Tag: HD Revanna

  • ವಾಸ್ತು ಪ್ರಕಾರ ಶಿರಾಡಿ ಘಾಟ್ ಉದ್ಘಾಟಿಸಿದ ಸಚಿವ ಹೆಚ್.ಡಿ.ರೇವಣ್ಣ

    ವಾಸ್ತು ಪ್ರಕಾರ ಶಿರಾಡಿ ಘಾಟ್ ಉದ್ಘಾಟಿಸಿದ ಸಚಿವ ಹೆಚ್.ಡಿ.ರೇವಣ್ಣ

    ಹಾಸನ: ಸಚಿವ ಹೆಚ್.ಡಿ.ರೇವಣ್ಣ ಇಂದು ವಾಸ್ತು ಪ್ರಕಾರವೇ ಶಿರಾಡಿ ಘಾಟ್ ಉದ್ಘಾಟಿಸಿದ್ದಾರೆ.

    ಅಧಿಕಾರಿಗಳು ಶಿರಾಡಿ ಘಾಟ್ ಉದ್ಘಾಟನೆಯನ್ನು ಪಶ್ಚಿಮಾಭಿಮುಖವಾಗಿ ಸಿದ್ಧಪಡಿಸಿದ್ದರು. ಸ್ಥಳಕ್ಕಾಗಮಿಸಿದ ಸಚಿವರು ಶುಭಕಾರ್ಯಗಳನ್ನು ಪೂರ್ವಾಭಿಮುಖವಾಗಿ ಮಾಡಬೇಕು ಎಂದು ಟೇಪ್ ಕೆಳಗೆ ನುಸುಳಿ ಎಲ್ಲರಿಗೂ ಪೂರ್ವಾಭಿಮುಖವಾಗಿ ನಿಲ್ಲುವಂತೆ ಸೂಚಿಸಿದರು.

    ಸಚಿವರು ದಿಕ್ಕು ಬದಲಿಸಿದ್ದರಿಂದ ಸ್ಥಳದಲ್ಲಿ ನೂಕು ನುಗ್ಗಲು ಉಂಟಾಯಿತು. ದಿಕ್ಕು ಬದಲಿಸಿ ಪೂರ್ವಾಭಿಮುಖವಾಗಿ ನಿಂತ ಸಚಿವರು ಟೇಪ್ ಕತ್ತರಿಸಿ ಶಿರಾಡಿ ಘಾಟ್ ಸಂಚಾರವನ್ನು ಮುಕ್ತಗೊಳಿಸಿದರು. ತಡೆಗೋಡೆ, ಸೂಚನಾ ಫಲಕ, ಸಣ್ಣ-ಪುಟ್ಟ ಕಾಮಗಾರಿಗಳು ಪ್ರಗತಿ ಬಾಕಿ ಹಿನ್ನೆಲೆಯಲ್ಲಿ ಕೇವಲ ಲಘು ವಾಹನಗಳಿಗೆ ಮಾತ್ರ ಸಂಚಾರ ಮುಕ್ತಗೊಳಿಸಲಾಗಿದೆ.

    ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಿರುವ ಒಟ್ಟು 26 ಕಿ.ಮೀ ಉದ್ದದ ಶಿರಾಡಿಘಾಟ್ ಕಾಂಕ್ರೀಟ್ ರಸ್ತೆ ಸುಮಾರು 30 ವರ್ಷ ಬಾಳಿಕೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಜನವರಿ 20 ರಿಂದ ಆರಂಭವಾಗಿದ್ದ 74 ಕೋಟಿ ರೂ. ವೆಚ್ಚ, 12.38 ಕಿಮೀ ಉದ್ದದ ಕಾಂಕ್ರೀಟ್ ರಸ್ತೆ ಕಾಮಗಾರಿ ಮುಗಿದಿದ್ದು ಇಂದು ಸಂಚಾರ ಮುಕ್ತವಾಗಿದೆ.

  • ಭಾನುವಾರ ಬೆಳಗ್ಗೆ 10.30ರಿಂದ ಶಿರಾಡಿಘಾಟ್ ಸಂಚಾರಕ್ಕೆ ಮುಕ್ತ- ಸಚಿವ ಎಚ್.ಡಿ ರೇವಣ್ಣ

    ಭಾನುವಾರ ಬೆಳಗ್ಗೆ 10.30ರಿಂದ ಶಿರಾಡಿಘಾಟ್ ಸಂಚಾರಕ್ಕೆ ಮುಕ್ತ- ಸಚಿವ ಎಚ್.ಡಿ ರೇವಣ್ಣ

    ಹಾಸನ: ನಾಳೆಯಿಂದ ಶಿರಾಡಿಘಾಟ್ ಸಂಚಾರಕ್ಕೆ ಮುಕ್ತವಾಗಲಿದ್ದು, ಉಳಿದಿರುವ ಕಾಮಗಾರಿಗಳ ಬಗ್ಗೆ ತ್ವರಿತ ಕಾಮಗಾರಿಗೆ ಸೂಚನೆ ನೀಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್‍ಡಿ ರೇವಣ್ಣ ಅವರು ಭನುವಾರ ಬೆಳಗ್ಗೆ 10.30ಕ್ಕೆ ಸಕಲೇಶಪುರದಲ್ಲಿ ಮೊದಲು ಚಾಲನೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಅವರು ತಿಳಿಸಿದ್ರು.

    ಇದೇ ವೇಳೆ ಬಿಳಿಕೆರೆ-ಬೇಲೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರವಾಗಿ ಆರಂಭವಾಗಲಿದೆ. ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ತ್ವರಿತ ಗತಿಯಲ್ಲಿ ಸಾಗಿದೆ. ಭೂಸ್ವಾಧೀನ ಕುರಿತು ಅಧಿಕಾರಿಗಳ ಸಭೆ ನಡೆಸಲಾಗಿದೆ. ಎಲ್ಲಾ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಅಂತ ಹೇಳಿದ್ರು.

    ಬ್ರಾಹ್ಮಣ ಅಧಿಕಾರಿ ಕಾಲ್ಗುಣದಿಂದಾಗಿ ಈ ಬಾರಿ ಮಳೆ ಬೆಳೆ ಚೆನ್ನಾಗಿದೆ. ಗೊರೂರು ಜಲಾಶಯ ಬಳಿ ಬೃಂದಾವನ ಮಾದರಿಯಲ್ಲೇ ಪ್ರವಾಸಕೇಂದ್ರ ಮಾಡಲು 98 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ ಅಂತ ಅವರು ತಿಳಿಸಿದ್ರು.

    ಕಳೆದ ನಾಲ್ಕು ವರ್ಷಗಳಿಂದ ತುಂಬದ ಹೇಮಾವತಿ ಇದೀಗ ಭರ್ತಿಯಾಗಿದೆ. ಅಧಿಕಾರಿಗಳಿಗೆ ನೀರಿನ ಸದ್ಬಳಕೆಗೆ ಸೂಚನೆ ನೀಡಲಾಗಿದೆ. ಕಾಮಸಮುದ್ರ, ಕಾಚೇನಹಳ್ಳಿ, ಹುಚ್ಚನಕೊಪ್ಪಲು, ಬಾಗೂರು ನವಿಲೆ ಸೇರಿದಂತೆ ಎಲ್ಲ ಕಡೆ ಕೃಷಿ ಆರಂಭಿಸಲು ಸೂಚಿಸಿಲಾಗಿದೆ. ದೈವಾನುಗ್ರಹ ಕುಮಾರಸ್ವಾಮಿ ಸರ್ಕಾರದಲ್ಲಿ ನೀರು ತುಂಬಿದ್ದು, ಸಂತಸ ತಂದಿದೆ. ಭತ್ತ ಬೆಳೆಯುವವರಿಗೆ ನೀರು ಲಭ್ಯವಾಗಲಿದೆ. ಮಳೆಯಿಂದಾಗಿರುವ ನಷ್ಟಕ್ಕೆ ಕ್ರಮಕೈಗೊಳ್ಳಲಾಗುವುದು ಅಂತ ಅವರು ಭರವಸೆ ನೀಡಿದರು.

    ಕಳೆದ ಜನವರಿ 20 ರಿಂದ ಆರಂಭವಾಗಿದ್ದ 74 ಕೋಟಿ ರೂ. ವೆಚ್ಚ, 12.38 ಕಿಮೀ ಉದ್ದದ ಕಾಂಕ್ರೀಟ್ ರಸ್ತೆ ಕಾಮಗಾರಿ ಮುಗಿದಿದೆ. ಸೈಡ್ ವಾಲ್, ಸೂಚನಾ ಫಲಕ ಅಳವಡಿಕೆ ಸೇರಿದಂತೆ ಕೆಲವು ಸಣ್ಣಪುಟ್ಟ ಕೆಲಸ ಹೊರತುಪಡಿಸಿದರೆ ಸಿಮೆಂಟ್ ಹಾಕುವ ಕೆಲಸ ಮುಗಿದಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ವೇಳೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಿರುವ ಒಟ್ಟು 26 ಕಿ.ಮೀ ಉದ್ದದ ಶಿರಾಡಿಘಾಟ್ ಕಾಂಕ್ರೀಟ್ ರಸ್ತೆ ಸುಮಾರು 30 ವರ್ಷ ಬಾಳಿಕೆ ಬರಲಿದೆ ಎಂದು ಹೆದ್ದಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

  • ಹೇಮಾವತಿ ಜಲಾಶಯ ಭರ್ತಿ- ಸಚಿವ ರೇವಣ್ಣ ದಂಪತಿಯಿಂದ ವಿಶೇಷ ಪೂಜೆ

    ಹೇಮಾವತಿ ಜಲಾಶಯ ಭರ್ತಿ- ಸಚಿವ ರೇವಣ್ಣ ದಂಪತಿಯಿಂದ ವಿಶೇಷ ಪೂಜೆ

    ಹಾಸನ: ಅನೇಕ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜೀವನದಿ ಹೇಮಾವತಿ ಜಲಾಶಯ ಭರ್ತಿಯಾಗಿದ್ದು, ಲೋಕೋಪಯೋಗಿ ಸಚಿವ ರೇವಣ್ಣ ದಂಪತಿಯಿಂದ ವಿಶೇಷ ಪೂಜೆ ನೆರವೇರಿದೆ.

    ಸತತ ನಾಲ್ಕು ವರ್ಷಗಳಿಂದ ಗೊರೂರಿನಲ್ಲಿರುವ ಹೇಮಾವತಿ ನದಿ ತುಂಬಿರಲಿಲ್ಲ. ಆದರೆ ಮಳೆಯಿಂದಾಗಿ ಹೇಮಾವತಿ ಜಲಾಶಯ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಎಚ್.ಡಿ. ರೇವಣ್ಣ ದಂಪತಿ ವಿಶೇಷ ಪೂಜೆ ಮಾಡಿದ್ದಾರೆ. ಇದನ್ನೂ ಓದಿ: ಸತತ 4 ವರ್ಷಗಳ ನಂತರ ಹೇಮಾವತಿ ಭರ್ತಿ

    ಹೇಮಾವತಿ ಭರ್ತಿಯಾದ ಹಿನ್ನೆಲೆಯಲ್ಲಿ ಜಲಾಶಯದ ಕ್ರಸ್ಟ್ ಗೇಟ್ ಗಳ ಮೂಲಕ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಹೇಮಾವತಿ ನದಿ ಪಾತ್ರದಲ್ಲಿರುವ ಜನರಿಗೆ ಎಚ್ಚರಿಕೆ ನೀಡಲಾಗಿದೆ. ನಾಲ್ಕು ವರ್ಷಗಳ ನಂತರ ಜಲಾಶಯದಿಂದ ನೀರು ಹರಿಯುತ್ತಿದ್ದು, ಜಲಧಾರೆ ನೋಡಲು ಜನರು ಮುಗಿಬಿದ್ದಿದ್ದಾರೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

    ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2,922 ಅಡಿಗಳಾಗಿದ್ದು, ಈಗ ನೀರಿನ ಮಟ್ಟ 2,919.37 ಅಡಿ ಇದೆ. ಜಲಾಶಯದಲ್ಲಿ 24,743 ಕ್ಯೂಸೆಕ್ ಒಳಹರಿವು ಇದೆ.

  • ಆಷಾಢ ಮಾಸ ನಿಮಗೆ ಮಾತ್ರ, ನಮಗೆ ಏನು ಇಲ್ಲ: ಸಿದ್ದರಾಮಯ್ಯ ಪಟ್ಟಿಗೆ ದೇವೇಗೌಡರು ಗ್ರೀನ್ ಸಿಗ್ನಲ್ ಕೊಡ್ತಾರಾ?

    ಆಷಾಢ ಮಾಸ ನಿಮಗೆ ಮಾತ್ರ, ನಮಗೆ ಏನು ಇಲ್ಲ: ಸಿದ್ದರಾಮಯ್ಯ ಪಟ್ಟಿಗೆ ದೇವೇಗೌಡರು ಗ್ರೀನ್ ಸಿಗ್ನಲ್ ಕೊಡ್ತಾರಾ?

    ಬೆಂಗಳೂರು: ಆಷಾಢ ಮಾಸ ನಿಮಗೆ ಮಾತ್ರ, ನಮಗೆ ಏನು ಇಲ್ಲ. ಈಗಲೇ ನಿಗಮ ಮಂಡಳಿ ನೇಮಕಾತಿ ಆಗಬೇಕು ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಪಟ್ಟು ಹಿಡಿದಿದ್ದಾರೆ.

    ಶಾಸಕರಿಗೆ ಸಬೂಬು ಹೇಳಲು ನಮ್ಮಿಂದ ಆಗುತ್ತಿಲ್ಲ. ಹೀಗಾಗಿ ಈ ಮೊದಲೇ ನಿರ್ಧರಿಸಿದಂತೆ ನಿಗಮ ಮಂಡಳಿಯ ಒಟ್ಟು 30 ಸ್ಥಾನಗಳಲ್ಲಿ ಕಾಂಗ್ರೆಸ್ಸಿಗೆ 20 ಹಾಗೂ ಜೆಡಿಎಸ್‍ಗೆ 10 ಸ್ಥಾನ ಹಂಚಿಕೆಯಾಗಬೇಕು. ನೇಮಕ ಪ್ರಕ್ರಿಯೆ ಈಗಲೇ ಆಗಬೇಕು ಎಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಒತ್ತಾಯಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ನಿಗಮ ಮಂಡಳಿ ನೇಮಕದಿಂದ ಮುನಿಸಿಕೊಂಡಿರುವ ಕಾಂಗ್ರೆಸ್ ಶಾಸಕರನ್ನು ಸಮಾಧಾನ ಪಡಿಸಲು ಸಿದ್ದರಾಮಯ್ಯ ಅವರು ನಿರ್ಧರಿಸಿದ್ದಾರೆ. ಹೀಗಾಗಿ ಆಷಾಢದಲ್ಲಿಯೇ ಕಾಂಗ್ರೆಸ್ ಶಾಸಕರಿಗೆ ಬಂಪರ್ ಗಿಫ್ಟ್ ಸಿಗುವ ಸಾಧ್ಯತೆ ಇದೆ.

    ಆಷಾಢ ಮುಗಿಯುವವರೆಗೆ ಯಾವುದೇ ನೇಮಕಾತಿ ಬೇಡ ಎಂದು ದೇವೇಗೌಡ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಹೇಳಿದ್ದರು. ಆದರೆ ಈಗ ಸಿದ್ದರಾಮಯ್ಯ ಅವರು ಪಟ್ಟು ಹಿಡಿದಿದ್ದರಿಂದ ಸಮ್ಮಿಶ್ರ ಸರ್ಕಾರಕ್ಕೆ ಮತ್ತೊಂದು ಸವಾಲು ಎದುರಾಗಿದೆ.

     

  • ಹೆಚ್‍ಡಿ ರೇವಣ್ಣಗೆ ಪರೋಕ್ಷವಾಗಿ ಮಾಜಿ ಸಿಎಂ ಟಾಂಗ್

    ಹೆಚ್‍ಡಿ ರೇವಣ್ಣಗೆ ಪರೋಕ್ಷವಾಗಿ ಮಾಜಿ ಸಿಎಂ ಟಾಂಗ್

    ಬೆಂಗಳೂರು: ವಿಧಾನಸಭೆಯಲ್ಲಿ ಮೊದಲ ಬಾರಿಗೆ ಚರ್ಚೆಯಲ್ಲಿ ಪಾಲ್ಗೊಂಡ ಮಾಜಿ ಸಿಎಂ ಸಿದ್ದರಾಮಯ್ಯ ಮೈತ್ರಿ ಪಕ್ಷದ ನಾಯಕ ಸಚಿವ ಹೆಚ್‍ಡಿ ರೇವಣ್ಣಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

    ಯಡಿಯೂರಪ್ಪ ಇರುವಾಗ ಹಾಲಿಗೆ ಎರಡು ರೂ. ಪ್ರೋತ್ಸಾಹ ಧನ ಇತ್ತು. ನಾನು ಅದನ್ನು 4-5 ರೂ. ಮಾಡಿದೆ. ಆದಾದ್ಮೇಲೆ 50,000 ಹಾಲು ಒಂದು ದಿನಕ್ಕೆ ಬರುತ್ತಿದ್ದದ್ದು, 75 ಲಕ್ಷ ಹಾಲು ಒಂದು ದಿನಕ್ಕೆ ಹೆಚ್ಚಾಗಿತ್ತು. ಆಗಂತ ನಾನು ಕೆಎಂಎಫ್‍ನಲ್ಲಿ ಎಲ್ಲವೂ ಸರಿಯಿದೆ ಎಂದು ಹೇಳಲ್ಲ. ಅನಗತ್ಯ ನೇಮಕಾಗಿ ಮಾಡಿಕೊಂಡಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಸಂಬಳ ಕೊಡುತ್ತಿದ್ದಾರೆ. ಆದರೆ ನಮ್ಮ ಸರ್ಕಾರ ಕೊಟ್ಟಿದ್ದ ಪ್ರೋತ್ಸಾಹ ಧನ ದುರುಪಯೋಗ ಆಗಿಲ್ಲ ಅಂತ ಸಮರ್ಥಿಸಿಕೊಂಡಿದ್ದಾರೆ.

    ಸಿದ್ದರಾಮಯ್ಯ ಮಾತನಾಡಿದ ಬಳಿಕ ಕೆಲವು ಹಾಲು ಉತ್ಪಾದಕರ ಸಂಘಗಳಲ್ಲಿ ಸದಸ್ಯರೇ ರೈತರ ಹೆಸರಲ್ಲಿ ನಕಲಿ ಖಾತೆಗಳನ್ನು ತೆರೆದು ಪ್ರೋತ್ಸಾಹ ಧನ ಕಬಳಿಸುತ್ತಿರುವುದು ನಿಜ. ಇದನ್ನು ತಪ್ಪಿಸಿ ನೈಜ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಮಾಡಬೇಕು ಅಂತ ಲೋಕೋಪಯೋಗಿ ಸಚಿವ ಹೆಚ್‍ಡಿ ರೇವಣ್ಣ ಉತ್ತರ ನೀಡಿದರು.

  • ನನ್ನದು ಸ್ವಾತಿ ನಕ್ಷತ್ರ, ನನಗೆ ಮಾಟ ಮಾಡಿಸಿದ್ರೆ ಅವರಿಗೆ ತಿರುಗುಬಾಣವಾಗುತ್ತೆ: ರೇವಣ್ಣ

    ನನ್ನದು ಸ್ವಾತಿ ನಕ್ಷತ್ರ, ನನಗೆ ಮಾಟ ಮಾಡಿಸಿದ್ರೆ ಅವರಿಗೆ ತಿರುಗುಬಾಣವಾಗುತ್ತೆ: ರೇವಣ್ಣ

    ಹಾಸನ: ನನ್ನದು ಸ್ವಾತಿ ನಕ್ಷತ್ರ. ನನಗೆ ಯಾರಾದರೂ ಮಾಟ ಮಾಡಿಸಲು ಪ್ರಯತ್ನಿಸಿದರೆ ಅವರಿಗೆ ತಿರುಗುಬಾಣವಾಗುತ್ತೆ ಎಂದು ಲೋಕೋಪಯೋಗಿ ಸಚಿವ ಎಚ್‍ಡಿ ರೇವಣ್ಣ ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಸರ್ಕಾರಿ ಬಂಗಲೆ ಸಿಗದ ಕಾರಣ ಪ್ರತಿನಿತ್ಯ ಹೊಳೆನರಸೀಪುರದಿಂದ ಬೆಂಗಳೂರಿಗೆ ಹೋಗಿ ಬರುತ್ತಿದ್ದೇನೆ. ಬಂಗಲೆ ಸಿಕ್ಕ ತಕ್ಷಣ ಅಲ್ಲಿಯೇ ವಾಸ್ತವ್ಯ ಹೂಡುತ್ತೇನೆ ಎಂದು ಹೇಳಿದರು.

    ಬಿಜೆಪಿಯಿಂದ ಅಡ್ಡಿ: ಬಜೆಟ್ ಕುರಿತು ಬಿಜೆಪಿ ನಾಯಕರ ಆರೋಪಗಳಿಗೆ ತಿರುಗೇಟು ನೀಡಿದ ಅವರು, ಎರಡು-ಮೂರು ದಿನ ಕಾಯಿರಿ. ಯಾವ ಜಿಲ್ಲೆಗೆ ಎಷ್ಟು ಅನುಕೂಲವಾಗಿದೆ ಎಂಬುದನ್ನು ಹೇಳುತ್ತೇನೆ. ರಾಜ್ಯದ ರೈತರ ಸಾಲಮನ್ನಾ ಕುರಿತು ಸಿಎಂ ಕುಮಾರಸ್ವಾಮಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆಗೆ ಮಾತುಕತೆ ನಡೆಸಿದ್ದರು. ಮೋದಿಯವರು ಹಣ ನೀಡುವ ಭರವಸೆಯನ್ನೂ ನೀಡಿದ್ದರು. ಆದರೆ ರಾಜ್ಯದ ಬಿಜೆಪಿ ನಾಯಕರು ಹಣ ನೀಡದಂತೆ ಅಡ್ಡಿಪಡಿಸಿದರು ಎಂದು ಆರೋಪಿಸಿದರು. ಇದನ್ನು ಓದಿ: ಪ್ರತಿನಿತ್ಯ ಬೆಂಗಳೂರು ಟು ಹೊಳೆನರಸೀಪುರ- ಹೆಚ್‍ಡಿ ರೇವಣ್ಣ ಜರ್ನಿಯ ಹಿಂದಿದೆ ರಹಸ್ಯ!

    ಸಮಸ್ಯೆ ಸರಿಯಾಗುತ್ತೆ: ವಿದ್ಯಾರ್ಥಿಗಳಿಗೆ ಉಂಟಾಗಿರುವ ಉಚಿತ ಬಸ್ ಪಾಸ್ ಸಮಸ್ಯೆಯನ್ನು ತಕ್ಷಣ ಸರಿಮಾಡಲಾಗುವುದು. ಸಿಎಂ ಕುಮಾರಸ್ವಾಮಿ ಅದನ್ನು ಕೂಡಲೇ ಸರಿಪಡಿಸಲಿದ್ದಾರೆ. ಆದರೆ ಬಿಜೆಪಿ ನಾಯಕರಿಗೆ ಹಾಸನ ಅಭಿವೃದ್ಧಿ ಬೇಡವಾಗಿದೆ. ನನಗೆ ರಾಜಕೀಯ ಮುಖ್ಯವಲ್ಲ, ಜಿಲ್ಲೆಯ ಅಭಿವೃದ್ಧಿ ಮುಖ್ಯ. ಮಾಜಿ ಸಿಎಂ ಯಡಿಯೂರಪ್ಪನವರೇ ಬಂದು ಈ ಕುರಿತು ಸರ್ವೆ ಮಾಡಲಿ ಎಂದು ಸವಾಲು ಹಾಕಿದರು.

    ಜಾತಿ ತಾರತಮ್ಯವಿಲ್ಲ: ರೈತರ ಸಾಲಮನ್ನಾ ವಿಷಯದಲ್ಲಿ ಜಾತಿ ತಾರತಮ್ಯವಿಲ್ಲ. ಸರಿಯಾದ ಮಾಹಿತಿಯಿಲ್ಲದೆ ಕೆಲವರು ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ. ಸಾಲಮನ್ನಾದಿಂದ ಬಡಕುಟುಂಬಗಳಿಗೆ ಅನುಕೂಲವಾಗಿದೆ. ಇದರಲ್ಲಿ ಜಾತಿ ಹೆಸರು ಸೇರ್ಪಡೆ ಮಾಡುತ್ತಿರುವುದು ಸರಿಯಲ್ಲ ಎಂದರು.

    ಪಕ್ಷ ಭೇದ ಮಾಡಲ್ಲ: ಹಾಸನ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷದಿಂದ ಮಳೆ ಬಾರದ ಹಾಗೂ ಮಳೆ ಹೆಚ್ಚಾಗಿರುವ ಭಾಗದ ರೈತರ ಬೆಳೆ ಕುರಿತು ಮಾಹಿತಿ ನೀಡುವಂತೆ ಕೃಷಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವಿಮಾ ಯೋಜನೆ ಬಗ್ಗೆ ರೈತರಿಗೆ ಸರಿಯಾಗಿ ಮಾಹಿತಿ ನೀಡಬೇಕು ಎಂದು ಹೇಳಿದ್ದೇನೆ. ಕಳೆದ ಹತ್ತು ವರ್ಷದಿಂದ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ಮಾಜಿ ಸಿಎಂ ಯಡಿಯೂರಪ್ಪನವರು ಅವರ ಪಕ್ಷದ ಶಾಸಕರೊಂದಿಗೆ ಬಂದು ಕಳೆದ ಹತ್ತು ವರ್ಷಗಳಿಂದ ಯಾವ ಯೋಜನೆಗಳು ಮಂಜೂರಾಗಿವೆ ಎಂಬುದನ್ನು ಪರಿಶೀಲಿಸಿ ಮಾತನಾಡಲಿ. ನಾವು ಅಭಿವೃದ್ಧಿಯಲ್ಲಿ ಪಕ್ಷ ಭೇದ ಮಾಡಲ್ಲ. ಹಾಸನದಲ್ಲಿ ಬಿಜೆಪಿ ಶಾಸಕರು ಕೂಡ ಆಯ್ಕೆಯಾಗಿದ್ದಾರೆ. ಅವರು ಬೇಡ ಅಂದರೆ ಯೋಜನೆಗಳನ್ನು ವಾಪಾಸ್ ಪಡೆಯುತ್ತೇವೆ ಎಂದರು.

    ಏಕಾಂಗಿಯಾಗಿ ಪ್ರಮಾಣವಚನ: ಗ್ರಹ, ಕಾಲ ನೋಡಿಯೇ ಮುಂದುವರಿಯುವ ಎಚ್.ಡಿ.ರೇವಣ್ಣ ಅವರು ಸರ್ಕಾರ ಮತ್ತು ಜೆಡಿಎಸ್ ಮಹತ್ವದ ಕಾರ್ಯಕ್ರಮಗಳಿಗೆ ಸರಿಯಾದ ಸಮಯವನ್ನು ನಿಗದಿ ಮಾಡುತ್ತಾರೆ. ವಿಧಾನಸಭೆಯಲ್ಲಿ ಶಾಸಕರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದ ವೇಳೆ ತಮಗೆ ಶುಭಕಾಲದಲ್ಲೇ ಪ್ರಮಾಣವಚನ ನೀಡಲು ಸ್ಪೀಕರ್ ಬೋಪಯ್ಯ ಅವರಿಗೆ ಚೀಟಿ ನೀಡಿದ್ದರು. ಈ ವೇಳೆ ಕುಳಿತುಕೊಳ್ಳಿ ಸಂಜೆ 4 ಗಂಟೆ ಯವರೆಗೆ ಸಮಯಾವಕಾಶವಿದೆ. ನಿಗದಿತ ಪಟ್ಟಿಯಂತೆ ಪ್ರಮಾಣವಚನ ನಡೆಯುತ್ತದೆ ಎಂದು ತಿಳಿಸಿದರು. ಇದನ್ನು ಓದಿ:  ವಾಸ್ತು ಪ್ರಕಾರ ಪೂಜೆ ಮಾಡ್ತಿಲ್ಲ ಅಂತಾ ಸಚಿವ ರೇವಣ್ಣರಿಂದ ಅರ್ಚಕರಿಗೆ ಕ್ಲಾಸ್

    ಈ ವೇಳೆ ರೇವಣ್ಣ ಪತ್ರಕರ್ತರ ಗ್ಯಾಲರಿಗೆ ಬಂದಾಗ ಮಾಧ್ಯಮದವರು ಉತ್ತಮ ಗಳಿಗೆಯನ್ನು ನೋಡಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರಾ ಎಂದು ಕೆಣಕಿದರು. ನನ್ನದು ಸ್ವಾತಿ ನಕ್ಷತ್ರ ಯಾವುದೇ ಗಳಿಗೆ ಇಲ್ಲ. ಯಾವಾಗ ಬೇಕಾದರೂ ಪ್ರಮಾಣವಚನ ಸ್ವೀಕರಿಸಬಹುದು ಎಂದು ಹೇಳಿ ರೇವಣ್ಣ ಹೊರ ನಡೆದಿದ್ದರು. ಆರಂಭದಲ್ಲಿ 5 ಮಂದಿ ನಂತರ 10 ಮಂದಿ ಬಳಿಕ ಇಬ್ಬರಂತೆ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ರೇವಣ್ಣ ಒಬ್ಬಂಟಿಯಾಗಿ ಮಧ್ಯಾಹ್ನ 12.50ಕ್ಕೆ ಪ್ರಮಾಣವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.

  • ಪ್ರತಿನಿತ್ಯ ಬೆಂಗಳೂರು ಟು ಹೊಳೆನರಸೀಪುರ- ಹೆಚ್‍ಡಿ ರೇವಣ್ಣ  ಜರ್ನಿಯ ಹಿಂದಿದೆ ರಹಸ್ಯ!

    ಪ್ರತಿನಿತ್ಯ ಬೆಂಗಳೂರು ಟು ಹೊಳೆನರಸೀಪುರ- ಹೆಚ್‍ಡಿ ರೇವಣ್ಣ ಜರ್ನಿಯ ಹಿಂದಿದೆ ರಹಸ್ಯ!

    ಬೆಂಗಳೂರು: ಬೆಂಗಳೂರಲ್ಲಿ ಮನೆ ಇದ್ರೂ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣನವರು ಪ್ರತಿನಿತ್ಯ ಹೊಳೆನರಸೀಪುರಕ್ಕೆ ಹೋಗಿ ಬರುತ್ತಿರುವುದು ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

    ಬೆಂಗಳೂರಿನಿಂದ ಹೊಳೆನರಸೀಪುರ ಸುಮಾರು 170 ಕಿಮೀ ದೂರವಿದೆ. ಆದರೂ ಪ್ರತಿದಿನ ರಾತ್ರಿಯಾಗುತ್ತಿದ್ದಂತೆಯೇ ಹೊಳೆನರಸೀಪುರಕ್ಕೆ ಹೋಗುವ ರೇವಣ್ಣ ಬೆಳಗಾಗುವಷ್ಟರಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಪುನಃ ಬೆಂಗಳೂರಿಗೆ ಹಿಂದಿರುಗುತ್ತಿರುವುದು ಈಗ ಎಲ್ಲರ ಗಮನ ಸೆಳೆದಿದೆ.

    ಸಚಿವ ರೇವಣ್ಣರವರು ಜ್ಯೋತಿಷ್ಯವನ್ನು ಅತಿಯಾಗಿ ನಂಬುತ್ತಾರೆ. ಹಾಗಾಗಿ ಜ್ಯೋತಿಷಿಯೊಬ್ಬರು ಅವರಿಗೆ ಸರ್ಕಾರಿ ಬಂಗಲೆ ಸಿಗುವವರೆಗೂ ಹೊಳೆನರಸೀಪುರದಲ್ಲೇ ಉಳಿದುಕೊಳ್ಳದಂತೆ ಸಲಹೆ ನೀಡಿದ್ದಾರೆ. ಹೀಗಾಗಿ ರೇವಣ್ಣ ಪ್ರತಿನಿತ್ಯ 170 ಕಿ.ಮೀ ಸಂಚರಿಸುತ್ತಿದ್ದಾರೆ ಎನ್ನಲಾಗಿದೆ.

    ಈ ಮಾತನ್ನು ಅಲ್ಲಗಳೆದಿರುವ ರೇವಣ್ಣರ ಆಪ್ತ ಬಳಗ ಜನರ ಕಷ್ಟ ಕಾರ್ಪಣ್ಯಗಳನ್ನು ಕೇಳಲು ಹಾಗೂ ಜನರ ಅಹವಾಲು ಸ್ವೀಕರಿಸಲು ರೇವಣ್ಣ ಹೀಗೆ ಬೆಂಗಳೂರಿಂದ ಹೊಳೆನರಸೀಪುರಕ್ಕೆ ಬರುತ್ತಾರೆ ಎಂದು ಹೇಳಿದ್ದಾರೆ.

    ಈಗಾಗಲೇ ಸಚಿವ ರೇವಣ್ಣ ಕೋರಿಕೆಯಂತೆ ಅವರಿಗೆ ಬೆಂಗಳೂರಿನ ಶಿವಾನಂದ ವೃತ್ತದ ಬಳಿ ಇರುವ, ಎಚ್ ಸಿ ಮಹದೇವಪ್ಪನವರು ವಾಸವಾಗಿದ್ದ ವಸತಿಗೃಹವನ್ನು ನೀಡಲಾಗಿದೆ. ಆದರೆ ಅವರು ಮನೆ ಖಾಲಿ ಮಾಡುವವರೆಗೆ ಬೆಂಗಳೂರಿನ ಅವರ ಮನೆಯಲ್ಲಿಯೇ ವಾಸ ಮಾಡಬಹುದು. ಆದರೆ ರೇವಣ್ಣ ಮಾತ್ರ ಪ್ರತಿನಿತ್ಯ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪ್ರಯಾಣ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

    ರಾತ್ರಿ ಎಷ್ಟೇ ಹೊತ್ತಾದರೂ ರೇವಣ್ಣ ಹೊಳೆನರಸೀಪುರಕ್ಕೆ ತಪ್ಪದೇ ಹೋಗುತ್ತಾರೆ. ಬೆಳಗಿನ ಜಾವ 6 ಗಂಟೆಗೆ ಎದ್ದು ಸಾರ್ವಜನಿಕರ ಅಹವಾಲುಗಳನ್ನು ಕೇಳಲು ತಯಾರಾಗುತ್ತಾರೆ. ಹೊಳೆನರಸೀಪುರ ಕ್ಷೇತ್ರ ಮಾತ್ರವಲ್ಲದೇ ಹಾಸನ ಜಿಲ್ಲೆಯ ಮೂಲೆ ಮೂಲೆ ಗಳಿಂದಲೂ ಸಾವಿರಾರು ಜನ ಅವರ ಮನೆಗೆ ಬರುತ್ತಾರೆ. ಅವರೆಲ್ಲರ ಅಹವಾಲು ಸ್ವೀಕರಿಸಿದ ನಂತರವೇ ರೇವಣ್ಣ ಮತ್ತೆ ಬೆಂಗಳೂರಿಗೆ ಮರಳುತ್ತಾರೆ. ಕ್ಷೇತ್ರದ ಎಲ್ಲ ಜನತೆಯ ಅಹವಾಲು ಕೇಳಬೇಕೆಂಬುದೇ ಈ ಪ್ರಯಾಣಕ್ಕೆ ಪ್ರಬಲ ಕಾರಣ ಎಂದು ರೇವಣ್ಣನವರ ಆಪ್ತ ಮೂಲಗಳು ತಿಳಿಸಿವೆ. ಇದನ್ನು ಓದಿ: ಸೀಟ್ ವಾಸ್ತುಪ್ರಕಾರ ಸರಿಯಾಗಿದೆ, ಮುಂದೆ ಬನ್ನಿ: ನಗೆಗಡಲಲ್ಲಿ ತೇಲಿಸಿದ ಸ್ಪೀಕರ್

    ಇದೇ ಮೊದಲಲ್ಲ:
    ಈ ಹಿಂದೆ ಬಿಜೆಪಿ-ಜೆಡಿಎಸ್ 20-20 ಸರ್ಕಾರ ಇದ್ದಾಗಲೂ ಸಹ ಸಚಿವರಾಗಿದ್ದ ರೇವಣ್ಣ ಹಾಸನದಿಂದ ಬೆಂಗಳೂರಿಗೆ ಹೋಗಿ ಪುನಃ ಮಧ್ಯಾಹ್ನ ಹಾಸನಕ್ಕೆ ವಾಪಸಾಗುತ್ತಿದ್ದರು. ಮತ್ತೆ ಸಂಜೆ ವೇಳೆಗೆ ಬೆಂಗಳೂರಿಗೆ ತೆರಳುತ್ತಿದ್ದ ರೇವಣ್ಣ, ರಾತ್ರಿ ವೇಳೆಗೆ ಮತ್ತೆ ಹಾಸನಕ್ಕೆ ಬಂದು ವಾಸ್ತವ್ಯ ಹೂಡುತ್ತಿದ್ದರು. ಆದರೆ ಇದೀಗ ಎಲ್ಲವೂ ಉಲ್ಟಾಹೊಡೆದಂತೆ ಕಾಣುತ್ತಿದೆ. ಒಂದು ವೇಳೆ ಜ್ಯೋತಿಷಿಗಳ ಮಾತೇ ರೇವಣ್ಣ ಪ್ರವಾಸಕ್ಕೆ ಕಾರಣ ಎಂದಾದಲ್ಲಿ ಮಹದೇವಪ್ಪನವರು ಸರ್ಕಾರಿ ವಸತಿ ಗೃಹ ಖಾಲಿ ಮಾಡುವವರೆಗೂ ರೇವಣ್ಣನವರು ಪ್ರತಿದಿನ ಪ್ರಯಾಣ ಮಾಡುವುದು ತಪ್ಪುವುದಿಲ್ಲ ಎನ್ನಲಾಗುತ್ತಿದೆ.

     

  • ಶಕ್ತಿಭವನಕ್ಕೆ ಪಿಡಬ್ಲ್ಯೂಡಿ ಮಿನಿಸ್ಟರ್ ಸ್ಪೆಷಲ್ ಎಂಟ್ರಿ – ಶುಕ್ರವಾರ ರೇವಣ್ಣರ ಇಲಾಖೆಗಾಗಿಯೇ ಸಂಪುಟ ಸಭೆ..?

    ಶಕ್ತಿಭವನಕ್ಕೆ ಪಿಡಬ್ಲ್ಯೂಡಿ ಮಿನಿಸ್ಟರ್ ಸ್ಪೆಷಲ್ ಎಂಟ್ರಿ – ಶುಕ್ರವಾರ ರೇವಣ್ಣರ ಇಲಾಖೆಗಾಗಿಯೇ ಸಂಪುಟ ಸಭೆ..?

    ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಹೆಚ್.ಡಿ.ರೇವಣ್ಣ ಸೂಪರ್ ಸಿಎಂ ಅನ್ನೋ ಮಾತು ಚರ್ಚೆಯಲ್ಲಿವೆ. ಈ ಸಮಯದಲ್ಲಿಯೇ ಶುಕ್ರವಾರ ರೇವಣ್ಣರಿಗಾಗಿಯೇ ಸಿಎಂ ಕುಮಾರಸ್ವಾಮಿ ಸಂಪುಟ ಸಭೆ ಕರೆದಿದ್ದಾರೆ.

    ಮುಖ್ಯವಾಗಿ ಹೊಳೆನರಸೀಪುರದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಹಾಸನ ಜಿಲ್ಲೆಯ ಏತ ನೀರಾವರಿ ಯೋಜನೆ, ಹೊಸ ಕಾಲೇಜಗಳ ಸ್ಥಾಪನೆ ಬಗ್ಗೆ ಚರ್ಚೆ ಆಗಲಿದೆ ಎನ್ನಲಾಗಿದೆ. ಈ ಬಗ್ಗೆ ರೇವಣ್ಣ ಅವರನ್ನ ಪ್ರಶ್ನಿಸಿದಾಗ, ಹಾಗೆಲ್ಲಾ ಇಲ್ಲ. ನನ್ನ ಕ್ಷೇತ್ರದಷ್ಟೇ ಅಲ್ಲ ಬೇರೆ ವಿಷಯಗಳು ಚರ್ಚೆಗೆ ಬರಲಿವೆ. ಕಾಂಗ್ರೆಸ್ ನಾಯಕರು ನನ್ನ ಸೂಪರ್ ಸಿಎಂ ಅಂದ್ರೆ ಆಶೀರ್ವಾದ ಅಂದ್ಕೋತೀನಿ ಅಂದ್ರು.

    ಡಿ.ಕೆ.ಶಿವಕುಮಾರ್ ನಾವು ಚೆನ್ನಾಗಿಯೇ ಇದೀವಿ. ಬೇರೆ ಮಾಡಬೇಕು ಅಂತ ಅಂದ್ರೆ ಏನು ಮಾಡೋದು. ಎಂಜಿನಿಯರ್‍ಗಳ ವರ್ಗಾವಣೆಯಲ್ಲಿ ಅಸಮಾಧಾನ ವಿಚಾರಗೊತ್ತಿಲ್ಲ ಅಂದ್ರು. ಇದರ ಬೆನ್ನಲ್ಲೇ ಬಜೆಟ್ ಪೂರ್ವ ಭಾವಿ ಸಭೆಗಾಗಿ ಶಕ್ತಿಭವನಕ್ಕೆ ಕಂದಾಯ ಸಚಿವ ದೇಶಪಾಂಡೆ ಅವರು ಬಂದಾಗ ಗೇಟ್ ಒಂದಕ್ಕೆ ಬೀಗ ಹಾಕಿತ್ತು. ಪೊಲೀಸರು ಇದನ್ನ ತೆಗೆಯದೇ ದೂರ ಉಳಿದಿದ್ರು. ಹಾಗಾಗಿ, ಬೇರೊಂದು ಗೇಟ್ ಮೂಲಕ ದೇಶಪಾಂಡೆ ನಡೆದುಕೊಂಡು ಹೋದ್ರು.

    ಇತ್ತ ರೇವಣ್ಣವರು ಬಂದು ಕ್ಲೋಸ್ ಆಗಿರುವ ಗೇಟ್‍ನ ಬೀಗ ತೆಗೆಸಿ ಒಳಗೆ ಹೋದ್ರು. ಈ ಮಧ್ಯೆ, ಸಿಎಂ ಬೆಂಗಾವಲು ವಾಹನಕ್ಕೆ ಅಡ್ಡಿ ಅಂತ ಸಚಿವ ಡಿಕೆಶಿ ಕಾರನ್ನ ಎತ್ತಿಸಿದ ಘಟನೆಯೂ ನಡೆದಿದೆ. ಇನ್ನು, ಶುಕ್ರವಾರ ಕ್ಯಾಬಿನೆಟ್‍ನಲ್ಲಿ ಸರ್ಕಾರಿ ನೌಕರರ ವರ್ಗಾವಣೆ ಮಾರ್ಗಸೂಚಿ ಫೈನಲ್ ಸಾಧ್ಯತೆ ಇದೆ.

    https://www.youtube.com/watch?v=LHr-hAmzNAw

  • ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ದಿಢೀರ್ ಭೇಟಿಯಾದ ಸಚಿವ ರೇವಣ್ಣ!

    ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ದಿಢೀರ್ ಭೇಟಿಯಾದ ಸಚಿವ ರೇವಣ್ಣ!

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಭೇಟಿ ಮಾಡಿದ್ದಾರೆ.

    ಭೇಟಿ ವೇಳೆ ಕೆಲಹೊತ್ತು ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಅಪರೂಪದ ಬೆಳವಣಿಗೆ ರಾಜಕೀಯ ವಲಯದಲ್ಲಿ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

    ಮಳೆಹಾನಿ ಮತ್ತು ಪ್ರಗತಿ ಪರಿಶೀಲನಾ ಸಭೆ ನಡೆಸುವ ಸಲುವಾಗಿ ರೇವಣ್ಣ ಅವರು ಇಂದು ಮಂಗಳೂರಿಗೆ ಭೇಟಿ ನೀಡಿದ್ದರು. ಈ ವೇಳೆ ಉಜಿರೆಗೆ ತೆರಳಿದ ಅವರು ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

    ಮೊದಲ ಬಾರಿಗೆ ಮಾಜಿ ಸಿಎಂ ಭೇಟಿ:
    ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಚಿವ ಸ್ಥಾನ ವಿಚಾರದಲ್ಲಿ ರೇವಣ್ಣ ಹಾಗೂ ಸಿದ್ದರಾಮಯ್ಯ ಮಧ್ಯೆ ಅಸಮಾಧಾನ ಸೃಷ್ಟಿಯಾಗಿತ್ತು. ಹೀಗೆ ಭಿನ್ನಾಭಿಪ್ರಾಯ ಬಂದ ಮೇಲೆ ದೂರವೇ ಉಳಿದಿದ್ದ ಎಚ್ ಡಿ ರೇವಣ್ಣ ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಒಟ್ಟಿನಲ್ಲಿ ಇದೀಗ ಇಬ್ಬರ ಭೇಟಿ ರಾಜಕೀಯ ವಲಯದಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.

    10 ದಿನ ಚಿಕಿತ್ಸೆ:
    10 ದಿನಗಳವರೆಗೆ ಧರ್ಮಸ್ಥಳದಲ್ಲಿ ಶಾಂತಿವನದ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಅವರು, ಕಳೆದ ಭಾನುವಾರ ಧರ್ಮಸ್ಥಳಕ್ಕೆ ತೆರಳಿದ್ದಾರೆ. ಇದೀಗ ಮಾಜಿ ಸಿಎಂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮೊದಲು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ನನಗೇನು ಆರೋಗ್ಯ ತೊಂದರೆ ಇಲ್ಲ. ಸಾಮಾನ್ಯ ಚಿಕಿತ್ಸೆಗಾಗಿ ಆಗಮಿಸಿದ್ದೇನೆ. 10 ದಿನ ಸಾಮಾನ್ಯ ಚಿಕಿತ್ಸೆ ನಡೆಯಲಿದೆ ಅಂತಾ ಹೇಳಿದ್ದರು.

  • 2 ಖಾತೆ ಬೇಕೆ ಬೇಕು – ಎಚ್‍ಡಿ ರೇವಣ್ಣ ಪಟ್ಟು!

    2 ಖಾತೆ ಬೇಕೆ ಬೇಕು – ಎಚ್‍ಡಿ ರೇವಣ್ಣ ಪಟ್ಟು!

    ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆಯಾದ ದಿನದಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಒಂದಿಲ್ಲೊಂದು ತಲೆನೋವು ಎದುರಾಗಿದೆ. ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದರೆ ಮತ್ತೊಂದು ಕಡೆ ಜೆಡಿಎಸ್ ಗೆ ರೇವಣ್ಣ ಎರಡು ಖಾತೆ ನೀಡಿ ಎಂದು ಪಟ್ಟು ಹಿಡಿದ್ದಾರೆ.

    ಎಚ್ ಡಿ ರೇವಣ್ಣರ ಹಠ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಚಿವ ಸಂಪುಟದಲ್ಲಿ ನನಗೆ ಇಂಧನ ಮತ್ತು ಪಿಡಬ್ಲ್ಯೂಡಿ ಎರಡೂ ಖಾತೆಯನ್ನು ನೀಡುವಂತೆ ಪಟ್ಟು ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಈ ಬಗ್ಗೆ ಪದ್ಮನಾಭ ನಗರದಲ್ಲಿರುವ ದೇವೇಗೌಡರ ಮನೆಯಲ್ಲಿ ಮಾತುಕತೆ ನಡೆಸಿದ್ದಾರೆ. ಮಾತುಕತೆಯಲ್ಲಿ ರೇವಣ್ಣರ 2 ಖಾತೆಯ ಮನವಿಯನ್ನು ತಿರಸ್ಕರಿಸಿ ಗೌಡರು ಖಡಕ್ ವಾರ್ನಿಂಗ್ ನೀಡಿದ್ದು, ಕೇವಲ ಯಾವುದಾದರೂ ಒಂದು ಖಾತೆಯನ್ನು ನಿರ್ವಹಿಸುವಂತೆ ರೇವಣ್ಣಗೆ ಸೂಚಿಸಿದ್ದಾರೆ. ಇಂಧನ ಇಲ್ಲವೇ ಲೋಕೊಪಯೋಗಿ ಖಾತೆಯನ್ನು ನಿರ್ವಹಿಸುವಂತೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ.

    ಈ ನಡುವೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರನ್ನು ಮಣಿಸಿದ್ದ ಜಿ. ಟಿ. ದೇವೇಗೌಡ ಅವರು ಲೋಕೋಪಯೋಗಿ ಇಲಾಖೆಯ ಪಟ್ಟು ಹಿಡಿದಿದ್ದಾರೆ. ಮೈಸೂರು ಕ್ಷೇತ್ರದ ಶಾಸಕರುಗಳಾದ ಸಾರಾ ಮಹೇಶ್, ಕೆ ಮಹದೇವ್ ಹಾಗೂ ಅಶ್ವಿನ್ ಕುಮಾರ್‍ರವರು ಜಿಟಿಡಿಯವರಿಗೆ ಸಾಥ್ ನೀಡಿದ್ದಾರೆ. ದೇವೇಗೌಡರು ಚುನಾವಣೆಯಲ್ಲಿ ಜಿಟಿಡಿಗೆ ಉಸ್ತುವಾರಿ ಸಚಿವ ಸ್ಥಾನ ನೀಡುವ ಮಾತುಕೊಟ್ಟ ಹಿನ್ನೆಲೆಯಲ್ಲಿ ಜಿಟಿಡಿಗೆ ಮಂತ್ರಿಸ್ಥಾನ ಸಿಗುವುದು ಪಕ್ಕಾ ಆಗಿದ್ದು ಖಾತೆ ಯಾವುದು ಎನ್ನುವುದು ತಿಳಿಯಬೇಕಿದೆ. ಇದನ್ನೂ ಓದಿ: ಸಿಎಂ ಎಚ್‍ಡಿಕೆಗೆ ಶುರುವಾಯ್ತೆ ಸಹೋದರನ ಕಿರಿಕಿರಿ – ಸಮ್ಮಿಶ್ರ ಸರ್ಕಾರದ ಮೂರನೇ ಹೈಕಮಾಂಡ್ ರೇವಣ್ಣ?