Tag: HariShukla

  • ಭಾರತೀಯ ಮೂಲದ ದಂಪತಿಗೆ ಸಿಕ್ತು ವಿಶ್ವದ ಮೊದಲ ಕೋವಿಡ್‌ ಲಸಿಕೆ

    ಭಾರತೀಯ ಮೂಲದ ದಂಪತಿಗೆ ಸಿಕ್ತು ವಿಶ್ವದ ಮೊದಲ ಕೋವಿಡ್‌ ಲಸಿಕೆ

    ಲಂಡನ್‌: ಇಂಗ್ಲೆಂಡ್‌ನಲ್ಲಿ ಫೈಝರ್‌/ಬಯೋಎನ್‌ಟೆಕ್‌ ಕೊರೊನಾ ಲಸಿಕೆಯನ್ನು ಜನರಿಗೆ ನೀಡಲಾಗುತ್ತಿದ್ದು, ಮೊದಲ ಬ್ಯಾಚ್‌ನಲ್ಲಿ ಭಾರತೀಯ ಮೂಲದ ದಂಪತಿಗೆ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.

    ಟೈನ್ ಮತ್ತು ವೇರ್ ನಿವಾಸಿಯಾಗಿರುವ 87 ವರ್ಷದ ಡಾ. ಹರಿ ಶುಕ್ಲಾ ಮತ್ತು ಅವರ ಪತ್ನಿ ರಂಜನ ಅವರು ಕೋವಿಡ್‌ ಲಸಿಕೆಯನ್ನು ಪಡೆದಿದ್ದಾರೆ. ನ್ಯೂಕ್ಯಾಸಲ್‌ ಆಸ್ಪತ್ರೆಯಲ್ಲಿ ಮಂಗಳವಾರ ದಂಪತಿಗೆ ಇಂಜೆಕ್ಷನ್‌ ಚುಚ್ಚುವ ಮೂಲಕ ಕೋವಿಡ್‌ ಲಸಿಕೆಯನ್ನು ನೀಡಲಾಯಿತು.

    ಹರಿ ಶುಕ್ಲಾ, ಮತ್ತು ಅವರ ಪತ್ನಿ ರಂಜನ ಅವರು ನಮ್ಮ ಆಸ್ಪತ್ರೆಯಲ್ಲಿ ಲಸಿಕೆ ಪಡೆದಿದ್ದಾರೆ. ಲಸಿಕೆ ಪಡೆಯುತ್ತಿರುವ ವಿಶ್ವದ ಮೊದಲ ವ್ಯಕ್ತಿಗಳು ಇವರು ಎಂದು ನ್ಯೂಕ್ಯಾಸಲ್ ಆಸ್ಪತ್ರೆ ಟ್ವೀಟ್‌ ಮಾಡಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಹರಿ ಶುಕ್ಲಾ, ಫೋನ್‌ ಕರೆಯ ಮೂಲಕ ಈ ವಿಚಾರ ತಿಳಿದಾಗ ನನಗೆ ಬಹಳ ಸಂತಸವಾಯಿತು. ಕೋವಿಡ್‌ ಲಸಿಕೆಯ ಎರಡು ಡೋಸ್‌ ಪೈಕಿ ಮೊದಲ ಡೋಸ್‌ ಸ್ವೀಕರಿಸಲಿದ್ದೇನೆ. ಇದು ನನ್ನ ಕರ್ತವ್ಯ’ ಎಂದು ಹೇಳಿದ್ದಾರೆ.

    ಮುಂದಿನ ದಿನಗಳಲ್ಲಿ ಈ ಸಾಂಕ್ರಾಮಿಕ ಸೋಂಕು ಕೊನೆಗೊಳ್ಳಲಿದೆ ಎಂಬ ವಿಶ್ವಾಸದಲ್ಲಿದ್ದೇನೆ. ಲಸಿಕೆ ತೆಗೆದುಕೊಳ್ಳಲು ನನಗೆ ಯಾವುದೇ ಭಯವಿಲ್ಲ. ಲಸಿಕೆಯನ್ನು ಪಡೆಯುವ ಮೂಲಕ ನಾನು ಸೋಂಕನ್ನು ತಡೆಯುವಲ್ಲಿ ಸಣ್ಣ ಕೆಲಸವನ್ನು ಮಾಡುತ್ತಿರುವುದಕ್ಕೆ ಸಂತಸವಿದೆ ಎಂದು ಹೇಳಿದರು.

    ಇನ್ನೊಂದೆಡೆ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು, ಇದನ್ನು ದೊಡ್ಡ ಹೆಜ್ಜೆ ಎಂದು ಬಣ್ಣಿಸಿದ್ದಾರೆ. ಅಲ್ಲದೆ ಈ ದಿನವನ್ನು ‘ವಿ ಡೇ’ ಅಥವಾ ಬ್ರಿಟನ್‌ನ ‘ವ್ಯಾಕ್ಸಿನ್‌ ಡೇ’ ಎಂದು ಕರೆದಿದ್ದಾರೆ.

    ಆರಂಭದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ, 80 ವರ್ಷ ಮೇಲ್ಪಟ್ಟವರಿಗೆ, ಆರೈಕಾ ಕೇಂದ್ರಗಳಲ್ಲಿ ಇರುವ ಮಂದಿಗೆ ಲಸಿಕೆ ನೀಡಲಾಗುತ್ತದೆ. 2 ವಾರಗಳಲ್ಲಿ ಇವರಿಗೆಲ್ಲ ನೀಡಿದ ಮೇಲೆ ಈಗಾಗಲೇ ಗುರುತಿಸಿರುವ ಪ್ರಾಶಸ್ತ್ಯದ ಗುಂಪುಗಳಿಗೆ ಹಂಚಿಕೆ ಮಾಡಲಾಗುತ್ತದೆ.

    75 ಮತ್ತು ಮೇಲ್ಪಟ್ಟು, 70 ಮತ್ತು ಮೇಲ್ಪಟ್ಟು, 65 ಮೇಲ್ಪಟ್ಟು, 16 ರಿಂದ 64 ವರ್ಷವದರಿಗೆ ಅವರ ಆರೋಗ್ಯ ಸ್ಥಿತಿಯನ್ನು ನೋಡಿಕೊಂಡು ನೀಡಲಾಗುತ್ತದೆ. ಆರಂಭದಲ್ಲಿ 8 ಲಕ್ಷ ಲಸಿಕೆ ಬರಲಿದ್ದು, ಇದು 4 ಲಕ್ಷ ಮಂದಿಗೆ ಸಾಕಾಗುತ್ತದೆ.

    ತಾನು ತಯಾರಿಸಿದ ಕೊರೊನಾ ಲಸಿಕೆ ಶೇ. 95ರಷ್ಟು ಪರಿಣಾಮಕಾರಿಯಾಗಿದೆ ಎಂದು ನ.18 ರಂದು ಫೈಝರ್ ಕಂಪನಿ ಅಧಿಕೃತವಾಗಿ ತಿಳಿಸಿತ್ತು. ಈ ಹೇಳಿಕೆಯ ಬೆನ್ನಲ್ಲೇ ಇಂಗ್ಲೆಂಡ್‌ ಸರ್ಕಾರ ಇಂದಿನಿಂದಲೇ ಲಸಿಕೆ ವಿತರಿಸಲು ಮುಂದಾಗಿದೆ.