Tag: HD Revanna

  • ನನಗೆ ಸಿಕ್ಕಷ್ಟು ಪ್ರಚಾರ ಯಾರಿಗೂ ಸಿಕ್ಕಿಲ್ಲ: ರೇವಣ್ಣ

    ನನಗೆ ಸಿಕ್ಕಷ್ಟು ಪ್ರಚಾರ ಯಾರಿಗೂ ಸಿಕ್ಕಿಲ್ಲ: ರೇವಣ್ಣ

    ಬೆಂಗಳೂರು: ವಿಶ್ವಾಸಮತಯಾಚನೆಯ ಸಂದರ್ಭದ ಚರ್ಚೆಯ ವೇಳೆ ಲೋಕೋಪಯೋಗಿ ಸಚಿವ ರೇವಣ್ಣನವರನ್ನು ಸ್ಪೀಕರ್ ಕಾಲೆಳೆದ ಪ್ರಸಂಗ ನಡೆಯಿತು.

    ಮೈತ್ರಿ ಸರ್ಕಾರ ರಚನೆಯಾದ ಒಂದು ವರ್ಷ ನಾಲ್ಕು ತಿಂಗಳ ಅವಧಿಯಲ್ಲಿ ನನಗೆ ಸಿಕ್ಕಷ್ಟು ಪ್ರಚಾರ ಯಾರಿಗೂ ಸಿಕ್ಕಿಲ್ಲ. ಹೀಗಾಗಿ ಸದನದಲ್ಲಿ ಮಾತನಾಡಲು ನನಗೆ ಕನಿಷ್ಠ 2 ಗಂಟೆ ಸಮಯದ ಅಗತ್ಯವಿದೆ. ಈ ಬಗ್ಗೆ ಸದನದ ಗಮನಕ್ಕೆ ತರಬೇಕಿದೆ ಸ್ಪೀಕರ್ ಅವರಲ್ಲಿ ಕೈ ಮುಗಿದು ಮನವಿ ಮಾಡಿದರು.

    ರೇವಣ್ಣ ಅವರ ಮಾತಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಸ್ಪೀಕರ್ ಅವರು, ನಮ್ಮ ಜ್ಯೋತಿಷಿಗಳನ್ನು ಕೇಳಿ ಸಮಯವನ್ನು ನಿಗದಿ ಮಾಡುತ್ತೇನೆ. ಅಲ್ಲಿಯವರೆಗೂ ಶಿವಲಿಂಗೇಗೌಡರು ಮಾತನಾಡುತ್ತಾರೆ ಹಾಸ್ಯ ಚಟಾಕಿ ಸಿಡಿಸಿದರು.

    ಇದಕ್ಕೂ ಮುನ್ನ ಮಾತನಾಡಿದ್ದ ಸಿಎಂ ಅವರು ರೇವಣ್ಣ ಅವರ ಟೆಂಪಲ್ ರನ್ ಬಗ್ಗೆ ಟೀಕೆ ಮಾಡಿದ್ದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು. ರೇವಣ್ಣ ಅವರು ಬೆಳಗ್ಗೆ ದೇವಾಲಯಕ್ಕೆ ಭೇಟಿ ನೀಡಿ ದೇವರ ಬಳಿ ಪ್ರಾರ್ಥನೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಅರ್ಚಕರು ಏಲಕ್ಕಿ ಹಾರ ಅಥವಾ ನಿಂಬೆ ಹಣ್ಣು ನೀಡುತ್ತಾರೆ. ಇವುಗಳನ್ನು ಕೈಯಲ್ಲಿ ಹಿಡಿದು ರೇವಣ್ಣ ಅವರು ತಮ್ಮ ಮುಂದಿನ ಕೆಲಸಕ್ಕೆ ತೆರಳುತ್ತಾರೆ. ಆದರೆ ಇದನ್ನೇ ಟೀಕೆ ಮಾಡಿದ್ದಾರೆ. ನಮ್ಮದು ಮಾಟ ಮಂತ್ರ ಮಾಡುವ ಕುಟುಂಬ ಅಲ್ಲ. ಇಂದು ರಾಮನ ಸಂಸ್ಕೃತಿ ಬಗ್ಗೆ ಮಾತನಾಡುವ ನೀವು ಈ ಬಗ್ಗೆ ಟೀಕೆ ಮಾಡುತ್ತಾರೆ. ಮಾಟ ಮಂತ್ರ ಮಾಡಿ ಸರ್ಕಾರ ಉಳಿಸಿಕೊಳ್ಳುವುದಾದರೆ ನಾವು ಜನರ ಬಳಿ ಹೋಗುವ ಸಂದರ್ಭವೇ ಬರುತ್ತಿರಲಿಲ್ಲ. ನಾವು ದೇವರ ಮೇಲೆ ನಂಬಿಕೆ ಇಟ್ಟಿದ್ದೇವೆ ಅಷ್ಟೇ ಎಂದರು.

  • ಗ್ರಹಣದ ಕಂಟಕ ನಿವಾರಣೆಗೆ ದೇವರ ಮೊರೆ ಹೋದ ದಳಪತಿ

    ಗ್ರಹಣದ ಕಂಟಕ ನಿವಾರಣೆಗೆ ದೇವರ ಮೊರೆ ಹೋದ ದಳಪತಿ

    ಬೆಂಗಳೂರು: ಗ್ರಹಣ ಬಂತು ಅಂದ್ರೆ ಸಾಕು ದೊಡ್ಡ ಗೌಡ್ರ ಕುಟುಂಬದಲ್ಲಿ ಆತಂಕ ಎದುರಾಗುತ್ತದೆ. ಯಾಕೆಂದರೆ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಮೇಲೆ ಗ್ರಹಣದ ಕರಿಛಾಯೆ ಬೀಳುತ್ತಲೇ ಇದೆ. ಜುಲೈ 2 ಸೂರ್ಯ ಗ್ರಹಣವಾಗಿದ್ದು, ಗೌಡ್ರ ಕುಟುಂಬ ಪೂಜೆಯಲ್ಲಿ ನಿರತವಾಗಿತ್ತು. ಆಗಲೇ ಗ್ರಹಣದಾಟ ಶುರುವಾಗಿತ್ತು. ಗಟ್ಟಿಯಾಗಿದ್ದ ಸರ್ಕಾರದ ಬುಡ ಇಬ್ಬರು ಶಾಸಕರ ರಾಜೀನಾಮೆಯಿಂದ ಅಲ್ಲಾಡತೊಡಗಿತ್ತು.

    ಇನ್ನೇನು ಹೈಡ್ರಾಮದ ಮಧ್ಯೆ ಕುಮಾರಪರ್ವ ಅಂತ್ಯದ ಆರಂಭವಾಗಿದೆ. ಇದರ ಮಧ್ಯೆಯೇ ಸಿಎಂ ವಿಶ್ವಾಸಮತ ಯಾಚನೆಯ ಬಾಂಬ್ ಹಾಕಿದ್ದಾರೆ. ಆದರೂ ಎದೆಯೊಳಗೆ ಈಗ ಹೊಸ ಭಯ. ಅದುವೇ ಜುಲೈ 16ಕ್ಕೆ ಸಂಭವಿಸುವ ಚಂದ್ರ ಗ್ರಹಣ ಸರ್ಕಾರವನ್ನು ಮುಗಿಸಿಯೇ ಬಿಡುತ್ತೋ ಅನ್ನುವ ಭಯ ಕಾಡುತ್ತಿದೆ. ಈ ಗ್ರಹಣದ ಕರಿಛಾಯೆ ಗೌಡ್ರ ಕುಟುಂಬದಲ್ಲಿ ದೊಡ್ಡ ಭಯಕ್ಕೆ ಕಾರಣವಾಗಿದೆ. ಇದಕ್ಕಾಗಿಯೇ ಈಗ ಸರ್ಕಾರ ಉಳಿಸಲು ದೇವರ ಮೊರೆ ಹೋಗಿದ್ದಾರೆ.

    ಒಂದೆಡೆ ಗ್ರಹಣ ಕಾಟ ಇನ್ನೊಂದಡೆ ಸರ್ಕಾರದ ಕೊನೆಯಾಟದ ತೂಗುಗತ್ತಿಯಲ್ಲಿರುವ ದಳಪತಿಗಳು ಈಗ ದೇವರ ಮೊರೆ ಹೋಗಿದ್ದಾರೆ. ಗ್ರಹಣ ದೋಷ ನಿವಾರಣೆಗೆ ಮುಂಬರುವ ಚಂದ್ರ ಗ್ರಹಣದ ಕರಿಛಾಯೆ ತಪ್ಪಿಸಲು ಈಗಾಗಲೇ ರೇವಣ್ಣ ಅವರು ತಿಮ್ಮಪ್ಪನ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಒಂಬತ್ತು ತೆಂಗಿನ ಕಾಯಿಯನ್ನು ಪೂಜೆ ಮಾಡಿ ರೇವಣ್ಣ ಅವರು ತಮ್ಮ ಪದ್ಮನಾಭ ನಿವಾಸಕ್ಕೆ ಕಟ್ಟಿದ್ದಾರೆ. ಇನ್ನೊಂದ್ಕಡೆ ಸರ್ಕಾರ ಅತೃಪ್ತಿಯ ಉರಿಯಲ್ಲಿ ಬೇಯುತ್ತಿರುವಾಗ ಶಾರದಾಂಬೆ ಸನ್ನಿಧಾನದಲ್ಲೂ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • 500 ಕೋಟಿ ಲಂಚ – ರೇವಣ್ಣ ವಿರುದ್ಧ ರಾಜ್ಯಪಾಲರಿಗೆ ದೂರು

    500 ಕೋಟಿ ಲಂಚ – ರೇವಣ್ಣ ವಿರುದ್ಧ ರಾಜ್ಯಪಾಲರಿಗೆ ದೂರು

    – ಆಡಳಿತಾತ್ಮಕ ನಿರ್ಧಾರ ಕೈಗೊಳ್ಳದಂತೆ ವಿ.ಆರ್.ವಾಲಾ ಆದೇಶ

    ಬೆಂಗಳೂರು: ಮೈತ್ರಿ ಸರ್ಕಾರದ ಸೂಪರ್ ಸಿಎಂ ಎಂದೇ ಬಿಂಬಿತವಾಗಿದ್ದ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ವಿರುದ್ಧ ರೈತ ಮೋರ್ಚಾ ಸಂಘಟನೆಯ ಉಪಾಧ್ಯಕ್ಷ ಎಸ್.ಲಿಂಗಮೂರ್ತಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

    ಲೋಕೋಪಯೋಗಿ ಇಲಾಖೆಯಲ್ಲಿ ಸೋಮವಾರ ಸುಮಾರು 800 ಜನ ಎಂಜಿನಿಯರ್ ಗಳಿಗೆ ಬಡ್ತಿ ಹಾಗೂ ವರ್ಗಾವಣೆ ಮಾಡಿದ್ದು, ಇದಕ್ಕಾಗಿ 500 ಕೋಟಿ ರೂ. ಹಣ ಪಡೆದಿದ್ದಾರೆ. ಎಸ್‍ಸಿ, ಎಸ್‍ಟಿ ಮತ್ತು ಓಬಿಸಿ ಸಮುದಾಯದ ಎಂಜಿನಿಯರ್ ಗಳು ವರ್ಗಾವಣೆ ಮಾಡಿಸಿಕೊಳ್ಳಲು ಒಂದು ವರ್ಷದಿಂದ ಕಾಯುತ್ತಿದ್ದರು. ಇಂತಹ ಸಮಯದಲ್ಲಿ ಹಣ ಪಡೆದು ಏಕಾಏಕಿ ಮನಬಂದಂತೆ ಎಂಜಿನಿಯರ್‍ಗಳನ್ನು ವರ್ಗಾವಣೆ ಮಾಡಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸಿ, ಸರ್ಕಾರ ಮಾಡಿರುವ ವರ್ಗಾವಣೆಯನ್ನು ಹಿಂಪಡೆಯಬೇಕು ಎಂದು ರಾಜ್ಯಪಾಲರಿಗೆ ಲಿಂಗಮೂರ್ತಿ ದೂರು ನೀಡಿದ್ದಾರೆ.

    ರಾಜ್ಯಪಾಲರ ಚಾಟಿ: ಸಮ್ಮಿಶ್ರ ಸರ್ಕಾರ ಯಾವುದೇ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಬಾರದು. ಸರ್ಕಾರ ಅಲ್ಪ ಮತಕ್ಕೆ ಕುಸಿದ ಪರಿಣಾಮ ಕ್ಯಾಬಿನೆಟ್ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಸರ್ಕಾರ ಪತನದ ಮುನ್ಸೂಚನೆ ತಿಳಿಯುತ್ತಿದ್ದಂತೆ ರಾತ್ರೋ ರಾತ್ರಿ ಕಡತಗಳಿಗೆ ಸಹಿ ಮತ್ತು ಅಧಿಕಾರಿಗಳಿಗೆ ಭಡ್ತಿ ನೀಡಲಾಗುತ್ತಿದೆ ಎಂದು ಈ ಹಿಂದೆ ಬಿಜೆಪಿ ಸಹ ಬಿಜೆಪಿ ಆರೋಪಿಸಿತ್ತು. ಈ ವಿಚಾರದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ರಾಜ್ಯಪಾಲರು ಈ ಸೂಚನೆ ಹೊರಡಿಸಿದ್ದಾರೆ.

    ಏನಿದು ಪ್ರಕರಣ?
    ಮೈತ್ರಿ ಸರ್ಕಾರದ ಸೂಪರ್ ಸಿಎಂ ಎಂದೇ ಬಿಂಬಿತವಾಗಿರುವ ಸಚಿವ ಹೆಚ್.ಡಿ.ರೇವಣ್ಣ ಇಲಾಖೆಯಲ್ಲಿ ಬುಧವಾರ ಒಂದೇ ದಿನದಲ್ಲಿ 800 ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶ ಹೊರಡಿಸಲಾಗಿತ್ತು.

    ಸೋಮವಾರ ಸಚಿವರೆಲ್ಲಾ ರಾಜೀನಾಮೆ ನೀಡಿದ್ದರೂ, ರೇವಣ್ಣ ಅವರು ತಮ್ಮ ಲೋಕೋಪಯೋಗಿ ಇಲಾಖೆಯಲ್ಲಿ ಇನ್ನು ಸಕ್ರೀಯವಾಗಿದ್ದು, ಅಧಿಕಾರಿಗಳ ವರ್ಗಾವಣೆ ಮತ್ತು ಬಡ್ತಿ ಸಂಬಂಧ ತರಾತುರಿಯಲ್ಲಿ ಇಲಾಖಾ ಪದೋನ್ನತಿ ಸಮಿತಿ (ಡಿಸಿಪಿ) ಸಭೆಯನ್ನೂ ನಡೆಸಿದ್ದರು. ಮೈತ್ರಿ ಉಳಿಸಿಕೊಳ್ಳಲು ಎರಡೂ ಪಕ್ಷದ ಮುಖಂಡರು ಓಡಾಡುತ್ತಿದ್ದರೆ, ರೇವಣ್ಣ ಅವರು ಮಾತ್ರ ವರ್ಗಾವಣೆ ದಂಧೆಯಲ್ಲಿ ತೊಡಗಿಕೊಂಡಿದ್ದಾರಾ ಎನ್ನುವ ಪ್ರಶ್ನೆ ಎದ್ದಿತ್ತು.

    ಸರ್ಕಾರ ಪತನದಂಚಿಗೆ ತಲುಪಿರುವ ಸಮಯದಲ್ಲಿ ದಿಢೀರ್ ಅಧಿಕಾರಿಗಳಿಗೆ ಬಡ್ತಿ ನೀಡಿರುವುದರ ಹಿಂದೆ ಸಚಿವರ ಸ್ವಹಿತಾಸಕ್ತಿ ಅಡಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಆತುರದಲ್ಲಿ ಬಡ್ತಿ ನೀಡುವ ವಿಷಯ ಕುರಿತು ಸಭೆ ನಡೆಸಲು ಅಧಿಕಾರಿಗಳ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ವಿಕಾಸಸೌಧದಲ್ಲಿ ನೆಪಮಾತ್ರಕ್ಕೆ ಸಭೆ ನಡೆಸಿದ ಅಧಿಕಾರಿಗಳು ರಹಸ್ಯ ಸ್ಥಳಕ್ಕೆ ತೆರಳಿ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿತ್ತು.

    ಈ ಹಿಂದೆ ರೇವಣ್ಣ ಸಚಿವರಾಗುತ್ತಿದ್ದಂತೆ ಹಲವು ವಿಭಾಗೀಯ ಕಚೇರಿಗಳನ್ನು ಹಾಸನಕ್ಕೆ ಸ್ಥಳಾಂತರಿಸಿಕೊಂಡಿದ್ದರು. ರೇವಣ್ಣ ಅವರ ಈ ನಡೆಗೆ ಸಚಿವ ಸಂಪುಟದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಹಿಂದೆ ಲೋಕೋಪಯೋಗಿ ಇಲಾಖೆಯಲ್ಲಿ ಕೈ ಬಿಟ್ಟ ಪ್ರಕರಣಗಳನ್ನು ಸಹ ಇತ್ಯರ್ಥಪಡಿಸಲು ಸಚಿವರು ಅಧಿಕಾರಿಗಳ ಮೂಲಕ ಮುಂದಾಗಿದ್ದರು. ಇದರಲ್ಲಿಯೂ ಸಚಿವರ ಸ್ವಹಿತಾಸಕ್ತಿಯೇ ಅಡಗಿದೆ ಎಂಬ ಆರೋಪಗಳು ಬಲವಾಗಿ ಕೇಳಿ ಬಂದಿದ್ದವು.

  • ಪಾಪ ಗೌಡ್ರೇ ಸೋತು ಮನೇಲಿ ಕೂತಿದ್ದಾರೆ, ಅವರೇನು ಮಾಡೋಕ್ಕಾಗತ್ತೆ- ಎಚ್‍ಡಿ ರೇವಣ್ಣ

    ಪಾಪ ಗೌಡ್ರೇ ಸೋತು ಮನೇಲಿ ಕೂತಿದ್ದಾರೆ, ಅವರೇನು ಮಾಡೋಕ್ಕಾಗತ್ತೆ- ಎಚ್‍ಡಿ ರೇವಣ್ಣ

    – ರೋಡಿನ ಬಗ್ಗೆ ಮಾತ್ರ ನನ್ನಲ್ಲಿ ಹೇಳಿ

    ಮೈಸೂರು: ಕೆಲವರಿಗೆ ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡದಿದ್ದರೆ ನಿದ್ರೆ ಬರೋದಿಲ್ಲ. ಅದಕ್ಕೆ ಸುಮ್ಮನೆ ಎಲ್ಲದ್ದಕ್ಕೂ ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುತ್ತಾರೆ. ದೇವೇಗೌಡರು ನೀರು ಬಿಡಿಸೋಕೆ ಆಗುತ್ತಾ? ಪಾಪ ಅವರೇ ಸೋತು ಮನೆಯಲ್ಲಿ ಕುಳಿತ್ತಿದ್ದಾರೆ. ಹೀಗಾಗಿ ಅವರೇನು ಮಾಡಲು ಆಗುತ್ತದೆ ಎಂದು ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಹೇಳಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿ ಮಂಡ್ಯದಲ್ಲಿ ನೀರಿಗಾಗಿ ರೈತರ ಪ್ರತಿಭಟನೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರತಿಭಟನಾ ಸ್ಥಳಕ್ಕೆ ಮಂಡ್ಯ ಜೆಡಿಎಸ್ ಜನಪ್ರತಿನಿಧಿಗಳು ಹೋಗಿದ್ದನ್ನ ಸಮರ್ಥಿಸಿಕೊಂಡರು. ಇದೇ ವೇಳೆ ಪ್ರತಿಭಟನಾಕಾರರು ರಾಜಕೀಯ ಮಾಡಿದ್ರು ಎಂದು ಪರೋಕ್ಷವಾಗಿ ಟೀಕಿಸಿದ ಸಚಿವರು, ಸಮಸ್ಯೆ ಗೊತ್ತಿರುವವರ ಬಳಿ ಹೋಗಿ ಮಾತನಾಡಬಹುದು. ಆದರೆ ಸಮಸ್ಯೆ ಗೊತ್ತಿಲ್ಲದವರ ಬಳಿ ಏನ್ ಮಾತನಾಡೋದು? ನೀರು ಬಿಡುವುದು ನಮ್ಮ ಕೈಯಲ್ಲಿ ಇಲ್ಲ. ಮಂಡ್ಯವನ್ನ ಕೈ ಬಿಡುವ ಪ್ರಶ್ನೆಯೇ ಇಲ್ಲ. ನಮಗೆ ಹಾಸನವೂ ಒಂದೇ ಮಂಡ್ಯವು ಒಂದೇ ಎಂದು ಹೇಳಿದ್ದಾರೆ.

    ಒಂದು ಹನಿ ಹೋದ್ರು ನೋಟಿಸ್: ನೀರಾವರಿ ಇಲಾಖೆ ಕಾರ್ಯದರ್ಶಿಗೂ ಗೊತ್ತಾಗದೆ ನಮ್ಮ ಡ್ಯಾಂಗಳಿಗೆ ತಮಿಳುನಾಡು ಅಧಿಕಾರಿಗಳು ಬಂದು ಹೋಗಿದ್ದಾರೆ. ಎಲ್ಲಾ ಡ್ಯಾಂಗಳ ಲೆಕ್ಕ ಬರೆದುಕೊಂಡು ಹೋಗಿದ್ದಾರೆ. ಒಂದು ಹನಿ ನೀರು ಹೊರಗೆ ಹೋದ್ರು ಎಲ್ಲರಿಗೂ ನೋಟಿಸ್ ಬರುತ್ತದೆ. ನಾನು ಕೂಡ ಹೇಮಾವತಿ ಜಲಾಶಯಕ್ಕೆ ಭೇಟಿ ಕೊಟ್ಟೆ. ಅಲ್ಲಿ 15 ದಿನಕ್ಕೆ ಆಗುವಷ್ಟು ನೀರಿದೆ ಅಷ್ಟೇ. ನಮ್ಮ ಡ್ಯಾಂಗಳಲ್ಲಿ ನೀರಿಲ್ಲ. ಇತ್ತೀಚೆಗೆ ಜಲಾಶಯಗಳಿಗೆ ಕೇಂದ್ರ ತಂಡ ಅಲ್ಲ ಅವರು ತಮಿಳುನಾಡಿನ ಅಧಿಕಾರಿಗಳು ಭೇಟಿ ಕೊಟ್ಟಿರೋದು ಎಂದು ತಿಳಿಸಿದ್ದಾರೆ.

    ನಂಗ್ಯಾವ ಪವರ್ ಇಲ್ಲ: ನನಗೆ ಯಾವ ಅಧಿಕಾರವೂ ಇಲ್ಲ. ಯಾರಿಗೆ ಪವರ್ ಇದೆ ಎಂದು ಎಲ್ಲರಿಗೂ ಗೊತ್ತು. ನಾನಗಲಿ, ಜಿ.ಟಿ.ದೇವೇಗೌಡರಾಗಲಿ ಪವರ್ ಫುಲ್ ಅಲ್ಲ. ನಮಗ್ಯಾವ ಪವರ್ ಇದೆ. ನೀರಿನ ವಿಚಾರ, ಮತ್ತೊಂದು ವಿಚಾರ ನನ್ನ ಬಳಿ ಕೇಳಬೇಡಿ. ಅದಕ್ಕಾಗಿಯೇ ಜಲ ಸಂಪನ್ಮೂಲ ಸಚಿವರು, ನೀರಾವರಿ ಸಚಿವರು ಇದ್ದಾರೆ. ಆ ಸಮಸ್ಯೆಗಳನ್ನು ಅವರೇ ಬಗೆಹರಿಸಿಕೊಳ್ಳುತ್ತಾರೆ ಎಂದರು.

    ನಾನು ರೋಡ್ ಮಿನಿಸ್ಟರ್: ನಾನು ಲೋಕೋಪಯೋಗಿ ಸಚಿವ. ಹೀಗಾಗಿ ನನ್ನ ಬಳಿ ರೋಡ್ ಬಗ್ಗೆ ಮಾತ್ರ ಕೇಳಿ. ನೀರಿನ ವಿಚಾರ ಮತ್ತೊಂದು ವಿಚಾರ ನನ್ನ ಬಳಿ ಕೇಳಬೇಡಿ. ರೋಡಿನ ವಿಚಾರ ಇದ್ದರೆ ಮಾತ್ರ ಹೇಳಿ. ಬೇರೆ ವಿಚಾರ ನನ್ನ ಹತ್ತಿರ ಕೇಳಬೇಡಿ ಎಂದು ತಿಳಿಸಿದರು.

    ಜೆಡಿಎಸ್ ಪಕ್ಷ ಪಾದಯಾತ್ರೆ ಮಾಡುವ ಬಗ್ಗೆ ನಂಗೆ ಗೊತ್ತಿಲ್ಲ. ಅದನ್ನೆಲ್ಲ ನೋಡಿಕೊಳ್ಳುವುದಕ್ಕೆ ಪಕ್ಷದ ಹೈಕಮಾಂಡ್ ಇದೆ. ಪಾದಯಾತ್ರೆ ವಿಚಾರ ನಂಗೆ ಗೊತ್ತಿಲ್ಲ ಎಂದು ನುಡಿದರು.

  • ಸರ್ಕಾರ ಎಷ್ಟು ದಿನ ಇರುತ್ತೋ ಅಷ್ಟು ದಿನ ಕೆಲಸ ಮಾಡ್ತೀವಿ:ಹೆಚ್.ಡಿ ರೇವಣ್ಣ

    ಸರ್ಕಾರ ಎಷ್ಟು ದಿನ ಇರುತ್ತೋ ಅಷ್ಟು ದಿನ ಕೆಲಸ ಮಾಡ್ತೀವಿ:ಹೆಚ್.ಡಿ ರೇವಣ್ಣ

    – ದೈವಾನುಗ್ರಹದಿಂದ ನಮ್ಮ ಸರ್ಕಾರ ಉಳಿದಿದೆ

    ಹಾಸನ: ಒಂದು ವರ್ಷದಿಂದ ಸರ್ಕಾರ ಆಗ ಬೀಳುತ್ತೆ ಈಗ ಬೀಳುತ್ತೆ ಎಂದು ಎಲ್ಲಾ ಹೇಳಿದರು. ದೈವಾನುಗ್ರಹದಿಂದ ನಮ್ಮ ಸರ್ಕಾರ ಉಳಿದಿದೆ. ಸರ್ಕಾರ ಎಷ್ಟು ದಿನ ಇರುತ್ತೋ ಅಷ್ಟು ದಿನ ಕೆಲಸ ಮಾಡಿತ್ತೀವಿ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ.

    ಜಿಲ್ಲೆಯಲ್ಲಿ ತಣ್ಣೀರುಹಳ್ಳದಲ್ಲಿರುವ ಚೆಸ್ಕಾಂ ಮುಖ್ಯ ಕಾರ್ಯಪಾಲನಾ ಕಚೇರಿಗೆ ಶಂಕುಸ್ಥಾಪನೆ ನೆರವೇರಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2006ರಲ್ಲಿ ನಮ್ಮ ಸರ್ಕಾರದಲ್ಲಿ ಗ್ಯಾಂಗ್ ಮ್ಯಾನ್ ಗಳನ್ನು ನೇಮಕ ಮಾಡಿದ್ದೇವು. ಆದರೆ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಂಸದೆ ಶೋಭಕ್ಕ ಸೇರಿ ಇವರೆಲ್ಲರೂ ರೇವಣ್ಣನ ಕಡೆಯವರು ಎಂದು ಲೈನ್‍ಮೆನ್ ನೇಮಕಾತಿಯನ್ನು ವಜಾ ಮಾಡಿದರು ಎಂದು ಆರೋಪಿಸಿದರು.

    2006ರಲ್ಲಿ ನಮ್ಮ ಸರ್ಕಾರದಲ್ಲಿ 450 ಚೆಸ್ಕಾಂ ಸಬ್ ಸ್ಟೇಷನ್ ಮಾಡಿದ್ದೆ. ಈಗ ಎಲ್ಲಾ ಆನ್ ಲೈನ್ ಗೀನ್ ಲೈನ್ ಅಂತಾರೆ ಆಗ ಯಾವುದೂ ಇರಲಿಲ್ಲ. ಈ ವಿಚಾರವಾಗಿ ಹಿಂದಿನ ಸರ್ಕಾರ ಏನು ಮಾಡಿದೆ ಎಂದು ಹೇಳಲಿ ನೋಡೋಣ. ಈ ಹಿಂದೆ ಕೆಇಬಿಗೆ 200 ಕೋಟಿ ಅನುದಾನ ಕೊಡಿಸಿದ್ದಕ್ಕೆ ನನಗೆ 10 ಕೋಟಿ ಲಂಚ ಕೊಡೋಕೆ ಬಂದಿದ್ದರು. ನಾನು ಲಂಚ ತೆಗೆದುಕೊಳ್ಳಲಿಲ್ಲಾ ಆದರ ಬದಲಾಗಿ ಬೆಂಗಳೂರಿನಲ್ಲಿ ಕೆಪಿಟಿಸಿಎಲ್ ಬ್ಲಾಕ್ ಮಾಡಿ ಎಂದು ಮಾಡಿಸಿದ್ದೀನಿ ಎಂದು ತಿಳಿಸಿದರು.

    ಕಳೆದ 2006ರಲ್ಲಿ ನಾವು ಚನ್ನರಾಯಪಟ್ಟಣ, ಹೊಳೆನರಸೀಪುರಕ್ಕೆ 35 ಸಾವಿರ ಟ್ರಾನ್ಸ್ ಫಾರ್ಮರ್‍ ಗಳನ್ನು ತರಿಸಿದ್ದೇವು. ಸರ್ಕಾರ ಬಿದ್ದ ತಕ್ಷಣ ಎಲ್ಲಾ ಟ್ರಾನ್ಸ್ ಫಾರ್ಮರ್‍ ಗಳನ್ನು ತುಂಬಿಕೊಂಡು ಹೋಗಿದ್ದರು. ಈಗ ರೈತರು ಯಾರೆಲ್ಲ ಟ್ರಾನ್ಸ್ ಫಾರ್ಮರ್ ಕೇಳಿದರೆ ಎಲ್ಲರಿಗೂ ಕೊಡಿ ಎಂದು ಹೇಳಿದರು.

    ತುಮಕೂರಿಗೆ 25 ಟಿಎಂಸಿ ನೀರು ಮೊದಲು ನೀಡಿದ್ದು ನಾವು ಈಗ ಹೊಸ ಎಂಪಿ ಬಂದಿದ್ದಾರೆ ಹೇಗೆ ನೀರು ಕೊಡಿಸುತ್ತಾರೆ ನೋಡೋಣ. ಇಡೀ ರಾಜ್ಯದಲ್ಲಿ ನನ್ನ ಮೇಲೆ ತನಿಖೆ ಮಾಡಿ ಎಂದು ಸರ್ಕಾರಕ್ಕೆ ಪತ್ರ ಬರೆದ ಏಕೈಕ ಪ್ರತಿನಿಧಿ ನಾನು, ಯಡಿಯೂರಪ್ಪ ಸರ್ಕಾರದಲ್ಲಿ ನನ್ನ ಮೇಲೆ ತನಿಖೆ ಮಾಡಿದರು. ನನ್ನ ಜೊತೆ ಕೆಲ ಒಳ್ಳೆಯ ಅಧಿಕಾರಿಗಳ ಮೇಲೆ ತನಿಖೆ ಮಾಡಿಸಿದರಿ ಎಂದು ಕಿಡಿಕಾರಿದರು.

    ಖಾಸಗಿಯವರ ಪೈಪೋಟಿ ಮೇಲೆ ನಾವು ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಪ್ರಾರಂಭಿಸುತ್ತಿದ್ದೇವೆ. ಈ ಬಾರಿ 1000 ಇಂಗ್ಲಿಷ್ ಮಾಧ್ಯಮ ಶಾಲೆ ಪ್ರಾರಂಭ ಮಾಡಿದ್ದೇವೆ. ಕಳೆದ ಐದು ವರ್ಷದಲ್ಲಿ ಕೇಂದ್ರ ಸರ್ಕಾರ ಜನರಿಗೆ ಏನು ಮಾಡಿದೆ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ತಮ್ಮನ ಸರ್ಕಾರದಲ್ಲಿ ಅಣ್ಣ ಆಡಿದ್ದೇ ಆಟ- ರೇವಣ್ಣ ವಿರುದ್ಧ ಡಿಸಿಎಂ ಗರಂ

    ತಮ್ಮನ ಸರ್ಕಾರದಲ್ಲಿ ಅಣ್ಣ ಆಡಿದ್ದೇ ಆಟ- ರೇವಣ್ಣ ವಿರುದ್ಧ ಡಿಸಿಎಂ ಗರಂ

    ಬೆಂಗಳೂರು: ಸೂಪರ್ ಸಿಎಂ ಎಚ್.ಡಿ ರೇವಣ್ಣ ವಿರುದ್ಧ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಗರಂ ಆಗಿದ್ದಾರೆ. ಎಲಿವೆಟೇಡ್ ಕಾರಿಡಾರ್ ವಿಷಯದಲ್ಲಿ ರೇವಣ್ಣ ಅವರನ್ನು ಡಿಸಿಎಂ ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಮಂಗಳವಾರ ನಡೆದ ಸಭೆಯಲ್ಲಿ ಸಿಎಂ ಸಮ್ಮುಖದಲ್ಲಿಯೇ ರೇವಣ್ಣಗೆ ಡಿಸಿಎಂ ತರಾಟೆಗೆ ತೆಗೆದುಕೊಂಡಿದ್ದಾರೆ. ಯಾರ ಅಭಿಪ್ರಾಯವೂ ಪಡೆಯದೆ ಎಲಿವೆಟೇಡ್ ಕಾರಿಡಾರ್ ಕಾಮಗಾರಿಗೆ ರೇವಣ್ಣ ಮುಂದಾಗಿದ್ದರು. ರೇವಣ್ಣ ಅವರ ಈ ವರ್ತನೆಗೆ ಡಿಸಿಎಂ ಪರಮೇಶ್ವರ್ ಫುಲ್ ಗರಂ ಆಗಿದ್ದಾರೆ.

    ಅದು ಹೇಗ್ರಿ ನೀವು ಒಬ್ಬರೇ ಅದನ್ನು ಮಾಡುತ್ತೀರಾ, ನೀವು ಪಿಡಬ್ಲ್ಯೂಡಿ ಸಚಿವರಾಗಿದ್ದು ಹೀಗೆ ಮಾಡೋದು ಸರೀನಾ ಎಂದು ಡಿಸಿಎಂ ಪ್ರಶ್ನಿಸಿದ್ದಾರೆ. ಅಲ್ಲದೆ ನಾನು ಬೆಂಗಳೂರು ನಗರಾಭಿವೃದ್ದಿ ಸಚಿವನಿದ್ದೇನೆ. ಈ ಯೋಜನೆಗೆ ಬಗ್ಗೆ ನೀವು ನನ್ನ ಜೊತೆ ಚರ್ಚಿಸಬೇಕಿತ್ತು. ಕಾಮಗಾರಿ ಆರಂಭಿಸುವ ಬಗ್ಗೆ ನನ್ನ ಅಭಿಪ್ರಾಯ ಪಡೆಯಬಹುದಿತ್ತು. ನನ್ನ ಜೊತೆ ಚರ್ಚಿಸಿ ಬಿಡಿಎ, ಬಿಬಿಎಂಪಿ ಅಭಿಪ್ರಾಯ ಪಡೆಯಬೇಕಿತ್ತು. ಅದು ಬಿಟ್ಟು ನೀವೊಬ್ಬರೇ ಕಾಮಗಾರಿ ಆರಂಭಿಸಲು ಹೊರಟಿದ್ದೀರಿ. ನಿಮ್ಮ ಈ ನಿರ್ಧಾರ ಸರೀನಾ, ಅದು ಹೇಗೆ ನೀವು ಒಬ್ಬರೇ ನಿರ್ಧಾರ ಕೈಗೊಳ್ಳುತ್ತೀರಿ ಎಂದು ಪ್ರಶ್ನೆಗಳ ಸುರಿಮಳೆಯೇ ಸುರಿಸಿದ್ದಾರೆ ಎನ್ನಲಾಗಿದೆ.

    ರೇವಣ್ಣ ಅವರನ್ನು ಪರಮೇಶ್ವರ್ ತರಾಟೆಗೆ ತೆಗೆದುಕೊಂಡ ವೇಳೆಯಲ್ಲಿ ಮುಖ್ಯಮಂತ್ರಿಗಳು ಮಧ್ಯ ಪ್ರವೇಶ ಮಾಡಿ ಪರಮೇಶ್ವರ್ ಅವರನ್ನು ಸಮಾಧಾನಪಡಿಸಿದ್ದಾರೆ. ಎಲಿವೆಟೇಡ್ ಕಾರಿಡಾರ್ ಬಗ್ಗೆ ಶೀಘ್ರದಲ್ಲೇ ಸಭೆ ಕರೆಯುತ್ತೇನೆ. ಬೆಂಗಳೂರು ನಗರ ಶಾಸಕರು, ಬಿಬಿಎಂಪಿ, ಬಿಡಿಎ ಆಯುಕ್ತರ ಸಭೆ ಕರೆಯುತ್ತೇನೆ. ಆ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ಒಂದು ತೀರ್ಮಾನಕ್ಕೆ ಬರೋಣ ಎಂದ ಸಿಎಂ ಹೇಳಿದ್ದಾರೆ.

  • ಸಂಪುಟ ವಿಸ್ತರಣೆ ಶುಕ್ರವಾರಕ್ಕೆ ಶಿಫ್ಟ್‌ಗೆ ಟ್ವಿಸ್ಟ್

    ಸಂಪುಟ ವಿಸ್ತರಣೆ ಶುಕ್ರವಾರಕ್ಕೆ ಶಿಫ್ಟ್‌ಗೆ ಟ್ವಿಸ್ಟ್

    ಬೆಂಗಳೂರು: ಸಂಪುಟ ವಿಸ್ತರಣೆ ಬುಧವಾರದಿಂದ ಶುಕ್ರವಾರಕ್ಕೆ ಶಿಫ್ಟ್ ಆಗಿದ್ದು, ಇದೀಗ ಈ ಶಿಫ್ಟ್ ಗೆ ಟ್ವಿಸ್ಟ್ ಸಿಕ್ಕಿರುವ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೌದು. ಸಂಪುಟ ವಿಸ್ತರಣೆ ದಿಢೀರ್ ಬುಧವಾರದಿಂದ ಶುಕ್ರವಾರಕ್ಕೆ ಶಿಫ್ಟ್ ಆಗಿದೆ. ಇದಕ್ಕೆ ಕಾರಣ ರೇವಣ್ಣ ಅವರ `ನಕ್ಷತ್ರ’ ಪ್ರೀತಿ ಎಂದು ಹೇಳಲಾಗುತ್ತಿದೆ.

    ಬುಧವಾರ ಅಷ್ಟ ನಕ್ಷತ್ರವಿರೋದ್ರಿಂದ ಒಳ್ಳೆಯ ದಿನವಲ್ಲ. ಮೊದಲೇ ಸರ್ಕಾರಕ್ಕೆ ಅತೃಪ್ತರ ಕಾಟವಿದೆ. ಆ ದಿನ ವಿಸ್ತರಣೆಗೆ ಮುಂದಾದರೆ ಅತೃಪ್ತರು ಇನ್ನಷ್ಟು ಆಕ್ರೋಶಗೊಳ್ಳುವ ಸಾಧ್ಯತೆ ಇದೆ. ಇದರಿಂದ ಸರ್ಕಾರಕ್ಕೆ ಅಪತ್ತು ಬರುತ್ತದೆ ಎಂದು ಜ್ಯೋತಿಷಿಗಳು ಸಲಹೆ ನೀಡಿದ್ದಾರೆ.

    ಆದರೆ ಶುಭ ಶುಕ್ರವಾರ ಸ್ವಾತಿ ನಕ್ಷತ್ರವಂತೆ. ಮೊದಲೇ ರೇವಣ್ಣನವರದ್ದು ಸ್ವಾತಿ ನಕ್ಷತ್ರ. ಈ ನಕ್ಷತ್ರದಲ್ಲಿ ಒಳ್ಳೆಯ ಕೆಲಸಕ್ಕೆ ಕೈ ಹಾಕಿದರೆ ಯಶಸ್ಸು ಗ್ಯಾರಂಟಿ ಎಂದು ಶುಕ್ರವಾರಕ್ಕೆ ಸಂಪುಟ ವಿಸ್ತರಣೆಗೆ ದಿನವನ್ನು ಗೌಡರ ಕುಟುಂಬ ಆಯ್ಕೆ ಮಾಡಿಕೊಂಡಿದೆ ಎಂದು ಅವರ ಕುಟುಂಬದ ಆಪ್ತ ಜ್ಯೋತಿಷಿಗಳು ತಿಳಿಸಿದ್ದಾರೆ.

  • ಪ್ರಧಾನಿ ಮೋದಿಯಂತೆ ನಾನೂ ಕಾವಲುಗಾರ- ಜಿ.ಎಸ್.ಬಸವರಾಜು

    ಪ್ರಧಾನಿ ಮೋದಿಯಂತೆ ನಾನೂ ಕಾವಲುಗಾರ- ಜಿ.ಎಸ್.ಬಸವರಾಜು

    – ಸಚಿವ, ಶಾಸಕರ ವಿರುದ್ಧ ವಾಗ್ದಾಳಿ

    ತುಮಕೂರು: ನೀರುಗಂಟಿ ಕೆಲಸ ಮಾಡೋದೂ ದೇಶ ಸೇವೆಯಿದ್ದಂತೆ. ಪ್ರಧಾನಿ ಮೋದಿ ಹೇಳಿದಂತೆ ನಾನೂ ನೀರುಗಂಟಿ ಕೆಲಸ ಮಾಡಿ ಕಾವಲುಗಾರನಾಗುತ್ತೇನೆ ಎಂದು ಸಂಸದ ಜಿ.ಎಸ್.ಬಸವರಾಜು ಸಚಿವ ರೇವಣ್ಣನಿಗೆ ಟಾಂಗ್ ಕೊಟ್ಟಿದ್ದಾರೆ.

    ಬಸವರಾಜು ಒಬ್ಬ ಅನ್ಪಿಟ್ ವ್ಯಕ್ತಿ. ಹೇಮಾವತಿ ಡ್ಯಾಂ ಕೀ ಅವರಿಗೇ ಕೊಡುತ್ತೇನೆ, ನೀರು ಹರಿಸಿಕೊಳ್ಳಲಿ ಎಂದು ಸಚಿವ ರೇವಣ್ಣ ಹೇಳಿದ್ದರು. ಇದಕ್ಕೆ ತುಮಕೂರಿನಲ್ಲಿ ಪ್ರತಿಕ್ರಿಯಿಸಿದ ಬಸವರಾಜು ಸಚಿವ ರೇವಣ್ಣ ಗೋರೂರು ಡ್ಯಾಂ ಕೀ ಕೊಟ್ಟರೆ ಕಾವಲುಗಾರನಂತೆ ಕೆಲಸ ಮಾಡುತ್ತೇನೆ. ಜಿಲ್ಲೆಯ ಜನತೆಗೆ ಒಳ್ಳೆಯದಾಗಲಿದೆ ಅಂದರೆ ನೀರುಗಂಟಿ ಕೆಲಸ ಮಾಡಲೂ ಸಿದ್ಧ ಎಂದು ಹೇಳುವ ಮೂಲಕ ಟಾಂಗ್ ಕೊಟ್ಟಿದ್ದಾರೆ.

    ಅನ್ಫಿಟ್ ಅನ್ನುವ ಪದದ ಅರ್ಥ ರೇವಣ್ಣಗೆ ಗೊತ್ತಿಲ್ಲ. ಅವರಂತೆ ಸ್ವಾರ್ಥಕ್ಕಾಗಿ ಮೂರ್ಖತನದ ಪರಮಾವಧಿ ಮಾಡಲ್ಲ. 17ಟಿಎಂಸಿ ಬದಲಿಗೆ 45ಟಿಎಂಸಿ ನೀರನ್ನ ಉಪಯೋಗಿಸಿಕೊಂಡು ಎಲ್ಲರಿಗೂ ನಾಮ ಹಾಕ್ಕೊಂಡು, ನಾಲೆ ಒಡೆಯುವಂಥವರಿಗೆ ನಾವು ಬಲಿಯಾಗಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

    ಇದೇ ವೇಳೆ ಎಸ್ ಆರ್.ಶ್ರೀನಿವಾಸ್ ವಿರುದ್ಧವೂ ಕಿಡಿಕಾರಿದ ಸಂಸದ, ಅವನ್ಯಾರೋ ನಮ್ಮ ಜಿಲ್ಲೆಯ ಕ್ಷೇತ್ರದ ಶಾಸಕನಾಗಿ ನೀರು ಹೇಗೆ ತರ್ತಾರೋ ನೋಡೋಣ ಅಂತಾನಲ್ಲ ಅವನಿಗೆ ಮರ್ಯಾದೆ ಇದ್ದರೆ ಹಾಗೆ ಮಾತಾಡುತ್ತಿರಲಿಲ್ಲ. ಶಾಸಕನಾಗಿ ಒಂದು ಕೆರೆಯನ್ನೂ ತುಂಬಿಸೋಕೆ ಯೋಗ್ಯತೆ ಇಲ್ಲ. ಮಾನಮರ್ಯಾದೆ ಇದ್ದಿದ್ರೆ ಈ ರೀತಿಯಾದ ಹೇಳಿಕೆ ನೀಡುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಮೈತ್ರಿ ಸೋಲಿಗೆ ಝೀರೋ ಟ್ರಾಫಿಕ್ ಕಾರಣ- ಕೆ.ಎನ್ ರಾಜಣ್ಣ

    ಮೈತ್ರಿ ಸೋಲಿಗೆ ಝೀರೋ ಟ್ರಾಫಿಕ್ ಕಾರಣ- ಕೆ.ಎನ್ ರಾಜಣ್ಣ

    ತುಮಕೂರು: ಒಂದು ವಾರದಲ್ಲಿ ಝೀರೋ ಟ್ರಾಫಿಕ್ ಕೆಳಕ್ಕೆ ಇಳಿಯಲಿದೆ. ಮೋದಿ ಪ್ರಮಾಣವಚನ ಸ್ವೀಕರಿಸುವವರೆಗೂ ಮೈತ್ರಿ ಇರಲಿದೆ. ನಂತರ ಮೈತ್ರಿ ಸರ್ಕಾರ ಉರುಳಲಿದೆ. ಮೈತ್ರಿ ಸೋಲಿಗೆ ಝೀರೋ ಟ್ರಾಫಿಕ್ ಕಾರಣ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಹಾಗೂ ಡಿಸಿಎಂ ಜಿ.ಪರಮೇಶ್ವರ್ ವಿರುದ್ಧ ಹರಿಹಾಯ್ದರು. ತುಮಕೂರು ಕಾಂಗ್ರೆಸ್ ಭದ್ರಕೋಟೆಯಾಗಿದೆ. ಬಿಜೆಪಿ ಕೆಲವೇ ಕ್ಷೇತ್ರಕ್ಕೆ ಸೀಮಿತವಾಗಿತ್ತು. ಆದರೂ ಬಸವರಾಜು ಅವರಿಗೆ ಅಭಿನಂದನೆ ಹೇಳುತ್ತೇನೆ. ಬಸವರಾಜು 20 ವರ್ಷ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಅವರಿಗೆ ಬಿಜೆಪಿಗಿಂತ ಹೆಚ್ಚು ಕಾಂಗ್ರೆಸ್ ನಾಯಕರ ಸಂಪರ್ಕವಿದೆ. ಅವರ ವೈಯಕ್ತಿಕ ಸಂಪರ್ಕದಿಂದ ಸಹಾಯ ಪಡೆದು ಗೆದ್ದಿದ್ದಾರೆ. ನಾನು ಕಾಂಗ್ರೆಸ್ ತೊರೆದು ಹೋಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

    ಇದೇ ವೇಳೆ ಡಿಸಿಎಂರನ್ನ ಝೀರೋ ಟ್ರಾಫಿಕ್ ಎಂದು ವ್ಯಂಗ್ಯವಾಡಿದರು. ಅಲ್ಲದೆ ಜಿ.ಪರಮೇಶ್ವರ್‍ಗೆ ಸ್ವಯಂ ನಾನು ಸಹಕಾರ ಮಾಡಿದ್ದೆ. ನನ್ನ ಸಹಕಾರದಿಂದ ಅವನು ಗೆದ್ದು ಬಂದಿದ್ದಾನೆ. ಅವನಿಗೆ ಉಪಕಾರ ಸ್ಮರಣೆ ಇಲ್ಲ ಎಂದು ಡಿಸಿಎಂ ವಿರುದ್ದ ಕೆ.ರಾಜಣ್ಣ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

    ಅಪೆಕ್ಸ್ ಬ್ಯಾಂಕ್ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಯಾರೇ ಏನೇ ಮಾಡಿದರೂ ಐದು ವರ್ಷ ಪೂರೈಸಿಯೇ ಸಿದ್ಧ. ರೇವಣ್ಣ ಬರಲಿ, ಅವರ ತಾತನೇ ಬರಲಿ, ನಾನು ಐದು ವರ್ಷ ಅಧಿಕಾರ ಪೂರೈಸುತ್ತೇನೆ. ರೇವಣ್ಣ ಕೆಎಂಎಫ್ ಗೋಲ್ ಮಾಲ್ ದಾಖಲೆ ನನ್ನ ಬಳಿ ಇದೆ. ಅವರು ಏನು ಮಾಡುತ್ತಾರೋ ಮಾಡಲಿ ಎಂದು ಸವಾಲೆಸೆದಿದ್ದಾರೆ.

  • ಖರ್ಗೆಗೆ ಸಿಎಂ ಪೋಸ್ಟ್ – ಸಿದ್ದರಾಮಯ್ಯ ಟಾಂಗಿಗೆ ಸಿಎಂ ತಿರುಗೇಟು

    ಖರ್ಗೆಗೆ ಸಿಎಂ ಪೋಸ್ಟ್ – ಸಿದ್ದರಾಮಯ್ಯ ಟಾಂಗಿಗೆ ಸಿಎಂ ತಿರುಗೇಟು

    ಬೆಂಗಳೂರು: ಸಿಎಂ ಹುದ್ದೆ ವಿಚಾರದಲ್ಲಿ ಖರ್ಗೆ ಪರ ಬ್ಯಾಟ್ ಬೀಸಿದ್ದ ಎಚ್‍ಡಿಕೆಗೆ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿದ್ದರು. ಕೇವಲ ಕಾಂಗ್ರೆಸ್‍ನಲ್ಲಿ ಮಾತ್ರವಲ್ಲ ಜೆಡಿಎಸ್ ನಲ್ಲಿಯೂ ಸಿಎಂ ಅರ್ಹ ವ್ಯಕ್ತಿಗಳಿದ್ದಾರೆ. ಸಚಿವ ಹೆಚ್.ಡಿ.ರೇವಣ್ಣ ಸಹ ಸಿಎಂ ಅರ್ಹತೆಯ ವ್ಯಕ್ತಿ ಎಂದು ಹೇಳುವ ಮೂಲಕ ಟಾಂಗ್ ಕೊಟ್ಟಿದ್ದರು. ಮಾಧ್ಯಮಗಳ ಮೇಲೆ ಮುನಿಸಿಕೊಂಡು ದೂರವಿರುವ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವಿಟ್ಟರ್ ನಲ್ಲಿ ಸಿದ್ದರಾಮಯ್ಯರಿಗೆ ಉತ್ತರ ನೀಡಿದ್ದಾರೆ.

    ಹೆಚ್‍ಡಿಕೆ ಟ್ವೀಟ್: ನಾಡಿನ ಹಿರಿಯ ರಾಜಕಾರಣಿ ಹಾಗೂ ಮುತ್ಸದ್ದಿ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಯಾಗಬೇಕಿತ್ತು ಎಂಬ ನನ್ನ ಹೇಳಿಕೆ ಕರ್ನಾಟಕದ ಹಲವು ದಶಕಗಳ ರಾಜಕೀಯ ವಾಸ್ತವತೆಯನ್ನು ಆಧರಿಸಿದ ಮನದಾಳದ ಮಾತು. ಈ ಹೇಳಿಕೆಗೆ ರಾಜಕೀಯದ ಬಣ್ಣಕಟ್ಟಿ ಅಪಾರ್ಥ ಕಲ್ಪಿಸುವಂತೆ ವಿಶ್ಲೇಷಿಸುವುದು ಆರೋಗ್ಯಕರವಲ್ಲ. ಈ ಹೇಳಿಕೆಯ ಮೂಲಕ ರಾಜಕೀಯ ಲಾಭ ಪಡೆಯುವ ಕೀಳು ಅಭಿರುಚಿ ನನ್ನದಲ್ಲ. ಖರ್ಗೆಯವರದು ಪಕ್ಷ, ಜಾತಿ ಎಲ್ಲವನ್ನೂ ಮೀರಿದ ಮಹೋನ್ನತ ವ್ಯಕ್ತಿತ್ವ ಎನ್ನುವುದನ್ನು ನಾವು ಮರೆಯಬಾರದು.

    ಸಿದ್ದರಾಮಯ್ಯ ಟ್ವೀಟ್: ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದು ಸರಿಯಾಗಿದೆ. ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿಎಂ ಸ್ಥಾನ ಮಾತ್ರವಲ್ಲ, ಅದಕ್ಕಿಂತಲೂ ಉನ್ನತ ಸ್ಥಾನದ ಅರ್ಹತೆಯಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಸಿಎಂ ಸ್ಥಾನದ ಅರ್ಹತೆಯ ಬಹಳ ಜನ ಇದ್ದಾರೆ. ಅವರಲ್ಲಿ ಹೆಚ್.ಡಿ.ರೇವಣ್ಣ ಕೂಡಾ ಒಬ್ಬರು. ಎಲ್ಲಕ್ಕೂ ಕಾಲ ಕೂಡಿ ಬರಬೇಕು ಎಂದು ಬರೆದುಕೊಂಡಿದ್ದಾರೆ.

    ಹಾಸನದ ಹೊಳೆನರಸೀಪುರದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಹೆಚ್.ಡಿ.ರೇವಣ್ಣ, ಸಿದ್ದರಾಮಯ್ಯರಿಗೆ ನನ್ನ ಮೇಲೆ ಅಭಿಮಾನವಿದೆ ಮತ್ತು ಒಲವಿದೆ. ಆದ್ರೆ ಸಿಎಂ ಸ್ಥಾನ ಸದ್ಯ ಖಾಲಿ ಇಲ್ಲ. ನಮ್ಮ ಪಕ್ಷದ ವರಿಷ್ಠರಾದ ದೇವೇಗೌಡರು ಹೇಳಿದಂತೆ ನಾವು ಕೇಳುತ್ತೇವೆ. ಹಾಗಾಗಿ ಸಿಎಂ ಅಭ್ಯರ್ಥಿ ಯಾರೆಂಬ ಪ್ರಶ್ನೆ ಉದ್ಭವಿಸಲ್ಲ. ನನ್ನ ಮತ್ತು ಕುಮಾರಸ್ವಾಮಿ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ನನ್ನ ಮೇಲಿನ ಅಭಿಮಾನದಿಂದ ಸಿದ್ದರಾಮಯ್ಯ ಈ ರೀತಿ ಹೇಳಿದ್ದಾರೆಂದು ಸ್ಪಷ್ಟಪಡಿಸಿದ್ದಾರೆ.