Tag: hassan

  • ಜಮೀನಿಗೆ ಬಿದ್ದ ಬೆಂಕಿ ನಂದಿಸಲು ಹೋಗಿ ರೈತ ಸಜೀವ ದಹನ

    ಜಮೀನಿಗೆ ಬಿದ್ದ ಬೆಂಕಿ ನಂದಿಸಲು ಹೋಗಿ ರೈತ ಸಜೀವ ದಹನ

    ಹಾಸನ: ಜಮೀನಿಗೆ ಬಿದ್ದಿದ್ದ ಬೆಂಕಿ ನಂದಿಸಲು ಹೋಗಿ ರೈತರೊಬ್ಬರು ಸಜೀವ ದಹನವಾಗಿರೋ ಘಟನೆ ಜಿಲ್ಲೆಯ ಆಲೂರು ತಾಲೂಕು ಗಂಜಿಗೆರೆ ಗ್ರಾಮದಲ್ಲಿ ನಡೆದಿದೆ.

    55 ವರ್ಷದ ಪುಟ್ಟಸ್ವಾಮಿಗೌಡ ಸಜೀವ ದಹನವಾದ ರೈತ. ಇವರ ಜಮೀನಿಗೆ ಕಳೆದ ರಾತ್ರಿ ಬೆಂಕಿ ತಗುಲಿತ್ತು. ಬೆಂಕಿ ನಂದಿಸಲು ಹೋಗಿ ಪುಟ್ಟಸ್ವಾಮಿಗೌಡ ಅದರೊಳಗೆ ಸಿಲುಕಿ ಹೊರಬಾರಲಾರದೆ ಬೆಂದು ಹೋಗಿದ್ದಾರೆ. ಈ ಬಗ್ಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಆಲೂರು ಸರ್ಕಾರಿ ಆಸ್ಪತ್ರೆಗೆ ಶಾಸಕ ಹೆಚ್‍ಕೆ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಅತ್ತ ಬಳ್ಳಾರಿಯಲ್ಲಿನ ತೋರಣಗಲ್‍ನಲ್ಲಿ ಸಾಮೀಲ್‍ಗೆ ಬೆಂಕಿ ಬಿದ್ದು ಕೋಟ್ಯಾಂತರ ರುಪಾಯಿ ಬೆಲೆ ಬಾಳುವ ಮರದ ದಿಮ್ಮಿಗಳು ಗುರುವಾರ ರಾತ್ರಿಯಿಡೀ ಹೊತ್ತಿ ಉರಿದಿವೆ. ಜಮಾಲುದ್ದಿನ್ ಅನ್ನೋರಿಗೆ ಸೇರಿದ್ದ ಸಾಮಿಲ್‍ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ಅಂದಾಜು ಒಂದೂವರೆ ಕೋಟಿ ರೂ. ಮೌಲ್ಯದ ಮರದ ದಿಮ್ಮಿಗಳು ಸುಟ್ಟು ಕರಕಲಾಗಿವೆ. ಇನ್ನು ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ 4 ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು.

  • ಕುಡಿಯೋಕೆ ನೀರಿಲ್ಲದೆ ಸಾವನ್ನಪ್ಪುತ್ತಿವೆ ಪ್ರಾಣಿಗಳು: ಇಲ್ಲಿದೆ ಕರ್ನಾಟಕದ ಬರದ ಚಿತ್ರಣ

    ಕುಡಿಯೋಕೆ ನೀರಿಲ್ಲದೆ ಸಾವನ್ನಪ್ಪುತ್ತಿವೆ ಪ್ರಾಣಿಗಳು: ಇಲ್ಲಿದೆ ಕರ್ನಾಟಕದ ಬರದ ಚಿತ್ರಣ

    ಅರುಣ್ ಸಿ  ಬಡಿಗೇರ್
    ಬೆಂಗಳೂರು: ಸಾಯುವ ಸ್ಥಿತಿಯಲ್ಲಿ ಬಾಯ್ತೆರೆದು ನಿಂತಿದ್ದಾಳೆ ಧರಿತ್ರಿ. ಹನಿ ನೀರಿಗಾಗಿ ಪರದಾಡುತ್ತಿದ್ದಾರೆ ಭೂ ತಾಯಿ ಮಕ್ಕಳು. ಇನ್ನೊಂದು ತಿಂಗಳು ಕಳೆದರೆ ಬಿಸಿಲಿನ ಬೇಗುದಿಗೆ ಸುಟ್ಟು ಕರಕಲಾಗಲಿವೆ ದೇಹಗಳು. ಒಣಗಿ ಹೋಗಲಿವೆ ಮರಗಿಡಗಳು. ಅನಾಥ ಶವವಾಗಿ ಬೀಳಲಿವೆ ಪ್ರಾಣಿ ಪಕ್ಷಿಗಳು. ಬತ್ತಿ ಹೋಗಿವೆ ಕೆರೆ ಕಟ್ಟೆಗಳು. ಬರಿದಾಗಿದೆ ನದಿಗಳ ಒಡಲು. ಇಂಗಿ ಹೋಗಿದೆ ಭೂ ಜಲದಗಣ್ಣು. ಕಣ್ಣೀರಿಡಲು ಬತ್ತಿ ಹೋಗಿದೆ ದೇಹದ ನೀರು. ಇದೆಲ್ಲವು ರಾಜ್ಯದ ಭೀಕರ ಬರಗಾಲದ ರೌದ್ರ ಚಿತ್ರಣ. ಬರ ಹೇಗಿದೆ ಎನ್ನುವುದನ್ನು ತಿಳಿಯಲು ರಾಜ್ಯದಲ್ಲಿ 2500 ಕಿಮೀ ಸಂಚರಿಸಿ ಪಬ್ಲಿಕ್ ಟಿವಿಯ ತಂಡ ಪ್ರತ್ಯಕ್ಷ ವರದಿ ಮಾಡಿದೆ. ಈ ಸಂದರ್ಭದಲ್ಲಿ ನಮ್ಮ ತಂಡಕ್ಕೆ ಕಂಡಿರೋ ಬರಗಾಲದ ಸ್ಥಿತಿಯನ್ನ ನಿಮ್ಮ ಮುಂದೆ ಇಡುವ ಪ್ರಯತ್ನವಿದು.

    ನೀರಿನ ವಿಷ್ಯದಲ್ಲಿ ಬೆಂಗಳೂರಿಗರು ಪುಣ್ಯವಂತರು. 4-5 ಕಿಮೀ ಬಿಂದಿಗೆ ಹಿಡಿದುಕೊಂಡು ನೀರು ಹೊತ್ತು ತರೋ ಪರಿಸ್ಥಿತಿ ಇಲ್ಲಿಲ್ಲ. ಶಾಲೆಬಿಟ್ಟು ನೀರು ತರಬೇಕಾದ ಅನಿವಾರ್ಯತೆ ಇಲ್ಲಿಲ್ಲ. ನೀರು ತರದೆ ಇದ್ದರೆ ಅಪ್ಪ ಅಮ್ಮನ ಕಡೆ ಹೊಡಿಸಿಕೊಳ್ಳುವಷ್ಟು ಹೀನಾಯ ಸ್ಥಿತಿ ಇಲ್ಲಿನ ಮಕ್ಕಳಿಗೆ ಬಂದಿಲ್ಲ. ಕೆಲಸ ಬಿಟ್ಟು ನೀರಿಗಾಗಿ ಬೋರ್‍ವೆಲ್ ಮುಂದೆ ಸರತಿ ಸಾಲಿನಲ್ಲಿ ನಿಲ್ಲೋ ಸ್ಥಿತಿ ಇಲ್ಲಿಲ್ಲ. ನಿದ್ದೆಗೆಟ್ಟು ಕರೆಂಟ್‍ಗಾಗಿ ಕಾದು ರಾತ್ರಿಯೆಲ್ಲ ನೀರಿಗಾಗಿ ಅಲೆದಾಡೋ ಪ್ರಸಂಗ ಬಂದಿಲ್ಲ. ಕುಡಿಯೋ ನೀರಿಗಾಗಿ ಒಂದು ಕಡೆ, ಬಳಸೋ ನೀರಿಗಾಗಿ ಇನ್ನೊಂದು ಕಡೆ ಹೋಗಿ ಬಿಂದಿಗೆ ತುಂಬಿಕೊಂಡು ಬರೋ ದುರ್ದೈವ ಇಲ್ಲಿಲ್ಲ. ನೀರಿಲ್ಲದ ಊರು ಅಂತ ಹೆಣ್ಣು ಕೊಡದೇ ಇರುವಷ್ಟು ಬರಗೆಟ್ಟು ಹೋಗಿಲ್ಲ ಈ ಬೆಂಗಳೂರು. ಬತ್ತಿಹೋದ ನದಿಯಲ್ಲಿ 5 ಅಡಿ ಗುಂಡಿ ತೋಡಿ ಬಂದ ನೀರನ್ನ ಗಂಟೆ ಗಟ್ಟಲೆ ಕುಳಿತು ಒಂದು ಬಿಂದಿಗೆ ತುಂಬಿಸಿಕೊಂಡು 4 ಕಿಮೀ ನಡೆದುಕೊಂಡು ಹೋಗುವ ಹೀನಾಯ ಸ್ಥಿತಿ ಬೆಂಗಳೂರಿನಲ್ಲಿ ಕಾಣಿಸುತ್ತಿಲ್ಲ. ಎಲ್ಲೋ ಹರಿಯೋ ನದಿಯಿಂದ ನೀರನ್ನ ಪಡೆದು ದಾಹ ತೀರಿಸಿಕೊಳ್ಳೋ ಬೆಂಗಳೂರಿನವರಷ್ಟು ಪುಣ್ಯವಂತರು ಹಳ್ಳಿಯ ಜನರಲ್ಲ.

    ಜಲಾಶಯಗಳಲ್ಲಿ ವಾಸನೆ ಬರುತ್ತಿದೆ ನೀರು
    ಕೆಆರ್‍ಎಸ್, ಹಾರಂಗಿ, ಹೇಮಾವತಿ, ಕಬಿನಿ ಜಲಾಶಯ ಸೇರಿದಂತೆ ಹಲವು ಜಲಾಶಯಗಳಲ್ಲಿ ನೀರು ಕಪ್ಪಾಗುತ್ತಿದೆ. ಜಲಾಶಯಗಳು ಬರಿದಾಗುವ ಸ್ಥಿತಿ ಬಂದೊದಗಿದೆ. ಜಲಾಶಯದ ಹಿನ್ನಿರಿನ ಹತ್ತಿರ ಹೋಗ್ತಿದ್ದಂತೆ ಮೀನು ಸತ್ತಾಗ ಬರೋ ವಾಸಯಂತೆ ನೀರು ವಾಸನೆ ಬರುತ್ತಿದೆ. ಈ ನೀರನ್ನ ಶುದ್ಧಿಕರಿಸಿ ಬೇಸಿಗೆಯಲ್ಲಿ ಕುಡಿಯೋಕೆ ನೀರು ಸರಬರಾಜು ಮಾಡಲಾಗುತ್ತೆ. ಇನ್ನು ಈ ಜಲಾಶಯದ ನೀರು ನಾಲೆಗಳ ಮೂಲಕ ಮಂಡ್ಯ ಜಿಲ್ಲೆಗೆ ತಲುಪಬೇಕು. ಆದ್ರೆ ನಾಲೆಯಲ್ಲಿ ನೀರನ್ನ ಬಿಡಲಾಗುತ್ತಿಲ್ಲ. ಹಾಗಾಗಿ ನಾಲೆಯನ್ನ ನಂಬಿರೋ ಮಂಡ್ಯ ಜನಕ್ಕೆ ಎಪ್ರಿಲ್ ನಂತರ ಹಾಹಾಕಾರ ಉಂಟಾಗೋದ್ರಲ್ಲಿ ಯಾವುದೇ ಡೌಟೇ ಇಲ್ಲ.

    ನಾಗರಹೊಳೆ ಹಾಗೂ ಬಂಡಿಪುರ ಕಾಡು ಪ್ರಾಣಿಗಳು ನಂಬಿರೋ ಕಬಿನಿ ಜಲಾಶಯದ ನೀರು ಬರಿದಾಗುತ್ತಾ ಸಾಗಿದೆ. ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಈ ಕಾಡು ಪ್ರಾಣಿಗಳ ಸ್ಥಿತಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇನ್ನೊಂದು ದುರ್ದೈವ ಅಂದ್ರೆ ಜಲಾಶಯದ ಪಕ್ಕದಲ್ಲೆ ಇರೋ ಹತ್ತಾರು ಹಳ್ಳಿಗಳಿಗೆ ಕುಡಿಯೋಕೆ ನೀರು ಸಿಗೋದೆ ಇಲ್ಲ. ಜಲಾಶಯದಿಂದ ಸುತ್ತಲಿರೋ ಹಳ್ಳಿಗಳ ಕೆರೆಗಳಿಗೆ ನೀರನ್ನ ತುಂಬಿಸಬೇಕು ಅನ್ನೋ ಕನಿಷ್ಟ ಜ್ಞಾನವೂ ನಮ್ಮ ಜನಪ್ರತಿನಿಧಿಗಳಿಗಿಲ್ಲ.

    ಜಲಾಶಯವೇ ಬತ್ತಿ ಹೋದಾಗ
    50 ವರ್ಷದ ಇತಿಹಾಸ ಹೊಂದಿರೋ ಚಾಮರಾಜನಗರ ಜಿಲ್ಲೆ ಚಿಕ್ಕಹೊಳೆ ಜಲಾಶಯ ಸಂಪೂರ್ಣ ಬರಿದಾಗಿದೆ. ಧರಿತ್ರಿ ಹನಿ ನೀರಿಗೆ ಬಾಯ್ತೆರೆದು ಬಿಸಿಲಿನ ದವಡೆಯಲ್ಲಿ ಒದ್ದಾಡುತ್ತಿದ್ದಾಳೆ. ಸುತ್ತಮುತ್ತಲಿನ 21 ಹಳ್ಳಿಗಳ ಜನರ ದಾಹ ನೀಗಿಸುತ್ತಿದ್ದ ಈ ಜಲಾಶಯದ ದಾಹ ತೀರಿಸುವವರು ಯಾರು. ಈ ಜಲಾಶಯದ ಸುತ್ತಲಿರೋ ಕಾಡು ಪ್ರಾಣಿಗಳಂತೂ ನೀರಿಲ್ಲದೆ ಸಾವಿನ ದವಡೆಯಲ್ಲಿವೆ. ಒಂದು ಕಡೆ ಕಾಡ್ಗಿಚ್ಚು ಇನ್ನೊಂದು ಕಡೆ ನೀರಿನ ಬವಣೆ. ಇದರ ಮಧ್ಯೆ ಕಾಡು ಪ್ರಾಣಿಗಳು ದಿಕ್ಕು ಕಾಣದೆ ಸಾಯೋ ಸ್ಥಿತಿಗೆ ಬಂದು ತಲುಪಿವೆ. ಮನುಷ್ಯರೇನೋ ಟ್ಯಾಂಕರ್ ತರಿಸಿ ನೀರು ಕುಡಿತಾರೆ, ಆದ್ರೆ ಪ್ರಾಣಿಗಳ ಸ್ಥಿತಿ ಏನು..?

    ಮರಳು ದಂಧೆಗೆ ಬೀಳುತ್ತಾ ಕಡಿವಾಣ?
    ಕಾವೇರಿ ಉಗಮ ಸ್ಥಾನದಲ್ಲಿ ಹೆಚ್ಚು ಮಳೆ ಸುರಿದಾಗ ನಮ್ಮ ಆಸ್ತಿ ಪಾಸ್ತಿ ಹಾನಿಯಾಗುತ್ತೆ, ಬೆಳೆದ ಬೆಳೆ ನಾಶವಾಗುತ್ತೆ. ಆಗ ನಮ್ಮನ್ನ ನೋಡೋರೆ ದಿಕ್ಕಿರಲ್ಲ. ಆಗ ಮಂಡ್ಯದ ಜನ ಖುಷಿ ಪಡುತ್ತಾರೆ. ಕಾವೇರಿ ತುಂಬಿ ಹರಿಯುತ್ತಿದ್ದಾಳೆಂದು ಸಂಭ್ರಮಿಸ್ತಾರೆ. ಆದ್ರೆ ನಾವಿಲ್ಲ ಕಣ್ಣೀರು ಹಾಕ್ತೀವಿ ಅಂತಾ ಕೊಡಗಿನ ಭಾಗಮಂಡಲದ ಜನ ನೋವಿನಿಂದ ಹೇಳಿಕೊಳ್ತಾರೆ. ಇದಲ್ಲದೆ ಕಾವೇರಿ ಒಡಲಲ್ಲಿ ಮರಳುದಂಧೆ ಕೂಡ ಎಗ್ಗಿಲ್ಲದೆ ಸಾಗಿದೆ, ಇದೆಲ್ಲದಕ್ಕಿಂತ ಹೆಚ್ಚಾಗಿ ಕಾವೇರಿ ನದಿಯ ಒತ್ತುವರಿ ಮಾಡಿ ಕಟ್ಟಡಗಳನ್ನ ಕಟ್ಟಿಕೊಳ್ಳೋಕೆ ಜನ ಶುರು ಮಾಡಿದ್ದಾರೆ. ಚರಂಡಿ ನೀರನ್ನೆಲ್ಲ ಕಾವೇರಿ ನದಿಗೆ ಹರಿಯಬಿಡ್ತಿದ್ದಾರೆ. ಇದರ ಮಧ್ಯೆ ಕಾವೇರಿ ಕಲುಷಿತಗೊಂಡು ಬತ್ತಿ ಹೋಗುತ್ತಿದ್ದಾಳೆ. ಈಗಲೇ ಇದರ ಸಂರಕ್ಷಣೆ ಮಾಡದೇ ಇದ್ದರೆ ಗಂಗಾ ನದಿಯಂತೆ ಸಂಪೂರ್ಣ ಮಲೀನವಾಗೋದ್ರಲ್ಲಿ ಯಾವುದೇ ಸಂದೇಹವಿಲ್ಲ.

    ಎಲ್ಲೆಲ್ಲೂ ಜಾನುವಾರುಗಳ ಮೂಳೆಗಳೆ ಪತ್ತೆ
    ಇನ್ನು ನಮ್ಮ ತಂಡ ತೆರಳಿದ ಹಲವು ಜಲಾಶಯಗಳು, ಬತ್ತಿಹೋದ ನದಿ, ಹೊಳೆ, ಕಾಲುವೆ, ಕೆರೆ ಪಕ್ಕದಲ್ಲಿ ಪ್ರಾಣಿಗಳ ಮೂಳೆಗಳು ಕಂಡುಬಂದ್ವು. ಒಂದು ಕಡೆ ಮಳೆ ಇಲ್ಲದೆ ಹಸಿರೆಲ್ಲ ಮರೆಯಾಗಿದೆ. ಇನ್ನೊಂದು ಕಡೆ ಬಿಸಿಲಿನ ಝಳ. ಇದರ ಮಧ್ಯೆ ಕುಡಿಯೋಕೆ ನೀರಿಲ್ಲದೆ ಅನೇಕ ಪ್ರಾಣಿಗಳು ಸಾವನ್ನಪ್ಪುತ್ತಿವೆ. ಪ್ರಾಣಿಗಳ ಅವಶೇಷ ನೋಡ್ತಾ ಇದ್ರೆ ಕಣ್ಣಂಚಲ್ಲಿ ನೀರು ಬರದೆ ಇರದು. ಇನ್ನೂ ಕೆಲವು ಕಡೆಯಲ್ಲಂತೂ ನೀರಿಲ್ಲದೆ ಮೀನುಗಳ ಮಾರಣಹೋಮ ನಡೆಯುತ್ತಿದೆ. ಜಲಚರಗಳು ಜೀವನ್ಮರಣದ ಮಧ್ಯೆ ಹೋರಾಡುತ್ತಿವೆ. ಬುದ್ಧಿ ಜೀವಿ ಮನುಷ್ಯ ಮಾತ್ರ ದುಡ್ಡುಕೊಟ್ಟು ನೀರು ಖರೀದಿಸ್ತಾನೆ. ಆದ್ರೆ, ಮೂಖ ಪ್ರಾಣಿಗಳ ವೇದನೆಯನ್ನ ಕೇಳೋರಾದ್ರು ಯಾರು..?

    ಪ್ರಾಣಿಗಳಿಗಾಗಿ ಟ್ಯಾಂಕರ್ ನೀರು.
    ಕುಡಿಯೋಕೆ ನೀರು ಸಿಕ್ರೆ ಸಾಕು ಅನ್ನೋ ಈ ಕಾಲದಲ್ಲಿ ಒಂದು ವಿಶೇಷ ಗ್ರಾಮವೊಂದಿದೆ. ಈ ರಂಗಪುರ ಗ್ರಾಮ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿದೆ. ಈ ಗ್ರಾಮದ ಜನರಿಗೆ ಕುಡಿಯೋಕೆ ನೀರಿನ ಸಮಸ್ಯೆ. ಆದ್ರೆ, ಈ ಗ್ರಾಮದ ಜನ ಮಾತ್ರ ತಮಗೆ ಎಷ್ಟೆ ಕಷ್ಟವಾದ್ರು ಚಿಂತೆಯಿಲ್ಲ ಪ್ರಾಣಿಗಳು ನೀರಿಲ್ಲದೆ ಸಾವನ್ನಪ್ಪಬಾರದು ಅಂತಾ ಒಣಗಿ ಹೋಗಿರೋ ಕೆರೆಗೆ ವಾರಕ್ಕೊಮ್ಮೆ ಟ್ಯಾಂಕರ್‍ನಿಂದ ನೀರು ಸುರಿಯುತ್ತಿದ್ದಾರೆ. ಕೆರೆ ತುಂಬಿಸೋಕೆ ಸಾಧ್ಯವಾಗದೆ ಇದ್ದರು ಕುರಿ, ದನಕರುಗಳು, ಮಂಗಗಳು, ನಾಯಿಗಳು, ಪಕ್ಷಿಗಳು ತಮ್ಮ ದಾಹ ತೀರಿಸಿಕೊಳ್ಳುತ್ತಿವೆ.

    ಗೋ ಶಾಲೆಗಳು
    ನಮ್ಮ ತಂಡ ಹೋದ ಕೆಲವು ಕಡೆ ಗೋ ಶಾಲೆಗಳು ಸಿಕ್ವು. ಸರ್ಕಾರವೇನೋ ಗೋ ಶಾಲೆಗಳ ವ್ಯವಸ್ಥೆ ಮಾಡ್ತಿದೆ. ಆದ್ರೆ, ಕೆಲ ಗೋ ಶಾಲೆಗಳಲ್ಲಿ ಚಿರತೆ ಕಾಟವಿದೆ. ಇನ್ನೂ ಕೆಲವು ಕಡೆ ರಾತ್ರಿ ವಿದ್ಯುತ್ ಸಂಪರ್ಕವೇ ಇಲ್ಲ. ಗೋವುಗಳ ಜೊತೆ ಬಂದ ಮಾಲೀಕರು ಕತ್ತಲಲ್ಲೆ ರಾತ್ರಿ ಕಳೆಯೋ ಹಾಗಾಗಿದೆ. ಹಾವುಗಳ ಕಾಟ ಬೇರೆ ಇದೆ. ಗೋವುಗಳಿಗೆ ನೀರಿನ ವ್ಯವಸ್ಥೆ ಏನೋ ಮಾಡಿದ್ದಾರೆ. ಆದ್ರೆ ಗೋವುಗಳ ಜೊತೆ ಬಂದವರು ಉಪವಾಸ ಕೂರುವಂತಾಗಿದೆ. ಮನೆಗೆ ಹೋಗಿ ಬರಬೇಕಂದ್ರೆ ಹಳ್ಳಿಯಿಂದ 30-40 ಕಿಮೀ ದೂರದಲ್ಲಿದ್ದಾರೆ. ಹೋಗಿ ಬರೋದಕ್ಕೂ ವ್ಯವಸ್ಥೆ ಇಲ್ಲ. ಯಾಕಂದ್ರೆ ಬಹಳಷ್ಟು ಗೋ ಶಾಲೆಗಳಿರೋದು ಮುಖ್ಯ ರಸ್ತೆಯಿಂದ ಬಹುದೂರ ಒಳಗಡೆ. ಅಲ್ಲಿ ಬಸ್ ಸೌಲಭ್ಯವಂತೂ ಇಲ್ಲವೆ ಇಲ್ಲ. ಇದೇನೂ ದೊಡ್ಡ ಸಮಸ್ಯೆ ಅಲ್ಲ. ಆದ್ರೂ ಸಂಬಂಧ ಪಟ್ಟವರು ಸ್ವಲ್ಪ ವ್ಯವಸ್ಥೆ ಮಾಡಿದ್ರೆ ಒಳ್ಳೆಯದಾಗುತ್ತೆ.

  • ಯಗಚಿ ನೀರು ಹಾಸನಕ್ಕೆ ವಿರೋಧಿಸಿ ಚಿಕ್ಕಮಗಳೂರು ಬಂದ್

    ಯಗಚಿ ನೀರು ಹಾಸನಕ್ಕೆ ವಿರೋಧಿಸಿ ಚಿಕ್ಕಮಗಳೂರು ಬಂದ್

    ಚಿಕ್ಕಮಗಳೂರು: ಯಗಚಿ ಜಲಾಶಯದ ನೀರನ್ನು ಹಾಸನಕ್ಕೆ ಹರಿಯಬಿಡ್ತಿರೋದನ್ನ ವಿರೋಧಿಸಿ ಚಿಕ್ಕಮಗಳೂರಿನ ಬಿಜೆಪಿ ಹಾಗೂ ಕನ್ನಡಪರ ಸಂಘಟನೆಗಳು ಇಂದು ಚಿಕ್ಕಮಗಳೂರು ಬಂದ್‍ಗೆ ಕರೆ ನೀಡಿವೆ.

    ಬಂದ್‍ಗೆ ಬೆಳಗ್ಗಿನಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವರ್ತಕರು ಕೂಡ ಸ್ವಯಂಪ್ರೇರಿತರಾಗಿ ಅಂಗಡಿ-ಮುಗ್ಗಟ್ಟುಗಳನ್ನು ಬಂದ್ ಮಾಡುವ ಮೂಲಕ ಬಂದ್‍ಗೆ ಬೆಂಬಲ ನೀಡಿವೆ. ವಿವಿಧ ಕನ್ನಡಪರ ಸಂಘಟನೆಗಳು ಚಿಕ್ಕಮಗಳೂರಿನ ವಾಹನ ಹಾಗೂ ಆಟೋಗಳನ್ನ ಬಂದ್ ಮಾಡುವಂತೆ ಮನವಿ ಮಾಡಿಕೊಂಡಿದ್ದು, ಬಹುತೇಕ ಆಟೋಗಳು ಸಂಚಾರ ಸ್ಥಗಿತಗೊಳಿಸಿವೆ. ಜನಸಾಮಾನ್ಯರು ಕೂಡ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

    ನಗರದ ಹನುಮಂತಪ್ಪ ವೃತ್ತದಲ್ಲಿ ಕನ್ನಡಪರ ಸಂಘಟಕರು ಉರುಳು ಸೇವೆ ಕೈಗೊಂಡಿದ್ದರು. ಕೆಎಸ್‍ಆರ್‍ಟಿಸಿ ಬಸ್ ಸ್ಟ್ಯಾಂಡ್‍ಗೆ ಮುತ್ತಿಗೆ ಹಾಕಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಚಿಕ್ಕಮಗಳೂರು ಡಿಪೋ ಗಾಡಿಗಳು ರಸ್ತೆಗಿಳಿಯದಂತೆ ಆಗ್ರಹಿಸಿದ್ರು. ಇದರಿಂದ ಬಸ್ ಸ್ಟ್ಯಾಂಡ್‍ನಲ್ಲಿದ್ದ ಕೆಲ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಬೇಲೂರು ದೇವಾಲಯದಲ್ಲಿ ನಡೆಯುತ್ತಿದ್ದ ತೆಲುಗು ಚಿತ್ರದ ಶೂಟಿಂಗ್ ರದ್ದು

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಬೇಲೂರು ದೇವಾಲಯದಲ್ಲಿ ನಡೆಯುತ್ತಿದ್ದ ತೆಲುಗು ಚಿತ್ರದ ಶೂಟಿಂಗ್ ರದ್ದು

    ಹಾಸನ: ಬೇಲೂರಿನ ಚನ್ನಕೇಶವ ದೇವಾಲಯದ ಒಳಗಡೆ ನಡೆಯುತ್ತಿದ್ದ ಅಲ್ಲು ಅರ್ಜುನ್ ಅಭಿನಯದ ‘ಡಿಜೆ’ ಚಿತ್ರದ ಶೂಟಿಂಗ್ ರದ್ದಾಗಿದೆ. ತೀವ್ರ ವಿರೋಧದ ಹಿನ್ನೆಲೆಯಲ್ಲಿ ಭಕ್ತರ ಆಕ್ರೋಶಕ್ಕೆ ಮಣಿದ ಪುರಾತತ್ವ ಇಲಾಖೆ ಚಿತ್ರೀಕರಣವನ್ನು ರದ್ದುಮಾಡಿ ಆದೇಶ ಪ್ರಕಟಿಸಿದೆ.

    ವಿವಾದ ಏನು?
    ಸಾಮಾನ್ಯ ಜನರಿಗೆ ಬೇಲೂರು ದೇವಾಲಯದಲ್ಲಿ ವೀಡಿಯೋ ಚಿತ್ರೀಕರಣಕ್ಕೆ ಅವಕಾಶವಿಲ್ಲ. ಕೇಂದ್ರ ಸರ್ಕಾರ ಅಧೀನದ ಪ್ರಾಚ್ಯವಸ್ತು ಇಲಾಖೆಯ ಸುಪರ್ದಿಯಲ್ಲಿರುವ ಈ ದೇವಾಲಯದಲ್ಲಿ ಯಾವುದೇ ಚಿತ್ರೀಕರಣ ಮಾಡುವುದಾದರೆ ಪುರಾತತ್ವ ಇಲಾಖೆಯಿಂದ ಅನುಮತಿ ಪಡೆಯಬೇಕು. ಜೊತೆಗೆ ಕೆಲವು ನಿಬಂಧನೆ ಒಪ್ಪಿದರೆ ಮಾತ್ರ ಅನುಮತಿ ನೀಡಬೇಕು.

    ಕೇವಲ ಚಿತ್ರೀಕರಣಕ್ಕೆ ಅನುಮತಿ ಪಡೆದಿರುವ ಚಿತ್ರತಂಡ, ದೇವಸ್ಥಾನದ ಒಳ ಆವರಣದಲ್ಲಿ ಯಾವುದೇ ಬದಲಾವಣೆಗೆ ಅವಕಾಶವಿಲ್ಲದಿದ್ದರೂ ಸಹ ಹಲವು ಬದಲಾವಣೆಗಳನ್ನು ಮಾಡಿತ್ತು. ವಿಷ್ಣುವನ್ನು ಆರಾಧಿಸಲ್ಪಡುವ ದೇವಾಲಯದಲ್ಲಿ ಶಿವಲಿಂಗ ಮೂರ್ತಿ ಪ್ರತಿಷ್ಟಾಪನೆ ಮಾಡಿದ್ದಕ್ಕೆ ಭಕ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಿದ್ದರೂ ಇಲ್ಲಿ ಕಳೆದ ನಾಲ್ಕು ದಿನಗಳಿಂದ ತೆಲುಗಿನ ‘ಡಿಜೆ’ ಚಿತ್ರದ ಶೂಟಿಂಗ್ ನಡೆಯುತ್ತಿತ್ತು.

    ದೇವಸ್ಥಾನಕ್ಕೆ ಉಗ್ರರ ಬೆದರಿಕೆಯೂ ಇದ್ದು ಭದ್ರತೆಯೂ ಸಾಕಷ್ಟಿದೆ. ಜೊತೆಗೆ ಈ ದೇವಸ್ಥಾನ ವಿಶ್ವ ಪ್ರಸಿದ್ಧವಾಗಿದ್ದು ಪ್ರತಿದಿನ ವಿದೇಶಿ ಪ್ರವಾಸಿಗರೂ ಸಹ ಇಲ್ಲಿಗೆ ಬರುತ್ತಿದ್ದಾರೆ. ಆವರಣದಲ್ಲಿ ಚಿತ್ರೀಕರಣ ನಡೆಯುವುದರಿಂದ ಸಂಪೂರ್ಣ ದೇವಾಲಯವನ್ನು ಇವರಿಗೆ ಸುತ್ತು ಹಾಕುವುದು ಸಾಧ್ಯವಾಗುತ್ತಿರಲಿಲ್ಲ. ಈ ಕಾರಣಕ್ಕೆ ವಿದೇಶಿಯರು ಸಹ ಶೂಟಿಂಗ್ ನಡೆಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

    ಕೇಂದ್ರ ಪ್ರಾಚ್ಯ ವಸ್ತು ಇಲಾಖೆಯ ಅಧಿಕಾರಿಗಳು ಇವರಿಗೆ ಅನುಮತಿ ನೀಡಿದ್ದರೂ ಸಹ ಯಾವುದೇ ನಿಬಂಧನೆಗಳನ್ನು ತಿಳಿಸಲಿಲ್ಲವೆ? ಅಥವಾ ಯಾರ ಪ್ರಭಾವ ಇಲ್ಲಿ ಕೆಲಸ ಮಾಡಿದೆ ಎನ್ನುವ ಪ್ರಶ್ನೆ ಎದ್ದಿತ್ತು. ಸಾಮಾನ್ಯ ಜನರಿಗೆ ಒಂದು ಕಾನೂನು, ಉಳಿದವರಿಗೆ ಒಂದು ಕಾನೂನು ಆದರೆ ಹೇಗೆ ಎಂದು ಜನ ಪುರಾತತ್ವ ಇಲಾಖೆಯನ್ನು ಪ್ರಶ್ನಿಸಿದ್ದರು. ಜನರ ವಿರೋಧ ತೀವ್ರವಾದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಶುಕ್ರವಾರ ಬೆಳಗ್ಗೆಯಿಂದಲೇ ಸುದ್ದಿ ಪ್ರಸಾರ ಮಾಡಿತ್ತು. ಈಗ ಪುರಾತತ್ವ ಇಲಾಖೆ ಚಿತ್ರೀಕರಣಕ್ಕೆ ನೀಡಿದ ಆದೇಶವನ್ನು ರದ್ದು ಮಾಡಿ ಆದೇಶ ಪ್ರಕಟಿಸಿದೆ.

     

  • ಬೇಲೂರು ದೇವಸ್ಥಾನದೊಳಗೆ ತೆಲುಗು ದರ್ಬಾರ್- ವಾರದಿಂದ ನಡೀತಿದೆ ಅಲ್ಲು ಅರ್ಜುನ್ ಶೂಟಿಂಗ್

    ಬೇಲೂರು ದೇವಸ್ಥಾನದೊಳಗೆ ತೆಲುಗು ದರ್ಬಾರ್- ವಾರದಿಂದ ನಡೀತಿದೆ ಅಲ್ಲು ಅರ್ಜುನ್ ಶೂಟಿಂಗ್

    ಹಾಸನ: ಬೇಲೂರು ಅಂದ್ರೆ ಥಟ್ಟನೇ ನೆನಪಿಗೆ ಬರೋದು ಶಿಲ್ಪಕಲೆಯೊಂದಿಗೆ ವೈಭವಯುತವಾದ ಚನ್ನಕೇಶವನ ಪ್ರತಿರೂಪ. ಕೇಂದ್ರ ಪ್ರಾಚ್ಯವಸ್ತು ಇಲಾಖೆಗೆ ಸೇರಿದ ಈ ದೇವಾಲಯ ವಿಶ್ವಪ್ರಸಿದ್ಧ. ಹಲವು ವಿಶೇಷತೆಗಳನ್ನು ಹೊಂದಿರುವ ಈ ದೇವಾಲಯದಲ್ಲಿ ಸಾಮಾನ್ಯರಿಗೆ ಮೊಬೈಲ್ ಹಾಗೂ ಕ್ಯಾಮೆರಾದಲ್ಲಿ ಚಿತ್ರೀಕರಣ ನಿಷೇಧವಿದೆ. ಚಿತ್ರೀಕರಣಕ್ಕೆ ಅವಕಾಶವಿದ್ದರೂ ಸಹ ಹಲವು ಮಿತಿಗಳಿವೆ. ಆದ್ರೆ ತೆಲುಗು ಚಿತ್ರ ತಂಡವೊಂದಕ್ಕೆ ಚಿತ್ರೀಕರಣಕ್ಕೆ ಅನುವು ಮಾಡಿಕೊಡಲಾಗಿದ್ದು ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಜಿಲ್ಲೆಯ ಬೇಲೂರು ಹಳೇಬೀಡು ವಿಶ್ವವಿಖ್ಯಾತ ದೇವಾಲಯಗಳು. ಹೋಯ್ಸಳರ ದೊರೆ ವಿಷ್ಣುವರ್ಧನನ ಕಾಲದಲ್ಲಿ ನಿರ್ಮಾಣವಾಗಿರುವ ಬೇಲೂರಿನ ಚೆನ್ನಕೇಶವ ದೇವಾಲಯಕ್ಕೆ ಪ್ರತಿದಿನ ಸಾವಿರಾರು ಮಂದಿ ಪ್ರವಾಸಿಗರು ಬರುತ್ತಾರೆ. ಇವರಲ್ಲಿ ಸಾಕಷ್ಟು ಮಂದಿ ವಿದೇಶಿಯರೂ ಸೇರಿರುತ್ತಾರೆ. ಸಾಮಾನ್ಯ ಜನರಿಗೆ ಈ ದೇವಾಲಯದಲ್ಲಿ ವೀಡಿಯೋ ಚಿತ್ರೀಕರಣಕ್ಕೆ ಅವಕಾಶವಿಲ್ಲ. ಕೇಂದ್ರ ಸರ್ಕಾರ ಅಧೀನದ ಪ್ರಾಚ್ಯವಸ್ತು ಇಲಾಖೆಯ ಸುಪರ್ದಿ ಇದಕ್ಕಿದೆ. ಇಲ್ಲಿ ಯಾವುದೇ ಚಿತ್ರೀಕರಣ ಮಾಡುವುದಾದರೆ ಪ್ರಾಚ್ಯ ವಸ್ತು ಇಲಾಖೆಯಿಂದ ಅನುಮತಿ ಪಡೆಯಬೇಕು. ಜೊತೆಗೆ ಕೆಲವು ನಿಬಂಧನೆಗೆ ಒಳಪಟ್ಟ ಅನುಮತಿ ಮಾತ್ರ ನೀಡಬೇಕು. ಹೀಗಿದ್ದಾಗ ಇಲ್ಲಿ ಕಳೆದ ಮೂರು ದಿನಗಳಿಂದ ತೆಲುಗು ಚಲನಚಿತ್ರವೊಂದರ ಶೂಟಿಂಗ್‍ಗೆ ಅನುಮತಿ ನೀಡಲಾಗಿದೆ. ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ನಾಯಕತ್ವದ ಈ ಚಿತ್ರದ ಚಿತ್ರೀಕರಣ ಇಲ್ಲಿ ನಡೆಯುತ್ತಿದೆ. ಒಟ್ಟು 7 ದಿನಗಳ ಚಿತ್ರೀಕರಣದಲ್ಲಿ ಈಗಾಗಲೇ ಮೂರು ದಿನಗಳ ಚಿತ್ರೀಕರಣ ಮುಗಿದಿದೆ.

    ಕೇವಲ ಚಿತ್ರೀಕರಣಕ್ಕೆ ಅನುಮತಿ ಪಡೆದಿರುವ ಚಿತ್ರತಂಡ, ದೇವಸ್ಥಾನದ ಒಳ ಆವರಣದಲ್ಲಿ ಯಾವುದೇ ಬದಲಾವಣೆಗೆ ಅವಕಾಶವಿಲ್ಲದಿದ್ದರೂ ಸಹ ಹಲವು ಬದಲಾವಣೆಗಳನ್ನು ಮಾಡಿದೆ. ವಿಷ್ಣುವನ್ನ ಆರಾಧಿಸಲ್ಪಡುವ ದೇವಾಲಯದಲ್ಲಿ ಶಿವಲಿಂಗ ಮೂರ್ತಿ ಪ್ರತಿಷ್ಟಾಪನೆ ಮಾಡಿದ್ದಾರೆ. ಇದರಿಂದಾಗಿ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ.

    ದೇವಸ್ಥಾನಕ್ಕೆ ಉಗ್ರರ ಉಪಟಳವೂ ಇದ್ದು ಭದ್ರತೆಯೂ ಸಾಕಷ್ಟಿದೆ. ಜೊತೆಗೆ ಈ ದೇವಸ್ಥಾನ ವಿಶ್ವ ಪ್ರಸಿದ್ದವಾಗಿದ್ದು ಪ್ರತಿದಿನ ವಿದೇಶಿ ಪ್ರವಾಸಿಗರೂ ಸಹ ಇಲ್ಲಿಗೆ ಬರುತ್ತಾರೆ. ಆವರಣದಲ್ಲಿ ಚಿತ್ರೀಕರಣ ನಡೆಯೋದ್ರಿಂದ ಸಂಪೂರ್ಣ ದೇವಾಲಯವನ್ನು ಸುತ್ತು ಹಾಕುವುದು ಸಾಧ್ಯವಿಲ್ಲ. ಇದ್ರಿಂದಾಗಿ ವಿದೇಶಿಯರಿಗೂ ಸಹ ಇಲ್ಲಿ ಕೊಂಚ ನಿರಾಸೆಯಾಗಿದೆ.

    ಕೇಂದ್ರ ಪ್ರಾಚ್ಯ ವಸ್ತು ಇಲಾಖೆಯ ಅಧಿಕಾರಿಗಳು ಇವರಿಗೆ ಅನುಮತಿ ನೀಡಿದ್ದರೂ ಸಹ ಯಾವುದೇ ನಿಬಂಧನೆಗಳನ್ನು ತಿಳಿಸಲಿಲ್ಲವೆ? ಅಥವಾ ಯಾರ ಪ್ರಭಾವ ಇಲ್ಲಿ ಕೆಲಸ ಮಾಡಿದೆ ಎನ್ನುವ ಪ್ರಶ್ನೆ ಈಗ ಎದ್ದಿದೆ. ಸಾಮಾನ್ಯ ಜನರಿಗೆ ಒಂದು ಕಾನೂನು, ಉಳಿದವರಿಗೆ ಒಂದು ಕಾನೂನು ಆದ್ರೆ ಹೇಗೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

  • ಫೆಬ್ರವರಿ ಅಂತ್ಯಕ್ಕೆ ಹಾಸನ ಟು ಬೆಂಗಳೂರು ನೇರ ರೈಲು ಸಂಚಾರ ಆರಂಭ?

    ಹಾಸನ: ಜಿಲ್ಲೆಯ ಬಹುವರ್ಷಗಳ ಕನಸಾದ ಹಾಸನ ಟು ಬೆಂಗಳೂರು ನೇರ ಪ್ರಯಾಣಿಕರ ರೈಲು ಸಂಚಾರ ಫೆಬ್ರವರಿ ಅಂತ್ಯದ ವೇಳೆಗೆ ಆರಂಭಗೊಳ್ಳುವ ನಿರೀಕ್ಷೆಯಿದೆ. ನೆಲಮಂಗಲದಿಂದ ಶ್ರವಣಬೆಳಗೋಳದವರೆಗೆ 4 ದಿನಗಳ ಕಾಲ ತಪಾಸಣೆ ನಡೆಸಿದ ರೈಲ್ವೆ ಸುರಕ್ಷತಾ ಆಯುಕ್ತರ ತಂಡ ಹೊಸ ಮಾರ್ಗ ರೈಲು ಓಡಾಟಕ್ಕೆ ಸೇಫ್ ಎಂದು ತಿಳಿಸಿದೆ.

    ಈಗಾಗಲೇ ಕಾಮಗಾರಿ ಪೂರ್ಣವಾಗಿದ್ದು ಹಳಿ ಜೋಡಣೆ, ಸೇತುವೆ, ರೈಲ್ವೆ ನಿಲ್ದಾಣ ಮತ್ತು ಸಿಗ್ನಲ್ ವ್ಯವಸ್ಥೆ ಬಗ್ಗೆ ರೈಲ್ವೆ ಸುರಕ್ಷತಾ ಆಯುಕ್ತರ ತಂಡ ತಪಾಸಣೆ ನಡೆಸಿದೆ. ಗಂಟೆಗೆ 110 ಕಿಲೋ ಮೀಟರ್ ವೇಗದಲ್ಲಿ ಶ್ರವಣಬೆಳಗೋಳದಿಂದ ನೆಲಮಂಗಲದ ವರೆಗೆ ಪ್ರಾಯೋಗಿಕ ರೈಲು ಸಂಚಾರ ಸಹ (ಸ್ಪೀಡ್ ಟ್ರಯಲ್) ನಡೆಸಲಾಗಿದೆ. ರೈಲ್ವೆ ಸುರಕ್ಷತಾ ಆಯುಕ್ತರು ಹೊಸ ಮಾರ್ಗದಲ್ಲಿ ರೈಲು ಹಳಿಯ ಸ್ಥಿತಿಗತಿ ನಮಗೆ ತೃಪ್ತಿಕರವಾಗಿದೆ. ಕೆಲವು ಕಡೆ ಸಣ್ಣಪುಟ್ಟ ಸಮಸ್ಯೆಗಳಿವೆ. ಅವುಗಳನ್ನು ಆದಷ್ಟು ಶೀಘ್ರ ಸರಿಪಡಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

    ಹೊಸ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರೆ ಹಾಸನ-ಬೆಂಗಳೂರು ನಡುವಿನ ಅಂತರ 167 ಕಿಮೀ ಗೆ ಕುಗ್ಗಲಿದೆ. ಶೇ. ನೂರರಷ್ಟು ಎಲ್ಲವೂ ಸರಿಯಾದ ನಂತರ ಹೊಸ ಮಾರ್ಗದಲ್ಲಿ ರೈಲು ಓಡಾಟವನ್ನು ಅಧಿಕೃತಗೊಳಿಸಲಾಗುವುದು ಎಂದಿರುವುದು ಈ ತಿಂಗಳಾಂತ್ಯಕ್ಕೆ ನೇರ ರೈಲು ಕನಸು ನನಸಾಗಲಿದೆ ಎಂಬ ಆಸೆಯನ್ನು ಇನ್ನಷ್ಟು ಬಲಗೊಳಿಸಿದೆ.

     

  • ಸಾಲಬಾಧೆ: ವಿಷಸೇವಿಸಿ ಮೂವರು ರೈತರ ಆತ್ಮಹತ್ಯೆ

    ಹಾವೇರಿ/ಹಾಸನ/ಮಂಡ್ಯ: ಸಾಲಭಾದೆ ತಾಳಲಾರದೆ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜ್ಯದ ಹಾವೇರಿ, ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ನಡೆದಿವೆ.

    ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬೆಳಕೇರಿ ಗ್ರಾಮದಲ್ಲಿ ಈರನಗೌಡ ನೀಲನಗೌಡ (40) ಆತ್ಮಹತ್ಯೆಗೆ ಶರಣಾದ ರೈತ. ಈರನಗೌಡ ಅವರು ಆರು ಎಕರೆ ಜಮೀನು ಹೊಂದಿದ್ದು, ಬ್ಯಾಂಕ್ ಮತ್ತು ಕೈ ಸಾಲ ಸೇರಿದಂತೆ 20 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದರು. ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಮತ್ತು ಹತ್ತಿ ಮಳೆ ಬಾರದೇ ಕೈ ಕೊಟ್ಟಿದ್ದರಿಂದ ಇಂದು ಬೆಳಗ್ಗೆ ತಮ್ಮ ಜಮೀನಿನಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತಂತೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಹಾಸನ-ರುದ್ರೇಗೌಡ

    ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಸಂಕೇನಹಳ್ಳಿಯ ರೈತ ರುದ್ರೇಗೌಡ (58) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರುದ್ರೇಗೌಡ ಅವರು ಬ್ಯಾಂಕ್ ಮತ್ತು ಕೈ ಸಾಲ ಸೇರಿದಂತೆ 7 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಮಂಗಳವಾರ ರಾತ್ರಿ ಜಮೀನು ಬಳಿ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ, ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮಂಡ್ಯ-ಯುವ ರೈತ ಮಧುಕುಮಾರ್

    ಇನ್ನೂ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕಬ್ಬಾರೆ ಗ್ರಾಮದ ಯುವ ರೈತ ಮಧುಕುಮಾರ್ (23) ಮಂಗಳವಾರ ರಾತ್ರಿ ವಿಷ ಸೇವಿಸಿದದ್ರು, ಇಂದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ಮಧುಕುಮಾರ್ ಒಂದೂವರೆ ಎಕರೆ ಭೂಮಿಯಲ್ಲಿ ಭತ್ತ ಬೆಳದಿದ್ದರು. ಇತ್ತೀಚಿಗೆ ಜಮೀನಿನಲ್ಲಿ ಕೊರಸಿದ್ದ ಬೋರವೆಲ್‍ನಲ್ಲಿ ನೀರು ಬಂದಿರಲಿಲ್ಲ. ಮಧುಕರ್ ಬೇಸಾಯಕ್ಕೆಂದು ಎರಡೂವರೆ ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಈ ಕುರಿತು ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾರಿಗೆ ರೈಲ್ವೆ ಎಂಜಿನ್ ಡಿಕ್ಕಿ; ಇಬ್ಬರ ಸಾವು

    ಹಾಸನ: ಕಾರೊಂದು ರೈಲ್ವೆ ಗೇಟ್ ದಾಟುವ ವೇಳೆ ರೈಲ್ವೇ ಎಂಜಿನ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಗೇಶಪುರ ಗ್ರಾಮದ ಬಳಿ ನಡೆದಿದೆ.

    ದುದ್ದ ಗ್ರಾಮದ ನಿವಾಸಿಗಳಾದ ಆನಂದ್ (22) ಮತ್ತು ರಾಘವೇಂದ್ರ (28) ಮೃತ ದುರ್ದೈವಿಗಳು. ಮಂಗಳವಾರ ರಾತ್ರಿ ಸುಮಾರು 11 ಗಂಟೆಗೆ ಇಬ್ಬರೂ ಅರಸೀಕೆರೆದಿಂದ ಕೋರವಂಗಲ್ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಕಾವಲುಗಾರನಿಲ್ಲದ ರೈಲ್ವೇ ಗೇಟ್ ದಾಟುವಾಗ ಅಪಘಾತ ನಡೆದಿದೆ.

    ವೇಗವಾಗಿ ಬಂದ ರೈಲ್ವೇ ಎಂಜಿನ್ ಕಾರಿಗೆ ಡಿಕ್ಕಿ ಹೊಡೆದು ಸುಮಾರು 500 ಮೀಟರ್ ದೂರದವರೆಗೆ ಎಳೆದುಕೊಂಡು ಹೋಗಿದೆ. ಕೊನೆಗೆ ರೈಲ್ವೇ ಪೊಲೀಸರು ಸಾರ್ವಜನಿಕರ ಸಹಾಯದೊಂದಿಗೆ ಕಾರನ್ನು ಎಂಜಿನ್‍ನಿಂದ ಬೇರ್ಪಡಿಸಿದ್ದಾರೆ. ಈ ಕುರಿತು ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

     

  • ಮಣ್ಣಲ್ಲಿ ಮಣ್ಣಾದ ಹಾಸನದ ವೀರ ಯೋಧ ಸಂದೀಪ್ ಶೆಟ್ಟಿ

    ಹಾಸನ: ವೀರಯೋಧ ಸಂದೀಪ್ ಪಾರ್ಥಿವ ಶರೀರ ಇಂದು ಮಣ್ಣಲ್ಲಿ ಮಣ್ಣಾಗಿದೆ. ಸ್ವಗ್ರಾಮ ದೇವಿಹಳ್ಳಿಯಲ್ಲಿ ಅಗಲಿದ ವೀರ ಯೋಧನಿಗೆ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಿ ಅಂತ್ಯ ಸಂಸ್ಕಾರ ಮಾಡಲಾಯಿತು.

    ವೀರಯೋಧ ಸಂದೀಪ್ ಶೆಟ್ಟಿ 18ನೇ ಗುಜರಾತ್ ರೆಜಿಮೆಂಟ್‍ಗೆ ಸೇರಿದವರು. ಜನವರಿ 25ರಂದು ಕಾಶ್ಮೀರದ ಬಳಿಯ ಗುರೆಜ್ ಕ್ಯಾಂಪನಲ್ಲಿ ಹಿಮಪಾತಕ್ಕೆ ಸಿಲುಕಿ ಹಿಮರಾಶಿಯಲ್ಲಿ ಹುದುಗಿ ಹೋಗಿದ್ದರು. ಮೃತದೇಹವನ್ನ ಪತ್ತೆ ಮಾಡಿದ್ದರೂ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ತರಲು ಸರಿಯಾಗಿ 7 ದಿನಗಳೇ ಬೇಕಾಯಿತು. ಇದಕ್ಕೆ ಅಲ್ಲಿಯ ಹವಾಮಾನದ ವೈಪರಿತ್ಯ ಅಡ್ಡಿಯಾಗಿತ್ತು. ಮಂಗಳವಾರ ದೆಹಲಿಯಿಂದ ಹೊರಟು ಬೆಂಗಳೂರಿನ ಮೂಲಕ ಹಾಸನಕ್ಕೆ ಮಧ್ಯರಾತ್ರಿ ಪಾರ್ಥಿವ ಶರೀರವನ್ನ ತರಲಾಗಿತ್ತು.

    ವೀರ ಯೋಧನ ಪಾರ್ಥಿವ ಶರೀರವನ್ನ ಇಂದು ಮುಂಜಾನೆ 8ಗಂಟೆಯಿಂದ 10 ಗಂಟೆಯವರೆಗೆ ಸಾರ್ವಜನಿಕರ ದರ್ಶನಕ್ಕೆ ಹಾಸನದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಇಡಲಾಗಿತ್ತು. ನಂತ್ರ 10.30ಕ್ಕೆ ಮೃತದೇಹವನ್ನು ಹೇಮಾವತಿ ಪ್ರತಿಮೆ ಮಾರ್ಗವಾಗಿ ಬಿ.ಎಸ್.ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ಸ್ವಗ್ರಾಮ ದೇವಿಹಳ್ಳಿಗೆ ತರಲಾಯ್ತು. ಈ ವೇಳೆ ದಾರಿಯುದ್ದಕ್ಕೂ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ವೀರಯೋಧನಿಗೆ ಅಮರ್ ರಹೇ ಸಂದೀಪ್ ಶೆಟ್ಟಿ ಎನ್ನುವ ಜಯ ಘೋಷದ ಮೂಲಕ ನಮನ ಸಲ್ಲಿಸಿದ್ರೆ, ಸಾವಿರಾರು ಮಂದಿ ಅಂತ್ಯಸಂಸ್ಕಾರದ ಸಮಯದಲ್ಲಿ ಸಾಕ್ಷಿಯಾಗಿದ್ರು.

    ನಿಂತಲ್ಲೇ ಕುಸಿದ ಸಂದೀಪ್ ತಾಯಿ: ಸಂದೀಪ್ ಅಂತ್ಯ ಸಂಸ್ಕಾರದ ವೇಳೆಯಲ್ಲಿ ತಾಯಿ ಗಂಗಮ್ಮ ಕುಸಿದು ಹೋದರು. ಮಗನ ಸಾವಿನ ಸುದ್ದಿ ತಿಳಿದ ಕ್ಷಣದಿಂದ ಸರಿಯಾಗಿ ಆಹಾರ ಸೇವಿಸಿರದ ಕಾರಣ ನಿಶ್ಯಕ್ತಿಯಿಂದ ಕುಸಿದು ಬಿದ್ದರು. ಪ್ರಥಮ ಚಿಕಿತ್ಸೆಯ ನಂತರ ಗಂಗಮ ಚೇತರಿಸಿಕೊಂಡರು.

    ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ಸ್ಥಳೀಯ ಶಾಸಕ ಎಚ್.ಎಸ್.ಪ್ರಕಾಶ್, ಎಚ್.ಡಿ.ರೇವಣ್ಣ, ವಿಧಾನಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಪಾರ್ಥಿವ ಶರೀರಕ್ಕೆ ಪುಪ್ಪಗುಚ್ಚ ಅರ್ಪಿಸುವ ಮೂಲಕ ಗೌರವ ಸಲ್ಲಿಸಿದ್ರು. ಕಳೆದ ರಾತ್ರಿ ಬೆಂಗಳೂರಿನಿಂದ ಆಗಮಿಸಿದ ಪಾರ್ಥೀವ ಶರೀರದೊಂದಿಗೆ ಸೇನಾ ಅಧಿಕಾರಿಗಳ ತಂಡವೂ ಬಂದಿತ್ತು. ಆರ್ಮಿ ಸರ್ವಿಸ್ ಕೋರ್ಸ್ ನ 35 ಮಂದಿ ಯೋಧರು ಅಂತ್ಯ ಸಂಸ್ಕಾರ ಮುಗಿಯುವರೆಗೂ ತಮ್ಮ ಕಾರ್ಯವನ್ನು ನಿರ್ವಹಸಿದರು.

    ಮದ್ಯಾಹ್ನ ಸರಿಯಾಗಿ 3 ಗಂಟೆಗೆ ಸೇನೆಯ ಯೋಧರು 21 ಸುತ್ತು ಗುಂಡುಗಳನ್ನು ಗಾಳಿಯಲ್ಲಿ ಹಾರಿಸುವ ಮೂಲಕ ಅಗಲಿದ ಯೋಧನಿಗೆ ಅಂತಿಮ ಗೌರವ ಸಲ್ಲಿಸಿದರು. ನಂತರ ನಡೆದ ಅಂತಿಮ ವಿಧಿವಿಧಾನವನ್ನು ದೇವಾಂಗ ಸಂಪ್ರದಾಯದಂತೆ ನೆರವೇರಿತು.

    ದೇವಿಹಳ್ಳಿ ಗ್ರಾಮದ ಪುಟ್ಟರಾಜ್ ಮತ್ತು ಗಂಗಮ್ಮ ದಂಪತಿಯ ಏಕೈಕ ಪುತ್ರ ಸಂದೀಪ್. ತಂದೆ-ತಾಯಿ, ಬಂಧು ಬಳಗ, ಸ್ನೇಹಿತರನ್ನೆಲ್ಲ ಅಗಲಿದ ವೀರ ಯೋಧ ದೇಶಕ್ಕಾಗಿ ತನ್ನ ಪ್ರಾಣ ಅರ್ಪಿಸಿದ್ದಾನೆ. ದೇಶಕ್ಕಾಗಿ ವೀರ ಮರಣವನ್ನಪ್ಪಿದ ಹುತಾತ್ಮ ಯೋಧನಿಗೆ ಒಂದು ಸಲಾಂ.

     

  • ಹಾಸನ ತಲುಪಿದ ಮೃತ ಸಂದೀಪ್ ಪಾರ್ಥೀವ ಶರೀರ: ಇಂದು ಮಧ್ಯಾಹ್ನ ಅಂತ್ಯಕ್ರಿಯೆ

    ಹಾಸನ: ಜಮ್ಮುಕಾಶ್ಮೀರದಲ್ಲಿ ಹಿಮಕುಸಿತಕ್ಕೆ ಸಿಲುಕಿ ವೀರಮರಣವನ್ನಪ್ಪಿದ ಯೋಧ ಸಂದೀಪ್ ಪಾರ್ಥೀವ ಶರೀರ ಮಂಗಳವಾರ ತಡರಾತ್ರಿ ತವರು ಜಿಲ್ಲೆ ಹಾಸನಕ್ಕೆ ಆಗಮಿಸಿದೆ. ತಡರಾತ್ರಿ 2.30ಕ್ಕೆ ವಿಶೇಷ ಅಂಬುಲೆನ್ಸ್‍ನಲ್ಲಿ ಹಾಸನ ಜಿಲ್ಲಾಸ್ಪತ್ರೆಗೆ ಸೈನ್ಯದ ಅಧಿಕಾರಿಗಳ ತಂಡ ಸಂದೀಪ್ ಪಾರ್ಥೀವ ಶರೀರದೊಂದಿಗೆ ಆಗಮಿಸಿದರು.

    ಜಿಲ್ಲಾಡಳಿತದ ವತಿಯಿಂದ ಸಂದೀಪ್ ಪಾರ್ಥಿವ ಶರೀರವನ್ನು ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸಂದೀಪ್ ಪೋಷಕರು, ಶಾಸಕ ಹೆಚ್ ಎಸ್ ಪ್ರಕಾಶ್, ಅಪರ ಜಿಲ್ಲಾಧಿಕಾರಿ ಹಾಗು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಹಾಜರಿದ್ದರು.

    ರಾತ್ರಿ ಇಡೀ ಸಂದೀಪ್ ಪಾರ್ಥೀವ ಶರೀರವನ್ನು ಹಾಸನ ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇಡಲಾಗಿದ್ದು ಜಿಲ್ಲಾಧಿಕಾರಿ ಕಛೇರಿ ಬಳಿ ಇಂದು ಬೆಳಗ್ಗೆ 8 ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ಬೆಳಗ್ಗೆ 10 ಗಂಟೆಯ ನಂತರ ಪಾರ್ಥೀವ ಶರೀರ ಸ್ವಗ್ರಾಮ ದೇವಿಹಳ್ಳಿಗೆ ಮೆರವಣಿಗೆ ಮುಖಾಂತರ ತೆರಳಲಿದೆ. ನಂತರ ದೇವಾಂಗ ಸಂಪ್ರದಾಯದ ಪ್ರಕಾರ ಅಂತಿಮ ವಿಧಿವಿಧಾನ ನಡೆಸಲಾಗುತ್ತದೆ. ಮಧ್ಯಾಹ್ನದ ವೇಳೆಗೆ ಅಂತ್ಯಕ್ರಿಯೆ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ.

    ಯೋಧ ಸಂದೀಪ್ ಮೃತದೇಹ ಬೆಂಗಳೂರಿಗೆ ಬಂದಿಳಿದಾಗ ಸಚಿವ ಎ.ಮಂಜು ಕೂಡ ಜೊತೆಗೇ ಇದ್ದರು. ಮೃತ ಸಂದೀಪ್ ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ 25 ಲಕ್ಷ ರೂ., ಒಂದು ಸೈಟ್ ನೀಡಲಾಗುವುದು ಅಂತಾ ಘೋಷಣೆ ಮಾಡಿದ್ರು.