Tag: Hanumanthu

  • ಹನುಮಂತು ಕುಟುಂಬಕ್ಕೆ ಪಬ್ಲಿಕ್ ಟಿವಿಯಿಂದ 14.25 ಲಕ್ಷ ರೂ. ಪರಿಹಾರ

    ಹನುಮಂತು ಕುಟುಂಬಕ್ಕೆ ಪಬ್ಲಿಕ್ ಟಿವಿಯಿಂದ 14.25 ಲಕ್ಷ ರೂ. ಪರಿಹಾರ

    ರಾಮನಗರ: ರಸ್ತೆ ಅಪಘಾತದಲ್ಲಿ ಮೃತಪಟ್ಟ ನಮ್ಮ ರಾಮನಗರ ಜಿಲ್ಲಾ ವರದಿಗಾರ ಹನುಮಂತು ಕುಟುಂಬಕ್ಕೆ ಪಬ್ಲಿಕ್ ಟಿವಿ ವತಿಯಿಂದ ಪರಿಹಾರ ಚೆಕ್ ನೀಡಲಾಯ್ತು. 14 ಲಕ್ಷದ 25 ಸಾವಿರ ರೂಪಾಯಿಯ ಪರಿಹಾರ ಚೆಕ್ ಹನುಮಂತು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

    ಪಬ್ಲಿಕ್ ಟಿವಿ ಆಡಳಿತ ಮಂಡಳಿಯು ಈ ಹಿಂದೆ ಘೋಷಿಸಿದಂತೆ 10 ಲಕ್ಷ ರೂಪಾಯಿ ಹಾಗೂ ಪಬ್ಲಿಕ್ ಟಿವಿ ಸಿಬ್ಬಂದಿಯ ಒಂದು ದಿನದ ಸಂಬಳ ರೂಪದಲ್ಲಿ ಸಂಗ್ರಹವಾಗಿದ್ದ 4 ಲಕ್ಷದ 25 ಸಾವಿರ ರೂಪಾಯಿ ಸೇರಿ ಒಟ್ಟು 14 ಲಕ್ಷದ 25 ಸಾವಿರ ರೂಪಾಯಿ ಆಗಿತ್ತು.

    ಹನುಮಂತು ಅವರ ಪತ್ನಿಗೆ 11 ಲಕ್ಷದ 25 ಸಾವಿರ ರೂಪಾಯಿ ಚೆಕ್ ಹಾಗೂ ಹನುಮಂತು ಅವರ ತಾಯಿಗೆ 3 ಲಕ್ಷ ರೂಪಾಯಿ ಮೌಲ್ಯದ ಚೆಕ್ ಹಸ್ತಾಂತರಿಸಲಾಯ್ತು. ಪಬ್ಲಿಕ್ ಟಿವಿ ಸಿಇಓ ಅರುಣ್ ಕುಮಾರ್, ಸಿಒಒ ಹರೀಶ್, ಕಾರ್ಯಕಾರಿ ಸಂಪಾದಕ ದಿವಾಕರ್ ಹಾಗೂ ಹೆಚ್.ಆರ್. ವಿಭಾಗದ ಮುಖ್ಯಸ್ಥರಾದ ಶಂಕರ್ ಈ ಸಂದರ್ಭದಲ್ಲಿ ಹಾಜರಿದ್ದರು.

    ಏಪ್ರಿಲ್ 21 ರಂದು ರಾಮನಗರ ಜಿಲ್ಲಾ ಕಾರಾಗೃಹದ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಹನುಮಂತು ವಿಧಿವಶರಾಗಿದ್ದರು.

  • ಹನುಮಂತು ಕುಟುಂಬಕ್ಕೆ ಪಬ್ಲಿಕ್ ಟಿವಿಯಿಂದ 10 ಲಕ್ಷ ರೂ. ನೆರವು

    ಹನುಮಂತು ಕುಟುಂಬಕ್ಕೆ ಪಬ್ಲಿಕ್ ಟಿವಿಯಿಂದ 10 ಲಕ್ಷ ರೂ. ನೆರವು

    ಬೆಂಗಳೂರು: ರಾಮನಗರದ ವರದಿಗಾರ ಹನುಮಂತು ಅವರ ನಿಧನಕ್ಕೆ ಪಬ್ಲಿಕ್ ಟಿವಿಯಲ್ಲಿ ಇಂದು ಸಂತಾಪ ಸೂಚಕ ಸಭೆ ನಡೆಯಿತು.

    ಯಶವಂತಪುರದಲ್ಲಿರುವ ಕಚೇರಿಯಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್, ಕಚೇರಿಯಲ್ಲಿ ದೀರ್ಘಕಾಲ ಒಡನಾಟ ಹೊಂದಿದ್ದ ವ್ಯಕ್ತಿ ಹನುಮಂತು ಕೆಲಸದಲ್ಲಿ ಶ್ರದ್ಧೆಯನ್ನು ಇಟ್ಟುಕೊಂಡಿದ್ದರು. ಕುಟುಂಬ ಹನುಮಂತು ಅವರನ್ನೇ ನೆಚ್ಚಿಕೊಂಡಿದೆ. ಕಚೇರಿಯಿಂದ ಅವರ ಕುಟುಂಬಕ್ಕೆ 10 ಲಕ್ಷ ರೂ. ಹಣವನ್ನು ನೀಡಲಾಗುವುದು ಎಂದು ತಿಳಿಸಿದರು. ಇದರ ಜೊತೆಗೆ ಪಬ್ಲಿಕ್ ಟಿವಿ ಸಿಬ್ಬಂದಿಯ ಒಂದು ದಿನದ ವೇತನವನ್ನು ಹನುಮಂತು ಕುಟುಂಬಕ್ಕೆ ನೀಡಲು ನಿರ್ಧರಿಸಲಾಗಿದೆ.

    ಈ ವೇಳೆ ಹನುಮಂತು ಅವರ ಕರ್ತವ್ಯವನ್ನು ಸಿಒಒ ಹರೀಶ್ ಕುಮಾರ್, ಸಂಪಾದಕ ದಿವಾಕರ್, ಔಟ್ ಪುಟ್ ಮುಖ್ಯಸ್ಥ ಆನಂದ್, ಜಿಲ್ಲಾ ವಿಭಾಗದ ಮುಖ್ಯಸ್ಥ ಮನೋಹರ್ ನೆನೆದರು. ಸಂತಾಪ ಸೂಚಕ ಸಭೆಯಲ್ಲಿ ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಿ ಹನುಮಂತು ಅವರಿಗೆ ಗೌರವ ಸಲ್ಲಿಸಲಾಯಿತು.

    ರಸ್ತೆ ಅಪಘಾತದಲ್ಲಿ ಮಂಗಳವಾರ ಸಾವನ್ನಪ್ಪಿದ ರಾಮನಗರ ಜಿಲ್ಲೆ ಪಬ್ಲಿಕ್ ಟಿವಿ ವರದಿಗಾರ ಹನುಮಂತು ಅವರ ಮನೆಗೆ ಭೇಟಿ ನೀಡಿ ಎಚ್‍ಡಿ ಕುಮಾರಸ್ವಾಮಿ ಸಾಂತ್ವನ ತಿಳಿಸಿದ್ದಾರೆ. ಮೃತ ಪತ್ರಕರ್ತ ಹನುಮಂತು ಅವರ ಪತ್ನಿ ಶಶಿಕಲಾ ಅವರಿಗೆ ಐದು ಲಕ್ಷ ರೂಪಾಯಿಗಳ ಚೆಕ್ ನೀಡಿ ಅವರ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿರುವುದಾಗಿ ಎಚ್‍ಡಿಕೆ ಹೇಳಿದ್ದಾರೆ.

    ಹನುಮಂತು ಆತ್ಮಕ್ಕೆ ಶಾಂತಿ ಕೋರಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪತ್ರಕರ್ತರು, ಛಾಯಾಗ್ರಾಹಕರು ಭಾಗಿಯಾಗಿ ಒಂದು ನಿಮಿಷ ಮೌನಾಚರಣೆ ಮಾಡಿ ಅಗಲಿದ ವರದಿಗಾರನಿಗೆ ಸಂತಾಪ ಸೂಚಿಸಿದರು. ಹನುಮಂತು ಕುಟುಂಬಕ್ಕೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ 10 ಸಾವಿರ ರೂ. ಧನ ಸಹಾಯ ನೀಡುವುದಾಗಿ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ತಿಳಿಸಿದರು.

  • ಪಬ್ಲಿಕ್ ಟಿವಿ ವರದಿಗಾರ ಹನುಮಂತು ನಿಧನಕ್ಕೆ ಸಿಎಂ ಸಂತಾಪ

    ಪಬ್ಲಿಕ್ ಟಿವಿ ವರದಿಗಾರ ಹನುಮಂತು ನಿಧನಕ್ಕೆ ಸಿಎಂ ಸಂತಾಪ

    – ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಡಿಕೆಶಿ, ಅಶ್ವತ್ಥನಾರಾಯಣ, ಎಚ್‌ಡಿಕೆ

    ಬೆಂಗಳೂರು: ರಸ್ತೆ ಅಪಘಾತದಲ್ಲಿ ಇಂದು ಮೃತಪಟ್ಟ ಪಬ್ಲಿಕ್ ಟಿವಿಯ ರಾಮನಗರ ಜಿಲ್ಲಾ ವರದಿಗಾರ ಹನುಮಂತು ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

    ಟ್ವೀಟ್ ಮಾಡಿರುವ ಸಿಎಂ ಯಡಿಯೂರಪ್ಪ ಅವರು, ಭಗವಂತನು ಹನುಮಂತು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಅಕಾಲಿಕ ನಿಧನದ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬದವರಿಗೆ ನೀಡಲಿ ಎಂದು ಪ್ರಾರ್ಥಿಸುವುದಾಗಿ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

    ಸಂಸದ ಡಿ.ಕೆ.ಸುರೇಶ್ ಟ್ವೀಟ್ ಮಾಡಿ, ಪಬ್ಲಿಕ್ ಟಿವಿಯ ರಾಮನಗರ ಜಿಲ್ಲಾ ವರದಿಗಾರ ಹನುಮಂತು ಅವರ ನಿಧನಕ್ಕೆ ಎಲ್ಲೆಡೆಯಿಂದ ತೀವ್ರ ಸಂತಾಪ ವ್ಯಕ್ತವಾಗಿದೆ. ಅದರಂತೆ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಹನುಮಂತು ಅವರ ನಿಧನಕ್ಕೆ ಸಂತಾಪ ಸೂಚಿಸಿ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ ಎಂದು ಹೇಳಿದ್ದಾರೆ.

    ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರು ಟ್ವೀಟ್ ಮಾಡಿ, ಹನುಮಂತು ಅವರ ಅಕಾಲಿಕ ಮರಣ ದುಃಖ ತಂದಿದೆ. ಸದಾ ಕ್ರಿಯಾಶೀಲ, ಉತ್ಸಾಹಿ, ದಿಟ್ಟ ಪತ್ರಕರ್ತರಾಗಿದ್ದ ಅವರು ಪ್ರಾಮಾಣಿತೆಯನ್ನು ನಂಬಿದ್ದರು. ಅಗಲಿಕೆಯ ದುಃಖ ಭರಿಸುವ ಶಕ್ತಿ ಭಗವಂತ ಅವರ ಕುಟುಂಬಕ್ಕೆ ನೀಡಲಿ. ಕುಟುಂಬಕ್ಕೆ ವೈಯಕ್ತಿಕವಾಗಿ 5 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡುತ್ತೇನೆ ಎಂದು ತಿಳಿಸಿದ್ದಾರೆ.

    ತಮ್ಮ ಪ್ರಾಮಾಣಿಕತೆಯಿಂದಲೇ ಗುರುತಿಸಿಕೊಂಡಿದ್ದ ಹನುಮಂತು, ರಾಮನಗರದಲ್ಲಿ ಚಿರಪರಿಚಿತರು. ತಮ್ಮ ವರದಿಗಳಿಂದಲೇ ಮಾಧ್ಯಮ ಲೋಕದಲ್ಲಿ ಹನುಮಂತು ಗುರುತಿಸಿಕೊಂಡಿದ್ದರು. ಹನುಮಂತು ಕಳೆದುಕೊಂಡು ಪಬ್ಲಿಕ್ ಟಿವಿ ಕುಟುಂಬ ಬಡವಾಗಿದೆ. ಇನ್ನು ಹನುಮಂತು ನಿಧನಕ್ಕೆ ಶಾಸಕಿ ಅನಿತಾ ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಸಹ ಸಂತಾಪ ಸೂಚಿಸಿ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

  • ರಸ್ತೆ ಅಪಘಾತದಲ್ಲಿ ಪಬ್ಲಿಕ್ ಟಿವಿ ವರದಿಗಾರ ಹನುಮಂತು ನಿಧನ

    ರಸ್ತೆ ಅಪಘಾತದಲ್ಲಿ ಪಬ್ಲಿಕ್ ಟಿವಿ ವರದಿಗಾರ ಹನುಮಂತು ನಿಧನ

    ಬೆಂಗಳೂರು: ಪಬ್ಲಿಕ್ ಟಿವಿಯ ರಾಮನಗರದ ಜಿಲ್ಲಾ ವರದಿಗಾರ ಹನುಮಂತು ಇಂದು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.

    ರಾಮನಗರದ ಜಿಲ್ಲಾ ಕಾರಾಗೃಹದ ಬಳಿ ವರದಿ ಮಾಡಿ ಹಿಂದಿರುಗುತ್ತಿದ್ದ ವೇಳೆ ಅಪಘಾತ ನಡೆದಿದೆ. ಹಿಂದಿನಿಂದ ಬಂದ ಎಟಿಎಂಗೆ ಹಣ ತುಂಬುವ ವಾಹನ ಹನುಮಂತ ಅವರ ಬೈಕಿಗೆ ಡಿಕ್ಕಿ ಹೊಡೆದಿದೆ. ರಾಮನಗರದ ಜೈಲಿನಲ್ಲಿರುವ ವಿಚಾರಣಾಧೀನ ಖೈದಿಗಳನ್ನು ಪರಪ್ಪನ ಅಗ್ರಹಾರ ಸ್ಥಳಾಂತರಿಸುವ ಕುರಿತು ತಮ್ಮ ಕೊನೆಯ ವರದಿಯನ್ನು ನೀಡಿದ್ದರು.

    ತಮ್ಮ ಪ್ರಾಮಾಣಿಕತೆಯಿಂದಲೇ ಗುರುತಿಸಿಕೊಂಡಿದ್ದ ಹನುಮಂತು, ರಾಮನಗರದಲ್ಲಿ ಚಿರಪರಿಚಿತರು. ತಮ್ಮ ವರದಿಗಳಿಂದಲೇ ಮಾಧ್ಯಮ ಲೋಕದಲ್ಲಿ ಹನುಮಂತು ಗುರುತಿಸಿಕೊಂಡಿದ್ದರು. ಹನುಮಂತು ಕಳೆದುಕೊಂಡು ಪಬ್ಲಿಕ್ ಟಿವಿ ಕುಟುಂಬ ಬಡವಾಗಿದೆ.

    ಇನ್ನು ಹನುಮಂತು ನಿಧನಕ್ಕೆ ಶಾಸಕಿ ಅನಿತಾ ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಸಹ ಸಂತಾಪ ಸೂಚಿಸಿ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.