Tag: HD Revanna

  • ಕಾರ್ಯಕರ್ತರ ಮುಂದೆ ರೇವಣ್ಣ ಕಣ್ಣೀರು!

    ಕಾರ್ಯಕರ್ತರ ಮುಂದೆ ರೇವಣ್ಣ ಕಣ್ಣೀರು!

    ಬೆಂಗಳೂರು: ಜೈಲಿನಿಂದ ರಿಲೀಸ್‌ ಆಗಿರುವ ಮಾಜಿ ಸಚಿವ ಹೆಚ್‌.ಡಿ ರೇವಣ್ಣ (HD Revanna) ಅವರು ನೇರವಾಗಿ ಪದ್ಮನಾಭನಗರದಲ್ಲಿರುವ ದೇವೆಗೌಡರ ನಿವಾಸಕ್ಕೆ ತೆರಳಿದ್ದಾರೆ. ಅಲ್ಲಿ ತಂದೆ-ತಾಯಿ ಜೊತೆ ಮಾತನಾಡಿ ಹೊರಡುವ ಸಂದರ್ಭದಲ್ಲಿ ರೇವಣ್ಣ ಅವರು ದೇವೇಗೌಡರ ನಿವಾಸದ ಎದುರು ಕಾರ್ಯಕರ್ತರನ್ನು ಭೇಟಿಯಾದರು.

    ನೆರೆದಿದ್ದ ಕಾರ್ಯಕರ್ತರನ್ನು ಕಂಡು ಕಣ್ಣೀರು ಹಾಕಿದ ರೇವಣ್ಣ ಅವರನ್ನು ಸಮಾಧಾನಪಡಿಸಿದರು. ನೀವು ಅಳಬೇಡಿ ಕಣಣ್ಣ ಎಂದು ಡಿಕೆಶಿ ವಿರುದ್ಧ ಕಾರ್ಯಕರ್ತರು ಕಿಡಿಕಾರಿದರು. ಈ ವೇಳೆ ರೇವಣ್ಣ ಅವರು, ಹಂಗೆಲ್ಲ ಮಾತನಾಡಬಾರದು ಅಂದಾಗ ಯಾಕಣ್ಣ ಮಾತಾಡಬಾರದು ಎಂದು ಕಾರ್ಯಕರ್ತರು ರೊಚ್ಚಿಗೆದ್ದರು. ರೇವಣ್ಣ ಜೊತೆ ಕೆಲ ಕಾರ್ಯಕರ್ತರು ಕೂಡ ಕಣ್ಣೀರು ಹಾಕಿದ್ದಾರೆ. ಬಳಿಕ ಅಲ್ಲಿಂದ ತೆರಳಿದರು. ಇದನ್ನೂ ಓದಿ: ಜೈಲುವಾಸದಿಂದ ಮುಕ್ತಿ- ಪರಪ್ಪನ ಅಗ್ರಹಾರದಿಂದ ಹೊರಬಂದ ರೇವಣ್ಣ

    ಕೆ.ಆರ್.ನಗರ ಸಂತ್ರಸ್ತೆಯನ್ನು ಅಪಹರಣ ಮಾಡಿಸಿದ ಆರೋಪದ ಮೇಲೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಚಿವ ಹೆಚ್‍ಡಿ ರೇವಣ್ಣಗೆ (HD Revanna) ಕಡೆಗೂ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ಇಂದು ಬಿಡುಗಡೆಯಾದರು. ಸೋಮವಾರ ಬೆಳಗ್ಗೆಯಿಂದ ಸಂಜೆ 4 ಗಂಟೆಯವರೆಗೆ ಜಾಮೀನು ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸಂಜೆ 6:30ಕ್ಕೆ ರೇವಣ್ಣಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

    ಸಂಜೆಯಾದ ಕಾರಣ ಕೋರ್ಟ್ ಸಮಯ ಮುಗಿದಿದ್ದರಿಂದ ಷರತ್ತು ಪೂರೈಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇಂದು ಮಧ್ಯಾಹ್ನ ಎಲ್ಲಾ ಪ್ರಕ್ರಿಯೆ ಮುಗಿಸಿ ರೇವಣ್ಣ ಬಿಡುಗಡೆಯಾದರು.

  • ಜೈಲುವಾಸದಿಂದ ಮುಕ್ತಿ- ಪರಪ್ಪನ ಅಗ್ರಹಾರದಿಂದ ಹೊರಬಂದ ರೇವಣ್ಣ

    ಜೈಲುವಾಸದಿಂದ ಮುಕ್ತಿ- ಪರಪ್ಪನ ಅಗ್ರಹಾರದಿಂದ ಹೊರಬಂದ ರೇವಣ್ಣ

    ಬೆಂಗಳೂರು: ಮಾಜಿ ಸಚಿವ ಹೆಚ್‌.ಡಿ ರೇವಣ್ಣ (HD Revanna) ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

    ಇಂದು ಜಾಮೀನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರೇವಣ್ಣ ಅವರು ಜೈಲಿನಿಂದ ಹೊರ ಬಂದರು. ರೇವಣ್ಣ ಅವರು ಜೈಲಿನಿಂದ ಹೊರ ಬರುತ್ತಿದ್ದಂತೆಯೇ ಮಾಧ್ಯಮಗಳತ್ತ ಕೈ ಮುಗಿದು ಮುಂದೆ ಸಾಗಿದರು. ರೇವಣ್ಣ ಬರುವಿಕೆಗಾಗಿ ಅಭಿಮಾನಿಗಳು ಜೈಲಿನ ಹೊರಗೆ ಕಾಯುತ್ತಿದ್ದರು. ಹೀಗಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿತ್ತು.

    ಜೈಲಿನಿಂದ ಹೊರಬಂದ ರೇವಣ್ಣ ಅವರಿಗೆ ಕಾರ್ಯಕರ್ತರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಯಾಕೆಂದರೆ ರೇವಣ್ಣ ಬರುತ್ತಿದ್ದಂತೆಯೇ ನೂಕುನುಗ್ಗಲು ಆರಂಭವಾಗಿದೆ.  ಕಾರ್ಯಕರ್ತರು ಕಾರಿಗೆ ಅಡ್ಡ ಬಂದಿದ್ದರಿಂದ  ಕಾರ್ ಮೂವ್ ಮಾಡಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.  ಹೀಗಾಗಿ ಕಾರಿನ ಗ್ಲಾಸ್‌ ಇಳಿಸಿ ಕೈ ಮುಗಿದು ಹೊರಟರು.

    ಸಂತ್ರಸ್ತೆಯ ಕಿಡ್ನಾಪ್‌ ಆರೋಪ ಎದುರಿಸುತ್ತಿದ್ದ ರೇವಣ್ಣ ಅವರು 6 ದಿನಗಳ ಹಿಂದೆ ಜೈಲು ಸೇರಿದ್ದರು. ನಿನ್ನೆ ಇಡೀ ದಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದಿತ್ತು. ಬಳಿಕ ಸಂಜೆ ಕೆಲವೊಂದು ಷರತ್ತುಗಳನ್ನು ವಿಧಿಸಿ ಜಾಮೀನು ನೀಡಲಾಗಿತ್ತು.

  • ರೇವಣ್ಣಗೆ ಜಾಮೀನು- ಪಟಾಕಿ ಸಿಡಿಸದಂತೆ ಹೆಚ್‍ಡಿಕೆ ಮನವಿ

    ರೇವಣ್ಣಗೆ ಜಾಮೀನು- ಪಟಾಕಿ ಸಿಡಿಸದಂತೆ ಹೆಚ್‍ಡಿಕೆ ಮನವಿ

    ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಿಂದ ಮಾಜಿ ಸಚಿವ ಹೆಚ್.ಡಿ ರೇವಣ್ಣ ಇಂದು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಮನವಿ ಮಾಡಿಕೊಂಡಿದ್ದಾರೆ.

    ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇವಣ್ಣಗೆ (HD Revanna) ಜಾಮೀನು ಸಿಕ್ಕಿತ್ತು ಅಂತ ನಾನು ಸಂತೋಷಪಡ್ತೀನಿ ಅಂದುಕೊಳ್ಳಬೇಡಿ. ಕಾರ್ಯಕರ್ತರು ಪಟಾಕಿ ಹೊಡೆಯಬೇಡಿ. ಈ ಮೂಲಕ ಸಂಭ್ರಮ ಪಡಬೇಡಿ. ಇದು ಸಂಭ್ರಮ ಪಡುವ ಸಮಯವಲ್ಲ ಎಂದು ಮನವಿ ಮಾಡಿಕೊಂಡರು.

    ಘಟನೆಯ ಸತ್ಯಾಸತ್ಯತೆ ಹೊರ ಬರಬೇಕು. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಸಿಗಬೇಕು. ಆಗ ಸಂಭ್ರಮ ಮಾಡಿ. ಇದು ರಾಜ್ಯವೇ ತಲೆ ತಗ್ಗಿಸೋ ಘಟನೆ. ಪೆನ್‍ಡ್ರೈವ್ ಲೀಕ್ ಮಾಡಿರೋ ವ್ಯಕ್ತಿಯನ್ನ ಹುಡುಕಿಲ್ಲ ಎಂದು ಎಸ್‍ಐಟಿ ಅಧಿಕಾರಿಗಳ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು. ಇದನ್ನೂ ಓದಿ: ದೊಡ್ಡ ತಿಮಿಂಗಿಲ ಹಿಡಿದ್ರೆ ಎಲ್ಲಾ ಸತ್ಯ ಹೊರಬರುತ್ತೆ: ಹೆಚ್‍ಡಿಕೆ ವಾಗ್ದಾಳಿ

  • ಹೆಚ್.ಡಿ ರೇವಣ್ಣಗೆ ಜಾಮೀನು- ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಅಭಿಮಾನಿಗಳು

    ಹೆಚ್.ಡಿ ರೇವಣ್ಣಗೆ ಜಾಮೀನು- ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಅಭಿಮಾನಿಗಳು

    ಹಾಸನ: ಕೆಆರ್ ನಗರ ಸಂತ್ರಸ್ತೆ ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಮಾಜಿ ಸಚಿವ ರೇವಣ್ಣ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ರೇವಣ್ಣ ಅವರಿಗೆ ಜಾಮೀನು ಮಂಜೂರು ಮಾಹಿತಿ ಸಿಗುತ್ತಿದ್ದಂತೆ ಹಾಸನ, ಹೊಳೆನರಸೀಪುರದಲ್ಲಿ ಸಂಭ್ರಮ ಮನೆ ಮಾಡಿತ್ತು. ರಸ್ತೆಗಿಳಿದ ರೇವಣ್ಣ ಅಭಿಮಾನಿಗಳು ಹಾಗೂ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

    ಹೊಳೆನರಸೀಪುರದಲ್ಲಿ ಅಭಿವೃದ್ಧಿಯ ಹರಿಕಾರ ಎಂದೇ ಹೆಸರುವಾಸಿಯಾಗಿದ್ದ ಮಾಜಿ ಸಚಿವ ಕೆಆರ್ ನಗರ ಸಂತ್ರಸ್ತೆ ಮಹಿಳೆ ಕಿಡ್ನಾಪ್ ಪ್ರಕರಣದದಲ್ಲಿ ಬಂಧನಕ್ಕೆ ಒಳಗಾಗಿದ್ದರು. ನಿನ್ನೆ ಇಡೀ ದಿನ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಡೆಯಿತು ಬಳಿಕ ರೇವಣ್ಣಗೆ (HD Revanna Bail) ಜಾಮೀನು ನೀಡಲಾಯ್ತು. ರೇವಣ್ಣಗೆ ಜಾಮೀನು ಸಿಗಲಿ ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದ ರೇವಣ್ಣ ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರು ಹೊಳೆನರಸೀಪುರದ ಮಹಾತ್ಮಾಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

    ಇದೇ ವೇಳೆ ಮಹಾತ್ಮಾಗಾಂಧಿ ವೃತ್ತಕ್ಕೆ ಆಗಮಿಸಿದ ಪೊಲೀಸರು ಪಟಾಕಿ ಸಿಡಿಸಿದ ಓರ್ವನನ್ನು ವಶಕ್ಕೆ ಪಡೆದ ಕಾರಣ ಜೆಡಿಎಸ್ ಕಾರ್ಯಕರ್ತರು ಹಾಗೂ ಪೊಲೀಸರ ನಡವೆ ವಾಗ್ವಾದ ನಡೆಯಿತು. ಕಾಂಗ್ರೆಸ್‍ನವರಿಗೆ ಅನುಮತಿ ನೀಡಿದ್ದೀರಾ ನಮಗೂ ಅನುಮತಿ ಕೊಡಿ ಅಂತಾ ರೇವಣ್ಣ ಅಭಿಮಾನಿಗಳು ಪ್ರತಿಭಟನೆಗೆ ಮುಂದಾದ್ರು. ಈ ವೇಳೆ ಪೊಲೀಸರು ಅನುಮತಿ ನೀಡುತ್ತಿದ್ದಂತೆ ಪಟಾಕಿ ಸಿಡಿಸಿದ ಅಭಿಮಾನಿಗಳು, ಜೆಡಿಎಸ್ (JDS) ಕಾರ್ಯಕರ್ತರು ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ರೇವಣ್ಣ ಪರ ಘೋಷಣೆ ಕೂಗಿದ್ರು. ಇದನ್ನೂ ಓದಿ: ಇಂದು ಜೈಲಿನಿಂದ ರಿಲೀಸ್‌ ಆಗಲಿದ್ದಾರೆ ರೇವಣ್ಣ

    ಹೊಳೆನರಸೀಪುರ ಕ್ಷೇತ್ರದಲ್ಲಿ ಯಾರು ಮಾಡದ ಅಭಿವೃದ್ದಿಯನ್ನು ನಮ್ಮ ರೇವಣ್ಣ ಮಾಡಿದ್ದಾರೆ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲಿ. ಆದರೆ ರೇವಣ್ಣ ಅವರನ್ನು ಬಂಧಿಸಿದ್ದು ತಪ್ಪು. ರಾಜಕೀಯ ಷಡ್ಯಂತ್ರದಿಂದ ನಮ್ಮ ರೇವಣ್ಣ ಅವರನ್ನು ಬಂಧಿಸಲಾಗಿದೆ. ರೇವಣ್ಣ ಅವರು ಹೊಳೆನರಸೀಪುರಕ್ಕೆ ಬರ್ತಿದ್ದಂತೆ ಗಾಂಧಿ ವೃತದಲ್ಲಿ ಹಾಲಿನ ಅಭಿಷೇಕ ಮಾಡುವ ಮೂಲಕ ಅವರ ಮೇಲೆ ಬಂದ ಕಳಂಕವನ್ನು ದೂರ ಮಾಡುತ್ತೇವೆ ಎಂದರು. ನಮ್ಮ ಕ್ಷೇತ್ರದಲ್ಲಿ ಅವರು ಮಾಡಿದ ಕೆಲಸವನ್ನು ಮರೆಯಲ್ಲ. ರೇವಣ್ಣಗೆ ಜಾಮೀನು ಸಿಕ್ಕಿರೋದ್ರಿಂದ ಹೊಳೆನರಸೀಪುರದಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗಿದೆ ಅಂತ ಅಭಿಮಾನಿಗಳು ಭಾವುಕರಾದರು.

    ಹೊಳೆನರಸೀಪುರ ಅಲ್ಲದೆ, ಬೇಲೂರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹಾಗೂ ಹಾಸನ ನಗರದ ಡೈರಿ ವೃತ್ತದಲ್ಲಿ ಪಟಾಕಿ ಸಿಡಿಸಿದ ಎಚ್.ಡಿ.ರೇವಣ್ಣ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿ ಹರ್ಷ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ರೇವಣ್ಣಗೆ ಜಾಮೀನು ಸಿಕ್ತಿದ್ದಂತೆ ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ. ಜೆಡಿಎಸ್‍ನಲ್ಲಿ ಮತ್ತ ಹುಮ್ಮಸ್ಸು ಮರಳಿದ್ದು, ರೇವಣ್ಣ ಅವರನ್ನು ಸ್ವಾಗತ ಮಾಡಲು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

  • ಇಂದು ಜೈಲಿನಿಂದ ರಿಲೀಸ್‌ ಆಗಲಿದ್ದಾರೆ ರೇವಣ್ಣ

    ಇಂದು ಜೈಲಿನಿಂದ ರಿಲೀಸ್‌ ಆಗಲಿದ್ದಾರೆ ರೇವಣ್ಣ

    ಬೆಂಗಳೂರು: ಕೆ.ಆರ್.ನಗರ ಸಂತ್ರಸ್ತೆಯನ್ನು ಅಪಹರಣ ಮಾಡಿಸಿದ ಆರೋಪದ ಮೇಲೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಚಿವ ಹೆಚ್‍ಡಿ ರೇವಣ್ಣಗೆ (HD Revanna) ಕಡೆಗೂ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ಇಂದು ಬಿಡುಗಡೆಯಾಗಲಿದ್ದಾರೆ.

    ನಿನ್ನೆ ಬೆಳಗ್ಗೆಯಿಂದ ಸಂಜೆ 4 ಗಂಟೆಯವರೆಗೆ ಜಾಮೀನು ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸಂಜೆ 6:30ಕ್ಕೆ ರೇವಣ್ಣಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಸಂಜೆಯಾದ ಕಾರಣ ಕೋರ್ಟ್ ಸಮಯ ಮುಗಿದಿದ್ದರಿಂದ ಷರತ್ತು ಪೂರೈಸಲು ಸಾಧ್ಯವಾಗಿರಲಿಲ್ಲ. ಮೊದಲಿಗೆ ಜನಪ್ರತಿನಿಧಿಗಳ ಕೋರ್ಟ್‍ನಲ್ಲಿ ಜಾಮೀನು ಪ್ರತಿ ಪಡೆಯಬೇಕು. ಆ ಬಳಿಕ ಸಿಸಿಎಚ್ 42ರಲ್ಲಿ ಷರತ್ತುಗಳ ಪೂರೈಸಲು ವ್ಯವಸ್ಥೆ ಮಾಡಲಾಗಿದೆ. ಮೊದಲಿಗೆ ಷರತ್ತು ಪೂರೈಸಲು ರೇವಣ್ಣ ಪರ ವಕೀಲರು ಸಿದ್ಧತೆ ನಡೆಸಿದ್ದಾರೆ.

    5 ಲಕ್ಷದ ಬಾಂಡ್, ಇಬ್ಬರು ವೈಯಕ್ತಿಕ ಶ್ಯೂರಿಟಿ ನೀಡಬೇಕು. 5 ಲಕ್ಷದ ಬಾಂಡ್‍ಗೆ ಸಹಿ ಮಾಡಿಸಿ ವಕೀಲರು ಕೋರ್ಟ್‍ಗೆ ತಲುಪಿಸಲಿದ್ದಾರೆ. ಎಸಿಎಂಎಂ ಕೋರ್ಟ್ 42ರಲ್ಲಿ ಈ ಎಲ್ಲಾ ಜಾಮೀನಿನ ಷರತ್ತು ಪೂರೈಸಬೇಕು. ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ರೇವಣ್ಣ ಜೈಲಿಂದ ಬಿಡುಗಡೆಯಾಗಲಿದ್ದಾರೆ. ಇದನ್ನೂ ಓದಿ: ಮಂಗಳವಾರ ರೇವಣ್ಣ ಬಿಡುಗಡೆ – ಕೋರ್ಟ್‌ನಲ್ಲಿ ವಾದ, ಪ್ರತಿವಾದ ಹೇಗಿತ್ತು? ಜಾಮೀನು ಷರತ್ತು ಏನು?

  • ಮಂಗಳವಾರ ರೇವಣ್ಣ ಬಿಡುಗಡೆ – ಕೋರ್ಟ್‌ನಲ್ಲಿ ವಾದ, ಪ್ರತಿವಾದ ಹೇಗಿತ್ತು? ಜಾಮೀನು ಷರತ್ತು ಏನು?

    ಮಂಗಳವಾರ ರೇವಣ್ಣ ಬಿಡುಗಡೆ – ಕೋರ್ಟ್‌ನಲ್ಲಿ ವಾದ, ಪ್ರತಿವಾದ ಹೇಗಿತ್ತು? ಜಾಮೀನು ಷರತ್ತು ಏನು?

    ಬೆಂಗಳೂರು: ಕೆ.ಆರ್.ನಗರ ಸಂತ್ರಸ್ತೆಯನ್ನು ಅಪಹರಣ (Kidnap Case) ಮಾಡಿಸಿದ ಆರೋಪದ ಮೇಲೆ ಪರಪ್ಪನ ಅಗ್ರಹಾರ ಜೈಲಲ್ಲಿರುವ ಮಾಜಿ ಮಂತ್ರಿ ಹೆಚ್‌ಡಿ ರೇವಣ್ಣಗೆ (HD Revanna) ಕಡೆಗೂ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

    ಬೆಳಗ್ಗೆಯಿಂದ ಸಂಜೆ 4 ಗಂಟೆಯವರೆಗೆ ಜಾಮೀನು (Bail) ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸಂಜೆ 6:30ಕ್ಕೆ ರೇವಣ್ಣಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಸಂಜೆಯಾದ ಕಾರಣ ಕೋರ್ಟ್ ಷರತ್ತುಗಳನ್ನು ಪೂರೈಸಲು ಆಗಲಿಲ್ಲ. ಹೀಗಾಗಿ ನಾಳೆ ಬೆಳಗ್ಗೆ ಕೋರ್ಟ್ ಕಲಾಪ ಶುರುವಾದ ನಂತರ ಜಾಮೀನು ಷರತ್ತುಗಳನ್ನು ಪೂರೈಸಿದ ನಂತರ ಪರಪ್ಪನ ಅಗ್ರಹಾರ ಜೈಲಿಂದ ಹೆಚ್‌ಡಿ ರೇವಣ್ಣ ರಿಲೀಸ್ ಆಗಲಿದ್ದಾರೆ. ಇದರೊಂದಿಗೆ ರೇವಣ್ಣ ಅವರ ಆರು ದಿನಗಳ ಜೈಲುವಾಸ ಅಂತ್ಯವಾಗಲಿದೆ.

     

    ವಿಚಾರಣೆ ವೇಳೆ ತನಿಖಾ ಪ್ರಗತಿಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯದಲ್ಲಿ ಸಲ್ಲಿಕೆ ಮಾಡಿದ ಕ್ರಮವನ್ನು ರೇವಣ್ಣ ಪರ ವಕೀಲರು ಆಕ್ಷೇಪಿಸಿದರು. ಕೊನೆಗೆ ಜಡ್ಜ್ ಸೂಚನೆ ಮೇರೆಗೆ ತನಿಖಾ ವರದಿಯ ಪ್ರತಿಯನ್ನು ರೇವಣ್ಣ ಪರ ವಕೀಲರಿಗೆ ವಿಶೇಷ ಸಾರ್ವಜನಿಕ ಅಭಿಯೋಜಕ (SPP) ನೀಡಿದರು. ಇದನ್ನೂ ಓದಿ: ಹೇಮಂತ್‌ ಸೊರೆನ್‌ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂ

    ರೇವಣ್ಣಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಎಸ್‌ಪಿಪಿ ಪ್ರಬಲ ವಾದ ಮಂಡಿಸಿದರು. ಯಾಕೆ ಜಾಮೀನು ನೀಡಬಾರದು ಎಂಬುದನ್ನೆಲ್ಲಾ ವಿವರಿಸಿದರು. ಇದಕ್ಕೆ ರೇವಣ್ಣ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ರು. ಯಾವ ಯಾವ ಕಾರಣಕ್ಕೆ ಜಾಮೀನು ನೀಡಬೇಕು ಎಂದು ಪ್ರತಿವಾದ ಮಂಡಿಸಿದರು. ಇದನ್ನೆಲ್ಲಾ ಆಲಿಸಿದ ಜಡ್ಜ್, ರೇವಣ್ಣಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದರು. ಈ ಬೆನ್ನಲ್ಲೇ ಜೈಲ್ ಮುಂದೆ ಕಾದು ನಿಂತಿದ್ದ ರೇವಣ್ಣ ಅಭಿಮಾನಿಗಳು ಸಂಭ್ರಮಿಸಿದರು. ಹೊಳೆನರಸೀಪುರದಲ್ಲೂ ಸಂಭ್ರಮ ಕಂಡುಬಂತು.

     

    ಏನೇನು ಷರತ್ತುಗಳು ಅನ್ವಯ?
    – 5 ಲಕ್ಷ ರೂ. ಮೌಲ್ಯದ ಬಾಂಡ್, ಇಬ್ಬರ ಶ್ಯೂರಿಟಿ
    – ಕೆಆರ್ ನಗರ ಪ್ರವೇಶ ಮಾಡಬಾರದು
    – ಸಾಕ್ಷಿಗಳ ಮೇಲೆ ಒತ್ತಡ ಹೇರಬಾರದು
    – ಎಸ್‌ಐಟಿ ತನಿಖೆಗೆ ಸಹಕಾರ ನೀಡಬೇಕು

    ಎಸ್‌ಐಟಿ ವಾದ ಏನಿತ್ತು?
    ದೂರು ನೀಡುತ್ತಾರೆ ಎಂಬ ಕಾರಣಕ್ಕೆ ಸಂತ್ರಸ್ತೆಯನ್ನು ಅಪಹರಿಸಿದ್ದರು. ಇದು ಇತರೆ ಸಂತ್ರಸ್ತೆಯರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಈ ಪ್ರಕರಣದಲ್ಲಿ ಸಂತ್ರಸ್ತೆ 164 ಹೇಳಿಕೆ ದಾಖಲು ಮಾಡಿದ್ದಾರೆ. ಈಗಾಗಲೇ ಸಹ ಆರೋಪಿಗಳು ತಪ್ಪೊಪ್ಪಿಗೆ ಮಾಡಿಕೊಂಡಿದ್ದಾರೆ. ಅಪರಾಧ ಕೃತ್ಯದ ಗಂಭೀರತೆ ಪರಿಗಣಿಸಿ ಜಾಮೀನು ನಿರಾಕರಿಸಿ. ಜಾಮೀನು ನೀಡಿದರೆ ಸಾಕ್ಷ್ಯನಾಶ, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು.

    ಆರೋಪಿ ಪರ ವಾದ ಏನು?
    ಸಂತ್ರಸ್ತೆಯ ಮೇಲೆ ಯಾವುದೇ ಮಾರಣಾಂತಿಕ ಹಲ್ಲೆ ಆಗಿಲ್ಲ. ಮಹಿಳೆಗೆ ಯಾವುದೇ ತೊಂದರೆ ನೀಡಿಲ್ಲ. ಗಾಯಗೊಳಿಸಿಲ್ಲ. ಈ ಕೇಸಲ್ಲಿ ಯಾರಿಗೆ? ಯಾರು ಬೇಡಿಕೆ ಇಟ್ಟಿದ್ದಾರೆ? ಒಬ್ಬರನ್ನ ತಮ್ಮ ವಶದಲ್ಲಿ ಇಟ್ಟುಕೊಳ್ಳುವುದು ತಪ್ಪಲ್ಲ. ಒತ್ತೆಯಾಳಾಗಿಸಿಕೊಂಡು ದೌರ್ಜನ್ಯ, ಕಿರುಕುಳ ನೀಡುವುದು ಮಾತ್ರ ಅಪರಾಧ. ಇಲ್ಲಿ ಮೇಲ್ನೋಟಕ್ಕೆ ಅಂತಹ ಯಾವುದೇ ಕೃತ್ಯ ನಡೆಸಿದ್ದಕ್ಕೆ ಸಾಕ್ಷಿಗಳಿಲ್ಲದ ಕಾರಣ ಜಾಮೀನು ನೀಡಬಹುದು.

     

  • ಸಂತ್ರಸ್ತೆಯ ಅಪಹರಣ ಕೇಸ್- ಹೆಚ್‌ಡಿ ರೇವಣ್ಣಗೆ ಜಾಮೀನು ಮಂಜೂರು

    ಸಂತ್ರಸ್ತೆಯ ಅಪಹರಣ ಕೇಸ್- ಹೆಚ್‌ಡಿ ರೇವಣ್ಣಗೆ ಜಾಮೀನು ಮಂಜೂರು

    ಬೆಂಗಳೂರು: ಮ್ಯಾರಥಾನ್‌ ವಿಚಾರಣೆಯ ಬಳಿಕ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ (Kidnap Case) ಮಾಜಿ ಸಚಿವ ಹೆಚ್‌ಡಿ ರೇವಣ್ಣಗೆ (HD Revanna) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

    ಶಾಸಕರು- ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಅವರಿದ್ದ ಪೀಠ  5 ಲಕ್ಷ ಬಾಂಡ್‌,  ಇಬ್ಬರು ಶ್ಯೂರಿಟಿ, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು, ಎಸ್‌ಐಟಿ ತನಿಖೆಗೆ ಸಹಕರಿಸಬೇಕು ಎಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿತು.

     

    ಇಂದು ಬೆಳಗ್ಗೆಯಿಂದ ಸಂಜೆಯವರೆಗೆ ಕೋರ್ಟ್‌ ಸುಧೀರ್ಘ ವಿಚಾರಣೆ ನಡೆಸಿತು. ವಿಶೇಷ ತನಿಖಾ ತಂಡ (SIT) ಪರ ವಕೀಲರು ರೇವಣ್ಣ ಪ್ರಭಾವಿಯಾಗಿದ್ದು ಸಾಕ್ಷ್ಯ ನಾಶ ಮಾಡುವ ಆತಂಕವಿದೆ ಯಾವುದೇ ಕಾರಣಕ್ಕೂ ಜಾಮೀನು ಮಂಜೂರು ಮಾಡಬಾರದು ಎಂದು ವಾದಿಸಿದರು.

    ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆ ವಿಧಿಸುವ ಅಪರಾಧ ಇದ್ದರೆ ಜಾಮೀನು ತಿರಸ್ಕರಿಸಬಹುದು. ಆದರೆ ನನ್ನ ಕಕ್ಷಿದಾರ ರೇವಣ್ಣ ಪ್ರಕರಣದಲ್ಲಿ ಇಲ್ಲಿ ಯಾವುದೇ ಸತ್ಯ ಮತ್ತು ಸಾಂದರ್ಭಿಕ ಸಾಕ್ಷಿಗಳಿಲ್ಲ. ರೇವಣ್ಣ ಮನೆಯಲ್ಲಿ ಮಹಿಳೆ 10 ವರ್ಷ ಕೆಲಸ ಮಾಡಿದ್ದಾರೆ. ಹೀಗಾಗಿ ಯಾವುದೇ ಅಪಹರಣ ಮಾಡಿಲ್ಲ. ಜಾಮೀನು ನೀಡಬಹುದು ಎಂದು ವಕೀಲ ನಾಗೇಶ್‌ ವಾದಿಸಿದರು.

    ಎರಡು ಕಡೆಯ ವಾದ ಆಲಿಸಿದ ನ್ಯಾಯಾಧೀಶರು ಸಂಜೆ 4 ಗಂಟೆಗೆ ವಿಚಾರಣೆ ಪೂರ್ಣಗೊಳಿಸಿ ಸಂಜೆ 6:30ಕ್ಕೆ ಆದೇಶ ಪ್ರಕಟಿಸಿದರು.

    ಮೇ 8 ರಂದು ಬೆಂಗಳೂರಿನ 17ನೇ ಎಸಿಎಂಎಂ ನ್ಯಾಯಾಲಯ 7 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿತ್ತು. ಈ ಆದೇಶದ ಅನ್ವಯ ರೇವಣ್ಣ ಪರಪ್ಪನ ಅಗ್ರಹಾರಕ್ಕೆ ವಿಚಾರಣಾಧೀನ ಕೈದಿಯಾಗಿ ಹೋಗಿದ್ದರು.  ಮಂಗಳವಾರ ಸಂಜೆ ರೇವಣ್ಣ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

     

  • ಏನೂ ತಪ್ಪು ಮಾಡ್ದೆ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ರೇವಣ್ಣ ಕಣ್ಣೀರಿಟ್ರು: ಜಿ.ಟಿ ದೇವೇಗೌಡ

    ಏನೂ ತಪ್ಪು ಮಾಡ್ದೆ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ರೇವಣ್ಣ ಕಣ್ಣೀರಿಟ್ರು: ಜಿ.ಟಿ ದೇವೇಗೌಡ

    – ರೇವಣ್ಣಗೆ ಈಗಲೂ ಅಭಿವೃದ್ಧಿಯದ್ದೇ ಚಿಂತೆ

    ಬೆಂಗಳೂರು: ಏನೂ ತಪ್ಪು ಮಾಡದೇ ಪ್ರಕರಣದಲ್ಲಿ ಸಿಲುಕಿಸಿ, ಜೈಲಿಗೆ ಹಾಕಿದ್ದಾರೆ ಎಂಬ ನೋವಿನಲ್ಲಿ ರೇವಣ್ಣ (H.D Revanna) ಹತ್ತು ನಿಮಿಷಗಳ ಕಾಲ ಕಣ್ಣೀರು ಹಾಕಿದರು ಎಂದು ಜೆಡಿಎಸ್ ಮುಖಂಡ ಜಿ.ಟಿ ದೇವೇಗೌಡ (G.T Devegowda) ಅವರು ಹೇಳಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara) ರೇವಣ್ಣ ಅವರನ್ನು ಬೇಟಿಯಾದ ಬಳಿಕ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ.

    ರೇವಣ್ಣ ಜೈಲಿಗೆ ಹೋದ ದಿನದಿಂದ ಅವರ ಭೇಟಿಗೆ ಬಂದಿರಲಿಲ್ಲ. ಇಂದು (ಸೋಮವಾರ) ಅವರನ್ನು ಭೇಟಿಯಾಗಿದ್ದೇನೆ. ಅವರು ಆರಾಮವಾಗಿ ಕೂತಿದ್ದು, ಜೊತೆಯಲ್ಲಿ ಚಹಾ ಕುಡಿದು, ಹಳೆಯ ವಿಚಾರಗಳನ್ನು ಮೆಲುಕು ಹಾಕಿದ್ರು. ಅವರಿಗೆ ಈಗಲೂ ಅಭಿವೃದ್ಧಿ ಕಾರ್ಯಕ್ರಮಗಳದ್ದೇ ಚಿಂತೆ. ಅಲ್ಲದೇ ನಾನೇನೂ ತಪ್ಪು ಮಾಡಿದ್ದೇನೆ ಎಂಬ ಚಿಂತೆಯಲ್ಲಿದ್ದಾರೆ ಎಂದರು.

    ನನ್ನ ಬಳಿ ಅವರು ಮಾತನಾಡಿ, ಸಂತ್ರಸ್ತ ಮಹಿಳೆ ಜೊತೆ ಮಾತನಾಡಿ ಆರು ವರ್ಷಗಳಾಗಿವೆ. ನನ್ನನ್ನು ಈ ಪ್ರಕರಣದಲ್ಲಿ ಸೇರಿಸಿ ಹೀಗೆ ಮಾಡಿದ್ದಾರೆ. ನಾನು ತಪ್ಪು ಮಾಡಿದ್ರೆ ಇನ್ನೂ ಶಿಕ್ಷೆ ಕೊಡಲಿ ಅನುಭವಿಸಬಹುದಿತ್ತು ಎಂದು ರೇವಣ್ಣ ಭಾವುಕರಾದರು ಎಂದು ಅವರು ಹೇಳಿದ್ದಾರೆ.

    ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಿದ ಅವರು, ರಾಜಕೀಯ ಹೇಗೆ ನಡೆಯುತ್ತಿದೆ? ನಾವು ಎಲ್ಲೆಲ್ಲಿ ಎಡವಿದ್ದೇವೆ? ನಮ್ಮ ಸರ್ಕಾರದ ಇದ್ದಾಗ ಕಾರ್ಯಕರ್ತರಿಗೆ ಏನೂ ಮಾಡಲು ಆಗಲಿಲ್ಲ. ಅಲ್ಪಾವಧಿ ಅಧಿಕಾರ ಬಂತು. ಅಧಿಕಾರ ಅನುಭವಿಸಿದವರು ಹೊರಟು ಹೋದ್ರು. ಮಂತ್ರಿಯಾಗಿದ್ದವರು ಹೊರಟು ಹೋದ್ರು. ನೀವು ಗೌಡರಿಗೋಸ್ಕರ ಪಕ್ಷದಲ್ಲಿ ಉಳಿದು ಗೌಡರಿಗೆ ನೆಮ್ಮದಿ ಕೊಟ್ಟಿದ್ದೀರಿ ಎಂದು ವಿಚಾರ ಹಂಚಿಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣ (Prajwal Revanna) ವಿಚಾರವಾಗಿ ಯಾವುದೇ ಚರ್ಚೆ ಮಾಡಲಿಲ್ಲ. ರೇವಣ್ಣ ಕೂಡ ಪ್ರಜ್ವಲ್ ಬಗ್ಗೆ ಏನೂ ಹೇಳಲಿಲ್ಲ ಎಂದರು.

    ನವೀನ್ ಗೌಡ ಮತ್ತು ಕಾರ್ತಿಕ್ ಗೌಡ ಇನ್ನೂ ಬಂಧನವಾಗದ ಬಗ್ಗೆ, ಎಸ್‍ಐಟಿ ಅಧಿಕಾರಿಗಳು ತನಿಖೆ ಮಾಡ್ತಾರೆ. ನಮಗೆ ಅವರ ಮೇಲೆ ನಂಬಿಕೆ ಇದೆ. ಸಿಬಿಐಗೆ ಕೊಡುವ ಅಗತ್ಯವಿಲ್ಲ ಎಂದು ಸಿಎಂ ಹೇಳಿದ್ದಾರೆ. ನ್ಯಾಯಯುತವಾಗಿ ತನಿಖೆ ಮಾಡ್ತಾರೆ ಎಂದು ಪದೇ ಪದೇ ಸಿಎಂ ಹೇಳ್ತಿದ್ದಾರೆ. ಪೆನ್‍ಡ್ರೈವ್ ಯಾರು ರಿಲೀಸ್ ಮಾಡಿದ್ರು? ಯಾರೂ ತಪ್ಪು ಮಾಡಿದ್ದಾರೆ ಎಲ್ಲವನ್ನೂ ತನಿಖೆ ಮಾಡಿ ಕಂಡುಹಿಡಿದು ಸಿಎಂ ಇತಿಹಾಸ ಸೃಷ್ಟಿಸಲಿ ಎಂದು ಅವರು ಹೇಳಿದ್ದಾರೆ.

    ಅರಕಲಗೂಡು ಶಾಸಕ ಎ.ಮಂಜು ಅವರಿಗೂ ಪ್ರಕರಣ ಸುತ್ತಿಕೊಂಡಿದೆ. ಪೆನ್‍ಡ್ರೈವ್ ರಿಲೀಸ್ ಮಾಡಿದವರ ಬಗ್ಗೆ ತನಿಖೆ ಪ್ರಾರಂಭವಾಗಿದೆ. ಈ ಬಗ್ಗೆ ತನಿಖೆ ಮಾಡಿ ಪತ್ತೆ ಮಾಡುತ್ತಾರೆಂದು ಸಿಎಂ ಬೆನ್ನು ತಟ್ಟಿಕೊಂಡಿದ್ದಾರೆ. ನಮಗೂ ಕೂಡ ನಂಬಿಕೆ ಬಂದಿದೆ. ಎಲ್ಲರ ಕೈವಾಡ ಹೊರಗೆ ಬರಲಿದೆ. ಸ್ವಲ್ಪ ದಿನ ಕಾಯಬೇಕು ಎಂದು ಅವರು ಹೇಳಿದ್ದಾರೆ.

    ರೇವಣ್ಣ ಜಾಮೀನಿನ ಅರ್ಜಿ ವಿಚಾರಣೆ ನಡೆಯುತ್ತಿದೆ. ಇಂದು ಅವರಿಗೆ ಜಾಮೀನು ಸಿಗುವ ನಂಬಿಕೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ಎಫ್‍ಐಆರ್ ದಾಖಲಾಗಿರೋ ಐವರನ್ನು ಇದುವರೆಗೂ ಬಂಧಿಸಿಲ್ಲ: ಸ್ವರೂಪ್

    ಎಫ್‍ಐಆರ್ ದಾಖಲಾಗಿರೋ ಐವರನ್ನು ಇದುವರೆಗೂ ಬಂಧಿಸಿಲ್ಲ: ಸ್ವರೂಪ್

    ಹಾಸನ: ಮಾಜಿ ಸಚಿವ ಹೆಚ್.ಡಿ ರೇವಣ್ಣ ಬಂಧನದ ಹಿಂದೆ ರಾಜಕೀಯ ಹಾಗೂ ಪೆನ್‍ಡ್ರೈವ್ ಪ್ರಕರಣ ಹಿಂದೆ ಪ್ರಭಾವಿಗಳ ಕೈವಾಡ ಇದೆ ಎಂದು ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ (HP Swaroop Prakash) ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪೆನ್‍ಡ್ರೈವ್ ಹಂಚಿಕೆ ಹಿಂದೆ ಪ್ರಭಾವಿಗಳ ಕೈವಾಡವಿದೆ. ಇದರ ಬಗ್ಗೆ ಎಸ್‍ಐಟಿ (SIT) ಸಮಗ್ರ ತನಿಖೆ ಮಾಡಬೇಕು. ಈಗ ಬಂಧಿತವಾಗಿರುವ ಯಾರೆಂದು ನನಗೂ ಗೊತ್ತಿಲ್ಲ. ಆದರೆ ಮಹಿಳೆಯರ ಮುಖವನ್ನು ಬ್ಲರ್ ಮಾಡದೆ ವೀಡಿಯೋ ವೈರಲ್ ಮಾಡಿದ್ದಾರೆ ಎಂದರು.

    ಪೆನ್‍ಡ್ರೈವ್ ಹಂಚಿಕೆ ಹಿಂದೆ ಯಾರೇ ಇದ್ದರೂ ತನಿಖೆ ನಡೆಸಿ ಬಂಧನ ಮಾಡಬೇಕು. ಎಫ್‍ಐಆರ್ ದಾಖಲಾಗಿರುವ ಐದು ಜನರನ್ನು ಇದುವರೆಗೂ ಬಂಧನ ಮಾಡಿಲ್ಲ. ಅಷ್ಟೊಂದು ಪೆನ್‍ಡ್ರೈವ್ ಹಂಚಿಕೆ ಮಾಡಿದವರು ಎಂದು ಸತ್ಯಾಂಶ ಹೊರಬರಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ವೀಡಿಯೋ ನೋಡಿದವರೆಲ್ಲ ತಪ್ಪಿತಸ್ಥರು ಅಂದ್ರೆ ಹಾಸನದ 15 ಲಕ್ಷ ಜನ ತಪ್ಪಿತಸ್ಥರಾಗ್ತಾರೆ: ಪ್ರೀತಂಗೌಡ

    ಎಚ್.ಡಿ.ರೇವಣ್ಣ ಬಂಧನ ಇದೆ ರಾಜಕೀಯ ಷಡ್ಯಂತ್ರವಿದೆ. ದೇವೇಗೌಡರ (HD Devegowda) ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ. ರೇವಣ್ಣ ಬಂಧನ ಮಾಡಿರುವುದರ ಹಿಂದೆ ರಾಜಕೀಯವಿದೆ. ಎಸ್‍ಐಟಿ ಸರ್ಕಾರದ ಅಣತಿಯಂತೆ ನಡೆಯುತ್ತಿದೆ. ಎಸ್‍ಐಟಿಯಿಂದ ಸರಿಯಾದ ತನಿಖೆ ಆಗಲ್ಲ. ಇಂತಹ ದೊಡ್ಡ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಯಾರೇ ತಪ್ಪು ಮಾಡಿದ್ದರು ಶಿಕ್ಷೆಯಾಗಲಿ. ಎ.ಮಂಜು ಶಾಸಕರು, ಶಾಸಕರ ಮೇಲೆ ಆರೋಪಗಳು ಸಹಜ. ಮೊದಲು ನವೀನ್ ಗೌಡ ಬಂಧಿಸುವಂತೆ ಸ್ವರೂಪ ಒತ್ತಾಯ ಮಾಡಿದರು.

  • ಮುಂಜಾನೆಯೇ ಎದ್ದು ವಾಕಿಂಗ್- ಜೈಲಿನಲ್ಲಿರುವ ರೇವಣ್ಣ ಇನ್ ಟೆನ್ಶನ್

    ಮುಂಜಾನೆಯೇ ಎದ್ದು ವಾಕಿಂಗ್- ಜೈಲಿನಲ್ಲಿರುವ ರೇವಣ್ಣ ಇನ್ ಟೆನ್ಶನ್

    ಬೆಂಗಳೂರು: ಜಾಮೀನು ಸಿಗುವ ನಿರೀಕ್ಷೆಯಲ್ಲಿರುವ ಮಾಜಿ ಸಚಿವ ಎಚ್.ಡಿ ರೇವಣ್ಣ (HD Revanna) ಅವರು ಸದ್ಯ ಟೆನ್ಶನ್ ಆಗಿದ್ದಾರೆ

    ಕಿಡ್ನಾಪ್ ಕೇಸ್‍ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ (Parappana Agrahara Jail) ರೇವಣ್ಣ ಅವರು ಇಂದು ಮುಂಜಾನೆ 4.30ಕ್ಕೆ ನಿದ್ರೆಯಿಂದ ಎದ್ದು ಜೈಲಿನ ಬ್ಯಾರಕ್ ನಲ್ಲಿ ಕೆಲ ಹೊತ್ತು ವಾಕಿಂಗ್ ಮಾಡಿದ್ದಾರೆ. ಬಳಿಕ ಜೈಲ್ ಸಿಬ್ಬಂದಿ ಕಾಫಿ ನೀಡಿದ್ದಾರೆ. ಕಾಫಿ ಕುಡಿದ ಬಳಿಕ ದಿನಪತ್ರಿಕೆಯಲ್ಲಿನ ವಿದ್ಯಮಾನಗಳ ಕಡೆ ಕಣ್ಣಾಡಿಸಿದ್ದಾರೆ. ಜೈಲಿನ ಮೇನು ಪ್ರಕಾರ ಸಿಬ್ಬಂದಿ ಇಂದು ಉಪ್ಪಿಟ್ಟು ನೀಡಿದ್ದಾರೆ.

    ಕಳೆದ ಐದು ದಿನಗಳಿಂದ ರೇವಣ್ಣ (HD Revanna) ಜೈಲಿನಲ್ಲಿದ್ದಾರೆ. ಒಬ್ಬ ಸಾಮಾನ್ಯ ವಿಚಾರಣಾಧೀನ ಬಂಧಿಯಂತೆ ದಿನ ಕಳೆಯುತ್ತಿದ್ದು, ಇಂದು ಬೇಲ್ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಬೇಲ್ ಸಿಕ್ರೆ ಬಿಡುಗಡೆ ಭಾಗ್ಯ, ಇಲ್ಲ ಅಂದ್ರೆ ಜೈಲಿನಲ್ಲಿ ಸೆರೆವಾಸ ಮುಂದುವರಿಕೆಯಾಗಲಿದೆ. ಇದನ್ನೂ ಓದಿ: ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ ಚಲಾಯಿಸಿ: ಮೋದಿ ಕರೆ

    ಸಂತ್ರಸ್ತೆ ಕಿಡ್ನಾಪ್ ಸಂಬಂಧ ಹೆಚ್.ಡಿ ರೇವಣ್ಣ ಹಾಗೂ ಸತೀಶ್ ಬಾಬಣ್ಣ ವಿರುದ್ಧ ಕೆ.ಆರ್ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಈ ಪ್ರಕರಣದಲ್ಲಿ ರೇವಣ್ಣ ಮೊದಲನೇ ಆರೋಪಿಯಾಗಿದ್ದಾರೆ. ಕಿಡ್ನಾಪ್ ಪ್ರಕರಣದ ತನಿಖೆ ನಡೆಸುತ್ತಿರೋ ಎಸ್‍ಐಟಿ, ರೇವಣ್ಣರನ್ನ ನಾಲ್ಕು ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದೆ. ವಿಚಾರಣೆ ಬಳಿಕ ರೇವಣ್ಣ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

    ಎಸ್ ಪಿಪಿ ಜೈನಾ ಕೊಥಾರಿ ಹಾಗೂ ಆಶೋಕ್ ನಾಯಕ್ ಅವರು ಎಸ್‍ಐಟಿ ಪರ ವಾದ ಮಂಡಿಸಲಿದ್ದು, ಇತ್ತ ಹಿರಿಯ ವಕೀಲ ಸಿ ವಿ ನಾಗೇಶ್ ಅವರು ರೇವಣ್ಣ ಪರ ವಾದ ಮಂಡಿಸಲಿದ್ದಾರೆ. ಈಗಾಗಲೇ ಜಾಮೀನಿಗೆ ಎಸ್‍ಐಟಿ ಆಕ್ಷೇಪಣೆ ಸಲ್ಲಿಸಿದೆ. ಮಾಜಿ ಸಚಿವರು ಕಳೆದ ಬುಧವಾರ ಪರಪ್ಪನ ಆಗ್ರಹಾರ ಜೈಲು ಸೇರಿದ್ದರು. ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ರೇವಣ್ಣಗೆ ಜೈಲಿನಿಂದ ಮುಕ್ತಿ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.