊತೆಗೆ ಪ್ರತಿನಿತ್ಯ ಮೂನ್ನೂರರ ಸನಿಹಕ್ಕೆ ಕೇಸ್ ದಾಖಲಾಗುತ್ತಿವೆ. ಮಂಗಳವಾರ 259 ಡೆಂಗ್ಯೂ ಕೇಸ್ ದಾಖಲಾಗಿವೆ. ಬೆಂಗಳೂರು, ಧಾರವಾಡ, ಹಾವೇರಿ ಸೇರಿದಂತೆ ಎಂಟಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಎರಡಂಕಿಯಲ್ಲಿ ಕೇಸ್ ದಾಖಲಾಗುತ್ತಿದೆ. ಇದನ್ನೂ ಓದಿ: ಆ.8ರಿಂದ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ – ಹೂಗಳಲ್ಲಿ ಅಂಬೇಡ್ಕರ್ ಜೀವನಗಾಥೆ ಅನಾವರಣ
ಇನ್ನೂ ರಾಜ್ಯ ಆರೋಗ್ಯ ಇಲಾಖೆ ಈಗಾಗಲೇ ಮುಂಜಾಗ್ರತೆಯನ್ನು ವಹಿಸುತ್ತಾ ಇದೆ. ಆಸ್ಪತ್ರೆಗಳಲ್ಲಿ ಬೆಡ್ ಮೀಸಲು ಇಡುತ್ತಿದ್ದು, ಪ್ರತಿ ಶುಕ್ರವಾರ ಲಾರ್ವಾ ಸೈಟ್ಸ್ ನಾಶ ಮಾಡಲಾಗುತ್ತಿದೆ. ಮನೆಮನೆ ಸರ್ವೆ ಮಾಡಿ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ಜನರು ಕೂಡಲೇ ಎಚ್ಚೆತ್ತುಕೊಂಡು ಡೆಂಗ್ಯೂ ರೋಗ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಭೇಟಿ ಮಾಡಲು ಆರೋಗ್ಯ ಇಲಾಖೆ ಸೂಚಿಸಿದೆ. ಇದನ್ನೂ ಓದಿ: Paris Olympics 2024 | ಅನರ್ಹಗೊಂಡ ಕೆಲವೇ ನಿಮಿಷಗಳಲ್ಲಿ ವಿನೇಶ್ ಆಸ್ಪತ್ರೆಗೆ ದಾಖಲು
ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ಕಳೆದ 24 ಗಂಟೆಯಲ್ಲಿ 123 ಡೆಂಗ್ಯೂ ಪ್ರಕರಣಗಳು ದಾಖಲಾಗಿದೆ. ಇಲ್ಲಿಯವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ 8,800 ಪ್ರಕರಣಗಳು ಪತ್ತೆಯಾಗಿದ್ದು, ಮೂವರು ಡೆಂಗ್ಯೂಗೆ ಬಲಿಯಾಗಿದ್ದಾರೆ. ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಭೀಕರ ಅಪಘಾತ – ಓರ್ವ ಸಾವು
ಬೆಂಗಳೂರು: ಯಕೃತ್ ಕ್ಯಾನ್ಸರ್‌ಗೆ ಒಳಗಾಗಿದ್ದ 52 ವರ್ಷದ ತನ್ನ ತಾಯಿಗೆ ಸ್ವತಃ ಮಗನೇ ಯಕೃತ್ ಭಾಗವನ್ನು ದಾನ ಮಾಡುವ ಮೂಲಕ ಮಹಿಳೆಗೆ ಯಶಸ್ವಿಯಾಗಿ ಯಕೃತ್ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಈ ಕುರಿತು ಮಾತನಾಡಿದ ಫೋರ್ಟಿಸ್ ಆಸ್ಪತ್ರೆಯ ಲಿವರ್ ಟ್ರಾನ್ಸ್‌ಪ್ಲಾಂಟ್ ಸರ್ಜನ್ ಡಾ. ಕಿಶೋರ್ ಜಿಎಸ್‌ಬಿ, ಮತ್ತು ಡಾ. ಪಿಯೂಷ್ ಸಿನ್ಹಾ, 2021 ರಲ್ಲಿ 52 ವರ್ಷದ ಲೀಲಾ ಎಂಬುವವರು ಕಾಮಾಲೆ ಕಾಯಿಲೆಗೆ ತುತ್ತಾದರು. ಇದರ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಾದ ಬಳಿಕ ಅವರಿಗೆ ಲಿವರ್ ಸಿರೋಸಿಸ್ ಇರುವುದು ಪತ್ತೆಯಾಯಿತು. ಬಳಿಕ ಅವರು ಫೋರ್ಟಿಸ್ ಆಸ್ಪತ್ರೆಗೆ ದಾಖಲಾದರು. ದೀರ್ಘಕಾಲದಿಂದ ಯಕೃತ್‌ನ ಕಾಯಿಲೆ ಇರುವ ಕಾರಣ ಅವರ ಯಕೃತ್‌ನಲ್ಲಿ ದ್ರವದ ಶೇಖರಣೆಯಾಗಿ ಯಕೃತ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಇದರಿಂದ ಅವರ ಜೀವನ ಶೈಲಿಯ ಮೇಲೆ ತೀವ್ರ ಪರಿಣಾಮ ಉಂಟು ಮಾಡುತ್ತಿತ್ತು. ಅವರನ್ನು ಮತ್ತಷ್ಟು ತಪಾಸಣೆಗೆ ಒಳಪಡಿಸಿದ ಬಳಿಕ ಪಿತ್ತರಸ ನಾಳದಲ್ಲಿ ಕಲ್ಲು ಇರುವುದು ಪತ್ತೆಯಾಯಿತು. ಗ್ಯಾಸ್ಟ್ರೋ ತಂಡವು ಈ ಕಲ್ಲು ತೆಗೆಯುವ ಶಸ್ತ್ರಚಿಕಿತ್ಸೆ ವೇಳೆ ಆಕೆಗೆ ಯಕೃತ್‌ನ ಕ್ಯಾನ್ಸರ್ ಪ್ರಾರಂಭಿಕ ಹಂತದಲ್ಲಿರುವುದು ಸಹ ತಿಳಿದುಬಂತು. ಹೀಗಾಗಿ ಆಕೆಗೆ ಲಿವರ್ ಸಿರೋಸಿಸ್ ಮತ್ತು ಯಕೃತ್ತಿನ ಕ್ಯಾನ್ಸರ್‌ಗೆ ಕೂಡಲೇ ಯಕೃತ್ ಕಸಿ ಅಗತ್ಯತೆ ಬಿತ್ತು. ಸ್ವತಃ 31 ವರ್ಷದ ಮಗನೇ ತನ್ನ ಯಕೃತ್‌ನ ಭಾಗವನ್ನು ದಾನ ಮಾಡಲು ಮುಂದಾದರು. ಸಕಾಲದಲ್ಲಿ ಯಕೃತ್ ಸಿಕ್ಕ ಪರಿಣಾಮ ಅವರಿಗೆ ಯಶಸ್ವಿಯಾಗಿ ಕಸಿ ಮಾಡಲಾಯಿತು ಎಂದು ವಿವರಿಸಿದರು.
ದಾನಿಯ ಯಕೃತ್ತಿನ ಉಳಿದ ಭಾಗವು ತಕ್ಷಣವೇ ಪುನರುತ್ಪಾದಿಸಲು ಪ್ರಾರಂಭಿಸುತ್ತದೆ. 6 ರಿಂದ 8 ವಾರಗಳಲ್ಲಿ ಅದರ ಸಾಮಾನ್ಯ ಗಾತ್ರಕ್ಕೆ ಯಕೃತ್ ಬೆಳೆಯುತ್ತದೆ. ಹೆಚ್ಚಿನ ಯಕೃತ್ ದಾನಿಗಳು ಶಸ್ತ್ರಚಿಕಿತ್ಸೆಯ ಒಂದು ವಾರದ ನಂತರ ಸಾಮಾನ್ಯ ಜೀವನಕ್ಕೆ ಮರಳಬಹುದು ಎಂದರು. ಇದನ್ನೂ ಓದಿ: 2 ವರ್ಷಗಳ ಬಳಿಕ ಭಾರೀ ವಾಹನಗಳ ಸಂಚಾರಕ್ಕೆ ಪೀಣ್ಯ ಫ್ಲೈಓವರ್ ಮುಕ್ತ – ಈ ಷರತ್ತು ಅನ್ವಯ
ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ನಿರ್ದೇಶಕ ಡಾ.ಬಿ.ಎಸ್ ರವೀಂದ್ರ ಮಾತನಾಡಿ, ಯಕೃತ್ತಿನ ಕ್ಯಾನ್ಸರ್ ಅನ್ನು CT ಸ್ಕ್ಯಾನ್ ಸ್ಕ್ರೀನಿಂಗ್‌ನಲ್ಲಿ ಪತ್ತೆ ಹಚ್ಚಲಾಯಿತು. ಕೊಲಾಂಜೈಟಿಸ್‌ನೊಂದಿಗೆ ಸಿರೋಟಿಕ್ ರೋಗಿಗೆ ಚಿಕಿತ್ಸೆ ನೀಡುವುದು ಸವಾಲಿನ ಸಂಗತಿ, ಜೊತೆಗೆ ಸಾಮಾನ್ಯ ಪಿತ್ತರಸ ನಾಳದಿಂದ ಕಲ್ಲುಗಳನ್ನು ಯಶಸ್ವಿಯಾಗಿ ಹೊರತೆಗೆದು ಸ್ಟೆಂಟ್‌ಗಳನ್ನು ಇರಿಸಲು ಸಾಧ್ಯವಾಯಿತು ಎಂದು ವಿವರಿಸಿದರು. ಇದನ್ನೂ ಓದಿ: ಮೋದಿಯನ್ನು ಭೇಟಿಯಾದ ಹೆಚ್‌ಡಿಡಿ, ಹೆಚ್‌ಡಿಕೆ – ಮಹತ್ವದ ವಿಚಾರಗಳ ಕುರಿತು ಚರ್ಚೆ
ಗುಜರಾತ್‌ನಲ್ಲಿ (Gujarat) ಪತ್ತೆಯಾಗಿರುವ ಚಾಂದಿಪುರ ವೈರಸ್ (Chandipura virus) ಈಗಾಗಲೇ 32 ಜನರ ಬಲಿ ಪಡೆದಿದೆ. ಅಲ್ಲದೇ ಇದರೊಂದಿಗೆ 13 ಹೊಸ ಪ್ರಕರಣಗಳು ದಾಖಲಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 84ಕ್ಕೆ ತಲುಪಿದೆ. ಇನ್ನೂ ಜೂ.21 ರಂದು ಗುಜರಾತ್‌ನಲ್ಲಿ 5 ಜನ ಚಾಂದಿಪುರ ವೈರಸ್‌ಗೆ ಬಲಿಯಾಗಿದ್ದರು.
ಚಾಂದಿಪುರ ವೈರಸ್ ಸೋಂಕು ಹೆಚ್ಚಾಗಿ ಮಕ್ಕಳಿಗೆ ಬಾಧಿಸುತ್ತದೆ. ಅದರಲ್ಲಿಯೂ 9 ತಿಂಗಳಿನಿಂದ 14 ವರ್ಷದ ಮಕ್ಕಳಿಗೆ ಬಾಧಿಸುವ ಸಾಧ್ಯತೆ ಹೆಚ್ಚು. ಈ ವೈರಸ್ ಮಕ್ಕಳ ಮೇಲೆ ದಾಳಿ ಮಾಡಿದಾಗ ಮೊದಲಿಗೆ ಜ್ವರ, ಅತಿಸಾರ, ವಾಂತಿ, ಎನ್ಸೆಫಾಲಿಟಿಸ್ ಎಂದು ಕರೆಯಲ್ಪಡುವ ಮೆದುಳಿನ ಜ್ವರದಂತಹ ರೋಗಲಕ್ಷಣಗಳು ಕಂಡುಬರುತ್ತದೆ. ಇನ್ನೂ ಕರ್ನಾಟಕ ಸೇರಿದಂತೆ ದೇಶದ ಕೆಲವೆಡೆ ಡೆಂಗ್ಯೂ ಹಾವಳಿ ಹೆಚ್ಚಾಗುತ್ತಿದೆ. ಇತ್ತ ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾದ ಸದ್ದು ಮಾಡುತ್ತಿದೆ. ಅಲ್ಲದೇ ಕೇರಳದಲ್ಲಿ ನಿಫಾ ವೈರಸ್‌ಗೆ 14 ವರ್ಷದ ಬಾಲಕ ಬಲಿಯಾಗಿದ್ದು, ಇತ್ತೀಚೆಗೆ ವರದಿಯಾಗಿತ್ತು. ಈ ಮಧ್ಯೆ ಗುಜರಾತ್‌ನಲ್ಲಿ ಚಾಂದಿಪುರ ವೈರಸ್ ಪತ್ತೆಯಾಗಿದ್ದು ಜನರ ಆತಂಕಕ್ಕೆ ಕಾರಣವಾಗಿದೆ.
ಚಾಂದಿಪುರ ವೈರಸ್ – ಈ ಹೆಸರೇಕೆ?
ಮಹಾರಾಷ್ಟ್ರದ ಚಾಂದಿಪುರದಲ್ಲಿ 1965ರಲ್ಲಿ ಇದು ಮೊದಲ ಬಾರಿ ಕಾಣಿಸಿಕೊಂಡಿತ್ತು. ಹೀಗಾಗಿ ಇದನ್ನು ಚಾಂದಿಪುರ ವೈರಸ್ ಎಂದು ಕರೆಯುತ್ತಾರೆ. ಚಾಂದಿಪುರ ವೈರಸ್ ಸೋಂಕು ಹೆಚ್ಚಾಗಿ ಮಕ್ಕಳಿಗೆ ಬಾಧಿಸುತ್ತದೆ. ಇದು ರಾಬ್ಡೋವೆರಿಡೆ ವರ್ಗಕ್ಕೆ ಸೇರಿದ ವೈರಸ್ ಆಗಿದೆ. ಈ ವೈರಸ್ ಮಕ್ಕಳ ಮೇಲೆ ದಾಳಿ ಮಾಡಿದಾಗ ಮೊದಲಿಗೆ ಜ್ವರ, ಅತಿಸಾರ, ವಾಂತಿ, ಎನ್ಸೆಫಾಲಿಟಿಸ್ ಎಂದು ಕರೆಯಲ್ಪಡುವ ಮೆದುಳಿನ ಜ್ವರದಂತಹ ರೋಗ ಲಕ್ಷಣಗಳನ್ನು ತೋರಿಸುತ್ತದೆ. ಈ ವೈರಸ್ ವಿರುದ್ಧ ಯಾವುದೇ ಲಸಿಕೆ ಇಲ್ಲದ ಕಾರಣ ಇದನ್ನು ಇನ್ನಷ್ಟು ಅಪಾಯಕಾರಿ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ರೋಗ ಲಕ್ಷಣ
ಚಾಂದಿಪುರ ವೈರಸ್ ಸೋಂಕಿದ್ದವರಿಗೆ ಸಾಮಾನ್ಯ ಜ್ವರದ ಲಕ್ಷಣ ಕಂಡು ಬರುತ್ತದೆ. ಬಳಿಕ ದಿಢೀರ್ ಜ್ವರ, ತೀವ್ರ ತಲೆನೋವು, ವಾಂತಿ, ಸ್ನಾಯು ಸೆಳೆತ, ಉಸಿರಾಟದ ತೊಂದರೆ, ಪ್ರಜ್ಞಾಹೀನತೆ, ಅರೆನಿದ್ರಾವಸ್ಥೆ ಜಾರುತ್ತಾರೆ. ತಕ್ಷಣ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ವ್ಯಕ್ತಿ ಸಾವಿಗೀಡಾಗುತ್ತಾನೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಸಾಂಕ್ರಾಮಿಕ ರೋಗವೇ?
ಇದು ಸಾಂಕ್ರಾಮಿಕ ರೋಗ ಅಲ್ಲದಿದ್ದರೂ ಸೊಳ್ಳೆ, ನೊಣ, ಉಣ್ಣೆಗಳಿಂದ ಈ ಸೋಂಕು ಹರಡುತ್ತದೆ. ಕಾಯಿಲೆಗೆ ಶುಚಿತ್ವ ಕೊರತೆಯೇ ಮುಖ್ಯ ಕಾರಣ. ಸದ್ಯ ಈ ರೀತಿಯ ಅನೇಕ ಪ್ರಕರಣಗಳು ಗುಜರಾತ್‌ನಲ್ಲಿ ಕಂಡುಬಂದಿವೆ. ಗುಜರಾತ್‌ನ ಸಬರ್‌ಕಾಂಠಾ ರಾವಳಿ, ಮಹಿಸಾರ, ಖೇಡಾ ಜಿಲ್ಲೆಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ ರಾಜಸ್ಥಾನ, ಮಧ್ಯ ಪ್ರದೇಶದಲ್ಲಿಯೂ ಸೋಂಕು ಬಾಧಿಸಿರುವುದು ವರದಿಯಾಗಿದೆ. ಶಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ರೋಗದಿಂದ ಪಾರಾಗುವುದು ಹೇಗೆ?
ಚಾಂದಿಪುರ ವೈರಸ್‌ನಿಂದ ತಪ್ಪಿಸಿಕೊಳ್ಳಲು ನೈರ್ಮಲ್ಯ ಕಾಪಾಡುವುದು ಅಗತ್ಯ. ಸೊಳ್ಳೆ, ನೊಣ ಮತ್ತು ಕೀಟಗಳು ಕಡಿಯದಂತೆ ಎಚ್ಚರ ವಹಿಸಿ. ಮಕ್ಕಳಿಗೆ ರಾತ್ರಿ ಪೂರ್ಣ ತೋಳಿನ ಬಟ್ಟೆಗಳನ್ನು ತೊಡಿಸಿ. ಸೊಳ್ಳೆಗಳು ಮತ್ತು ಕೀಟಗಳಿಂದ ತಪ್ಪಿಸಿಕೊಳ್ಳಲು ಸೊಳ್ಳೆ ಪರದೆಗಳನ್ನು ಬಳಸಬೇಕು. ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿಡಬೇಕು. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸಾಕು ಪ್ರಾಣಿಗಳ ಬಳಿಗೆ ತೆರಳುವಾಗ ಎಚ್ಚರವಹಿಸಬೇಕು.
ಚಾಂದಿಪುರ ವೈರಸ್ ನಿಯಂತ್ರಣ ಹೇಗೆ?
ಸ್ವಚ್ಛತೆ: ಸಾಬೂನು ಮತ್ತು ನೀರಿನಿಂದ ನಿಯಮಿತವಾಗಿ ಕೈಗಳನ್ನು ತೊಳೆಯುವುದು, ವಿಶೇಷವಾಗಿ ಪ್ರಾಣಿಗಳನ್ನು ಮುಟ್ಟಿದ ನಂತರ ಅಥವಾ ಸಂಭಾವ್ಯವಾಗಿ ಕಲುಷಿತಗೊಂಡ ಪರಿಸರದಲ್ಲಿ ಓಡಾಡಿದ ನಂತರ ಸ್ನಾನ ಮಾಡಬೇಕು. ಕಾಡು ಪ್ರಾಣಿಗಳು ಮತ್ತು ಅವುಗಳ ಆವಾಸಸ್ಥಾನಗಳೊಂದಿಗೆ ಸಂಪರ್ಕವನ್ನು ಕಡಿಮೆ ಮಾಡುವುದು.
ಈ ನಡುವೆ ಚಾಂದಿಪುರ ವೈರಸ್ ತಡೆಗಟ್ಟಲು ರಾಜ್ಯ ಸರ್ಕಾರ ಈಗಾಗಲೇ 1.16 ಲಕ್ಷ ಮನೆಗಳಿಗೆ ಸೋಂಕು ನಿರೋಧಕಗಳನ್ನು ಸಿಂಪಡಣೆ ಮಾಡಿದ್ದು, 19,000 ಸ್ಥಳಗಳಲ್ಲಿ ತಪಾಸಣೆಗಳನ್ನು ನಡೆಸುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಗುಜರಾತ್, ರಾಜಸ್ಥಾನ ಹಾಗೂಮಧ್ಯ ಪ್ರದೇಶಗಳಿಗೆಕಟ್ಟೆಚ್ಚರ ವಹಿಸುವಂತೆ ಕೇಂದ್ರ ಸೂಚನೆ ಹೊರಡಿಸಿದೆ. ಇಲ್ಲಿಯವರೆಗೂ ಸುಮಾರು 50,000 ಕ್ಕೂ ಹೆಚ್ಚು ವ್ಯಕ್ತಿಗಳನ್ನು ಪರೀಕ್ಷಿಸಲಾಗಿದೆ ಮತ್ತು ಹೆಚ್ಚಿನ ಪರೀಕ್ಷೆಗಾಗಿ ಐವಿಗೆ ಶಂಕಿತ ಪ್ರಕರಣಗಳ ಮಾದರಿಗಳನ್ನು ಕಳುಹಿಸಲು ಎಲ್ಲಾ ಜಿಲ್ಲಾ ಮತ್ತು ಗ್ರಾಮೀಣ ಆಸ್ಪತ್ರೆಗಳಿಗೆ ಸೂಚನೆಗಳನ್ನು ನೀಡಲಾಗಿದೆ.