Tag: HD Revanna

  • ಸಿಎಂ ಕುಮಾರಸ್ವಾಮಿ ಹೇಳಿದ್ದು ಸರಿ: ಸಿದ್ದರಾಮಯ್ಯ

    ಸಿಎಂ ಕುಮಾರಸ್ವಾಮಿ ಹೇಳಿದ್ದು ಸರಿ: ಸಿದ್ದರಾಮಯ್ಯ

    -ಹೆಚ್‍ಡಿಕೆ ವಿರುದ್ಧ ಸಿದ್ದು ಟ್ವೀಟಾಸ್ತ್ರ!
    -ಹೆಚ್‍ಡಿಕೆ ವಿರುದ್ಧ ರೇವಣ್ಣರನ್ನ ಎತ್ತಿಕಟ್ಟಿದ್ರಾ ಮಾಜಿ ಸಿಎಂ!

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದು, ಈ ಹಿಂದೆ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ಸರಿಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ.

    ಟ್ವೀಟ್: ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದು ಸರಿಯಾಗಿದೆ. ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿಎಂ ಸ್ಥಾನ ಮಾತ್ರವಲ್ಲ, ಅದಕ್ಕಿಂತಲೂ ಉನ್ನತ ಸ್ಥಾನದ ಅರ್ಹತೆಯಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಸಿಎಂ ಸ್ಥಾನದ ಅರ್ಹತೆಯ ಬಹಳ ಜನ ಇದ್ದಾರೆ. ಅವರಲ್ಲಿ ಹೆಚ್.ಡಿ.ರೇವಣ್ಣ ಕೂಡಾ ಒಬ್ಬರು. ಎಲ್ಲಕ್ಕೂ ಕಾಲ ಕೂಡಿ ಬರಬೇಕು ಎಂದು ಬರೆದುಕೊಂಡಿದ್ದಾರೆ.

    ಈ ಹಿಂದೆ ಸಿಎಂ ಕುಮಾರಸ್ವಾಮಿ ಉಪ ಚುನಾವಣೆ ಪ್ರಚಾರದಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಿಎಂ ಸ್ಥಾನಕ್ಕೆ ಅರ್ಹರು ಎಂದು ಸಿದ್ದರಾಮಯ್ಯ ಬೆಂಬಲಿಗರ ವಿರುದ್ಧ ಮಾತಿನ ಚಾಟಿ ಬೀಸಿದ್ದರು. ಈ ಹೇಳಿಕೆಯ ಮೂಲಕ ಸಿದ್ದರಾಮಯ್ಯ ಮತ್ತೆ ಸಿಎಂ ಕೂಗಿಗೆ ಟಾಂಗ್ ನೀಡಿದ್ದರು. ಇದೀಗ ಸಿಎಂ ಮಾತಿನೇಟಿಗೆ ಸಿದ್ದರಾಮಯ್ಯನವರು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

    ಕಾಂಗ್ರೆಸ್‍ನಲ್ಲಿ ಹೇಗೆ ಸಿಎಂ ಸ್ಥಾನಕ್ಕಾಗಿ ಹಲವು ಆಕಾಂಕ್ಷಿಗಳಿದ್ದಾರೋ ಹಾಗೆಯೇ ಜೆಡಿಎಸ್ ನಲ್ಲಿಯೂ ಸಿಎಂ ಸ್ಥಾನಕ್ಕೆ ಹೆಚ್.ಡಿ.ರೇವಣ್ಣ ಅರ್ಹರಿದ್ದಾರೆ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಒಬ್ಬರೇ ಸಿಎಂ ಸ್ಥಾನಕ್ಕೆ ಸೂಕ್ತ ನಾಯಕ ಅಲ್ಲ ಎಂಬ ಸಂದೇಶವನ್ನು ಟ್ವೀಟ್ ಮೂಲಕ ಹೇಳಿದಂತೆ ಆಗಿದೆ ಎಂಬ ಚರ್ಚೆಗಳು ದೋಸ್ತಿ ಅಂಗಳದಲ್ಲಿ ಆರಂಭಗೊಂಡಿವೆ.

  • ಕೂಲ್ ಕೂಲ್ ಸಚಿವ ರೇವಣ್ಣ ಫುಲ್ ಟೆನ್ಶನ್!

    ಕೂಲ್ ಕೂಲ್ ಸಚಿವ ರೇವಣ್ಣ ಫುಲ್ ಟೆನ್ಶನ್!

    ಹಾಸನ: ಎಲೆಕ್ಷನ್ ಶುರುವಾದಾಗಿನಿಂದ ಗೌಡರ ಫ್ಯಾಮಿಲಿಗೆ ಟೆನ್ಶನ್ ಕಡಿಮೆಯಾದಂತೆ ಕಾಣಿಸ್ತಿಲ್ಲ. ಇಷ್ಟು ದಿನ ಮಂಡ್ಯ ಟೆನ್ಶನ್‍ನಲ್ಲಿ ಸಿಎಂ ಕುಮಾರಸ್ವಾಮಿ ದೇವಸ್ಥಾನವೆಲ್ಲಾ ಸುತ್ತಿದ್ದಾರೆ. ಇದೀಗ ಸಚಿವ ಹೆಚ್.ಡಿ.ರೇವಣ್ಣ ಸಹ ಫುಲ್ ಟೆನ್ಶನ್ ಆಗಿದ್ದಾರೆ.

    ಮಂಡ್ಯ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಂಡು ರಾಜ್ಯದಲ್ಲಿರೋ ದೇವಸ್ಥಾನಗಳಲ್ಲದೆ ಹೊರ ರಾಜ್ಯದ ದೇವಸ್ಥಾನವನ್ನು ಸುತ್ತಿದ್ದ ದೇವೇಗೌಡರ ಕುಟುಂಬಕ್ಕೆ ಈಗ ಹಾಸನದ ಟೆನ್ಶನ್ ಆರಂಭವಾಗಿದೆ. ಸುಳ್ಳು ಅಫಿಡವಿಟ್ ಸಲ್ಲಿಕೆ ಮಾಡಿದ ಆರೋಪದ ಮೇರೆಗೆ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮ ಆರ್.ಪಿ ಆಕ್ಟ್ 125ಎ ಪ್ರಕಾರ ಕ್ರಮಕೈಗೊಳ್ಳುವಂತೆ ಮುಖ್ಯ ಚುನಾವಣಾ ಅಧಿಕಾರಿ ಇದೀಗ ಹಾಸನದ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

    ಪ್ರಜ್ವಲ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿರೋ ದೂರುದಾರ ದೇವರಾಜೇಗೌಡ, ಪ್ರಜ್ವಲ್ ವಿರುದ್ಧ ಕ್ರಮಕೈಗೊಳ್ಳುವವರೆಗು ಮತ ಎಣಿಕೆಯನ್ನೇ ಮಾಡದಂತೆ ಮನವಿ ಮಾಡಿಕೊಳ್ಳಲಿದ್ದಾರೆ. ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಅಫಿಡವಿಟ್ ಏನೆಲ್ಲ ತಪ್ಪಾಗಿದೆ ಎಂಬುವುದು ಈ ಕೆಳಗಿನಂತಿದೆ

    1. ಪ್ರಜ್ವಲ್ ರೇವಣ್ಣ ನಿಯಮದ ಪ್ರಕಾರ ಕನಿಷ್ಠ 5 ವರ್ಷ ಐಟಿ ರಿರ್ಟನ್ ಫೈಲ್ ಮಾಡಿಲ್ಲ.
    2. ಚೆನ್ನಾಂಬಿಕ ಕನ್ವೆಂಷನ್ ಹಾಲ್‍ಗೆ ಸಾಲ ಪಡೆದುದ್ದಾಗಿ ಹೇಳಿದ್ದು. ಆದರೆ ಐಟಿ ಫೈಲ್ ಮಾಡದೇ ಸಾಲ ಸಿಕ್ಕಿದ್ದು ಹೇಗೆ?
    3. ಚೆನ್ನಾಂಬಿಕ ಕನ್ವೆಂಷನ್ ಹಾಲ್‍ನ ಇಂದಿನ ಮಾರುಕಟ್ಟೆ ಬೆಲೆ ಘೋಷಣೆ ಮಾಡಿಲ್ಲ.
    4. ಸಿಎನ್‍ಡಿ ಎಂಟರ್ ಪ್ರೈಸಸ್ ಪ್ರೈವೇಟ್ ಲಿಮಿಟೆಟ್‍ನಲ್ಲಿ ಹೂಡಿಕೆ ತೋರಿಸಿದ್ದು, ಲಾಭ-ಬಡ್ಡಿ ಲೆಕ್ಕ ತೋರಿಸಿಲ್ಲ.

    5. ತಂದೆಯಿಂದ ಬಂದ ಆಸ್ತಿಯ ಮಾರುಕಟ್ಟೆ ಮೌಲ್ಯ ಪಡೆಯಬೇಕು.
    6. ಪ್ರಜ್ವಲ್ ಅನೇಕರಿಗೆ ಸಾಲ ನೀಡಿದ್ದು, ಅದರ ಬಗ್ಗೆ ಘೋಷಣೆ ಮಾಡಿಲ್ಲ.
    7. ಪ್ರಜ್ವಲ್‍ಗೆ ದೇವೇಗೌಡರು 23 ಲಕ್ಷ ಸಾಲ ನೀಡಿದ್ದಾಗಿ ತಮ್ಮ ನಾಮಿನೇಷನ್‍ನಲ್ಲಿ ಹೇಳಿದ್ದಾರೆ. ಆ ಬಗ್ಗೆ ಪ್ರಜ್ವಲ್ ಉಮೇದುವಾರಿಕೆಯಲ್ಲಿ ಉಲ್ಲೇಖಿಸಿಲ್ಲ.

    ಒಟ್ಟಿನಲ್ಲಿ ಸದಾ ಒಂದಲ್ಲ ಒಂದು ಟೆನ್ಶನ್‍ನಲ್ಲಿರೋ ಸಿಎಂ ಜೊತೆಗೆ ಇದೀಗ ರೇವಣ್ಣಗೆ ಹಾಸನದ ಟೆನ್ಶನ್ ಶುರುವಾಗಿದೆ. ಒಂದು ವೇಳೆ ಕ್ರಮ ಕೈಗೊಂಡ್ರೆ ಫಲಿತಾಂಶ ಘೋಷಣೆ ಮಾಡುವುದು ಅನುಮಾನ ಎಂದು ಹೇಳಲಾಗುತ್ತದೆ. ಒಂದು ವೇಳೆ ಆರೋಪ ಸಾಬೀತಾದ್ರೆ 125ಎ ಆರ್‍ಪಿ ಆಕ್ಟ್ ಪ್ರಕಾರ 6 ತಿಂಗಳು ಶಿಕ್ಷೆ ಮತ್ತು ದಂಡ ಕೂಡ ವಿಧಿಸಬಹುದು.

  • ಯಾರ ಹತ್ರನೂ ಡಿಶುಂ, ಡಿಶುಂ ಮಾಡೋ ಅವಶ್ಯಕತೆ ನನಗಿಲ್ಲ: ಹೆಚ್.ಡಿ.ರೇವಣ್ಣ

    ಯಾರ ಹತ್ರನೂ ಡಿಶುಂ, ಡಿಶುಂ ಮಾಡೋ ಅವಶ್ಯಕತೆ ನನಗಿಲ್ಲ: ಹೆಚ್.ಡಿ.ರೇವಣ್ಣ

    ಬೆಂಗಳೂರು: ಬುಧವಾರ ಸಚಿವ ಹೆಚ್.ಡಿ.ರೇವಣ್ಣ ಹಾಸನದಲ್ಲಿ ಗೋಲಿಬಾರ್ ಆದ್ರೆ ನಾನು ಕಾರಣನಲ್ಲ ಎಂಬ ಹೇಳಿಕೆಗೆ ಇಂದು ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮಗಳಲ್ಲಿ ಹಾಸನದ ಡಿಸಿ ಮತ್ತು ಸಚಿವರಿಗೂ ಡಿಶುಂ ಡಿಶುಂ ಎಂದು ಬಿತ್ತರವಾಗುತ್ತಿದೆ. ಯಾರ ಜೊತೆಗೂ ವೈಯಕ್ತಿಕವಾಗಿ ಡಿಶು ಡಿಶುಂ ಮಾಡುವ ಅವಶ್ಯಕತೆ ನನಗಿಲ್ಲ ಎಂದು ಸಚಿವ ರೇವಣ್ಣ ಹೇಳಿದ್ದಾರೆ.

    ಬರ ನಿರ್ವಹಣೆಗಾಗಿ 10 ಕೋಟಿ ಮತ್ತು ಕುಡಿಯುವ ನೀರಿಗಾಗಿ 5 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಈ ಸಂಬಂಧ ಜಿಲ್ಲಾ ಪಂಚಾಯ್ತಿ ಸಿಇಓರನ್ನು ಕೇಳಿದ್ರೆ ಹಣ ಜಿಲ್ಲಾಧಿಕಾರಿಗಳ ಬಳಿಯಲ್ಲಿದೆ ಎಂದ್ರು. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರಿಂದ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿರಲಿಲ್ಲ. ಈಗ ಆಯೋಗ ನೀತಿ ಸಂಹಿತೆ ಸಡಿಲಿಸಿದೆ ಹಣ ಖರ್ಚು ಮಾಡಬಹುದು ಎಂದರು.

    ಹಾಸನ ಡಿಸಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಬರ ನಿಭಾಯಿಸಲು ಈವರೆಗೆ ಒಂದೇ ಒಂದು ಪೈಸೆ ಹಣ ಬಿಡುಗಡೆ ಮಾಡಿಲ್ಲ. ಒಂದೇ ವೇಳೆ ಗೋಲಿಬಾರ್ ಆದ್ರೆ ಅದಕ್ಕೆ ಡಿಸಿ ನೇರ ಹೊಣೆಯಾಗುತ್ತಾರೆ ಎಂದು ರೇವಣ್ಣ ಹೇಳಿದ್ದರು. ಸಚಿವರ ಹೇಳಿಕೆಗೆ ತಿರುಗೇಟು ನೀಡಿದ್ದ ಡಿಸಿ ಪ್ರಿಯಾಂಕಾ, ತಹಶೀಲ್ದಾರರಿಗೆ ಬರ ನಿರ್ವಹಣೆಯ ಹಣ ಸರಿಯಾಗಿ ಬಿಡುಗಡೆಯಾಗುತ್ತಿದೆ. ಬಿತ್ತನೆ ಆಲೂಗೆಡ್ಡೆಗೆ ಸಬ್ಸಿಡಿ ಕುರಿತು ಶೀಘ್ರವಾಗಿ ನಿರ್ದೇಶನದಂತೆ ನೀಡಲಾಗುವುದು ಎಂದು ಸ್ಪಷ್ಟನೆ ನೀಡಿದ್ದರು.

  • ಬಿಜೆಪಿಗೆ ವೋಟ್ ಹಾಕಿದ್ದಕ್ಕೆ SSLCಯಲ್ಲಿ ದಕ್ಷಿಣ ಕನ್ನಡಕ್ಕೆ 5ನೇ ಸ್ಥಾನ – ರೇವಣ್ಣ ವ್ಯಂಗ್ಯ

    ಬಿಜೆಪಿಗೆ ವೋಟ್ ಹಾಕಿದ್ದಕ್ಕೆ SSLCಯಲ್ಲಿ ದಕ್ಷಿಣ ಕನ್ನಡಕ್ಕೆ 5ನೇ ಸ್ಥಾನ – ರೇವಣ್ಣ ವ್ಯಂಗ್ಯ

    ಹಾಸನ: ಎಸ್‍ಎಸ್‍ಎಲ್‍ಸಿ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಹಾಸನ ಫಸ್ಟ್, ರಾಮನಗರ ಎರಡನೇ ಸ್ಥಾನ ಪಡೆದಿವೆ. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರು ಇಂದು ದಕ್ಷಿಣ ಕನ್ನಡ ರಿಸಲ್ಟ್ ಬಗ್ಗೆ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಕ್ಷಿಣ ಕನ್ನಡದವರು ಬಿಜೆಪಿಗೆ ವೋಟು ಹಾಕಿದ್ದಕ್ಕೆ ಜಿಲ್ಲೆ ಫಲಿತಾಂಶದಲ್ಲಿ 5ನೇ ಸ್ಥಾನಕ್ಕೆ ಬಂದಿದೆ. ಜಾತ್ಯಾತೀತ ಜನತಾ ದಳಕ್ಕೆ ವೋಟ್ ಹಾಕುತ್ತಿದ್ದರೆ ಅದು ಮೊದಲನೇ ಸ್ಥಾನಕ್ಕೆ ಬರುತಿತ್ತು ಎಂದು ತಮಾಷೆಯಾಡಿದ್ದಾರೆ. ಅಲ್ಲದೆ ಅಲ್ಲಿ ಶಿಕ್ಷಣಕ್ಕೆ ಒತ್ತು ಕೊಡುವುದಿಲ್ಲ ಎನ್ನುವುದಕ್ಕೆ ಈ ಫಲಿತಾಂಶ ಸಾಕ್ಷಿಯಾಗಿದೆ ಎಂದು ಹೇಳಿದರು.

    224 ವಿಧಾನಸಭಾ ಕ್ಷೇತ್ರದಲ್ಲೂ 1 ರಿಂದ ಪಿಯುಸಿವರೆಗೆ ಕನಿಷ್ಠ 10 ಇಂಗ್ಲಿಷ್ ಶಾಲೆಗಳನ್ನು ತೆರೆಯಬೇಕು ಎಂದು ಇದೇ ವೇಳೆ ಸರ್ಕಾರವನ್ನು ಒತ್ತಾಯಿಸಿದರು. ಹಳ್ಳಿಯ ಮಕ್ಕಳಿಗೆ ಶಿಕ್ಷಣ ಕೊಡಬೇಕಾಗಿದೆ. ಹೀಗಾಗಿ ಬೇರೆ ಇಲಾಖೆಗಳ ಅನುದಾನ ಕಡಿತಗೊಳಿಸಿ ಇಂಗ್ಲೀಷ್ ಶಾಲೆ ತೆರೆಯಲು ನೀಡಲಿ ಎಂದರು. ಇದನ್ನೂ ಓದಿ: ರೇವಣ್ಣಗೆ ಖಡಕ್ ಟಾಂಗ್ ಕೊಟ್ಟ ರೋಹಿಣಿ ಸಿಂಧೂರಿ

    ಹಾಸನ ಜಿಲ್ಲೆಗೆ ದೈವಾನುಗ್ರಹವಿದೆ. ನಮ್ಮ ಜಿಲ್ಲೆ ಪ್ರಥಮ ಸ್ಥಾನ ಪಡೆಯಲು ದೇವೇಗೌಡರ ಕೊಡುಗೆಯೂ ಇದೆ. ಅವರು ಕೂಡ ಮಾರ್ಗದರ್ಶನ ನೀಡಿದ್ದಾರೆ. ಹೀಗಾಗಿ ಜಿಲ್ಲೆ ಶಿಕ್ಷಣದಲ್ಲಿ ಮೊದಲನೇ ಸ್ಥಾನಕ್ಕೆ ಬಂದಿದೆ. ಎರಡನೇ ಸ್ಥಾನ ರಾಮನಗರಕ್ಕೆ ಸಿಕ್ಕಿದೆ ಎಂದರು. ಇದನ್ನೂ ಓದಿ: SSLCಯಲ್ಲಿ ಹಾಸನಕ್ಕೆ ಉತ್ತಮ ಫಲಿತಾಂಶ ಬರಲು ಪತ್ನಿ ಭವಾನಿ ಕಾರಣ- ರೇವಣ್ಣ

  • SSLCಯಲ್ಲಿ ಹಾಸನಕ್ಕೆ ಉತ್ತಮ ಫಲಿತಾಂಶ ಬರಲು ಪತ್ನಿ ಭವಾನಿ ಕಾರಣ- ರೇವಣ್ಣ

    SSLCಯಲ್ಲಿ ಹಾಸನಕ್ಕೆ ಉತ್ತಮ ಫಲಿತಾಂಶ ಬರಲು ಪತ್ನಿ ಭವಾನಿ ಕಾರಣ- ರೇವಣ್ಣ

    – ಹಿಂದಿನ ಡಿಸಿ ಏನ್ ಕಡಿದು ದಬಾಕಿರೋದು?
    – ಎರಡು ತಿಂಗಳಿಗೊಮ್ಮೆ ಸಭೆ ನಡೆಸಿದ್ದರಿಂದ ಫಲಿತಾಂಶ

    ಹಾಸನ: ಈ ಬಾರಿಯ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದು, ರಿಸಲ್ಟ್ ನಲ್ಲಿ ಉತ್ತಮ ಅಂಕಗಳು ಬರುವಲ್ಲಿ ನನ್ನ ಪತ್ನಿ ಭವಾನಿ ಪ್ರಯತ್ನ ಕೂಡ ಸಫಲವಾಗಿದೆ ಎಂದು ಲೋಕೋಪಯೋಗಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಡಿ ರೇವಣ್ಣ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಎಸ್‍ಎಸ್ ಎಲ್‍ಸಿ ಫಲಿತಾಂಶದಲ್ಲಿ ಉತ್ತಮ ಸ್ಥಿತಿಗೆ ಸರ್ಕಾರದ ನೀತಿಗಳು ಕಾರಣವಾಗಿದೆ. ಹಾಗೆಯೇ ನನ್ನ ಪತ್ನಿ ಜಿಲ್ಲಾ ಪಂಚಾಯಿತಿ ಶಿಕ್ಷಣಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ಪ್ರಯತ್ನ ಕೂಡ ಸಫಲವಾಗಿದೆ. ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಆಯಾ ಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರ ಪ್ರಯತ್ನ ಕೂಡ ಇದೆ. ನೂರು ಫಲಿತಾಂಶ ಬಂದ ಎಲ್ಲಾ ಶಾಲೆಗಳ ಶಿಕ್ಷಕರಿಗೆ ಸನ್ಮಾನ ಮಾಡುತ್ತೇವೆ. ಈ ಫಲಿತಾಂಶದ ಹಿನ್ನೆಲೆಯಲ್ಲಿ ಶಾಲೆಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಶಿಕ್ಷಣ ಇಲಾಖೆ ಕಾರ್ಯದರ್ಶಿ ವಿಜಯ ಭಾಸ್ಕರ್ ಪ್ರಯತ್ನ ಕೈಗೂಡಿದೆ. ಅವರ ಕಾರ್ಯಸೂಚಿ ಪ್ರಯತ್ನ ಸಫಲವಾಗಿದೆ ಎಂದು ಅವರು ಹೇಳಿದರು.

    ಜಿಲ್ಲೆಯ ಉತ್ತಮ ಫಲಿತಾಂಶದಲ್ಲಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರ ಪ್ರಯತ್ನ ಉತ್ತಮವಾಗಿದೆ. ಹಾಸನ ಜಿಲ್ಲೆ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ನಂ.1 ಸ್ಥಾನ ಬಂದಿದೆ. ಇದಕ್ಕೆ ಮೊದಲು ಸಿಎಂ ಹೆಚ್.ಡಿ ಕುಮಾರಸ್ವಾಮಿ, ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಗೆ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ:  SSLCಯಲ್ಲಿ ಹಾಸನ ಜಿಲ್ಲೆ ಫಸ್ಟ್ ಬಂದ ಕಥೆ ಬಿಚ್ಚಿಟ್ಟ ರೋಹಿಣಿ ಸಿಂಧೂರಿ!

    ಪ್ರತಿ ಹಂತದಲ್ಲೂ ಸಭೆ ನಡೆಸಿ 2006ರಿಂದ ಕುಮಾರಸ್ವಾಮಿ ಸರ್ಕಾರ ಶಿಕ್ಷಣಕ್ಕೆ ಒತ್ತು ನೀಡಿದೆ. ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ಅವರು ಎರಡು ತಿಂಗಳಿಗೊಮ್ಮೆ ಸಭೆ ನಡೆಸುತ್ತಿದ್ದರು. ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಿ ಎಂದು ಬಿಇಓಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಕ್ಕೆ ಕುಮಾರಸ್ವಾಮಿ 1,600 ಕೋಟಿ ಅನುದಾನ ನೀಡಿದ್ದರು ಅಂದರು.

    ಜಿಲ್ಲೆಯ ಎಲ್ಲಾ ಮುಖ್ಯೋಪಾಧ್ಯಾಯರು, ಶಿಕ್ಷಕರಿಗೆ ಗೌರವ ಸಲ್ಲಿಸುತ್ತೇನೆ. 140 ಪ್ರೌಢಶಾಲೆಗಳಲ್ಲಿ 86 ಶಾಲೆಗಳಲ್ಲಿ ಶೇ.100 ಫಲಿತಾಂಶ ಬಂದಿದೆ. ಇದಕ್ಕೆ ಕಾರಣರಾದ ಶಾಲೆಯ ಶಿಕ್ಷಕರು, ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಶೇ.100 ಫಲಿತಾಂಶ ಬಂದಿರುವ ಶಾಲೆಗಳ ಶಿಕ್ಷಕರಿಗೆ ಸನ್ಮಾನ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

    ರೋಹಿಣಿ ಸಿಂಧೂರಿಗೆ ಟಾಂಗ್:
    ಹಿಂದಿನ ಡಿಸಿ ಏನು ಕಡಿದು ದಬಾಕಿರೋದು. ಶಿಕ್ಷಕರಿಗೆ ಪರೀಕ್ಷೆ ಮಾಡಲು ಹೋಗಿ ಅವರೇ ಉಗಿದು ಕಳುಹಿಸಿದ್ದರು. ಅವರು ಏನೂ ಮಾಡಿಲ್ಲ. ಶಿಕ್ಷಕರಿಗೆ ಪರಿಕ್ಷೆ ಮಾಡಲು ಹೋಗಿ ಅಸೆಂಬ್ಲಿಯಲ್ಲಿ ಚರ್ಚೆಯಾಗಿದೆ. ಅವರು ಶಿಕ್ಷಕರ ಪರೀಕ್ಷೆ ಮಾಡದೇ ಈಗ ಉತ್ತಮ ಫಲಿತಾಂಶ ಬಂದಿದೆಯಲ್ಲ. ಅವರು ಜಿಲ್ಲೆಗೆ ಬಂದಿದ್ದಾರೋ ಇಲ್ಲವಾ ಎಂದು ನನಗೆ ಗೊತ್ತಿಲ್ಲ. ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನಮ್ಮ ಸರ್ಕಾರದ ಯೋಜನೆಗಳಿಂದ ಕಾಲೇಜುಗಳಿಲ್ಲದ ಕಡೆ ಕಾಲೇಜು ಉದ್ಘಾಟಿಸಲಾಗಿದೆ ಅಂದರು.

    ನನ್ನ ಪತ್ನಿ ಪ್ರಯತ್ನ ಸಫಲವಾಗಿದೆ. ಆದ್ರೆ ನಾನು ಇದನ್ನು ಹೇಳಿಕೊಳ್ಳಲು ಹೋಗಿದ್ದೇನಾ ಎಂದು ಪ್ರಶ್ನಿಸುವ ಮೂಲಕ ರೋಹಿಣಿ ಸಿಂಧೂರಿಗೆ ಟಾಂಗ್ ಕೊಟ್ಟ ಅವರು, ಜಿಲ್ಲೆಯಲ್ಲಿ ಉತ್ತಮ ಶಿಕ್ಷಣಕ್ಕೆ ಮಾಜಿ ಸಚಿವ ಬಸವರಾಜ್ ಹೊರಟ್ಟಿ, ನಮ್ಮ ಕುಮಾರಣ್ಣ, ಸರ್ಕಾರದ ಕಾರ್ಯದರ್ಶಿ ವಿಜಯ್ ಭಾಸ್ಕರ್ ರವರ ಕೊಡುಗೆ ಬಹಳಷ್ಟಿದೆ ಎಂದು ಹೇಳಿದರು. ಇದನ್ನೂ ಓದಿ: SSLC ಫಲಿತಾಂಶದಲ್ಲಿ ಹಾಸನ ಫಸ್ಟ್ – ಎಲ್ಲ ರೇವಣ್ಣ ನಿಂಬೆಹಣ್ಣು ಪ್ರಭಾವ ಎಂದು ಟ್ರೋಲ್

  • ಒಂದು ಪಕ್ಷದ ಏಜೆಂಟರಂತೆ ಹಾಸನ ಡಿಸಿ ವರ್ತನೆ – ಕೂಡಲೇ ವರ್ಗಾವಣೆ ಆಗ್ರಹಿಸಿದ ಸಚಿವ ರೇವಣ್ಣ

    ಒಂದು ಪಕ್ಷದ ಏಜೆಂಟರಂತೆ ಹಾಸನ ಡಿಸಿ ವರ್ತನೆ – ಕೂಡಲೇ ವರ್ಗಾವಣೆ ಆಗ್ರಹಿಸಿದ ಸಚಿವ ರೇವಣ್ಣ

    ಹಾಸನ: ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರನ್ನು ಈ ಕೂಡಲೇ ವರ್ಗಾವಣೆ ಮಾಡಿ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಚುನಾವಣಾ ಆಯೋಗಕ್ಕೆ ಆಗ್ರಹಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆ ಮುಕ್ತವಾಗಿ ನಡೆದಿದೆ ಎಂದು ಹೇಳಿರುವ ಜಿಲ್ಲಾಧಿಕಾರಿಗಳೇ, 10 ದಿನಗಳ ಬಳಿಕ ಚುನಾವಣಾ ಅಕ್ರಮ ನಡೆದಿದೆ ಎನ್ನುವುದರ ಬಗ್ಗೆ ಏಕೆ ದೂರು ಪಡೆದುಕೊಂಡರು. ಈ ಬಗ್ಗೆ ತನಿಖೆ ಆಗಬೇಕು, ಅಲ್ಲದೇ ಕೂಡಲೇ ಅವರನ್ನು ವರ್ಗಾವಣೆ ಮಾಡಿ ಬೇಕು. ಅವರು ವರ್ಗಾವಣೆ ಆಗಿ ಬಂದ ಬಳಿಕ ನಡೆದ ಎಲ್ಲಾ ಬೆಳವಣಿಗೆಗಳ ಬಗ್ಗೆ ಮುಕ್ತ ತನಿಖೆ ನಡೆಸಬೇಕಿದೆ. ಈ ಕುರಿತು ಶೀಘ್ರವಾಗಿ ಆಯೋಗಕ್ಕೆ ಲಿಖಿತ ಮನವಿ ನೀಡಲಾಗುವುದು ಎಂದರು.

    ಹೊಳೆನರಸೀಪುರ ತಾಲೂಕಿನ ಪಡವಲಹಿಪ್ಪೆಯ ಮತಗಟ್ಟೆ ಯಲ್ಲಿ ಅಕ್ರಮ ಮತದಾನ ಮಾಡಿದ್ದಾರೆ ಎನ್ನುವ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, ಜಿಲ್ಲಾ ಮುಖ್ಯ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಒಂದು ಪಕ್ಷದ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಅಕ್ರಮ ಮತದಾನದ ಕುರಿತು ತನಿಖೆ ನಡೆಸಬೇಕಾದರೆ ಮತಗಟ್ಟೆಯಲ್ಲಿ ಅಳವಡಿಸುವ ಸಿಸಿಟಿವಿ ಪರಿಶೀಲನೆ ನಡೆಸಲಿ. ಈ ಬಗ್ಗೆ ಯಾವ ಯುವಕ ಮತದಾನ ಮಾಡಿದ್ದಾನೆ ಎನ್ನುವುದು ತಿಳಿಯುತ್ತದೆ. ಅಲ್ಲದೇ ತನಿಖೆ ವೇಳೆ ಏಕೆ ನಮ್ಮ ಬೂತ್ ಏಜೆಂಟ್ ವಿಚಾರಣೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

    ಯಾವುದೇ ದಾಖಲೆಗಳನ್ನು ಸೃಷ್ಟಿಸುವ ಸನ್ನಿವೇಶ ಇದ್ದು, ಮುಕ್ತವಾಗಿ ಮತ ಎಣಿಕೆ ಮಾಡಿಸುವ ಕುರಿತು ನಮಗೆ ನಂಬಿಕೆ ಇಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿ ಎಂದು ಹೇಳಿದರು. ಅಲ್ಲದೇ ಜಿಲ್ಲಾಧಿಕಾರಿಗಳ ವರ್ಗಾವಣೆ 10 ದಿನ ಮುನ್ನವೇ ಇವರೇ ಜಿಲ್ಲಾಧಿಕಾರಿಗಳು ಎಂದು ಹೇಳಲಾಗುತ್ತಿತ್ತು. ಹಾಸನಕ್ಕೆ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಡಿಸಿ ಅವರು ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ಭೇಟಿ ಮಾಡಿದ್ದರು. ಅವರಿಂದ ನಿರ್ದೇಶನ ಪಡೆದು ಕೆಲಸ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

    ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಮನೆಯಲ್ಲಿ ಹಾಲಿ ಜಿಲ್ಲಾಧಿಕಾರಿ ಮನೆಯಲ್ಲಿ ಯಾಕೆ ಇದ್ದರು ಎಂದು ಪ್ರಶ್ನಿಸಿದ ಸಚಿವರು, ಈ ಕುರಿತು ತನಿಖೆ ಮಾಡಬೇಕೆಂದು ಆಯೋಗಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.

  • ಜೈಲಿಗೆ ಹೋಗಿ ಬಂದವ್ರ ಮಗನಾ ರಾಘವೇಂದ್ರ ಎಂಬ ಆಡಿಯೋ ವೈರಲ್ ಆಗಿದೆ: ಎಚ್‍ಡಿಕೆ

    ಜೈಲಿಗೆ ಹೋಗಿ ಬಂದವ್ರ ಮಗನಾ ರಾಘವೇಂದ್ರ ಎಂಬ ಆಡಿಯೋ ವೈರಲ್ ಆಗಿದೆ: ಎಚ್‍ಡಿಕೆ

    – ಸಮ್ಮಿಶ್ರ ಸರ್ಕಾರಕ್ಕೆ ಬಿಎಸ್‍ವೈ ಮತ್ತೆ ಗಡುವು ನೀಡಿದ್ದಾರೆ
    – ರಾಮನ ಜಪ ಹೋಗಿದೆ, ಮೋದಿ ಜಪ ಶುರುವಾಗಿದೆ
    – ಮತ್ತೆ ರಾಜಕೀಯ ನಿವೃತ್ತಿ ಮಾತನಾಡಿದ ಸಚಿವ ರೇವಣ್ಣ

    ಶಿವಮೊಗ್ಗ: ಅಭಿವೃದ್ಧಿಯ ಹರಿಕಾರ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಹೆಣ್ಮಕ್ಕಳ ಧ್ವನಿಯ ಕರೆ ಮೊಬೈಲ್‍ಗೆ ಬರುತ್ತದೆ. ಜೈಲಿಗೆ ಹೋಗಿ ಬಂದವರ ಮಗನಾ ರಾಘವೇಂದ್ರ ಅಂದ್ರೆ ಎಂದು ಯಾರೋ ಕೇಳಿದ್ರಂತೆ. ಆ ಆಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ಸಿಎಂ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

    ಜಿಲ್ಲೆಯ ಸಾಗರದ ನೆಹರು ಕ್ರೀಡಾಂಗಣದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಸಿಎಂ, ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೋಗಿದ್ದು, ಡೈರಿ ವಿಚಾರ ದೊಡ್ಡದು ಮಾಡಬೇಡಿ ಎಂದು ಮನವಿ ಮಾಡೋದಕ್ಕೆ. ನೀರಾವರಿ ಯೋಜನೆ ಮಾತುಕತೆ ಅಲ್ಲ ಎಂದು ದೂರಿದರು.

    ಸಮ್ಮಿಶ್ರ ಸರ್ಕಾರಕ್ಕೆ ಬಿ.ಎಸ್. ಯಡಿಯೂರಪ್ಪನವರು ಮತ್ತೆ ಗಡುವು ನೀಡಿದ್ದಾರೆ. ಅವರು ಮೇ 23ಕ್ಕೆ ಮುಖ್ಯಮಂತ್ರಿ ಆಗುತ್ತಾರಂತೆ. ಈ ಮೂಲಕ ಆಡಳಿತ ಪಕ್ಷಗಳ ಒಬ್ಬೊಬ್ಬ ಶಾಸಕರಿಗೆ 20ರಿಂದ 30 ಕೋಟಿ ರೂ. ಆಮಿಷ ಒಡ್ಡಿದ್ದಾರೆ. ಅವರಿಗೆ ಅಷ್ಟು ಹಣ ಎಲ್ಲಿಂದ ಬಂತು? ಗುರುಮಿಠ್ಕಲ್‍ನಲ್ಲಿ ನಮ್ಮ ಶಾಸಕರಿಗೆ ಆಮಿಷ ಒಡ್ಡಿದ್ದರು ಎಂದು ವಾಗ್ದಾಳಿ ನಡೆಸಿದರು.

    ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ದುಡಿಮೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪರನ್ನು ಗೆಲ್ಲಿಸಿ. ಪ್ರಧಾನಿ ಮೋದಿ ಅವರು ದೇಶಕ್ಕೆ ಏನು ಕೊಡುಗೆ ನೀಡಿದ್ದಾರೆ? ಬಡವರ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆ ಎಂದು ಭರವಸೆ ನೀಡಿ, ಈಡೇರಿಸಲಿಲ್ಲ. ಜನಧನ್ ಖಾತೆಗೆ ನರೇಗಾ ಯೋಜನೆಯ ಎರಡು ಸಾವಿರ ರೂ. ಜಮೆ ಆಗುತ್ತಿದೆ. ಆ ಹಣವನ್ನು ಕೂಡ ಈಗ ಕಡಿತಗೊಳಿಸುತ್ತಿದ್ದು, ಯಾವ ಉದ್ಯಮಿದಾರರಿಗೆ ನೀಡುತ್ತಿದ್ದಾರೋ ಏನೋ? ಎಂದು ವ್ಯಂಗ್ಯವಾಡಿದರು.

    ಸಾಗರದಲ್ಲಿ ಕೆಲವು ಯುವಕರು ಮೋದಿ ಮೋದಿ ಅಂತ ಘೋಷಣೆ ಕೂಗುತ್ತಿದ್ದಾರೆ. ಆ ಯುವಕರಿಗೆ ಏನು ಹುಚ್ಚು ಹಿಡಿದಿದೆಯಾ ಅಂದ್ಕೊಂಡೆ. ರಾಮನ ಜಪ ಹೋಗಿದೆ, ಮೋದಿ ಜಪ ಶುರುವಾಗಿದೆ. ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ. ಅವರು ನನ್ನ ಕಣ್ಣೀರನ್ನು ಪ್ರಶ್ನೆ ಮಾಡಿದ್ದಾರೆ. ನಮ್ಮ ಸರ್ಕಾರ ಮಜಬೂರ್ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಮಜಬುತ್ ಸರ್ಕಾರ ಎನ್ನುತ್ತಾರೆ. ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ನಿಮ್ಮದೊಂದೇ ಫೋಟೊ ಹಾಕಿಕೊಂಡಿದ್ದೀರಿ. ಈ ಯೋಜನೆಗೆ ರಾಜ್ಯ ಸರ್ಕಾರ 900 ಕೋಟಿ ನೀಡುತ್ತದೆ. ಕೇಂದ್ರ ನೀಡುವುದು ಕೇವಲ 300 ಕೋಟಿ ರೂ. ಮಾತ್ರ. ಆದರೂ ನೀವು ರಾಜ್ಯ ಸರ್ಕಾರ ಮಜಬುರ್ ಸರ್ಕಾರ ಅಂತೀರಾ ಮೋದಿ ಅವರೇ ಎಂದು ಪ್ರಶ್ನಿಸಿದರು.

    ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಚರ್ಚೆ ಮಾಡಲ್ಲ. ಹಸಿರು ಶಾಲು ಹೊದ್ದು ನಿಮಗೆ ಟೋಪಿ ಹಾಕಿದ್ದು ಗೊತ್ತಿದೆ. ಹೀಗಾಗಿ ನಾನು ಅವರ ಬಗ್ಗೆ ಮಾತಾಡಲ್ಲ ಎಂದು ಹೇಳಿದರು.

    ಸಮಾವೇಶದ ಮಧ್ಯೆ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಆಗಮಿಸಿದರು. ಈ ವೇಳೆ ಸಮಾವೇಶದಲ್ಲಿ ಸೇರಿದ್ದ ಜನರು ಘೋಷಣೆ ಕೂಗಿದರು. ಎಚ್.ಡಿ.ರೇವಣ್ಣ ಮುಹೂರ್ತ ನೋಡಿ ಮೊದಲ ಬಾರಿಗೆ ಸಾಗರಕ್ಕೆ ಬಂದಿದ್ದಾರೆ ಎಂದ ಮಧು ಬಂಗಾರಪ್ಪ ಸಮಾವೇಶದಲ್ಲಿ ನಗೆ ಅಲೆ ಎಬ್ಬಿಸಿದರು. ತಕ್ಷಣವೇ ಕಾಗೋಡು ತಿಮ್ಮಪ್ಪ ಅವರು ಸಚಿವರನ್ನು ಕರೆದುಕೊಂಡು ಬಂದು ಮೈಕ್ ಮುಂದೆ ನಿಲ್ಲಿಸಿದರು.

    ಸಚಿವ ಎಚ್.ಡಿ.ರೇವಣ್ಣ ಅವರು ಮಾತನಾಡಿ, ಬಿ.ಎಸ್.ಯಡಿಯೂರಪ್ಪನವರ ಕಾಲ ಮುಗಿದಿದೆ. ಮುಖ್ಯಮಂತ್ರಿ ಆಗಲ್ಲ. ಸಿಎಂ ಕನಸು ಇದ್ದರೆ ಮರೆತು ಬಿಡಲಿ. ಹಾಸನ, ಮಂಡ್ಯ, ತುಮಕೂರು ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇವೆ. ಶಿವಮೊಗ್ಗದಲ್ಲಿಯೂ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಜಯಗಳಿಸುತ್ತಾರೆ. ಪ್ರಧಾನಿ ಮೋದಿ ಅವರು ಎಲ್ಲಾ ರೈತರ ಖಾತೆಗೆ ಹಣ ಹಾಕಿದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದರು.

    ಮಾಜಿ ಶಾಸಕ ಗೋಪಾಲಕೃಷ್ಣ ಅವರು ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಏನು ಮಾಡಿಲ್ಲ. ಹೀಗಾಗಿ ಪ್ರಧಾನಿ ಮೋದಿ ಎಂದು ಹೇಳುತ್ತಾರೆ. ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಿದರೆ ನಿಮಗೆ ಬಸ್ ಸ್ಟಾಂಡ್ ಗತಿಯಾಗುತ್ತದೆ ಎಂದು ಸಮಾವೇಶದಲ್ಲಿ ಸೇರಿದ್ದ ಜನರಿಗೆ ತಿಳಿಸಿದರು.

    ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಅಷ್ಟು ಆಸ್ತಿ ಎಲ್ಲಿಂದ ಬಂತು ಎಂದು ಪ್ರಶ್ನಿಸಿರುವ ರಾಘವೇಂದ್ರ ಅವರ ಆಸ್ತಿ ಹೆಚ್ಚಾಗಿದ್ದು ಹೇಗೆ? ಲೋಕಸಭಾ ಚುನಾವಣೆ ಮುಗಿದ ಬಳಿಕ ಬಿಜೆಪಿಯವರೇ ಬಿ.ಎಸ್.ಯಡಿಯೂರಪ್ಪ ಅವರನ್ನು ಕೆಳಗಿಳಿಸುತ್ತಾರೆ ಎಂದರು.

     

  • ಐಟಿ ದಾಳಿಯ ಕೆಲ ಗುಟ್ಟಿನ ವಿಚಾರವನ್ನು ಎರಡು ದಿನವಾದ್ಮೇಲೆ ಹೇಳ್ತೀನಿ- ಸಚಿವ ರೇವಣ್ಣ

    ಐಟಿ ದಾಳಿಯ ಕೆಲ ಗುಟ್ಟಿನ ವಿಚಾರವನ್ನು ಎರಡು ದಿನವಾದ್ಮೇಲೆ ಹೇಳ್ತೀನಿ- ಸಚಿವ ರೇವಣ್ಣ

    ಹಾಸನ: ಜೆಡಿಎಸ್ ಮುಖಂಡರ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯವರು ದಾಳಿ ನಡೆಸಿದ್ದರ ಬಗ್ಗೆ ಇನ್ನೆರಡು ದಿನ ಆದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ ಈಗ ಬೇಡ ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಹೇಳಿದ್ದಾರೆ.

    ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಬ್ಬ ತರಕಾರಿ ವ್ಯಾಪಾರಿ, ಇನ್ನೊಬ್ಬ ದಿನಕ್ಕೆ ಅರ್ಧ ಕೆಜಿ ಮಟನ್ ತಿನ್ನುತ್ತಾನೆ. ಮತ್ತೊಬ್ಬನ ಮನೆಯಲ್ಲಿ ಜೆಲ್ಲಿ ಸಿಗಬಹುದು. ಐಟಿ ದಾಳಿ ಬಗ್ಗೆ ನಾನು ಜಿಲ್ಲಾಧಿಕಾರಿಗೆ ಕರೆ ಮಾಡಿದ್ದೆ. ದೇಶದ ಹಣವನ್ನ ಲೂಟಿ ಮಾಡುತ್ತಿದ್ರೆ ಅಂಥವರನ್ನ ಹಿಡಿಯಲಿ. ಐಟಿ ದಾಳಿ ಬಗ್ಗೆ ಇನ್ನು ಎರಡು ದಿನ ಅದ್ಮೇಲೆ ಮಾತನಾಡುತ್ತೇನೆ ಈಗ ಬೇಡ ಅಂದ್ರು.

    ನ್ಯಾಯಯುತವಾಗಿ ಐಟಿಯವರು ಕೆಲಸ ಮಾಡಲಿ. ಇದ್ರೆ ತಗೊಂಡು ಹೋಗ್ಲಿ. ಇದು ಬಿಜೆಪಿಗೆ ಅಂತ್ಯ ಕಾಲ. ದೇವೇಗೌಡರಿಗೆ ಯಾರೆಲ್ಲ ತೊಂದರೆ ಕೊಟ್ಟಿದ್ದಾರೆಯೋ ಅವರು ಯಾರೂ ಉಳಿದಿಲ್ಲ. ದಾಳಿಯ ಇನ್ನು ಕೆಲವು ಗುಟ್ಟಿನ ವಿಚಾರವನ್ನ ಎರಡು ದಿನ ಅದ್ಮೇಲೆ ಹೇಳ್ತಿನಿ ಎಂದಿದ್ದಾರೆ.

    ದೇವೇಗೌಡರ ಕುಟುಂಬ ಯಾರಿಗೂ ಹೆದರುವುದಿಲ್ಲ. ನಮ್ಮ ಮನೆ ಮೇಲೆ ದಾಳಿ ಮಾಡಿದ್ರು. ಯಾರು ದಾಳಿ ಮಾಡಿದ್ರೋ ಗೊತ್ತಿಲ್ಲ. ಹಾಸ್ಟೆಲ್ ನಲ್ಲಿ ಅಕ್ಕಿ ಮೂಟೆಗಳನ್ನ ಹುಡುಕಿದ್ರು. ಏನಾದ್ರೂ ಸಿಕ್ಕಿದ್ರೆ ತಗೊಂಡು ಹೋಗಲಿ. ಹೋದ ಸರಿ ನನ್ನ ಸೋಲಿಸಬೇಕು ಎಂದು ಮಿಲಿಟರಿ ತಂದರು. ನಾನು ಯಾರಿಗೂ ಹೆದರೋದಿಲ್ಲ. ಮೂರು ಸೂಕ್ಷ್ಮ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅತೀ ಹೆಚ್ಚು ಲೀಡ್ ನಿಂದ ಗೆಲ್ಲುತ್ತದೆ. ಕಾರ್ಯಕರ್ತರನ್ನ ಐಟಿ ದಾಳಿ ಹೆಸರಲ್ಲಿ ಕೂಡಿ ಹಾಕಿಕೊಳ್ಳೋದು ಬೇಡ ಎಂದು ಅವರು ತಿಳಿಸಿದ್ರು

    ಮೊನ್ನೆ ಹಾಸನದ ರಿಂಗ್ ರೋಡ್‍ನಲ್ಲಿ 7 ಕೋಟಿ ರೂ. ಹಣ ಬಿಜೆಪಿಗೆ ಹೋಗಿದೆ. ಐಟಿ ಇದೆ ಆದರೂ ಹಣ ಹೋಗಿದೆ. ಅರಕಲಗೂಡಿಗೆ ಹಣ ಹೋಗ್ತಿದೆ ಎಂದು ನಾನು ದೂರು ಕೊಟ್ಟಿದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇಂತಹದ್ದು ನಡೆಯುತ್ತಿದೆ ಎಂದು ಆರೋಪಿಸಿದ್ರು.

    ಬಿಜೆಪಿಯವರು ರಾಜ್ಯದಲ್ಲಿ ಸುಳ್ಳು ಸುಳ್ಳು ಹೇಳಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಕಳೆದ 10 ತಿಂಗಳಿನಿಂದ ಕುಮಾರಸ್ವಾಮಿ ಸರ್ಕಾರ ಉತ್ತಮ ಆಳ್ವಿಕೆ ಮಾಡುತ್ತಿದೆ. ಸಿದ್ದರಾಮಯ್ಯ ಸರ್ಕಾರ ಬಡವರಿಗೆ 7 ಕೆಜಿ ಅಕ್ಕಿ ನೀಡುವ ಯೋಜನೆಯನ್ನ ಮುಂದುವರಿಸುತ್ತಿದ್ದಾರೆ. ರೈತರ ಸಾಲ ಮನ್ನಾ ಮಾಡಿದ್ದಾರೆ. ನೀರಾವರಿಗೆ ಅನೇಕ ಯೋಜನೆಗಳನ್ನ ಮಾಡಿಕೊಂಡು ಬಂದಿದ್ದೇವೆ. ಸುಮಾರು 5 ಸಾವಿರ ಕೋಟಿ ಯೋಜನೆಗಳನ್ನ ಮಾಡುತ್ತಿದ್ದೇವೆ. ಬಿಜೆಪಿ ಅವರು ನಮ್ಮ ಬಜೆಟನ್ನು ಹಾಸನ ಬಜೆಟ್, ರಾಮನಗರ ಬಜೆಟ್ ಎಂದು ಹೇಳುತ್ತಾರೆ. ಹೀಗಾಗಿ ಮತ ಕೊಡಿ ಎಂದು ಹೇಳೋಕೆ ಅವರಿಗೆ ಯಾವ ನೈತಿಕತೆ ಇದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು.

    ಜಿಲ್ಲೆಯಲ್ಲಿ ಪ್ರಜ್ಚಲ್ ರೇವಣ್ಣ 3 ರಿಂದ ನಾಲ್ಕು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಸೆಂಟ್ರಲ್ ಇಂಟಲಿಜೆನ್ಸ್ ರೀಪೋರ್ಟ್ ಇದೆ. ಅದಕ್ಕಾಗಿ ಬಿಜೆಪಿ ಅವರು ತೊಂದರೆ ಕೊಡುತ್ತಿದ್ದಾರೆ ಎಂದು ಕಿಡಿಕಾರಿದ್ರು.

     

  • ಹಾಸನ ಅಖಾಡ – ಪ್ರಜ್ವಲ್ ರೇವಣ್ಣ, ಎ.ಮಂಜು ಪ್ಲಸ್, ಮೈನಸ್ ಏನು?

    ಹಾಸನ ಅಖಾಡ – ಪ್ರಜ್ವಲ್ ರೇವಣ್ಣ, ಎ.ಮಂಜು ಪ್ಲಸ್, ಮೈನಸ್ ಏನು?

    ರದನಹಳ್ಳಿ ದೇವೇಗೌಡರ ಅಡ್ಡಾದಲ್ಲಿ ಈಗ ಕದನ ಕುತೂಹಲ. ದೇಶಕ್ಕೆ ಪ್ರಧಾನಿಮಂತ್ರಿಯನ್ನ ಕಾಣಿಕೆಯಾಗಿ ಕೊಟ್ಟ ಜಿಲ್ಲೆಯಲ್ಲೀಗ ರಾಜಕೀಯ ಕಾಳಗ ಪಲ್ಲಟವಾಗಿದೆ. ಮಲೆನಾಡು, ಅರೆ ಮಲೆನಾಡು, ಬಯಲು ಸೀಮೆಗಳನ್ನ ಹೊಂದಿರುವ ಹಾಸನದಲ್ಲಿ ಹೇಮಾವತಿ ಜೀವ ನದಿ. ಈ ಹೇಮಾವತಿಯ ಒಡಲಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಗೌಡರ ರಾಜಕೀಯ ಗಾಲಿಯೂ ಉರುಳಿ ಹೋಗಿದೆ.

    5 ಬಾರಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಬೀಗಿದ್ದ ಗೌಡರು 6ನೇ ಬಾರಿ ಹಾಸನದಿಂದ ಸ್ಪರ್ಧಿಸದೇ ತುಮಕೂರಿಗೆ ಹೋಗಿದ್ದಾರೆ. ಮೊಮ್ಮಗ ಪ್ರಜ್ವಲ್ ರಾಜಕೀಯ ಭವಿಷ್ಯಕ್ಕಾಗಿ ತಮ್ಮ ರಾಜಕೀಯ ಭವಿಷ್ಯದ ಕಡೇ ಆಟವನ್ನೇ ಸವಾಲಿಗಿಟ್ಟಿದ್ದಾರೆ ದೊಡ್ಡ ಗೌಡರು. ಕಳೆದ ಬಾರಿ ದೇವೇಗೌಡರ ವಿರುದ್ಧವೇ ತೊಡೆತಟ್ಟಿದ್ದ ಎ.ಮಂಜು ಈ ಬಾರಿ ಮೊಮ್ಮಗನ ವಿರುದ್ಧವೂ ತೊಡೆ ತಟ್ಟಿದ್ದಾರೆ. ಕಾಂಗ್ರೆಸ್‍ಗೆ ಗುಡ್‍ಬೈ ಹೇಳಿ ಬಿಜೆಪಿಯಿಂದ ಅಖಾಡಕ್ಕಿಳಿರುವುದು ಕುತೂಹಲ ಮೂಡಿಸಿದೆ. ಜೆಡಿಎಸ್ ಭದ್ರಕೋಟೆಯಾಗಿದ್ದರೂ, ಎರಡು ಕಡೆ ಕಮಲ ಅರಳಿರುವುದರಿಂದ ಏನೂ ಬೇಕಾದರೂ ಆಗಬಹುದು. ಒಕ್ಕಲಿಗ ಮತಗಳೇ ನಿರ್ಣಾಯಕವಾಗಿದ್ದರೂ, ಅಹಿಂದ ಮತಗಳನ್ನು ಪಡೆದರೂ ಸಾಕು ಅಭ್ಯರ್ಥಿ ಸುಲಭವಾಗಿ ಗೆದ್ದು ಬಿಡಬಹುದು.

    ಹಾಸನ ಕ್ಷೇತ್ರದ ಮತದಾರರು: 16,29,587 ಒಟ್ಟು ಮತದಾರರನ್ನು ಹಾಸನ ಲೋಕ ಅಖಾಡ ಹೊಂದಿದೆ. ಇದರಲ್ಲಿ 8,07,188 ಮಹಿಳಾ ಮತದಾರರು ಮತ್ತು 8,22,399 ಪುರುಷ ಮತದಾರರಿದ್ದಾರೆ. ಒಕ್ಕಲಿಗ ಸಮುದಾಯ 5 ಲಕ್ಷ, ಎಸ್‍ಸಿ+ಎಸ್‍ಟಿ ಸಮುದಾಯ 3 ಲಕ್ಷ, ಲಿಂಗಾಯಿತ ಸಮುದಾಯ 2.50 ಲಕ್ಷ, ಮುಸ್ಲಿಂ ಸಮುದಾಯ 2 ಲಕ್ಷ, ಕುರುಬ ಸಮುದಾಯ 1.50 ಲಕ್ಷ ಮತ್ತು ಇತರೆ ಸಮುದಾಯ 2 ಲಕ್ಷ ಮಂದಿ ಇದ್ದಾರೆ.

    2014ರ ಫಲಿತಾಂಶ: 2014ರ ಲೋಕ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ದೇವೇಗೌಡರು 1,00,462(8.76%) ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎ.ಮಂಜು ವಿರುದ್ಧ ಗೆಲುವು ಕಂಡಿದ್ದರು. ದೇವೇಗೌಡರು 5,09,841 (44.47%), ಎ.ಮಂಜು 4,09,378 (35.67%) ಮತ್ತು ಬಿಜೆಪಿಯ ಸಿ.ಎಚ್.ವಿಜಯಶಂಕರ್ 1,65,688 (14.44%) ಮತಗಳನ್ನು ಪಡೆದುಕೊಂಡಿದ್ದರು.

    ಜೆಡಿಎಸ್ ಪ್ರಾಬಲ್ಯ: ಹಾಸನ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, 6 ಕ್ಷೇತ್ರದಲ್ಲಿ ಜೆಡಿಎಸ್ ಮತ್ತು 2 ಕ್ಷೇತ್ರದಲ್ಲಿ ಬಿಜೆಪಿಯ ಶಾಸಕರಿದ್ದಾರೆ. ಹಾಸನ-ಪ್ರೀತಂಗೌಡ(ಬಿಜೆಪಿ), ಬೇಲೂರು – ಲಿಂಗೇಶ್(ಜೆಡಿಎಸ್), ಸಕಲೇಶಪುರ – ಹೆಚ್.ಕೆ.ಕುಮಾರಸ್ವಾಮಿ(ಜೆಡಿಎಸ್), ಅರಕಲಗೂಡು – ಎ.ಟಿ.ರಾಮಸ್ವಾಮಿ (ಜೆಡಿಎಸ್), ಹೊಳೇನರಸೀಪುರ – ಹೆಚ್.ಡಿ.ರೇವಣ್ಣ(ಜೆಡಿಎಸ್), ಶ್ರವಣಬೆಳಗೊಳ – ಸಿಎನ್ ಬಾಲಕೃಷ್ಣ (ಜೆಡಿಎಸ್), ಅರಸೀಕೆg- ಶಿವಲಿಂಗೇಗೌಡ (ಜೆಡಿಎಸ್) ಮತ್ತು ಕಡೂರು- ಬೆಳ್ಳಿ ಪ್ರಕಾಶ್ (ಬಿಜೆಪಿ) ಆಯ್ಕೆಯಾಗಿದ್ದಾರೆ.

    ಕಣದಲ್ಲಿರುವ ಅಭ್ಯರ್ಥಿಗಳು
    ಪ್ರಜ್ವಲ್ ರೇವಣ್ಣ : ದೇವೇಗೌಡರು ಮೊಮ್ಮಗನಿಗಾಗಿ ಕ್ಷೇತ್ರವನ್ನು ಬಿಟ್ಟುಕೊಟ್ಟ ಪರಿಣಾಮ ಪ್ರಜ್ವಲ್ ಕಣದಲ್ಲಿ ನಿಂತಿದ್ದಾರೆ.

    ಪ್ಲಸ್ ಪಾಯಿಂಟ್: ಹಾಸನ ಜಿಲ್ಲೆಯ ಮೇಲೆ ಮಾಜಿ ಪ್ರಧಾನಿ ದೇವೇಗೌಡರ ಪಾರುಪತ್ಯ, ಹಿಡಿತವನ್ನು ಹೊಂದಿದ್ದಾರೆ. ತಂದೆ ಹೆಚ್.ಡಿ.ರೇವಣ್ಣ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಕೈಗೊಂಡಿರೋ ಅಭಿವೃದ್ಧಿ ಕಾರ್ಯಗಳು ಪ್ರಜ್ವಲ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಲಿವೆ. 6 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರನ್ನು ಹೊಂದಿದ್ದು, ಹಾಸನದಲ್ಲಿ ಯುವ ಕಾರ್ಯಕರ್ತರ ಪಡೆಯನ್ನ ಕಟ್ಟಲಾಗಿದೆ. ಕಾಂಗ್ರೆಸ್, ಜೆಡಿಎಸ್ ಮೈತ್ರಿಯಾಗಿ ಒಟ್ಟಾಗಿ ಕಣಕ್ಕಿಳಿದಿರೋದು ಮತಗಳ ಕ್ರೋಢಿಕರಣ ಸಾಧ್ಯತೆಗಳಿವೆ. ಪ್ರಜ್ವಲ್ ರೇವಣ್ಣ ಚುನಾವಣೆಗೂ ಮುನ್ನವೇ ಕಾರ್ಯಕರ್ತರೊಂದಿಗಿನ ಒಡನಾಟ ಹೊಂದಿದ್ದು ಮತ್ತೊಂದು ಪ್ಲಸ್ ಪಾಯಿಂಟ್.

    ಮೈನಸ್ ಪಾಯಿಂಟ್: ಕುಟುಂಬ ರಾಜಕಾರಣದ ಆರೋಪ ಹೊತ್ತಿರುವುದರ ಜೊತೆಗೆ ರಾಜಕೀಯ ಅನುಭವದ ಕೊರತೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಾಂಗ್ರೆಸ್, ಜೆಡಿಎಸ್ ಮೈತ್ರಿಯಲ್ಲಿ ಒಳಗೊಳಗೆ ಕುದಿಯುತ್ತಿರುವ ಅಸಮಾಧಾನ ಹೊಡೆತ ನೀಡಬಹುದು. ಎ.ಮಂಜು ಬಿಜೆಪಿಯಿಂದ ಪ್ರಬಲ ಅಭ್ಯರ್ಥಿ ಆಗಿರುವ ಕಾರಣ ನೇರ ಹಣಾಹಣಿ ನಡೆಯಲಿದೆ.

    ಎ.ಮಂಜು: 2014ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ದೇವೇಗೌಡರ ವಿರುದ್ಧ ಸ್ಪರ್ಧಿಸಿ ಎ.ಮಂಜು ಸೋತಿದ್ದರು. ಮೈತ್ರಿ ಧರ್ಮ ಹಿನ್ನೆಲೆಯಲ್ಲಿ ಕಾಂಗ್ರೆಸ್ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಬಂಡಾಯದ ಬಾವುಟ ಹಾರಿಸಿ ಎ. ಮಂಜು ಬಿಜೆಪಿ ಸೇರ್ಪಡೆಗೊಂಡು ಕಮಲ ಹಿಡಿದು ಸ್ಪರ್ಧೆ ಮಾಡಿದ್ದಾರೆ.

    ಪ್ಲಸ್ ಪಾಯಿಂಟ್: 2014ರಲ್ಲಿ ದೇವೇಗೌಡರ ವಿರುದ್ಧ ಸೋತ ಅನುಕಂಪದ ಅಲೆ ಕೆಲಸ ಮಾಡಬಹುದು. ಮೈತ್ರಿಯ ಸ್ಥಳೀಯ ಕಚ್ಚಾಟದ ಲಾಭ ಪಡೆಯಲು ಎ.ಮಂಜು ಪ್ರಯತ್ನಿಸುತ್ತಿದ್ದಾರೆ. ದೇವೇಗೌಡರ ಕುಟುಂಬ ಕಡು ವಿರೋಧಿಗಳು ಒಂದಾಗುವ ಲಕ್ಷಣಗಳು ಕಾಣುತ್ತಿವೆ. ಈ ಬಾರಿ 2 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಹೊಂದಿದ್ದು, ಮಾಜಿ ಸಿಎಂ ಯಡಿಯೂರಪ್ಪ ಬೆನ್ನಿಗೆ ನಿಂತಿರೋದು ಎ. ಮಂಜು ಅವರಿಗೆ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.

    ಮೈನಸ್ ಪಾಯಿಂಟ್: ಗ್ರಾಮಾಂತರ ಭಾಗದಲ್ಲಿ ಜೆಡಿಎಸ್ ಪ್ರಬಲವಾಗಿರೋದು ಮೊದಲ ಹೊಡೆತ. ಮೈತ್ರಿಯಿಂದಾಗಿ ಅಹಿಂದ ಮತಗಳು ಒಟ್ಟಾಗುವ ಆತಂಕ ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ. ಪ್ರಜ್ವಲ್ ಪರ ಸಚಿವರುಗಳು, ಶಾಸಕರು ದಂಡು ಪ್ರಚಾರ ನಡೆಸುತ್ತಿರೋದು. ಕಾಂಗ್ರೆಸ್ ಬಿಟ್ಟು ಕಡೇ ಕ್ಷಣದಲ್ಲಿ ಬಿಜೆಪಿಗೆ ಜಿಗಿದು ಅಭ್ಯರ್ಥಿಯಾಗಿದ್ದು ಆಂತರಿಕ ಅಸಮಾಧಾನದ ಬಿಸಿ ತಾಗುವ ಸಾಧ್ಯತೆಗಳಿವೆ.

  • ನಿಂಬೆಹಣ್ಣಿನೊಂದಿಗೆ ಮಾಂಸದೂಟದಲ್ಲಿ ರೇವಣ್ಣರನ್ನು ನುಂಗುತ್ತೇನೆ: ಈಶ್ವರಪ್ಪ

    ನಿಂಬೆಹಣ್ಣಿನೊಂದಿಗೆ ಮಾಂಸದೂಟದಲ್ಲಿ ರೇವಣ್ಣರನ್ನು ನುಂಗುತ್ತೇನೆ: ಈಶ್ವರಪ್ಪ

    ಕಲಬುರಗಿ: ಬಿಜೆಪಿ ನಾಯಕ ಈಶ್ವರಪ್ಪ ಅವರಿಗೂ ನಿಂಬೆಹಣ್ಣು ನೀಡುತ್ತೇನೆ ಎಂದು ಹೇಳಿಕೆ ನೀಡಿದ್ದ ಲೋಕೋಪಯೋಗಿ ಸಚಿವ ರೇವಣ್ಣ ಅವರಿಗೆ ಈಶ್ವರಪ್ಪ ಅವರು ಖಡಕ್ ತಿರುಗೇಟು ನೀಡಿದ್ದಾರೆ.

    ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ನಮ್ಮ ಮನೆಯಲ್ಲಿ ಮಾಂಸದೂಟ ಚೆನ್ನಾಗಿ ಮಾತನಾಡುತ್ತಾರೆ. ಅದಕ್ಕೆ ನಿಂಬೆಹಣ್ಣನ್ನು ಹಿಂಡಿಕೊಂಡು ಅವರನ್ನು ಅದರೊಂದಿಗೆ ನುಂಗುತ್ತೇನೆ. ರೇವಣ್ಣ ಅವರಿಗೆ ಬಿಜೆಪಿ ಕಾರ್ಯಕರ್ತರ ಬಗ್ಗೆ ಗೊತ್ತಿಲ್ಲ ಅದಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ ಎಂದರು.

    ರೇವಣ್ಣ ಅವರಿಗೆ ಜಾತಿ ಹಾಗೂ ಕುಟುಂಬ ರಾಜಕಾರಣ ಮಾಡುವುದು ಮಾತ್ರ ಗೊತ್ತು. ಅವರ ಜಾತಿ ಮತ್ತು ಕುಟುಂಬವನ್ನು ಈ ಬಾರಿಯ ಚುನಾವಣೆಯಲ್ಲಿ ನಿಂಬೆಹಣ್ಣಿನೊಂದಿಗೆ ಹಿಂಡಿಕೊಂಡು ಕುಡಿಯುತ್ತೇನೆ. ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಚುನಾವಣೆಯಲ್ಲಿ ಮೋದಿ ಅಧಿಕಾರಕ್ಕೆ ಬಂದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಇದು ಕೂಡ ಅವರು ಹೇಳಿದ ಸುಳ್ಳುಗಳಲ್ಲಿ ಒಂದಾಗಲಿದೆ ಅಷ್ಟೇ ಎಂದು ಭವಿಷ್ಯ ನುಡಿದರು.

    ರೇವಣ್ಣ ಹೇಳಿದ್ದೇನು?
    ಕೆಲ ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ರೇವಣ್ಣ ಅವರು, ನಾನು ಯಾಕೆ ನಿಂಬೆಹಣ್ಣನ್ನು ಹಿಡಿದುಕೊಂಡಿರುತ್ತೇನೆ ಎನ್ನುವ ಉತ್ತರಿಸಿ, ನಮ್ಮ ಕುಲದೇವರು ಈಶ್ವರ. ಈಶ್ವರ ಫೋಟೋ ಜೊತೆ ನಿಂಬೆಹಣ್ಣು ಇಟ್ಟುಕೊಂಡಿರುತ್ತೇನೆ. ಸಮಾವೇಶದಲ್ಲಿ ಯಾರೋ ಕೊಟ್ಟರೂ ಅಂತಾ 5-6 ನಿಂಬೆಹಣ್ಣು ಇಟ್ಟುಕೊಂಡಿದ್ದೆ ಅಷ್ಟೇ ಎಂದಿದ್ದರು. ಇದೇ ವೇಳೆ ಈಶ್ವರಪ್ಪ ಅವರಿಗೆ ನಿಂಬೆಹಣ್ಣು ಕೊಡಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ, ಈಶ್ವರಪ್ಪನನ್ನು ಯಾಕ್ರಪ್ಪ ಇಷ್ಟೋತ್ತಲ್ಲಿ ನೆನಪಿಸಿಕೊಳ್ತೀರಾ? ಯಾರಾದರೂ ಒಳ್ಳೆಯವರನ್ನು ನೆನಪಿಸಿಕೊಳ್ಳಿ. ಆ ಈಶ್ವರಪ್ಪನನ್ನು ಯಾಕ್ ನೆನಪಿಸಿಕೊಳ್ತೀರಾ. ಈಶ್ವರಪ್ಪನ ಬಗ್ಗೆ ಮಾತನಾಡಿದ್ರೆ ನಾನು ಪೊಳ್ಳೆದ್ದು ಹೋಗ್ತಿನಿ. 2018ರಲ್ಲಿ ಈಶ್ವರಪ್ಪ ಪರಿಸ್ಥಿತಿ ಏನಾಗಿತ್ತು ಗೊತ್ತು ತಾನೇ? ಅವರೇ ನಮ್ಮ ಪಕ್ಷಕ್ಕೆ ಬರುವುದಕ್ಕೆ ತಯಾರಾಗಿದ್ದರು. ಅವರ ಬಗ್ಗೆ ನಾನ್ಯಾಕೆ ಮಾತನಾಡಲಿ. ಅವರಿಗೂ ಒಂದು ನಿಂಬೆ ಹಣ್ಣು ಕೋಡೋಣ ಬಿಡಿ ಎಂದಿದ್ದರು.