Tag: handicapped

  • ಕಾಲು ಸ್ವಾಧೀನ ಕಳೆದುಕೊಂಡರೂ ಯಶಸ್ವಿ ಕೃಷಿಕನಾದ ಕಾರ್ಮಿಕ

    ಕಾಲು ಸ್ವಾಧೀನ ಕಳೆದುಕೊಂಡರೂ ಯಶಸ್ವಿ ಕೃಷಿಕನಾದ ಕಾರ್ಮಿಕ

    – ಯಾರ ಸಹಾಯವಿಲ್ಲದೆ ಕೆಲಸ

    ಚಿತ್ರದುರ್ಗ: ಅಂಗಾಂಗಗಳೆಲ್ಲ ಸರಿ ಇದ್ದರೂ ಸರಿಯಾಗಿ ಕೆಲಸ ಮಾಡದೆ ಸೋಮಾರಿತನ ತೋರುವ ಯುವಕರನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಅಂಗವಿಕಲ ರೈತ ಕಾಲುಗಳು ಸ್ವಾಧೀನ ಕಳೆದುಕೊಂಡರೂ ಯಾರ ನೆರವಿಲ್ಲದೆ ಕೃಷಿ ಮಾಡುತ್ತಿದ್ದಾರೆ. ಈ ಮೂಲಕ ಇತರ ಯುವಕರಿಗೆ ಮಾದರಿಯಾಗಿದ್ದಾರೆ.

    ಜಿಲ್ಲೆಯ ಹಿರಿಯೂರು ತಾಲೂಕಿನ ಸೂರಪ್ಪನಹಟ್ಟಿ ಗ್ರಾಮದ ಬಾಲಣ್ಣ ವಿಶೇಷಚೇತನರಾಗಿದ್ದು, ಕಾಲುಗಳು ಸ್ವಾಧೀನ ಕಳೆದುಕೊಂಡಿವೆ. ಆದರೂ ಎದೆಗುಂದದೆ, ಯಾರ ನೆರವಿಲ್ಲದೆ ಜಮೀನಿನಲ್ಲಿ ಉಳುಮೆ ಮಾಡಿ ಬದುಕಿನ ಬಂಡಿ ಸಾಗಿಸುವ ಮೂಲಕ ಪತ್ನಿ ಹಾಗೂ ಮಗನನ್ನು ಸಾಕುತ್ತಿದ್ದಾರೆ.

    ಓಡಾಡಲು ಕಾಲಿಲ್ಲದೆ, ಎದ್ದು ನಿಲ್ಲಲು ಸೊಂಟವಿಲ್ಲದೇ ನೆಲದ ಮೇಲೆ ತೆವಳುವ ರೈತ ಬಾಲಣ್ಣ, ವಿಶೇಷಚೇತನನಾದರೂ ಮತ್ತೊಬ್ಬರ ಸಹಾಯ ಪಡೆಯದೇ ತುಂಡು ಭೂಮಿಯಲ್ಲಿ ಉಳುಮೆ ಮಾಡಿ ಸೌತೆಕಾಯಿ, ಮೆಣಸಿನಕಾಯಿ ಸೇರಿದಂತೆ ವಿವಿಧ ತರಕಾರಿ ಬೆಳೆಯುತ್ತ ಬದುಕು ಕಟ್ಟಿಕೊಂಡು ಛಲಗಾರ ಎನಿಸಿದ್ದಾರೆ. ಕಳೆದ ಹತ್ತು ವರ್ಷಗಳ ಹಿಂದೆ ಮಂಗಳೂರಿನ ಕಾರ್ಖಾನೆಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಜರುಗಿದ ಅವಘಡದಿಂದಾಗಿ ಕಾಲುಗಳು ಸ್ವಾಧೀನ ಕಳೆದುಕೊಂಡವು.

    ಅಂದಿನಿಂದಲೂ ಎದೆಗುಂದದೆ ಛಲದಿಂದ ಬದುಕುತ್ತಿರುವ ಬಾಲಣ್ಣ, ಯಾರ ಹಂಗಿನಲ್ಲೂ ಇರದೇ ತನ್ನ ತುಂಡು ಭೂಮಿಯಲ್ಲಿ ಉಳುಮೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಮಗನನ್ನು ವಿದ್ಯಾವಂತನನ್ನಾಗಿಸಬೇಕು ಹೀಗಾಗಿ ಭೂತಾಯಿ ನಂಬಿಕೊಂಡು ದುಡಿಯುತಿದ್ದೇನೆ ಎನ್ನುತ್ತಾರೆ ಬಾಲಣ್ಣ. ಯಾವುದೇ ಸುಲಭ ದಾರಿಗಳತ್ತ ಚಿಂತಿಸದೆ, ಕುಟುಂಬಸ್ಥರು ಹಾಗೂ ಗ್ರಾಮದ ಬೇರೆಯವರ ನೆರವು ಪಡೆಯದೆ ಶ್ರಮಿವಹಿಸಿ ತಮ್ಮ ಜಮೀನಿನಲ್ಲಿ ದುಡಿಯುವ ಮೂಲಕ ಸ್ವಾವಲಂಬಿಯಾಗಿ ಬದುಕು ಸಾಗಿಸುವ ಮೂಲಕ ಇತರರಿಗೆ ಮಾದರಿ ರೈತ ಎನಿಸಿದ್ದಾರೆ.

    ವಿಶೇಷ ಚೇತನ ಬಾಲಣ್ಣ ಅವರಿಗೆ ಸರ್ಕಾರದಿಂದ ಅಂಗವಿಕಲರ ಪಿಂಚಣಿ ಬಂದರೂ ಸರಿಯಾಗಿ ಇವರ ಕೈ ಸೇರಿಲ್ಲ. ಅಲ್ಲದೆ ಬದುಕಲ್ಲಿ ಇನ್ನಷ್ಟು ಸಾಧಿಸುವ ಹಂಬಲವಿರುವ ಬಾಲಣ್ಣ ಅಂಗವಿಕಲರ ಕಲ್ಯಾಣ ಇಲಾಖೆಯಿಂದ ತ್ರಿಚಕ್ರ ವಾಹನ ನೀಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ ಈವರೆಗೆ ಬೈಕ್ ಸಿಕ್ಕಿಲ್ಲ. ಇವರ ಶ್ರಮ ಕಂಡು ನಿಬ್ಬೆರಗಾಗಿರುವ ಗ್ರಾಮದ ಯುವಕರು ಬಾಲಣ್ಣನ ಕಾರ್ಯ ಮೆಚ್ಚಿ ಮನಸಾರೆ ಹೊಗಳುತಿದ್ದು, ನಮಗೆಲ್ಲ ಇವರು ಸ್ಫೂರ್ತಿ ಎನ್ನುತ್ತಿದ್ದಾರೆ. ಅಲ್ಲದೆ ಇಂತಹ ಸಾಧಕನಿಗೆ ಸರ್ಕಾರದಿಂದ ಒಂದು ಮನೆ ಹಾಗೂ ತ್ರಿಚಕ್ರ ವಾಹನ ನೀಡಬೇಕೆಂದು ಮನವಿ ಮಾಡಿದ್ದಾರೆ.

  • ತ್ರಿಚಕ್ರ ವಾಹನಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಿದ್ರು ಸ್ವಾಭಿಮಾನಿಗೆ ಸ್ಕೂಟಿ ಭಾಗ್ಯ ಸಿಕ್ಕಿಲ್ಲ!

    ತ್ರಿಚಕ್ರ ವಾಹನಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಿದ್ರು ಸ್ವಾಭಿಮಾನಿಗೆ ಸ್ಕೂಟಿ ಭಾಗ್ಯ ಸಿಕ್ಕಿಲ್ಲ!

    ಯಾದಗಿರಿ: ವಿಧಿಯಾಟಕ್ಕೆ ಅಂಗವೈಕಲ್ಯಕ್ಕೆ ತುತ್ತಾದರೂ ಬೇರೆಯವರ ಮೇಲೆ ಭಾರವಾಗಬಾರದೆಂದು ಸ್ವಾಭಿಮಾನಿಯಾಗಿರುವ ವ್ಯಕ್ತಿಯೊಬ್ಬರು ತ್ರಿಚಕ್ರ ವಾಹನಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಿದರೂ ಸ್ಕೂಟಿ ಭಾಗ್ಯ ಸಿಕ್ಕಿಲ್ಲ.

    ಯಾದಗಿರಿ ಜಿಲ್ಲೆಯ ಮುಷ್ಟೂರು ಗ್ರಾಮದವರಾದ ಮೊಹಮ್ಮದ್ ಜಲಾಲ್ ಬಾಷಾ ಹುಟ್ಟುತ್ತಲೇ ಅಂಗವಿಕಲರಲ್ಲ. ಏಳು ವರ್ಷ ಹಿಂದೆ ರೈಲ್ವೇ ಹಳಿ ದಾಟುವಾಗ ಬಿದ್ದು ಎರಡು ಕಾಲುಗಳನ್ನು ಕಳೆದುಕೊಂಡ ಪರಿಣಾಮ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ. ಮೊಣಕಾಲು ಕಳೆದುಕೊಂಡಿದ್ದರೂ ಬೇರೆಯವರಿಗೆ ಹೊರೆಯಾಗದೇ ಇರಲು ತ್ರಿಚಕ್ರ ವಾಹನ ಪಡೆದು ವ್ಯಾಪಾರ ಮಾಡಲು ಕನಸನ್ನು ಕಟ್ಟಿಕೊಂಡಿದ್ದಾರೆ.

    ಮೊಹಮ್ಮದ್ ಬಾಷಾ ಕಳೆದ ಎರಡು ವರ್ಷಗಳಿಂದ ತ್ರಿಚಕ್ರ ವಾಹನಕ್ಕಾಗಿ ಜಿಲ್ಲಾ ಅಂಗವಿಕಲ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದುವರೆಗೂ ವಾಹನ ನೀಡದೇ ಇದ್ದ ಕಾರಣ ದಿನಬೆಳಗಾದರೇ ಸರ್ಕಾರಿ ಕಚೇರಿಗೆ ಇವರು ಅಲೆಯುತ್ತಿದ್ದಾರೆ.

    ಮೊಹಮ್ಮದ್ ಬಾಷಾ ಅವರಿಗೆ ಮದುವೆಯಾಗಿ ಮೂರು ವರ್ಷದಲ್ಲಿ ವಿಧಿಯಾಟಕ್ಕೆ ತನ್ನ ಎರಡು ಕಾಲು ಕಳೆದುಕೊಂಡಿದ್ದಾರೆ. ಸಂಸಾರದಲ್ಲಿ ಹೆಂಡತಿ ಮನೆ ಕೆಲಸವನ್ನು ಮಾಡಿ ಮಕ್ಕಳಿಗೆ ಎರಡು ಹೊತ್ತು ಗಂಜಿ ಹಾಕುವಂತಾಗಿದೆ. ಇಂತಹ ಸಂಕಷ್ಟದಲ್ಲಿ ಬದುಕುತ್ತಿರುವ ನನಗೆ ತ್ರಿಚಕ್ರ ವಾಹನವನ್ನು ನೀಡಿ ಡಬ್ಬಿ ಅಂಗಡಿಯ ವ್ಯಾಪಾರವನ್ನು ಶುರು ಮಾಡಲು ಅಧಿಕಾರಿಗಳು ಅನುಕೂಲ ಮಾಡಿಕೊಡಬೇಕೆಂದು ಬಾಷಾ ಮನವಿ ಮಾಡಿದ್ದಾರೆ.

  • ಕೈ, ಕಾಲು ಇಲ್ಲದಿದ್ರೂ ಸೂಪರ್ ಸ್ವಿಮ್ಮರ್- ರಷ್ಯಾದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ತಿಪ್ಪಣ್ಣ

    ಕೈ, ಕಾಲು ಇಲ್ಲದಿದ್ರೂ ಸೂಪರ್ ಸ್ವಿಮ್ಮರ್- ರಷ್ಯಾದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ತಿಪ್ಪಣ್ಣ

    ಬಳ್ಳಾರಿ: ದೇಹದ ಎಲ್ಲಾ ಅಂಗಗಳು ಸರಿಯಾಗಿದ್ರೂ ಕೂಡ ಕೆಲವರಿಗೆ ಹತ್ತು ನಿಮಿಷ ಈಜಾಡೋದು ಕಷ್ಟ. ಆದ್ರೆ ಇಲ್ಲೊಬ್ಬರು ಕೈ ಕಾಲು ಇಲ್ಲದಿದ್ರೂ ಒಂದು ಗಂಟೆಗೂ ಹೆಚ್ಚು ಕಾಲ ಈಜಾಡ್ತಾರೆ. ಈ ವಿಕಲಚೇತನ ಈಜುಪಟು ರಷ್ಯಾದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.

    ಹೌದು. ಇವರ ಹೆಸರು ತಿಪ್ಪಣ್ಣ. ಮೂಲತಃ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನವರು. ಜೆಸ್ಕಾಂನಲ್ಲಿ ಲೈನ್‍ಮನ್ ಆಗಿದ್ದಾರೆ. ಹೆಂಡತಿ ಹಾಗೂ ಇಬ್ಬರು ಮಕ್ಕಳ ಸಂಸಾರವಿದೆ. 7 ವರ್ಷಗಳ ಹಿಂದೆ ಕೆಲಸ ಮಾಡುವಾಗ ವಿದ್ಯುತ್ ಅವಘಡದಲ್ಲಿ ಎರಡೂ ಕಾಲು ಮತ್ತು ಒಂದು ಕೈ ಕಳೆದುಕೊಂಡ್ರು. ಮತ್ತೊಂದು ಕೈಯನ್ನು ಜೋಡಿಸಿದ್ದಾರೆ. ಆದ್ರೆ ಅದು ಶಕ್ತಿಹೀನವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಿಪ್ಪಣ್ಣ ಅವರು ಎದೆಗುಂದದೇ ದೊಡ್ಡ ಈಜುಪಟುವಾಗಿ ಬೆಳೆದಿದ್ದಾರೆ.

    ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ಬನಶಂಕರಿ ಬಳಿಯ ಜ್ಯೋತಿ ಕೇಂದ್ರಿಯ ಶಾಲೆಯಲ್ಲಿ ಈಜು ತರಬೇತಿ ಪಡೆಯುತ್ತಿದ್ದಾರೆ. 2015ರಲ್ಲಿ ರಷ್ಯಾದಲ್ಲಿ ನಡೆದ ವಿಶ್ವ ವಿಕಲಚೇತನರ ಈಜು ಸ್ಪರ್ಧೆಯಲ್ಲಿ ಭಾರತವನ್ನ ಪ್ರತಿನಿಧಿಸಿ ಕಂಚಿನ ಪದಕ ಗೆದ್ದಿದ್ದಾರೆ.

    ತಿಪ್ಪಣ್ಣ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅನೇಕ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದಿದ್ದಾರೆ. ಈ ವರ್ಷ ನಡೆಯಲಿರುವ ವಿಶ್ವ ವಿಕಲಚೇತನರ ಕ್ರೀಡಾ ಸ್ಪರ್ಧೆಯಲ್ಲಿ ಭಾರತದ ಪ್ಯಾರಾ ಈಜುಪಟುವಾಗಿ ಭಾಗವಹಿಸಲಿದ್ದಾರೆ. ತಿಪ್ಪಣ್ಣ 2020ರಲ್ಲಿ ನಡೆಯುವ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಭಾರತವನ್ನ ಪ್ರತಿನಿಧಿಸಲಿದ್ದಾರೆ. ಇವರ ಕನಸು ನನಸಾಗಲಿ ಅನ್ನೋದು ನಮ್ಮ ಆಶಯ.