Tag: health department

  • 2 ತಿಂಗಳ ಕಂದಮ್ಮನ ಮೇಲೆ ಕೊರೊನಾ ಕರಿನೆರಳು – ಓರ್ವನಿಂದ ಕುಟುಂಬದ 11 ಮಂದಿಗೆ ಸೋಂಕು

    2 ತಿಂಗಳ ಕಂದಮ್ಮನ ಮೇಲೆ ಕೊರೊನಾ ಕರಿನೆರಳು – ಓರ್ವನಿಂದ ಕುಟುಂಬದ 11 ಮಂದಿಗೆ ಸೋಂಕು

    ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ರಾಜಧಾನಿ ದೆಹಲಿಯಲ್ಲಿ ಸೊಂಕಿತರ ಸಂಖ್ಯೆ ಏರುತ್ತಲೇ ಇದೆ. ಈಗ ಜಮಾ ಮಸೀದಿಯ ಜನನಿಬಿಡ ಚುಡಿವಾಲನ್ ಪ್ರದೇಶದಲ್ಲಿ ಒಂದೇ ಕುಟುಂಬದ 11 ಮಂದಿಗೆ ಕೊರೊನಾ ತಗುಲಿದ್ದು, ಇಡೀ ಪ್ರದೇಶವನ್ನೇ ಸೀಲ್‍ಡೌನ್ ಮಾಡಲಾಗಿದೆ.

    ಒಂದೇ ಕುಟುಂಬದ 11 ಮಂದಿಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. ಈ ಸೋಂಕಿತರಲ್ಲಿ 2 ತಿಂಗಳು ಮಗು ಹಾಗೂ 6 ವರ್ಷದ ಬಾಲಕನೂ ಸೇರಿದ್ದಾನೆ. ಹೀಗಾಗಿ ಇಡೀ ಚುಡಿವಾಲನ್ ಪ್ರದೇಶವನ್ನು ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಸಂಪೂರ್ಣ ಸೀಲ್‍ಡೌನ್ ಮಾಡಿದ್ದಾರೆ ಎಂದು ದೆಹಲಿಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಮಾಹಿತಿ ನೀಡಿದ್ದಾರೆ.

    ಈ ಕುಟುಂಬದ ಒಬ್ಬರು ವಿದೇಶದಿಂದ ಮರಳಿದ್ದು, ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ಹೀಗಾಗಿ ಅವರನ್ನು ಮ್ಯಾಕ್ಸ್ ಆಸ್ಪತ್ರೆಯಲ್ಲಿ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ಅಲ್ಲದೇ ಕುಟುಂಬದ 18 ಮಂದಿಯನ್ನು ಧೈರ್ಯಗಂಜ್‍ನ ಖಾಸಗಿ ಲ್ಯಾಬ್‍ನಲ್ಲಿ ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈಗ ಇದರಲ್ಲಿ 11 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

    ಈ ಹಿನ್ನೆಲೆ ಈ ಸೋಂಕಿತ ಕುಟುಂಬದೊಂದಿಗೆ ಸಂಪರ್ಕಕ್ಕೆ ಹೋಂದಿದ್ದ ಜನರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ. ಸಂಪರ್ಕಿತರು ಸಿಕ್ಕ ಬಳಿಕ ಅವರನ್ನು ಪರೀಕ್ಷೆಗೆ ಒಳಪಡಿಸಿ, ಕ್ವಾರಂಟೈನ್‍ನಲ್ಲಿ ಇರಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ. ಸದ್ಯ ದೆಹಲಿಯಲ್ಲಿ 90 ಪ್ರದೇಶಗಳನ್ನು ಕೊರೊನಾ ಹಾಟ್‍ಸ್ಪಾಟ್ ಪ್ರದೇಶಗಳು ಎಂದು ಗುರುತಿಸಲಾಗಿದೆ.

  • ಮಹಾ ಎಡವಟ್ಟು- ಸೋಂಕಿತನ ಕುಟುಂಬಸ್ಥರನ್ನ ಒಂದೇ ಅಂಬುಲೆನ್ಸ್‌ನಲ್ಲಿ ರವಾನೆ

    ಮಹಾ ಎಡವಟ್ಟು- ಸೋಂಕಿತನ ಕುಟುಂಬಸ್ಥರನ್ನ ಒಂದೇ ಅಂಬುಲೆನ್ಸ್‌ನಲ್ಲಿ ರವಾನೆ

    ಮೈಸೂರು: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಹಾ ಎಡವಟ್ಟು ಮಾಡಿಕೊಂಡಿದ್ದಾರೆ.

    ಮೈಸೂರು ತಾಲೂಕಿನ ಮೊಸಂಬಾಯನಹಳ್ಳಿಯ 65 ವರ್ಷದ ವೃದ್ಧನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಸೋಂಕಿತ ವೃದ್ಧನ ಕುಟುಂಬಸ್ಥರನ್ನು ಒಂದೇ ಅಂಬುಲೆನ್ಸ್‌ನಲ್ಲಿ ಶನಿವಾರ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

    ಯುವತಿ, ಬಾಲಕಿ ಹಾಗೂ ಹಿರಿಯರು ಸೇರಿದಂತೆ ಒಟ್ಟು 6 ಮಂದಿಯನ್ನು ಒಟ್ಟಿಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ಆರೋಗ್ಯ ಇಲಾಖೆ ಸಿಬ್ಬಂದಿ ಸಾಮಾಜಿಕ ಅಂತರದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಹೀಗೆ ಎಡವಟ್ಟು ಮಾಡಿಕೊಂಡಿದ್ದಾರೆ. ಸಿಬ್ಬಂದಿಯ ಈ ನಡೆಗೆ ಭಾರೀ ಟೀಕೆ ವ್ಯಕ್ತವಾಗಿದೆ.

    ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶನಿವಾರ ಸಂಜೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಮೈಸೂರಿನಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 80 ಆಗಿತ್ತು. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯದ ಜಿಲ್ಲೆಗಳ ಪಟ್ಟಿಯಲ್ಲಿ ಮೈಸೂರು ಎರಡನೇ ಸ್ಥಾನದಲ್ಲಿದೆ.

    ಅಷ್ಟೇ ಅಲ್ಲದೆ ರಾಜ್ಯದಲ್ಲಿ ಶನಿವಾರ ಒಂದೇ ದಿನ 25 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 384ಕ್ಕೆ ಏರಿಕೆಯಾಗಿತ್ತು. ಗಮನಿಸಬೇಕಾದ ಅಂಶ ಅಂದ್ರೆ 25 ಮಂದಿಯಲ್ಲಿ 10 ಮಂದಿ, ಸೋಂಕಿತರ ಸೆಕೆಂಡರಿ ಕಾಂಟ್ಯಾಕ್ಟ್‌ನಲ್ಲಿದ್ದವರು. ತೀವ್ರ ಉಸಿರಾಟದ ಸೋಂಕಿನಿಂದ ಒಬ್ಬರಿಗೆ, ವಿಷಮ ಶೀತಜ್ವರದಿಂದ ಬಳಲುತ್ತಿರುವ ಒಬ್ಬರಿಗೆ ಸೋಂಕು ತಗುಲಿತ್ತು. ಬಾಗಲಕೋಟೆ, ನಂಜನಗೂಡಿನ ತಲಾ ಏಳು ಮಂದಿಗೆ, ಬೆಂಗಳೂರಿನ ಪಾದರಾಯನಪುರದಲ್ಲಿ ಮೂವರು, ವಿಜಯಪುರ, ಕಲಬುರಗಿಯಲ್ಲಿ ತಲಾ ಇಬ್ಬರಿಗೆ, ಹುಬ್ಬಳ್ಳಿ, ಮಂಡ್ಯ, ಗದಗದಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.

  • ಕರ್ನಾಟಕಕ್ಕೆ Be Careful ಎಂದ ಕೇಂದ್ರ ಆರೋಗ್ಯ ಇಲಾಖೆ

    ಕರ್ನಾಟಕಕ್ಕೆ Be Careful ಎಂದ ಕೇಂದ್ರ ಆರೋಗ್ಯ ಇಲಾಖೆ

    ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಇತ್ತ ಸಾವಿನ ಸಂಖ್ಯೆಯೂ ದಿನಕಳೆದಂತೆ ಹೆಚ್ಚಾಗುತ್ತಿದೆ. ಹೀಗಾಗಿ ಕೇಂದ್ರ ಆರೋಗ್ಯ ಇಲಾಖೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು ಇದಕ್ಕೆ ಕಡಿವಾಣ ಹಾಕಿ ಎಂದು ಕರ್ನಾಟಕಕ್ಕೆ ಎಚ್ಚರಿಕೆ ನೀಡಿದೆ.

    ಕೇರಳದಲ್ಲಿ ಕೊರೊನಾ ವೈರಸ್‍ನಿಂದ ಮೂವರು ಮೃತಪಟ್ಟಿದ್ದಾರೆ. ಆದರೆ ಕರ್ನಾಟಕದಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ. ಕೇರಳಕ್ಕಿಂತ ಕರ್ನಾಟಕದಲ್ಲಿ ಕೊರೊನಾ ಕಡಿಮೆ ಇದ್ದರೂ ಸಾವಿನ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ ಕರ್ನಾಟಕಕ್ಕೆ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಈ ಎಚ್ಚರಿಕೆ ಬೆನ್ನಲ್ಲೇ ರಾಜ್ಯ ಸರ್ಕಾರ ತಜ್ಞ ವೈದ್ಯರ ಅಭಿಪ್ರಾಯ ಪಡೆದಿದೆ. ಇದನ್ನೂ ಓದಿ: ಕೊರೊನಾಗೆ ರಾಜ್ಯದ 9 ಮಂದಿ ಬಲಿ: ಸೋಂಕು ಬಂದಿದ್ದು ಹೇಗೆ? ಇಲ್ಲಿದೆ ಪೂರ್ಣ ವಿವರ

    ಕೊರೊನಾದಿಂದ ಸಾವು ಹೇಗೆ ಸಂಭವಿಸುತ್ತೆ ಎನ್ನುವುದನ್ನು ಸಮರ್ಪಕವಾಗಿ ಇದುವರೆಗೂ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಶ್ವಾಸಕೋಶಕ್ಕೆ ಆಟ್ಯಾಕ್ ಆದಾಗ ಯಾವ ಸಂದರ್ಭದಲ್ಲಿ ರೋಗಿಯ ರೋಗನಿರೋಧಕ ಶಕ್ತಿ ಕಳೆದುಕೊಳ್ಳುತ್ತಾನೆ ಎನ್ನುವುದು ಇನ್ನೂ ನಿಗೂಢವಾಗಿದೆ. ಹೀಗಾಗಿ ಕರ್ನಾಟಕ ಸರ್ಕಾರ ವೈದ್ಯರ ಅಭಿಪ್ರಾಯ ಕಲೆಹಾಕಿದೆ.

    ಕರ್ನಾಟಕದಲ್ಲಿ ಅತ್ಯಾಧುನಿಕ ವೈದ್ಯಕೀಯ ಸಲಕರಣೆ ಇದ್ದರೂ ರೋಗಿಗಳು ಸಾವನ್ನಪ್ಪುತ್ತಿರುವುದು ಆತಂಕವಾಗಿದೆ. ರೋಗ ಪತ್ತೆ ಮಾಡುವುದು ತಡವಾಗುತ್ತಿದೆ. ಸೋಂಕಿತ ವ್ಯಕ್ತಿಯ ಪರಿಸ್ಥಿತಿ ಕೈ ಮೀರಿದಾಗ ಪ್ರಕರಣ ತಿಳಿಯುತ್ತದೆ. ಕೊನೆ ಕ್ಷಣದಲ್ಲಿ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಕೊರೊನಾ ಜ್ವರ ಪರೀಕ್ಷೆ ಇನ್ನಷ್ಟು ವೇಗದಲ್ಲಿ ಆಗಬೇಕು. ಮೃತ 14 ಮಂದಿಯಲ್ಲಿ ಬಹುತೇಕ ರೋಗಿಗಳು 60 ವರ್ಷ ಮೇಲ್ಪಟ್ಟವರು. ಹೆಚ್ಚಿನವರಲ್ಲಿ ಹೃದ್ರೋಗ, ಕಿಡ್ನಿ, ಸಕ್ಕರೆ ಕಾಯಿಲೆ ಇದೆ. ಅಲ್ಲದೇ ಶ್ವಾಸಕೋಸದ ತೊಂದರೆ ಇರುವ ಕೊರೊನಾ ರೋಗಿಗಳ ಮೇಲೆ ಇನ್ನಷ್ಟು ನಿಗಾ ವಹಿಸಬೇಕು ಎಂದು ತಜ್ಞ ವೈದ್ಯರು ಮುನ್ನೆಚ್ಚರಿಕಾ ವರದಿ ಸಲ್ಲಿಸಿದ್ದಾರೆ.

    ಹಿರಿಯ ರೋಗಿಗಳಲ್ಲಿ ಯಾವಾಗ ಆಕ್ಸಿಜನ್ ಕಡಿಮೆಯಾಗುತ್ತೆ ಎನ್ನುವ ಮಾಹಿತಿ ಮಾನಿಟರ್ ಸರಿಯಾಗಿ ಆಗುತ್ತಿಲ್ಲ. ಹೀಗಾಗಿ ಈ ಬಗ್ಗೆ ನಿಗಾ ವಹಿಸಬೇಕು. ಕೊರೊನಾ ರೋಗ ಪೀಡಿತರ ಚಿಕಿತ್ಸೆ ವೆಂಟಿಲೇಟರ್ ಹೆಚ್ಚಾಗಬೇಕು. ಜೊತೆಗೆ ಕೊರೊನಾದಿಂದ ಗುಣಮುಖರಾದವರ ರೋಗ ನಿರೋಧಕ ಶಕ್ತಿ ಬಗ್ಗೆ ಅಧ್ಯಯನ ಮಾಡಬೇಕು. ಸಂಪೂರ್ಣ ಕೇರಳ ಮಾದರಿಗೆ ಮೊರೆ ಹೋಗಬೇಕು ಅಂತ ತಜ್ಞರು ಶಿಫಾರಸ್ಸು ಮಾಡಿದ್ದಾರೆ.

  • ಬೆಂಗ್ಳೂರಿನ 30 ಹಾಟ್‍ಸ್ಪಾಟ್‍ಗಳಲ್ಲಿ ಟಫ್ ಲಾಕ್‍ಡೌನ್ ಶುರು- ಮನೆಯಿಂದ ಹೊರ ಬಂದ್ರೆ ಕಾದಿದೆ ಕಠಿಣ ಶಿಕ್ಷೆ

    ಬೆಂಗ್ಳೂರಿನ 30 ಹಾಟ್‍ಸ್ಪಾಟ್‍ಗಳಲ್ಲಿ ಟಫ್ ಲಾಕ್‍ಡೌನ್ ಶುರು- ಮನೆಯಿಂದ ಹೊರ ಬಂದ್ರೆ ಕಾದಿದೆ ಕಠಿಣ ಶಿಕ್ಷೆ

    ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಆದೇಶಿಸಿದ್ದ ಲಾಕ್ ಡೌನ್ ಅನ್ನು ಮೇ 3ರವರೆಗೂ ವಿಸ್ತರಿಸಲಾಗಿದೆ. ಈ ಮಧ್ಯೆ ಕೊರೊನಾ ಪ್ರಕರಣ ಹೆಚ್ಚಾಗುತ್ತಲೇ ಇದ್ದರೂ, ಜನ ಯಾವುದೇ ಭಯವಿಲ್ಲದೇ ಒಡಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಬೆಂಗಳೂರಿನಲ್ಲಿ ಗುರುತಿಸಲಾಗಿರುವ 30 ಹಾಟ್ ಸ್ಪಾಟ್ ಗಳಲ್ಲಿ ಲಾಕ್ ಡೌನ್ ಅನ್ನು ಮತ್ತಷ್ಟು ಬಿಗಿಗೊಳಿಸಲಾಗುತ್ತಿದೆ.

    ಹೌದು. ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗ್ತಿದೆ. 85 ಪ್ರಕರಣ ಪತ್ತೆಯಾಗುತ್ತಿದ್ದಂತೆಯೇ ಬಿಬಿಎಂಪಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ. ಕಂಟೈನ್‍ಮೆಂಟ್ ಝೋನ್‍ಗಳ ಫಿಕ್ಸ್ ಗೆ ಸಿದ್ಧತೆ ನಡೆಸಲಾಗುತ್ತಿದೆ. ಕಂಟೈನ್‍ಮೆಂಟ್ ಝೋನ್ ಫಿಕ್ಸಿಂಗ್ ಭಾಗ ಫುಲ್ ಸೀಲ್‍ಡೌನ್ ಮಾಡಲಾಗುತ್ತದೆ. ಜನ ಹೊರಗೆ ಬಾರದ ಹಾಗೆ ಬ್ಯಾರಿಕೇಡ್ ಹಾಕಲಾಗುತ್ತಿದ್ದು, ಬೆಂಗಳೂರಿನ 30 ಹಾಟ್‍ಸ್ಪಾಟ್‍ಗಳು ಕಂಟೈನ್‍ಮೆಂಟ್ ಆಗಿ ಬದಲು ಮಾಡುವ ಸಾಧ್ಯತೆಗಳಿವೆ.

    ಖಾಕಿ ಹದ್ದಿನ ಕಣ್ಣು:
    ಸೀಲ್‍ಡೌನ್ ಏರಿಯಾಗಳಿಗೆ ಪೊಲೀಸ್ ನಾಕಾಬಂಧಿ ಮಾಡಲಾಗುತ್ತಿದೆ. ಎಲ್ಲಾ ಪ್ರವೇಶದ್ವಾರಗಳಲ್ಲೂ ಶಾಶ್ವತವಾಗಿ ತಡೆಗೋಡೆ ಹಾಕಬೇಕು. ಯಾವುದೇ ವ್ಯಕ್ತಿ ಮನೆಯಿಂದ ಹೊರಬರುವಂತಿಲ್ಲ. ಸೀಲ್‍ಡೌನ್ ವಲಯದಲ್ಲಿ ಒಂದೇ ಒಂದು ನಿರ್ಗಮನ- ಮತ್ತು ಪ್ರವೇಶದ್ವಾರಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ನಿಯಂತ್ರಿತ ವಲಯದ ಒಳಗೆ ಖಾಸಗಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಅಗತ್ಯ ಸೇವೆಗಳು, ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಪೊಲೀಸರು ಎಮರ್ಜೆನ್ಸಿ ಪಾಸ್ ನೀಡುತ್ತಾರೆ. ಅಲ್ಲದೆ ಸೀಲ್‍ಡೌನ್ ಏರಿಯಾದಲ್ಲಿ ಹೆಚ್ಚು ನಿಗಾಕ್ಕೆ ಡ್ರೋಣ್ ಬಳಕೆ ಮಾಡಲಾಗುತ್ತದೆ.

    ಬಿಬಿಎಂಪಿಯಿಂದಲೂ ನಿಗಾ:
    ಬೆಂಗಳೂರು ನಿಯಂತ್ರಣ ವಲಯಕ್ಕೆ ಕಮಾಂಡರ್ ಗಳನ್ನು ನೇಮಿಸಲಾಗುತ್ತಿದೆ. ಸೀಲ್‍ಡೌನ್ ಏರಿಯಾಕ್ಕೆ ಎಕ್ಸ್ ಕ್ಯೂಟಿವ್ ಮ್ಯಾಜಿಸ್ಟ್ರೇಟ್‍ನ್ನು ಕಮಾಂಡರ್ ಆಗಿ ಆಯುಕ್ತರು ನೇಮಿಸಬೇಕು. ಈ ಕಮಾಂಡರ್ ಗೆ ಬಫರ್ ಝೋನ್‍ನ ಕಂಪ್ಲೀಟ್ ಜವಾಬ್ದಾರಿ ಹೊತ್ತಿರುತ್ತಾರೆ. ಬಿಬಿಎಂಪಿ ಹೊರತುಪಡಿಸಿದ ನಿಯಂತ್ರಿತ ವಲಯಗಳಿಗೆ ಡಿಸಿ ಕಮಾಂಡರನ್ನು ನೇಮಿಸಬೇಕು. ಬಿಬಿಎಂಪಿಯ ಹಿರಿಯ ಅಥವಾ ಕಿರಿಯ ಪ್ರಥಮ ದರ್ಜೆಯ ಅಧಿಕಾರಿಯಾಗಿರಬೇಕು. ಸೀಲ್‍ಡೌನ್ ಏರಿಯಾದ ಕಂಪ್ಲೀಟ್ ಗಡಿಯನ್ನು ಗುರುತಿಸಬೇಕು. ಸೀಲ್‍ಡೌನ್ ಏರಿಯಾದ ಪ್ರವೇಶ ಹಾಗೂ ನಿರ್ಗಮನ ಗಡಿ ಗುರುತಿಸಬೇಕು. ಕಮಾಂಡರ್ ಗಡಿಕೇಂದ್ರವನ್ನು ಸ್ಥಾಪಿಸಬೇಕು. ಸೀಲ್‍ಡೌನ್ ಏರಿಯಾದ ಗರ್ಭಿಣಿ ಹೃದ್ರೋಗಿಗಳನ್ನು ಮೊದಲೇ ಗುರುತಿಸಿ ಚಿಕಿತ್ಸೆ ನೀಡಬೇಕು.

    ಆರೋಗ್ಯ ಇಲಾಖೆ ಕಣ್ಣು:
    ವಲಯಗಳಲ್ಲಿ ಔಟ್‍ಪೋಸ್ಟ್ ಸ್ಥಾಪನೆ ಮಾಡಲಾಗುತ್ತದೆ. ಪ್ರತಿನಿತ್ಯವೂ ಜನರ ಆರೋಗ್ಯದ ನಿಯಮಿತ ತಪಾಸಣೆ ಮಾಡಲಾಗುತ್ತದೆ. ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳನ್ನು ಹೋಮ್ ಕ್ವಾರಂಟೈನ್‍ನಲ್ಲಿಡದೇ ಸರ್ಕಾರಿ ಸ್ವಾಧೀನದ ಕ್ವಾರಂಟೈನ್‍ಗೆ ಶಿಫ್ಟ್ ಮಾಡಲಾಗುತ್ತದೆ. ಸೆಕೆಂಡರಿ ಕಾಂಟೆಕ್ಟ್ ಗಳಿಗೆ ಮಾತ್ರ ಗೃಹಬಂಧನ ವಿಧಿಸಲಾಗುತ್ತದೆ. ಹೆಲ್ತ್ ಪ್ರೊಫೈಲಿಂಗ್ ಪಟ್ಟಿ ರೆಡಿ ಮಾಡಬೇಕು. ಇಡೀ ಪ್ರದೇಶದ ಜನರಲ್ಲಿ ಜ್ವರ, ಶೀತ ಕಂಡು ಬಂದ್ರೆ ಅವರ ಸಂಪೂರ್ಣ ದಾಖಲೆ ರೆಡಿ ಇಟ್ಟುಕೊಂಡಿರಬೇಕು.

  • ಕಿಲ್ಲರ್ ಕೊರೊನಾ – ಯಾವ ರಾಜ್ಯದಲ್ಲಿ ಎಷ್ಟು ಸಾವು?

    ಕಿಲ್ಲರ್ ಕೊರೊನಾ – ಯಾವ ರಾಜ್ಯದಲ್ಲಿ ಎಷ್ಟು ಸಾವು?

    – ರಾಷ್ಟ್ರ ರಾಜಧಾನಿ ಫುಲ್ ರೆಡ್ ಝೋನ್?

    ನವದೆಹಲಿ: ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ನಡುವೆ ಸಾವಿನ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಾಣುತ್ತಿದೆ. ಅದರಲ್ಲೂ ಇಡೀ ದೆಹಲಿ ಈಗ ರೆಡ್ ಝೋನ್ ಆಗುವ ಸಾಧ್ಯತೆಯಲ್ಲಿದ್ದು, ಸಾವಿನ ಪ್ರಮಾಣದಲ್ಲಿ ಮೊದಲ ಸ್ಥಾನದಲ್ಲಿದೆ.

    ಕೊರೊನಾ ದಿನದಿಂದ ದಿನಕ್ಕೆ ಹೆಚ್ಚು ಜನರಲ್ಲಿ ಕಾಣುತ್ತಿದ್ದು, ಇನ್ನೆರಡು ದಿನಗಳಲ್ಲಿ 15 ಸಾವಿರದ ಗಡಿ ದಾಟುವ ಸಾಧ್ಯತೆ ಕಂಡು ಬರುತ್ತಿದೆ. ಈ ನಡುವೆ ಸಾವಿನ ಪ್ರಮಾಣದಲ್ಲೂ ಏರಿಕೆ ಕಂಡು ಬರುತ್ತಿದ್ದು ಆತಂಕ ಹೆಚ್ಚು ಮಾಡುತ್ತಿದೆ.

    ಈವರೆಗೂ ದೇಶದಲ್ಲಿ 13,425 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 446 ಮಂದಿ ಮೃತಪಟ್ಟಿದ್ದಾರೆ. ಹೀಗೆ ಸಾವನ್ನಪ್ಪಿದವರ ಪೈಕಿ ರಾಷ್ಟ್ರ ರಾಜಧಾನಿ ದೆಹಲಿ ಜನರ ಸಂಖ್ಯೆಯೇ ಹೆಚ್ಚು. ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಸಾವಿನ ಪ್ರಮಾಣದಲ್ಲಿ ದೆಹಲಿ ಒಂದನೇ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ.

    ಕೊರೊನಾಗೆ ಯಾವ ರಾಜ್ಯದಲ್ಲಿ ಎಷ್ಟು ಸಾವು?
    * ದೆಹಲಿ – ಸೋಂಕಿತರ ಸಂಖ್ಯೆ 1,640, 38 ಮಂದಿ ಸಾವು – ಡೆತ್ ರೇಟಿಂಗ್‍ನಲ್ಲಿ ಮೊದಲನೇ ಸ್ಥಾನ
    * ಮಹಾರಾಷ್ಟ್ರ – 3,202 ಮಂದಿಯಲ್ಲಿ ಸೋಂಕು – 194 ಮಂದಿ ಸಾವು – ಡೆತ್ ರೇಟಿಂಗ್‍ನಲ್ಲಿ ಎರಡನೇ ಸ್ಥಾನ
    * ಮಧ್ಯಪ್ರದೇಶ – 1,164 ಮಂದಿಯಲ್ಲಿ ಸೋಂಕು – 55 ಮಂದಿ ಸಾವು – ಡೆತ್ ರೇಟಿಂಗ್‍ನಲ್ಲಿ ಮೂರನೇ ಸ್ಥಾನ
    * ಗುಜರಾತ್ – 929 ಸೋಂಕಿತರು – 36 ಮಂದಿ ಸಾವು – ಡೆತ್ ರೇಟಿಂಗ್‍ನಲ್ಲಿ ನಾಲ್ಕನೇ ಸ್ಥಾನ
    * ತೆಲಂಗಾಣ – 700 ಜನರಿಗೆ ಡೆಡ್ಲಿ ವೈರಸ್ – 18 ಜನ ಸಾವು – ಡೆತ್ ರೇಟಿಂಗ್‍ನಲ್ಲಿ ಐದನೇ ಸ್ಥಾನ
    * ಕರ್ನಾಟಕ – 315 ಕೊರೊನಾ ಕೇಸ್ – 13 ಮಂದಿ ಸಾವು – ಡೆತ್ ರೇಟಿಂಗ್‍ನಲ್ಲಿ ಹತ್ತನೇ ಸ್ಥಾನ

    ಒಟ್ಟು ಜನಸಂಖ್ಯೆ ಮತ್ತು ಸೋಂಕಿತರ ಸಾವಿನ ಪ್ರಮಾಣ ಆಧರಿಸಿ ಈ ಅಂಕಿ ಅಂಶಗಳನ್ನು ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ.

    ರಾಷ್ಟ್ರ ರಾಜಧಾನಿ ಫುಲ್ ರೆಡ್ ಝೋನ್?
    ಸಾವಿನ ಪ್ರಮಾಣದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ದೆಹಲಿ ಫುಲ್ ರೆಡ್ ಝೋನ್ ಆಗುವ ಸಾಧ್ಯತೆಗಳಿದೆ. ದೆಹಲಿಯಲ್ಲಿ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಆರಂಭದಲ್ಲಿ 34 ಪ್ರದೇಶಗಳನ್ನು ಸೀಲ್‍ಡೌನ್ ಮಾಡಿತ್ತು. ಬಳಿಕ 45, ಈಗ ಬರೋಬ್ಬರಿ 60 ಪ್ರದೇಶಗಳನ್ನು ಹಾಟ್‍ಸ್ಪಾಟ್ ಅಂತ ಗುರುತಿಸಿ ಸೀಲ್‍ಡೌನ್ ಮಾಡಿದೆ. ಈ ಪಟ್ಟಿ ಮತ್ತಷ್ಟು ದೊಡ್ಡದಾಗಲಿದ್ದು, ದೆಹಲಿಯ ಬಹುತೇಕ ಪ್ರದೇಶ ರೆಡ್ ಮತ್ತು ಆರೇಂಜ್ ಝೋನ್‍ನಲ್ಲಿದೆ. ಇದು ಮುಂದೆ ಇಡೀ ದೆಹಲಿಯನ್ನ ರೆಡ್‍ಝೋನ್‍ಗೆ ನೂಕುವ ಸಾಧ್ಯತೆ ಇದೆ. ಹೀಗಾಗಿ ರಾಷ್ಟ್ರ ರಾಜಧಾನಿ ದೆಹಲಿ ಜನರಿಗೆ ಕೊರೊನಾ ಭೀತಿ ಹೆಚ್ಚಾಗಿದೆ.

  • ಮಧ್ಯಪ್ರದೇಶದ 94 ಆರೋಗ್ಯಾಧಿಕಾರಿಗಳಿಗೆ ಕೊರೊನಾ ಪಾಸಿಟಿವ್

    ಮಧ್ಯಪ್ರದೇಶದ 94 ಆರೋಗ್ಯಾಧಿಕಾರಿಗಳಿಗೆ ಕೊರೊನಾ ಪಾಸಿಟಿವ್

    ಭೋಪಾಲ್: ಕೊರೊನಾ ವಿರುದ್ಧ ಹೋರಾಡುತ್ತಿರುವ 94 ಆರೋಗ್ಯಾಧಿಕಾರಿಗಳಿಗೆ ಕೊರೊನಾ ಪಾಸಿಟಿವ್ ಬಂದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ತಮ್ಮ ಜೀವನದ ಹಂಗು ತೊರೆದು ಕೊರೊನಾ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಅಧಿಕಾರಿ ಮತ್ತು ಸಿಬ್ಬಂದಿಗೂ ಕೊರೊನಾ ಮಹಾಮಾರಿ ಕಾಡುತ್ತಿದೆ. ಭೋಪಾಲ್‍ನಲ್ಲಿ ಈವರೆಗೂ 94 ಆರೋಗ್ಯಾಧಿಕಾರಿಳು ಮತ್ತು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಸುಮಾರು 166 ಪ್ರಕರಣಗಳು ವರದಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಆರೋಗ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಐಎಎಸ್ ಅಧಿಕಾರಿಯೊಬ್ಬರಿಗೆ ಕಳೆದ ಮಂಗಳವಾರ ಕೊರೊನಾ ಪಾಸಿಟಿವ್ ಬಂದಿತ್ತು. ಆರೋಗ್ಯ ಇಲಾಖೆ ಮೊದಲ ಪ್ರಕರಣ ಏಪ್ರಿಲ್ 2ರಂದು ಬೆಳಕಿಗೆ ಬಂದಿತ್ತು. ರಾಷ್ಟ್ರೀಯ ಆರೋಗ್ಯ ಮಿಷನ್‍ನ ವ್ಯವಸ್ಥಾಪಕ ನಿರ್ದೇಶಕರು ಮೊದಲಿಗೆ ಕೊರೊನಾ ವೈರಸ್‍ಗೆ ತುತ್ತಾಗಿದ್ದರು. ಇದಾದ ಎರಡು ದಿನಗಳ ನಂತರ ಮತ್ತೊಬ್ಬ ಐಎಎಸ್ ಅಧಿಕಾರಿ ವೈರಸ್‍ಗೆ ತುತ್ತಾಗಿದ್ದರು.

    ಮಧ್ಯಪ್ರದೇಶದ ಅರೋಗ್ಯ ಇಲಾಖೆಯ ವಿದೇಶದಿಂದ ಮರಳಿದ ಇಬ್ಬರು ಹೆಚ್ಚುವರಿ ನಿರ್ದೇಶಕರಿಗೂ ಕೊರೊನಾ ಪಾಸಿಟಿವ್ ಬಂದಿದೆ. ಇದರ ಜೊತಗೆ ಮಗನ ಯುಎಸ್ ಪ್ರವಾಸದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆ ಬಚ್ಚಿಟ್ಟಿದ್ದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೂ ಕೂಡ ಕೊರೊನಾ ಪರೀಕ್ಷೆ ಮಾಡಿದಾಗ ವರದಿಯಲ್ಲಿ ಪಾಸಿಟಿವ್ ಬಂದಿದೆ. ಈ ಎಲ್ಲರನ್ನೂ ಸೇರಿ ಸುಮಾರು 94 ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕೊರೊನಾ ಸೋಂಕು ತಗುಲಿದೆ.

    ಆರೋಗ್ಯ ಇಲಾಖೆ ಬುಧವಾರ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ಮಧ್ಯಪ್ರದೇಶದಲ್ಲಿ ಮಂಗಳವಾರ ಒಂದೇ ದಿನ 197 ಹೊಸ ಪ್ರಕರಣಗಳನ್ನು ವರದಿಯಾಗಿವೆ. ಈ ಮೂಲಕ ಮಧ್ಯಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 938 ಕ್ಕೆ ಏರಿಕೆಯಾಗಿದೆ. ಇದರಲ್ಲಿ ಬರೋಬ್ಬರಿ 544 ಪ್ರಕರಣಗಳು ಇಂದೋರ್ ನಗರದಲ್ಲಿ ಪತ್ತೆಯಾಗಿವೆ. ಈ ಮೂಲಕ ರಾಜ್ಯದ ಒಟ್ಟು ಪ್ರಕರಣಗಳಲ್ಲಿ ಸುಮಾರು 58% ಸೋಂಕಿತರು ಈ ಪ್ರದೇಶದಲ್ಲೇ ಇದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಸುಲೇಮಾನ್ ಅವರು, ಮಧ್ಯಪ್ರದೇಶದಲ್ಲಿ ಮುಂದಿನ ದಿನಗಳಲ್ಲಿ ಕೊರೊನಾ ಪರೀಕ್ಷೆಗಳ ಹೆಚ್ಚಿನ ಸಂಖ್ಯೆಯಲ್ಲಿ ಮಾಡಲು ತೀರ್ಮಾನ ಮಾಡಿದ್ದೇವೆ. ನಮ್ಮ ದೇಶದಲ್ಲೇ ಕಡಿಮೆ ದರದಲ್ಲಿ ಕೊರೊನಾ ಪರೀಕ್ಷೆಯನ್ನು ಮಾಡಲು ನಿರ್ಧಾರ ಮಡಿದ್ದೇವೆ ಎಂದು ತಿಳಿಸಿದ್ದಾರೆ.

  • ಪ್ಲೀಸ್ ಔಷಧಿ ಕೊಡಿಸಿ – ಪಿಟ್ಸ್ ಕಾಯಿಲೆಯಿಂದ ಬಳಲ್ತಿರೋ ಮಗನಿಗಾಗಿ ತಾಯಿ ಗೋಳಾಟ

    ಪ್ಲೀಸ್ ಔಷಧಿ ಕೊಡಿಸಿ – ಪಿಟ್ಸ್ ಕಾಯಿಲೆಯಿಂದ ಬಳಲ್ತಿರೋ ಮಗನಿಗಾಗಿ ತಾಯಿ ಗೋಳಾಟ

    – ವಿಡಿಯೋ ಮೂಲಕ ಸಿಎಂಗೆ ಮನವಿ

    ಹಾವೇರಿ: ಪಿಟ್ಸ್ ಕಾಯಿಲೆಯಿಂದ ಬಳಲುತ್ತಿರೋ ತನ್ನ ಮೂರೂವರೆ ವರ್ಷದ ಮಗುವಿಗೆ ಲಾಕ್‍ಡೌನ್‍ನಿಂದಾಗಿ ಔಷಧಿ ಸಿಗದೇ ತಾಯಿಯೋಬ್ಬರು ಗೋಳಾಡುತ್ತಿದ್ದಾರೆ.

    ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದ ಜ್ಯೋತಿ ಮಡಿವಾಳರ ಅವರು ತಮ್ಮ ಮೂರೂವರೆ ವರ್ಷದ ಮಗ ದೈವಿಕ್‍ಗೆ ಔಷಧಿ ಸಿಗದೇ ಪರದಾಡುತ್ತಿದ್ದಾರೆ. ದೈವಿಕ್ ಪಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದು, ಮಗನಿಗೆ ತಾಯಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸ್ತಿದ್ದಾರೆ. ಮಣಿಪಾಲ ಆಸ್ಪತ್ರೆಯಲ್ಲಿ ಮಗನಿಗೆ ಚಿಕಿತ್ಸೆ ನೀಡಿ ಥಯಾಮಿನ್ ಹೈಡ್ರೋಕ್ಲೋರೈಡ್ ಮತ್ತು ರಿಬೋಪ್ಲಾವಿನ್ ಔಷಧಿ ನೀಡಿದ್ದಾರೆ. ಆದರೆ ಈಗ ಔಷಧಿ ಖಾಲಿ ಆಗಿದ್ದು, ಔಷಧಿ ಇಲ್ಲದಿದ್ದರೆ ಮಗನಿಗೆ ತೊಂದರೆ ಆಗಲಿದೆ ಎಂದು ತಾಯಿ ಗೋಳಾಡುತ್ತಿದ್ದಾರೆ.

    ಮಣಿಪಾಲ ಆಸ್ಪತ್ರೆ ಬಿಟ್ಟರೆ ಸ್ಥಳೀಯ ಮೆಡಿಕಲ್ ಶಾಪ್ ಮತ್ತು ಆಸ್ಪತ್ರೆಗಳಲ್ಲಿ ಔಷಧಿ ಸಿಗುತ್ತಿಲ್ಲ. ಲಾಕ್‍ಡೌನ್‍ನಿಂದ ಔಷಧಿ ತರಲು ಮಣಿಪಾಲ ಆಸ್ಪತ್ರೆಗೆ ಹೋಗಲು ಆಗುತ್ತಿಲ್ಲ. ಹೀಗಾಗಿ ಮಗನಿಗೆ ಔಷಧಿ ಕೊಡಿಸೋ ವ್ಯವಸ್ತೆ ಮಾಡುವ ಮೂಲಕ ಸಹಾಯ ಮಾಡಿ ಎಂದು ತಾಯಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ.

    ತಾಯಿ ಸಿಎಂಗೆ ಮನವಿ ಮಾಡಿಕೊಂಡಿರೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿಎಂ ಹಾಗೂ ಆರೋಗ್ಯ ಇಲಾಖೆ ಈ ಬಗ್ಗೆ ಗಮನ ಹರಿಸಿ ತಾಯಿಗೆ ಸಹಾಯ ಮಾಡಿ ಮಗುವಿನ ಜೀವ ಉಳಿಸಬೇಕಾಗಿದೆ.

  • ರಾಜ್ಯದಲ್ಲಿ ಕೊರೊನಾ ವಿರುದ್ಧ ‘3ಟಿ’ ಅಸ್ತ್ರ!

    ರಾಜ್ಯದಲ್ಲಿ ಕೊರೊನಾ ವಿರುದ್ಧ ‘3ಟಿ’ ಅಸ್ತ್ರ!

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 200ರ ಗಡಿ ಸಮೀಪಿಸಿರುವ ಹಿನ್ನೆಲೆಯಲ್ಲಿ ಮುಂದಿನ 5 ದಿನ ಫೈನಲ್ ವಾರ್ ಎಂದು ಪರಿಗಣಿಸಲಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ‘3ಟಿ’ ಅಸ್ತ್ರಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದೆ.

    ರಾಜ್ಯದಲ್ಲಿ ಒಟ್ಟು ಜನರಿಗೆ 197 ಕೊರೊನಾ ತಗುಲಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಗುರುವಾರ ಒಂದೇ ದಿನ 16 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಬಾಗಲಕೋಟೆಯಲ್ಲಿ 3 ಮಕ್ಕಳಲ್ಲೇ ಕೊರೊನಾ ಪತ್ತೆಯಾದರೆ, ಹೊಸ 3 ಪ್ರಕರಣಗಳಲ್ಲಿ ಮಕ್ಕಳಿಂದಲೇ ತಂದೆಗೆ ಸೋಂಕು ಹಬ್ಬಿದೆ. ಬೆಳಗಾವಿಯಲ್ಲಿ ತಬ್ಲಿಘಿ ಪ್ರಕರಣವೊಂದು ದಾಖಲಾಗಿದೆ. ಮೈಸೂರಲ್ಲಿ 2 ಕೇಸ್ ಪತ್ತೆಯಾಗಿದೆ. ಮಂಡ್ಯಕ್ಕೂ ನಂಜನಗೂಡು ಸೋಂಕು ಹಬ್ಬಿದೆ. ಬೆಂಗಳೂರಿನಲ್ಲಿ ಇಂದೊಂದೇ ದಿನ 5 ಪ್ರಕರಣ ದಾಖಲಾಗಿ ಒಟ್ಟು ಕೇಸ್ 68ಕ್ಕೆ ಏರಿಕೆಯಾಗಿದೆ.

    ಕೊರೊನಾ ವೈರಸ್ ಹರಡುವುದನ್ನ ತಡೆಗಟ್ಟಲು ರಾಜ್ಯ ಆರೋಗ್ಯ ಇಲಾಖೆ ಸರ್ವ ಪ್ರಯತ್ನ ನಡೆಸಿದೆ. ಮುಂದಿನ 5 ದಿನಗಳಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಯುವುದಕ್ಕಾ `3 ಟಿ’ ಅಸ್ತ್ರಗಳನ್ನು ಬಳಸಲು ಮುಂದಾಗಿದೆ.

    ‘3ಟಿ’ ಅಸ್ತ್ರ ಅಂದ್ರೆ ಏನು?:
    ಕೊರೊನಾ ವಿರುದ್ಧ ‘3ಟಿ’ ಅಂದ್ರೆ ಟ್ರೇಸಿಂಗ್, ಟೆಸ್ಟಿಂಗ್ ಮತ್ತು ಟ್ರೀಟ್‍ಮೆಂಟ್ ಆಗಿದೆ. ಮೊದಲು ಸೋಂಕಿತರ ಜೊತೆ ಸಂಪರ್ಕದಲ್ಲಿರುವವರ ಟ್ರೇಸ್ ಮಾಡುವುದು. ಬಳಿಕ ಪ್ರಾಥಮಿಕ, ದ್ವಿತೀಯ ಹಂತದ ಸಂಪರ್ಕ ಹೊಂದಿದ್ದವರ ಶೀಘ್ರ ಪತ್ತೆ ಹಚ್ಚುವುದು. ಸಂಪರ್ಕದಲ್ಲಿರುವವರ ಸಂಖ್ಯೆ ಅದೆಷ್ಟೇ ದೊಡ್ಡದಿದ್ರೂ ತತ್‍ಕ್ಷಣ ಟೆಸ್ಟಿಂಗ್ ಮಾಡುವುದು ಮುಖ್ಯವಾಗಿದೆ ಎಂದು ಆರೋಗ್ಯ ಇಲಾಖೆಯು ವೈದ್ಯರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದೆ.

    ಸೋಂಕಿತರ ಸಂಪರ್ಕದಲ್ಲಿದ್ದವರಿಗೆ ಸೋಂಕಿನ ಗುಣಲಕ್ಷಣ ಕಾಣಿಸಿಲ್ಲ ಅಂತ ನಿರ್ಲಕ್ಷ್ಯ ತೋರುವಂತಿಲ್ಲ. ಸೋಂಕು ಪೀಡಿತ ಪ್ರದೇಶದಲ್ಲಿ ಸ್ಕ್ರೀನಿಂಗ್ ಕಡ್ಡಾಯ ಮಾಡಬೇಕು. ಸೋಂಕಿತರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಐಸೋಲೇಷನ್‍ನಲ್ಲಿಟ್ಟು ಚಿಕಿತ್ಸೆ ಕೊಡಬೇಕು. ಐಸೋಲೇಷನ್‍ನಲ್ಲಿ ಇಡದಿದ್ದರೆ ಒಬ್ಬ ಸೋಂಕಿತ 406 ಮಂದಿಗೆ ವೈರಸ್ ಹರಡಬಲ್ಲ. ತಕ್ಷಣ ಸೋಂಕಿತರು, ಸಂಪರ್ಕದಲ್ಲಿ ಇದ್ದವರ ಪತ್ತೆ ಹಚ್ಚಿ, ಟೆಸ್ಟ್ ಮಾಡಿ ಟ್ರೀಟ್‍ಮೆಂಟ್ ಕೊಡಿ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

  • ಸೋಂಕಿತ ಗರ್ಭಿಣಿ ಮನೆಗೆ ಔಷಧಿ ಸಿಂಪಡಣೆ – ನಗರದಾದ್ಯಂತ ಕಟ್ಟೆಚ್ಚರ

    ಸೋಂಕಿತ ಗರ್ಭಿಣಿ ಮನೆಗೆ ಔಷಧಿ ಸಿಂಪಡಣೆ – ನಗರದಾದ್ಯಂತ ಕಟ್ಟೆಚ್ಚರ

    ಕಾರವಾರ: ಕೊರೊನಾ ಸೋಂಕು ಕಂಡುಬಂದಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದ ಗರ್ಭಿಣಿಯ ಮನೆಗೆ ಇಂದು ಜಾಲಿ ಪಟ್ಟಣ ಪಂಚಾಯತ್ ಸಿಬ್ಬಂದಿ ಔಷಧಿ ಸಿಂಪಡಣೆ ಮಾಡಿದ್ದಾರೆ.

    ಪಟ್ಟಣದ ಚೌಕ್ ಬಜಾರ್ ಸಮೀಪದ 26 ವರ್ಷದ ಐದು ತಿಂಗಳ ಗರ್ಭಿಣಿಗೆ ಕೊರೊನಾ ಸೋಂಕು ಇರುವುದು ಬುಧವಾರ ದೃಢಪಟ್ಟಿತ್ತು. ಮಹಿಳೆಯ ಪತಿ ದುಬೈನಿಂದ ವಾಪಸ್ ಆಗಿದ್ದು, ಆತನಿಂದಲೇ ಕೊರೊನಾ ತಗುಲಿರಬಹುದು ಎನ್ನಲಾಗಿದೆ.

    ಮಹಿಳೆಯಲ್ಲಿ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಇಡೀ ಮನೆಗೆ ಸೋಡಿಯಂ ಹೈಫೋ ಕ್ಲೋರೈಡ್ ರಾಸಾಯನಿಕವನ್ನ ಪಟ್ಟಣ ಪಂಚಾಯತ್‍ನ ಹೆಲ್ತ್ ಇನ್ಸ್‌ಪೆಕ್ಟರ್ ಅಜಯ್ ಭಂಡಾರಕರ್ ನೇತೃತ್ವದಲ್ಲಿ ಪೌರ ಕಾರ್ಮಿಕರು ಸಿಂಪಡಣೆ ಮಾಡಿದ್ದಾರೆ.

    ಕುಟುಂಬದವರ ಮೇಲೆ ನಿಗಾ
    ಗರ್ಭಿಣಿಗೆ ಇಬ್ಬರು ಮಕ್ಕಳಿದ್ದು, ಮಕ್ಕಳ ಜೊತೆ ಆಕೆ ಸಮಯ ಕಳೆದ ಹಿನ್ನೆಲೆಯಲ್ಲಿ ಮಕ್ಕಳು ಹಾಗೂ ಪತಿಯ ಮೇಲೆ ಮತ್ತೆ ನಿಗಾ ಇಡಲಾಗಿದೆ. ಮಹಿಳೆಯ ಮನೆಯಲ್ಲಿ 35 ವರ್ಷದ ಸಂಬಂಧಿ ಮಹಿಳೆ ಇದ್ದರು ಎನ್ನಲಾಗಿದೆ. ಆಕೆಯ ಒಡನಾಟದಲ್ಲಿದ್ದ ಎಲ್ಲರ ಮೇಲೂ ಆರೋಗ್ಯ ಇಲಾಖೆ ನಿಗಾ ಇಡಲಾಗಿದೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಸದ್ಯ ಸೋಂಕಿತರ ಸಂಖ್ಯೆ 9ಕ್ಕೆ ಏರಿದ್ದು, 50 ಜನರ ರಕ್ತ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಜಿಲ್ಲೆಯಲ್ಲೇ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸೂಚನೆಗಳಿದ್ದು, ಸಾಮಾಜಿಕವಾಗಿ ಹರಡದಂತೆ ಆರೋಗ್ಯ ಇಲಾಖೆ ಜಿಲ್ಲೆಯ ಭಟ್ಕಳ ಸೇರಿದಂತೆ ಹಲವು ನಗರ ಪ್ರದೇಶದಲ್ಲಿ ಔಷಧಿ ಸಿಂಪಡಣೆ ಕಾರ್ಯ ಬರದಿಂದ ಸಾಗುತ್ತಿದೆ.

  • ಸೀಲ್ ಇದ್ರೂ ರಾಜಾರೋಷವಾಗಿ ಓಡಾಟ – ಅಂಬುಲೆನ್ಸ್‌ನಲ್ಲಿ ಬಂದು ಎತ್ತಾಕೊಂಡು ಹೋದ್ರು!

    ಸೀಲ್ ಇದ್ರೂ ರಾಜಾರೋಷವಾಗಿ ಓಡಾಟ – ಅಂಬುಲೆನ್ಸ್‌ನಲ್ಲಿ ಬಂದು ಎತ್ತಾಕೊಂಡು ಹೋದ್ರು!

    ಹುಬ್ಬಳ್ಳಿ: ಕೈ ಮೇಲೆ ಕ್ವಾರಂಟೈನ್ ಸೀಲ್ ಇದ್ದರೂ ರಾಜಾರೋಷವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಅಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಿರುವ ಘಟನೆ ಜಿಲ್ಲೆಯ ಚೆನ್ನಮ್ಮ ವೃತ್ತದ ಬಳಿ ನಡೆದಿದೆ.

    ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ನಿವಾಸಿ ಹಜರತ್ ಅಲಿ ಜೋಡ್ಮನಿ ಎಂಬಾತ ಹೋಂ ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ. ಈತನ ಕೈ ಮೇಲೆ ಸೀಲ್ ಇದ್ದರೂ ಬೇಕಾ ಬಿಟ್ಟಿ ಓಡಾಡುವ ಮೂಲಕ ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ್ದಾನೆ.

    ಈತ ಕಳೆದ 10 ದಿನಗಳ ಹಿಂದೆ ಗೋವಾ ರಾಜ್ಯಕ್ಕೆ ಪ್ರವಾಸ ಬೆಳೆಸಿದ್ದನು. ಮಂಗಳವಾರ ಗೋವಾದಿಂದ ಹುಬ್ಬಳ್ಳಿಗೆ ಆಗಮಿಸಿದ್ದ. ಹೀಗಾಗಿ ಬೆಳಗಾವಿ ಗಡಿಯಲ್ಲಿ ಈತನಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ವಾರೈಂಟೈನ್ ಸೀಲ್ ಹಾಕಿದ್ದಾರೆ. ಕೈ ಮೇಲೆ ಸೀಲ್ ಇದ್ದರೂ ಮನೆಯಲ್ಲಿರದ ಜೋಡ್ಮನಿ ರಾತ್ರಿ ಔಷಧಿ ಖರೀದಿಗೆಂದು ಚನ್ನಮ್ಮ ವೃತ್ತದಲ್ಲಿ ಪ್ರತ್ಯಕ್ಷವಾಗಿದ್ದಾನೆ. ಮೆಡಿಕಲ್ ಸ್ಟೋರ್ ಕೆಲಸಗಾರ ನೋಡಿ ತಕ್ಷಣ ಪೊಲೀಸರಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಾನೆ.

    ಮಾಹಿತಿಯ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಕೈ ಮೇಲೆ ಸೀಲ್ ಇರುವುದನ್ನು ದೃಢಪಡಿಸಿಕೊಂಡು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು ಶಂಕಿತನನ್ನು ಅಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಿ ತಪಾಸಣೆಗೆ ಒಳಪಡಿಸಿದ್ದಾರೆ. ಹೆಚ್ಚಿನ ತಪಾಸಣೆಗೆ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.