Tag: HD Revanna

  • 19ರಂದು ನಾನೇ ರೇವಣ್ಣನವರ ಮನೆಗೆ ಹೋಗ್ತೀನಿ – ಮಾಜಿ ಶಾಸಕ ವಾಗ್ದಾಳಿ

    19ರಂದು ನಾನೇ ರೇವಣ್ಣನವರ ಮನೆಗೆ ಹೋಗ್ತೀನಿ – ಮಾಜಿ ಶಾಸಕ ವಾಗ್ದಾಳಿ

    ಹಾಸನ: ಸಚಿವ ಎಚ್.ಡಿ ರೇವಣ್ಣನವರು ಸೂಟ್‍ಕೇಸ್ ಇಟ್ಟುಕೊಂಡು ಎಲ್ಲ ಕಾರ್ಯಕರ್ತರ ಮನೆ ಮನೆಗೆ ಸುತ್ತುತ್ತಿದ್ದಾರೆ. ಆದ್ರೆ ನಮ್ಮ ಮನೆಗೆ ಬರೋದು ಬೇಡ. ನಾನು ಇದೇ 19ರಂದು ರೇವಣ್ಣನವರ ಮನೆಗೆ ಹೋಗುತ್ತೇನೆ ಎಂದು ಮಾಜಿ ಶಾಸಕ ಹೆಚ್. ಎಂ ವಿಶ್ವನಾಥ್ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ರು.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ದಲಿತರಲ್ಲಿ ಮಾತ್ರ ಅಲ್ಲ ಒಕ್ಕಲಿಗರಲ್ಲಿಯೂ ಬಹಳ ದೊಡ್ಡ ಕ್ರಾಂತಿ ಇದೆ. ಒಕ್ಕಲಿಗರು ನಿಮಗೆ ಮತ ಹಾಕಲ್ಲ. ಒಕ್ಕಲಿಗರು ಜಾತಿಯ ಆಧಾರದಲ್ಲಿ ವೋಟು ಹಾಕೋದಾದ್ರೆ ಅಲ್ಲಿ ಜಾತಿಗೂ ಬೆಲೆ ಇಲ್ಲ. ಒಕ್ಕಲಿಗರಲ್ಲಿ ಹಲವು ಒಳ ಜಾತಿಗಳಿವೆ. ಬಿಜೆಪಿ ಅಭ್ಯರ್ಥಿ ಎ ಮಂಜು ಗೆಲುವು ನಿಶ್ಚಿತ ಎಂದು ಹೇಳಿದ್ರು.

    ನೀವು ಕೈಯಲ್ಲಿ ನಿಂಬೆಹಣ್ಣು ಹಿಡಿಯುತ್ತೀರಿ ಎಂದು ಏನು ಬೇಕಾದರೂ ಮಾತನಾಡುತ್ತೀರಿ. ಜಾತಿ ಬಗ್ಗೆ, ಪತಿ ಸಾವನ್ನಪ್ಪಿದ ಸುಮಲತಾ ಬಗ್ಗೆ ಮಾತಾಡ್ತೀರಿ. ನೀವು ಹೇಳಿದ್ದೆ ಮಂತ್ರ-ತಂತ್ರ ಎಂದು ಗರಂ ಆದ ಮಾಜಿ ಶಾಸಕರು, ಮೂರನೇ ತಲೆಮಾರಿನ ಪ್ರಜ್ವಲ್ ರನ್ನು ಸೋಲಿಸಿ ಪ್ರಜಾಪ್ರಭುತ್ವ ಉಳಿಸಿ ಎಂದು ಕರೆ ನೀಡಿದರು.

  • ರೇವಣ್ಣ ವಿರುದ್ಧ ಕಾಂಗ್ರೆಸ್ಸಿಗರ ‘ಆಣೆ ಅಸ್ತ್ರ’

    ರೇವಣ್ಣ ವಿರುದ್ಧ ಕಾಂಗ್ರೆಸ್ಸಿಗರ ‘ಆಣೆ ಅಸ್ತ್ರ’

    ಬೆಂಗಳೂರು: ಹಾಸನ ರಾಜಕಾರಣದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ರಾಜಿ ಸಂಧಾನದ ಮಾತುಕತೆಗೆ ಕುಳಿತುಕೊಳ್ಳಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯರ ನೇತೃತ್ವದಲ್ಲಿ ನಡೆಯುತ್ತಿರುವ ಸಂಧಾನ ನಡೆಯುತ್ತಿದ್ದು, ಹಳೆಯ ದ್ವೇಷ ಮರೆತು ಜೆಡಿಎಸ್ ಬೆಂಬಲಿಸುವಂತೆ ಮನವೊಲಿಸಲು ಮುಂದಾಗಿದ್ದಾರೆ.

    ಸಚಿವ ಹೆಚ್.ಡಿ.ರೇವಣ್ಣರ ಸಮ್ಮುಖದಲ್ಲಿ ಜೆಡಿಎಸ್ ನಾಯಕರಿಂದ ಕಾಂಗ್ರೆಸ್ ಮುಖಂಡರುಗಳಿಗೆ, ಕಾರ್ಯಕರ್ತರಿಗೆ ಏನೆಲ್ಲಾ ಸಮಸ್ಯೆ ಆಗುತ್ತಿದೆ ಎಂಬುದನ್ನು ಮನವರಿಕೆ ಮಾಡಿಕೊಡಲು ತೀರ್ಮಾನಿಸಿದ್ದಾರೆ. ಈ ವೇಳೆ ವಿಪರೀತ ದೇವರನ್ನು ನಂಬುವ ರೇವಣ್ಣ ಕಾಂಗ್ರೆಸ್ ಕಾರ್ಯಕರ್ತರಿಗೆ ಮುಂದೆ ಯಾವುದೇ ತೊಂದರೆ ಕೊಡಲ್ಲ ಅಂತ ಸಚಿವರು ಆಣೆ ಪ್ರಮಾಣ ಮಾಡಲಿ ಎಂದು ಒತ್ತಾಯಿಸಲು ಕೈ ಪಡೆ ಸಜ್ಜುಗೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಇತ್ತ ದೋಸ್ತಿಗಳು ಕೈ ಕೊಟ್ಟರೆ ಮಗನ ಗೆಲುವು ಕಷ್ಟ ಎಂದು ಭಾವಿಸಿದ ರೇವಣ್ಣ ಸಿದ್ದರಾಮಯ್ಯ ನಿವಾಸದಲ್ಲಿ ಇಂದು ರಾಜೀ ಪಂಚಾಯ್ತಿಗೆ ಹಾಜರಾಗಲು ಒಪ್ಪಿದ್ದಾರೆ. ಕೇವಲ ಬಾಯಿ ಮಾತಿಗೆ ಹಾಸನದ ದಶಕದ ರಾಜಕೀಯ ದ್ವೇಷ ಕೊನೆಯಾಗುತ್ತಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

  • ಚುನಾವಣಾ ಪ್ರಚಾರದಲ್ಲಿ ಸಚಿವ ರೇವಣ್ಣ, ಬಾಲಕೃಷ್ಣ ಕಣ್ಣೀರು

    ಚುನಾವಣಾ ಪ್ರಚಾರದಲ್ಲಿ ಸಚಿವ ರೇವಣ್ಣ, ಬಾಲಕೃಷ್ಣ ಕಣ್ಣೀರು

    ಹಾಸನ: ಚುನಾವಣಾ ಪ್ರಚಾರದ ಭಾಷಣದ ವೇಳೆ ಶಾಸಕ ಬಾಲಕೃಷ್ಣ ಹಾಗೂ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಕಣ್ಣೀರು ಹಾಕಿದ್ದಾರೆ.

    ಹೊಳೆನರಸೀಪುರದ ಮೂಡಲ ಹಿಪ್ಪೆಯಲ್ಲಿ ನಡೆಯುತ್ತಿದ್ದ ಚುನಾವಣಾ ಪ್ರಚಾರದದಲ್ಲಿ ಬಾಲಕೃಷ್ಣ ಮಾತನಾಡಿ, ದೇವೇಗೌಡರು ಸಂಸತ್ ನಲ್ಲಿ ಕೊನೆ ಭಾಷಣ ಎಂದು ಹೇಳುತ್ತಾ ಕಣ್ಣೀರು ಹಾಕಿದ್ರು. ತವರು ಕ್ಷೇತ್ರ ಹಾಸನವನ್ನು ತಮ್ಮ ಮೊಮ್ಮಗನಿಗಾಗಿ ಬಿಟ್ಟು ಕೊಟ್ಟಿದ್ದಾರೆ. ನಮ್ಮ ತಂದೆಯವರ ತ್ಯಾಗ ದೊಡ್ಡದು, ಮೊಮ್ಮಗನ ಭವಿಷ್ಯದ ದೃಷ್ಟಿಯಿಂದ ತಮ್ಮ ಕ್ಷೇತ್ರವನ್ನೇ ಬಿಟ್ಟುಕೊಟ್ಟಿದ್ದಾರೆ ಹೇಳಿ ಕಣ್ಣೀರು ಹಾಕಿದರು.

    ಬಾಲಕೃಷ್ಣ ಅವರು ಭಾಷಣದಲ್ಲಿ ತಂದೆಯ ತ್ಯಾಗದ ಬಗ್ಗೆ ಹೇಳುತ್ತಿದ್ದಂತೆ ವೇದಿಕೆಯಲ್ಲಿ ಉಪಸ್ಥಿತರಿದ್ದ ರೇವಣ್ಣ ಸಹ ಭಾವುಕರಾಗಿ ಕಣ್ಣೀರು ಹಾಕಿದರು.

    ಮೊಮ್ಮಗನನ್ನು ರಾಜಕೀಯದಲ್ಲಿ ಮುಂದಕ್ಕೆ ತರಬೇಕು ಅನ್ನೋ ಭಾವನೆ ವರ ಮನದಾಳದಲ್ಲಿ ಇದೆ. ಅದನ್ನು ನಾವು ಸ್ವಾಗತ ಮಾಡೋಣ. ಇಂತಹ ರಾಜಕಾರಣಿ ನಮಗೆ ಮತ್ತೆ ಸಿಗುತ್ತಾರೇನ್ರೀ ಎಂದು ಪ್ರಶ್ನಿಸಿ ಬೇಸರಗೊಂಡರು. ಬಾಲಕೃಷ್ಣ ಕಣ್ಣೀರು ಹಾಕುತ್ತಿದ್ದಂತೆ ವೇದಿಕೆಯಲ್ಲೆ ರೇವಣ್ಣ ಕೂಡ ಭಾವುಕರಾದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಂಡ್ಯದಲ್ಲಿ ಸುಮಲತಾ ವರ್ಸಸ್ ಜೆಡಿಎಸ್ – ರೇವಣ್ಣ ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ತಲ್ಲಣ

    ಮಂಡ್ಯದಲ್ಲಿ ಸುಮಲತಾ ವರ್ಸಸ್ ಜೆಡಿಎಸ್ – ರೇವಣ್ಣ ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ತಲ್ಲಣ

    ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿದೆ. ಈ ಮಧ್ಯೆ ಮಂಡ್ಯದಲ್ಲಿ ಜೆಡಿಎಸ್ ವರ್ಸಸ್ ಸುಮಲತಾ ಅಂಬರೀಶ್ ಮಧ್ಯೆ ಭಾರೀ ಫೈಟ್ ಆರಂಭವಾಗಿದೆ.

    ಮಾಜಿ ಮುಖ್ಯಮಂತ್ರಿ ಸಿದ್ದರಾಮುಯ್ಯ ಅವರು ಮಂಡ್ಯದಿಂದ ಸುಮಲತಾ ಅವರಿಗೆ ಟಿಕೆಟ್ ಕೊಡಲ್ಲ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಅಲ್ಲೋಲಕಲ್ಲೋವಾಗಿದೆ. ಆದ್ರೂ ಸುಮಲತಾ ಅವರು ಪಕ್ಷ ಟಿಕೆಟ್ ಕೊಡದಿದ್ದರೂ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುವುದಾಗಿ ಪಣ ತೊಟ್ಟಿದ್ದಾರೆ. ಅಲ್ಲದೆ ಈ ಸಂಬಂಧ ಈಗಾಗಲೇ ಜಿಲ್ಲೆಯಲ್ಲಿ ಪ್ರಚಾರಕ್ಕೂ ಇಳಿದಿದ್ದಾರೆ.

    ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರು `ಗಂಡ ಸತ್ತ ಒಂದೂವರೆ ತಿಂಗಳುಗಳೇ ಕಳೆದಿಲ್ಲ. ಈ ಸ್ಥಿತಿಯಲ್ಲಿ ಅವರಿಗೆ ರಾಜಕೀಯ ಬೇಕಿತ್ತಾ ಎಂದು ಪ್ರಶ್ನೆ ಮಾಡಿರುವ ವಿಚಾರ ಇದೀಗ ಭಾರೀ ಚರ್ಚೆಗೆ ಈಡಾಗಿದೆ.

    ಯಾಕಂದ್ರೆ 2018ರ ನ.24ಕ್ಕೆ ಅಂಬರೀಶ್ ಅವರು ಮರಣ ಹೊಂದಿರುವ ಸುದ್ದಿ ಕೇಳಿದಾಕ್ಷಣ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ದೌಡಾಯಿಸಿದ್ದರು. ಕುಟುಂಬದ ಸದಸ್ಯರನ್ನೇ ಕಳೆದುಕೊಂಡಷ್ಟು ಚಿಂತಾಕ್ರಾಂತರಾಗಿದ್ದರು. ಅಲ್ಲದೆ ಮರುದಿನ ಅಣ್ಣನ ಅಂತ್ಯಸಂಸ್ಕಾರಕ್ಕೆ ತಮ್ಮನಂತೆ ಹೆಗಲು ಕೂಡ ಕೊಟ್ಟಿದ್ದರು. ಮಂಡ್ಯಕ್ಕೆ ಸೇನಾ ಹೆಲಿಕಾಪ್ಟರ್ ತರಿಸುವುದರಿಂದ ಹಿಡಿದು ಅಂತಿಮ ದರ್ಶನಕ್ಕೆ ವ್ಯವಸ್ಥೆಯನ್ನೂ ಕಲ್ಪಿಸಿದ್ರು. ಮಂಡ್ಯಕ್ಕೆ ಖುದ್ದು ಭೇಟಿ ಕೊಟ್ಟು ಗಲಾಟೆ ಆಗದಂತೆ ನೋಡಿಕೊಂಡಿದ್ದರು. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರಕ್ಕೂ ವ್ಯವಸ್ಥೆ ಮಾಡಿಕೊಟ್ಟಿದ್ದರು. ಹೀಗೆ ಮುಖ್ಯಮಂತ್ರಿ ಅನ್ನೋದನ್ನೂ ಕೂಡ ಮರೆತು ಕುಮಾರಸ್ವಾಮಿಯವರು ಅಂದು ಅಂಬರೀಶ್ ಅಂತ್ಯಸಂಸ್ಕಾರವನ್ನು ತೀರಾ ಮುತುವರ್ಜಿಯಿಂದ ನೆರವೇರಿಸಿದ್ದರು. ಆದ್ರೆ ಇಂದು ಸಿಎಂ ಸಹೋದರನ ಒಂದು ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ತಲ್ಲಣವೇ ಏರ್ಪಟ್ಟಿದೆ.

    ಈ ಕಡೆ, ತಂದೆಯಂತೆ ಮಗ ನಿಖಿಲ್ ಕೂಡ ಧೈರ್ಯ ತುಂಬಿದ್ದರು. ಅಣ್ಣನಂತೆ ಅಭಿಷೇಕ್‍ಗೆ ಸಾಂತ್ವಾನ ಹೇಳಿದ್ದರು. ಅಂತ್ಯಸಂಸ್ಕಾರ ಆಗುವವರೆಗೂ ಅಭಿಷೇಕ್ ಜೊತೆಯಲ್ಲಿದ್ದರು. ಈಗ ಕಾಲ ಬದಲಾಗಿ ಹೋಗಿದೆ. ಅಧಿಕಾರಕ್ಕಾಗಿ ಫೈಟ್ ಶುರುವಾಗಿದೆ. ಅಂಬಿ ನಿಧನದ ಎರಡೂವರೆ ತಿಂಗಳಲ್ಲಿ ರಾಜಕೀಯ ಬೇಕಿತ್ತಾ ಅನ್ನೋ ಪ್ರಶ್ನೆ ಇದೀಗ ಅಂಬಿ ಅಭಿಮಾನಿಗಳನ್ನು ಮತ್ತಷ್ಟು ಕೆರಳಿಸುವಂತೆ ಮಾಡಿದೆ.

    https://www.youtube.com/watch?v=BGvmKX3g6b8

    https://www.youtube.com/watch?v=1zAHuxijg6Q

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಮ್ಮನ ಕ್ಷೇತ್ರದಲ್ಲಿ ಅಣ್ಣನ ದರ್ಬಾರ್- 1.90 ಕೋಟಿಯ ಕಾಮಗಾರಿಗೆ ಸೀಕ್ರೆಟ್ ಟೆಂಡರ್..!

    ತಮ್ಮನ ಕ್ಷೇತ್ರದಲ್ಲಿ ಅಣ್ಣನ ದರ್ಬಾರ್- 1.90 ಕೋಟಿಯ ಕಾಮಗಾರಿಗೆ ಸೀಕ್ರೆಟ್ ಟೆಂಡರ್..!

    ರಾಮನಗರ: ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸ್ವಕ್ಷೇತ್ರ ಚನ್ನಪಟ್ಟಣ. ಸಿಎಂ ಸ್ವಕ್ಷೇತ್ರದಲ್ಲೇ ಅವರ ಸಹೋದರ ಎಚ್.ಡಿ ರೇವಣ್ಣರ ಲೋಕೋಪಯೋಗಿ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆದಿದೆ. ಸರ್ಕಾರಿ ನೀತಿ ನಿಯಮಗಳನ್ನೇ ಗಾಳಿಗೆ ತೂರಿ ಮೂರೇ ದಿನಗಳಲ್ಲಿ ಸೀಕ್ರೆಟ್ ಟೆಂಡರ್ ನಡೆಸಲಾಗಿದೆ. ಇತ್ತ ಅನಿತಾ ಮೇಡಂ ಕ್ಷೇತ್ರದಲ್ಲೂ ಸೀಕ್ರೆಟ್ ಟೆಂಡರ್ ನಡೀತಿದೆ.

    ಹೌದು. ಸಿಎಂ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಸಿಎಂ ಸೋದರ ಎಚ್.ಡಿ ರೇವಣ್ಣನವರ ಲೋಕೋಪಯೋಗಿ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿಗಳ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯಲ್ಲಿ ಗೋಲ್‍ಮಾಲ್ ನಡೆದಿದೆ. ಅದು ಕೂಡ ತಮ್ಮನ ಕ್ಷೇತ್ರದಲ್ಲಿ ಅಣ್ಣನ ಇಲಾಖೆಯಲ್ಲಿ ನಡೆದಿರುವ ಅವ್ಯವಹಾರ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸಿಎಂ ಅನುಯಾಯಿಗಳಿಗೆ ಸೀಕ್ರೆಟ್ ಟೆಂಡರ್ ಮೂಲಕ ಕಾಮಗಾರಿ ನೀಡಿರುವುದು ಉಳಿದ ಗುತ್ತಿಗೆದಾರರ ಆಕ್ರೋಶಕ್ಕೆ ಕಾರಣವಾಗಿದೆ.

    ಸಿಎಂಜಿಆರ್ ವೈ ಯೋಜನೆಯಡಿಯಲ್ಲಿ ಚನ್ನಪಟ್ಟಣ ತಾಲೂಕಿನ ರಸ್ತೆಗಳ ಅಭಿವೃದ್ಧಿಗಾಗಿ 1.90 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಸೀಕ್ರೆಟ್ ಟೆಂಡರ್ ಖಂಡಿಸಿ ರಾಮನಗರದ ಲೋಕೋಪಯೋಗಿ ಇಲಾಖೆ ಮುಂದೆ ಗುತ್ತಿಗೆದಾರರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು.

    ಯಾವುದೇ ಕಾಮಗಾರಿಗಳು ನಡೆಯಬೇಕಿದ್ರೂ ಇಲಾಖೆಗೆ ಅನುದಾನ ಬಂದ ತಕ್ಷಣ ಜಿಲ್ಲಾಧಿಕಾರಿಗಳಿಂದ ಆಡಳಿತಾತ್ಮಕ ಅನುಮೋದನೆ ಪಡೆದು ಆನಂತರ ನೋಟಿಫಿಕೇಷನ್ ಹೊರಡಿಸಬೇಕು. ಅಲ್ಲದೆ ನಾಮಫಲಕದಲ್ಲಿ ನೋಟಿಸ್ ಹಾಗೂ ಪತ್ರಿಕಾ ಜಾಹಿರಾತುಗಳನ್ನು ನೀಡಬೇಕು. ಆದ್ರೆ ಸರ್ಕಾರದ ಪಾರದರ್ಶಕ ನಿಯಮಗಳನ್ನು ಗಾಳಿಗೆ ತೂರಿ ಸಿಎಂ ಕುಮಾರಸ್ವಾಮಿಯವರ ಅನುಯಾಯಿಗಳಿಗೆ ಮಾತ್ರ ಟೆಂಡರ್ ನೀಡಲಾಗಿದೆ ಎಂದು ಗುತ್ತಿಗೆದಾರ ಪ್ರೇಮ್ ಕುಮಾರ್ ಗರಂ ಆಗಿದ್ದಾರೆ.

    ಅನಿತಾ ಕುಮಾರಸ್ವಾಮಿ ಕ್ಷೇತ್ರದಲ್ಲೂ ಟೆಂಡರ್ ಗೋಲ್‍ಮಾಲ್:
    ಕೇವಲ ಚನ್ನಪಟ್ಟಣ ಮಾತ್ರವಲ್ಲದೆ ರಾಮನಗರ ಕ್ಷೇತ್ರದಲ್ಲೂ ಕೂಡ ಇದೇ ಪರಿಸ್ಥಿತಿಯಿದ್ದು ಸುಮಾರು 1 ಕೋಟಿಯಷ್ಟು ಕಾಮಗಾರಿ ಶಾಸಕಿ ಅನಿತಾ ಕುಮಾರಸ್ವಾಮಿ ಬೆಂಬಲಿಗರ ಪಾಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಒಟ್ಟಾರೆ ಸಿಎಂ ಕ್ಷೇತ್ರದಲ್ಲೇ ಅವರ ಸೋದರ ಎಚ್.ಡಿ ರೇವಣ್ಣನವರ ಲೋಕೋಪಯೋಗಿ ಇಲಾಖೆಯಲ್ಲಿ ಅಭಿವೃದ್ಧಿ ಕಾಮಗಾರಿಯ ಟೆಂಡರ್‍ನಲ್ಲಿ ಅಧಿಕಾರಿಗಳು ಅವ್ಯವಹಾರ ನಡೆಸುತ್ತಿದ್ದು ಗುತ್ತಿಗೆದಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೋಕಸಭೆ ಮೈತ್ರಿಗೆ ಕಾಂಗ್ರೆಸ್ ಸಮ್ಮತಿ ಇಲ್ಲ ಅಂದ್ರೆ ಫ್ರೆಂಡ್ಲಿ ಫೈಟ್: ರೇವಣ್ಣ

    ಲೋಕಸಭೆ ಮೈತ್ರಿಗೆ ಕಾಂಗ್ರೆಸ್ ಸಮ್ಮತಿ ಇಲ್ಲ ಅಂದ್ರೆ ಫ್ರೆಂಡ್ಲಿ ಫೈಟ್: ರೇವಣ್ಣ

    – ನಮ್ಮ ಪಕ್ಷಕ್ಕೆ ಒಟ್ಟು 12 ಸೀಟುಗಳು ಬೇಕು
    – ಮೈತ್ರಿಯಾದ್ರೆ 28 ಕ್ಷೇತ್ರಗಳ ಗೆಲವು ಖಚಿತ

    ಹಾಸನ: ರಾಷ್ಟ್ರದಲ್ಲಿ ಕೋಮುವಾದಿ ಶಕ್ತಿಗಳನ್ನು ದೂರವಿಡಲು ಕಾಂಗ್ರೆಸ್‍ನೊಂದಿಗೆ ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡರು ಕೈಜೋಡಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಸಮ್ಮತಿ ಇಲ್ಲವೆಂದರೆ ಫ್ರೆಂಡ್ಲಿ ಫೈಟ್ ಮಾಡುತ್ತೇವೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

    ನಗರದ ಕೆಡಿಪಿ ಸಭೆ ಬಳಿಕ ಮಾತನಾಡಿದ ಅವರು, ಹಾಸನದ ಕ್ಷೇತ್ರದಿಂದ ಸ್ಪರ್ಧಿಸುವ ಮೊದಲ ಆದ್ಯತೆಯನ್ನು ಎಚ್.ಡಿ.ದೇವೇಗೌಡ ಅವರಿಗೆ ನೀಡಲಾಗುತ್ತದೆ. ಅವರು ಸ್ಪರ್ಧಿಸದಿದ್ದರೆ ಪುತ್ರ ಪ್ರಜ್ವಲ್ ರೇವಣ್ಣ ಕಣಕ್ಕೆ ಇಳಿಯುತ್ತಾರೆ. ಇದನ್ನು ವಿರೋಧಿಸಿ ಕಾಂಗ್ರೆಸ್‍ನವರು ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ ನಾವೇನು ಮಾಡಲು ಸಾಧ್ಯವಿಲ್ಲ ಎಂದರು.

    ಸೀಟು ಹಂಚಿಕೆ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಸಚಿವರು, ನಮಗೆ 12 ಸೀಟು ನೀಡಬೇಕೆಂದು ಜೆಡಿಎಸ್ ಶಾಸಕರು ಒತ್ತಾಯಿಸಿದ್ದಾರೆ. ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ 18 ಲೋಕಸಭಾ ಕ್ಷೇತ್ರಗಳಿಂದ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದರು. ಹೀಗಾಗಿ ನಮಗೆ ಈ ಬಾರಿ 12 ಸೀಟು ಬಿಟ್ಟುಕೊಡುವಂತೆ ಕಾಂಗ್ರೆಸ್ ಹೈಕಮಾಂಡ್‍ಗೆ ತಿಳಿಸಿದ್ದೇವೆ. ಈ ವಿಚಾರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ದೇವೇಗೌಡ ಅವರು ಚರ್ಚೆ ಮಾಡುತ್ತಾರೆ. ಅವರ ತೀರ್ಮಾನವೇ ಅಂತಿಮ ಎಂದು ತಿಳಿಸಿದರು.

    ರಾಜ್ಯದ 28 ಕ್ಷೇತ್ರಗಳಲ್ಲಿ ಜಯಗಳಿಸುವ ಉದ್ದೇಶವಿದ್ದರೆ ಮೈತ್ರಿಯಾಗಿ ಚುನಾವಣೆ ಎದುರಿಸಬೇಕು. ಎಲ್ಲ ಕ್ಷೇತ್ರಗಳಲ್ಲಿಯೂ ಜಯಗಳಿಸುವ ಮೂಲಕ ಕೋಮುವಾದಿಗಳನ್ನು ದೂರವಿಡಲು ಸಾಧ್ಯವಾಗುತ್ತದೆ ಎಂದು ಹೇಳಿ ಬಿಜೆಪಿಯವರಿಗೆ ಟಾಂಗ್ ಕೊಟ್ಟರು.

    ಜಿಲ್ಲೆಯ ಕುಡಿಯು ನೀರಿನ ಸಮಸ್ಯೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಕುಡಿಯುವ ನೀರಿಗೆ ಎಲ್ಲಿಯೂ ಸಮಸ್ಯೆ ಆಗಬಾರದೆಂದು ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸಾಲಮನ್ನಾ ಚೆಕ್‍ಗಳನ್ನು ಆಯಾ ಬ್ಯಾಂಕ್ ಅಧಿಕಾರಿಗಳು ಕೊಡಬೇಕು ಎಂದ ಅವರು, ಜಿಲ್ಲೆಯಲ್ಲಿ ಉದ್ಯೋಗ ಮೇಳ ನಡೆಯಲಿದ್ದು, ಪ್ರಮುಖ ಕಂಪನಿಗಳು ಸೇರಿದಂತೆ ನೂರು ಕಂಪನಿಗಳು ಬರುತ್ತವೆ ಎಂದರು.

    ದೇವರ ಆಶೀರ್ವಾದ ಇದ್ದರೆ ನಾನು ಮುಖ್ಯಮಂತ್ರಿ ಆಗುತ್ತೇನೆಂದು ಸಚಿವ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ನನಗೆ ಜಿಲ್ಲೆಯ ಅಭಿವೃದ್ಧಿಯೇ ಮುಖ್ಯ. ಅದೆಲ್ಲ ನನಗೆ ಗೊತ್ತಿಲ್ಲ ಎಂದ ಸಚಿವರು, ಪ್ರಜ್ವಲ್ ರೇವಣ್ಣ ಸ್ಪರ್ಧೆ ಕುರಿತು ಪಕ್ಷ ತೀರ್ಮಾನ ಮಾಡುತ್ತದೆ. ಸೂರಜ್ ರೇವಣ್ಣ ಚುನಾವಣೆಗೆ ನಿಲ್ಲುವುದಿಲ್ಲ ಹಾಗೂ ಈ ನಿಟ್ಟಿನಲ್ಲಿ ಯಾವುದೇ ಚಿಂತನೆ ಇಲ್ಲ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಚಿವ ರೇವಣ್ಣಗೆ ಜೆಡಿಎಸ್ ಶಾಸಕ ಅವಾಜ್..!

    ಸಚಿವ ರೇವಣ್ಣಗೆ ಜೆಡಿಎಸ್ ಶಾಸಕ ಅವಾಜ್..!

    ಹಾಸನ: ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರಿಗೆ ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇ ಗೌಡ ಇಂದು ಅವಾಜ್ ಹಾಕಿದ್ದಾರೆ.

    ಹಾಸನ ಕೆಡಿಪಿ ಸಭೆಯಲ್ಲಿ ರೇವಣ್ಣ ಹಾಗೂ ಶಿವಲಿಂಗೇ ಗೌಡ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಕುಡಿಯುವ ನೀರಿನ ಟ್ಯಾಂಕರ್ ಗೆ ಬಿಲ್ ಮಂಜೂರು ವಿಚಾರದಲ್ಲಿ ಇವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ.

    ಬಿಲ್ ಮಂಜೂರಿಗೂ ಮುನ್ನ ರೇವಣ್ಣ ಅವರು ಥರ್ಡ್ ಪಾರ್ಟಿ ವಿಚಾರಣೆ ಮಾಡಿ ಟ್ಯಾಂಕರ್ ಗಳಲ್ಲಿ ನೀರು ಕೊಟ್ಟು ಬಿಲ್ ಮಾಡಬೇಡಿ. ಬೋರ್ ವೆಲ್ ತೆಗೆಸಿ ಎಂದು ಹೇಳಿದ್ದಾರೆ. ಇದರಿಂದ ಸಿಟ್ಟುಗೊಂಡ ಶಾಸಕರು, ಅಣ್ಣೋ.. ನನ್ನ ಮೇಲೆ ಅನುಮಾನ ಪಡುತ್ತಿದ್ದೀರಾ. ನಾನು 227 ಹಳ್ಳಿಗಳೀಗೆ ಟ್ಯಾಂಕರ್ ಗಳಲ್ಲಿ ನೀರು ಕೊಡಿಸಿದ್ದೀನಿ ಎಂದು ಯಾವನೋ ಹೇಳಿದ್ದು ಎಂದು ಏರು ಧ್ವನಿಯಲ್ಲೇ ಪ್ರಶ್ನಿಸಿದ್ದಾರೆ.

    ಅಲ್ಲದೆ ನಾನು ಒಂದು ರೂಪಾಯಿ ಹಣ ದುರುಪಯೋಗ ಮಾಡಿಲ್ಲ. ಅಧಿಕಾರಿಗಳೇನು ದನ ಕಾಯೋಕೆ ಹೋಗಿದ್ದೀರಾ. ಎಂದು ಮತ್ತೆ ಪ್ರಶ್ನಿಸಿದ ಶಾಸಕರು ಯಾರು ಹಣ ದುರುಪಯೋಗ ಮಾಡಿದ್ದಾರೆ ಅವರನ್ನು ಸೆಂಟ್ರಲ್ ಜೈಲಿಗೆ ಕಳುಹಿಸಿ ಎಂದು ಅವಾಜ್ ಹಾಕಿದ್ದಾರೆ. ಶಿವಲಿಂಗೇಗೌಡ ಮಾತಿಗೆ ಸಚಿವ ರೇವಣ್ಣ ಅವರು ಒಂದು ಬಾರಿ ತಬ್ಬಿಬ್ಬಾಗಿದ್ದಾರೆ. ಬಳಿಕ ಆಯ್ತು ಶಿವಲಿಂಗಣ್ಣ ಪಾಪ ನಾಲ್ಕು ವರ್ಷದಿಂದ ಕಷ್ಟಪಟ್ಟಿದ್ದಾನೆ ಬಿಲ್ ಕೊಡಿ ಎಂದು ಅಧಿಕಾರಿಗಳಿಗೆ ರೇವಣ್ಣ ಅವರು ಸೂಚಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೋಕಸಭಾ ಚುನಾವಣೆ: ಸೂರಜ್ ರೇವಣ್ಣ ಹಾಸನದಿಂದ ಕಣಕ್ಕೆ?

    ಲೋಕಸಭಾ ಚುನಾವಣೆ: ಸೂರಜ್ ರೇವಣ್ಣ ಹಾಸನದಿಂದ ಕಣಕ್ಕೆ?

    ಹಾಸನ: ಲೋಕಸಭಾ ಚುನಾವಣೆಗೆ ಹಾಸನ ಕ್ಷೇತ್ರದಿಂದ ಈ ಬಾರಿ ಯಾರು ಸ್ಪರ್ಧಿಸಲಿದ್ದಾರೆ ಎನ್ನುವ ಬಗ್ಗೆ ತೀವ್ರ ಕುತೂಹಲ ಹುಟ್ಟಿದೆ. ಈ ಬೆನ್ನಲ್ಲೇ ಇದೀಗ ಈ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸಚಿವ ರೇವಣ್ಣ ಹಿರಿಯ ಪುತ್ರ ಸೂರಜ್ ರೇವಣ್ಣ ಅವರು ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

    ಹೌದು. ಪ್ರಜ್ವಲ್ ರೇವಣ್ಣ ಬದಲು ಹಾಸನ ಲೋಕಸಭಾ ಕ್ಷೇತ್ರದಿಂದ ಸೂರಜ್ ರೇವಣ್ಣ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ಚಿಂತನೆ ನಡೆಸಿದೆ ಎಂಬುದಾಗಿ ಪಕ್ಷದ ಮೂಲಗಳು ತಿಳಿಸಿವೆ.

    ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಯವರು ಹಾಸನಕ್ಕೆ ಆಗಮಿಸಿದಾಗ ಪ್ರಜ್ವಲ್ ರೇವಣ್ಣ ಅವರು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಬದಲಾಗಿ ಸೂರಜ್ ರೇವಣ್ಣ ಅವರು ಮುಂಚೂಣಿಯಲ್ಲಿದ್ದರು. ಪ್ರಜ್ವಲ್ ರೇವಣ್ಣರ ಪ್ರಭಾವ ಕಡಿಮೆಯಾದ ಹಿನ್ನೆಲೆಯಲ್ಲಿ ಹಿರಿಯ ಪುತ್ರನನ್ನ ಕಣಕ್ಕಿಳಿಸಲು ಚಿಂತಿಸಿದ್ದಾರೆ. ಹೀಗಾಗಿ ಸೂರಜ್ ಅವರು ಸಚಿವ ರೇವಣ್ಣನವರ ಪಕ್ಷದ ಎಲ್ಲಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಈಗಾಗಲೇ ಜಿಲ್ಲೆಯ ಕಾಂಗ್ರೆಸ್ ನಾಯಕರು ಕೂಡ ಪ್ರಜ್ವಲ್ ಸ್ಪರ್ಧಿಸಿದರೆ ನಮ್ಮ ಬೆಂಬಲವಿಲ್ಲ ಎಂದು ಹೇಳುವ ಮೂಲಕ ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ವಿರೋಧಿಸಿದ್ದರು. ಹೀಗಾಗಿ ಜೆಡಿಎಸ್ ಈಗ ಸೂರಜ್ ರೇವಣ್ಣರನ್ನ ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿದ್ದು, ಈಗಾಗಲೇ ತಂದೆಯ ನೆರಳಿನಲ್ಲಿ ರಾಜಕಾರಣದಲ್ಲಿ ತೊಡಗಿಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದ ದಂಡಿಗನಹಳ್ಳಿ ಉಸ್ತುವಾರಿ ವಹಿಸಿಕೊಂಡಿದ್ದ ಸೂರಜ್ ರೇವಣ್ಣ, ಇದೀಗ ಹಾಸನ ಜಿಲ್ಲೆಯ ಉಸ್ತುವಾರಿಯನ್ನು ಕೂಡ ವಹಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

    ರಾಜ್ಯ ಸರ್ಕಾರದ ರೈತರ ಸಾಲಮನ್ನಾ ಹಕ್ಕು ಪತ್ರ ವಿತರಣೆಯ ಕಾರ್ಯಕ್ರಮವನ್ನು ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಇದರಲ್ಲಿ ಸಚಿವ ರೇವಣ್ಣ ಪುತ್ರ ಸೂರಜ್ ರೇವಣ್ಣ ಅವರಿಗೆ ವೇದಿಕೆಯಲ್ಲಿ ಮೊದಲ ಸಾಲಿನಲ್ಲಿ ಆಸನ ನೀಡಲಾಗಿತ್ತು.

    ಕಾರ್ಯಕ್ರಮ ಆರಂಭವಾಗುವ ಕೆಲವೇ ನಿಮಿಷಗಳ ಮುಂಚಿತವಾಗಿ ವೇದಿಕೆಗೆ ಆಗಮಿಸಿದ ಸೂರಜ್‍ಗೆ ವೇದಿಕೆಯಲ್ಲಿ ಮುಂದಿನ ಸಾಲಿನಲ್ಲಿಯೇ ಆಸನವನ್ನು ವ್ಯವಸ್ಥೆ ಮಾಡಿಕೊಟ್ಟಿದ್ದರು. ಯಾವುದೇ ಚುನಾಯಿತ ಪ್ರತಿನಿಧಿ ಆಗದೇ ಇದ್ದರೂ ವೇದಿಕೆಯಲ್ಲಿ ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ಸೂರಜ್ ವೇದಿಕೆಯಲ್ಲಿ ಕುಳಿತಿದ್ದರು. ಒಂದು ಕಡೆ ಪೊಲೀಸ್ ಐಜಿ ಮತ್ತೊಂದೆಡೆ ಎಸ್‍ಪಿ ನಡುವೆ ಸೂರಜ್ ಕುಳಿತುಕೊಂಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಎಂ ಎಚ್‍ಡಿಕೆ, ರೇವಣ್ಣ ಗೂಂಡಾ ಪ್ರವೃತ್ತಿಗೆ ಜಗ್ಗಲ್ಲ – ಕೇಂದ್ರದ ಗಮನಕ್ಕೆ ತರುತ್ತೇವೆ: ಬಿಎಸ್‍ವೈ

    ಸಿಎಂ ಎಚ್‍ಡಿಕೆ, ರೇವಣ್ಣ ಗೂಂಡಾ ಪ್ರವೃತ್ತಿಗೆ ಜಗ್ಗಲ್ಲ – ಕೇಂದ್ರದ ಗಮನಕ್ಕೆ ತರುತ್ತೇವೆ: ಬಿಎಸ್‍ವೈ

    ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರು ಕಳೆದ ಮೂರು ತಿಂಗಳ ಹಿಂದೆಯೇ ಅಗತ್ಯ ಬಿದ್ದರೆ ಜನರನ್ನು ಬೀದಿಗೆ ತರುತ್ತೇನೆ ಎಂದು ಹೇಳಿದ್ದರು. ಆದರಂತೆ ಹಾಸನದಲ್ಲಿ ಶಾಸಕ ಪ್ರೀತಂಗೌಡ ಅವರ ಮನೆಯ ಮೇಲೆ ದಾಳಿ ನಡೆಸಿ ಗೂಂಡಾಗಿರಿ ತೋರಿದ್ದು, ಈ ಮೂಲಕ ಸಿಎಂ ಕೆಳ ಮಟ್ಟದ ರಾಜಕಾರಣ ಮಾಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಬೆದರಿಕೆಗೆ ನಾವು ಜಗ್ಗಲ್ಲ. ಇದನ್ನೆಲ್ಲ ಎದುರಿಸುವ ಶಕ್ತಿ ನಮಗಿದ್ದು, ಕೇಂದ್ರದ ಗೃಹ ಸಚಿವ ರಾಜನಾಥ್ ಸಿಂಗ್‍ಗೆ ವಿಷಯ ಗಮನಕ್ಕೆ ತರುತ್ತೇವೆ. ಹಾಸನದಲ್ಲಿ ಯುವಕ ಗೆದ್ದು ಬಂದಿದ್ದಾರೆ ಎನ್ನುವುದು ರೇವಣ್ಣ, ದೇವೇಗೌಡ ಅವರಿಗೆ ಸಹಿಸಲು ಆಗುತ್ತಿಲ್ಲ. ಅವರನ್ನು ಬಗ್ಗು ಬಡಿಯಲು ಯತ್ನಿಸಿದರೆ ಅದು ಸಾಧ್ಯವಾಗುವುದಿಲ್ಲ ಎಂದರು. ಇದನ್ನು ಓದಿ: ಸಂಬಂಧ ಇಲ್ಲದೇ ಇರೋ ವಿಷಯದ ಬಗ್ಗೆ ನಾನು ಮಾತನಾಡಲ್ಲ: ಪ್ರೀತಮ್ ಗೌಡ

    ಗೂಂಡಾಗಿರಿ ಮಾಡಲು ಸಾಧನೆ ಮಾಡಲು ಯತ್ನಿಸಿದರೆ ಅದು ಪ್ರಯೋಜನ ನೀಡಲ್ಲ. ನಮ್ಮ ಒಬ್ಬ ಕಾರ್ಯಕರ್ತನ ಮೇಲೆ ಹಲ್ಲೆ ಆಗಿದ್ದು, ಆಸ್ಪತ್ರೆ ಸೇರಿದ್ದಾರೆ. ಇವರ ಗೂಂಡಾಗಿರಿ ವಿರುದ್ಧ ಸ್ವತಃ ನಾನೇ ಹಾಸನಕ್ಕೆ ಭೇಟಿ ನೀಡಿ ಸದ್ಯದಲ್ಲೇ ಪ್ರತಿಭಟನಾ ಸಭೆ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದರು. ಇದನ್ನು ಓದಿ: ದೇವೇಗೌಡರ ವಿಕೆಟ್ ಉರುಳುತ್ತೆ ಎಂದ ಪ್ರೀತಮ್ ಗೌಡ ವಿರುದ್ಧ ಪ್ರತಿಭಟನೆ

    ಇದೇ ವೇಳೆ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕಿಡಿಕಾರಿದ ಬಿಎಸ್‍ವೈ, ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಲಾಗಿದೆ. ಯಾವ ಕಿಡಿಗೇಡಿಗಳು ಇಂತಹ ಕೃತ್ಯ ನಡೆಸಿದ್ದಾರೆ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನಿಮ್ಮ ವಿರುದ್ಧವೂ ಕೂಡ ಪ್ರತಿಭಟನೆ ನಡೆಸಬೇಕಾಗುತ್ತದೆ. ಕೇಂದ್ರ ಗೃಹ ಸಚಿವರಿಗೂ ಕೂಡ ಈ ಬಗ್ಗೆ ಮಾಹಿತಿ ನೀಡಿ ಕ್ರಮಕ್ಕೆ ಆಗ್ರಹಿಸುತ್ತೇವೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಜೆಟ್‍ಗೆ ಮುಹೂರ್ತ ಇಟ್ಟಿದ್ದು ನಾನು – ತಪ್ಪೋಕೆ ಸಾಧ್ಯವೇ ಇಲ್ಲ: ಎಚ್‍ಡಿ ರೇವಣ್ಣ

    ಬಜೆಟ್‍ಗೆ ಮುಹೂರ್ತ ಇಟ್ಟಿದ್ದು ನಾನು – ತಪ್ಪೋಕೆ ಸಾಧ್ಯವೇ ಇಲ್ಲ: ಎಚ್‍ಡಿ ರೇವಣ್ಣ

    ಬೆಂಗಳೂರು: ಆಪರೇಷನ್ ಕಮಲ ಆಡಿಯೋ ಬಿಡುಗಡೆ ಕುರಿತು ಸದನದಲ್ಲಿ ಗಂಭಿರ ಚರ್ಚೆ ನಡೆಯುತ್ತಿದ್ದಾಗ ಲೋಕೋಪಯೋಗಿ ಸಚಿವ ರೇವಣ್ಣ ಅವರು ಆಡಿದ ಕೆಲ ಮಾತುಗಳು ಸದನದಲ್ಲಿ ನಗುವಿನ ಅಲೆಯನ್ನು ಸೃಷ್ಟಿಸಿತ್ತು.

    ಆಡಿಯೋ ತನಿಖೆಯನ್ನ ಎಸ್‍ಐಟಿಗೆ ವಹಿಸಬೇಕು ಎಂಬ ಚರ್ಚೆ ಕುರಿತಂತೆ ರೇವಣ್ಣ ಅವರು ಸದನದಲ್ಲಿ ಮಾತನಾಡಲು ಸ್ಪೀಕರ್ ಅವಕಾಶ ನೀಡಿದರು. ಆದರೆ ಈ ವೇಳೆ ರೇವಣ್ಣರನ್ನು ಕಾಲೆಳೆದ ಸ್ಪೀಕರ್ ಅವರು, ರೇವಣ್ಣ ಅವರು ಈಗ ಮಾತನಾಡುತ್ತಾರೆ. 1 ನಿಮಿಷ ಲೇಟಾದರೆ ಅವರು ಮಾತಾಡಲ್ಲ ಎಂದು ಸ್ಪೀಕರ್ ಹೇಳಿದರು.

    ಈ ವೇಳೆ ಶಾಸಕ ಸಿಟಿ ರವಿ ಮಾತನಾಡಲು ಯತ್ನಿಸಿದರು. ಇದಕ್ಕೆ ರೇವಣ್ಣ ಅಡ್ಡಿಪಡಿಸಿ `ಏಯ್ ಕೂತ್ಕಳಪ್ಪಾ’ ಎಂದರು. ಇದಕ್ಕೆ ಗರಂ ಆದ ಸಿಟಿ ರವಿ ಅವರು, ನಾನೇನು ನಿಮ್ಮ ಮನೆ ಆಳಲ್ಲ ಎಂದು ಸಿಟ್ಟಾದರು. ಅಲ್ಲದೇ ನಾವು ಮೂರು ತಿಂಗಳು ಸುಮ್ಮನಿದ್ದಿದ್ದರೆ ಇದ್ಯಾವುದು ಬರುತ್ತಿರಲಿಲ್ಲ ಎಂದರು. ಈ ಮಾತು ಹೇಳುತ್ತಿದಂತೆ ಚಾಟಿ ಬೀಸಿದ ಸ್ಪೀಕರ್, ಹಾಗಾದರೆ ಏಕೆ ಆತುರ ಪಟ್ಟಿದ್ದೀರಾ ಎಂದರು.

    ಬಳಿಕ ಮಾತನಾಡಿದ ರೇವಣ್ಣ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಈ ಬಾರಿ ಸಿಎಂ ಬಜೆಟ್ ಮಂಡಿಸಲ್ಲ ಎಂದು ಆರ್ ಅಶೋಕ್ ಹೇಳಿದ್ದರು. ಆದರೆ ಬಜೆಟ್‍ಗೆ ಮುಹೂರ್ತ ಇಟ್ಟಿದ್ದು ನಾನು. ತಮಿಳುನಾಡು ಜ್ಯೋತಿಷ್ಯ ನೋಡಿ ಮುಹೂರ್ತ ಇಟ್ಟಿದ್ದೇನೆ. ತಪ್ಪೋಕೆ ಸಾಧ್ಯವೇ ಇಲ್ಲ ಎಂದರು. ರೇವಣ್ಣ ಮಾತಿಗೆ ಸದನದಲ್ಲಿ ನಗೆ ಉಕ್ಕಿತು. ಅಂತಿಮವಾಗಿ ಸ್ಪೀಕರ್ ನಿರ್ಧಾರವನ್ನು ಮುಖ್ಯಮಂತ್ರಿಗಳು ಜಾರಿಗೆ ತರುತ್ತಾರೆ ಎಂದು ಹೇಳಿ ತಮ್ಮ ಮಾತನ್ನು ಪೂರ್ಣಗೊಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv