ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 437 ಡೆಂಗ್ಯೂ ಪ್ರಕರಣಗಳು (Dengue Case) ವರದಿಯಾಗಿದ್ದು, ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 388ಕ್ಕೇರಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 8,658ಕ್ಕೆ ಏರಿಕೆಯಾಗಿದೆ.
ಬೆಂಗಳೂರು ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ 165 ಹೊಸ ಕೇಸ್‌ಗಳು ದಾಖಲಾಗಿದ್ದು, ಸದ್ಯ 91 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ಹಂಚಿಕೊಂಡಿದೆ. ಕಳೆದ 24 ಗಂಟೆಗಳಲ್ಲಿ 2,704 ಡೆಂಗ್ಯೂ ಟೆಸ್ಟ್ ನಡೆಸಲಾಗಿದ್ದು, ಈ ಪೈಕಿ 437 ಜನರಿಗೆ ಪ್ರಕರಣ ಧೃಢವಾಗಿದೆ. ಈವರೆಗೆ ಒಟ್ಟು 63,741 ಮಂದಿಗೆ ಡೆಂಗ್ಯೂ ಪರೀಕ್ಷೆ ನಡೆಸಲಾಗಿದೆ. ಇದನ್ನೂ ಓದಿ: ಪ್ರತಿವರ್ಷ ಜೂನ್ 25ರಂದು ʻಸಂವಿಧಾನ ಹತ್ಯಾ ದಿವಸ್ʼ ಆಚರಣೆ – ಅಮಿತ್ ಶಾ ಘೋಷಣೆ
ಎಲ್ಲೆಲ್ಲಿ ಎಷ್ಟು ಕೇಸ್?
ಬಿಎಂಪಿ ವ್ಯಾಪಿಯಲ್ಲಿ 165, ಬೆಂಗಳೂರು ನಗರ 10, ಬೆಂಗಳೂರು ಗ್ರಾಮಾಂತರ 5, ರಾಮನಗರ 14, ಕೋಲಾರ 19, ಚಿಕ್ಕಬಳ್ಳಾಪುರ 7, ತುಮಕೂರು 5, ಚಿತ್ರದುರ್ಗ 3, ದಾವಣಗೆರೆ 24, ಬೆಳಗಾವಿ 32, ಗದಗ 15, ಉತ್ತರ ಕನ್ನಡ 1, ಕಲಬುರಗಿ 20, ಬೀದರ್ 10, ಬಳ್ಳಾರಿ 4, ವಿಜಯನಗರ 1, ಕೊಪ್ಪಳ 3, ಮೈಸೂರು 17, ಮಂಡ್ಯ 47, ಹಾಸನ 6, ಉಡುಪಿ 10, ಚಿಕ್ಕಮಗಳೂರು 10, ಕೊಡಗು 9 ಕೇಸ್ ಪತ್ತೆಯಾಗಿವೆ. ಶುಕ್ರವಾರ ಯಾವುದೇ ಮರಣ ಪ್ರಕರಣ ದಾಖಲಾಗಿಲ್ಲ. ಒಟ್ಟು ಮರಣ ಸಂಖ್ಯೆ 7 ಇದೆ.
ಮಾರ್ಗಸೂಚಿ ಏನು?
1. ಒಂದೇ ಸ್ಥಳದಲ್ಲಿ ಎರಡು ಅಥವಾ ಮೂರು ಡೆಂಗ್ಯೂ ಕೇಸ್ ಕಂಡುಬಂದರೆ ಹಾಟ್ ಸ್ಪಾಟ್ ಅಂತ ಪರಿಗಣನೆ
2. ಹಾಟ್‌ಸ್ಪಾಟ್‌ಗಳಲ್ಲಿ ಲಾರ್ವಾ ನಾಶ ಚಟುವಟಿಕೆಯನ್ನು ತೀವ್ರಗೊಳಿಸುವುದು, ಒಳಾಂಗಣ/ಹೊರಾಂಗಣದಲ್ಲಿ ಲಾರ್ವಾನಾಶಕಗಳ ಬಳಕೆ ಹಾಗೂ ಒಳಾಂಗಣದಲ್ಲಿ ಡೆಂಗ್ಯೂ ನಾಶಕವನ್ನು ಸಿಂಪಡಿಸಿ ಮನೆಯ ಸದಸ್ಯರನ್ನ 30 ನಿಮಿಷಗಳ ಕಾಲ ಮನೆಯಿಂದ ಹೊರಗಡೆ ಇರುವಂತೆ ಸೂಚಿಸುವುದು
3. ಡೆಂಗ್ಯೂ ಪಾಸಿಟಿವ್ ಆದ ಸ್ಥಳಗಳಲ್ಲಿ ಫೀವರ್ ಕ್ಲಿನಿಕ್‌ಗಳನ್ನು ತುರ್ತಾಗಿ ಸಕ್ರೀಯಗೊಳಿಸಬೇಕು.
4. ಹಾಟ್‌ಸ್ಪಾಟ್ ಪ್ರದೇಶಗಳಲ್ಲಿ ಬಿಪಿಎಲ್ ಕುಟುಂಬಗಳಿಗೆ ಸೊಳ್ಳೆ ನಿರೋಧಕ, ಬೇವಿನ ಎಣ್ಣೆ ವಿತರಣೆ ಖಚಿತಪಡಿಸಿಕೊಳ್ಳುವುದು ಹಾಗೂ ಕೈ, ಕಾಲು – ಕುತ್ತಿಗೆಯ ಭಾಗದಲ್ಲಿ ಹಚ್ಚಿಕೊಳ್ಳುವಂತೆ ತಿಳಿಸುವುದು.
5. ಡೆಂಗ್ಯೂ ಪಾಸಿಟಿವ್ ಆದ ವ್ಯಕ್ತಿಯನ್ನ ಜ್ವರ ಕಾಣಿಸಿಕೊಂಡ ದಿನದಿಂದ 14 ದಿನಗಳ ಕಾಲ ಅನುಪಾಲನೆ ಮಾಡುವುದು
6. ಬೇವಿನ ಎಣ್ಣೆ ಇಲ್ಲದೇ ಹೋದರೆ ಸಿಟ್ರೋನೆಲ್ ಆಯಿಲ್, ಲೆಮನ್ ಗ್ರೇಸ್ ಆಯಿಲ್ ಅಥವಾ ಡೀಟ್ ಆಧಾರಿತ ಕ್ರೀಂ ಆಯಿಲ್‌ಗಳನ್ನ ವಿತರಣೆ ಮಾಡಬೇಕು
7. ಡೆಂಗ್ಯೂ ಪ್ರಕರಣಗಳ ನಿರ್ವಹಣೆಗಾಗಿ ತಾಲ್ಲೂಕು ಮತ್ತು ಜಿಲ್ಲಾ ಆಸ್ಫತ್ರೆಗಳಲ್ಲಿ 5 ರಿಂದ 10 ಹಾಸಿಗೆಗಳನ್ನು ಮೀಸಲಿಡಬೇಕು.
8. ಡೆಂಗ್ಯೂ ಜ್ವರ ಪ್ರಕರಣಗಳ ಪರೀಕ್ಷೆ, ಚಿಕಿತ್ಸೆ ಹಾಗೂ ನಿರ್ವಹಣಾ ಸೌಲಭ್ಯವನ್ನು ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿರುವ ಎಲ್ಲಾ ಆರೋಗ್ಯ ಸಂಸ್ಥೆಗಳು ಎಲ್ಲರಿಗೂ ಸಂಪೂರ್ಣ ಉಚಿತವಾಗಿ ನೀಡಬೇಕು.
9. ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಟೆಸ್ಟಿಂಗ್ ಕಿಟ್, ಅಗತ್ಯ ಪ್ರಮಾಣದ ಔಷಧಿ ಹಾಗೂ IV Fluids ಔಷಧ ದಾಸ್ತಾನು ಲಭ್ಯತೆಯನ್ನು ಖಚಿತಪಡಿಸಬೇಕು. ಜಿಲ್ಲಾವಾರು ಸರ್ಕಾರಿ ಹಾಗೂ ಖಾಸಗಿ ರಕ್ತನಿಧಿಗಳಿಂದ ಪ್ಲೇಟ್‌ಲೆಟ್, ಪ್ಲಾಸ್ಮಾ ಹಾಗೂ ಇತರ ಕಾಂಪೊನೆಂಟ್‌ಗಳ ಬಗ್ಗೆ ಪ್ರತಿದಿನ ಮಾಹಿತಿ ನೀಡಬೇಕು.
10. ಕಡ್ಡಾಯವಾಗಿ ಡೆಂಗ್ಯೂ ಜ್ವರ ನಿರ್ವಹಣೆ ಸಂಬಂಧ ಶಿಷ್ಟಾಚಾರ ಪಾಲನೆ ಮಾಡಬೇಕು.
– ಡೆಂಗ್ಯೂ ಪತ್ತೆಗೆ ಟೆಸ್ಟಿಂಗ್ ಕಿಟ್ ವಿತರಣೆ – ದಿನೇಶ್ ಗುಂಡೂರಾವ್
ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು (Dengue Case) ಹೆಚ್ಚುತ್ತಿರುವ ಹಿನ್ನೆಲೆ ವಿಧಾನಸೌಧದಲ್ಲಿಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಯಿತು. ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಡೆಂಗ್ಯೂ ನಿಯಂತ್ರಣಕ್ಕೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಯಿತು.
ಗ್ರಾಮೀಣ ಭಾಗದಲ್ಲೇ ಕೇಸ್ ಹೆಚ್ಚು:
ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಮೊದಲೆಲ್ಲಾ ಡೆಂಗ್ಯೂ ಪ್ರಕರಣ ಒಂದು ವರ್ಷ ಹೆಚ್ಚಿದ್ದರೆ, ಮುಂದಿನ ವರ್ಷ ಇಳಿಕೆಯಾಗುತ್ತಿತ್ತು. ಆದ್ರೆ ಈ ವರ್ಷ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಪ್ರಸಕ್ತ ವರ್ಷದ ಜನವರಿಯಿಂದ 6,187 ಕೇಸ್ ದಾಖಲಾಗಿದೆ. ಕಳೆದ ವರ್ಷ ಇದೇ ಸಮಯಕ್ಕೆ 2,900 ಕೇಸ್ ದಾಖಲಾಗಿತ್ತು. ಒಟ್ಟಾರೆ ದಾಖಲಾಗಿರುವ ಪ್ರಕರಣಗಳಲ್ಲಿ 56% ಗ್ರಾಮೀಣ ಭಾಗದಲ್ಲಿ ಪತ್ತೆಯಾಗಿದೆ, ನಗರ ಪ್ರದೇಶಗಳಲ್ಲಿ 44% ಪಾಸಿಟಿವ್ ಆಗಿದೆ. 6 ಮಂದಿ ಸಾವನ್ನಪ್ಪಿದ್ದಾರೆ. ಅವರು ಸಹ ಬೇರೆ ಬೇರೆ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ವಿವರಿಸಿದರು.
ರಸ್ತೆಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ಹೆಚ್ಚಾಗಿ ನೀರು ನಿಲ್ಲುತ್ತಿರುವುದೇ ಇದಕ್ಕೆ ಕಾರಣ. ಅದರಲ್ಲೂ ಬೆಂಗಳೂರು ನಗರ (Bengaluru City) ಡೆಂಗ್ಯೂ ಪ್ರಕರಣಗಳ ಏರಿಕೆಗೆ ಸೂಕ್ತ ಪ್ರದೇಶವಾದಂತೆ ಕಾಣ್ತಿದೆ. ನಿರಂತರವಾಗಿ ಮಳೆ ಬಂದರೆ ಕೇಸ್ ಕಡಿಮೆ ಆಗುತ್ತದೆ. ಅದಕ್ಕಾಗಿ ಟೆಸ್ಟಿಂಗ್ ಕಿಟ್ (Dengue Testing Kit) ಸರಬರಾಜು ಮಾಡ್ತಾ ಇದ್ದೇವೆ. ಇದರೊದಿಗೆ ಪ್ಯಾರಸೆಟಮಲ್ ಮಾತ್ರೆ ಕೊಡಬಹುದು, ಜೊತೆಗೆ ಪ್ಲೇಟ್‌ಲೆಟ್ಸ್ ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆಗಳು ಕೇಸ್‌ಗಳನ್ನ ವರದಿ ಮಾಡ್ಬೇಕು:
ಡೆಂಗ್ಯೂ ಪ್ರಕರಣಗಳ ಬಗ್ಗೆ ಅನೇಕ ಖಾಸಗಿ ಆಸ್ಪತ್ರೆಗಳು ವರದಿ ಮಾಡುತ್ತಿಲ್ಲ. ಐಎಹೆಚ್ ವೆಬ್‌ಸೈಟ್‌ನಲ್ಲಿ ವರದಿ ಮಾಡುತ್ತಿಲ್ಲ. ಸದ್ಯಕ್ಕೆ 6,187 ಕೇಸ್ ಇದೆ. ಇದರ ಸಂಖ್ಯೆ ಹೆಚ್ಚಿರಬಹುದು. ಹಾಗಾಗಿ ಖಾಸಗಿ ಆಸ್ಪತ್ರೆಗಳು ವರದಿ ಮಾಡುವಂತೆ ಸೂಚಿಸಿದ್ದೇವೆ. ಜೊತೆಗೆ ತಪ್ಪು ಮಾಹಿತಿ ಹರಡಬಾರದು ಎಂಬ ಕಾರಣಕ್ಕೆ ದಿನನಿತ್ಯ ಡೆಂಗ್ಯೂ ಬುಲೆಟಿನ್ ಬಿಡುಗಡೆ ಮಾಡ್ತೆವೆ. ನಗರಪಾಲಿಕೆಗಳು ಪ್ರತಿ ನಗರದಲ್ಲೂ ಮನೆ ಮನೆ ಸರ್ವೆ ಮಾಡುವಂತೆ ಸೂಚನೆ ನೀಡಿದ್ದೇವೆ. ಪ್ರತಿ ಶುಕ್ರವಾರ ಡೆಂಗ್ಯೂ ಬಗ್ಗೆ ತಪಾಸಣೆಗೆ ನಿಗಾವಹಿಸಲು ತಿಳಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಶಾಲೆಗಳಲ್ಲೂ ಜಾಗೃತಿ ಮೂಡಿಸಲು ತಯಾರಿ:
ಡೆಂಗ್ಯೂ ಎಲ್ಲೆಲ್ಲಿ ಪಾಸಿಟಿವ್ ಪ್ರಕರಣಗಳು ಬರುತ್ತವೆ, ಅಲ್ಲಿ ಮಾನಿಟರ್ ಮಾಡಲು ಸೂಚಿಸಿದ್ದೇವೆ. ಲಾರ್ವ ನಾಶ ಮಾಡಬೇಕು, ಫಾಗಿಂಗ್ ಮಾಡಬೇಕು. ಜೊತೆಗೆ ಬೆಂಗಳೂರು ನಗರದಲ್ಲಿರುವ ಕ್ಷೇಮಾಭಿವೃದ್ಧಿ ಸಂಘಗಳ ಸಭೆ ಕರೆದು ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಜೊತೆಗೆ ವೈದ್ಯಕೀಯ ಅಧಿಕಾರಿಗಳು ಹತ್ತಿರದ ಶಾಲೆಗಳಿಗೆ ತೆರಳಿ ವಿಜ್ಞಾನ ಶಿಕ್ಷಕರಿಂದ ಮಕ್ಕಳಿಗೆ ಜಾಗೃತಿ ಮೂಡಿಸುವ ಬಗ್ಗೆ ತರಬೇತಿ ನೀಡುವಂತೆ ಸೂಚಿಸಿದ್ದೇವೆ.
ಬೆಂಗಳೂರು: ಕಬಾಬ್ (Kabab) ತಯಾರಿಕೆಯಲ್ಲಿ ಕೃತಕ ಬಣ್ಣಗಳ ಬಳಕೆಯನ್ನು ನಿಷೇಧಿಸಿ (Artificial colour Ban) ಸರ್ಕಾರ ಆದೇಶ ಹೊರಡಿಸಿದೆ. ನಿಯಮ ಉಲ್ಲಂಘಿಸಿದರೆ 7 ವರ್ಷಗಳವರೆಗೆ ಗರಿಷ್ಠ ಶಿಕ್ಷೆ ಹಾಗೂ 10 ಲಕ್ಷ ರೂ.ವರೆಗೆ ದಂಡ ವಿಧಿಸಲು ಸರ್ಕಾರ ಮುಂದಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಇಲಾಖೆ ರಾಜ್ಯಾದ್ಯಂತ 39 ಕಬಾಬ್ ಮಾದರಿಯನ್ನು ಸಂಗ್ರಹಿಸಿ, ಕ್ವಾಲಿಟಿ ಚೆಕ್ ಮಾಡಿ 8 ಕಬಾಬ್ ಮಾದರಿಗಳಲ್ಲಿ ಕೃತಕ ಬಣ್ಣ ಬಳಕೆ ಮಾಡಿರುವುದನ್ನು ಪತ್ತೆ ಮಾಡಿತ್ತು. ಗುಣಮಟ್ಟ ಪರೀಕ್ಷೆಯಲ್ಲಿ ಸನ್‍ಸೆಟ್ ಯೆಲ್ಲೋ, ಕಾರ್ಮೋಸಕಿನ್‍ನಂತಹ ರಾಸಯನಿಕ ಅಂಶ ಇರುವುದು ಪತ್ತೆಯಾಗಿತ್ತು. ಈ ಎರಡು ಅಂಶಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಎಂದು ವರದಿ ಬಂದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ: ವಿದ್ಯಾರ್ಥಿನಿ ಪ್ರಬುದ್ಧಾ ಕೊಲೆ ಕೇಸ್ ಸಿಐಡಿ ಹೆಗಲಿಗೆ – ಸಿದ್ದರಾಮಯ್ಯ ಸೂಚನೆ
ಇತ್ತೀಚೆಗೆ ಕಲರ್ ಕಾಟನ್ ಕ್ಯಾಂಡಿಯನ್ನು ನಿಷೇಧ ಮಾಡಿ ಆಹಾರ ಮತ್ತು ಸುರಕ್ಷತಾ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದರು. ಇದರ ಜೊತೆಗೆ ಗೋಬಿ ಮಂಚೂರಿಯಲ್ಲಿ ಕೂಡ ಕೃತಕ ಬಣ್ಣಗಳನ್ನು ಬಳಸುವುದನ್ನು ನಿಷೇಧಿಸಲಾಗಿತ್ತು. ಈ ಸಂದರ್ಭದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಮಾತನಾಡಿ, ಇತ್ತೀಚೆಗೆ ಕ್ಯಾನ್ಸರ್ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕೃತಕ ಬಣ್ಣಗಳು ಕಾರಣ ಎಂಬ ಮಾಹಿತಿ ಹಂಚಿಕೊಂಡಿದ್ದರು.
ಗೋಬಿ ಮಂಚೂರಿಗೆ ರಾಸಾಯನಿಕ ಬಣ್ಣ ನಿಷೇಧಕ್ಕೂ ಮುನ್ನ, ಬೀದಿ ಬದಿ, ಹೊಟೇಲ್‍ಗಳಲ್ಲಿ ಗೋಬಿಯ 171 ಮಾದರಿ ಸಂಗ್ರಹ ಮಾಡಲಾಯಿತು. ಇದರಲ್ಲಿ 107 ಕೃತಕ ಬಣ್ಣ ಬಳಕೆ ಆಗಿದೆ. ರೋಡಮೈನ್ ಬಿ, ಟಾರ್ ಟ್ರಾಸೈನ್ ಸ್ಯಾಂಪಲ್ ಅಂಶ ಪತ್ತೆಯಾಗಿತ್ತು. ರೋಡಮೈನ್ ಕ್ಯಾನ್ಸರ್‌ಗೆ ಕಾರಣವಾಗಿದೆ ಎಂದು ಅವರು ಹೇಳಿದ್ದರು. ಇದನ್ನೂ ಓದಿ: ಇನ್ಮೇಲೆ ರಾಜ್ಯದಲ್ಲಿ ಕಲರ್ ಕಾಟನ್ ಕ್ಯಾಂಡಿ ಬ್ಯಾನ್- ಗೋಬಿಗೂ ಕೃತಕ ಬಣ್ಣ ಬಳಸುವಂತಿಲ್ಲ
ಮಂಡ್ಯ: ಇತ್ತೀಚೆಗಷ್ಟೇ ದೊಡ್ಡ ಪ್ರಮಾಣದಲ್ಲಿ ಮಂಡ್ಯದ (Mandya ) ಆಲೆಮನೆಯೊಂದರಲ್ಲಿ ಭ್ರೂಣಹತ್ಯೆ (Feticide) ನಡೆದ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ಅದೇ ರೀತಿಯ ಪ್ರಕರಣವೊಂದು ಬಯಲಾಗಿದ್ದು, ಭ್ರೂಣಹತ್ಯೆ ನಡೆಯುತ್ತಿದ್ದ ವೇಳೆಯೇ ಅಧಿಕಾರಿಗಳು ಆರೋಗ್ಯ ಇಲಾಖೆಯಲ್ಲಿ (Health Department) ಕಾರ್ಯನಿರ್ವಹಿಸುತ್ತಿದ್ದ ದಂಪತಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಆನಂದ್ ಹಾಗೂ ಅಶ್ವಿನಿ ಎಂದು ಗುರುತಿಸಲಾಗಿದೆ. ಇದರೊಂದಿಗೆ ಮತ್ತೋರ್ವ ಮಹಿಳೆಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಆನಂದ್ ಅಂಬುಲೆನ್ಸ್ ಡ್ರೈವರ್ ಆಗಿದ್ದು, ಅಶ್ವಿನಿ ತಾಲೂಕು ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಡಿ ಗ್ರೂಪ್ ನೌಕರರಾಗಿದ್ದಾರೆ. ಆನಂದ್‍ಗೆ ಪಾಂಡವಪುರದಲ್ಲಿ ಅಲರ್ಟ್ ಆಗಿದ್ದ ಸರ್ಕಾರಿ ಕ್ವಾಟರ್ಸ್‍ನಲ್ಲಿ ಆರೋಪಿಗಳು ಭ್ರೂಣಲಿಂಗ ಪತ್ತೆ ಮಾಡಿ ಹತ್ಯೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಹೃದಯಾಘಾತ- ಶಿಕ್ಷಕ ದುರ್ಮರಣ
ಆರೋಗ್ಯ ಇಲಾಖೆ ಅಧಿಕಾರಿಗಳು, ಪೊಲೀಸರಿಂದ ಜಂಟಿ ಕಾರ್ಯಾಚರಣೆ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಡಿಹೆಚ್‍ಒ ಡಾ.ಮೋಹನ್, ಟಿಹೆಚ್‍ಒ ಡಾ.ಅರವಿಂದ್ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಮಹಿಳೆಯೋರ್ವರನ್ನು ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಮಹಿಳೆ ಕಿಡ್ನಾಪ್ ಕೇಸ್- ಎ2 ಆರೋಪಿ ಸತೀಶ್ ಬಾಬು 8 ದಿನ ಎಸ್‍ಐಟಿ ಕಸ್ಟಡಿಗೆ
ಬೆಂಗಳೂರು: ಕೂಲ್ ಸಿಟಿ ಅಂತಾನೇ ಕರೆಸಿಕೊಳ್ಳುವ ರಾಜಧಾನಿ ಬೆಂಗಳೂರು (Bengaluru) ಸದ್ಯ ಹಾಟ್ ಸಿಟಿ ಆಗಿ ಬದಲಾಗಿದೆ. ಎಂಥಾ ಬಿಸಿಲಪ್ಪ ಅಂತ ಸಿಟಿ ಜನ ಶಾಪ ಹಾಕೋಕೆ ಶುರು ಮಾಡಿದ್ದಾರೆ. ಹೀಗಾಗಿ ಉರಿಯುವ ಬಿಸಿಲಿನಿಂದ ಎಚ್ಚರ ವಹಿಸುವಂತೆ ಆರೋಗ್ಯ ಇಲಾಖೆ (Health Department) ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ.
ದಿನದಿಂದ ದಿನಕ್ಕೆ ಬೆಂಗಳೂರಿನ ತಾಪಮಾನ ಹೆಚ್ಚಾಗ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ರಾಜ್ಯಕ್ಕೆ ಹೀಟ್ ವೇವ್ ಎಚ್ಚರಿಕೆ ನೀಡಿದೆ. ಬೇಸಿಗೆಯ ಬೇಗೆ ಅಂದುಕೊಂಡಿದ್ದಕ್ಕಿಂತ ಈ ಸಲ ಜಾಸ್ತಿನೇ ಇದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ, ಈ ವರ್ಷ ಬೆಂಗಳೂರು ಮತ್ತಷ್ಟು ಹಾಟ್ ಬದಲಾಗಿದೆ. ಬಿರು ಬಿಸಿಲಿಗೆ ನಗರದ ಜನ ಬಸವಳಿದು ಹೋಗಿದ್ದಾರೆ. ರಾಜ್ಯ ಸೇರಿ ರಾಜಧಾನಿ ಬೆಂಗಳೂರಿನಲ್ಲಿ ತಾಪಮಾನ (Temperature) ಏರಿಕೆ ಕಂಡಿದ್ದು, ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಬೆಳಗ್ಗೆ 11 ರಿಂದ ಸಂಜೆ 4ರ ವರೆಗೆ ಎಚ್ಚರ: ಮುಂದಿನ ದಿನಗಳಲ್ಲಿ ಇದೇ ರೀತಿಯ ಗರಿಷ್ಠ ಬಿಸಿಲು ಇರಲಿದೆ. ಹಾಗಾಗಿ ಕೆಲ ದಿನ ತಾಪಮಾನ ಇಳಿಕೆಯವರೆಗೂ ಬೆಳಗ್ಗೆ 11 ರಿಂದ 4 ಗಂಟೆಯವರೆಗೂ ಹೆಚ್ಚು ಬಿಸಿಲಿಗೆ ಮೈ ಒಡ್ಡದಂತೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ಯಾರು ಎಚ್ಚರ ವಹಿಸಬೇಕು? ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ಇರುವವರು, ಗರ್ಭಿಣಿಯರು, ವೃದ್ಧರು ಮತ್ತು ಮಕ್ಕಳು ರಣ ಬಿಸಿಲಿಗೆ ಮೈ ಒಡ್ಡದಂತೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ದೇಹದ ಉಷ್ಣತೆಯು 40 ಡಿಡ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಾದರೆ ಗಂಭೀರ ಸಮಸ್ಯೆ ಎದುರಾಗುವ ಸಂಭವ ಇದೆ. ಕೆಲವು ಸಂದರ್ಭಗಳಲ್ಲಿ ಹೀಟ್ ಸ್ಟ್ರೋಕ್ ಆಗುವ ಸಾಧ್ಯತೆಗಳೂ ಇವೆ. ಇದು ಜೀವಕ್ಕೆ ಕುತ್ತು ತರುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ಕೆಲವು ದಿನ ತಾಪಮಾನ ಇಳಿಕೆಯವರೆಗೂ 11 ರಿಂದ 4 ಗಂಟೆಯವರೆಗೂ ಹೆಚ್ಚು ಬಿಸಿಲಿಗೆ ಮೈ ಒಡ್ಡದಂತೆ ಆರೋಗ್ಯ ಇಲಾಖೆಯಿಂದ ಸಲಹೆ ನೀಡಿದೆ.
108/102 ಸಹಾಯವಾಣಿಗೆ ಕರೆ ಮಾಡಿ: ದೇಹದಲ್ಲಿ ತಾಪಮಾನ ಏರಿಕೆಯಿಂದ ನಿರ್ಜಲೀಕರಣ ಹಾಗೂ ಉಸಿರಾಟದ ಸಮಸ್ಯೆ ಎದುರಾಗಲಿದೆ. ಹಾಗಾಗಿ ನೀರು, ಮಜ್ಜಿಗೆ, ಫ್ರೆಶ್ ಫ್ರೂಟ್ ಜ್ಯೂಸ್, ದೇಹಕ್ಕೆ ತಂಪು ನೀಡುವ ಹಣ್ಣುಗಳನ್ನು ಹೆಚ್ಚು-ಹೆಚ್ಚು ಸೇವಿಸಲು ವೈದ್ಯರು ಸಲಹೆ ನೀಡಿದ್ದಾರೆ. ಜೊತೆಗೆ ಯಾರದರೂ ಹೆಚ್ಚಿದ ಉಷ್ಣಾಂಶ ಹಾಗೂ ಪ್ರಜ್ಞೆ ತಪ್ಪುವ ಸ್ಥಿತಿಯಲ್ಲಿದ್ದರೆ ಬೆವರುವಿಕೆ ಸ್ಥಗಿತವಾದ್ರೆ ಸಹಾಯವಾಣಿ ಸಂಖ್ಯೆ: 108/102ಗೆ ಕರೆ ಮಾಡುವಂತೆ ಆರೋಗ್ಯ ಇಲಾಖೆ ತಿಳಿಸಿದೆ.
ಬೆಂಗಳೂರು: ಕಾಟನ್ ಕ್ಯಾಂಡಿ (Cotton Candy) ಹಾಗೂ ಗೋಬಿ ಮಂಚೂರಿಯಲ್ಲಿ (Gobi Manchuri) ಕೆಲವು ಹಾನಿಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆ ಗೋವಾ, ತಮಿಳುನಾಡು ಈ ಆಹಾರಗಳನ್ನು ಬ್ಯಾನ್ ಮಾಡಿದೆ. ಈ ಹಿನ್ನೆಲೆ ಕರ್ನಾಟಕದಲ್ಲೂ ಗೋಬಿ ಮಂಚೂರಿ ಹಾಗೂ ಕಾಟನ್ ಕ್ಯಾಂಡಿ ಕಲರ್ ಜೆಲ್ಲಿಗಳನ್ನು ಸ್ಯಾಂಪಲ್ ಟೆಸ್ಟ್‌ಗೆ ಒಳಪಡಿಸಿಲಾಗಿತ್ತು. ಇದೀಗ ಕಾಟನ್ ಕ್ಯಾಂಡಿ ಜೆಲ್ಲಿ ಹಾಗೂ ಗೋಬಿ ಮಂಚೂರಿಯ ಟೆಸ್ಟಿಂಗ್ ರಿಪೋರ್ಟ್ ಆರೋಗ್ಯ ಇಲಾಖೆ (Health Department) ಕೈ ಸೇರಿದೆ.
ಆಹಾರ ಮತ್ತು ಸುರಕ್ಷತಾ ಇಲಾಖೆಯಿಂದ ರಿಪೋರ್ಟ್ ಆಧರಿಸಿ ನಿರ್ಧಾರ ಕೈಗೊಳ್ಳಲಿದ್ದು, ಸೋಮವಾರ (ಮಾ.11) ಆರೋಗ್ಯ ಸಚಿವರು ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸ್ಯಾಂಪಲ್‌ನಲ್ಲಿ ಹಾನಿಕಾರಕ ಅಂಶ ಪತ್ತೆಯಾಗಿದೆ. ಕಾಟನ್ ಕ್ಯಾಂಡಿಯಲ್ಲಿ ಹಾನಿಕಾರಕ ಅಂಶ ಇರುವುದು ಪತ್ತೆಯಾಗಿದ್ದು, ಗೋಬಿ ಮಂಚೂರಿಯಲ್ಲಿ Sunset Yellow ಮತ್ತು Tartrazine ಅಂಶ ಇರುವುದು ಪತ್ತೆಯಾಗಿದೆ. ರಾಸಾಯನಿಕ ಕಲಬೆರಕೆ ಇರುವುದರಿಂದ ಕಾಟನ್ ಕ್ಯಾಂಡಿ ಬ್ಯಾನ್ ಮಾಡುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ: ನಾವು ತ್ಯಾಗ ಮಾಡಿ ಬಂದವರು, ಲೋಕಸಭಾ ಟಿಕೆಟ್ ನನಗೆ ಕೊಡ್ಬೇಕು: ಬಿ.ಸಿ ಪಾಟೀಲ್
ಗೋಬಿ ಮಂಚೂರಿಯಲ್ಲಿ Sunset Yellow ಹಾಗೂ Tartrazine ಹಾನಿಕಾರಕ ಅಂಶ ಇರೋದ್ರಿಂದ ಎರಡೂ ರಾಸಾಯನಿಕ ಅಂಶಗಳನ್ನು ಬಳಕೆ ಮಾಡದೇ ಇರುವ ಥರ ಆರೋಗ್ಯ ಸಚಿವರು ಘೋಷಣೆ ಮಾಡುವ ಸಾಧ್ಯತೆ ಇದೆ. ಟೆಸ್ಟಿಂಗ್‌ನಲ್ಲಿ ಹಾನಿಕಾರಕ ಅಂಶ ಇರೋದು ವರದಿಯಲ್ಲಿ ತಿಳಿದು ಬಂದಿರುವುದಾಗಿ ಪಬ್ಲಿಕ್ ಟಿವಿಗೆ ಆಹಾರ ಮತ್ತು ಸುರಕ್ಷತಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಾಜಿ ಕಾಂಗ್ರೆಸ್ ಶಾಸಕ ವಾಸು ಅನಾರೋಗ್ಯದಿಂದ ನಿಧನ
ತಮಿಳುನಾಡಿನ ಸರ್ಕಾರಿ ಪ್ರಯೋಗಾಲಯದಲ್ಲಿ ನಡೆಸಲಾದ ಪರೀಕ್ಷೆಗಳಲ್ಲಿ ಬಾಂಬೆ ಮಿಠಾಯಿಯಲ್ಲಿ ರೊಡಮೈನ್-ಬಿ ಅಂಶ ಇರುವುದು ದೃಢಪಟ್ಟಿದೆ. ಹೀಗಾಗಿ ಅಲ್ಲಿ ಬ್ಯಾನ್ ಆಗಿತ್ತು. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕ್ಯಾನ್ಸರ್ ರೋಗ ಬರುವ ಸಾಧ್ಯತೆ ಇದೆ ಎಂಬ ಅಂಶ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ರಾಜ್ಯದಲ್ಲೂ ಬಾಂಬೆ ಮಿಠಾಯಿಯ ಮಾದರಿಗಳನ್ನು ತೆಗೆದುಕೊಳ್ಳಲಾಗಿತ್ತು. ಇದನ್ನೂ ಓದಿ: ಪ್ರತಾಪ್ ಸಿಂಹಗೆ ಟಿಕೆಟ್ ಸಿಗೋದು ಅನುಮಾನ – ಮೈಸೂರಿನಿಂದ ಯದುವೀರ್ ಸ್ಪರ್ಧೆ?
ಗೋಬಿ ಮಂಚೂರಿಗೆ ಬಳಕೆ ಮಾಡುವ ಕೆಲವೊಂದು ಕಲರ್‌ಗಳನ್ನು ಬ್ಯಾನ್ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಅಲ್ಲದೇ ಗೋಬಿ ಮಂಚೂರಿಗೆ ಬಳಕೆ ಮಾಡುವ ಮೂರು ಬಗೆಯ ಕಲರ್‌ಗಳನ್ನು ಬ್ಯಾನ್ ಮಾಡುವ ಸಾಧ್ಯತೆ ಇದೆ. Sunset Yellow ಕಲರ್, Tartrazine, ಸಿಂಥೆಟಿಕ್ ಕಲರ್ ಸಾಸ್‌ಗಳನ್ನು ಬ್ಯಾನ್ ಮಾಡುವ ಸಾಧ್ಯತೆ ಇದ್ದು, ಕಲರ್‌ಗಳನ್ನ ಬಳಕೆ ಮಾಡದೇ ಗೋಬಿಮಂಚೂರಿಗೆ ಮಾರಾಟಕ್ಕೆ ಅವಕಾಶ ಕೊಡಬಹುದು. ಕಾಟನ್ ಕ್ಯಾಂಡಿ ಸಂಪೂರ್ಣ ಬ್ಯಾನ್‌ಗೆ ನಿರ್ಧರಿಸುವ ಸಾಧ್ಯತೆ ಹೆಚ್ಚಾಗಿದ್ದು, ಸೋಮವಾರ ಮಹತ್ವದ ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಸಚಿವರು ಈ ಬಗ್ಗೆ ಘೋಷಣೆ ಮಾಡೋ ಸಾಧ್ಯತೆಯಿದೆ. ಇದನ್ನೂ ಓದಿ: ರಣಬಿಸಿಲ ನಡುವೆ ದಾಖಲೆಯ ವಿದ್ಯುತ್ ಬಳಕೆ – ಲೋಡ್ ಶೆಡ್ಡಿಂಗ್ ಭೀತಿ
ಮಲೆನಾಡಿಗರನ್ನು ಬಿಟ್ಟು ಬಿಡದೇ ಕಾಡುತ್ತಿರುವ ಕೆಎಫ್‌ಡಿ (Kyasanur Forest Diseas) ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಅದೇ ರೀತಿ ಈ ವರ್ಷವೂ ಮಲೆನಾಡಿನ ಜಿಲ್ಲೆಗಳಾದ ಉತ್ತರಕನ್ನಡ, ಶಿವಮೊಗ್ಗ (Shivamogga) ಹಾಗೂ ಚಿಕ್ಕಮಗಳೂರು ಭಾಗಗಳಲ್ಲಿ ಕೆಎಫ್‌ಡಿ ಹೆಚ್ಚಾಗುತ್ತಿದೆ. ಇದೀಗ ಕೆಎಫ್‌ಡಿ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದ್ದು, ಮಲೆನಾಡಿಗರನ್ನು ಮತ್ತೆ ಆತಂಕಕ್ಕೆ ಒಳಪಡಿಸಿದೆ.
ಕೇವಲ ಆರೋಗ್ಯದ ಮೇಲಷ್ಟೇ ಅಲ್ಲದೇ, ಮಲೆನಾಡಿಗರ ಆರ್ಥಿಕತೆ, ಕೃಷಿ ಸೇರಿದಂತೆ ದಿನನಿತ್ಯದ ಕೆಲಸಗಳ ಮೇಲೆ ಕೆಎಫ್‌ಡಿ ತನ್ನ ಕರಿ ನೆರಳನ್ನು ಚೆಲ್ಲಿದೆ. ಈ ಮೂಲಕ ನೆಮ್ಮದಿಯ ಮಲೆನಾಡಿಗೆ ಆತಂಕದ ಅಲೆಯೊಂದ ಬಂದು ಅಪ್ಪಳಿಸಿದಂತಾಗಿದೆ. ಈ ವರ್ಷ ಜನವರಿಯಿಂದ ಇಲ್ಲಿಯವರೆಗೂ ಶಿವಮೊಗ್ಗದಲ್ಲಿ 39, ಉತ್ತರ ಕನ್ನಡದಲ್ಲಿ 43, ಚಿಕ್ಕಮಗಳೂರಿನಲ್ಲಿ 36 ಹಾಗೂ ಉಡುಪಿಯಲ್ಲಿ 1 ಕೆಎಫ್‌ಡಿ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. 2019ರ ಬಳಿಕ ಇಳಿಮುಖವಾಗಿದ್ದ ಕೆಎಫ್‌ಡಿ ಸೋಂಕು ಈ ಬಾರಿ ಹಠಾತ್ ಏರಿಕೆ ಕಂಡಿದೆ. ಉಡುಪಿ ಜಿಲ್ಲೆಯಲ್ಲಿ ನಾಲ್ಕು ವರ್ಷಗಳ ಬಳಿಕ ಈ ಕಾಯಿಲೆ ಕಾಣಿಸಿಕೊಂಡಿದೆ. ಈ ಹಿಂದೆ 2019ರಲ್ಲಿ ಸಿದ್ದಾಪುರ ಹಾಗೂ ಬೈಂದೂರಲ್ಲಿ ಇಬ್ಬರಿಗೆ ಕಾಣಿಸಿಕೊಂಡಿತ್ತು.
ರಾಜ್ಯದಲ್ಲಿ 120 ಸಕ್ರಿಯ ಮಂಗನ ಕಾಯಿಲೆ ಪ್ರಕರಣಗಳಿದ್ದು, ಈ ಬಾರಿ ಇದುವರೆಗೆ ನಾಲ್ವರು ಸಾವಿಗೀಡಾಗಿದ್ದಾರೆ. ಶಿವಮೊಗ್ಗ ಹಾಗೂ ಚಿಕ್ಕಮಗಳೂರಲ್ಲಿ ತಲಾ ಒಂದು ಹಾಗೂ ಉತ್ತರ ಕನ್ನಡದಲ್ಲಿ ಇಬ್ಬರು ರೋಗದಿಂದ ಮೃತಪಟ್ಟಿದ್ದಾರೆ.
ಏನಿದು ಕೆಎಫ್‌ಡಿ?: ಮಂಗನ ಜ್ವರವನ್ನು ಕ್ಯಾಸನೂರು ಫಾರೆಸ್ಟ್ ಡಿಸೀಸಸ್ (ಕೆಎಫ್‌ಡಿ) ಎನ್ನಲಾಗುತ್ತದೆ. ಈ ರೋಗವು ಕೆಎಫ್‌ಡಿ ಸೋಂಕಿತ ಉಣ್ಣೆಗಳ ಕಡಿತದಿಂದ ಮಂಗಗಳಿಗೆ, ವಿಶೇಷವಾಗಿ ಲಾಂಗರ್‌ಗಳು ಮತ್ತು ಬಾನೆಟ್ ಮಕಾಕ್‌ಗಳಿಗೆ ಅರಣ್ಯ ಪ್ರದೇಶಗಳಲ್ಲಿ ಹರಡುತ್ತದೆ. ಸೋಂಕಿತ ಮಂಗಗಳು ಅರಣ್ಯ ಪ್ರದೇಶಗಳ ಮೂಲಕ ಚಲಿಸಿದಾಗ ಅವು ವೈರಸ್ ಇತರ ಉಣ್ಣೆಗಳಿಗೆ ಸಹ ಹರಡುತ್ತವೆ.
ಈ ಸೋಂಕಿತ ಉಣ್ಣೆ ಕಚ್ಚುವುದರಿಂದ ಹಾಗೂ ಸೋಂಕಿತ ಪ್ರಾಣಿಗಳ ಸಂಪರ್ಕದಿಂದ ಮನುಷ್ಯನಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಕಲುಷಿತ ವಸ್ತುಗಳನ್ನು ಸ್ಪರ್ಶಿಸುವ ಮೂಲಕ ಅಥವಾ ಸೋಂಕಿತ ಪ್ರಾಣಿಗಳಿಂದ ಪಾಶ್ಚರೀಕರಿಸದ ಹಾಲನ್ನು ಸೇವಿಸುವ ಮೂಲಕವೂ ಸೋಂಕು ಸಂಭವಿಸಬಹುದು. ಆದರೆ ಮನುಷ್ಯರಿಂದ ಮನುಷ್ಯರಿಗೆ ರೋಗ ಹರಡುವುದು ಅಪರೂಪ.
ಮಂಗನ ಕಾಯಿಲೆ ಲಕ್ಷಣಗಳು: ಚಳಿ ಜ್ವರ, ತಲೆನೋವು, ಸ್ನಾಯು ಸೆಳತ, ವಾಂತಿ ಮತ್ತು ರಕ್ತಸ್ರಾವ, ತೀವ್ರತರವಾದ ಪ್ರಕರಣಗಳಲ್ಲಿ, ನರಮಂಡಲದ ಸಮಸ್ಯೆಗಳು ಎದುರಾಗುತ್ತದೆ. ಈ ಹಂತದಲ್ಲಿ ಪ್ಯಾರಾಸಿಟಮಲ್ ಮಾತ್ರೆ ಹೊರತಾಗಿ ಸ್ಟಿರಾಯ್ಡ್, ಡೈಕ್ಲೋಫಿನ್ ಚುಚ್ಚುಮದ್ದು ತೆಗೆದುಕೊಳ್ಳಬಾರದು ಎಂಬುದು ವೈದ್ಯರ ಸಲಹೆ.
ಮೊದಲ ಹಂತದಲ್ಲಿ ಚೇತರಿಸಿಕೊಳ್ಳದ ರೋಗಿಗಳಿಗೆ ಎರಡನೇ ಹಂತದಲ್ಲಿ ಬಿಳಿರಕ್ತ ಕಣಗಳು ಕಡಿಮೆಯಾಗಿ ತೀವ್ರ ರಕ್ತಸ್ರಾವವಾಗುತ್ತದೆ. ಈ ಹಂತದಲ್ಲಿ ಕಾಯಿಲೆ ಉಲ್ಬಣಗೊಂಡರೆ ಕಿಡ್ನಿ ವೈಫಲ್ಯ ಸೇರಿದಂತೆ ಅಂಗಾಂಗಗಳು ವೈಫಲ್ಯವಾಗಿ ರೋಗಿ ಮರಣ ಹೊಂದುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.
ಕೆಎಫ್‌ಡಿ ಕಬಂಧ ಬಾಹು: ಐದು ವರ್ಷಗಳಲ್ಲಿ 24 ಜನ ಕೆಎಫ್‌ಡಿಯಿಂದ ಸಾವಿಗೀಡಾಗಿದ್ದಾರೆ. 2019ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 12 ಮಂದಿ ಕೆಎಫ್‌ಡಿ ಸೋಂಕಿಗೆ ಬಲಿಯಾಗಿದ್ದರು. ಅಲ್ಲದೇ 344 ಜನರಲ್ಲಿ ಸೋಂಕು ದೃಢಪಟ್ಟಿತ್ತು. ಉತ್ತರ ಕನ್ನಡ ಜಿಲ್ಲೆಯ 85 ಜನರಿಗೆ ಸೋಂಕು ಕಾಣಿಸಿಕೊಂಡಿತ್ತು. ಇದರಲ್ಲಿ 3 ಜನ ಸಾವಿಗೀಡಾಗಿದ್ದರು. ಉಡುಪಿಯಲ್ಲಿ ಇಬ್ಬರು, ಮೈಸೂರು, ಬೆಳಗಾವಿ, ಚಿಕ್ಕಮಗಳೂರು ಹಾಗೂ ಹಾವೇರಿಯಲ್ಲಿ ಕ್ರಮವಾಗಿ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇನ್ನೂ 2020ರಲ್ಲಿ ಶಿವಮೊಗ್ಗದಲ್ಲಿ 184 ಪ್ರಕರಣ ಕಾಣಿಸಿಕೊಂಡಿತ್ತು. ನಾಲ್ಕು ಜನ ಸಾವಿಗೀಡಾಗಿದ್ದರು.ಉತ್ತರ ಕನ್ನಡ ಜಿಲ್ಲೆಯಲ್ಲಿ 91 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಈ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದರು. ಚಿಕ್ಕಮಗಳೂರಿನಲ್ಲಿ 12 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. 2021ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 13, ಚಿಕ್ಕಮಗಳೂರು ಜಿಲ್ಲೆಯಲ್ಲಿ 2, ಉತ್ತರ ಕನ್ನಡ ಜಿಲ್ಲೆಯಲ್ಲಿ 8 ಪ್ರಕರಣಗಳು ಪತ್ತೆಯಾಗಿದ್ದವು. 2022ರಲ್ಲಿ ಶಿವಮೊಗ್ಗದಲ್ಲಿ 35 ಪಾಸಿಟಿವ್ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 14 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿತ್ತು. ಎರಡೂ ಜಿಲ್ಲೆಗಳಲ್ಲಿ ಒಬ್ಬೊಬ್ಬರು ಸಾವನ್ನಪ್ಪಿದ್ದರು. 2023ರಲ್ಲಿ ಶಿವಮೊಗ್ಗ 15, ಚಿಕ್ಕಮಗಳೂರು 2 ಜನರಿಗೆ ಸೋಕು ಕಾಣಿಸಿಕೊಂಡಿತ್ತು.
ಇನ್ನೂ ಇತ್ತೀಚೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಅವರು, ಒಂದು ವರ್ಷದೊಳಗೆ ಸೂಕ್ತ ಔಷಧವನ್ನು ಸರ್ಕಾರ ಒದಗಿಸಲಿದೆ ಎಂದು ಭರವಸೆಯನ್ನು ನೀಡಿದ್ದರು.
ಯಾದಗಿರಿ: ಕೇಂದ್ರ ಸರ್ಕಾರದಿಂದ ಸರ್ಕಾರಿ ಆಸ್ಪತ್ರೆಗಳಿಗೆ (Government Hospitals) ವಿತರಣೆಯಾಗಬೇಕಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ನೂರಾರು ಕಾಂಡೋಮ್ ಬಾಕ್ಸ್‌ಗಳು (Condom Box) ಪತ್ತೆಯಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಖಾನಾಪುರ ಸಮೀಪದಲ್ಲಿ ನಡೆದಿದೆ.
ನೂರಾರು ನಿರೋಧ್ (ಕಾಂಡೋಮ್) ಬಾಕ್ಸ್‌ಗಳು ಖಾನಾಪುರ ಸಮೀಪದ ಇಬ್ರಾಹಿಂಪುರ ಕ್ರಾಸ್ ಮುಖ್ಯರಸ್ತೆಯಲ್ಲಿ ಪತ್ತೆಯಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳೇ (Health Officers) ಬೇಕಾಬಿಟ್ಟಿಯಾಗಿ ರಸ್ತೆ ಬದಿ ಇಳಿಸಿ ಹೋದ್ರಾ ಅನ್ನೋ ಸಂಶಯವೂ ವ್ಯಕ್ತವಾಗಿದೆ. ಇದನ್ನೂ ಓದಿ: ಕುವೆಂಪು ಘೋಷವಾಕ್ಯ ತೆಗೆದುಹಾಕಲು ಸರ್ಕಾರ ಆದೇಶಿಸಿಲ್ಲ: ಸಚಿವ ಮಹದೇವಪ್ಪ
ಬಾಕ್ಸ್‌ಗಳಲ್ಲಿ ತುಂಬಿದ ಕಾಂಡೋಮ್ ಸರ್ಕಾರಿ ಆಸ್ಪತ್ರೆಗೆ ಪೂರೈಕೆ ಆಗಬೇಕಿತ್ತು. 2026ರ ವರೆಗೆ ಅವಧಿ ಇರೋದು ಬಾಕ್ಸ್ ಮೇಲೆ ನಮೂದಾಗಿದೆ. ಆದ್ರೆ ಏಕಾಏಕಿ ಇಷ್ಟೊಂದು ಬಾಕ್ಸ್‌ಗಳನ್ನ ರಸ್ತೆ ಮಧ್ಯೆ ಇಳಿಸಿ ಹೋಗಿದ್ದು ಯಾರು ಅನ್ನೋದು ಪತ್ತೆಯಾಗಿಲ್ಲ.
ಮಂಗಳೂರು: ಆಶಾಕಿರಣ ಯೋಜನೆಯಡಿ ( Asha Kiran scheme) 8 ಜಿಲ್ಲೆಗಳಲ್ಲಿ ಎಲ್ಲಾ ಜನರ ಕಣ್ಣಿನ ತಪಾಸಣೆ ಬಹುತೇಕ ಪೂರ್ಣಗೊಂಡಿದೆ. ದೃಷ್ಟಿ ದೋಷ ಹೊಂದಿರುವ ಸುಮಾರು 2.45 ಲಕ್ಷ ಜನರಿಗೆ ಉಚಿತವಾಗಿ ಕನ್ನಡಕ ವಿತರಣಾ ಕಾರ್ಯಕ್ರಮಕ್ಕೆ ನಾಳೆ ಚಾಲನೆ ದೊರೆಯಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ.
ಮಂಗಳೂರಿನಲ್ಲಿ (Mangaluru) ಇಂದು (ಶನಿವಾರ) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಆಶಾಕಿರಣ’ ಯೋಜನೆ ದೃಷ್ಟಿ ದೋಷ ಹೊಂದಿದ ಅನೇಕ ಜನಸಾಮಾನ್ಯರ ಪಾಲಿಗೆ ಬೆಳಕಾಗಲಿದೆ. ಯೋಜನೆಯನ್ನ ಹಂತ ಹಂತವಾಗಿ ರಾಜ್ಯಾದ್ಯಂತ ವಿಸ್ತರಿಸಲಾಗುತ್ತದೆ. ಹಾವೇರಿಯಲ್ಲಿ ಭಾನುವಾರ ಸಿಎಂ ಸಿದ್ದರಾಮಯ್ಯ ಅವರು ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ರೈತರ ಪ್ರತಿಭಟನೆಗೆ ಮಣಿಯಿತಾ ಸರ್ಕಾರ – ರೈತ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚನೆ ಪ್ರಸ್ತಾಪಿಸುವ ಸಾಧ್ಯತೆ?
ಆಶಾಕಿರಣ ಯೋಜನೆಯಡಿ ರಾಜ್ಯದ 8 ಜಿಲ್ಲೆಗಳಲ್ಲಿ ಎಲ್ಲಾ ಜನರ ಕಣ್ಣಿನ ತಪಾಸಣಾ ಕಾರ್ಯವನ್ನ ಆಶಾ ಕಾರ್ಯಕರ್ತೆಯರು ನಡೆಸಿದ್ದರು. ಮೊದಲ ಹಂತದಲ್ಲಿ ಹಾವೇರಿ, ಕಲಬುರಗಿ, ಚಾಮರಾಜನಗರ, ಚಿಕ್ಕಬಳ್ಳಾಪುರ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 56, 59, 036 ಜನರನ್ನು ಆಶಾ ಕಾರ್ಯಕರ್ತೆಯರ ಮೂಲಕ ಪ್ರಾಥಮಿಕ ತಪಾಸಣೆಗೆ ಒಳಪಡಿಸಲಾಗಿತ್ತು. ಇವರಲ್ಲಿ 8,28,884 ಜನರಿಗೆ ನೇತ್ರ ಸಂಬಂಧಿ ತೊಂದರೆಗಳು ಕಂಡುಬಂದಿದ್ದು, ದ್ವಿತೀಯ ಹಂತದ ಚಿಕಿತ್ಸೆಗೆ ಒಳಪಡಿಸಿದಾಗ 2,45,588 ಮಂದಿಗೆ ದೃಷ್ಟಿ ದೋಷ ಇರುವುದು ಪತ್ತೆಯಾಗಿದೆ. 2.45,588 ಜನರಿಗೂ ಉಚಿತ ಕನ್ನಡಕ ಒದಗಿಸುವ ಕಾರ್ಯ ನಾಳೆಯಿಂದ ಪ್ರಾರಂಭವಾಗಲಿದೆ. ಅಲ್ಲದೇ 39,336 ಜನರಿಗೆ ಕಣ್ಣಿನ ಪೊರೆ ತೊಂದರೆ ಕಂಡು ಬಂದಿದ್ದು, ಇವರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನೂ ಕೂಡಾ ಉಚಿತವಾಗಿ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
`ಆಶಾಕಿರಣ’ ಎರಡನೇ ಹಂತದಲ್ಲಿ ಚಿತ್ರದುರ್ಗ, ಮಂಡ್ಯ, ರಾಯಚೂರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಆಶಾಕಿರಣ ಅಭಿಯಾನವನ್ನ ಈಗಾಗಲೇ ಆರಂಭಿಸಲಾಗಿದ್ದು, ಈ ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 5,277,235 ಜನರನ್ನು ಪ್ರಾಥಮಿಕ ತಪಾಸಣೆಗೆ ಒಳಪಡಿಸಲಾಗಿದೆ. ಇವರಲ್ಲಿ 9,43,398 ಜನರಲ್ಲಿ ನೇತ್ರ ಸಂಬಂಧಿ ತೊಂದರೆಗಳಿರುವುದು ಪತ್ತೆಯಾಗಿದ್ದು, ಕನ್ನಡಕ ವಿತರಣೆ, ಶಸ್ತ್ರಚಿಕಿತ್ಸೆ ಸೇರಿದಂತೆ ಹೆಚ್ಚಿನ ಚಿಕಿತ್ಸೆಗೆ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.
ಮುಂದಿನ ಹಂತಗಳಲ್ಲಿ ರಾಮನಗರ, ಯಾದಗಿರಿ, ಕೊಡಗು, ಗದಗ ಹಾಗೂ ಚಿಕ್ಕಮಗಳೂರು, ಬೀದರ್, ಕೋಲಾರ, ಬಾಗಲಕೋಟೆ ಜಿಲ್ಲೆಗಳನ್ನು ಆಶಾಕಿರಣ ಯೋಜನೆಗಾಗಿ ಆಯ್ಕೆ ಮಾಡಲಾಗಿದೆ. ಹಂತ, ಹಂತವಾಗಿ ರಾಜ್ಯದ ಉಳಿದ ಜಿಲ್ಲೆಗಳಿಗೆ ಯೋಜನೆ ವಿಸ್ತರಿಸಲಾಗುವುದು. ರಾಜ್ಯದ ಎಲ್ಲ ಜನರಿಗೂ `ಆಶಾಕಿರಣ’ ಯೋಜನೆಯಡಿ ಉಚಿತ ಕಣ್ಣಿನ ಆರೈಕೆ ಆರೋಗ್ಯ ಸೇವೆಯನ್ನ ರಾಜ್ಯ ಸರ್ಕಾರದ ಒದಗಿಸುವ ಗುರಿ ಹೊಂದಿದೆ. ಮಕ್ಕಳಿನಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರ ಕಣ್ಣಿನ ತಪಾಸಣೆಯನ್ನ ಆರೋಗ್ಯ ಇಲಾಖೆ ಜನರ ಮನೆಬಾಗಿಲಿಗೆ ಹೋಗಿ ಆರೋಗ್ಯ ಸೇವೆ ಒದಗಿಸುತ್ತಿದೆ. `ಆಶಾಕಿರಣ’ ಯೋಜನೆ ರಾಜ್ಯದ ಜನಸಾಮಾನ್ಯರ ಬಾಳಲ್ಲಿ ಬೆಳಕಾಗಲಿ ಎಂದು ಅವರು ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯವ್ರು, ಹಿಂದುತ್ವವಾದಿಗಳು ಹೇಳುವ ಗ್ರಂಥ ನಮ್ಮದಲ್ಲ.. ಸಂವಿಧಾನವೇ ನಮ್ಮ ಧರ್ಮಗ್ರಂಥ: ಸಿದ್ದರಾಮಯ್ಯ