Tag: Health Center

  • ರಾಜ್ಯದಲ್ಲೇ ಪ್ರಥಮ ಮಾಗಡಿ ಆಸ್ಪತ್ರೆಯಲ್ಲಿ ಮಾಡ್ಯೂಲರ್ ಐಸಿಯು ಲೋಕಾರ್ಪಣೆ

    ರಾಜ್ಯದಲ್ಲೇ ಪ್ರಥಮ ಮಾಗಡಿ ಆಸ್ಪತ್ರೆಯಲ್ಲಿ ಮಾಡ್ಯೂಲರ್ ಐಸಿಯು ಲೋಕಾರ್ಪಣೆ

    – ತಾಲೂಕಿನ ಎಲ್ಲ ಆರೋಗ್ಯ ಕೇಂದ್ರಗಳಲ್ಲೂ ಆಕ್ಸಿಜನ್ ಘಟಕ
    – ಕೊರತೆ ಸಿಬ್ಬಂದಿ ತಕ್ಕಣವೇ ನೇಮಕ
    – ಎರಡು ತಿಂಗಳಲ್ಲೇ ಮಾಗಡಿ ಆಸ್ಪತ್ರೆಗೆ ಆಕ್ಸಿಜನ್ ಘಟಕ

    ಬೆಂಗಳೂರು: ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ತಾಲೂಕು ಆಸ್ಪತ್ರೆಯೊಂದರ ಆವರಣದಲ್ಲಿ ಸ್ಥಾಪನೆ ಮಾಡಲಾಗಿರುವ ಅತ್ಯಾಧುನಿಕ ಮಾಡ್ಯೂಲರ್ ಐಸಿಯು ಅನ್ನು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಗುರುವಾರ ಲೋಕಾರ್ಪಣೆ ಮಾಡಿದರು.

    ಕೋವಿಡ್ ಸೋಂಕಿತರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ಅನುಕೂಲವಾಗುವ ಈ ಮಾಡ್ಯೂಲರ್ ಐಸಿಯು ಅನ್ನು ಆ್ಯಕ್ಟ್ ಗ್ರಾಂಟ್ ಮತ್ತು ರೆನಾಕ್ ಸಂಸ್ಥೆ ಅಭಿವೃದ್ಧಿಪಡಿಸಿದ್ದು, ಈ ರೀತಿಯ ಐಸಿಯುಗಳನ್ನು ಈಗಾಗಲೇ ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಬಳಕೆ ಮಾಡಲಾಗುತ್ತಿದೆ.

    ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಅಶ್ವತ್ಥನಾರಾಯಣ ಅವರು, “ಎಸಿಟಿ (ಆಕ್ಷನ್ ಕೋವಿಡ್ ಟೀಂ) ಗ್ರಾಂಟ್ಸ್ ಈ ಮಾಡ್ಯೂಲರ್ ಐಸಿಯು ಅನ್ನು ಮಾಗಡಿ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದೆ. ಅದಕ್ಕೆ ಅಗತ್ಯವಾದ ಮಾನಿಟರ್‍ಗಳನ್ನು ಬಿಡದಿಯ ಟೊಯೊಟ ಕಿರ್ಲೋಸ್ಕರ್ ಕಂಪನಿ ನೀಡಿದ್ದು, ವೆಂಟಿಲೇಟರ್‍ಗಳು ಪಿ.ಎಂ ಕೇರ್‍ನಿಂದ ಬಂದಿವೆ. ಈ ಐಸಿಯುನಿಂದ ಹೊರಗಿನಿಂದ ಒಳ ಬರುವ ಅಥವಾ ಒಳಗಿನಿಂದ ಹೊರ ಬರುವ ಗಾಳಿಯು ಸಂಪೂರ್ಣವಾಗಿ ಶುದ್ಧೀಕರಣಗೊಳ್ಳುತ್ತದೆ. ಜೊತೆಗೆ, ಪ್ರತ್ಯೇಕ ಆಕ್ಸಿಜನ್ ಸಂಪರ್ಕದ ಜತೆಗೆ, ನೀರು ಹಾಗೂ ಒಳಚರಂಡಿ ಪ್ರತ್ಯೇಕ ಸಂಪರ್ಕ ಇರುತ್ತದೆ. ಇಡೀ ರಾಜ್ಯದಲ್ಲೇ ಇಂಥ ಆಧುನಿಕ ಐಸಿಯು ಅನ್ನು ಮಾಗಡಿ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ” ಎಂದರು.

    ಇಲ್ಲಿಗೆ ಅಗತ್ಯವಾದ ಎಲ್ಲ ಔಷಧಿ, ಆಮ್ಲಜನಕ, ವೈದ್ಯಕೀಯ ಸರಂಜಾಮುಗಳು, ಸಿಬ್ಬಂದಿ ಕೊರತೆ ಇಲ್ಲದಂತೆ ಎಚ್ಚರಿಕೆ ವಹಿಸಲಾಗಿದೆ. ನಾಲ್ವರಿಗೆ ಈ ಐಸಿಯುವಿನಲ್ಲಿ ಅತ್ಯುತ್ತಮ ಚಿಕಿತ್ಸೆ ಸಿಗುತ್ತದೆ ಎಂದು ಹೇಳಿದರು.

    ಎರಡು ತಿಂಗಳಲ್ಲಿ ಆಕ್ಸಿಜನ್ ಘಟಕ: ಮಾಗಡಿ ಆಸ್ಪತ್ರೆಯಲ್ಲಿ ಈಗಾಗಲೇ 100 ಹಾಸಿಗೆಗಳಿದ್ದು, ಈ ಪೈಕಿ 50 ಬೆಡ್‍ಗಳಿಗೆ ಆಕ್ಸಿಜನ್ ಸೌಲಭ್ಯವಿದೆ. ಇನ್ನು ಕೆಲ ದಿನಗಳಲ್ಲಿಯೇ ಉಳಿದ 50 ಹಾಸಿಗೆಗಳನ್ನೂ ಆಕ್ಸಿಜನ್ ಬೆಡ್‍ಗಳನ್ನಾಗಿ ಪರಿವರ್ತನೆ ಮಾಡಲಾಗುವುದು. ಅಲ್ಲದೆ, ನಿಮಿಷಕ್ಕೆ 600 ಕೆಎಲ್ ಪೂರೈಕೆ ಸಾಮಥ್ರ್ಯದ ಆಮ್ಲಜನಕ ಉತ್ಪಾದಕ ಘಟಕವನ್ನೂ ಎರಡು ತಿಂಗಳಲ್ಲಿ ಸ್ಥಾಪನೆ ಮಾಡಲಾಗುವುದು. ಜೊತೆಗೆ, ಒಟ್ಟು ಬೆಡ್‍ಗಳಲ್ಲಿ 25% ಐಸಿಯು ಬೆಡ್‍ಗಳ ವ್ಯವಸ್ಥೆ ಮಾಡುವ ಉದ್ದೇಶವೂ ಇದೆ. ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಆಕ್ಸಿಜನ್ ಘಟಕಗಳನ್ನು ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.

    ಇದಲ್ಲದೆ, ಪ್ರಾಥಮಿಕ & ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸುಸಜ್ಜಿತ ಲ್ಯಾಬ್ ಹಾಗೂ ತುರ್ತು ಸಂದರ್ಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಆಮ್ಲಜನಕ ಸಾಂದ್ರಕಗಳನ್ನೂ ಒದಗಿಸಲಾಗುವುದು ಎಂದರು.

    ತಕ್ಷಣವೇ ಸಿಬ್ಬಂದಿ ನೇಮಕ: ಎಲ್ಲ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕೂಡಲೇ ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಲಾಗುವುದು. ಮುಖ್ಯವಾಗಿ ಸೋಲೂರು ಮತ್ತು ತಿಪ್ಪಸಂದ್ರ ಸಮುದಾಯ ಆರೋಗ್ಯ ಕೇಂದ್ರಗಳಿಗೆ ತಕ್ಷಣವೇ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಇದಾದ ಮೇಲೆ ಉಪ ಮುಖ್ಯಮಂತ್ರಿಗಳು ಸಿದ್ಧಾರೂಢ ಮಠದ ಆಶ್ರಮದಲ್ಲಿ ಮುಂಚೂಣಿ ವಾರಿಯರ್ಸ್ ಹಾಗೂ ಆದ್ಯತಾ ಗುಂಪಿಗೆ ಲಸಿಕೆ ನೀಡುತ್ತಿರುವುದನ್ನು ವೀಕ್ಷಿಸಿದರು. ಬಳಿಕ ಹುಲಿಕೋಟೆಯ ಕೋವಿಡ್ ಕೇರ್ ಸೆಂಟರ್‍ಗೆ ಭೇಟಿ ನೀಡಿ ಅಲ್ಲಿ ನೇರವಾಗಿ ಸೋಂಕಿತರ ಯೋಗ ಕ್ಷೇಮ ವಿಚಾರಿಸಿದರು. ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆ, ಔಷಧಿ, ಆಹಾರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು.

    ಅಂತಿಮವಾಗಿ ವಿಜಿ ದೊಡ್ಡಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಟಿ ಪರಿಶೀಲನೆ ನಡೆಸಿದರಲ್ಲದೆ, ಕೊರತೆ ಇರುವ ಸಿಬ್ಬಂದಿ ನೇಮಕಕ್ಕೆ ಕೂಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದರು ಹಾಗೂ ಕೆಲ ದಿನಗಳಲ್ಲಿಯೇ ಇಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಅಳವಡಿಸಲಾಗುವುದು ಎಂದರು.

    ಮಾಗಡಿ ಶಾಸಕ ಮಂಜುನಾಥ್, ಜಿಲ್ಲಾಧಿಕಾರಿ ರಾಕೇಶ ಕುಮಾರ, ಸಿಇಒ ಇಕ್ರಂ,ಡಿಎಚ್ ಒ ಡಾ.ನಿರಂಜನ್, ರೆನಾಕ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಸಾಜಿ ಅಬ್ರಹಾಂ, ಹಿರಿಯ ಪ್ರಧಾನ ವ್ಯವಸ್ಥಾಪಕ ಸುಧೀರ್ ಮೆನನ್, ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲುವಾಡಿ ದೇವರಾಜ್, ಬಿಜೆಪಿ ಮುಖಂಡ ಕೃಷ್ಣಮೂರ್ತಿ, ಮಂಡಲಾಧ್ಯಕ್ಷ ಧನಂಜಯ, ತಾಲೂಕು ವೈದ್ಯಾಧಿಕಾರಿ ಮತ್ತಿತರರು ಡಿಸಿಎಂ ಜೊತೆಯಲ್ಲಿ ಉಪಸ್ಥಿತಿಯಲ್ಲಿದ್ದರು.

  • ತುಂಬು ಗರ್ಭಿಣಿ ವೈದ್ಯೆಯಿಂದ ಜನರ ಸೇವೆ – ಪ್ರತಿದಿನ ಆರೋಗ್ಯ ಕೇಂದ್ರಕ್ಕೆ 30 ಕಿ.ಮೀ. ಪ್ರಯಾಣ

    ತುಂಬು ಗರ್ಭಿಣಿ ವೈದ್ಯೆಯಿಂದ ಜನರ ಸೇವೆ – ಪ್ರತಿದಿನ ಆರೋಗ್ಯ ಕೇಂದ್ರಕ್ಕೆ 30 ಕಿ.ಮೀ. ಪ್ರಯಾಣ

    – ಗ್ರಾಮಗಳ ಮನೆಗೆ ಹೋಗಿ ರೋಗಿಗಳ ತಪಾಸಣೆ
    – ಲಾಕ್‍ಡೌನ್ ವೇಳೆ ಜನರ ಸೇವೆಯೇ ಮುಖ್ಯ

    ಹೈದರಾಬಾದ್: ಕೊರೊನಾ ನಡುವೆಯೂ ಐಎಎಸ್ ಅಧಿಕಾರಿಯೊಬ್ಬರು ತಮ್ಮ ಒಂದು ತಿಂಗಳ ಮಗುವನ್ನು ಕೈಯಲ್ಲಿ ಎತ್ತಿಕೊಂಡೇ ಕೆಲಸಕ್ಕೆ ಹಾಜರಾಗಿದ್ದರು. ಇದೀಗ ಎಂಟು ತಿಂಗಳ ಗರ್ಭಿಣಿಯೊಬ್ಬರು ಮನೆಯಲ್ಲಿ ವಿಶ್ರಾಂತಿ ಪಡೆಯುವ ಬದಲು ಪ್ರತಿದಿನ 30 ಕಿಲೋ ಮೀಟರ್ ಪ್ರಯಾಣಿಸಿ ಹಳ್ಳಗಳಿಂದ ಬರುವ ರೋಗಿಗಳ ಸೇವೆ ಮಾಡುತ್ತಿದ್ದಾರೆ.

    ಡಾ. ಜಾನ್ಸಿ (33) 8 ತಿಂಗಳ ಗರ್ಭಿಣಿಯಾಗಿದ್ದರೂ ಜನರ ಸೇವೆ ಮಾಡುತ್ತಿದ್ದಾರೆ. ಇವರು ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ದೇವಪಲ್ಲಿ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಪ್ರತಿದಿನ ಸುಮಾರು 30 ಕಿ.ಮೀ ಪ್ರಯಾಣಿಸುತ್ತಾರೆ. ಅಲ್ಲಿ ಬರುವ ಸುತ್ತಮುತ್ತಲ 30 ಹಳ್ಳಿಗಳಿಂದ ಬರುವ ರೋಗಿಗಳಿಗೆ ಆರೋಗ್ಯ ಸೇವೆ ನೀಡುತ್ತಿದ್ದಾರೆ. ದೇವಪಲ್ಲಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯಾವುದೇ ಖಾಸಗಿ ಆರೋಗ್ಯ ಕೇಂದ್ರ ಇಲ್ಲ. ಹೀಗಾಗಿ ಇಲ್ಲಿನ ಸುತ್ತಮುತ್ತಲಿನ ಜನರು ಈ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿದ್ದಾರೆ.

    ನಾನು ಕಳೆದ ಒಂದೂವರೆ ವರ್ಷದಿಂದ ಈ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿನ ಗ್ರಾಮಸ್ಥರು ಈ ಆರೋಗ್ಯ ಸೇವೆಗೆ ನಮ್ಮನ್ನು ನಂಬಿಕೊಂಡು ಬರುತ್ತಾರೆ. ಈ ಕೊರೊನಾ ಸೋಂಕು ಮತ್ತು ಲಾಕ್‍ಡೌನ್ ಮಧ್ಯೆ ಜನರ ಸೇವೆ ಮಾಡುವುದು ಮುಖ್ಯ ಎಂದು ಭಾವಿಸಿ ಆಸ್ಪತ್ರೆಗೆ ಬರುತ್ತಿದ್ದೇನೆ ಎಂದು ಡಾ.ಜಾನ್ಸಿ ಹೇಳಿದ್ದಾರೆ.

    ಲಾಕ್‍ಡೌನ್‍ನಿಂದಾಗಿ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಸಂಚಾರ ಮಾಡುವುದು ಕಷ್ಟವಾಗಿದೆ. ಆದರೂ ಡಾ.ಜಾನ್ಸಿ ಬುಡಕಟ್ಟು ಗ್ರಾಮಗಳ ಮನೆ ಮನೆಗೆ ಹೋಗಿ ರೋಗಿಗಳ ತಪಾಸಣೆ ಮಾಡುತ್ತಿದ್ದಾರೆ. ಅದರಲ್ಲೂ ಗರ್ಭಿಣಿಯರು ಮತ್ತು ಕೊರೊನಾ ವೈರಸ್ ಪ್ರಕರಣಗಳನ್ನು ಪರೀಕ್ಷೆ ಮಾಡುತ್ತಾರೆ. ಈ ಗ್ರಾಮಗಳಲ್ಲಿ ವಿದೇಶಗಳಿಂದ ಬಂದವರು ಕೂಡ ಇದ್ದು, ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೇ ಕೊರೋನಾ ಸೋಂಕು ಲಕ್ಷಣ ಹೊಂದಿರುವ 10 ರೋಗಿಗಳಿಗೆ ಡಾ.ಜಾನ್ಸಿ ಚಿಕಿತ್ಸೆ ನೀಡುತ್ತಿದ್ದಾರೆ.

    ನಾವು ಕಳೆದ 10 ದಿನಗಳಲ್ಲಿ ಸುಮಾರು 10 ಗರ್ಭಿಣಿಯರನ್ನು ಹೆರಿಗೆಗಾಗಿ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಿದ್ದೇನೆ. ಹೆರಿಗೆಯ ಹೊರತಾಗಿ, ಬಿಪಿ, ಮಧುಮೇಹ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿರುವ ಜನರು ಕೂಡ ಇಲ್ಲಿಗೆ ಬರುತ್ತಾರೆ. ನಾನು ಸರ್ಕಾರವು ನೀಡುವ ಮಾಸ್ಕ್, ಮತ್ತು ಗ್ಲೌಸ್‍ಗಳನ್ನು ಬಳಸುತ್ತೇನೆ. ಅದೇ ರೀತಿ ಸ್ಯಾನಿಟೈಸರ್ ಹಾಕಿಕೊಂಡ ಕೈ ಸ್ವಚ್ಛ ಮಾಡಿಕೊಳ್ಳುತ್ತೇನೆ. ಎಂದು ಡಾ.ಜಾನ್ಸಿ ತಿಳಿಸಿದ್ದಾರೆ.

    ಡಾ. ಜಾನ್ಸಿ ಮಾತೃತ್ವ ರಜೆ ತೆಗೆದುಕೊಳ್ಳುವ ಅವಕಾಶವಿದೆ. ಆದರೆ ಕೊರೊನಾದಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಮನೆಯಲ್ಲಿ ಸುಮ್ಮನೇ ಕೂರುವ ಬದಲು ಜನರ ಸೇವೆ ಮಾಡುವುದು ಉತ್ತಮ ಎಂದು ಆರೋಗ್ಯ ಕೇಂದ್ರಕ್ಕೆ ಬರುತ್ತಿದ್ದಾರೆ.

    ನನ್ನ ಕೆಲಸಕ್ಕೆ ಕುಟುಂಬದವರ ಬೆಂಬಲವಿದೆ. ಪತಿ ಡಾ.ಪ್ರಸಾಂತ್ ಕೂಡ ವೈದ್ಯರಾಗಿದ್ದು, ಜಿಲ್ಲೆಯ ನೆಲ್ಲಿಮೆರ್ಲಾದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯನ್ನು ಚಿಕಿತ್ಸೆ ನೀಡುವ ವೈದ್ಯರು ದೇವರು ಎಂದು ಜನರು ಭಾವಿಸುತ್ತಾರೆ. ಹೀಗಾಗಿ ಅವರ ಸೇವೆ ಮಾಡುವುದೇ ನಮಗೆ ಮುಖ್ಯ ಎಂದು ಹೇಳಿದರು. ದೇವಪಲ್ಲಿಗಿಂತ ಮೊದಲು ಗೋದಾವರಿ ಜಿಲ್ಲೆಯ ರಾಮಚೋದವರಂನ ಬುಡಕಟ್ಟು ಪ್ರದೇಶದಲ್ಲಿ ಆರು ವರ್ಷಗಳ ಕಾಲ ಆರೋಗ್ಯ ಕೆಂದ್ರದಲ್ಲಿ ಕೆಲಸ ಮಾಡಿದ್ದರು.

  • ಮಸೀದಿಯಲ್ಲಿ ಎಲ್ಲ ಧರ್ಮದವರಿಗೂ ಚಿಕಿತ್ಸೆ!

    ಮಸೀದಿಯಲ್ಲಿ ಎಲ್ಲ ಧರ್ಮದವರಿಗೂ ಚಿಕಿತ್ಸೆ!

    ಹೈದರಾಬಾದ್: ಇದೇ ಮೊದಲ ಬಾರಿಗೆ ಹೈದರಾಬಾದ್‍ನ ಮಸೀದಿಯೊಂದು ಆರೋಗ್ಯ ಕೇಂದ್ರವಾಗಿ ಮಾರ್ಪಟ್ಟಿದ್ದು, ಎಲ್ಲ ಧರ್ಮದ ಜನರಿಗೂ ಚಿಕಿತ್ಸೆ ನೀಡುವ ಮೂಲಕ ಭಾರೀ ಮೆಚ್ಚುಗೆ ಗಿಟ್ಟಿಸಿಕೊಂಡಿದೆ.

    ಹೈದರಾಬಾದ್‍ನ ಮಸೀದ್-ಇ-ಇಷ್ಕ್ ಪ್ರಾರ್ಥನಾ ಮಂದಿರದಲ್ಲಿ ಇಂತಹ ಸೌಲಭ್ಯ ಸಿಗುತ್ತಿದ್ದು, ಒಂದು ದಿನಕ್ಕೆ ಸುಮಾರು 40 ರಿಂದ 50 ಜನರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಈ ಸೇವೆಯನ್ನು ಹೆಲಿಂಗ್ ಹ್ಯಾಂಡ್ ಫೌಂಡೇಶನ್ (ಎಚ್‍ಎಚ್‍ಎಫ್) ಹೆಸರಿನ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ ಒದಗಿಸುತ್ತಿದ್ದು, ಇದಕ್ಕೆ ಮಸೀದಿಯ ಆಡಳಿತ ಮಂಡಳಿ ಸಾಥ್ ನೀಡಿದೆ. ಇದರಿಂದಾಗಿ ಕೊಳಗೇರಿ ಪ್ರದೇಶದ ಬಡ ಜನರಿಗೆ ಆರೋಗ್ಯ ಭದ್ರತೆ ಸಿಕ್ಕಂತಾಗಿದೆ.

    ಹೆಚ್ಚು ಬಡ ಜನರಿಗೆ ಚಿಕಿತ್ಸೆಯ ಸೌಲಭ್ಯ ಒದಗಿಸುವ ಉದ್ದೇಶದಿಂದ ಸೂಕ್ತ ಸ್ಥಳಕ್ಕಾಗಿ ಹುಡುಕಾಟ ನಡೆಸಿದ್ದೆವು. ಈ ವೇಳೆ ನಗರದ ಕೇಂದ್ರ ಭಾಗವಾದ ಹಾಗೂ ಕೊಳಗೇರಿಯನ್ನು ಸುತ್ತುವರಿದಿದ್ದ ಮಸೀದಿಯಲ್ಲಿ ಅವಕಾಶ ಸಿಕ್ಕಿತ್ತು ಎಂದು ಹೆಲಿಂಗ್ ಹ್ಯಾಂಡ್ ಫೌಂಡೇಶನ್‍ನ ವ್ಯವಸ್ಥಾಪಕ ಮಜ್ತಾಬಾ ಆಸ್ಕರಿ ತಿಳಿಸಿದ್ದಾರೆ.

    ಮಸೀದಿಯ ಸುತ್ತಮುತ್ತ 9 ಕೊಳಗೇರಿ ಪ್ರದೇಶಗಳಿದ್ದು, ಸುಮಾರು 1.5 ಲಕ್ಷ ಜನರು ವಾಸವಾಗಿದ್ದಾರೆ. ಮಸೀದಿ ಮೂಲಕ ನಮ್ಮ ಉದ್ದೇಶಕ್ಕೆ ಸೂಕ್ತವಾಗಿದ್ದ ಜಾಗ ಸಿಕ್ಕಂತಾಗಿದ್ದು, ಒಂದು ದಿನದಲ್ಲಿ ಸುಮಾರು 40ರಿಂದ 50 ಮಂದಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಚಿಕಿತ್ಸೆ ಪಡೆದ ಜನರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕೆಲವು ರೋಗಿಗಳಿಗೆ ಸಾರಿಗೆ ಸೌಲಭ್ಯವನ್ನೂ ಒದಗಿಸುತ್ತಿದ್ದೇವೆ ಎಂದು ಮಜ್ತಾಬಾ ಆಸ್ಕರಿ ಹೇಳಿದ್ದಾರೆ.

    ಇಂತಹ ಸೇವೆಯನ್ನು 30 ಆಸ್ಪತ್ರೆಗಳ ಮೂಲಕ ಕಳೆದ 13 ವರ್ಷಗಳಿಂದ ಒದಗಿಸುತ್ತಾ ಬಂದಿದ್ದೇವೆ. ನಮ್ಮ ಸಂಸ್ಥೆಯಲ್ಲಿ ಅನೇಕರು ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ರೋಗಿಗಳ ಬಗ್ಗೆ ಅಧ್ಯಯನ ಮಾಡಿ, ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಅವರನ್ನು ಆಸ್ಪತ್ರೆಗೆ ಕಳುಹಿಸುತ್ತೇವೆ. ಬಡ ರೋಗಿಗಳ ಸಾರಿಗೆ ಹಾಗೂ ಸ್ವಲ್ಪ ಮಟ್ಟದ ಸಹಾಯ ಧನ ನೀಡುತ್ತೇವೆ ಎಂದು ಎಚ್‍ಎಚ್‍ಎಫ್ ನಿರ್ದೇಶಕ ಫರೀದ್ ಅವರು ವಿವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews