Tag: health department

  • ಬಾಲ ಮಂದಿರದಲ್ಲಿದ್ದ 35 ವಿದ್ಯಾರ್ಥಿನಿಯರಿಗೆ ಕೋವಿಡ್ ಪಾಸಿಟಿವ್

    ಬಾಲ ಮಂದಿರದಲ್ಲಿದ್ದ 35 ವಿದ್ಯಾರ್ಥಿನಿಯರಿಗೆ ಕೋವಿಡ್ ಪಾಸಿಟಿವ್

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳನ್ನು ಓಪನ್ ಮಾಡಲು ಈಗಾಗಲೇ ಶಿಕ್ಷಣ ಇಲಾಖೆ ತಯಾರಿ ನಡೆಸುತ್ತಿರುವ ವೇಳೆಯಲ್ಲಿ ಮಡಿಕೇರಿ ನಗರದ ಬಾಲಕಿಯರ ಬಾಲ ಮಂದಿರದ 35 ವಿದ್ಯಾರ್ಥಿನಿಯರಿಗೆ ಕೊರೋನಾ ಪಾಸಿಟಿವ್ ದೃಢಪಡಿಟ್ಟಿದೆ.

    ಬಾಲಮಂದಿರಲ್ಲಿ ಇರುವ ಒಟ್ಟು 47 ವಿದ್ಯಾರ್ಥಿಗಳ ಪೈಕಿ 35 ವಿದ್ಯಾರ್ಥಿನಿಯರಿಗೆ ಪಾಸಿಟಿವ್ ದೃಢವಾಗಿದೆ. ಬಾಲ ಮಂದಿರದಲ್ಲಿ ಇಬ್ಬರು ಪಿಯು ವಿದ್ಯಾರ್ಥಿನಿಯರು ಕಾಲೇಜಿಗೆ ಹೋಗಿ ಬಂದಿದ್ದ ಹಿನ್ನೆಲೆಯಲ್ಲಿ ಆ ವಿದ್ಯಾರ್ಥಿನಿಯರಿಗೆ ಸೋಂಕು ಬಂದಿತ್ತು. ಅವರಿಂದ ಉಳಿದ 33 ವಿದ್ಯಾರ್ಥಿನಿಯರಿಗೆ ಸೋಂಕು ಹರಡಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ ಒಟ್ಟೋಟಿಗೆ ಗುಂಪು ಗುಂಪಾಗಿ ವಿದ್ಯಾರ್ಥಿನಿಯರು ಬಾಲಮಂದಿರದಲ್ಲಿರುವುದು ಸೋಂಕು ಹರಡಿರುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ: 10-14 ವಾರಗಳ ಅಂತರದಲ್ಲಿ ಕೋವಿಶೀಲ್ಡ್ ಲಸಿಕೆ ಪಡೆಯುವುದು ಉತ್ತಮ- ಅಧ್ಯಯನ ವರದಿ

    ಬಾಲ ಮಂದಿರದಲ್ಲಿ ಕೋವಿಡ್ ನಿಯಮಗಳು ಸರಿಯಾದ ರೀತಿಯಲ್ಲಿ ಪಾಲನೆ ಅಗದೇ ಇರುವುದರಿಂದ ಒಂದೇ ಬಾರೀ 33 ವಿದ್ಯಾರ್ಥಿನಿಯರಿಗೆ ಪಾಸಿಟಿವ್ ಬಂದಿದ್ದು, ವಿದ್ಯಾರ್ಥಿನಿಯರಿಗೆ ಕೊರೋನಾ ಪಾಸಿಟಿವ್ ಪತ್ತೆಯಾದ ತಕ್ಷಣ ಬಾಲ ಮಂದಿರದ ಸಿಬ್ಬಂದಿ ಉಳಿದ ಮಕ್ಕಳಿಗೆ ಬೇರೆ ಕೊಠಡಿಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಡಿದ್ದಾರೆ.  ಇದನ್ನೂ ಓದಿ:ಗುಟ್ಕಾ ಸಾಲ ಕೊಡದ್ದಕ್ಕೆ ಪಾನ್ ಶಾಪ್ ಮಾಲೀಕನನ್ನೇ ಕೊಂದ 

    ಈಗಾಗಲೇ ಬಾಲಮಂದಿರದ 12 ಸಿಬ್ಬಂದಿಗಳಿಗೂ ಆರೋಗ್ಯ ಇಲಾಖೆಯಿಂದ ಕೋವಿಡ್ ಟೆಸ್ಟ್ ಮಾಡಲಾಗಿದೆ. ಸದ್ಯ ಎಲ್ಲಾ ವಿದ್ಯಾರ್ಥಿಗಳನ್ನು ಬಾಲ ಮಂದಿರದಲ್ಲೇ ಕ್ವಾರಂಟೈನ್ ಮಾಡಲಾಗಿದ್ದು, ಅವರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಅರೋಗ್ಯ ಇಲಾಖೆ ಒದಗಿಸುತ್ತಿದೆ. ಒಟ್ಟಿನಲ್ಲಿ ಶಾಲೆ ಕಾಲೇಜಿಗೆ ಶುಕ್ರವಾರದಿಂದ ಮಕ್ಕಳನ್ನು ಕಳುಹಿಸಲು ಯೋಚನೆ ಮಾಡಿದ ಪೊಷಕರಲ್ಲಿ ಮತ್ತೆ ಆತಂಕ ಮನೆ ಮಾಡಿದೆ.

     

  • ಆರೋಗ್ಯ ಇಲಾಖೆಯ ಒಂದೇ ಕಾರ್​​​ನಲ್ಲಿ 10 ಮಂದಿ ಪ್ರಯಾಣ

    ಆರೋಗ್ಯ ಇಲಾಖೆಯ ಒಂದೇ ಕಾರ್​​​ನಲ್ಲಿ 10 ಮಂದಿ ಪ್ರಯಾಣ

    – ಆರೋಗ್ಯ ಇಲಾಖೆಯಿಂದಲೇ ಕೊರೊನಾ ರೂಲ್ಸ್ ಬ್ರೇಕ್
    – 10 ಜನರಲ್ಲಿ 9 ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು

    ಚಿಕ್ಕಬಳ್ಳಾಪುರ: ಆರೋಗ್ಯ ಇಲಾಖೆಗೆ ಸೇರಿದ ಸ್ವಿಫ್ಟ್ ಡಿಜೈರ್ ಕಾರಲ್ಲಿ ಕುರಿಗಳಂತೆ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳನ್ನ ಕರೆದೊಯ್ದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

    ಚಿಕ್ಕಬಳ್ಳಾಪುರ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ತರಬೇತಿಗೆ ಅಂತ ಹಾಜರಾಗಿದ್ದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳನ್ನ ಫೀಲ್ಡ್ ವಿಸಿಟ್ ಗೆ ಅಂತ ಆರೋಗ್ಯ ಇಲಾಖೆಗೆ ಸೇರಿದ ಸ್ವಿಫ್ಟ್ ಡಿಜೈರ್ ಕಾರಲ್ಲಿ ಚಾಲಕ ಒಂದೇ ಬಾರಿಗೆ 9 ಮಂದಿ ವಿದ್ಯಾರ್ಥಿಗಳನ್ನ ಕರೆದೊಯ್ದಿದ್ದಾನೆ. ಕಾರ್ ನಲ್ಲಿ ಚಾಲಕ ಸೇರಿ ಐವರು ಪ್ರಯಾಣಿಸಬಹುದು. ಹೆಚ್ಚುವರಿಯಾಗಿ ಒಬ್ಬರು ಕೂರಬಹುದು. ಆದರೆ ಈ ಕಾರಿನ ಹಿಂಬದಿ ಸೀಟ್ ನಲ್ಲಿ 7 ಮಂದಿ, ಮುಂಬದಿ ಸೀಟ್ ಗಳಲ್ಲಿ ಚಾಲಕ ಸೇರಿ ಮೂವರು ಕುಳಿತಿದ್ದಾರೆ. ಇದನ್ನೂ ಓದಿ: ಕೊರೊನಾ ವೈರಸ್ ಲೀಕ್ ಆಗಿದ್ದು ಚೀನಾದ ಲ್ಯಾಬ್‍ನಿಂದಲೇ-ಯುಎಸ್ ರಿಪಬ್ಲಿಕನ್ ವರದಿ

    ಕೊರೊನಾ ಆತಂಕದ ನಡುವೆ ಮಹಾಮಾರಿಗೆ ಕಡಿವಾಣ ಹಾಕಲು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತ ಹೇಳುವ ಆರೋಗ್ಯ ಇಲಾಖಾಧಿಕಾರಿಗಳು ಹೀಗೆ ಮಾಡಿದ್ರೆ ಹೇಗೆ ಎನ್ನುವ ಪ್ರಶ್ನೆ ಎದುರಾಗಿದೆ. ಕುರಿಗಳಂತೆ ಒಬ್ಬರ ಮೇಲೆ ಒಬ್ಬರು ಕೂತು ಪ್ರಯಾಣ ಮಾಡಿದ್ದು ವಿದ್ಯಾರ್ಥಿಗಳ ಜೀವದ ಜೊತೆ ಅಧಿಕಾರಿಗಳ ಚೆಲ್ಲಾಟವಾಡಿದಂತಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕಿದೆ. ಇದನ್ನೂ ಓದಿ: ಹೊಸ ಸ್ವರೂಪ ಪಡೆದ ಕೊರೊನಾ-ಕಣ್ಣೀರಿನಿಂದಲೂ ಸೋಂಕು ಹಬ್ಬುತ್ತೆ, ಎಚ್ಚರ..!

  • ಆರೋಗ್ಯ ಇಲಾಖೆಯ ಸಲಹೆಯಂತೆಯೇ ಪರೀಕ್ಷೆ ದಿನಾಂಕ ಘೋಷಣೆ ಮಾಡಲಾಗಿದೆ: ಸುರೇಶ್ ಕುಮಾರ್

    ಆರೋಗ್ಯ ಇಲಾಖೆಯ ಸಲಹೆಯಂತೆಯೇ ಪರೀಕ್ಷೆ ದಿನಾಂಕ ಘೋಷಣೆ ಮಾಡಲಾಗಿದೆ: ಸುರೇಶ್ ಕುಮಾರ್

    ಬೆಂಗಳೂರು: ಆರೋಗ್ಯ ಇಲಾಖೆ ಸಲಹೆಯಂತೆ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ದಿನಾಂಕ ಪ್ರಕಟ ಮಾಡಲಾಗಿದೆ ಅಂತ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಆರೋಗ್ಯ ಇಲಾಖೆ ಜೊತೆ ಚರ್ಚೆ ಮಾಡಿಲ್ಲ ಎಂಬ ಸಚಿವ ಡಾ. ಸುಧಾಕರ್ ಹೇಳಿಕೆ ವಿಚಾರವಾಗಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಸಚಿವ ಸುರೇಶ್ ಕುಮಾರ್, ಆರೋಗ್ಯ ಇಲಾಖೆ ಸಲಹೆ ಪಡೆಯಲಾಗಿದೆ ಅಂತ ಸ್ಪಷ್ಟಪಡಿಸಿದರು.

    ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಸಮ್ಮುಖದಲ್ಲಿ ಇಂದು ಸಭೆ ನಡೆಸಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳ ಪ್ರಮಾಣಿತ ಕಾರ್ಯಚರಣಾ ವಿಧಾನಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿದೆ. ಅವರೂ ಸಹ, ಆರೋಗ್ಯ ಇಲಾಖೆಯ ಸಹಕಾರದ ಬಗ್ಗೆ ವಿಷದಪಡಿಸಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

    ಅಲ್ಲದೇ ಇಂದು ನಡೆದ ಎರಡು ಗಂಟೆಗಳ ಸುದೀರ್ಘ ಜಿಲ್ಲಾಧಿಕಾರಿಗಳ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಆಯುಕ್ತರು ಪಾಲ್ಗೊಂಡಿದ್ದಾರೆ. ಇಲಾಖೆಯು ನೀಡಿರುವ ಎಸ್.ಓ.ಪಿ ಅನುಸರಣೆಗೆ ಬೇಕಾದ ಸಿದ್ಧತೆಗಳ ಕುರಿತು ತಮ್ಮ ಸದಭಿಪ್ರಾಯವನ್ನು ಎಲ್ಲ ಜಿಲ್ಲಾಡಳಿತಗಳೊಂದಿಗೆ ಹಂಚಿಕೊಂಡಿದ್ದಾರೆ. ಹಾಗೆಯೇ ಮುಖ್ಯಮಂತ್ರಿಗಳನ್ನು ಇಂದು ಸಭೆಗೆ ಮುನ್ನ ಖುದ್ದಾಗಿ ಭೇಟಿ ಮಾಡಿ ಪರೀಕ್ಷಾ ದಿನಾಂಕ ಪ್ರಕಟಣೆಗೆ ಮೌಖಿಕ ಒಪ್ಪಿಗೆ ಪಡೆಯಲಾಗಿದೆ ಎಂದು ಸುರೇಶ್ ಕುಮಾರ್ ವಿವರಣೆ ನೀಡಿದ್ದಾರೆ. ಇದನ್ನೂ ಓದಿ:  ಜುಲೈ 19, 22ಕ್ಕೆ SSLC ಎಕ್ಸಾಂ ಫಿಕ್ಸ್ – 2 ದಿನದಲ್ಲಿ ಸರಳ ಪರೀಕ್ಷೆ, ಯಾರೂ ಫೇಲ್ ಇಲ್ಲ

    ಆರೋಗ್ಯ ಇಲಾಖೆಯು ಸಿದ್ಧ ಪಡಿಸಿ ನೀಡಿರುವ ಪ್ರಮಾಣಿತ ಕಾರ್ಯಚರಣಾ ವಿಧಾನಗಳ ಆಧಾರದಲ್ಲಿ ಜುಲೈ ಮಾಹೆಯಲ್ಲಿ ನಿಗದಿತ ದಿನಾಂಕಗಳಂದು ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ನಡೆಸುವ ವಿಶ್ವಾಸ ಇದೆ. ಸುರಕ್ಷಿತವಾಗಿ ನಡೆಯಲಿರುವ ಈ ಪರೀಕ್ಷೆಗಳು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಅವಶ್ಯವೆನ್ನುವುದನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.

  • ಆರೋಗ್ಯ ಇಲಾಖೆ ಸಿಬ್ಬಂದಿಯ ಎಡವಟ್ಟಿನಿಂದ ಗ್ರಾಮಸ್ಥರಲ್ಲಿ ಆತಂಕ

    ಆರೋಗ್ಯ ಇಲಾಖೆ ಸಿಬ್ಬಂದಿಯ ಎಡವಟ್ಟಿನಿಂದ ಗ್ರಾಮಸ್ಥರಲ್ಲಿ ಆತಂಕ

    ಹಾವೇರಿ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಅರ್ಭಟ ಮುಂದುವರಿದಿದೆ. ಅದರೆ ಕೊವೀಡ್ ನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಕೊರೊನಾದಿಂದ ಸತ್ತಿಲ್ಲ ಎಂದು ಶವ ಹತ್ತಾಂತರ ಮಾಡಿ ಆರೋಗ್ಯ ಇಲಾಖೆಯ ಎಡವಟ್ಟಿನಿಂದ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕೆರವಡಿ ಗ್ರಾಮದ ಜನರಲ್ಲಿ ಈಗ ಆತಂಕ ಶುರುವಾಗುತ್ತಿದೆ.

    ಮೇ 10 ರಂದು ಗ್ರಾಮದ 50 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಆತ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ ಎಂದು ಮೃತದೇಹವನ್ನ ಮನೆಯವರಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಹಸ್ತಾಂತರ ಮಾಡಿದ್ದರು. ಅಂತ್ಯಕ್ರಿಯೆ ಮುಗಿದ ಮೂರು ದಿನಗಳ ನಂತರ ಮೃತನ ವರದಿ ಕೊರೊನಾ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದಾರೆ.

    ಮೃತನ ವರದಿ ಕೊರೊನಾ ಪಾಸಿಟಿವ್ ಅಂದಿದ್ದಕ್ಕೆ ಗ್ರಾಮಸ್ಥರಲ್ಲಿ ಈಗ ಆತಂಕ ಶುರುವಾಗಿದೆ. ಕೊರೊನಾ ಇಲ್ಲವೆಂದು ಮೃತನ ಅಂತ್ಯಕ್ರಿಯೆಯನ್ನ ಮೃತನ ಸಂಬಂಧಿಕರು ಹಾಗೂ ಗ್ರಾಮಸ್ಥರು ನೆರವೇರಿಸಿದ್ದೇವೆ. ನೀವು ಸರಿಯಾದ ವರದಿ ಯಾಕೆ ನೀಡಿಲ್ಲ. ಕೋವಿಡ್ ಅಂತಾ ಹೇಳಿದ್ದರೆ ನಾವು ಕೊರೋನಾ ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆ ಮಾಡುತ್ತಿದ್ದೇವು ಅಂತ ಆರೋಗ್ಯ ಇಲಾಖೆ ಸಿಬ್ಬಂದಿಯನ್ನ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.

  • ಕೋಲ್ಡ್ ಸ್ಟೋರೇಜ್‍ನಲ್ಲಿ ಹೆಪ್ಪುಗಟ್ಟಿದ 1 ಸಾವಿರ ಡೋಸ್ ಕೋವಿಶೀಲ್ಡ್ ಪತ್ತೆ!

    ಕೋಲ್ಡ್ ಸ್ಟೋರೇಜ್‍ನಲ್ಲಿ ಹೆಪ್ಪುಗಟ್ಟಿದ 1 ಸಾವಿರ ಡೋಸ್ ಕೋವಿಶೀಲ್ಡ್ ಪತ್ತೆ!

    – ತನಿಖೆಗೆ ಆದೇಶಿಸಿದ ಆರೋಗ್ಯ ಇಲಾಖೆ

    ಡಿಸ್ಪುರ್: ಅಸ್ಸಾಂನ ಕಚಾರ್ ಜಿಲ್ಲೆಯ ಸಿಲ್ಚೇರ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಕೋಲ್ಡ್ ಸ್ಟೋರೇಜ್ ನಲ್ಲಿ ಸುಮಾರು 1,000 ಡೋಸ್ ಕೊರೊನಾ ಲಸಿಕೆ ಹೆಪ್ಪುಗಟ್ಟಿ ವ್ಯರ್ಥವಾದ ಘಟನೆ ಬೆಳಕಿಗೆ ಬಂದಿದೆ.

    ವರದಿಗಳ ಪ್ರಕಾರ, 1,000 ಡೋಸ್‍ಗಳನ್ನು ಹೊಂದಿರುವ ಕೋವಿಶೀಲ್ಡ್ ಲಸಿಕೆಯ ಸುಮಾರು 100 ಬಾಟ್ಲಿಗಳನ್ನು ಶೂನ್ಯ ತಾಪಮಾನದಲ್ಲಿ ಸಂಗ್ರಹಿಸಲಾಗಿದೆ. ಕೋವಿಶೀಲ್ಡ್ ಲಸಿಕೆಯನ್ನು 2-8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂಗ್ರಹಿಸಬೇಕಾಗುತ್ತದೆ, ಆದರೆ ಸಿಲ್ಚಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಐಸ್ ಲೇನ್ಡ್ ರೆಫ್ರಿಜರೇಟರ್(ಐಎಲ್‍ಆರ್) ತಾಪಮಾನವು ಶೂನ್ಯಕ್ಕಿಂತ ಕಡಿಮೆಯಾಗಿತ್ತು. ಹೀಗಾಗಿ ಲಸಿಕೆ ಕೆಟ್ಟು ಹೋಗಿದೆ ಎನ್ನಲಾಗಿದೆ.

    ಲಿಸಿಕೆ ಬಾಟ್ಲಿಗಳು ಭಾಗಶಃ ಹೆಪ್ಪುಗಟ್ಟಿರುವುದು ಕಂಡುಬಂದಿದೆ. ಐಎಲ್‍ಆರ್ ನ ಕೆಲವು ತಾಂತ್ರಿಕ ದೋಷವಿರಬಹುದು. ನಾವು ಸಾಮಾನ್ಯವಾಗಿ 2-8 ಡಿಗ್ರಿ ಸೆಲ್ಸಿಯಸ್ ನಡುವಿನ ಐಎಲ್‍ಆರ್ ತಾಪಮಾನವನ್ನು ನಿಯಂತ್ರಿಸುತ್ತೇವೆ. ತಾಪಮಾನ ಕಡಿಮೆಯಾದಾಗ ಐಎಲ್‍ಆರ್ ಯಂತ್ರ ಸಂದೇಶ ಕಳುಹಿಸುತ್ತದೆ. ಆದರೆ ನಮ್ಮ ವ್ಯಾಕ್ಸಿನೇಟರ್ ಯಾವುದೇ ಸಂದೇಶ ನೀಡಲಿಲ್ಲ. ಬಹುಶಃ ಇದು ತಾಂತ್ರಿಕ ದೋಷವಾಗಿದೆ. ಲಸಿಕೆಗಳನ್ನು ಇಡೀ ರಾತ್ರಿ ಸಂಗ್ರಹಿಸಲಾಗಿದೆ. ತಾಪಮಾನ ಹೇಗೆ ಕಡಿಮೆಯಾಗಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಕ್ಯಾಚರ್ ಜಿಲ್ಲೆಯ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.

    ಸದ್ಯ ಅಷ್ಟೇ ಪ್ರಮಾಣದ ಸಲಿಕೆ ಬಾಟ್ಲಿಗಳನ್ನು ಮತ್ತೆ ಸಿಲ್ಚಾರ್ ವೈದ್ಯಕೀಯ ಹಾಗೂ ಆಸ್ಪತ್ರೆಗೆ ಕಳುಹಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಅಲ್ಲದೆ ಘಟನೆಯನ್ನು ಗಂಭೀರ ಪರಿಗಣಿಸಿದ್ದು, ಈ ಬಗ್ಗೆ ಇಲಾಖೆ ತನಿಖೆಗೆ ಆದೇಶಿಸಿದೆ.

  • ಕೊರೊನಾ ನಿಯಮ ಉಲ್ಲಂಘನೆ – ಬೆಂಗಳೂರಿನ 7 ಪ್ರತಿಷ್ಠಿತ ಆಸ್ಪತ್ರೆಗಳಿಗೆ ಶೋಕಾಸ್ ನೋಟಿಸ್

    ಕೊರೊನಾ ನಿಯಮ ಉಲ್ಲಂಘನೆ – ಬೆಂಗಳೂರಿನ 7 ಪ್ರತಿಷ್ಠಿತ ಆಸ್ಪತ್ರೆಗಳಿಗೆ ಶೋಕಾಸ್ ನೋಟಿಸ್

    – ಬಿಬಿಎಂಪಿಯಿಂದ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ

    ಬೆಂಗಳೂರು: ಕೊರೊನಾ ನಿಯಮಗಳನ್ನು ಪಾಲಿಸದ ನಗರದ 7 ಖಾಸಗಿ ಆಸ್ಪತ್ರೆಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿರುವ ಬಿಬಿಎಂಪಿ, ಆಸ್ಪತ್ರೆಗಳ ಓಪಿಡಿ ಕ್ಲೋಸ್ ಮಾಡಿ, ಒಳರೋಗಿಳನ್ನು ಶಿಫ್ಟ್ ಮಾಡುವ ಎಚ್ಚರಿಕೆಯನ್ನು ನೀಡಿದೆ.

    ನೋಟಿಸ್ ಪಡೆದಿರುವ ಆಸ್ಪತ್ರೆಗಳು ಮುಂದಿನ 24 ಗಂಟೆಯಲ್ಲಿ ನೋಟಿಸ್‍ಗೆ ಉತ್ತರಿಸಬೇಕಿದೆ. ನಿಯಮಗಳನ್ನು ಉಲ್ಲಂಘಿಸಿದರೆ ಲೈಸನ್ಸ್ ಯಾಕೆ ರದ್ದು ಮಾಡಬಾರದು ಎಂದು ಬಿಬಿಎಂಪಿ ಕೇಳಿದೆ.

    ಸರ್ಕಾರದ ನಿಯಮಗಳನ್ನು ಪಾಲಿಸದ ನಗರದ ರಂಗದೊರೈ ಮೆಮೊರಿಯಲ್ ಆಸ್ಪತ್ರೆ, ಸಂಜಿವಿನಿ ಆಸ್ಪತ್ರೆ, ಡಾ. ಜಿವಿಜಿ ಹೆಲ್ತ್ ಕೇರ್ ಪ್ರೈವೆಟ್ ಲಿ., ಶ್ರೀನಿವಾಸ್ ಆಸ್ಪತ್ರೆ, ಮೆಡ್ ಸ್ಟಾರ್ ಆಸ್ಪತ್ರೆ, ನಂದನ ಹೆಲ್ತ್ ಕೇರ್ ಸರ್ವಿಸ್ ಇಂಡಿಯಾ ಲಿಮಿಟೆಡ್ ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿದೆ.

    ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ನೋಟಿಸ್ ಜಾರಿ ಮಾಡಿದ್ದು, ಶೇ.50 ರಷ್ಟು ಕೋವಿಡ್ ಬೆಡ್ ನೀಡದ ಹಿನ್ನೆಲೆಯಲ್ಲಿ ವಿವರಣೆ ನೀಡುವಂತೆ ಕೋರಿದ್ದಾರೆ.  ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ (ಕೆಪಿಎಂಇ) ಕಾಯ್ದೆ ಅನ್ವಯ ನೋಟಿಸ್ ನೀಡಲಾಗಿದೆ.

    ಸೆ.16 ರಂದು ಕೊರೊನಾ ಸೋಂಕಿತರ ಚಿಕಿತ್ಸೆಗೆ ಸಹಕಾರ ನೀಡದ ಮತ್ತು ಸರ್ಕಾರಕ್ಕೆ ಶೇ.50 ರಷ್ಟು ಹಾಸಿಗೆ ನೀಡದ 36 ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿತ್ತು. ನೋಟಿಸ್‍ನಲ್ಲಿ ಮುಂದಿನ ಮುಂದಿನ 48 ಗಂಟೆಗಳ ಒಳಗಾಗಿ ಸರ್ಕಾರದ ಆದೇಶದಂತೆ ಶೇ.50 ರಷ್ಟು ಹಾಸಿಗೆಗಳನ್ನು ಬಿಟ್ಟು ಕೊಡಬೇಕು. 24 ಗಂಟೆಗಳ ಒಳಗಾಗಿ ಪಾಲಿಕೆಯ ಶೋಕಾಸ್ ನೋಟಿಸ್‍ಗೆ ಉತ್ತರ ನೀಡುವಂತೆ ಸೂಚಿಸಲಾಗಿತ್ತು.

    ಸರ್ಕಾರ ಸೂಚನೆಯನ್ನೂ ಪಾಲಿಸದ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆ, ಕೆಂಗೇರಿಯ ಸಂತೋಷ್ ಆಸ್ಪತ್ರೆ, ವರ್ತೂರಿನ ಸಕ್ರಾ ಆಸ್ಪತ್ರೆ ಹಾಗೂ ಓಲ್ಡ್ ಏರ್‍ಪೋರ್ಟ್ ರಸ್ತೆಯಲ್ಲಿನ ಶುಶ್ರೂಷಾ ಆಸ್ಪತ್ರೆ ಮೇಲೆ ಎಫ್‍ಐಆರ್ ದಾಖಲಾಗಿತ್ತು. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಮೂರು ಆಸ್ಪತ್ರೆಗಳ ಮೇಲೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ (ಕೆಪಿಎಂಇ) ಕಾಯ್ದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಸ್ ದಾಖಲಾಗಿತ್ತು.

    ನೋಟಿಸ್ ನೀಡಿದ್ದು ಯಾಕೆ?
    ಸೋಂಕಿತರ ಚಿಕಿತ್ಸೆಗೆ ಆನ್‍ಲೈನ್ ಪೋರ್ಟ್‍ನಲ್ಲಿ ಹಾಸಿಗೆ ಬ್ಲಾಕ್ ಮಾಡಿದರೂ, ದಾಖಲಿಸುವ ವೇಳೆ ಆಸ್ಪತ್ರೆಯಲ್ಲಿ ಹಾಸಿಗೆಗಳು ಖಾಲಿ ಇಲ್ಲ ಎಂದು ಹೇಳಿ ಚಿಕಿತ್ಸೆಗೆ ನಿರಾಕರಿಸಲಾಗುತ್ತಿತ್ತು. ಅಲ್ಲದೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್(ಎಸ್‍ಎಎಸ್‍ಟಿ) ಪೋರ್ಟಲ್‍ನಲ್ಲಿ ವಿವರವಾದ ಮಾಹಿತಿ ನೀಡಿಲ್ಲ ಎಂದು ನೋಟಿಸ್ ನೀಡಲಾಗಿತ್ತು.

  • ಖಾತೆ ಹೋಗಿದ್ದಕ್ಕೆ ಬೇಸರ ಬೇಡ – ಆಪ್ತಮಿತ್ರ ರಾಮುಲುಗೆ ಜನಾರ್ದನ ರೆಡ್ಡಿ ಸಮಾಧಾನ

    ಖಾತೆ ಹೋಗಿದ್ದಕ್ಕೆ ಬೇಸರ ಬೇಡ – ಆಪ್ತಮಿತ್ರ ರಾಮುಲುಗೆ ಜನಾರ್ದನ ರೆಡ್ಡಿ ಸಮಾಧಾನ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸಚಿವ ಶ್ರೀರಾಮುಲು ಅವರಿಗೆ ನಿನ್ನೆ ಡಬಲ್ ಶಾಕ್ ನೀಡಿದ್ದರು. ಈ ಮೂಲಕ ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸಬೇಕು ಎಂದಿದ್ದ ಶ್ರೀರಾಮುಲುಗೆ ತೀವ್ರ ನಿರಾಸೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಆಪ್ತಮಿತ್ರ ಗಾಲಿ ಜನಾರ್ದನ ರೆಡ್ಡಿ ಶ್ರೀರಾಮುಲು ಅವರನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ.

    ರಾಮುಲು ನೀನು ಡಿಸಿಎಂ, ಸಿಎಂ ಕೂಡ ಆಗ್ತೀಯಾ. ದುಡುಕುಬೇಡ ಸಮಾಧಾನದಿಂದಿರು. ಎಲ್ಲಾ ಒಳ್ಳೆಯದಾಗುತ್ತೆ ಎಂದು ರಾಮುಲುಗೆ ಕರೆಮಾಡಿ ಹಿತವಚನ ಹೇಳಿದ್ದಾರೆ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ನಿನಗೆ ಇಂದು ಆರೋಗ್ಯ ಇಲಾಖೆ ಕೈ ತಪ್ಪಿದ್ದು ನಿಜ. ಬದಲಾಗಿ ಸಮಾಜ ಕಲ್ಯಾಣದಂಥ ದೊಡ್ಡ ಇಲಾಖೆಯ ಜವಾಬ್ದಾರಿ ಸಿಕ್ಕಿದೆ. ಹೈಕಮಾಂಡ್ ನಾಯಕರ ಗಮನ ಸೆಳೆಯುವಂತೆ ಕೆಲಸ ಮಾಡು. ನೀನು ಸಿಎಂ ಆಗೋ ಸುದಿನ ಬಂದೇ ಬರುತ್ತೆ. ರಾಜೀನಾಮೆ ಕೊಡುವಂತಹ ದುಡುಕಿನ ನಿರ್ಧಾರ ಬೇಡ. ನಿನ್ನ ಬೆನ್ನಿಗೆ ನಾನಿದ್ದೇನೆ, ಖಂಡಿತ ನಿನಗೆ ಒಳ್ಳೆಯದಾಗುತ್ತೆ ಎಂದು ರೆಡ್ಡಿ ತನ್ನ ಗೆಳೆಯನಿಗೆ ಸಮಾಧಾನದ ಮಾತುಗಳನ್ನಾಡಿದ್ದಾರೆ.

    ಇತ್ತ ಸಿಎಂ ನಿರ್ಧಾರರಿಂದ ಅಸಮಾಧಾನಗೊಂಡಿರುವ ಶ್ರೀರಾಮುಲು ಹೈಕಮಾಂಡ್ ನಾಯಕರ ಸಂಪರ್ಕಕ್ಕೆ ಮುಂದಾಗಿದ್ದು, ಯಡಿಯೂರಪ್ಪ ಅವರ ಮೇಲೆ ತ್ರಿಮೂರ್ತಿ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಸೋಮವಾರ ಮಧ್ಯಾಹ್ನ ಸಿಎಂ ಭೇಟಿ ಬಳಿಕ ಹೈಕಮಾಂಡ್ ನಾಯಕರನ್ನ ಸಂಪರ್ಕಿಸಲು ಶ್ರೀರಾಮುಲು ಪ್ರಯತ್ನಿಸುತ್ತಿದ್ದಾರೆ. ಸಚಿವ ಸ್ಥಾನ ಅದಲು-ಬದಲು ಮಾಡುವ ವಿಷಯ ಕುರಿತು ಸಿಎಂ ವರಿಷ್ಠರ ಜೊತೆ ಚರ್ಚೆ ಮಾಡಿಲ್ಲ ಎಂದು ಹೇಳಲಾಗುತ್ತಿದ್ದು, ಯಡಿಯೂರಪ್ಪ ವಿರುದ್ಧ ದೂರು ಸಲ್ಲಿಕೆಗೆ ಶ್ರೀರಾಮುಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸಂಪರ್ಕಿಸಲು ರಾಮುಲು ಯತ್ನಿಸುತ್ತಿದ್ದಾರೆ. ಇಂದು ಸಹ ಮೂವರಿಗೆ ಕರೆ ಮಾಡಿ ರಾಜ್ಯದಲ್ಲಾದ ದಿಢೀರ್ ಬೆಳವಣಿಗೆಗಳ ಕುರಿತು ಚರ್ಚಿಸಲಿದ್ದಾರೆ ಎನ್ನಲಾಗಿದೆ.

  • ಕೊಟ್ಟ ಮಾತು ತಪ್ಪಿದ ಸರ್ಕಾರ- ನಾಳೆ ಬೆಂಗ್ಳೂರಲ್ಲಿ ಆಶಾಕಾರ್ಯಕರ್ತೆಯರ ಬೃಹತ್ ಧರಣಿ

    ಕೊಟ್ಟ ಮಾತು ತಪ್ಪಿದ ಸರ್ಕಾರ- ನಾಳೆ ಬೆಂಗ್ಳೂರಲ್ಲಿ ಆಶಾಕಾರ್ಯಕರ್ತೆಯರ ಬೃಹತ್ ಧರಣಿ

    ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಆಶಾ ಕಾರ್ಯಕರ್ತೆಯರು ನಾಳೆ ಬೆಂಗಳೂರಿನಲ್ಲಿ ಬೃಹತ್ ಧರಣಿ ನಡೆಸಲಿದ್ದಾರೆ.

    ಮಾಸಿಕ ಏರಿಕೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಶಾ ಕಾರ್ಯಕರ್ತೆಯರು ಧರಣಿ ಮಾಡಲಿದ್ದಾರೆ. ದುಡಿಯುವ ವರ್ಗದ ನೋವು ತಿಳಿಸಲು ಆಶಾ ಕಾರ್ಯಕರ್ತೆಯರು ಬೀದಿಗಿಳಿಯಲಿದ್ದು, ರಾಜ್ಯ ಮಟ್ಟದ ಆಶಾ ಕಾರ್ಯಕರ್ತರ ಪ್ರತಿಭಟನೆ ನಡೆಯಲಿದೆ ಎಂದು ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ತಿಳಿಸಿದ್ದಾರೆ.

    ಸಾಂಧರ್ಬಿಕ ಚಿತ್ರ

    ಕೊರೊನಾ ಸಂಕಷ್ಟದ ನಡುವೆಯೂ ಆಶಾ ಕಾರ್ಯಕರ್ತೆಯರು ಮುಂಚೂನಿಯಲ್ಲಿದ್ದು ಶ್ರಮಿಸಿದ್ದು, ಸರ್ಕಾರ ಕೆಲಸಕ್ಕೆ ಸರಿಯಾದ ವೇತನ ನೀಡುತ್ತಿಲ್ಲ. ಈ ಹಿಂದೆ ಹಲವು ಬಾರೀ ಮುಷ್ಕರ ನಡೆಸಿದರೂ ಸರ್ಕಾರ ಭರಸೆಯನ್ನು ಬಿಟ್ಟು ಬೇಡಿಕೆ ಈಡೇರಿಸಿಲ್ಲ. ಅನಿವಾರ್ಯವಾಗಿ ಈಗ ಪ್ರತಿಘಟನೆ ನಡೆಸುತ್ತಿದ್ದು, ಮಾಸಿಕ 12 ಸಾವಿರ ವೇತನ ನಿಗದಿಗೆ ಆಗ್ರಹ ಮಾಡುತ್ತೇವೆ ಎಂದು ತಿಳಿಸಿದರು.

    ಸಾಂಧರ್ಬಿಕ ಚಿತ್ರ
  • ಸೋಂಕಿತರ ಸಂಖ್ಯೆ 47.54 ಲಕ್ಷಕ್ಕೆ ಏರಿಕೆ – 37 ಲಕ್ಷ ಮಂದಿ ಗುಣಮುಖ

    ಸೋಂಕಿತರ ಸಂಖ್ಯೆ 47.54 ಲಕ್ಷಕ್ಕೆ ಏರಿಕೆ – 37 ಲಕ್ಷ ಮಂದಿ ಗುಣಮುಖ

    – ಒಂದೇ ದಿನ 94 ಸಾವಿರ ಮಂದಿಗೆ ಕೊರೊನಾ

    ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಯಲ್ಲಿ 94,372 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ.

    ಒಂದೇ ದಿನದಲ್ಲಿ 94,372 ಮಂದಿಗೆ ಸೋಂಕು ದೃಢವಾಗುವ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 47,54,357ಕ್ಕೆ ಏರಿಕೆ ಆಗಿದೆ. ಅಲ್ಲದೇ 24 ಗಂಟೆಯಲ್ಲಿ 1,114 ಮಂದಿ ಕೊರೊನಾದಿಂದ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    47,54,357 ಪೈಕಿ 9,73,175 ಸಕ್ರಿಯ ಪ್ರಕರಣಗಳಿದ್ದು, 37,02,596 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ ಒಂದೇ ದಿನ ಕೊರೊನಾದಿಂದ 1,114 ಮಂದಿ ಮೃತಪಟ್ಟಿದ್ದು, ಇದುವರೆಗೂ ದೇಶದಲ್ಲಿ 78,586 ಮಂದಿ ಕೋವಿಡ್‍ಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    ದೇಶದಲ್ಲಿ ಶನಿವಾರ 10,71,702 ಮಂದಿಯನ್ನು ಕೊರೊನಾ ಟೆಸ್ಟ್‌ಗೆ ಒಳಪಡಿಸಲಾಗಿತ್ತು. ಈ ಮೂಲಕ ಇದುವರೆಗೂ 5,62,60,928 ಮಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.

    ದೇಶದಲ್ಲಿ ಚೇತರಿಕೆ ಪ್ರಮಾಣ ಶೇಕಡಾ 77.77 ದಾಟಿದೆ. ಶನಿವಾರ ಮಹಾರಾಷ್ಟ್ರದಲ್ಲಿ ಬರೋಬ್ಬರಿ 24,886 ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 10 ಲಕ್ಷ ದಾಟಿದೆ.

  • 24 ಗಂಟೆಯಲ್ಲಿ 97,570 ಮಂದಿಗೆ ಕೊರೊನಾ ಸೋಂಕು – 1,201 ಮಂದಿ ಬಲಿ

    24 ಗಂಟೆಯಲ್ಲಿ 97,570 ಮಂದಿಗೆ ಕೊರೊನಾ ಸೋಂಕು – 1,201 ಮಂದಿ ಬಲಿ

    ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಸೆಪ್ಟೆಂಬರ್ ತಿಂಗಳಲ್ಲಿ ದಿನದಿನವೂ ಹೊಸ ದಾಖಲೆ ಬರುತ್ತಿದೆ. ಕಳೆದ 24 ಗಂಟೆಯಲ್ಲಿ 97,570 ಮಂದಿಗೆ ಹೊಸದಾಗಿ ಸೋಂಕು ದೃಢವಾಗಿದೆ.

    ಒಂದೇ ದಿನ ದೇಶದಲ್ಲಿ 97,570 ಮಂದಿಗೆ ಕೊರೊನಾ ಸೋಂಕು ದೃಢವಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 46,59,985ಕ್ಕೆ ಏರಿಕೆ ಆಗಿದೆ. ಇನ್ನೂ 24 ಗಂಟೆಯಲ್ಲಿ 1,201 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

    46,59,985ರ ಪೈಕಿ 9,58,316 ಸಕ್ರಿಯ ಪ್ರಕರಣಗಳಿದ್ದು, 36,24,197 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ 24 ಗಂಟೆಯಲ್ಲಿ 1,201 ಮಂದಿ ಕೊರೊನಾಗೆ ಬಲಿಯಾಗಿದ್ದು, ಇಲ್ಲಿವರೆಗೆ 77,470 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    ದೇಶದಲ್ಲಿ ಶುಕ್ರವಾರ 10,91,251 ಮಂದಿಯನ್ನು ಕೊರೊನಾ ಟೆಸ್ಟ್‌ಗೆ ಒಳಪಡಿಸಲಾಗಿತ್ತು. ಈ ಮೂಲಕ ಇದುವರೆಗೂ 5,51,89,226 ಮಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ. ಪ್ರಪಂಚದಲ್ಲಿ ಸೋಂಕಿತರ ಸಂಖ್ಯೆ 2.83 ಕೋಟಿಗೆ ಏರಿದ್ದು, ಭಾರತ 2ನೇ ಸ್ಥಾನದಲ್ಲಿದೆ.

    ರಾಜ್ಯದಲ್ಲಿ ಶುಕ್ರವಾರ 9,464 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 4,40,41ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 4,40,411 ಸೋಂಕಿತರ ಪೈಕಿ 98,326 ಸಕ್ರಿಯ ಪ್ರಕರಣಗಳಾಗಿದ್ದು, ಆಸ್ಪತ್ರೆಯಿಂದ 12,545 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 770 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.