Tag: HD kumaraswmy

  • ಸುಮಲತಾ Vs ಕುಮಾರಸ್ವಾಮಿ – ಮೈ ಶುಗರ್ ವಿವಾದ ಈಗ ಎದ್ದಿದ್ದು ಯಾಕೆ?

    ಸುಮಲತಾ Vs ಕುಮಾರಸ್ವಾಮಿ – ಮೈ ಶುಗರ್ ವಿವಾದ ಈಗ ಎದ್ದಿದ್ದು ಯಾಕೆ?

    ಬೆಂಗಳೂರು: ರಾಜ್ಯದಲ್ಲಿರುವ ಏಕೈಕ ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆಯಾದ ಮಂಡ್ಯದ ಮೈ ಶುಗರ್ ವಿಚಾರದಲ್ಲಿ ವಿವಾದ ಎದ್ದಿದೆ. ಇದನ್ನು ಖಾಸಗೀಕರಣ ಮಾಡಲು ಸರ್ಕಾರ ಹೊರಟಿದೆ ಎಂಬ ಕೂಗೆದ್ದಿದೆ.

    1933ರಲ್ಲಿ ಮಂಡ್ಯದಲ್ಲಿ ಮೈ ಶುಗರ್ ಕಾರ್ಖಾನೆ ಆರಂಭಗೊಂಡಿದ್ದು ಮಂಡ್ಯ ಭಾಗದ ಜೀವನಾಡಿಯಾಗಿತ್ತು. ಮೊದಲ 50 ವರ್ಷ ಲಾಭದಾಯಕವಾಗಿದ್ದರೆ ನಂತರ ಕೆಟ್ಟ ಆಡಳಿತದಿಂದ ನಷ್ಟ. ಪುನಶ್ಚೇತನಕ್ಕಾಗಿ 2004ರಿಂದ ಈವರೆಗೆ 504 ಕೋಟಿ ಅನುದಾನ ನೀಡಲಾಗಿದೆ. ಇದನ್ನೂ ಓದಿ: ಆಡಿಯೋ, ವೀಡಿಯೋ, ಫೋನ್ ಟ್ಯಾಪಿಂಗ್ ಕುಮಾರಸ್ವಾಮಿಗೆ ಅಭ್ಯಾಸ ಆಗಿದೆ: ಸುಮಲತಾ

     

    ಸರ್ಕಾರದಿಂದ ಕೋಟಿ ಕೋಟಿ ಸುರಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳ ಹಿಂದೆ ಸಂಪೂರ್ಣ ಬಂದ್ ಆಗಿದೆ, ಈಗ ಖಾಸಗಿಯವರಿಗೆ 40 ವರ್ಷ ಗುತ್ತಿಗೆ ನೀಡಲು ಸರ್ಕಾರ ಪ್ಲಾನ್ ಮಾಡಿದೆ. 2021-22ರ ಸಾಲಿನ ಹಂಗಾಮಿನಿಂದ ಗುತ್ತಿಗೆ ನೀಡಲು ಟೆಂಡರ್ ಕರೆಯಲು ಸಿದ್ಧತೆ ನಡೆಸಿದೆ.

    ಸರ್ಕಾರದ ನಿಲುವಿಗೆ ರೈತರು, ಹೋರಾಟಗಾರರ ತೀವ್ರ ವಿರೋಧ ವ್ಯಕ್ತವಾಗಿದೆ. ಖಾಸಗೀಕರಣಕ್ಕೆ ಕುಮಾರಸ್ವಾಮಿ ವಿರೋಧ, ಸಿಎಂಗೆ ಮನವಿ ಮಾಡಿದ್ದರೆ ಸರ್ಕಾರವೇ ಆಗಲಿ, ಖಾಸಗಿಯೇ ಆಗಲಿ ಒಟ್ಟಿನಲ್ಲಿ ಕಾರ್ಖಾನೆ ಆರಂಭವಾಗಬೇಕು ಎನ್ನುವುದು ಸುಮಲತಾ ಅವರ ಮನವಿ.

  • ‘ವಿಧಾನಸೌಧದಲ್ಲಿ ಕುಳಿತುಕೊಳ್ಳೋರು, ಗೂಟದ ಕಾರು ಬೇಕೆನ್ನೋರಿಗೆ ಸಚಿವ ಸ್ಥಾನ ಕೊಡ್ಬೇಡಿ’

    ‘ವಿಧಾನಸೌಧದಲ್ಲಿ ಕುಳಿತುಕೊಳ್ಳೋರು, ಗೂಟದ ಕಾರು ಬೇಕೆನ್ನೋರಿಗೆ ಸಚಿವ ಸ್ಥಾನ ಕೊಡ್ಬೇಡಿ’

    – ಬಿಎಸ್‍ವೈಗೆ ಯತ್ನಾಳ್ ಸಲಹೆ

    ಹುಬ್ಬಳ್ಳಿ: ತೀವ್ರ ಕಂಗ್ಗಟ್ಟಾಗಿರುವ ಸಂಪುಟ ವಿಸ್ತರಣೆಯನ್ನ ಶುಕ್ರವಾರದೊಳಗೆ ಮಾಡಿ. ಸಂಪುಟ ವಿಸ್ತರಣೆ ಅನ್ನೋದು ಒಂದು ರೀತಿ ಪ್ರಹಸನವಾಗಿದೆ. ಬೆಳಗ್ಗೆಯಿಂದ ರಾತ್ರಿಯವರೆಗೂ ಬರೀ ಮಾಧ್ಯಮಗಳಲ್ಲಿ ಸಂಪುಟ ವಿಸ್ತರಣೆಯದ್ದೇ ಚರ್ಚೆಯಾಗುತ್ತಿದೆ. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳ ಬಗ್ಗೆ ಗಮನಹರಿಸಬೇಕಾಗಿದೆ. ಅದಕ್ಕಾಗಿ ಸಂಪುಟ ವಿಸ್ತರಣೆ ಅತ್ಯಗತ್ಯವಾಗಿದೆ ಎಂದು ಕೇಂದ್ರದ ಮಾಜಿ ಸಚಿವ, ಶಾಸಕ ಬಸನಗೌಡ ಪಾಟೀಲ ಸಲಹೆ ನೀಡಿದ್ದಾರೆ.

    ಹುಬ್ಬಳ್ಳಿಯಲ್ಲಿಂದು ನೈರುತ್ಯ ರೈಲ್ವೆ ವಲಯದ ವಿಭಾಗದ ರಸ್ತೆ ಮೇಲ್ಸೇತುವೆ ಲೋಕಾರ್ಪಣೆ ಸಮಾರಂಭಕ್ಕೂ ಮುನ್ನ ಮಾತನಾಡಿದ ಅವರು, ಸಂಪುಟ ವಿಸ್ತರಣೆಗೆ ಹೈಕಮಾಂಡ್ ಹಾಗೂ ಸಿಎಂ ಸೂಕ್ತ ಕೈಗೊಳ್ಳಬೇಕು. ಸಂಪುಟ ವಿಸ್ತರಣೆ ವೇಳೆ ಕೆಲವರು ತ್ಯಾಗ ಮಾಡಲಿ. ನನಗೂ ಸಚಿವ ಸ್ಥಾನ ಕೊಡಬೇಕಿತ್ತು. ಆದರೆ ನಾನು ಕೂಡ ತ್ಯಾಗ ಮಾಡಿದ್ದೇನೆ. ನಾನು ಸಚಿವ ಸ್ಥಾನದ ಆಕ್ಷಾಂಕಿಯಲ್ಲ. ಅಲ್ಲದೇ ಕೇವಲ ವಿಧಾನಸೌಧದಲ್ಲಿ ಕುಳಿತುಕೊಳ್ಳುವವರಿಗೆ ಸಚಿವ ಸ್ಥಾನ ನೀಡಬಾರದು. ಗೂಟದ ಕಾರು ಬೇಕು ಎನ್ನುವವರಿಗೆ ಸಚಿವ ಸ್ಥಾನ ನೀಡಬಾರದು. ಕೆಲಸ ಮಾಡುವವರಿಗೆ ಸಚಿವ ಸ್ಥಾನ ನೀಡಲಿ ಎಂದು ಸಿಎಂ ಬಿಎಸ್‍ವೈಗೆ ಯತ್ನಾಳ್ ಸಲಹೆ ನೀಡಿದರು.

    ಸಂಪುಟ ವಿಸ್ತರಣೆ ವೇಳೆ ಮೊದಲು ಪಕ್ಷಕ್ಕೆ ಬಂದವರಿಗೆ ಸಚಿವ ಸ್ಥಾನ ಹಂಚಿಕೆ ಮಾಡಲಿ. ಅವರು ಪಕ್ಷಕ್ಕೆ ಬಂದಿದ್ದಕ್ಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅವರು ಬಿಜೆಪಿಗೆ ಬರದಿದ್ದರೆ ನಾವೂ ಮೂರೂವರೆ ವರ್ಷ ವಿರೋಧ ಪಕ್ಷದಲ್ಲಿ ಇರಬೇಕಾಗಿತ್ತು. ಹೀಗಾಗಿ ಪಕ್ಷ ತೊರೆದು ಬಂದವರಿಗೆ ಸಚಿವ ಸ್ಥಾನ ಹಂಚಿಕೆ ಮೊದಲ ಆದ್ಯತೆಯಾಗಿದೆ ಎಂದರು.

    ಮಿಣಿ ಮಿಣಿ ಪೌಡರ್ ಬಗ್ಗೆ ಕುಮಾರಸ್ವಾಮಿ ಬಿಜೆಪಿಯವರದ್ದು ವಿಕೃತಿ ಮನಸ್ಸು ಎಂದು ಜರಿದಿದ್ದಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಹೆಚ್‍ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆ ಮಿಣಿ ಮಿಣಿ ಪೌಡರ್ ಎಲ್ಲಿತ್ತೋ ಏನೋ? ನಾನಂತೂ ನೋಡಿಲ್ಲ. ಇದೂ ಕುಮಾರಸ್ವಾಮಿಯವರೇ ಸೃಷ್ಟಿಸಿದ ಪೌಡರ್. ಮಿಣಿ ಮಿಣಿ ಪೌಡರ್ ಬಗ್ಗೆ ಬಿಜೆಪಿಯವರು ಮಾತನಾಡಿದ್ರೆ ವಿಕೃತಿ ಮನಸ್ಸು ಅಂತಾರೆ. ಆದರೆ ಕುಮಾರಸ್ವಾಮಿಯವರದ್ದು ವಿಕೃತ ಮನಸ್ಸು ಎಂದು ಎಚ್‍ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.

    ಹೆಚ್‍ಡಿಕೆ ಸಿಡಿ ಯತ್ನಾಳ್ ಬಳಿ ಇದೆಯಂತೆ!:
    ಕುಮಾರಸ್ವಾಮಿ ಬರೀ ಸಿಡಿ ಸಿಡಿ ಅಂತಾರೆ. ಸಿಡಿ ಮಾಡುತ್ತೇನೆ, ಸಿಡಿ ಬಿಡುಗಡೆ ಮಾಡುತ್ತೇನೆ ಅನ್ನುವವರದ್ದು ವಿಕೃತಿ ಮನಸ್ಸು. ಅವರ ಸಿಡಿಗಳು ನಮ್ಮ ಬಳಿಯೂ ಇವೆ. ಕುಮಾರಸ್ವಾಮಿಯವರ ಏನೇನೂ ಮಾಡುತ್ತಾರೆ ಎಂದು ನಮಗೂ ಗೊತ್ತಿದೆ. ನಮಗೂ ಸಿಡಿ ಬಿಡುಗಡೆ ಮಾಡೋಕೆ ಬರುತ್ತೆ ಎಂದು ಕುಮಾರಸ್ವಾಮಿ ವಿರುದ್ಧ ಯತ್ನಾಳ್ ಕಿಡಿಕಾರೋ ಮೂಲಕ ಸಿಡಿ ವಿಚಾರ ಪ್ರಸ್ತಾಪ ಮಾಡಿರುವುದು ಕುತೊಹಲ ಮೂಡಿಸಿದೆ.

  • ಸಿದ್ದುಗೆ ಟಾಂಗ್, ಕುಮಾರಸ್ವಾಮಿಗೆ ಸಲಹೆ ಕೊಟ್ಟ ಸಿ.ಟಿ ರವಿ

    ಸಿದ್ದುಗೆ ಟಾಂಗ್, ಕುಮಾರಸ್ವಾಮಿಗೆ ಸಲಹೆ ಕೊಟ್ಟ ಸಿ.ಟಿ ರವಿ

    ಚಿಕ್ಕಮಗಳೂರು: ಸಿದ್ದರಾಮಯ್ಯನವರ ಹೇಳಿಕೆ ದುರುದ್ದೇಶ ಹಾಗೂ ಪೂರ್ವಾಗ್ರಹ ಪೀಡಿತವಾಗಿದೆ. ಐದು ವರ್ಷದ ಅವರ ಸಾಧನೆ ಹಾಗೂ ಐದು ತಿಂಗಳ ನಮ್ಮ ಸಾಧನೆ ಬಗ್ಗೆ ನಾನು ಸಿದ್ದರಾಮಯ್ಯನವರೊಂದಿಗೆ ಚರ್ಚೆಗೆ ಸಿದ್ಧ ಎಂದು ಸಚಿವ ಸಿ.ಟಿ ರವಿ ಸಿದ್ದರಾಮಯ್ಯನವರಿಗೆ ಸವಾಲು ಹಾಕಿದ್ದಾರೆ.

    ನಗರದಲ್ಲಿ ಧ್ವಜಾರೋಹಣದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸರ್ಕಾರ ಮಂತ್ರಿ ಮಂಡಲ ರಚನೆಯಲ್ಲೇ ಬ್ಯುಸಿಯಾಗಿದ್ದು, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಕಿಡಿಕಾರಿದ ಸಚಿವರು, ಚಿಕ್ಕಮಗಳೂರು ಅಥವಾ ಮೈಸೂರು ಯಾವ ಜಿಲ್ಲೆಯಾದರು ಅವರು ಐದು ವರ್ಷದ ಸಾಧನೆ ಜೊತೆ ನಮ್ಮ ಐದು ತಿಂಗಳ ಸಾಧನೆಯ ಅಂಕಿ-ಅಂಶಗಳ ಕುರಿತು ನಾನು ಸಿದ್ದರಾಮಯ್ಯನವರೊಂದಿಗೆ ಚರ್ಚೆಗೆ ಸಿದ್ಧ ಎಂದಿದ್ದಾರೆ.

    ಯಾವ-ಯಾವ ಯೋಜನೆ ಮಂಜೂರಾಗಿದೆ. ಯಾವ ಹಂತದಲ್ಲಿದೆ ಎಂಬ ಎಲ್ಲಾ ಮಾಹಿತಿ ಕೊಡ್ತೀನಿ. ಅವರ ಹೇಳಿಕೆ ದುರುದ್ದೇಶ ಹಾಗೂ ಪೂರ್ವಾಗ್ರಹ ಪೀಡಿತವಾಗಿದೆ. ಅವರು ಚಿಕ್ಕಮಗಳೂರಿಗೆ ಮೆಡಿಕಲ್ ಕಾಲೇಜು ಕೊಡಲಿಲ್ಲ. ಮೊಣಕೈಗೆ ತುಪ್ಪ ಸವರುವ ಕೆಲಸವನ್ನೂ ಮಾಡ್ಲಿಲ್ಲ. ನಾನು ಅಂಕಿ ಅಂಶಗಳ ಸಮೇತ ಚರ್ಚೆಗೆ ಸಿದ್ಧ ಎಂದಿದ್ದಾರೆ.

    ಇದೇ ವೇಳೆ ನನಗೂ ಕೊಲೆ ಬೆದರಿಕೆ ಇದೆ ಎಂಬ ಹೇಳಿಕೆ ನೀಡಿರೋ ಹೆಚ್‍ಡಿಕೆ ವಿರುದ್ಧ ಹರಿಹಾಯ್ದ ಅವರು, ರಾಜ್ಯದ ಪ್ರತಿಯೊಬ್ಬ ಪ್ರಜೆಯ ರಕ್ಷಣೆ ಕೂಡ ಸರ್ಕಾರದ ಹೊಣೆ. ಕುಮಾರಸ್ವಾಮಿಯೂ ಸೇರಿದಂತೆ. ಕಳೆದು ಹೋಗಬಾರದೆಂದು ಹೇಳಿಕೆ ನೀಡೋ ಮೂಲಕ ಸಕ್ರಿಯವಾಗಿರೋದು ಸೂಕ್ತವಲ್ಲ ಎಂದಿದ್ದಾರೆ.

    ಜನರ ಮಧ್ಯೆ ಇರೋದಕ್ಕೆ ಬೇಕಾದಷ್ಟು ಪಾಸಿಟಿವ್ ವಿಚಾರಗಳಿವೆ. ಅವುಗಳ ಮೂಲಕ ಜನರ ಮಧ್ಯೆ ಇರಬಹುದು. ಈ ಇಂತಹ ಹೇಳಿಕೆಗಳಿಂದ ಜನರ ಮಧ್ಯೆ ಇರಬಹುದೆಂದು ಬಯಸಿದರೆ ಅದು ಅವರ ಬಯಕೆ ಎಂದು ವ್ಯಂಗ್ಯವಾಡಿದ್ದಾರೆ. ಅವರ ಆರೋಪ ನಿರಾಧಾರವಾಗಿರುವಂತದ್ದು. ಅಷ್ಟೆ ಅಲ್ಲದೆ, ಸಂಘ ಪರಿವಾರ ಅನ್ನೋದು ಈಗ ಫ್ಯಾಷನ್ ಆಗಿದೆ. ಅವರು ಮಾಜಿ ಮುಖ್ಯಮಂತ್ರಿ, ಆಡಳಿತ ವ್ಯವಸ್ಥೆಯ ಮುಖ್ಯಸ್ಥರಾಗಿದ್ದೋರು. ನಿರ್ದಿಷ್ಟವಾಗಿ, ಯಾರ ಮೂಲಕ ಬೆದರಿಕೆ ಬಂದಿದೆ ಎಂದು ದೂರು ನೀಡಲಿ ಎಂದು ಸಲಹೆ ನೀಡಿದ್ದಾರೆ.

    ದೂರು ನೀಡಿದ್ರೆ ಸತ್ಯಾಸತ್ಯತೆ ಪರಿಶೀಲಿಸಿ ಯಾರೇ ಆದರೂ ಕ್ರಮಕೈಗೊಳ್ಳುತ್ತೇವೆ. ಪ್ರಜಾಪ್ರಭುತ್ವದಲ್ಲಿ ಬೆದರಿಕೆಗೆ ಅವಕಾಶವಿಲ್ಲ. ಯಾರಿಗೂ ಬೆದರಿಸೋಕು ಬಿಡಲ್ಲ. ನಾವು ಬೆದರೋದಿಲ್ಲ ಎಂದಿದ್ದಾರೆ.

  • ಸ್ವಾಮೀಜಿಗಳ ಮೂಲಕ ಖಾತೆ ಸಿಗದ ಅತೃಪ್ತರ ಓಲೈಕೆಗೆ ಮುಂದಾದ ಹೆಚ್‍ಡಿಕೆ?

    ಸ್ವಾಮೀಜಿಗಳ ಮೂಲಕ ಖಾತೆ ಸಿಗದ ಅತೃಪ್ತರ ಓಲೈಕೆಗೆ ಮುಂದಾದ ಹೆಚ್‍ಡಿಕೆ?

    ಬೆಂಗಳೂರು: ಬಸವರಾಜ್ ಹೊರಟ್ಟಿಗೆ ಸಚಿವ ಸ್ಥಾನ ಸಿಗಲ್ಲ ಎನ್ನುವ ಮಾಹಿತಿಯನ್ನು ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ಲಿಂಗಾಯಿತ ಪ್ರಭಾವಿ ಸ್ವಾಮೀಜಿಗಳ ಬಳಿ ಹೇಳಿರೋದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಸ್ವಾಮೀಜಿಗಳ ಮೂಲಕ ಖಾತೆ ಸಿಗದ ಅತೃಪ್ತರ ಓಲೈಕೆಗೆ ಮುಂದಾಗಿದ್ದಾರಾ ಹೆಚ್‍ಡಿಕೆ ಅನ್ನೋ ಪ್ರಶ್ನೆಯೂ ಮೂಡಿದೆ.

    ಲಿಂಗಾಯಿತ ಸಮುದಾಯದವರಿಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ, ಪಂಚಮಸಾಲಿ ಪೀಠದ ಜಯಬಸವ ಮೃತ್ಯುಂಜಯ ಸ್ವಾಮೀಜಿ ಸುದ್ದಿಗೋಷ್ಠಿ ಕರೆದಿದ್ದರು. ಆದರೆ ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನ ದೂರವಾಣಿ ಕರೆಯೊಂದಕ್ಕೆ ಉತ್ತರಿಸಿ ಮಾತನಾಡಿದ ಸ್ವಾಮೀಜಿ, ಹೊರಟ್ಟಿಗೆ ಸಚಿವ ಸ್ಥಾನ ಕೊಡಲ್ಲ, ಈಗಾಗಲೇ ಅವರನ್ನು ಎಂಎಲ್‍ಸಿ ಮಾಡಿದ್ದೇವೆ ಅಂತಾ ಕುಮಾರಸ್ವಾಮಿ ಹೇಳಿದ್ದಾರೆ. ಮೂರು ವರ್ಷ ಬಿಟ್ಟು ನೋಡೋಣ ಅಂದಿದ್ದಾರೆ. ಆಗಲೂ ಕೊಡದೇ ಇದ್ದರೆ ಗಲಾಟೆ ಮಾಡೋಣ ಅಂದಿದ್ದಾರೆ.

    ಈ ಮೊಬೈಲ್ ಸಂಭಾಷಣೆ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು ಈ ಮಾತುಕತೆ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದೆ. ಇನ್ನು ಇದೇ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತಾನಾಡಿದ ಸ್ವಾಮೀಜಿ ಜೆಡಿಎಸ್ ಹಾಗೂ ಕಾಂಗ್ರೆಸ್‍ನಲ್ಲಿ ಒಟ್ಟು ಇಪ್ಪತ್ತು ಜನ ಲಿಂಗಾಯಿತ ಸಮುದಾಯದವರಿದ್ದು, ಹೆಚ್ಚು ಖಾತೆಯನ್ನು ಲಿಂಗಾಯಿತರಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.  ಇದನ್ನು ಓದಿ: ನಾನು ನಾಳೆ ಸಚಿವನಾಗಲ್ಲ: ಪರೋಕ್ಷವಾಗಿ ಅಸಮಾಧಾನ ಪ್ರಕಟಿಸಿದ ಹೊರಟ್ಟಿ

  • ಜಂತಕಲ್ ಕೇಸ್: ಎಚ್‍ಡಿಕೆಗೆ ಬಿಗ್ ರಿಲೀಫ್

    ಜಂತಕಲ್ ಕೇಸ್: ಎಚ್‍ಡಿಕೆಗೆ ಬಿಗ್ ರಿಲೀಫ್

    ಬೆಂಗಳೂರು: ಜಂತಕಲ್ ಎಂಟರ್‍ಪ್ರೈಸಸ್ ಗಣಿ ಪರವಾನಿಗೆ ನವೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.

    ವಿಶೇಷ ತನಿಖಾ ತಂಡ(ಎಸ್‍ಐಟಿ) ಬಂಧನ ಭೀತಿಗೆ ಒಳಗಾಗಿದ್ದ ಎಚ್‍ಡಿಕೆಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

    ಒಬ್ಬರ ಭದ್ರತಾ ಶ್ಯೂರಿಟಿ ಮತ್ತು ವೈಯಕ್ತಿಕ ಬಾಂಡ್ ಒದಗಿಸಬೇಕು. ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಾರದು. ಸುಪ್ರೀಂಕೋರ್ಟ್ ಗೆ ವರದಿ ಸಲ್ಲಿಕೆಯಾಗುವವರೆಗೂ ಎಸ್‍ಐಟಿ ತನಿಖೆಗೆ ಸಹಕರಿಸುವಂತೆ ಹೈಕೋರ್ಟ್ ಎಚ್‍ಡಿಕೆಗೆ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ.

    ಈ ಹಿಂದೆ ವಿಶೇಷ ಲೋಕಾಯುಕ್ತ ನ್ಯಾಯಾಲಯ ಕುಮಾರಸ್ವಾಮಿ ಅವರಿಗೆ ಜಾಮೀನು ನೀಡಲು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಎಚ್‍ಡಿಕೆ ಹೈಕೋರ್ಟ್ ಮೊರೆ ಹೋಗಿದ್ದರು.

    ಏನಿದು ಜಂತಕಲ್ ಮೈನಿಂಗ್ ಕೇಸ್?: ವಿನೋದ್ ಗೋಯಲ್ ಮಾಲೀಕತ್ವದ ಜಂತಕಲ್ ಮೈನಿಂಗ್ ಎಂಟರ್ ಪ್ರೈಸಸ್ ಕಂಪೆನಿಗೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹೀರೆಕಂದವಾಡಿ ಮತ್ತು ತನಿಗೇಹಳ್ಳಿಯಲ್ಲಿ ಅದಿರು ಸಾಗಿಸಲು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಆಗಿನ ಸರ್ಕಾರ 2007ರಲ್ಲಿ ಅನುಮತಿ ನೀಡಿತ್ತು. ಕಪ್ಪು ಪಟ್ಟಿಯಲ್ಲಿದ್ದ ವಿನೋದ್ ಗೋಯಲ್ ಮಾಲೀಕತ್ವದ ಕಂಪೆನಿಗೆ ಅನುಮತಿ ನೀಡಿದ ಪರಿಣಾಮ ಪಾಕಿಸ್ತಾನಕ್ಕೆ ಅಕ್ರಮ ಅದಿರು ಸಾಗಾಟವಾಗಿದ್ದು, ರಾಜ್ಯದ ಬೊಕ್ಕಸಕ್ಕೆ 250 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಹಿಂದಿನ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ವರದಿ ನೀಡಿದ್ದರು.

    ಇದನ್ನೂ ಓದಿ: ಏನಿದು ಜಂತಕಲ್ ಮೈನಿಂಗ್ ಕೇಸ್? ಎಚ್‍ಡಿಕೆ ಮೇಲಿನ ಆರೋಪ ಏನು?

  • ಬಿಜೆಪಿ ಎಲೆಕ್ಷನ್‍ಗೆ ಜನಾರ್ದನ ರೆಡ್ಡಿಯಿಂದ 500 ಕೋಟಿ ಹಣ:ಎಚ್‍ಡಿಕೆ ಬಾಂಬ್

    ಬಿಜೆಪಿ ಎಲೆಕ್ಷನ್‍ಗೆ ಜನಾರ್ದನ ರೆಡ್ಡಿಯಿಂದ 500 ಕೋಟಿ ಹಣ:ಎಚ್‍ಡಿಕೆ ಬಾಂಬ್

    – ಹಣ ಬರೋದ್ರಿಂದ ಕೋಟ್ಯಂತರ ರೂ. ಆಸ್ತಿ ಕೇಸ್ ವಾಪಸ್
    – ಮೋದಿ, ಅಮಿತ್ ಶಾ ಅಶ್ವಮೇಧ ಯಾಗದ ಕುದುರೆಯನ್ನು ಜೆಡಿಎಸ್ ಕಟ್ಟಿ ಹಾಕುತ್ತೆ

    ಬೆಂಗಳೂರು: ಬಿಜೆಪಿಯ ಚುನಾವಣೆಗೆ 500 ಕೋಟಿ ರೂ. ನೀಡುವ ಷರತ್ತು ಆಗಿರುವ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿಯವರ ಕೋಟ್ಯಂತರ ರೂ. ಆಸ್ತಿ ಈಗ ವಾಪಸ್ ಆಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

    ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಸ್ವಾಭಿಮಾನಿ ಸಮಾನತೆ ಸಮಾವೇಶದಲ್ಲಿ ಮಾತನಾಡಿದ ಅವರು, ಅಕ್ರಮ ಗಣಿ ವಿಚಾರದಲ್ಲಿ ಲೋಕಾಯುಕ್ತ ನಿವೃತ್ತ ನ್ಯಾ. ಸಂತೋಷ್ ಹೆಗಡೆ ಕೊಟ್ಟ ವರದಿಗೆ ರಾಜ್ಯ ಸರ್ಕಾರ ಎಳ್ಳು ನೀರು ಬಿಟ್ಟಿದೆ. ಮುಂದಿನ ವಿಧಾನ ಸಭಾ ಚುನಾವಣೆ ಕಾರಣಕ್ಕಾಗಿಯೇ ಜನಾರ್ದನ ರೆಡ್ಡಿ ಕೇಸ್ ಖುಲಾಸೆ ಆಗುತ್ತಿದೆ. ಬಿಜೆಪಿಗೆ ರೆಡ್ಡಿ 500 ಕೋಟಿ ನೀಡುವ ಕಂಡೀಷನ್ ಆದ ಹಿನ್ನೆಲೆಯಲ್ಲಿ ಅವರ ಕೋಟ್ಯಂತರ ರೂ. ಆಸ್ತಿ ವಾಪಸ್ ಆಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

    ಮೋದಿ ಹಿಂದೆ ಹೋಗ್ಬೇಡಿ: ಪ್ರಧಾನಿ ಮೋದಿಯನ್ನು ಕಿಂದರಿ ಜೋಗಿಗೆ ಹೋಲಿಸಿದ ಕುಮಾರಸ್ವಾಮಿ, ಜನರು ಎಚ್ಚರಿಕೆಯಿಂದ ಇರಬೇಕು. ಎಲ್ಲೋ ಜೋಗಪ್ಪ ನಿನ್ನ ಅರಮನೆ ಎಂಬ ಹಾಡಿನಂತೆ ಮೋದಿ ಕಥೆಯಿದ್ದು ಪ್ರಧಾನಿಯನ್ನು ನಂಬಿ ಹಿಂದೆ ಹೋದರೆ ಎಲ್ಲ ಬಿಟ್ಟು ಹೋಗಬೇಕಾಗುತ್ತದೆ. ಯಾರು ಮೋದಿಯನ್ನ ನಂಬಬೇಡಿ. ‘ಫಸಲ್ ಭೀಮಾ’ ರೈತರಿಗೆ ಟೋಪಿ ಹಾಕುವ ಯೋಜನೆಯಾಗಿದ್ದು ಹಣ ಕಟ್ಟಿದ ರೈತರು ಬೆಳೆ ವಿಮೆ ಕೇಳಿದ್ರೆ ಉತ್ತರವಿಲ್ಲ. ವಿಮಾ ಕಂಪೆನಿಯನ್ನು ಕೇಳಿ ಎನ್ನುತ್ತಿದ್ದಾರೆ. ಕೇಂದ್ರ ನಯಾ ಪೈಸೆ ಕಟ್ಟಿಲ್ಲ. ಮೋದಿ ಕನಸನ್ನ ಕಟ್ಟಿ, ಮಾರಾಟ ಮಾಡಿ ವಿರೋಧಿ ಪಕ್ಷ ಹತ್ತಿಕ್ಕುತ್ತಿದ್ದಾರೆ ಎಂದು ಟೀಕಿಸಿದರು.

    ಒಂದು ಬಾರಿ ಅವಕಾಶ ನೀಡಿ: ತಮಿಳುನಾಡು, ಆಂದ್ರಕ್ಕೆ ಸಿಕ್ಕ ಮನ್ನಣೆ ಕೇಂದ್ರದಿಂದ ನಮ್ಮ ರಾಜ್ಯಕ್ಕೆ ಸಿಗುತ್ತಿಲ್ಲ. ಪ್ರಾದೇಶಿಕ ಪಕ್ಷ ನಮಗೆ ಅಧಿಕಾರ ಕೊಡಿ. ನಾವು ಜನರಿಗೆ ಮಾಡಿದ ದ್ರೋಹ ಏನು, ಯಾಕೆ ನಮಗೆ ಶಿಕ್ಷೆ ನೀಡುತ್ತಿದ್ದೀರಿ. ಊರಿಗೊಂದು ಪ್ರಾಧಿಕಾರ ಮಾಡಿ ಯಾರಪ್ಪನ ಮನೆ ದುಡ್ಡೋ ಎಂಬಂತೆ ದುಂದುವೆಚ್ಚ ಮಾಡಲಾಗುತ್ತಿದೆ. ಜಾತಿ ಹೆಸರಿನ ರಾಜಕಾರಣದ ಮೋಹಕ್ಕೆ ಒಳಗಾಗಬೇಡಿ ಒಮ್ಮೆ ಅವಕಾಶ ನೀಡಿ. ಇದು ಅಳಿವು ಉಳುವಿನ ಪ್ರಶ್ನೆಯಾಗಿದ್ದು ಕಾಂಗ್ರೆಸ್ ಬಿಜೆಪಿ ಅವರು ನಾವೇ ಅಧಿಕಾರಕ್ಕೆ ಬರುತ್ತಿದ್ದೇವೆ ಅಂತಿದ್ದಾರೆ. ನೀವು ನಿರ್ಧಾರ ಮಾಡಿ ಕುಮಾರಣ್ಣ ಮುಖ್ಯಮಂತ್ರಿ ಮಾಡಲು ನೀವು ಶ್ರಮ ಹಾಕಿ. ಇನ್ನು 10 ತಿಂಗಳು ಜನರ ಬಳಿ ಹೋಗಿ ನಮ್ಮ ಕಾರ್ಯಕ್ರಮ ಬಗ್ಗೆ ಹೇಳಿ. ಒಂದು ಬಾರಿ ಜೆಡಿಎಸ್ ಗೆ ಅವಕಾಶ ನೀಡಿ ಎಚ್‍ಡಿಕೆ ಮನವಿ ಮಾಡಿದರು.

    ಲೂಟಿ ಹಣ ಬಳಕೆ: ರಾಜ್ಯದಲ್ಲಿ ಜೆಡಿಎಸ್ ಅತಿಹೆಚ್ಚು ಉಪಚುನಾವಣೆ ಗೆದ್ದಿದೆ. ಉಪಚುನಾವಣೆಯಲ್ಲಿ ನಮಗೆ ಯಾವುದೇ ಹೆದರಿಕೆಯಿಂದ ಅಲ್ಲ. ಆದರೆ ರಾಷ್ಟ್ರೀಯ ಪಕ್ಷಗಳು ಲೂಟಿ ಮಾಡಿದ ಪಾಪದ ಹಣವನ್ನು ಉಪಚುನಾವಣೆಯಲ್ಲಿ ಬಳಕೆ ಮಾಡುತ್ತಿದ್ದಾರೆ. ಲೂಟಿ ಮಾಡಿದ ಹಣ ಬಳಕೆಯಾಗುತ್ತಿದೆ ಎಂದು ಅಲ್ಲಿನ ಕಾರ್ಯಕರ್ತರೇ ತಿಳಿಸಿದ್ದಾರೆ. ಈ ಕಾರಣಕ್ಕಾಗಿ ನಾವು ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿಲ್ಲ ಎಂದು ಎಚ್‍ಡಿಕೆ ಹೇಳಿದರು.

    ಉತ್ತರ ಪ್ರದೇಶದ ಬಳಿಕ ಬಿಜೆಪಿ ರಾಷ್ಟ್ರೀಯ ಮುಖಂಡರು ರಾಜ್ಯಕ್ಕೆ ಬರುತ್ತಾರಂತೆ. ಬಿಜೆಪಿಯವರು ಅಧಿಕಾರಕ್ಕೆ ಬಂದೇ ಬಿಟ್ಟಿದ್ದೇವೆ ಎಂದು ಕನಸು ಕಾಣುತ್ತಿದ್ದಾರೆ. ಜನ ಇದಕ್ಕೆ ಉತ್ತರ ನೀಡ್ತಾರೆ. ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ದ್ರೋಹ ಮಾಡಿದ್ದು ಕೆಲ ಮಾಧ್ಯಮಗಳು ಕಾಂಗ್ರೆಸ್, ಜೆಡಿಎಸ್ ಘಟಬಂಧನ್ ಆಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಆದ್ರೆ ಅಂತಹ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಅದರ ಅವಶ್ಯಕತೆಯೂ ಇಲ್ಲ. ಏಕಾಂಗಿ ಯಾಗಿ ಸ್ಪರ್ಧೆ ಮಾಡಿ ಮೋದಿ, ಅಮಿತ್ ಶಾ ಅವರ ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟಿ ಹಾಕುತ್ತೇವೆ ಎಂದು ಮತ್ತೊಮ್ಮೆ ಹೇಳಿದರು.

    ಇಬ್ರಿಗೆ ಕೆಲ್ಸ ಇಲ್ಲ: ರಾಜ್ಯದಲ್ಲಿ ಒಬ್ಬರು ಡೈರಿ ಹೇಳುತ್ತಾರೆ. ಇನ್ನೊಬ್ಬರು ಸಿಡಿ ಬಿಡುಗಡೆ ಮಾಡ್ತಾರೆ. ಇಬ್ಬರಿಗೂ ಬೇರೆ ಕೆಲಸ ಇಲ್ಲ. 10 ಸಾವಿರ ಅಂಗನವಾಡಿ ಕಾರ್ಯಕರ್ತೆಯರು ರಸ್ತೆಯಲ್ಲಿ ಮಲಗುವ ಸ್ಥಿತಿ ಬಂದಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಕೇಂದ್ರ, ರಾಜ್ಯ ಸರ್ಕಾರದ ಬಗ್ಗೆ ರಾಜಕಾರಣದ ಮಾತುಗಳನ್ನು ಆಡುತ್ತಿವೆ. ಇಂತಹ ಆಡಳಿತ ರಾಜ್ಯಕ್ಕೆ ಬೇಕಾ ಎಂದು ಅವರು ಪ್ರಶ್ನಿಸಿದರು.

    ಸಮಯ ಇಲ್ಲ: 2008ರ ಚುನಾವಣೆಯಲ್ಲಿ, ದೇವರ ಪೂಜೆ ವೇಳೆ ನನ್ನ ಹೆಸರಲ್ಲಿ ದೇವರಿಗೆ ಒಂದು ಹೂ ಹಾಕಿ ಎಂದು ಮಹಿಳೆಯರಲ್ಲಿ ಬಿಎಸ್ ಯಡಿಯೂರಪ್ಪ ಹೇಳಿದ್ದರು. ಈಗ ಯಡಿಯೂರಪ್ಪ ಅವರಿಗೆ ಸಮಯ ಇಲ್ಲ. ಪ್ರತಿಭಟನಾ ನಿರತ ಮಹಿಳೆಯರನ್ನ ಭೇಟಿ ಮಾಡದೇ ಉಪಚುನಾವಣೆಯಲ್ಲಿ ಬ್ಯುಸಿ ಆಗಿದ್ದಾರೆ ಎಂದು ಎಚ್‍ಡಿಕೆ ವಾಗ್ದಾಳಿ ನಡೆಸಿದರು.

    ಬಿಜೆಪಿ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡುತ್ತೇವೆ ಎಂದು ಬಿಎಸ್‍ವೈ ಹೇಳುತ್ತಿದ್ದಾರೆ. ನಾನು ಸಿಎಂ ಆಗಿದ್ದಾಗ ಬೀದರ್ ರೈತನ ಮನೆಯಲ್ಲಿ ಊಟ ಮಾಡಿದಾಗ ರೈತರ ಸಾಲ ಮನ್ನಾ ಮಾಡುವ ತೀರ್ಮಾನ ಮಾಡಿದ್ದೆ. ಆದರೆ ಬಿಎಸ್‍ವೈ ದುಡ್ಡಿಲ್ಲ, ಸಾಲ ಮನ್ನ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ರೈತರ ಸಾಲ ಮನ್ನಾ ಬಗ್ಗೆ ಕ್ಯಾಬಿನೆಟ್ ನಲ್ಲಿ ವಿರೋಧಿಸಿದ್ದರು. ಈಗ ಬಿಎಸ್ ವೈ ಯಾವ ನೈತಿಕತೆ ಇಟ್ಟುಕೊಂಡು ಎರಡು ಬಾರಿ ಸಾಲ ಮನ್ನಾ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು.

    ಜೂನ್‍ನಲ್ಲಿ ಪಾದಯಾತ್ರೆ: ಜೂನ್ ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಉತ್ತರ ಕರ್ನಾಟಕದಲ್ಲಿ ಪಾದಯಾತ್ರೆ ಮಾಡುತ್ತೇನೆ. ರಾಜ್ಯದ ಅನ್ಯಾಯದ ಕೆಲಸದ ಬಗ್ಗೆ ಪಾದಯಾತ್ರೆ ಮೂಲಕ ಜನರಿಗೆ ತಿಳಿಸುತ್ತೇನೆ ಎಂದು ಈ ವೇಳೆ ಹೇಳಿದರು.