Tag: Health Officers

  • JN.1 ಸೋಂಕಿನಿಂದ ಪ್ರಾಣಾಪಾಯವಿಲ್ಲ – ಆತಂಕಕ್ಕೆ ಒಳಗಾಗದೇ ಮುನ್ನೆಚ್ಚರಿಕೆ ವಹಿಸಿ: ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್

    JN.1 ಸೋಂಕಿನಿಂದ ಪ್ರಾಣಾಪಾಯವಿಲ್ಲ – ಆತಂಕಕ್ಕೆ ಒಳಗಾಗದೇ ಮುನ್ನೆಚ್ಚರಿಕೆ ವಹಿಸಿ: ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್

    – ಪ್ರತಿ ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ 50 ಹಾಸಿಗೆ ಮೀಸಲಿಡುವಂತೆ ಸೂಚನೆ
    – ವೈದ್ಯಕೀಯ ಇಲಾಖಾ ಅಧಿಕಾರಿಗಳ ಜೊತೆ ಮಹತ್ವದ ಸಭೆ
    – 60 ವರ್ಷ ಮೇಲ್ಪಟ್ಟವರು ದೀರ್ಘವ್ಯಾಧಿಯಿಂದ ಬಳಲುತ್ತಿರುವವರು ಲಸಿಕೆ ಪಡೆಯುವಂತೆ ಸಲಹೆ
    – ಕೋವಿಡ್‌ ನಿಂದ ಸಾವಾಗಿಲ್ಲ – ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಸ್ಪಷ್ಟನೆ

    ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಕೋವಿಡ್‌ ರೂಪಾಂತರಿ JN.1 (JN.1) ಸೋಂಕು ಕಾಣಿಸಿಕೊಂಡಿದ್ದರೂ ಜನ ಆತಂಕಕ್ಕೆ ಒಳಗಾಗದೇ, ಮುನ್ನೆಚ್ಚರಿಕಾ ಕ್ರಮಗಳನ್ನ ತೆಗೆದುಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ (Sharanprakash Patil) ಸಲಹೆ ನೀಡಿದರು.

    ಮಂಗಳವಾರ ಬೆಂಗಳೂರಿನ (Bengaluru) ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುವ ವಿವಿಧ ಅಸ್ಪತ್ರೆಗಳ ಮುಖ್ಯಸ್ಥರು, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು, ಸದಸ್ಯರ ಜೊತೆ ಸಭೆ ನಡೆಸಿದ ಅವರು, ಪ್ರಸ್ತುತ ರಾಜ್ಯದಲ್ಲಿ ಕೋವಿಡ್ -19 ನಿಯಂತ್ರಣ ಹಾಗೂ ಪೂರ್ವ ಸಿದ್ಧತೆಗಳ ಕುರಿತು ಮಾಹಿತಿ ಪಡೆದರು. ಇದನ್ನೂ ಓದಿ: ರಾಮಮಂದಿರಕ್ಕೆ ದೇಣಿಗೆ ಕೊಟ್ಟಿದ್ದೇನೆ, ಆಹ್ವಾನ ಬರದಿದ್ದರೂ ಅಯೋಧ್ಯೆಗೆ ತೆರಳುತ್ತೇನೆ – ಕಾಂಗ್ರೆಸ್‌ ಸಚಿವ

    ರೂಪಾಂತರಿ ಜೆಎನ್.1 ಸೋಂಕು ಕಾಣಿಸಿಕೊಂಡಿದ್ದರೂ ಇದು ಮನುಷ್ಯರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ತಜ್ಞರು ಹೇಳಿದ್ದಾರೆ. ಆದರೂ ಇದರ ಬಗ್ಗೆ ಮೈ ಮರೆಯದೇ, ಕೆಲ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಜನಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

    ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಕೇಂದ್ರದಿಂದ ರಾಜ್ಯಕ್ಕೆ 30 ಸಾವಿರ ಕೋವಿಡ್ ವ್ಯಾಕ್ಸಿನ್ (Covid Vaccine) ಬಂದಿದೆ. ಇದರ ಕೊರತೆಯಾಗದಂತೆ ಎಲ್ಲ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನ ಕೇಸ್‌ – ಬುಧವಾರ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ

    60 ವರ್ಷ ಮೇಲ್ಪಟ್ಟವರು ವ್ಯಾಕ್ಸಿನ್‌ ಪಡೆಯಿರಿ:
    ರಾಜ್ಯದಲ್ಲಿ ಪ್ರತಿಯೊಬ್ಬ ಅರ್ಹರಿಗೆ ಕೋವಿಡ್ ಲಸಿಕೆ ನೀಡುವ ಅಗತ್ಯವಿಲ್ಲ 60 ವರ್ಷ ಹಾಗೂ ದೀರ್ಘವ್ಯಾಧಿಯಿಂದ ಬಳಲುತ್ತಿರುವವರು ಬುಧವಾರದಿಂದಲೇ ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್ ವಾಕ್ಸಿನ್ ತೆಗೆದುಕೊಳ್ಳಬಹುದು. ಕೋವಿಡ್‌ ಮೊದಲ ಮತ್ತು 2ನೇ ಅಲೆಯ ಸಂದರ್ಭದಲ್ಲಿ ಯಾವ ಲಸಿಕೆಯನ್ನು (ಕೋವ್ಯಾಕ್ಸಿನ್‌ ಅಥವಾ ಕೋವಿಶೀಲ್ಡ್) ನೀಡಲಾಗಿತ್ತೋ ಅದೇ ಲಸಿಕೆ ನೀಡಲಿದ್ದೇವೆ. ಹೊಸ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರದಿಂದ ನಮಗೆ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು.


    JN.1 ಬಹುಬೇಗ ಹರಡುತ್ತದೆ:
    ಪ್ರಸ್ತುತ ರಾಜ್ಯದಲ್ಲಿ ಕಾಣಿಸಿಕೊಂಡಿರುವ ಜೆಎನ್.1 ರೂಪಾಂತರ ಸೋಂಕು ಬಹುಬೇಗನೆ ಹರಡುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹರಡಬಹುದೆಂದು ತಜ್ಞರು ಹೇಳಿದ್ದಾರೆ. ಒಂದು ವೇಳೆ ಹಬ್ಬಿದರೂ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಕಡಿಮೆ. ಆದ್ದರಿಂದ ಸಾರ್ವಜನಿಕರು ಅನಗತ್ಯವಾಗಿ ಆತಂಕ ಪಡಬಾರದು. ಜನದಟ್ಟಣೆ ಮತ್ತಿತರ ಕಡೆ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್‌ ಧರಿಸುವುದು ಉತ್ತಮ. ಆದ್ರೆ ಕಡ್ಡಾಯವಾಗಿ ಮಾಸ್ಕ್‌ ಧರಿಸಲೇಬೇಕೆಂಬ ಆದೇಶ ಹೊರಡಿಸುವುದಿಲ್ಲ. ಹಾಗಂತ ಜನರು ಮೈ ಮರೆಬಾರದೆಂದು ಸಲಹೆ ನೀಡಿದರು.

    ಇದೇ ವೇಳೆ ಆಕ್ಸಿಜನ್ ಬೆಡ್, ಐಸಿಯು, ವೆಂಟಿಲೇಟರ್, ಔಷಧಗಳು, ಸೇರಿದಂತೆ ಲಭ್ಯವಿರುವ ಉಪಕರಣಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ಕೆಲವು ಆಸ್ಪತ್ರೆಗಳಲ್ಲಿ ಸಿಬ್ಬಂದಿ ನೇಮಕ, ಉಪಕರಣಗಳ ಖರೀದಿಸುವ ಬಗ್ಗೆ ನನ್ನ ಗಮನಕ್ಕೆ ತಂದಿದ್ದಾರೆ. ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಸಧ್ಯಕ್ಕೆ ಕೋವಿಡ್ ಸಂಬಂಧ ಔಷಧಗಳನ್ನು ಖರೀದಿಸಲು ಹಣಕಾಸಿನ ಕೊರತೆ ಇಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ರೋಗಿ, ಕುಟುಂಬಸ್ಥರು ಒಪ್ಪದಿದ್ದರೆ ICUಗೆ ದಾಖಲಿಸುವಂತಿಲ್ಲ- ಕೇಂದ್ರದಿಂದ ಆಸ್ಪತ್ರೆಗಳಿಗೆ ಹೊಸ ರೂಲ್ಸ್‌

    ಕೋವಿಡ್‍ನಿಂದ ಸಾವಾಗಿಲ್ಲ:
    ರಾಜ್ಯದಲ್ಲಿ ಇತ್ತೀಚೆಗೆ 10 ಮಂದಿ ಸಾವನ್ನಪ್ಪಿದ್ದರು. ಇದು ಕೋವಿಡ್ ಕಾರಣದಿಂದಾಗಿ ಮೃತಪಟ್ಟಿಲ್ಲ. ಅವರು ವಿವಿಧ ಆರೋಗ್ಯಸಮಸ್ಯೆಗಳಿಂದ ಬಳಲುತ್ತಿದ್ದರು. ಹೀಗಾಗಿ ಸಾವನ್ನಪ್ಪಿದ್ದಾರೆ. ಮೃತಪಟ್ಟ 10 ಮಂದಿಯಲ್ಲಿ 9 ಮಂದಿ ಬೇರೆ ಬೇರೆ ಅಂದರೆ ಹೃದಯ ಸಂಬಂಧಿ, ಕಿಡ್ನಿ ಹೀಗೆ ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದರು. ಇವರ ಸಾವಿಗೂ ಕೋವಿಡ್‍ಗೂ ಸಂಬಂಧವೇ ಇಲ್ಲ. ಅವರಿಗೆ ಸೋಂಕಿನ ಜೊತೆಗೆ ಇತರ ಬೇರೆ-ಬೇರೆ ಆರೋಗ್ಯದ ಸಮಸ್ಯೆಗಳಿದ್ದವು. ಮೃತಪಟ್ಟವರಲ್ಲಿ ಮಂಗಳೂರಿನ ವ್ಯಕ್ತಿಯೊಬ್ಬರು ಕೋವಿಡ್ ಲಸಿಕೆ ತೆಗೆದುಕೊಂಡಿರಲಿಲ್ಲ. ಮದ್ಯಪಾನದ ವ್ಯಸನಕ್ಕೆ ತುತ್ತಾಗಿದ್ದರು ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದರು.

    ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್, ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ.ಸುಜಾತ ರಾಥೋಡ್‌, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌ ಮಂಜುನಾಥ್, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ರವಿ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯ ಹೆಸರಲ್ಲಿ ರಾಮ ಇದೆ, ಶ್ರೀರಾಮನ ಗುಣ ಇದೆಯಾ? – ಸಿ.ಟಿ ರವಿ ವ್ಯಂಗ್ಯ

    ಮುಖ್ಯಾಂಶಗಳು

    • ಪ್ರತಿ ಜಿಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ 50 ಹಾಸಿಗೆಗಳನ್ನ ಮೀಸಲಿಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
    • ವೈದ್ಯಕೀಯ ಕಾಲೇಜಿನಲ್ಲಿ 18,141 ಹಾಸಿಗೆಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ 10 ಸಾವಿರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಬರುವ ಆಸ್ಪತ್ರಗಳಲ್ಲಿ 11,500 ಹಾಸಿಗೆಗಳು ಲಭ್ಯವಿವೆ.
    • ಕೇರಳದಲ್ಲಿ ಕಾಣಿಸಿಕೊಂಡ ರೂಪಾಂತರಿ ಜೆಎನ್-1 ಸೋಂಕು ಕ್ರಮೇಣವಾಗಿ ಕಡಿಮೆಯಾಗುತ್ತಿದೆ. ರಾಜ್ಯದಲ್ಲೂ ಒಂದು ವೇಳೆ ಹಬ್ಬಿದರೆ ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಅದೆಲ್ಲವನ್ನೂ ತೆಗೆದುಕೊಂಡಿದ್ದೇವೆ.
    • ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದನ್ನು ಸಮರ್ಪಕವಾಗಿ ನಿರ್ವಹಿಸಲು ಸೂಚನೆ ನೀಡಿದ್ದಾರೆ. ಅದರಂತೆ ಇಲಾಖೆಯಲ್ಲಿರುವ ಕೋವಿಡ್ ವಾರಿಯರ್ಸ್‌ ಫ್ಲೂ-ಲಸಿಕೆಯನ್ನು ಪಡೆಯಬೇಕು.
    • ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪರೀಕ್ಷಾ ಸಾಮರ್ಥ್ಯವನ್ನೂ ಹೆಚ್ಚಿಸಲಾಗುತ್ತಿದೆ. ಜೊತೆಗೆ ಆರೋಗ್ಯ ಸೌಲಭ್ಯಗಳ ಕಾರ್ಯ ಸಿದ್ಧತೆ ನಡೆಸಲಾಗಿದೆ.
    • ಸಭೆಯಲ್ಲಿ 99 ಮೆಡಿಕಲ್ ಕಾಲೇಜುಗಳು, 10 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ದೇಶಕರ ಜೊತೆ ಚರ್ಚೆ ನಡೆಸಲಾಗಿದೆ.
    • ಎಲ್ಲಾ ಸರ್ಕಾರಿ ಕಾಲೇಜುಗಳಲ್ಲೂ ಪ್ರತ್ಯೇಕ ಆಕ್ಸಿಜನ್ ಬೆಡ್ ಮತ್ತು ಐಸಿಯು ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಮಾನವ ಸಂಪನ್ಮೂಲಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.
    • 30 ಸಾವಿರ ಲಸಿಕೆಗಳು ಲಭ್ಯವಿದ್ದು, ಈವರೆಗೂ ಲಸಿಕೆ ಪಡೆಯದೇ ಇದ್ದವರು, ಮುಂಜಾಗ್ರತಾ ಲಸಿಕೆಯನ್ನಾಗಿ ತೆಗೆದುಕೊಳ್ಳುವವರು ಈ ಸೌಲಭ್ಯ ಪಡೆದುಕೊಳ್ಳಬಹುದು.

  • ಸೋಂಕಿತನ ಅಂತ್ಯಕ್ರಿಯೆ ಬಳಿಕ ಫೋನ್- ಆರಾಮಾಗಿದ್ದೀರಾ ಎಂದ ಆರೋಗ್ಯಾಧಿಕಾರಿಗಳು

    ಸೋಂಕಿತನ ಅಂತ್ಯಕ್ರಿಯೆ ಬಳಿಕ ಫೋನ್- ಆರಾಮಾಗಿದ್ದೀರಾ ಎಂದ ಆರೋಗ್ಯಾಧಿಕಾರಿಗಳು

    – ವ್ಯಕ್ತಿ ಸತ್ತು 8 ದಿನದ ಬಳಿಕ ಸೀಲ್‍ಡೌನ್‍ಗೆ ಮುಂದಾದ ಪಾಲಿಕೆ ಸಿಬ್ಬಂದಿ
    – ಅಧಿಕಾರಿ ಮಾತು ಕೇಳಿ ಕುಟುಂಬಸ್ಥರು ಕಂಗಾಲು

    ಧಾರವಾಡ: ಕೊರೊನಾದಿಂದ ವ್ಯಕ್ತಿ ಸತ್ತು ಅಂತ್ಯಸಂಸ್ಕಾರ ನಡೆದ ಬಳಿಕ ಆಸ್ಪತ್ರೆಯ ಸಿಬ್ಬಂದಿ ಕರೆ ಮಾಡಿ ಆರಾಮಾಗಿದ್ದೀರಾ ಎಂದು ಕೇಳಿದ್ದಾರೆ. ಇದರಿಂದಾಗಿ ಕುಟುಂಬಸ್ಥರು ಒಂದು ಕ್ಷಣ ದಂಗಾಗಿದ್ದಾರೆ.

    ನಗರದ ಮೃತ್ಯುಂಜಯ ನಗರ ಕೊಟ್ಟಣದ ಓಣಿಯ ವ್ಯಕ್ತಿಗೆ ಜುಲೈ 22 ರಂದು ಅನಾರೋಗ್ಯ ಕಾಡಿತ್ತು. ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರಗೆ ದಾಖಲಿಸಿದಾಗ ಕೊರೊನಾ ಇದೆ ಎಂದು ಹೇಳಿದ್ದಾರೆ. ಅಲ್ಲದೆ ಇದಾದ ಎರರು ದಿನಕ್ಕೆ ಅಂದರೆ ಜುಲೈ 24ರಂದು ವ್ಯಕ್ತಿ ನಿಧನರಾಗಿದ್ದಾರೆ. ನಂತರ ಕಿಮ್ಸ್ ಸಿಬ್ಬಂದಿ ಮನೆಯವರಿಗೆ ಕರೆ ಮಾಡಿ ನಿಧನರಾದ ಸುದ್ದಿ ತಿಳಿಸಿದ ಬಳಿಕ ಅಂತ್ಯಸಂಸ್ಕಾರವೂ ನಡೆದಿದೆ.

    ಈ ಎಲ್ಲ ಪ್ರಕ್ರಿಯೆ ನಡೆದ ಬಳಿಕ ಕಿಮ್ಸ್ ಸಿಬ್ಬಂದಿ ಕರೆ ಮಾಡಿ ಆರಾಮಾಗಿದ್ದಾರಾ ಎಂದು ಕೇಳಿದ್ದಾರಂತೆ. ಆಗ ಮನೆ ಸದಸ್ಯರು ಅವರು ಆಗಲೇ ನಿಧನರಾಗಿದ್ದಾರೆ ಎಂದು ಹೇಳಿದ್ದಾರೆ. ಇಷ್ಟಾದರೂ ಅಧಿಕಾರಿಗಳು ಮತ್ತೊಮ್ಮೆ ಕರೆ ಮಾಡಿದ್ದು, ಆಗಲೂ ಮನೆಯವರು ಈ ಕುರಿತು ಸ್ಪಷ್ಟಪಡಿಸಿದ್ದಾರೆ. ಇಷ್ಟೆಲ್ಲ ಹೇಳಿದ ಮೇಲೂ, ವ್ಯಕ್ತಿ ಸಾವನ್ನಪ್ಪಿ 8 ದಿನ ಕಳೆದರೂ ಪಾಲಿಕೆ ಸಿಬ್ಬಂದಿ ಈಗ ವ್ಯಕ್ತಿಯ ಮನೆ ಸೀಲ್‍ಡೌನ್ ಮಾಡಲು ಬಂದಿದ್ದಾರೆ. ಈ ವೇಳೆ ಮನೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಳೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.

  • ಕೊರೊನಾ ಸೋಂಕಿತ ವೃದ್ಧ ಮೃತಪಟ್ಟಿದ್ದಾರಾ, ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾರಾ?

    ಕೊರೊನಾ ಸೋಂಕಿತ ವೃದ್ಧ ಮೃತಪಟ್ಟಿದ್ದಾರಾ, ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾರಾ?

    – ತಾಲೂಕು ಅಧಿಕಾರಿಯೊಂದು ಹೇಳಿಕೆ, ಜಿಲ್ಲಾ ಆರೋಗ್ಯಾಧಿಕಾರಿ ಒಂದು ಹೇಳಿಕೆ
    – ಆರೋಗ್ಯಾಧಿಕಾರಿಗಳ ಹೇಳಿಕೆಯಿಂದ ವೃದ್ಧನ ಕುಟುಂಬ ಕಂಗಾಲು

    ಶಿವಮೊಗ್ಗ: ಕೋವಿಡ್-19 ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿಕಾರಿಪುರದ 85 ವರ್ಷದ ವೃದ್ಧರೊಬ್ಬರ ಪ್ರಕರಣ ಇದೀಗ ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದರೆ. ಇದರಿಂದಾಗಿ ವೃದ್ಧನ ಕುಟುಂಬಸ್ಥರು ಸಹ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

    ತಾಲೂಕು ಆರೋಗ್ಯ ಅಧಿಕಾರಿ ಪ್ರಕಾರ ವೃದ್ಧ ಮೃತಪಟ್ಟಿದ್ದಾರೆ, ಸಿಬ್ಬಂದಿಯೇ ಅಂತ್ಯಕ್ರಿಯೆ ನಡೆಸಿದ್ದಾರೆ ಎಂದು ಹೇಳುತ್ತಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಪ್ರಕಾರ ವೃದ್ಧ ಕೋವಿಡ್-19 ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಗೊಂದಲ ಉಂಟಾಗಿದೆ. ಶಿಕಾರಿಪುರದ 85 ವರ್ಷದ ವೃದ್ಧ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕಾರಣ ಜು.18 ರಂದು ಕುಟುಂಬಸ್ಥರು ಚಿಕಿತ್ಸೆಗಾಗಿ ಶಿಕಾರಿಪುರದ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದಿದ್ದರು. ಈ ವೇಳೆ ವೈದ್ಯರು ಚಿಕಿತ್ಸೆಗೂ ಮೊದಲು ಕೋವಿಡ್-19 ಪರೀಕ್ಷೆಗೆ ಒಳಪಡಿಸಿದ್ದರು. 22 ರಂದು ಕೊರೊನಾ ಸೋಂಕು ಪತ್ತೆಯಾಗಿತ್ತು. ಸೋಂಕು ಕಾಣಿಸಿಕೊಂಡ ಪರಿಣಾಮ ಜು.23 ರಂದು ಸೋಂಕಿತ ವೃದ್ಧನನ್ನು ಕೋವಿಡ್-19 ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಆಸ್ಪತ್ರೆಗೆ ದಾಖಲಾದ ನಂತರ ವೃದ್ಧನ ಆರೋಗ್ಯ ವಿಚಾರಿಸಲು ಅವರ ಮನೆಯವರು ಆಸ್ಪತ್ರೆಗೆ, ಕೋವಿಡ್ ಸೆಂಟರ್ ಗಳಿಗೆ ಅಲೆದಾಡಿದ್ದಾರೆ. ಆದರೆ ವೃದ್ಧನ ಕುಟುಂಬಸ್ಥರಿಗೆ ಯಾವುದೇ ಮಾಹಿತಿ ದೊರೆಯಲಿಲ್ಲ. ಆದರೆ ಜು.29 ರಂದು ತಾಲೂಕು ಆರೋಗ್ಯಾಧಿಕಾರಿ ಮೃತನ ಮೊಮ್ಮಗನಿಗೆ ದೂರವಾಣಿ ಕರೆ ಮಾಡಿ ನಿಮ್ಮ ಅಜ್ಜ ಮೃತಪಟ್ಟಿದ್ದಾರೆ, ಅವರ ಅಂತ್ಯಕ್ರಿಯೆಯನ್ನು ಆರೋಗ್ಯ ಇಲಾಖೆ ಸಿಬ್ಬಂದಿಯೇ ನೆರವೇರಿಸಿದ್ದಾರೆ ಎಂದಿದ್ದಾರೆ. ಇದರಿಂದ ಆತಂಕಕ್ಕೊಳಗಾದ ಕುಟುಂಬಸ್ಥರು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ನಮಗೆ ತಿಳಿಸದೆ, ನಮ್ಮ ಗಮನಕ್ಕೆ ಬಾರದೇ ಹೇಗೆ ಅಂತ್ಯಕ್ರಿಯೆ ನಡೆಸಿದಿರಿ ಎಂದು ಪ್ರಶ್ನಿಸಿದ್ದಾರೆ.

    ಒಂದೆಡೆ ತಾಲೂಕು ಅಧಿಕಾರಿಗಳು ಈ ರೀತಿ ಹೇಳುತ್ತಿದ್ದರೆ, ಇತ್ತ ಜಿಲ್ಲಾ ಆರೋಗ್ಯಾಧಿಕಾರಿಗಳದ್ದು ಬೇರೆಯದೇ ಉತ್ತರವಾಗಿದೆ. ನಿಮ್ಮ ಅಜ್ಜ ಮೃತಪಟ್ಟಿಲ್ಲ, ಕೋವಿಡ್-19 ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮೆಗ್ಗಾನ್ ಆಸ್ಪತ್ರೆಯವರು ಜು.28 ರಂದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ ಇಂದು ಸುದ್ದಿಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ, ಸೋಂಕಿತ ವೃದ್ಧ ಮೃತಪಟ್ಟಿಲ್ಲ, ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾರೆ. ತಾಲೂಕು ಆರೋಗ್ಯಾಧಿಕಾರಿ ಕುಟುಂಬಸ್ಥರಿಗೆ ಏಕೆ ಆ ರೀತಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ವಿಚಾರಿಸುತ್ತೇನೆ ಎಂದು ತಿಳಿಸಿದ್ದಾರೆ.

    ಕೋವಿಡ್-19 ಆಸ್ಪತ್ರೆಯಲ್ಲಿ ಯಾವುದೂ ಸರಿಯಿಲ್ಲ ಎಂಬ ಆರೋಪ ಕೇಳಿ ಬರುತಿತ್ತು. ಇದಕ್ಕೆ ಈ ಪ್ರಕರಣ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಈ ಹಿಂದೆ ಸಹ ಕೋವಿಡ್-19 ಮೆಗ್ಗಾನ್ ಆಸ್ಪತ್ರೆಯಿಂದ ಮೂರು ಮಂದಿ ಸೋಂಕಿತರು ತಪ್ಪಿಸಿಕೊಂಡು ಹೋಗಿದ್ದರು. ನಂತರ ಅಧಿಕಾರಿಗಳು ಪತ್ತೆ ಹಚ್ಚಿ ಆಸ್ಪತ್ರೆಗೆ ಕರೆ ತಂದಿದ್ದರು. ಆದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ವೃದ್ಧನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 21 ಜನಕ್ಕೆ 3 ಅಂಬುಲೆನ್ಸ್

    ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 21 ಜನಕ್ಕೆ 3 ಅಂಬುಲೆನ್ಸ್

    – ಕೊರೊನಾ ಶಂಕಿತರನ್ನು ಕುರಿ ತುಂಬಿದಂತೆ ತುಂಬಿದ್ರು

    ಬೆಂಗಳೂರು: ದಿನ ಕಳೆದಂತೆ ಕೊರೊನಾ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದ್ದು, ಹಣ ಉಳಿಸಲು ಕ್ವಾರಂಟೈನ್ ಮಾಡುವವರನ್ನು ಅಂಬುಲೆನ್ಸ್ ಗಳಲ್ಲಿ ಕುರಿ ತುಂಬಿದಂತೆ ತುಂಬಲಾಗುತ್ತಿದೆ.

    ಕೊರೊನಾ ಜೀವನದ ಅಂಗ, ನಾವು ಕೊರೊನಾ ಜೊತೆಯಲ್ಲಿಯೇ ಬದುಕಬೇಕು ಎಂದು ಹೇಳುವ ಸರ್ಕಾರ, ಇದೇ ರೀತಿ ವರ್ತಿಸುತ್ತಿದೆ. ದಿನ ಕಳೆದಂತೆ ಮಹಾಮಾರಿ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯ ವಹಿಸುತ್ತಿದೆ. ಇದರಿಂದಾಗಿ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಮಹಾರಾಷ್ಟ್ರದ ರೀತಿಯಾದರೆ ಏನು ಗತಿ ಎಂಬ ಆತಂಕ ಹುಟ್ಟಿಕೊಂಡಿದೆ.

     

    ಕ್ವಾರಂಟೈನ್ ಮಾಡಲು, ಸೋಂಕಿತನ ಕರೆದುಕೊಂಡು ಹೋಗಲು ಈ ಹಿಂದೆ ಅಂಬುಲೆನ್ಸ್ ಹಾಗೂ ಟೆಂಪೋ ಟ್ರಾವೆಲರ್ ಎರಡನ್ನೂ ಬಳಸಲಾಗುತ್ತಿತ್ತು. ಆದರೆ ಇದೀಗ ಟೆಂಪೋ ಟ್ರಾವೆಲರ್ ಗಳನ್ನು ಕೈ ಬಿಡಲಾಗಿದೆ. ಎಲ್ಲದಕ್ಕೂ ಅಂಬುಲೆನ್ಸ್ ಗಳನ್ನೇ ಬಳಸಲಾಗುತ್ತಿದೆ. ಹೀಗಾಗಿ ಎಡವಟ್ಟಾಗುತ್ತಿದ್ದು, ಅಂಬುಲೆನ್ಸ್ ನಲ್ಲಿ ಕುರಿ ತುಂಬಿದಂತೆ ಹತ್ತಾರು ಜನರನ್ನು ತುಂಬಲಾಗುತ್ತಿದೆ.

    ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ 21 ಜನರನ್ನು ಕ್ವಾರಂಟೈನ್ ಮಾಡಲು 3 ಅಂಬ್ಯುಲೆನ್ಸ್ ಬಳಕೆ ಮಾಡಲಾಗಿದ್ದು, ಸ್ವತಃ ಆರೋಗ್ಯಾಧಿಕಾರಿಗಳು ಈ ರೀತಿ ತುಂಬಿಸಿದ್ದಾರೆ.

    ಟೆಂಪೋ ಟ್ರಾವೆಲರ್ ಬಳಕೆಯಿಂದಾಗಿ ವಾಹನಕ್ಕೆ ಬಾಡಿಗೆ ನೀಡಬೇಕಿತ್ತು. ಇದಕ್ಕಾಗಿ ತಿಂಗಳಿಗೆ ಒಂದೂವರೆ ಲಕ್ಷ ಬಾಡಿಗೆ ಕೊಡಬೇಕಿತ್ತು. ಇದೀಗ ಈ ವಾಹನಗಳ ಬದಲಾಗಿ ಅಂಬುಲೆನ್ಸ್ ಗಳನ್ನೇ ಬಳಸಲಾಗುತ್ತಿದ್ದು, ಕ್ವಾರಂಟೈನ್ ಮಾಡುವವರನ್ನು ಅಂಬುಲೆನ್ಸ್ ನಲ್ಲಿ ಕುರಿ ತುಂಬಿದಂತೆ ತುಂಬಲಾಗುತ್ತಿದೆ. ಈ ಮೂಲಕ ಸರ್ಕಾರ ಹಣ ಉಳಿಸುವಂತೆ ಕಾಣುತ್ತಿದೆ.

  • ಹೋಮ್ ಕ್ವಾರೆಂಟೈನ್‍ನಲ್ಲಿದ್ದ ಯುವಕ ಸುತ್ತಾಟ, ಸ್ಥಳೀಯರ ಆಕ್ರೋಶ

    ಹೋಮ್ ಕ್ವಾರೆಂಟೈನ್‍ನಲ್ಲಿದ್ದ ಯುವಕ ಸುತ್ತಾಟ, ಸ್ಥಳೀಯರ ಆಕ್ರೋಶ

    ರಾಮನಗರ: ಹೋಮ್ ಕ್ವಾರೆಂಟೈನ್ ನಲ್ಲಿದ್ದ ಯುವಕ ಚನ್ನಪಟ್ಟಣ ನಗರದಲ್ಲಿ ಅನಾವಶ್ಯಕವಾಗಿ ಓಡಾಟ ನಡೆಸಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಕುರಿತು ಪೊಲೀಸರು, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

    ನಗರದ ಯುವಕನೋರ್ವ ಏಳು ದಿನಗಳ ಹಿಂದೆ ಸೌದಿಯಿಂದ ಆಗಮಿಸಿದ್ದ. ಆತನನ್ನು 14 ದಿನಗಳ ಕಾಲ ಮನೆಯಲ್ಲಿಯೇ ನಿಗಾದಲ್ಲಿರುವಂತೆ ತಾಲೂಕು ಆರೋಗ್ಯಾಧಿಕಾರಿಗಳು ಸೂಚಿಸಿದ್ದರು. ಆದರೆ ಹೋಮ್ ಕ್ವಾರೆಂಟೈನ್ ನಲ್ಲಿದ್ದ ಆತ ಮೆಡಿಕಲ್ ಸ್ಟೋರ್‍ಗೆ ಹೋಗುವುದಾಗಿ ನೆಪವೊಡ್ಡಿ ಮನೆಯಿಂದ ಹೊರಬಂದು ನಗರದಲ್ಲಿ ಬೇಕಾಬಿಟ್ಟಿ ಓಡಾಟ ನಡೆಸಿದ್ದಾನೆ. ಕೈಯಲ್ಲಿ ಸೀಲ್ ಇದ್ದರೂ ರಾಜರೋಷವಾಗಿ ತಿರುಗುತ್ತಿದ್ದ ಯುವಕನನ್ನು ಗಮನಿಸಿದ ಸಾರ್ವಜನಿಕರು ಆತನ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.

    ನಂತರ ಎಚ್ಚೆತ್ತುಕೊಂಡ ತಾಲೂಕು ಆರೋಗ್ಯಾಧಿಕಾರಿ, ಸ್ಥಳಕ್ಕೆ ಆಗಮಿಸಿ ಆತನಿಗೆ ವಾರ್ನಿಂಗ್ ಕೊಟ್ಟು ಮನೆಗೆ ಕಳುಹಿಸಿದ್ದಾರೆ. ಹೋಮ್ ಕ್ವಾರೆಂಟೈನ್ ನಲ್ಲಿರುವವರ ಬಗ್ಗೆ ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರಿಂದ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ.

  • ಕೊರೊನಾ ಶಂಕಿತನ ಕುಟುಂಬಸ್ಥರಿಂದ ತರಾಟೆ- ಪೊಲೀಸ್ರ ಮೊರೆ ಹೋದ ಅಧಿಕಾರಿಗಳು

    ಕೊರೊನಾ ಶಂಕಿತನ ಕುಟುಂಬಸ್ಥರಿಂದ ತರಾಟೆ- ಪೊಲೀಸ್ರ ಮೊರೆ ಹೋದ ಅಧಿಕಾರಿಗಳು

    ಮಂಗಳೂರು: ನಗರದ ವೆನ್ಲಾಕ್ ಆಸ್ಪತ್ರೆಯಿಂದ ಎಸ್ಕೇಪ್ ಆಗಿರುವ ಶಂಕಿತ ಕೊರೊನಾ ವ್ಯಕ್ತಿಯ ಮನೆಗೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

    ಶಂಕಿತ ವ್ಯಕ್ತಿ ಮನೆಯಲ್ಲಿರುವ ಶಂಕೆ ವ್ಯಕ್ತಪಡಿಸಿ ಆರೋಗ್ಯ ಅಧಿಕಾರಿಗಳು ಆತನ ಮನೆಗೆ ಇಂದು ಭೇಟಿ ಕೊಟ್ಟಿದ್ದಾರೆ. ಈ ವೇಳೆ ಶಂಕಿತನ ಕುಟುಂಬಸ್ಥರು ಆರೋಗ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.

    ಅವನು ಮನೆಯಲ್ಲಿ ಇಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಸುತ್ತಮುತ್ತಲಿನ ಜನರು ಜಮಾಯಿಸಿ ಇಲಾಖೆ ಸಿಬ್ಬಂದಿಯನ್ನು ವಾಪಸ್ ಕಳುಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಬೇಸತ್ತ ಆರೋಗ್ಯಾಧಿಕಾರಿಗಳು ಪೊಲೀಸರ ಮೊರೆ ಹೋಗಿದ್ದಾರೆ.

    ನಗರದ ಅಂತರಾಷ್ಟ್ರೀಯ ಏರ್ ಪೋರ್ಟಿನಲ್ಲಿ ಶಂಕಿತ ಕೊರೊನಾ ಪ್ರಯಾಣಿಕನೊಬ್ಬ ಪತ್ತೆಯಾಗಿದ್ದನು. ಪ್ರಯಾಣಿಕ ಭಾನುವಾರ ತಡ ರಾತ್ರಿ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದನು. ಹಾಗೆಯೇ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಸ್ಕ್ರೀನಿಂಗ್ ವೇಳೆ ಟೆಂಪರೇಚರ್ ನಲ್ಲಿ ಬಯಲಾಗಿತ್ತು. ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಪ್ರಯಾಣಿಕನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

    ಈ ವೇಳೆ ಆರೋಗ್ಯಾಧಿಕಾರಿಗಳು ಸ್ಯಾಂಪಲ್ ತೆಗೆದು ಲ್ಯಾಬ್‍ಗೆ ರವಾನಿಸಿದ್ದು, ಕೊರೊನಾ ಇರೋ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಆತನನ್ನು ಐಸೋಲೇಶನ್ ವಾರ್ಡ್‍ಗೆ ಸಿಬ್ಬಂದಿ ರವಾನಿಸಿದ್ದರು. ಆದರೆ ಆತ ರಾತ್ರೋರಾತ್ರಿ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದು, ಕರಾವಳಿ ಮಂದಿಯಲ್ಲಿ ಆತಂಕ ಹುಟ್ಟಿಸಿದೆ. ಈ ಸಂಬಂಧ ಆರೋಗ್ಯಾಧಿಕಾರಿ ಕೂಡಲೇ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಕರೆ ಮಾಡಿ ದೂರು ನೀಡಿದ್ದಾರೆ. ಇದರಿಂದ ಎಚ್ಚೆತ್ತ ಪೊಲೀಸರು ಮಂಗಳೂರು ಆಸ್ಪತ್ರೆಯಿಂದ ಎಸ್ಕೇಪ್ ಆದ ವ್ಯಕ್ತಿಯನ್ನು ಹುಡುಕಾಡಿದ್ದಾರೆ.

  • ಕೊರೊನಾ ವೈರಸ್- ಬೆಳಗಾವಿ ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡದ ಅಧಿಕಾರಿಗಳು

    ಕೊರೊನಾ ವೈರಸ್- ಬೆಳಗಾವಿ ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡದ ಅಧಿಕಾರಿಗಳು

    ಬೆಳಗಾವಿ: ಕೊರೊನಾ ವೈರಸ್ ರಾಜ್ಯಕ್ಕೂ ಒಕ್ಕರಿಸಿದ್ದು, ಭಯದಲ್ಲೇ ಜನ ಬದಕುತ್ತಿದ್ದಾರೆ. ಆದರೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ವಿವಿಧೆಡೆಗಳಿಂದ ವಿಮಾನದಲ್ಲಿ ಬರುವ ಪ್ರಯಾಣಿಕರನ್ನು ತಪಾಸಣೆ ಮಾಡದೆ ಬೆಳಗಾವಿ ಆರೋಗ್ಯ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ.

    ಕರೊನಾ ವೈರಸ್ ನಿಂದ ಬೆಳಗಾವಿ ಜನತೆ ಆತಂಕದಲ್ಲಿದ್ದಾರೆ. ವಿಮಾನದ ಮೂಲಕ ಬೇರೆ ರಾಜ್ಯ ಹಾಗೂ ವಿದೇಶದಿಂದ ಬೆಳಗಾವಿಗೆ ಬರುವ ಪ್ರಯಾಣಿಕರನ್ನು ಆರೋಗ್ಯಾಧಿಕಾರಿಗಳು ತಪಾಸಣೆ ಮಾಡದೆ ವಿಮಾನ ನಿಲ್ದಾಣದಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಪ್ರಯಾಣಿಕರು ದೂರಿದ್ದಾರೆ.

    ಕೊರೊನಾ ವೈರಸ್ ತಡೆಗಟ್ಟಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಯಾವೊಬ್ಬ ಪ್ರಯಾಣಿಕರನ್ನು ತಪಾಸಣೆ ಮಾಡುತ್ತಿಲ್ಲ. ಹೀಗಾಗಿ ಒಂದು ವೇಳೆ ಕೊರೊನಾ ವೈರಸ್ ಶಂಕಿತ ವ್ಯಕ್ತಿಯಿಂದ ಬೆಳಗಾವಿ ನಗರಕ್ಕೂ ಕಾಲಿಟ್ಟರೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

  • ಮದ್ವೆ ಮನೆಗೆ ಇನ್ಮುಂದೆ ಹೆಲ್ತ್ ಆಫೀಸರ್ಸ್ ಬರ್ತಾರೆ ಹುಷಾರ್

    ಮದ್ವೆ ಮನೆಗೆ ಇನ್ಮುಂದೆ ಹೆಲ್ತ್ ಆಫೀಸರ್ಸ್ ಬರ್ತಾರೆ ಹುಷಾರ್

    – ಊರಿನ ಜಾತ್ರೆಗೂ ಬರ್ತಾರೆ

    ಬೆಂಗಳೂರು: ಮದುವೆ ಮನೆಗೆ ಅತಿಥಿಗಳು ಬರುವುದು ಸಾಮಾನ್ಯ. ಆದರೆ ಇನ್ಮುಂದೆ ಮದುವೆ ಮನೆಗೆ ಆರೋಗ್ಯಾಧಿಕಾರಿಗಳು ಬರುತ್ತಾರೆ. ಯಾಕೆಂದರೆ ಸಾಂಕ್ರಾಮಿಕ ರೋಗ ಹೆಚ್ಚಾಗಿರುವುದರಿಂದ ಸಮಾರಂಭಗಳಿಗೂ ಆರೋಗ್ಯಾಧಿಕಾರಿಗಳು ಕಡ್ಡಾಯವಾಗಿ ಭೇಟಿ  ಕೊಡುತ್ತಾರೆ.

    ಹೌದು..ಬೇಸಿಗೆ ಕಾಲ ಹತ್ತಿರ ಬರುತ್ತಿದೆ. ರಾಜ್ಯದಲ್ಲೀಗ ಸಾಂಕ್ರಾಮಿಕ ರೋಗದ ಹಾವಳಿ. ಇದಕ್ಕಾಗಿಯೇ ಈಗ ರಾಜ್ಯ ಆರೋಗ್ಯ ಇಲಾಖೆ ತಲೆಕೆಡಿಸಿಕೊಂಡಿದೆ. ಅದರಲ್ಲೂ ಸಾರ್ವಜನಿಕ ಸಮಾರಂಭಗಳಲ್ಲಿ ಆಹಾರ ಹಾಗೂ ನೀರು ಶುದ್ಧವಾಗಿಲ್ಲದೆ ಇರುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆ ಎದುರಾಗುತ್ತಿದೆ. ಇದಕ್ಕಾಗಿಯೇ ಈಗ ಮದುವೆ ಮಂಟಪಗಳಿಗೆ ಆರೋಗ್ಯಾಧಿಕಾರಿಗಳು ಕಡ್ಡಾಯವಾಗಿ ವಿಸಿಟ್ ಮಾಡಬೇಕು.

    ಆಶಾ ಕಾರ್ಯಕರ್ತೆಯರು ಕೂಡ ಮದುವೆಯಲ್ಲಿ ಹಂಚುವ ಆಹಾರ ಹಾಗೂ ನೀರಿನ ಸ್ಯಾಂಪಲ್ ಕಲೆಕ್ಟ್ ಮಾಡಿ ಅದರ ಕ್ವಾಲಿಟಿ ಚೆಕ್ ಮಾಡಬೇಕು ಅಂತ ಆರೋಗ್ಯಾಧಿಕಾರಿಗಳು ಆದೇಶ ಕೊಟ್ಟಿದ್ದಾರೆ. ಮುಂದೆ ಊಟದಲ್ಲಿ ಸ್ವಚ್ಛತೆ ಕಾಪಾಡದೆ ಇದ್ದರೆ ಊಟ ಸಪ್ಲೈ ಮಾಡುವ ಕ್ಯಾಟರಿಂಗ್‍ನವರ ಮೇಲೆ ದೂರು ದಾಖಲಾಗುತ್ತೆ ಎಂದು ಆರೋಗ್ಯ ಇಲಾಖೆ ಉಪನಿರ್ದೇಶಕರಾದ ಶರೀಫ್ ಹೇಳಿದ್ದಾರೆ.

    ಕೇವಲ ಮದುವೆ ಮಾತ್ರವಲ್ಲದೇ ಊರಿನ ಜಾತ್ರೆಗೂ ಕೂಡ ಆರೋಗ್ಯಾಧಿಕಾರಿಗಳು ಭೇಟಿ ಕೊಡಲಿದ್ದಾರೆ. ಊರಿನ ಜಾತ್ರೆಯಲ್ಲಿ ವಿತರಿಸುವ ಪ್ರಸಾದ, ಅಲ್ಲಿನ ಆಹಾರದ ಶಾಪ್‍ಗಳ ಸ್ವಚ್ಛತೆಯ ಮೇಲೂ ಗಮನಹರಿಸಲಿದ್ದಾರೆ. ಏನಾದರೂ ತೊಂದರೆಯಾದರೆ ಊರಿನ ಜಾತ್ರೆಯ ಮುಖಂಡತ್ವ ವಹಿಸಿರುವವರೇ ನೇರ ಹೊಣೆಯಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಮದುವೆ, ಜಾತ್ರೆ ಇಂತಹ ಸಮಾರಂಭದಲ್ಲಿ ಜನ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು. ಸಾಂಕ್ರಾಮಿಕ ರೋಗ ಹೆಚ್ಚಾಗಿರುವುದರಿಂದ ಈ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗಿರುವುದರಿಂದ ಆರೋಗ್ಯ ಇಲಾಖೆ ಇದಕ್ಕೆ ಕಡಿವಾಣ ಹಾಕಲು ನಾನಾ ಪ್ಲ್ಯಾನ್ ಮಾಡಿದೆ.