Tag: health department

  • 24 ಗಂಟೆಯಲ್ಲಿ 96,551 ಮಂದಿಗೆ ಕೊರೊನಾ – 1,209 ಮಂದಿ ಬಲಿ

    24 ಗಂಟೆಯಲ್ಲಿ 96,551 ಮಂದಿಗೆ ಕೊರೊನಾ – 1,209 ಮಂದಿ ಬಲಿ

    ನವದೆಹಲಿ: ದೇಶದಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 96,551 ಮಂದಿಯಲ್ಲಿ ಕೊರೊನಾ ಸೋಂಕು ದೃಢವಾಗಿದೆ.

    ಒಂದೇ ದಿನ 96,551 ಮಂದಿಗೆ ಕೊರೊನಾ ದೃಢವಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 45.62,415ಕ್ಕೆ ಏರಿಕೆ ಆಗಿದೆ. ಕಳೆದ 24 ಗಂಟೆಯಲ್ಲಿ 1,209 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    45.62,415 ಪೈಕಿ 9,43,480 ಸಕ್ರಿಯ ಪ್ರಕರಣಗಳಿದ್ದು, 25,42,664 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ ಒಂದೇ ದಿನ 1,209 ಮಂದಿ ಸಾವನ್ನಪ್ಪುವ ಮೂಲಕ ಕೊರೊನಾಗೆ ಇದುವರೆಗೂ 76,271 ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ದೇಶದಲ್ಲಿ ಗುರುವಾರ 11.63,542 ಮಂದಿಯನ್ನು ಕೊರೊನಾ ಟೆಸ್ಟ್‌ಗೆ ಒಳಪಡಿಸಲಾಗಿತ್ತು. ಈ ಮೂಲಕ ಇದುವರೆಗೂ 5,40,97,975 ಮಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.

  • ದೇಶದ 17 ಜಿಲ್ಲೆಗಳಲ್ಲಿ ಕೊರೊನಾ ಡೇಂಜರ್

    ದೇಶದ 17 ಜಿಲ್ಲೆಗಳಲ್ಲಿ ಕೊರೊನಾ ಡೇಂಜರ್

    –  ಹಾಟ್‍ಸ್ಪಾಟ್ ಪಟ್ಟಿಯಲ್ಲಿ ಕರ್ನಾಟಕದ 4 ಜಿಲ್ಲೆಗಳು

    ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಹಾಟ್‍ಸ್ಪಾಟ್ ಜಿಲ್ಲೆಗಳ ಮೇಲೆ ನೇರ ನಿಗಾಯಿಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಪ್ರದೇಶಗಳಲ್ಲಿ ಟೆಸ್ಟಿಂಗ್, ಟ್ರೇಸಿಂಗ್, ಟ್ರೀಟ್ ಮೆಂಟ್ ವಿಚಾರದಲ್ಲಿ ಆಗಿರುವ ತಪ್ಪುಗಳನ್ನು ತಿದ್ದಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

    ಈ ಸಂಬಂಧ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದ 17 ಹಾಟ್‍ಸ್ಪಾಟ್ ಜಿಲ್ಲೆಗಳ ಮುಖ್ಯ ಆರೋಗ್ಯ ಅಧಿಕಾರಿಗಳ ಜೊತೆಗೆ ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಗಳು ಸಭೆ ನಡೆಸಿದ್ದಾರೆ. ಭಾರತದ ಒಟ್ಟು ಸೋಂಕಿತರ ಸಂಖ್ಯೆ ಪೈಕಿ 17 ಜಿಲ್ಲೆಗಳಿಂದ ಶೇ.46ರಷ್ಟು ಸೋಂಕಿತರಿದ್ದು, ಈ ಜಿಲ್ಲೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

    17 ಜಿಲ್ಲೆಗಳಲ್ಲಿ ಕೊಪ್ಪಳ, ಮೈಸೂರು, ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಗನ್ನು ಒಳಗೊಂಡಿದೆ. ಆಯಾ ಜಿಲ್ಲೆಯ ಮುಖ್ಯ ಆರೋಗ್ಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿ ಕೊರೊನಾ ಸೋಂಕು ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡಿದ್ದಾರೆ.

    ಸಭೆಯಲ್ಲಿ ಮರಣ ದರವನ್ನು ಶೇ.1ಕ್ಕಿಂತ ಕಡಿಮೆ ಗೊಳಿಸಲು ಸೂಚನೆ ಮತ್ತು ಸೋಂಕು ನಿಯಂತ್ರಣ ಕ್ರಮಗಳು ಕುರಿತು ವಿಸ್ತೃತ ಲಿಖಿತ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಅಗತ್ಯ ಸಂದರ್ಭಗಳಲ್ಲಿ ಏಮ್ಸ್ ವೈದ್ಯರ ತಂಡದ ಸಹಾಯ, ಸಲಹೆ ಪಡೆಯಲು ಸೂಚನೆ ನೀಡಲಾಗಿದೆ.

  • ಅನ್ನದಾಸೋಹ, ಸಮಾರಂಭ ಬಿಟ್ಟು ದೇವಸ್ಥಾನದಲ್ಲಿ ಎಲ್ಲಾ ಸೇವೆ ಆರಂಭ

    ಅನ್ನದಾಸೋಹ, ಸಮಾರಂಭ ಬಿಟ್ಟು ದೇವಸ್ಥಾನದಲ್ಲಿ ಎಲ್ಲಾ ಸೇವೆ ಆರಂಭ

    ಉಡುಪಿ: ಸೆಪ್ಟೆಂಬರ್ ಒಂದರಿಂದ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಸೇವೆ ಆರಂಭ ಆಗಲಿದೆ. ಅನ್ನ ದಾಸೋಹ ಮತ್ತು ಸಮಾರಂಭಗಳಿಗೆ ಅವಕಾಶವಿಲ್ಲ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ದೇಗುಲದಲ್ಲಿ ಎಲ್ಲಾ ಸೇವೆ ಆರಂಭಿಸಲು ಅನುಮತಿ ಕೋರಿ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿದ್ದೇವೆ. ಸೆಪ್ಟೆಂಬರ್ 1ರಿಂದ ಸೇವೆ ಆರಂಭ ಮಾಡಬೇಕು ಎಂಬುದು ನಮ್ಮ ಗುರಿ. ರಾಜ್ಯ ಮುಖ್ಯ ಕಾರ್ಯದರ್ಶಿ ಜೊತೆ ಮಾತನಾಡಿದ್ದೇವೆ. ಒಳಾಂಗಣದ ಎಲ್ಲಾ ಸೇವೆ ಆರಂಭ ಮಾಡಿ ಎಂದು ಮನವಿ ಮಾಡಿದ್ದೇವೆ. ಸರ್ಕಾರದಿಂದ ಅಧಿಕೃತ ಮಾಹಿತಿ ಮತ್ತು ಅನುಮತಿ ಬರಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಾಮಾಜಿಕ ಅಂತರ ಕಾಪಾಡುವ ಸೇವೆಗೆ ಮುಕ್ತ ಅವಕಾಶ ಇದೆ. ಕೊಲ್ಲೂರಿನ ಚಿನ್ನದ ರಥ ಸೇವೆ, ಬೆಳ್ಳಿರಥ ಸೇವೆ ಹೇಗೆ ಎಂಬ ಬಗ್ಗೆ ಚಿಂತನೆ ನಡೆಸುತ್ತೇವೆ. ಕೋವಿಡ್-19 ಗೈಡ್ ಲೈನ್ ಮೇಲೆ ಎಲ್ಲಾ ಸೇವೆ ಆರಂಭವಾಗುತ್ತದೆ ಎಂದು ಹೇಳಿದರು.

    ನೂರಾರು, ಸಾವಿರಾರು ಜನ ಸೇರಿ ಕೊಡುವ ಸೇವೆ ಸದ್ಯಕ್ಕೆ ಸಾಧ್ಯವಿಲ್ಲ. ಅಂತಹ ಸೇವೆಯನ್ನು ಹತ್ತು-ಹದಿನೈದು ಜನರು ಮಾಡಲು ಸಾಧ್ಯವೇ ಎಂಬ ಚಿಂತನೆ ನಡೆಸುತ್ತೇವೆ. ಕೋವಿಡ್ ನಿಯಮದ ಮಿತಿಯ ಒಳಗೆ ಎಲ್ಲಾ ಸೇವೆಗಳು ಇರುತ್ತದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

  • ನಿಗದಿಯಂತೆ ಕೆಪಿಎಸ್‍ಸಿ ಪರೀಕ್ಷೆ – ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

    ನಿಗದಿಯಂತೆ ಕೆಪಿಎಸ್‍ಸಿ ಪರೀಕ್ಷೆ – ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

    ಬೆಂಗಳೂರು: ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಕೆಲ ಸ್ಪರ್ಧಾತ್ಮಕ ಪರೀಕ್ಷೆಗಳು ಮುಂದೂಡಿಕೆಯಾಗಿದ್ದವು. ಆದರೆ ನಿಗದಿಯಂತೆ ಕೆಪಿಎಸ್‍ಸಿ ಪರೀಕ್ಷೆ ನಡೆಯಲಿದೆ.

    ಕೆಪಿಎಸ್‍ಸಿ ಪರೀಕ್ಷಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕರ್ನಾಟಕ ಲೋಕಸೇವಾ ಆಯೋಗ ಸ್ಪಷ್ಟನೆ ನೀಡಿದೆ. ಆದ್ದರಿಂದ ಕೆಪಿಎಸ್‍ಸಿ ಪರೀಕ್ಷೆ ಮಾರ್ಗಸೂಚಿಯನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ.

    ಜೊತೆಗೆ ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಮಾರ್ಗಸೂಚಿ ಫಾಲೋ ಮಾಡಲು ಸೂಚನೆ ನೀಡಿದೆ. ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ, ಸಿಇಟಿ ಮಾರ್ಗಸೂಚಿಗಳನ್ನೆ ಕೆಪಿಎಸ್‍ಸಿ ಪರೀಕ್ಷೆಗೂ ಮುಂದುವರಿಕೆ ಮಾಡಿದೆ. ಬಹುತೇಕ ಅದೇ ಮಾರ್ಗಸೂಚಿಯನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ.

    ಕೆಪಿಎಸ್‍ಸಿಗೆ ಆರೋಗ್ಯ ಇಲಾಖೆ ಮಾರ್ಗಸೂಚಿ
    * ಪರೀಕ್ಷೆಗೆ 3 ದಿನ ಮುಂಚೆ ಕಡ್ಡಾಯವಾಗಿ ಕೊಠಡಿ ಸ್ಯಾನಿಟೈಸ್ ಮಾಡಬೇಕು
    * ಪ್ರತಿ ವಿದ್ಯಾರ್ಥಿಗಳು ಎರಡು ಗಂಟೆ ಮುಂಚೆ ಬಂದು ಪರೀಕ್ಷಾ ಕೇಂದ್ರದಲ್ಲಿ ತಮಗೆ ನೀಡಿದ ಕೊಠಡಿಯಲ್ಲಿ ಆಸೀನರಾಗಬೇಕು
    * ಪ್ರತಿ ಕೇಂದ್ರದಲ್ಲಿ ಅಭ್ಯರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸ್, ಮಾಸ್ಕ್ ಕಡ್ಡಾಯ
    * ಪರೀಕ್ಷೆಗೆ ಆಗಮಿಸೋವಾಗ, ಪರೀಕ್ಷೆ ಮುಗಿಸಿ ತೆರಳುವಾಗ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು
    * ಪ್ರತಿ ಕೊಠಡಿಗೆ 24 ಅಭ್ಯರ್ಥಿಗಳು ಮಾತ್ರ  ಕೂರಿಸಬೇಕು

    * ಕೊಠಡಿಯಲ್ಲಿ ಅಭ್ಯರ್ಥಿಗಳ ಮಧ್ಯೆ ಸಾಮಾಜಿಕ ಅಂತರ ನಿಯಮ ಫಾಲೋ ಮಾಡಬೇಕು (ಕನಿಷ್ಠ 3 ಅಡಿ)
    * ಕಂಟೈನ್ಮೆಂಟ್ ವಲಯದಿಂದ ಬರೋ ಅಭ್ಯರ್ಥಿಗಳಿಗೆ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ವ್ಯವಸ್ಥೆ ಮಾಡಬೇಕು
    * ಪರೀಕ್ಷಾ ಕೆಲಸಕ್ಕೆ ಹಾಜರಾಗೋ ಸಿಬ್ಬಂದಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಬಾರದು
    * ಅನ್ಯ ಕಾಯಿಲೆ ಇರೋ ಅಭ್ಯರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ವ್ಯವಸ್ಥೆ ಮಾಡಬೇಕು
    * ಪರೀಕ್ಷೆ ಮುಗಿದ ಬಳಿಕ ಕೊಠಡಿ, ಡೆಸ್ಕ್, ಟೇಬಲ್ ಗಳನ್ನ ಸ್ಯಾನಿಟೈಸ್ ಮಾಡಬೇಕು
    * ಪರೀಕ್ಷಾ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು
    * ಪ್ರತಿ ಕೇಂದ್ರದಲ್ಲಿ ಆರೋಗ್ಯ ಸಿಬ್ಬಂದಿ ಇರುವಂತೆ ನೋಡಿಕೊಳ್ಳಬೇಕು
    * ಪರೀಕ್ಷಾ ಕೇಂದ್ರದ ಶೌಚಾಯಲ ಶುಚಿತ್ವದಿಂದ ಇರುವಂತೆ ನೋಡಿಕೊಳ್ಳಬೇಕು
    * ಕೊರೊನಾ ಸೋಂಕು ಇರೋ ಅಭ್ಯರ್ಥಿಗಳಿಗೆ ವಿಶೇಷ ಸ್ಥಳದಲ್ಲಿ, ವಿಶೇಷ ಕೊಠಡಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಪರೀಕ್ಷೆಗೆ ವ್ಯವಸ್ಥೆ ಮಾಡಬೇಕು.

  • ಕೊರೊನಾ ಡ್ಯೂಟಿ ಮಾಡಿ – ಸೋಂಕಿತ ವೈದ್ಯನಿಗೆ ಅಧಿಕಾರಿಗಳ ಸೂಚನೆ

    ಕೊರೊನಾ ಡ್ಯೂಟಿ ಮಾಡಿ – ಸೋಂಕಿತ ವೈದ್ಯನಿಗೆ ಅಧಿಕಾರಿಗಳ ಸೂಚನೆ

    – ಆರೋಗ್ಯ ಇಲಾಖೆಯಿಂದ ಮತ್ತೊಂದು ಎಡವಟ್ಟು

    ಬೆಂಗಳೂರು: ಬಿಬಿಎಂಪಿ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು, ಕೊರೊನಾ ಸೋಂಕಿತ ವೈದ್ಯರಿಗೆ ಡ್ಯೂಟಿ ಮಾಡಿ ಎಂದು ಸೂಚಿಸಿದ್ದಾರೆ

    ಮಿನಾಜ್ ನಗರದ ನಿವಾಸಿ ಹನುಮಂತನಗರ ಡಿಸ್ಪೆನ್ಸರಿ ಬಿಬಿಎಂಪಿ ಆಸ್ಪತ್ರೆಯ ಗುತ್ತಿಗೆ ಡಾಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಇವರಿಗೆ ಕೊರೊನಾ ಪಾಸಿಟಿವ್‌ ಬಂದಿದೆ. ಪಾಸಿಟಿವ್ ಇರುವವರು ಹೋಂ ಐಸೋಲೇಷನ್ ಇರಬೇಕು. ಇಲ್ಲ ಕೋವಿಡ್ ಕೇರ್ ಸೆಂಟರ್ ನಲ್ಲಿರಬೇಕು. ಆದರೆ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

    ಕೊರೊನಾ ಸೋಂಕಿತ ವೈದ್ಯ ಕೆಲಸ ಮಾಡಲು ಬಂದಿರುವುದರಿಂದ ಅಲ್ಲಿ ಸಿಬ್ಬಂದಿ ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ. ಜೊತೆಗೆ ನೀವು ಮನೆಗೆ ಹೋಗಿ ಹೋಂ ಐಸೊಲೇಷನ್ ಆಗಿ ಎಂದು ಪಟ್ಟುಹಿಡಿದಿದ್ದಾರೆ. ಆದರೆ ಸೋಂಕಿತ ವೈದ್ಯ ಮಾತ್ರ ಹಿರಿಯ ಅಧಿಕಾರಿಗಳು ನನಗೆ ಡ್ಯೂಟಿ ಮಾಡಲು ಸೂಚಿಸಿದ್ದಾರೆ. ಬೇಕಿದ್ದರೆ ನೀವು ಮನೆಗೆ ಹೋಗಿ ಎಂದು ಮೊಂಡುವಾದ ಮಾಡುತ್ತಿದ್ದಾರೆ.

  • ತಿಥಿ ಕಾರ್ಯ ಮುಗಿದ ಮೇಲೆ ಸೋಂಕಿನಿಂದ ಸಾವನ್ನಪ್ಪಿದ ವೃದ್ಧೆಯ ಅಂತ್ಯಕ್ರಿಯೆ- ಆರೋಗ್ಯ ಇಲಾಖೆ ಎಡವಟ್ಟು!

    ತಿಥಿ ಕಾರ್ಯ ಮುಗಿದ ಮೇಲೆ ಸೋಂಕಿನಿಂದ ಸಾವನ್ನಪ್ಪಿದ ವೃದ್ಧೆಯ ಅಂತ್ಯಕ್ರಿಯೆ- ಆರೋಗ್ಯ ಇಲಾಖೆ ಎಡವಟ್ಟು!

    ಗದಗ: ಕೊರೊನಾದಿಂದ ಸಾವನ್ನಪ್ಪಿದ್ದ ವೃದ್ಧೆಯ ತಿಥಿ ಕಾರ್ಯ ಮುಗಿದ ಬಳಿಕ ಮೃತದೇಹದ ಅಂತ್ಯಕ್ರಿಯೆ ಮಾಡಿದ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ಮಹಾ ಎಡವಟ್ಟು ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ 70 ವರ್ಷದ ವೃದ್ಧೆಗೆ ಪಾಶ್ವವಾಯು ಹಾಗೂ ಅನಾರೋಗ್ಯದ ಹಿನ್ನಲೆ ಜುಲೈ 15 ರಂದು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಜುಲೈ 18 ರಂದು ಕೊವಿಡ್-19 ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಎಂದು ದೃಢಪಟ್ಟ ವರದಿ ಬಂದಿದೆ. ನಂತರ ಜುಲೈ 20 ರಂದು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾಳೆ ಎಂದು ಆರೋಗ್ಯ ಇಲಾಖೆ ಕುಟುಂಬಕ್ಕೆ ಫೋನ್ ಮೂಲಕ ತಿಳಿಸಿದ್ದರು.

    ತಾಯಿ ಸಾವನ್ನಪ್ಪಿದ ಎಂದು ತಿಳಿಸಿದ ಆರೋಗ್ಯ ಇಲಾಖೆ ಅಂತ್ಯಕ್ರಿಯೆಯನ್ನು ಕೋವಿಡ್ ನಿಯಮಗಳ ಅನ್ವಯ ನೆರವೇರಿಸುತ್ತೇವೆ ಎಂದು ಕುಟುಂಬಸ್ಥರಿಗೆ ತಿಳಿಸಿತ್ತು. ಇದರಿಂದ ಮೃತ ವೃದ್ಧೆಯ ಮಗ ಪರಸಪ್ಪ ಗಡ್ಡದ ಅವರು ಜುಲೈ 28 ರಂದು 9ನೇ ದಿನದ ತಿಥಿ ಕಾರ್ಯ ಮಾಡಿ ಮುಗಿಸಿದ್ದರು. ಆದರೆ ಇದೆಲ್ಲಾ ಮುಗಿದ ಬಳಿಕ ಮತ್ತೆ ಜುಲೈ 30 ರಂದು ಮತ್ತೆ ಗದಗ ಜಿಮ್ಸ್ ಆಸ್ಪತ್ರೆಯಿಂದ ಕರೆ ಮಾಡಿ, ವೃದ್ಧೆಯ ಸ್ವಗ್ರಾಮ ನರೇಗಲ್ ಪಟ್ಟಣಕ್ಕೆ ಶವ ತಂದು ಕೋವಿಡ್ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ಮಾಡುತ್ತೇವೆ ಎಂದು ಹೇಳಿದ್ದರು.

    ಆರೋಗ್ಯ ಇಲಾಖೆಯ ಕರೆಯಿಂದ ಕುಟುಂಬಕ್ಕೆ ಶಾಕ್ ಆಗಿದ್ದು, ಜುಲೈ 20 ರಂದೇ ವೃದ್ಧೆ ಸಾವನ್ನಪ್ಪಿದ ಸಂದರ್ಭದಲ್ಲಿ ಈಗ ಮತ್ತೆ ಹೇಗೆ ಮೃತದೇಹ ತರುತ್ತೀರಿ ಎಂದು ಕುಟುಂಬಸ್ಥರು ಪ್ರಶ್ನೆ ಮಾಡಿದ್ದಾರೆ. ಆದರೆ ಕುಟುಂಬಸ್ಥರ ಪ್ರಶ್ನೆಗೆ ಆರೋಗ್ಯ ಇಲಾಖೆ ಸರಿಯಾದ ಉತ್ತರ ನೀಡದೆ ಅವಾಜ್ ಹಾಕಿದ್ದಾರೆ.

    ಎಲ್ಲದರ ನಡುವೆ ನರೇಗಲ್‍ನಲ್ಲಿ ಕೊನೆಗೂ ಕೋವಿಡ್-19 ನಿಯಮದ ಪ್ರಕಾರ ಅಂತ್ಯಕ್ರಿಯೆ ಮಾಡಲಾಯಿತು. ಮುಖ ನೋಡಲು ಬಿಡದೆ ಬೇರೆ ಯಾರದ್ದೋ ಮೃತದೇಹ ತಂದು ಸಿಬ್ಬಂದಿ ಅಂತ್ಯಕ್ರಿಯೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಆದರೆ ಇತ್ತ ಸರಿಯಾದ ಮಾಹಿತಿ ನೀಡದ ಜಿಮ್ಸ್ ಆಸ್ಪತ್ರೆ, ಆರೋಗ್ಯ ಇಲಾಖೆ, ಜಿಲ್ಲಾಡಳಿತ ಬೇಜವಾಬ್ದಾರಿತನದ ವಿರುದ್ಧ ಮೃತ ವೃದ್ಧೆಯ ಮಗ ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿದ್ದಾರೆ.

  • ಅಂತ್ಯಸಂಸ್ಕಾರಕ್ಕಾಗಿ ರಸ್ತೆ ಪಕ್ಕದಲ್ಲಿ ಮೃತದೇಹದ ಜೊತೆ 3 ಗಂಟೆ ಕಾದ ಕಾರ್ಯಕರ್ತರು

    ಅಂತ್ಯಸಂಸ್ಕಾರಕ್ಕಾಗಿ ರಸ್ತೆ ಪಕ್ಕದಲ್ಲಿ ಮೃತದೇಹದ ಜೊತೆ 3 ಗಂಟೆ ಕಾದ ಕಾರ್ಯಕರ್ತರು

    ಮಂಡ್ಯ: ಕೋವಿಡ್‍ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕಾಗಿ ಕಾರ್ಯಕರ್ತರು ಸುಮಾರು ಮೂರು ಗಂಟೆಯವರೆಗೂ ಕಾದು ಕುಳಿತ್ತಿದ್ದ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದ ಬಳಿ ನಡೆದಿದೆ.

    ಜಿಲ್ಲೆಯಲ್ಲಿ ಕೋವಿಡ್‍ನಿಂದ ಮೃತಪಟ್ಟವರನ್ನು ಜಮಾತೆ ಉಲಮಾ ತಂಡದ ಕಾರ್ಯಕರ್ತರು ಅಂತ್ಯ ಸಂಸ್ಕಾರ ಮಾಡಿದ್ದಾರೆ. ಆದರೆ ಶವ ಸಂಸ್ಕಾರಕ್ಕೆ ಬೇಕಾದ ಕ್ರಮ ಕೈಗೊಳ್ಳದ ಪರಿಣಾಮ ರಸ್ತೆಯ ಪಕ್ಕದಲ್ಲಿ ಮೃತದೇಹದ ಜೊತೆ ಅಂಬುಲೆನ್ಸ್ ನಿಲ್ಲಿಸಿಕೊಂಡು ಕಾರ್ಯಕರ್ತರು ನಿಂತಿದ್ದರು.

    ಅಂತ್ಯ ಸಂಸ್ಕಾರ ಮಾಡಲು ಇಂದು ಮುಂಜಾನೆ ಸುಮಾರು 5.30ಕ್ಕೆ ಶವವನ್ನು ಜಿಲ್ಲಾಡಳಿತ ಹಸ್ತಾಂತರಿಸಿತ್ತು. ಆದರೆ ಸುಮಾರು ಮೂರು ಗಂಟೆಗಳ ಕಾಲ ಕಾದರೂ ಶವ ಸಂಸ್ಕಾರಕ್ಕೆ ಬೇಕಾದ ಕ್ರಮ ಕೈಗೊಂಡಿರಲಿಲ್ಲ. ಅಂಬುಲೆನ್ಸ್ ನತ್ತ ಆರೋಗ್ಯ ಇಲಾಖೆ ಅಧಿಕಾರಿಗಳು ಬಂದಿಲ್ಲ, ಅಂತ್ಯ ಸಂಸ್ಕಾರಕ್ಕೆ ಗುಂಡಿ ತೆಗೆಯಲು ಜೆಸಿಬಿಯೂ ಬಂದಿರಲಿಲ್ಲ.

    ಹೀಗಾಗಿ ಮೃತನ ಸಂಬಂಧಿಕರ ಸಹಕಾರ, ಆರೋಗ್ಯ ಇಲಾಖೆಯ ಸಹಕಾರವಿಲ್ಲದೆ ಕಾರ್ಯಕರ್ತರು ಶವವನ್ನ ರಸ್ತೆ ಬದಿಯಲ್ಲೇ ನಿಲ್ಲಿಸಿಕೊಂಡು ಸುಮಾರು ಮೂರು ಗಂಟೆ ಕಾಯುತ್ತಿದ್ದರು. ಇದರಿಂದ ಕಾರ್ಯಕರ್ತರು ಜಿಲ್ಲಾಡಳಿತದ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಕೊನೆಗೆ ಮೂರು ಗಂಟೆಯ ನಂತರ ಅಧಿಕಾರಿಗಳು ಬಂದಿದ್ದು, ಸೋಂಕಿತನ ಅಂತ್ಯಸಂಸ್ಕಾರ ನಡೆಸಲಾಗಿದೆ.

  • ಬೆಂಗ್ಳೂರಿಗೆ ತಲೆನೋವಾದ ಸೋಂಕಿತರ ರಿಕವರಿ ರೇಟ್ – ಯೋಗದ ಮೊರೆ ಹೋದ ಆರೋಗ್ಯ ಇಲಾಖೆ

    ಬೆಂಗ್ಳೂರಿಗೆ ತಲೆನೋವಾದ ಸೋಂಕಿತರ ರಿಕವರಿ ರೇಟ್ – ಯೋಗದ ಮೊರೆ ಹೋದ ಆರೋಗ್ಯ ಇಲಾಖೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿತರ ರಿಕವರಿ ರೇಟ್ ಕಡಿಮೆಯಾಗಿದ್ದು, ಇದನ್ನು ಹೆಚ್ಚಿಸಲು ಆರೋಗ್ಯ ಇಲಾಖೆ ಯೋಗದ ಮೊರೆ ಹೋಗಿದೆ.

    ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ದಿನಕ್ಕೆ ಎರಡು ಸಾವಿರ ಜನರಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿದ್ದು, ಸರ್ಕಾರ ಸೋಂಕಿತರಿಗೆ ಬೆಡ್ ಒದಗಿಸಲು ಕಷ್ಟಪಡುತ್ತಿದೆ. ಕೊರೊನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿರುವ ನಡುವೆ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಕಡಿಮೆಯಾಗಿರುವುದು ಆರೋಗ್ಯ ಇಲಾಖೆಗೆ ಹೊಸ ತಲೆನೋವಾಗಿದೆ.

    ಹೀಗಾಗಿ ಆರೋಗ್ಯ ಇಲಾಖೆ ಸೋಂಕಿತರ ರಿಕವರಿ ರೇಟ್ ಹೆಚ್ಚಿಸಲು ಹೊಸ ಪ್ಲಾನ್ ಮಾಡಿದ್ದು, ಯೋಗ ಮಂತ್ರದ ಮೊರೆ ಹೋಗಿದೆ. ಹೀಗಾಗಿ ಕೊರೊನಾ ವೈರಸ್‍ಗೆ ರಾಮಭಾಣವಾಗಿರುವ ಪ್ರಾಣಾಯಾಮವನ್ನು ಕೋವಿಡ್ ಸೆಂಟರ್ ಗಳಲ್ಲಿ ಸೋಂಕಿತರಿಗೆ ಮಾಡಿಸುತ್ತಿದೆ. ಈ ಮೂಲಕ ಯೋಗ ಥೆರಪಿ ಬಳಸಿ ಕೊರೊನಾ ಸೋಂಕಿತರು ಬೇಗ ಗುಣಮುಖರಾಗುವಂತೆ ಮಾಡಿ ಡಿಸ್ಚಾರ್ಜ್ ಮಾಡುವ ಹೊಸ ಐಡಿಯಾವನ್ನು ಆರೋಗ್ಯ ಇಲಾಖೆ ಮಾಡಿದೆ.

    ಈಗ ಬೆಂಗಳೂರಿನ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಸೋಂಕಿತರಿಗೆ ಕಡ್ಡಾಯ ಯೋಗಭ್ಯಾಸ ಮಾಡಿಸಲು ಆರೋಗ್ಯ ಇಲಾಖೆ ನಿರ್ಧಾರ ಮಾಡಿದೆ. ಹೀಗಾಗಿ ರವಿಶಂಕರ್ ಗುರೂಜಿ ಆಶ್ರಮದ ಕೋವಿಡ್ ಕೇರ್ ಸೆಂಟರ್ ಮತ್ತು ಆಶ್ರಮ ಸಿಸಿಸಿಯಲ್ಲೂ ಪ್ರತಿಯೊಬ್ಬ ರೋಗಿಗೂ ಕಡ್ಡಾಯ ಯೋಗಭ್ಯಾಸಕ್ಕೆ ಪ್ರತ್ಯೇಕ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಕೊರೊನಾ ರೋಗಿಗಳ ಒತ್ತಡ ನಿವಾರಿಸಲು ಇಲಾಖೆ ಈ ಹೊಸ ಪ್ರಯತ್ನ ಮಾಡುತ್ತಿದೆ. ಅದರಂತೆ ಸತತ ಒಂದು ಗಂಟೆಗಳ ಕಾಲ ಸೋಂಕಿತರಿಗೆ ಸಿಬ್ಬಂದಿ ಯೋಗಭ್ಯಾಸ ಮಾಡಿಸುತ್ತಿದ್ದಾರೆ.

  • ಬೆಂಗಳೂರಿನ ಒಂದೇ ಏರಿಯಾದಲ್ಲಿ ಬರೋಬ್ಬರಿ 21 ಅಂಬುಲೆನ್ಸ್‌ಗಳು

    ಬೆಂಗಳೂರಿನ ಒಂದೇ ಏರಿಯಾದಲ್ಲಿ ಬರೋಬ್ಬರಿ 21 ಅಂಬುಲೆನ್ಸ್‌ಗಳು

    ಬೆಂಗಳೂರು: ಒಂದು ಕಡೆ ಕೊರೊನಾ ಪೀಡಿತರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅಂಬುಲೆನ್ಸ್ ಸಿಗುತ್ತಿಲ್ಲ ಎಂಬ ಆರೋಪ ದಿನೇ ದಿನೇ ಹೆಚ್ಚಾಗಿ ಕೇಳಿ ಬರುತ್ತಿದೆ. ಆದರೆ ಮತ್ತೊಂದಡೆ ಬೆಂಗಳೂರಿನ ಒಂದೇ ಏರಿಯಾದಲ್ಲಿ ಬರೋಬ್ಬರಿ 21 ಅಂಬುಲೆನ್ಸ್‌ಗಳು ಸಾಲಾಗಿ ನಿಂತಿವೆ.

    ಹೌದು..ಬೆಂಗಳೂರಿನ ಸೌತ್ ಎಂಡ್ ಸರ್ಕಲ್ ಬಳಿ ಒಂದಲ್ಲ, ಎರಡಲ್ಲ, ಬರೋಬ್ಬರಿ 21 ಅಂಬುಲೆನ್ಸ್‌ಗಳು ಸಾಲಾಗಿ ನಿಂತಿರುವುದನ್ನು ಕಾಣಬಹುದಾಗಿದೆ. ಸೌತ್ ಎಂಡ್ ಸರ್ಕಲ್‍ನಿಂದ ಜೆಪಿ ನಗರ ರಸ್ತೆವರೆಗೆ 21 ಅಂಬುಲೆನ್ಸ್‌ಗಳು ನಿಂತಿವೆ.

    ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸರಿಯಾಗಿ ಅಂಬುಲೆನ್ಸ್ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ ಇಲ್ಲಿ ಕೊರೊನಾ ಸೋಂಕಿತರನ್ನು ಕರೆದುಕೊಂಡು ಹೋಗಲು ಈ ಅಂಬುಲೆನ್ಸ್ ಸಿದ್ಧವಾಗಿದ್ದಾವೆ. ಎಲ್ಲಿಂದ ಕರೆ ಬಂದರೂ ಹೋಗಿ ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಅಂಬುಲೆನ್ಸ್ ಚಾಲಕರು ಹೇಳುತ್ತಿದ್ದಾರೆ.

    ಬಿಬಿಎಂಪಿ ವಾರ್ಡಿಗೆ ಎರಡು ಅಂಬುಲೆನ್ಸ್‌ಗಳನ್ನು ಅನುದಾನ ಮಾಡಿದೆ. ಒಂದು ವಾರ್ಡಿಗೆ ಎಂದು ಸೀಮಿತ ಮಾಡಿ ಬೇರೆ ಕಡೆ ಯಾಕೆ ಈ ಅಂಬುಲೆನ್ಸ್‌ಗಳನ್ನು ಕರೆಸಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆ ಮೂಡಿದೆ. ಹೀಗಾಗಿ ಪಾಲಿಕೆ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ನಡುವೆ ಸಮನ್ವಯ ಇಲ್ವಾ? ಎಂಬ ಮಾತು ಕೇಳಿ ಬರುತ್ತಿದೆ.

    ಒಂದು ಕಡೆ ಕೊರೊನಾ ರೋಗಿಗಳಿಗೆ ಸೂಕ್ತ ಅಂಬುಲೆನ್ಸ್ ಸಿಗುತ್ತಿಲ್ಲ ಎಂಬ ಆರೋಪ ಹೇಳಿ ಬರುತ್ತಿದೆ. ಆದರೆ ಇಲ್ಲಿ ಮಾತ್ರ ಕರೆದುಕೊಂಡು ಬರುವುದಕ್ಕೆ ರೋಗಿಗಲೇ ಸಿಗುತ್ತಿಲ್ಲ ಎಂದು 21 ಅಂಬುಲೆನ್ಸ್‌ಗಳು ಸಾಲಾಗಿ ನಿಂತಿವೆ.

  • ಸೋಂಕಿತನ ಮೃತದೇಹವನ್ನು ಮಳೆಯಲ್ಲೇ ನೆನೆಯಲು ಬಿಟ್ಟ ಬಳ್ಳಾರಿ ಆರೋಗ್ಯ ಇಲಾಖೆ

    ಸೋಂಕಿತನ ಮೃತದೇಹವನ್ನು ಮಳೆಯಲ್ಲೇ ನೆನೆಯಲು ಬಿಟ್ಟ ಬಳ್ಳಾರಿ ಆರೋಗ್ಯ ಇಲಾಖೆ

    – ಗಣಿಜಿಲ್ಲೆಯಲ್ಲಿ ಕೊಚ್ಚಿ ಹೋಯ್ತು ಮಾನವೀಯತೆ

    ಬಳ್ಳಾರಿ: ಕೊರೊನಾ ಸೋಂಕಿತ ಮೃತದೇಹವನ್ನು ಮಳೆಯಲ್ಲೇ ನೆನೆಯಲು ಬಿಟ್ಟು ಬಳ್ಳಾರಿ ಜಿಲ್ಲೆಯ ಆರೋಗ್ಯ ಇಲಾಖೆ ಮತ್ತೊಮ್ಮೆ ಅಮಾನವೀಯವಾಗಿ ನಡೆದುಕೊಂಡಿದೆ.

    ಬುಧವಾರ ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಆರು ಜನರು ಸಾವನ್ನಪ್ಪಿದ್ದರು. ಇದರಲ್ಲಿ ಹೊಸಪೇಟೆ ತಾಲೂಕು ಆಸ್ಪತ್ರೆಯಲ್ಲೂ ಓರ್ವ ಸೋಂಕಿತ ಮೃತಪಟ್ಟಿದ್ದರು. ಈ ವೇಳೆ ಆತನ ಶವವನ್ನು ಆಸ್ಪತ್ರೆಯ ಆವರಣದಲ್ಲಿ ನೆನೆಯಲು ಬಿಟ್ಟು ಆಸ್ಪತ್ರೆಯ ವೈದ್ಯರ ಮತ್ತೊಂದು ಎಡವಟ್ಟು ಮಾಡಿದ್ದಾರೆ.

    ಈ ಆಸ್ಪತ್ರೆಗೆ ಪ್ರತಿನಿತ್ಯ ಗರ್ಭಿಣಿಯರು ಸೇರಿದಂತೆ ಅನೇಕರು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಹೀಗಾಗಿ ಈ ಸಮಯದಲ್ಲಿ ಕೊರೊನಾ ಸೋಂಕಿತ ಮೃತದೇಹವನ್ನು ಈ ರೀತಿ ಮಳೆಯಲ್ಲಿ ನೆನೆಯಲು ಬಿಟ್ಟಿದ್ದಕ್ಕೆ ಸ್ಥಳೀಯವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮೃತ ಪಟ್ಟು ಎರಡು ಗಂಟೆಗಳಾದರೂ ಮಳೆಯಲ್ಲೇ ಶವವನ್ನು ನೆನೆಯಲು ಬಿಟ್ಟ ಸಿಬ್ಬಂದಿ ನಂತರ ಶವಕ್ಕೆ ಪಿಪಿಇ ಕಿಟ್ ಹಾಕಿ ಮುಚ್ಚಿದ್ದಾರೆ.

    ವೈದ್ಯರ ಮತ್ತು ಆಸ್ಪತ್ರೆಯ ಸಿಬ್ಬಂದಿಯ ಈ ನಿರ್ಲಕ್ಷ್ಯಕ್ಕೆ ಸ್ಥಳೀಯ ಆಟೋ ಚಾಲಕರು ಕಿಡಿಕಾರಿದ್ದು, ವಿಡಿಯೋ ಮಾಡಿ ಕೊರೊನಾ ವೈರಸ್ ಪರೀಕ್ಷಾ ಕೇಂದ್ರವನ್ನು ಬೇರೆಡೆ ಸ್ಥಳಾಂತರಿಸಬೇಕೆಂದು ಸಚಿವ ಆನಂದ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ. ಇಲ್ಲಿಗೆ ಬಡವರು, ಗರ್ಭಿಣಿಯರು ಚಿಕಿತ್ಸೆಗೆ ಬರುತ್ತಾರೆ ಇಲ್ಲಿ ಕೊರೊನಾ ಘಟಕ ಇರುವುದು ಬೇಡ ಬೇರೆ ಕಡೆ ಶಿಫ್ಟ್ ಮಾಡಿ ಎಂದು ಕೇಳಿಕೊಂಡಿದ್ದಾರೆ.

    ಇತ್ತೀಚೆಗಷ್ಟೇ ಕೊರೊನಾ ಸೋಂಕಿನಿಂದ ಮೃತಪಟ್ಟವರ ಮೃತದೇಹವನ್ನು ಗುಂಡಿಯೊಳಗೆ ಎಸೆದು, ಒಂದೇ ಗುಂಡಿಯಲ್ಲಿ ಎರಡು ಮೃತದೇಹವನ್ನು ಮುಚ್ಚಿ ಅಮಾನವೀಯವಾಗಿ ನಡೆದುಕೊಂಡಿದ್ದ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಜೊತೆಗೆ ಈ ವಿಚಾರವಾಗಿ ಬಳ್ಳಾರಿ ಜಿಲ್ಲೆಯ ಡಿಸಿಯವರು ಬಹಿರಂಗವಾಗಿ ಕ್ಷಮೆ ಕೇಳಿದ್ದರು.