Tag: hddevegowda

  • ನಿಮ್ಮ ಜೊತೆ ಯೋಗ್ಯನಾಗಿ ಕೆಲಸ ಮಾಡಲು ಇದೊಂದು ಬಾರಿ ಅವಕಾಶ ಮಾಡಿಕೊಡಿ: ನಿಖಿಲ್‌

    ನಿಮ್ಮ ಜೊತೆ ಯೋಗ್ಯನಾಗಿ ಕೆಲಸ ಮಾಡಲು ಇದೊಂದು ಬಾರಿ ಅವಕಾಶ ಮಾಡಿಕೊಡಿ: ನಿಖಿಲ್‌

    – ಮಂಡಿಯೂರಿ ಜನತೆಗೆ ನಮಸ್ಕರಿಸಿದ ನಿಖಿಲ್‌ – ರೇವತಿ

    ರಾಮನಗರ: ಹಳ್ಳಿ-ಹಳ್ಳಿಗಳಲ್ಲಿ ನಿಖಿಲ್ ಗೆಲ್ಲಬೇಕು ಎಂದು ಜನ ಅಂದುಕೊಂಡಿದ್ದಾರೆ. ಇದು ನಿಖಿಲ್ ಭವಿಷ್ಯದ ಪ್ರಶ್ನೆ ಅಲ್ಲ, ಪ್ರಾದೇಶಿಕ ಪಕ್ಷದ ಅಸ್ತಿತ್ವದ ಪ್ರಶ್ನೆಯಾಗಿದೆ. ಈ ಭೂಮಿ ಮೇಲೆ ನಿಮ್ಮ ಜೊತೆ ಯೋಗ್ಯನಾಗಿ ಕೆಲಸ ಮಾಡಲು ಮೂರೂವರೆ ವರ್ಷ ಅವಕಾಶ ಮಾಡಿಕೊಡಿ ಎಂದು ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಜನತೆಗೆ ಮನವಿ ಮಾಡಿದ್ದಾರೆ. ಇದೇ ವೇಳೆ ಪತ್ನಿ ರೇವತಿ ಜೊತೆಗೂಡಿ ನಿಖಿಲ್‌ ಮಂಡಿಯೂರಿ ಜನರಿಗೆ ನಮಸ್ಕರಿಸಿದ್ದಾರೆ.

    ರಾಮನಗರದಲ್ಲಿ (Ramanagara) ಪ್ರಚಾರದ ವೇಳೆ ಮಾತನಾಡಿದ ಅವರು, ನಾನು ಭಾವನಾತ್ಮಕ ಜೀವಿ, ಕ್ಷಮಿಸಿ ಇದರ ಹಿಂದೆ ಬೇರೆ ಉದ್ದೇಶ ಇಲ್ಲ. ಪ್ರತೀ ಹಳ್ಳಿಯಲ್ಲಿ ತಾಯಂದಿರು ಆಶೀರ್ವಾದ ಮಾಡಿದರು. ಪ್ರತೀ ದೇವಸ್ಥಾನಗಳ ದೇವರು ಆಶೀರ್ವಾದ ಮಾಡಿದ್ದಾರೆ. ನನಗೊಂದು ಅವಕಾಶ ಮಾಡಿಕೊಡುವ ಆತ್ಮಸ್ಥೈರ್ಯ ಇಲ್ಲಿನ ಜನ ಮೂಡಿಸಿದ್ದಾರೆ ಅದಕ್ಕಾಗಿ, ಇದನ್ನು ಕಂಡು ನಾನೆಂಥ ಪುಣ್ಯವಂತ ಅನ್ನಿಸಿತು. ಹಳ್ಳಿ ಹಳ್ಳಿಗಳಲ್ಲಿ ನಿಖಿಲ್ ಗೆಲ್ಲಬೇಕೆಂದು ಜನ ಅಂದುಕೊಂಡಿದ್ದಾರೆ. ಇದು ನಿಖಿಲ್ ಭವಿಷ್ಯದ ಪ್ರಶ್ನೆ ಅಲ್ಲ, ಪ್ರಾದೇಶಿಕ ಪಕ್ಷದ ಅಸ್ತಿತ್ವದ ಪ್ರಶ್ನೆಯಾಗಿದೆ. ಮೂರೂವರೆ ವರ್ಷ ಅವಕಾಶ ಮಾಡಿಕೊಡಿ ನಾನು ಹೇಗೆ ಕೆಲಸ ಮಾಡುತ್ತೇನೆ ಎಂದು ನೀವೇ ನೋಡಿ ಎಂದು ವೇದಿಕೆ ಮೇಲೆ ಪತಿ-ಪತ್ನಿ ಜೊತೆಯಾಗಿ ಕೈಮುಗಿದು ಮತ ಯಾಚನೆ ಮಾಡಿದರು. ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆಗೆ 5,000 ಕೋಟಿ ಅಕ್ರಮವಾಗಿ ಕಳಿಸಿದ್ದಾರೆ: ಮೋದಿ ಬಳಿಕ ಹೆಚ್‌ಡಿಡಿ ಬಾಂಬ್‌

    ದೇವೇಗೌಡರು ಮೊಮ್ಮಗನನ್ನು ಗೆಲ್ಲಿಸಲು ಆಂಬುಲೆನ್ಸ್‌ನಲ್ಲಿ ಬರುತ್ತಾರೆ ಎಂದು ವಿರೋಧ ಪಕ್ಷದ ನಾಯಕರೊಬ್ಬರು ಹೇಳಿದ್ದರು. ಚನ್ನಪಟ್ಟಣದಲ್ಲಿ (Channapatna) ನಿಖಿಲ್ ನಿಂತಿದ್ದಾನೆ ಎಂದು ದೇವೇಗೌಡರು ಬಂದು ಪ್ರಚಾರ ಮಾಡುತ್ತಿದ್ದಾರೆ ಅನ್ನುವ ಪ್ರಶ್ನೆ ಅಲ್ಲ. ಯಾವುದೇ ಸಾಮಾನ್ಯ ಕಾರ್ಯಕರ್ತ ನಿಂತಿದ್ದರೂ ದೇವೇಗೌಡರು (HDDevegowda) ಪ್ರಚಾರಕ್ಕೆ ಬರುತ್ತಿದ್ದರು. ಈ ಜಿಲ್ಲೆಗೂ ದೇವೇಗೌಡರಿಗೂ ಬಹಳ ಹಳೆಯ ನಂಟಿದೆ. ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದೇನೆ. ಈಗ ನಾನು ನಿಲ್ಲುವುದಿಲ್ಲ, ಪಕ್ಷ ಕಟ್ಟೋದಿಕ್ಕೆ ಸ್ವಲ್ಪ ಸಮಯ ಕೊಡಿ ಎಂದು ಹೇಳಿದ್ದೆ. ನಂತರ ಏನೇನಾಯ್ತು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಸದ್ಯದಲ್ಲೇ ನನ್ನ ನಿಶ್ಚಿತಾರ್ಥ: ಮದುವೆಯಾಗಲಿರುವ ಹುಡುಗನ ಬಗ್ಗೆ ಸೋನು ಓಪನ್‌ ಟಾಕ್

    ವರದೇಗೌಡರು ನಮ್ಮ ಪಕ್ಷದಿಂದ ಶಾಸಕರಾಗಿ ಮನೆ ಮಗನಾಗಿ ಇಲ್ಲಿ ಕೆಲಸ ಮಾಡಿದವರು. ಇವರೆಲ್ಲ ನನಗೆ ಆದರ್ಶ ಹಾಗೂ ಸ್ಫೂರ್ತಿಯಾಗಿದ್ದಾರೆ. ಈ ಚುನಾವಣೆ ನನ್ನ ಬದುಕಿನ ಬಹುದೊಡ್ಡ ಅಗ್ನಿಪರೀಕ್ಷೆಯಾಗಿದೆ. ನೀನು ಇಲ್ಲಿ ಯಾವ ಪಾತ್ರ ಮಾಡ್ತೀಯಪ್ಪ ಎಂದು ಹಲವರು ಕೇಳುತ್ತಾರೆ. ಕುರುಕ್ಷೇತ್ರ ಸಿನೆಮಾದಲ್ಲಿ ನಾನು ಅಭಿಮನ್ಯು ಆಗಿದ್ದೆ. ನಾನು ಅರ್ಜುನನಾ ಅಥವಾ ಅಭಿಮನ್ಯುನಾ ಎಂದು ಚನ್ನಪಟ್ಟಣ ಜನರೇ ನಿರ್ಧಾರ ಮಾಡುತ್ತಾರೆ. ನನಗೆ ಗೊತ್ತಿರುವುದು ಮನುಷ್ಯತ್ವ ಮಾತ್ರ ಎಂದರು. ಇದನ್ನೂ ಓದಿ: ರಾಮಮಂದಿರ ಸೇರಿ ಹಿಂದೂ ದೇವಾಲಯಗಳ ಮೇಲೆ ದಾಳಿ ಬೆದರಿಕೆ; ಖಲಿಸ್ತಾನಿ ಉಗ್ರ ಪನ್ನುನ್ ವೀಡಿಯೋ ರಿಲೀಸ್‌

    ಇದು ಕುಮಾರಣ್ಣ (H D Kumaraswamy) ಅವರ ಸ್ವಕ್ಷೇತ್ರ, ಅವರು ಸಂಸದರಾದ ಹಿನ್ನೆಲೆ ಕ್ಷೇತ್ರ ತೆರವಾಯಿತು. ಕಳೆದ ಎರಡು ಮೂರು ತಿಂಗಳ ಬೆಳವಣಿಗೆ ಎಲ್ಲರಿಗೂ ಗೊತ್ತಿದೆ. ಈ ಉಪಚುನಾವಣೆ ನನ್ನ ಪಾಲಿಗೆ ಅನಿರೀಕ್ಷಿತವಾಗಿದೆ. ಕಳೆದೆರಡು ಸೋಲುಗಳಿಂದ ನನ್ನ ಎದೆ ಗುಂದಲಿಲ್ಲ. ಮಂಡ್ಯದಲ್ಲಿ 5.45 ಲಕ್ಷ ಜನ ಆಶೀರ್ವಾದ ಮಾಡಿದರು, ಆದರೆ ವಿಪರ್ಯಾಸ ಗೆಲ್ಲಲು ಆಗಲಿಲ್ಲ. ಅದಕ್ಕೆ ಅನೇಕ ಕಾರಣ ಇದ್ದವು ಈಗ ಅದನ್ನು ಮಾತನಾಡುವುದಿಲ್ಲ. ರಾಮನಗರದಲ್ಲೂ ಕೊನೆಯ ಕ್ಷಣದಲ್ಲಿ ನನ್ನ ಸ್ಪರ್ಧೆಯ ತೀರ್ಮಾನ ಆಯ್ತು. 76.5 ಸಾವಿರ ಜನ ನನಗೆ ಆಶೀರ್ವಾದ ಮಾಡಿದರು. ಅಲ್ಲಿನ ಸೋಲಿಗೆ ಕಾಂಗ್ರೆಸ್ ಗಿಫ್ಟ್ ಕೂಪನ್ ಕಾರ್ಡ್ ಕಾರಣವಾಗಿದೆ. ಯಾವ ಕೂಪನ್, ಯಾವ ಆಮಿಷಕ್ಕೂ ಚನ್ನಪಟ್ಟಣದ ಜನ ಬಲಿಯಾಗುವುದಿಲ್ಲ ಅನ್ನುವ ವಿಶ್ವಾಸ ನನಗಿದೆ ಎಂದು ತಿಳಿಸಿದರು. ಇದನ್ನೂ  ಓದಿ: 6.79 ಲಕ್ಷಕ್ಕೆ 5 ಸ್ಟಾರ್ ಸೇಫ್ಟಿ ರೇಟೆಡ್ ಡಿಸೈರ್ ಕಾರು ಬಿಡುಗಡೆ

  • ಮತ್ತೆ ಒಂದಾಗೋಣ ಬನ್ನಿ- ಮುಂದಿನ ಎಲೆಕ್ಷನ್‍ನಲ್ಲಿ ಮೈತ್ರಿ ಆಯ್ಕೆಗೆ ಹೆಚ್‍ಡಿಡಿ ಗ್ರೀನ್ ಸಿಗ್ನಲ್

    ಮತ್ತೆ ಒಂದಾಗೋಣ ಬನ್ನಿ- ಮುಂದಿನ ಎಲೆಕ್ಷನ್‍ನಲ್ಲಿ ಮೈತ್ರಿ ಆಯ್ಕೆಗೆ ಹೆಚ್‍ಡಿಡಿ ಗ್ರೀನ್ ಸಿಗ್ನಲ್

    ಬೆಂಗಳೂರು: ರಾಜಕೀಯದಲ್ಲಿ ಯಾರೂ ಶತ್ರುಗಳು ಅಲ್ಲ, ಮಿತ್ರರೂ ಅಲ್ಲ ಅನ್ನೋದು ಮತ್ತೆ ಸಾಬೀತಾಗಿದೆ. ತಮ್ಮ ಮಗನ ಸರ್ಕಾರ ಬೀಳಿಸಿದ ಕಾಂಗ್ರೆಸ್ ಜೊತೆ ಮತ್ತೆ ಮೈತ್ರಿಗೆ ಸಿದ್ಧ ಅನ್ನೋ ಮೂಲಕ 2023ರ ಚುನಾವಣೆಯಲ್ಲಿ ಮೈತ್ರಿಗೆ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಪೌರತ್ವ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್​ಸಿ) ವಿರೋಧಿ ಹೋರಾಟದಲ್ಲಿ ಭಾಗವಹಿಸಿದ ದೇವೇಗೌಡರು ಮತ್ತೆ ಅಧಿಕಾರ ಹಿಡಿಯಲು ಒಂದಾಗಿ ಅಂತ ಕರೆ ನೀಡಿದ್ದಾರೆ.

    ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ದೇವೇಗೌಡರು ಮತ್ತೆ ಕಾಂಗ್ರೆಸ್ ಸೇರಿದಂತೆ ಪ್ರಾದೇಶಿಕ ಪಕ್ಷಗಳಿಗೆ ಒಗ್ಗಟ್ಟು ಮೂಲಕ ಮುಂದಿನ ಚುನಾವಣೆ ಒಟ್ಟಾಗಿ ಎದುರಿಸೋಣ ಅನ್ನೋ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹಿಂದೆ ನಡೆದ ಎಲ್ಲಾ ಘಟನೆಗಳನ್ನ ಮರೆಯೋಣ. ನಾವೆಲ್ಲ ಒಟ್ಟಾಗಿ ಹೋಗೋಣ ಅಂತ ಕರೆ ಕೊಟ್ಟರು. ಅಲ್ಲದೆ ನಾನೇ ಎಲ್ಲರ ಮನೆಗೆ ಹೋಗ್ತೀನಿ. ಮುಂದಿನ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಹೋಗೋಣ ಅಂತ ಸಲಹೆ ನೀಡಿದ್ದಾರೆ.

    ಬಿಜೆಪಿ ದೂರ ಇಡಲು ನಾವೆಲ್ಲ ಒಂದಾಗಬೇಕು. ನಾವು ಒಂದಾದರೆ ಗೆಲುವು ನಮ್ಮದೆ ಆಗುತ್ತದೆ. ದೇಶದ ಒಳಿತಿಗಾಗಿ ನಾನೇ ಎಲ್ಲರ ಮನೆ ಬಾಗಿಲಿಗೆ ಹೋಗ್ತೀನಿ. ಒಟ್ಟಾಗಿ ಜಾತ್ಯಾತೀತ ಶಕ್ತಿಗಳು ಒಂದಾಗಲಿ ಎಂದು ಕರೆ ಕೊಟ್ಟಿದ್ದಾರೆ.

  • ರಾಜಕೀಯ ಚಟುವಟಿಕೆಯಿಲ್ಲದೆ ಮೌನವಾದ ತೆನೆ ಹೊತ್ತ ಮಹಿಳೆ!

    ರಾಜಕೀಯ ಚಟುವಟಿಕೆಯಿಲ್ಲದೆ ಮೌನವಾದ ತೆನೆ ಹೊತ್ತ ಮಹಿಳೆ!

    ಬೆಂಗಳೂರು: ಲೋಕಸಭಾ ಚುನಾವಣೆ, ಸಮ್ಮಿಶ್ರ ಸರ್ಕಾರದ ಪತನ ಹಾಗೂ ಉಪ ಚುನಾವಣೆ ಸೋಲಿನ ನಂತರ ಜೆಡಿಎಸ್ ದಿನೇ ದಿನೇ ಮಂಕಾಗುತ್ತಿದೆ. ಪಕ್ಷದ ನಾಯಕರು ಆ್ಯಕ್ಟೀವ್ ಆಗಿಲ್ಲ. ಪಕ್ಷದ ಕಾರ್ಯಕರ್ತರು ಪಕ್ಷದ ಕಚೇರಿಗೂ ಬರುತ್ತಿಲ್ಲ. ಪಕ್ಷ ಸಂಘಟನೆ ನಿಂತಿಲ್ಲೇ ನಿಂತಿದೆ. ಶಾಸಕರು ಪಕ್ಷಕ್ಕೆ ಸಂಬಂಧ ಇಲ್ಲದಂತೆ ಮೌನವಾಗಿದ್ದಾರೆ. ಇದೆಲ್ಲದರ ಮಧ್ಯೆ ತೆನೆ ಹೊತ್ತ ಮಹಿಳೆ ಪ್ರಬಲ ನಾಯಕನಿಲ್ಲದೆ ಮೌನವಾಗಿದ್ದಾಳೆ.

    ಸೋತರು ಸದಾ ಪಕ್ಷ ಸಂಘಟನೆಯಲ್ಲಿ ಮುಂದಿರೋ ಮಾಜಿ ಪ್ರಧಾನಿ, ಪಕ್ಷದ ವರಿಷ್ಠ ದೇವೇಗೌಡರು ಅದ್ಯಾಕೋ ಪಕ್ಷದ ಸಂಘಟನೆಯಿಂದ ಕೊಂಚ ದೂರ ಉಳಿದಿದ್ದಾರೆ. ಆರೋಗ್ಯ ಸರಿಯಿಲ್ಲದ ಕಾರಣ ಕೇರಳದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿರಂತೂ ಪಕ್ಷದ ಚಟುವಟಿಕೆಯಿಂದಲೇ ದೂರ ಉಳಿದಿದ್ದಾರೆ. ಪಕ್ಷ ಇಂತಹ ಸಮಯದಲ್ಲಿ ಇದ್ದರು ಪ್ರವಾಸದ ಮೇಲೆ ಪ್ರವಾಸ ಮಾಡುತ್ತಿದ್ದಾರೆ.

    ಹುಟ್ಟು ಹಬ್ಬಕ್ಕಾಗಿ ಗೋವಾಗಿ ಫ್ಯಾಮಿಲಿ ಜೊತೆ ಹೋಗಿದ್ರು. ಈಗ ಹೊಸ ವರ್ಷದ ಆಚರಣೆಗೆ ಸಿಂಗಾಪುರ್ ಗೆ ಹಾರಿದ್ದು, ಪಕ್ಷ ಸಂಘಟನೆಯನ್ನೆ ಮರೆತಿದ್ದಾರೆ. ಮಾಜಿ ಸಚಿವ ರೇವಣ್ಣಗೆ ಹಾಸನವೇ ರಾಜ್ಯದಂತೆ ಅಲ್ಲಿಗೆ ಮಾತ್ರ ಸಿಮೀತವಾಗಿದ್ದಾರೆ. ಹೆಚ್‍ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಯುವ ಘಟಕದ ಅಧ್ಯಕ್ಷ ಆಗಿದ್ದರೂ ಇದುವರೆಗೂ ಒಂದೇ ಒಂದು ಸಭೆ ಮಾಡಿಲ್ಲ. ಯುವಕರನ್ನು ಆಕರ್ಷಣೆ ಮಾಡಿಲ್ಲ. ಕಾರ್ಯಕರ್ತರ ಜೊತೆಯೂ ಮಾತಾಡಿಲ್ಲ. ಸಂಸದ ಪ್ರಜ್ವಲ್ ರೇವಣ್ಣ ಅಲ್ಲಿ-ಇಲ್ಲಿ ಒಮ್ಮೊಮ್ಮೆ ರಾಜಕೀಯವಾಗಿ ಕಾಣಿಸಿಕೊಳ್ಳುತ್ತಾರೆ. ಮಾಜಿ ಸಚಿವರಂತೂ ಪಕ್ಷದ ಕಚೇರಿಗೂ ಮುಖ ಹಾಕಿಲ್ಲ.

    ಒಟ್ಟಿನಲ್ಲಿ ಪ್ರಬಲ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕಿದ್ದ ಜೆಡಿಎಸ್, ವಿರೋಧ ಪಕ್ಷ ಅನ್ನೋದು ಮರೆತು ಕುಳಿತಿದೆ. ಸರ್ಕಾರದ ವಿರುದ್ಧ ಒಂದೇ ಒಂದು ಹೋರಾಟ ಮಾಡಿಲ್ಲ. ಸರ್ಕಾರಕ್ಕೆ ಚಾಟಿ ಬೀಸುವ ಕೆಲಸವೂ ಮಾಡಿಲ್ಲ. ಜೆಡಿಎಸ್ ನಾಯಕರ ಈ ವರ್ತನೆ ನೋಡಿ ಪಕ್ಷದ ಕಾರ್ಯಕರ್ತರು ಬೇಸರಗೊಂಡಿದ್ದಾರೆ.

  • ದುಡ್ಡು ಬೇಕಿದ್ದರೆ ಫೋನ್ ಮಾಡಿ, ಕಳಿಸ್ತೀನಿ ಅಂತಾರೆ ಬಿಎಸ್‍ವೈ- ಹೆಚ್‍ಡಿಡಿ ವಾಗ್ದಾಳಿ

    ದುಡ್ಡು ಬೇಕಿದ್ದರೆ ಫೋನ್ ಮಾಡಿ, ಕಳಿಸ್ತೀನಿ ಅಂತಾರೆ ಬಿಎಸ್‍ವೈ- ಹೆಚ್‍ಡಿಡಿ ವಾಗ್ದಾಳಿ

    ಮೈಸೂರು: ಎಲ್ಲ ಅನರ್ಹ ಅಭ್ಯರ್ಥಿಗಳಿಗೆ ಎಷ್ಟು ಹಣ ಬೇಕೋ ಕೇಳಿ. ಎಲ್ಲ ಕಡೆ ಮಂತ್ರಿಗಳನ್ನ ಬಿಟ್ಟು ನೀವು ಚುನಾವಣೆ ಮುಗಿಸಿಯೇ ಬನ್ನಿ. ಮಂತ್ರಿಗಳಿಗೂ ಹಣ ಬೇಕಿದ್ದರೆ ಅಲ್ಲಿಂದಲೇ ಫೋನ್ ಮಾಡಿ ನಾನು ಕಳುಹಿಸ್ತೀನಿ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ ಎಂದು ಆರೋಪಿಸಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‍ವೈ ಎಷ್ಟು ದುಡ್ಡು ಸಾಗಿಸಿದರೂ ಯಾರು ಕೇಳಲ್ಲ. ಅದಕ್ಕೆ 15ಕ್ಕೆ 15 ಗೆಲ್ಲುತ್ತೀನಿ ಅಂತಿದ್ದಾರೆ. ಬಿಎಸ್‍ವೈ ಬಳಿ ಸರ್ಕಾರ, ಗುಪ್ತವಾರ್ತೆ ಇದೆ. ಆರ್ಥಿಕವಾಗಿ ಶಕ್ತಿಯಿದೆ ಎಂದು ಕಿಡಿಕಾರಿದರು.

    ಎಷ್ಟು ಬೇಕು ಹಣ ಹೇಳಿ ಎಂದು ಅನರ್ಹ ಅಭ್ಯರ್ಥಿಗಳಲ್ಲಿ ಬಿಎಸ್‍ವೈ ಹೇಳಿದ್ದಾರೆ. ಎಲ್ಲ ಕಡೆ ಮಂತ್ರಿಗಳನ್ನ ಬಿಟ್ಟು ನೀವು ಚುನಾವಣೆ ಮುಗಿಸಿ ಬನ್ನಿ. ಹಾಗೆಯೇ ಮಂತ್ರಿಗಳಿಗೂ ಹಣ ಬೇಕಿದ್ದರೆ ಫೋನ್ ಮಾಡಿ ನಾನು ಕಳುಹಿಸ್ತಿನಿ ಎಂದಿದ್ದಾರೆ. ಇಷ್ಟೆಲ್ಲ ಇರಬೇಕಾದ್ರೆ ನಾವೇನು ಮಾಡೋಕಾಗುತ್ತದೆ. ಬಿಎಸ್‍ವೈ ದುಡ್ಡಿನಿಂದ ಚುನಾವಣೆ ಮಾಡುತ್ತಿದ್ದಾರೆ ಅಂತ ಮಾಜಿ ಪ್ರಧಾನಿ ಆರೋಪಿಸಿದರು.

    ವಿಶ್ವನಾಥ್ ಒಬ್ಬ ಸೀಸನ್ ಪಾಲಿಟಿಷಿಯನ್. ಹೃದಯದಲ್ಲಿ ಇರುವುದೇ ಬೇರೆ ಜನರ ಮುಂದೆ ಹೇಳೋದೇ ಬೇರೆ. ಇದೆಲ್ಲವೂ ಜನಕ್ಕೆ ಅರ್ಥವಾಗುತ್ತದೆ. ಜನ ಇದನ್ನ ಅರ್ಥ ಮಾಡಿಕೊಳ್ಳದ ಸ್ಥಿತಿಯಲ್ಲಿದ್ದಾರೆ ಅಂದುಕೊಳ್ಳುವುದು ತಪ್ಪು ಎಂದು ಬಿಜೆಪಿ ಅಭ್ಯರ್ಥಿ ಎಚ್ ವಿಶ್ವನಾಥ್‍ಗೆ ಟಾಂಗ್ ನೀಡಿದರು.

    ಅವರು ನನ್ನ ಬಗ್ಗೆಯೂ ಹೊಗಳಿದ್ದಾರೆ. ಸಿದ್ದರಾಮಯ್ಯ ಬಗ್ಗೆಯೂ ಹೊಗಳಿದ್ದಾರೆ. ಮತಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತು. ಈಗ ನಮ್ಮಂತ ನಾಯಕರನ್ನ ಟೀಕೆ ಮಾಡಿದ್ರೆ ಅದು ಚುನಾವಣೆ ಮೇಲೆ ಪರಿಣಾಮ ಬಿರುತ್ತದೆ ಅನ್ನೋದು ವಿಶ್ವನಾಥ್‍ಗೆ ಗೊತ್ತಿದೆ. ಹೀಗಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

    ಇದೇ ವೇಳೆ ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಬಗ್ಗೆ ಮಾತನಾಡಿದ ಹೆಚ್‍ಡಿಡಿ, ದೇಶದ ರಾಜಕೀಯದಲ್ಲಿ ಏನು ಬೇಕಾದ್ರು ಆಗಬಹುದು. ಕರ್ನಾಟಕದ ರಾಜಕಾರಣಕ್ಕೂ ಇದು ಅನ್ವಯವಾಗಲಿದೆ. ಉಪಚುನಾವಣೆ ಫಲಿತಾಂಶ ನಂತರ ಕರ್ನಾಟಕದಲ್ಲಿ ಏನೇನು ಬದಲಾವಣೆ ಆಗುತ್ತೆ ನೋಡೋಣ. ಫಲಿತಾಂಶ ಬಂದ ಮೇಲೆ ಸೋನಿಯಾಗಾಂಧಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದನ್ನು ನೋಡೋಣ ಎಂದರು.

     

  • ಶಸ್ತ್ರತ್ಯಾಗ ಮಾಡಲ್ಲ, ಪಕ್ಷಕ್ಕಾಗಿ ಹೋರಾಡುತ್ತೇನೆ- ಡಯಾಸ್ ಕುಟ್ಟಿ ಗುಡುಗಿದ ಹೆಚ್‍ಡಿಡಿ

    ಶಸ್ತ್ರತ್ಯಾಗ ಮಾಡಲ್ಲ, ಪಕ್ಷಕ್ಕಾಗಿ ಹೋರಾಡುತ್ತೇನೆ- ಡಯಾಸ್ ಕುಟ್ಟಿ ಗುಡುಗಿದ ಹೆಚ್‍ಡಿಡಿ

    ತುಮಕೂರು: ವಿಧಿ ಎಳೆದುಕೊಂಡು ಬಂದು ಚಕ್ರವ್ಯೂಹದಲ್ಲಿ ಸಿಲುಕಿಸಿ ತುಮಕೂರಲ್ಲಿ ಸೋಲಿಸಿದೆ. ಆದರೂ ಶಸ್ತ್ರತ್ಯಾಗ ಮಾಡಲ್ಲ ಪಕ್ಷಕ್ಕಾಗಿ ಹೋರಾಟ ಮಾಡುತ್ತೇನೆ ಎಂದು ಡಯಾಸ್ ಕುಟ್ಟಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಗುಡುಗಿದ್ದಾರೆ.

    ತುಮಕೂರು ತಾಲೂಕಿನ ಅರೇಹಳ್ಳಿಯ ನೂತನ ದೇವಾಲಯ ಉದ್ಘಾಟಿಸಿ ಮಾತನಾಡಿದ ಅವರು, ನಾನು ಭೀಷ್ಮನಂತೆ ಶಸ್ತ್ರತ್ಯಾಗ ಮಾಡಲ್ಲ. ಶಸ್ತ್ರಸಜ್ಜಿತನಾಗಿ ಹೋರಾಟ ಮಾಡಿ ಮತ್ತೆ ಪಕ್ಷ ಕಟ್ಟುತ್ತೇನೆ. ತುಮಕೂರಿನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇರಾದೆ ಇರಲಿಲ್ಲ. 59 ವರ್ಷ ರಾಜಕಾರಣ ಮಾಡಿದ್ದೇನೆ. ತುಮಕೂರಿಗೆ ಬಂದು ಸೋತು ಅವಮಾನ ಆಗಬೇಕಿತ್ತಾ ಎಂದು ಬೇಸರ ವ್ಯಕ್ತಪಡಿಸಿದರು.

    ಮುಂದಿನ ವಿಧಾನಸಭೆಯಲ್ಲಿ ತುಮಕೂರು ಜಿಲ್ಲೆಯ 11ಕ್ಕೆ 11 ಕ್ಷೇತ್ರ ಗೆಲ್ಲುತ್ತೇನೆ ಎಂದು ವಿಶ್ವಾಸವ್ಯಕ್ತಪಡಿಸಿದರು. ನನ್ನ ಮಗನನ್ನ ಮುಖ್ಯಮಂತ್ರಿ ಮಾಡಿ ಎಂದು ನಾನು ಯಾರ ಮನೆ ಮುಂದೆ ಹೋಗಿರಲಿಲ್ಲ. ಅವರೇ ನಿಮ್ಮ ಮಗನೇ ಮುಖ್ಯಮಂತ್ರಿ ಆಗಬೇಕು ಎಂದರು. ಒಬ್ಬ ಮುಖ್ಯಮಂತ್ರಿಗೆ 14 ತಿಂಗಳಲ್ಲಿ ಕೊಟ್ಟ ನೋವು ಈ ರಾಷ್ಟ್ರದ ಇತಿಹಾಸದಲ್ಲಿ ಇಲ್ಲ ಎಂದು ಕಾಂಗ್ರೆಸ್ ಪಕ್ಷದವರಿಗೆ ಟಾಂಗ್ ಕೊಟ್ಟಿದ್ದಾರೆ. ಇನ್ನೂ ಭಾಷಣದಲ್ಲಿ ಸಿಎಂ ಯಡಿಯೂರಪ್ಪರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಶಾಸಕರ ಕ್ಷೇತ್ರಗಳಿಗೆ ಬಿಡುಗಡೆ ಮಾಡಿದಂತಹ ಅನುದಾನವನ್ನ ತಡೆಹಿಡಿದು ದ್ವೇಷದ ರಾಜಕಾರಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.


    ಇದೇ ವೇಳೆ ಅಯೋಧ್ಯೆ ತೀರ್ಪು ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಹೆಚ್‍ಡಿಡಿ, ಕೋರ್ಟಿನಲ್ಲಿ ಏನು ತೀರ್ಮಾನ ಬರುತ್ತೋ ಗೊತ್ತಿಲ್ಲ. ಏನೇ ತೀರ್ಮಾನ ಬಂದರೂ ಅಲ್ಪಸಂಖ್ಯಾತ ಕೆಲ ಮುಖಂಡರು ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ. ಈಗಾಗಲೇ ಅಯೋಧ್ಯೆಯಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದೆ. ಈ ವಿವಾದ ಯಾಕಾಯಿತು ಅದನ್ನು ಒಡೆದವರು ಯಾರು ಹಿಂದಿನದು ನನಗೆ ಗೊತ್ತಿಲ್ಲ. ಹೊಡೆದದ್ದು ಭಾರತೀಯ ಜನತಾ ಪಾರ್ಟಿ ಅವರೇ ಎಂದು ಆರೋಪಿಸಿದರು.

    ಕೋರ್ಟಿನಲ್ಲಿ ಹೇಗೆ ತೀರ್ಪು ಬರುತ್ತದೆ ಅನ್ನೋದನ್ನು ನಾನು ಈಗಲೇ ಹೇಳಲಿಕ್ಕೆ ಸಾಧ್ಯವಿಲ್ಲ. ತೀರ್ಪು ಸರ್ವಸಮ್ಮತವಾಗಿ ಬರುತ್ತೋ ಅಥವಾ ಏನಾದರೂ ವ್ಯತ್ಯಾಸ ಬರುತ್ತೋ ಅನ್ನೋದನ್ನು ಕಾದು ನೋಡಬೇಕು ಎಂದರು.

  • ಟಾರ್ಗೆಟ್ 7, ಸೆಂಟಿಮೆಂಟ್ ಡೈಲಾಗ್‍ಗೆ ಜೆಡಿಎಸ್ ರೆಬೆಲ್‍ಗಳು ಥಂಡಾ!

    ಟಾರ್ಗೆಟ್ 7, ಸೆಂಟಿಮೆಂಟ್ ಡೈಲಾಗ್‍ಗೆ ಜೆಡಿಎಸ್ ರೆಬೆಲ್‍ಗಳು ಥಂಡಾ!

    ಬೆಂಗಳೂರು: ಬಂಡಾಯದ ಬಾವುಟ ಹಾರಿಸಿದ್ದ ಜೆಡಿಎಸ್ ಶಾಸಕರು ಹಾಗೂ ಪರಿಷತ್ ಸದಸ್ಯರನ್ನ ಸಮಾಧಾನ ಮಾಡಿಸಲು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಪ್ರಯತ್ನ ಪಟ್ಟಿದ್ದಾರೆ. ಈ ವೇಳೆ ಗೌಡರ ಮುಂದೆ ಶಾಸಕರು ಕೂಡ ತಮ್ಮ ಸಮಸ್ಯೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

    ಹೌದು. 14 ತಿಂಗಳ ಸರ್ಕಾರ ಇದ್ದಾಗ ಅನುಭವಿಸಿದ ಸಂಕಟ, ರೇವಣ್ಣ ಹಾಗೂ ಕುಮಾರಸ್ವಾಮಿ ತಮ್ಮನ್ನ ನಡೆಸಿಕೊಂಡ ರೀತಿ ಎಲ್ಲವನ್ನು ನೋವಿನಿಂದ ಹೇಳಿಕೊಂಡಿದ್ದಾರೆ. ಎಲ್ಲವನ್ನೂ ಹೇಳಿ ನಮ್ಮ ಪಾಡಿಗೆ ನಮ್ಮನ್ನ ಬಿಟ್ಟುಬಿಡಿ. ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ ಎಂದಿದ್ದಾರೆ. ಈ ವೇಳೆ ಗೌಡರು, ಕೊನೆಗಾಲದಲ್ಲಿ ನನಗೆ ಇಂತಹ ನೋವು ಕೊಡಬೇಡಿ. ಸ್ವಲ್ಪ ತಾಳ್ಮೆಯಿಂದ ಇರಿ ಎಲ್ಲವನ್ನೂ ಸರಿಮಾಡುತ್ತೇನೆ ಎಂಬ ಮಾತು ಕೊಟ್ಟಿದ್ದಾರೆ ಎನ್ನಲಾಗಿದೆ.

    ನವಂಬರ್ 7ರ ಒಳಗೆ ಹೆಚ್.ಡಿ ರೇವಣ್ಣ ಹಾಗೂ ಹೆಚ್.ಡಿ ಕುಮಾರಸ್ವಾಮಿ ಇಬ್ಬರನ್ನೂ ಕೂರಿಸಿ ಮಾತನಾಡುತ್ತೇನೆ. ನಿಮ್ಮ ಜೊತೆಗೂ ಮಾತನಾಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

    ಒಟ್ಟಿನಲ್ಲಿ ಕೊನೆಗಳಿಗೆಯಲ್ಲಿ ಇಂತಹ ನೋವು ಕೊಡಬೇಡಿ ಅನ್ನೋ ಸೆಂಟಿಮೆಂಟ್ ಡೈಲಾಗ್ ಹಾಗೂ ನವೆಂಬರ್ 7 ರ ಗಡುವು ಶಾಸಕರ ಮನ ಪರಿವರ್ತನೆ ಮಾಡಿದೆ. ಆದರೆ ನವೆಂಬರ್ 7 ರ ನಂತರ ಏನಾಗಬಹುದು ಅನ್ನೋದೆ ಸದ್ಯದ ಕುತೂಹಲವಾಗಿದೆ.

  • ದೇವೇಗೌಡರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ..!

    ದೇವೇಗೌಡರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ..!

    ತುಮಕೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ವಿರುದ್ಧ ಜಿಲ್ಲೆಯ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.

    ನಗರದ ಟೌನ್ ಹಾಲ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ, ತುಮಕೂರಿನಲ್ಲಿ ದೇವೇಗೌಡರು ನಿಂತರೆ ಸೋಲಿಸುತ್ತೇವೆ. ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್ ಕೊಡಲೇಬೇಕು ಎಂದು ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಆಗ್ರಹಿಸಿದ್ದಾರೆ.

    44 ಜನ ಕಾಂಗ್ರೆಸ್ ನ ಸಂಸದರು ಗೆದ್ದಿದ್ದಾರೆ. ಅದರಲ್ಲಿ 43 ಮಂದಿಗೆ ಟಿಕೆಟ್ ಕೊಟ್ಟು ಮುದ್ದಹನುಮೇಗೌಡರಿಗೆ ತಪ್ಪಿಸುವುದು ಸರಿಯಲ್ಲ. ಅವರು ಹೆಚ್ಚು ಕ್ರಿಯಾಶೀಲರಾಗಿ ಸಂಸತ್ ನಲ್ಲಿ ಮಾತನಾಡಿದ್ದಾರೆ. ಅಂಥವರಿಗೇ ಟಿಕೆಟ್ ತಪ್ಪಿಸುವುದು ಅಂದರೆ ಏನಿದು. ಇದರ ಹಿಂದುಗಡೆ ಏನಿದೆ ಎಂಬುದು ನಮಗೆ ಬೇಕಿಲ್ಲ. ಸಮ್ಮಿಶ್ರ ಸರ್ಕಾರ ಬೇರೆ ಜಿಲ್ಲೆಗಳಿಗೆ, ನಮ್ಮ ಜಿಲ್ಲೆಗೆ ಏನಿದ್ರೂ ಕಾಂಗ್ರೆಸ್ ಮಾತ್ರ. ಜೆಡಿಎಸ್ ಗೆ ಟಿಕೆಟ್ ನೀಡಿದ್ರೆ ನಾವೇ ಗೌಡರನ್ನು ಸೋಲಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಬಾರಿಯ ಲೋಕಸಭಾ ಚುನಾವಣೆಗೆ ಸಮ್ಮಿಶ್ರ ಸರ್ಕಾರದ ಟಿಕೆಟ್ ಹಂಚಿಕೆಯಲ್ಲಿ ಭಾರೀ ಗೊಂದಲವುಂಟಾಗಿದೆ. ತಮ್ಮ ಕ್ಷೇತ್ರ ಹಾಸನವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಎಚ್‍ಡಿಡಿ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ದೇವೇಗೌಡರು ತುಮಕೂರಿನಿಂದ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ದೇವೇಗೌಡರು ಬೇಡ ಮುದ್ದಹನುಮೇ ಗೌಡರಿಗೆ ಟಿಕೆಟ್ ನೀಡಬೇಕು ಎಂದು ಅಲ್ಲಿನ ಕಾಂಗ್ರೆಸ್ಸಿಗರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv