Tag: hathras tragedy

  • ಹತ್ರಾಸ್‌ ದುರಂತ- ಪರಿಹಾರದ ಮೊತ್ತ ಹೆಚ್ಚಿಸಲು ರಾಹುಲ್‌ ಗಾಂಧಿ ಒತ್ತಾಯ

    ಹತ್ರಾಸ್‌ ದುರಂತ- ಪರಿಹಾರದ ಮೊತ್ತ ಹೆಚ್ಚಿಸಲು ರಾಹುಲ್‌ ಗಾಂಧಿ ಒತ್ತಾಯ

    ಅಲಿಘಡ್: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಕಾಲ್ತುಳಿತ (Hathras Tragedy) ಸಂಭವಿಸಿ ಮೃತರಾದ ಕುಟುಂಬಸ್ಥರನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಭೇಟಿಯಾಗಿದ್ದಾರೆ. ಬಳಿಕ ಮೃತರ ಕುಟುಂಬಸ್ಥರಿಗೆ ಪರಿಹಾರದ ಮೊತ್ತ ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ.

    ಕುಟುಂಬಗಳನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ನಾನು ಈ ವಿಚಾರದಲ್ಲಿ ರಾಜಕೀಯ ಮಾಡಲು ಬಯಸುವುದಿಲ್ಲ. ಆದರೆ ಆಡಳಿತದ ಕಡೆಯಿಂದ ಲೋಪಗಳಿವೆ ಮತ್ತು ಮೃತರ ಕುಟುಂಬಗಳು ಬಡವರಾಗಿದ್ದು, ಗರಿಷ್ಠ ಪರಿಹಾರವನ್ನು ನೀಡಬೇಕು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಮುಕ್ತ ಮನಸ್ಸಿನಿಂದ ಪರಿಹಾರ ನೀಡುವಂತೆ ಕೋರುತ್ತೇನೆ ಎಂದರು.

    ಈ ನಡುವೆ ಬೋಧಕ ಭೋಲೆ ಬಾಬಾ ಅವರ ಸತ್ಸಂಗದ ಸಂಘಟನಾ ಸಮಿತಿಯ ಆರು ಸದಸ್ಯರನ್ನು ಉತ್ತರ ಪ್ರದೇಶ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ಎಫ್‌ಐಆರ್‌ನಲ್ಲಿ ಹೆಸರಿಸಲಾದ ಏಕೈಕ ಆರೋಪಿ ತಲೆಮರೆಸಿಕೊಂಡಿದ್ದು, ನಾರಾಯಣ ಸಕರ್ ಹರಿ ಮತ್ತು ಭೋಲೆ ಬಾಬಾ ಎಂದೂ ಕರೆಯಲ್ಪಡುವ ಸೂರಜ್‌ಪಾಲ್‌ನನ್ನು ತನಿಖೆಯ ಸಮಯದಲ್ಲಿ ಅಗತ್ಯವಿದ್ದಲ್ಲಿ ಪ್ರಶ್ನಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪೊಲೀಸ್ ಮಹಾನಿರೀಕ್ಷಕ ಶಲಭ್ ಮಾಥುರ್ ಮಾತನಾಡಿ, ನಾಪತ್ತೆಯಾಗಿರುವ ಆರೋಪಿಯ ಹುಡುಕಾಟ ನಡೆಸಲಾಗುತ್ತಿದೆ. ಸುಳಿವು ನೀಡಿದರಿಗೆ 1 ಲಕ್ಷ ಬಹುಮಾನವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದರು. ಬಂಧಿತರನ್ನು ರಾಮ್ ಲಡೈತೆ (50), ಉಪೇಂದ್ರ ಸಿಂಗ್ ಯಾದವ್ (62), ಮೇಘ್ ಸಿಂಗ್ (61), ಮುಖೇಶ್ ಕುಮಾರ್ (38), ಮತ್ತು ಮಹಿಳೆಯರಾದ ಮಂಜು ಯಾದವ್ (30) ಮತ್ತು ಮಂಜು ದೇವಿ (40) ಎಂದು ಗುರುತಿಸಲಾಗಿದೆ ಎಂದರು.

    ಉತ್ತರ ಪ್ರದೇಶ ಸರ್ಕಾರವು ಹತ್ರಾಸ್ ದುರಂತದ ತನಿಖೆಗಾಗಿ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಮೂವರು ಸದಸ್ಯರ ನ್ಯಾಯಾಂಗ ಆಯೋಗವನ್ನು ರಚಿಸಿದೆ. ಕಾಲ್ತುಳಿತದ ಹಿಂದೆ ಪಿತೂರಿ ಇರುವ ಸಾಧ್ಯತೆಯನ್ನು ಪರಿಶೀಲಿಸುತ್ತದೆ. ಈಗಾಗಲೇ ಮೃತರಿಗೆ ನಾಲ್ಕು ಲಕ್ಷ ಮತ್ತು ಗಾಯಾಳುಗಳಿಗೆ ಒಂದು ಲಕ್ಷ ಪರಿಹಾರ ನೀಡಿದೆ.

  • Hathras Tragedy: ಇಬ್ಬರು ಮಹಿಳೆಯರು ಸೇರಿ ಸತ್ಸಂಗ ಸಂಘಟನಾ ಸಮಿತಿಯ 6 ಮಂದಿ ಅರೆಸ್ಟ್‌

    Hathras Tragedy: ಇಬ್ಬರು ಮಹಿಳೆಯರು ಸೇರಿ ಸತ್ಸಂಗ ಸಂಘಟನಾ ಸಮಿತಿಯ 6 ಮಂದಿ ಅರೆಸ್ಟ್‌

    ಲಕ್ನೋ: ಹತ್ರಾಸ್‌ ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತ (Hathras Stampede) ಸಂಭವಿಸಿ 121 ಮಂದಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ 6 ಮಂದಿಯನ್ನು ಬಂಧಿಸಿರುವುದಾಗಿ ಉತ್ತರ ಪ್ರದೇಶ ಪೊಲೀಸರು (UP Police) ಗುರುವಾರ ತಿಳಿಸಿದ್ದಾರೆ.

    ಸತ್ಸಂಗ ಕಾರ್ಯಕ್ರಮ ಸಂಘಟನಾ ಸಮಿತಿಯ 6 ಮಂದಿ ಸದಸ್ಯರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಂಗಳವಾರ (ಜು.2) ಸ್ವಯಂ ಘೋಷಿತ ಗುರು ಭೋಲೆ ಬಾಬಾ ನಾರಾಯಣ್ ಸಾಕರ್ ಹರಿ (Bhole Baba aka Narayan Saakar Hari) ಪ್ರವಚನ ಕಾರ್ಯಕ್ರಮದ ನಂತರ ಕಾಲ್ತುಳಿತ ಸಂಭವಿಸಿ 121 ಮಂದಿ ಸಾವನ್ನಪ್ಪಿದ್ದರು. 31 ಮಂದಿ ಗಾಯಗೊಂಡಿದ್ದರು.

    ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಪುರುಷರು, ಇಬ್ಬರು ಮಹಿಳೆಯರು ಸೇರಿ 6 ಮಂದಿಯನ್ನು ಬಂಧಿಸಲಾಗಿದೆ. ಅವರೆಲ್ಲರೂ ಸಂಘಟನಾ ಸಮಿತಿಯ ಸದಸ್ಯರಾಗಿದ್ದು, ಸೇವಾದಾರರಾಗಿ ಕೆಲಸ ಮಾಡುತ್ತಿದ್ದರು ಎಂದು ಅಲಿಗಢ್ ಇನ್ಸ್‌ಪೆಕ್ಟರ್ ಜನರಲ್ ಶಲಭ್ ಮಾಥುರ್ ಹೇಳಿದ್ದಾರೆ. ಇದನ್ನೂ ಓದಿ: ಹುತಾತ್ಮ ಅಗ್ನಿವೀರ್‌ ಕುಟುಂಬಕ್ಕೆ 98.39 ಲಕ್ಷ ನೀಡಲಾಗಿದೆ – ರಾಹುಲ್‌ ಆರೋಪದ ಬೆನ್ನಲ್ಲೇ ಸೇನೆ ಸ್ಪಷ್ಟನೆ

    ಪ್ರಮುಖ ಆರೋಪಿ ಸುಳಿವು ಕೊಟ್ಟರೆ 1 ಲಕ್ಷ ರೂ. ಬಹುಮಾನ:
    ಎಫ್‌ಐಆರ್‌ನಲ್ಲಿ ಮುಖ್ಯ ಸೇವಾದಾರ ದೇವಪ್ರಕಾಶ್ ಮಧುಕರ್‌ನನ್ನ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ. ಈತ ನಾಪತ್ತೆಯಾಗಿದ್ದು, ಮಧುಕರ್‌ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ. ಅಲ್ಲದೇ ಕೋರ್ಟ್‌ ಜಾಮೀನು ರಹಿತ ಬಂಧನ ವಾರಂಟ್‌ ಜಾರಿಗೊಳಿಸಿದೆ ಎಂದೂ ತಿಳಿಸಿದ್ದಾರೆ. ಇದನ್ನೂ ಓದಿ: ತವರಿಗೆ ಮರಳಿದ ʼವಿಶ್ವʼ ಚಾಂಪಿಯನ್ಸ್‌! – ಇಂದು ಸಂಜೆ ಮುಂಬೈನಲ್ಲಿ ರೋಡ್‌ ಶೋ

    ಕಾಲ್ತುಳಿತ ಸಂಭವಿಸಿದ್ದು ಹೇಗೆ?
    ಸತ್ಸಂಗ (Satsang) ಕಾರ್ಯಕ್ರಮ ಮುಗಿದ ಬಳಿಕ ಸ್ವಯಂ ಘೋಷಿತ ಗುರು ಭೋಲೆ ಬಾಬಾ ನಾರಾಯಣ್ ಸಾಕರ್ ಹರಿ ಕಾರು ಹತ್ತಿದ್ದಾರೆ. ಕಾರು ಮುಂದಕ್ಕೆ ಹೋಗುತ್ತಿದ್ದಂತೆ ಚಕ್ರದ ಧೂಳನ್ನು ಸಂಗ್ರಹಿಸಲು ಅನುಯಾಯಿಗಳು ಮುಗಿಬಿದ್ದಿದ್ದಾರೆ. ಭಾರೀ ಸಂಖ್ಯೆಯಲ್ಲಿದ್ದ ಅನುಯಾಯಿಗಳು ಧೂಳು ಸಂಗ್ರಹಿಸಲು ಓಡಿದ ಪರಿಣಾಮ ಪುರುಷರು, ಮಹಿಳೆಯರು ಮತ್ತು ಮಕ್ಕಳು ಒಬ್ಬರ ಮೇಲೊಬ್ಬರು ಬಿದ್ದಿದ್ದಾರೆ. ಬಿದ್ದವರ ಮೇಲೆಯೇ ಜನರು ಓಡಿದ್ದರಿಂದ ಸಾವು, ನೋವಿನ ಸಂಖ್ಯೆ ಹೆಚ್ಚಾಗಿದೆ.

    ಸಿಎಂ ಯೋಗಿ ಆದಿತ್ಯನಾಥ್‌ ಅವರ ಸೂಚನೆ ನಂತರ ಪ್ರಕರಣಕ್ಕೆ ಸಂಬಂಧಿಸಿದ 6 ಮಂದಿಯನ್ನ ಬಂಧಿಸಲಾಗಿದೆ. ಅಗತ್ಯವಿದ್ದರೆ, ಸ್ವಯಂ ಘೋಷಿತ ದೇವಮಾನವ ಭೋಲೆ ಬಾಬಾ ಅವರನ್ನೂ ಸಹ ವಿಚಾರಣೆಗೆ ಒಳಪಡಿಸಬಹುದು. ಸದ್ಯಕ್ಕೆ ಅವರ ಹೆಸರು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿಲ್ಲ, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: MUDA Site Allotment Scam | ನನಗೆ 62 ಕೋಟಿ ಕೊಡಬೇಕು: ಸಿಎಂ

  • ಹತ್ರಾಸ್‌ ದುರಂತ- ಪರಿಹಾರದ ಮೊತ್ತ ಹೆಚ್ಚಿಸಿದ ಸಿಎಂ ಯೋಗಿ ಆದಿತ್ಯನಾಥ್‌

    ಹತ್ರಾಸ್‌ ದುರಂತ- ಪರಿಹಾರದ ಮೊತ್ತ ಹೆಚ್ಚಿಸಿದ ಸಿಎಂ ಯೋಗಿ ಆದಿತ್ಯನಾಥ್‌

    – ಮೃತರ ಕುಟುಂಬಗಳಿಗೆ ತಲಾ 4 ಲಕ್ಷ, ಗಾಯಾಳುಗಳಿಗೆ ತಲಾ 1 ಲಕ್ಷ
    – ಪ್ರಕರಣ ಎಸ್‌ಐಟಿ ತನಿಖೆಗೆ

    ಲಕ್ನೋ: ಹತ್ರಾಸ್‌ನಲ್ಲಿ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ಇದೀಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಅವರು ಪರಿಹಾರದ ಮೊತ್ತದಲ್ಲಿ ಹೆಚ್ಚಳ ಮಾಡಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 4 ಲಕ್ಷ, ಗಾಯಾಳುಗಳಿಗೆ ತಲಾ 1 ಲಕ್ಷ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ಘಟನೆಯ ತನಿಖೆಯನ್ನು ವಿಶೇಷ ತನಿಖಾ ತಂಡ (SIT) ಗೆ ನೀಡುವುದಾಗಿ ತಿಳಿಸಿದ್ದಾರೆ.

    ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯದ ಮಟ್ಟಿಗೆ ಭಕ್ತರ ರಕ್ಷಣೆ ಮತ್ತು ಸುರಕ್ಷತೆಗೆ ಒತ್ತು ನೀಡುವುದು ನಮ್ಮ ಆದ್ಯತೆಯಾಗಿದೆ. ಸತ್ಸಂಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರ ಪೈಕಿ 121 ಭಕ್ತರು ಪ್ರಾಣ ಕಳೆದುಕೊಂಡಿದ್ದಾರೆ. ಯುಪಿ, ಹರಿಯಾಣ, ಮಧ್ಯಪ್ರದೇಶ ಮತ್ತು ರಾಜಸ್ಥಾನದಿಂದ ಭಕ್ತರು ಈ ಕಾರ್ಯಕ್ರಮಕ್ಕೆ ಬಂದಿದ್ದರು. ಸದ್ಯ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಹುತೇಕ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದರು.

    ನಾನು ಹಲವಾರು ಪ್ರತ್ಯಕ್ಷದರ್ಶಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಕಾರ್ಯಕ್ರಮ ಮುಗಿದ ನಂತರ ಸತ್ಸಂಗದ ಪ್ರಚಾರಕರು ಬರುತ್ತಿದ್ದಾಗ ಘಟನೆ ನಡೆದಿದೆ ಎಂದು ತಿಳುದುಬಂದಿದೆ. ವೇದಿಕೆಯಿಂದ ಕೆಳಗೆ ಬಾಬಾ ಇಳಿಯುತ್ತಿದ್ದಂತೆ, ಹಲವಾರು ಮಹಿಳೆಯರು ಅವರ ಆಶೀರ್ವಾದ ಪಡೆಯಲು ಮುಂದಾಗಿದ್ದಾರೆ. ಅವರನ್ನು ತಡೆಯುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಸಿಎಂ ವಿವರಿಸಿದರು. ಇದನ್ನೂ ಓದಿ: 2.5 ಲಕ್ಷ ಮಂದಿ ಭಾಗಿ, ದೇವಮಾನವನ ಕಾರಿನ ಚಕ್ರದ ಧೂಳನ್ನು ಸಂಗ್ರಹಿಸಲು ಮುಗಿಬಿದ್ದ ಅನುಯಾಯಿಗಳು!

    ಸದ್ಯ ಆಗ್ರಾ ಎಡಿಜಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಿದ್ದೇವೆ. ಈ ತಂಡ ಪ್ರಾಥಮಿಕ ವರದಿ ಸಲ್ಲಿಸಿದೆ. ಈ ಬಗ್ಗೆ ಇನ್ನಷ್ಟು ತನಿಖೆ ನಡೆಸುವಂತೆ ನಿರ್ದೇಶನ ನೀಡಿದ್ದೇನೆ. ಅಲ್ಲದೆ ರಾಜ್ಯ ಸರ್ಕಾರವು ನ್ಯಾಯಾಂಗ ತನಿಖೆ ನಡೆಸಲು ನಿರ್ಧರಿಸಿದೆ. ಇದರ ನೇತೃತ್ವವನ್ನು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ವಹಿಸಲಿದ್ದಾರೆ. ಆಡಳಿತ ಮತ್ತು ಪೊಲೀಸ್‌ನ ನಿವೃತ್ತ ಹಿರಿಯ ಅಧಿಕಾರಿಗಳು ಸಹ ಭಾಗವಾಗಲಿದ್ದಾರೆ ಎಂದು ಹೇಳಿದರು.

    ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಈ ಘಟನೆಯಲ್ಲಿ ಸಂತ್ರಸ್ತರಾದ ಶಾಲಾ ವಿದ್ಯಾರ್ಥಿಗಳಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಬಾಲ ಸೇವಾ ಯೋಜನೆಯಡಿ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಲಾಗುವುದು. ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಹಾಗೂ ಸಣ್ಣಪುಟ್ಟ ಗಾಯಗಳಾದವರಿಗೆ 1 ಲಕ್ಷ ರೂಪಾಯಿ ನೀಡಲಾಗುವುದು ಎಂದು ಯೋಗಿ ಆದಿತ್ಯನಾಥ್‌ ತಿಳಿಸಿದರು.