Tag: Haridik Patel

  • ಸಾರ್ವಜನಿಕ ಸಮಾರಂಭದಲ್ಲಿ ಹಾರ್ದಿಕ್ ಪಟೇಲ್‍ಗೆ ಕಪಾಳಮೋಕ್ಷ

    ಸಾರ್ವಜನಿಕ ಸಮಾರಂಭದಲ್ಲಿ ಹಾರ್ದಿಕ್ ಪಟೇಲ್‍ಗೆ ಕಪಾಳಮೋಕ್ಷ

    ಗಾಂಧಿನಗರ: ಗುಜರಾತ್ ಸ್ಟಾರ್ ಪ್ರಚಾರಕ, ಕಾಂಗ್ರೆಸ್ ಪಕ್ಷದ ನಾಯಕ ಹಾರ್ದಿಕ್ ಪಟೇಲ್‍ಗೆ ವ್ಯಕ್ತಿಯೊರ್ವ ಸಾರ್ವಜನಿಕ ಸಮಾರಂಭದಲ್ಲಿ ಕಪಾಳಮೊಕ್ಷ ಮಾಡಿರುವ ಘಟನೆ ಸುರೇಂದ್ರ ನಗರ್ ಜಿಲ್ಲೆಯಲ್ಲಿ ನಡೆದಿದೆ.

    ಹಾರ್ದಿಕ್ ಪಟೇಲ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ತರುಣ್ ಗಜ್ಜಿರ್ ಎಂದು ಗುರುತಿಸಲಾಗಿದ್ದು, ಪಟೇಲ್ ಸಾರ್ವಜನಿಕರ ಸಮಾರಂಭದ ಮೇಲೆ ಭಾಷಣ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ. ಏಕಾಏಕಿ ವೇದಿಕೆಯನ್ನು ಹತ್ತಿದ್ದ ತರುಣ್ ನೇರ ಹಾರ್ದಿಕ್ ಪಟೇಲ್ ಬಳಿ ತೆರಳಿ ಹಲ್ಲೆ ನಡೆಸಿದ್ದಾನೆ.

    ಹಾರ್ದಿಕ್ ಮೇಲೆ ಹಲ್ಲೆ ನಡೆಯುತ್ತಿದಂತೆ ಎಚ್ಚೆತ್ತ ಕಾರ್ಯಕರ್ತರು ಕೂಡಲೇ ವೇದಿಕೆ ಮೇಲೆ ಆಗಮಿಸಿ ಆತನನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಿ ದೂರು ನೀಡಿದ್ದಾರೆ. ವ್ಯಕ್ತಿಯ ವೇದಿಕೆಗೆ ಬಂದು ಹಲ್ಲೆ ನಡೆಸುತ್ತಿದಂತೆ ಹಾರ್ದಿಕ್ ಕ್ಷಣಕಾಲ ಶಾಕ್‍ಗೆ ಗುರಿಯಾದಂತೆ ಕಂಡು ಬಂತು.

    ಇತ್ತ ಪೊಲೀಸರು ತರುಣ್‍ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ತರುಣ್, ಪಾಟೀದರ್ ಸಮುದಾಯದ ಮೀಸಲಾತಿ ಹೋರಾಟ ನಡೆಯುವ ವೇಳೆ ನನ್ನ ಪತ್ನಿ ಗರ್ಭಿಣಿಯಾಗಿದ್ದಳು. ಆಸ್ಪತ್ರೆಗೆ ದಾಖಲಿಸಿದ್ದು ಕೂಡ ಬಂದ್ ನಡೆದಿದ್ದ ಕಾರಣ ಔಷಧಿಗಳು ಲಭ್ಯವಾಗದೇ ಸಮಸ್ಯೆ ಎದುರಿಸಿದ್ದೆ. ಅಲ್ಲದೇ ಪತ್ನಿ ಮಗುವಿಗೆ ಜನ್ಮ ನೀಡಿದ ಬಳಿಕವೂ ಆದೇ ಸಮಸ್ಯೆ ಮುಂದುವರಿದಿತ್ತು. ಅಂದೇ ಈತನಿಗೆ ಸೂಕ್ತ ಬುದ್ಧಿ ಕಲಿಸಲು ನಿರ್ಧರಿಸಿ ಈ ಕೃತ್ಯ ನಡೆಸಿದ್ದಾಗಿ ತಿಳಿಸಿದ್ದಾನೆ.

    ಇತ್ತ ಗುರುವಾರದಂದು ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಪಕ್ಷದ ವಕ್ತಾರ ಜಿವಿಎಲ್ ನರಸಿಂಹ ರಾವ್ ಅವರಿಗೆ ವ್ಯಕ್ತಿಯೊಬ್ಬ ಶೂ ಎಸೆದಿದ್ದ ಘಟನೆ ನಡೆದಿತ್ತು. ಮಾಲೆಂಗಾವ್ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಅವರು ಬಿಜೆಪಿಗೆ ಸೇರ್ಪಡೆಯಾಗಿ ಭೋಪಾಲ್‍ನಿಂದ ಸ್ಪರ್ಧೆ ನಡೆಸುವ ವಿಚಾರ ಸಂಬಂಧ ಜಿವಿಎಲ್ ರಾವ್ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿತ್ತು.

    ಮಾರ್ಚ್ ತಿಂಗಳಿನಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದ ಹಾರ್ದಿಕ್ ಪಟೇಲ್ 2015ರಲ್ಲಿ ನಡೆದ ಪಾಟೀದಾರ್ ಮೀಸಲಾತಿ ಹೋರಾಟದ ಮೂಲಕ ಮುನ್ನೆಲೆಗೆ ಬಂದಿದ್ದರು.

  • ಗುಜರಾತ್ ಚುನಾವಣೆ-ಹಾರ್ದಿಕ್ ಪಟೇಲ್‍ಗೆ ಆಹ್ವಾನ ನೀಡಿದ ಕಾಂಗ್ರೆಸ್

    ಗುಜರಾತ್ ಚುನಾವಣೆ-ಹಾರ್ದಿಕ್ ಪಟೇಲ್‍ಗೆ ಆಹ್ವಾನ ನೀಡಿದ ಕಾಂಗ್ರೆಸ್

    ಗಾಂಧಿನಗರ: ಗುಜರಾತ್ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು ಸಾಧಿಸಲು ಶತಯಗಾತಯ ನಿರ್ಧರಿಸಿದಂತಿದ್ದು, ಹೊಸ ಬೆಳವಣಿಗೆಯೊಂದರಲ್ಲಿ ಗುಜರಾತ್ ಜಾಟ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್ ಅವರಿಗೆ ಪಕ್ಷಕ್ಕೆ ಆಹ್ವಾನವನ್ನು ನೀಡಿದೆ.

    ಹಾರ್ದಿಕ್ ಪಟೇಲ್ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ತೀರ್ಮಾನವನ್ನು ಕೈಗೊಂಡರೆ ಪಕ್ಷದಿಂದ ಟಿಕೆಟ್ ನೀಡುವುದಾಗಿಯು ತಿಳಿಸಿದ್ದು, ಪಟೇಲ್ ಅವರ ಹೋರಾಟ ಹಾಗೂ ಬೇಡಿಕೆಗಳಿಗೆ ನಮ್ಮ ಬೆಂಬಲವಿದೆ ಎಂದು ಕಾಂಗ್ರೆಸ್ ತಿಳಿಸಿದೆ.

    ಗುಜರಾತ್ ಚುನಾವಣೆಯನ್ನು ಪ್ರತಿಷ್ಠೆಯ ಕಣವಾಗಿ ಸ್ವೀಕರಿಸಿರುವ ಕಾಂಗ್ರೆಸ್, ರಾಜ್ಯದ ಪ್ರಬಲ ಸಮುದಾಯದ ನಾಯಕರನ್ನು ಭೇಟಿ ಮಾಡಿ ಬೆಂಬಲವನ್ನು ಕೋರಿದೆ. ಪ್ರಮುಖವಾಗಿ ಪಟೇಲ್ ಸಮುದಾಯಕ್ಕೆ ಮೀಸಲಾತಿಯನ್ನು ಕೋರಿ ಹೋರಾಟವನ್ನು ನಡೆಸಿದ್ದ ಹಾರ್ದಿಕ್ ಪಟೇಲ್, ಠಾಕೋರ್ ಸಮುದಾಯದ ನಾಯಕರದ ಅಲ್ಪೇಸ್ ಠಾಕೋರ್ ಮತ್ತು ದಲಿತ ಸಮುದಾಯದ ನಾಯಕರಾದ ಜಿಗ್ನೇಶ್ ಮೇವಾನಿ ಅವರ ಬೆಂಬಲವನ್ನು ಪಡೆದು ಆಡಳಿತರೂಢ ಬಿಜೆಪಿ ಸರ್ಕಾರವನ್ನು ಸೋಲಿಸಲು ಕಾರ್ಯ ತಂತ್ರರೂಪಿಸಿದೆ.

    ಕಾಂಗ್ರೆಸ್ ಪ್ರಬಲ ಸಮುದಾಯಗಳ ಬೆಂಬಲ ಮಾತ್ರವಲ್ಲದೆ, ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಳ್ಳುವ ಸಾಧ್ಯತೆಗಳಿದ್ದು, ಎನ್‍ಸಿಪಿ ಯ ಶರತ್ ಪವರ್ ಮತ್ತು ಜೆಡಿಯು ನ ವಾಸಾವ ಅವರೊಂದಿಗೆ ಮಾತುಕತೆಯನ್ನು ನಡೆಸಿದೆ. ಈ ಕುರಿತು ಮಾಹಿತಿಯನ್ನು ನೀಡಿದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಭರತೀಶ್ ಸೋಲಂಕಿ, ಈ ಬಾರಿಯ ಚುನಾವಣೆಯಲ್ಲಿ ಸುಲಭವಾಗಿ 125 ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

    ಕೆಲ ದಿನಗಳ ಹಿಂದೆ ಗುಜರಾತ್‍ನಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಹಲವು ನಾಯಕರು ಬಿಜೆಪಿ ಪರ ಮತ ಚಲಾಯಿಸಿದರು ಸಹ ನಂತರದ ಬೆಳವಣಿಗೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವನ್ನು ನೀಡುವುದಾಗಿ ತಿಳಿಸಿದ್ದರು. ಇದರಲ್ಲಿ ಪ್ರಮುಖವಾಗಿ ಜೆಡಿಯು ಎಂಎಲ್‍ಎ ವಾಸಾವ ಬಿಜೆಪಿ ಪಕ್ಷದ ಆಡಳಿತ ಕ್ರಮ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

    ಸೋಲಂಕಿಯವರು ಆಪ್ ಪಕ್ಷ ರಾಜ್ಯ ನಾಯಕರೊಂದಿಗೂ ನಿರಂತರವಾಗಿ ಸಂಪರ್ಕದಲ್ಲಿದ್ದು, ಅವರ ಬೆಂಬಲವನ್ನು ಪಡೆಯುವ ನಿರೀಕ್ಷೆಯನ್ನು ವ್ಯಕ್ತಪಡಿಸಿದರು. ಅಲ್ಲದೇ ಪಕ್ಷದಲ್ಲಿ ಉತ್ತಮ ಹಾಗೂ ಪ್ರಬಲ ಸದಸ್ಯರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ತಿಳಿಸಿದರು. ಗುಜರಾತ್ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಕಳೆದ 22 ವರ್ಷಗಳಿಂದ ಅಧಿಕಾರವನ್ನೇ ಪಡೆದಿಲ್ಲ.