Tag: hd kumaraswamy

  • ಡಿಕೆಶಿ, JDS ಟ್ರಂಕ್ ವಾರ್ – ಹೆಚ್‌ಡಿಕೆ ಸಾಧನೆ ಪಟ್ಟಿ ಬಿಡುಗಡೆ ಮಾಡಿ ಟಾಂಗ್

    ಡಿಕೆಶಿ, JDS ಟ್ರಂಕ್ ವಾರ್ – ಹೆಚ್‌ಡಿಕೆ ಸಾಧನೆ ಪಟ್ಟಿ ಬಿಡುಗಡೆ ಮಾಡಿ ಟಾಂಗ್

    ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಮತ್ತು ಜೆಡಿಎಸ್ (JDS) ನಡುವೆ ಖಾಲಿ ಟ್ರಂಕ್ ವಾರ್ ಜೋರಾಗಿ ನಡೆಯುತ್ತಿದೆ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರನ್ನ ಖಾಲಿ ಟ್ರಂಕ್ ಎಂದಿದ್ದ ಡಿಸಿಎಂ ಡಿ.ಕೆ ಶಿವಕುಮಾರ್‌ಗೆ ಜೆಡಿಎಸ್ ತಿರುಗೇಟು ಕೊಟ್ಟಿದೆ.

    ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿರೋ ಜೆಡಿಎಸ್, ಹೆಚ್‌ಡಿಕೆ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳ ಪಟ್ಟಿ ಬಿಡುಗಡೆ ಮಾಡಿ ಕುಮಾರಸ್ವಾಮಿ (HD Kumaraswamy) ಟ್ರಂಕ್‌ನಲ್ಲಿ ಅಭಿವೃದ್ಧಿ ಇದೆ ಎಂದು ಟಾಂಗ್ ಕೊಟ್ಟಿದೆ. ಡಿಕೆಶಿ ಆಸ್ತಿ ಗಳಿಕೆಯ ಪಟ್ಟಿ ಬಿಡುಗಡೆ ಮಾಡಿ ಇದು ಡಿ.ಕೆ ಶಿವಕುಮಾರ್ ಟ್ರಂಕ್ ಎಂದು ಲೇವಡಿ ಮಾಡಿದೆ. ಇದನ್ನೂ ಓದಿ: ವಿದ್ಯಾವಂತರು ʻಎ ಖಾತಾ’ ಪರಿವರ್ತನೆ ಒಪ್ಪುತ್ತಿರೋದಕ್ಕೆ ಧನ್ಯವಾದ; ಕುಮಾರಸ್ವಾಮಿ ಖಾಲಿ ಟ್ರಂಕ್ ಎಂದ ಡಿಕೆಶಿ

    ಎಕ್ಸ್‌ನಲ್ಲೇನಿದೆ?
    ಹೌದಪ್ಪ ಹೌದು. ಡಿಸಿಎಂ ಡಿಕೆಶಿವಕುಮಾರ್ ಸಾಹೇಬರೇ, ಹೆಚ್.ಡಿ.ಕುಮಾರಸ್ವಾಮಿ ಅವರು ಖಾಲಿ ಟ್ರಂಕ್ ಅನ್ನೋದು ದಿಟವೇ. ಅವರದ್ದು ಖಾಲಿ ಕೈ, ತುಂಬಿದ ಹೃದಯ. ಆದರೆ ನಿಮ್ಮದು ಹಾಗಲ್ಲವಲ್ಲ, ಹೃದಯದ ತುಂಬಾ ಕಾರ್ಕೋಟಕ ವಿಷ ಎಂದು ಆಕ್ರೋಶ ಹೊರಹಾಕಿದೆ.

    ಕಂಡೋರ ಹಣ ಮತ್ತು ಬಡವರು, ದೀನದಲಿತರು, ದುರ್ಬಲರ ಭೂಮಿಯನ್ನು ಹೆದರಿಸಿ ಬೆದರಿಸಿ ಕಿತ್ತುಕೊಂಡು ತುಂಬಿಸಿಕೊಂಡ ಪಾಪದ ಟ್ರಂಕು. ಈ ಸತ್ಯ ನಿಮಗಷ್ಟೇ ಅಲ್ಲ, ಇಡೀ ನಾಡಿಗೆ, ದೇಶಕ್ಕೇ ತಿಳಿದಿದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ಮಿಸ್ಟರ್ ಲೂಟೇಶಿ ಎಂದು ಕಿಡಿಕಾರಿದೆ.

    ಜೆಡಿಎಸ್ ಬಿಡುಗಡೆ ಮಾಡಿದ ಟ್ರಂಕ್ ಪಟ್ಟಿ
    ಕುಮಾರಸ್ವಾಮಿ ಟ್ರಂಕ್‌ನಲ್ಲಿರುವುದೇನು?
    – 2 ಬಾರಿ ರೈತರ ಸಾಲಮನ್ನ.
    – ಸಾರಾಯಿ ಮತ್ತು ಲಾಟರಿ ನಿಷೇಧ.
    – ಗ್ರಾಮ ವಾಸ್ತವ್ಯ ಮೂಲಕ ಹಳ್ಳಿ-ಹಳ್ಳಿಗಳಿಗೆ ಸರ್ಕಾರ.
    – ಜನತಾ ದರ್ಶನ
    – ಸುವರ್ಣ ಗ್ರಾಮ ಯೋಜನೆ.
    – ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಚನೆ.
    – ನಮ್ಮ ಮೆಟ್ರೋಗೆ ಅಡಿಗಲ್ಲು.
    – ಧಾರವಾಡ ಹೈಕೋರ್ಟ್ ಪೀಠ ಸ್ಥಾಪನೆ.
    – ಬೀದಿಬದಿಯ ವ್ಯಾಪಾರಿಗಳಿಗೆ ಬಡವರ ಬಂಧು ಯೋಜನೆ.
    – ಸುವರ್ಣ ಸೌಧ ನಿರ್ಮಾಣ.
    – ರಾಜ್ಯದಲ್ಲಿ 760 ಪ್ರಾಥಮಿಕ ಶಾಲೆಗಳು, 1,000 ಪ್ರೌಢಶಾಲೆಗಳು, 260 ಪದವಿ ಕಾಲೇಜುಗಳು, 500 ಪದವಿ ಪೂರ್ವ ಕಾಲೇಜುಗಳು.
    – 7 ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, 6 ಮೆಡಿಕಲ್ ಕಾಲೇಜುಗಳ ಸ್ಥಾಪನೆ.
    – ವಿದ್ಯಾರ್ಥಿನಿಯರಿಗೆ ಉಚಿತ ಸೈಕಲ್ ವಿತರಣೆ.
    – ಭಾಗ್ಯಲಕ್ಷ್ಮಿ ಯೋಜನೆ.
    – ಪ್ರೌಢಶಾಲೆಗಳಲ್ಲಿಯೂ ಬಿಸಿಯೂಟ.
    – 1,000 ಕರ್ನಾಟಕ ಪಬ್ಲಿಕ್ ಶಾಲೆಗಳ ಘೋಷಣೆ.
    – ಸುವರ್ಣ ಗ್ರಾಮ ಯೋಜನೆ.
    – ರೈತ ಸಿರಿ ಯೋಜನ.
    – ಫೆರಿಪೆರಲ್ ರಿಂಗ್ ರೋಡ್
    – ಕಾಂಪೀಟ್ ವಿಥ್ ಚೀನಾ
    – ಸಂಧ್ಯಾ ಸುರಕ್ಷಾ ಯೋಜನೆ.
    – ರೋಶಿಣಿ ಯೋಜನೆ
    – ಮಾತೃಶ್ರೀ ಯೋಜನೆ
    – ಕಾವೇರಿ 4ನೇ ಹಂತ, ಹೊಸ ಪ್ರದೇಶಗಳಿಗೆ ಕಾವೇರಿ ನೀರು.
    – ಕೊಡಗಿನ ನೆರೆ ಸಂತ್ರಸ್ತರಿಗೆ ತಲ 10ಲಕ್ಷವೆಚ್ಚದಲ್ಲಿ ಶಾಶ್ವತ ಮನೆ

    ಡಿ.ಕೆ ಶಿವಕುಮಾರ್ ಟ್ರಂಕ್‌ನಲ್ಲಿರುವುದು?
    – ಬಡವರು, ದಲಿತರ ಭೂಮಿ ಕಬಳಿಸಿ ತುಂಬಿಸಿಕೊಂಡ ಸಾವಿರಾರು ಕೋಟಿ ಮೌಲ್ಯದ ಅಕ್ರಮ ಆಸ್ತಿಗಳ ಟ್ರಂಕು ಎಂದು ಹೇಳಿ ಚುನಾವಣಾ ಆಯೋಗಕ್ಕೆ ನೀಡಿದ ಆಸ್ತಿ ಲೆಕ್ಕವನ್ನು ಪ್ರಕಟಿಸಿ ತಿರುಗೇಟು ನೀಡಿದೆ.
    – 2004 – 8 ಕೋಟಿ ರೂ.
    – 2008 – 75 ಕೋಟಿ ರೂ.
    – 2013 – 215 ಕೋಟಿ ರೂ.
    – 2018 – 840 ಕೋಟಿ ರೂ.
    – 2023 – 1414 ಕೋಟಿ ರೂ.

  • ಕುಮಾರಸ್ವಾಮಿಯವರನ್ನ ಸಿಎಂ ಕುರ್ಚಿಯಲ್ಲಿ ಕೂರಿಸೋದೆ ನನ್ನ ಗುರಿ, ನನಗೆ ಅಧಿಕಾರ ಬೇಕಿಲ್ಲ: ನಿಖಿಲ್

    ಕುಮಾರಸ್ವಾಮಿಯವರನ್ನ ಸಿಎಂ ಕುರ್ಚಿಯಲ್ಲಿ ಕೂರಿಸೋದೆ ನನ್ನ ಗುರಿ, ನನಗೆ ಅಧಿಕಾರ ಬೇಕಿಲ್ಲ: ನಿಖಿಲ್

    ರಾಮನಗರ: ಕುಮಾರಸ್ವಾಮಿ (HD Kumaraswamy) ಅವರನ್ನು ಸಿಎಂ ಕುರ್ಚಿಯಲ್ಲಿ ಕೂರಿಸೋದು ನನ್ನ ಗುರಿ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದ್ದಾರೆ.

    ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ ಚನ್ನಪಟ್ಟಣದಲ್ಲಿ (Channapatna) ಇಂದು ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಲಾಯಿತು. ಸಭೆಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಕಾರ್ಯಕರ್ತರ ವಿರುದ್ಧ ಬೇಸರ ಹೊರಹಾಕಿದರು. ಸೊಸೈಟಿ ಚುನಾವಣೆ ಹಿನ್ನೆಲೆ ಬಣ ರಾಜಕೀಯ ಮಾಡ್ತಿದ್ದ ಕಾರ್ಯಕರ್ತರನ್ನ ತರಾಟೆಗೆ ತೆಗೆದುಕೊಂಡ ನಿಖಿಲ್, ಶಿಸ್ತಿನ ಪಾಠ ಮಾಡಿದರು. ಇದನ್ನೂ ಓದಿ: ಗ್ಯಾರಂಟಿ ಭಾಗ್ಯ ಕೊಟ್ಟ ಸರ್ಕಾರದಿಂದ ಕತ್ತಲೆ ಭಾಗ್ಯ – ಸ್ಥಳೀಯರ ಆಕ್ರೋಶ

    ಸ್ಥಳೀಯ ಮುಖಂಡರ ಒತ್ತಡಕ್ಕೆ ಮಣಿದು ನಾನು ಚುನಾವಣೆಗೆ ಬಂದೆ. ನಾನು ಹೇಡಿ ಅಲ್ಲ, ಸಾರ್ವಜನಿಕವಾಗಿ ಕಣ್ಣೀರು ಹಾಕಲ್ಲ, ಆದರೆ ಅವತ್ತು ಕಣ್ಣೀರು ಹಾಕಿದೆ. ಈಗ ಸೊಸೈಟಿ ಚುನಾವಣೆ ಬಗ್ಗೆ ಪ್ರಶ್ನೆ ಮಾಡ್ತಿದ್ದೀರಲ್ಲಾ. ಜಿಲ್ಲೆಯ ಜನ ನನಗೆ ಅಧಿಕಾರ ಕೊಟ್ಟಿದ್ದೀರಾ? ನನಗೆ ಒಂದು ಬಾರಿಯಾದ್ರೂ ಆಶೀರ್ವಾದ ಮಾಡಿದ್ದೀರಾ? ಕುಮಾರಣ್ಣ 1,200 ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಿದ್ರು. ಆದರೆ ಇಲ್ಲಿ ಅಭಿವೃದ್ಧಿ ರಾಜಕಾರಣಕ್ಕೆ ಬೆಲೆ ಇಲ್ಲ ಎಂದು ಬೇಸರಿಸಿದರು. ಇದನ್ನೂ ಓದಿ: ಕರೂರು ಕಾಲ್ತುಳಿತ ದುರಂತದ ತನಿಖೆ ಆರಂಭಿಸಿದ ಸಿಬಿಐ

    ಜಿಲ್ಲೆಯಲ್ಲಿ ಕಾಂಗ್ರೆಸ್ ನಾಲ್ಕು ಸ್ಥಾನ ಗೆದ್ದಿದೆ, ಇದು ಶಾಶ್ವತ ಅಲ್ಲ. ಜನ ಮನಸ್ಸು ಮಾಡಿದ್ರೆ ಬದಲಾವಣೆ ಆಗೇ ಆಗುತ್ತೆ. ಇಲ್ಲಿ ನಡೆಯುವ ವಿಚಾರ ಇಡೀ ರಾಜ್ಯಕ್ಕೆ ಹೋಗುತ್ತೆ. ಇಲ್ಲಿ ಬೀದಿಬೀದಿಯಲ್ಲಿ ಚರ್ಚೆ ಮಾಡಿದ್ರೆ ಪಕ್ಷದ ಗೌರವ ಏನಾಗುತ್ತೆ? ಏನೇ ಸಮಸ್ಯೆ ಇದ್ರೂ ಪಕ್ಷದ ಚೌಕಟ್ಟಿನ ಒಳಗೆ ಚರ್ಚೆ ಮಾಡಿ. ಅಧಿಕಾರ ಇದ್ದಾಗ ಸಭೆಗೆ ಎಷ್ಟು ಜನ ಸೇರುತ್ತಿದ್ದರು. ಈಗ ಎಷ್ಟು ಜನ ಬಂದಿದ್ದಾರೆ ಎಂದರು. ಇದನ್ನೂ ಓದಿ: ಪಾತಾಳಕ್ಕೆ ಬಿದ್ದ ಪಾಕ್‌ – ಸಾಲದ ಪ್ರಮಾಣ 80 ಲಕ್ಷ ಕೋಟಿಗೆ ಏರಿಕೆ

    ಅಲ್ಲದೇ ಚುನಾವಣೆ ಇನ್ನು ಎರಡೇ ವರ್ಷ ಇರೋದು. ಈಗ ಸೊಸೈಟಿ ಚುನಾವಣೆ ಬಗ್ಗೆ ಚರ್ಚೆ ಮಾಡಿಕೊಂಡು ಕೂತುಕೊಳ್ಳೊದು ಬೇಡ. ತಾಲೂಕಿನಲ್ಲಿ ಸ್ವಾರ್ಥ ರಾಜಕಾರಣ ಮಾಡುತ್ತಿದೆ. ಸಹಕಾರ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿ ಗೆದ್ದಿದೆ. ಮುಂದೆ ಅಧಿಕಾರ ಹೇಗೆ ಮಾಡಬೇಕು ಅಂತ ಕಾಂಗ್ರೆಸ್‌ನವರು ತೋರಿಸಿಕೊಟ್ಟಿದ್ದಾರೆ. ಮುಂದೆ ನಾವೂ ಇದನ್ನೇ ಅನುಸರಿಸುತ್ತೇವೆ. ನಾನು ಕೆಲಸ ಮಾಡುತ್ತಿರೋದು ಈ ಪಕ್ಷಕ್ಕೋಸ್ಕರ. ಮುಂದೆ ಚುನಾವಣೆಗೆ ಎಷ್ಟು ಸೀಟ್ ತರಬೇಕು ಅನ್ನೋದು ಡೆಲ್ಲಿಯಲ್ಲಿ ತೀರ್ಮಾನ ಆಗುತ್ತದೆ. ಕುಮಾರಣ್ಣನ ಸಿಎಂ ಕುರ್ಚಿಯಲ್ಲಿ ಕೂತ ದಿನ ನಾನು ಅಧಿಕಾರ ತೆಗೆದುಕೊಳ್ಳಲ್ಲ. ಕಾರ್ಯಕರ್ತರು, ಮುಖಂಡರಿಗೆ ಅಧಿಕಾರ ಕೊಡುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕರ್ನೂಲ್‌ ದುರಂತದ ಬಳಿಕ ಎಚ್ಚೆತ್ತ ಸಾರಿಗೆ ಇಲಾಖೆ – ಬಸ್‌ಗಳಲ್ಲಿ ಈ ವಸ್ತುಗಳನ್ನ ಕೊಂಡೊಯ್ಯುವಂತಿಲ್ಲ!

  • ವಿದ್ಯಾವಂತರು ʻಎ ಖಾತಾ’ ಪರಿವರ್ತನೆ ಒಪ್ಪುತ್ತಿರೋದಕ್ಕೆ ಧನ್ಯವಾದ; ಕುಮಾರಸ್ವಾಮಿ ಖಾಲಿ ಟ್ರಂಕ್ ಎಂದ ಡಿಕೆಶಿ

    ವಿದ್ಯಾವಂತರು ʻಎ ಖಾತಾ’ ಪರಿವರ್ತನೆ ಒಪ್ಪುತ್ತಿರೋದಕ್ಕೆ ಧನ್ಯವಾದ; ಕುಮಾರಸ್ವಾಮಿ ಖಾಲಿ ಟ್ರಂಕ್ ಎಂದ ಡಿಕೆಶಿ

    ಬೆಂಗಳೂರು: ನಗರದಲ್ಲಿ ಬಿ ಖಾತಾ ಆಸ್ತಿಗಳನ್ನು ಎ ಖಾತಾಗೆ ಪರಿವರ್ತನೆ ಮಾಡುತ್ತಿರುವ ಬಗ್ಗೆ ಇಲ್ಲಸಲ್ಲದ ಟೀಕೆ ಮಾಡುತ್ತಿರುವ ಕುಮಾರಸ್ವಾಮಿ ಖಾಲಿ ಟ್ರಂಕ್ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ವಾಗ್ದಾಳಿ ನಡೆಸಿದರು.

    ಕಬ್ಬನ್ ಪಾರ್ಕ್‌ನಲ್ಲಿ ಇಂದು ಬೆಳಗ್ಗೆ ʻಬೆಂಗಳೂರು ನಡಿಗೆʼ ಕಾರ್ಯಕ್ರಮದ ವೇಳೆ ಡಿಕೆಶಿ ಸಾರ್ವಜನಿಕರೊಂದಿಗೆ ಮಾತನಾಡಿದರು. ಇದನ್ನೂ ಓದಿ: ತೀವ್ರ ಕಳಪೆ ಮಟ್ಟಕ್ಕೆ ಕುಸಿದ ದೆಹಲಿ ವಾಯುಗುಣಮಟ್ಟ – ಅ.29, 30ರಂದು ಕೃತಕ ಮಳೆ ಸಾಧ್ಯತೆ

    ಈ ವೇಳೆ ನಾಗರಿಕರೊಬ್ಬರು, ಸರ್ಕಾರ ಆಸ್ತಿಗಳನ್ನು ʻಎ ಖಾತಾʼ (A Khata) ಆಗಿ ಪರಿವರ್ತನೆ ಮಾಡುತ್ತಿರುವುದು ಒಳ್ಳೆಯ ಕೆಲಸ. ಈ ಪರಿವರ್ತನೆಗಾಗಿ ಅನೇಕರು, ಹಲವು ವರ್ಷಗಳಿಂದ ಕಾಯುತ್ತಿದ್ದರು ಎಂದು ಸರ್ಕಾರದ ತೀರ್ಮಾನವನ್ನ ಸ್ವಾಗತಿಸಿ, ಮುಕ್ತವಾಗಿ ಪ್ರಶಂಸಿದರು. ಇದನ್ನೂ ಓದಿ: ನೀರಿನ ಬಿಲ್‌ 3 ಪಟ್ಟು ಹೆಚ್ಚಳ – ದುಬಾರಿ ಬಿಲ್ ನೋಡಿ ಹೌಹಾರಿದ ಗ್ರಾಹಕರು!

    ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ʻಎ ಖಾತಾʼ ನಿಮ್ಮ ಆಸ್ತಿ ದಾಖಲೆ. ಸಾರ್ವಜನಿಕರ ಆಸ್ತಿ ದಾಖಲೆಗಳನ್ನ ಸರಿಪಡಿಸಿ, ಅವುಗಳನ್ನು ಜನರಿಗೆ ನೀಡುವುದು ನಮ್ಮ ಸರ್ಕಾರದ 6ನೇ ಗ್ಯಾರಂಟಿ. ಇದಕ್ಕಾಗಿ ನಾವು ಕೇವಲ 5% ಮಾತ್ರ ಅಭಿವೃದ್ಧಿ ಶುಲ್ಕ ಪಾವತಿ ಮಾಡುವಂತೆ ಕೇಳಿದ್ದೇವೆ. ನಿಮ್ಮಂತಹ ಪ್ರಜ್ಞಾವಂತ ನಾಗರೀಕರು ಇದನ್ನು ಸ್ವಾಗತಿಸಿರುವುದಕ್ಕೆ ಧನ್ಯವಾದ ಎಂದು ನಮಿಸಿದರು.

  • ಜೆಡಿಎಸ್‌ಗೆ ‘ಗ್ರೇಟರ್’ ಶಕ್ತಿ – ಹೆಚ್‌ಡಿಕೆ ನೇತೃತ್ವದಲ್ಲಿ 5 ನೂತನ ಪಾಲಿಕೆಗಳಿಗೆ ಉಸ್ತುವಾರಿ ಸಮಿತಿ ರಚನೆ

    ಜೆಡಿಎಸ್‌ಗೆ ‘ಗ್ರೇಟರ್’ ಶಕ್ತಿ – ಹೆಚ್‌ಡಿಕೆ ನೇತೃತ್ವದಲ್ಲಿ 5 ನೂತನ ಪಾಲಿಕೆಗಳಿಗೆ ಉಸ್ತುವಾರಿ ಸಮಿತಿ ರಚನೆ

    ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ ನೂತನವಾಗಿ ರಚಿಸಲಾಗಿರುವ ಐದು ನಗರ ಪಾಲಿಕೆಗಳ ಮುಂಬರುವ ಚುನಾವಣೆಗಳ ಸಿದ್ಧತೆಗಾಗಿ ಜೆಡಿಎಸ್ (JDS) ಪಕ್ಷವು ಉನ್ನತ ಮಟ್ಟದ ಉಸ್ತುವಾರಿ ಸಮಿತಿಯನ್ನು ರಚಿಸಿದೆ. ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಶನಿವಾರ ಅಧಿಕೃತ ನೇಮಕಾತಿ ಆದೇಶ ಹೊರಡಿಸಿದ್ದಾರೆ.

    ವಿಧಾನ ಪರಿಷತ್ ಶಾಸಕರಾದ ಟಿ.ಎ. ಶರವಣ ಅವರು ಸೇರಿದಂತೆ ಒಟ್ಟು ಒಂಬತ್ತು ಮಂದಿ ಹಿರಿಯ ಮುಖಂಡರನ್ನು ಈ ಸಮಿತಿಗೆ ನೇಮಿಸಲಾಗಿದೆ. ಫೆಬ್ರವರಿ-ಮಾರ್ಚ್ 2026ರಲ್ಲಿ ಈ ನಗರ ಪಾಲಿಕೆಗಳಿಗೆ ಚುನಾವಣೆ ನಡೆಯುವ ಸಂಭವವಿರುವ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ಒತ್ತು ನೀಡಲು ಈ ನಿರ್ಣಯವನ್ನು ಕೈಗೊಳ್ಳಲಾಗಿದೆ.

    ಉಸ್ತುವಾರಿ ಸಮಿತಿಯ ಪ್ರಮುಖ ಸದಸ್ಯರು:
    * ಎ. ಮಂಜು, ಶಾಸಕರು, ಅರಕಲಗೂಡು ವಿಧಾನಸಭಾ ಕ್ಷೇತ್ರ
    * ಎಂ.ಟಿ. ಕೃಷ್ಣಪ್ಪ, ಶಾಸಕರು, ತುರುವೇಕೆರೆ ವಿಧಾನಸಭಾ ಕ್ಷೇತ್ರ
    * ಟಿ.ಎ. ಶರವಣ, ಶಾಸಕರು, ವಿಧಾನ ಪರಿಷತ್ತು, ಬೆಂಗಳೂರು
    * ಟಿ.ಎನ್. ಜವರಾಯಿಗೌಡ, ಶಾಸಕರು, ವಿಧಾನಪರಿಷತ್ತು, ಬೆಂಗಳೂರು
    * ನಿಖಿಲ್ ಕುಮಾರಸ್ವಾಮಿ, ರಾಜ್ಯಾಧ್ಯಕ್ಷರು, ಯುವಜನತಾದಳ
    * ಎಂ. ಕೃಷ್ಣಾರೆಡ್ಡಿ, ಮಾಜಿ ಉಪಸಭಾಧ್ಯಕ್ಷರು, ವಿಧಾನಸಭೆ
    * ಸುರೇಶ್‌ಗೌಡ, ಮಾಜಿ ಶಾಸಕರು, ನಾಗಮಂಗಲ ವಿಧಾನಸಭಾ ಕ್ಷೇತ್ರ
    * ಎ. ಮಂಜುನಾಥ್, ಮಾಜಿ ಶಾಸಕರು, ಮಾಗಡಿ ವಿಧಾನಸಭಾ ಕ್ಷೇತ್ರ
    * ಕೆ.ಎ. ತಿಪ್ಪೇಸ್ವಾಮಿ, ಮಾಜಿ ಶಾಸಕರು, ಬೆಂಗಳೂರು

    ಉಸ್ತುವಾರಿ ಸಮಿತಿಯ ಪ್ರಮುಖ ಐದು ಕಾರ್ಯಗಳು:
    ವಾರ್ಡ್ವಾರು ಉಸ್ತುವಾರಿ ಸಮಿತಿಗಳ ರಚನೆ:
    ಹೊಸದಾಗಿ ರಚಿತವಾಗಿರುವ ಐದು ನಗರ ಪಾಲಿಕೆಗಳಲ್ಲಿ (ಬೆಂಗಳೂರು ಕೇಂದ್ರ, ಪಶ್ಚಿಮ, ದಕ್ಷಿಣ, ಪೂರ್ವ ಮತ್ತು ಉತ್ತರ) ವಾರ್ಡ್ವಾರು ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗೆ ಪಕ್ಷದ ಮುಖಂಡರು, ಮಾಜಿ ನಗರ ಪಾಲಿಕೆ ಸದಸ್ಯರು ಮತ್ತು ಹಿಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳನ್ನು ಒಳಗೊಂಡ ಉಸ್ತುವಾರಿ ಸಮಿತಿಗಳನ್ನು ರಚಿಸುವುದು.

    ಸದಸ್ಯತ್ವ ನೋಂದಣಿ ಅಭಿಯಾನ:
    ಪಾಲಿಕೆವಾರು ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ರೂಪಿಸಿ, ವಾರ್ಡ್ವಾರು ಮತ್ತು ವಿಧಾನಸಭಾ ಕ್ಷೇತ್ರವಾರು ಕಾರ್ಯಕರ್ತರು ಹಾಗೂ ಮುಖಂಡರ ಸಭೆಗಳನ್ನು ಆಯೋಜಿಸುವುದು.

    ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ:
    ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸುವ ಆಕಾಂಕ್ಷಿಗಳ ಸಾಮರ್ಥ್ಯವನ್ನು ಆಧರಿಸಿ, ವಾರ್ಡ್ವಾರು ಪಕ್ಷದ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿ ಪಕ್ಷದ ರಾಜ್ಯ ಕಚೇರಿಗೆ ಸಲ್ಲಿಸುವುದು.

    ಎನ್.ಡಿ.ಎ. ಮೈತ್ರಿಕೂಟದೊಂದಿಗೆ ಸಮನ್ವಯ:
    ಮುಂಬರುವ ನಗರ ಪಾಲಿಕೆ ಚುನಾವಣೆಯಲ್ಲಿ ಎನ್.ಡಿ.ಎ. ಮೈತ್ರಿಕೂಟದ ಪಕ್ಷಗಳೊಂದಿಗೆ ಸಮನ್ವಯ ಮತ್ತು ಚುನಾವಣಾ ಹೊಂದಾಣಿಕೆ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸಿ, ರಾಜ್ಯ ಕಚೇರಿಗೆ ಸಲ್ಲಿಸುವುದು.

    ಕಾರ್ಯಗಳ ವಿಮರ್ಶೆ:
    ರಚಿಸಲಾದ ಉಪ-ಸಮಿತಿಗಳ ಕಾರ್ಯಗಳನ್ನು ಕಾಲಕಾಲಕ್ಕೆ ವಿಮರ್ಶಿಸುವುದು.

    ಅಕ್ಟೋಬರ್ 16ರಂದು ನಡೆದಿದ್ದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಈ ಸಮಿತಿಯನ್ನು ರಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆ ಸದ್ಯಕ್ಕೆ ಇಲ್ಲ: ಹೆಚ್‌ಡಿಕೆ

    ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆ ಸದ್ಯಕ್ಕೆ ಇಲ್ಲ: ಹೆಚ್‌ಡಿಕೆ

    – ಶೀಘ್ರವೇ ಜೆಡಿಎಸ್-ಬಿಜೆಪಿ ನಡುವೆ ಸಮನ್ವಯ ಸಮಿತಿ ರಚನೆ

    ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷರ (JDS State President) ಬದಲಾವಣೆ ಚರ್ಚೆ ಸದ್ಯಕ್ಕೆ ಇಲ್ಲ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಸ್ಪಷ್ಟಪಡಿಸಿದ್ದಾರೆ.

    ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸದ್ಯಕ್ಕೆ ಪಕ್ಷದಲ್ಲಿ ರಾಜ್ಯಾಧ್ಯಕ್ಷ ಬದಲಾವಣೆ ಚರ್ಚೆ ಇಲ್ಲ. ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆಗೆ ಬಂದಿಲ್ಲ. ಸದ್ಯ ನಾನೇ ಅಧ್ಯಕ್ಷ ಆಗಿ ಇದ್ದೇನೆ. ರಾಜ್ಯಾಧ್ಯಕ್ಷ ಬದಲಾವಣೆ ಬೇಡ ಅಂತ ಒಂದು ವಿಂಗ್ ಇದೆ. ಇನ್ನೊಂದು ಕಡೆ ನಿಖಿಲ್ ಕುಮಾರಸ್ವಾಮಿಗೆ (Nikhil Kumaraswamy) ಜವಾಬ್ದಾರಿ ಕೊಡಬೇಕು ಅಂತ ಇದೆ. ಆದರೆ ಇದ್ಯಾವುದರ ಬಗ್ಗೆ ಚರ್ಚೆ ಆಗಿಲ್ಲ, ಸದ್ಯಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಬದಲಾವಣೆ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಟ್ರಂಪ್‌ ಆಸೆಗೆ ತಣ್ಣೀರು – ಮಲೇಷ್ಯಾಗೆ ಬರಲ್ಲ ಎಂದ ಮೋದಿ

    ಇದೇ ವೇಳೆ ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರ ಪಕ್ಷದ ಬೆಳವಣಿಗೆಗಳು ಏನಿದೆ ನಾವು ಅದರ ಬಗ್ಗೆ ಚರ್ಚೆ ಮಾಡೋ ಅವಶ್ಯಕತೆ ಇಲ್ಲ. ಅವರ ಪಕ್ಷದಲ್ಲಿ ಏನೇನು ಬೇಕು ಅವರು ತೀರ್ಮಾನ ಮಾಡಿಕೊಳ್ಳಲಿ ಎಂದರು. ಇದನ್ನೂ ಓದಿ: ಸಂಸತ್ ಆವರಣದಲ್ಲಿ ರಾಣಿ ಚೆನ್ನಮ್ಮ ಜಯಂತ್ಯೋತ್ಸವ ಆಚರಣೆ

    ಸಮನ್ವಯ ಸಮಿತಿ (Coordination Committee) ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಶೀಘ್ರವೇ ಜೆಡಿಎಸ್-ಬಿಜೆಪಿ ನಡುವೆ ಸಮನ್ವಯ ಸಮಿತಿ ರಚನೆ ಆಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ಬಿಜೆಪಿ ನಾಯಕರು ಬಂದು ಚರ್ಚೆ ಮಾಡಿದ್ದಾರೆ. ಬೆಂಗಳೂರಿಗೆ ಒಂದು, ರಾಜ್ಯಕ್ಕೆ ಒಂದು ಸಮನ್ವಯ ಸಮಿತಿ ರಚನೆ ಬಗ್ಗೆ ತೀರ್ಮಾನ ಆಗಿದೆ. ಒಂದು ವಾರ ಅಥವಾ 10 ದಿನಗಳಲ್ಲಿ ಅದರ ಬಗ್ಗೆ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: 17 ವರ್ಷಗಳ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಕೆಟ್ಟ ಸಾಧನೆ ಬರೆದ ಕೊಹ್ಲಿ

    ಕೋರ್ ಕಮಿಟಿ ಪುನರ್ ರಚನೆ ವಿಚಾರ ಸಂಬಂಧ ಮಾತನಾಡಿ, ಕೋರ್ ಕಮಿಟಿ ಪುನರ್ ರಚನೆ ಬಗ್ಗೆ ನಮ್ಮ ಪಕ್ಷದಲ್ಲಿ ಒಂದು ಸಭೆ ಆಗಿದೆ. ಕೋರ್ ಕಮಿಟಿ ಮತ್ತು ಕಾರ್ಪೋರೇಷನ್ ಚುನಾವಣೆ ಸಂಬಂಧ ಪಕ್ಷ ಸಂಘಟನೆಗೆ ಸಮಿತಿ ಮಾಡುವ ನಿರ್ಧಾರ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಆ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ವಾಪಸ್ – ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ

  • ದೀಪಾವಳಿ ಕೊಡುಗೆ ನೆಪದಲ್ಲಿ ಜನಕ್ಕೆ ದೋಖಾ, ಎ-ಖಾತಾ ಸೋಗಿನಲ್ಲಿ 15,000 ಕೋಟಿ ಸುಲಿಗೆ: ಹೆಚ್‌ಡಿಕೆ ಬಾಂಬ್‌

    ದೀಪಾವಳಿ ಕೊಡುಗೆ ನೆಪದಲ್ಲಿ ಜನಕ್ಕೆ ದೋಖಾ, ಎ-ಖಾತಾ ಸೋಗಿನಲ್ಲಿ 15,000 ಕೋಟಿ ಸುಲಿಗೆ: ಹೆಚ್‌ಡಿಕೆ ಬಾಂಬ್‌

    ಮಂಡ್ಯ: ದೀಪಾವಳಿ ಕೊಡುಗೆ (Deepavali Gift) ಕೊಡುತ್ತಿದ್ದೇವೆ ಎಂದು ಹೇಳಿ ರಾಜ್ಯ ಸರ್ಕಾರ ಬೆಂಗಳೂರು ಜನರ ಕಿಸೆಗೆ ಕೈ ಹಾಕಿದೆ. ಎ-ಖಾತಾ ಸೋಗಿನಲ್ಲಿ 15,000 ಕೋಟಿ ಸುಲಿಗೆ ಮಾಡುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ನೇರ ಆರೋಪ ಮಾಡಿದರು.

    ಮಂಡ್ಯ ನಗರದ (Mandya City) ಸಂಜಯ್ ವೃತ್ತದಲ್ಲಿ ಹೊಸದಾಗಿ ನಿರ್ಮಿಸಿರುವ ಸುಸಜ್ಜಿತ ಆಟೋ ನಿಲ್ದಾಣ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ದೀಪಾವಳಿ ಕೊಡುಗೆ ಎಂದರೆ ಏನೋ ನಮಗೆ ದೊಡ್ಡ ಕೊಡುಗೆ ಕೊಡುತ್ತದೆ ಎಂದು ಜನರು ಭಾವಿಸಿದ್ದರು. ದೊಡ್ಡ ದೊಡ್ಡ ಜಾಹೀರಾತುಗಳನ್ನ ನೋಡಿ ನಾನು ಕೂಡ ಹಾಗೆಯೇ ಅಂದುಕೊಂಡಿದ್ದೆ. ಆದರೆ, ಅದು ದೀಪಾವಳಿ ಹೆಸರಿನಲ್ಲಿ ಜನರಿಗೆ ಮಾಡುತ್ತಿರುವ ಮಹಾನ್ ದೋಖಾ ಎಂದು ಕಿಡಿಕಾರಿದರು. ಇದನ್ನೂ ಓದಿ: ನ.1ರಿಂದ ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ – ನಿವೇಶನಗಳಿಗಷ್ಟೇ ಎ ಖಾತೆ; ಕಟ್ಟಡಗಳ ಸಕ್ರಮ ಇಲ್ಲ

    Khata 2

    ಬೆಂಗಳೂರು (Bengaluru) ನಗರದ ಜನರಿಗೆ ದೀಪಾವಳಿ ಕೊಡುಗೆ ನೀಡೋದಕ್ಕೆ ಬದಲಾಗಿ ಶಾಕ್ ಕೊಡ್ತಿದ್ದಾರೆ. ಅದು ಹೇಗಿದೆ ಎಂದರೆ, ಬಿ ಖಾತಾದಿಂದ ಎ ಖಾತಾಗೆ (A Khata) ಪರಿವರ್ತನೆ ಮಾಡುವ ಅರ್ಜಿಗೆ 500 ರೂಪಾಯಿ ಶುಲ್ಕ ತುಂಬಬೇಕು. ಆ ಶುಲ್ಕದ ಹೆಸರಿನಲ್ಲಿಯೇ ನೂರಾರು ಕೋಟಿ ರೂಪಾಯಿ ಸುಲಿಗೆ ಮಾಡುತ್ತಿದೆ ಈ ಸರ್ಕಾರ. 30/40 ನಿವೇಶನಕ್ಕೆ 4 ರಿಂದ 8 ಲಕ್ಷ ರೂಪಾಯಿವರೆಗೂ ಕಿತ್ತುಕೊಳ್ಳುತ್ತಿದ್ದಾರೆ. ಮೊದಲು 10 ರಿಂದ 13 ಸಾವಿರ ರೂಪಾಯಿ ಅಷ್ಟನ್ನೇ ಕಟ್ಟಬೇಕಿದ್ದ ಬೆಂಗಳೂರು ಜನರು ಇನ್ನು ಮುಂದೆ ಲಕ್ಷಗಳಲ್ಲಿ ಹಣ ಏರಬೇಕಿದೆ. ಎ-ಖಾತಾ ದಂಧೆಯ ಮೂಲಕ ರಾಜ್ಯ ಸರ್ಕಾರ 15,000 ಕೋಟಿ ರೂಪಾಯಿ ವಸೂಲಿ ಮಾಡುತ್ತಿದೆ ಎಂದು ಕೇಂದ್ರ ಸಚಿವರು ಆರೋಪ ಮಾಡಿದರು. ಇದನ್ನೂ ಓದಿ: ಐನಾಕ್ಸ್‌ವಿಂಡ್‌ ಕಂಪನಿಯಿಂದ ಕುಷ್ಟಗಿಯಲ್ಲಿ 400 ಕೋಟಿ ಹೂಡಿಕೆ: ಎಂಬಿ ಪಾಟೀಲ್‌

    Khata

    ಹಣ ಮಾಡುವುದಕ್ಕೆಂದೇ ಈ ಸರ್ಕಾರ ಇದೆ
    ಗ್ಯಾರಂಟಿ ಕೊಟ್ಟು ಜನರ ಬದುಕು ಹಸನು ಮಾಡೋದು ಎಂದರೆ ಹೀಗೆನಾ? ಜನರ ಮೇಲೆ ತೆರಿಗೆ ವಿಧಿಸಿ 6ನೇ ಗ್ಯಾರಂಟಿ ಕೊಡಲು ಹೊರಟಿದ್ದಾರೆ. ಈ ಸರ್ಕಾರ ಬಂದ ಮೇಲೆ ನಿರಂತರವಾಗಿ ಸುಲಿಗೆ ಮಾಡುತ್ತಿದೆ. ಕೇವಲ ಹಣ ಮಾಡುವುದಕ್ಕೆ ಸರ್ಕಾರ ಹೊರಟಿದೆ. ಪ್ರತಿಯೊಂದರಲ್ಲೂ ದುಡ್ಡು ಮಾಡುವ ಬಗ್ಗೆಯಷ್ಟೇ ಆಲೋಚನೆ ಮಾಡುತ್ತಿದೆ ಎಂದು ಕಟುವಾಗಿ ಟೀಕಿಸಿದರು. ಇದನ್ನೂ ಓದಿ: ದೀಪಾವಳಿಗೆ ಸಿಹಿ ಸುದ್ದಿ- ರಾಜ್ಯದ ಸರ್ಕಾರಿ ನೌಕರರ DA 2% ಏರಿಕೆ

    ಈ ಸರ್ಕಾರದಲ್ಲಿ ಹಣ ಇಲ್ಲ. ಅದಕ್ಕೆ ಕಂಡ ಕಂಡ ಕಡೆ ಹಣಕ್ಕೆ ಕೈ ಹಾಕುತ್ತಿದೆ. ಬೆಂಗಳೂರಿನ ಗುಂಡಿ ಮುಚ್ಚೋದು ಇರಲಿ. ರಾಜ್ಯದಲ್ಲಿರುವ ಗುಂಡಿಗಳನ್ನೂ ಮುಚ್ಚೋಕೆ ಇವರಿಂದ ಆಗುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡ ಸಚಿವರು, ಜೆಡಿಎಸ್ ಕೊಡುಗೆ ಏನು ಎಂದು ಹಾಸನದಲ್ಲಿ ಸಿಎಂ ಪ್ರಶ್ನೆ ಮಾಡಿದ್ದಾರೆ. ನನ್ನ ಆರೋಗ್ಯ ವಿಚಾರಿಸಲು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ದೆಹಲಿಗೆ ಬಂದಿದ್ದರು. 2018ರಲ್ಲಿ ನೀವು ಕೊಟ್ಟ 500 ಕೋಟಿ ರೂಪಾಯಿ ಅನುದಾನದಲ್ಲಿಯೇ ಇನ್ನೂ ಕೆಲಸ ನಡೆಯುತ್ತಿದೆ ಎಂದು ಅವರೇ ಹೇಳುತ್ತಾರೆ. ಅನುದಾನದ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು, ನಾನು ಅಧಿಕಾರದಲ್ಲಿ ಇದ್ದ ಎಷ್ಟು ಕೊಟ್ಟಿದ್ದೇನೆ? ಇವರು ಎಷ್ಟು ಕೊಟ್ಟಿದ್ದಾರೆ? ಎಂಬ ಬಗ್ಗೆ ಜನರ ಮುಂದೆ ದಾಖಲೆ ಇಡಲಿ ಎಂದು ಕೇಂದ್ರ ಸಚಿವರು ಸವಾಲು ಹಾಕಿದರು.

    ಸಂಸದರ ನಿಧಿಯಲ್ಲಿ ಆಟೋ ನಿಲ್ದಾಣ ಲೋಕಾರ್ಪಣೆ
    ಮಂಡ್ಯದ ಸಂಜಯ ನಗರ ವೃತ್ತದಲ್ಲಿ ಸಂಸದರ 35 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಸುಸಜ್ಜಿಯ ಆಟೋ ನಿಲ್ದಾಣವನ್ನು ಇದೇ ಸಂದರ್ಭದಲ್ಲೂ ಹೆಚ್‌ಡಿಕೆ ಉದ್ಘಾಟಿಸಿದರು. ಇದನ್ನೂ ಓದಿ: ಎಪಿಎಲ್‌ಗೆ ಬದಲಾದ ಅರ್ಹ ಬಿಪಿಎಲ್ ಕಾರ್ಡ್‌ದಾರರಿಗೆ ಗುಡ್‌ನ್ಯೂಸ್; ದಾಖಲೆ ಇದ್ರೆ 45 ದಿನದೊಳಗೆ ಮತ್ತೆ ಬಿಪಿಎಲ್ ಕಾರ್ಡ್ ಭಾಗ್ಯ

    ಮಾಜಿ ಪ್ರಧಾನಿಗಳಾದ ಹೆಚ್.ಡಿ ದೇವೇಗೌಡರು ಹಾಗೂ ಕೇಂದ್ರ ಸಚಿವರ ಸಂಸತ್ ಪ್ರದೇಶಾಭಿವೃದ್ಧಿ ನಿಧಿಯಿಂದ ಈ ಆಟೋ ನಿಲ್ದಾಣ ನಿರ್ಮಾಣ ಮಾಡಿದ್ದೇವೆ. ಇದು ಸುಸಜ್ಜಿತ, ವಿಶಾಲ ಆಟೋ ನಿಲ್ದಾಣ ಆಗಿದ್ದು, ಆಟೋ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ಇಲ್ಲಿ ಸುಸಜ್ಜಿತ ಆಟೋ ನಿಲ್ದಾಣ ಬೇಕು ಎನ್ನುವುದು ಬಹಳ ದಿನಗಳ ಬೇಡಿಕೆ ಆಗಿತ್ತು. ಆ ಬೇಡಿಕೆ ಈಡೇರಿಸುವ ಕೆಲಸ ಆಗಿದೆ. ಅಲ್ಪ ಕಾಲದಲ್ಲಿಯೇ ನಿಲ್ದಾಣ ನಿರ್ಮಾಣ ಆಗಿದೆ ಎಂದರು.

    ನಗರದಲ್ಲಿ ಆಟೋ ವ್ಯವಸ್ಥೆ ಜನತೆಯ ಸಂಚಾರಕ್ಕೆ ಬಹಳ ಅನುಕೂಲವಾಗಿದೆ. ಆದರೆ, ಆಟೋ ಚಾಲಕರು ಮಳೆ, ಬಿಸಿಲಿನಲ್ಲಿ ಕಷ್ಟ ಅನುಭವಿಸುತ್ತಿದ್ದರು. ನಮಗೊಂದು ಸುಸಜ್ಜಿತ ನಿಲ್ದಾಣ ಮಾಡಿಕೊಡಿ ಎಂದು ಕೇಳಿದ್ದರು. ತಕ್ಷಣವೇ ಅದಕ್ಕೆ ಕ್ರಮ ವಹಿಸಿದ್ದೇವೆ. ದೇವೇಗೌಡರ ಸಂಸತ್ ನಿಧಿ ಹಾಗೂ ನನ್ನ ಪಾಲಿನ ಸಂಸತ್ ನಿಧಿಯ ಅನುದಾನದಿಂದ ಕಾಮಗಾರಿ ಕೈಗೆತ್ತಿಗೊಂಡಿದ್ದೆವು. ಈ ಸಂದರ್ಭದಲ್ಲಿ ಅನುದಾನ ನೀಡಿದ ದೇವೇಗೌಡರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.

  • 100 ದಿನಗಳ ಬಳಿಕ ಮಂಡ್ಯಕ್ಕೆ ಕುಮಾರಸ್ವಾಮಿ

    100 ದಿನಗಳ ಬಳಿಕ ಮಂಡ್ಯಕ್ಕೆ ಕುಮಾರಸ್ವಾಮಿ

    ಮಂಡ್ಯ: ಆರೋಗ್ಯದಲ್ಲಿ ಆದ ಏರುಪೇರಿನಿಂದ ವಿಶ್ರಾಂತಿ ಕಡೆಗೆ ಜಾರಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಇಂದು ಅವರ ಸ್ವಕ್ಷೇತ್ರವಾದ ಮಂಡ್ಯಗೆ (Mandya) ಬರೋಬ್ಬರಿ 100 ದಿನಗಳ ಬಳಿಕ ಇಂದು ಬರಲಿದ್ದಾರೆ.

    ಇಂದು ಮಂಡ್ಯದ ಪೇಟೆ ಬೀದಿಯಲ್ಲಿ ನಿರ್ಮಾಣವಾಗಿರುವ ಜಯಚಾಮರಾಜೇಂದ್ರ ಒಡೆಯರ್ ಮಾರುಕಟ್ಟೆಯ ಉದ್ಘಾಟನೆಗೆ ಹೆಚ್.ಡಿ.ಕುಮಾರಸ್ವಾಮಿ ಅವರು ಆಗಮಿಸಲಿದ್ದಾರೆ. ಮೂರು ತಿಂಗಳ ಹಿಂದೆ ಹೆಚ್‌ಡಿಕೆ ಮಂಡ್ಯದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಿಶಾ ಸಭೆಯನ್ನು ನಡೆಸಿದ್ದರು. ಆದಾದ ಬಳಿಕ ಅವರಿಗೆ ಆರೋಗ್ಯ ಸಮಸ್ಯೆಗಳು ಎದುರಾಗಿದ್ದವು. ಇದನ್ನೂ ಓದಿ: ಖ್ಯಾತ ಗಾಯಕಿ ಜೊತೆ 2ನೇ ಮದ್ವೆಗೆ ಸಜ್ಜಾದ ರಘು ದೀಕ್ಷಿತ್;‌ ಅಕ್ಟೋಬರ್ ಅಂತ್ಯದಲ್ಲೇ ಮದುವೆ!

    ಹೀಗಾಗಿ ಕುಮಾರಸ್ವಾಮಿ ಅವರು ವಿಶ್ರಾಂತಿ ಕಡೆಗೆ ಜಾರಿದ್ದರು. ಈ ವೇಳೆ ಹೆಚ್‌ಡಿಕೆ ಅವರ ದಿಢೀರ್ ತೂಕ ಇಳಿಕೆ, ಸೊರಗಿದ ದೇಹ ಕಂಡು ಕಾರ್ಯಕರ್ತರಲ್ಲಿ ಆತಂಕ ಮೂಡಿದ್ದವು. ಇದೀಗ ಆರೋಗ್ಯ ಸುಧಾರಿಸಿರುವ ಬೆನ್ನಲ್ಲೇ ಇಂದು 100 ದಿನಗಳ ಬಳಿಕ ಕುಮಾರಸ್ವಾಮಿ ಮಂಡ್ಯಗೆ ಆಗಮಿಸುತ್ತಿದ್ದು, ಜೆಡಿಎಸ್ ಕಾರ್ಯಕರ್ತರು, ಕುಮಾರಸ್ವಾಮಿ ಅಭಿಮಾನಿಗಳು ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಭಾರತ ಇನ್ಮುಂದೆ ರಷ್ಯಾದಿಂದ ತೈಲ ಖರೀದಿಸಲ್ಲ, ಮೋದಿ ನನಗೆ ಭರವಸೆ ನೀಡಿದ್ದಾರೆ: ಟ್ರಂಪ್‌

  • ದೇವೇಗೌಡರು ಆರೋಗ್ಯವಾಗಿದ್ದಾರೆ ಆತಂಕಪಡಬೇಕಿಲ್ಲ: ಹೆಚ್‌ಡಿಕೆ

    ದೇವೇಗೌಡರು ಆರೋಗ್ಯವಾಗಿದ್ದಾರೆ ಆತಂಕಪಡಬೇಕಿಲ್ಲ: ಹೆಚ್‌ಡಿಕೆ

    – ಆರೋಗ್ಯ ಸುಧಾರಣೆ ಆಗುವವರೆಗೂ ಆಸ್ಪತ್ರೆಯಲ್ಲೇ ಚಿಕಿತ್ಸೆ

    ಬೆಂಗಳೂರು: ಮಾಜಿ ಪ್ರಧಾನಿಗಳಾದ ಹೆಚ್.ಡಿ ದೇವೇಗೌಡರು (HD Devegowda) ಆರೋಗ್ಯವಾಗಿದ್ದಾರೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಮೂರು ನಾಲ್ಕು ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಾರೆ ಎಂದು ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ತಿಳಿಸಿದರು.

    ಬೆಂಗಳೂರಿನಲ್ಲಿ (Bengaluru) ಗುರುವಾರ ತಮ್ಮ ತಂದೆಯವರನ್ನ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಯಾರೂ ಆತಂಕಪಡುವ ಅಗತ್ಯ ಇಲ್ಲ. ತಂದೆಯವರಿಗೆ ಆರೋಗ್ಯದ ಸಮಸ್ಯೆ ಇಲ್ಲ. ಕಳೆದ ಮೂರು ದಿನಗಳಿಂದ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ದೇವರ ಮತ್ತು ಜನತೆಯ ಆಶೀರ್ವಾದದಿಂದ ಆರೋಗ್ಯವಾಗಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

    ಆರೋಗ್ಯ ಸುಧಾರಣೆ ಆಗುವವರೆಗೂ ಆಸ್ಪತ್ರೆಯಲ್ಲೆ ಚಿಕಿತ್ಸೆ
    ಸದ್ಯ ಮಣಿಪಾಲ್‌ ಆಸ್ಪತ್ರೆಗೆ ದೇವೇಗೌಡರನ್ನ ದಾಖಲಿಸಲಾಗಿದ್ದು, ಆರೋಗ್ಯ ಸುಧಾರಣೆ ಆಗುವವರೆಗೂ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ. ಸಂಪೂರ್ಣವಾಗಿ ಆರೋಗ್ಯ ಚೇತರಿಕೆ ಬಳಿಕ ಡಿಸ್ಸಾರ್ಜ್ ಮಾಡಲು ನಿರ್ಧರಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಸದ್ಯಕ್ಕೆ ದೇವೇಗೌಡರ ಆರೋಗ್ಯ ಸುಧಾರಣೆ ಆಗಿದ್ದು, ವಾರ್ಡ್ ನಲ್ಲಿ ಇದ್ದಾರೆ. ಇನ್ನೂ 2-3 ದಿನಗಳ ವರೆಗೂ ಆರೋಗ್ಯ ಚೇತರಿಕೆಯತ್ತ ವೈದ್ಯರು ನಿಗಾ ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

  • ನಾನು ಜೈಲಿಗೆ ಹೋಗ್ತೀನಿ ಅಂತ ಕುಮಾರಸ್ವಾಮಿ ಹೇಳ್ತಿದಾರೆ, ಇದಕ್ಕೆ ಕೊನೆ ಹಾಡಲೇಬೇಕು: ಡಿಕೆಶಿ

    ನಾನು ಜೈಲಿಗೆ ಹೋಗ್ತೀನಿ ಅಂತ ಕುಮಾರಸ್ವಾಮಿ ಹೇಳ್ತಿದಾರೆ, ಇದಕ್ಕೆ ಕೊನೆ ಹಾಡಲೇಬೇಕು: ಡಿಕೆಶಿ

    ಬೆಂಗಳೂರು: ನಾನು ಜೈಲಿಗೆ ಹೋಗುವ ದಿನ ದೂರವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (HD Kumaraswamy) ಹೇಳುತ್ತಿದ್ದಾರೆ. ಇದಕ್ಕೆ ಕೊನೆ ಹಾಡಲೇಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ.

    ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಾಪ ನನ್ನ ಜೈಲಿಗೆ ಕಳಿಸೋಕೆ ನೋಡುತ್ತಿದ್ದಾರೆ. ಅವರಿಗೆ ಜೈಲಿಗೆ ಕಳಿಸೋ ಆಸೆ ಇರಬಹುದು. ಅದಕ್ಕಾಗಿ ಅವರು ಏನೇನೋ ಮಾಡುತ್ತಿರಬಹುದು. ಈಗ ಹಬ್ಬ ಇದೆ, ಮುಗಿಯಲಿ ಮಾತನಾಡುತ್ತೇನೆ. ಅವರ ಆಸೆ ಏನೇನು ಇದೆಯೋ ಗೊತ್ತಿಲ್ಲ. ಜೈಲಿಗೆ ಹೋಗುವ ದಿನ ಹತ್ತಿರ ಬರುತ್ತಿದೆ ಅಂದಿದ್ದಾರೆ. ನಾನು ಅವರಿಗೆ ಉತ್ತರ ಕೊಡುತ್ತೇನೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಅಕ್ಟೋಬರ್‌ ಕ್ರಾಂತಿ – ಅಶೋಕ್, ಸುನಿಲ್ ಕುಮಾರ್ ಭವಿಷ್ಯ

     

    ಇದಕ್ಕೆ ಕೊನೆ ಹಾಡಲೇಬೇಕು. ಯಾವುದಾದರೂ ಚಾನಲ್ ಡಿಬೇಟ್ ಕರೆಯಿರಿ. ಹಿಂದೆಯೂ ಬಹಳ ಸಾರಿ ನಾನು ಆಹ್ವಾನ ಕೊಟ್ಟಿದ್ದೇನೆ. ನಾನು ಅಸೆಂಬ್ಲಿಯಲ್ಲೇ ಕರೆದಿದ್ದೆ. ಅವರು ಲೋಕಸಭೆಗೆ ಹೋದರು. ನಾನು ಹಿಟ್ ಅಂಡ್ ರನ್ ಮಾಡೋನಲ್ಲ. ಅವರ ಕುಟುಂಬದ್ದು ಭಂಡಾರ ನನ್ನ ಬಳಿ ಇದೆ. ಅವರ ಹತ್ತಿರ ಇರೋದನ್ನ ಜನರ ಮುಂದೆ ಇಡಲಿ. ಜಡ್ಜ್ ತಾನೇ ಜೈಲಿಗೆ ಕಳಿಸೋದು. ಪಾಪ ಅವರೇ ಜಡ್ಜ್ ಆಗಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಆರ್‌ಸಿಬಿ ಸೇಲ್‌ – ಪುಣೆಯ ಶತಕೋಟ್ಯಧಿಪತಿ ಪೂನಾವಾಲಾ ತೆಕ್ಕೆಗೆ ಹೋಗುತ್ತಾ ಬೆಂಗಳೂರು?

    ಇದಕ್ಕೂ ಮುನ್ನ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, 2006ರಲ್ಲಿ 5 ಟೌನ್‌ಶಿಪ್‌ಗಳನ್ನು ಮಾಡಲು ನಿರ್ಧರಿಸಿದ್ದೆ. ನಾನು ಟೌನ್‌ಶಿಪ್ ಮಾಡಲು ಮುಂದಾದಾಗ ಬೆಂಗಳೂರು ಭೂಮಿ ಹೊಡೆಯಲು ಪ್ರಯತ್ನ ಅಂದರು. ಈಗ ಅವರೇ ಜಾರಿಗೆ ಮುಂದಾಗಿದ್ದಾರೆ ಅಂತ ಟೀಕಿಸಿದ್ದಾರೆ. ಈ ಹಿಂದೆ, ನೀವು 2000-3000 ಎಕರೆ ಏನು ಮಾಡಿದ್ದೀರಿ ಗೊತ್ತಿದೆ. ಜನ 5 ವರ್ಷ ಸಮಯ ಕೊಟ್ಟರೇ, ಏನು ಮಾಡಬಹುದು ಅಂತ ಗೊತ್ತಿದೆ. ತಮ್ಮ ಸಂಬಂಧಿಗಾಗಿ ಲೂಟಿ ಹೊಡೆಯೋಕೆ ಡಿಕೆ ಮುಂದಾಗಿರಬಹುದು. ಹೆಚ್ಚು ಕಮ್ಮಿಯಾದ್ರೆ, ಕುಣಿಗಲ್ ಅಲ್ಲ, ಮಂಗಳೂರನ್ನೂ ಬೆಂಗಳೂರಿಗೆ ಸೇರಿಸಬಹುದು. ದೇವೇಗೌಡರು-ಕುಮಾರಸ್ವಾಮಿಯನ್ನು ಮುಗಿಸಲು ದೇವಸ್ಥಾನ ಓಡಾಡಿ ಪೂಜೆ ಮಾಡುತ್ತಿದ್ದಾರೆ ಅಂದಿದ್ದಾರೆ. ಕುಮಾರಸ್ವಾಮಿ ಹೇಳಿಕೆ ಬೆನ್ನಲ್ಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಸಿಡಿದೆದ್ದಿದ್ದಾರೆ. ಇದನ್ನೂ ಓದಿ:  ಧರ್ಮಸ್ಥಳ ಪ್ರಕರಣಗಳ ತನಿಖೆ ಆದಷ್ಟು ಬೇಗ ಮುಕ್ತಾಯ: ಪರಮೇಶ್ವರ್

  • ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಹ – ಮೋದಿ ಸರ್ಕಾರ ಕರ್ನಾಟಕದ ಪರ ದೃಢವಾಗಿ ನಿಲ್ಲುತ್ತದೆ: ಹೆಚ್‌ಡಿಕೆ

    ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಹ – ಮೋದಿ ಸರ್ಕಾರ ಕರ್ನಾಟಕದ ಪರ ದೃಢವಾಗಿ ನಿಲ್ಲುತ್ತದೆ: ಹೆಚ್‌ಡಿಕೆ

    – ಜನರ ರಕ್ಷಣೆಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೆಚ್‌ಡಿಕೆ ಆಗ್ರಹ

    ಬೆಂಗಳೂರು: ಕಲ್ಯಾಣ ಕರ್ನಾಟಕದ (Kalyana Karnataka) ಕಲಬುರಗಿ, ವಿಜಯಪುರ, ಬೀದರ್, ರಾಯಚೂರು ಮತ್ತು ಕೊಪ್ಪಳ ಸೇರಿ ವಿವಿಧ ಜಿಲ್ಲೆಗಳಲ್ಲಿ ಭಾರೀ ಪ್ರವಾಹ ಉಂಟಾಗಿ ಜನರು ಅತೀವ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಪ್ರತಿಯೊಬ್ಬರ ಜೀವ ರಕ್ಷಣೆ ಜೊತೆಗೆ ಸಂತ್ರಸ್ತರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ (Congress Government) ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಆಗ್ರಹಿಸಿದ್ದಾರೆ.

    ಈ ಕುರಿತು ಎಕ್ಸ್‌ನಲ್ಲಿ ಸುದೀರ್ಘ ಪೋಸ್ಟ್‌ ಹಂಚಿಕೊಂಡಿರುವ ಅವರು, ನೆರೆಪೀಡಿತ ಪ್ರತೀ ತಾಲ್ಲೂಕಿನಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಬೇಕು ಮತ್ತು ಎಲ್ಲಾ ತುರ್ತು ಸೌಲಭ್ಯಗಳು ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇ ಎಂದು ಒತ್ತಾಯಿಸಿದ್ದಾರೆ.

    ಹೆಚ್‌ಡಿಕೆ ಎಕ್ಸ್‌ ಪೋಸ್ಟ್‌ನಲ್ಲಿ ಏನಿದೆ?
    ಕಲ್ಯಾಣ ಕರ್ನಾಟಕದ ಕಲಬುರಗಿ, ವಿಜಯಪುರ, ಬೀದರ್, ರಾಯಚೂರು ಮತ್ತು ಕೊಪ್ಪಳ ಸೇರಿ ವಿವಿಧ ಜಿಲ್ಲೆಗಳಲ್ಲಿ ಭಾರೀ ಪ್ರವಾಹ ಉಂಟಾಗಿ ಜನರು ಅತೀವ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಕ್ಷೇಮಕ್ಕಾಗಿ ನಾನು ಹೃದಯಪೂರ್ವಕವಾಗಿ ಪ್ರಾರ್ಥಿಸುತ್ತೇನೆ. ಈ ಸಂಕಷ್ಟದ ಸಮಯದಲ್ಲಿ ಪ್ರತಿಯೊಬ್ಬರ ಜೀವ ರಕ್ಷಣೆ, ಅವರಿಗೆ ಅಗತ್ಯ ಸೌಕರ್ಯ ಕಲ್ಪಿಸುವುದು ಕರ್ನಾಟಕ ಕಾಂಗ್ರೆಸ್‌ ಸರಕಾರದ ಆದ್ಯ ಕರ್ತವ್ಯ. ನೆರೆಪೀಡಿತ ಪ್ರತೀ ತಾಲ್ಲೂಕಿನಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಬೇಕು ಮತ್ತು ಎಲ್ಲಾ ತುರ್ತು ಸೌಲಭ್ಯಗಳು ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸುತ್ತೇನೆ.

    ಆಹಾರ, ಕುಡಿಯುವ ನೀರು, ಉಡುಪು, ಹೊದಿಕೆ ಮತ್ತು ತುರ್ತು ಔಷಧಿಗಳ ಸಾಕಷ್ಟು ದಾಸ್ತಾನನ್ನು ವಿಳಂಬವಿಲ್ಲದೆ ಅಷ್ಟೂ ಜಿಲ್ಲೆಗಳಿಗೂ ತಲುಪಿಸಬೇಕು. NDRF ಮತ್ತು SDRF ಸಿಬ್ಬಂದಿ ರಕ್ಷಣಾ ಪ್ರಯತ್ನಗಳನ್ನು ತೀವ್ರಗೊಳಿಸಿ ವೃದ್ಧರು, ಮಕ್ಕಳು ಮತ್ತು ಮಹಿಳೆಯರ ರಕ್ಷಣೆಗೆ ಹೆಚ್ಚು ಮುತುವರ್ಜಿ ವಹಿಸಬೇಕು.

    ವಿದ್ಯಾರ್ಥಿಗಳ ಬಗ್ಗೆಯೂ ವಿಶೇಷ ಗಮನ ಹರಿಸಬೇಕು. ಶಾಲೆ, ಹಾಸ್ಟೆಲ್‌ ಮತ್ತು ಶಿಕ್ಷಣ ಸಂಸ್ಥೆಗಳನ್ನು ತಕ್ಷಣವೇ ತಾತ್ಕಾಲಿಕ ಪರಿಹಾರ-ಆರೋಗ್ಯ ಕೇಂದ್ರಗಳನ್ನಾಗಿ ಪರಿವರ್ತಿಸಿ ನೆರೆಪೀಡಿತ ಕುಟುಂಬಗಳು, ಚಿಕ್ಕ ಮಕ್ಕಳು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಲು ಸೂಕ್ತ ವ್ಯವಸ್ಥೆ ಮಾಡಬೇಕು.

    ಜನರ ಪ್ರಾಣ ನಷ್ಟದ ಜೊತೆಗೆ ಈ ಜಿಲ್ಲೆಗಳಲ್ಲಿ ತೀವ್ರ ಬೆಳೆನಷ್ಟ ಮತ್ತು ಹಾನಿ ಸಂಭವಿಸಿದೆ. ರೈತರ (Farmers) ಸ್ಥಿತಿ ಹೃದಯವಿದ್ರಾವಕವಾಗಿದ್ದು, ಅವರಿಗೆ ಸೂಕ್ತ-ಸಕಾಲಿಕ ಪರಿಹಾರ ಒದಗಿಸಬೇಕು. ಇದರಿಂದ ಅವರು ತಮ್ಮ ಜೀವನೋಪಾಯ ಮರಳಿ ಪಡೆಯಲು ಸಾಧ್ಯವಾಗುತ್ತದೆ. ಪಶು-ಪ್ರಾಣಿಗಳು ಅತೀವ ಸಂಕಷ್ಟಕ್ಕೆ ತುತ್ತಾಗಿವೆ. ವಿಶೇಷವಾಗಿ ಕೃಷಿ ಸಮುದಾಯದ ಜೀವನಾಡಿಯಾಗಿರುವ ಜಾನುವಾರುಗಳಿಗೆ ಮೇವು, ಆಶ್ರಯ ಮತ್ತು ವೈದ್ಯಕೀಯ ಆರೈಕೆ ಒದಗಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಜನಾರೋಗ್ಯ, ಪಶು ಆರೋಗ್ಯ ತಂಡಗಳನ್ನು ಸದಾ ಸನ್ನದ್ಧ ಸ್ಥಿತಿಯಲ್ಲಿಡಬೇಕು.

    ಗೌರಿ ಗಣೇಶ ಹಬ್ಬದ ಸಮಯದಲ್ಲಿ ಬೀದರ್, ವಿಜಯಪುರ, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದು ಈಗಾಗಲೇ ಸಂಕಷ್ಟಕ್ಕೆ ತುತ್ತಾಗಿವೆ. ಆಯುಧ ಪೂಜೆ, ದಸರಾ, ದೀಪಾವಳಿಯ ಸಮಯದಲ್ಲಿ ಜನರು ಮತ್ತೆ ತೊಂದರೆ ಅನುಭವಿಸುವಂತೆ ಆಗಬಾರದು. ಆದ್ದರಿಂದ ಪರಿಹಾರ ಕಾರ್ಯಗಳು ನಿರಂತರವಾಗಿ ಮುಂದುವರಿಯಬೇಕು.

    ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ಪರಿಹಾರ ಕ್ರಮಗಳ ತ್ವರಿತ ಸಮನ್ವಯವನ್ನು ಖಚಿತಪಡಿಸಿಕೊಳ್ಳಲು ನಾನು ಖುದ್ದಾಗಿ ಕಲಬುರಗಿ, ಯಾದಗಿರಿ, ವಿಜಯಪುರ, ಬೀದರ್ ಮತ್ತು ರಾಯಚೂರು ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿ ಪರಿಹಾರ ಕಾರ್ಯ, ಆಗಿರುವ ನಷ್ಟದ ಬಗ್ಗೆ ಮಾಹಿತಿ ಪಡೆದು ತುರ್ತು ಕ್ರಮ ವಹಿಸುವಂತೆ ಸೂಚಿಸಿದ್ದೇನೆ.

    ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರಕಾರವು ಕರ್ನಾಟಕದ ಪರವಾಗಿ ದೃಢವಾಗಿ ನಿಲ್ಲುತ್ತದೆ ಎಂದು ಕೇಂದ್ರ ಸಚಿವನಾಗಿ ಖಚಿತ ಭರವಸೆ ನೀಡುತ್ತೇನೆ. ನಮ್ಮ ಜನರ ಕ್ಷೇಮ ಮತ್ತು ಅವರ ಸುರಕ್ಷಿತ ಜೀವನೋಪಾಯಕ್ಕಾಗಿ ಕಾಳಜಿ ವಹಿಸಿ ಸಾಧ್ಯವಿರುವ ಎಲ್ಲ ಸಹಕಾರವನ್ನೂ ಕೇಂದ್ರವು ನೀಡಲಿದೆ ಎಂದು ಭರವಸೆ ನೀಡಿದ್ದಾರೆ.