Tag: health minister

  • ಕೊರೊನಾ ಗೆದ್ದ ಆರೋಗ್ಯ ಸಚಿವ- ಸೋಂಕಿನಿಂದ ಸತ್ಯೇಂದ್ರ ಜೈನ್ ಮುಕ್ತ

    ಕೊರೊನಾ ಗೆದ್ದ ಆರೋಗ್ಯ ಸಚಿವ- ಸೋಂಕಿನಿಂದ ಸತ್ಯೇಂದ್ರ ಜೈನ್ ಮುಕ್ತ

    ನವದೆಹಲಿ: ಕೊರೊನಾ ಸೋಂಕಿನಿಂದ ತೀವ್ರವಾಗಿ ಬಳಲುತ್ತಿದ್ದ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಪ್ಲಾಸ್ಮಾ ಥೆರಪಿ ಬಳಿಕ ಗುಣಮುಖರಾಗಿದ್ದು ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

    ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವರಿಗೆ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಸೋಂಕು ಶ್ವಾಸಕೋಶದಲ್ಲಿ ಹೆಚ್ಚಾಗಿ ವ್ಯಾಪಿಸಿದ ಹಿನ್ನೆಲೆ ಮ್ಯಾಕ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.

    ಸೋಂಕು ಹೆಚ್ಚಾಗಿದ್ದ ಹಿನ್ನೆಲೆ ಕುಟುಂಬದ ಒಪ್ಪಿಗೆ ಮೇರೆಗೆ ಪ್ಲಾಸ್ಮಾ ಥೆರಪಿ ನಡೆಸಲಾಗಿತ್ತು. ಥೆರಪಿ ಬಳಿಕ ಸತ್ಯೇಂದ್ರ ಜೈನ್ ಆರೋಗ್ಯವಾಗಿದ್ದು ಇಂದು ನಡೆಸಿದ ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ.

    ಆರೋಗ್ಯ ಸಚಿವರಾಗಿದ್ದ ಸತ್ಯೇಂದ್ರ ಜೈನ್ ಹಲವು ಸಭೆಗಳು ಸೇರಿ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರು. ಈ ಹಿನ್ನೆಲೆ ಅವರಲ್ಲಿ ರೋಗದ ಲಕ್ಷಣಗಳು ಕಂಡು ಬಂದಿತ್ತು. ಮೊದಲು ಟೆಸ್ಟ್ ನಡೆಸಿದಾಗ ನೆಗೆಟಿವ್ ವರದಿ ಬಂದಿತ್ತು. ಮತ್ತೊಮ್ಮೆ ಪರೀಕ್ಷೆ ನಡೆಸಿದಾಗ ಸೋಂಕಿರುವುದು ದೃಢವಾಗಿತ್ತು.

  • ಕೇರಳದ ಆರೋಗ್ಯ ಸಚಿವೆಗೆ ಗೌರವ ಸಲ್ಲಿಸಿದ ವಿಶ್ವಸಂಸ್ಥೆ

    ಕೇರಳದ ಆರೋಗ್ಯ ಸಚಿವೆಗೆ ಗೌರವ ಸಲ್ಲಿಸಿದ ವಿಶ್ವಸಂಸ್ಥೆ

    ನ್ಯೂಯಾರ್ಕ್: ಹೆಮ್ಮಾರಿ ಕೋವಿಡ್-19 ಹರಡುವುದನ್ನು ನಿಯಂತ್ರಿಸಿದ್ದಕ್ಕಾಗಿ ಕೇರಳ ಆರೋಗ್ಯ ಸಚಿವ ಕೆ.ಕೆ.ಶೈಲಜಾ ಟೀಚರ್‌ ಅವರಿಗೆ ವಿಶ್ವಸಂಸ್ಥೆ ವಿಶೇಷ ಗೌರವ ಸಲ್ಲಿಸಿದೆ.

    ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಹಾಗೂ ಸಾಮಾನ್ಯ ಸಭೆಯ ಅಧ್ಯಕ್ಷರ ನೇತೃತ್ವ ವಹಿಸಿದ್ದ ಸಾರ್ವಜನಿಕ ಸೇವಾ ದಿನಾಚರಣೆಯಲ್ಲಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್‌ ಪಾಲ್ಗೊಂಡಿದ್ದರು. ಜೂನ್ 23ರಂದು ವರ್ಚುವಲ್ ಕಾರ್ಯಕ್ರಮದಲ್ಲಿ ಕೋವಿಡ್ ತಡೆಗಟ್ಟುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಭಾರತದಿಂದ ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರಿಗೆ ಮಾತ್ರ ಆಹ್ವಾನ ಸಿಕ್ಕಿತ್ತು.

    ಈ ವೇಳೆ ಮಾತನಾಡಿದ ಕೆ.ಕೆ.ಶೈಲಜಾ ಟೀಚರ್‌, 2018-19ರ ನಡುವೆ ನಿಪಾ ವೈರಸ್ ಮತ್ತು ಎರಡು ಪ್ರವಾಹಗಳು ಸಂಭವಿಸಿ ರಾಜ್ಯವನ್ನು ತಲ್ಲಣಗೊಳಿಸಿತ್ತು. ಈ ವೇಳೆ ಕೈಗೊಂಡ ತಂತ್ರಗಳು ಕೋವಿಡ್-19 ಅನ್ನು ಸಮಯೋಚಿತವಾಗಿ ನಿಭಾಯಿಸಲು ಸಹಾಯಕವಾಯಿತು ಎಂದು ತಿಳಿಸಿದರು.

    “ವುಹಾನ್‍ನಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾದ ತಕ್ಷಣವೇ ಎಚ್ಚೆತ್ತ ಕೇರಳ ಸರ್ಕಾರ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಮಾಹಿತಿ, ಸೂಚನೆಯನ್ನು ಅನುಸರಿಸಲು ಆರಂಭಿಸಿತು. ವಿದೇಶದಿಂದ ಪ್ರತಿಯೊಬ್ಬರನ್ನ ಕ್ವಾರಂಟೈನ್ ಮಾಡುವುದು ಸೇರಿದಂತೆ ವಿವಿಧ ನಿಯಮಗಳನ್ನು ಅನುಸರಿಸಿದ್ದರಿಂದ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿತು” ಎಂದು ವಿವರಿಸಿದರು.

    ಕಾರ್ಯಕ್ರಮದಲ್ಲಿ ಕೆ.ಕೆ.ಶೈಲಜಾ ಹಾಗೂ ಕೊರೊನಾ ನಿಯಂತ್ರಣಕ್ಕೆ ನಿರ್ಣಾಯಕ ಪಾತ್ರ ವಹಿಸಿರುವ ವಿವಿಧ ದೇಶಗಳ ಪ್ರತಿನಿಧಿಗಳಿಗೆ ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿ, ಗೌರವ ಸಲ್ಲಿಸಿತು. ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಸಾಮಾನ್ಯ ಸಭೆಯ ಅಧ್ಯಕ್ಷ ಟಿಜ್ಜನಿ ಮೊಹಮ್ಮದ್ ಬಂಡೆ, ಇಥಿಯೋಪಿಯಾದ ಅಧ್ಯಕ್ಷ ಸಾಹ್ಲೆ ವರ್ಕ್ ಸೂಡ್, ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಡೆನೊಮಮ್ ಗೆಬ್ರಿಯೇಶಿಯಸ್, ವಿಶ್ವ ಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಉಪ ಕಾರ್ಯದರ್ಶಿ ಲಿಯು ಶೆನ್ಮಿನ್, ಕೊರಿಯಾದ ಆಂತರಿಕ ಮತ್ತು ಭದ್ರತಾ ಸಚಿವ ಚಿನ್ ಯಂಗ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

  • ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್‍ಗೆ ಕೊರೊನಾ ಪಾಸಿಟಿವ್

    ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್‍ಗೆ ಕೊರೊನಾ ಪಾಸಿಟಿವ್

    – ಎಎಪಿ ಶಾಸಕಿ ಅತಿಶಿಗೂ ಸೋಂಕು

    ನವದೆಹಲಿ: ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರಿಗೆ ಇಂದು ಕೋವಿಡ್ 19 ಪಾಸಿಟಿವ್ ಬಂದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ತೀವ್ರ ಜ್ವರದಿಂದ ಬಳಲುತ್ತಿದ್ದ 55 ವರ್ಷದ ಸಚಿವರನ್ನು ಮಂಗಳವಾರ ಮುಂಜಾನೆ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ(ಆರ್‍ಜಿಎಸ್‍ಎಸ್‍ಹೆಚ್)ಗೆ ಕರೆತರಲಾಗಿತ್ತು. ಅಲ್ಲದೆ ನಿನ್ನೆ ಬೆಳಗ್ಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಅದರ ವರದಿಯಲ್ಲಿ ಕೊರೊನಾ ನೆಗೆಟಿವ್ ಅಂತ ಬಂದಿತ್ತು.

    ಆದರೆ ಸಚಿವರಿಗೆ ಜ್ವರ ಕಡಿಯಾಗದ ಹಿನ್ನೆಲೆಯಲ್ಲಿ ಮೊದಲ ಟೆಸ್ಟ್ ಆಗಿ 24 ಗಂಟೆಯ ನಂತರ ಇಂದು ಮತ್ತೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಅದರ ವರದಿಯಲ್ಲಿ ಕೊರೊನಾ ಪಾಸಿಟಿವ್ ಎಂದು ಬಂದಿದೆ ಅಂತ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಸಚಿವರ ಆರೋಗ್ಯ ಸ್ಥಿರವಾಗಿದ್ದು, ಆಕ್ಸಿಜನ್ ಸಹಾಯ ನೀಡಲಾಗಿದೆ ಎಂದು ಆರ್‍ಜಿಎಸ್‍ಎಸ್‍ಹೆಚ್ ನ ವೈದ್ಯರು ಹೇಳಿದ್ದಾರೆ.

    ಭಾನುವಾರ ಸತ್ಯೇಂದರ್ ಜೈನ್ ಅವರು ಕೇಂದ್ರ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಅರವಿಂದ್ ಕೇಜ್ರಿವಾಲ್ ಹಾಗೂ ಮನಿಶ್ ಸಿಸೋಡಿಯಾರ ಸಭೆಯಲ್ಲಿ ಭಾಗಿಯಾಗಿದ್ದರು. ಈ ಸಭೆಯಲ್ಲಿ ಕೊರೊನಾ ವೈರಸ್ ಬಗ್ಗೆ ಚರ್ಚೆ ನಡೆಸಲಾಗಿತ್ತು. ಆ ಬಳಿಕ ಅಂದರೆ ಸೋಮವಾರ ಜ್ವರ ಹಾಗೂ ಉಸಿರಾಟದ ತೊಂದರೆ ಕಂಡುಬಂದಿದ್ದರಿಂದ ಮುಂಗಳವಾರ ಮುಂಜಾನೆ ಜೈನ್ ಅವರು ದೆಹಲಿಯ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಾದರು.

    ಇತ್ತ ದೆಹಲಿಯ ಎಎಪಿ ಶಾಸಕಿ ಅತಿಶಿ(39) ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಅತಿಶಿಗೆ ಮಂಗಳವಾರ ಕಫ ಹಾಗೂ ಜ್ವರ ಕಾಣಿಸಿಕೊಂಡಿದ್ದು, ಕೊರೊನಾ ಟೆಸ್ಟ್‍ಗೆ ಕಳುಹಿಸಲಾಗಿತ್ತು. ಅದರ ವರದಿ ಇಂದು ಬಂದಿದ್ದು ಪಾಸಿಟಿವ್ ಇರುವುದು ದೃಢಪಟ್ಟಿದೆ. ಸದ್ಯ ಅವರನ್ನು ಹೋಂಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.

    ಅತಿಶಿ ಕೊರೊನಾ ವೈರಸ್ ಕಾಣಿಸಿಕೊಂಡು ಮೂರನೇ ಶಾಸಕಿಯಾಗಿದ್ದಾರೆ. ಈ ಹಿಂದೆ ತಮ್ಮ ಪಕ್ಷದ ವಿಶೇಷ್ ರವಿ ಹಾಗೂ ರಾಜ್ ಕುಮಾರ್ ಆನಂದ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು.

    ಇಂದು ಬೆಳಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿ, ಕೊರೊನಾ ವಿರುದ್ಧದ ಹೋರಾಟದಲ್ಲಿ ಅತಿಶಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಅವರು ಆದಷ್ಟು ಬೇಗ ಕೊರೊನಾ ವೈರಸ್ ಮಹಾಮಾರಿಯಿಂದ ಗುಣಮುಖರಾಗಿ ಬರುತ್ತಾರೆ ಎಂಬ ನಂಬಿಎಕಯಿದೆ ಎಂದು ಬರೆದುಕೊಂಡಿದ್ದಾರೆ.

  • ಇಲಾಖೆ ಹೇಳೋದು ಒಂದು, ಆರೋಗ್ಯ ಸಚಿವರು ಹೇಳೋದು ಮತ್ತೊಂದು

    ಇಲಾಖೆ ಹೇಳೋದು ಒಂದು, ಆರೋಗ್ಯ ಸಚಿವರು ಹೇಳೋದು ಮತ್ತೊಂದು

    ಉಡುಪಿ: ಮಹಾರಾಷ್ಟ್ರದಿಂದ ಬಂದವರಿಗೆ 7 ದಿನಗಳ ಕಾಲ ಸರ್ಕಾರಿ ಕ್ವಾರಂಟೈನ್ ಕಡ್ಡಾಯ ಎಂದು ಸೋಮವಾರವಷ್ಟೇ ಸರ್ಕಾರ ಆದೇಶ ಹೊರಡಿಸಿದ್ದು, ಇದೀಗ ಆರೋಗ್ಯ ಸಚಿವ ಶ್ರೀರಾಮುಲು ಅವರು ಇನ್ನು ಮುಂದೆ ಸರ್ಕಾರಿ ಕ್ವಾರಂಟೈನ್ ಇರಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಜನ ಆರೋಗ್ಯ ಇಲಾಖೆಯನ್ನು ನಂಬಬೇಕಾ ಅಥವಾ ಆರೋಗ್ಯ ಸಚಿವರನ್ನು ನಂಬಬೇಕಾ ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ.

    ಹೌದು. ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಮಹಾರಾಷ್ಟ್ರದಿಂದ ಬಂದವರಿಗೆ ಹೋಂ ಕ್ವಾರಂಟೈನ್ ಮಾಡಲಾಗುತ್ತದೆ. ಇನ್ನು ಮುಂದೆ ಸಾಂಸ್ಥಿಕ ಕ್ವಾರಂಟೈನ್ ಇರೋದಿಲ್ಲ. ವ್ಯಕ್ತಿಯ ಮನೆಯನ್ನು ಸಂಪೂರ್ಣ ಸೀಲ್ ಡೌನ್ ಮಾಡುತ್ತೇವೆ. ಸೀಲ್ ಮಾಡಿದ ಮೇಲೆ ಆತ ಮನೆಯಲ್ಲೇ ಇರಬೇಕು. ಹೊರಬಂದ್ರೆ ಕೇಸ್ ಹಾಕುವ ತೀರ್ಮಾನ ಮಾಡಿದ್ದೇವೆ. ಈ ತೀರ್ಮಾನವನ್ನು ರಾಜ್ಯ ಮಟ್ಟದಲ್ಲೇ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

    ಜಿಲ್ಲಾಧಿಕಾರಿಗೆ ಜಿಲ್ಲೆಯ ಸಂಪೂರ್ಣ ಅಧಿಕಾರ ಕೊಡಲಾಗಿದೆ. ಸೀಲ್ ಡೌನ್ ಇದ್ದವರು ಹೊರಗೆ ಬಂದ್ರೆ ಕೇಸ್ ಬೀಳುತ್ತೆ. ಪೊಲೀಸ್, ಹೋಂ ಗಾರ್ಡ್ ಗಳನ್ನು ನೇಮಿಸುತ್ತೇವೆ. ಆಶಾ, ಅಂಗನವಾಡಿ ಕಾರ್ಯಕರ್ತರು ನಿಗಾ ಇಡುತ್ತಾರೆ. ಹೊರಬಂದ್ರೆ ಸುತ್ತಮುತ್ತಲ ಮನೆಯವರು ಮಾಹಿತಿ ಕೊಡಬೇಕು. ತುಂಬಾ ಬಡವರಿದ್ದರೆ ಆ ಮನೆಗೆ ದೇವಸ್ಥಾನದ ಮೂಲಕ ಕಿಟ್ ಒದಗಿಸಲಾಗುವುದು. ರೋಗ ಲಕ್ಷಣ ಕಂಡು ಬಂದರೆ ಟೆಸ್ಟ್ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಅಪಾರ್ಟ್ ಮೆಂಟ್ ಸೀಲ್ ಮಾಡಲ್ಲ. ಒಂದು ಮನೆಯನ್ನು ಮಾತ್ರ ಸೀಲ್ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

    ಮಹಾರಾಷ್ಟ್ರದಿಂದ ಬಂದವರಲ್ಲಿ ಕೊರೊನಾ ಸ್ಫೋಟವಾಗಿದ್ರೂ ಸಾಂಸ್ಥಿಕ ಕ್ವಾರಂಟೈನ್ ರದ್ದು ಮಾಡಿ ಹೋಂ ಕ್ವಾರಂಟೈನ್ ಮಾಡುವ ನಿರ್ಧಾರವನ್ನು ಸಚಿವರು ಪ್ರಕಟಿಸಿದ್ದರು. ಸರ್ಕಾರದ ಈ ನಡೆ ವಿರೋಧಿಸಿ ಪಬ್ಲಿಕ್ ಟಿವಿ ನಿರಂತರ ಸುದ್ದಿ ಪ್ರಸಾರ ಮಾಡಿತ್ತು. ಕೊನೆಗೂ ಪಬ್ಲಿಕ್ ಆಗ್ರಹಕ್ಕೆ ಮಣಿದು ಮಹಾರಾಷ್ಟ್ರದಿಂದ ಬಂದವರಿಗೆ ಹೋಂ ಕ್ವಾರಂಟೈನ್ ಬದಲು 7 ದಿನ ಸಾಂಸ್ಥಿಕ ಕ್ವಾರಂಟೈನ್ ನಿರ್ಧಾರ ಪ್ರಕಟಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಮಹಾರಾಷ್ಟ್ರದಿಂದ ಬಂದವರಿಗೆ ಸಾಂಸ್ಥಿಕ ಕ್ವಾರಂಟೈನ್ ರದ್ದು ಇಲ್ಲ. ಬದಲಾಗಿ 7 ದಿನ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ.

  • ಕೇರಳದಲ್ಲಿ ನಿಯಂತ್ರಣಕ್ಕೆ ಬಂದ ಕೊರೊನಾ- 63ನೇ ವಯಸ್ಸಿನಲ್ಲಿ ಶೈಲಜಾ ಕಾರ್ಯಕ್ಕೆ ಜನಮೆಚ್ಚುಗೆ

    ಕೇರಳದಲ್ಲಿ ನಿಯಂತ್ರಣಕ್ಕೆ ಬಂದ ಕೊರೊನಾ- 63ನೇ ವಯಸ್ಸಿನಲ್ಲಿ ಶೈಲಜಾ ಕಾರ್ಯಕ್ಕೆ ಜನಮೆಚ್ಚುಗೆ

    – ಹಾಟ್‍ಸ್ಟಾಟ್ ಕೇರಳದಲ್ಲಿ ಸೋಂಕು ಹಿಡಿತಕ್ಕೆ ಬರಲು ಕಾರಣವೇನು?
    – ಕೇರಳದ 8 ಜಿಲ್ಲೆಗಳು ಕೊರೊನಾ ರಹಿತ

    ತಿರುವನಂತಪುರಂ: ಭಾರತದಲ್ಲಿ ಮೊದಲ ಕೊರೊನಾ ಪ್ರಕರಣ ದಾಖಲಾಗಿದ್ದ ಕೇರಳದಲ್ಲಿ ಈಗ ಕೊರೊನಾ ಹಿಡಿತಕ್ಕೆ ಬಂದಿದೆ. ಕೊರೊನಾ ವೈರಸ್ ನ ಹಾಟ್‍ಸ್ಟಾಟ್ ಆಗಿದ್ದ ಕೇರಳ ಅಲ್ಲಿನ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರ ದಿಟ್ಟ ಕಾರ್ಯದಿಂದ ಕೊರೊನಾ ಮುಕ್ತವಾಗುತ್ತಿದೆ.

    ಕಳೆದ ವರ್ಷ ಡಿಸೆಂಬರ್ ನಲ್ಲಿ ಚೀನಾದ ವುಹಾನ್ ಪ್ರದೇಶದಲ್ಲಿ ಕಾಣಿಸಿಕೊಂಡ ಕೊರೊನಾ ಇಂದು ವಿಶ್ವಕ್ಕೆ ಮಹಾಮಾರಿಯಾಗಿ ಕಾಡುತ್ತಿದೆ. ಭಾರತದಲ್ಲಿ ಈ ಸೋಂಕು ಮೊದಲಿಗೆ ಕಾಣಿಸಿಕೊಂಡಿದ್ದು ಕೇರಳದಲ್ಲಿ, ಚೀನಾದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗೆ ಈ ಸೋಂಕು ಜನವರಿ 30ರಂದು ಭಾರತದಲ್ಲಿ ಮೊದಲಿಗೆ ಪತ್ತೆಯಾಗಿತ್ತು. ಇದಾದ ನಂತರ ಕೇರಳ ಕೊರೊನಾ ಹಾಟ್‍ಸ್ಟಾಟ್ ಆಗಿತ್ತು.

    ಈ ಹಿಂದೆಯಿಂದಲೂ ಈ ರೀತಿಯ ಪರಿಸ್ಥಿತಿಯನ್ನು ಬಹಳ ಎದುರಿಸಿದ್ದ ಕೇರಳ, ನಿಫಾ, ಹೆಚ್1ಎನ್1, ಚಿಕನ್‍ಗುನ್ಯಾನಂತಹ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿ ಗೆದ್ದಿತ್ತು. ಈ ಅನುಭವದಿಂದಲೇ ಕೇರಳ ಜನವರಿ 24ರಂದೇ ಕೊರೊನಾ ಕಂಟ್ರೋಲ್ ರೂಂ ಅನ್ನು ಓಪನ್ ಮಾಡಿತ್ತು. ಭಾರತದಲ್ಲಿ ಕೊರೊನಾ ಪ್ರಭಾವ ಹೆಚ್ಚಾಗುವುದಕ್ಕೂ ಮುನ್ನವೇ ಜನರನ್ನು ಐಸೋಲೇಟ್ ಮಾಡಲು ಶುರು ಮಾಡಿತ್ತು. ಜೊತೆಗೆ ಎನ್ 95 ಮಾಸ್ಕ್ ಗಳು ಮತ್ತು ಪಿಪಿಇ ಕಿಟ್‍ಗಳ ಖರೀದಿಗೆ ಮುಂದಾಗಿತ್ತು.

    ದಿಟ್ಟ ನಿರ್ಧಾರ ತೆಗೆದುಕೊಂಡ ಶೈಲಜಾ:
    ಇಂದು ಕೇರಳದಲ್ಲಿ ಕೊರೊನಾ ಹಿಡಿತಕ್ಕೆ ಬರಲು ಕಾರಣ ಅಲ್ಲಿನ ಕೊರೊನಾ ವಾರಿಯರ್ಸ್ ಮತ್ತು ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರ ದಿಟ್ಟ ನಿರ್ಧಾರಗಳು. ಮೊದಲ ಕೊರೊನಾ ಪ್ರಕರಣ ದಾಖಲಾಗುತ್ತಿದ್ದಂತೆ ಎಚ್ಚೆತ್ತಿದ್ದ ಶೈಲಜಾ ಅವರು, ಮೂರು ಕಾರ್ಯಸೂಚಿಗಳನ್ನು ಜಾರಿಗೆ ತಂದಿದ್ದರು. ಸರ್ಕಾರಿ ಆಸ್ಪತ್ರೆಗಳು ರೋಗಿಗಳ ಸ್ನೇಹಿಯಾಗಿರಬೇಕು. ಹೈಟೆಕ್ ಆಗಿರಬೇಕು. ಹಣವಿಲ್ಲದ ಅಥವಾ ಕಡಿಮೆ ದುಡ್ಡಿಗೆ ಚಿಕಿತ್ಸೆ ನೀಡಬೇಕು ಎಂದು ಮೂರು ಕಾರ್ಯಸೂಚಿಗಳನ್ನು ಮಾಡಿಕೊಂಡಿದ್ದರು.

    ಈ ವಿಚಾರದ ಬಗ್ಗೆ ಮಾತನಾಡಿರುವ ಶೈಲಜಾ ಅವರು, ಈ ಸಮಯದಲ್ಲಿ ಪ್ರಾಥಮಿಕ ಆರೋಗ್ಯ ಘಟಕಗಳು ಬಹಳ ಮುಖ್ಯ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಈಗ ನಮ್ಮಲ್ಲಿ ಗ್ರಾಮೀಣ ಪ್ರದೇಶದಲ್ಲೂ ಪರೀಕ್ಷಾ ಪ್ರಯೋಗಾಲಯಗಳನ್ನು ಮಾಡಲಾಗಿದೆ. ಅವು ವಿವಿಧ ರೋಗಗಳನ್ನು ಆರಂಭಿಕವಾಗಿಯೇ ಕಂಡುಹಿಡಿಯಲು ಸಮರ್ಥವಾಗಿವೆ. ನಮ್ಮಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಹೊಸ ಉಪಕರಣಗಳನ್ನು ಹೊಂದಿವೆ ಮತ್ತು ಉತ್ತಮ ಮೂಲಸೌಕರ್ಯಗಳನ್ನು ಹೊಂದಿವೆ ಎಂದು ತಿಳಿಸಿದ್ದಾರೆ.

    2018ರಲ್ಲಿ ನಿಫಾ ವೈರಸ್ ಬಂದಾಗಿನಿಂದ ನಮ್ಮ ಸರ್ಕಾರ ವೈದ್ಯಕೀಯ ಸಿಬ್ಬಂದಿಗೆ ನಿಯಮಿತ ತರಬೇತಿಯನ್ನು ಜಾರಿಗೆ ತಂದಿತು. ಇದು ಈಗ ಕೊರೊನಾ ತಡೆಗಟ್ಟುವಲ್ಲಿ ನಮಗೆ ಸಹಾಯವಾಯಿತು. ನಮ್ಮ ವೈದ್ಯಕೀಯ ಸಿಬ್ಬಂದಿ ಸಾಂಕ್ರಾಮಿಕ ರೋಗದ ವಿರುದ್ಧ ಏಕಾಏಕಿ ತಯಾರಿಗಾಗಿ ಅಣಕು ಡ್ರಿಲ್‍ಗಳನ್ನು ಸಹ ಮಾಡಿದ್ದರು. ಅವರ ಕಾರ್ಯದಿಂದ ನಾವು ಇಂದು ಕೊರೊನಾ ವಿರುದ್ಧ ಪ್ರಬಲವಾಗಿ ಹೋರಾಡುತ್ತಿದ್ದೇವೆ. ನಮ್ಮ ಈ ಕೆಲಸ ಖಂಡಿತವಾಗಿಯೂ ವ್ಯವಸ್ಥೆಯನ್ನು ಬಲಪಡಿಸಿತು ಎಂದು ಹೇಳಿದ್ದಾರೆ.

    ನಾವು ಕೆಲಸ ಮಾಡುವಾಗ ನಾವೇಲ್ಲ ಒಂದೇ ಎಂಬ ಭಾವನೆಯನ್ನು ಮೂಡಿಸಿಕೊಂಡಿದ್ದೆವು. ದಿನ ಕೆಳಮಟ್ಟದ ಆರೋಗ್ಯ ಸಿಬ್ಬಂದಿಯಿಂದ ಹಿಡಿದು ಎಲ್ಲರ ಜೊತೆ ವಿಡಿಯೋ ಕಾನ್ಫೆರೆನ್ಸ್ ಮಾಡುತ್ತಿದ್ದೇವು. ಆಶಾ ಕಾರ್ಯಕರ್ತೆಯರು ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆ ದಿನಲೂ ನಾನು ಮಾತನಾಡುತ್ತಿದ್ದೆ. ಮಾಹಿತಿ ಪಡೆಯುತ್ತಿದ್ದೆ. ನಾವು ಹೀಗೆ ಕೆಳಹಂತದಿಂದ ಮಾಹಿತಿ ಪಡೆದುಕೊಂಡಿದ್ದು, ಕೆಲಸ ಮಾಡಲು ನಮಗೆ ಸಲಭವಾಗತ್ತದೆ ಎಂದು ಶೈಲಜಾ ಅವರು ಅಭಿಪ್ರಾಯ ಪಟ್ಟಿದ್ದಾರೆ.

    63 ವರ್ಷದ ಕೆಕೆ ಶೈಲಜಾ ಅವರಿಗೆ ಗಂಡ ಮತ್ತು ಇಬ್ಬರು ಮಕ್ಕಳು ಇದ್ದಾರೆ. ಈ ವಯಸ್ಸಿನಲ್ಲೂ ಪ್ರತಿದಿನ 8 ರಿಂದ 9 ಗಂಟೆಗಳ ಕಾಲ ಸಭೆ ಮತ್ತು ವಿಡಿಯೋ ಕಾನ್ಫೆರೆನ್ಸ್ ನಿರತರಾಗಿರುತ್ತಾರೆ. ಇದರ ಜೊತೆಗೆ ಮನೆಯಲ್ಲಿ ಇದ್ದರೆ ರಾತ್ರಿಯ ವೇಳೆಯೂ ಕೂಡ ಯಾವುದೇ ಕರೆ ಬರಲಿ ಮಾತನಾಡುತ್ತಾರೆ ಎಂದು ಅವರ ಮನೆಯವರು ಹೇಳಿದ್ದಾರೆ. 63ನೇ ವಯಸ್ಸಿನಲ್ಲೂ ತನ್ನ ರಾಜ್ಯಕ್ಕಾಗಿ ದುಡಿಯುತ್ತಿರುವ ಶೈಲಜಾ ಅವರ ಕಾರ್ಯಕ್ಕೆ ಎಲ್ಲಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಶೈಲಜಾ ಅವರ ಕಾರ್ಯಕ್ಷಮತೆಯಿಂದ ಇಂದು ಕೇರಳದ 8 ಜಿಲ್ಲೆಗಳು ಕೊರೊನಾ ಮುಕ್ತವಾಗಿವೆ. ಕೇರಳದಲ್ಲಿ ಕೊರೊನಾ ಹಾಟ್‍ಸ್ಟಾಟ್ ಆಗಿದ್ದ ಕಾಸರಗೋಡು, ಕೋಜಿಕೋಡ್, ಪಾಲಕ್ಕಾಡ್, ಅಲಾಪ್ಪುಜಾ, ಕೊಟ್ಟಾಯಂ, ಇಡುಕ್ಕಿ, ಪಥನಮತ್ತತ್ತ ಮತ್ತು ತಿರುವನಂತಪುರಂ ಜಿಲ್ಲೆಗಳು ಕೊರೊನಾ ರಹಿತ ಜಿಲ್ಲೆಗಳಾಗಿವೆ. ಜೊತೆಗೆ ಕೇರಳದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಕಮ್ಮಿ ಆಗುತ್ತಿದ್ದು, ಸೋಂಕಿನಿಂದ ಗಣಮುಖರಾಗುತ್ತಿರುವವರ ಸಂಖ್ಯೆ ಜಾಸ್ತಿಯಾಗಿದೆ.

    ಕೇರಳದಲ್ಲಿ ಕೊರೊನಾ ಕಾಣಿಸಿಕೊಂಡದಿಂದ ಇಲ್ಲಿಯವರೆಗೆ ಸುಮಾರು 512 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಕೇವಲ ಮೂರು ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ಈಗ ಕೇವಲ 20 ಜನರು ಕೊರೊನಾ ಚಿಕತ್ಸೆ ಪಡೆಯುತ್ತಿದ್ದು, ಇನ್ನುಳಿದ 488 ಜನರು ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಚ್ ಆಗಿದ್ದಾರೆ. ಇಲ್ಲಿಯವರೆಗೂ ಸುಮಾರು 37,464 ಸ್ಯಾಂಪಲ್‍ಗಳನ್ನು ಪರೀಕ್ಷೆ ಮಾಡಿದ್ದು, ಅದರಲ್ಲಿ 36,630 ಸ್ಯಾಂಪಲ್ಸ್ ಗಳು ನೆಗೆಟಿವ್ ಬಂದಿವೆ.

    ಇದರ ಜೊತೆಗೆ ಕೆಕೆ ಶೈಲಜಾ ಅವರು, ಬೇರೆ ಪ್ರದೇಶದಿಂದ ಕೇರಳಕ್ಕೆ ಬಂದವರು ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಡಬೇಕು. ಪರೀಕ್ಷೆಯಲ್ಲಿ ಕೊರೊನಾದ ಒಂದು ಲಕ್ಷಣ ಕಂಡುಬಂದರೂ ಅವರು ಕೋವಿಡ್ ಆಸ್ಪತ್ರೆಗೆ ದಾಖಲಾಗಬೇಕು. ಒಂದು ವೇಳೆ ಪರೀಕ್ಷೆಯಲ್ಲಿ ಲಕ್ಷಣ ಕಂಡುಬಾರದೆ ಇದ್ದರೇ ಅವರು 14 ದಿನಗಳ ಕಾಲ ಹೋಂ ಕ್ವಾರಂಟೈನ್‍ನಲ್ಲಿ ಇರಬೇಕು ಎಂದು ನಿಯಮ ಮಾಡಿದ್ದಾರೆ.

  • ಐಸೋಲೇಷನ್ ವಾರ್ಡಿಗೆ ಮಾಸ್ಕ್ ಧರಿಸದೇ ಶ್ರೀರಾಮುಲು ಭೇಟಿ

    ಐಸೋಲೇಷನ್ ವಾರ್ಡಿಗೆ ಮಾಸ್ಕ್ ಧರಿಸದೇ ಶ್ರೀರಾಮುಲು ಭೇಟಿ

    ರಾಮನಗರ: ಮಹಾಮಾರಿ ಕೊರೊನಾ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು ಸೋಂಕಿತರ ಸಂಖ್ಯೆಯೂ ಹೆಚ್ಚಳವಾಗ್ತಿದ್ದರೆ, ಜನರಲ್ಲಿ ಅರಿವು ಮೂಡಿಸಬೇಕಾದ ಆರೋಗ್ಯ ಸಚಿವರೇ ಕೇರ್‍ಲೆಸ್ ಮಾಡಿರುವ ಘಟನೆ ರಾಮನಗರದಲ್ಲಿ ನಡೆದಿದೆ.

    ರಾಮನಗರದಲ್ಲಿ ಇಂದು ಜಿಲ್ಲಾಡಳಿತದಿಂದ ತೆಗೆದುಕೊಂಡಿರುವ ಕೊರೊನಾ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ರು. ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

    ಸಭೆಯ ಮೂಲಕ ಕೊರೊನಾ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾದ ಆರೋಗ್ಯ ಸಚಿವ ಶ್ರೀರಾಮುಲು ಸೇರಿದಂತೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಓ, ಜಿಲ್ಲಾ ಆರೋಗ್ಯಾಧಿಕಾರಿ ಸೇರಿದಂತೆ ಹಲವಾರು ಅಧಿಕಾರಿಗಳು ಮಾಸ್ಕ್ ಧರಿಸದೇ ಸಭೆಯಲ್ಲಿ ಭಾಗಿಯಾಗಿದ್ರು. ಮಾಸ್ಕ್ ಧರಿಸದೇ ಸಭೆ ನಡೆಸಿದ್ದಲ್ಲದೇ ಸಭೆಯಲ್ಲಿ ಜನರಿಗೆ ಕೊರೊನಾ ಬಗ್ಗೆ ಮುಂಜಾಗ್ರತಾವಾಗಿ ಯಾವ ರೀತಿ ಕ್ರಮ ಕೈಗೊಳ್ಳಬೇಕು ಹಾಗೂ ಲಾಕ್ ಡೌನ್ ವಿಚಾರದಲ್ಲಿ ಮನೆಯಿಂದ ಹೊರಗೆ ಬರಬೇಡಿ ಎಂಬ ನೀತಿ ಪಾಠವನ್ನ ಹೇಳಿದರು.

    ಸಭೆ ಬಳಿಕ ನೂತನವಾಗಿ ರಾಮನಗರದ ಹಳೇ ಕಂದಾಯ ಭವನದಲ್ಲಿ ನಿರ್ಮಿಸಿರುವ ಕೊರೊನಾ ಐಸೊಲೇಷನ್ ವಾರ್ಡಿಗೆ ಭೇಟಿ ನೀಡಿದಾಗಲು ಸಹ ಅಧಿಕಾರಿಗಳು ಹಾಗೂ ಸಚಿವರು ಮಾಸ್ಕ್ ಧರಿಸದೇ ಭೇಟಿ ನೀಡಿದ್ರು.

    ಒಟ್ಟಿನಲ್ಲಿ ಅರಿವು ಮೂಡಿಸಬೇಕಾದ ಆರೋಗ್ಯ ಸಚಿವರು, ಆರೋಗ್ಯ ಅಧಿಕಾರಿಗಳೇ ಇಂತಹ ನಿರ್ಲಕ್ಷ್ಯತನ ತೋರಿದ್ದು ಸಾರ್ವಜನಿಕವಲಯದಲ್ಲಿ ಸಾಕಷ್ಟು ಆಕ್ರೋಶಕ್ಕೂ ಕಾರಣವಾಗಿದೆ.

  • ಕಲಬುರಗಿಯಲ್ಲಿ ಇಂದಿನಿಂದ ಕೊರೊನಾ ಟೆಸ್ಟಿಂಗ್ ಲ್ಯಾಬ್ ಆರಂಭ: ಶ್ರೀರಾಮುಲು

    ಕಲಬುರಗಿಯಲ್ಲಿ ಇಂದಿನಿಂದ ಕೊರೊನಾ ಟೆಸ್ಟಿಂಗ್ ಲ್ಯಾಬ್ ಆರಂಭ: ಶ್ರೀರಾಮುಲು

    – ಉಳಿದ ಜಿಲ್ಲೆಗಳಲ್ಲೂ ಶೀಘ್ರವೇ ಲ್ಯಾಬ್ ಸೌಲಭ್ಯ

    ಬೆಂಗಳೂರು: ಕೊರೊನಾ ಲಕ್ಷಣ ಪತ್ತೆಗೆ ಇಂದಿನಿಂದ ಕಲಬುರಗಿಯಲ್ಲಿ ಪರೀಕ್ಷಾ ಕೇಂದ್ರ ಆರಂಭ ಮಾಡುವುದಾಗಿ ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.

    ವಿಧಾನಸೌಧದಲ್ಲಿ ಶೂನ್ಯವೇಳೆಯಲ್ಲಿ ಕೊರೊನಾ ಕುರಿತು ನಡೆದ ಚರ್ಚೆ ಬಳಿಕ ಸಚಿವ ಶ್ರೀರಾಮುಲು ಉತ್ತರಿಸಿದರು. ಇಂದೇ ಕಲಬುರಗಿಯಲ್ಲಿ ಪ್ರಯೋಗಾಲಯ ಪ್ರಾರಂಭವಾಗುತ್ತಿದೆ ಎಂದು ಹೇಳಿದರು.

    ರಾಜ್ಯದಲ್ಲಿ ಇದೂವರೆಗೆ 5 ಪ್ರಯೋಗಾಲಯಗಳನ್ನು ಪ್ರಾರಂಭಿಸಲಾಗಿದೆ. ಬೆಂಗಳೂರು 2, ಶಿವಮೊಗ್ಗ, ಹಾಸನ ಮತ್ತು ಮೈಸೂರುಗಳಲ್ಲಿ ತಲಾ 1 ಪರಿಕ್ಷಾ ಲ್ಯಾಬ್ ಗಳು ಇವೆ. ಉಳಿದ ಜಿಲ್ಲೆಗಳಲ್ಲೂ ಸದ್ಯದಲ್ಲೇ ಪರೀಕ್ಷಾ ಲ್ಯಾಬ್ ತೆರೆಯುತ್ತೇವೆ. ಬೆಳಗಾವಿ, ಮಂಗಳೂರು, ಬಳ್ಳಾರಿ, ಬೀದರ್, ಹುಬ್ಬಳ್ಳಿ, ರಾಯಚೂರು ಗಳಲ್ಲೂ ಶೀಘ್ರದಲ್ಲೇ ಲ್ಯಾಬ್‍ಗಳು ಬರಲಿವೆ. ಮಂಗಳೂರಿನಲ್ಲಿ ಪ್ರಯೋಗಾಲಯ ಸ್ಥಾಪನೆಗೆ ಉಪಕರಣ ಖರೀದಿಗೆ ಅನುಮತಿ ನೀಡಿದ್ದೇವೆ ಎಂದು ಇದೇ ವೇಳೆ ಆರೋಗ್ಯ ಸಚಿವರು ತಿಳಿಸಿದರು. ಇದನ್ನೂ ಓದಿ: ಮತ್ತೆರಡು ಪಾಸಿಟಿವ್ – ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 13ಕ್ಕೆ ಏರಿಕೆ

    ಭೀತಿಯಲ್ಲಿ ಕಲಬುರಗಿ:
    ಕಲಬುರಗಿಯಲ್ಲಿ ಸಿದ್ದಿಕ್ ಸಾವು ಬಳಿಕ ಭೀತಿ ಹೆಚ್ಚಳವಾಗಿದೆ. ಕೆಮ್ಮು, ನೆಗಡಿ ಬಂದವರೆಲ್ಲ ಭೀತಿಯಿಂದ ಪರೀಕ್ಷೆ ಮಾಡಿಸಿಕೊಳ್ತಿದ್ದಾರೆ. ಹೀಗಾಗಿ ಕಲಬುರಗಿಯಲ್ಲಿ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ತಿದ್ದೇವೆ. ಬಹಳಷ್ಡು ಜನರನ್ನು ಪರೀಕ್ಷಗೆ ಒಳಪಡಿಸುತ್ತಿದ್ದೇವೆ. ಏರ್ ಪೋರ್ಟ್ ಗಳಲ್ಲಿ ಇದೂವರೆಗೆ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಲಾಗಿದೆ ಎಂದು ಸಚಿವರು ಹೇಳಿದರು.

  • ಕಲಬುರಗಿಯಲ್ಲಿ ಮತ್ತೋರ್ವನಿಗೆ ಕೊರೊನಾ ವೈರಸ್- ದೃಢಪಡಿಸಿದ ಶ್ರೀರಾಮುಲು

    ಕಲಬುರಗಿಯಲ್ಲಿ ಮತ್ತೋರ್ವನಿಗೆ ಕೊರೊನಾ ವೈರಸ್- ದೃಢಪಡಿಸಿದ ಶ್ರೀರಾಮುಲು

    ಬೆಂಗಳೂರು: ಕಲಬುರಗಿಯಲ್ಲಿ ಸಾವನ್ನಪ್ಪಿದ ವೃದ್ಧನ ಕುಟುಂಬದಲ್ಲಿ ಒಬ್ಬರಿಗೆ ಕೊರೊನಾ ವೈರಸ್ ತಗುಲಿರೋದು ವರದಿಯಲ್ಲಿ ದೃಢವಾಗಿದೆ.

    ಈ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಶ್ರೀರಾಮುಲು ಅವರು, ಕಲಬುರಗಿಯ 4 ಕೊರೊನಾ ಶಂಕಿತರಲ್ಲಿ 3 ವ್ಯಕ್ತಿಗಳ ವರದಿ ಈ ಮೊದಲೇ ಬಂದಿದ್ದು, ಇದೀಗ ನಾಲ್ಕನೇ ವ್ಯಕ್ತಿಯ ಕೊರಾನಾ ಪರೀಕ್ಷೆಯ ವರದಿ ಪಾಸಿಟಿವ್ ಎಂದು ಬಂದಿದೆ. ಇವರನ್ನು ಈಗಾಗಲೇ ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ನಿಗಾವಹಿಸಿರುವುದರಿಂದ, ಸೋಂಕಿತರು ಆದಷ್ಟು ಬೇಗ ಗುಣಮುಖರಾಗುತ್ತಾರೆ ಎಂಬ ವಿಶ್ವಾಸವಿದೆ. ನಾಗರಿಕರು ಆತಂಕ ಪಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ.

    ಮುಂಜಾಗ್ರತ ಕ್ರಮವಾಗಿ ಈಶಾನ್ಯ ಸಾರಿಗೆಯ 90 ಬಸ್‍ಗಳ ಸೇವೆಯನ್ನು ನಿನ್ನೆಯಿಂದಲ್ಲೆ ನಿಲ್ಲಿಸಲಾಗಿತ್ತು. ಇದಾದ ಬಳಿಕ ಇಂದು ಸಹ 100ಕ್ಕು ಹೆಚ್ಚು ಬಸ್‍ಗಳ ಸೌಲಭ್ಯವನ್ನು ಕಡಿತ ಮಾಡಲಾಗಿದೆ. ಹೀಗಾಗಿ, ಕಲಬುರಗಿಯ ಬಸ್ ನಿಲ್ದಾಣ ಬಹುತೇಕ ಸಬ್ಧವಾಗಿತ್ತು. ಪ್ರಯಾಣಿಕರಿಲ್ಲದೆ ಇಡೀ ಕಲಬುರಗಿಯ ರೈಲ್ವೇ ನಿಲ್ದಾಣವೇ ಖಾಲಿ ಖಾಲಿಯಾಗಿತ್ತು. ಬೇರೆ ಬೇರೆ ಜಿಲ್ಲೆ ಮತ್ತು ರಾಜ್ಯಗಳಿಗೇ ಹೋಗುವವರ ಮೇಲೆ ಆರೋಗ್ಯ ಇಲಾಖೆ ತೀವ್ರ ನಿಗಾ ಇಟ್ಟಿದೆ. ಪ್ರತಿ ಒಬ್ಬರ ಆರೋಗ್ಯ ತಪಾಸಣೆ ಮಾಡಿ, ಏನೂ ಸಮಸ್ಯೆ ಇಲ್ಲ ಅಂದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗ್ತಿದೆ. ಜೊತೆಗೆ ಇಡೀ ರೈಲು ನಿಲ್ದಾಣವನ್ನು ಫಿನಾಯಿಲ್ ನಿಂದ ಸ್ವಚ್ಛ ಮಾಡಲಾಗಿದೆ.

    ಕಲಬುರಗಿ ನಗರದಲ್ಲಿ ನಿನ್ನೆಯಿಂದ ವಾಸ್ತವ್ಯ ಹೂಡಿದ್ದ ಆರೋಗ್ಯ ಸಚಿವ ಶ್ರೀರಾಮುಲು ಅವರು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಭೆ ನಡೆಸಿದರು. ಮುಂಜಾಗೃತ ಕ್ರಮಗಳ ಬಗ್ಗೆ ಮಾಹಿತಿ ಪಡೆದು, ಜೀಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಐಸೋಲೆಟೆಡ್ ವಾರ್ಡ್‍ಗಳನ್ನು ಪರಿಶೀಲಿಸಿದರು. ತದನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಸರ್ಕಾರ ಎಲ್ಲ ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಂಡಿದ್ದು, ಜನರು ಭಯಪಡಬೇಕಾಗುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

  • ಬೆಳಗ್ಗೆಯಿಂದ ಸಂಜೆಯವರೆಗೆ ಬಾಣಂತಿಯರನ್ನ ಬಿಸಿಲಿನಲ್ಲಿ ಕಾಯಿಸಿದ ವೈದ್ಯರು: ಪುಟ್ಟ ಕಂದಮ್ಮಗಳ ಪರದಾಟ

    ಬೆಳಗ್ಗೆಯಿಂದ ಸಂಜೆಯವರೆಗೆ ಬಾಣಂತಿಯರನ್ನ ಬಿಸಿಲಿನಲ್ಲಿ ಕಾಯಿಸಿದ ವೈದ್ಯರು: ಪುಟ್ಟ ಕಂದಮ್ಮಗಳ ಪರದಾಟ

    – ಆರೋಗ್ಯ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿ ವೈದ್ಯರ ಮಹಾ ನಿರ್ಲಕ್ಷ್ಯ
    – ಸಂತಾನಹರಣ ಶಸ್ತ್ರಚಿಕಿತ್ಸೆ ಪ್ರತಿ ಬುಧವಾರ ನಿಗದಿಯಾಗಿದ್ದರೂ ಬೇಜವಾಬ್ದಾರಿ

    ರಾಯಚೂರು: ಆರೋಗ್ಯ ಸಚಿವ ಶ್ರೀರಾಮುಲು ಉಸ್ತುವಾರಿ ವಹಿಸಿಕೊಂಡಿರುವ ಜಿಲ್ಲೆಯಲ್ಲೇ ವೈದ್ಯಕೀಯ ಸೇವೆ ಹಳ್ಳ ಹಿಡಿದಿದೆ. ರಾಯಚೂರಿನಲ್ಲಿ ವೈದ್ಯರಿಗೆ ಬಾಣಂತಿಯರು ಎನ್ನುವ ಕನಿಷ್ಠ ಸೌಜನ್ಯವೂ ಇಲ್ಲದೇ ಅಮಾನವೀಯತೆ ಮೆರೆದಿದ್ದಾರೆ. ಪುಟ್ಟ ಕಂದಮ್ಮಗಳೊಂದಿಗೆ ಬೆಳಗ್ಗೆಯಿಂದ ಸಂಜೆವರೆಗೆ ಕಾಯುತ್ತ ಕುಳಿತ ಬಾಣಂತಿಯರ ಕಷ್ಟಕ್ಕೆ ಕೊನೆಯೇ ಇಲ್ಲದಂತಾಗಿದೆ.

    ರಾಯಚೂರು ನಗರದಲ್ಲಿರುವ ನಗರ ಪ್ರಸೂತಿ ಆಸ್ಪತ್ರೆಯಲ್ಲಿ ಪ್ರತಿ ಬುಧವಾರ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ. ಈ ಮೊದಲು ಬಾಣಂತಿಯರಿಗೆ ಶಸ್ತ್ರ ಚಿಕಿತ್ಸೆಗಾಗಿ ಸಮಯ ನಿಗಿದಿ ಮಾಡದೆ ಇರುವುದರಿಂದ ಪ್ರತಿವಾರ ನೂರಾರು ಬಾಣಂತಿಯರು ಶಸ್ತ್ರ ಚಿಕಿತ್ಸೆಗೆ ಬರುತ್ತಿದ್ದರು. ವಾರದಲ್ಲಿ ಕೇವಲ 30 ಜನರಿಗೆ ಮಾತ್ರ ಆಪರೇಷನ್ ಮಾಡುವದರಿಂದ ಉಳಿದವರು ವಾಪಸ್ ಆಗುತ್ತಿದ್ದರು. ಆಗಲು ಬಾಣಂತಿಯರ ಕಷ್ಟ ಹೇಳತೀರದಾಗಿತ್ತು. ಆ ನಂತರ ಪ್ರತಿ ವಾರ ಆಪರೇಷನ್ ಮಾಡಿಸಿಕೊಳ್ಳಲು ಬರುವವರಿಗೆ ಆಶಾ ಕಾರ್ಯಕರ್ತೆಯರ ಮುಖಾಂತರ ಮಾಹಿತಿ ನೀಡಲಾಗುತ್ತಿದೆ. ಅದೇ ರೀತಿ ಈ ಬುಧವಾರ ರಾಯಚೂರು ಜಿಲ್ಲೆಯ ಬೇರೆ ಬೇರೆ ಕಡೆಯಿಂದ ಬಂದ 30 ಬಾಣಂತಿಯರು ಪರದಾಡುವಂತಾಗಿತ್ತು.

    ಶಸ್ತ್ರ ಚಿಕಿತ್ಸೆಗಾಗಿ ಬರುವ ತಾಯಂದಿರುವ ಏನು ತಿನ್ನದೆ ಬರಬೇಕು. ಅದರಂತೆ ಬೆಳಗ್ಗೆ ಗಂಟೆಗೆ ಬಂದ ಬಾಣಂತಿಯರಿಗೆ ಆಪರೇಷನ್ ಮಾಡಲು ವೈದ್ಯರು ಬರಲೇ ಇಲ್ಲ. ಇದರಿಂದ ಹಸಿವಿನಿಂದ ಬಾಣಂತಿಯರು ಹಾಗೂ ಶಿಶುಗಳು ಪರದಾಡುವಂತಾಯಿತು. ಆಸ್ಪತ್ರೆಯ ಹೊರಗಡೆ ಟಿನ್ ಶೆಡ್‍ಗೆ, ಮರ ಗಿಡಗಳಿಗೆ ಸೀರೆ ಕಟ್ಟಿಕೊಂಡು ಮಕ್ಕಳನ್ನು ಮಲಗಿಸಬೇಕಾದ ಪರಸ್ಥಿತಿ ಎದುರಿಸಿದ್ದಾರೆ. ಆಸ್ಪತ್ರೆಯಲ್ಲಿ ಕೇಳಿದರೆ ಸಿಬ್ಬಂದಿ ಆಪರೇಷನ್ ಮಾಡುವ ವೈದ್ಯರು ಬಂದಿಲ್ಲ ಅಂತ ಹೇಳಿ ತಲೆಕೆಡಿಸಿಕೊಂಡಿಲ್ಲ. ಇದರಿಂದಾಗಿ ಸಂಜೆ ವೇಳೆ ಬಾಣಂತಿಯರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಓರ್ವ ವೈದ್ಯ ಬಂದಿದ್ದಾರೆ. ಆದರೆ ಕೆಲವರಿಗೆ ಶಸ್ತ್ರಚಿಕಿತ್ಸೆ ಮಾಡಿ ಉಳಿದವರನ್ನ ವಾಪಸ್ ಕಳುಹಿಸಲಾಗಿದೆ.

    ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದಾಗ ಶಸ್ತ್ರ ಚಿಕಿತ್ಸೆ ಮಾಡುವ ರಿಮ್ಸ್ ವೈದ್ಯ ಶಾಹ ಆಲಂ ಅವರನ್ನು ಸಂಪರ್ಕಿಸಿ ಕಳುಹಿಸಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಬೇಕಾದ ವೈದ್ಯರು ಕೊನೆಯ ಗಳಿಗೆಯಲ್ಲಿ ಬೇರೆ ಕೆಲಸವಿದೆ ಅಂತ ಆಸ್ಪತ್ರೆಗೆ ಬಂದಿಲ್ಲ. ಮತ್ತೊಬ್ಬ ವೈದ್ಯರನ್ನಾದರೂ ನೇಮಿಸಬೇಕಾದ ತಾಲೂಕು ವೈದ್ಯಾಧಿಕಾರಿ ಡಾ.ಶಾಕೀರ್ ಪ್ರತಿಬಾರಿಯಂತೆ ಈ ಬಾರಿಯೂ ನಿರ್ಲಕ್ಷ್ಯ ಮೆರೆದಿದ್ದಾರೆ. ಹೀಗಾಗಿ ತಾಲೂಕು ವೈದ್ಯಾಧಿಕಾರಿ ಹಾಗೂ ಶಸ್ತ್ರಚಿಕಿತ್ಸೆ ಮಾಡಬೇಕಿದ್ದ ವೈದ್ಯರಿಗೆ ಶೋಕಾಸ್ ನೋಟಿಸ್ ನೀಡುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ಹೇಳಿದ್ದಾರೆ.

    ಆರೋಗ್ಯ ಸಚಿವರೇ ಉಸ್ತುವಾರಿ ವಹಿಸಿಕೊಂಡಿರುವ ಜಿಲ್ಲೆಯಲ್ಲೇ ಪದೇ ಪದೇ ಇಂತಹ ಘಟನೆಗಳು ಮರುಕಳುಸುತ್ತಿರುವುದು ನಿಜಕ್ಕೂ ದುರಂತವೇ ಸರಿ. ಈಗಲಾದ್ರೂ ಸಂಬಂಧಪಟ್ಟವರು ಎಚ್ಚೆತ್ತು ಕೆಲಸ ಮಾಡಬೇಕಿದೆ. ಬಾಣಂತಿಯರ ಕಷ್ಟಕ್ಕೆ ಸ್ಪಂದಿಸಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

  • ಉಪಮುಖ್ಯಮಂತ್ರಿ ಸ್ಥಾನ ಸಿಗದಿರುವುದಕ್ಕೆ ಯಾವುದೇ ಅಸಮಾಧಾನವಿಲ್ಲ: ಶ್ರೀರಾಮುಲು

    ಉಪಮುಖ್ಯಮಂತ್ರಿ ಸ್ಥಾನ ಸಿಗದಿರುವುದಕ್ಕೆ ಯಾವುದೇ ಅಸಮಾಧಾನವಿಲ್ಲ: ಶ್ರೀರಾಮುಲು

    ಮಡಿಕೇರಿ: ಸಚಿವ ಸಂಪುಟ ವಿಸ್ತರಣೆ ಸಂದರ್ಭ ಉಪಮುಖ್ಯಮಂತ್ರಿ ಸ್ಥಾನ ಸಿಗದಿರುವುದಕ್ಕೆ ಯಾವುದೇ ಅಸಮಾಧಾನವಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

    ಮಡಿಕೇರಿಯಲ್ಲಿ ಮಾತನಾಡಿದ ಅವರು, ಬೇರೆ ಪಕ್ಷಗಳಿಂದ ಶಾಸಕರು ಬರುವಾಗ ಅವರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಲಾಗಿತ್ತು. ಅದರಂತೆ ಅವರಿಗೆ ಸಚಿವ ಸ್ಥಾನ ಕೊಡಲಾಗುತ್ತಿದೆ. ನಾನು ಕಾರ್ಯಕ್ರಮದಿಂದ ಹೊರಗುಳಿದಿರುವುದಕ್ಕೆ ಬೇರೆ ಅರ್ಥ ಬೇಡ. ಮನೆಯಲ್ಲಿ ನನ್ನ ಮಗಳ ಲಗ್ನವಿರುವುದರಿಂದ ಅದರ ತಯಾರಿಯಲ್ಲಿ ನಾನಿದ್ದೇನೆ ಎಂದರು.

    ಇನ್ನು ಇದರಲ್ಲಿ ಮೂಲ ಬಿಜೆಪಿಗರು, ವಲಸಿಗ ಬಿಜೆಪಿಗರು ಎನ್ನುವ ಪ್ರಶ್ನೆಯೇ ಇಲ್ಲ. ಅವರೆಲ್ಲರೂ ಪಕ್ಷದ ಸದಸ್ಯತ್ವ ಪಡೆದು ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ. ಅವರಿಗೆ ಸಚಿವ ಸ್ಥಾನ ಕೊಡಲಾಗುತ್ತಿದೆ. ನಮ್ಮ ನಾಯಕರಾದ ಯಡಿಯೂರಪ್ಪನವರು ಅದನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದು ಹೇಳಿದರು.

    ನೀವು ಉಪಮುಖ್ಯಮಂತ್ರಿ ಸ್ಥಾನದ ಅಕ್ಷಾಂಕ್ಷಿಯಾಗಿದ್ದವರು ಎಂಬ ಪ್ರಶ್ನೆಗೆ ಪಕ್ಷ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಪ್ರತಿಕ್ರಿಯಿಸಿದರು.