Tag: hd devgowda

  • ಮೈತ್ರಿ ಸರ್ಕಾರದಲ್ಲಿ ‘ಎಫ್‍ಡಿಎ ಕ್ಲರ್ಕ್’ ಆಗಿದ್ದೆ- ಸಿದ್ದರಾಮಯ್ಯ ವಿರುದ್ಧ ಎಚ್‍ಡಿಕೆ ಗುಡುಗು

    ಮೈತ್ರಿ ಸರ್ಕಾರದಲ್ಲಿ ‘ಎಫ್‍ಡಿಎ ಕ್ಲರ್ಕ್’ ಆಗಿದ್ದೆ- ಸಿದ್ದರಾಮಯ್ಯ ವಿರುದ್ಧ ಎಚ್‍ಡಿಕೆ ಗುಡುಗು

    ಬೆಂಗಳೂರು: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆರೋಪಗಳ ಸುರಿಮಳೆಗೈದ ಬೆನ್ನಲ್ಲೇ ಇದೀಗ ಪುತ್ರ ಎಚ್ ಡಿ ಕುಮಾರಸ್ವಾಮಿ ಅವರು ಕೂಡ ಟಗರಿಗೆ ಗುದ್ದು ನೀಡಿದ್ದಾರೆ.

    ಮೈತ್ರಿ ಸರ್ಕಾರದಲ್ಲಿ ಸಿಎಂ ಅಲ್ಲ, `ಎಫ್‍ಡಿಎ (ಫಸ್ಟ್ ಡಿವಿಷನ್) ಕ್ಲರ್ಕ್’ ಆಗಿದ್ದೆ ಎಂದು ಹೇಳಿಕೆ ನೀಡುವ ಮೂಲಕ ಮಾಜಿ ಸಿಎಂ ವಿರುದ್ಧ ನೇರ ಕದನಕ್ಕಿಳಿದಿದ್ದಾರೆ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

    ಎಚ್‍ಡಿಕೆ ಆರೋಪಗಳೇನು?
    ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯಗೆ ಜೆಡಿಎಸ್ಸೇ ಮೊದಲ ವೈರಿಯಾಗಿತ್ತು. ಮೈತ್ರಿ ಸರ್ಕಾರ ಇದ್ದಾಗ ಸಿದ್ದರಾಮಯ್ಯ ಅವರು ಖುಷಿ ಆಗಿರಲಿಲ್ಲ ಎಂದು ಎಚ್‍ಡಿಕೆ ಆರೋಪ ಮಾಡಿದ್ದಾರೆ.

    ಕುಮಾರಸ್ವಾಮಿಯಿಂದ ಕಾಂಗ್ರೆಸ್‍ಗೆ ತೊಂದರೆ ಅನ್ನೋದು ಸಿದ್ದರಾಮಯ್ಯ ವಾದವಾಗಿತ್ತು. ಆದರೆ ಪ್ರತಿನಿತ್ಯ ಸಿದ್ದರಾಮಯ್ಯರಿಂದ ಸರ್ಕಾರ ಅಸ್ಥಿರಗೊಳಿಸಲು ಯತ್ನ ನಡೆಯುತ್ತಿತ್ತು. ಸಿಎಂ ಆಗಿದ್ದಾಗ ನನ್ನ ನೈತಿಕತೆಯನ್ನು ಕುಗ್ಗಿಸಲು ಸಿದ್ದರಾಮಯ್ಯ ಯತ್ನಿಸುತ್ತಿದ್ದರು. ಸಿದ್ದರಾಮಯ್ಯ ಬೆಂಬಲಿಗರು ಸಿದ್ದರಾಮಯ್ಯರೇ ಮತ್ತೆ ಸಿಎಂ ಆಗಬೇಕು ಎಂದು ಹೇಳುತ್ತಲೇ ಇದ್ದರು. ಒಂದು ವೇಳೆ ಸಿದ್ದರಾಮಯ್ಯ ಸಿಎಂ ಆಗಿ ವಾಪಸ್ ಆದರೆ ಮಾತ್ರ ನಮ್ಮ ಬೆಂಬಲ ಎಂದು ಅತೃಪ್ತ ಶಾಸಕರು ಹೇಳಿದ್ದರು. ಅವರ ಮಾತಿನ ಅರ್ಥ ಏನು..? ಅತೃಪ್ತರ ಶಾಸಕರನ್ನು ಸಿದ್ದರಾಮಯ್ಯ ನಿಯಂತ್ರಣದಲ್ಲಿಟ್ಟುಕೊಳ್ಳಬೇಕಿತ್ತು ತಾನೇ..? ಆದರೆ ಸಿದ್ದರಾಮಯ್ಯ ಹಾಗೇ ಮಾಡಲಿಲ್ಲ ಎಂದು ಗರಂ ಆಗಿದ್ದಾರೆ.

    ಒಂದು ವೇಳೆ ಯಡಿಯೂರಪ್ಪ ಸರ್ಕಾರ ನಡೆಸಲು ವಿಫಲರಾಗಿ ಸರ್ಕಾರ ಪತನವಾದರೆ ಈಗ ವಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ತಾವು ಮತ್ತೆ ಸಿಎಂ ಆಗಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಸಿದ್ದರಾಮಯ್ಯ ನಮ್ಮವರೇ ಆಗಿದ್ದು, ಅವರ ಬೆನ್ನಿಗೆ ನಾವು ಚೂರಿ ಇರಿದಿಲ್ಲ. ಜೆಡಿಎಸ್‍ನಲ್ಲಿದ್ದಾಗ ಡಿಸಿಎಂ ಆಗಿದ್ದ ಸಿದ್ದರಾಮಯ್ಯ ಪಕ್ಷಕ್ಕೆ ಪರ್ಯಾಯವಾಗಿ ಅಹಿಂದ ಸಂಘಟನೆ ನಡೆಸಿ ಜೆಡಿಎಸ್ ಬೆಳವಣಿಗೆಗೆ ಅಡ್ಡಿ ಆದರು. ಈ ಮೂಲಕ ಜೆಡಿಎಸ್‍ಗೆ ಮೋಸ ಮಾಡಿದರು. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಜೆಡಿಎಸ್‍ನಿಂದ ಅವರನ್ನು ಉಚ್ಛಾಟನೆ ಮಾಡಿದೆವು ಎಂದಿದ್ದಾರೆ.

    ನಾನು ಸಿಎಂ ಆಗಿದ್ದಾಗ ಕಾಂಗ್ರೆಸ್‍ನವರ ಒತ್ತಡದಲ್ಲಿ ಕೆಲಸ ಮಾಡಬೇಕಿತ್ತು. ಕಾಂಗ್ರೆಸ್ ನನ್ನ ಮೇಲೆ ಸವಾರಿ ಮಾಡಿತು. ವರ್ಗಾವಣೆಯಲ್ಲೂ ಅವರು ಹೇಳಿದ್ದನ್ನೇ ಮಾಡಬೇಕಿತ್ತು. ಡಿಸಿ ವರ್ಗಾವಣೆಯಲ್ಲೂ ನನಗೆ ಸ್ವಾತಂತ್ರ್ಯ ಇರಲಿಲ್ಲ. ವರ್ಗಾವಣೆ ನನ್ನ ವ್ಯಾಪ್ತಿಗೆ ಬಂದರೂ ನಾನು ಕಾಂಗ್ರೆಸ್‍ನವರು ಏನ್ ಹೇಳ್ತಾರೋ ಅದನ್ನೇ ಮಾಡ್ಬೇಕಿತ್ತು. ಇವತ್ತು ಒಳ್ಳೆಯ ವ್ಯಕ್ತಿಗಳಿಗೆ ರಾಜಕೀಯ ಅಲ್ಲ. ನನ್ನ ರಾಜಕೀಯ ಭವಿಷ್ಯದ ಬಗ್ಗೆಯೇ ನನಗೆ ಗ್ಯಾರಂಟಿ ಇಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.

  • ಫಾರೂಕ್‍ಗೆ ಸ್ಥಾನ ಕೊಟ್ಟಿದ್ರೆ ಅಹಿಂದಕ್ಕೆ ಸಚಿವ ಸ್ಥಾನ ಕೊಟ್ಟಂತೆ ಆಗ್ತಿತ್ತು: ಎಚ್ ವಿಶ್ವನಾಥ್

    ಫಾರೂಕ್‍ಗೆ ಸ್ಥಾನ ಕೊಟ್ಟಿದ್ರೆ ಅಹಿಂದಕ್ಕೆ ಸಚಿವ ಸ್ಥಾನ ಕೊಟ್ಟಂತೆ ಆಗ್ತಿತ್ತು: ಎಚ್ ವಿಶ್ವನಾಥ್

    – ಶಿಕ್ಷಣ ಇಲಾಖೆಗೆ ತುರ್ತಾಗಿ ಸಚಿವರು ಬೇಕಿದೆ
    – ಅಪ್ಪ, ಮಗನಿಗೆ ವಿಶ್ವನಾಥ್ ಗುದ್ದು
    – ರಾಜೀನಾಮೆ ವಾಪಸ್ ಪಡೆಯಲ್ಲ

    ಬೆಂಗಳೂರು: ಅಲ್ಪ ಸಂಖ್ಯಾತರಿಗೆ ಅವಕಾಶ ನೀಡಲೇ ಬೇಕಿತ್ತು. ಫಾರೂಕ್‍ಗೆ ಸಚಿವ ಸ್ಥಾನ ಕೊಟ್ಟಿದ್ರೆ, ಒಬ್ಬ ಅಲ್ಪ ಸಂಖ್ಯಾತ, ಹಿಂದುಳಿದ ವರ್ಗ, ದಲಿತರಿಗೆ ಅವಕಾಶ ಕೊಟ್ಟಂತೆ ಆಗುತ್ತಿತ್ತು. ಜೆಡಿಎಸ್ ಒಂದು ಜಾತ್ಯಾತೀತ ಪಕ್ಷ. ಹೀಗಾಗಿ ಎಲ್ಲ ವರ್ಗಕ್ಕೂ ಅವಕಾಶ ನೀಡಬೇಕಿತ್ತು ಎಂದು ಹೇಳುವ ಮೂಲಕ ಖಾತೆ ಹಂಚಿಕೆ ಬಗ್ಗೆ ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷೇತರರಿಗೆ ಇನ್ನೂ ಯಾವುದೇ ಖಾತೆ ಹಂಚಿಕೆ ಮಾಡದ ವಿಚಾರ ಸಂಬಂಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ದಲಿತರಿಗೆ, ಹಿಂದುಳಿದವರಿಗೆ ಅವಮಾನ ಮಾಡಬೇಡಿ. ಸಚಿವ ಸ್ಥಾನ ನೀಡಿ ಎಷ್ಟು ದಿನ ಆಯಿತು. ಆದರೆ ಖಾತೆ ಯಾಕೆ ಇನ್ನೂ ಕೊಟ್ಟಿಲ್ಲ. ಇದೊಂದು ರೀತಿಯ ಅವಮಾನ ಮಾಡಿದ ಹಾಗೆ ಎಂದು ಹೇಳಿದರು.

    ಪ್ರಮುಖವಾಗಿ ಶಿಕ್ಷಣ ಇಲಾಖೆಯಲ್ಲಿ ಪಠ್ಯ ಪುಸ್ತಕ ಸೇರಿದಂತೆ ಹತ್ತಾರು ಸಮಸ್ಯೆಗಳಿವೆ. ಮಹೇಶ್ ರಾಜೀನಾಮೆ ಕೊಟ್ಟ ನಂತರ ಇಲಾಖೆಗೆ ಮುಖ್ಯಸ್ಥರೇ ಇಲ್ಲದಂತಾಗಿದೆ. ಈ ಇಲಾಖೆಗೆ ತುರ್ತಾಗಿ ಒಬ್ಬ ಸಚಿವರು ಬೇಕಾಗಿದ್ದಾರೆ. ಸಿಎಂ ಬಳಿ ಅಬಕಾರಿ ಸೇರಿದಂತೆ ಹಲವು ಖಾತೆಗಳಿವೆ. ಕೆಲವನ್ನು ಬೇರೆಯವರಿಗೆ ಹಂಚಿಕೆ ಮಾಡಲಿ ಎಂದು ಸಲಹೆ ನಿಡಿದರು.

    ಇದೇ ವೇಳೆ ಜಿಂದಾಲ್ ಭೂಮಿ ಪರಭಾರೆ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ವಿಶ್ವನಾಥ್, ಜಿಂದಾಲ್ ವಿಚಾರದಲ್ಲಿ ಸಿದ್ದರಾಮಯ್ಯ ಯಾಕೆ ಮೌನವಾಗಿ ಇದ್ದಾರೆ. ತೊಡೆ ತಟ್ಟಿ 350 ಕಿಲೋ ಮೀಟರ್ ಪಾದಯಾತ್ರೆ ಮಾಡಿದ್ದ ಸಿದ್ದರಾಮಯ್ಯ ಈಗ ಏನ್ ಮಾಡ್ತಿದ್ದಾರೆ. ಸರ್ಕಾರದ ಭಾಗವಾಗಿ ಇದ್ದರು ಯಾಕೆ ಮಾತಾಡ್ತಿಲ್ಲ. ಸಮನ್ವಯ ಸಮಿತಿ ಅಧ್ಯಕ್ಷರಾಗಿ ತಮ್ಮ ಕೆಲಸವೇ ಮರೆತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಪಾದಯಾತ್ರೆ ಮಾಡಿ ಗಣಿ ಲೂಟಿ ಹಣ ತರುತ್ತೇನೆ ಎಂದು ಹೇಳಿದ್ರಿ. ನೀವು ಸಿಎಂ ಆದಾಗ ಒಂದು ರೂಪಾಯಿ ಬೊಕ್ಕಸಕ್ಕೆ ತರಲಿಲ್ಲ. ಸಂತೋಷ್ ಹೆಗ್ಡೆ ವರದಿ ಪುಟಗಟ್ಟಲೆ ಇದ್ದರೂ ನಿಮ್ಮಿಂದ ಯಾವ ಕ್ರಮ ತಗೋಳೋಕೆ ಆಗಿಲ್ಲ. ಈಗ ಮೌನವಾಗಿ ಯಾಕೆ ಇದ್ದೀರಿ. ಸಿದ್ದರಾಮಯ್ಯ ಅವರೇ ಜಿಂದಾಲ್ ಬಗ್ಗೆ ಮಾತಾಡಿ. ಸಿದ್ದರಾಮಯ್ಯ ಈ ಸರ್ಕಾರದಲ್ಲಿ ಮಂತ್ರಿಗಳ ಮಂತ್ರಿ, ಅದು ಹೇಗೆ ಸರ್ಕಾರದ ಭಾಗ ಅಲ್ಲ ಎಮದು ಹೇಳುತ್ತೀರಿ. ಅಂದು ತೊಡೆ ತಟ್ಟಿದವರಿಗೆ ಇಂದು ಏನಾಯ್ತು ಎಂದು ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನ ನಿರ್ಧಾರದಿಂದ ನಾನು ವಾಪಸ್ ಬರುವ ಪ್ರಶ್ನೆಯೇ ಇಲ್ಲ. ರಾಜೀನಾಮೆ ವಾಪಸ್ ಪಡೆಯಲ್ಲ. ನಾನೇ ದೇವೇಗೌಡರಿಗೆ ರಾಜೀನಾಮೆ ಅಂಗಿಕಾರ ಮಾಡುವಂತೆ ಇಂದು ಮನವಿ ಮಾಡುತ್ತೇನೆ. ಯಾವುದೇ ಕಾರಣಕ್ಕೂ ನನ್ನ ನಿರ್ಧಾರದಿಂದ ಹಿಂದೆ ಸರಿಯೋದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

  • ಸಿದ್ದರಾಮಯ್ಯ ವಿರುದ್ಧ ದೇವೇಗೌಡರಿಂದ ರಾಹುಲ್‍ಗೆ ದೂರು

    ಸಿದ್ದರಾಮಯ್ಯ ವಿರುದ್ಧ ದೇವೇಗೌಡರಿಂದ ರಾಹುಲ್‍ಗೆ ದೂರು

    ಬೆಂಗಳೂರು: ಮೈತ್ರಿ ಸರ್ಕಾರದ ಮೇಲೆ ಗುರು-ಶಿಷ್ಯರ ಪ್ರತಿಷ್ಠೆಯ ಫೈಟ್ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ದೂರು ನೀಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸಂಪುಟ ಪುನರ್ ರಚನೆಗೆ ಸಿದ್ದರಾಮಯ್ಯ ಕಿರಿಕ್ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಪರಿಸ್ಥಿತಿ ನಿಯಂತ್ರಿಸದಿದ್ದರೆ ಮೈತ್ರಿ ಅಂತ್ಯ ಆಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಅಪಾಯ ತಂದೊಡ್ಡುವ ಮಿತ್ರಪಕ್ಷಗಳ ‘ಹಿತಶತ್ರು’ಗಳನ್ನು ನಿವಾರಿಸಿಕೊಳ್ಳಿ ಎಂದು ದೇವೇಗೌಡರು ರಾಹುಲ್ ಗಾಂಧಿ ಹಾಗೂ ಅಹ್ಮದ್ ಪಟೇಲ್‍ಗೆ ದೂರು ಕೊಟ್ಟಿದ್ದಾರೆ. ಈ ಮೂಲಕ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೇ ಅಡ್ಡಗಾಲಾಗಿದ್ದಾರೆ ಎಂದು ದೂರು ಕೊಟ್ಟಿದ್ದಾರೆ.

    ಜೆಡಿಎಸ್ ಕೋಟಾದ 2 ಸಚಿವ ಸ್ಥಾನ ಪಕ್ಷೇತರರಿಗೆ ಬಿಟ್ಟುಕೊಡುವಂತೆ ಸಿದ್ದರಾಮಯ್ಯ ಹೇಳಿಕೆಗೆ ಗೌಡರು ಕೆಂಡಾಮಂಡಲರಾಗಿದ್ದು, ಸಚಿವ ಸಂಪುಟ ವಿಸ್ತರಣೆ ವೇಳೆ ಜೆಡಿಎಸ್ ಕೋಟಾ ಬಿಟ್ಟುಕೊಡಲ್ಲ. ಜೆಡಿಎಸ್‍ನಿಂದ ಮುಸ್ಲಿಮರು, ದಲಿತರಿಗೆ ಸಚಿವ ಸ್ಥಾನ ಕೊಡಬೇಕು. ಹಾಗಾಗಿ, ಜೆಡಿಎಸ್ ಕೋಟಾ ಬಿಟ್ಟುಕೊಡಲ್ಲ ಎಂದು ದೇವೇಗೌಡರು ತಿಳಿಸಿದ್ದಾರೆ.

    ಇದೇ ವೇಳೆ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಬಗ್ಗೆಯೂ ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಹಿಂದೆ ರಾಹುಲ್‍ಗೆ ಬರೆದಿದ್ದ ಪತ್ರವನ್ನು ನೆನಪಿಸಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳು ತಿಳಿಸಿವೆ.

    ರಾಜ್ಯ ಸಚಿವ ಸಂಪುಟ ಬುಧವಾರ ವಿಸ್ತರಣೆಯಾಗುವುದಾಗಿ ನಿಗದಿಯಾಗಿತ್ತು. ಆದರೆ ಸೋಮವಾರ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅವರ ನಿಧನರಾದ ಹಿನ್ನೆಲೆಯಲ್ಲಿ ಇದೀಗ ಶುಕ್ರವಾರಕ್ಕೆ ಮುಂದೂಡಲಾಗಿದೆ.