Tag: HD Revanna

  • ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು ಮುಚ್ಚುವುದೇ ಒಳ್ಳೆಯದು- ಕೇಂದ್ರದ ವಿರುದ್ಧ ರೇವಣ್ಣ ಕಿಡಿ

    ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು ಮುಚ್ಚುವುದೇ ಒಳ್ಳೆಯದು- ಕೇಂದ್ರದ ವಿರುದ್ಧ ರೇವಣ್ಣ ಕಿಡಿ

    ಹಾಸನ: ರಾಷ್ಟ್ರೀಕೃತ ಬ್ಯಾಂಕ್‍ಗಳು ರೈತರಿಗೆ ಹಣ ಕೊಡುತ್ತಿಲ್ಲ, ಹೀಗಾಗಿ ಅವುಗಳನ್ನು ಮುಚ್ಚುವುದು ಒಳ್ಳೆಯದು ಎಂದು ಮಾಜಿ ಸಚಿವ ಎಚ್‍ಡಿ ರೇವಣ್ಣ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ರೈತರಿಗೆ ಗೋಳು ಕೊಡುವ ಬ್ಯಾಂಕ್ ಎಂದರೆ ಅದು ರಾಷ್ಟ್ರೀಕೃತ ಬ್ಯಾಂಕ್‍ಗಳು. ಈ ರಾಷ್ಟ್ರೀಕೃತ ಬ್ಯಾಂಕ್‍ಗಳು ಬಡ ರೈತರಿಗೆ ಸಾಲ ಕೊಡುತ್ತಿಲ್ಲ. ರೈತರು ಒಂದು ಲಕ್ಷ ರೂ. ಸಾಲ ತೆಗೆದುಕೊಂಡರೇ ಒಂದು ವರ್ಷಕ್ಕೆ 5 ಲಕ್ಷ ರೂ. ಹಣ ಕಟ್ಟಿ ಎಂದು ಹೇಳುತ್ತಾರೆ. ಈ ಬ್ಯಾಂಕ್ ಗಳು ಉಳ್ಳವರಿಗೆ ಮಾತ್ರ ಉಪಯೋಗವಿದೆ. ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯವರು ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು ಮುಚ್ಚಲಿ ಎಂದು ಒತ್ತಾಯ ಮಾಡಿದರು.

    ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ರೈತರ ಮನೆ ಹಾಳಾಗುತ್ತಿದೆ. ಮೋದಿಯವರೇ ನೀವೇ ಹೇಳಿ ಈ ಬ್ಯಾಂಕ್‍ಗಳು ಯಾಕೆ ಇದೆ ಎಂದು. ಈ ಬ್ಯಾಂಕ್‍ಗಳಿಂದ ಉಳ್ಳವರೆಗೆ ಸಾಲ ಕೊಡುತ್ತೇವೆ ಎಂದು ಒಂದು ಆದೇಶ ಹೊರಡಿಸಿ ಎಂದು ಕೇಂದ್ರ ಸರ್ಕಾರದ ವಿರುದ್ಧ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

    ಕೊರೊನಾದಿಂದ 4,200 ಟನ್ ಹಾಲಿನ ಪೌಡರ್ ಮಾರಾಟವಾಗದೇ ಡೈರಿಯಲ್ಲೇ ಉಳಿದಿದೆ. ಕೊರೊನಾ ಸಮಯದಲ್ಲಿ ವಿವಿಧ ಬೆಳೆಗಳಲ್ಲಿ ನಷ್ಟ ಅನುಭವಿಸಿದ್ದು ಹಾಗೂ ಕೆ.ಎಂ.ಎಫ್. ಮೂಲಕವೇ ಜೋಳ ಖರೀದಿ ಮಾಡಲು ಮುಂದಾಗಬೇಕು. ಈ ನಿಟ್ಟಿನಲ್ಲಿ ರೈತರ ನೆರವಿಗೆ ಸರ್ಕಾರ ಬರಬೇಕು. ಲಾಕ್‍ಡೌನ್ ಮಾಡಿದ ಹಿನ್ನೆಲೆಯಲ್ಲಿ ಹಣ್ಣು, ಹೂವು, ತರಕಾರಿ ಬೆಳೆಗಳು ಸೇರಿ ಅಂದಾಜು 104 ಕೋಟಿ ರೂ.ಗಳ ನಷ್ಟವಾಗಿದೆ. ಜೊತೆಗೆ ಮಳೆ ಹಾನಿಗೂ ಇದುವರೆಗೂ ಯಾವ ಪರಿಹಾರವನ್ನು ಸರ್ಕಾರ ನೀಡಿಲ್ಲ. ತೋಟಗಾರಿಕ ಬೆಳೆಗಳಲ್ಲಿ ಸಮೀಕ್ಷೆ ಪ್ರಕಾರ ಆಗಸ್ಟ್ ತಿಂಗಳ ಒಳಗೆ 19,23,37,000 ರೂ ನಷ್ಟವಾಗಿದೆ. ಕಾಫಿ ಬೆಳೆಯಲ್ಲಿ 18,10,57,000 ರೂ. ನಷ್ಟ ಸಂಭವಿಸಿದೆ ಎಂದು ವಿವರಿಸಿದರು.

    ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು, ಮಳೆ ಹಾನಿ ಸೇರಿದಂತೆ ಇತರೆ ಪ್ರಕೃತಿ ವಿಕೋಪದ ಕಾರಣ ಕಾಫಿ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ಪರಿಹಾರ ಒದಗಿಸಲಿ. ಜಿಲ್ಲೆಯ ಹೂವಿನ ಬೆಳೆಗಾರರಿಗೆ ಇದುವರೆಗೆ 7 ಲಕ್ಷ ರೂ. ಪರಿಹಾರ ವಿತರಣೆ ಮಾಡಲಾಗಿದೆ. ಅಲ್ಲದೆ ಬ್ಯಾಂಕ್ ಖಾತೆಯೂ ಸರಿ ಇಲ್ಲ ಎಂಬ ಕಾರಣಕ್ಕೆ ಹಲವರಿಗೆ ಪರಿಹಾರ ತಲುಪಿಲ್ಲ ಎಂದರು.

    ಜಿಲ್ಲೆಯಲ್ಲಿ ಈ ಬಾರಿ ಸುಮಾರು 78 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆಯುವ ನಿರೀಕ್ಷೆ ಇತ್ತು. ಆದರೆ 95 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದಾರೆ. 6 ಲಕ್ಷ ಮೆಟ್ರಿಕ್ ಟನ್ ಮೆಕ್ಕೆ ಜೋಳದ ಇಳುವರಿ ಬರುವ ನಿರೀಕ್ಷೆ ಇದ್ದು, ಇವರಿಗೆ ಬೆಂಬಲ ಬೆಲೆ ನೀಡಬೇಕು. ಒಟ್ಟು 6 ಲಕ್ಷ ಟನ್ ಜೋಳವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖರೀದಿ ಮಾಡಬೇಕು ಎಂದು ಆಗ್ರಹಿಸಿದರು.

    ಜೋಳ ಖರೀದಿಯಲ್ಲಿ ರೈತರನ್ನು ದಲ್ಲಾಳಿಗಳು ಶೋಷಣೆ ಮಾಡುತ್ತಿದ್ದು, ಜೋಳಕ್ಕೆ 1,700 ರೂ. ಇದ್ದರೇ ದಲ್ಲಾಳಿಗಳು 1,200 ರೂ.ಗೆ ಖರೀದಿ ಮಾಡಿ 1,700 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಕೆ.ಎಂ.ಎಫ್‍ಗೆ ರೈತರು ನೇರವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಲು ಮುಖ್ಯಮಂತ್ರಿಗಳು ಗಮನ ಕೊಡಬೇಕು ಎಂದು ಸಲಹೆ ನೀಡಿದರು.

  • ಮಾಜಿ ಸಚಿವ ರೇವಣ್ಣಗೆ ಕೊರೊನಾ- ಬೇಸರ ವ್ಯಕ್ತಪಡಿಸಿದ ಸಿಟಿ ರವಿ, ಸುಧಾಕರ್

    ಮಾಜಿ ಸಚಿವ ರೇವಣ್ಣಗೆ ಕೊರೊನಾ- ಬೇಸರ ವ್ಯಕ್ತಪಡಿಸಿದ ಸಿಟಿ ರವಿ, ಸುಧಾಕರ್

    ಬೆಂಗಳೂರು: ಮಾಜಿ ಸಚಿವ ರೇವಣ್ಣ ಅವರಿಗಹೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಈ ಸಂಬಂಧ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಬೇಸರ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಸಿ.ಟಿ ರವಿ, ಜೆಡಿಎಸ್ ಪಕ್ಷದ ನಾಯಕರು, ಮಾಜಿ ಸಚಿವರು, ಹೊಳೆನರಸೀಪುರ ಕ್ಷೇತ್ರದ ಶಾಸಕ ಹೆಚ್.ಡಿ ರೇವಣ್ಣ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ಬೇಸರ ತಂದಿದೆ. ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಸುಧಾಕರ್ ಟ್ವೀಟ್ ಮಾಡಿ, ಮಾಜಿ ಸಚಿವರು, ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್.ಡಿ.ರೇವಣ್ಣ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ಬೇಸರ ತಂದಿದೆ. ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.

    ಸೋಂಕು ಬಂದ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರೇವಣ್ಣ ದಾಖಲಾಗಿದ್ದಾರೆ. ಎರಡು ತಿಂಗಳ ಹಿಂದೆ ರೇವಣ್ಣನವರ ಬೆಂಗಾವಲು ಪಡೆಯ 9 ಜನ ಪೊಲೀಸರಿಗೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಅವರಲ್ಲಿ ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಸಂದರ್ಭದಲ್ಲಿ ಅವರಿಗೆ ಪರೀಕ್ಷೆ ನಡೆಸಿದಾಗ ನೆಗೆಟಿವ್ ಬಂದಿತ್ತು.

    ಆಗಸ್ಟ್ 25 ರಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಅರಸೀಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಎಂ. ಶಿವಲಿಂಗೇಗೌಡ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಮಾಜಿ ಸಚಿವ ಎಚ್ ಡಿ ರೇವಣ್ಣಗೆ ಕೊರೊನಾ ಪಾಸಿಟಿವ್

    ಮಾಜಿ ಸಚಿವ ಎಚ್ ಡಿ ರೇವಣ್ಣಗೆ ಕೊರೊನಾ ಪಾಸಿಟಿವ್

    ಬೆಂಗಳೂರು: ಮಾಜಿ ಸಚಿವ ಎಚ್ ಡಿ ರೇವಣ್ಣ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

    ಸೋಂಕು ಬಂದ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರೇವಣ್ಣ ದಾಖಲಾಗಿದ್ದಾರೆ.

    ಎರಡು ತಿಂಗಳ ಹಿಂದೆ ರೇವಣ್ಣನವರ ಬೆಂಗಾವಲು ಪಡೆಯ 9 ಜನ ಪೊಲೀಸರಿಗೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಅವರಲ್ಲಿ ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಸಂದರ್ಭದಲ್ಲಿ ಅವರಿಗೆ ಪರೀಕ್ಷೆ ನಡೆಸಿದಾಗ ನೆಗೆಟಿವ್‌ ಬಂದಿತ್ತು.

    ಆಗಸ್ಟ್‌ 25 ರಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಮತ್ತು ಅರಸೀಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಎಂ. ಶಿವಲಿಂಗೇಗೌಡ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಕಚೇರಿಯಲ್ಲಿ ಏಜೆಂಟ್‍ಗಳಿದ್ದರೆ ಜನರಿಗೆ ಹೇಳಿ ಹೊಡೆಸುತ್ತೇನೆ: ಹೆಚ್.ಡಿ.ರೇವಣ್ಣ

    ಕಚೇರಿಯಲ್ಲಿ ಏಜೆಂಟ್‍ಗಳಿದ್ದರೆ ಜನರಿಗೆ ಹೇಳಿ ಹೊಡೆಸುತ್ತೇನೆ: ಹೆಚ್.ಡಿ.ರೇವಣ್ಣ

    -ಶಾಸಕರ ಹೆಸ್ರು ಹೇಳಿ ಹಣ ವಸೂಲಿ ಮಾಡ್ತೀರಾ?

    ಹಾಸನ: ನಗರದ ಸಬ್ ರಿಜಿಸ್ಟರ್ ಕಚೇರಿಗೆ ದಿಢೀರ್ ಭೇಟಿ ನೀಡಿ ಶಾಕ್ ಕೊಟ್ಟ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹಣದ ದಂಧೆ ನಡೆಸುತ್ತಿದ್ದೀರಾ ಎಂದು ಪ್ರಶ್ನಿಸಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

    ಹಾಸನದ ಸಬ್ ರಿಜಿಸ್ಟರ್ ಕಚೇರಿಗೆ ಯಾರಾದರೂ ಜಮೀನು ವಿಚಾರದಲ್ಲಿ ಹೋದರೇ ಹತ್ತು ಲಕ್ಷ ರಿಜಿಸ್ಟರ್ ಗೆ 10 ಸಾವಿರ, 20 ಲಕ್ಷಕ್ಕೆ 20 ಸಾವಿರ ಹಾಗೂ 30 ಲಕ್ಷಕ್ಕೆ 30 ಸಾವಿರ ರೂ ಫಿಕ್ಸ್ ಮಾಡಲಾಗಿದೆ ಎಂದು ರೇವಣ್ಣ ಪ್ರಶ್ನಿಸಿದರು. ಸಾರ್ವಜನಿಕರ ಸಮ್ಮುಖದಲ್ಲಿ ಕೇಳಲಾದ ಪ್ರಶ್ನೆಗೆ ಅಧಿಕಾರಿಗಳು ಉತ್ತರ ನೀಡದೇ ಮೌನವಾಗಿದ್ದರು. ನಾನು ಇಲ್ಲಿಗೆ ಬಂದಾಗ ಏಜೆಂಟ್ ಗಳು ನನ್ನ ಕಣ್ಣಿಗೆ ಏನಾದರೂ ಕಾಣಿಸಿದರೇ ಇಲ್ಲಿರುವ ಜನರಿಂದಲೇ ಓಡಾಡಿಸಿ ಹೊಡೆಯಲು ಹೇಳುತ್ತೇನೆ ಎಂದು ಎಚ್ಚರಿಕೆ ನೀಡಿದರು.

    ಒಂದೊಂದು ನಿವೇಶನಕ್ಕೂ ಬಡ ಜನರಿಂದ ಹಣ ಪಡೆಯುವ ನೀವು ಈ ಹಣವನ್ನು ಶಾಸಕರಿಗೆ ಕೊಡೊದಕ್ಕಾ? ನನ್ನ ವಿಧಾನಸಭಾ ಕ್ಷೇತ್ರದ ಎರಡು ಹೋಬಳಿ ಬರುತ್ತವೆ. ಅವರಿಗೆ ಯಾಕೆ ನೀವು ಕೆಲಸ ಮಾಡಿ ಕೊಡುತ್ತಿಲ್ಲ. ಯಾವ ಶಾಸಕರಿಗೆ ಹಣ ಕೊಡುತ್ತಿದ್ದೀರಾ? ಪ್ರತಿ ತಿಂಗಳು ನಾಲ್ಕು ಲಕ್ಷ ಕೊಡಬೇಕು ಅಂತಾ ಜನರಿಂದ ಹಣ ವಸೂಲಿ ಮಾಡುತ್ತಿದ್ದೀರ. ಸರ್ಕಾರಕ್ಕೆ ಕೊಡಲು ವಸೂಲಿ ಮಾಡುತ್ತಿದ್ದೀರಾ ಅಥವಾ ಬೇರೆ ಯಾರಿಗೆ ಕೊಡಲು ವಸೂಲಿ ಮಾಡುತ್ತಿದ್ದೀರಾ ಹೇಳಿ ಎಂದು ತರಾಟೆಗೆ ತೆಗೆದುಕೊಂಡರು.

    ನಿಮ್ಮ ಡ್ರಾಯರ್ ಎಲ್ಲ ತೆಗೆಯಿರಿ ಎಷ್ಟೆಷ್ಟು ಹಣ ಇರಬಹುದು ನೋಡೋಣ ಎಂದು ಅಧಿಕಾರಿಗಳಿಗೆ ಕೇಳಿದಾಗ ಅವರಿಂದ ಸಮರ್ಪಕ ಉತ್ತರ ಬರಲಿಲ್ಲ. ಇನ್ನು ರಿಜಿಸ್ಟರ್ ಆಗಿರುವ ಪಟ್ಟಿ ತೋರಿಸಿ, ದಿನಕ್ಕೆ ಎಷ್ಟು ರಿಜಿಸ್ಟರ್ ಮಾಡಲಾಗುತ್ತಿದೆ? ಸಿನಿಯಾರಿಟಿ ಮೇಲೆ ಮಾಡಲಾಗುತ್ತಿದಿಯಾ? ಇಲ್ಲ ಹಣ ಹೆಚ್ಚು ಕೊಟ್ಟವರಿಗೆ ಮೊದಲು ಆಗುತ್ತಿದಿಯಾ ಎಂದು ಆಕ್ರೋಶ ಹೊರಹಾಕಿದರು.

  • ಯಾರು ನಿರ್ನಾಮ ಆಗುತ್ತಾರೆಂದು ಮುಂದಿನ ಚುನಾವಣೆಯಲ್ಲಿ ನೋಡೋಣ: ರೇವಣ್ಣ

    ಯಾರು ನಿರ್ನಾಮ ಆಗುತ್ತಾರೆಂದು ಮುಂದಿನ ಚುನಾವಣೆಯಲ್ಲಿ ನೋಡೋಣ: ರೇವಣ್ಣ

    ಹಾಸನ: ನಾವು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ವಿರೋಧವಾಗಿದ್ದೇವೆ. ಬಿಜೆಪಿಯಾಗಲಿ, ಕಾಂಗ್ರೆಸ್ ಆಗಲಿ ನಾವು ಯಾರ ಮನೆ ಬಾಗಿಲಿಗೂ ಹೋಗಿಲ್ಲ ಎಂದು ಹೇಳುವ ಮೂಲಕ ಕುಮಾರಸ್ವಾಮಿ ಬಿಜೆಪಿಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎಂಬ ಸಿಪಿ.ಯೋಗೇಶ್ವರ್ ಹೇಳಿಕೆ ವಿರುದ್ಧ ಮಾಜಿ ಸಚಿವ ಹೆಚ್‍ಡಿ.ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ.

    ಹಾಸನದಲ್ಲಿ ಮಾತನಾಡಿದ ಅವರು, ಪಕ್ಷವನ್ನು ನಿರ್ನಾಮ ಮಾಡೋದು ದೇವರು ಅಥವಾ ಪ್ರಜೆಗಳು. ಯೋಗೇಶ್ವರ್ ಅವರಿಂದಲೋ ಬೇರೆ ಯಾರಿಂದಲೋ ಪಕ್ಷ ನಿರ್ನಾಮ ಮಾಡಲು ಸಾಧ್ಯವಿಲ್ಲ. ಯಾರು ನಿರ್ನಾಮ ಆಗುತ್ತಾರೆ ಎಂಬುದನ್ನು ಮುಂದಿನ ಚುನಾವಣೆಯಲ್ಲಿ ನೋಡೋಣ ಎಂದು ಯೋಗೇಶ್ವರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಬಗ್ಗೆ ಎಚ್‍ಡಿಕೆ ಸಾಫ್ಟ್ ಕಾರ್ನರ್ ಹೊಂದಿರುವುದು ಸತ್ಯ: ಬಸವರಾಜ್ ಹೊರಟ್ಟಿ

    ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಪಕ್ಷದ ಆರೋಪ ಬಗ್ಗೆ ಮಾತನಾಡಿದ ಅವರು, ಅವರಿಬ್ಬರು ರಾಷ್ಟ್ರೀಯ ಪಕ್ಷದವರು. ನಾವು ಹಗರಣದ ಬಗ್ಗೆ ಮಾತನಾಡಲು ಹೋದರೆ ವಿಧಾನಸಭೆಯಲ್ಲಿ ಚರ್ಚೆ ಮಾಡಿ ಅಂತಾರೆ. ಒಳ್ಳೆಯ ಕೆಲಸ ಮಾಡುತ್ತಿರುವಾಗ ಹೊಟ್ಟೆಯುರಿ ಬಂದು ಇವರು ಅಳುತ್ತಾರೆ ಅಂತಾರೆ ಎಂದು ಹೇಳಿದರು. ಇದನ್ನೂ ಓದಿ: 15 ದಿನ ಹಿಂದೆ ಕಾಂಗ್ರೆಸ್‌ಗೆ ಬರ್ತಿನಿ ಅಂತ ಯೋಗೇಶ್ವರ್‌ ನನ್ನ ಬಳಿ ಚರ್ಚಿಸಿದ್ದ – ಡಿಕೆಶಿ

    ಇದೇ ವೇಳೆ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನೇನಾದರೂ ಸಚಿವನಾಗಿದ್ದಾಗ ಹಣ ಪಡೆದು ವರ್ಗಾವಣೆ ಮಾಡಿದ್ರೆ, ಭ್ರಷ್ಟಾಚಾರ ಮಾಡಿದ್ರೆ ಇಂದೇ ರಾಜಕೀಯ ನಿವೃತ್ತಿ ಪಡೆಯುತ್ತಿದ್ದೆ. ಈ ಬಗ್ಗೆ ಯಾರಾದರೂ ಅಧಿಕಾರಿಗಳು ಹೇಳಲಿ. ಕೋವಿಡ್ ನಿರ್ವಹಣೆ ಸರಿಯಾಗಿ ಮಾಡದ ಸರ್ಕಾರ, ಎಷ್ಟು ದಿನ ಇರುತ್ತೋ ಅಷ್ಟು ದಿನ ಮಜಾ ಮಾಡಬೇಕು ಎಂದು ಹೊರಟಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಈ ಹಿಂದೆ ಹಾಸನ ಜಿಲ್ಲೆಗೆ ಅನುಮೋದನೆ ಕೊಟ್ಟಿರುವ ಕಾಮಗಾರಿಗಳು ಆಗದಿದ್ರೆ ಶಾಂತ ರೀತಿಯಲ್ಲಿ ಉಗ್ರ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಡಿಕೆಶಿ ಜೆಡಿಎಸ್ ಮುಗಿಸಲು ನೋಡುತ್ತಿದ್ದಾರೆ: ಎಚ್‍ಡಿಕೆ

  • ಕೊರೊನಾ ಮಧ್ಯೆ ಗರಿಗೆದರಿದ ರಾಜಕೀಯ- ಬಿಜೆಪಿಯಲ್ಲಿನ ಒಳಜಗಳದಿಂದ ಲಾಭ ಪಡೆದುಕೊಳ್ಳುತ್ತಾ ಕಾಂಗ್ರೆಸ್?

    ಕೊರೊನಾ ಮಧ್ಯೆ ಗರಿಗೆದರಿದ ರಾಜಕೀಯ- ಬಿಜೆಪಿಯಲ್ಲಿನ ಒಳಜಗಳದಿಂದ ಲಾಭ ಪಡೆದುಕೊಳ್ಳುತ್ತಾ ಕಾಂಗ್ರೆಸ್?

    – ಸಿದ್ದರಾಮಯ್ಯ ಭೇಟಿಯಾಗಿದ್ದ ಉಮೇಶ್ ಕತ್ತಿ?

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎಂಬ ಹೆಮ್ಮಾರಿ ತಾಂಡವವಾಡುತ್ತಿದ್ದು, ಈ ಮಧ್ಯೆ ರಾಜ್ಯ ರಾಜಕೀಯ ಚಟುವಟಿಕೆ ಗರಿಗೆದರಿದೆ. ಬಿಜೆಪಿ ಕೆಲ ಶಾಸಕರು ಬಂಡಾಯವೆದ್ದಿದ್ದು, ಪಕ್ಷದ ಈ ಒಳಜಗಳಗಳನ್ನು ಕಾಂಗ್ರೆಸ್ ಎನ್ ಕ್ಯಾಶ್ ಮಾಡಿಕೊಳ್ಳುತ್ತಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

    ಬಿಜೆಪಿಯಲ್ಲಿ ಶಾಸಕರು ಬಂಡಾಯವೇಳುತ್ತಿದ್ದಂತೆಯೇ ವಿರೋಧ ಪಕ್ಷದಲ್ಲಿ ಕೂಡ ರಾಜಕೀಯ ಮೇಲಾಟ ಶುರುವಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಕಳೆದ 15 ದಿನಗಳಿಂದ ಆಪರೇಷನ್ ಯಡಿಯೂರಪ್ಪ ಪ್ಲಾನ್ ನಡೆಯುತ್ತಿದೆ. ಈ ಪ್ಲಾನ್ ತಿಳಿದು ವಿರೋಧ ಪಕ್ಷಗಳು ಕಾದುನೋಡುವ ತಂತ್ರ ಅನುಸರಿಸುತ್ತಿವೆಯಂತೆ. ನಾಲ್ಕೈದು ದಿನದ ಹಿಂದೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಳಿಗೆ ಹೆಚ್.ಡಿ ರೇವಣ್ಣ ತೆರಳಿ ಮಾತುಕತೆ ನಡೆಸಿದ್ದಾರೆ. ಬಿಜೆಪಿಯ ಕೆಲ ಬಂಡಾಯ ಶಾಸಕರ ಜೊತೆಯೂ ಸಂಪರ್ಕ ಇದೆ ಅನ್ನೋ ಮಾಹಿತಿ ಇದೆ. ಆದರೆ ಸಿದ್ದರಾಮಯ್ಯ ಈಗ ಸಕಾಲ ಅಲ್ಲ, ಕಾಯೋಣ ಎಂದಿದ್ದಾರೆ ಎನ್ನಲಾಗಿದೆ.

    ರೇವಣ್ಣ ಕೂಡ ಸದ್ಯ ನಡೆಯುತ್ತಿರುವ ಬೆಳವಣಿಗೆಯನ್ನ ನಿರ್ಲಕ್ಷ್ಯ ಮಾಡೋದು ಬೇಡ ಎಂದು ಕಿವಿಮಾತು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆಯಿಂದ ಯಾರಿಗೆ ಲಾಭ?, ಯಾರಿಗೆ ನಷ್ಟವಾಗಲಿದೆ ಎಂಬುದು ಕುತೂಹಲವಾಗಿದೆ. ಇತ್ತ ರೇವಣ್ಣ ಭೇಟಿ ಬಳಿಕ ಸಿದ್ದರಾಮಯ್ಯ ಉಮೇಶ್ ಕತ್ತಿಯವರನ್ನು ಭೇಟಿ ಮಾಡಿದ್ದಾರೆಂಬ ಮಾಹಿತಿಯೂ ಲಭಿಸಿದೆ. ನಾಲ್ಕು ದಿನಗಳ ಹಿಂದೆಯೇ ಸಿದ್ದರಾಮಯ್ಯ ಭೇಟಿ ಮಾಡಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • ಯಡಿಯೂರಪ್ಪ ಮುಖ ನೋಡಿ ನಮಗೂ ಸಾಕಾಗಿದೆ: ರೇವಣ್ಣ ವ್ಯಂಗ್ಯ

    ಯಡಿಯೂರಪ್ಪ ಮುಖ ನೋಡಿ ನಮಗೂ ಸಾಕಾಗಿದೆ: ರೇವಣ್ಣ ವ್ಯಂಗ್ಯ

    ಹಾಸನ: ಸಿಎಂ ಯಡಿಯೂರಪ್ಪ ಅವರ ಮುಖ ನೋಡಿ ನಮಗೂ ಸಾಕಾಗಿದೆ. ಯಾವ ಟಿವಿ ನೋಡಿದರೂ ಮೋದಿ, ಯಡಿಯೂರಪ್ಪ ಅವರೇ ಬರುತ್ತಾರೆ ಎಂದು ಹಾಸನದಲ್ಲಿ ಮಾಜಿ ಸಚಿವ ರೇವಣ್ಣ ವ್ಯಂಗ್ಯವಾಡಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಮ್ಮ ಜಿಲ್ಲೆ ಹಾಸನವನ್ನು ಮೊದಲಿನಿಂದ ಗ್ರೀನ್‍ಜೋನ್ ಆಗಿ ಕಾಪಾಡಿಕೊಂಡು ಬಂದಿದ್ದೇವೆ. ಇದರಲ್ಲಿ ನಮ್ಮ ಜಿಲ್ಲೆಯ ಅಧಿಕಾರಿಗಳ ಶ್ರಮ ಇದೆ. ಆದರೆ ರಾಜ್ಯ ಸರ್ಕಾರ ಮುಂಬೈನಿಂದ ಬಂದವರನ್ನು ಚೆಕ್ ಮಾಡಿಸದೇ ಕರೆತಂದಿದ್ದರಿಂದ ಇಂದು ನಮ್ಮ ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗಿದೆ. ಪ್ರತಿ ದಿನ ಯಡಿಯೂರಪ್ಪ ಮೊದಲ ಪೇಜ್ ಜಾಹೀರಾತಿಗೆ ಹಣ ಖರ್ಚು ಮಾಡುವ ಬದಲು, ಬೇರೆ ಕಾರ್ಯಗಳಿಗೆ ಹಣ ವಿನಿಯೋಗಿಸಲಿ ಎಂದು ವ್ಯಂಗ್ಯವಾಡಿದರು.

    ಇದೇ ವೇಳೆ ಮುಂಬೈಯಿಂದ ಹಾಸನಕ್ಕೆ ಬರುವವರಿಗೆ ಸರ್ಕಾರ ಅನುಮತಿ ನೀಡಿದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹೆಚ್‍ಡಿ ರೇವಣ್ಣ, ಮುಂಬೈನಿಂದ ಹಾಸನಕ್ಕೆ ಬರಲಿ ಬೇಡ ಎನ್ನುವುದಿಲ್ಲ. ಆದರೆ ಅವರು ಕೊರೊನಾ ಟೆಸ್ಟ್ ಮಾಡಿಸಿಕೊಂಡು, ಚಿಕಿತ್ಸೆ ಪಡೆದುಕೊಂಡು ಬರಲಿ ಎಂದರು. ಇದೇ ವೇಳೆ ಕೊರೊನಾ ಪ್ರಕರಣದ ಬಗ್ಗೆ ಮಾತನಾಡಿದ ರೇವಣ್ಣ, ಇಂದು 13 ಹೊಸ ಪ್ರಕರಣಗಳು ಬರುತ್ತಂತೆ. ಅದರಲ್ಲಿ ಮೂವರು ಸೀರಿಯಸ್ಸ್ ಅಂತೆ ಎಂದು ಮಾಹಿತಿ ನೀಡಿದರು.

    ಬುಧವಾರವಷ್ಟೇ ಹಾಸನದಲ್ಲಿ 21 ಕೊರೊನಾ ಪ್ರಕರಣಗಳು ಕಂಡುಬಂದಿದ್ದು, ಜೊತೆಗೆ ಇಂದು 13 ಪ್ರಕರಣಗಳು ಬಂದಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 66ಕ್ಕೇರಿದೆ. ಚನ್ನರಾಯಪಟ್ಟಣ ತಾಲೂಕಿನಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ಕಂಡು ಬಂದಿದ್ದು, ಮುಂಬೈನಿಂದ ವಾಪಸ್ ಬಂದವರಲ್ಲೇ ಹೆಚ್ಚು ಕೊರೊನಾ ಕಾಣಿಸಿಕೊಳ್ಳುತ್ತಿದೆ. ಆದರೆ ಅವರೆಲ್ಲರನ್ನೂ ಕ್ವಾರಂಟೈನ್ ಅಲ್ಲಿ ಇಟ್ಟಿರುವುದು ಜಿಲ್ಲೆಯ ಜನರ ಆತಂಕ ಕಡಿಮೆ ಮಾಡಿದೆ.

  • ಬಂಧಿಸಿದ್ರೆ ಜೈಲಿನಲ್ಲಿ ಊಟನಾದ್ರೂ ಸಿಗುತ್ತೆ: ರೇವಣ್ಣ ವ್ಯಂಗ್ಯ

    ಬಂಧಿಸಿದ್ರೆ ಜೈಲಿನಲ್ಲಿ ಊಟನಾದ್ರೂ ಸಿಗುತ್ತೆ: ರೇವಣ್ಣ ವ್ಯಂಗ್ಯ

    ಹಾಸನ: ನಾನು ಮಾಸ್ಕ್ ಹಾಕದೆ ಹೊರಗೆ ಹೋಗುತ್ತೇನೆ. ಬೇಕಾದರೆ ನನ್ನನ್ನು ಬಂಧಿಸಲಿ. ಜೈಲಿನಲ್ಲಿ ಊಟನಾದರೂ ಸಿಗುತ್ತೆ ಎಂದು ಪ್ರಸ್ತುತ ಸ್ಥಿತಿಯ ಬಗ್ಗೆ ಮಾಜಿ ಸಚಿವ ರೇವಣ್ಣ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ರೇವಣ್ಣ ಆಕ್ರೋಶ ಹೊರಹಾಕಿದ್ರು.

    ದೇಶದ ಪ್ರಧಾನಿ ಮತ್ತು ಸಿಎಂ ಹೇಳಿದ ಹಾಗೆ ಜನರು ಪಾಲಿಸಿದ್ದಾರೆ. ಅವರು ರಾಷ್ಟ್ರದ ದೊರೆ. ರಾಷ್ಟ್ರದ ದೊರೆ ಹೇಳಿದ ಹಾಗೆ ಕೇಳಿದ್ದೇವೆ. ದೀಪ ಹಚ್ಚಿ ಅಂದ್ರು ಹಚ್ಚಿದೆವು. ಯೋಗ ಮಾಡಿ, ಕ್ಲಾಪ್ ಮಾಡಿ ಅಂದ್ರು ಮಾಡಿದ್ದೀವಿ. ಆದರೆ ಈಗ ನಮ್ಮ ರಾಷ್ಟ್ರದ ದೊರೆ ಹಸಿದ ಹೊಟ್ಟೆಗೆ ಅನ್ನ ಕೊಡಲಿ ಎಂದು ಆಗ್ರಹಿಸಿದರು.

    ರಾಜ್ಯದ ಜನರು ಸಿಎಂ ಫಂಡ್ ಗೆ ನೀಡಿರುವ ಹಣದ ಬಗ್ಗೆ ಶ್ವೇತಪತ್ರ ಹೊರಡಿಸಲಿ. ಹಣ ಇಲ್ಲ ಎಂದರೆ ಸಿಎಂಗೆ ಹಣ ಎಲ್ಲಿಂದ ಬರುತ್ತೆ ಅಂತ ನಾವು ತೋರಿಸುತ್ತೇವೆ. ಪಕ್ಷಾತೀತವಾಗಿ ಜನರ ಸಮಸ್ಯೆ ಬಗ್ಗೆ ನಾವು ಕೈಜೋಡಿಸುತ್ತೇವೆ ಎಂದು ಕಿಡಿಕಾರಿದರು.

    ಶಾಸಕರ ಮತ್ತು ವಿಧಾನ ಪರಿಷತ್ ಸದಸ್ಯರ ನಿಧಿ ಸ್ಥಗಿತಗೊಳಿಸಿದ್ದಾರೆ. ದಯಮಾಡಿ ಸಿಎಂ ಶಾಸಕರ ನಿಧಿ ಸ್ಥಗಿತಗೊಳಿಸಬಾರದು ಎಂದು ಮನವಿ ಮಾಡಿದ ರೇವಣ್ಣ, ಸರ್ಕಾರದ ನಡೆ ಬಗ್ಗೆ ಗರಂ ಆದರು.

  • ರೇವಣ್ಣ ಕೆಲಸ ಆಗ್ತಿವೆ, ನಮ್ಮ ಕೆಲಸ ಆಗ್ತಿಲ್ಲ: ಜೆಡಿಎಸ್ ಶಾಸಕರ ಟಾಂಗ್

    ರೇವಣ್ಣ ಕೆಲಸ ಆಗ್ತಿವೆ, ನಮ್ಮ ಕೆಲಸ ಆಗ್ತಿಲ್ಲ: ಜೆಡಿಎಸ್ ಶಾಸಕರ ಟಾಂಗ್

    ಬೆಂಗಳೂರು: ಮಾಜಿ ಸಚಿವ ಹೆಚ್.ಡಿ.ರೇವಣ್ಣ ಯಾವ ಸರ್ಕಾರ ಬಂದರೂ ಹೈಲೈಟ್ ಆಗ್ತಾ ಇರ್ತಾರೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲೂ ರೇವಣ್ಣ ಕೆಲಸಗಳು ಆಗ್ತಿದ್ದವಂತೆ. ಈಗ ಯಡಿಯೂರಪ್ಪ ಸರ್ಕಾರದಲ್ಲೂ ಕೆಲಸಗಳು ಆಗ್ತಿವೆ ಅನ್ನೋ ಚರ್ಚೆ ಇವತ್ತು ನಡೆಯಿತು. ಈ ಮಾತನ್ನ ಹೇಳಿದ್ದು ಬೇರೆ ಯಾರು ಅಲ್ಲ, ಜೆಡಿಎಸ್ ಶಾಸಕರೇ ಹೀಗೆ ಹೇಳಿದ್ದು ವಿಶೇಷ.

    ಅಂದಹಾಗೆ ವಿಧಾನಸಭೆಯ ಸಭಾಂಗಣದಲ್ಲಿ ಇವತ್ತು ಮಾಧ್ಯಮ ಗ್ಯಾಲರಿ ಮುಂದೆ ಹೆಚ್.ಡಿ.ರೇವಣ್ಣ ಬಂದು ನಿಂತು ಮಾತಾಡುತ್ತಿದ್ದರು. ಆಗ ಜೆಡಿಎಸ್ ಶಾಸಕರಾದ ಶಿವಲಿಂಗೇಗೌಡ, ಪುಟ್ಟರಾಜು, ಹೆಚ್.ಕೆ.ಕುಮಾರಸ್ವಾಮಿ ಆಗಮಿಸಿದರು. ಇವತ್ತು ಯಡಿಯೂರಪ್ಪ ರೇವಣ್ಣನವರನ್ನ ಕರೆದು ಮಾತಾಡಿಸಿದ್ದಾರೆ, ಅವರ ಕೆಲಸ ಆಗ್ತಿವೆ ಬಿಡಿ ಅಂದ್ರು ಶಿವಲಿಂಗೇಗೌಡ. ಆಗ ಅಂಯ್ಯೋ ಸುಮ್ನೆ ಇರಣ್ಣ, ನಮ್ ಕೆಲಸಗಳು ಆಗ್ತಿಲ್ಲ ಅಂತಾ ರೇವಣ್ಣ ನಕ್ಕರು. ಆಗ ತಕ್ಷಣ ರಿಯಾಕ್ಟ್ ಮಾಡಿದ ಪುಟ್ಟರಾಜು, ಅಣ್ಣ ಕೊಡಣ್ಣ ಯಾವ ಕೆಲಸ ಆಗಿಲ್ಲ, ನಾನೇ ಸಿಎಂ ಹತ್ತಿರ ಹೋಗಿ ಸಹಿ ಮಾಡಿಸಿಕೊಂಡು ಬರ್ತೀನಿ ಅಂತಾ ಕೇಳಿದರು.

    ಇನ್ನು ಇದೇ ವೇಳೆ ಹೆಚ್.ಕೆ.ಕುಮಾರಸ್ವಾಮಿ ಅಯ್ಯೋ ಸುಮ್ನಿರಿ, ಅವರ ಕೆಲಸ ಚೆನ್ನಾಗಿಯೇ ಆಗ್ತಿವೆ. ನಮ್ ಕೆಲಸ ಆಗ್ತಿಲ್ಲ. ಆ ಸರ್ಕಾರದಲ್ಲೂ ಆಗ್ಲಿಲ್ಲ, ಈಗಲೂ ಆಗ್ತಿಲ್ಲ. ಎಷ್ಟು ಕೆಲಸಗಳು ಹಂಗೆ ಇವೆ ಅಂತಾ ಗೊಣಗಿಕೊಂಡು ಹೋದರು. ಇದರ ಬೆನ್ನಲ್ಲೇ ಅಯ್ಯೋ ಬಾರಣ್ಣ ಸುಮ್ನೆ ಮಾತೇಕೆ ಅಂತಾ ಶಿವಲಿಂಗೇಗೌಡರನ್ನ ಕರೆದುಕೊಂಡು ಪುಟ್ಟರಾಜು ಹೊರನಡೆದ್ರು. ಕಡೆಗೆ ಇದ್ದ ರೇವಣ್ಣ ಅಯ್ಯೋ ಸುಮ್ನಿರಿ ಅವರು ಹಂಗೆ ಹೇಳ್ತಾರೆ ಅಂತಾ ಸ್ಮೈಲ್ ಕೊಟ್ಟು, ತಮ್ಮ ಸೀಟಿಗೆ ಹೋದರು.

  • ಗೃಹಮಂತ್ರಿಗಳೇ ಪೊಲೀಸ್ರನ್ನು ಸೈಟ್ ಮಾರಿ ದುಡ್ಡು ಮಾಡಲು ಬಿಟ್ಟಿದ್ದೀರಾ: ರೇವಣ್ಣ

    ಗೃಹಮಂತ್ರಿಗಳೇ ಪೊಲೀಸ್ರನ್ನು ಸೈಟ್ ಮಾರಿ ದುಡ್ಡು ಮಾಡಲು ಬಿಟ್ಟಿದ್ದೀರಾ: ರೇವಣ್ಣ

    – ದೊರೆಸ್ವಾಮಿಯವರಲ್ಲಿ ಯತ್ನಾಳ್ ಕ್ಷಮೆ ಕೇಳಬೇಕು

    ಹಾಸನ: ರಾಜ್ಯದ ಗೃಹ ಮಂತ್ರಿಗಳೇ ಪೊಲೀಸರನ್ನು ಸೈಟ್ ಮಾರಿ ದುಡ್ಡು ಮಾಡಲು ಬಿಟ್ಟಿದ್ದೀರಾ ಎಂದು ಮಾಜಿ ಸಚಿವ ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ.

    ಹಾಸನದಲ್ಲಿ ಸೈಟ್ ದಂಧೆ ನಡೆಯುತ್ತಿರುವ ಬಗ್ಗೆ ಅಸಮಾಧಾನ ಹೊರಹಾಕಿದ ರೇವಣ್ಣ, ಹಾಸನ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ರೈತರು 700 ಎಕರೆ ಜಮೀನು ಕೊಟ್ಟಿದ್ದಾರೆ. ಇದರಿಂದ ಸುಮಾರು 12 ಸಾವಿರ ನಿವೇಶನ ಆಗಲಿದೆ. ಜನರಿಗೂ ಕೂಡ ಕಡಿಮೆ ದರಕ್ಕೆ ಸೈಟ್ ಸಿಗುತ್ತೆ. ಜಮೀನು ಕೊಟ್ಟ ರೈತರಿಗೂ ಶೇ.50ರಷ್ಟು ಹಣ ದೊರೆಯಲಿದೆ. ಆದರೆ ಹಾಸನದಲ್ಲಿ ಹೌಸಿಂಗ್ ಬೋರ್ಡ್, ಪ್ರಾಧಿಕಾರಗಳಿಂದ ಕೆಲಸ ಆಗುತ್ತಿಲ್ಲ ಎಂದು ಕಿಡಿಕಾರಿದರು.

    ಖಾಸಗಿಯವರ ಸೈಟ್ ದಂಧೆ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲದೆ ಈಗ ಪೊಲೀಸರು ಕೂಡ ಸೈಟ್ ಮಾಡಲು ಹೊರಟಿದ್ದಾರೆ. ರಾಜ್ಯದ ಗೃಹ ಮಂತ್ರಿಗಳೇ ಪೊಲೀಸರನ್ನು ಸೈಟ್ ಮಾರಿ ದುಡ್ಡು ಮಾಡಲು ಬಿಟ್ಟಿದ್ದೀರಾ ಎಂದು ರೇವಣ್ಣ ಗರಂ ಆಗಿದ್ದಾರೆ.

    ಈ ಬಗ್ಗೆ ಡಿಸಿಯವರ ಗಮನಕ್ಕೆ ತಂದಿದ್ದೇನೆ. ನಗರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಯೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಾನೇನಾದರೂ ಸಚಿವನಾಗಿದ್ರೆ ಅವನನ್ನು ಒದ್ದು ಒಳಗೆ ಹಾಕಿಸುತ್ತಿದ್ದೆ. ಪಿಡಿಓಗಳು ಕೂಡ ದುಡ್ಡು ಕೊಟ್ಟರೆ ಯಾವುದಕ್ಕೆ ಬೇಕಾದ್ರು ನಿರಾಪೇಕ್ಷಣಾ ಪತ್ರ(ಎನ್‍ಓಸಿ) ಕೊಡ್ತಿದ್ದಾರೆ. ಹಾಸನದಲ್ಲಿ ಸೈಟ್ ದಂಧೆ ನಡೆಯುತ್ತಿದ್ದು, ಹಾಸನ ನಗರ ನಾಶ ಆಗುತ್ತಿದೆ. ಆದರೆ ಹೇಳೋರು ಕೇಳೋರು ಯಾರೂ ಇಲ್ಲ. ರೌಡಿಗಳು ಚಾಕು ತೋರಿಸಿ ಹೆದರಿಸುತ್ತಿದ್ದಾರೆ. ಸರ್ಕಾರ ಖಾಸಗಿಯವರ ಜೊತೆ ಶಾಮೀಲಾದಂತೆ ಕಾಣುತ್ತಿದೆ ಎಂದು ರೇವಣ್ಣ ಅಸಮಾಧಾನ ಹೊರಹಾಕಿದ್ದಾರೆ.

    ಯತ್ನಾಳ್ ಕ್ಷಮೆ ಕೇಳಬೇಕು:
    ಇದೇ ವೇಳೆ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಬಗ್ಗೆ ಮಾತನಾಡಿದ ಬಿಜೆಪಿ ಸಚಿವ ಯತ್ನಾಳ್ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ರೇವಣ್ಣ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ದೊರೆಸ್ವಾಮಿ ಪಾಕ್ ಏಜೆಂಟ್, ದೇಶದ್ರೋಹದ ಪೋಸ್ಟ್ ಹಾಕಿದ್ರೆ ಬೀಳುತ್ತೆ ಗುಂಡೇಟು: ಯತ್ನಾಳ್ ವಾರ್ನಿಂಗ್

    ದೊರೆಸ್ವಾಮಿ ಬಗ್ಗೆ ಅತೀ ಹೆಚ್ಚಿನ ಗೌರವ ತೋರಿಸಬೇಕು. ಅವರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಎಲ್ಲಿಯೇ ಅನ್ಯಾಯ ಆದರೂ ಹೋರಾಡುತ್ತಾರೆ. ಯತ್ನಾಳ್ ಬಗ್ಗೆ ಗೌರವ ಇದೆ. ಅವರ ಬಾಯಲ್ಲಿ ಈ ರೀತಿ ಮಾತು ಬರಬಾರದಿತ್ತು. ಇದನ್ನು ನಾನು ಖಂಡಿಸುತ್ತೇನೆ. ಈ ಬಗ್ಗೆ ಯತ್ನಾಳ್ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ರೇವಣ್ಣ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಯುವಕರಿಗೆ ದಾರಿದೀಪವಾಗಿರುವ ದೊರೆಸ್ವಾಮಿಯನ್ನು ನಿಂದಿಸಿದ ಯತ್ನಾಳ್‍ರನ್ನು ಜೈಲಿಗೆ ಹಾಕಿ – ಜಾಲತಾಣಗಳಲ್ಲಿ ಪೋಸ್ಟ್