Tag: Hanur

  • ಜಿಂಕೆ ಮಾಂಸ ಸಾಗಾಟ: ಒಬ್ಬನ ಬಂಧನ, ಮತ್ತೊಬ್ಬ ಪರಾರಿ

    ಜಿಂಕೆ ಮಾಂಸ ಸಾಗಾಟ: ಒಬ್ಬನ ಬಂಧನ, ಮತ್ತೊಬ್ಬ ಪರಾರಿ

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಹಲಗಾಪುರ ಗಸ್ತಿನಲ್ಲಿ ಒಣಗಿಸಿದ್ದ ಜಿಂಕೆ ಮಾಂಸ ಸಾಗಿಸುತ್ತಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.

    ಹನೂರು ತಾಲೂಕಿನ ಕಳ್ಳಿದೊಡ್ಡಿ ಗ್ರಾಮದ ರಾಮಾಚಾರಿ (64) ಬಂಧಿತ ಆರೋಪಿ. ಮತ್ತೊಬ್ಬ ಆರೋಪಿ ಗಾಣಿಗಮಂಗಲ ಗ್ರಾಮದ ಸಣ್ಣಪ್ಪ ಪರಾರಿಯಾಗಿದ್ದಾನೆ. ಸಣ್ಣಪ್ಪ ಶನಿವಾರ ಗಾಣಿಗಮಂಗಲದ ಸಮೀಪದ ಕಾವೇರಿ ವನ್ಯಜೀವಿ ವಿಭಾಗಕ್ಕೆ ಸೇರಿದ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾನೆ. ನಂತರ ಅಲ್ಲಿ ಜಿಂಕೆಯನ್ನು ಭೇಟೆಯಾಡಿ ಅದರ ಮಾಂಸವನ್ನು ಒಣಗಿಸಿ ರಾಮಾಚಾರಿ ಎಂಬಾತನಿಗೆ ನೀಡಿದ್ದಾನೆ. ಇದನ್ನೂ ಓದಿ: ಮಳೆಯಿಂದ ಹಾಸ್ಟೆಲ್ ಜಲಾವೃತ: ರಾತ್ರಿಯಿಡೀ ಛಾವಣಿ ಹತ್ತಿ ಕುಳಿತ ವಿದ್ಯಾರ್ಥಿಗಳು

    ಬೈಕ್‍ನಲ್ಲಿ ಮಾಂಸ ಸಾಗಿಸುತ್ತಿದ್ದ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆಯ ಅಧಿಕಾರಿಗಳು, ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಜಿಂಕೆ ಮಾಂಸ ಹಾಗೂ ಘಟನೆಗೆ ಬಳಸಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ. ತಲೆ ಮರೆಸಿಕೊಂಡಿರುವ ಮತ್ತೊಬ್ಬ ಪ್ರಮುಖ ಆರೋಪಿಗಾಗಿ ಅಧಿಕಾರಿಗಳು ಶೋಧ ಮುಂದುವರೆಸಿದ್ದಾರೆ. ಇದನ್ನೂ ಓದಿ: ನಟಿ ವಿಜಯಲಕ್ಷ್ಮಿ ತಾಯಿ ನಿಧನ

  • ಚಾಮರಾಜನಗರಕ್ಕೆ ಬಿಗ್ ರಿಲೀಫ್: ಆತಂಕ ಹುಟ್ಟಿಸಿದ್ದ ಪೇದೆ ಕೊರೊನಾ ನೆಗೆಟಿವ್

    ಚಾಮರಾಜನಗರಕ್ಕೆ ಬಿಗ್ ರಿಲೀಫ್: ಆತಂಕ ಹುಟ್ಟಿಸಿದ್ದ ಪೇದೆ ಕೊರೊನಾ ನೆಗೆಟಿವ್

    ಚಾಮರಾಜನಗರ: ಬೆಂಗಳೂರಿನಿಂದ ಜಿಲ್ಲೆಯ ಹನೂರು ತಾಲೂಕಿನ ಬೆಳ್ತೂರು ಗ್ರಾಮಕ್ಕೆ ಬಂದು ಹೋಗಿದ್ದ ಪೇದೆಯ ಕೋವಿಡ್-19 ಟೆಸ್ಟ್ ರಿಪೋರ್ಟ್ ನೆಗೆಟಿವ್ ಎಂದು ಅಧಿಕೃತವಾಗಿ ಘೋಷಣೆಯಾಗಿದೆ. ಹೀಗಾಗಿ ಚಾಮರಾಜನಗರ ಜಿಲ್ಲೆಯ ಜನರ ಆತಂಕ ದೂರವಾಗಿದೆ.

    ಬೇಗೂರು ಠಾಣೆಯ ಮುಖ್ಯಪೇದೆ ಕುಟುಂಬ ಸಮೇತ ಬೆಳ್ತೂರಿಗೆ ಬಂದಿದ್ದ ವೇಳೆ ಕೊರೊನಾ ಪಾಸಿಟಿವ್ ಸಂಬಂಧ ಹಲವಾರು ಗೊಂದಲಗಳು ಉಂಟಾಗಿದ್ದವು. ಆದರೆ ಈಗ ಅವರ ರಿಪೋರ್ಟ್ ನೆಗೆಟಿವ್ ಎಂದು ಬಂದಿದೆ. ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ 16 ಜನರನ್ನು ಹಾಗೂ ಸೆಕೆಂಡರಿ ಸಂಪರ್ಕದಲ್ಲಿದ್ದ 22 ಜನರನ್ನು ಚಾಮರಾಜನಗರದ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಎಂ.ಆರ್.ರವಿ, ಕೊರೊನಾ ಶಂಕಿತ ಮುಖ್ಯ ಪೇದೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ 16 ಜನರ ಗಂಟಲು ದ್ರವವನ್ನು ಮೈಸೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಈಗ ಅದರ ವರದಿ ನೆಗೆಟಿವ್ ಎಂದು ಬಂದಿದೆ. ಉಳಿದ 22 ಜನರ ಫಲಿತಾಂಶದ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ನೆಗೆಟಿವ್ ಎಂದು ವರದಿ ಬಂದಿರುವ 16 ಜನರನ್ನು ಬೆಳ್ತೂರಿಗೆ ಕಳುಹಿಸಿಕೊಡಲಾಗುತ್ತಿದೆ. ಅವರಿಗೆ ಮನೆಯಲ್ಲೇ 14 ದಿನಗಳ ಕಾಲ ಕ್ವಾರಂಟೈನ್ ಇರುವಂತೆ ತಿಳಿಸಲಾಗಿದೆ ಎಂದರು.

    ಇದಲ್ಲದೇ ಬೆಳ್ತೂರು ಗ್ರಾಮದಲ್ಲಿ ಆತಂಕ ಮನೆ ಮಾಡಿದ್ದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಡಿಸಿ ಎಂ.ಆರ್.ರವಿ, ಎಸ್‍ಪಿ ಆನಂದ್ ಕುಮಾರ್, ಶಾಸಕ ನರೇಂದ್ರ ಭೇಟಿ ನೀಡಿದ ಗ್ರಾಮಸ್ಥರದಲ್ಲಿ ಆತ್ಮಸ್ಥೈರ್ಯ ತುಂಬಿದ್ದಾರೆ. ಪೊಲೀಸ್ ಪೇದೆ ಸೃಷ್ಟಿಸಿದ್ದ ಆತಂಕದಿಂದ ಗಡಿ ಜಿಲ್ಲೆ ನಿರಾಳವಾಗಿದ್ದು, ಕೊರೊನಾ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆಯನ್ನು ಚಾಮರಾಜನಗರ ಮತ್ತೆ ಮುಡಿಗೇರಿಸಿಕೊಂಡಿದೆ.

  • ಬಡ ವಿದ್ಯಾರ್ಥಿನಿಯ ಕನಸಿಗೆ ರೆಕ್ಕೆ ಮೂಡಿಸಿದರು ಬಿಗ್ ಬಾಸ್ ಪ್ರಥಮ್!

    ಬಡ ವಿದ್ಯಾರ್ಥಿನಿಯ ಕನಸಿಗೆ ರೆಕ್ಕೆ ಮೂಡಿಸಿದರು ಬಿಗ್ ಬಾಸ್ ಪ್ರಥಮ್!

    – ಇದು ಎಂಥವರೂ ಮೆಚ್ಚಿಕೊಳ್ಳುವ ಒಂದೊಳ್ಳೆ ಕೆಲಸ!

    ಬೆಂಗಳೂರು: ಕಳೆದ ಸೀಸನ್ನಿನ ಬಿಗ್ ಬಾಸ್ ಶೋ ವಿನ್ನರ್ ಆಗಿದ್ದವರು ಪ್ರಥಮ್. ಹಾಗೆ ಗೆದ್ದುಕೊಂಡ ಐವತ್ತು ಲಕ್ಷ ರೂಪಾಯಿಗಳನ್ನು ಸಮಾಜಮುಖಿಯಾದ ಕೆಲಸ ಕಾರ್ಯಗಳಿಗೆ ಬಳಸೋದಾಗಿ ಪ್ರಥಮ್ ಹೇಳಿಕೊಂಡಿದ್ದರು. ಆ ನಂತರದಲ್ಲಿ ಹಂತ ಹಂತವಾಗಿ ತಮ್ಮ ಮಾತಿಗೆ ಬದ್ಧವಾಗಿ ಮನ್ನಡೆಯುತ್ತಾ ಬಂದಿದ್ದ ಪ್ರಥಮ್ ಅವರೀಗ ನಿಜಕ್ಕೂ ಸಾರ್ಥಕವೆಂಬಂಥಾ ಕೆಲಸವೊಂದನ್ನು ಮಾಡಿದ್ದಾರೆ. ಬಡತನದ ಬೇಗೆಯಿಂದಾಗಿ ವಿದ್ಯಾಭ್ಯಾಸವನ್ನು ದ್ವಿತೀಯ ಪಿಯುಸಿಗೇ ಮೊಟಕುಗೊಳಿಸಿಕೊಳ್ಳುವ ಸ್ಥಿತಿಯಲ್ಲಿದ್ದ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳಿಗೆ ಪ್ರಥಮ್ ಆರ್ಥಿಕ ಸಹಾಯ ಮಾಡಿದ್ದಾರೆ. ಆಕೆಯ ಓದಿನ ಬಾಬತ್ತನ್ನು ತಾವೇ ಭರಿಸುವ ವಾಗ್ದಾನ ನೀಡುವ ಮೂಲಕ ಎಲ್ಲರೂ ಮೆಚ್ಚುವಂಥಾ ಕೆಲಸ ಮಾಡಿದ್ದಾರೆ.

    ಹೀಗೆ ಪ್ರಥಮ್ ಅವರ ಮಾನವೀಯ ಸಹಾಯದಿಂದಲೇ ಮುರುಟಿ ಹೋಗುವಂತಿದ್ದ ಕನಸು ಮತ್ತೆ ಚಿಗುರಿದ ಸಂಭ್ರಮದಲ್ಲಿರುವಾಕೆ ಪ್ರತಿಭಾವಂತ ವಿದ್ಯಾರ್ಥಿನಿ ಮೇಘ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಹಲಗಾಪುರ ಗ್ರಾಮದ ಚಾಮರಾಜು ಮತ್ತು ರತ್ನಮ್ಮ ದಂಪತಿಯ ಪುತ್ರಿ ಮೇಘಾ, ದ್ವಿತೀಯ ಪಿಯುಸಿಯಲ್ಲಿ 91.5 ಪರ್ಸೆಂಟೇಜು ಅಂಕ ಗಳಿಸಿಕೊಂಡಿದ್ದಳು. ಇಲ್ಲಿನ ಬಂಡಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿ 549 ಅಂಕಗಳೊಂದಿಗೆ ಗಮನಾರ್ಹ ಸಾಧನೆ ಮಾಡಿದ್ದರೂ ಹೆತ್ತವರ ಆರ್ಥಿಕ ಸಂಕಷ್ಟವೇ ಮೇಘಾಳ ಓದಿಗೆ ಕಂಟಕವಾಗಿತ್ತು. ಇನ್ನೇನು ಪಿಯುಸಿಗೇ ತನ್ನ ವ್ಯಾಸಂಗ ಮೊಟಕುಗೊಳ್ಳುವ ಭಯ ಈ ವಿದ್ಯಾರ್ಥಿನಿಯನ್ನು ಆವರಿಸಿಕೊಂಡಿತ್ತು.

    ಈ ವಿಚಾರವನ್ನು ಅದು ಹೇಗೋ ತಿಳಿದುಕೊಂಡ ಪ್ರಥಮ್ ಕಳೆದ ಭಾನುವಾರ ಮೇಘಾಳ ಮನೆಗೆ ತೆರಳಿದ್ದಾರೆ. ಹೆತ್ತವರಿಗೆ ಧೈರ್ಯ ತುಂಬಿ, ಮಗಳನ್ನು ಓದಿಸುವಂತೆ ಪ್ರೇರೇಪಿಸಿ ಆರಂಭಿಕವಾಗಿ ಹತ್ತು ಸಾವಿರದಷ್ಟು ಹಣ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಮೇಘಾಳನ್ನು ಪೋಷಕರು ಯಾವ ಕಾಲೇಜಿಗೆ ಸೇರಿಸಿದರೂ ವಿದ್ಯಾಭ್ಯಾಸಕ್ಕೆ ನೆರವಾಗೋದಾಗಿಯೂ ಪ್ರಥಮ್ ವಾಗ್ದಾನ ನೀಡಿದ್ದಾರೆ. `ಮೇಘಾ ಕುಗ್ರಾಮದ ಹುಡುಗಿ. ಮನೆಯಲ್ಲಿ ಅಂಥಾ ಬಡತನವಿದ್ದರೂ ಇಷ್ಟೊಂದು ಅಂಕ ಗಳಿಸಿದ್ದೊಂದು ಸಾಧನೆ. ಈ ಹುಡುಗಿ ಬಡತನದ ಕಾರಣದಿಂದ ವಿದ್ಯಾಭ್ಯಾಸ ಮೊಟಕುಗೊಳಿಸಿಕೊಳ್ಳೋ ಸ್ಥಿತಿ ತಲುಪಿರೋದನ್ನು ಕೇಳಿ ಬೇಸರವಾಯ್ತು. ಆದ್ದರಿಂದಲೇ ಸಹಾಯ ಮಾಡಿದ್ದೇನೆ. ಮುಂದೆಯೂ ಮೇಘಾ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತೇನೆ. ನಾನು ಬಿಗ್ ಬಾಸ್ ಶೋನಲ್ಲಿ ಗೆದ್ದ ಹಣ ಇಂಥಾ ಒಳ್ಳೆ ಕೆಲಸ ಕಾರ್ಯಗಳಿಗೇ ವಿನಿಯೋಗವಾಗಬೇಕೆಂಬುದು ತಮ್ಮ ಮಹದಾಸೆ ಅಂತ ಪ್ರಥಮ್ ಹೇಳಿಕೊಂಡಿದ್ದಾರೆ.

     

    ಈ ಹುಡುಗಿ ಮೇಘಾಳ ಹೆತ್ತವರ ಬಡತನ, ಮನೆ ಕಡೆಯ ಪರಿಸ್ಥಿತಿ ಮತ್ತು ಅದೆಲ್ಲದರಾಚೆಗೂ ಓದಿ ಆಕೆ ಪಡೆದುಕೊಂಡ ಅಂಕಗಳ ವಿವರ ಕೇಳಿದರೆ ಪ್ರಥಮ್ ಸಹಾಯ ಮಾಡಿದ್ದು ಎಂಥಾ ಸಾರ್ಥಕ ಕೆಲಸ ಎಂಬುದು ಯಾರಿಗಾದರೂ ಅರ್ಥವಾಗುತ್ತೆ. ಮೇಘಾಳ ತಂದೆ ಚಾಮರಾಜ ಮಡಿವಾಳ ಸಮುದಾಯದವರು. ಈ ಕುಲಕಸುಬನ್ನು ಮಾಡುತ್ತಾ, ಕೂಲಿನಾಲಿ ಮಾಡಿಕೊಂಡು ಹೊಟ್ಟೆ ಹೊರೆಯುತ್ತಿರೋ ಅವರಿಗೆ ಮಡದಿ ರತ್ನಮ್ಮ ಕೂಡಾ ಸಹಾಯಕ್ಕೆ ನಿಂತಿದ್ದಾರೆ. ಈ ದಂಪತಿಗೆ ತಮ್ಮ ಮಗಳು ಮೇಘಾಳನ್ನ ಚೆಂದಗೆ ಓದಿಸಬೇಕೆಂಬ ಬಯಕೆ. ಅದಕ್ಕೆ ಸರಿಯಾಗಿಯೇ ಮೇಘಾ ಕೂಡಾ ಆರಂಭದಿಂದಲೂ ಬುದ್ಧಿವಂತೆ. ಚುರುಕು ಸ್ವಭಾವದ ಮೇಘಾ, ಓದಿನಲ್ಲಿ ಯಾವತ್ತೂ ಹಿಂದೆ ಬಿದ್ದವಳಲ್ಲ.

    ಹೈಸ್ಕೂಲು ದಾಟುತ್ತಿದ್ದಂತೆಯೇ ತಾನೂ ಸಣ್ಣಪುಟ್ಟ ಕೆಲಸ ಮಾಡುತ್ತಲೇ ಓದು ಮುಂದುವರೆಸಿದ್ದ ಮೇಘಾ ಹೈಸ್ಕೂಲು ದಾಟಿ, ಪಿಯುಸಿ ಪೂರೈಸಿದ್ದೇ ಒಂದು ಸಾಹಸ. ಆದರೆ ಹೇಗೋ ಹರಸಾಹಸ ಪಟ್ಟು ಮಗಳನ್ನು ಪಿಯುಸಿವರೆಗೂ ಓದಿಸಿದ್ದ ಚಾಮರಾಜ ಮತ್ತು ರತ್ನಮ್ಮ ದಂಪತಿಗೆ ಮಗಳ ಕಡೆಯಿಂದ ಸಿಹಿಯೇ ಸಿಕ್ಕಿತ್ತು. ಯಾಕೆಂದರೆ ಆಕೆ 549 ಅಂಕ ಗಳಿಸೋ ಮೂಲಕ ಇಡೀ ತಾಲೂಕಿನ ಗಮನ ಸೆಳೆದಿದ್ದಳು. ಆದರೆ ಮಗಳು ಇಷ್ಟು ಚೆಂದಗೆ ಓದುತ್ತಿದ್ದರೂ ಮುಂದೆ ಆಕೆಯನ್ನು ಓದಿಸಲಾಗದ ದುಃಸ್ಥಿತಿಗೆ ಪೋಷಕರು ತಲುಪಿಕೊಂಡಿದ್ದರು. ಇನ್ನೇನು ಮೇಘಾ ಪಾಲಿಗಿನ್ನು ಓದು ಮರೀಚಿಕೆ ಎಂಬಂಥಾ ನಿರ್ಧಾರವೂ ರೂಪುಗೊಂಡಾಗಿತ್ತು.

    ಅಷ್ಟರಲ್ಲಿಯೇ ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿ ಅದು ಪ್ರಥಮ್ ಅವರನ್ನೂ ತಲುಪಿಕೊಂಡಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪ್ರಥಮ್ ಮನೆಗೇ ತೆರಳಿ ಮೇಘಾಳನ್ನು ಮತ್ತೆ ವ್ಯಾಸಂಗದಲ್ಲಿ ಮುಂದುವರೆಯುವಂತೆ ಮಾಡಿದ್ದಾರೆ. ಈ ಮೂಲಕ ಕೂಲಿ ನಾಲಿಯಲ್ಲಿ ಕಳೆದು ಹೋಗುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳ ಬದುಕು ಬೆಳಗಿದ್ದಾರೆ. ಇದು ನಿಜಕ್ಕೂ ಎಲ್ಲರೂ ಮೆಚ್ಚಿಕೊಳ್ಳುವಂಥಾ, ಎಲ್ಲರಿಗೂ ಮಾದರಿಯಾದ ಕೆಲಸ.

  • ಸುಳ್ವಾಡಿ ದುರಂತ- ತಾನು ಕಲ್ಪಿಸಿದ ಮಗುವನ್ನು ತನ್ನ ಸನ್ನಿಧಿಯಲ್ಲೇ ಕಿತ್ತುಕೊಂಡ ಮಾರಮ್ಮ!

    ಸುಳ್ವಾಡಿ ದುರಂತ- ತಾನು ಕಲ್ಪಿಸಿದ ಮಗುವನ್ನು ತನ್ನ ಸನ್ನಿಧಿಯಲ್ಲೇ ಕಿತ್ತುಕೊಂಡ ಮಾರಮ್ಮ!

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಸೇವಿಸಿ 17 ಮಂದಿ ಮೃತಪಟ್ಟಿದ್ದು, ಇದೀಗ ಗರ್ಭಿಣಿಯೊಬ್ಬರಿಗೆ ಗರ್ಭಪಾತವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಹೌದು. ಸ್ಥಳೀಯ ನಿವಾಸಿ ಸೌಂದರ್ಯ ಅವರು ಮಾರಮ್ಮ ದೇವಿಗೆ ಹರಕೆ ಹೊತ್ತ ಬಳಿಕ ಗರ್ಭಿಣಿಯಾಗಿದ್ದು, 3 ತಿಂಗಳು ಆಗಿತ್ತು. ಆದ್ರೆ ಇದೀಗ ಅದೇ ತಾಯಿಯ ಸನ್ನಿಧಿಯಲ್ಲಿ ವಿಷ ಪ್ರಸಾದ ಸೇವಿಸಿದ್ದರಿಂದ ಅವರಿಗೆ ಗರ್ಭಪಾತವಾಗಿದೆ. ಈ ಮೂಲಕ ಮಾರಮ್ಮ ದೇವಿ ತಾನು ಕಲ್ಪಿಸಿದ ಮಗುವನ್ನು ತನ್ನ ಸನ್ನಿಧಿಯಲ್ಲೇ ಕಿತ್ತುಕೊಂಡಿದ್ದಾಳೆ ಅಂತ ಸೌಂದರ್ಯ ಕಣ್ಣೀರು ಹಾಕುತ್ತಿದ್ದಾರೆ.

    ಹರಕೆ ಏನಿತ್ತು?
    ನಾನು ಗರ್ಭಿಣಿಯಾದ್ರೆ ಪ್ರತಿ ವಾರ ಸನ್ನಿಧಿಗೆ ಬರುತ್ತೇನೆ ಎಂದು ಸೌಂದರ್ಯ ಹರಕೆ ಹೊತ್ತಿದ್ದರು. ಅಂತೆಯೇ ಅವರು ಪ್ರತೀ ವಾರ ಮಾರಮ್ಮನ ಸನ್ನಿಧಿಗೆ ಬರುತ್ತಿದ್ದರು. ಹೀಗೆ ಡಿಸೆಂಬರ್ 14ರಂದು ಸೌಂದರ್ಯ ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ಅಲ್ಲಿ ಕೊಟ್ಟ ಪ್ರಸಾದವನ್ನು ಸ್ವೀಕರಿಸಿದ್ದರು. ಹೀಗಾಗಿ ವಿಷ ಪ್ರಸಾದ ಸೇವನೆಯಿಂದ ಅಸ್ವಸ್ಥಗೊಂಡ ಅವರನ್ನು ಕೊಳ್ಳೇಗಾಲ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರಂತವೆಂದರೆ ಸೌಂದರ್ಯ ವಿಷ ಪ್ರಸಾದ ಸೇವಿಸಿದ್ದರಿಂದ ಹೊಟ್ಟೆಯಲ್ಲಿನ ಭ್ರೂಣ ಸಾವನ್ನಪ್ಪಿದ್ದು, ಅವರಿಗೆ ಗರ್ಭಪಾತವಾಗಿದೆ ಅಂತ ವೈದ್ಯರು ತಿಳಿಸಿದ್ದಾರೆ.

    ಡಿಸೆಂಬರ್ 14 ರಂದು ದೇವಸ್ಥಾನದಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮವಿತ್ತು. ಹೀಗಾಗಿ ಭಕ್ತರೆಲ್ಲರೂ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಟೊಮೆಟೋ ಬಾತನ್ನು ಅಲ್ಲಿ ಪ್ರಸಾದದ ರೂಪದಲ್ಲಿ ವಿತರಿಸಲಾಗಿತ್ತು. ಆದ್ರೆ ಈ ಪ್ರಸಾದದಲ್ಲಿ ವಿಷ ಬೆರೆಸಲಾಗಿದ್ದು, ತಿಂದವರೆಲ್ಲ ಆಸ್ಪತ್ರೆಗೆ ಸೇರಿದ್ದರು. ಅದರಲ್ಲಿ 17 ಮಂದಿ ಧಾರುಣವಾಗಿ ಸಾವನ್ನಪ್ಪಿದ್ದು, ಉಳಿದವರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೋತಿ ನನ್ಮಗಾದ್ರೂ, ಕಳ್ಳ್ ನನ್ಮಗ ನಾನಲ್ಲ: ಶಾಸಕನಾಗುವ ಕನಸು ಬಿಚ್ಚಿಟ್ಟ ಪ್ರಥಮ್

    ಕೋತಿ ನನ್ಮಗಾದ್ರೂ, ಕಳ್ಳ್ ನನ್ಮಗ ನಾನಲ್ಲ: ಶಾಸಕನಾಗುವ ಕನಸು ಬಿಚ್ಚಿಟ್ಟ ಪ್ರಥಮ್

    ಧಾರವಾಡ: ಇತ್ತೀಚಿಗೆ ಸ್ಯಾಂಡಲ್ ವುಡ್ ನಟ-ನಟಿಯರು ರಾಜಕೀಯದತ್ತ ಮುಖ ಮಾಡಿದ್ದಾರೆ. ಉಪೇಂದ್ರ, ಮಾಲಾಶ್ರೀ ಮತ್ತು ಸಾಧು ಕೋಕಿಲ ರಾಜಕೀಯಕ್ಕೆ ಮುಖ ಮಾಡಿದ್ದು, ಈಗ ಈ ಸಾಲಿಗೆ ಬಿಗ್‍ಬಾಸ್ ವಿಜೇತ ಪ್ರಥಮ್ ಕೂಡ ಸೇರಿದ್ದಾರೆ.

    ನಗರದ ಶಾಲೆಯೊಂದರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕೆ ಪ್ರಥಮ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 3-4 ದಶಕಗಳಿಂದ ಚಾಮರಾಜನಗರ ಜಿಲ್ಲೆಯ ಹಾನೂರು ಒಂದು ತಾಲೂಕು ಆಗಬೇಕೆಂಬುದು ಎಲ್ಲರ ಆಸೆಯಾಗಿತ್ತು. ಆದರೆ ಈಗ ಸಿದ್ದರಾಮಯ್ಯನವರು ಹಾನೂರನ್ನು ತಾಲೂಕಾಗಿ ಘೋಷಣೆ ಮಾಡಿದ್ದಾರೆ. ಸಿದ್ರಾಮಣ್ಣ ಅವರ ನಾಯಕತ್ವದಲ್ಲಿ ಹಾನೂರು ತಾಲೂಕಾಗಿರೋದರಿಂದ ನಾನು ಮುಖ್ಯಮಂತ್ರಿಗಳನ್ನು ಅಭಿನಂದಿಸಿದೆ. ಯಾರಾದರೂ ಒಳ್ಳೆ ಕೆಲಸ ಮಾಡಿದ್ದರೆ ನಾವು ಅಭಿನಂದಿಸಬೇಕು ಎಂದರು.

    ಈಗ ಹಾನೂರು ತಾಲೂಕು ಘೋಷಣೆ ಆಗಿದ್ದರಿಂದ ಈ ಹೊಸ ತಾಲೂಕಿಗೆ ನಾನು ಶಾಸಕನಾಗಬೇಕೆಂಬು ಎನ್ನುವ ಆಸೆಯಿದೆ. ಅದಕ್ಕೆ ನಾನು ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಕೋತಿ ನನ್ ಮಗ ಇರಬಹುದು ಆದರೆ ಕಳ್ಳ್ ನನ್ ಮಗ ನಾನಲ್ಲ. ಹಾಗಾಗಿ ನಾನು ಒಬ್ಬ ಪರಿಪೂರ್ಣ, ಪ್ರಮಾಣಿಕ ವ್ಯಕ್ತಿಯಾಗಿ ಕೆಲಸಗಳನ್ನು ಮಾಡಬೇಕು. ರಾಜಕೀಯ ನನ್ನ ಇಷ್ಟದ ಕ್ಷೇತ್ರ, ಸಿನಿಮಾ ಅಲ್ಲ. ಸಿನಿಮಾಗೆ ನಾನು ನಿರ್ದೇಶಕನಾಗಲೂ ಬಂದೆ. ಆದರೆ ಈಗ ನಿರ್ದೇಶನಕ್ಕೆ ಅವಕಾಶ ಇಲ್ಲ ಎಂದು ಪ್ರಥಮ್ ಹೇಳಿದರು.

    ನನಗಿರುವ ಮಾಹಿತಿಯ ಪ್ರಕಾರ ಮಾರ್ಚ್ 8ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಸಿಎಂ ಸರ್ ಅಲ್ಲಿ ಯಾರನ್ನೂ ನಿಲ್ಲಿಸಬೇಡಿ, ನಾನು ಅಲ್ಲಿ ಗೆದ್ದು ಬರುತ್ತೇನೆ ಎಂದು ಹೇಳಿದಾಗ ಮಾಧ್ಯಮದವರು ನೀವು ಕಾಂಗ್ರೆಸ್ ನಿಂದ ಕಣಕ್ಕೆ ಇಳಿಯುತ್ತಿದ್ದೀರಾ ಎಂದು ಕೇಳಿದರು. ಅದಕ್ಕೆ ನಾನು ಸಿದ್ದರಾಮಯ್ಯನವರಲ್ಲಿ ಟಿಕೆಟ್ ಕೇಳಲಿಲ್ಲ. ನಾನು ಯಾಕೆ ಟಿಕೆಟ್ ಕೇಳಲಿ. ಪಕ್ಷೇತರನಾಗಿಯೂ ನಿಲ್ಲಬಹುದಲ್ಲ ಅಥವಾ ಬೇರೆ ಪಕ್ಷದಿಂದಲೂ ಸ್ಪರ್ಧಿಸಬಹುದಲ್ಲವೇ ಎಂದು ಪ್ರಥಮ್ ಮರು ಪ್ರಶ್ನೆ ಹಾಕಿದರು.

    ಏನೂ ಇಲ್ಲದೆ ನಾನು ಕೆಲಸ ಮಾಡುತ್ತಿದ್ದೇನೆ. ಜನರ ಧ್ವನಿಯಾಗಲು ನಾನು ಇಷ್ಟಪಡುತ್ತೇನೆ. ಅದಕ್ಕೆ ಎಲ್ಲ ತಯಾರಿ ನಡೆಯುತ್ತಿದೆ. ಖಂಡಿತವಾಗಿಯೂ ನಾನು ಕೆಲಸ ಮಾಡುತ್ತೇನೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ನತ್ತ ಮಾಲಾಶ್ರೀ, ಸಾಧು ಕೋಕಿಲ ಚಿತ್ತ?