Tag: Harohalli

  • ವರದಕ್ಷಿಣೆ ಕಿರುಕುಳದಿಂದ ಪತ್ನಿ ಸಾವು ಪ್ರಕರಣ – ಪತಿಗೆ ಜೀವಾವಧಿ ಶಿಕ್ಷೆ

    ವರದಕ್ಷಿಣೆ ಕಿರುಕುಳದಿಂದ ಪತ್ನಿ ಸಾವು ಪ್ರಕರಣ – ಪತಿಗೆ ಜೀವಾವಧಿ ಶಿಕ್ಷೆ

    ರಾಮನಗರ: ವರದಕ್ಷಿಣೆ ಕಿರುಕುಳದಿಂದ ಪತ್ನಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಆರೋಪಿ ಪತಿಗೆ ಜೀವಾವಧಿ ಶಿಕ್ಷೆ ಪ್ರಕಟ ಮಾಡಿ ಕನಕಪುರದ 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯವು ಆದೇಶ ಹೊರಡಿಸಿದೆ.

    ಕಳೆದ 2020ರ ಮೇನಲ್ಲಿ ಹಾರೋಹಳ್ಳಿ (Harohalli) ತಾಲೂಕಿನ ಮರಳವಾಡಿ ಗ್ರಾಮದ ಅನಿಲ್ ಎಂಬಾತನ ಪತ್ನಿ ಅಶ್ವಿನಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿಯ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಅಶ್ವಿನಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು. ಇದನ್ನೂ ಓದಿ: ಆನ್‌ಲೈನ್‌ನಲ್ಲಿ ಬುಕ್‌ ಮಾಡಿ – ಪಾರ್ಸೆಲ್ ಪಡೆಯಲು ಮನೆಗೆ ಬರ್ತಾರೆ ಪೋಸ್ಟ್‌ಮ್ಯಾನ್‌!

    ಈ ಬಗ್ಗೆ ಅಶ್ವಿನಿ ಕುಟುಂಬಸ್ಥರು ಅನಿಲ್ ವಿರುದ್ಧ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ವೇಳೆ ಆರೋಪಿ ಅನಿಲ್‌ನನ್ನ ಪೊಲೀಸರು ವಶಕ್ಕೆ ಪಡೆದು, ತನಿಖೆ ನಡೆಸಿ ಸಾಕ್ಷ್ಯಾಧಾರಗಳನ್ನ ಸಂಗ್ರಹಿಸಿದ್ದರು. ಬಳಿಕ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಇದನ್ನೂ ಓದಿ: Plane Crash | ಬ್ಲ್ಯಾಕ್‌ ಬಾಕ್ಸ್‌ಗಳನ್ನು ವಿದೇಶಕ್ಕೆ ಕಳಿಸಿಲ್ಲ: ಸುಳ್ಳು ಸುದ್ದಿ ಹರಡದಂತೆ ಕೇಂದ್ರ ಸರ್ಕಾರ ಮನವಿ

    ಕನಕಪುರದ 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯವು ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿ, ಗುರುವಾರ ತೀರ್ಪು ಪ್ರಕಟ ಮಾಡಿದೆ. ಸಾಕ್ಷ್ಯಾಧಾರಗಳ ಮೂಲಕ ವರದಕ್ಷಿಣೆ ಕಿರುಕುಳ ಆರೋಪ ಸಾಬೀತಾದ ಹಿನ್ನೆಲೆ ಅನಿಲ್‌ಗೆ ಜೀವಾವಧಿ ಶಿಕ್ಷೆ ಹಾಗೂ 35,000 ರೂ. ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ.

  • ಅಯೋಧ್ಯೆ ರಾಮನ ಕಪ್ಪುಶಿಲೆ ಸಿಕ್ಕ ಜಾಗದಲ್ಲಿ ವಿವಾದ – ದಕ್ಷಿಣ ರಾಮಮಂದಿರ ಮಾಡಲು ಮುಂದಾದ ಜಮೀನು ಮಾಲೀಕ

    ಅಯೋಧ್ಯೆ ರಾಮನ ಕಪ್ಪುಶಿಲೆ ಸಿಕ್ಕ ಜಾಗದಲ್ಲಿ ವಿವಾದ – ದಕ್ಷಿಣ ರಾಮಮಂದಿರ ಮಾಡಲು ಮುಂದಾದ ಜಮೀನು ಮಾಲೀಕ

    -ಇತ್ತ ದಲಿತ ಸಂಘಟನೆಗಳಿಂದ ಶಾಲೆ ಕಟ್ಟಲು ಹೋರಾಟ

    ಮೈಸೂರು: ಅಯೋಧ್ಯೆ (Ayodhya) ವಿವಾದದ ಬಳಿಕ ಇದೀಗ ಮೈಸೂರಿನಲ್ಲಿ  (Mysuru) ಮತ್ತೆ ವಿವಾದ ಶುರುವಾಗಿದೆ. ಅಯೋಧ್ಯೆ ರಾಮನನ್ನು ಕೆತ್ತಲು ಬಳಸಿದ ಕಪ್ಪುಶಿಲೆ ಸಿಕ್ಕ ಜಾಗದಲ್ಲಿ ದಕ್ಷಿಣ ರಾಮಮಂದಿರ ಕಟ್ಟಲು ಜಮೀನು ಮಾಲೀಕ ಮುಂದಾಗಿದ್ದಾರೆ. ಆದರೆ ದಲಿತ ಸಂಘಟನೆಗಳನ್ನು ಶಾಲೆ ಕಟ್ಟುತ್ತೇವೆ ಹೊರತಾಗಿ ಮಂದಿರಕ್ಕೆ ಅವಕಾಶ ಕೊಡಲ್ಲ ಎಂದು ಹೋರಾಟ ಆರಂಭಿಸಿದ್ದಾರೆ.

    ಮೈಸೂರು ತಾಲೂಕಿನ ಹಾರೋಹಳ್ಳಿ (Harohalli) ಗ್ರಾಮದ ರಾಮದಾಸ್ ಎಂಬುವವರು ಜಮೀನಿನಲ್ಲಿ ಸಿಕ್ಕಿದ್ದ ಕಪ್ಪುಶಿಲೆಯನ್ನು ಬಳಸಿ ಅಯೋಧ್ಯೆಯ ಬಾಲರಾಮನ ಮೂರ್ತಿಯನ್ನು ಕೆತ್ತಲಾಗಿತ್ತು. ಇದೀಗ ಜಮೀನು ಮಾಲೀಕ ಕಪ್ಪುಶಿಲೆ ಸಿಕ್ಕ ಜಾಗದಲ್ಲಿ ದಕ್ಷಿಣ ರಾಮಮಂದಿರ ಕಟ್ಟಲು ಮುಂದಾಗಿದ್ದು, ಇಂದು ದಕ್ಷಿಣ ಅಯೋಧ್ಯೆ ಹೆಸರಿನಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಶಂಕು ಸ್ಥಾಪನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.ಇದನ್ನೂ ಓದಿ: Delhi Election| ಆಪ್‌ಗಿಂತ ಮೂರು ಪಟ್ಟು ಹೆಚ್ಚು ಖರ್ಚು ಮಾಡಿತ್ತು ಕಾಂಗ್ರೆಸ್‌ – 68 ಮಂದಿಗೆ ಬಿಜೆಪಿಯಿಂದ ತಲಾ 25 ಲಕ್ಷ

    ಆದರೆ ದಲಿತ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿ, ರಾಮಮಂದಿರ ಕಟ್ಟಲು ಬಿಡುವುದಿಲ್ಲ. ಇಲ್ಲಿ ಶಾಲೆ ಕಟ್ಟುತ್ತೇವೆ ಎಂದಿದ್ದಾರೆ. ಬಾಲರಾಮನ ಕಪ್ಪುಶಿಲೆ ಸಿಕ್ಕ ಜಾಗದಲ್ಲಿ ಕಾರ್ಯಕರ್ತರು ಬಾವುಟಗಳನ್ನ ನೆಟ್ಟು, ಶಂಕುಸ್ಥಾಪನೆಗೆ ಹಾಕಿದ ಚಪ್ಪರದ ಸುತ್ತ ಬಾವುಟಗಳನ್ನ ಕಟ್ಟಿ ಹೋರಾಟ ನಡೆಸಿದ್ದಾರೆ. ದಿಢೀರ್ ವಿವಾದದ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಜಮೀನು ಮಾಲೀಕ ಶಂಕುಸ್ಥಾಪನೆ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ.

    ಈ ಕುರಿತು ಜಮೀನು ಮಾಲೀಕ ರಾಮದಾಸ್ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿ, ರಾಮಮಂದಿರ ಕಟ್ಟೇ ಕಟ್ಟುತ್ತೇನೆ. ಮಂದಿರ ಕಟ್ಟಬೇಕು ಎಂಬ ಸಂಕಲ್ಪ ಮಾಡಿದ್ದೆ. ಹೀಗಾಗಿ ಅದನ್ನು ಮಾಡಿಯೇ ಮಾಡುತ್ತೇನೆ. ಅದು ನನ್ನ ಜಮೀನು. ದೇವಸ್ಥಾನ ಕಟ್ಟುವುದು, ಬಿಡುವುದು ನನ್ನ ನಿರ್ಧಾರ. ಇದಕ್ಕೆ ಯಾರ ಒಪ್ಪಿಗೆಯೂ ಬೇಡ. ಕೆಲ ಸಂಘಟನೆಗಳು ರಾಮ ಮಂದಿರಕ್ಕೆ ವಿರೋಧ ಮಾಡಿದ್ದಾರೆ. ಅವರಿಂದ ಸಮಾರಂಭಕ್ಕೆ ಬರುವ ಗಣ್ಯರಿಗೆ ಮುಜುಗರ ಆಗುತ್ತದೆ ಎಂದು ಕಾರ್ಯಕ್ರಮ ಮುಂದೂಡಿದ್ದೇವೆ ಎಂದರು.ಇದನ್ನೂ ಓದಿ: ಚಿತ್ತಾಪುರದಲ್ಲಿ ಛಲವಾದಿ ಮೇಲೆ ಹಲ್ಲೆ ಯತ್ನ – ಸಿಎಂ, ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಲಿ; ಕೆ.ಎಸ್ ನವೀನ್

  • Ramanagara | ಸ್ನೇಹಿತನನ್ನು ಕೊಲೆಗೈದ ಪ್ರಕರಣ – ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, 50,000 ರೂ. ದಂಡ

    Ramanagara | ಸ್ನೇಹಿತನನ್ನು ಕೊಲೆಗೈದ ಪ್ರಕರಣ – ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, 50,000 ರೂ. ದಂಡ

    ರಾಮನಗರ: ಸ್ನೇಹಿತನನ್ನು ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 50,000 ದಂಡ ವಿಧಿಸಿ ರಾಮನಗರ (Ramanagara) ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

    ಹಾರೋಹಳ್ಳಿ (Harohalli) ತಾಲೂಕಿನ ಕೊಟ್ಟಗಾಳು ಗ್ರಾಮದಲ್ಲಿ 2018ರಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಅಣ್ಣಯ್ಯಪ್ಪ ಎಂಬಾತನನ್ನು ಸ್ನೇಹಿತರಾದ ಚಿಕ್ಕೇಗೌಡ ಹಾಗೂ ಕುಮಾರ್ ಎಂಬವರು ಕೊಲೆಗೈದಿದ್ದರು. ಚಿಕ್ಕೇಗೌಡ ಪತ್ನಿಯೊಂದಿಗೆ ಅಣ್ಣಯ್ಯಪ್ಪ ಅಸಭ್ಯವಾಗಿ ವರ್ತಿಸಿದ್ದ ಎಂಬ ವಿಚಾರಕ್ಕೆ ಗಲಾಟೆ ನಡೆದಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ ಅಣ್ಣಯ್ಯಪ್ಪನಿಗೆ ಚಾಕು ಇರಿದು ಚಿಕ್ಕೇಗೌಡ ಹಾಗೂ ಕುಮಾರ್ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ಈ ಸಂಬಂಧ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಕಾರ್ಯಾಚರಣೆ ನಡೆಸಿ ಅಪರಾಧಿಗಳನ್ನ ಬಂಧಿಸಲಾಗಿತ್ತು. ಈ ಸಂಬಂಧ ಕನಕಪುರ ಗ್ರಾಮಾಂತರ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಇದನ್ನೂ ಓದಿ: ಲೋಕಸಭೆಯಲ್ಲಿ ಡಿ.16 ಕ್ಕೆ ‘ಒಂದು ದೇಶ, ಒಂದು ಚುನಾವಣೆ’ ಮಸೂದೆ ಮಂಡನೆ

    ಈ ಬಗ್ಗೆ ವಾದ ಪ್ರತಿವಾದ ಆಲಿಸಿದ್ದ ಕೋರ್ಟ್ ಸಾಕ್ಷ್ಯಗಳ ಆಧಾರದ ಮೇಲೆ ಆರೋಪ ಸಾಬೀತಾದ ಹಿನ್ನೆಲೆ ಶಿಕ್ಷೆ ಪ್ರಕಟ ಮಾಡಿದೆ. ಇಬ್ಬರೂ ಆಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 50,000 ದಂಡ ವಿಧಿಸಿ ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಹೆಚ್.ಎನ್.ಕುಮಾರ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: Mandya | ನೀರಿನ ಟ್ಯಾಂಕ್‌ಗೆ ನೇಣು ಬಿಗಿದುಕೊಂಡು ಎಂಜಿನಿಯರ್ ಆತ್ಮಹತ್ಯೆ

  • ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ – ಶೌಚಗುಂಡಿಯಲ್ಲಿ ನವಜಾತ ಶಿಶು ಶವ ಪತ್ತೆ

    ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ – ಶೌಚಗುಂಡಿಯಲ್ಲಿ ನವಜಾತ ಶಿಶು ಶವ ಪತ್ತೆ

    ರಾಮನಗರ: ಜಿಲ್ಲೆಯ ಹಾರೋಹಳ್ಳಿ (Harohalli) ಸಮೀಪದ ದಯಾನಂದ ಆಸ್ಪತ್ರೆಯ ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶು ಶವ ಪತ್ತೆಯಾಗಿರುವ ಅಮಾನವೀಯ ಘಟನೆಯೊಂದು ನಡೆದಿದೆ.

    ಆಸ್ಪತ್ರೆಯ ರೇಡಿಯಾಲಜಿ ಡಿಪಾರ್ಟ್ಮೆಂಟ್ ಬ್ಲಾಕ್‌ನ ಶೌಚಗುಂಡಿಯಲ್ಲಿ ಮಗು ಶವ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಆಗ ತಾನೇ ಜನಿಸಿರುವ ಮಗುವನ್ನು ಟಾಯ್ಲೆಟ್ ಕಮೋಡ್‌ನಲ್ಲಿ ಹಾಕಿ ಫ್ಲಶ್ ಮಾಡಲಾಗಿದೆ.ಇದನ್ನೂ ಓದಿ: ನಾವು ಜೆಡಿಎಸ್ ಶಾಸಕರನ್ನ ಕೊಂಡುಕೊಳ್ಳಲು ಹೋಗಿಲ್ಲ – ಪರಮೇಶ್ವರ್

    ಬಳಿಕ ಶೌಚಾಲಯದಲ್ಲಿ ನೀರು ಹೋಗದೇ ಕಟ್ಟಿಕೊಂಡ ಹಿನ್ನೆಲೆ ಹೌಸ್ ಕೀಪಿಂಗ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಶೌಚಗುಂಡಿಯಲ್ಲಿ ಮಗು ಶವ ಪತ್ತೆಯಾಗಿದೆ. ಮಗು ಜನನವನ್ನ ಮರೆಮಾಚಲು ಯಾರೋ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ.

    ಸದ್ಯ ಈ ಸಂಬಂಧ ಆಸ್ಪತ್ರೆ ವೈದ್ಯರು ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದು, ಮಗುವಿನ ಡಿಎನ್‌ಎ ವರದಿ ಆಧರಿಸಿ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.ಇದನ್ನೂ ಓದಿ: ನಿಮ್ಮ ಹೆಸರಿಗೆ ಕಳಂಕ ತರ್ತೀನಿ- ನಟಿ ದೀಪಿಕಾ ದಾಸ್, ತಾಯಿಗೆ ಬೆದರಿಕೆ

  • ಮೀನು ಹಿಡಿಯಲು ಹೋಗಿ ಬಾಲಕರಿಬ್ಬರ ದಾರುಣ ಸಾವು

    ಮೀನು ಹಿಡಿಯಲು ಹೋಗಿ ಬಾಲಕರಿಬ್ಬರ ದಾರುಣ ಸಾವು

    ರಾಮನಗರ: ಕೆರೆಗೆ ಮೀನು ಹಿಡಿಯಲು ಹೋಗಿದ್ದ ಮೂವರ ಪೈಕಿ ಇಬ್ಬರು ಮಕ್ಕಳು ನೀರು ಪಾಲಾಗಿರುವ ದಾರುಣ ಘಟನೆ ಹಾರೋಹಳ್ಳಿಯ (Harohalli) ಮಾರಸಂದ್ರ ಗ್ರಾಮದಲ್ಲಿ ನಡೆದಿದೆ.

    ಮೃತಪಟ್ಟ ಬಾಲಕರನ್ನು ಪಟ್ಟಣದ ಸರ್ಕಲ್ ನಿವಾಸಿಗಳಾದ ಇಸ್ಮಾಯಿಲ್(13) ಮತ್ತು ಆಫ್ರಿದ್(12) ಎಂದು ಗುರುತಿಸಲಾಗಿದೆ. ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಮೀನು ಹಿಡಿಯುವ ಆಸೆಯಿಂದ ಪಟ್ಟಣದ ಮಸೀದಿ ಸರ್ಕಲ್ ನಿವಾಸಿಗಳಾದ ಮೂವರು ಬಾಲಕರು ಮಾರಸಂದ್ರ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದಾರೆ. ಈ ವೇಳೆ ಒಬ್ಬ ಬಾಲಕ ಕೆರೆಯಲ್ಲಿದ್ದ ಸತ್ತೆಗೆ ಸಿಲುಕಿ ಮುಳುಗುವುದನ್ನು ಕಂಡು ಮತ್ತೊಬ್ಬ ಬಾಲಕ ಆತನನ್ನು ರಕ್ಷಿಸಲು ತೆರಳಿದ್ದಾನೆ. ಇದನ್ನು ಕಂಡ ಇನ್ನೊಬ್ಬ ಬಾಲಕ ಭಯಗೊಂಡು ಓಡಿದ್ದಾನೆ. ಈ ವೇಳೆ ಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ಕೆಲವರು ರಕ್ಷಣೆಗಾಗಿ ಓಡೋಡಿ ಬಂದಿದ್ದಾರೆ. ಆದರೆ ಅಷ್ಟರಲ್ಲೇ ಬಾಲಕರಿಬ್ಬರ ಪ್ರಾಣಪಕ್ಷಿ ಹಾರಿ ಹೋಗಿದೆ. ಇದನ್ನೂ ಓದಿ: ಹೆಂಡತಿ ಇಬ್ಬರು ಮಕ್ಕಳನ್ನು ಕೊಲೆಗೈದು ವ್ಯಕ್ತಿ ನೇಣಿಗೆ ಶರಣು 

    ಈ ಸಂಬಂಧ ಸ್ಥಳೀಯರು ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದು, ಪೊಲೀಸರು ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ (Fire Brigade) ಸಿಬ್ಬಂದಿಗಳ ಸಹಾಯದಿಂದ ಬಾಲಕರಿಬ್ಬರ ಶವವನ್ನು ಹೊರತೆಗೆದಿದ್ದಾರೆ. ಮೃತ ಬಾಲಕರ ಪೋಷಕರು ಮೆಕ್ಕಾ ಮದೀನ ತೀರ್ಥಯಾತ್ರೆಗೆ ತೆರಳಿದ್ದು, ಸಾರ್ವಜನಿಕರು ಘಟನೆ ಕುರಿತು ಮರುಕ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 100 ವರ್ಷದ ಹಳೆಯ ಮರ ಶೆಡ್ ಮೇಲೆ ಬಿದ್ದು 7 ಮಂದಿ ದಾರುಣ ಸಾವು

  • ತಾಲೂಕು ಘೋಷಿಸಿ 8 ತಿಂಗಳು ಕಳೆದಿದ್ರೂ ಹಾರೋಹಳ್ಳಿಗೆ ಸಿಕ್ಕಿಲ್ಲ ಪ್ರಗತಿ ಭಾಗ್ಯ

    ತಾಲೂಕು ಘೋಷಿಸಿ 8 ತಿಂಗಳು ಕಳೆದಿದ್ರೂ ಹಾರೋಹಳ್ಳಿಗೆ ಸಿಕ್ಕಿಲ್ಲ ಪ್ರಗತಿ ಭಾಗ್ಯ

    ರಾಮನಗರ: ಮಾಜಿ ಸಿಎಂ ಕುಮಾರಸ್ವಾಮಿಯವರ ತವರು ಕ್ಷೇತ್ರ ರಾಮನಗರದ ಹಾರೋಹಳ್ಳಿ ಹೋಬಳಿಯ ಅಭಿವೃದ್ದಿಗಾಗಿ ಕಳೆದ ಬಜೆಟ್‍ನಲ್ಲಿ ಗ್ರಾಮ ಪಂಚಾಯತ್ ಅನ್ನು ತಾಲೂಕಾಗಿ ಘೋಷಣೆ ಮಾಡಿದ್ದರು. ಹಾರೋಹಳ್ಳಿ ತಾಲೂಕಾಗಿ ಘೋಷಣೆಯಾಗಿ ಎಂಟು ತಿಂಗಳುಗಳೇ ಕಳೆದಿದ್ದರೂ ತಾಲೂಕು ಎಂದೆನಿಸಿಕೊಳ್ಳಲು ಪ್ರಗತಿ ಮಾತ್ರ ಶೂನ್ಯವಾಗಿದೆ. ತಾಲೂಕಿನ ಬಗ್ಗೆ ಸರ್ಕಾರ ಅಧಿಸೂಚನೆ ಸಹ ನೀಡದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದಾಗ ಸಿಎಂ ಆಗಿದ್ದ ಕುಮಾರಸ್ವಾಮಿಯವರ ಬಜೆಟ್‍ನಲ್ಲಿ ರಾಮನಗರ ಜಿಲ್ಲೆಯ ಜನರಿಗೆ ಅಚ್ಚರಿ ಕಾದಿತ್ತು. ಸಾತನೂರು ಹೋಬಳಿಯನ್ನ ತಾಲೂಕಾಗಿ ಘೋಷಣೆ ಮಾಡುತ್ತಾರೆ ಎಂಬ ನಿರೀಕ್ಷೆಗೆ ಬದಲಾಗಿ ಅನಿರೀಕ್ಷಿತವಾಗಿ ಹಾರೋಹಳ್ಳಿ ಹೋಬಳಿಯನ್ನ ತಾಲೂಕಾಗಿ ಘೋಷಣೆ ಮಾಡಲಾಗಿತ್ತು. ಅದು ಕೂಡಾ ಗ್ರಾಮ ಪಂಚಾಯತ್‍ನ್ನ ತಾಲೂಕಾಗಿ ಘೋಷಣೆ ಮಾಡಿದ್ದು ಸಾಕಷ್ಟು ಚರ್ಚೆಗೂ ಕೂಡಾ ಗ್ರಾಸವಾಗಿತ್ತು. ಆದರೆ ತಾಲೂಕಾಗಿ ಘೋಷಣೆಯಾಗಿ 8 ತಿಂಗಳೇ ಕಳೆದಿದ್ದರೂ ಯಾವುದೇ ಪ್ರಗತಿಯ ಬೆಳವಣಿಗೆ ಮಾತ್ರ ನಡೆದಿಲ್ಲ. ಅಷ್ಟೇ ಏಕೆ ಜಿಲ್ಲಾಡಳಿತದಿಂದ ತಾಲೂಕಾಗಿ ಮೇಲ್ದರ್ಜೆಗೆ ಏರಿಸಿ ಪೂರಕವಾಗಿ ಕಚೇರಿ ಹಾಗೂ ವಾತಾವರಣ ಕಲ್ಪಿಸಲು ಸರ್ಕಾರದಿಂದ ಇಲ್ಲಿಯ ತನಕ ಯಾವುದೇ ಅಧಿಸೂಚನೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೂಡಾ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಸುಮ್ಮನಾಗಿರೋದು ಹಾರೋಹಳ್ಳಿ ತಾಲೂಕು ಹೋರಾಟ ಸಮಿತಿಯ ಹೋರಾಟಗಾರರನ್ನು ಸಿಡಿದೆಬ್ಬಿಸಿದೆ.

    ಜಿಲ್ಲೆಯ ಕನಕಪುರ ತಾಲೂಕಿನ ಹಾರೋಹಳ್ಳಿ ಏಷ್ಯಾದ ದೊಡ್ಡ ಕೈಗಾರಿಕಾ ಪ್ರದೇಶ ಹೊಂದಿರುವ ಹೆಗ್ಗಳಿಕೆಯನ್ನ ಹೊಂದಿದೆ. ಕಳೆದ ಬಜೆಟ್‍ನಲ್ಲಿ ಎಚ್‍ಡಿಕೆಯವರು ತಮ್ಮ ಕ್ಷೇತ್ರದ ಋಣ ತೀರಿಸಲು ಹಾರೋಹಳ್ಳಿಗೆ ಮರಳವಾಡಿ ಹಾಗೂ ಹಾರೋಹಳ್ಳಿ ಹೋಬಳಿಗಳನ್ನು ಸೇರಿಸಿ ತಾಲೂಕಾಗಿ ಘೋಷಿಸಿದ್ದರು. ಹಾರೋಹಳ್ಳಿಯಲ್ಲಿ ಒಟ್ಟು 39 ಕಂದಾಯ ಗ್ರಾಮಗಳಿದ್ದು, 63 ದಾಖಲೆ ಗ್ರಾಮಗಳಿವೆ. ಇತ್ತ ಮರಳವಾಡಿ ಹೋಬಳಿಯಲ್ಲಿ ಒಟ್ಟು 46 ಕಂದಾಯ ಗ್ರಾಮಗಳು, 118 ದಾಖಲೆ ಗ್ರಾಮಗಳಿದ್ದು, ಎರಡು ಹೋಬಳಿಗಳಿಂದ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ.

    ಈಗಾಗಲೇ ತಾಲೂಕಿಗೆ ಬೇಕಾದ ಅಗತ್ಯ ಮಾಹಿತಿಗಳನ್ನು ಜಿಲ್ಲಾಡಳಿತದಿಂದ ಸರ್ಕಾರಕ್ಕೆ ರವಾನಿಸಲಾಗಿದೆ. ಆದರೂ ಕೂಡಾ ತಾಲೂಕಿಗೆ ಬೇಕಾದ ಸವಲತ್ತು ಕಲ್ಪಿಸಲು ಸರ್ಕಾರದಿಂದ ಅಧಿಕೃತ ಅಧಿಸೂಚನೆ ಮಾತ್ರ ಸಿಕ್ಕಿಲ್ಲ. ಕುಮಾರಸ್ವಾಮಿಯವರು ಕಾಟಾಚಾರಕ್ಕೆ ತಾಲೂಕು ಎಂದು ಘೋಷಣೆ ಮಾಡಿದ್ದಾರೆ. ಪತಿ, ಪತ್ನಿ ಇಬ್ಬರಿಂದ ನಯಾಪೈಸೆಯ ಕೆಲಸವಾಗದಿದ್ದರು ರಾಮನಗರ ಜನತೆ ಜೊತೆಗೆ ನಾವಿದ್ದೇವೆ ಎನ್ನಲು ತಾಲೂಕು ಘೋಷಣೆ ಮಾಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

    ತಾಲೂಕು ವ್ಯಾಪ್ತಿಗೆ ಸೇರುವ ಪರಿಮಿತಿಯನ್ನ ಈಗಾಗಲೇ ಜಿಲ್ಲಾಡಳಿತ ಗುರುತಿಸಿದ್ದು, ಸರ್ಕಾರದಿಂದ ಅಧಿಸೂಚನೆ ಬಂದ ಬಳಿಕ ಕಚೇರಿಗಳ ಸ್ಥಳಾಂತರ ಹಾಗೂ ತಾಲೂಕು ಕಚೇರಿ ನಿರ್ಮಿಸಲು ಜಿಲ್ಲಾಡಳಿತ ನಿರ್ಧರಿಸಿದೆ.