Tag: Harvest

  • ಮಾರ್ಚ್ ಮುಗಿಯುತ್ತಿದ್ದರೂ ಮಾಗಿಯ ಕಾಲದ ಮಾವು ಬಾರಲೇ ಇಲ್ಲ

    ಮಾರ್ಚ್ ಮುಗಿಯುತ್ತಿದ್ದರೂ ಮಾಗಿಯ ಕಾಲದ ಮಾವು ಬಾರಲೇ ಇಲ್ಲ

    – ಈ ಬಾರಿ ಹೂವು, ಕಾಯಿಗಳು ಅಪರೂಪ
    – ಶೇ.40 ರಷ್ಟು ಮಾತ್ರ ಬೆಳೆ

    ಕೋಲಾರ: ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಅಲ್ಲಿ ಮಾಗಿಯ ಕಾಲದ ಮಾವಿನ ಸೊಬಗು ಕಣ್ಣು ಕುಕ್ಕುತ್ತಿತ್ತು. ಆದರೆ ಈ ವರ್ಷ ಅದ್ಯಾರ ಕಣ್ಣ ದೃಷ್ಟಿ ಬಿತ್ತೋ, ಮರಗಳಲ್ಲಿ ಹೂವು ಕಾಯಿಗಳು ಸಹ ಕಡಿಮೆಯಾಗಿದ್ದು, ಕೇವಲ ಶೇ.40ರಷ್ಟು ಬೆಳೆ ಬರುವುದು ಸಹ ಅನುಮಾನವಾಗಿದೆ.

    ತುಂಬಿ ತುಳುಕಬೇಕಿದ್ದ ಮಾವಿನ ಮರಗಳು ಕಾಯಿಗಳಿಲ್ಲದೆ ಖಾಲಿಯಾಗಿ ಕಾಣುತ್ತಿದ್ದು, ತೇವಾಂಶದ ಕೊರತೆಯಿಂದ ಕಾಯಿಗಳು ಅಲ್ಲಲ್ಲಿ ಮಾತ್ರ ಬಿಟ್ಟಿವೆ. ಪ್ರಪಂಚದ ಪ್ರಸಿದ್ಧ ಮಾವಿನ ತವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಈ ದೃಶ್ಯ ಕಾಣಿಸಿಕೊಂಡಿದ್ದು, ಕೋಲಾರ ಜಿಲ್ಲೆಯ ಸುತ್ತಮುತ್ತಲಿನ ಮಾವು ಬೆಳೆಯುವ ರೈತರು ಮಾವಿನ ಮರಗಳಲ್ಲಿ ನಿರೀಕ್ಷೆ ಮಟ್ಟದಲ್ಲಿ ಕಾಯಿಗಳಿಲ್ಲದೆ ಕಂಗಾಲಾಗಿದ್ದಾರೆ.

    ಜಿಲ್ಲೆಯಲ್ಲಿ ಮಾತ್ರವೇ ಸುಮಾರು 53 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುತ್ತಾರೆ. ಆದರೆ ಮಾವಿನ ಬೆಳೆಗಾರರಿಗೆ ಈ ಬಾರಿ ಕಣ್ಣಲ್ಲಿ ನೀರು ತರಿಸುವಂತಾಗಿದೆ. ಈ ಸಮಯದಲ್ಲಿ ಕಾಯಿಗಳನ್ನು ಬಿಡಬೇಕಾಗಿದ್ದ ಮರಗಳು, ಈ ಬಾರಿ ವಾತಾವರಣದಲ್ಲಿನ ಏರುಪೇರು ಮತ್ತು ತೇವಾಂಶದ ಕೊರತೆಯಿಂದ ಚಿಗುರಿಲ್ಲದ ಕಾರಣ ಹೂವು ಸಹ ಬಿಟ್ಟಿಲ್ಲ.

    ಇದರೊಂದಿಗೆ ಹೂಜಿ ಕಾಟ, ಕಾಡಿಗೆ ರೋಗ ಸೇರಿದಂತೆ ಮಾವಿಗೆ ಬಂದಿರುವ ನಾನಾ ರೋಗಗಳಿಂದ ಮಾವಿನ ಮರಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಹೂ ಬಿಟ್ಟಿಲ್ಲ. ಈಗಾಗಲೆ ತೋಟಗಾರಿಕಾ ಇಲಾಖೆ ವಿಜ್ಞಾನಿಗಳನ್ನು ಕರೆಸಿ ಮಾವು ತಡವಾಗಲು ಕಾರಣಗಳ ಬಗ್ಗೆ ತಿಳಿಸಿಕೊಟ್ಟು, ಅದಕ್ಕೆ ರೈತರು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಆದರೂ ಈ ಬಾರಿ ಕೇವಲ ಶೇ.40ರಷ್ಟು ಮಾತ್ರ ಬೆಳೆ ಬರುವುದು ಅದೂ ಸಹ ಮೇ ಅಂತ್ಯದ ವೇಳೆಗೆ ಮಾವು ಮಾರುಕಟ್ಟೆ ಪ್ರವೇಶ ಮಾಡಬಹುದೆಂದು ನಿರೀಕ್ಷಿಸಲಾಗಿದೆ.

    ಸಾವಿರಾರು ಎಕರೆಯಲ್ಲಿ ಮಾವು ಬೆಳೆಯುವ ಜಿಲ್ಲೆಯ ರೈತರು ದೇಶದ ನಾನಾ ರಾಜ್ಯಗಳು ಸೇರಿದಂತೆ ವಿದೇಶಗಳಿಗೆ ಮಾವನ್ನು ರಫ್ತು ಮಾಡುತ್ತಾರೆ. ಆದರೆ ಮಾವು ಆರಂಭದಲ್ಲೆ ಕೈಕೊಡುವ ಸೂಚನೆ ನೀಡಿದ್ದರಿಂದ ಇಲಾಖೆ ಕೂಡ ರೈತರಿಗೆ ಸಾಕಷ್ಟು ಅರಿವು ಮೂಡಿಸುವ ಕಾರ್ಯ ಮಾಡಿತು. ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಬಿದ್ದ ಮಳೆಯಿಂದ ತೇವಾಂಶ ಹೆಚ್ಚಾಗಿ ಮಾವು ಚಿಗುರು ಬರೋದು ತಡವಾದ ಪರಿಣಾಮ ಶೇ.40 ರಿಂದ 50 ರಷ್ಟು ಮಾವಿನ ಮರಗಳಲ್ಲಿ ಮಾತ್ರ ಹೂ ಕಾಣಿಸಿಕೊಂಡಿತು.

    ಇದರ ಪರಿಣಾಮ ಮಾರ್ಚ್ ತಿಂಗಳಲ್ಲಿ ಬರಬೇಕಿದ್ದ ಮಾವಿನ ದರ್ಬಾರ್ ಮಾರ್ಚ್ ತಿಂಗಳು ಮುಗಿಯುತ್ತಾ ಬರುತ್ತಿದ್ದು, ಮಾವಿನ ಮರಗಳಲ್ಲಿ ಕಾಯಿಗಳು ನಿರೀಕ್ಷಿತ ಮಟ್ಟದಲ್ಲಿ ಬಿಟ್ಟಿಲ್ಲ. ಇದರಿಂದಾಗಿ ಮರಗಳು ಖಾಲಿ ಖಾಲಿಯಾಗಿ ಕಂಡು ಬರುತ್ತಿವೆ. ಮಾವು ಬೆಳೆಗಾರರು ಈ ವರ್ಷ ಮಾವಿನ ಫಸಲು ಸಿಗೋದು ಅನುಮಾನ ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದಿದ್ದಾರೆ.

    ವರ್ಷಕ್ಕೊಂದೇ ಬೆಳೆಯಲ್ಲಿ ಬಾರೀ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರಿಗೆ ಈ ಬಾರಿ ಉಷ್ಣಾಂಶದ ಏರಿಕೆ ಹಾಗೂ ಹವಾಮಾನ ವೈಪರೀತ್ಯ, ಬರೀ ಮಾವು ಬೆಳೆಯನ್ನಷ್ಟೇ ಅಲ್ಲ ರೈತರ ಬದುಕನ್ನು ಸುಟ್ಟುಹಾಕಿದೆ. ಈ ವರ್ಷ ಅಲ್ಪ ಬೆಳೆಯಲ್ಲಿ ರೈತರು ತಮ್ಮ ದೊಡ್ಡ ನಿರೀಕ್ಷೆಗಳನ್ನು ಭರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

  • ಕಟಾವಿಗೆ ಬಂದಿದ್ದ ಕಬ್ಬಿಗೆ ಬೆಂಕಿ- ನೋಡ ನೋಡುತ್ತಿದ್ದಂತೆ ಸುಟ್ಟುಹೋಯ್ತು 10 ಎಕ್ರೆ ಬೆಳೆ

    ಕಟಾವಿಗೆ ಬಂದಿದ್ದ ಕಬ್ಬಿಗೆ ಬೆಂಕಿ- ನೋಡ ನೋಡುತ್ತಿದ್ದಂತೆ ಸುಟ್ಟುಹೋಯ್ತು 10 ಎಕ್ರೆ ಬೆಳೆ

    ಸಾಂದರ್ಭಿಕ ಚಿತ್ರ

    ಬೆಳಗಾವಿ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಟಾವಿಗೆ ಬಂದಿದ್ದ ಸುಮಾರು 10 ಕ್ಕೂ ಹೆಚ್ಚು ಎಕರೆ ಕಬ್ಬು ಬೆಂಕಿಗೆ ಆಹುತಿಯಾದ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಂದೂರಟೇಕ ಗ್ರಾಮದಲ್ಲಿ ನಡೆದಿದೆ.

    ಇಂದು ಮಧ್ಯಾಹ್ನದ ವೇಳೆ ಚಂದೂರಟೇಕ ಗ್ರಾಮದ ಕಬ್ಬಿನ ಗದ್ದೆಯಲ್ಲಿದ್ದ ಟ್ರಾನ್ಸ್‌ಫಾರ್ಮರ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿತ್ತು. ಬಳಿಕ ಸುತ್ತಲಿದ್ದ ಗ್ರಾಮದ ಸುಕುಮಾರ ಚೌಗಲೆ, ಮಹಾವೀರ ಚೌಗಲೆ, ಧನಂಜಯ ಚೌಗಲೆ,ಬಾಳಾಸಾಬ ಚೌಗಲೆ, ರಾಜು ಚೌಗಲೆ, ಸಾಗರ ಚೌಗಲೆ ಸೇರಿದಂತೆ 7 ಕ್ಕಿಂತ ಹೆಚ್ಚು ರೈತರ 10 ಎಕರೆಗೂ ಅಧಿಕ ಕಬ್ಬು ಸುಟ್ಟು ಕರಕಲಾಗಿದೆ.

    ಬೆಂಕಿಯನ್ನು ಕಂಡು ರೈತರು ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರು ಯಾವುದೇ ಪ್ರಯೋಜನವಾಗಿಲ್ಲ. ನೋಡು ನೋಡುತ್ತಲೇ ಬೆಳೆದು ನಿಂತಿದ್ದ ಕಬ್ಬು ಧಗಧಗನೆ ಉರಿದು ಸುಟ್ಟು ಕರಕಲಾಗಿವೆ. ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

    ಇತ್ತೀಚೆಗೆ ಇದೇ ಗ್ರಾಮದಲ್ಲಿ 60 ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿತ್ತು. ಘಟನೆ ಸಂಬಂಧ ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv