Tag: Harjeet Singh

  • ನಾವೆಲ್ಲರೂ ನಿಮ್ಮೊಂದಿಗಿದ್ದೇವೆ- ಹರ್ಜಿತ್ ಸಿಂಗ್‍ಗೆ ಧನ್ಯವಾದ ತಿಳಿಸಿದ ಯುವಿ

    ನಾವೆಲ್ಲರೂ ನಿಮ್ಮೊಂದಿಗಿದ್ದೇವೆ- ಹರ್ಜಿತ್ ಸಿಂಗ್‍ಗೆ ಧನ್ಯವಾದ ತಿಳಿಸಿದ ಯುವಿ

    ನವದೆಹಲಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ದುಷ್ಕರ್ಮಿಗಳ ದಾಳಿಯಿಂದ ಕೈ ಕಳೆದುಕೊಂಡಿದ್ದ ಪಂಜಾಬ್‍ನ ಪೊಲೀಸ್ ಅಧಿಕಾರಿ ಹರ್ಜಿತ್ ಸಿಂಗ್ ಅವರನ್ನು ಬೆಂಬಲಿಸಿ ಭಾರತೀಯ ತಂಡದ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಹರ್ಜಿತ್ ಸಿಂಗ್ ಅವರ ಶೌರ್ಯ ಮತ್ತು ಉತ್ಸಾಹಕ್ಕೆ ಧನ್ಯವಾದ ತಿಳಿಸಲು ಪಂಜಾಬ್ ಪೊಲೀಸರು ಸೋಮವಾರ ‘ಮೇನ್ ಭೀ ಹರ್ಜಿತ್ ಸಿಂಗ್’ ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಪಂಜಾಬ್ ಪೊಲೀಸ್ ಇಲಾಖೆಯ ಎಲ್ಲ ಸಿಬ್ಬಂದಿ ಮತ್ತು ಅಧಿಕಾರಿಗಳು ಹರ್ಜಿತ್ ಸಿಂಗ್ ಹೆಸರಿರುವ ಬ್ಯಾಡ್ಜ್ ಅನ್ನು ತಮ್ಮ ಸಮವಸ್ತ್ರದ ಮೇಲೆ ಹಾಕಿಕೊಂಡಿದ್ದರು.

    ಇದೇ ಅಭಿಯಾನದಲ್ಲಿ ಅಡಿ 2011ರ ಟೀಂ ಇಂಡಿಯಾ ವಿಶ್ವ ಚಾಂಪಿಯನ್ ತಂಡದ ಆಲ್‍ರೌಂಡರ್ ಯುವಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. “ನಮ್ಮ ಪಂಜಾಬ್ ಪೊಲೀಸರ ಬಗ್ಗೆ ನನಗೆ ಹೆಮ್ಮೆ ಇದೆ. ಅವರು ತಮ್ಮ ಜೀವನವನ್ನು ಲೆಕ್ಕಿಸದೇ ನಮ್ಮನ್ನು ರಕ್ಷಿಸುತ್ತಿದ್ದಾರೆ. ಪಂಜಾಬ್‍ನ ಪ್ರತಿಯೊಬ್ಬರು ಹರ್ಜಿತ್ ಸಿಂಗ್ ಅವರೊಂದಿಗಿದೆ. ನಾನು ಕೂಡ ಅವರೊಂದಿಗೆ ಇದ್ದೇನೆ” ಎಂದು ಯುವರಾಜ್ ಹೇಲಿದ್ದಾರೆ.

    “ಹರ್ಜಿತ್ ಸಿಂಗ್ ಅವರ ಧೈರ್ಯ ಮತ್ತು ಪರಿಶ್ರಮ ದೇಶಾದ್ಯಂತ ಅನೇಕರಿಗೆ ಸ್ಫೂರ್ತಿ ನೀಡಿದೆ. ಎಲ್ಲಾ ಪೊಲೀಸ್ ಪಡೆಗಳಿಗೆ ತುಂಬು ಹೃದಯದ ಧನ್ಯವಾದಗಳು. ನಾವೆಲ್ಲರೂ ನಿಮ್ಮೊಂದಿಗಿದ್ದೇವೆ” ಎಂದು ಯುವಿ ತಿಳಿಸಿದ್ದಾರೆ.

    https://twitter.com/YUVSTRONG12/status/1255164717854715904

    ಏನಿದು ಪ್ರಕರಣ?
    ಲಾಕ್‍ಡೌನ್ ಸಮಯದಲ್ಲಿ ಆದೇಶ ಉಲ್ಲಂಘಿಸಿ ಕಾರಿನಲ್ಲಿ ಅಲೆದಾಡುತ್ತಿದ್ದ ನಿಹಾಂಗ್ ಗುಂಪನ್ನ ಪೊಲೀಸರು ತಡೆದಿದ್ದರು. ಏಪ್ರಿಲ್ 12ರಂದು ಕರ್ತವ್ಯದಲ್ಲಿದ್ದ ಹರ್ಜಿತ್ ಸಿಂಗ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ನಿಹಾಂಗ್ ಗುಂಪು ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ಘಟನೆಯಲ್ಲಿ ಹರ್ಜಿತ್ ಸಿಂಗ್ ತಮ್ಮ ಕೈ ಕಳೆದುಕೊಂಡಿದ್ದರು.

    ಗಾಯಗೊಂಡಿದ್ದ ಹರ್ಜಿತ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಕೈ ತುಂಡಾಗಿದ್ದ ಕಾರಣ ಸತತ ಏಳುವರೆ ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿದ್ದ ವೈದ್ಯರು ಮತ್ತೆ ಕೈ ಜೋಡಿಸಲು ಯಶಸ್ವಿಯಾಗಿದ್ದರು. ಕಳೆದ 2 ವಾರಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಸದ್ಯ ಚೇತರಿಸಿಕೊಂಡಿದ್ದಾರೆ.

    ಇತ್ತೀಚಿಗೆ ತಮ್ಮ ಆರೋಗ್ಯ ಕುರಿತು ಪ್ರತಿಕ್ರಿಯೆ ನೀಡಿದ್ದ ಹರ್ಜಿತ್ ಸಿಂಗ್, ಚಿಕಿತ್ಸೆ ನೀಡಿದ ವೈದ್ಯರ ತಂಡಕ್ಕೆ ಧನ್ಯವಾದ ತಿಳಿಸಿದ್ದರು. ಈ ಕುರಿತು ವಿಡಿಯೋ ಟ್ವೀಟ್ ಮಾಡಿದ್ದ ಪಂಜಾಬ್ ಸಿಎಂ ಅಮರಿಂದರ್ ಸಿಂಗ್, ಹರ್ಜಿತ್ ಸಿಂಗ್ ಸದ್ಯ ತಮ್ಮ ಕೈಯನ್ನು ಮತ್ತೆ ಅಲುಗಾಡಿಸಲು ಯಶಸ್ವಿಯಾಗಿದ್ದಾರೆ ಎಂದು ಬರೆದಕೊಂಡು ಕೊಂಡಿದ್ದರು.

  • ಕರ್ಫ್ಯೂ ಪಾಸ್ ತೋರಿಸು ಎಂದಿದ್ದಕ್ಕೆ ಎಎಸ್‍ಐ ಕೈ ಕತ್ತರಿಸಿದ ಗುಂಪು

    ಕರ್ಫ್ಯೂ ಪಾಸ್ ತೋರಿಸು ಎಂದಿದ್ದಕ್ಕೆ ಎಎಸ್‍ಐ ಕೈ ಕತ್ತರಿಸಿದ ಗುಂಪು

    – ಗುರುದ್ವಾರದಲ್ಲಿ ಬಚ್ಚಿಟ್ಟುಕೊಂಡಿದ್ದ 9 ಮಂದಿ ಅರೆಸ್ಟ್
    – ಪಿಸ್ತೂಲ್, ಸೇಬರ್, ಪೆಟ್ರೋಲ್ ಬಾಂಬ್, 7 ಚೀಲ ಗಾಂಜಾ ವಶ

    ಪಟಿಯಾಲ: ಕರ್ಫ್ಯೂ ಪಾಸ್ ತೋರಿಸುವಂತೆ ಒತ್ತಾಯಿಸಿದ್ದಕ್ಕೆ ನಿಹಾಂಗ್ ಸಿಖ್ಖರ ಗುಂಪೊಂದು ಪೊಲೀಸರ ಮೇಲೆ ಹಲ್ಲೆ ನಡೆಸಿ, ಓರ್ವ ಅಧಿಕಾರಿಯ ಕೈ ಕತ್ತರಿಸಿದ ಘಟನೆ ಪಂಜಾಬ್‍ನ ಪಟಿಯಾಲ ಜಿಲ್ಲೆಯಲ್ಲಿ ನಡೆದಿದೆ.

    ನಿಹಾಂಗ್‍ನ ಎಎಸ್‍ಐ ಹರ್ಜಿತ್ ಸಿಂಗ್ ಅವರ ಕೈಯನ್ನು ವ್ಯಕ್ತಿಯೊಬ್ಬ ಕತ್ತರಿಸಿದ್ದಾನೆ. ಅಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದ ಹರ್ಜಿತ್ ಸಿಂಗ್ ಜೇಬಿನಿಂದ ಕರವಸ್ತ್ರವನ್ನು ತೆಗೆದುಕೊಂಡು ಅವರ ಕೈಗೆ ಕಟ್ಟಿದ್ದರು. ಗಾಯವಾಗಿದ್ದರೂ ಹರ್ಜಿತ್ ಸಿಂಗ್ ದೀರ್ಘಕಾಲ ಸ್ಥಳದಲ್ಲಿಯೇ ಇದ್ದರು. ಸ್ವಲ್ಪ ಸಮಯದ ನಂತರ ಓರ್ವ ಕತ್ತರಿಸಿ ಬಿದ್ದಿದ್ದ ಕೈಯನ್ನು ಅವರಿಗೆ ಕೊಟ್ಟನು. ಆಗ ಹರ್ಜಿತ್ ಸಿಂಗ್ ಅವರು ಮತ್ತೊಂದು ಕೈಯಲ್ಲಿ ಹಿಡಿದುಕೊಂಡು ದ್ವಿಚಕ್ರದಲ್ಲಿ ಆಸ್ಪತ್ರೆಗೆ ಹೋದರು ಎಂದು ವರದಿಯಾಗಿದೆ.

    ಎಎಸ್‍ಐ ಹರ್ಜಿತ್ ಸಿಂಗ್ ಅವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಪಟಿಯಾಲದಿಂದ ಚಂಡೀಗಢ ಆಸ್ಪತ್ರೆಗೆ ದಾಖಲಿಸಿಲಾಗಿದೆ. ನಿಹಾಂಗ್ ಸಿಖ್ಖರು ನಡೆಸಿದ ದಾಳಿಯಲ್ಲಿ ಪೊಲೀಸ್ ಅಧಿಕಾರಿ ಬಿಕರ್ ಸಿಂಗ್ ಮತ್ತು ಓರ್ವ ಪೇದೆ ಸಹ ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ ಈವರೆಗೆ 9 ಜನರನ್ನು ಬಂಧಿಸಲಾಗಿದೆ.

    ಈ ಕುರಿತು ಮಾಹಿತಿ ನೀಡಿರುವ ಎಸ್‍ಪಿ ಮಂದೀಪ್ ಸಿಂಗ್ ಸಿಧು, ಮಂಡಿ ಬೋರ್ಡ್ ಠಾಣೆಯ ಪೊಲೀಸರು ಪಟಿಯಾಲದ ತರಕಾರಿ ಮಾರುಕಟ್ಟೆಯ ಬಳಿ ನಿಯೋಜನೆಗೊಂಡಿದ್ದರು. ಈ ವೇಳೆ ಇಂದು ಬೆಳಗ್ಗೆ ಆರು ಗಂಟೆಗೆ ಐವರಿಂದ ಆರು ಜನರಿದ್ದ ವಾಹನವನ್ನು ಅವರು ತಡೆದು ಲಾಕ್‍ಡೌನ್ ಪಾಸ್ ತೋರಿಸುವಂತೆ ಒತ್ತಾಯಿಸಿದ್ದರು. ಆಗ ಗುಂಪು ತರಕಾರಿ ಮಾರುಕಟ್ಟೆಯ ಸಿಬ್ಬಂದಿಯೊಂದಿಗೆ ಜಗಳ ಆರಂಭಿಸಿತ್ತು. ಅಷ್ಟೇ ಅಲ್ಲದೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಬ್ಯಾರಿಕೇಡ್ ಅನ್ನು ಮುರಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಈ ವೇಳೆ ಅಲ್ಲಿ ನಿಂತಿದ್ದ ಪೊಲೀಸರು ವಾಹವನ್ನು ಸುತ್ತುವರಿದರು. ಪೊಲೀಸರು ವಾಹನವನ್ನು ನಿಲ್ಲಿಸಿದ ಕೂಡಲೇ ಕತ್ತಿ, ಮಾರಕಾಸ್ತ್ರಗಳನ್ನು ಎತ್ತಿಕೊಂಡ ಗುಂಪು ದಾಳಿ ನಡೆಸಿ, ಎಎಸ್‍ಐ ಹರ್ಜಿತ್ ಸಿಂಗ್ ಅವರ ಕೈ ಕತ್ತರಿಸಿ ಪರಾರಿಯಾಗಿತ್ತು ಎಂದು ತಿಳಿಸಿದ್ದಾರೆ.

    ನಿಹಾಂಗ್ ಬಾಲ್‍ಬರಾ ಪ್ರದೇಶದ ಗುರುದ್ವಾರದಲ್ಲಿ ಆರೋಪಿಗಳು ಅಡಗಿಕೊಂಡಿದ್ದರು. ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಬೆನ್ನಟ್ಟುವ ಮೂಲಕ ಗುರುದ್ವಾರವನ್ನು ತಲುಪಿದರು. ಪಟಿಯಾಲ ವಲಯದ ಐ.ಜಿ.ಜತೀಂದರ್ ಸಿಂಗ್ ಅವರು ನಿಹಾಂಗ್‍ಗಳನ್ನು ಶರಣಾಗುವಂತೆ ಎಚ್ಚರಿಸಿದರು. ಆದರೆ ಅವರು ಗುರುದ್ವಾರದ ಒಳಗಿನಿಂದ ಪೊಲೀಸರಿಗೆ ಬೆದರಿಕೆ ಹಾಕಲು ಪ್ರಾರಂಭಿಸಿದರು. ಅವರು ಒಳಗಿನಿಂದಲೂ ಗುಂಡು ಹಾರಿಸಿದರು. ನಂತರ ಕಮಾಂಡೋ ತಂಡವನ್ನು ಗುರುದ್ವಾರದೊಳಗೆ ಕಳುಹಿಸಲಾಯಿತು.

    ಗುರುದ್ವಾರದ ಒಳಗೆ ಸ್ಥಳೀಯ ಪಿಸ್ತೂಲ್, ಸೇಬರ್, ಪೆಟ್ರೋಲ್ ಬಾಂಬ್, 7 ಚೀಲ ಗಾಂಜಾ ಮತ್ತು ದೊಡ್ಡ ಪ್ರಮಾಣದ ರಾಸಾಯನಿಕ ತರಹದ ದ್ರವವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಟ್ಟು 9 ಜನರನ್ನು ಬಂಧಿಸಲಾಗಿದೆ ಎಂದು ಎಸ್‍ಪಿ ಮಂದೀಪ್ ಸಿಂಗ್ ಸಿಧು ಹೇಳಿದ್ದಾರೆ. ಶಸ್ತ್ರಾಸ್ತ್ರಗಳಲ್ಲದೆ, ಅವರಿಂದಲೂ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈವರೆಗೆ 35 ಲಕ್ಷ ರೂ.ಗಳು ಸಿಕ್ಕಿದ್ದು, ಇನ್ನೂ ಕಾರ್ಯಾಚರಣೆ ನಡೆದಿದೆ.

    ಪಟಿಯಾಲದಲ್ಲಿ ನಡೆದ ಘಟನೆ ದುರದೃಷ್ಟಕರ ಎಂದು ಪಂಜಾಬ್ ಡಿಜಿಪಿ ದಿನಕರ್ ಗುಪ್ತಾ ಹೇಳಿದ್ದಾರೆ. ಗಾಯಗೊಂಡ ಎಎಸ್‍ಐಗೆ ಚಿಕಿತ್ಸೆ ನೀಡಲು ಪಿಜಿಐಎಂಆರ್ ನ ಉನ್ನತ ಪ್ಲಾಸ್ಟಿಕ್ ಸರ್ಜನ್ ಅವರನ್ನು ನೇಮಿಸಲಾಗಿದೆ.