Tag: health department

  • ಕೊರೊನಾ ಕೇಸ್‍ನಲ್ಲಿ ಸಚಿವರಿಬ್ಬರ ಎಡವಟ್ಟು

    ಕೊರೊನಾ ಕೇಸ್‍ನಲ್ಲಿ ಸಚಿವರಿಬ್ಬರ ಎಡವಟ್ಟು

    – ಮಾಹಾಮಾರಿ ವಿಷ್ಯದಲ್ಲಿ ನಿರ್ಲಕ್ಷ್ಯದ ಅತಿರೇಕ

    ಬೆಂಗಳೂರು: ಕೊರೊನಾ ವೈರಸ್ ವಿಷಯದಲ್ಲಿ ರಾಜ್ಯ ಸರ್ಕಾರ ಎಷ್ಟು ನಿರ್ಲಕ್ಷ್ಯವಾಗಿದೆ ಎಂದರೆ ಸಚಿವರು, ಅಧಿಕಾರಿಗಳು ಜೀವಕ್ಕೆ ಕಂಟಕವಾದ ರೋಗದ ವಿಷಯದಲ್ಲಿ ಎಡವಟ್ಟುಗಳ ಮೇಲೆ ಎಡವಟ್ಟು ಮಾಡುತ್ತಿದ್ದಾರೆ.

    ಕಲಬುರಗಿಯ 76 ವರ್ಷದ ವೃದ್ಧ ಸಾವನ್ನಪ್ಪಿದ್ದು ಕೊರೊನಾ ವೈರಸ್‍ನಿಂದಲೇ ಎಂದು ಖಚಿತವಾಗಿದೆ. ಆದರೆ ಸೋಂಕು ಶಂಕಿತ ವ್ಯಕ್ತಿಗೆ ಕೊರೊನಾ ವೈರಸ್ ಬಂದೇ ಇಲ್ಲ ಎಂದು ಸಚಿವರುಗಳು ತಿಳಿಸಿದ್ದಾರೆ. ಅಲ್ಲದೇ ಸೋಂಕು ಪೀಡಿತ ಮೃತಪಟ್ಟು, ಮೂರು ದಿನಗಳ ಬಳಿಕ ಕೊರೊನಾ ಸೋಂಕುನಿಂದಲೇ ಮೃತಪಟ್ಟಿರೋದು ದೃಢಪಟ್ಟಿದೆ. ಮೃತಪಟ್ಟ ವ್ಯಕ್ತಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಫೆ. 29ರಿಂದ ವ್ಯಕ್ತಿ ಸಾಯುವ ಅಂತಿಮ ಕ್ಷಣದವರೆಗೆ ವ್ಯಕ್ತಿಯ ಸಂಪರ್ಕದಲ್ಲಿದ್ದರಿಗೂ ಕೊರೊನಾ ಸೊಂಕು ಹರಡಿರುವ ಸಾಧ್ಯತೆ ಇದೆ.

    ಮೃತ ವೃದ್ಧ, ಹತ್ತು ದಿನಗಳ ಅವಧಿಯಲ್ಲಿ ಮೂರು ಆಸ್ಪತ್ರೆಯ ಸಿಬ್ಬಂದಿ, ಸಂಬಂಧಿಕರು, ಕುಟುಂಬಸ್ಥರನ್ನ ಸಂಪರ್ಕಿಸಿರುವ ಸಾಧ್ಯತೆ ಇದೆ. ಇದು ತೀವ್ರ ಆತಂಕಕ್ಕೀಡಾಗುವ ವಿಚಾರವಾಗಿದೆ. ಹೀಗಾಗಿ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದವರ ಮಾಹಿತಿ ಸಂಗ್ರಹಿಸಿ ಪ್ರತ್ಯೇಕ ನಿಗಾ ವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿತ್ತು. ಆದರೆ ವ್ಯಕ್ತಿಯ ಅಂತ್ಯಕ್ರಿಯೆ ವೇಳೆಯಲ್ಲೂ ಯಾವುದೇ ಮುನ್ನಚ್ಚರಿಕಾ ಕ್ರಮ ಕೈಗೊಂಡಿರಲಿಲ್ಲ.

    ಕಲಬುರಗಿ ಜಿಲ್ಲಾಡಳಿತ, ಸೋಂಕು ಪೀಡಿತ ಎಂದು ಗುರುತಿಸಿದ್ದರೂ ಸಚಿವರು ಗಂಭೀರವಾಗಿ ಪರಿಗಣಿಸಿರಲಿಲ್ಲ. ವೈದ್ಯಾಧಿಕಾರಿಗಳ ತಂಡ ಮೃತ ವ್ಯಕ್ತಿಯ ಗಂಟಲು ದ್ರವ, ರಕ್ತದ ಮಾದರಿ ಸಂಗ್ರಹ ಕಲಬುರಗಿಯಿಂದ ಬೆಂಗಳೂರಿಗೆ ತಡವಾಗಿ ಕಳಿಸಿದ್ದರು. ಹೀಗಾಗಿ ಈ ವಿಳಂಬವೇ ಅನಾಹುತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

    ಸಚಿವರ ಎಡವಟ್ಟು:
    * ವ್ಯಕ್ತಿ ಆಸ್ಪತ್ರೆಗೆ ದಾಖಲಾದ ಬಳಿಕ ವೈದ್ಯರು ಕೊರೊನಾ ಸೋಂಕು ಶಂಕಿತ ಅಂತ ಡಿಕ್ಲೇರ್ ಮಾಡಿದ್ದಾರೆ. ಆದರೆ ಆತನ ರಿಪೋರ್ಟ್ ಬರುವ ಮುನ್ನವೇ ಐಸೋಲೇಷನ್ ಸೆಂಟರ್ ನಿಂದ ಕುಟುಂಬಸ್ಥರು ಹೇಳಿದರು ಅಂತ ಹೈದರಾಬಾದ್‍ಗೆ ಶಿಫ್ಟ್ ಮಾಡಲಾಗಿತ್ತು.

    * ಸೋಂಕು ಶಂಕಿತರನ್ನು 28 ದಿನ ಪ್ರತ್ಯೇಕಿಸಿ ನಿಗಾದಲ್ಲಿ ಇಡಬೇಕು. ಆದರೆ ಈ ಸೋಂಕು ಪೀಡಿತನನ್ನು ರಿಪೋರ್ಟ್ ಬಾರದೇ ಒಂದೇ ದಿನದಲ್ಲಿ ಡಿಸ್ಜಾರ್ಜ್ ಮಾಡಿದ್ದು ಹೇಗೆ? ಇದು ಸ್ಥಳೀಯ ಡಿಸಿ, ಆರೋಗ್ಯಾಧಿಕಾರಿಗಳ ಗಮನಕ್ಕೆ ಬಂದಿರಲಿಲ್ವೇ? ಎಂಬ ಪ್ರಶ್ನೆ ಮೂಡಿದೆ.

    * ಕೊರೊನಾ ಸಾಂಕ್ರಾಮಿಕ ರೋಗವಾಗಿದ್ದರಿಂದ ಆಸ್ಪತ್ರೆಯವರಿಗೆ, ಆರೋಗ್ಯಾಧಿಕಾರಿಗಳಿಗೆ ಆತನನ್ನು ಬಲವಂತವಾಗಿ ಆಸ್ಪತ್ರೆಯಲ್ಲಿ ಇರಿಸುವಂತಹ ಅಧಿಕಾರ ಇದ್ದರೂ ಯಾಕೆ ಬಳಕೆ ಮಾಡಲಿಲ್ಲ?

    * ಸೋಂಕು ಪೀಡಿತ ಸಾವನ್ನಪ್ಪಿದಾಗ ಕಲಬುರಗಿ ಆರೋಗ್ಯಾಧಿಕಾರಿಗಳು ಆತನ ಅಂತ್ಯಕ್ರಿಯೆ ವೇಳೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸುತ್ತೋಲೆ ಹೊರಡಿಸಿದರು. ಆದರೆ ರಿಪೋರ್ಟ್ ಬಾರದೇ ಇದ್ದರೂ ಏಕಾಏಕಿ ಸುದ್ದಿಗೋಷ್ಠಿ ಕರೆದ ಸಚಿವರು ಆತನಿಗೆ ಕೊರೊನಾ ಗಿರೋನಾ ಏನಿಲ್ಲ, ವಯಸ್ಸಾಗಿತ್ತು, ಅಸ್ತಮಾ ಸಮಸ್ಯೆ ಇತ್ತು ಎಂದು ಹೇಳಿದ್ದಾರೆ.

    * ಕಲಬುರಗಿಯಲ್ಲಿ ಆರೋಗ್ಯಾಧಿಕಾರಿಗಳು ಆತನ ಅಂತ್ಯಕ್ರಿಯೆಯ ವೇಳೆ ಯಾವ ಮುನ್ನೆಚ್ಚರಿಕೆಯನ್ನೂ ತೆಗೆದುಕೊಳ್ಳಲಿಲ್ಲ. ಆತನ ಮೃತದೇಹವನ್ನು ರವಾನಿಸಿದ ಅಂಬುಲೆನ್ಸ್ ಡ್ರೈವರ್ ಕೂಡ ಮಾಸ್ಕ್ ಧರಿಸಿರಲಿಲ್ಲ.

     

    * ಗೈಡ್ ಲೈನ್ಸ್ ಪ್ರಕಾರ ಸೋಂಕು ಪೀಡಿತನ ಅಂತ್ಯಕ್ರಿಯೆಯ ವೇಳೆ, ಅಂತ್ಯಕ್ರಿಯೆ ನಡೆಸುವವರು ಕೈಗೆ ಗ್ಲೌಸ್ ಮುಖಕ್ಕೆ ಮಾಸ್ಕ್ ಹಾಗೂ ಕಾಲು ಮುಚ್ಚುವ ಶೂ ಧರಿಸಬೇಕು. ಅಂತ್ಯಕ್ರಿಯೆ ಮುಗಿದ ಬಳಿಕ ಸೂಕ್ತ ವಿಲೇವಾರಿ ನಡೆಸಬೇಕು. ಆದರೆ ಈತನ ಅಂತ್ಯಕ್ರಿಯೆಯಲ್ಲಿ ಈ ಪ್ರಕ್ರಿಯೆ ಕಾಣಿಸಲೇ ಇಲ್ಲ. ಆತನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡವರಿಂದ ಹಿಡಿದು ಯಾರೂ ಕೂಡ ಮಾಸ್ಕ್ ಧರಿಸಿರಲಿಲ್ಲ

    * ಸೋಂಕು ಶಂಕೆ ಎಂದು ಗೊತ್ತಾಗಿ ಆತ ಸಾವನ್ನಪ್ಪಿದ ಮೇಲೂ ಆತನ ರಿಪೋರ್ಟ್ ತರಿಸುವುದಕ್ಕೆ ತಡ ಮಾಡಿದ್ದಾರೆ. ರಿಪೋರ್ಟ್ ಗೂ ಮುನ್ನವೇ ಸಚಿವರುಗಳ ಎಡವಟ್ಟು ಹೇಳಿಕೆಯಿಂದ ಆರೋಗ್ಯಾಧಿಕಾರಿಗಳು ಆತ ವಾಸವಿದ್ದ ಮನೆ, ಏರಿಯಾವನ್ನು ಫ್ಯೂಮಿಗೇಷನ್ ಮಾಡುವ ಕೆಲಸಕ್ಕೂ ಕೈ ಹಾಕಿರಲಿಲ್ಲ. ಕೊರೊನಾದ ಮೊದಲ ಸಾವು ರಾಜ್ಯ ಸರ್ಕಾರದ ವೈಫಲ್ಯವನ್ನು ಸಾರಿದೆ.

     

  • ವಿದೇಶದಿಂದ ಬಂದವರ ಮೇಲೆ ನಿಗಾ: ಉಡುಪಿ ಡಿಎಚ್‍ಒ

    ವಿದೇಶದಿಂದ ಬಂದವರ ಮೇಲೆ ನಿಗಾ: ಉಡುಪಿ ಡಿಎಚ್‍ಒ

    ಉಡುಪಿ: ಜಿಲ್ಲೆಗೆ ವಿದೇಶದಿಂದ ಬಂದ ವ್ಯಕ್ತಿಗಳು, ಆರೋಗ್ಯ ಇಲಾಖೆಯ ಸ್ಥಳೀಯ ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರ ಬಳಿ ತಾವು ವಿದೇಶದಿಂದ ಬಂದಿರುವ ಬಗ್ಗೆ ಸ್ವಯಂ ಘೋಷಣೆ ಮಾಡಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಕುರಿತ ಕಾರ್ಯದಲ್ಲಿ ಸಹಕರಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ವಿನಂತಿಸಿದ್ದಾರೆ.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ನಡೆದ ಕೊರೊನಾ ಮುನ್ನೆಚ್ಚರಿಕೆ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಫೆಬ್ರವರಿ 25ರ ಬಳಿಕ ವಿದೇಶಗಳಿಂದ ಆಗಮಿಸಿರುವ ಸಾರ್ವಜನಿಕರು ಸ್ವಯಂ ಘೋಷಣೆ ಮಾಡಿಕೊಳ್ಳುವಂತೆ ಹಾಗೂ ಸಾರ್ವಜನಿಕರು ವಿದೇಶಗಳಿಂದ ಬಂದ ವ್ಯಕ್ತಿಗಳ ಬಗ್ಗೆ ಮಾಹಿತಿಯಿದ್ದಲ್ಲಿ ಆರೋಗ್ಯ ಇಲಾಖೆಗೆ ತಿಳಿಸುವ ಮೂಲಕ ಕೊರೊನಾ ನಿಯಂತ್ರಿಸಲು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ವಿನಂತಿಸಿದರು. ಶಂಕಿತ ವ್ಯಕ್ತಿಯ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದರು.

    ವಿದೇಶಗಳಿಗೆ ಭೇಟಿ ನೀಡಿ ವಾಪಸಾದವರು 14 ದಿನಗಳವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಮನೆಯಲ್ಲಿಯೆ ಪ್ರತ್ಯೇಕವಾಗಿದ್ದು, ರೋಗದ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಸಹಕರಿಸಬೇಕು. ಕೊರೊನಾ ಸೋಂಕಿನ ಸ್ಯಾಂಪಲ್ ಪರೀಕ್ಷೆಗಾಗಿ ಈಗಾಗಲೇ ಬೆಂಗಳೂರಿನಲ್ಲಿರುವ 2 ಲ್ಯಾಬ್‍ಗಳ ಜೊತೆಗೆ ಹೊಸದಾಗಿ ಶಿವಮೊಗ್ಗ, ಮೈಸೂರು ಮತ್ತು ಹಾಸನದಲ್ಲಿ ತಲಾ ಒಂದು ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅವರು ತಿಳಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಬಗ್ಗೆ ಸುಳ್ಳು ಸುದ್ದಿ ಅಥವಾ ವದಂತಿಗಳನ್ನು ಹರಡಬಾರದು. ಇಂತಹ ಸುದ್ದಿಗಳನ್ನು ಹರಡುವವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಕೊರೊನಾ ಶಂಕಿತ ವ್ಯಕ್ತಿಯ ಗುರುತು, ವಿಳಾಸ ಅಥವಾ ಇನ್ನಿತರ ವೈಯಕ್ತಿಕ ಮಾಹಿತಿಯನ್ನು ಸಹ ಮಾಧ್ಯಮದಲ್ಲಿ ಬಹಿರಂಗಪಡಿಸದಂತೆ ಡಿಹೆಚ್‍ಓ ತಿಳಿಸಿದರು. ವಿದೇಶದಿಂದ ಬಂದ ವ್ಯಕ್ತಿಗಳಲ್ಲಿ ತೀವ್ರ ಜ್ವರ, ನೆಗಡಿ, ಕೆಮ್ಮು, ಉಸಿರಾಟದ ಸಮಸ್ಯೆಯಿದ್ದಲ್ಲಿ ಜಿಲ್ಲಾ ಸವೇಕ್ಷಣಾ ಘಟಕದ ದೂ.ಸಂ 0820-2525561ಗೆ ಮಾಹಿತಿ ನೀಡಬೇಕು. ಈ ಕುರಿತು ವೈದ್ಯಕೀಯ ಪರೀಕ್ಷೆಗೆ ಆಗಮಿಸುವಾಗ ಖಾಸಗಿ ವಾಹನ ಅಥವಾ ಬಸ್ ಮುಂತಾದ ಸಾರ್ವಜನಿಕ ವಾಹನ ಬಳಸಬಾರದು. ಆರೋಗ್ಯ ಇಲಾಖೆಯಲ್ಲಿ ಇದಕ್ಕಾಗಿಯೇ ಪ್ರತ್ಯೇಕ ಸುಸಜ್ಜಿತ ವಾಹನವಿದ್ದು, ಆ ವಾಹನವನ್ನು ಶಂಕಿತರ ಮನೆಗೆ ಕಳುಹಿಸಿ ಅದೇ ವಾಹನದಲ್ಲಿ ಕರೆ ತಂದು ಅಗತ್ಯ ಪರೀಕ್ಷೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

  • ಜನದಟ್ಟಣೆ ಪ್ರದೇಶದಲ್ಲಿ ಹೆಚ್ಚಿನ ನಿಗಾವಹಿಸಿ ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ಸಲಹೆ

    ಜನದಟ್ಟಣೆ ಪ್ರದೇಶದಲ್ಲಿ ಹೆಚ್ಚಿನ ನಿಗಾವಹಿಸಿ ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ಸಲಹೆ

    ಮಡಿಕೇರಿ: ಕೊರೊನಾ ವೈರಸ್ ಬಗ್ಗೆ ಜಿಲ್ಲೆಯ ಪ್ರವಾಸಿ ತಾಣಗಳು, ಬಸ್ ನಿಲ್ದಾಣಗಳು, ರೆಸಾರ್ಟ್‍ಗಳು, ಹೋಂ ಸ್ಟೇಗಳು ಹಾಗೂ ಹೋಟೆಲ್‍ಗಳಲ್ಲಿ ಹೆಚ್ಚಿನ ನಿಗಾವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸಲಹೆ ನೀಡಿದ್ದಾರೆ.

    ಕೊರೊನಾ ವೈರಸ್ ಬೆಂಗಳೂರಿನಲ್ಲಿ ಕಂಡು ಬಂದಿರುವ ಹಿನ್ನೆಲೆ ಜಿಲ್ಲೆಯಲ್ಲಿಯೂ ಸಹ ಇನ್ನಷ್ಟು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಆ ನಿಟ್ಟಿನಲ್ಲಿ ಪ್ರವಾಸಿ ತಾಣಗಳು ಹಾಗೂ ಜನದಟ್ಟಣೆ ಪ್ರದೇಶಗಳಲ್ಲಿ ಹೆಚ್ಚಿನ ನಿಗಾವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

    ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳನ್ನು ದಾಸ್ತಾನು ಮಾಡಿಕೊಳ್ಳಬೇಕು. ಕೊರೊನಾ ವೈರಸ್ ಸಂಬಂಧಿಸಿದಂತೆ ಪ್ರವಾಸಿ ತಾಣಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಅನೀಸ್ ಕಣ್ಮಣಿ ಜಾಯ್ ಅವರು ಹೇಳಿದರು. ಈಗಾಗಲೇ ಜಿಲ್ಲೆಯ ಕರಿಕೆ, ಕುಟ್ಟ ಹಾಗೂ ಮಾಕುಟ್ಟ ಗಡಿ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಅದೇ ರೀತಿ ಜಿಲ್ಲೆಯ ವಿವಿಧ ಜನದಟ್ಟಣೆ ಸ್ಥಳಗಳಲ್ಲಿಯೂ ಈ ಬಗ್ಗೆ ಮುತುವರ್ಜಿ ವಹಿಸಬೇಕಿದೆ ಎಂದರು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ ಮೋಹನ್ ಅವರು ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ವೈರಸ್ ಕಂಡು ಬಂದಿಲ್ಲ. ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿ ದಾಸ್ತಾನು ಮಾಡಿಕೊಳ್ಳಲಾಗಿದೆ. ಹಾಗೆಯೇ ಪೋಸ್ಟರ್, ಬ್ಯಾನರ್, ಪ್ರವಾಸಿ ತಾಣಗಳು, ಗಡಿ ಪ್ರದೇಶ ಸೇರಿದಂತೆ ಜಿಲ್ಲೆಯ ಜನದಟ್ಟಣೆ ಪ್ರದೇಶಗಳಲ್ಲಿ ಮಾಹಿತಿ ಶಿಕ್ಷಣ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಅವರು ಮಾಹಿತಿ ನೀಡಿದರು.

    ವಿದೇಶದಿಂದ ಬರುವವರ ಬಗ್ಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಅವರಿಗೆ (94498 43263) ಕಡ್ಡಾಯವಾಗಿ ಮಾಹಿತಿ ನೀಡುವಂತಾಗಬೇಕು ಎಂದು ಕೋರಿದರು. ಹಾಗೆಯೇ 104 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ. ಜಿಲ್ಲೆಯ ಎಲ್ಲಾ ಹಂತದ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೊಠಡಿ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಅವರು ಹೇಳಿದರು.

  • ಕರ್ನಾಟಕದಲ್ಲಿ 4 ಕೊರೊನಾ ಪಾಸಿಟಿವ್ ಕೇಸ್: ಶ್ರೀರಾಮುಲು ಸ್ಪಷ್ಟನೆ

    ಕರ್ನಾಟಕದಲ್ಲಿ 4 ಕೊರೊನಾ ಪಾಸಿಟಿವ್ ಕೇಸ್: ಶ್ರೀರಾಮುಲು ಸ್ಪಷ್ಟನೆ

    -ಬೆಂಗ್ಳೂರಿನಲ್ಲಿ ಮೂರು ಕೊರೊನಾ ಕೇಸ್

    ಬೆಂಗಳೂರು: ಕರ್ನಾಟಕದಲ್ಲಿ 4 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಸ್ಪಷ್ಟನೆ ನೀಡಿದ್ದಾರೆ.

    ಆರೋಗ್ಯ ಸಚಿವ ಶ್ರೀರಾಮುಲು ಅವರು ಟ್ವೀಟ್ ಮಾಡಿ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಕರ್ನಾಟಕದಲ್ಲಿ ಇದುವರೆಗೆ 4 ವ್ಯಕ್ತಿಗಳಲ್ಲಿ #COVID19 ಸೋಂಕು ದೃಢಪಟ್ಟಿದ್ದು, ಅವರನ್ನು ಹಾಗೂ ಅವರ ಕುಟುಂಬ ಸದಸ್ಯರನ್ನು ಪ್ರತ್ಯೇಕವಾಗಿರಿಸಿ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ನಾಗರಿಕರು ಮುಂಜಾಗೃತ ಕ್ರಮ ವಹಿಸಿ ಸೋಂಕು ಹರಡದಂತೆ ಸಹಕರಿಸಬೇಕು ಎಂದು ಕೋರುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ.

    ಇತ್ತ ಬೆಂಗಳೂರಿನಲ್ಲಿ ಮೂರು ಕೊರೊನಾ ಪಾಸಿಟಿವ್ ಕೇಸ್‍ಗಳು ವರದಿಯಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.

    ಸೋಮವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಧ್ಯಮ ಹೇಳಿಕೆ ಬಿಡುಗಡೆ ಮಾಡಿತ್ತು. ಮಾರ್ಚ್ 1ರಂದು ಅಮೆರಿಕದಿಂದ ಆಗಮಿಸಿದ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸಿದ್ದು ಪಾಸಿಟಿವ್ ಫಲಿತಾಂಶ ಬಂದಿದೆ ಎಂದು ತಿಳಿಸಿತ್ತು.

    ಸಾಫ್ಟ್ ವೇರ್ ಎಂಜಿನಿಯರ್, ಪತ್ನಿ, ಮಗಳ ಜೊತೆ ಚಾಲಕನನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿಯವರೆಗೆ 982 ಮಂದಿ ಮೇಲೆ ನಿಗಾ ಇರಿಸಲಾಗಿದೆ. ಈ ಪೈಕಿ ಕಳೆ 28 ದಿನಗಳಿಂದ 266 ಮಂದಿ ಮೇಲೆ ನಿಗಾ ಇಟ್ಟಿದ್ದರೆ 700 ಮಂದಿ ಮನೆಯಲ್ಲೇ ಪ್ರತ್ಯೇಕವಾಗಿ ನಿಗಾ ಇರಿಸಲಾಗಿದೆ. ಅಲ್ಲದೇ ಸೋಮವಾರ 12 ಮಂದಿ ವಿವಿಧ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇಲ್ಲಿಯವರೆಗೆ 432 ಮಂದಿಯ ರಕ್ತದ ಮಾದರಿಯನ್ನು ಲ್ಯಾಬ್‍ಗೆ ಕಳುಹಿಸಲಾಗಿದ್ದು 364 ಮಂದಿ ಫಲಿತಾಂಶ ನೆಗೆಟಿವ್ ಬಂದಿದೆ. 68 ಮಂದಿಯ ಫಲಿತಾಂಶ ಲಭ್ಯವಾಗಬೇಕಿದೆ. ಬೆಂಗಳೂರಿನಲ್ಲಿ 8, ಮಂಗಳೂರಿನಲ್ಲಿ 2, ಬಾಗಲಕೋಟೆ ಮತ್ತು ಹಾಸನದಲ್ಲಿ ತಲಾ ಒಂದೊಂದು ಮಂದಿಯನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿತ್ತು.

    ಇಲ್ಲಿಯವರೆಗೆ ಒಟ್ಟು 91,911 ಮಂದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಪರೀಕ್ಷೆ ಮಾಡಲಾಗಿದೆ. ಈ ಪೈಕಿ ಬೆಂಗಳೂರಿನಲ್ಲಿ 61,585 ಮಂದಿ, ಮಂಗಳೂರಿನಲ್ಲಿ 25,003 ಮಂದಿಯನ್ನು ಸ್ಕ್ರೀನಿಂಗ್ ಪರೀಕ್ಷೆಗೆ ಒಳಪಡಿಸಲಾಗಿದೆ. ಕಾರವಾರ ಮತ್ತು ಮಂಗಳೂರು ಬಂದರಿನಲ್ಲಿ ಒಟ್ಟು 5,323 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದೆ ಎಂದು ತಿಳಿಸಿತ್ತು.

  • ಬೆಂಗ್ಳೂರಿನಲ್ಲಿ ಮತ್ತೊಂದು ಕೊರೊನಾ ಕೇಸ್ – ಶಾಲೆಗೆ ರಜೆ ಘೋಷಣೆ

    ಬೆಂಗ್ಳೂರಿನಲ್ಲಿ ಮತ್ತೊಂದು ಕೊರೊನಾ ಕೇಸ್ – ಶಾಲೆಗೆ ರಜೆ ಘೋಷಣೆ

    – ವಿದ್ಯಾರ್ಥಿನಿಯ ತಾಯಿಯಿಂದ ಶಾಲೆಗೆ ಪತ್ರ
    – ಭಯಗೊಂಡು ರಜೆ ಘೋಷಿಸಿದ ಶಾಲೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಬ್ಬ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.

    ನಗರದ ವೈಟ್‍ಫೀಲ್ಡ್ ನ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯ ತಂದೆಗೆ ಕೊರೊನಾ ಸೋಂಕು ತಗುಲಿದೆ ಎಂದು ಶಂಕಿಸಲಾಗುತ್ತಿದೆ. ಈ ಬಗ್ಗೆ ಸ್ವತಃ ವಿದ್ಯಾರ್ಥಿನಿಯ ತಾಯಿ ಶಾಲಾ ಆಡಳಿತ ಮಂಡಳಿಗೆ ಪತ್ರ ಬರೆಯುವ ಮೂಲಕ ವಿಷಯ ತಿಳಿಸಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಮೂರರ ಕಂದಮ್ಮಗೆ ಕೊರೊನಾ ವೈರಸ್

    ನನ್ನ ಪತಿಗೆ ಕೊರೊನಾ ಸೋಂಕು ಶಂಕೆ ಇದೆ. ಹೀಗಾಗಿ ನಾನು ಮಗಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ವಿದ್ಯಾರ್ಥಿನಿಯ ತಾಯಿ ಇಮೇಲ್ ಮೂಲಕ ತಿಳಿಸಿದ್ದಾರೆ. ಇಮೇಲ್ ನೋಡಿ ಭಯಗೊಂಡ ಶಾಲಾ ಆಡಳಿತ ಮಂಡಳಿ ತರಾತುರಿಯಲ್ಲಿ ಪೋಷಕರಿಗೆ ನೋಟಿಸ್ ಜಾರಿ ಮಾಡಿ ರಜೆ ಘೋಷಿಸಿದೆ.

    ನಮ್ಮ ಶಾಲೆಯಲ್ಲಿ ಓದುವ ವಿದ್ಯಾರ್ಥಿನಿಯ ಪೋಷಕರೊಬ್ಬರಿಗೆ ಕೊರೊನಾ ಪಾಸಿಟಿವ್ ಇದೆ. ಹೀಗಾಗಿ ರಜೆ ಘೋಷಣೆ ಮಾಡುತ್ತೇವೆ ಎಂದು ಶಾಲಾ ಆಡಳಿತ ಮಂಡಳಿ ಎಲ್ಲಾ ಪೋಷಕರಿಗೂ ಪತ್ರ ಬರೆದಿದೆ. ಇದನ್ನು ತಿಳಿದ ಆರೋಗ್ಯಾಧಿಕಾರಿಗಳು ಕೂಡಲೇ ಸ್ಥಳಕ್ಕೆ ತೆರಳಿದ್ದಾರೆ. ಇದನ್ನೂ ಓದಿ: ಕೊರೊನಾ ಟೆನ್ಶನ್ ಮಧ್ಯೆ ಬೆಂಗ್ಳೂರಿನಲ್ಲಿ ವಿಚಿತ್ರ ಸಾಂಕ್ರಾಮಿಕ ಕಾಯಿಲೆ

    ಆರೋಗ್ಯಾಧಿಕಾರಿಗಳು ಶಾಲೆಗೆ ತೆರಳಿ ಮುಂಜಾಗೃತ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಆರೋಗ್ಯ ಇಲಾಖೆಯ ಅಧಿಕೃತ ಮಾಹಿತಿ ಇಲ್ಲದೆ ಕೊರೊನಾ ಪಾಸಿಟಿವ್ ಎಂದು ಪೋಷಕರಿಗೆ ಭಯಪಡಿಸಿದ್ದಕ್ಕೆ ಶಾಲೆಯ ಆಡಳಿತ ಮಂಡಳಿ ವಿರುದ್ಧ ಆರೋಗ್ಯ ಇಲಾಖೆ ಕ್ರಮಕ್ಕೆ ಸಜ್ಜಾಗಿದೆ.

    ಸದ್ಯ ಆರೋಗ್ಯಾಧಿಕಾರಿಗಳು ವೈಟ್‍ಫೀಲ್ಡ್ ನ ಸೋಂಕು ಶಂಕೆಯ ವ್ಯಕ್ತಿಯ ಅಪಾರ್ಟ್‍ಮೆಂಟ್‍ಗೂ ಭೇಟಿ ನೀಡಿ ಅಲ್ಲೂ ಕೂಡ ಸ್ಕ್ರೀನಿಂಗ್ ನಡೆಸಿದ್ದಾರೆ. ಎರಡನೇ ಬಾರಿಗೆ ದೃಢಪಡಿಸಿಕೊಳ್ಳಲು ಸೋಂಕು ಶಂಕೆಯ ವ್ಯಕ್ತಿಯ ರಕ್ತಮಾದರಿಯನ್ನು ಪುಣೆಗೆ ಕಳುಹಿಸಲಾಗಿದೆ.

    ಆರೋಗ್ಯ ಇಲಾಖೆ ಶಾಲೆಯ ವಿರುದ್ಧ ಕ್ರಮಕ್ಕೆ ಸಜ್ಜಾಗಿದ್ದು, ಪ್ರಾಂಶುಪಾಲರಿಗೆ ನೋಟಿಸ್ ಜಾರಿ ಮಾಡಿದೆ. ಸದ್ಯ ಆಡಳಿತ ಮಂಡಳಿ ಶಾಲೆಗೆ ರಜೆ ಘೋಷಿಸಿದೆ.

  • ಶಿವಮೊಗ್ಗದಲ್ಲಿ 11 ಜನರ ಮೇಲೆ ತೀವ್ರ ನಿಗಾ – ಜಿಲ್ಲಾ ಆರೋಗ್ಯ ಇಲಾಖೆ ಸ್ಪಷ್ಟನೆ

    ಶಿವಮೊಗ್ಗದಲ್ಲಿ 11 ಜನರ ಮೇಲೆ ತೀವ್ರ ನಿಗಾ – ಜಿಲ್ಲಾ ಆರೋಗ್ಯ ಇಲಾಖೆ ಸ್ಪಷ್ಟನೆ

    ಶಿವಮೊಗ್ಗ: ನಗರದಲ್ಲಿ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಡಿಎಚ್‍ಓ ಡಾ. ರಾಜೇಶ್ ಸುರಗಿಹಳ್ಳಿ ಹೇಳಿದ್ದಾರೆ.

    ಇಂದು ತಮ್ಮನ್ನು ಭೇಟಿ ಮಾಡಿದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಶಿವಮೊಗ್ಗದಲ್ಲಿ ಒಟ್ಟು 11 ಜನರ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ಹೇಳಿದ್ದಾರೆ. ಶಿವಮೊಗ್ಗ ಜಿಲ್ಲೆಗೆ ಬರುವ ವಿದೇಶಿ ಪ್ರವಾಸ ಮಾಡಿದವರ ಮೇಲೆ ನಿಗಾ ಇರಿಸಲಾಗಿದ್ದು, ಅದರಲ್ಲಿ ಜನವರಿಯಲ್ಲಿ ಚೀನಾದಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ನಾಲ್ವರು ವಿದ್ಯಾರ್ಥಿಗಳನ್ನು ಸೇರಿದಂತೆ, 5 ಜನರ ಕುಟುಂಬವೊಂದರ ಮೇಲೂ ನಿಗಾ ಇರಿಸಲಾಗಿದೆ. ಅವರಿಗೆ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಈಗಾಗಲೇ ತಿಳಿಸಲಾಗಿದೆ ಎಂದಿದ್ದಾರೆ.

    ಈಗಾಗಲೇ ಈ 11 ಜನರಿಗೆ ವಿಮಾನ ನಿಲ್ದಾಣದಲ್ಲಿಯೇ ಸ್ಕ್ರೀನಿಂಗ್ ನಡೆಸಲಾಗಿದ್ದು, ನೆಗೆಟಿವ್ ರಿಪೋರ್ಟ್ ಬಂದಿದೆ. ಆದರೂ ನಾಲ್ಕು ವಾರಗಳ ಕಾಲ ನಿಗಾ ಇರಿಸಬೇಕೆಂಬ ನಿರ್ದೇಶನ ಬಂದಿರುವ ಹಿನ್ನೆಲೆಯಲ್ಲಿ ಅವರ ಮೇಲೆ ನಿಗಾ ಇರಿಸಲಾಗಿದ್ದು, ಮನೆ ಬಿಟ್ಟು ಎಲ್ಲಿಯೂ ತೆರಳದಂತೆ ಸೂಚಿಸಲಾಗಿದೆ.

    ಜೊತೆಗೆ ಯಾವುದೇ ಸಭೆ ಸಮಾರಂಭ, ಯಾವುದೇ ಪ್ರವಾಸ ಮಾಡದಂತೆ, ಕುಟುಂಬದ ಸದಸ್ಯರ ಜೊತೆ ಬೆರೆಯದಂತೆ ಸೂಚಿಸಲಾಗಿದ್ದು, ಅವರಿಗೆ ವೈರಸ್ ಬಗ್ಗೆ ಜಾಗೃತಿ ನೀಡಲಾಗಿದೆ ಎಂದಿದ್ದಾರೆ. ಇನ್ನು ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ 6 ಬೆಡ್ ಇರುವ ಕೊರೊನಾ ತೀವ್ರ ನಿಗಾ ಘಟಕ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ.

  • ಬೆಂಗ್ಳೂರು ಟೆಕ್ಕಿಗೆ ಕೊರೊನಾ – ಅಪಾರ್ಟ್‌ಮೆಂಟ್‌ನ 90 ಮನೆಗಳಿಗೆ ನೋಟಿಸ್

    ಬೆಂಗ್ಳೂರು ಟೆಕ್ಕಿಗೆ ಕೊರೊನಾ – ಅಪಾರ್ಟ್‌ಮೆಂಟ್‌ನ 90 ಮನೆಗಳಿಗೆ ನೋಟಿಸ್

    – ಓರ್ವನ ತಪಾಸಣೆ, ಮತ್ತೊಬ್ಬನಿಗಾಗಿ ಹುಡುಕಾಟ

    ಬೆಂಗಳೂರು: ಕೊರೊನಾ ವೈರಸ್ ಸೋಂಕು ಪೀಡಿತ ಟೆಕ್ಕಿ ವಾಸವಿದ್ದ ಅಪಾರ್ಟ್‌ಮೆಂಟ್‌ನ 90 ಮನೆಗಳಿಗೂ ಮುಂಜಾಗೃತವಾಗಿ ನೋಟಿಸ್ ನೀಡಲಾಗಿದೆ.

    ಸರ್ಜಾಪುರ ರಸ್ತೆಯ ಜೈನ್ ಹೈಟ್ ಅಲ್ಟ್ರಾ ಅಪಾರ್ಟ್‌ಮೆಂಟ್‌ಗೆ ನೋಟಿಸ್ ನೀಡಲಾಗಿದೆ. ಕೊರೊನಾ ಸೋಂಕು ಪೀಡಿತ ಟೆಕ್ಕಿ ಈ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದನು. ಟೆಕ್ಕಿ ತನ್ನ ಮೂರು ಜನ ಸ್ನೇಹಿತರ ಜೊತೆ ಪ್ಲ್ಯಾಟ್ ನಂಬರ್ ಸಿ 7 ನಲ್ಲಿ ವಾಸವಿದ್ದನು. ಹೀಗಾಗಿ ಈ ಅಪಾರ್ಟ್‌ಮೆಂಟ್‌ಗೆ ನೋಟಿಸ್ ನೀಡಲಾಗಿದೆ.

    ಅಪಾರ್ಟ್‌ಮೆಂಟ್‌ ಅಧ್ಯಕ್ಷರಿಗೆ ಆರೋಗ್ಯ ಇಲಾಖೆ ಪತ್ರ ಬರೆದಿದೆ. ಈ ಪತ್ರ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಒಟ್ಟು ಈ ಅಪಾರ್ಟ್‌ಮೆಂಟ್‌ನಲ್ಲಿ 90 ಮನೆಗಳಿವೆ. ಹೀಗಾಗಿ ಎಲ್ಲಾ ಮನೆಗಳಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಭೇಟಿ ಪರಿಶೀಲನೆ ಮಾಡಲಿದ್ದಾರೆ.

    ಸದ್ಯಕ್ಕೆ ಕೊರೊನಾ ಸೋಂಕು ಪೀಡಿತ ಅಪಾರ್ಟ್‌ಮೆಂಟ್‌ ನಿವಾಸಿಗಳ ಮೇಲೆ ಆರೋಗ್ಯ ಇಲಾಖೆ ನಿಗಾವಹಿಸಿದೆ. ಅಪಾರ್ಟ್‌ಮೆಂಟ್‌ನಲ್ಲಿ ಯಾರಿಗಾದರೂ ಜ್ವರ ಶೀತ ಕಾಣಿಸಿಕೊಂಡರೆ ತಕ್ಷಣ ಕೊರೊನಾ ಟೆಸ್ಟ್ ಮಾಡಿಸಲು ಸೂಚನೆ ನೀಡಲಾಗುವುದು.

    ಕೊರೊನಾ ಸೋಂಕಿತ ಟೆಕ್ಕಿಯ ಜೊತೆ ಇಬ್ಬರೂ ರೂಮ್‍ಮೇಟ್ ಇದ್ದರು. ಈಗಾಗಲೇ ಒಬ್ಬ ಟೆಕ್ಕಿ ಸಿಕ್ಕಿದ್ದು, ಆತನನ್ನು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಲಾಗಿದೆ. ಮತ್ತೊಬ್ಬನಿಗಾಗಿ ಆರೋಗ್ಯ ಇಲಾಖೆಯಿಂದ ಹುಡುಕಾಟ ನಡೆಯುತ್ತಿದೆ. ಇಂದು ಬೆಳಗ್ಗೆ ಟೆಕ್ಕಿ ನಿವಾಸಕ್ಕೆ ಹೋದಾಗ ಆತ ಸಿಕ್ಕಿರಲಿಲ್ಲ. ಆತ ಸಿಕ್ಕ ಬಳಿಕ ಆತನಿಗೂ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಲಾಗುತ್ತದೆ.

    ಸೋಂಕು ಪೀಡಿತ ಇಬ್ಬರೂ ಟೆಕ್ಕಿಗಳಿಗೂ 28 ದಿನ ಮನೆ ಬಿಟ್ಟು ಹೊರಬಾರದಂತೆ ಸೂಚನೆ ನೀಡಲಾಗಿದೆ. ಜೊತೆಗೆ ಅಪಾರ್ಟ್‌ಮೆಂಟ್‌ನ ಎಲ್ಲರಿಗೂ ವೈದ್ಯಕೀಯ ತಪಾಸಣೆ ಮಾಡಬೇಕು ಎಂದು ಆದೇಶ ನೀಡಲಾಗಿದೆ ಎಂದು ಆರೋಗ್ಯ ಇಲಾಖೆಯ ಉನ್ನತ ಮೂಲದಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

  • ಕೊರೊನಾ ವೈರಸ್ ಭೀತಿ – ಹೈದರಾಬಾದ್‍ನತ್ತ ತೆರಳುವ ಬಸ್ ಖಾಲಿ-ಖಾಲಿ

    ಕೊರೊನಾ ವೈರಸ್ ಭೀತಿ – ಹೈದರಾಬಾದ್‍ನತ್ತ ತೆರಳುವ ಬಸ್ ಖಾಲಿ-ಖಾಲಿ

    ಯಾದಗಿರಿ: ಹೈದರಾಬಾದಿನಲ್ಲಿ ಟೆಕ್ಕಿಯೊಬ್ಬರಿಗೆ ಕೊರೊನ ವೈರಸ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಜಿಲ್ಲೆ ಯಾದಗಿರಿಯಿಂದ ಹೈದರಾಬಾದ್‍ಗೆ ತೆರಳುವ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ.

    ಹೈದರಾಬಾದ್‍ನಿಂದ ಜಿಲ್ಲೆಗೆ ಬಂದು ವಾಪಸ್ ತೆರಳುತ್ತಿರುವ ತೆಲಂಗಾಣ ಬಸ್‍ಗಳು ಖಾಲಿ ಖಾಲಿಯಾಗಿವೆ. ಇನ್ನೂ ಕೆಲವು  ಪ್ರಯಾಣಿಕರು ಮತ್ತು ಬಸ್ ಚಾಲಕ, ನಿರ್ವಾಹಕರು ಮುಖಕ್ಕೆ ಮಾಸ್ಕ್ ಧರಿಸಿ ಹೈದರಾಬಾದ್ ನತ್ತ  ಪ್ರಯಾಣ ಬೆಳೆಸುತ್ತಿದ್ದಾರೆ.

    ತೆಲಂಗಾಣದಿಂದ ರಾಜ್ಯಕ್ಕೆ ಬರುವ ಬಸ್‍ಗಳನ್ನು ಅಲ್ಲಿನ ಆರೋಗ್ಯ ಇಲಾಖೆ ತಪಾಸಣೆ ಮಾಡುತ್ತಿದೆ. ಆದರೆ ಅಲ್ಲಿಂದ ರಾಜ್ಯ ತಲುಪುವ ಬಸ್ ತಪಾಸಣೆ ನಮ್ಮ ರಾಜ್ಯದ ಆರೋಗ್ಯ ಇಲಾಖೆಯಿಂದ ಮಾಡದಿರುವುದು ಪ್ರಯಾಣಿಕ ಮತ್ತು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

    ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಹಿನ್ನೆಲೆ ಕರ್ನಾಟಕ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಆಂಧ್ರ, ತೆಲಂಗಾಣ, ಕೇರಳ ಗಡಿಯಲ್ಲಿ ಎಚ್ಚರಿಕೆ ನೀಡಲಾಗಿದೆ. ಬಳ್ಳಾರಿ, ಕಲಬುರುಗಿ, ಬೆಳಗಾವಿ, ಚಾಮರಾಜನಗರ, ರಾಯಚೂರು ಭಾಗಗಳಲ್ಲಿ ಕೂಡ ಎಚ್ಚರಿಕೆ ವಹಿಸಲಾಗುತ್ತಿದೆ.

  • ‘ಟೆಕ್ಕಿ ಕೆಲ್ಸ ಮಾಡುತ್ತಿದ್ದ ಕಂಪನಿ ಅಡ್ರೆಸ್ ಹೇಳಿ’ – ಆರೋಗ್ಯ ಇಲಾಖೆಗೆ ದುಂಬಾಲು ಬೀಳ್ತಿರುವ ಬೆಂಗ್ಳೂರಿಗರು

    ‘ಟೆಕ್ಕಿ ಕೆಲ್ಸ ಮಾಡುತ್ತಿದ್ದ ಕಂಪನಿ ಅಡ್ರೆಸ್ ಹೇಳಿ’ – ಆರೋಗ್ಯ ಇಲಾಖೆಗೆ ದುಂಬಾಲು ಬೀಳ್ತಿರುವ ಬೆಂಗ್ಳೂರಿಗರು

    ಬೆಂಗಳೂರು: ಚೀನಾದಲ್ಲಿ ಮರಣಮೃದಂಗ ಬಾರಿಸುತ್ತಿರುವ ಮಹಾಮಾರಿ ಕೊರೊನಾ ಕರ್ನಾಟಕಕ್ಕೂ ಕಾಲಿಟ್ಟಿದೆ. ಆಂಧ್ರಪ್ರದೇಶ ಮೂಲದ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಟೆಕ್ಕಿ ಕೊರೊನಾ ವೈರಸ್‍ಗೆ ತುತ್ತಾಗಿರುವುದು ಅಧಿಕೃತವಾಗಿ ಪ್ರಕಟವಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಟೆಕ್ಕಿ ಯಾವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ? ಅಲ್ಲಿನ ವಿಳಾಸ ಬಹರಂಗಪಡಿಸಿ ಎಂದು ಬೆಂಗಳೂರಿಗರು, ಇತರೆ ಟೆಕ್ಕಿಗಳು ಆರೋಗ್ಯ ಇಲಾಖೆಗೆ ದುಂಬಾಲು ಬೀಳುತ್ತಿದ್ದಾರೆ.

    ಕೊರೊನಾ ವೈರಸ್ ಸೋಂಕು ತಗುಲಿರುವ ಟೆಕ್ಕಿ ಕೆಲಸ ಮಾಡುತ್ತಿದ್ದ ಕಂಪನಿಯ ಹೆಸರನ್ನು ಆರೋಗ್ಯ ಇಲಾಖೆ ಬಹಿರಂಗಪಡಿಸಿಲ್ಲ. ಗೌಪ್ಯ ಮಾಹಿತಿಯಡಿ ಟೆಕ್ಕಿಯ ಹೆಸರು, ಆತ ಕಾರ್ಯನಿರ್ವಹಿಸುತ್ತಿದ್ದ ಕಂಪನಿಯ ಹೆಸರನ್ನು ಇಲಾಖೆ ಮುಚ್ಚಿಟ್ಟಿದೆ. ಆದ್ದರಿಂದ ಟ್ವಿಟರ್ ಮೂಲಕ ಇಲಾಖೆಗೆ ಟೆಕ್ಕಿಗಳು, ಬೆಂಗಳೂರಿಗರು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಇಲಾಖೆಯ ಸಹಾಯ ವಾಣಿಗೂ ಕರೆಗಳ ಮೇಲೆ ಕರೆ ಮಾಡುತ್ತಿದ್ದಾರೆ.

    ಕಂಪನಿಯ ಹೆಸ್ರುನ್ನು ಬಹಿರಂಗ ಪಡಿಸಿ, ಚೀನಾದಂತೆ ಎಲ್ಲವನ್ನೂ ಮುಚ್ಚಿಡುವ ಕೆಲಸ ಮಾಡಬೇಡಿ ಎಂದು ನೆಟ್ಟಿಗರು ಆರೋಗ್ಯ ಇಲಾಖೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಕೆಲಸಕ್ಕೆ ಹೋಗೋಕೆ ಭಯವಾಗುತ್ತಿದೆ ಎಂದು ಟೆಕ್ಕಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಕೊರೊನಾ ಭೀತಿಗಿಂತ ಈಗ ಬೆಂಗಳೂರಿಗರಿಗೆ ಸೋಂಕಿಗೆ ತುತ್ತಾಗಿರುವ ಟೆಕ್ಕಿ ಎಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎನ್ನುವ ಕುತೂಹಲವೇ ಹೆಚ್ಚಾಗಿದೆ.

    ಟೆಕ್ಕಿಗೆ ಕೊರೊನಾ ಬಂದಿದ್ದು ಹೇಗೆ?
    ಟೆಕ್ಕಿ ಫೆ. 17 ರಂದು ದುಬೈಗೆ ಕೆಲಸದ ಸಂಬಂಧ ತೆರಳಿದ್ದರು. ಅಲ್ಲಿ ಹಾಕಾಂಗ್ ಗೆಳೆಯರ ಜೊತೆ ಎರಡು ಮೂರು ದಿನ ಕೆಲಸ ಮಾಡಿದ್ದರು. ಈ ವೇಳೆ ಅವರಿಗೆ ಸೋಂಕು ತಗುಲಿದೆ ಎಂದು ಶಂಕಿಸಲಾಗಿದೆ. ದುಬೈನಿಂದ ಫೆ.20ರಂದು ಬೆಂಗಳೂರಿಗೆ ಬಂದವರಿಗೆ ಜ್ವರ ಕಾಣಿಸಿಕೊಂಡಿತ್ತು. ಪಿ.ಜಿಯಲ್ಲಿ ವಾಸ್ತವ್ಯ ಮಾಡಿದ್ದ ಟೆಕ್ಕಿ ನಗರದ ವಿವಿಧೆಡೆ ಓಡಾಡಿದ್ದರು. ಫೆ.22 ರಂದು ಬಸ್ ಮೂಲಕ ಹೈದರಾಬಾದ್‍ಗೆ ತೆರಳಿ ಸಿಕಂದರಾಬಾದ್‍ನ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಜ್ವರ ಕಡಿಮೆಯಾಗದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಗಾಂಧಿ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಸೋಂಕು ಇರುವುದು ಖಚಿತವಾಗಿತ್ತು.

    ಟೆಕ್ಕಿ ಈಗ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತೆಲಂಗಾಣ ಆರೋಗ್ಯ ಸಚಿವ ಈಟಾಲ ರಾಜೇಂದ್ರ ತಿಳಿಸಿದ್ದಾರೆ. ಟೆಕ್ಕಿಯ ಸಂಪರ್ಕಕ್ಕೆ ಬಂದಿದ್ದ ಜನರನ್ನು ಗುರುತಿಸುವ ಮತ್ತು ಅವರನ್ನು ಪ್ರತ್ಯೇಕ ವಾರ್ಡ್‍ಗಳಿಗೆ ಶಿಫ್ಟ್ ಮಾಡುವ ಕೆಲಸದಲ್ಲಿ ತೆಲಂಗಾಣ ಆರೋಗ್ಯ ಇಲಾಖೆ ಅಧಿಕಾರಿಗಳು ನಿರತರಾಗಿದ್ದಾರೆ. ಟೆಕ್ಕಿ ಸಿಕಂದರಾಬಾದ್‍ನ ಅವಿಭಕ್ತ ಕುಟುಂಬಕ್ಕೆ ಸೇರಿದ್ದು, ಕುಟುಂಬಸ್ಥರು, ಬಸ್‍ನಲ್ಲಿ ಬೆಂಗಳೂರಿನಿಂದ ಹೈದರಾಬಾದ್‍ಗೆ ಪ್ರಯಾಣಿಸಿದ್ದ 27 ಪ್ರಯಾಣಿಕರು, ಸಿಕಂದರಾಬಾದ್‍ನ ಅಪೊಲೋ ಆಸ್ಪತ್ರೆಯ 20 ಸಿಬ್ಬಂದಿಗಳನ್ನು ಗುರುತಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಒಟ್ಟು 80 ಮಂದಿಯ ಮೇಲೆ ನಿಗಾ ಇಡಲಾಗಿದ್ದು ತೆಲಂಗಾಣ ಸರ್ಕಾರ ಈಗಾಗಲೇ ಮಾಹಿತಿಯನ್ನು ಕರ್ನಾಟಕ ಸರ್ಕಾರಕ್ಕೆ ನೀಡಿದೆ.

  • ಕೊರೊನಾ ವೈರಸ್ ಆತಂಕ – ಕೊಡಗು ಜಿಲ್ಲೆಯಲ್ಲಿಯೂ ಹೈ ಅಲರ್ಟ್

    ಕೊರೊನಾ ವೈರಸ್ ಆತಂಕ – ಕೊಡಗು ಜಿಲ್ಲೆಯಲ್ಲಿಯೂ ಹೈ ಅಲರ್ಟ್

    ಮಡಿಕೇರಿ: ವಿಶ್ವಾದ್ಯಂತ ಮಾರಣಾಂತಿಕ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಕೊಡಗು ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಪ್ರಕರಣ ಪತ್ತೆಯಾಗದಿದ್ದರೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

    ಈಗಾಗಲೇ ಕೊಡಗು ಜಿಲ್ಲಾಸ್ಪತ್ರೆಯಲ್ಲಿ 6 ಬೆಡ್‍ಗಳ ವಿಶೇಷ ವಾರ್ಡ್, ಸೋಮವಾರಪೇಟೆ ಮತ್ತು ವಿರಾಜಪೇಟೆ ತಾಲೂಕು ಆಸ್ಪತ್ರೆಯಲ್ಲೂ ತಲಾ ಎರಡು ಬೆಡ್‍ಗಳ ಒಂದೊಂದು ವಿಶೇಷ ವಾರ್ಡ್ ಸಿದ್ಧಗೊಳಿಸಲಾಗಿದೆ. ಕೇರಳ, ಅಸ್ಸಾಂ ಸೇರಿದಂತೆ ಹೊರರಾಜ್ಯಗಳಿಂದ ಕಾರ್ಮಿಕರು ಕೊಡಗಿಗೆ ಹೆಚ್ಚಿನ ಪ್ರಮಾಣದಲ್ಲಿ ಬರುವುದರಿಂದ ಕೊಡಗಿನ ಕಾಫಿ ತೋಟದ ಮಾಲೀಕರಿಗೂ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

    ಅಲ್ಲದೆ ಕೇರಳ ರಾಜ್ಯದಲ್ಲಿ ಈಗಾಗಲೇ ಕೊರೊನಾ ವೈರಸ್ ಸೋಂಕಿತ 3 ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಮುಂದಿನ 15 ದಿನಗಳ ಕಾಲ ಕೇರಳದಿಂದ ಯಾವುದೇ ಕಾರ್ಮಿಕರನ್ನು ಕರೆತರುವಂತಿಲ್ಲ ಮತ್ತು ಇಲ್ಲಿರುವ ಕಾರ್ಮಿಕರನ್ನು ಕಳುಹಿಸದಂತೆ ಆರೋಗ್ಯ ಇಲಾಖೆ ಸೂಚಿಸಿ, ನೋಟಿಸ್ ನೀಡಿದೆ.

    ಕೊಡಗು ಪ್ರವಾಸಿ ತಾಣಗಳ ಜಿಲ್ಲೆಯಾಗಿದ್ದು, ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುವುದರಿಂದ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರಿಗೆ ಅರಿವು ಮೂಡಿಸಲು ಬಿತ್ತಿಪತ್ರಗಳನ್ನು, ಕರಪತ್ರಗಳನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ.