Tag: health department

  • 2014ರ ಮೆಡಿಸಿನ್ ಗೋಲ್ಮಾಲ್: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾದ ಸರ್ಕಾರ

    2014ರ ಮೆಡಿಸಿನ್ ಗೋಲ್ಮಾಲ್: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾದ ಸರ್ಕಾರ

    ರಾಯಚೂರು: ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ 2014ರಲ್ಲಿ ನಡೆದಿದ್ದ ಮೆಡಿಸಿನ್ ಗೋಲ್‍ಮಾಲ್ ಪ್ರಕರಣಕ್ಕೆ ಕೊನೆಗೂ ಜೀವ ಬಂದಿದ್ದು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸರ್ಕಾರ ಮುಂದಾಗಿದೆ.

    ಅಂದಾಜು 80 ಲಕ್ಷ ರೂಪಾಯಿ ಔಷಧಿ ಹಾಗೂ ಇತರೆ ಸಲಕರಣೆಗಳ ಅಕ್ರಮ ಸಂಗ್ರಹದಲ್ಲಿ ಭಾಗಿಯಾದ ಜಿಲ್ಲಾ ಆರೋಗ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 2000 ರಿಂದ 2013ರ ವರೆಗೆ ಕಾರ್ಯ ನಿರ್ವಹಿಸಿದ ಐದು ಜನ ಡಿಎಚ್‍ಓಗಳಿಂದ ಹಣ ವಸೂಲಿ ಮಾಡಲು ರಾಜ್ಯ ಆರೋಗ್ಯ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

    ಆದ್ರೆ 80 ಲಕ್ಷ ರೂ. ಅಂತ ಮೊದಲಿಗೆ ಅಂದಾಜಿಸಲಾಗಿದ್ದ ಮೊತ್ತ ಕೇವಲ 6 ಲಕ್ಷಕ್ಕೆ ಇಳಿದಿದೆ. ಐದು ಜನ ಡಿಎಚ್‍ಓ ಗಳಲ್ಲಿ ಡಾ.ಹೀರೇಗೌಡರ್ ಹಾಗೂ ಡಾ.ಬಸವರಾಜ್ ಯಾತಗಲ್ ಈಗಾಗಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಡಾ.ಸೂರ್ಯವಂಶಿ ಹಾಗೂ ಡಾ.ಅಪ್ಪಣ್ಣ ನಿವೃತ್ತರಾಗಿದ್ದಾರೆ. ಡಾ.ವೆಂಕಟೇಶ್ ನಾಯಕ್ ಮಾತ್ರ ಸೇವೆಯಲ್ಲಿದ್ದಾರೆ. ಈ ಐದು ಜನರಿಂದ 6 ಲಕ್ಷ ರೂಪಾಯಿ ವಸೂಲಿ ಮಾಡುವಂತೆ ಆಯುಕ್ತರು ಹಾಲಿ ಡಿಎಚ್‍ಓ ಡಾ.ನಾರಾಯಣಪ್ಪ ಅವರಿಗೆ ಸೂಚಿದ್ದಾರೆ.

    24*7 ಹೆರಿಗೆ ಆಸ್ಪತ್ರೆಯ ಅಥಿತಿ ಗೃಹದ ಕೊಠಡಿಗಳಲ್ಲಿ ಸುಮಾರು 10 ವರ್ಷಗಳ ಔಷಧಿ ಹಾಗೂ ಚಿಕಿತ್ಸಾ ಸಲಕರಣೆಗಳನ್ನ ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತು. 2009ರ ಪ್ರವಾಹ ಪೀಡಿತ ಪ್ರದೇಶದ ಜನರಿಗೆ ಸರ್ಕಾರ ಕಳುಹಿಸಿದ್ದ ಔಷಧಿಯನ್ನೂ ರೋಗಿಗಳಿಗೆ ವಿತರಿಸದೇ ಇರುವ ವಿಚಾರ ಬೆಳಕಿಗೆ ಬಂದಿತ್ತು. ಪ್ರಕರಣ ಬೆಳಕಿಗೆ ಬಂದು ಮೂರು ವರ್ಷಗಳ ಬಳಿಕ ಈಗ ಸರ್ಕಾರ ಎಚ್ಚೆತ್ತು ಕ್ರಮಕ್ಕೆ ಮುಂದಾಗಿದೆ.

     

  • ತುಂಬು ಗರ್ಭಿಣಿಯನ್ನ ವಾಪಸ್ ಕಳುಹಿಸಿದ ಸರ್ಕಾರಿ ಆಸ್ಪತ್ರೆ ವೈದ್ಯರು

    ತುಂಬು ಗರ್ಭಿಣಿಯನ್ನ ವಾಪಸ್ ಕಳುಹಿಸಿದ ಸರ್ಕಾರಿ ಆಸ್ಪತ್ರೆ ವೈದ್ಯರು

    ಕೋಲಾರ: ಹೆರಿಗೆಗೆಂದು ದಾಖಲಾಗಿದ್ದ ತುಂಬು ಗರ್ಭಿಣಿಯನ್ನ ವೈದ್ಯರು ವಾಪಸ್ ಕಳುಹಿಸಿದ ಘಟನೆ ಜಿಲ್ಲೆಯ ಮಾಲೂರು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

    ಮಾಲೂರು ತಾಲೂಕಿನ ಚಿಕ್ಕ ಇಗ್ಗಲೂರು ನಿವಾಸಿಯಾಗಿರುವ ಪ್ರಿಯಾಂಕ (23) ಎಂಬವರು ಹೆರಿಗೆಗೆಂದು ದಾಖಲಾಗಿದ್ದರು. ಶಸ್ತ್ರಚಿಕಿತ್ಸೆ ಮಾಡಲು ಆಕ್ಸಿಜನ್ ಇಲ್ಲ ಎಂದು ಸರ್ಕಾರಿ ಆಸ್ಪತ್ರೆ ವೈದ್ಯರು ಮಾಲೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

    ಈ ಬಗ್ಗೆ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರನ್ನು ಕೇಳಿದಾಗ ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗುತ್ತಿದೆ. ಆಕ್ಸಿಜನ್ ಇಲ್ಲ ಎಂದು ಹೊರಗೆ ಕಳಿಸಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

  • ಇದು ನಮ್ಮ ರಾಜ್ಯದ ಡೆಂಗ್ಯೂ ಗ್ರಾಮ!

    ಇದು ನಮ್ಮ ರಾಜ್ಯದ ಡೆಂಗ್ಯೂ ಗ್ರಾಮ!

    ದಾವಣಗೆರೆ: ಈ ಗ್ರಾಮದಲ್ಲಿ ಕಳೆದ ಎರಡು ತಿಂಗಳಿನಿಂದ ಯಾರೂ ಕೆಲಸ ಮಾಡಿಲ್ಲ, ಬಹುತೇಕ ಗ್ರಾಮಸ್ಥರು ಮನೆಯಿಂದ ಕೂಡ ಎದ್ದು ಹೊರ ಬಂದಿಲ್ಲ, ಹಾಸಿಗೆ ಮೇಲೆ ಮಲಗಿರುವ ಮಕ್ಕಳು, ಖಾಲಿ ಖಾಲಿಯಾಗಿ ಕಾಣುತ್ತಿರುವ ಗ್ರಾಮ, ಅಲ್ಲೊಬ್ಬರು ಇಲ್ಲೊಬ್ಬರು ಓಡಾಡುತ್ತಿರುವ ದೃಶ್ಯ. ಇಂಥದ್ದೊಂದು ಸನ್ನಿವೇಶ ಕಂಡು ಬಂದದ್ದು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಜಿಗಳಿ ಗ್ರಾಮದಲ್ಲಿ.

    ಈ ಗ್ರಾಮದಲ್ಲಿ ಕಳೆದ ಎರಡು ತಿಂಗಳಿನಿಂದ ಡೆಂಗ್ಯೂ, ಮಲೇರಿಯ ರೋಗ ಬಂದು ಆವರಿಸಿಕೊಂಡಿದೆ. ಇದರಿಂದ ಇಡೀ ಗ್ರಾಮಕ್ಕೆ ಗ್ರಾಮವೇ ಹಾಸಿಗೆ ಹಿಡಿದು ಮಲಗಿದೆ.

    ಇದಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲಾ ವೈದ್ಯಾಧಿಕಾರಿ ತ್ರಿಪುಲಾಂಭ ಹಾಗೂ ಹರಿಹರ ತಾಲೂಕು ವೈದ್ಯಾಧಿಕಾರಿ ಹನುಮ ನಾಯ್ಕ ಅವರಿಗೆ ತಿಳಿಸಿದ್ದರೂ ಯಾರೂ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸುಮಾರು 400ಕ್ಕೂ ಅಧಿಕ ಗ್ರಾಮಸ್ಥರು, ದಾವಣಗೆರೆ ಮಂಗಳೂರು, ಬೆಂಗಳೂರು, ಶಿವಮೊಗ್ಗ ಸೇರಿದಂತೆ ಹಲವಾರು ಕಡೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ.

    ಕಳೆದ ಎರಡು ತಿಂಗಳಿನಿಂದ ಗ್ರಾಮದಲ್ಲಿ ಯಾರು ಹೊರಗಡೆ ಹೋಗದಂತಾಗಿದೆ, ಈ ಬಗ್ಗೆ ಹಲವಾರು ಬಾರಿ ಜಿಲ್ಲಾಡಳಿತಕ್ಕೂ ಹಾಗೂ ಆರೋಗ್ಯಾಧಿಕಾರಿಗೂ ಮಾಹಿತಿ ನೀಡಿದ್ದರೂ ಯಾರು ಕ್ರಮ ಕೈಗೊಂಡಿಲ್ಲ. ಜೊತೆಗೆ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಒಟ್ಟಾರೆಯಾಗಿ ಗ್ರಾಮದಲ್ಲಿ ಡೆಂಗ್ಯೂ, ಮಲೇರಿಯಾ ರೋಗ ಹೆಚ್ಚಾಗಿ ಆವರಿಸಿದ್ದರು ಕೂಡ ಅಧಿಕಾರಿಗಳು ಮಾತ್ರ ದಿವ್ಯನಿರ್ಲಕ್ಷ ವಹಿಸಿರುವುದು ನಿಜಕ್ಕೂ ಬೇಸರದ ಸಂಗತಿ. ಇನ್ನಾದರೂ ಅಧಿಕಾರಿಗಳು ಸ್ಥಳಕ್ಕೆ ಬಂದು ಸೂಕ್ತ ಚಿಕಿತ್ಸೆ ನೀಡಬೇಕಿದೆ.

     

  • ಕೃಷ್ಣಾನದಿ ತೀರದ ಗ್ರಾಮಗಳಲ್ಲಿ ಚರ್ಮರೋಗ: ಪಬ್ಲಿಕ್ ಟಿವಿ ವರದಿಗೆ ಎಚ್ಚೆತ್ತ ಆರೋಗ್ಯ ಇಲಾಖೆ

    ಕೃಷ್ಣಾನದಿ ತೀರದ ಗ್ರಾಮಗಳಲ್ಲಿ ಚರ್ಮರೋಗ: ಪಬ್ಲಿಕ್ ಟಿವಿ ವರದಿಗೆ ಎಚ್ಚೆತ್ತ ಆರೋಗ್ಯ ಇಲಾಖೆ

    – ನಾಲ್ಕು ಗ್ರಾಮಗಳಲ್ಲಿ ವೈದ್ಯರ ತಂಡದಿಂದ ನಿರಂತರ ತಪಾಸಣೆ

    ರಾಯಚೂರು: ಜಿಲ್ಲೆಯ ಕೃಷ್ಣಾನದಿ ತೀರದ ಗ್ರಾಮಗಳ ಜನ ಕಲುಷಿತ ನೀರನ್ನ ಬಳಸಿ ವಿವಿಧ ಚರ್ಮರೋಗಗಳಿಗೆ ತುತ್ತಾಗುತ್ತಿರುವ ಕುರಿತ ಪಬ್ಲಿಕ್ ಟಿವಿ ವರದಿಗೆ ಜಿಲ್ಲಾ ಆರೋಗ್ಯ ಇಲಾಖೆ ಎಚ್ಚೆತ್ತಿದೆ. ಕಳೆದ ಮೂರು ದಿನಗಳಿಂದ ರಾಯಚೂರು ತಾಲೂಕಿನ ಆತ್ಕೂರು, ಡಿ.ರಾಂಪೂರ್, ಬೂರ್ದಿಪಾಡ್, ಸರ್ಜಾಪುರ ಗ್ರಾಮಗಳಲ್ಲಿ ವೈದ್ಯರ ತಂಡ ಆರೋಗ್ಯ ತಪಾಸಣೆ ಶಿಬಿರ ನಡೆಸಿದೆ.

    ನದಿ ತೀರದ ಗ್ರಾಮಗಳ ಜನರ ಚರ್ಮರೋಗಕ್ಕೆ ಕೃಷ್ಣನದಿ ನೀರು ಹಾಗೂ ಬಿಸಿಲು ಕಾರಣ ಅಂತ ವೈದ್ಯರು ಹೇಳಿದ್ದಾರೆ. ನದಿಯಲ್ಲಿನ ನಿಂತ ನೀರಲ್ಲಿ ಹೆಚ್ಚಾಗಿರುವ ಫಂಗಸ್‍ನಿಂದಾಗಿ ಚರ್ಮರೋಗಗಳು ಕಾಣಿಸಿಕೊಂಡಿವೆ.  ಹೀಗಾಗಿ ವೈದ್ಯರು ಆಂಟಿ ಫಂಗಲ್, ಆಂಟಿ ಸ್ಟೆಮಿ ಮಾತ್ರೆ ಹಾಗು ಮುಲಾಮುಗಳನ್ನು ನೀಡುತ್ತಿದ್ದಾರೆ. ಆರೋಗ್ಯ ಇಲಾಖೆ ಗ್ರಾಮಸ್ಥರಿಗೆ ನೀರನ್ನ ಶುದ್ಧೀಕರಿಸಿ ಬಳಸುವಂತೆ ಜಾಗೃತಿಯನ್ನ ಮೂಡಿಸುತ್ತಿದ್ದಾರೆ.

    ಹೆಚ್ಚು ಕಾಲ ನಿಂತ ನೀರನ್ನ ಬಳಸುವುದಿರಿಂದ ವಾಂತಿ, ಬೇಧಿ, ಅತೀಸಾರದಂತಹ ಕಾಯಿಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ನೀರಿನ ಮಾದರಿಗಳನ್ನ ಸಂಗ್ರಹಿಸಿರುವ ಆರೋಗ್ಯ ಇಲಾಖೆ ಪ್ರಯೋಗಾಯಲಕ್ಕೆ ಕಳುಹಿಸಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾರಾಯಣಪ್ಪ ನದಿ ನೀರನ್ನ ಶುದ್ಧಿಕರಿಸುವಂತೆ ಜಿಲ್ಲಾ ಆರೋಗ್ಯ ಎಂಜಿನಿಯರಿಂಗ್ ವಿಭಾಗಕ್ಕೆ ಪತ್ರ ಬರೆದಿದ್ದಾರೆ. ಗ್ರಾಮ ಪಂಚಾಯ್ತಿಗೆ ನೀರನ್ನ ಶುದ್ದಿಕರಿಸಿ ಕೊಳಾಯಿಗೆ ಬಿಡುವಂತೆ ಸೂಚಿಸಿದ್ದು, ನೀರಿನ ಕ್ಲೋರಿನೇಷನ್ ನಡೆದಿದೆ.

    ಪಬ್ಲಿಕ್ ಟಿವಿ ವರದಿಗೆ ಕೂಡಲೇ ಸ್ಪಂದಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಠ್ ಅಗತ್ಯ ಕ್ರಮಗಳನ್ನ ತೆಗೆದುಕೊಳ್ಳುವ ಭರವಸೆ ನೀಡಿದ್ದರು. ಈಗ ವೈದ್ಯರ ತಂಡ ಚಿಕಿತ್ಸೆಗೆ ಮುಂದಾಗಿದೆ. ಗ್ರಾಮಗಳಿಗೆ ಶುದ್ಧ ನೀರಿನ ಸರಬರಾಜು ಮಾಡುವ ಅಗತ್ಯವಿದೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಚಿಕ್ಕಬಳ್ಳಾಪುರದ ನಕಲಿ ವೈದ್ಯನಿಗೆ ಶೋಕಾಸ್ ನೋಟಿಸ್ ಜಾರಿ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಚಿಕ್ಕಬಳ್ಳಾಪುರದ ನಕಲಿ ವೈದ್ಯನಿಗೆ ಶೋಕಾಸ್ ನೋಟಿಸ್ ಜಾರಿ

    ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲೂಕು ಆಚೇಪಲ್ಲಿ ಕ್ರಾಸ್ ಬಳಿಯ ಅಯ್ಯಪ್ಪ ಎಂಟರ್‍ಪ್ರೈಸಸ್ ಅಂಗಡಿಯಲ್ಲಿ ವೈದ್ಯಕೀಯ ಪರೀಕ್ಷೆ ಹಾಗೂ ಚಿಕಿತ್ಸೆಯನ್ನ ನೀಡುತ್ತಿದ್ದ ನಕಲಿ ವೈದ್ಯನಿಗೆ ಶೋಕಾಸ್ ನೋಟಿಸ್ ಜಾರಿಯಾಗಿದೆ.

    ವರದಿಯ ಫಲಶೃತಿಯಾಗಿ ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆಯಂತೆ ಸ್ಥಳಕ್ಕೆ ಭೇಟಿ ನೀಡಿದ್ದ ತಾಲೂಕು ಆರೋಗ್ಯಾಧಿಕಾರಿ ಸತ್ಯನಾರಾಯಣ್ ಅವರು ನಕಲಿ ವೈದ್ಯ ನರೇಶ್‍ಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.  ಒಂದು ವಾರದೊಳಗೆ ವಿಚಾರಣೆಗೆ ಖುದ್ದಾಗಿ ಹಾಜರಾಗಿ ಉತ್ತರ ನೀಡುವಂತೆ ನೋಟಿಸ್‍ನಲ್ಲಿ ಉಲ್ಲೇಖ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ರವಿ ಪ್ರಕಾಶ್ ನಕಲಿ ವೈದ್ಯರ ಕಡಿವಾಣಕ್ಕೆ ಕಾನೂನು ರೀತಿಯ  ಎಲ್ಲ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

    ನರೇಶ್ ಕಳೆದ ಮೂರು ವರ್ಷಗಳಿಂದ ಜನರಿಗೆ ಚಿಕಿತ್ಸೆ ನೀಡುತ್ತಿದ್ದನು. ಈ ಪ್ರಕರಣದ ಬೆನ್ನತ್ತಿದ್ದ ಪಬ್ಲಿಕ್ ರಹಸ್ಯ ಕಾರ್ಯಚರಣೆಯ ಮೂಲಕ ಪ್ರಕರಣವನ್ನು ಬಯಲು ಮಾಡಿತ್ತು.

    ಇದನ್ನೂ ಓದಿ: ಚಿಲ್ಲರೆ ಅಂಗಡಿಯಲ್ಲಿ ತಲೆ ಎತ್ತಿದೆ ಆಸ್ಪತ್ರೆ – ಅಂಗಡಿ ಮಾಲೀಕನೇ ಇಲ್ಲಿ ಡಾಕ್ಟರ್  

     

  • ಚಿಲ್ಲರೆ ಅಂಗಡಿಯಲ್ಲಿ ತಲೆ ಎತ್ತಿದೆ ಆಸ್ಪತ್ರೆ – ಅಂಗಡಿ ಮಾಲೀಕನೇ ಇಲ್ಲಿ ಡಾಕ್ಟರ್

    ಚಿಲ್ಲರೆ ಅಂಗಡಿಯಲ್ಲಿ ತಲೆ ಎತ್ತಿದೆ ಆಸ್ಪತ್ರೆ – ಅಂಗಡಿ ಮಾಲೀಕನೇ ಇಲ್ಲಿ ಡಾಕ್ಟರ್

    – ಬಾಗೇಪಲ್ಲಿ ಜನರ ಜೀವದ ಜೊತೆ ನಕಲಿ ವೈದ್ಯನ ಚೆಲ್ಲಾಟ

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಮಿತಿ ಮೀರಿದ್ದು, ಇದಕ್ಕೆ ಸ್ಪಷ್ಟ ನಿದರ್ಶನ ಎಂಬಂತೆ ಚಿಲ್ಲರೆ ಅಂಗಡಿಯೊಂದರಲ್ಲಿ ಅಂಗಡಿ ಮಾಲೀಕ ವೈದ್ಯಕೀಯ ಚಿಕಿತ್ಸೆ ನೀಡುತ್ತಿರುವ ಘಟನೆ ಪಬ್ಲಿಕ್ ಟಿವಿ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಜಿಲ್ಲೆಯ ಬಾಗೇಪಲ್ಲಿ ತಾಲೂಕು ಆಚೇಪಲ್ಲಿ ಕ್ರಾಸ್ ಬಳಿಯ ಅಯ್ಯಪ್ಪ ಎಂಟರ್‍ಪ್ರೈಸಸ್ ಅಂಗಡಿಯಲ್ಲಿ ವೈದ್ಯಕೀಯ ಪರೀಕ್ಷೆ ಹಾಗೂ ಚಿಕಿತ್ಸೆಯನ್ನ ನೀಡಲಾಗ್ತಿದೆ. ಅಂಗಡಿ ಮಾಲೀಕ ನರೇಶ್ ಎಂಬಾತ ವೈದ್ಯಕೀಯ ಪರೀಕ್ಷೆ ಮಾಡಿ ಮಾತ್ರೆ ಹಾಗೂ ಇಂಜೆಕ್ಷನ್ ನೀಡುತ್ತಾ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾನೆ.

    ನಾನು ಆರ್‍ಎಂಪಿ ಡಾಕ್ಟರ್, ಕಳೆದ 3 ವರ್ಷಗಳಿಂದಲೂ ಇದೇ ರೀತಿ ಚಿಕಿತ್ಸೆ ನೀಡುತ್ತಿದ್ದೇನೆ ಎಂದು ಅಂಗಡಿ ಮಾಲೀಕ ನರೇಶ್ ಹೇಳಿದ್ದಾನೆ. 3 ವರ್ಷಗಳಿಂದಲೂ ಅಂಗಡಿ ಮಾಲೀಕ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ರೂ ಅಕ್ರಮಕ್ಕೆ ಕಡಿವಾಣ ಹಾಕಲು ಜಿಲ್ಲಾ ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದೇ ವಿಫಲವಾಗಿರುವುದು ಸಾಬೀತಾಗಿದೆ.