Tag: HD Kumarasway

  • ಗಾಂಧೀಜಿಗೆ ಗುಂಡಿಕ್ಕಿದ ನೀವು ಸಮಾಜದ ಉದ್ಧಾರ ಮಾಡುತ್ತೀರಾ? – ಸಿಟಿ ರವಿಗೆ ಎಚ್‌ಡಿಕೆ ತಿರುಗೇಟು

    ಗಾಂಧೀಜಿಗೆ ಗುಂಡಿಕ್ಕಿದ ನೀವು ಸಮಾಜದ ಉದ್ಧಾರ ಮಾಡುತ್ತೀರಾ? – ಸಿಟಿ ರವಿಗೆ ಎಚ್‌ಡಿಕೆ ತಿರುಗೇಟು

    ಬೆಂಗಳೂರು: ಸೇವೆ, ಸಂಸ್ಕಾರ ಆರ್‌ಎಸ್‌ಎಸ್‌ ಗುತ್ತಿಗೆಯಲ್ಲ. ದೇಶಕ್ಕಾಗಿ ನಿಮ್ಮ ಕೊಡುಗೆ, ತ್ಯಾಗ ಏನು? ಇಂದಿರಾಗಾಂಧಿ, ರಾಜೀವ್ ಗಾಂಧಿ ರಾಷ್ಟ್ರಕ್ಕಾಗಿ ಜೀವತ್ಯಾಗ ಮಾಡಿದರು. ನಿಮ್ಮಲ್ಲಿ ಅಂಥವರು ಒಬ್ಬರಿದ್ದಾರಾ? ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಗೇ ಗುಂಡಿಕ್ಕಿದವರು ನೀವು. ನೀವು ಸಮಾಜದ ಉದ್ಧಾರ ಮಾಡುತ್ತೀರಾ? ಇದಕ್ಕೇ ಆರ್‌ಎಸ್‌ಎಸ್‌ ʼವಿಶ್ವಕುಖ್ಯಾತಿʼ ಆಗಿದ್ದು ಎಂದು ಹೇಳುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರಿಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

    ಎಚ್‌ಡಿಕುಮಾರಸ್ವಾಮಿ ಅವರು ಆರ್‌ಎಸ್‌ಎಸ್‌ ಬಗ್ಗೆ ಮಾಡಿದ ಟೀಕೆಗೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಇಂದು ಹಲವು ವಿಚಾರಗಳನ್ನು ಪ್ರಸ್ತಾಪ ಮಾಡಿ ಸಂಘವನ್ನು ಸಮರ್ಥಿಸಿಕೊಂಡಿದ್ದರು.

    ಭಾರತೀಯರನ್ನು ಭಾರತಕ್ಕಾಗಿ ಮಿಡಿಯುವಂತೆ ಮಾಡಬಲ್ಲ ಸಂಸ್ಥೆ ಎಂದೇ ಆರ್‌ಎಸ್‌ಎಸ್‌ ವಿಶ್ವ ಖ್ಯಾತಿಯಾಗಿದೆ. ಮನೆ-ಮಠ, ಸ್ವಂತ ಬದುಕು ಬಿಟ್ಟು ಸಂಘ ಬಯಸುತ್ತಿರುವ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ತ್ಯಾಗಿಗಳ ದೊಡ್ಡಪಡೆಯೇ ಇಲ್ಲಿದೆ. ಸಮಾಜದಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡುತ್ತಿರುವ ಸಂಘವೇ ಎಂದರೆ ಆರ್‌ಎಸ್‌ಎಸ್‌ ಎಂದಿದ್ದರು. ಇದಕ್ಕೆ ಪ್ರತಿಯಾಗಿ ಈಗ ಕುಮಾರಸ್ವಾಮಿ ಸರಣಿ ಟ್ವೀಟ್‌ ಮಾಡಿ ತಿರುಗೇಟು ನೀಡಿದ್ದಾರೆ.

    ಕುಮಾರಸ್ವಾಮಿ ಹೇಳಿದ್ದು ಏನು?
    ಮಾನ್ಯ ಸಿಟಿ ರವಿ ಅವರೇ, 2006ಕ್ಕಿಂತ ಮೊದಲು ರಾಜ್ಯದಲ್ಲಿದ್ದ ಬಿಜೆಪಿ ನಾಯಕರ ಚೆರಿತ್ರೆ ಗಮನಿಸಿ. ಜನರ ಬಾಯಿಯಲ್ಲಿ ಅವರ ಹಗರಣಗಳ ಕಥೆಗಳಿವೆ. ಆರ್‌ಎಸ್‌ಎಸ್‌ನಿಂದ ಅವರೆಲ್ಲ ತರಬೇತಿ ಪಡೆದು ರಾಷ್ಟ್ರ ನಿರ್ಮಾಣ ಮಾಡಿದರೋ, ಜನರ ಹಣ ಲೂಟಿ ಹೊಡೆದು ತಮ್ಮ ಸಾಮ್ರಾಜ್ಯಗಳನ್ನು ನಿರ್ಮಾಣ ಮಾಡಿಕೊಂಡರೋ ಎನ್ನುವುದನ್ನು ತಿಳಿದುಕೊಳ್ಳಿ.

    ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಕಂಡರಿಯದ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದೇ ಬಿಜೆಪಿ ಸರ್ಕಾರ. ಒಮ್ಮೆ ಹಳೆಯದನ್ನೆಲ್ಲ ನೆನಪು ಮಾಡಿಕೊಳ್ಳಿ. ಅಧಿಕಾರದಲ್ಲಿದ್ದಾಗ ದೇಶದ ಸಂಪತ್ತು, ಜನರ ತೆರಿಗೆ ಹಣ ಲೂಟಿ ಹೊಡೆಯುವ ಕೆಲಸ ಮಾಡಿಲ್ಲ ನಾವು. ನಮ್ಮ ಕುಟುಂಬ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಆಸರೆಯಾಗಿ ಅವರ ಮನೆಗಳ ಬೆಳಕಾಗಿದೆ. ಇದನ್ನೂ ಓದಿ: ಬಿಎಂಟಿಸಿ ಟು ಪಿಎ ಜರ್ನಿ – ಸಾವಿರ ಲೆಕ್ಕದಲ್ಲಿ ಸಂಬಳ ಪಡೆಯುತ್ತಿದ್ದವ ಕೋಟಿ ಕುಬೇರನಾದ ಕಥೆ ಓದಿ

    ನನ್ನ ಸೇವಾ ಗುಣ, ನಿಸ್ವಾರ್ಥತೆ ಏನೆಂಬುದು ಜನರಿಗಿಂತ ಒಮ್ಮೆ ಸಂಕಷ್ಟಕ್ಕೆ ಸಿಲುಕಿದ್ದ ನಿಮಗೇ ಚನ್ನಾಗಿ ಗೊತ್ತಿದೆ ಎಂಬುದು ನನ್ನ ಭಾವನೆ. ಅಂದು ಆರೆಸ್ಸೆಸ್ ಮೇಲಿನ ನಿಷ್ಠೆ ನಿಮ್ಮನ್ನು ರಕ್ಷಣೆ ಮಾಡಲಿಲ್ಲ. ಹೆಚ್.ಡಿ.ಕುಮಾರಸ್ವಾಮಿಯ ನಿಸ್ವಾರ್ಥತೆಯ ಫಲಾನುಭವಿ ನೀವು. ಆತ್ಮಸಾಕ್ಷಿಯನ್ನೊಮ್ಮೆ ಕೇಳಿಕೊಳ್ಳಿ ಸಿ.ಟಿ.ರವಿಯವರೇ.

    1975ರಲ್ಲಿ ಜನಸಂಘವೂ ಜನತಾ ಪಕ್ಷದ ಮೈತ್ರಿ ಭಾಗವಾಗಿತ್ತು. ಆಗ ಜನಸಂಘದ ನಾಯಕರ ಜತೆ ದೇವೇಗೌಡರೂ ವೇದಿಕೆ ಹಂಚಿಕೊಂಡಿದ್ದರು. ಅಟಲ್, ಅಡ್ವಾಣಿ ಅವರಂತೆ ಗೌಡರೂ ತುರ್ತುಪರಿಸ್ಥಿತಿ ವಿರುದ್ಧ ದನಿಯೆತ್ತಿ ಜೈಲಿಗೆ ಹೋಗಿದ್ದರು. ಆದರೆ, 1975ರ ಆರ್‌ಎಸ್‌ಎಸ್‌ಗೂ ಈಗಿನ ಆರ್‌ಎಸ್‌ಎಸ್‌ಗೂ ಅಜಗಜಾಂತರ ವ್ಯತ್ಯಾಸವಿದೆ. ಇದು ನಿಮಗಿಂತ ಗೌಡರಿಗೇ ಚೆನ್ನಾಗಿ ಗೊತ್ತು.

    ಎಮರ್ಜೆನ್ಸಿ ವೇಳೆ ಜನಸಂಘವಷ್ಟೇ ಅಲ್ಲ, ಅನೇಕ ನಾಯಕರು ಜೈಲಿಗೆ ಹೋಗಿದ್ದರು. ಅಡ್ವಾಣಿ ಅವರು ಬೆಂಗಳೂರು ಜೈಲಿನಲ್ಲೇ ಇದ್ದರು. ಅಲ್ಲಿ ಅಡ್ವಾಣಿ ಅವರೊಂದಿಗಿನ ಒಡನಾಟದಿಂದ ಗೌಡರು ಹಾಗೆ ಹೇಳಿರಬಹುದು. ಎಮರ್ಜೆನ್ಸಿ ಬಳಿಕ ಆರ್‌ಎಸ್‌ಎಸ್‌ ಹೇಗೆ ಬದಲಾಯಿತೆಂಬುದು ಅವರಿಗೆ ತಿಳಿದಿದೆ. ಮೈಸೂರಿನಲ್ಲಿ ಗೌಡರು ಹೇಳಿದ್ದನ್ನೇ ಇವತ್ತು ತಿರುಚಿ ಹೇಳಬೇಡಿ.

    ಗೌಡರು ಎಂದೂ ಆರ್‌ಎಸ್‌ಎಸ್‌ ಒಪ್ಪಿಲ್ಲ. ಹಾಗಿದ್ದಿದ್ದರೆ, ಪ್ರಧಾನಿ ಆಗಿದ್ದ ಅವರಿಗೆ ಕಾಂಗ್ರೆಸ್ ʼಕೈʼಕೊಟ್ಟಾಗ ಬೆಂಬಲಕ್ಕೆ ಬಂದ ವಾಜಪೇಯಿ ಅವರ ಆಫರ್ ಒಪ್ಪುತ್ತಿದ್ದರು. ಅಷ್ಟೇ ಏಕೆ, ಬಿಜೆಪಿ ಜತೆ ನಾನು ಸರ್ಕಾರ ರಚಿಸಿದ ಕಾರಣಕ್ಕೆ ಅವರ ಆರೋಗ್ಯ ಹಾಳಾಯಿತು. ಇದು ಆರ್‌ಎಸ್‌ಎಸ್‌ ಬಗ್ಗೆ ಗೌಡರು ಕಾಯ್ದುಕೊಂಡಿರುವ ಅಂತರ. ಅಪ್ರಬುದ್ಧತೆ ಇರುವುದು ಯಾರಿಗೆ?

    ಸೇವೆ, ಸಂಸ್ಕಾರ ಆರ್‌ಎಸ್‌ಎಸ್‌ ನೀಡುತ್ತಿದೆ ಎನ್ನುತ್ತೀರಿ. ಆದರೆ ಸಮಾಜಕ್ಕೆ ಬೇಕಿರುವುದು ನೆಮ್ಮದಿ, ಶಾಂತಿ, ಮಾಡುವ ಕೈಗಳಿಗೆ ಉದ್ಯೋಗ, ಹಸಿದ ಹೊಟ್ಟೆಗೆ ಅನ್ನ. ಈ ವಿಷಯದಲ್ಲಿ ಆರ್‌ಎಸ್‌ಎಸ್‌ ಏನು ಮಾಡಿದೆ ಎಂಬುದನ್ನು ಜನರ ಮುಂದಿಡಿ. ಬದುಕಿಗೆ ಶಿಕ್ಷಣ ಕೊಡುವುದು ಬಿಟ್ಟು ರಾಷ್ಟ್ರವನ್ನು ಒಡೆಯುವ ರೀತಿ ಮುಗ್ಧ ಮಕ್ಕಳ ಮಿದುಳು ಹಾಳು ಮಾಡುತ್ತಿದ್ದೀರಿ.

    ಸೇವೆ, ಸಂಸ್ಕಾರ ಆರ್‌ಎಸ್‌ಎಸ್‌ ಗುತ್ತಿಗೆಯಲ್ಲ. ದೇಶಕ್ಕಾಗಿ ನಿಮ್ಮ ಕೊಡಗೆ, ತ್ಯಾಗ ಏನು? ಇಂದಿರಾಗಾಂಧಿ, ರಾಜೀವ್ ಗಾಂಧಿ ರಾಷ್ಟ್ರಕ್ಕಾಗಿ ಜೀವತ್ಯಾಗ ಮಾಡಿದರು. ನಿಮ್ಮಲ್ಲಿ ಅಂಥವರು ಒಬ್ಬರಿದ್ದಾರಾ? ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಗೇ ಗುಂಡಿಕ್ಕಿದವರು ನೀವು. ನೀವು ಸಮಾಜದ ಉದ್ಧಾರ ಮಾಡುತ್ತೀರಾ? ಇದಕ್ಕೇ ಆರ್‌ಎಸ್‌ಎಸ್‌ ʼವಿಶ್ವಕುಖ್ಯಾತಿʼ ಆಗಿದ್ದು.

    2008-9ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದರು. ಪ್ರವಾಹ ಬಂದು ಜನ ಸಂಕಷ್ಟಕ್ಕೀಡಾದಾಗ ನಾವು, ನಮ್ಮ ಪಕ್ಷದ ಕಾರ್ಯಕರ್ತರು ಬೆಳಗಾವಿ, ಬಾಗಲಕೋಟೆ ಇತರೆ ಜಿಲ್ಲೆಗಳ ಹಳ್ಳಿಗಳಿಗೆ ಹೋಗಿ ನೆರವಾದೆವು. ಪ್ರತಿ ಕನ್ನಡಿಗರೂ ನೆರೆಯಿಂದ ಸರ್ವಸ್ವ ಕಳೆದುಕೊಂಡ ಸಂಸತ್ರರಿಗೆ ಮಿಡಿದರು. ಜತೆಗೆ, ಕೊಡಗಿನಲ್ಲಿ ಮನೆ ಕಟ್ಟಿಸಿದವರು ಯಾರು?

    ಉತ್ತರ ಕರ್ನಾಟಕದ ಜನರ ಬದುಕು ಕಣ್ಣೀರ ಕಡಲಾಗಿದ್ದಾಗ ಸರಕಾರದಲ್ಲಿದ್ದ ಮಂತ್ರಿಗಳು, ಶಾಸಕರೆಲ್ಲ ಎಲ್ಲಿದ್ದಿರಿ? ಒಮ್ಮೆ ನೆನಪು ಮಾಡಿಕೊಳ್ಳಿ ಸಿ.ಟಿ.ರವಿಯವರೇ. ಮೈಸೂರಿನ ಸುತ್ತೂರು ಸದನದಲ್ಲಿ ಯೋಗ ಮಾಡಿಕೊಂಡು ನಿಮ್ಮ ಪಕ್ಷದವರೆಲ್ಲ ಆರಾಮ ಸ್ಥಿತಿಯಲ್ಲಿದ್ದರೆ, ನಮ್ಮ ಕಾರ್ಯಕರ್ತರು ವಿರಾಮ ಇಲ್ಲದೆ ನೆರೆಪೀಡಿತರಿಗೆ ನೆರವಾಗುತ್ತಿದ್ದರು.

    1996ರಲ್ಲಿ ಗೌಡರು ಪ್ರಧಾನಿ ಆಗಿದ್ದಾಗ ಒಂದು ವಾರ ಈಶಾನ್ಯ ಭಾರತದಲ್ಲಿ ತಂಗಿದ್ದರು. ಆ ಭಾಗದ ಸಮಗ್ರ ಅಭಿವೃದ್ಧಿಗೆ 6.500 ಕೋಟಿ ಪ್ಯಾಕೇಜ್ ಕೊಟ್ಟಿದ್ದನ್ನು ಅಲ್ಲಿನ ಜನ ಈಗಲೂ ಸ್ಮರಿಸುತ್ತಾರೆ. ಈಗ ಅದೇ ಈಶಾನ್ಯದಲ್ಲಿ 2 ರಾಜ್ಯಗಳು ಶತ್ರು ದೇಶಗಳಂತೆ ಹೊಡೆದಾಡುತ್ತಿವೆ. ಇದು ನಿಮ್ಮ ಆಡಳಿತ ವೈಖರಿ. ಗೌಡರಿಂದ ನೀವು ಕಲಿಯುವುದು ಬಹಳ ಇದೆ.

    ನೆರೆ, ಕೋವಿಡ್ ಲಾಕ್ʼಡೌನ್ ವೇಳೆಯಲ್ಲಿ ಜೆಡಿಎಸ್ ಪಕ್ಷದಿಂದ 30-40 ಲಾರಿಯಷ್ಟು ಧವಸ-ಧಾನ್ಯ, ಬಟ್ಟೆ, ಜೀವನಾಶ್ಯಕ ವಸ್ತು ತುಂಬಿಕೊಂಡು ಹೋಗಿ ಹಳ್ಳಿಹಳ್ಳಿಯಲ್ಲೂ ಹಂಚಿದ್ದೇವೆ. ನಮ್ಮ ಕಾರ್ಯಕರ್ತರು ಸಂಕಷ್ಟದಲ್ಲಿದ್ದ ಜನರಿಗೆ ಹಗಲಿರಳು ಶ್ರಮಿಸಿ ನೆರವಿನ ಹಸ್ತ ಚಾಚಿದ್ದಾರೆ. ನಾವೂ ಜನಸೇವೆ ಮಾಡಿದ್ದೇವೆ ಎನ್ನುವುದನ್ನು ನೀವು ಮರೆಯಬಾರದು. ʼಸೇವೆʼ ಎಂಬ ಪದ ಆರ್‌ಎಸ್‌ಪೇಟೆಂಟ್ ಅಲ್ಲ. ಔದಾರ್ಯವನ್ನು ಆರ್‌ಎಸ್‌ಎಸ್‌ ಒಂದೇ ಮೆರೆದಿಲ್ಲ. ರಾಜ್ಯದ ಜನರೆಲ್ಲರೂ ಮೆರೆದಿದ್ದಾರೆ. ಇದನ್ನು ಅಲ್ಲಗಳೆಯಬೇಡಿ ಸಿ.ಟಿ.ರವಿಯವರೇ.

    ಆರ್‌ಎಸ್‌ಎಸ್‌ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವುದು ರಾಷ್ಟ್ರ ನಿರ್ಮಾಣಕ್ಕಲ್ಲ. ಇತಿಹಾಸವನ್ನು ತಿರುಚಿ ಮಕ್ಕಳ ಮನಸ್ಸುಗಳನ್ನು ಕೆಡಿಸಿ ಅವರ ಹೃದಯಗಳಲ್ಲಿ ವಿಷಬೀಜ ಬಿತ್ತಲು. ಕಲೆ, ಸಂಸ್ಕೃತಿ, ಸಾಹಿತ್ಯಗಳಲ್ಲಿ ಆರ್‌ಎಸ್‌ಎಸ್‌ ಬದ್ಧತೆ ಏನೆಂಬುದು ಭಾರತಕ್ಕಷ್ಟೇ ಅಲ್ಲ, ವಿಶ್ವಕ್ಕೇ ಗೊತ್ತಿದೆ. ನಾನು ಓದಿ, ಕೇಳಿ, ನೋಡಿ ತಿಳಿದುಕೊಂಡಿದ್ದೇನೆ.

    ರೈತ-ಕಾರ್ಮಿಕರಿಗೆ ಆರ್‌ಎಸ್‌ಎಸ್‌ ಮಾಡಿದ್ದೇನು? ಅನೇಕ ತಿಂಗಳಿಂದ ರೈತರು ಹೋರಾಟ ನಡೆಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಅನ್ನದಾತರ ಮೇಲೆ ವಾಹನ ಹತ್ತಿಸಿ ಕೊಲ್ಲಲಾಗಿದೆ. ಈ ಬಗ್ಗೆ ಆರ್‌ಎಸ್‌ಎಸ್‌ ಮೌನ ಏಕೆ? ಕೊರೊನ ಸಂಕಷ್ಟದ ಸಮಯದಲ್ಲಿ ಯಾರ ಜೇಬುಗಳು ತುಂಬುತ್ತಿವೆ ಎಂಬುದು ದೇಶಕ್ಕೆ ಗೊತ್ತಿದೆ. ಸೇವೆ, ಸ್ವದೇಶಿ ತತ್ವಗಳು ಆರ್‌ಎಸ್‌ಎಸ್‌ ಅಲಂಕಾರಕ್ಕೆ ಮಾತ್ರ.

    ಆರ್‌ಎಸ್‌ ನಿಂದ ಸ್ವಾಗತ ಪಡೆದುಕೊಳ್ಳುವ ದುಃಸ್ಥಿತಿ ನನಗೆ ಇನ್ನೂ ಬಂದಿಲ್ಲ. ನೀವು ಆರ್‌ಎಸ್‌ ಸಿದ್ದಾಂತದ ಬಗ್ಗೆ ಹೇಳುವುದನ್ನು ನಿಲ್ಲಿಸಿ. ನಾನು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿ. ನಿಮ್ಮ ಸ್ವಯಂ ಸೇವಕರನ್ನೇ ಮಾತನಾಡಿಸಿ, ಸಂಘವನ್ನು ಹತ್ತಿರದಿಂದ ಕಂಡ ಲೇಖಕರು ಬರೆದಿರುವ ಆ ಪುಸ್ತಕವನ್ನು ಒಮ್ಮೆ ಓದಿ ಸಿ.ಟಿ.ರವಿಯವರೇ.

  • ದೊಡ್ಡ ಹುದ್ದೆಗೆ ಹೋದಂತೆ ಗರ್ವ Vs ಡಿಎನ್‌ಎ ಕಾರಣಕ್ಕೆ ಏರ್ ಡ್ರಾಪ್ ಆಗಿ ಅಧಿಕಾರ ಪಡೆಯಲ್ಲ

    ದೊಡ್ಡ ಹುದ್ದೆಗೆ ಹೋದಂತೆ ಗರ್ವ Vs ಡಿಎನ್‌ಎ ಕಾರಣಕ್ಕೆ ಏರ್ ಡ್ರಾಪ್ ಆಗಿ ಅಧಿಕಾರ ಪಡೆಯಲ್ಲ

    – ಎಚ್‌ಡಿಕೆ ವಾಗ್ದಾಳಿಗೆ ಸಿಟಿ ರವಿ ತಿರುಗೇಟು

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಟ್ವಿಟ್ಟರ್‌ನಲ್ಲಿ ಪರಸ್ಪರ ವಾಗ್ದಾಳಿ ನಡೆಸಿದ್ದಾರೆ.

    ಸಿ.ಟಿ.ರವಿಯವರು ಮಂತ್ರಿ ಪದವಿ ಹೋದದ್ದಕ್ಕೆ ಅಥವಾ ಭವಿಷ್ಯದಲ್ಲಿ ವಂಶವಾಹಿ ರಾಜಕಾರಣದಲ್ಲಿ ಬೆಳೆದು, ಪಕ್ಷದಲ್ಲಿ ತನ್ನ ಬುಡಕತ್ತರಿಸುವ ಆತಂಕದಿಂದ ಹಾಗೂ ಬಿಜೆಪಿಯಲ್ಲಿನ ವೈರುದ್ಯಗಳ ಬಗ್ಗೆ ಧ್ವನಿ ಎತ್ತಲು ಧೈರ್ಯ ಇಲ್ಲದೇ ಬೇರೆ ಪಕ್ಷಗಳ ವಂಶವಾಹಿ ಆಡಳಿತದ ಬಗೆಗೆ ಪರೋಕ್ಷವಾಗಿ ಮಾತನಾಡುತ್ತಿದ್ದಾರೆ ಎಂದು ಭಾಸವಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದ್ದರು.

    ಈ ಟ್ವೀಟ್‌ಗೆ ಸಿಟಿ ರವಿ ಅವರು, ಪಕ್ಷದ ಜವಾಬ್ದಾರಿಗಳು ಬದಲಾದರೂ ಕಾರ್ಯಕರ್ತ ಅನ್ನುವ ಹೆಮ್ಮೆ ನನ್ನದು. ಈ ಭಾವ ನನ್ನನೆಂದೂ ಅಹಂಕಾರಿಯಾಗಲು ಬಿಡುವುದಿಲ್ಲ ಮಾಜಿ ಮುಖ್ಯಮಂತ್ರಿಗಳೆ. ನೆನಪಿಡಿ. ಭಾರತೀಯ ಜನತಾ ಪಾರ್ಟಿಯಲ್ಲಿ ಯಾರೂ ಕೂಡಾ ಡಿಎನ್‌ಎ ಕಾರಣಕ್ಕೆ ಏರ್ ಡ್ರಾಪ್ ಆಗಿ ಅಧಿಕಾರ ಪಡೆಯುವುದು ಸಾಧ್ಯವೇ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

    ಎಚ್‌ಡಿಕೆ ಹೇಳಿದ್ದೇನು?
    ಮನುಷ್ಯ ದೊಡ್ಡ ಹುದ್ದೆಗೆ ಹೋದಂತೆಲ್ಲ ಬುದ್ದಿಮತ್ತೆ ಕೂಡ ಹೆಚ್ಚಾಗಬೇಕೇ ವಿನಃ ಗರ್ವ ಬರಬಾರದು. ಆದರೆ, ಸಿ.ಟಿ.ರವಿಯವರ ಮಾತುಗಳು ಆ ಹಂತ ತಲುಪಿದಂತೆ ಭಾಸವಾಗುತ್ತದೆ. ಬಳಸುವ ಭಾಷೆ ಅದನ್ನು ಪ್ರತಿಧ್ವನಿಸುತ್ತಿದೆ.

    ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಸ್ಥಾನಕ್ಕೆ ಅಂದಿನ ಬಿಜೆಪಿ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾ ಪುತ್ರ ರಾತ್ರೋರಾತ್ರಿ ಬಂದು ಕುಳಿತಿದ್ದಾರೆ. ಜಯ್ ಶಾ ಎಷ್ಟು ಸೆಂಚುರಿ,ಎಲ್ಲಿ ಬಾರಿಸಿದ್ದಾರೆ? ಸಿ.ಟಿ.ರವಿಗೆ ಅಲ್ಪಜ್ಞಾನ ಇರುವುದಕ್ಕೆ ನನಗೆ ಕನಿಕರ. ಜಯ್ ಶಾ ಪದವಿ ಕೂಡ ಅವರಪ್ಪನ ಬಳುವಳಿ ಎಂದು ಹೇಳುವ ಧೈರ್ಯ ರವಿಗೆ ಇಲ್ಲ.

    ಸಿ.ಟಿ.ರವಿಗೆ ಬಹುಶಃ ತನ್ನದೇ ಪಕ್ಷದಲ್ಲಿ ಹೆಮ್ಮರವಾಗುತ್ತಿರುವ ವಂಶವಾಹಿ ರಾಜಕಾರಣದ ವಿರುದ್ಧ ಕೋಪ ಇರಬೇಕು. ಅದಕ್ಕಾಗಿ ಈ ವಿಚಾರ ಕೆಣಕಿದ್ದಾರೆ ಎಂದೆನಿಸುತ್ತಿದೆ.

    ಸಿ.ಟಿ.ರವಿಯವರು ಮಂತ್ರಿ ಪದವಿ ಹೋದದ್ದಕ್ಕೆ ಅಥವಾ ಭವಿಷ್ಯದಲ್ಲಿ ವಂಶವಾಹಿ ರಾಜಕಾರಣದಲ್ಲಿ ಬೆಳೆದು, ಪಕ್ಷದಲ್ಲಿ ತನ್ನ ಬುಡಕತ್ತರಿಸುವ ಆತಂಕದಿಂದ ಹಾಗೂ ಬಿಜೆಪಿಯಲ್ಲಿನ ವೈರುಧ್ಯಗಳ ಬಗ್ಗೆ ಧ್ವನಿ ಎತ್ತಲು ಧೈರ್ಯ ಇಲ್ಲದೇ ಬೇರೆ ಪಕ್ಷಗಳ ವಂಶವಾಹಿ ಆಡಳಿತದ ಬಗೆಗೆ ಪರೋಕ್ಷವಾಗಿ ಮಾತನಾಡುತ್ತಿದ್ದಾರೆ ಎಂದು ಭಾಸವಾಗುತ್ತಿದೆ.

    ಸಿಟಿ ರವಿ ತಿರುಗೇಟು:
    ನನಗೆ ರಾಜಕೀಯವೆನಿದ್ದರೂ ತತ್ವ ಸಿದ್ದಾಂತದ ಕಾರಣಕ್ಕೆ ಹಾಗೂ ರಾಷ್ಟ್ರ ನಿರ್ಮಾಣದ ಕಾರಣಕ್ಕೆ. ನಮ್ಮ ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ವ್ಯವಸ್ಥೆಯ ಬಗ್ಗೆ ನನಗೆ ಹೆಮ್ಮೆ ಇದೆ, ಹಾಗೆಯೇ ಎಲ್ಲಾ ರಾಜಕೀಯ ಪಕ್ಷಗಳೂ ಇಂತಹ ವ್ಯವಸ್ಥೆ ಬೆಳೆಸಿಕೊಳ್ಳಬೇಕು ಎಂಬುದು ನನ್ನ ಆಶಯ ಎಂದು ಹೇಳಿ ತಿರುಗೇಟು ನೀಡಿದ್ದಾರೆ.