Tag: harley davidson

  • Harley-Davidson Pan America 1250 ಅಡ್ವೆಂಚರ್‌ ಸ್ಪೆಷಲ್‌ ಬೈಕ್‌ ಭಾರತದಲ್ಲಿ ಬಿಡುಗಡೆ

    Harley-Davidson Pan America 1250 ಅಡ್ವೆಂಚರ್‌ ಸ್ಪೆಷಲ್‌ ಬೈಕ್‌ ಭಾರತದಲ್ಲಿ ಬಿಡುಗಡೆ

    ವಾಷಿಂಗ್ಟನ್‌/ನವದೆಹಲಿ: ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿ ಹಾರ್ಲೆ-ಡೇವಿಡ್ಸನ್‌ (Harley Davidson) ತನ್ನ ನವೀಕರಿಸಿದ ಪ್ಯಾನ್‌ ಅಮೆರಿಕ 1250 (Pan America 1250) ಅಡ್ವೆಂಚರ್‌ ಟೂರರ್‌ ಬೈಕ್‌ (Bike) ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.

    ನವೀಕರಿಸಿದ ಈ ಬೈಕ್‌ ಬೆಲೆಯು 24.49 ಲಕ್ಷ ರೂ. (ಎಕ್ಸ್‌ ಶೋರೂಮ್‌ ಪ್ರಕಾರ) ಇರಲಿದ್ದು, ಸ್ಪೆಷಲ್ ಬೈಕ್ ಅನ್ನು ಈಗ ಕೇವಲ ಟಾಪ್-ಆಫ್-ಲೈನ್ ವಿಶೇಷ ಟ್ರಿಮ್‌ನಲ್ಲಿ ನೀಡಲಾಗುತ್ತದೆ. ಪ್ಯಾನ್‌ ಅಮೆರಿಕ 1250 ಬೈಕ್‌ ಯಾವುದೇ ತಾಂತ್ರಿಕ ಬದಲಾವಣೆ ಹೊಂದಿರುವುದಿಲ್ಲ, ಆದರೆ ಹೊಸ ರೂಪಾಂತರದಲ್ಲಿ ಭಾರತದಲ್ಲಿ ಲಭ್ಯವಿದೆ. ಇದನ್ನೂ ಓದಿ: ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ಪಡೆದ ಫೋಕ್ಸ್‌ವ್ಯಾಗನ್ ವರ್ಟಸ್, ಸ್ಕೋಡಾ ಸ್ಲಾವಿಯಾ

    ವಿಶೇಷತೆ ಏನು?
    ಅಡ್ವೆಂಚರ್ ಅಲಾಯ್ ವ್ಹೀಲ್ ಮತ್ತು ಸ್ಪೋಕ್‌ ವ್ಹೀಲ್‌ ಆಯ್ಕೆಗಳೊಂದಿಗೆ ಲಭ್ಯವಿದ್ದು, ಸುಮಾರು 1 ಲಕ್ಷ ರೂ.ನ ಟ್ಯೂಬ್‌ಲೆಸ್ ಟೈರ್‌ಗಳನ್ನ ಒಳಗೊಂಡಿದೆ. ಡ್ಯುಯಲ್‌ ಟೋನ್ ಬಣ್ಣದ ಆಯ್ಕೆಗಳನ್ನ ಒಳಗೊಂಡಿದೆ. ಇದನ್ನೂ ಓದಿ: ಇಂದಿನಿಂದ ಟೊಯೋಟಾ ಇನ್ನೋವಾ ಬುಕ್ಕಿಂಗ್ ಸ್ಥಗಿತ

    ಇನ್ನೂ ಎಂಜಿನ್‌ಗೆ ಸಂಬಂಧಿಸಿದಂತೆ ನೋಡುವುದಾದರೆ ಹಾರ್ಲೆ-ಡೇವಿಡ್‌ಸನ್ ಪ್ಯಾನ್ ಅಮೆರಿಕ 1250 ಬೈಕ್ 1,252 ಸಿಸಿ ವಿ-ಟ್ವಿನ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8,750 RPMನಲ್ಲಿ 151 BHP ಪವರ್ ಮತ್ತು 6,750 RPMನಲ್ಲಿ 128 NM ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಿದೆ. ಇದರೊಂದಿಗೆ ಎಲೆಕ್ಟ್ರಾನಿಕ್ ಲಿಂಕ್ ಬ್ರೇಕಿಂಗ್ ಸಿಸ್ಟಮ್, ಹಿಲ್ ಹೋಲ್ಡ್ ಕಂಟ್ರೋಲ್ (Hill hold Control), ಕ್ರೂಸ್ ಕಂಟ್ರೋಲ್ ಮತ್ತು ಎಂಜಿನ್‌ ಬ್ರೇಕಿಂಗ್ ಕಂಟ್ರೋಲ್ ಸೇರಿದಂತೆ ಹಲವಾರು ಎಲೆಕ್ಟ್ರಾನಿಕ್ ಸಾಧನಗಳನ್ನ ಒಳಗೊಂಡಿದೆ.

  • ವಿಶ್ವಾದ್ಯಂತ 2.38 ಲಕ್ಷ ಬೈಕ್‍ಗಳನ್ನು ಹಿಂಪಡೆದುಕೊಂಡ ಹಾರ್ಲೆ ಡೇವಿಡ್ಸನ್!

    ವಿಶ್ವಾದ್ಯಂತ 2.38 ಲಕ್ಷ ಬೈಕ್‍ಗಳನ್ನು ಹಿಂಪಡೆದುಕೊಂಡ ಹಾರ್ಲೆ ಡೇವಿಡ್ಸನ್!

    ನವದೆಹಲಿ: ಐಶಾರಾಮಿ ಬೈಕು ತಯಾರಿಕಾ ಸಂಸ್ಥೆ ಹಾರ್ಲೆ ಡೇವಿಡ್ಸನ್ ವಿಶ್ವಾದ್ಯಂತ ತನ್ನ 2.38 ಲಕ್ಷ ಬೈಕ್‍ಗಳನ್ನು ಗ್ರಾಹಕರಿಂದ ಹಿಂದಕ್ಕೆ ಪಡೆದುಕೊಳ್ಳುತ್ತಿದೆ.

    ಹಾರ್ಲೆ ಡೇವಿಡ್ಸನ್ ತನ್ನ 2017-18ರಲ್ಲಿ ತಯಾರಿಸಿದ್ದ 2,38,300 ಬೈಕುಗಳನ್ನು ವಿಶ್ವಾದ್ಯಂತ ಹಿಂಪಡೆದುಕೊಳ್ಳುತ್ತಿದೆ. ಬೈಕ್‍ಗಳಲ್ಲಿರುವ ಕ್ಲಚ್ ನಲ್ಲಿರುವ ತಾಂತ್ರಿಕ ದೋಷವನ್ನು ಸರಿಪಡಿಸಲು ವಾಪಸ್ಸು ಪಡೆದಿದೆ. ಸತತ ನಾಲ್ಕನೇ ಬಾರಿಗೆ ಕ್ಲಚ್ ಸಮಸ್ಯೆಯಿಂದ ಬೈಕುಗಳನ್ನು ಹಾರ್ಲೆ ಡೇವಿಡ್ಸನ್ ಹಿಂಪಡೆದುಕೊಳ್ಳುತ್ತಿದೆ. 2017-18ರ ಟೂರಿಂಗ್, ಟ್ರೈಕ್ ಹಾಗೂ ಸಿವಿಓ ಟೂರಿಂಗ್ ಮಾದರಿಯ ಬೈಕ್‍ಗಳನ್ನು ಹಿಂಪಡೆದುಕೊಂಡಿದ್ದರೆ, 2017ರ ಸಾಫ್ಟೇಲ್ ಮಾದರಿಯನ್ನು ಹಿಂದಕ್ಕೆ ಪಡೆದಿದೆ.

    ಈ ಕುರಿತು ಹಾರ್ಲೆ ಡೇವಿಡ್ಸನ್ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಜಾನ್ ಓಲಿನ್, ನಮ್ಮ ಸವಾರರ ಸುರಕ್ಷತೆಯ ದೃಷ್ಟಿಯಿಂದ, ಬೈಕ್‍ಗಳಲ್ಲಿನ ಕ್ಲಚ್‍ಗೆ ಸಂಬಂಧಿಸಿದ ತಾಂತ್ರಿಕ ದೋಷವನ್ನು ಸರಿಪಡಿಸಲು ಬೈಕ್‍ಗಳನ್ನು ಹಿಂಪಡೆದುಕೊಳ್ಳುತ್ತಿದ್ದೇವೆ. ವಾಹನ ವಿತರಕ ಸಂಸ್ಥೆಗಳ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

    ಈ ಹಿಂದೆಯೂ ಸಹ ಹಲವು ಬಾರಿ ಹಾರ್ಲೆ ಡೇವಿಡ್ಸನ್ ಬೈಕ್‍ಗಳನ್ನು ಹಿಂಪಡೆದುಕೊಂಡಿತ್ತು. 2013ರಲ್ಲಿಯೂ ಕ್ಲಚ್ ಸಂಬಂಧಿಸಿದ ಸಮಸ್ಯೆಯಿಂದ 29,046 ಬೈಕ್‍ಗಳನ್ನು ಹಿಂಪಡೆದುಕೊಂಡಿದ್ದರೆ, 2015ರಲ್ಲಿ 45,901 ಬೈಕ್‍ಗಳನ್ನು ಹಿಂಪಡೆದುಕೊಂಡಿತ್ತು. ಇದಲ್ಲದೇ 2016ರಲ್ಲಿಯೂ ಸಹ ಕ್ಲಚ್ ಸಮಸ್ಯೆಯಿಂದ ತನ್ನ 14 ಮಾದರಿಯ 27,232 ಬೈಕ್‍ಗಳನ್ನು ಹಿಂಪಡೆದು ಸರಿಪಡಿಸಿ ಕೊಟ್ಟಿತ್ತು.

    2013ರಿಂದಲೂ ಕ್ಲಚ್‍ಗೆ ಸಂಬಂಧಿಸಿದಂತೆ ಹಾರ್ಲೆ ಡೇವಿಡ್ಸನ್ ಬೈಕ್‍ಗಳಲ್ಲಿ ಸಮಸ್ಯೆ ಕಂಡುಬರುತ್ತಿದೆ. ಇದಕ್ಕಾಗಿ ಹಲವು ರೀತಿಯ ತಾಂತ್ರಿಕ ಬದಲಾವಣೆಗಳನ್ನು ಸಂಸ್ಥೆ ಮಾಡುತ್ತಲೇ ಬಂದಿದೆ. ಮಾಸ್ಟರ್ ಸಿಲಿಂಡರ್ ಗೆ ಕ್ಲಚ್‍ಗಳು ಸರಿಯಾದ ಸ್ಪಂದನೆ ನೀಡದೇ ಇರುವುದರಿಂದ ತಾಂತ್ರಿಕ ದೋಷ ಎದುರಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಿರೀಟ ಹೆಲ್ಮೆಟ್ ಆಗಲ್ಲ: ಕಿರೀಟ ಹಾಕ್ಕೊಂಡು ಹ್ಯಾರ್ಲಿ ಡೇವಿಡ್‍ಸನ್ ಓಡಿಸಿದ ನಟ ಮುಖೇಶ್ ರಿಶಿಗೆ ದಂಡ

    ಕಿರೀಟ ಹೆಲ್ಮೆಟ್ ಆಗಲ್ಲ: ಕಿರೀಟ ಹಾಕ್ಕೊಂಡು ಹ್ಯಾರ್ಲಿ ಡೇವಿಡ್‍ಸನ್ ಓಡಿಸಿದ ನಟ ಮುಖೇಶ್ ರಿಶಿಗೆ ದಂಡ

    ನವದೆಹಲಿ: ಹೆಲ್ಮೆಟ್ ಧರಿಸದೇ ರಾವಣನ ವೇಷಭೂಷಣದಲ್ಲಿ ಹ್ಯಾರ್ಲಿ ಡೇವಿಡ್‍ಸನ್ ಬೈಕ್ ಚಾಲನೆ ಮಾಡಿದ ನಟ ಮುಖೇಶ್ ರಿಶಿಗೆ ದೆಹಲಿ ಪೊಲೀಸರು ದಂಡ ವಿಧಿಸಿದ್ದಾರೆ.

    ದೆಹಲಿ ರಾಮ್‍ಲೀಲಾದಲ್ಲಿ ರಾವಣನ ಪಾತ್ರ ನಿರ್ವಹಿಸಿದ ನಟ ಮುಖೇಶ್ ರಿಶಿ ಹೆಲ್ಮೆಟ್ ಬದಲು ಕಿರೀಟ ಧರಿಸಿ ಬೈಕ್ ಚಾಲನೆ ಮಾಡಿದ್ದಕ್ಕೆ ದೆಹಲಿ ಟ್ರಾಫಿಕ್ ಪೊಲೀಸರು ದಂಡ ಹಾಕಿದ್ದಾರೆ. ರಾವಣನ ಅವತಾರದಲ್ಲಿ ನಟ ರಿಶಿ ರಾಷ್ಟ್ರಪತಿ ಭವನದ ಮುಂದೆ ಹ್ಯಾರ್ಲಿ ಡವಿಡ್‍ಸನ್ ಬೈಕ್ ಚಾಲನೆ ಮಾಡುವ ವಿಡಿಯೋ ವೈರಲ್ ಆಗಿತ್ತು. ಇದರಿಂದ ಪೊಲೀಸರು ನಟನಿಗೆ ನೋಟೀಸ್ ನೀಡುವಂತೆ ಮಾಡಿದೆ.

    ಅಲ್ಲದೆ ಟ್ರಾಫಿಕ್ ಪೊಲೀಸರು ವಿಡಿಯೋ ಮಾಡಿ ತೋಡಾಪುರ್‍ನ ರೋಡ್ ಅಂಡ್ ಸೇಫ್ಟಿ ಸೆಲ್ ಮುಖ್ಯ ಕಚೇರಿಗೆ ಕಳಿಸಿದ್ದರು. ವಾಹನ ಮಾಲೀಕರನ್ನು ಪತ್ತೆ ಮಾಡಿದ ನಂತರ ಅವರ ವಾಹನ ನೋಂದಣಿ ಸಂಖ್ಯೆಗೆ ನೋಟಿಸ್ ನೀಡಿದ್ದೇವೆ. ಸಂಚಾರಿ ನಿಯಮವನ್ನ ಉಲ್ಲಂಘನೆ ಮಾಡಿದ್ದು, ಇದಕ್ಕೆ ದಂಡ ಹಾಕಿರುವುದಾಗಿ ತಿಳಿಸಿದ್ದೇವೆ ಎಂದು ಡಿಸಿಪಿ ದಿನೇಶ್ ಗುಪ್ತಾ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ನಟ ರಿಶಿ ದೆಹಲಿ ಟ್ರಾಫಿಕ್ ಪೊಲೀಸ್ ಮುಖ್ಯಕಚೇರಿಗೆ ಭೇಟಿ ನೀಡಿ 100 ರೂ. ದಂಡವನ್ನ ಪಾವತಿಸಿದ್ದಾರೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂಬುದನ್ನು ತೋರಿಸಲೆಂದೇ ಈ ರೀತಿ ಮಾಡಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಪ್ರತಿ ವರ್ಷ ದಸರಾ ಹಬ್ಬಕ್ಕೆ ಲವ ಕುಶ ಸಮಿತಿ ಕೆಂಪು ಕೋಟೆ ಮೈದಾನದಲ್ಲಿ ದೆಹಲಿ ರಾಮ್‍ಲೀಲಾ ಕಾರ್ಯಕ್ರಮವನ್ನ ಆಯೋಜಿಸುತ್ತದೆ. 1924ರಿಂದ ನಡೆಸಿಕೊಂಡು ಬಂದಿರುವ ಈ ಕಾರ್ಯಕ್ರಮದಲ್ಲಿ ಪ್ರತಿ ವರ್ಷ ಪ್ರಧಾನ ಮಂತ್ರಿ ಸೇರಿದಂತೆ ಹಿರಿಯ ನಾಯಕರು ಭಾಗವಹಿಸುತ್ತಾರೆ.

    61 ವರ್ಷದ ನಟ ರಿಶಿ ಹಲವಾರು ಬಾಲಿವುಡ್ ಸಿನಿಮಾಗಳಲ್ಲಿ ಖಳನಟನ ಪಾತ್ರ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ರಾವಣನ ಪಾತ್ರ ಮಾಡಿದ್ದರು. ರಿಶಿ ಕನ್ನಡದಲ್ಲಿ ದರ್ಶನ್ ಅಭಿನಯದ ಭೂಪತಿ ಚಿತ್ರ ಸೇರಿದಂತೆ ಇನ್ನೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.