Tag: HD Revanna

  • ಹಾಸನಾಂಬೆ ದರ್ಶನಕ್ಕೆ ಆಗಮಿಸಿದ ರೇವಣ್ಣ ದಂಪತಿ – ಕಾರು ತಡೆದಿದ್ದಕ್ಕೆ ಫುಲ್ ಗರಂ

    ಹಾಸನಾಂಬೆ ದರ್ಶನಕ್ಕೆ ಆಗಮಿಸಿದ ರೇವಣ್ಣ ದಂಪತಿ – ಕಾರು ತಡೆದಿದ್ದಕ್ಕೆ ಫುಲ್ ಗರಂ

    – ಪ್ರಜ್ವಲ್, ಸೂರಜ್, ನಿಖಿಲ್, ಹೆಚ್‌ಡಿಕೆ ಹೆಸರಿನಲ್ಲಿ ಅರ್ಚನೆ

    ಹಾಸನ: ಮಾಜಿ ಸಚಿವ ಹೆಚ್.ಡಿ.ರೇವಣ್ಣ (H D Revanna) ದಂಪತಿ ಹಾಸನಾಂಬೆಯ ದೇವಾಯಲಕ್ಕೆ (Hasanambe Temple) ಭೇಟಿ ನೀಡಿ, ದೇವಿ ದರ್ಶನ ಪಡೆದಿದ್ದಾರೆ. ಶಿಷ್ಟಾಚಾರ ಪಾಲನೆ ಅಧಿಕಾರಿಗಳ ಗಮನಕ್ಕೆ ತಾರದೇ ರೇವಣ್ಣ ನೇರವಾಗಿ ದೇಗುಲಕ್ಕೆ ಆಗಮಿಸಿದ್ದಾರೆ.

    ಮಾಜಿ ಪ್ರಧಾನಿ ಕುಟುಂಬದ ಹಿನ್ನೆಲೆಯಲ್ಲಿ ವಿಶೇಷ ಭದ್ರತೆ ಹೊಂದಿರುವ ರೇವಣ್ಣ ಅವರು ತಮ್ಮದೇ ಕಾರಿನಲ್ಲಿ ತಮ್ಮದೇ ಭದ್ರತಾ ವ್ಯವಸ್ಥೆಯೊಂದಿಗೆ ದೇವಿ ದರ್ಶನಕ್ಕೆ ಆಗಮಿಸಿದ್ದರು. ಈ ವೇಳೆ ಅವರ ಕಾರನ್ನ ತಡೆದ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ರೇವಣ್ಣ ಗರಂ ಆಗಿದ್ದಾರೆ. ಇದನ್ನೂ ಓದಿ: ಆರ್‌ಎಸ್‌ಎಸ್ ಬ್ಯಾನ್ ಮಾಡ್ಬೇಕು ಅಂತ ನಾನೆಲ್ಲಿ ಹೇಳಿದ್ದೇನೆ? – ಪ್ರಿಯಾಂಕ್ ಖರ್ಗೆ

    ಪತ್ನಿ ಭವಾನಿ ರೇವಣ್ಣ ಜೊತೆ ಸಾವಿರ ರೂ. ಟಿಕೆಟ್ ಪಡೆದು ನೇರ ದರ್ಶನಕ್ಕೆ ರೇವಣ್ಣ ಆಗಮಿಸಿದ್ದರು. ಬಳಿಕ ಅರ್ಧ ಗಂಟೆಗೂ ಹೆಚ್ಚು ಕಾಲ ವಿಶೇಷ ಪೂಜೆ ಸಲ್ಲಿಸಿದರು. ಹೆಚ್.ಡಿ.ದೇವೇಗೌಡರು, ಚೆನ್ನಮ್ಮ, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಸೂರಜ್ ರೇವಣ್ಣ, ಪ್ರಜ್ವಲ್ ರೇವಣ್ಣ ಸೇರಿ ಕುಟುಂಬ ಸದಸ್ಯರ ಹೆಸರಿನಲ್ಲಿ ಅರ್ಚನೆ ಮಾಡಿಸಿದರು.

    ಬ್ಯಾಹ್ಮಿ, ಕೌಮಾರಿ, ಮಹೇಶ್ವರಿ ಮೂರು ದೇವರ ಮೇಲಿದ್ದ ಕುಂಕುಮ ಕೇಳಿ ಪಡೆದ ರೇವಣ್ಣ, ಪ್ರತ್ಯೇಕವಾಗಿ ಬಾಕ್ಸ್ನಲ್ಲಿ ಕುಂಕುಮ, ದೇವರ ಮೇಲಿದ್ದ ಹೂವು ಕೊಂಡೊಯ್ದರು. ಈ ವೇಳೆ ರೇವಣ್ಣ ದಂಪತಿಗೆ ಹಾಸನ ಮಹಾನಗರ ಪಾಲಿಕೆ ಮೇಯರ್ ಗಿರೀಶ್ ಸಾಥ್ ನೀಡಿದ್ದಾರೆ.

  • ತವರು ಜಿಲ್ಲೆಯಲ್ಲಿ ಟೆಂಪಲ್ ರನ್ – ರೇವಣ್ಣ ಜೊತೆಗೂಡಿ ಮನೆದೇವರ ದರ್ಶನ ಪಡೆದ ಕುಮಾರಸ್ವಾಮಿ

    ತವರು ಜಿಲ್ಲೆಯಲ್ಲಿ ಟೆಂಪಲ್ ರನ್ – ರೇವಣ್ಣ ಜೊತೆಗೂಡಿ ಮನೆದೇವರ ದರ್ಶನ ಪಡೆದ ಕುಮಾರಸ್ವಾಮಿ

    ಹಾಸನ: ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರಿಂದು ತವರು ಜಿಲ್ಲೆಗೆ ಆಗಮಿಸಿದ್ದು, ಕೇಂದ್ರ ಸಚಿವರಾದ ಬಳಿಕ ಮೊದಲಬಾರಿಗೆ ಮನೆ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ.

    ಚನ್ನರಾಯಪಟ್ಟಣ ತಾಲೂಕಿನ ಯಲಿಗೂರು ಗ್ರಾಮದಲ್ಲಿರುವ ದೇವೀರಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಹೊಳೆನರಸೀಪುರ ತಾಲ್ಲೂಕಿನ, ಮಾವಿನಕೆರೆಯ ಶ್ರೀ ರಂಗನಾಥ ಸ್ವಾಮಿ ದೇವಾಲಯಕ್ಕೆ ಆಗಮಿಸಿದ್ದಾರೆ. ದೇವಾಲಯದಲ್ಲಿ ನೆಲೆದ ಮೇಲೆ ಕುಳಿತು ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: 12 ವರ್ಷಗಳ ಬಳಿಕ ಉತ್ತರ ಪ್ರದೇಶದಲ್ಲಿ ಮಹಾ ಕುಂಭಮೇಳ – ಸಿದ್ಧತೆ ಹೇಗಿದೆ? ವಿಶೇಷತೆಗಳೇನು?

    ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಚೆನ್ನಮ್ಮ, ಪುತ್ರ, ಸೊಸೆ, ಮೊಮ್ಮಗನ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದಾರೆ. ಇದೇ ವೇಳೆ ಹೆಚ್‌ಡಿಕೆ ಸಹೋದರನೂ ಆಗಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna), ಶಾಸಕ ಸಿ.ಎನ್ ಬಾಲಕೃಷ್ಣ ಜೊತೆಯಾಗಿದ್ದಾರೆ. ಇದನ್ನೂ ಓದಿ: Brazil | ಮನೆ, ಮಳಿಗೆಗಳಿಗೆ ಅಪ್ಪಳಿಸಿದ ಲಘು ವಿಮಾನ – ಎಲ್ಲಾ 10 ಮಂದಿ ಪ್ರಯಾಣಿಕರು ದುರ್ಮರಣ

    ಹೆಚ್‌ಡಿಕೆ ಜೊತೆಗೆ ದೇವಸ್ಥಾನಕ್ಕೆ ಭೇಟಿ ನೀಡಿದ ರೇವಣ್ಣ, ಪತ್ನಿ ಭವಾನಿ ರೇವಣ್ಣ, ಪುತ್ರರಾದ ಸೂರಜ್, ಪ್ರಜ್ವಲ್ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದಾರೆ. ಸಂಕಷ್ಟಗಳು ದೂರಾಗಲೆಂದು ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಸುವರ್ಣಸೌಧದಲ್ಲಿ ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನ ಪ್ರಕರಣ – ಹೆಬ್ಬಾಳ್ಕರ್‌ ಆಪ್ತ ಸೇರಿ 10 ಜನರ ವಿರುದ್ಧ FIR

  • ಕಳೆದ 50 ವರ್ಷದಲ್ಲಿ ಹಾಸನಕ್ಕೆ ಕಾಂಗ್ರೆಸ್ ಕೊಡುಗೆ ಏನು: ಹೆಚ್‌ಡಿ ರೇವಣ್ಣ ಪ್ರಶ್ನೆ

    ಕಳೆದ 50 ವರ್ಷದಲ್ಲಿ ಹಾಸನಕ್ಕೆ ಕಾಂಗ್ರೆಸ್ ಕೊಡುಗೆ ಏನು: ಹೆಚ್‌ಡಿ ರೇವಣ್ಣ ಪ್ರಶ್ನೆ

    – ದೇವೇಗೌಡರು ಇರಲಿಲ್ಲ ಅಂದಿದ್ರೆ ಹಾಸನ ಅಭಿವೃದ್ಧಿಯಾಗುತ್ತಿರಲಿಲ್ಲ
    -2028ರ ರಣರಂಗದಲ್ಲಿ ಎಲ್ಲವೂ ಗೊತ್ತಾಗುತ್ತೆ ಎಂದ ಶಾಸಕ

    ನವದೆಹಲಿ: ಕಳೆದ ಐವತ್ತು ವರ್ಷದಲ್ಲಿ ಹಾಸನಕ್ಕೆ ಕಾಂಗ್ರೆಸ್‌ನವರ ಕೊಡುಗೆ ಏನು? ದೇವೇಗೌಡರು ಇಲ್ಲ ಅಂದಿದ್ದರೆ ಹಾಸನ (Hassan) ಅಭಿವೃದ್ಧಿಯಾಗುತ್ತಿರಲಿಲ್ಲ ಎಂದು ಹೊಳೆನರಸೀಪುರದ ಶಾಸಕ ಹೆಚ್.ಡಿ ರೇವಣ್ಣ (HD Revanna) ಹೇಳಿದರು.

    ರಾಜಧಾನಿ ದೆಹಲಿಯಲ್ಲಿ `ಪಬ್ಲಿಕ್ ಟಿವಿ’ಯೊಂದಿಗೆ ಹಾಸನದ ಕಾಂಗ್ರೆಸ್ (Congress) ಸಮಾವೇಶ ವಿಚಾರವಾಗಿ ಮಾತನಾಡಿದ ಅವರು, ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ, ಶಕ್ತಿ ಪ್ರದರ್ಶನ ನಡೆಯುತ್ತಿದೆ. ಕಳೆದ ಐವತ್ತು ವರ್ಷದಲ್ಲಿ ಹಾಸನಕ್ಕೆ ಕಾಂಗ್ರೆಸ್‌ನವರ ಕೊಡುಗೆ ಏನು? ಕಾಂಗ್ರೆಸ್‌ನಿಂದ ಹಾಸನ ನಗರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ದೇವೇಗೌಡರು ಇಲ್ಲ ಅಂದಿದ್ದರೆ ಹಾಸನ, ಅರಸೀಕೆರೆ ರೈಲು ಮಾರ್ಗ ಇರುತ್ತಿರಲಿಲ್ಲ, ಹಾಸನ ಅಭಿವೃದ್ಧಿಯಾಗುತ್ತಿರಲಿಲ್ಲ ಎಂದು ಕಿಡಿಕಾರಿದರು.ಇದನ್ನೂ ಓದಿ: ಸಿದ್ದಗಂಗಾ ಮಠದ ಶಿವಕುಮಾರಸ್ವಾಮಿ ಪುತ್ಥಳಿ ವಿರೂಪಗೊಳಿಸಿದ್ದ ಆರೋಪಿ ಬಂಧನ

    ಈಗ ಏನು ಮಾತನಾಡಲ್ಲ 2028ಕ್ಕೆ ಮಾತನಾಡುತ್ತೇನೆ. ಇಂತಹ ಹತ್ತು ಸಮಾವೇಶ ಮಾಡಲಿ, ನಮಗೇನು ಪರಿಣಾಮ ಬೀರಲ್ಲ. ಜನರ ದೇವರ ಆಶೀರ್ವಾದ ಇದೆ. ಜೆಡಿಎಸ್ (JDS) ಕಂಡರೆ ಕಾಂಗ್ರೆಸ್‌ನವರು ಭಯ ಪಡುತ್ತಾರೆ. 2018ರಲ್ಲಿ ಯಾರು ಬಂದು ಕಾಲು ಕಟ್ಟಿದ್ದರೋ? ಹದಿನಾಲ್ಕು ತಿಂಗಳು ಆದಮೇಲೆ ಸರ್ಕಾರ ಯಾರು ತೆಗೆದರು? ಹಾಸನದಲ್ಲಿ ಲೋಕಸಭೆ ಚುನಾವಣೆ ಹೇಗಾಯಿತು? ಕಡೆಯ ಮೂರು ದಿನದಲ್ಲಿ ಏನಾಯಿತು? 2028 ರಣರಂಗದಲ್ಲಿ ಎಲ್ಲವೂ ಗೊತ್ತಾಗುತ್ತದೆ. ಸಮಯ ಬಂದಾಗ ಮಾತನಾಡುತ್ತೀನಿ ಎಂದು ವಾಗ್ದಾಳಿ ನಡೆಸಿದರು.

    ಚನ್ನಪಟ್ಟಣದಲ್ಲಿ (Channapatna) ರಾಷ್ಟ್ರೀಯ ಪಕ್ಷಕ್ಕೆ ಅಭ್ಯರ್ಥಿ ಇರಲಿಲ್ಲ ಬಿಜೆಪಿಯಿಂದ ಕರೆ ತಂದರು. ಜೆಡಿಎಸ್, ದೇವೇಗೌಡರನ್ನು ಮುಗಿಸಲು ಯಾರಿಂದಲು ಸಾಧ್ಯವಿಲ್ಲ. ಸಮಾವೇಶದ ಬಗ್ಗೆ ತಲೆಕೆಡಿಸಿಕೊಳ್ಳಲ್ಲ, ಹೆದರಲ್ಲ. ಆರು ಬಾರಿ ಶಾಸಕನಾಗಿ ನಾನು ಇಂತಹದ್ದನ್ನು ಬಹಳ ನೋಡಿದ್ದೇನೆ. ಇದಕ್ಕೆಲ್ಲಾ ಹೆದರಿ ಓಡುವ ಮಾತೇ ಇಲ್ಲ ಎಂದು ಹೇಳಿದರು.ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮಹಾಯುತಿ 2.0 ಸರ್ಕಾರ – ಸಿಎಂ ಆಗಿ ದೇವೇಂದ್ರ ಫಡ್ನವೀಸ್ ಇಂದು ಪ್ರಮಾಣವಚನ

  • ಕುಮಾರಸ್ವಾಮಿ ಇಲ್ಲದೇ ಹೋಗಿದ್ರೆ ಜಿಟಿಡಿ ಮಗನೊಂದಿಗೆ ಜೈಲಿನಲ್ಲಿರಬೇಕಿತ್ತು – ಹೆಚ್‌.ಡಿ ರೇವಣ್ಣ

    ಕುಮಾರಸ್ವಾಮಿ ಇಲ್ಲದೇ ಹೋಗಿದ್ರೆ ಜಿಟಿಡಿ ಮಗನೊಂದಿಗೆ ಜೈಲಿನಲ್ಲಿರಬೇಕಿತ್ತು – ಹೆಚ್‌.ಡಿ ರೇವಣ್ಣ

    – ಕಾಂಗ್ರೆಸ್‌ ಸರ್ಕಾರ ಜಿಟಿಡಿ ಅರೆಸ್ಟ್‌ ಮಾಡಲು ಸಿದ್ಧತೆ ಮಾಡಿಕೊಂಡಿತ್ತು ಎಂದ ಮಾಜಿ ಸಚಿವ

    ಬೆಂಗಳೂರು: ಕಾಂಗ್ರೆಸ್ ಸರ್ಕಾರ ಜಿ.ಟಿ ದೇವೇಗೌಡರನ್ನ ಅರೆಸ್ಟ್ ಮಾಡಲು ಸಿದ್ಧತೆ ಮಾಡಿಕೊಂಡಿತ್ತು. ಕುಮಾರಸ್ವಾಮಿ ಇಲ್ಲದೆ ಹೋಗಿದ್ರೆ ನನ್ನ ರೀತಿ ಜಿ.ಟಿ ದೇವೇಗೌಡ (GT Devegowda) ಮತ್ತು ಅವರ ಪುತ್ರ ಜೈಲಿನಲ್ಲಿ ಇರಬೇಕಾಗಿತ್ತು ಅಂತ ಮಾಜಿ ಸಚಿವ ಹೆಚ್‌.ಡಿ ರೇವಣ್ಣ (HD Revanna) ಬಾಂಬ್‌ ಸಿಡಿಸಿದ್ದಾರೆ.

    ವಿಧಾನಸೌಧದಲ್ಲಿಂದು (Vidhanasoudha) ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 2017 ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಜಿ.ಟಿ ದೇವೇಗೌಡರನ್ನ ಬಂಧನ ಮಾಡಲು ಸಿದ್ಧತೆ ಮಾಡಿಕೊಂಡಿತ್ತು. ಈ ವಿಷಯವನ್ನು ನನಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ರು. ಬಳಿಕ ಕುಮಾರಸ್ವಾಮಿ ಅವರು ಪೊಲೀಸರಿಗೆ ಫೋನ್ ಮೂಲಕ ಗುಟುರು ಹಾಕಿದ್ರು. ಕುಮಾರಸ್ವಾಮಿಯವರ (HD kumaraswamy) ಒಂದೇ ಒಂದು ಗುಟುರಿಗೆ ಪೊಲೀಸರು ಜಿ.ಟಿ ದೇವೇಗೌಡರನ್ನ ಅರೆಸ್ಟ್ ಮಾಡೋದು ಬಿಟ್ಟರು. ಇಲ್ಲದೇ ಹೋಗಿದ್ರೆ ನನ್ನ ರೀತಿ ಜಿ.ಟಿ ದೇವೇಗೌಡ ಮತ್ತು ಅವರ ಪುತ್ರ 20 ದಿನ ಜೈಲಲ್ಲಿ ಕಳೆಯಬೇಕಾಗಿತ್ತು ಹೇಳಿದರು.

    ಯಾವ ಕೇಸ್ ಅಂತ ಈಗ ಇರೋ ಸರ್ಕಾರದಲ್ಲಿರೋ ನಾಯಕರನ್ನ ಕೇಳಿ ಅಂತ ಕಾಂಗ್ರೆಸ್ ನಾಯಕರ ಮೇಲೆ ಆರೋಪ ಮಾಡಿದ್ರು. ಇದನ್ನೂ ಓದಿ: ಕಾಶಪ್ಪನವರ್ ಆಯ್ತು ಈಗ ಜಯ ಮೃತ್ಯುಂಜಯ ಶ್ರೀ ವಿರುದ್ಧ ಹೆಬ್ಬಾಳ್ಕರ್ ಅಸಮಾಧಾನ 

    ಗೌಡರು, ಹೆಚ್‌ಡಿಕೆ ಜೊತೆ ಮಾತಾಡಿದ್ರೆ ಎಲ್ಲವೂ ಸರಿ ಆಗುತ್ತೆ:
    ಇದೇ ವೇಳೆ ಜೆಡಿಎಸ್ ನಾಯಕ ಸುರೇಶ್ ಬಾಬು ಮಾತನಾಡಿ, ಜಿ.ಟಿ ದೇವೇಗೌಡರಿಗೆ ಅಸಮಾಧಾನ ಇರೋದು ಸತ್ಯ. ದೇವೇಗೌಡರು, ಕುಮಾರಸ್ವಾಮಿ ಜೊತೆ ಮಾತಾಡಿದ್ರೆ ಎಲ್ಲವೂ ಸರಿ ಆಗಲಿದೆ ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ಬೈಕ್‌ ಸ್ಕಿಡ್‌ ಆಗಿ ಕೆಳಗೆ ಬಿದ್ದ ದಂಪತಿ ಮೇಲೆ ಹರಿದ ಕೆಎಸ್‌ಆರ್‌ಟಿಸಿ ಬಸ್‌ – ಸ್ಥಳದಲ್ಲೇ ಸಾವು

    ಕುಮಾರಸ್ವಾಮಿ ವಿರುದ್ಧ ಜಿಟಿ ದೇವೇಗೌಡ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜಿಟಿ ದೇವೇಗೌಡರಿಗೆ ಅಸಮಾಧಾನ ಇರೋದು ನಿಜ. ಅವರಿಗೆ ಸ್ಥಾನಮಾನದ ಬಗ್ಗೆ ಅಸಮಾಧಾನ ಇದೆ. ಇವತ್ತು ನಾನು ಸುದ್ದಿಗೋಷ್ಠಿಗೆ ಬರೋಕೆ ಹೇಳಿದ್ದೆ ಅವರು ಬರಲಿಲ್ಲ. ಚನ್ನಪಟ್ಟಣ ಚುನಾವಣೆ ಸಮಯದಲ್ಲಿ ಪ್ರಚಾರಕ್ಕೆ ಬರುವಂತೆ ದೇವೇಗೌಡ ಕರೆ ಮಾಡಿದ್ದು ನಿಜ. ಆದರೆ ಅವರು ಬರಲಿಲ್ಲ, ಪಕ್ಷದ ಮೇಲೆ ಅವರಿಗೆ ಅಸಮಾಧಾನ ಇದೆ. ದೇವೇಗೌಡರು, ಕುಮಾರಸ್ವಾಮಿ ಜೊತೆ ಮಾತಾಡಿದ್ರೆ ಎಲ್ಲವೂ ಸರಿ ಆಗುತ್ತೆ. ಪಕ್ಷದಲ್ಲಿ ಎಲ್ಲವೂ ಸರಿ ಆಗಲಿದೆ ಅಂತ ವಿಶ್ವಾಸ ವ್ಯಕ್ತಪಡಿಸಿದರು.

  • ಶ್ರೇಯಸ್ ಜೊತೆಗೆ ಹೊಳೆನರಸೀಪುರದ ಶ್ರೇಯಸ್ಸು ಕೂಡ ಅಡಗಿದೆ – ಪ್ರೀತಂ ಗೌಡ

    ಶ್ರೇಯಸ್ ಜೊತೆಗೆ ಹೊಳೆನರಸೀಪುರದ ಶ್ರೇಯಸ್ಸು ಕೂಡ ಅಡಗಿದೆ – ಪ್ರೀತಂ ಗೌಡ

    – ಹೆಚ್.ಡಿ.ರೇವಣ್ಣ ವಿರುದ್ಧ ಪರೋಕ್ಷ ವಾಗ್ದಾಳಿ

    ಹಾಸನ: ಶ್ರೇಯಸ್ ಅವರೊಂದಿಗೆ ಹೊಳೆನರಸೀಪುರದ (Holenarasipura) ಶ್ರೇಯಸ್ಸು ಕೂಡ ಅಡಗಿದೆ ಎಂದು ಮಾಜಿ ಶಾಸಕ ಪ್ರೀತಂ ಗೌಡ ಹೇಳಿದರು.

    ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಭುವನೇಶ್ವರಿ ರಥ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ (HD Revanna) ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಅವರು, ಶ್ರೇಯಸ್ ಅವರೊಂದಿಗೆ ಹೊಳೆನರಸೀಪುರದ ಶ್ರೇಯಸ್ಸು ಕೂಡ ಅಡಗಿದೆ. ಅದರ ಶ್ರೇಯಸ್ಸು ಶ್ರೇಯಸ್ ಪಟೇಲ್ ಅವರಿಗೆ ಸಲ್ಲುತ್ತದೆ. ನಿಮ್ಮನ್ನೆಲ್ಲಾ ನೋಡಿದ ಮೇಲೆ ಹೊಳೆನರಸೀಪುರಕ್ಕೆ ಸ್ವಾತಂತ್ರ‍್ಯ ಸಿಕ್ಕಿದೆ ಅನ್ನಿಸಿದೆ. 2024ರ ನಂತರ ವಾಸ್ತು, ದಿಕ್ಕು, ದಿಸೆ ಎಲ್ಲಾ ಬದಲಾಗಿದೆ ಎಂದು ಹೇಳಿದರು.ಇದನ್ನೂ ಓದಿ: ಬಿಜೆಪಿ ಅವಧಿಯಲ್ಲಿ 2,900 ಎಕ್ರೆಗೆ ವಕ್ಫ್‌ ನೋಟಿಸ್‌; ಬಿಎಸ್‌ವೈಗೆ ಮುಖಭಂಗ ಮಾಡಲು ಯತ್ನಾಳ್‌ ಹೋರಾಟ: ಪರಮೇಶ್ವರ್‌

    ಇಲ್ಲಿಯ ತನಕ ಯಾವುದೇ ಕಾರ್ಯಕ್ರಮ ನಡೆಯುವಾಗ ಯಾವುದೋ ಒಂದು ಮನೆಗೆ ಅಥವಾ ಒಂದು ತೋಟದಲ್ಲಿ ಲೈಟ್ ಇರುತ್ತಿತ್ತು. ಇಡೀ ಹೊಳೆನರಸೀಪುರದಲ್ಲಿ ಲೈಟ್ ಇರುವುದನ್ನು ನೋಡಿರಲಿಲ್ಲ. ಈಗ ಹೊಳೆನರಸೀಪುರ ಶ್ರೇಯಸ್ ಪಟೇಲ್ ಅವರ ತಾತನ ಕಾಲಕ್ಕೆ ಕೊಂಡ್ಯೊಯ್ದಿದೆ. ಪುಟ್ಟಸ್ವಾಮಿಗೌಡರನ್ನು ಈ ಸಂದರ್ಭದಲ್ಲಿ ನೆನೆಯುತ್ತೇನೆ ಎಂದರು.

    ರಾಜಕಾರಣ ಬರುತ್ತದೆ. ಹೋಗುತ್ತದೆ. ನಾನು ಒಂದು ಪಕ್ಷದ ಪ್ರಮುಖ ಹುದ್ದೆಯಲ್ಲಿದ್ದೇನೆ. ಶ್ರೇಯಸ್ ಪಟೇಲ್ ಬೇರೆ ಪಕ್ಷದಿಂದ ಸಂಸದರಾಗಿದ್ದಾರೆ. ಮಾನವೀಯತೆ ಎನ್ನುವುದು ಬಹಳ ಮುಖ್ಯವಾದ್ದದ್ದು. ಇದೇ ರೀತಿ ಮುಂದುವರಿದುಕೊಂಡು ಹೋಗಲಿ. ಹೊಳೆನರಸೀಪುರವನ್ನು ಮಾದರಿಯನ್ನಾಗಿ ಮಾಡೋಣ. ಎಲ್ಲಿಯ ತನಕ ಶ್ರೇಯಸ್ ಪಟೇಲ್ ಅವರಿಗೆ ಅಧಿಕಾರ ಕೊಡುತ್ತೀರೊ ನಾನು ಯಾವುದೇ ಪಕ್ಷದಲ್ಲಿರಲಿ ಇದೇ ತರ ಪ್ರತಿ ವರ್ಷ ಬರುತ್ತೇನೆ ಎಂದು ತಿಳಿಸಿದರು.ಇದನ್ನೂ ಓದಿ: ಓವರ್‌ಲೋಡ್‌ನಿಂದ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಪಲ್ಟಿ – ಓರ್ವ ಸಾವು

  • ಹಾಸನಾಂಬೆ ದರ್ಶನಕ್ಕೆ ಜಟಾಪಟಿ – 1,000, 300 ರೂ. ಪಾಸ್‌ ಮಾರಾಟಕ್ಕೆ ಮರುಚಾಲನೆ

    ಹಾಸನಾಂಬೆ ದರ್ಶನಕ್ಕೆ ಜಟಾಪಟಿ – 1,000, 300 ರೂ. ಪಾಸ್‌ ಮಾರಾಟಕ್ಕೆ ಮರುಚಾಲನೆ

    ಹಾಸನ: ಹಾಸನಾಂಬೆ (Hasanamba) ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ್ದು, ಜನರ ನಿಯಂತ್ರಣಕ್ಕೆ ಪರದಾಡುವಂತಾಗಿದೆ. ಜನರನ್ನು ನಿಯಂತ್ರಿಸಲು ಒಂದು ದಿನದ ಹಿಂದೆಯಷ್ಟೇ ರದ್ದು ಮಾಡಿದ್ದ ಪಾಸ್‌ ಮಾರಾಟ ಪ್ರಕ್ರಿಯೆಗೆ ಶುಕ್ರವಾರ ಮರುಚಾಲನೆ ನೀಡಲಾಗಿದೆ. 1,000 ರೂ. ಹಾಗೂ 300 ರೂ. ಪಾಸ್‌ ಮಾರಾಟಕ್ಕೆ ಮರುಚಾಲನೆ ನೀಡಲಾಗಿದೆ.

    ಈ ಮೊದಲು ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕಿಂಗ್‌ ಮಾಡುವವರಿಗೆ ಮಾತ್ರ ಅವಕಾಶ ಎಂದಿದ್ದ ಆಡಳಿತಾಧಿಕಾರಿ ಯೂಟರ್ನ್‌ ಹೊಡೆದಿದ್ದಾರೆ. ಆದೇಶ ರದ್ದು ಮಾಡಿದ ಮರುದಿನವೇ ಆಫ್‌ಲೈನ್ ಟಿಕೆಟ್ ಕೌಂಟರ್‌ಗೆ ಚಾಲನೆ ನೀಡಿದ್ದಾರೆ. ಗುರುವಾರ ತಡರಾತ್ರಿಯಿಂದಲೇ ಟಿಕೆಟ್ ಮಾರಾಟ ಮಾಡಲಾಗುತ್ತಿದೆ. ಈಗಾಗಲೇ ಟಿಕೆಟ್‌ ಮಾರಾಟದಿಂದಲೇ 7 ಕೋಟಿಗೂ ಅಧಿಕ ಆದಾಯ ಗಳಿಸಿರುವ ಜಿಲ್ಲಾಡಳಿತ, ದಾಖಲೆ ಮಟ್ಟದ ಹಣ ಕ್ರೂಢೀಕರಣಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಬಿಟ್ಟಿದ್ದ 300 ವಿಶೇಷ ಬಸ್ ಸಂಚಾರ ರದ್ದು

    ಹಾಸನಾಂಬೆ ಸನ್ನಿಧಿಯಲ್ಲೇ ಬಡಿದಾಟ:
    ಹಾಸನಾಂಬ ದೇವಸ್ಥಾನ ಇವತ್ತು ಅಕ್ಷರಶಃ ರಣಾಂಗಣವಾಗಿತ್ತು. ದೇಗುಲದ ಬಳಿ ಮತ್ತೆ ಮಾರಾಮಾರಿಯಾಗಿತ್ತು. ಕುಟುಂಬದವರನ್ನು ದೇವಾಲಯಕ್ಕೆ ಕರೆದೊಯ್ಯುವ ವಿಚಾರಕ್ಕೆ ಕಂದಾಯ ಇಲಾಖೆ ಸಿಬ್ಬಂದಿ ಮಧ್ಯೆ ಜಟಾಪಟಿ ಸಹ ನಡೆದಿದೆ. ಕುಟುಂಬದವರನ್ನು ಕರೆತಂದಿದ್ದಕ್ಕೆ ಮತ್ತೋರ್ವ ಸಿಬ್ಬಂದಿ ತಡೆದಿದ್ರು, ಇದರಿಂದ ಸಿಟ್ಟಿಗೆದ್ದು ಇಬ್ಬರು ಫ್ಯಾಮಿಲಿ ಎದುರೇ ಬಡಿದಾಡಿಕೊಂಡ್ರು. ಜಗಳ ಬಿಡಿಸಲು ಪೊಲೀಸರು ಪತರುಗುಟ್ಟಿ ಹೋಗಿದ್ದಾರೆ.

    ಇನ್ನೂ, ಈ ಫೈಟ್ ನಡೆದ ಕೆಲವೇ ಗಂಟೆಗಳಲ್ಲಿ ಎಲ್ಲಾ ರೀತಿಯಾ ಪಾಸ್‌ಗಳನ್ನು ರದ್ದು ಮಾಡಲಾಗಿದೆ ಅಂದಿದ್ದಾರೆ. ಅದ್ಯಾವಾಗ ಈ ಪಾಸ್ ಕ್ಯಾನ್ಸಲ್ ಅಂದ್ರೋ ಇಡೀ ಭಕ್ತಗಣವೇ ನಿಗಿನಿಗಿ ಕೆಂಡವಾಗಿದ್ರು. ದೇವಾಲಯದ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ರು. ಈ ಬಾರಿ ಆಗಿರುವ ಅವ್ಯವಸ್ಥೆ ನಿಜಕ್ಕೂ ಸಮಸ್ಯೆ ತಂದಿದೆ. ಅಧಿಕಾರಿಗಳು ಎಲ್ಲಿದ್ದಾರೋ ಎಂದು ಮಹಿಳೆಯರು ಕಿಡಿಕಾರಿದ್ರು. ಇತ್ತ ಕೆನಾಡದಿಂದ ದೇವಿ ದರ್ಶನಕ್ಕೆ ಬಂದಿದ್ದ ಯುವತಿ ಕೂಡ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಬಂದ ಲಕ್ಷಾಂತರ ಭಕ್ತರು – ಜನರ ನಿಯಂತ್ರಣಕ್ಕೆ ಪಾಸ್‌ ಮಾರಾಟ ರದ್ದು

    ಹಾಸನಾಂಬೆ ದರ್ಶನ ಅವ್ಯವಸ್ಥೆಗೆ ರೇವಣ್ಣ ಕೆಂಡ:
    ಪಾಸ್ ರದ್ದು ಸಂಬಂಧ ಮಾಜಿ ಸಚಿವ ರೇವಣ್ಣ ಕೂಡ ಕೆಂಡಾಮಂಡಲರಾಗಿದ್ದರು. ಎರಡೂವರೆ ಲಕ್ಷ ವಿಐಪಿ ಪಾಸ್ ಯಾಕೆ ಕೊಟ್ರಿ? ನಾವ್ಯಾರು ಪಾಸ್ ಕೊಡಿಸಿ ಅಂತ ಕೇಳಿಲ್ಲ. ನಂದು ದೇವಸ್ಥಾನ ಅಂತ ಡಿಸಿ ಹೇಳಿದ್ರೆ ನಾನ್ಯಾಕೆ ಬರಲಿ? ಡಿಸಿ ವಿರುದ್ಧ ಕ್ರಮಕ್ಕೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುತ್ತೇನೆ ಅಂತೇಳಿ ಡಿಸಿ ಸತ್ಯಭಾಮಾ ವಿರುದ್ಧ ರೇವಣ್ಣ ಸಿಟ್ಟು ಹೊರ ಹಾಕಿದ್ರು.

    ಕ್ಷಣಕ್ಷಣಕ್ಕೂ ಹಾಸನಾಂಬೆ ದೇವಸ್ಥಾನದ ಆವರಣದಲ್ಲಿ ಭಕ್ತರ ಕಿಚ್ಚು ಜೋರಾಗಿತ್ತು ಈ ಬೆನ್ನಲ್ಲೇ ಪಾಸ್‌ ವ್ಯವಸ್ಥೆಗೆ ಮರುಚಾಲನೆ ನೀಡಲಾಯಿತು.

  • ಕೆಲವೇ ದಿನಗಳಲ್ಲಿ ಕೆಲವು ರಾಜಕೀಯ ಮುಖಂಡರು ಲೈನ್‌ನಲ್ಲಿ ನಿಲ್ಲುವ ಕಾಲ ಬರುತ್ತೆ – ಸಿಎಂ ವಿರುದ್ಧ ರೇವಣ್ಣ ಕಿಡಿ

    ಕೆಲವೇ ದಿನಗಳಲ್ಲಿ ಕೆಲವು ರಾಜಕೀಯ ಮುಖಂಡರು ಲೈನ್‌ನಲ್ಲಿ ನಿಲ್ಲುವ ಕಾಲ ಬರುತ್ತೆ – ಸಿಎಂ ವಿರುದ್ಧ ರೇವಣ್ಣ ಕಿಡಿ

    ಹಾಸನ: ಕೆಲವೇ ದಿನಗಳಲ್ಲಿ ಕೆಲವು ರಾಜಕೀಯ ಮುಖಂಡರು ಲೈನ್‌ನಲ್ಲಿ ನಿಲ್ಲುವ ಕಾಲ ಬರುತ್ತದೆ ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ (HD Revanna) ಕಿಡಿಕಾರಿದ್ದಾರೆ.

    ಹೊಳೆನರಸೀಪುರ (Holenarasipura) ತಾಲ್ಲೂಕಿನ ಬಿದರಕ್ಕ ಕೊಳಲು ಗೋಪಾಲಕೃಷ್ಣ ದೇಗುಲಕ್ಕೆ ಭೇಟಿ ನೀಡಿ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪೂಜೆ ಸಲ್ಲಿಸಿದರು. ದೇವೇಗೌಡರು, ಚನ್ನಮ್ಮ ದೇವೇಗೌಡರು, ಸಹೋದರ ಹೆಚ್‌ಡಿ.ಕೆ, ಅನಿತಾ ಕುಮಾರಸ್ವಾಮಿ, ನಿಖಿಲ್, ರೇವತಿ ಹೆಸರಲ್ಲಿ ರೇವಣ್ಣ ಅರ್ಚನೆ ಮಾಡಿಸಿದರು. ಬಳಿಕ ಮೊಮ್ಮಗ ಅವ್ಯಾನ್ ಹೆಸರಿನಲ್ಲಿ ಹೆಚ್‌ಡಿಕೆ ಅರ್ಚನೆ ಮಾಡಿಸಿದರು.ಇದನ್ನೂ ಓದಿ:ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ದೆಹಲಿ ಸಿಎಂ ಅತಿಶಿ

    ಬಳಿಕ ಮಾತನಾಡಿದ ರೇವಣ್ಣ, ಪೊಲೀಸ್ ಅಧಿಕಾರಿಗಳನ್ನು ಇಟ್ಟುಕೊಂಡು ನನ್ನನ್ನು ಹೆದರಿಸಬೇಕು ಎಂದುಕೊಂಡಿದ್ದರೆ ಅದನ್ನು ಕನಸು ಎಂದು ತಿಳಿದುಕೊಳ್ಳಬೇಕಾಗುತ್ತದೆ. ಮುಂದೆ ಒಂದಲ್ಲ ಒಂದು ದಿನ ರಿವರ್ಸ್ ಹೊಡೆಯುವ ಕಾಲ ಬರುತ್ತದೆ. ಇವತ್ತು ಯರ‍್ಯಾರು ಏನೇನು ಮಾಡಿದ್ದಾರೆ? ನಮ್ಮ ತಂದೆ-ತಾಯಿ ಕಣ್ಣೀರು ಹಾಕುವಂತೆ ಮಾಡಿದವರು ಅನುಭವಿಸುತ್ತಾರೆ. ಕೆಲವೇ ದಿನಗಳಲ್ಲಿ ಕೆಲವು ರಾಜಕೀಯ ಮುಖಂಡರು ಲೈನ್‌ನಲ್ಲಿ ನಿಲ್ಲುವ ಕಾಲ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹೆಚ್‌ಡಿ ಕುಮಾರಸ್ವಾಮಿ ಕೇಸ್ ಮತ್ತೇ ಓಪನ್ ಮಾಡಿಸಿದರ ಕುರಿತು ಮಾತನಾಡಿದ ಅವರು, ಕುಮಾರಣ್ಣರ ವಿರುದ್ಧ ಹತ್ತು ವರ್ಷದ ಕೇಸ್ ಇವತ್ತು ಮತ್ತೆ ಓಪನ್ ಮಾಡಿಸಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಅದನ್ನು ಕ್ಲೋಸ್ ಮಾಡಿಸಬಹುದಿತ್ತು. ಆ ಪಾಪದ ಕೆಲಸವನ್ನು ಅವರು ಮಾಡಲಿಲ್ಲ. ಕುಮಾರಣ್ಣ ನಲವತ್ತು ಜನ ಇಂಜಿನಿಯರ್‌ಗಳಿಗೆ ಪ್ರಮೋಷನ್ ಕೊಟ್ಟಿದ್ದಾರೆ. ಈ ರಾಜ್ಯಕ್ಕೆ ಅವರ ಕೊಡುಗೆ ತುಂಬಾ ಇದೆ. ಯಾರಾದರೂ ಒಬ್ಬರು ಇಂಜಿನಿಯರ್ ಕುಮಾರಣ್ಣ, ರೇವಣ್ಣ ಐದು ರೂಪಾಯಿ ತಗೊಂಡಿದ್ದಾರೆ ಎಂದು ಹೇಳಿದರೆ ನಾನು ರಾಜಕೀಯ ಬಿಟ್ಟು ಹೋಗುತ್ತೇವೆ ಎಂದು ಹೇಳಿದರು.

    ಇವತ್ತು ಸರ್ಕಾರ ಯಾವ ಮಟ್ಟಕ್ಕಿದೆ? ಬಿಜೆಪಿ ಸರ್ಕಾರನಾ ನಲವತ್ತು ಪರ್ಸೆಂಟ್ ಅನ್ನೋರು ಈ ಜಿಲ್ಲೆಯೊಳಗೆ ಲೋಕೋಪಯೋಗಿ ಇಲಾಖೆಯಲ್ಲಿ 400 ಕೋಟಿ ರೂ. ಬಿಲ್ ಬಾಕಿ ಇದೆ. ಬಿಲ್ ತಗೊಬೇಕಾದರೆ 40% ದುಡ್ಡು ಬಾಕಿ ಇದೆ. ಈ ಸರ್ಕಾರಕ್ಕೆ ನಾಚಿಕೆಯಾಗಬೇಕು, ಮಾನ, ಮರ್ಯಾದೆ ಇದೆಯಾ ಎಂದು ಪ್ರಶ್ನಿಸಿದ್ದಾರೆ.

    ನಾನು ನಾಲ್ಕೈದು ತಿಂಗಳು ಸುಮ್ಮನಿದ್ದೆ. ಇನ್ನೊಂದು ಎರಡು ಮೂರು ತಿಂಗಳು ಹೋಗಲಿ. ವಿಧಾನಸಭೆ ಇರಲಿ, ಸಾರ್ವಜನಿಕವಾಗಿ ಈ ಸರ್ಕಾರದಲ್ಲಿ ಏನೇನು ನಡೆಯುತ್ತದೆ ಎನ್ನುವುದನ್ನು ಎಳೆಎಳೆಯಾಗಿ ಬಿಡಿಸುವ ಕಾಲ ಬರುತ್ತದೆ. ಚುನಾವಣೆ ಸಂದರ್ಭದಲ್ಲಿ ಎರಡು ಸಾವಿರ ರೂ. ಕೊಡ್ತಿವಿ ಅಂದ್ದಿದ್ದರು. ಬಸ್ ಫ್ರೀ ಅಂದ್ದಿದ್ದರು. ಇವತ್ತು ಈ ಜಿಲ್ಲೆಯಲ್ಲಿರುವಷ್ಟು ಎಣ್ಣೆ ಅಂಗಡಿ ಈ ರಾಜ್ಯದಲ್ಲಿ ಎಲ್ಲೂ ಇಲ್ಲ ಎಂದು ಹೇಳಿದರು.ಇದನ್ನೂ ಓದಿ: ದರ್ಶನ್‌, ಪವಿತ್ರಾಗೆ ಜೈಲೇಗತಿ – ಜಾಮೀನು ಅರ್ಜಿ ವಜಾ

  • ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೇಗೌಡರ ಮಗನೇ ಅಲ್ಲ – ಹೆಚ್.ಡಿ ರೇವಣ್ಣ ಸವಾಲ್

    ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೇಗೌಡರ ಮಗನೇ ಅಲ್ಲ – ಹೆಚ್.ಡಿ ರೇವಣ್ಣ ಸವಾಲ್

    – ಪಾಪ ಪ್ರಜ್ವಲ್‌ಗೂ ಗೊತ್ತಾಗಲ್ಲ, ಅವನು ಒಳ್ಳೆಯ ಹುಡುಗ ಎಂದ ರೇವಣ್ಣ

    ಹಾಸನ: ಇನ್ನೂ ಮೂರು ವರ್ಷ ಸ್ವಲ್ಪ ಸುಮ್ಮನಿರಿ, ನನಗೆ ಕೊಟ್ಟಿದ್ದನ್ನ ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೇಗೌಡರ ಮಗನೇ ಅಲ್ಲ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಕಿಡಿಕಾರಿದ್ದಾರೆ.

    ಜಿಲ್ಲೆಯ ಆಲೂರಿನಲ್ಲಿ ಜೆಡಿಎಸ್ (JDS) ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಹಾಸನದಲ್ಲಿ ಹೆಚ್.ಎಸ್ ಪ್ರಕಾಶನನ್ನು (H. S. Prakash) ನಾಲ್ಕು ಬಾರಿ ಗೆಲ್ಲಿಸಿದ್ದರು. 2013ರಲ್ಲಿ ಪ್ರಕಾಶ್‌ಗೆ ಸೀಟ್ ಕೊಡಿಸಿಕೊಂಡು ಬಂದೆ, ಅಲ್ಪಸಂಖ್ಯಾತರಿಂದಾಗಿ ಪ್ರಕಾಶ್ ಸೋತರು ಎಂದು ಹೇಳಿದ್ದಾರೆ.ಇದನ್ನೂ ಓದಿ: ಬೆಂಗ್ಳೂರಲ್ಲಿ ಒಂದು ಇಂದಿರಾ ಕ್ಯಾಂಟೀನ್ ಬಂದ್ – ಅಕ್ರಮ ಚಟುವಟಿಕೆಗಳ ತಾಣವಾದ ಕ್ಯಾಂಟೀನ್

    2023ರ ಚುನಾವಣೆಯಲ್ಲಿ ಹಾಸನದಲ್ಲಿ ಐವತ್ತು ಸಾವಿರ ವೋಟಿಗೆ ಒಂದು ವೋಟು ಕಡಿಮೆಯಾದರೆ ರಾಜೀನಾಮೆ ಕೊಡ್ತಿನಿ ಅಂಥ ಚಾಲೆಂಜ್ ಹಾಕಿದ್ದರು. ಆ ಚುನಾವಣೆಗೆ ಸ್ವರೂಪ್ ನಿಲ್ಲಲು ಪ್ರಯತ್ನಪಟ್ಟ, ಆ ಚುನಾವಣೆಯಲ್ಲಿ ನನ್ನ ಹೆಂಡತಿಯನ್ನು ನಿಲ್ಲಿಸಲು ನಾನೇನು ದಡ್ಡನಲ್ಲ. ನಾನೇ ಅವರನ್ನು ಬಿಟ್ಟಿದ್ದೆ, ರೇವಣ್ಣನೇ ಬಂದು ನಿಲ್ಲಲಿ ಎಂದಾಗ ಯಾರನ್ನಾದರೂ ಬಿಡಬೇಕಲ್ಲ. ಅದಕ್ಕೆ ಸ್ವರೂಪ್ ಅವರನ್ನೇ ನಿಲ್ಲಿಸಬೇಕಾಯಿತು ಎಂದಿದ್ದಾರೆ.

    ಹಾಸನ ಕ್ಷೇತ್ರದ ಗೆಲುವಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದರಿಂದ ಸಕಲೇಶಪುರದಲ್ಲಿ ಸೋಲಬೇಕಾಯಿತು. ದೇವೇಗೌಡರು, ಕುಮಾರಣ್ಣ, ರೇವಣ್ಣ ನಿಮ್ಮಂತಹ ಪುಣ್ಯಾತ್ಮರಿಂದ ಉಳಿದಿದ್ದಾರೆ. ಪಾಪ ಪ್ರಜ್ವಲ್‌ಗೂ ಗೊತ್ತಾಗಲ್ಲ, ಅವನು ಒಳ್ಳೆಯ ಹುಡುಗ. ನಮ್ಮ ದುಡ್ಡು ತಗೊಂಡು ಅದನ್ನು ತಗೊಂಡು ಬೇರೆ ಎಲ್ಲೋ ಹಾಕಿದ್ದರು. ಅವರೆಲ್ಲಾ ನನ್ನ ಕೈಗೆ ಸಿಗದೇ ಎಲ್ಲಿಗೆ ಹೋಗುತ್ತಾರೆ. ಇನ್ನೂ ಮೂರು ವರ್ಷ ಸ್ವಲ್ಪ ಸುಮ್ಮನಿರಿ. ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೆಗೌಡರ ಮಗನೇ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.ಇದನ್ನೂ ಓದಿ: ಬಿಜೆಪಿ ನಾಯಕನ ಅಜಾಗರೂಕತೆ ಕಾರು ಚಾಲನೆ – ಅಪಘಾತಕ್ಕೆ ಬೈಕ್‌ ಸವಾರ ಸಾವು

  • ಪ್ರಜ್ವಲ್ ರೇವಣ್ಣ ಜಾಮೀನಿನ ವಾದ-ಪ್ರತಿವಾದ ಮುಕ್ತಾಯ; ಆದೇಶ ಕಾಯ್ದಿರಿಸಿದ ನ್ಯಾಯಾಧೀಶರು

    ಪ್ರಜ್ವಲ್ ರೇವಣ್ಣ ಜಾಮೀನಿನ ವಾದ-ಪ್ರತಿವಾದ ಮುಕ್ತಾಯ; ಆದೇಶ ಕಾಯ್ದಿರಿಸಿದ ನ್ಯಾಯಾಧೀಶರು

    – ಹೆಚ್‌.ಡಿ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಸೆ.26ಕ್ಕೆ ಮುಂದೂಡಿಕೆ

    ಬೆಂಗಳೂರು: ಅತ್ಯಾಚಾರ ಆರೋಪ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಜಾಮೀನೀನ ಅರ್ಜಿಯ ವಾದ ಪ್ರತಿವಾದ ಮುಗಿದಿದ್ದು, ಆದೇಶ ಕಾಯ್ದಿರಿಸಲಾಗಿದೆ.

    ಹೈಕೋರ್ಟ್‌ನ (Karnataka High Court) ಜನಪ್ರತಿನಿಧಿಗಳ ಪೀಠದಲ್ಲಿ ಎರಡು ಕೇಸ್ ಗಳಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಹಾಗೂ ಒಂದು ಅತ್ಯಾಚಾರ ಪ್ರಕರಣದಲ್ಲಿ ಜಾಮೀನಿಗಾಗಿ ಪ್ರಜ್ವಲ್ ಅರ್ಜಿ ಸಲ್ಲಿಸಿದ್ದರು. ಪ್ರಜ್ವಲ್ ಪರ ಹಿರಿಯ ವಕೀಲ ಪ್ರಭುಲಿಂಗ ನಾವಡಗಿ ವಾದ ಮಂಡಿಸಿ, ಇದೊಂದು ರಾಜಕೀಯ ಷಡ್ಯಂತ್ರ್ಯವಾಗಿದ್ದು, 3-4 ವರ್ಷಗಳ ಹಿಂದೆ ಅತ್ಯಾಚಾರವಾಗಿದ್ದ ಬಗ್ಗೆ ಉಲ್ಲೇಖಿಸಿದ್ದಾರೆ. ಅತ್ಯಾಚಾರ ನಡೆದಿದೆ ಅನ್ನೋದಾದ್ರೆ ಆಗಲೇ ಯಾಕೆ ದೂರು ನೀಡಿರಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: J&K ಚುನಾವಣೆಯಲ್ಲಿ ಕಾಂಗ್ರೆಸ್‌-ಎನ್‌ಸಿ ಮೈತ್ರಿಕೂಟ ಗೆಲ್ಲುವ ಸಾಧ್ಯತೆ ಹೆಚ್ಚಿದೆ: ಪಾಕ್‌ ರಕ್ಷಣಾ ಸಚಿವ

    ಪ್ರಜ್ವಲ್‌ ವಿರುದ್ಧ ದೂರು ದಾಖಲಾಗಿರುವುದು ದುರುದ್ದೇಶಪೂರಕ. ತನಿಖೆಗೆ ಸ್ಪಂದಿಸಿ, ಕಳೆದ 4 ತಿಂಗಳಿಂದ ಜೈಲಲಿದ್ದಾರೆ. ಹೀಗಾಗಿ ಜಾಮೀನು ನೀಡುವಂತೆ ವಾದ ಮಂಡಿಸಿದ್ರು. ಇದಕ್ಕೆ ಪರತಿವಾದ ಸಲ್ಲಿಸಿದ್ದ ಎಸ್‌ಪಿಪಿ ಪ್ರೊ.ರವಿವರ್ಮಕುಮಾರ್, ಆರೋಪಿ ಸಾಕ್ಷಿನಾಶ ಪಡಿಸಿದ್ದು, ಈವರೆಗೂ ತನಿಖೆಗೆ ಮೊಬೈಲ್ ಕೊಟ್ಟಿಲ್ಲ. ಎಫ್‌ಐಆರ್‌ ದಾಖಲಾಗ್ತಿದ್ದಂತೆ ವಿದೇಶಕ್ಕೆ ಹಾರಿ ತಲೆ ಮರೆಸಿಕೊಂಡಿದ್ರು. ಪ್ರಭಾವಿಯಾಗಿದ್ದು ಜಾಮೀನಿನ ಮೇಲೆ ಹೊರ ಬಂದ್ರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರ್ತಾರೆ. ಹೀಗಾಗಿ ಜಾಮೀನು ನೀಡಬಾರದು ಅಂತ ಪ್ರತಿವಾದ ಮಂಡಿಸಿದ್ರು. ವಾದ-ಪ್ರತಿ ವಾದ ಆಲಿಸಿದ ಮಾನ್ಯ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಆದೇಶವನ್ನ ಕಾಯ್ದಿರಿಸಿದ್ದಾರೆ. ಇದನ್ನೂ ಓದಿ: ಹೊರಗೆ ಹೋದ್ಮೇಲೆ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡ್ತೀನಿ – ದರ್ಶನ್ ಪಶ್ಚಾತ್ತಾಪದ ಮಾತು

    ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಸೆ.26ಕ್ಕೆ ಮುಂದೂಡಿಕೆ:
    ಇನ್ನೂ ಕೆ.ಆರ್‌ ನಗರ ಸಂತ್ರಸ್ತೆ ಪ್ರಕರಣ ರದ್ದು ಕೋರಿ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಏಕಸದಸ್ಯ ಪೀಠವು ಸೆ.26ಕ್ಕೆ ಮುಂದೂಡಿದೆ. ಇದನ್ನೂ ಓದಿ: ದರ್ಶನ್ ಬಿಡುಗಡೆಗಾಗಿ ದೇವಿ ಮೊರೆ ಹೋದ ಫ್ಯಾನ್ಸ್‌- ಬೂದುಕುಂಬಳಕಾಯಿ ದೀಪ ಬೆಳಗಿಸಿ ವಿಶೇಷ ಪೂಜೆ

  • ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಚಾರ್ಜ್‌ಶೀಟ್‌ ಸಲ್ಲಿಕೆ – ಗನ್ನಿಕಡ ತೋಟದ ಮನೆ ರಹಸ್ಯದ ಬಗ್ಗೆಯೂ ಉಲ್ಲೇಖ!

    ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಚಾರ್ಜ್‌ಶೀಟ್‌ ಸಲ್ಲಿಕೆ – ಗನ್ನಿಕಡ ತೋಟದ ಮನೆ ರಹಸ್ಯದ ಬಗ್ಗೆಯೂ ಉಲ್ಲೇಖ!

    – 1,632 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಏನಿದೆ?

    ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ 2ನೇ ಪ್ರಕರಣದಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. 1,632 ಪುಟಗಳ ದೂಷಾರೋಪ ಪಟ್ಟಿಯನ್ನು 42ನೇ ಜನಪ್ರತಿನಿಧಿ ನ್ಯಾಯಾಲಯಕ್ಕೆ ಎಸ್‌ಐಟಿ (SIT) ಸೋಮವಾರ ಸಲ್ಲಿಸಿದೆ.

    ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 2ನೇ ಪ್ರಕರಣದಲ್ಲಿ 113 ಸಾಕ್ಷ್ಯಗಳನ್ನು ಸಂಗ್ರಹಿಸಿ, ಒಟ್ಟು 1,632 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ. ಈ ಆರೋಪ ಪಟ್ಟಿಯಲ್ಲಿ ಏನೆಲ್ಲಾ ಮಾಹಿತಿ ಇದೆ ಅನ್ನೋದು ʻಪಬ್ಲಿಕ್‌ ಟಿವಿʼಗೆ ಲಭ್ಯವಾಗಿದೆ. ಇದನ್ನೂ ಓದಿ: ಮುಡಾ ಕೇಸ್‌ನ್ನು ಬಿತ್ತರಿಸದಿರಲಿ ಅಂತಾ ದರ್ಶನ್ ಕೇಸ್ ಫೋಟೋ ವೈರಲ್ ಮಾಡ್ತಾ ಇದ್ದೀರಾ? – ಛಲವಾದಿ ಆಕ್ಷೇಪ

    ಈ ಪ್ರಕರಣದಲ್ಲಿ ಈವರೆಗೆ ನಡೆಸಿದ ತನಿಖೆಯಲ್ಲಿ ಸಂತ್ರಸ್ತ ಮಹಿಳೆಯ ಹೇಳಿಕೆ, ಸಾಂದರ್ಭಿಕ ಸಾಕ್ಷಿ ಮತ್ತು ಸಂತ್ರಸ್ತೆಯ ಅಶ್ಲೀಲ ವೀಡಿಯೋ ಕ್ಲಿಪ್‌ಗಳು, ಎಫ್‌ಎಸ್‌ಎಲ್‌ ವರದಿಗಳು ಹಾಗೂ ತಾಂತ್ರಿಕ ಸಾಕ್ಷ್ಯಾಧಾರ ಆಧಾರದ ಮೇಲೆ ಕಲಂ 376(2)(K), 376(2)(N), 354(A), 354(B), 354(C), 506, 201 ಐಪಿಸಿ ಮತ್ತು ಕಲಂ 66(E), ಐಟಿ ಆಕ್ಟ್‌-2008 ರೀತ್ಯಾ ಅಪರಾಧ ಎಸಗಿರುವುದು ದೃಢಪಟ್ಟಿದೆ ಎಂದು ಎಸ್‌ಐಟಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

    ಬಯಲಾಯ್ತು ಗನ್ನಿಕಡ ತೋಟದ ಮನೆ ರಹಸ್ಯ!
    ಕೆ.ಆರ್‌ನಗರ ತಾಲೂಕಿನ 48 ವರ್ಷದ ಸಂತ್ರಸ್ತೆ ತನ್ನ ಪತಿಯೊಂದಿಗೆ ಗನ್ನಿಕಡ ತೋಟದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಇವರಿಬ್ಬರು ಅದೇ ತೋಟದಲ್ಲಿ ಕಾರ್ಮಿಕರ ವಾಸ್ತವ್ಯಕ್ಕೆ ನಿರ್ಮಿಸಲ್ಪಟ್ಟ ಮನೆಯಲ್ಲೇ ವಾಸಮಾಡಿಕೊಂಡಿದ್ದರು. ಈ ವೇಳೆ ಹೊಳೆನರಸಿಪುರ ಟೌನ್‌ನಲ್ಲಿರುವ ಚೆನ್ನಾಂಬಿಕ ನಿಲಯದ ಮನೆಯಲ್ಲಿ ವಾಸಿಸುತ್ತಿದ್ದ ಪ್ರಜ್ವಲ್‌ ರೇವಣ್ಣ ಸಹ ಆಗಾಗ್ಗೆ ಗನ್ನಿಕಡ ತೋಟಕ್ಕೆ ಬಂದು ಹೋಗುತ್ತಿದ್ದರು. ಇದನ್ನೂ ಓದಿ: Prajwal Pendrive Case – ಜಾಮೀನು ಅರ್ಜಿ ವಜಾಗೊಂಡರೂ ಮೊದಲ ಐವರು ಆರೋಪಿಗಳ ಬಂಧನವಾಗಿಲ್ಲ

    2021ರಲ್ಲಿ ಕೋವಿಡ್‌ ಲಾಕ್‌ಡೌನ್‌ಗೂ ಮುನ್ನ ಒಮ್ಮೆ ಗನ್ನಿಕಡ ತೋಟಕ್ಕೆ ಪ್ರಜ್ವಲ್‌ ರೇವಣ್ಣ ಹೋಗಿದ್ದರು. ಇದೇ ವೇಳೆ ಸಂತ್ರಸ್ತೆ ತೋಟದ ಮನೆಯಲ್ಲಿ ಒಂದನೇ ಮಹಡಿಯಲ್ಲಿನ ರೂಮ್‌ ಕ್ಲೀನ್‌ ಮಾಡುತ್ತಿದ್ದಾಗ ಅವರ ಬಳಿ ಆರೋಪಿ ಹೋಗಿದ್ದಾನೆ. ಕುಡಿಯೋಗೆ ಒಂದು ಚೊಂಬು ನೀರು ತಗೊಂಡು ಬಾ ಅಂತ ಹೇಳಿದ್ದಾನೆ. ಸಂತ್ರಸ್ತೆ ಕುಡಿಯಲು ನೀರು ಕೊಡಲು ರೂಮ್‌ಗೆ ಹೋದಾಗ ತಕ್ಷಣ ಬಾಗಿಲು ಹಾಕಿದ್ದಾನೆ. ಈ ವೇಳೆ ಬಾಗಿಲು ತೆಗೆಯಣ್ಣ ಭಯವಾಗುತ್ತಿದೆ, ದಮ್ಮಯ್ಯ ಬಿಟ್ಟುಬಿಡಣ್ಣ ಅಂತ ಅಂಗಲಾಚಿದ್ದಾಳೆ. ಆದರೂ ಬಿಡದ ಆರೋಪಿ ಆಕೆಯನ್ನ ಬೆತ್ತಲೆಗೊಳಿಸಿ ಅತ್ಯಾಚಾರ ಮಾಡಿದ್ದಾನೆ. ಕೃತ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾನೆ. ಇಷ್ಟಕ್ಕೆ ಸುಮ್ಮನಾಗದೇ ಬೆಂಗಳೂರಿನ ಬಸವನಗುಡಿ ನಿವಾಸದಲ್ಲೂ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬುದಾಗಿ ಚಾರ್ಚ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ.

    ಕಳೆದ ಆಗಸ್ಟ್‌ 23ರಂದು ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಹಾಗೂ ಪುತ್ರ ಪ್ರಜ್ವಲ್‌ ರೇವಣ್ಣ ವಿರುದ್ಧ ಮೊದಲ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿತ್ತು. 137 ಸಾಕ್ಷ್ಯಗಳನ್ನು ಸಂಗ್ರಹಿಸಿ ಒಟ್ಟು 2,144 ಪುಟಗಳ ದೋಷಾರೋಪ ಪಟ್ಟಿಯನ್ನು 42ನೇ ಜನಪ್ರತಿನಿಧಿ ನ್ಯಾಯಾಲಯಕ್ಕೆ ಎಸ್‌ಐಟಿ (SIT) ಸಲ್ಲಿಸಿತ್ತು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವಿರುದ್ಧ ಮೊದಲ ಚಾರ್ಜ್‌ಶೀಟ್‌ ಸಲ್ಲಿಕೆ – 2,144 ಪುಟಗಳ ದೋಷಾರೋಪ ಪಟ್ಟಿಯಲ್ಲೇನಿದೆ?