Tag: HD Revanna

  • ಕುಮಟಳ್ಳಿ ‘ಬಾರಾ ಉಗ್ರ ಹೋರಾಟ ಉಂಟು’ ಅಂದ ಸಾಹುಕಾರ ಕೊನೆಗೆ ಸೈಲೆಂಟು..!

    ಕುಮಟಳ್ಳಿ ‘ಬಾರಾ ಉಗ್ರ ಹೋರಾಟ ಉಂಟು’ ಅಂದ ಸಾಹುಕಾರ ಕೊನೆಗೆ ಸೈಲೆಂಟು..!

    ಪವಿತ್ರ ಕಡ್ತಲ
    ಸ್ಟ್ ರ‌್ಯಾಂಕ್ ಬಂದ್ರೆ ಸೈಕ್ಲು ಕೊಡಿಸ್ತೀನಿ ಅಂತಾ ಪ್ರಾಮಿಸ್ ಮಾಡಿದ ಅಪ್ಪ ಉಳಿದ ಫಸ್ಟ್ ರ‌್ಯಾಂಕ್ ಮಕ್ಕಳಿಗೆ ಮಾತ್ರ ಕೊಡ್ಸಿ ಒಬ್ಬ ಮಗನಿಗೆ ಫಸ್ಟ್ ರ‌್ಯಾಂಕ್  ಬಂದಿದ್ರೂ ಕೊಡಿಸದೇ ಹೋದ್ರೇ ಹೆಂಗಾಗುತ್ತೆ ಹೇಳಿ..! ಮಹೇಶ್ ಕುಮಟಳ್ಳಿ ಕಥೆನೂ ಥೇಟು ಹಂಗೇ ಆಯ್ತು..! ಅತ್ತರೂ, ಗೋಗರೆದ್ರೂ, ಮುನಿಸಿಕೊಂಡ್ರೂ ಕೊನೆಗೆ ಬಿಜೆಪಿಗೆ ಶಾಲಿನಲ್ಲಿ ಕಲ್ಲು ಸುತ್ತಿ ಹೊಡೆದ್ರೂ ಕುಮಟಳ್ಳಿ ಮೇಲೆ ರಾಜಾಹುಲಿ ಕರುಣೆ ತೋರಲೇ ಇಲ್ಲ.

    ಅತ್ತ ಮಿತ್ರಮಂಡಳಿಯ ಟೀಂ ನಾಯಕ ಸಾಹುಕಾರ್, “ಕೊಡ್ರೀ ಕೊಡ್ರಿ ಕುಮಟಳ್ಳಿ ಒಬ್ಬರು ಜಾಸ್ತಿ ಆಗ್ತಾರೇನ್ರಿ” ಅಂತಾ ಅರ್ಥವಾಗದ ಧ್ವನಿಯಲ್ಲಿ ಗುಟುರು ಹಾಕಿದ್ರೂ ನೋ ನೋ ಅಂತಾ ರಾಜಹುಲಿ ಹೈಕಮಾಂಡ್ ಹತ್ರ ಬೊಟ್ಟು ಮಾಡಿದ್ರು. ಇದ್ರಿಂದ ಕುಮಟಳ್ಳಿಗಿಂತ ಕೊಂಚ ಸಾಹುಕಾರ ರಮೇಶ್ ಜಾರಕಿಹೊಳಿ ಹೆಚ್ಚೇ ಮುನಿಸಿಕೊಂಡಂತೆ ಕಾಣುತ್ತಿದ್ರು. ಇದಪ್ಪ ತ್ಯಾಗ, ಎಲ್ಲರೂ ಅವ್ರವ್ರ ಪ್ರಮಾಣ ವಚನ ಸಂಭ್ರಮದಲ್ಲಿ ಖುಷಿ ಪಟ್ರೇ ಸಾಹುಕಾರ್ ಮಾತ್ರ ಬುಸುಗುಡುತ್ತಾ ಇದ್ದಿದ್ದು ನೋಡಿ `ನನಗಾಗಿ ಮಿಡಿದ ಮನ’ ಅಂತಾ ಕುಮಟಳ್ಳಿ ಕೊಂಚ ರಿಲ್ಯಾಕ್ಸ್ ಆಗಿದ್ರಂತೆ.

    ಕುಮಟಳ್ಳಿಗೆ `ಬಾರಾ ಉಗ್ರ ಹೋರಾಟ ಮಾಡುವ, ಸಂಜೆ ಸರ್ಕಾರ ಉರುಳಿಸುವ’ ಅಂತಾ ಸರ್ಕಾರ ಉರುಳಿಸೋದ್ರಲ್ಲಿ ಹಳೆ ಅನುಭವ ಇದ್ದ ರಮೇಶ್, ನಡುರಾತ್ರಿ ಕುಮಟಳ್ಳಿ ಹೆಗ್ಲ ಮೇಲೆ ಕೈಹಾಕಿ ಭರವಸೆ ಕೊಟ್ಟಿದ್ರಂತೆ. ಆದ್ರೆ ಯಾವಾಗ ಖಾತೆ ಹಂಚಿಕೆ ಆಯ್ತೋ ಆಗ ಸಾಹುಕಾರ ಗುಟುರು ಕಡಿಮೆಯಾಗಿದೆ. ಹೋಗ್ಲಿ ಬಿಡ್ ನಮ್ಮೋರೆ ಎಲ್ಲಾ ಅಂತಾ ಕುಮಟಳ್ಳಿಗೆ ಹೇಳಿ ಫೋನ್ ಇಟ್ರಂತೆ.

    ಆಗ ಕುಮಟಳ್ಳಿಗೆ ಗೊತ್ತಾಗಿದ್ದು ಓಹೋ ಸಾಹುಕಾರನಿಗೆ ನಂಗೆ ಮಿನಿಸ್ಟ್ರುಗಿರಿ ಸಿಗದೇ ಇದ್ದಿದ್ದಕ್ಕೆ ಸಿಟ್ಟಿದ್ದಿದ್ದು ಅಲ್ಲಾ, ಅವರಿಷ್ಟದ ಖಾತೆಗೆ ಪಟ್ಟು ಹಿಡಿದು ಇನ್ನೇನು ಸಿಗಲ್ಲ ಅಂತಾ ಮುನಿಸು ತೋರಿಸಿದ್ರು. ಯಾವಾಗ ಡಿಕೆಶಿ ಖಾತೆ ಸಾಹುಕಾರಗೆ ಸಿಕ್ತು ರಮೇಶ್ ಮುಖ ಲಕ ಲಕ ಅಂತಿದೆ ಅಂತಾ ಕುಮಟಹಳ್ಳಿಗೆ ಅರ್ಥವಾಗಿದೆಯಂತೆ. ಯಾರಿಗೇಳೋಣ ನಮ್ ಪ್ರಾಬ್ಲುಂ ಅಂತಾ ಅವತ್ತು ಕೈ ಕೈ ಹಿಡಿದು ಜೊತೆಗೆ ಉಂಡು ತಿಂದು ಈಗ ಹಿಂಗೆ ನಡುನೀರಲ್ಲಿ ಕೈಕೊಟ್ರಲ್ಲಪ್ಪ ಅಂತಾ ಕುಮಟಳ್ಳಿ ಮಗುವಿನಂತೆ ಅತ್ತುಬಿಟ್ರಂತೆ. ನಿಮ್ಮ ಜೊತೆ ನಾನಿದ್ದೀನಿ ಅಂತಾ ಸೈನಿಕ, ಗೂಳಿ ಎಲ್ಲಾ ಕುಮಟಳ್ಳಿಗೆ ಕರ್ಚೀಫ್ ಕೊಟ್ರಂತೆ.

    ಲಾಸ್ಟ್ ಕಿಕ್- ಮಿತ್ರಮಂಡಳಿಯಲ್ಲಿರೋರು ಯಾವಾಗ ಬೇಕಾದ್ರೂ ಮಿತ್ರರೂ ಆಗಬಹುದು, ಶತ್ರುಗಳಾಗಬಹುದು ಸಿದ್ದಣ್ಣ ಅಂತಾ ಕುಮಟಳ್ಳಿ ಕಮಲ ಹೂವನ್ನು ದೇವರಿಗಿಟ್ಟು ಗೋವಿಂದ ಗೋವಿಂದ ಅಂದ್ರಂತೆ.

    ಕೊರೋನಾ ಟೆನ್ಶನ್ ಬಿಟ್ಹಾಕಿ…! ನಿಂಬೆಹಣ್ಣು ಇಟ್ಕಳ್ಳಿ..! ಏಲಕ್ಕಿ ಹಾರನೂ ಇರಲಿ..!
    `ಸರ್ವರೋಗಕ್ಕೂ ಸಾರಾಯಿ ಮದ್ದು’ ಅನ್ನೋ ತರ ನಮ್ ಹಾಸನದ ರೇವಣ್ಣೋರಿಗೆ ಎಲ್ಲಾ ಸಮಸ್ಯೆಗೂ ನಿಂಬೆಹಣ್ಣಿನಲ್ಲಿದೆ ಪರಿಹಾರ ಅನ್ನೋ ಗಟ್ಟಿ ನಂಬಿಕೆ. ಈಗ ಚೀನಾ ಕೊರೋನಾ ಭೀತಿಯಿಂದ ನಡುಗಿಹೋಗಿದೆ. ಭಾರತಕ್ಕೂ ಆತಂಕ ಇದೆ. ಈ ಮಧ್ಯೆ ರೇವಣ್ಣ ಕೊರೋನಾ ಕಾಯಿಲೆಗೆ ಔಷಧಿ ಕಂಡು ಹುಡುಕಿದ್ದಾರಂತೆ.

    ಎರಡು ನಿಂಬೆಹಣ್ಣನ್ನು ಮೂಗಿನ ಹೊಳ್ಳೆಗೆ ಇಟ್ಕೊಂಡು ಆಗಾಗ ಮೂಸಿ ನೋಡಿದ್ರೆ ಸಾಕು, ಮಾಸ್ಕ್ ಗೀಸ್ಕ್ ಎಲ್ಲಾ ಹಾಕೋದೇ ಬೇಡ ನಿಂಬೆಹಣ್ಣಿನಲ್ಲಿ ರೋಗನಿರೋಧಕ ಶಕ್ತಿ ಐತೆ ಅಂತಾ ಹಾಸನದ ಮಂದಿಗೆಲ್ಲ ಟಾಂ ಟಾಂ ಮಾಡಿದ್ದಾರಂತೆ. ಅಲ್ಲದೇ ಚೀನಾಕ್ಕೆ ನಾನೇ ಚಪ್ಪಲಿ ಇಲ್ದ ಕಾಲಲ್ಲಿ ಹೋಗ್ ಬರ್ತೀನಿ. ಎಲ್ಡು ನಿಂಬೆಹಣ್ಣು, ಚಂದಗೆ ಪೋಣಿಸಿದ ಏಲಕ್ಕಿ ಹಾರ ಇಷ್ಟು ಹಾಕ್ಕೊಂಡ್ರೆ ಕೊರೋನಾ ಓಡ್ ಹೋಗುತ್ತೆ ಅಂತಾ ರೇವಣ್ಣ ಲುಂಗಿ ಸರಿಮಾಡ್ಕೊಂಡು ಹೇಳ್ಕೋತಾ ಓಡಾಡ್ತಿದ್ದಾರಂತೆ. ಈ ನಿಂಬೆಹಣ್ಣು ಚಮತ್ಕಾರ ಕೇಳಿದ ಹಾಸನದ ಜನ ಈವಯ್ಯ ನಿಜ ಹೇಳುತ್ತೀರೋದಾ ಅಂತಾ ಡಾಕ್ಟರ್ ಬಳಿ ಹೋಗಿ ಹೋಗಿ ರೇವಣ್ಣನ ಅವಿಷ್ಕಾರದ ಬಗ್ಗೆ ಪ್ರಶ್ನೆ ಇಡ್ತಿದ್ದಾರಂತೆ. ಡಾಕ್ಟರ್‌ಗಳು ತಲೆ ಚಚ್ಕೊಳ್ಳೋದು ಒಂದು ಬಾಕಿಯಂತೆ.

    ಲಾಸ್ಟ್ ಕಿಕ್ – ರೇವಣ್ಣ ಹೇಳ್ದಂಗೆ ಕೊರೋನಾ ಬಂದಾಗ ಮೂಗಿನ ಹೊಳ್ಳೆಗೆ ನಿಂಬೆಹಣ್ಣು ಇಟ್ಕೊಂಡ್ರೆ ಹಂಗೆ ಮೂಗಿಗೆ ಹತ್ತಿ ಇಟ್ಕೋಬೇಕಾಯ್ತದೆ ಅಂತಾ ಗುಸು ಗುಸು ಸುದ್ದಿಯಂತೆ.!

    [ಸದಾ ಸೀರಿಯಸ್ ಆಗಿರುವ ಸುದ್ದಿಗಳನ್ನು ಓದಿ, ಓದಿ ನಿಮಗೂ ಬೇಜಾರಾಗಿರುತ್ತೆ. ಸೀರಿಯಸ್ ಓದಿನ ನಡುವೆಯೂ ಸ್ವಲ್ಪ ನವಿರಾದ ಹಾಸ್ಯವೂ ಇರಲಿ ಎಂಬ ಕಾರಣಕ್ಕೆ `ಈ ನ್ಯೂಸ್ ಓದ್ಲೇಬೇಡಿ. ಇದು ತಮಾಷೆಗಾಗಿ..!’ ಅಂಕಣ.]

  • ದೇವೇಗೌಡ್ರು ವ್ಯಾಸಂಗ ಮಾಡಿದ ಕಾಲೇಜು ಮುಚ್ಚಲು ಸರ್ಕಾರ ಮುಂದಾಗಿದೆ: ರೇವಣ್ಣ

    ದೇವೇಗೌಡ್ರು ವ್ಯಾಸಂಗ ಮಾಡಿದ ಕಾಲೇಜು ಮುಚ್ಚಲು ಸರ್ಕಾರ ಮುಂದಾಗಿದೆ: ರೇವಣ್ಣ

    – ಹೆಚ್‍ಡಿಡಿ ನೇತೃತ್ವದಲ್ಲಿ ಸಿಎಂ ಮನೆ ಮುಂದೆ ಪ್ರತಿಭಟನೆ

    ಹಾಸನ: ಮೈತ್ರಿ ಸರ್ಕಾರದ ಅವಧಿಯಲ್ಲಿ ಅನುಷ್ಠಾನಗೊಳಿಸಿರುವ ಕಾಮಗಾರಿಗಳನ್ನ ಹಾಸನದಲ್ಲಿ ತಡೆ ಹಿಡಿದಿದ್ದು ಇದನ್ನು ವಿರೋಧಿಸಿ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಸಿಎಂ ಮನೆ ಮುಂದೆ ಜಿಲ್ಲೆಯ ಎಲ್ಲಾ ಶಾಸಕರು ಪ್ರತಿಭಟನೆ ನಡೆಸುತ್ತೇವೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಕಾಮಗಾರಿ ತಡೆ ಹಿಡಿದಿರುವ ಬಗ್ಗೆ ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ, ಜಿಲ್ಲೆಯ ಎಲ್ಲಾ ಶಾಸಕರಿಂದ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆದರೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.

    ಯಡಿಯೂರಪ್ಪ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ದೇವೇಗೌಡರು ವ್ಯಾಸಂಗ ಮಾಡಿದ ಹಾಸನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 150 ಸೀಟು ಕಡಿಮೆ ಮಾಡಿದ್ದಾರೆ. ಈ ಮೂಲಕ ದೇವೇಗೌಡರು ವ್ಯಾಸಂಗ ಮಾಡಿದ ಕಾಲೇಜು ಮುಚ್ಚಲು ಮುಂದಾಗಿದೆ. ಅಷ್ಟೇ ಅಲ್ಲದೇ ರಾಜ್ಯದ 33 ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯ ಇಲ್ಲ ಎಂದು ಕಾಲೇಜು ಮುಚ್ಚಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

    ಮಂತ್ರಿ ಮಂಡಲ ರಚಿಸಲು ಹೋಗಿ ಈ ಸರ್ಕಾರ ಪಾಲಿಟೆಕ್ನಿಕ್ ಕಾಲೇಜು ಮುಚ್ಚುತ್ತಿದೆ. ಯಡಿಯೂರಪ್ಪರವರಿಗೆ ಶಿವಮೊಗ್ಗದಲ್ಲಿ ಕಾಲೇಜು ನಿರ್ಮಿಸಿದ ದೊರೆಸ್ವಾಮಿ ಕೈಯಲ್ಲಿ ಕಾಲೇಜು ಆಡಳಿತವಿದೆ. ದೇವೇಗೌಡರು ಸಿಎಂ ಆಗಿದ್ದಾಗ ತಲೆ ಕೆರೆದುಕೊಂಡು ಬಂದು ನಿಂತ್ಕೊಳ್ತಿದ್ದ ದೊರೆಸ್ವಾಮಿಗೆ, ಸಿಎಂ ಪಾಲಿಟೆಕ್ನಿಕ್ ಕಾಲೇಜು ಬಳುವಳಿ ಕೊಡ್ತಿದ್ದಾರೆ ಎಂದು ರೇವಣ್ಣ ಕಿಡಿಕಾರಿದ್ದಾರೆ.

    ಇದೇ ವೇಳೆ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣ ವೇಳೆ ಅಡ್ಡಿಪಡಿಸಿದ್ರೆ ಶಾಸಕರನ್ನ ಅಮಾನತು ಮಾಡಲು ಸರ್ಕಾರ ಮುಂದಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ಅಮಾನತು ಮಾಡಲಿ ನೋಡೋಣ. ಅವರಿಗೆ ಹೆದರಿಕೆ ಇದೆ. ಎಮರ್ಜೆನ್ಸಿ ಇದೆ ಅದಕ್ಕೆ ಹಾಗೆ ಮಾಡ್ತಿದ್ದಾರೆ. ಆದರೆ ನಾವು ಹೋರಾಟ ಮಾಡ್ತೀವಿ ಎಂದು ಸವಾಲು ಹಾಕಿದ್ದಾರೆ.

  • ನನಗೆ ಎಲ್ಲೆಲ್ಲಿ ಚಡ್ಡಿ ಹೊಲಿಸಿಕೊಟ್ಟಿದ್ದಾರೆ ಅನ್ನೋದನ್ನು ರೇವಣ್ಣ ಹೇಳ್ಬೇಕು – ಪುಟ್ಟಣ್ಣ

    ನನಗೆ ಎಲ್ಲೆಲ್ಲಿ ಚಡ್ಡಿ ಹೊಲಿಸಿಕೊಟ್ಟಿದ್ದಾರೆ ಅನ್ನೋದನ್ನು ರೇವಣ್ಣ ಹೇಳ್ಬೇಕು – ಪುಟ್ಟಣ್ಣ

    ರಾಮನಗರ: ನನಗೆ ಎಲ್ಲೆಲ್ಲಿ ಚಡ್ಡಿ ಹೊಲಿಸಿ ಕೊಡಲಾಗಿದೆ ಅಥವಾ ಅವರದೇ ಚಡ್ಡಿ ಕಳೆದು ನನಗೆ ಹೊಲಿಸಿಕೊಟ್ಟಿದ್ದಾರಾ ಎನ್ನುವುದನ್ನು ರೇವಣ್ಣನವರೇ ಹೇಳಬೇಕೆಂದು ಹೇಳುವ ಮೂಲಕ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ತಿರುಗೇಟು ನೀಡಿದ್ದಾರೆ.

    ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಸ್ಥಾನಕ್ಕೆ ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ರಾಮನಗರ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ತೆರಳಿ ಶಿಕ್ಷಕರ ಬಳಿ ಮತಯಾಚನೆ ನಡೆಸಿದರು. ಇದೇ ವೇಳೆ ಚಡ್ಡಿ ಹಾಕದೆ ಜೈಲಿನಲ್ಲಿ ನಿಂತಿದ್ದ ಅವರನ್ನು ಕರೆತಂದೆ ಎಂಬ ಎಚ್.ಡಿ ರೇವಣ್ಣ ಹೇಳಿಕೆ ವಿಚಾರವಾಗಿ ರಾಮನಗರದ ಬಿಜಿಎಸ್ ವರ್ಡ್ ಸ್ಕೂಲ್ ಬಳಿ ಮಾತನಾಡಿದ ಅವರು ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.

    ಚಡ್ಡಿ ಹಾಕದೇ ಜೈಲಿನಲ್ಲಿ ಪುಟ್ಟಣ್ಣನ್ನು ನಿಲ್ಲಿಸಿದ್ರು. ನಾನೇ ಕರೆದುಕೊಂಡು ಹೋದೆ ಎಂದು ರೇವಣ್ಣನವರೇ ಹೇಳಿದ್ದಾರೆ. ಅವರೇ ಕಾಡಂಕನಹಳ್ಳಿಗೆ ಬಂದು ನನಗೆ ಚಡ್ಡಿ ಹಾಕಿ ಕರೆದುಕೊಂಡು ಹೋಗಿದ್ದು. ಅವರನ್ನೇ ಕೇಳಿ ಎಲ್ಲೆಲ್ಲಿ ಚಡ್ಡಿ ಹೊಲಿಸಿಕೊಟ್ಟಿದ್ದಾರೆ. ರಾಜ್ಯಕ್ಕೆಲ್ಲಾ ಇವರೇ ಚಡ್ಡಿ ಕೊಡಿಸಿಬಿಟ್ಟಿರುವವರು, ದೊಡ್ಡವರು ಮಾತನಾಡಬೇಕಾದರೆ ಇತಿಮಿತಿ ಇರಬೇಕು. ನಮಗೂ ಮಾತನಾಡಲು ಬರುತ್ತೆ ನಾವೇನು ದಡ್ಡರಲ್ಲ ಎಂದು ಆಕ್ರೋಶ ಹೊರಹಾಕಿದರು. ಇದನ್ನು ಓದಿ: ಜೈಲಿನಲ್ಲಿ ಚಡ್ಡಿ ಹಾಕಿ ನಿಂತಿದ್ದ ಪುಟ್ಟಣ್ಣಗೆ ಟಿಕೆಟ್ ನೀಡಿದ್ದು ಜೆಡಿಎಸ್ – ರೇವಣ್ಣ ವಾಗ್ದಾಳಿ

    ಪ್ರತಿಯೊಬ್ಬರಿಗೂ ಅವರದೇ ಆದ ಸ್ವಾಭಿಮಾನ ಇದ್ದು ಕೂಲಿ ಮಾಡುವವನಿಗೂ ಸ್ವಾಭಿಮಾನ ಇದೆ. ಎದುರಿಗೆ ಕರೆದು ಬಯ್ಯುವುದೇ ಬೇರೆ ಮಾಧ್ಯಮಗಳ ಮುಂದೆ ಹೇಳುವುದೇ ಬೇರೆ. ಅವರು ನಾಲಿಗೆ ಬಿಗಿಹಿಡಿದು ಮಾತನಾಡಿದರೆ ಸೂಕ್ತ ಎಂದರು.

    ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರೇ ವೇದಿಕೆಯಲ್ಲಿ ಹೇಳಿದ್ದಾರೆ. ನಮ್ಮ ಪುಟ್ಟಣ್ಣ ನಮ್ಮ ಪಾರ್ಟಿಯಿಂದ ನಿಲ್ಲುತ್ತಾರೆ ಎಂದು ಸಿಎಂ ಹೇಳಿದ್ದಾರೆ. ಅವರ ಬಳಿ ನಂಬಿಕೆ ಉಳಿಸಿಕೊಳ್ಳುವ ಶಕ್ತಿ ನಮಗೆ ಭಗವಂತ ಕೊಡಬೇಕು. ಈಗಾಗಲೇ ಯಾರ್ಯಾರು ನಂಬಿಕೆ ಕಳೆದುಕೊಂಡವರು ಕುಸಿದಿದ್ದಾರೆ. ಕುಸಿಯುತ್ತಾ ಇದ್ದಾರೆ ಅದನ್ನ ನೋಡುತ್ತಿದ್ದೀರಿ. ಮೋದಿ ಹಾಗೂ ಯಡಿಯೂರಪ್ಪ ನೇತೃತ್ವದ ನಾಯಕತ್ವ ಒಪ್ಪಿಕೊಂಡಿದ್ದೇನೆ ನೂರಕ್ಕೆ ನೂರರಷ್ಟು ಬಿಜೆಪಿಯಿಂದ ಸ್ಪರ್ಧಿಸಿ, ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಸರ್ಕಾರದ ದಾಖಲೆ ಎತ್ತೋದಕ್ಕೆ ರೇವಣ್ಣಗೆ ಬೇಕಂತೆ ಡೂಪ್ಲಿಕೇಟ್ ಕೀ!

    ಸರ್ಕಾರದ ದಾಖಲೆ ಎತ್ತೋದಕ್ಕೆ ರೇವಣ್ಣಗೆ ಬೇಕಂತೆ ಡೂಪ್ಲಿಕೇಟ್ ಕೀ!

    ಬೆಂಗಳೂರು: ತಮ್ಮ ಸರ್ಕಾರ ಇರಲಿ ಇಲ್ಲದಿರಲಿ, ದೇವೇಗೌಡರ ಕುಟುಂಬಕ್ಕೆ ಆಡಳಿತ ಯಂತ್ರದಲ್ಲಿ ಏನಾಗುತ್ತೆ, ಏನ್ ಆಗಲ್ಲ ಅನ್ನೋದು ಪಕ್ಕಾ ಗೊತ್ತಾಗುತ್ತದೆ. ಯಾವ ಇಲಾಖೆಯಲ್ಲಿ ಏನ್ ನಡೆಯುತ್ತೆ, ಯಾವ ಫೈಲ್ ಎಲ್ಲಿ ಮೂವ್ ಆಗುತ್ತೆ ಅನ್ನೋ ಪಕ್ಕಾ ಮೂಲಕ ದೇವೇಗೌಡರ ಕುಟುಂಬಕ್ಕಿದೆ. ಆದರಲ್ಲೂ ಹೆಚ್.ಡಿ ರೇವಣ್ಣ ಸರ್ಕಾರದ ದಾಖಲೆಗಳನ್ನು ಎತ್ತೋದ್ರಲ್ಲಿ ನಂಬರ್ ಒನ್ ಪೊಲಿಟೀಶಿಯನ್. ಆದರೆ ಇದೀಗ ಅದೇ ರೇವಣ್ಣ ಅವರು ಸರ್ಕಾರಿ ದಾಖಲೆ ಎತ್ತಲು ಡೂಪ್ಲಿಕೇಟ್ ಕೀಗೆ ಹುಡುಕ್ತಿದ್ದಾರಂತೆ.

    ಹೌದು. ಹೆಚ್.ಡಿ ರೇವಣ್ಣ ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಕರೆದಿದ್ದರು. ಯಡಿಯೂರಪ್ಪ ಸರ್ಕಾರದ ವಿರುದ್ಧ ಗುಟುರು ಹಾಕುತ್ತಾ, ದೇವೇಗೌಡರ ಕುಟುಂಬದ ವಿಷಯ ಇದ್ದರೆ ಯಡಿಯೂರಪ್ಪ ಸರ್ಕಾರ ರಾತ್ರಿ 7 ಗಂಟೆಗೆ ಓಪನ್ ಆಗುತ್ತೆ ಅಂತ ಕಿಡಿಕಾರಿದರು. ಹೆಂಗೆ ರಿಪೇರಿ ಮಾಡ್ಬೇಕು ಅನ್ನೋದು ಗೊತ್ತಿದೆ ಅಂದವರೇ ಕೀ ಹುಡುಕ್ತಾ ಇದ್ದೀನಿ ಅಂತ ಹೇಳಿದರು. ಆಗ ಮಾಧ್ಯಮ ಮಿತ್ರರು ಯಾವ ಕೀ ಸರ್ ಅದು ಅಂತ ಕೇಳಿದ್ದೇ ತಡ ರೇವಣ್ಣ ರಹಸ್ಯ ಬಿಚ್ಚಿಟ್ಟರು.

    ಈ ಹಿಂದೆ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಸರ್ಕಾರಿ ದಾಖಲೆಗಳು ಸುಲಭವಾಗಿ ಸಿಗುತ್ತಿತ್ತಂತೆ. ಡೂಪ್ಲಿಕೇಟ್ ಕೀ ರೇವಣ್ಣ ಹತ್ರ ಇತ್ತಂತೆ. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನಾದ ನನಗೆ ಸರ್ಕಾರಿ ದಾಖಲೆ ಕೊಡುತ್ತಿಲ್ಲ ಅಂತ ಸಿದ್ದರಾಮಯ್ಯ ಪ್ರಸ್ತಾಪಿಸಿದ್ರಂತೆ. ಆಗ ರೇವಣ್ಣ ನನ್ ಹತ್ರ ಡೂಪ್ಲಿಕೇಟ್ ಕೀ ಇದೆ ಯಾವ ದಾಖಲೆ ಬೇಕು ಹೇಳಿ ಸಿದ್ರಾಮಣ್ಣ ಅಂತ ಹೇಳಿದ್ರಂತೆ. ಇಂದು ಈ ಡೂಪ್ಲಿಕೇಟ್ ಕೀ ವಿಚಾರ ನೆನಪಿಸಿದ ರೇವಣ್ಣ, ಈಗ ಕೀ ಸಿಕ್ಕಿಲ್ಲ, ಡೂಪ್ಲಿಕೇಟ್ ಕೀ ಮಾಡಿಸ್ಕೋಬೇಕು. ಬೀಗ ತೆಗೆಯುವ ಪಾರ್ಟಿ ಹುಡುಕ್ತಿದ್ದೀನಿ ಅಂತೇಳಿ ಕುತೂಹಲ ಹುಟ್ಟು ಹಾಕಿದ್ದಾರೆ.

  • ಜೈಲಿನಲ್ಲಿ ಚಡ್ಡಿ ಹಾಕಿ ನಿಂತಿದ್ದ ಪುಟ್ಟಣ್ಣಗೆ ಟಿಕೆಟ್ ನೀಡಿದ್ದು ಜೆಡಿಎಸ್ – ರೇವಣ್ಣ ವಾಗ್ದಾಳಿ

    ಜೈಲಿನಲ್ಲಿ ಚಡ್ಡಿ ಹಾಕಿ ನಿಂತಿದ್ದ ಪುಟ್ಟಣ್ಣಗೆ ಟಿಕೆಟ್ ನೀಡಿದ್ದು ಜೆಡಿಎಸ್ – ರೇವಣ್ಣ ವಾಗ್ದಾಳಿ

    ಹಾಸನ: ಚನ್ನಪಟ್ಟಣದ ಜೈಲಿನಲ್ಲಿ ಚಡ್ಡಿ ಮೇಲೆ ನಿಲ್ಲಿಸಿದ್ದವರನ್ನು ಕರೆದು ಜೆಡಿಎಸ್‍ನಲ್ಲಿ ಸ್ಥಾನ ನೀಡಲಾಗಿತ್ತು. ಇವರಿಗಾಗಿ ದೇವೇಗೌಡರು ಪಾದಯಾತ್ರೆಯನ್ನು ಸಹ ಮಾಡಿದ್ದರು. ನೈತಿಕತೆ ಇದ್ದರೆ ಇವರು ಜೆಡಿಎಸ್‍ಗೆ ರಾಜೀನಾಮೆ ನೀಡಿ ಹೋಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು, ಮಂಡ್ಯದಲ್ಲಿ ನಮ್ಮ ಅಭ್ಯರ್ಥಿಗಳನ್ನು ಸೋಲಿಸಿದ್ದು ಇವರೇ. ಗೌರವ, ನೈತಿಕತೆ ಇದ್ದರೆ ಅವರು ರಾಜೀನಾಮೆ ನೀಡಲಿ. ಎಂಎಲ್ಸಿ, ಉಪಸಭಾಪತಿ ಮಾಡಿದ್ದು ಯಾರು? ಆದರೆ ಇವರು ನಾಲ್ಕು ವರ್ಷದಿಂದ ಯಾರ ಜೊತೆಗೆ ಓಡಾಡುತ್ತಿದ್ದಾರೆ ಎಂದು ತಿಳಿದಿದೆ. ಜೆಡಿಎಸ್ ಹಂಗಿನಲ್ಲಿ ಹೊಟ್ಟೆ ಉರಿಯುತ್ತಿರುವ ಇಂತವರಿಗೆ ಸೊಪ್ಪು ಹಾಕುವ ಅಗತ್ಯವಿಲ್ಲ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಜೆಡಿಎಸ್ ಬಿಡಲು ತೀರ್ಮಾನಿಸಿದ್ದೇನೆ, ಬಹುತೇಕ ಎಂಎಲ್‍ಸಿಗಳು ಸಹ ತೊರೆಯಲು ಚಿಂತಿಸಿದ್ದಾರೆ- ಪುಟ್ಟಣ್ಣ

    ಚನ್ನಪಟ್ಟಣದ ಜೈಲಲ್ಲಿ ಚಡ್ಡಿಯಲ್ಲಿ ನಿಲ್ಲಿಸಿದವರಿಗೆ ದೇವೇಗೌಡರು ರಾಜಕೀಯ ಭವಿಷ್ಯ ನೀಡಿದರು. ಪುಟ್ಟಣ್ಣ ಅವರಿಂದ ಜೆಡಿಎಸ್‍ಗೆ ಏನೂ ಆಗಬೇಕಿಲ್ಲ. ಅವರು ಹೋದರೆ ಜೆಡಿಎಸ್ ಹಾಗೂ ದೇವೇಗೌಡರಿಗೆ ಶಾಕ್ ಆಗುವುದಿಲ್ಲ ಎಂದರು.

    ಬಸವರಾಜ ಹೊರಟ್ಟಿ ನಮ್ಮ ಪಕ್ಷದ ಆಸ್ತಿ. ಪಕ್ಷದಲ್ಲಿ ಸಣ್ಣ ಪುಟ್ಟ ಗೊಂದಲಗಳಿರಬಹುದು. ಹೊರಟ್ಟಿ ಸೇರಿದಂತೆ ಇತರೆ ಪರಿಷತ್ ಸದಸ್ಯರ ಜೊತೆ ಚರ್ಚಿಸಿ ಮನವೊಲಿಸುತ್ತೇವೆ. ಸಣ್ಣಪುಟ್ಟ ಸಮಸ್ಯೆ ಇದ್ದರೆ ಕುಳಿತು ಬಗೆ ಹರಿಸಿಕೊಳ್ಳುತ್ತೇವೆ ಎಂದು ಹೇಳಿದರು.

    ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‍ನವರು ನಮ್ಮನ್ನು ಬಿಜೆಪಿಯ ಬಿ ಟೀಂ ಅಂದರು. ನಂತರ ಅವರೇ ನಮ್ಮ ಬಳಿ ಬಂದರು. ನಂತರ 14 ತಿಂಗಳು ಸರ್ಕಾರ ಮಾಡಿದೆವು. ಆ ಸಂದರ್ಭದಲ್ಲಿ ಅನುಭವಿಸಿದ ನೋವು ನಮಗೇ ಗೊತ್ತು. ನನ್ನನ್ನು ಸೂಪರ್ ಸಿಎಂ ಎಂದು ಬಿಂಬಿಸಿದರು. ಇದೀಗ ಕುಮಾರಸ್ವಾಮಿ-ಯಡಿಯೂರಪ್ಪ ನಡುವೆ ಒಳ ಒಪ್ಪಂದ ಆಗಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಹಾಗಿದ್ದಿದ್ದರೆ ಕೆಎಂಎಫ್ ಅಧ್ಯಕ್ಷ ಚುನಾವಣೆಯಲ್ಲಿ ಯಡಿಯೂರಪ್ಪ ಮನೆಗೆ ನಾನೇ ಹೋಗಿ ಕೇಳುತ್ತಿದ್ದೆ. ಆದರೆ ಯಡಿಯೂರಪ್ಪನವರ ಮನೆಗೆ ಯಾರು ಹೋಗಿದ್ದರು ಎಂಬುದನ್ನು ಅರಿಯಲಿ. ವಿಪಕ್ಷ ನಾಯಕರಾಗಿರುವವರು ಜಬಾಬ್ದಾರಿಯಿಂದ ಮಾತನಾಡಲಿ ಎಂದು ತಿರುಗೇಟು ನೀಡಿದರು.

    ಸಮ್ಮಿಶ್ರ ಸರ್ಕಾರ ಬೀಳಿಸುವ ತಪ್ಪನ್ನು ಕುಮಾರಸ್ವಾಮಿ ಏನು ಮಾಡಿದ್ದರು? 14 ಶಾಸಕರನ್ನು ಹಿಡಿದಿಡಲು ಆಗುತ್ತಿರಲಿಲ್ಲವೇ? ಅಭಿವೃದ್ಧಿ ವಿಚಾರದಲ್ಲಿ ಹಾಸನ ಜಿಲ್ಲೆಯ ಜನರನ್ನು ಎದುರು ಹಾಕಿಕೊಳ್ಳಬೇಡಿ. ವಿಪಕ್ಷ ನಾಯಕರು ಜೆಡಿಎಸ್ ಸಹವಾಸ ಸಾಕು ಎಂದಿದ್ದಾರೆ. ಆದರೆ ಸರ್ಕಾರ ರಚನೆ ವೇಳೆ ನಾವು ಅವರ ಬಳಿ ಹೋಗಿರಲಿಲ್ಲ. ಅವರೇ ನಮ್ಮ ಬಳಿ ಬಂದಿದ್ದರು ಎಂದು ತಿರುಗೇಟು ನೀಡಿದರು.

    ಕುಮಾರಸ್ವಾಮಿ ಬಿಜೆಪಿಗೆ ಜೆಡಿಎಸ್ ಪಕ್ಷ ಬರೆದು ಕೊಡುತ್ತೇವೆ ಎಂದಿಲ್ಲ. ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡುತ್ತೇವೆ ಎಂದೂ ಹೇಳಿಲ್ಲ. ನೆರೆ ಸಂತ್ರಸ್ತರ ಹಿತದೃಷ್ಟಿಯಿಂದ ಬಿಜೆಪಿ ಸರ್ಕಾರ ಮುಂದುವರಿಯಲಿ ಎಂದಿದ್ದಾರೆ ಎಂದು ಹೇಳುವ ಮೂಲಕ ಎಚ್‍ಡಿಕೆ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಬಿಜೆಪಿ ಸರ್ಕಾರ ಬಂದ ನಂತರ ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತ ಆಗಿದೆ. ಕಾವೇರಿ ನೀರಾವರಿ ನಿಗಮದ 7 ಸಾವಿರ ಕೋಟಿ ರೂ. ಕೆಲಸವನ್ನು ನಿಲ್ಲಿಸಲಾಗಿದೆ. ಸಿಎಂ ಯಾವುದೇ ಕೆಲಸ ನಿಲ್ಲಿಸುವುದಿಲ್ಲ ಎಂದಿದ್ದರು. ಆದರೆ ಯಾವುದೇ ಕೆಲಸ ಆರಂಭ ಆಗಿಲ್ಲ. ಈ ಬಗ್ಗೆ ಮುಂದಿನ ವಾರ ನಮ್ಮ ಎಲ್ಲ ಶಾಸಕರು ಸೇರಿ ಸಿಎಂ ಭೇಟಿ ಮಾಡಿ ಕೇಳುತ್ತೇವೆ ಎಂದು ಹೇಳಿದರು.

  • ಯೋ.. ನಂಗೊಂದು ನಿಂಬೆಹಣ್ಣು ಕೊಡಪ್ಪಾ ಒಳ್ಳೇದಾಗ್ಲಿ- ರೇವಣ್ಣರ ಕಾಲೆಳೆದ ಸಿದ್ದರಾಮಯ್ಯ

    ಯೋ.. ನಂಗೊಂದು ನಿಂಬೆಹಣ್ಣು ಕೊಡಪ್ಪಾ ಒಳ್ಳೇದಾಗ್ಲಿ- ರೇವಣ್ಣರ ಕಾಲೆಳೆದ ಸಿದ್ದರಾಮಯ್ಯ

    – ಸದನದಲ್ಲಿ ಮತ್ತೆ ನಿಂಬೆಹಣ್ಣಿನ ಬಗ್ಗೆ ಮಾತು
    – ರಾಜನಾಥ್ ಸಿಂಗ್‍ಗೆ ನಿಂಬೆ ಕೊಟ್ಟೆ ಎಂದ ರೇವಣ್ಣ

    ಬೆಂಗಳೂರು: ವಿಧಾನಸಭಾ ಕಲಾಪದ ಮೊದಲ ದಿನವೇ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ನಿಂಬೆಹಣ್ಣು ವಿಚಾರ ಪ್ರಸ್ತಾಪವಾಗಿ ಸದನವನ್ನು ಕೆಲ ಹೊತ್ತು ನಗೆಗಡಲಲ್ಲಿ ತೇಲಿಸಿತು.

    ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಉಂಟಾದ ಪ್ರವಾಹ ವಿಚಾರವಾಗಿ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾರೀ ಚರ್ಚೆ ನಡೆದಿತ್ತು. ಕೇಂದ್ರ ಹಾಗೂ ರಾಜದಲ್ಲಿ ನಿಮ್ಮ ಸರ್ಕಾರವಿದೆ. ಆದಷ್ಟು ಬೇಗ ಕೊಡಗು ನೆರೆ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಿ ಎಂದು ಸಿದ್ದರಾಮಯ್ಯ ಹೇಳಿದರು. ಆಗ ಕೆ.ಜಿ. ಬೋಪಯ್ಯನವರು, ನೀವು ವಿಪಕ್ಷ ನಾಯಕರನ್ನು ಬುಧವಾರ ಆಯ್ಕೆ ಮಾಡಿದ್ದೀರಿ. ನೀವು ಅವರು ಎಲ್ಲರೂ ಒಂದೇ ರೀತಿ ಎಂದು ಹೇಳಿದರು.

    ಬೋಪಯ್ಯ ಅವರ ಮಾತಿಗೆ ತಕ್ಷಣವೇ ಉತ್ತರ ಕೊಟ್ಟ ವಿರೋಧ ಪಕ್ಷದ ಶಾಸಕರೊಬ್ಬರು, ನಿಮ್ಮ ಮಂತ್ರಿ ಮಂಡಲ ರಚನೆಯಾಗಲು ಒಂದು ತಿಂಗಳೇ ಬೇಕಾಯಿತು ಎಂದರು. ಮಾತು ಮುಂದುವರಿಸಿದ ಸಿದ್ದರಾಮಯ್ಯ ಅವರು, ನಾನು ವಿಪಕ್ಷ ನಾಯಕನಾಗಿದ್ದೇನೆ. ಬಿಜೆಪಿಯಲ್ಲಿ ನಿಮ್ಮ ಪರಿಸ್ಥಿತಿ ಈಗ ಹೇಗಿದೆ ಬೋಪಯ್ಯನವರೇ? ಸಚಿವ ಪಟ್ಟಿಯಿಂದ ನಿಮ್ಮನ್ನ ತೆಗೆದು ಹಾಕಿದರು. ಸುಮ್ಮನೆ ಇರಿ ಸಾಕು ನಿಮ್ಮ ಮಾತು ಎಂದರು.

    ನಿಮ್ಮನ್ನ ಸಭಾಪತಿ ಮಾಡುತ್ತಾರೆ ಎನ್ನುವ ಸುದ್ದಿ ನನಗೆ ಬಂದಿತ್ತು. ಸಚಿವ ಸ್ಥಾನದ ಆಕಾಂಕ್ಷೆಯಿಂದ ಬಿಟ್ಟುಕೊಟ್ರಿ ಎಂದು ಸಿದ್ದರಾಮಯ್ಯ ಕಾಲೆಳೆದರು. ಇದರಿಂದ ಮತ್ತಷ್ಟು ಮುಜುಗರಕ್ಕೆ ಒಳಗಾದ ಬೋಪಯ್ಯ, ನೀವು ವಿಪಕ್ಷ ನಾಯಕರಾಗಲು ಒಂದು ತಿಂಗಳು ತಗೊಂಡ್ರಿ ಎಂದು ತಿರುಗೇಟು ನೀಡಿದರು. ಆಗ ಸಿದ್ದರಾಮಯ್ಯ ಅವರು, ನಾನೇ ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್‍ಪಿ) ನಾಯಕ ನಿಮಗೆ ಗೊತ್ತಾ ಬೋಪಯ್ಯನವರೇ? ನಾನು ಸಿಎಲ್‍ಪಿ ನಾಯಕ ಆಗಿದ್ದು ಯಾವಾಗ ಅಂತ ನಿಮಗೆ ಗೊತ್ತಾ ಎಂದು ಮರು ಪ್ರಶ್ನಿಸಿದರು.

    ಸಿದ್ದರಾಮಯ್ಯ ಅವರ ಪ್ರಶ್ನೆಗೆ ಸದನದ ಸದಸ್ಯರೊಬ್ಬರು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಕೇಳಿ ಎಂದು ಉತ್ತರ ತೂರಿ ಬಿಟ್ಟರು. ಆಗ ಸಿದ್ದರಾಮಯ್ಯ, ರೇವಣ್ಣ ನಿಂಬೆಹಣ್ಣು ಬಿಟ್ಟಿದ್ದರೆ ಕಷ್ಟ ಎಂದು ಕಾಲೆಳೆದರು. ನಿಂಬೆಹಣ್ಣು ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ರೇವಣ್ಣ ಮಾತನಾಡಲು ಮುಂದಾದರು. ಈ ವೇಳೆ ಸಿದ್ದರಾಮಯ್ಯ ಅವರು, ನಿಂಬೆಹಣ್ಣು ತಂದಿಯಾ ಎಂದು ಕೇಳಿ ಸದನದಲ್ಲಿ ನಗೆ ಹರಿಸಿದರು.

    ಧ್ವನಿ ಏರಿಸಿದ ರೇವಣ್ಣ ಅವರು ನಮ್ಮ ನಿಂಬೆಹಣ್ಣನ್ನು ಕೇಂದ್ರ ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಅವರಿಗೆ ಕೊಟ್ಟಿದ್ದೇವೆ. ಅದನ್ನ ಅವರು ರಫೇಲ್ ಯುದ್ಧ ವಿಮಾನದ ಮೇಲೆ ಇಟ್ಟರು ಎಂದು ನಕ್ಕರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ಯೋ.. ರೇವಣ್ಣ ನಂಗೊಂದು ನಿಂಬೆಹಣ್ಣು ಕೊಡಪ್ಪಾ ಒಳ್ಳೇದಾಗ್ಲಿ ಎಂದು ಕಿಚಾಯಿಸಿದರು.

    ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ನಿಮಗೆ ರೇವಣ್ಣ ಅವರೇ ನಿಂಬೆಹಣ್ಣು ಕೊಟ್ಟಿದ್ದರು ಎನ್ನುವ ಸುದ್ದಿ ನನಗೆ ಬಂದಿತ್ತು ಎಂದು ಹೇಳಿದರು. ಇದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡುತ್ತಿದ್ದಂತೆ ಮತ್ತೆ ಮಾತು ಮುಂದುವರಿಸಿದ ಸ್ಪೀಕರ್, ನನಗೆ ನಿಮ್ಮ ಮನೆ ಬಿಟ್ಟುಕೊಟ್ಟರೆ ಸಾಕು. ನೀವು ಅದನ್ನು ಬಿಡುತ್ತಿಲ್ಲ ಎಂದು ನಗೆ ಬೀರಿದರು. ಆಗ ರೇವಣ್ಣ ಅವರು, ನಾನು ಎರಡು ತಿಂಗಳಲ್ಲೆ ಮನೆ ಬಿಟ್ಟುಕೊಟ್ಟೆ ಎಂದರು. ತಕ್ಷಣವೇ ಸಿದ್ದರಾಮಯ್ಯ ಅವರು, ಸದನವನ್ನು ಮತ್ತೊಂದು ವಿಚಾರಕ್ಕೆ ತೆಗೆದುಕೊಂಡು ಹೋಗುವುದು ಬೇಡ. ಸದನದಲ್ಲಿ ಎಲ್ಲರೂ ಸ್ವಲ್ಪ ಖುಷಿಯಾಗಿ ಇರಲಿ ಅಂತ ಹೀಗೆ ಮಾತನಾಡಿದೆ ಎಂದರು.

  • ನಿಂಬೆಹಣ್ಣು ರೇವಣ್ಣ ಎಂದು ಗೇಲಿ ಮಾಡುವವರು ಈಗ ಮಾತಾಡಲಿ – ರೇವಣ್ಣ

    ನಿಂಬೆಹಣ್ಣು ರೇವಣ್ಣ ಎಂದು ಗೇಲಿ ಮಾಡುವವರು ಈಗ ಮಾತಾಡಲಿ – ರೇವಣ್ಣ

    ಹಾಸನ: ನನಗೆ ನಿಂಬೆಹಣ್ಣು ರೇವಣ್ಣ ಎಂದು ಗೇಲಿ ಮಾಡುವ ಬಿಜೆಪಿಯ ಮುಖಂಡರು ನಿಂಬೆಹಣ್ಣಿನ ಬಗ್ಗೆ ಈಗ ಮಾತನಾಡಲಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

    ಹೊಳೆನರಸೀಪುರದ ಚಾಕೇನಹಳ್ಳಿಯಲ್ಲಿ ಮಾತನಾಡಿದ ಅವರು, ಫ್ರಾನ್ಸ್ ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಫೇಲ್ ಯುದ್ಧ ವಿಮಾನಕ್ಕೆ ಪೂಜೆ ಸಲ್ಲಿಸಿದ ನಂತರ ವಿಮಾನ ಹಾರಾಟಕ್ಕೂ ಮುನ್ನ ಚಕ್ರಗಳಿಗೆ ನಿಂಬೆಹಣ್ಣು ಇಟ್ಟಿದ್ದಾರೆ. ನನಗೆ ನಿಂಬೆಹಣ್ಣು ರೇವಣ್ಣ ಎಂದು ಗೇಲಿ ಮಾಡುವ ಬಿಜೆಪಿ ನಾಯಕರು ಈಗ ನಿಂಬೆಹಣ್ಣಿನ ಬಗ್ಗೆ ಮಾತನಾಡಲಿ ಎಂದು ಹೇಳಿದರು.

    ಕಾವೇರಿ ಕೊಳ್ಳದಲ್ಲಿರುವ ಡ್ಯಾಂಗಳಲ್ಲಿ ನಡೆಯಬೇಕಿದ್ದ ಕೆಲಸಗಳಿಗೆ ಮುಖ್ಯಮಂತ್ರಿ ತಡೆಹಿಡಿದಿದ್ದಾರೆ. ಮೈಸೂರು, ಮಂಡ್ಯ, ಮಡಿಕೇರಿಯ ಸೇರಿದಂತೆ ವಿವಿಧೆಡೆ ನಡೆಯಬೇಕಿದ್ದ 5 ಸಾವಿರ ಕೋಟಿ ರೂ.ಗಳ ಕಾಮಗಾರಿಗಳಿಗೆ ತಡೆ ನೀಡಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಪ್ರಾಬಲ್ಯ ಇರುವ ಕ್ಷೇತ್ರದ ಕಾಮಗಾರಿಗಳಿಗೆ ತಡೆ ಕೊಟ್ಟಿದ್ದಾರೆ. ಟೆಂಡರ್ ಆಗಿ ವರ್ಕ್ ಆರ್ಡರ್ ಆಗಿದ್ದರೂ ಕಾಮಗಾರಿ ನಿಲ್ಲಿಸಿದ್ದಾರೆ. ಬಿಜೆಪಿ ಸೇರಿದ ಅನರ್ಹರ ಕ್ಷೇತ್ರಗಳಿಗೆ ಮತ್ತು ಬಿಜೆಪಿ ಗೆದ್ದ ಕೆಲ ಕ್ಷೇತ್ರದ ಕಾಮಗಾರಿಗಳಿಗೆ ಈಗ ಕೆಲಸಕ್ಕೆ ಅನುಮತಿ ನೀಡುತ್ತಿದ್ದಾರೆ. ಹಾಸನ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿನ ಕಾಮಗಾರಿಗಳಿಗೆ ತಡೆ ನೀಡಿದ್ದಾರೆ ಎಂದು ಆರೋಪಿಸಿದರು.

    ದ್ವೇಷದ ರಾಜಕಾರಣ ಬಿಡದೆ ಇದ್ದರೆ ಮುಂದಿನ ದಿನಗಳಲ್ಲಿ ಅನುಭವಿಸಬೇಕಾಗುತ್ತದೆ. ಉತ್ತರ ಕರ್ನಾಟಕದ ಜನರ ಪರಿಸ್ಥಿತಿ ಸಹ ಹಾಗೆಯೇ ಇದೆ. ಸುಮ್ಮನೆ ಕೇಂದ್ರ ಸರ್ಕಾರದ ಮೇಲೆ ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ರಾಜಕೀಯ ದ್ವೇಷ ಬಿಟ್ಟು ಕೆಲಸಮಾಡಿ. ಕಾಮಗಾರಿ ತಡೆ ಹಿಡಿದ ಜಿಲ್ಲೆಗಳ ಜನತೆ ಕರ್ನಾಟಕದವರಲ್ಲವೇ? ಈ ಕುರಿತು ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮರು ಚುನಾವಣೆಯಲ್ಲಿ ಕೆ.ಆರ್.ಪೇಟೆ ಸೇರಿದಂತೆ ಎಲ್ಲ ಕಡೆ ಚುನಾವಣಾ ಪ್ರಚಾರಕ್ಕೆ ಹೋಗುತ್ತೇನೆ. ಬಿಜೆಪಿಯನ್ನು ರಾಜ್ಯದಿಂದ ತೆಗೆಯುವ ಗುರಿಯೇ ನಮ್ಮ ಕೆಲಸ ಎಂದು ಬಿಜೆಪಿ ವಿರುದ್ಧ ಗುಡುಗಿದರು.

    ಹೊಳೆನರಸೀಪುರದ ಚಾಕೇನಹಳ್ಳಿ ಮಿನಿ ಡ್ಯಾಂಗೆ ಹೆಚ್.ಡಿ.ರೇವಣ್ಣ ಮತ್ತು ಕುಟುಂಬದವರಿಂದ ಬಾಗಿನ ಅರ್ಪಿಸಲಾಯಿತು. ಸಂಸದ ಪ್ರಜ್ವಲ್ ರೇವಣ್ಣ ಮತ್ತು ಜಿಲ್ಲಾ ಪಂಚಾಯತ್ ಸದಸ್ಯೆ ಭವಾನಿ ರೇವಣ್ಣ ಭಾಗಿಯಾಗಿದ್ದರು. ಚಾಕೆನಹಳ್ಳಿ ಡ್ಯಾಂ 12 ವರ್ಷಗಳ ನಂತರ ಭರ್ತಿಯಾಗಿದ್ದು, ಕಾಮಸಮುದ್ರ ಏತನೀರಾವರಿ ಮೂಲಕ ಡ್ಯಾಂಗೆ ನೀರು ಹರಿಸಲಾಗಿದೆ. 5 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಡ್ಯಾಂಗೆ ಇಂದು ಬಾಗಿನ ಅರ್ಪಿಸಲಾಯಿತು.

  • ರೇವಣ್ಣ ದೇವೇಗೌಡರ ಮಗ ಅನ್ನೋ ಕಾರಣಕ್ಕೆ ಸುಮ್ಮನಿದ್ದೇನೆ- ಶಿವರಾಮೇಗೌಡ

    ರೇವಣ್ಣ ದೇವೇಗೌಡರ ಮಗ ಅನ್ನೋ ಕಾರಣಕ್ಕೆ ಸುಮ್ಮನಿದ್ದೇನೆ- ಶಿವರಾಮೇಗೌಡ

    – ನನ್ನ, ಎಚ್‍ಡಿಕೆ ನಡುವೆ ಸಣ್ಣ ವ್ಯತ್ಯಾಸಗಳಿವೆ

    ಮಂಡ್ಯ: ರೇವಣ್ಣ ನಮ್ಮ ದೇವೇಗೌಡರ ಮಗ ಎನ್ನುವ ಕಾರಣಕ್ಕೆ ಸುಮ್ಮನಾಗುತ್ತೇನೆ. ಅಲ್ಲದೆ ರೇವಣ್ಣನವರು ಹಾಗೆ ಮಾತನಾಡುತ್ತಲೇ ಇರುತ್ತಾರೆ ಬಿಡಿ ಎಂದು ಮಾಜಿ ಸಚಿವ ರೇವಣ್ಣ ವಿರುದ್ಧ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹರಿಹಾಯ್ದಿದ್ದಾರೆ.

    ಶಿವರಾಮೇಗೌಡರನ್ನು ಡಸ್ಟ್ ಬಿನ್ ಎಂದಿದ್ದ ಎಚ್.ಡಿ.ರೇವಣ್ಣನವರ ಹೇಳಿಕೆ ಕುರಿತು ಜಿಲ್ಲೆಯ ನಾಗಮಂಗಲದಲ್ಲಿ ಮಾತನಾಡಿದ ಅವರು, ರೇವಣ್ಣನವರು ಹಾಗೆ ಮಾತನಾಡುತ್ತಿರುತ್ತಾರೆ ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ನನ್ನ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ನಡುವೆ ಸಣ್ಣ, ಪುಟ್ಟ ವ್ಯತ್ಯಾಸಗಳಿರುವುದು ನಿಜ ಅವುಗಳನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

    ಕಾಂಗ್ರೆಸ್ ಸಭೆಯಲ್ಲಿ ಕಾಣಿಸಿಕೊಂಡ ಕುರಿತು ಪ್ರತಿಕ್ರಿಯಿಸಿದ ಅವರು, ನನಗೂ ಕಾಂಗ್ರೆಸ್ ಸಭೆಗೂ ಸಂಬಂಧವಿಲ್ಲ. ನಾನು ಯಾರನ್ನೋ ಭೇಟಿ ಮಾಡಲು ಹೋಗಿದ್ದೆ. ಅಲ್ಲಿ ಕಾಂಗ್ರೆಸ್ ಸಭೆ ನಡೆಯುತಿತ್ತು ಅಷ್ಟೇ. ನಾನು ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ. ನಾನು ಹಾಗೂ ಕುಮಾರಸ್ವಾಮಿ ಅಣ್ಣ-ತಮ್ಮಂದಿರಿದ್ದಂತೆ. ನನಗೆ ಮತ್ತೆ ಚುನಾವಣೆಗೆ ನಿಲ್ಲುವ ಆಸೆ ಇಲ್ಲ. ನಾನು ಜೆಡಿಎಸ್‍ನ ಸಕ್ರಿಯ ಸದಸ್ಯ, ಕುಮಾರಸ್ವಾಮಿ, ದೇವೇಗೌಡರೇ ನಮ್ಮ ನಾಯಕರು ಎಂದು ತಿಳಿಸಿದರು.

    ನಾನು ಜೆಡಿಎಸ್ ಬಿಡಲ್ಲ ಎಂದು ಸ್ಪಷ್ಟಪಡಿಸಿದ್ದೇನೆ. ಕುಮಾರಸ್ವಾಮಿಯವರು ನನ್ನ ಬಗ್ಗೆ ಮಾತನಾಡಲಿ. ಆದರೆ ನಾನು ಕಾಂಗ್ರೆಸ್ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ. ನಾನು 20 ವರ್ಷ ಮಾಜಿ ಎಂಎಲ್‍ಎಯಾಗಿ ಕಾಲ ಕಳೆದಿದ್ದೇನೆ. ಹೀಗಿರುವಾಗ ಮತ್ತಷ್ಟು ವರ್ಷ ಮಾಜಿ ಎಂಪಿಯಾಗಿರುವುದು ಕಷ್ಟವೇ ನನಗೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರು ನನಗೆ 80 ರಷ್ಟು ಮತದಾನ ಮಾಡಿದರು. ಆದರೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದಾಗ ಕಾಂಗ್ರೆಸ್ಸಿಗರು ಸ್ವಾಭಿಮಾನದ ಪರ ನಿಂತರು ಎಂದು ಪರೋಕ್ಷವಾಗಿ ಕಾಂಗ್ರೆಸ್ ಪರ ಬ್ಯಾಟ್ ಮಾಡಿದರು.

  • ಚುನಾವಣಾ ಆಯೋಗದ ಮಧ್ಯೆ ಗೊಂದಲ ಇದೆ- ರೇವಣ್ಣ

    ಚುನಾವಣಾ ಆಯೋಗದ ಮಧ್ಯೆ ಗೊಂದಲ ಇದೆ- ರೇವಣ್ಣ

    ಬೆಂಗಳೂರು: ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗಗಳ ಮಧ್ಯೆಯೇ ಗೊಂದಲವಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಗರದ ಜೆ.ಪಿ.ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೋರ್ಟ್ ಆದೇಶಕ್ಕೆ ತಲೆ ಬಾಗುತ್ತೇನೆ. ಕೋರ್ಟ್ ಅದೇಶದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ರಾಜ್ಯ ಚುನಾವಣಾ ಆಯುಕ್ತರು ಅನರ್ಹರು ಚುನಾವಣೆಗೆ ನಿಲ್ಲಲು ಸಾಧ್ಯವಿಲ್ಲ ಎನ್ನುತ್ತಾರೆ. ಅತ್ತ ಸುಪ್ರೀಂ ಕೋರ್ಟ್‍ನಲ್ಲಿ ಕೇಂದ್ರ ಚುನಾವಣಾ ಆಯೋಗದವರು ಸ್ಪರ್ಧೆ ಮಾಡಬಹುದು ಎನ್ನುತ್ತಾರೆ. ಈ ಗೊಂದಲ ನಮಗೆ ಅನುಮಾನ ಮೂಡಿಸಿದೆ ಎಂದು ಚುನಾವಣಾ ಆಯೋಗದ ವಿರುದ್ಧ ಹರಿಹಾಯ್ದರು.

    ಚುನಾವಣಾ ಆಯೋಗದ ಈ ನಡವಳಿಕೆ ಹಿಂದೆ ಯಾರಿದ್ದಾರೆ ನಮಗೆ ಗೊತ್ತಿಲ್ಲ. ರಾಜ್ಯ ಚುನಾವಣಾ ಆಯುಕ್ತರು ದೊಡ್ಡವರಾ ಅಥವಾ ಕೇಂದ್ರ ಚುನಾವಣಾ ಆಯೋಗ ದೊಡ್ಡದಾ ಹೊತ್ತಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು ಈ ಬಗ್ಗೆ ಧ್ವನಿ ಎತ್ತಬೇಕು. ಈ ಕುರಿತು ರಾಜ್ಯದ ಜನತೆ ನಿರ್ಧರಿಸುತ್ತಾರೆ. ಸ್ಪೀಕರ್ ಆದೇಶಕ್ಕೆ ಕೋರ್ಟ್ ತಡೆ ಕೊಟ್ಟಿಲ್ಲ. ಅದಿನ್ನು ಜೀವಂತವಾಗಿ ಇದೆ. ಮುಂದೆ ಏನಾಗುತ್ತೋ ಕಾದು ನೋಡೋಣ ಎಂದು ತಿಳಿಸಿದರು.

    ಉಪಚುನಾವಣೆ ಹಿನ್ನೆಲೆ ಕ್ಷೇತ್ರಗಳ ಉಸ್ತುವಾರಿಗಳನ್ನು ನೇಮಿಸಲಾಗಿತ್ತು. ಇದೀಗ ಚುನಾವಣೆ ರದ್ದಾಗಿದೆ. ಕೆ.ಆರ್.ಪೇಟೆ ಕ್ಷೇತ್ರಕ್ಕೆ ಪುಟ್ಟರಾಜು, ಹುಣಸೂರು ಕ್ಷೇತ್ರಕ್ಕೆ ಕುಮಾರಸ್ವಾಮಿ, ದೇವೇಗೌಡರು ಹಾಗೂ ಸಾ.ರಾ.ಮಹೇಶ್ ನೇತೃತ್ವ ವಹಿಸಲಿದ್ದಾರೆ. 15 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ತಯಾರಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ಉಪಚುನಾವಣೆಗೆ ತಡೆ ನೀಡಿದೆ. ಹೀಗಾಗಿ ನಮ್ಮ ನಾಯಕರು ಕ್ಷೇತ್ರದ ಮುಖಂಡರ ಜೊತೆ ಚರ್ಚಿಸುತ್ತಾರೆ. ಎರಡೂ ಪಕ್ಷಕ್ಕೆ ಸ್ಪರ್ಧೆ ನಿಡುವ ಅಭ್ಯರ್ಥಿಗಳನ್ನು ಹಾಕುತ್ತೇವೆ. ಚುನಾವಣೆ ಮುಂದೂಡಿದರೂ ನಮ್ಮ ಕ್ಷೇತ್ರದ ಕೆಲಸಗಳನ್ನು ಮಾಡುತ್ತೇವೆ. ಪಕ್ಷದ ಸಂಘಟನೆ ಮುಂದುವರಿಯುತ್ತದೆ ಎಂದು ಮಾಹಿತಿ ನೀಡಿದರು.

  • ಹಿತ್ತಾಳೆ ಕಿವಿ ಆರೋಪ, ಶಿವರಾಮೇಗೌಡರನ್ನು ಕಸದಬುಟ್ಟಿಗೆ ಹೋಲಿಸಿದ ರೇವಣ್ಣ

    ಹಿತ್ತಾಳೆ ಕಿವಿ ಆರೋಪ, ಶಿವರಾಮೇಗೌಡರನ್ನು ಕಸದಬುಟ್ಟಿಗೆ ಹೋಲಿಸಿದ ರೇವಣ್ಣ

    – ಕುಮಾರಸ್ವಾಮಿ ಧರ್ಮರಾಯ

    ಹಾಸನ: ದೇವೇಗೌಡರು ಮತ್ತು ಕುಮಾರಸ್ವಾಮಿ ಅವರದು ಹಿತ್ತಾಳೆ ಕಿವಿ ಎಂದಿದ್ದ ಮಾಜಿ ಎಂಪಿ ಶಿವರಾಮೇಗೌಡರನ್ನು ಮಾಜಿ ಸಚಿವ ಹೆಚ್‍ಡಿ ರೇವಣ್ಣ ಕಸದಬುಟ್ಟಿಗೆ ಹೋಲಿಸಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಸದಬುಟ್ಟಿಯಲ್ಲಿ ಇದ್ದವರನ್ನು ತೆಗೆದುಕೊಂಡು ಗೆಲ್ಲಿಸುತ್ತಾರೆ. ಶಿವರಾಮೇಗೌಡ ಅವರಂಥವರನ್ನು ಬೆಳೆಸುತ್ತಾರೆ. ಇದು ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ದೌರ್ಭಾಗ್ಯ ಎಂದು ಹೇಳಿದರು.

    ಕುಮಾರಸ್ವಾಮಿ ಧರ್ಮರಾಯ ಇದ್ದ ಹಾಗೇ ಕೆಲವರು ಹೇಳಿದರೆ ಅದಕ್ಕೆ ಓಕೆ ಎನ್ನುತ್ತಾರೆ. ಅದಕ್ಕೆ ಈ ರೀತಿ ಆಗುತ್ತದೆ. ಬ್ಯಾಕ್ ಗ್ರೌಂಡ್ ನೋಡಿ, ನಂತರ ಪಕ್ಷದಲ್ಲಿ ಅವಕಾಶ ಕೊಡಬೇಕು. ಆದರೆ ಅದು ಯಾವುದನ್ನು ಮಾಡದೇ ಹೋದರೆ ಮುಂದೆ ಹೀಗಾಗುತ್ತೆ ಎಂದು ಶಿವರಾಮೇಗೌಡರ ವಿರುದ್ಧ ಕಿಡಿಕಾರಿದರು. ಇದನ್ನು ಓದಿ: ಹೆಚ್‍ಡಿಕೆ, ಹೆಚ್‍ಡಿಡಿ ದೇಹ ಬಂಗಾರ, ಕಿವಿ ಮಾತ್ರ ಹಿತ್ತಾಳೆ: ಶಿವರಾಮೇಗೌಡ

    ಒದೇ ವೇಳೆ ಹಾಸನವನ್ನು ರೇವಣ್ಣಗೆ ಬರೆದುಕೊಟ್ಟಿಲ್ಲ ಎಂಬ ಸಚಿವ ಮಾಧುಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನನಗೆ ನನ್ನ ಜಿಲ್ಲೆಯ ಅಭಿವೃದ್ಧಿ ಆಗಬೇಕು ಅಷ್ಟೇ. ಅದನ್ನು ಬಿಟ್ಟರೆ ಹಾಸನ ನನ್ನ ಸಾಮ್ರಾಜ್ಯ ನಾನು ಮಹಾರಾಜ ಎಂದು ಎಲ್ಲೂ ಹೇಳಿಲ್ಲ ಎಂದು ಟಾಂಗ್ ಕೊಟ್ಟರು.

    ಉಪಚುನಾವಣೆ ನಡೆಯುವುದರ ಬಗ್ಗೆ ಕೇಳಿದಾಗ, ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ ನಾಯಕರು ಈಗಾಗಲೇ ಹೇಳಿದ್ದಾರೆ. ಈ ವಿಚಾರವಾಗಿ ಪಕ್ಷದ ವರಿಷ್ಠರಾದ ದೇವೇಗೌಡರು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು. ಈ ವೇಳೆ ಜಿಟಿ ದೇವೇಗೌಡರ ಬಗ್ಗೆ ಕೇಳಿದಾಗ ಅವರು ದೊಡ್ಡವರು ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳಿದರು.