Tag: hawala money

  • ಹುಬ್ಬಳ್ಳಿಯಲ್ಲಿ 82 ಲಕ್ಷ ರೂ. ಹವಾಲಾ ಹಣ ಜಪ್ತಿ

    ಹುಬ್ಬಳ್ಳಿಯಲ್ಲಿ 82 ಲಕ್ಷ ರೂ. ಹವಾಲಾ ಹಣ ಜಪ್ತಿ

    ಹುಬ್ಬಳ್ಳಿ: ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 82.75 ಲಕ್ಷ ರೂ. ಹಣವನ್ನು ಕೇಶ್ವಾಪುರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಕೇಶ್ವಾಪುರ ಠಾಣೆ ಪೊಲೀಸರು ನಿನ್ನೆ ರಾತ್ರಿ ಭರ್ಜರಿ ಬೇಟೆಯಾಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ಕುಸುಗಲ್ ರಸ್ತೆಯ ಆಕ್ಸ್‍ಫರ್ಡ್ ಕಾಲೇಜ್ ಬಳಿ ದಾಳಿ ಮಾಡಿದ ಪೊಲೀಸರು, ನಗದು ಸಮೇತ ಕಾರು ವಶಡಿಸಿಕೊಂಡಿದ್ದಾರೆ.

    ವಿಜಯಪುರದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸ್ವಿಫ್ಟ್ ಡಿಜೈರ್ ಕಾರನ್ನು ತಡೆದು ಪರಿಶೀಲಿಸಿದಾಗ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ. ವಿಜಯಪುರದ ಭವಾನಿ ಟೀ ಸ್ಟಾಲ್ ಟಾಂಗಾ ಸ್ಟ್ಯಾಂಡ್ ಹತ್ತಿರದ ನಿವಾಸಿಗೆ ಸೇರಿದ ಕಾರು ಇದಾಗಿದ್ದು, ಚಾಲಕ ಗೋಕುಲರಾಮ ವೀರಾಮಾರಾಮ ರಬಾರಿ(34)ಯನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರಿಗೆ ಬಹುಮಾನ ಘೋಷಿಸಿದ ಜಗ್ಗೇಶ್

    ಚಾಲಕನಿಂದ 82,75,100 ರೂಪಾಯಿ ನಗದು ಹಾಗೂ 5 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಎರಡು ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಇದು ಮಹಾನಗರ ಪಾಲಿಕೆ ಚುನಾವಣೆಗಾಗಿ ಸಾಗಿಸುತ್ತಿದ್ದ ಹಣವೋ ಅಥವಾ ಹವಾಲಾ ಹಣವೋ ಎಂಬುದು ತನಿಖೆಯಿಂದ ಪತ್ತೆಯಾಗಬೇಕಿದೆ.

  • ನಾನು ತಪ್ಪು ಮಾಡಿದ್ರೆ ಜೈಲಿಗೆ ಹಾಕಿ, ಗಲ್ಲಿಗೂ ಏರಲು ಸಿದ್ಧ: ಡಿಕೆಶಿ ಗುಡುಗು

    ನಾನು ತಪ್ಪು ಮಾಡಿದ್ರೆ ಜೈಲಿಗೆ ಹಾಕಿ, ಗಲ್ಲಿಗೂ ಏರಲು ಸಿದ್ಧ: ಡಿಕೆಶಿ ಗುಡುಗು

    ಬೆಂಗಳೂರು: ನಾನು ಯಾವುದೇ ತಪ್ಪು ಮಾಡಿಲ್ಲ, ತಪ್ಪು ಮಾಡಿದರೆ ನನ್ನನ್ನು ಜೈಲಿಗೆ ಹಾಕಿ, ಗಲ್ಲಿಗೂ ಏರಲು ನಾನು ಸಿದ್ಧ ಎಂದು ಜಲಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಗುಡುಗಿದ್ದಾರೆ.

    ಫುಡ್ ಪಾಯ್ಸಸನ್ ಆಗಿ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಡಿಕೆ ಶಿವಕುಮಾರ್ ಬುಧವಾರ ಸಂಜೆ ಡಿಸ್ಚಾರ್ಜ್ ಆಗಿ ಕ್ರೆಸೆಂಟ್ ಸರ್ಕಾರಿ ಬಂಗಲೆಯಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿ ತನ್ನ ವಿರುದ್ಧದ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು. ರಾಷ್ಟ್ರಮಟ್ಟದಲ್ಲಿ ಪ್ರಸಾರವಾಗಬೇಕು ಎನ್ನುವ ಉದ್ದೇಶದಿಂದ ಡಿಕೆಶಿ ಇಂಗ್ಲಿಷಿನಲ್ಲೇ ಸುದ್ದಿಗೋಷ್ಠಿ ನಡೆಸಿದ್ದು ವಿಶೇಷವಾಗಿತ್ತು.

    ಬಿಜೆಪಿ ಆರೋಪಗಳಿಗೆ ಉತ್ತರಿಸಲು ಅನಾರೋಗ್ಯದ ನಡುವೆಯೂ ಸುದ್ದಿಗೋಷ್ಠಿ ನಡೆಸುತ್ತಿದ್ದೇನೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಅಧಿಕಾರ ಪಡೆಯಲು ನನ್ನ ವಿರುದ್ಧ ಐಟಿ, ಇಡಿ ಇಲಾಖೆಗಳನ್ನು ಬಳಕೆ ಮಾಡಿಕೊಂಡು ಒತ್ತಡ ಹಾಕಲಾಗುತ್ತಿದೆ. ತನಿಖಾ ಸಂಸ್ಥೆಗಳಿಗೆ ರಾಜಕೀಯ ಒತ್ತಡ ಹೆಚ್ಚಾಗಿರುವುದರಿಂದ ನನ್ನ ಹಾಗೂ ಸ್ನೇಹಿತರ ನಿವಾಸದ ಮೇಲೆ ದಾಳಿ ನಡೆಸಿ ಒತ್ತಾಯ ಪೂರ್ವಕವಾಗಿ ಹೇಳಿಕೆ ಪಡೆದಿದ್ದಾರೆ. ಅಧಿಕಾರಿಗಳು ನನ್ನ ಬಳಿ ತಮ್ಮ ಅವರ ಅಸಹಾಯಕತೆಯನ್ನು ಹೇಳಿಕೊಂಡಿದ್ದಾರೆ ಎಂದು ತನ್ನ ವಿರುದ್ಧದ ಆರೋಪಗಳನ್ನು ತಿರಸ್ಕರಿಸಿದರು.

    ಪ್ರಕರಣದಲ್ಲಿ ಆರೋಪಿಗಳಾಗಿರುವ ಆಪ್ತರೆಲ್ಲರೂ ಆದಾಯವನ್ನು ಘೋಷಿಸಿಕೊಂಡಿದ್ದಾರೆ. ನಾನು ನಾನು ದೆಹಲಿಯಲ್ಲೇ ಪತ್ರಿಕಾಗೋಷ್ಠಿ ಮಾಡಿ ಅವರಿಗೆ ಉತ್ತರ ಕೊಡುತ್ತೇನೆ. ಅಲ್ಲದೇ ಎಲ್ಲಾ ಆರೋಪದಿಂದ ಮುಕ್ತನಾಗಿ ಪರಿಶುದ್ಧನಾಗಿ ಹೊರ ಬರುತ್ತೇನೆ. ಈ ದೇಶದ ಪ್ರಜೆಯಾಗಿ ನನಗೂ ಈ ನೆಲದ ಕಾನೂನು ಗೊತ್ತು. ತಪ್ಪು ಮಾಡಿದ್ದರೆ ಜೈಲಿಗೆ ಹೋಗಲು ಗಲ್ಲಿಗೇರಲು ಸಿದ್ಧ ಎಂದು ಸವಾಲು ಎಸೆದರು.

    1 ವರ್ಷ ಬೇಕೇ: ನನ್ನ ವಿರುದ್ಧ ಐಟಿ ಅಧಿಕಾರಿಗಳು ದಾಳಿ ನಡೆಸಿ 1 ವರ್ಷ ಕಳೆದಿದೆ. ಆದರೆ ಒಂದು ಪ್ರಕರಣ ದಾಖಲಿಸಲು ಇಡಿಗೆ 1 ವರ್ಷ ಅವಧಿ ಬೇಕೇ ಆದರೆ ನನಗೆ ಎಂತಹ ಟಾರ್ಚರ್ ಕೊಟ್ಟರು ಸಹಿಸಲು ಸಿದ್ಧ. ಯಾವುದೇ ಅಕ್ರಮ ಹಣ ವರ್ಗಾವಣೆ ಮಾಡಿಲ್ಲ. ನನ್ನ ಮನೆಯಲ್ಲಿ ಸಿಕ್ಕ 41 ಲಕ್ಷ ರೂ. ನನ್ನದೇ. ಪ್ರತಿಯೊಂದು ರೂಪಾಯಿಗೂ ಲೆಕ್ಕ ಕೊಟ್ಟಿದ್ದೇನೆ. ನನ್ನ ಆಪ್ತರು ತಮ್ಮ ಆಸ್ತಿಯ ಕುರಿತು ಲೆಕ್ಕ ನೀಡಿದ್ದಾರೆ ಎಂದರು.

    ಕುಟುಂಬಕ್ಕೂ ಒತ್ತಡ: ಆದಾಯ ತೆರಿಗೆ ಇಲಾಖೆ ಅವರು ನನ್ನ ಆಪ್ತರು, ಕುಟುಂಬ, ಸಹೋದರ ಸೇರಿದಂತೆ ಎಲ್ಲರಿಗೂ ಒತ್ತಡ ಹಾಕಿದ್ದಾರೆ. ಈ ಮೂಲಕ ಅವರ ಹೇಳಿಕೆ ಪಡೆಯಲಾಗಿದೆ. ಈಗಾಗಲೇ ಸಹೋದರ ಸುರೇಶ್ ಗೆ ಸಿಬಿಐ ಅಧಿಕಾರಿಗಳು ನೋಟಿಸ್ ನೀಡಿದ್ದು, ಸುರೇಶ್ ಅಧಿಕಾರಿಗಳ ಮುಂದೇ ಹಾಜರಾಗಿ ಅವರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಆದರೆ ಈವರೆಗೂ ತನಗೆ ಯಾವುದೇ ನೋಟಿಸ್ ಬಂದಿಲ್ಲ. ಬಂಧನದ ಭಯವೂ ಇಲ್ಲ. ಈ ಹಿಂದೆ ನನ್ನ ಬಂಧನದ ಕುರಿತು ನೀಡಿರುವ ಹೇಳಿಕೆ ನಿಜ. ಸುರೇಶ್ ಆಪ್ತ ಸ್ನೇಹಿತರು ನೀಡಿದ ಎಚ್ಚರಿಕೆ ಮೇಲೆ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಅವರ ಹೇಳಿಕೆಯನ್ನು ನಾನು ಸಮರ್ಥಿಸುತ್ತೇನೆ. ಆದರೆ ಕಾನೂನು ಕೇವಲ ಬಿಜೆಪಿ ಅವರಿಗೆ ಮಾತ್ರ ಅಲ್ಲ ನನಗೂ ತಿಳಿದಿದೆ ಎಂದು ಎಚ್ಚರಿಕೆ ನೀಡಿದರು.

    ಎಲ್ಲರ ಮಾಹಿತಿ ಬಿಚ್ಚಿಡುತ್ತೇನೆ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ಅವರು ನೇರ ಚೆಕ್ ಮೂಲಕ ಲಂಚ ಪಡೆದು ಜೈಲಿಗೆ ಹೋಗಿ ಬಂದಿದ್ದಾರೆ. ಅಲ್ಲದೇ ಈ ಕುರಿತು ಅಧಿಕಾರಿಗಳು ಸ್ವಷ್ಟಪಡಿಸಿದ್ದಾರೆ. ಜೈಲಿಗೆ ಹೋಗಿ ಬಂದ ವ್ಯಕ್ತಿಗಳಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ. ಎಲ್ಲಾ ವಿಚಾರದಲ್ಲೂ ರಾಜಕೀಯ ಮಾಡಲಾಗುತ್ತಿದೆ. ನಾನು ಏಕೆ ರಾಜೀನಾಮೆ ನೀಡಬೇಕು. ಜೈಲಿಗೆ ಹೋಗಿ ಬಂದವರಿಗೆ ರಾಜ್ಯಾಧ್ಯಕ್ಷ ಸಿಎಂ ಅಭ್ಯರ್ಥಿ ಎಂದು ಘೋಷಿಸುತ್ತಾರೆ. ಅಧಿಕಾರ, ಹಣದ ಆಮಿಷ ಎಲ್ಲವೂ ಈ ಹಿಂದಿದೆ. 2019 ಚುನಾವಣೆಯಲ್ಲಿ ಜನರು ಇವುಗಳಿಗೆ ಎಲ್ಲ ತಕ್ಕ ಉತ್ತರ ಕೊಡುತ್ತಾರೆ ಎಂದು ತಿರುಗೇಟು ನೀಡಿದರು.

    ಅಧಿಕಾರಿಗಳಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ, ನನಗೆ ಭೇಟಿ ಮಾಡಿ ಚರ್ಚೆ ನಡೆಸಿ ಎಲ್ಲರ ಬಗ್ಗೆಯೂ ಮಾಹಿತಿ ನೀಡುತ್ತೇನೆ. ಯಾವುದೇ ಆರೋಪಕ್ಕೂ ಹೆದರಿ ಓಡಿ ಹೋಗುವುದಿಲ್ಲ. ಸಹರಾ ಡೈರಿ ಕಥೆ ಏನಾಯ್ತು? ಯಾರು ಎಷ್ಟು ಹಣ ಪಡೆಯಲಾಗಿದೆ ಎನ್ನುವುದು ಗೊತ್ತಿದೆ. ನನ್ನ ಮನೆಯಲ್ಲಿ ಡೈರಿ ಸಿಕ್ಕಿದೆ ಎಂದು ಕಥೆ ಕಟ್ಟಿ ಅದರಲ್ಲಿ ಕೋಡ್ ವರ್ಡ್ ಗಳನ್ನು ಸೃಷ್ಟಿಸಿ ಸುಳ್ಳು ಆರೋಪ ಮಾಡಲಾಗುತ್ತಿದೆ. ಗೋವಿಂದ ರಾಜು ಡೈರಿಯನ್ನು ಬಿಜೆಪಿ ಅವರೇ ಕ್ರಿಯೇಟ್ ಮಾಡಿದ್ದಾರೆ. ಅಲ್ಲಿ ಕೆಲ ಹೆಸರುಗಳನ್ನು ಬರೆದಿದ್ದಾರೆ. ನಾನು ರಾಜೀನಾಮೆ ನೀಡಲ್ಲ. ಈ ಕುರಿತು ಸಮ್ಮಿಶ್ರ ಸರ್ಕಾರದ ಸಿಎಂ ಎಚ್‍ಡಿಕೆ ಅವರಿಗೆ ಏನು ಹೇಳುವ ಅಗತ್ಯವಿಲ್ಲ. ಅವರಿಗೆ ಎಲ್ಲವೂ ಅರಿವಿದೆ. ಮಾಜಿ ಸಿಎಂ ಅವರಿಗೂ ಸಿದ್ದರಾಮಯ್ಯ ಅರಿವಿದೆ ಎಂದರು. ಇದನ್ನು ಓದಿ: ಕರ್ನಾಟಕ ಕಾಂಗ್ರೆಸ್‍ನ ಮತ್ತೊಂದು ಎಟಿಎಂ-ಕೆಜಿ ಲೆಕ್ಕದಲ್ಲಿ ಹವಾಲ ಹಣ ರವಾನೆ: ಸಂಬಿತ್ ಪಾತ್ರ

    ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲು ನಾನೇ ಅಡ್ಡಿ ಎಂದು ಅವರು ಭಾವಿಸಿದ್ದು, ನನ್ನನ್ನು ಜೈಲಿಗೆ ಕಳುಹಿಸಿದರೆ ಸರ್ಕಾರ ರಚನೆ ಮಾಡಬಹುದು ಎಂಬುವುದು ಅವರ ಅನಿಸಿಕೆ. ಆದರೆ ನಾನು ಜೈಲಿಗೆ ಹೋದರೂ ಅವರು ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ. ನಾನು ನನ್ನ ಪಕ್ಷ ಸಿದ್ಧಾಂತಕ್ಕೆ ಬದ್ಧವಾಗಿದ್ದು ಅದನ್ನೇ ಇಲ್ಲಿವರೆಗೂ ಮಾಡಿದ್ದೇನೆ. ಯಾವುದೇ ಹಣ, ಅಧಿಕಾರ ಅಮಿಷಕ್ಕೆ ಒಳಗಾಗಿಲ್ಲ ಅದ್ದರಿಂದ ಹೆಚ್ಚಿನ ಒತ್ತಡ ಬಂದಿದೆ ಎಂದು ಹೇಳಿದರು.

    ವೈದ್ಯರ ಸಲಹೆ ನಿರ್ಲಕ್ಷ್ಯ ಮಾಡಿ ನಾನು ಇಲ್ಲಿಗೆ ಬಂದಿದ್ದೇನೆ. ನಾನು ಆಸ್ಪತ್ರೆ ಸೇರಿದ ಸಮಯವನ್ನು ಅವರು ಬೇಕಾದ ಹಾಗೇ ನನ್ನನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹಾಗೆಯೇ ನಾನು ಸಮಯವನ್ನು ಬಳಕೆ ಮಾಡಿಕೊಡುತ್ತೇನೆ. ಇದು ಕೇವಲ ಮೊದಲ ಡೋಸ್ ಅಷ್ಟೇ, ಸಮಯ ಬಂದಾಗ ಎಲ್ಲಾವನ್ನು ಬಹಿರಂಗ ಪಡಿಸುತ್ತೇನೆ. ಇದುವರೆಗೂ ನನಗೆ 40 ರಿಂದ 50 ಬಾರಿ ವಾಂತಿ ಆಗಿದೆ. ಅದರು ನಾನು ನಿಮ್ಮ ಮುಂದೇ ಬಂದು ಮಾತನಾಡುತ್ತಿದ್ದೇನೆ ಎಂದರು. ಇದನ್ನು ಓದಿ: ದೇವೇಗೌಡರ ಕುಟುಂಬದಿಂದ ಭೂ ಹಗರಣ -ಕುಮಾರಸ್ವಾಮಿ ಯಾಕ್ ಮಾತಾಡ್ತಿಲ್ಲ, ಬಿಎಸ್‍ವೈ ಪ್ರಶ್ನೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕರ್ನಾಟಕ ಕಾಂಗ್ರೆಸ್‍ನ ಮತ್ತೊಂದು ಎಟಿಎಂ-ಕೆಜಿ ಲೆಕ್ಕದಲ್ಲಿ ಹವಾಲ ಹಣ ರವಾನೆ: ಸಂಬಿತ್ ಪಾತ್ರ

    ಕರ್ನಾಟಕ ಕಾಂಗ್ರೆಸ್‍ನ ಮತ್ತೊಂದು ಎಟಿಎಂ-ಕೆಜಿ ಲೆಕ್ಕದಲ್ಲಿ ಹವಾಲ ಹಣ ರವಾನೆ: ಸಂಬಿತ್ ಪಾತ್ರ

    ನವದೆಹಲಿ: ಸಮ್ಮಿಸ್ರ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಇಡಿ ಎಫ್‍ಐಆರ್ ದಾಖಲಿಸುತ್ತಿದಂತೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಕಾಂಗ್ರೆಸ್ ವಿರುದ್ಧ ಹವಾಲ ಹಣ ದಂಧೆ ಆರೋಪ ಮಾಡಿದೆ.

    ದೆಹಲಿಯಲ್ಲಿ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಎಟಿಎಂ ಆಗಿದ್ದು, ಎಐಸಿಸಿ ಹೈಕಮಾಂಡ್‍ಗೆ ಹವಾಲ ಮೂಲಕ ಸಂಗ್ರಹಣೆ ಮಾಡಿದ್ದ 600 ಕೋಟಿ ರೂ. ರವಾನೆ ಮಾಡಲಾಗಿದೆ. ಭ್ರಷ್ಟಾಚಾರ ಹಾಗೂ ಹವಾಲ ಹಣ ಕಾಂಗ್ರೆಸ್ ಪಕ್ಷಕ್ಕೆ ಆಧಾರವಾಗಿದೆ ಎಂದು ಆರೋಪ ಮಾಡಿದ್ದಾರೆ.

    ಇದೇ ವೇಳೆ ದೆಹಲಿ ಅಪಾರ್ಟ್‍ಮೆಂಟ್‍ನಿಂದ 8 ಕೋಟಿ ರೂ. ದೊರೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಎಫ್‍ಐಆರ್ ದಾಖಲಿಸಿದ್ದನ್ನು ಪ್ರಸ್ತಾಪಿಸಿದ ಅವರು, ಕೆಜಿ ಲೆಕ್ಕದಲ್ಲಿ ಕಾಂಗ್ರೆಸ್ ಹೈಕಮಾಂಡ್‍ಗೆ ಹಣ ರವಾನೆ ಮಾಡಲಾಗಿದೆ ಎಂದು ಆರೋಪಿಸಿದರು.

    ಮೂಲಗಳ ಮಾಹಿತಿ ಅನ್ವಯ ಹವಾಲ ಹಣವನ್ನು ಮೊದಲು ದೆಹಲಿಗೆ ವರ್ಗಾವಣೆ ಮಾಡಲಾಗಿದ್ದು, ಬಳಿಕ ಮಂತ್ರಿಗಳಿಗೆ ನೀಡಲಾಗಿದೆ. ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಅವರ ಚಾಲಕ ಐಟಿ ಇಲಾಖೆ ಎದುರು ಎಐಸಿಸಿಗೆ ಕೆಜಿ ಲೆಕ್ಕದಲ್ಲಿ ಹಣ ನೀಡಿರುವ ಕುರಿತು ಹೇಳಿಕೆ ನೀಡಿದ್ದಾರೆ. ನೋಟು ನಿಷೇಧದ ವೇಳೆ ಕಾಂಗ್ರೆಸ್ ಏಕೆ ಭಾರೀ ಪ್ರತಿಭಟನೆ ಮಾಡಿತ್ತು ಎನ್ನುವುದು ಈಗ ತಿಳಿಯುತ್ತಿದೆ ಎಂದು ವ್ಯಂಗ್ಯವಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹವಾಲ ವ್ಯವಹಾರದಲ್ಲಿ ಡಿಕೆ ಶಿವಕುಮಾರ್ ಭಾಗಿ?

    ಹವಾಲ ವ್ಯವಹಾರದಲ್ಲಿ ಡಿಕೆ ಶಿವಕುಮಾರ್ ಭಾಗಿ?

    ಬೆಂಗಳೂರು: ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಹವಾಲ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪವೊಂದು ಈಗ ಕೇಳಿಬಂದಿದೆ.

    ಇಲಾಖೆಗೆ ಸುಳ್ಳು ಮಾಹಿತಿ ನೀಡಿದ ಆರೋಪದಡಿ ಐಟಿ ಇಲಾಖೆ ಹಿರಿಯ ಅಧಿಕಾರಿಗಳು ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ಸೋಮವಾರ ದೂರು ಸಲ್ಲಿಸಿದ್ದರು. ಐಟಿ ಕಾಯಿದೆ ಸೆಕ್ಷನ್ 277, 278, 193, 199, ಹಾಗೂ 120(ಬಿ) ಅಡಿ ಪ್ರಕರಣ ದಾಖಲಾಗಿತ್ತು.

    ಆದಾಯ ತೆರಿಗೆ ಇಲಾಖೆಯ ದಾಳಿ ವೇಳೆ ಸಿಕ್ಕ ಮಾಹಿತಿ ಆಧರಿಸಿ ನೀಡಿರುವ ದೂರಿನಲ್ಲಿ ಹವಾಲ ಹಣದದ ವಿವರವನ್ನು ಉಲ್ಲೇಖಿಸಿದ್ದಾರೆ. ಈ ದೂರಿನಲ್ಲಿ ಹವಾಲ ಹಣದ ಮೂಲಕ ಕೋಟಿ ಕೋಟಿ ಹಣವನ್ನು ಕಾಂಗ್ರೆಸ್ ಹೈಕಮಾಂಡ್ ಡಿಕೆ ಶಿವಕುಮಾರ್ ಕಳುಹಿಸಿಕೊಟ್ಟಿದ್ದಾರೆ ಎಂಬ ಆರೋಪಗಳನ್ನು ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ.

    ಆರೋಪಗಳೇನು?
    ದೆಹಲಿಯ 4 ಫ್ಲಾಟ್ ಗಳ ಮೇಲೆ ನಡೆದ ದಾಳಿಯಲ್ಲಿ 8.59 ಕೋಟಿ ರೂ. ಹಣ ಪತ್ತೆಯಾಗಿದೆ. ಶರ್ಮಾ ಟ್ರಾನ್ಸ್ ಪೋರ್ಟ್ ವ್ಯವಹಾರ ನೋಡಿಕೊಳ್ಳುವ ರಾಜೇಂದ್ರ ಮನೆ ಮೇಲೆ ನಡೆದ ದಾಳಿಯಲ್ಲಿ ಡೈರಿ, ಟಿಪ್ಪಣಿಗಳು ಸಿಕ್ಕಿದೆ. ಎಷ್ಟು ಲಕ್ಷ ರೂ.ಗಳನ್ನು ನೀಡಲಾಗಿದೆ ಎನ್ನುವ ಲೆಕ್ಕದ ವಿಚಾರವನ್ನು ಕೆಜಿಗಳ ಲೆಕ್ಕದಲ್ಲಿ ಡೈರಿನಲ್ಲಿ ನಮೂದಿಸಲಾಗಿದೆ. ಮನೆಯಲ್ಲಿಟ್ಟಿದ್ದ ಹಣವನ್ನು ಎಐಸಿಸಿಗೆ ಕೊಡುವಂತೆ ವಿ.ಮುಳ್‍ಗುಂದ್‍ಗೆ 5 ಕೋಟಿ ರೂ. ಹಣವನ್ನು ರವಾನಿಸಿದ್ದ ಬಗ್ಗೆ ಡೈರಿಯಲ್ಲಿ ಉಲ್ಲೇಖಿಸಿದೆ. ಈ ಹಣವನ್ನು ಡಿಕೆ ಶಿವಕುಮಾರ್ ಸೂಚನೆ ಮೇರೆಗೆ 3.24 ಕೋಟಿ ರೂ. ಹಣವನ್ನು ಆಂಜನೇಯ ಪಾವತಿಸಿದ್ದಾರೆ. ಸಫ್ದರ್ ಜಂಗ್ ನ 3 ಫ್ಲಾಟ್‍ಗಳು ಅಘೋಷಿತ ಹಣ ಸಂಗ್ರಹಣೆಗೆ ಬಳಕೆಯಾಗಿದೆ ಎಂದು ಐಟಿ ತನ್ನ ದೂರಿನಲ್ಲಿ ಉಲ್ಲೇಖಿಸಿದೆ ಎಂದು ತಿಳಿದು ಬಂದಿದೆ.

    ಸ್ಪಷ್ಟ ಉತ್ತರ ಸಿಕ್ಕಿಲ್ಲ:
    ಐಟಿ ದಾಳಿಯಾದ ಬಳಿಕ ಪತ್ತೆಯಾದ ಡೈರಿಯಲ್ಲಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಡಿಕೆ ಶಿವಕುಮಾರ್ ಮತ್ತು ಆರೋಪಿಗಳನ್ನು ವಿಚಾರಣೆ ನಡೆಸಿದ್ದರು. ಕೆಜಿ ಎಂಬ ಕೋಡ್ ವರ್ಡ್ ಬಳಸಿ ನಗದು ವ್ಯವಹಾರ ನಡೆಸುತ್ತಿದ್ದಾರೆ ಎನ್ನುವ ಅನುಮಾನದ ಮೇರೆಗೆ ಅಧಿಕಾರಿಗಳು ಆರೋಪಿಗಳಿಗೆ ಪ್ರಶ್ನೆ ಕೇಳಿದ್ದಾರೆ. ಆದರೆ ಈ ಪ್ರಶ್ನೆಗಳಿಗೆ ಆರೋಪಿಗಳಿಂದ ಸರಿಯಾದ ಉತ್ತರ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.

    ಅಕ್ರಮ ಹವಾಲ ಹಣ ಮೇಲೆ ಕಣ್ಣಿಟ್ಟಿರುವ ಐಟಿ ಇಲಾಖೆ ಸದ್ಯ ಲಭ್ಯವಾದ ಮಾಹಿತಿಯ ವರದಿಯನ್ನು ಜಾರಿ ನಿರ್ದೇಶನಾಲಯಗೆ (ಇಡಿ) ಮಂಗಳವಾರವಷ್ಟೇ ರವಾನೆ ಮಾಡಿದೆ.

    ಸಮನ್ಸ್ ಜಾರಿ:
    ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಆರ್ಥಿಕ ಅಪರಾಧ ನ್ಯಾಯಾಲಯದ ನ್ಯಾ.ಎಂ.ಎಸ್. ಆಳ್ವಾ ಅವರು ಡಿಕೆ ಶಿವಕುಮಾರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದಾರೆ. ಆಗಸ್ಟ್ 2 ರಂದು ಡಿಕೆಶಿ ಸೇರಿ ಎಲ್ಲಾ ಆರೋಪಿಗಳು ಖುದ್ದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಯಾಗಿದೆ.

    ಈ ಹಿಂದೆ ಡಿ.ಕೆ. ಶಿವಕುಮಾರ್ ಐಟಿ ಇಲಾಖೆ ದಾಖಲಿಸಿದ್ದ ದೂರಿಗೆ ಜಾಮೀನು ಪಡೆದಿದ್ದರು. ಡಿ.ಕೆ.ಶಿವಕುಮಾರ್ ಜೊತೆ ಸಚಿನ್ ನಾರಾಯಣ್, ಸುನಿಲ್ ಕುಮಾರ್ ಶರ್ಮಾ, ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ವಿರುದ್ಧವೂ ಸಮನ್ಸ್ ಜಾರಿಯಾಗಿದೆ.

  • ಸ್ವಚ್ಛ್ ಧನ್: ವಿಶೇಷ ಸಾಫ್ಟ್ ವೇರ್ ಬಳಸಿ ಐಟಿ ಶೋಧ- 18 ಲಕ್ಷ ಖಾತೆದಾರರಿಗೆ ನೋಟಿಸ್

    ನವದೆಹಲಿ: ನೋಟ್‍ಬ್ಯಾನ್ ಬಳಿಕ ನವೆಂಬರ್ 9ರಿಂದ ಡಿಸೆಂಬರ್ 31ರವರೆಗೆ ಬ್ಯಾಂಕ್‍ಗಳಲ್ಲಿ ಡೆಪಾಸಿಟ್ ಮಾಡಿರುವ ಹಣದ ಮೇಲೆ ಐಟಿ ಈ ಮೊದಲೇ ಕಣ್ಣಿಟ್ಟಿತ್ತು. ಮಂಗಳವಾರದಂದು ಸ್ವಚ್ಛ್ ಧನ್/ಕ್ಲೀನ್ ಮನಿ ಅಭಿಯಾನವನ್ನು ಆರಂಭಿಸಿರೋ ಕೇಂದ್ರ ಸರ್ಕಾರ ವಿಶೇಷ ಸಾಫ್ಟ್‍ವೇರ್ ಬಳಸಿ ಬ್ಯಾಂಕ್‍ಗಳ ಬಗ್ಗೆ ಶೋಧ ಕಾರ್ಯ ನಡೆಸಿದ್ದು, ಖಾತೆದಾರರ ಡೆಪಾಸಿಟ್ ಮಾಹಿತಿ ಹೊಂದಾಣಿಕೆ ಆಗದ ಕಾರಣ 18 ಲಕ್ಷ ಮಂದಿಗೆ ನೋಟಿಸ್ ನೀಡಿದೆ.

    ಇ-ಮೇಲ್, ಎಸ್‍ಎಂಎಸ್ ಮೂಲಕ ನೊಟೀಸ್ ರವಾನಿಸಲಾಗಿದ್ದು, 10 ದಿನಗಳೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ. ಒಂದು ವೇಳೆ ಅವರಿಂದ ಪ್ರತಿಕ್ರಿಯೆ ಬರದಿದ್ರೆ ಐಟಿಯಿಂದ ಮತ್ತೊಮ್ಮೆ ನೋಟಿಸ್ ಸಿಗಲಿದ್ದು ಕ್ರಮ ಕೈಗೊಳ್ಳಲಾಗುತ್ತದೆ. ಹೊಸ ಪ್ರೋಗ್ರಾಮಿಂಗ್ ಸಾಫ್ಟ್‍ವೇರ್‍ನಿಂದ ನೋಟ್‍ಬ್ಯಾನ್ ನಂತರ ಬ್ಯಾಂಕ್‍ಗಳಲ್ಲಾಗಿರುವ ಎಲ್ಲಾ ಠೇವಣಿಗಳ ಬಗ್ಗೆ ಇ- ವೇರಿಫಿಕೇಷನ್ ಮಾಡಬಹುದಾಗಿದೆ ಎಂದು ಕಂದಾಯ ಕಾರ್ಯದರ್ಶಿ ಹಸ್ಮುಕ್ ಅಧಿಯಾ ಹೇಳಿದ್ದಾರೆ.

    ಈ ಮಧ್ಯೆ, ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ 4 ಕೋಟಿ 12 ಲಕ್ಷ ರೂ. ಹವಾಲಾ ಹಣ ಸಾಗಿಸುತ್ತಿದ್ದ ಮೂವರನ್ನ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನ ಅಬ್ದುಲ್, ಶಂಶುದ್ದೀನ್, ಅಫ್ಜಲ್ ಅಂತ ಗುರುತಿಸಲಾಗಿದೆ. ಇವರ ಬಳಿ ಹೊಸ 2000 ರೂಪಾಯಿಯ 3 ಕೋಟಿ 10 ಲಕ್ಷ ರೂ. ಹಾಗೂ 1 ಕೋಟಿ ರೂ. ಮೌಲ್ಯದಷ್ಟು ಹೊಸ 500 ಹಾಗು 100 ರೂಪಾಯಿಗಳ 193 ಕಂತೆಗಳಿದ್ದವು.