Tag: HCL

  • ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಈಗ ವಿಶ್ವದ ಶಕ್ತಿಶಾಲಿ ಮಹಿಳೆ – ನಂ.1 ಸ್ಥಾನದಲ್ಲಿ ಯಾರಿದ್ದಾರೆ?

    ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಈಗ ವಿಶ್ವದ ಶಕ್ತಿಶಾಲಿ ಮಹಿಳೆ – ನಂ.1 ಸ್ಥಾನದಲ್ಲಿ ಯಾರಿದ್ದಾರೆ?

    ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಫೋರ್ಬ್ಸ್ ಪ್ರಕಟಿಸಿದ ವಿಶ್ವದ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ 32ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಒಟ್ಟು ನಾಲ್ವರು ಭಾರತೀಯ ಮಹಿಳೆಯರ ಹೆಸರು ಕೇಳಿಬಂದಿದೆ. ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris), ಖ್ಯಾತ ಗಾಯಕಿ ಟೇಲರ್ ಸ್ವಿಫ್ಟ್ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

    ಅಮೆರಿಕ ಮೂಲದ ಫೋರ್ಬ್ಸ್‌ ಸಂಸ್ಥೆ ಪ್ರಕಟಿಸಿದ ವಿಶ್ವದ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ನಾಲ್ವರು ಭಾರತೀಯರ ಪೈಕಿ ನಿರ್ಮಲಾ ಸೀತಾರಾಮನ್‌ ಅವರು 32ನೇ ರ‍್ಯಾಂಕ್‌ನಲ್ಲಿದ್ದರೆ, ಎಚ್‌ಸಿಎಲ್ (HCL) ಕಾರ್ಪೊರೇಷನ್ ಸಿಇಒ ರೋಶ್ನಿ ನಾಡರ್ ಮಲ್ಹೋತ್ರಾ (Roshni Nadar Malhotra) 60ನೇ ರ‍್ಯಾಂಕ್‌, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಅಧ್ಯಕ್ಷೆ ಸೋಮಾ ಮೊಂಡಲ್ 70ನೇ ರ‍್ಯಾಂಕ್‌, ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ 76ನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ.

    ಇನ್ನೂ ಯುರೋಪಿಯನ್ ಕಮಿಷನ್ ಮುಖ್ಯಸ್ಥ ಉರ್ಸುಲಾ ವಾನ್ ಡೆರ್ ಲೇಯೆನ್ (Ursula von der Leyen) ನಂ.1, ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥ ಕ್ರಿಸ್ಟಿನ್ ಲಗಾರ್ಡೆ 2ನೇ ಸ್ಥಾನ, ಯುಎಸ್ ಉಪಾಧ್ಯಕ್ಷ ಕಮಲ್ ಹ್ಯಾರಿಸ್ 3ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಮಹಾಪರಿನಿರ್ವಾಣ ದಿನ ಆಚರಣೆ – ಅಂಬೇಡ್ಕರ್ ಭಾವ ಚಿತ್ರಕ್ಕೆ ತಲೆಬಾಗಿ ನಮಸ್ಕರಿಸಿದ ಪ್ರಧಾನಿ ಮೋದಿ

    ರಾಜಕೀಯಕ್ಕೂ ಮುನ್ನ ಯುಕೆಯ ಅಗ್ರಿಕಲ್ಚರಲ್ ಇಂಜಿನಿಯರ್ಸ್ ಅಸೋಸಿಯೇಷನ್ ಹಾಗೂ ಬಿಬಿಸಿ ವರ್ಲ್ಡ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ನಿರ್ಮಲಾ ಸೀತಾರಾಮನ್‌ ಅವರು 2019ರಿಂದಲೂ ಭಾರತದಲ್ಲಿ ಪೂರ್ಣ ಸಮಯದ ವರೆಗೆ ಹಣಕಾಸು ಸಚಿವರಾಗಿ ಅಧಿಕಾರ ಪೂರೈಸುತ್ತಿದ್ದಾರೆ. ಅಲ್ಲದೇ ವಾಣಿಜ್ಯ ವ್ಯವಹಾರಗಳ ಸಚಿವಾಲಯದ ಮುಖ್ಯಸ್ಥರಾಗಿಯೂ ಇದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರೂ ಆಗಿದ್ದಾರೆ ಫೋಬ್ಸ್‌ ಉಲ್ಲೇಖಿಸಿದೆ.

    ನಂತರದ ಸ್ಥಾನದಲ್ಲಿರುವ ರೋಶ್ನಿ ನಾಡರ್ ಮಲ್ಹೋತ್ರಾ ಅವರು ಕೈಗಾರಿಕೋದ್ಯಮಿ ಶಿವ ನಾಡಾರ್ ಅವರ ಪುತ್ರಿ ಆಗಿದ್ದು, ಹೆಚ್‌ಸಿಎಲ್‌ ಟೆಕ್ನಾಲಜೀಸ್‌ನ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. 2020ರಿಂದ ಕಂಪನಿಯ ಎಲ್ಲಾ ಕೆಲಸಗಳ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಸೋಮಾ ಮೊಂಡಲ್ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದಾರೆ. 2021ರಲ್ಲಿ ಅವರು ತಮ್ಮ ಸ್ಥಾನವನ್ನು ಅಲಂಕರಿದರು. ಅಲ್ಲದೇ ಮೊಂಡಲ್‌ ಅಧಿಕಾರ ವಹಿಸಿಕೊಂಡ ಮೊದಲ ವರ್ಷದಲ್ಲೇ ಸಂಸ್ಥೆಯು ಮೂರು ಪಟ್ಟು ಲಾಭವನ್ನು ಗಳಿಸಿತ್ತು ಎಂದು ವರದಿ ಹೇಳಿದೆ.

    ಇನ್ನೂ ಕಿರಣ್ ಮಜುಂದಾರ್ ಶಾ ಅವರು ಸ್ವಂತ ಉದ್ಯಮದಲ್ಲಿ ಸಕ್ಸಸ್‌ ಕಂಡ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. 1978ರಲ್ಲಿ ಬಯೋಕಾನ್ ಜೈವಿಕ ಔಷಧೀಯ ಸಂಸ್ಥೆಯನ್ನು ಸ್ಥಾಪಿದ್ದಾರೆ. ಈ ಸಂಸ್ಥೆಯು ಮಲೇಷ್ಯಾದ ಜೋಹೋರ್ ಪ್ರದೇಶದಲ್ಲಿ ಏಷ್ಯಾದ ಅತಿದೊಡ್ಡ ಇನ್ಸುಲಿನ್ ಕಾರ್ಖಾನೆಯನ್ನು ಹೊಂದಿರುವುದು ವೀಶೇಷ. ಇದನ್ನೂ ಓದಿ: ರಜಪೂತ್‌ ಕರ್ಣಿ ಸೇನಾ ಮುಖ್ಯಸ್ಥನ ಹಣೆಗೆ ಗುಂಡಿಟ್ಟು ಹತ್ಯೆ – ರೊಚ್ಚಿಗೆದ್ದ ಬೆಂಬಲಿಗರಿಂದ ರಾಜಸ್ಥಾನ ಬಂದ್‌ಗೆ ಕರೆ

  • ಕೆಳಗಿಳಿದ ಶಿವ ನಡಾರ್‌, ಭಾರತದ ಶ್ರೀಮಂತ ಮಹಿಳೆಗೆ ಎಚ್‌ಸಿಎಲ್‌ ಪಟ್ಟ – ರೋಶನಿ ನಡಾರ್‌ ಸಾಧನೆ ಏನು?

    ಕೆಳಗಿಳಿದ ಶಿವ ನಡಾರ್‌, ಭಾರತದ ಶ್ರೀಮಂತ ಮಹಿಳೆಗೆ ಎಚ್‌ಸಿಎಲ್‌ ಪಟ್ಟ – ರೋಶನಿ ನಡಾರ್‌ ಸಾಧನೆ ಏನು?

    ನವದೆಹಲಿ: ಭಾರತದ ಮೂರನೇ ಅತಿದೊಡ್ಡ ಸಾಫ್ಟ್‌ವೇರ್ ರಫ್ತುದಾರ ಕಂಪನಿ ಎಚ್‌ಸಿಎಲ್‌ ಟೆಕ್ನಾಲಜೀಸ್ ನಿರ್ದೇಶಕರ ಮಂಡಳಿಯ ಅಧ್ಯಕ್ಷ ಸ್ಥಾನದಿಂದ 75 ವರ್ಷದ ಶಿವ ನಡಾರ್‌ ಇಳಿದಿದ್ದು, 38 ವರ್ಷದ ಪುತ್ರಿ ರೋಶನಿ ನಡಾರ್ ಹುದ್ದೆಯನ್ನು ಅಲಂಕರಿಸಿದ್ದಾರೆ.

    ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ ಎಚ್‌ಸಿಎಲ್‌ ಕಂಪನಿ, ಶಿವ ನಡಾರ್ ಅವರು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಮುಂದುವರಿಯಲಿದ್ದು, ಮುಖ್ಯ ಕಾರ್ಯತಂತ್ರ ಅಧಿಕಾರಿಯಾಗಿರಲಿದ್ದಾರೆ. ಶಿವ ನಡಾರ್‌ ಅವರು ಹುದ್ದೆ ತ್ಯಜಿಸುವ ಇಚ್ಚೆ ವ್ಯಕ್ತಪಡಿಸಿದ್ದರಿಂದ ನಿರ್ದೇಶಕರ ಮಂಡಳಿಯು ರೋಶನಿ ನಡಾರ್ ಮಲ್ಹೊತ್ರಾ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಜುಲೈ 17ರಿಂದಲೇ ಇದು ಜಾರಿಗೆ ಬರಲಿದೆ ಎಂದು ತಿಳಿಸಿದೆ.

    ಜೂನ್‌ನಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯ ಆದಾಯ ಶೇ.4ರಷ್ಟು ಕುಸಿತವಾಗಿತ್ತು. ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ 18,590 ಕೋಟಿ ರೂ. ನಿವ್ವಳ ಆದಾಯ ಗಳಿಸಿದ್ದರೆ, ಜೂನ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ 17,841 ಕೋಟಿ ರೂ. ಗಳಿಸಿತ್ತು. ನಿವ್ವಳ ಲಾಭದಲ್ಲೂ ಎಚ್‌ಸಿಎಲ್‌ ಶೇ 7.3ರಷ್ಟು ಕುಸಿತ ಕಂಡಿದೆ. ಅವಧಿಯಲ್ಲಿ ಕಂಪನಿಯ ನಿವ್ವಳ ಲಾಭ 3,154 ಕೋಟಿ ರೂ. ಆಗಿದ್ದರೆ ಜೂನ್‌ ತ್ರೈಮಾಸಿಕದಲ್ಲಿ 2,925 ಕೋಟಿ ರೂ. ಗಳಿಸಿತ್ತು.

    ರೋಶನಿ ನಡಾರ್‌ ಯಾರು?
    ಫೋರ್ಬ್ಸ್ ನಿಯತಕಾಲಿಕೆ 2019ರಲ್ಲಿ ಪ್ರಕಟಿಸಿದ ವಿಶ್ವದ 100 ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ರೋಶನಿ 54ನೇ ಸ್ಥಾನ ಪಡೆದಿದ್ದರು. ಹುರುನ್ ಇಂಡಿಯಾ ಶ್ರೀಮಂತ ಭಾರತೀಯರ ಪಟ್ಟಿಯಯಲ್ಲಿ 36,800 ಕೋಟಿ ರೂ. ಸಂಪತ್ತು ಹೊಂದುವ ಮೂಲಕ ಭಾರತದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದರು.

    ಶಿವ ನಡಾರ್‌ ಅವರ ಏಕೈಕ ಪುತ್ರಿಯಾಗಿರುವ ರೋಶನಿ ಆರಂಭದಲ್ಲಿ ದೆಹಲಿಯ ವಸಂತ್ ವ್ಯಾಲಿ ಶಾಲೆಯಲ್ಲಿ ಓದಿದ್ದಾರೆ. ಬಳಿಕ ಅಮೆರಿಕದ ಇಲಿನಾಯ್ಸ್ನ ವಿಶ್ವವಿದ್ಯಾಲಯದಿಂದ ಪದವಿ ಪಡೆದು, ಕೆಲ್ಲಾಗ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಎಂಬಿಎ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

    ಎಚ್‌ಸಿಎಲ್‌ಗೆ ಸೇರುವ ಮೊದಲು ಅವರು ವಿವಿಧ ಕಂಪನಿಗಳಲ್ಲಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಎಚ್‌ಸಿಎಲ್‌ಗೆ ಸೇರ್ಪಡೆಯಾದ ಒಂದು ವರ್ಷದೊಳಗೆ 2013 ರಲ್ಲಿ ಮಂಡಳಿಯಲ್ಲಿ ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು.

    ಎಚ್‌ಸಿಎಲ್ ಕಾರ್ಪೊರೇಶನ್‌ನ ಸಿಇಒ ಆಗುವ ಮೊದಲು ಅವರು ಶಿವ ನಡಾರ್‌ ಫೌಂಡೇಶನ್‌ನ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಜನರಿಗೆ ನಾಯಕತ್ವ ಕಲೆ ಕಲ್ಪಿಸುವ ವಿದ್ಯಾಜ್ಞಾನ ಲೀಡರ್‌ಶಿಪ್‌ ಅಕಾಡೆಮಿಯ ಅಧ್ಯಕ್ಷರಾಗಿದ್ದಾರೆ. ರೋಶನಿಯವರು ಶಾಸ್ತ್ರೀಯ ಸಂಗೀತವವನ್ನು ಅಭ್ಯಾಸ ಮಾಡಿದ್ದಾರೆ.

    2010 ರಲ್ಲಿ ಶಿಖರ್ ಮಲ್ಹೋತ್ರಾ ಅವರನ್ನು ರೋಶನಿ ಮದುವೆಯಾಗಿದ್ದಾರೆ. ಶಿಖರ್ ಎಚ್‌ಸಿಎಲ್ ಹೆಲ್ತ್‌ಕೇರ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದಂಪತಿಗೆ ಇಬ್ಬರು ಪುತ್ರರಿದ್ದಾರೆ.

    2017, 2018 ಮತ್ತು 2019 ರಲ್ಲಿ ಫೋರ್ಬ್ಸ್ ಮ್ಯಾಗಜಿನ್‌ ಪ್ರಕಟಿಸಿದ ಜಗತ್ತಿನ 100 ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 2017 ರಲ್ಲಿ ಬಾಬ್ಸನ್ ಕಾಲೇಜು ಲೂಯಿಸ್ ಇನ್‌ಸ್ಟಿಟ್ಯೂಟ್‌ ಕಮ್ಯುನಿಟಿ ಚೇಂಜ್ ಮೇಕರ್ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿತ್ತು. ಅಂತರರಾಷ್ಟ್ರೀಯ ಖ್ಯಾತಿಯ ಥಿಂಕ್ ಟ್ಯಾಂಕ್ ಹೊರಾಸಿಸ್ 2019ರಲ್ಲಿ ಭಾರತದ ಬಿಸಿನೆಸ್‌ ಲೀಡರ್‌ ಪ್ರಶಸ್ತಿಯನ್ನು ನೀಡಿತ್ತು.