Tag: Hat-Trick wicket

  • ವಿಶ್ವಕಪ್‍ನಲ್ಲಿ ಶಮಿ ಹ್ಯಾಟ್ರಿಕ್ ವಿಕೆಟ್ ಹಿಂದೆ ಧೋನಿ ಮಾಸ್ಟರ್ ಮೈಂಡ್

    ವಿಶ್ವಕಪ್‍ನಲ್ಲಿ ಶಮಿ ಹ್ಯಾಟ್ರಿಕ್ ವಿಕೆಟ್ ಹಿಂದೆ ಧೋನಿ ಮಾಸ್ಟರ್ ಮೈಂಡ್

    ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್ ಇಡೀ ಜಗತ್ತನ್ನು ಆವರಿಸಿರುವ ಪರಿಣಾಮ ಎಲ್ಲಾ ಕ್ರೀಡಾಕೂಟ, ಟೂರ್ನಿಗಳು ಜುಲೈವರೆಗೆ ಮುಂದೂಡಲ್ಪಟ್ಟಿವೆ ಹಾಗೂ ರದ್ದುಗೊಳಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತೀಯ ಕ್ರಿಕೆಟಿಗರು ಸೇರಿದಂತೆ ವಿಶ್ವದ ಇತರ ಆಟಗಾರರು ಸಹ ಲಾಕ್‍ಡೌನ್ ಸಂದರ್ಭದಲ್ಲಿ ಮನೆಯಲ್ಲಿ ಕುಳಿತು ಆನ್‍ಲೈನ್‍ನಲ್ಲಿ ಸ್ನೇಹಿತರೊಂದಿಗೆ ಚಾಟ್ ನಡೆಸಿದ್ದಾರೆ. ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಇರ್ಫಾನ್ ಪಠಾಣ್ ಅವರೊಂದಿಗೆ ವಿಡಿಯೋ ಕಾನ್ಫರನ್ಸ್ ಕಾಲ್‍ನಲ್ಲಿ ಮಾತನಾಡಿದ್ದಾರೆ.

    2019ರಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಭಾಗವಾಗಿ ಅಫ್ಘಾನಿಸ್ತಾನ ವಿರುದ್ಧದಲ್ಲಿ ಮೊಹಮ್ಮದ್ ಶಮಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಈ ಸಾಧನೆಯ ಹಿಂದೆ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಅವರ ಮಾಸ್ಟರ್ ಮೈಂಡ್ ಇತ್ತು ಎನ್ನುವುದನ್ನು ಶಮಿ ರಿವೀಲ್ ಮಾಡಿದ್ದಾರೆ.  ಇದನ್ನೂ ಓದಿ: ಎಂಎಸ್‍ಡಿ ನಿವೃತ್ತಿ ಘೋಷಿಸಿದ್ರೆ ಸಿಎಸ್‍ಕೆ ಮುಂದಿನ ನಡೆ ಏನು?

    ಅಫ್ಘಾನಿಸ್ತಾನದ ಪಂದ್ಯದಲ್ಲಿ ಎರಡು ವಿಕೆಟ್ ಪಡೆದ ನಂತರ ಅಂದಿನ ನಾಯಕ ಮಹೇಂದ್ರ ಸಿಂಗ್ ಧೋನಿ ಶಮಿ ಅವರಿಗೆ ಸಲಹೆ ನೀಡಿದ್ದರು. ಅದನ್ನು ಅನುಸರಿಸಿದ ಶಮಿ ಮೂರನೇ ವಿಕೆಟ್ ತೆಗೆದುಕೊಂಡಿದ್ದರು. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಪಡೆದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ವಿಶ್ವಕಪ್‍ನಲ್ಲಿ ಮೊಹಮ್ಮದ್ ಶಮಿ ಅವರಿಗೂ ಮುನ್ನ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆಯನ್ನು ಭಾರತದ ಚೇತನ್ ಶರ್ಮಾ ಮಾಡಿದ್ದರು. ನಾಗ್ಪುರದಲ್ಲಿ ನಡೆದ 1987ರ ವಿಶ್ವಕಪ್‍ನಲ್ಲಿ ಚೇತನ್ ಶರ್ಮಾ ಅವರು ನ್ಯೂಜಿಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು.

    ಇರ್ಫಾನ್ ಪಠಾಣ್ ಟೆಸ್ಟ್ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಎರಡನೇ ಭಾರತೀಯ ಎಂಬ ಸಾಧನೆ ಮಾಡಿದ್ದಾರೆ. 2006ರಲ್ಲಿ ಪಾಕಿಸ್ತಾನದ ವಿರುದ್ಧ ಕರಾಚಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಪಠಾಣ್ ಅವರು, ಸಲ್ಮಾನ್ ಬಟ್, ಯೂನುಸ್ ಖಾನ್ ಮತ್ತು ಮೊಹಮ್ಮದ್ ಯೂಸುಫ್ ಅವರನ್ನು ಔಟ್ ಮಾಡುವ ಮೂಲಕ ಈ ಸಾಧನೆ ಮಾಡಿದ್ದರು. ಇವರಲ್ಲದೆ ಹರ್ಭಜನ್ ಸಿಂಗ್ ಮತ್ತು ಜಸ್‍ಪ್ರೀತ್ ಬುಮ್ರಾ ಕೂಡ ಟೆಸ್ಟ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧಿಸಿದ್ದಾರೆ.

    “ಅದು ನನ್ನ ಓವರಿನ 5ನೇ ಎಸೆತವಾಗಿತ್ತು. ಅದಕ್ಕೂ ಮುನ್ನವೇ ಸತತ 2 ವಿಕೆಟ್‍ಗಳನ್ನು ಪಡೆದಿದ್ದೆ. ಆಗ ಮಹೀ (ಧೋನಿ) ನನ್ನ ಬಳಿಗೆ ಬಂದರು. ನೀವು ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದೀರಿ. ಹೀಗೆ ಮುಂದುವರಿಸಿ, ಆದರೆ ಚೆಂಡನ್ನು ವೇಗವಾಗಿ ಎಸೆಯಿರಿ ಎಂದು ಸಲಹೆ ನೀಡಿದರು. ಆಗ ನಾನು 140 ವೇಗದಲ್ಲಿ ಬಾಲಿಂಗ್ ಮಾಡುತ್ತೇನೆ ಎಂದು ಮಹಿ ಭಾಯ್‍ಗೆ ತಿಳಿಸಿದೆ. ಹಾಗೇ ನಾನು ಮಾಡಿದೆ. ಈ ಮೂಲಕ ವಿಕೆಟ್ ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದೆ. ಆ ಪಂದ್ಯದಲ್ಲಿ ಭಾರತವು ಅಫ್ಘಾನಿಸ್ತಾನದ ವಿರುದ್ಧ 11 ರನ್‍ಗಳಿಂದ ಗೆದ್ದಿತ್ತು” ಎಂದು ಶಮಿ, ಇರ್ಫಾನ್ ಪಠಾಣ್ ಅವರಿಗೆ ತಿಳಿಸಿದ್ದಾರೆ.

    ಶಮಿಗೆ ನಾಲ್ಕು ವಿಕೆಟ್:
    ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಅವರು 9.5 ಓವರ್ ಬೌಲಿಂಗ್ ಮಾಡಿ 40 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಕೊನೆಯ ಓವರ್‍ನಲ್ಲಿ ಅಫ್ಘಾನಿಸ್ತಾನಕ್ಕೆ 16 ರನ್‍ಗಳ ಅಗತ್ಯವಿತ್ತು. ಆಗ ಮೊಹಮ್ಮದ್ ನಬಿ ಅವರು ಶಮಿ ಎಸೆದ ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದರು. ಆದರೆ ಎರಡನೇ ಎಸೆತದಲ್ಲಿ ಯಾವುದೇ ರನ್ ಗಳಿಸಲಿಲ್ಲ. ಮುಂದಿನ ಮೂರು ಎಸೆತಗಳಲ್ಲಿ ಶಮಿ ಅವರು ಅಫ್ಘಾನಿಸ್ತಾನದ ನಬಿ, ಅಫ್ತಾಬ್ ಆಲಂ ಮತ್ತು ಮುಜೀಬ್ ಉರ್ ರೆಹಮಾನ್ ಅವರ ವಿಕೆಟ್ ಪಡೆದು ತಂಡಕ್ಕೆ ಜಯ ತಂದುಕೊಂಡಿದ್ದರು.

  • ಆಸೀಸ್ ಸ್ಪಿನ್ನರ್‌ಗೆ ಹ್ಯಾಟ್ರಿಕ್ ವಿಕೆಟ್ – ಜಡೇಜಾಗೆ ಕ್ರೆಡಿಟ್

    ಆಸೀಸ್ ಸ್ಪಿನ್ನರ್‌ಗೆ ಹ್ಯಾಟ್ರಿಕ್ ವಿಕೆಟ್ – ಜಡೇಜಾಗೆ ಕ್ರೆಡಿಟ್

    ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾದ ಎಡಗೈ ಸ್ಪಿನ್ನರ್ ಆಸ್ಟನ್ ಅಗರ್ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದಾರೆ. ತಮ್ಮ ಈ ಸಾಧನೆಯನ್ನು ಆಸ್ಟನ್ ಅಗರ್ ಟೀಂ ಇಂಡಿಯಾ ಆಲ್‍ರೌಂಡರ್ ರವೀಂದ್ರ ಜಡೇಜಾ ಅವರಿಗೆ ಸಲ್ಲಿಸಿದ್ದಾರೆ.

    ಜೋಹಾನ್ಸ್‌ಬರ್ಗ್ ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಇನ್ನಿಂಗ್ಸ್ ನ 8ನೇ ಓವರಿನಲ್ಲಿ ಆಸ್ಟನ್ ಅಗರ್ ಅವರು ಮೂರು ಎಸೆತಗಳಲ್ಲಿ ಫ್ಲಾಫ್ ಡು ಪ್ಲೆಸಿಸ್, ಆಂಡಿಲೆ ಫೆಹ್ಲುಕ್ವೇವೊ ಮತ್ತು ಡೇಲ್ ಸ್ಟೇನ್‍ರ ವಿಕೆಟ್‍ಗಳನ್ನು ಪಡೆದರು. ಟಿ20 ಕ್ರಿಕೆಟ್‍ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ  ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಆಸ್ಟನ್ ಅಗರ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ 2007ರಲ್ಲಿ ಈ ಸಾಧನೆ ಮಾಡಿದ್ದರು.

    ಪಂದ್ಯದ ನಂತರ ಮಾತನಾಡಿದ ಆಸ್ಟನ್ ಅಗರ್, ಟೀಂ ಇಂಡಿಯಾ ಆಲ್‍ರೌಂಡರ್ ರವೀಂದ್ರ ಜಡೇಜಾ ಅವರಿಗೆ ನನ್ನ ಈ ಸಾಧನೆ ಸಲ್ಲುತ್ತದೆ. ಜಡೇಜಾ ಅವರು ನನ್ನ ನೆಚ್ಚಿನ ಕ್ರಿಕೆಟಿಗ. ಭಾರತದಲ್ಲಿ ಅವರೊಂದಿಗೆ ನಡೆಸಿದ ಸಂಭಾಷಣೆಯಲ್ಲಿ ಅನೇಕ ವಿಷಯಗಳನ್ನು ಕಲಿತಿದ್ದೇನೆ ಎಂದು ಹೇಳಿದ್ದಾರೆ.

    ಆಸ್ಟ್ರೇಲಿಯಾ ತಂಡವು ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಮೂರು ಟಿ20 ಪಂದ್ಯಗಳ ಸರಣಿ ನಡೆಯುತ್ತಿದ್ದು, ಅಗರ್ ಮೊದಲ ಪಂದ್ಯದಲ್ಲಿ 4 ಓವರ್ ಗಳಲ್ಲಿ 24 ರನ್‍ಗಳಿಗೆ 5 ವಿಕೆಟ್ ಪಡೆದರು. ಆತಿಥೇಯರನ್ನು ಆಸ್ಟ್ರೇಲಿಯಾ 107 ರನ್‍ಗಳಿಂದ ಮಣಿಸಿತು. 196ರ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾದ ತಂಡವನ್ನು ಕೇವಲ 89 ರನ್‍ಗಳಿಗೆ ಕಟ್ಟಿಹಾಕಿತ್ತು. ಅಗರ್ ಪಂದ್ಯಶ್ರೇಷ್ಠರಾಗಿದ್ದಾರೆ.

    ರವೀಂದ್ರ ಜಡೇಜಾ ರಾಕ್‍ಸ್ಟಾರ್:
    ಪಂದ್ಯದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಎಗರ್, ‘ನಾನು ಜಡೇಜಾ ಅವರನ್ನು ರಾಕ್‍ಸ್ಟಾರ್ ಎಂದು ಪರಿಗಣಿಸುತ್ತೇನೆ. ಅವರು ನನ್ನ ನೆಚ್ಚಿನ ಆಟಗಾರ. ನಾನು ಅವರಂತೆ ಆಲ್‍ರೌಂಡರ್ ಆಗಲು ಬಯಸುತ್ತೇನೆ’ ಎಂದು ಹೇಳಿದ್ದಾರೆ.

    ಜಡೇಜಾರಿಂದ ಮಾತ್ರ ಸ್ಫೂರ್ತಿ:
    ಭಾರತ ವಿರುದ್ಧದ ಸರಣಿಯಲ್ಲಿ ನಾನು ಜಡೇಜಾ ಅವರೊಂದಿಗೆ ಸುದೀರ್ಘ ಸಂಭಾಷಣೆ ನಡೆಸಿದೆ. ಅವರು ನನಗೆ ಬಹಳ ಮುಖ್ಯವಾದ ವಿಷಯಗಳನ್ನು ಹೇಳಿದ್ದರು. ಅವರು ಕ್ರಿಕೆಟ್ ಜಗತ್ತಿನಲ್ಲಿ ನನ್ನ ನೆಚ್ಚಿನ ಆಟಗಾರ. ನಾನು ಅವರಂತೆ ಆಡಲು ಬಯಸುತ್ತೇನೆ. ಜಡೇಜಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾರೆ ಎಂದು ಮೆಚ್ಚುಗೆ ಮಾತನಾಡಿದ್ದಾರೆ.