Tag: Hamza Bin Laden

  • ಒಸಾಮಾ ಮಗ ಹಮ್ಜಾ ಬಿನ್ ಲಾಡೆನ್ ಹತ

    ಒಸಾಮಾ ಮಗ ಹಮ್ಜಾ ಬಿನ್ ಲಾಡೆನ್ ಹತ

    ವಾಶಿಂಗ್ಟನ್: ಅಲ್ ಖೈದಾ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್ ಪುತ್ರ ಹಾಗೂ ಉಗ್ರ ಸಂಘಟನೆಗೆ ಮುಂದಿನ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದ ಹಮ್ಜಾ ಬಿನ್ ಲಾಡೆನ್ ಸಾವನ್ನಪ್ಪಿರುವುದು ಅಧಿಕೃತವಾಗಿ ಘೋಷಣೆಯಾಗಿದೆ.

    ಈ ಕುರಿತು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಚಿತಪಡಿಸಿದ್ದು, ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ವೇಳೆ ಅಲ್ ಖೈದಾ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.

    ಹಮ್ಜಾ ಬಿನ್ ಲಾಡೆನ್ ಸಾವು ಅಲ್ ಖೈದಾ ಸಂಘಟನೆಗೆ ಭಾರೀ ನಷ್ಟವನ್ನುಂಟುಮಾಡಿದ್ದು, ಸಂಘಟನೆಯ ಪ್ರಮುಖ ನಾಯಕತ್ವದ ಕೌಶಲ್ಯ ಹಾಗೂ ತಂದೆಯೊಂದಿಗಿನ ಸಾಂಕೇತಿಕ ಸಂಪರ್ಕವನ್ನು ಕಳೆದುಕೊಂಡಂತಾಗಿದೆ. ಅಲ್ಲದೆ, ಗುಂಪಿನ ಪ್ರಮುಖ ಕಾರ್ಯ ಚಟುವಟಿಕೆಗಳಿಗೆ ತೀವ್ರ ಹೊಡೆತ ಬೀಳಲಿದೆ ಎಂದು ಶ್ವೇತ ಭವನ ಹೊರಡಿಸಿದ ಹೇಳಿಕೆಯಲ್ಲಿ ಟ್ರಂಪ್ ತಿಳಿಸಿದ್ದಾರೆ.

    ಹಮ್ಜಾ ಬಿನ್ ಲಾಡೆನ್ ಸಾವನ್ನಪ್ಪಿದ್ದಾನೆ ಎಂದು ಗುಪ್ತಚರ ಅಧಿಕಾರಿಗಳ ಮಾಹಿತಿಯನ್ನಾಧರಿಸಿ ಯುಎಸ್ ಮಾಧ್ಯಮಗಳು ಆಗಸ್ಟ್ ನಲ್ಲಿ ವರದಿ ಮಾಡಿತ್ತು.

    ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಸಹ ಕಳೆದ ತಿಂಗಳಲ್ಲಿ ಹಮ್ಜಾ ಬಿನ್ ಲಾಡೆನ್ ಸಾವನ್ನು ದೃಢಪಡಿಸಿದ್ದರು. ಆದರೆ, ನೇರವಾಗಿ ಹೇಳಿರಲಿಲ್ಲ. ಬಿನ್ ಲಾಡೆನ್ ಸಾವನ್ನಪ್ಪಿದ್ದಾನೆ ಎಂಬುದು ನನ್ನ ಅನಿಸಿಕೆ ಎಂದು ಪರೋಕ್ಷವಾಗಿ ಹೇಳಿದ್ದರು. ಈ ಕುರಿತು ಡೊನಾಲ್ಡ್ ಟ್ರಂಪ್ ಹಾಗೂ ಇತರ ಹಿರಿಯ ಅಧಿಕಾರಿಗಳು ಈ ಸುದ್ದಿಯನ್ನು ಸಾರ್ವಜನಿಕವಾಗಿ ದೃಢಪಡಿಸಿರಲಿಲ್ಲ.

    ಒಸಾಮಾ ಬಿನ್ ಲಾಡೆನ್‍ನ 20 ಮಕ್ಕಳಲ್ಲಿ ಈತ 15ನೇಯವನಾಗಿದ್ದು, ಮೂರನೇ ಹೆಂಡತಿ ಮಗನಾಗಿದ್ದಾನೆ. ಈತನ ವಯಸ್ಸು ಸುಮಾರು 30 ವರ್ಷ ಎಂದು ಭಾವಿಸಲಾಗಿದೆ. ಅಲ್ ಖೈದಾ ಸಂಘಟನೆಯಲ್ಲಿ ನಾಯಕನಾಗಿ ಹೊರಮ್ಮುತ್ತಿದ್ದ. ಈತನನ್ನು ಪತ್ತೆಹಚ್ಚಿದರೆ 1 ಮಿಲಿಯನ್ ಡಾಲರ್(7.10 ಕೋಟಿ ರೂ.) ನೀಡುವುದಾಗಿ ಅಮೆರಿಕ ಫೆಬ್ರವರಿಯಲ್ಲಿ ಘೋಷಿಸಿತ್ತು.