Tag: Haricharan

  • ಹಫ್ತಾ: ನಿರ್ಮಾಪಕ ಮೈತ್ರಿ ಮಂಜುನಾಥ್ ಕಣ್ಣಲ್ಲಿ ಗೆಲುವಿನ ಪ್ರಭೆ!

    ಹಫ್ತಾ: ನಿರ್ಮಾಪಕ ಮೈತ್ರಿ ಮಂಜುನಾಥ್ ಕಣ್ಣಲ್ಲಿ ಗೆಲುವಿನ ಪ್ರಭೆ!

    ವರ್ಧನ್ ತೀರ್ಥಹಳ್ಳಿ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ಚಿತ್ರ ಹಫ್ತಾ. ಪ್ರಕಾಶ್ ಹೆಬ್ಬಾಳ ನಿರ್ದೇಶನದ ಈ ಚಿತ್ರ ವಿಶೇಷವಾದೊಂದು ಕಥೆಯನ್ನು ಹೊಂದಿದೆಯೆಂಬ ಅಂದಾಜು ಈಗಾಗಲೇ ಪ್ರೇಕ್ಷಕರಿಗೆಲ್ಲ ಸಿಕ್ಕಿ ಬಿಟ್ಟಿದೆ. ಯಾವುದೇ ಯಶಸ್ವಿ ಚಿತ್ರ ಬಿಡುಗಡೆಗೂ ಮುಂಚೆಯೇ ಸಕಾರಾತ್ಮಕವಾದ ಟಾಕ್ ಕ್ರಿಯೇಟ್ ಮಾಡುತ್ತವಲ್ಲ? ಆ ರೀತಿಯ ಲಕ್ಷಣಗಳಿಗೆಲ್ಲ ಹಫ್ತಾ ಚಿತ್ರ ರೂವಾರಿಯಾಗಿದೆ. ಇದು ನಿರ್ಮಾಪಕರಾಗಿ ಮೊದಲ ಪ್ರಯತ್ನದಲ್ಲಿಯೇ ಮೈತ್ರಿ ಮಂಜುನಾಥ್ ಅವರಿಗೆ ತುಂಬು ಭರವಸೆಯನ್ನೂ ಹುಟ್ಟಿಸಿದೆ.

    ಮೈತ್ರಿ ಮಂಜುನಾಥ್ ಅವರು ಹಫ್ತಾ ಚಿತ್ರವನ್ನು ಮೈತ್ರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಷ್ಠಿತ ಉದ್ಯಮಿಯಾಗಿ ಗುರುತಿಸಿಕೊಂಡಿರೋ ಮಂಜುನಾಥ್ ಮೈತ್ರಿ ಗ್ರೂಪ್ಸ್ ಮಾಲೀಕರು. ಇದರಡಿಯಲ್ಲಿ ಹಲವಾರು ಉದ್ಯಮಗಳ ಒಡೆಯರಾಗಿರುವ ಅವರ ಪಾಲಿಗೆ ಸಿನಿಮಾ ಮಾಡಬೇಕೆಂಬುದು ಹಳೆಯ ಕನಸು. ಹಾಗಂತ ಅದಕ್ಕೇನೂ ರೂಪುರೇಷೆ ಇಲ್ಲದಿರಲಿಲ್ಲ. ಒಟ್ಟಾರೆ ಒಂದು ಸಿನಿಮಾ ಮಾಡಿ ನಿರ್ಮಾಪಕ ಅನ್ನಿಸಿಕೊಳ್ಳುವ ಯಾವ ಅವಸರವೂ ಅವರಿಗಿರಲಿಲ್ಲ. ಎಲ್ಲ ರೀತಿಯಿಂದಲೂ ತಮಗೆ ಒಪ್ಪಿಗೆಯಾಗುವ, ಕೇಳಿದಾಕ್ಷಣವೇ ಗೆಲುವಿನ ಸೂಚನೆ ಸಿಗುವಂಥಾ ಕಥೆ ಸಿಕ್ಕಿದಾಗಲಷ್ಟೇ ನಿರ್ಮಾಪಕರಾಗಿ ಹೊಸ ಯಾನ ಆರಂಭಿಸಬೇಕೆಂಬ ನಿರ್ಧಾರ ಅವರದ್ದಾಗಿತ್ತು.

    ಇಂಥಾದ್ದೊಂದು ಅಚಲ ನಿರ್ಧಾರಕ್ಕೆ ಹೊಸಾ ಆವೇಗ ಸಿಕ್ಕಿದ್ದು ಎರಡು ವರ್ಷಗಳ ಹಿಂದೆ. ಈ ಸಿನೆಮಾದ ನಿರ್ದೇಶಕ ಪ್ರಕಾಶ್ ಹೆಬ್ಬಾಳ ಮಂಜುನಾಥ್ ಅವರಿಗೆ ಬಹು ಕಾಲದ ಗೆಳೆಯ. ಅದೊಂದು ದಿನ ಎಲ್ಲ ತಯಾರಿ ಮಾಡಿಕೊಂಡು ಬಂದಿದ್ದ ಪ್ರಕಾಶ್ ಹಫ್ತಾ ಚಿತ್ರದ ಕಥೆಯನ್ನು ಮಂಜುನಾಥ್ ಅವರಿಗೆ ಒಪ್ಪಿಸಿದ್ದರಂತೆ. ಪೂರ್ತಿ ಕಥೆ ಕೇಳಿದವರಿಗೆ ತಾನು ನಿರ್ಮಾಪಕನಾಗಿ ಪಾದಾರ್ಪಣೆ ಮಾಡಲು ಇದೇ ಸರಿಯಾದ ಕಥೆ ಅಂತ ಆ ಕ್ಷಣವೇ ಅನ್ನಿಸಿತ್ತಂತೆ. ಈ ಕಾರಣದಿಂದಲೇ ಮೈತ್ರಿ ಪ್ರೊಡಕ್ಷನ್ಸ್ ಅಸ್ತಿತ್ವಕ್ಕೆ ಬಂದು ಹಫ್ತಾ ಚಿತ್ರಕ್ಕೆ ವಿಧ್ಯುಕ್ತ ಚಾಲನೆ ಸಿಕ್ಕಿತ್ತು.

    ಬೆಂಗಳೂರಿನವರೇ ಆದ ಮಂಜುನಾಥ್ ಪಾಲಿಗೆ ಸಿನಿಮಾ ಆಕರ್ಷಣೆ ಇಂದು ನಿನ್ನೆಯದ್ದಲ್ಲ. ಈ ಬಗ್ಗೆ ಅಪಾರ ಕ್ರೇಜ್ ಹೊಂದಿದ್ದ ಅವರು ಕೆಲ ಕಿರು ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಅದನ್ನು ಸಿನಿಮಾ ಮಾಡುವ ತಯಾರಿಯೆಂದೇ ಪರಿಗಣಿಸಿದ್ದರು. ತಾವೊಂದು ಸಿನಿಮಾ ನಿರ್ಮಾಣ ಮಾಡಿದರೆ ಅದು ತಾಂತ್ರಿಕವಾಗಿಯೂ ಶ್ರೀಮಂತಿಕೆಯಿಂದ ಕೂಡಿರಬೇಕೆಂದು ಆಶಿಸಿದ್ದ ಮಂಜುನಾಥ್ ಹಫ್ತಾ ಚಿತ್ರವನ್ನೂ ಕೂಡಾ ಅದರಂತೆಯೇ ರೂಪಿಸಿದ ಖುಷಿ ಹೊಂದಿದ್ದಾರೆ.

    ಹಫ್ತಾ ಚಿತ್ರ ಶುರುವಾದ ಮೊದಲ ದಿನವೇ ನೂರಾರು ಮಂದಿಗೆ ಕೆಲಸ ಕೊಟ್ಟ ತೃಪ್ತ ಭಾವವನ್ನೂ ತುಂಬಿಕೊಂಡಿದ್ದ ಮೈತ್ರಿ ಮಂಜುನಾಥ್ ಪಾಲಿಗೆ ಆರಂಭದಿಂದ ಇಲ್ಲಿಯವರೆಗೂ ಒಳ್ಳೆಯ ಅನುಭವಗಳೇ ಕೈ ಹಿಡಿದಿವೆ. ಆರಂಭದಲ್ಲಿ ಪ್ರಕಾಶ್ ಕಥೆ ಹೇಳುವಾಗ ಇದ್ದ ಫೀಲ್‍ಗೆ ಅನುಗುಣವಾಗಿಯೇ ಚಿತ್ರ ಮೂಡಿ ಬಂದಿರೋದರಿಂದ ಅವರಲ್ಲಿ ಗೆಲ್ಲುವ ಭರವಸೆ ಹೆಚ್ಚಾಗಿದೆ. ಕರಾವಳಿ ತೀರದ ಭೂಗತ ಜಗತ್ತಿನ ಕಥೆಯನ್ನು ವಿಭಿನ್ನವಾಗಿಯೇ ತೆರೆ ಮೇಲೆ ತಂದಿರೋದರ ಬಗ್ಗೆ ಖುಷಿ, ಮತ್ತದು ಎಲ್ಲಾ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ ಎಂಬ ಭರವಸೆ ಮಂಜುನಾಥ್ ಅವರದ್ದು.

    ಇದು ಮೈತ್ರಿ ಮಂಜುನಾಥ್ ನಿರ್ಮಾಣದ ಮೊದಲ ಚಿತ್ರ. ಇದರ ಬಗ್ಗೆ ಈಗ ಅಷ್ಟ ದಿಕ್ಕುಗಳಿಂದಲೂ ಒಳ್ಳೆ ಮಾತುಗಳೇ ಕೇಳಿ ಬರುತ್ತಿವೆ. ಈ ಮೂಲಕವೇ ಪುಷ್ಕಳವಾದ ಗೆಲುವು ದಕ್ಕುತ್ತದೆ ಎಂಬ ಭರವಸೆಯೂ ಗಟ್ಟಿಯಾಗುತ್ತಿದೆ. ಇದುವೇ ಮಂಜುನಾಥ್ ಅವರಲ್ಲಿ ನಿರ್ಮಾಪಕರಾಗಿ ನೆಲೆ ಕಂಡುಕೊಳ್ಳುವ ಇರಾದೆಯನ್ನೂ ಹುಟ್ಟಿಸಿದೆ. ಈಗಾಗಲೇ ಅವರು ಎರಡನೇ ಚಿತ್ರಕ್ಕಾಗಿ ತಯಾರಿ ಆರಂಭಿಸಿದ್ದಾರೆ. ಇದು ಹಫ್ತಾ ಬಿಡುಗಡೆ ಪೂರ್ವದಲ್ಲಿಯೇ ಸೃಷ್ಟಿಸಿರೋ ಕ್ರೇಜ್‍ನ ಪರಿಣಾಮ!

    https://www.youtube.com/watch?v=zZefRDFISRU

  • ಹಫ್ತಾದ ಮೆಲೋಡಿ ಹಾಡು ಬಿಡುಗಡೆಗೊಳಿಸಲಿದ್ದಾರೆ ದುನಿಯಾ ವಿಜಯ್!

    ಹಫ್ತಾದ ಮೆಲೋಡಿ ಹಾಡು ಬಿಡುಗಡೆಗೊಳಿಸಲಿದ್ದಾರೆ ದುನಿಯಾ ವಿಜಯ್!

    ಬೆಂಗಳೂರು: ಪ್ರಕಾಶ್ ಹೆಬ್ಬಾಳ ನಿರ್ದೇಶನದ ಹಫ್ತಾ ಚಿತ್ರವೀಗ ಬಿಡುಗಡೆಯ ಸನ್ನಾಹದಲ್ಲಿದೆ. ಮಾಸ್ ಹಾಗೂ ಕ್ಯಾಚೀ ಟೈಟಲ್ಲಿನ ಮೂಲಕವೇ ಸದ್ದು ಮಾಡುತ್ತಾ ಬಂದಿರೋ ಈ ಚಿತ್ರದ ಆಡಿಯೋ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿ ವ್ಯಾಪಕ ಮೆಚ್ಚುಗೆಯನ್ನೂ ಗಳಿಸಿಕೊಂಡಿದೆ. ಈ ಅಲೆಯಲ್ಲಿಯೇ ವೀಡಿಯೋ ಹಾಡೊಂದನ್ನು ಬಿಡುಗಡೆ ಮಾಡಲು ಚಿತ್ರ ತಂಡ ಸಜ್ಜುಗೊಂಡಿದೆ.

    ಈ ಲಿರಿಕಲ್ ವೀಡಿಯೋ ನಾಳೆ ಸಂಜೆ ಬಿಡುಗಡೆಯಾಗಲಿದೆ. ಇದು ಅಪ್ಪಟ ಮೆಲೋಡಿ ಹಾಡು. ವಿಶೇಷವೆಂದರೆ ಇದನ್ನು ಮಾಸ್ ಹೀರೋ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಅವರು ಬಿಡುಗಡೆಗೊಳಿಸಲಿದ್ದಾರೆ!

    ಈ ಹಾಡಿಗೆ ವಿಜಯ್ ಯಾಡ್ರ್ಲಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಎಂಥವರನ್ನೂ ಮೋಹಕ್ಕೀಡು ಮಾಡುವಂಥಾ ಸಾಲುಗಳನ್ನು ಹೊಂದಿರೋ ಈ ಹಾಡನ್ನು ಅನುರಾಧಾ ಭಟ್ ಮತ್ತು ಹರಿಚರಣ್ ಹಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಆಡಿಯೋ ಬಿಡುಗಡೆಯಾಗಿತ್ತಲ್ಲಾ? ಅದರಲ್ಲಿನ ಎಲ್ಲ ಹಾಡುಗಳೂ ಜನಮಾನಸ ತಲುಪಿಕೊಂಡಿವೆ. ಅದರಲ್ಲಿಯೂ ಟೈಟಲ್ ಸಾಂಗ್ ಅಂತೂ ಟ್ರೆಂಡಿಂಗ್ ನಲ್ಲಿದೆ. ನಾಳೆ ಬಿಡುಗಡೆಯಾಗಲಿರೋ ಈ ಮೆಲೋಡಿ ಲಿರಿಕಲ್ ವೀಡಿಯೋ ಸಾಂಗ್ ಕೂಡಾ ಅಂಥಾದ್ದೇ ಮೋಡಿ ಮಾಡೋ ಭರವಸೆ ಚಿತ್ರತಂಡದಲ್ಲಿದೆ.

    ಈ ಹಿಂದೆ ದಯಾಳ್ ಮತ್ತು ರಮೇಶ್ ಅರವಿಂದ್ ಅವರ ಜೊತೆ ಕೆಲಸ ಮಾಡಿರುವ ಪ್ರಕಾಶ್ ನಿರ್ದೇಶನದ ಮೊದಲ ಚಿತ್ರ ಹಫ್ತಾ. ಮೈತ್ರಿ ಮಂಜುನಾಥ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವರ್ಧನ್ ತೀರ್ಥಹಳ್ಳಿ ಮತ್ತು ರಾಘವ್ ನಾಗ್ ನಾಯಕರಾಗಿ ನಟಿಸಿದ್ದಾರೆ. ಇದುವರೆಗೂ ಹಲವಾರು ಚಿತ್ರಗಳಲ್ಲಿ ಖಳನಾಗಿ ಅಬ್ಬರಿಸಿರುವ ವರ್ಧನ್ ತೀರ್ಥಹಳ್ಳಿ ಈ ಸಿನಿಮಾ ಮೂಲಕ ನಾಯಕನಾಗಿದ್ದಾರೆ. ಕರಾವಳಿ ತೀರದ ಭೂಗತ ಜಗತ್ತಿನ ಕಥೆ ಹೊಂದಿರುವ ಈ ಚಿತ್ರದಲ್ಲಿ ವರ್ಧನ್ ಎರಡು ಶೇಡುಗಳ ಪಾತ್ರದಲ್ಲಿ ಮಿಂಚಿದ್ದಾರಂತೆ.