Tag: Hamali

  • ಮೂಟೆ ಹೊತ್ತು ಸುಸ್ತಾಗುವ ನಮ್ಗೆ ಎಣ್ಣೆ ಇಲ್ಲದಿದ್ರೆ ಹೇಗೆ: ಹಮಾಲಿಗಳು ಆಕ್ರೋಶ

    ಮೂಟೆ ಹೊತ್ತು ಸುಸ್ತಾಗುವ ನಮ್ಗೆ ಎಣ್ಣೆ ಇಲ್ಲದಿದ್ರೆ ಹೇಗೆ: ಹಮಾಲಿಗಳು ಆಕ್ರೋಶ

    ರಾಯಚೂರು: ಲಾಕ್‍ಡೌನ್ ಹಿನ್ನೆಲೆ ಮದ್ಯಪ್ರಿಯರಿಗೆ ಬಹಿರಂಗವಾಗಿ ಹೇಳಿಕೊಳ್ಳಲು ಆಗದಿರುವಷ್ಟು ಪರಿಸ್ಥಿತಿ ಗಂಭೀರವಾಗಿದೆ. ಹೀಗಾಗಿ ಕೆಲವರು ದುಬಾರಿ ಬೆಲೆಗೆ ಅಕ್ರಮ ಮದ್ಯವನ್ನು ಕೊಂಡು ಕುಡಿಯುತ್ತಿದ್ದಾರೆ.

    ರಾಯಚೂರಿನ ಎಪಿಎಂಸಿ ಹಮಾಲಿಗಳು ಮಾತ್ರ ಮದ್ಯ ಬಂದ್ ಆಗಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮದ್ಯ ಸಿಗದಿರುವುದಕ್ಕೆ ಕೆಲವರು ಸಿಎಚ್ ಪೌಡರ್ ಕಲಬೆರಕೆ ಸೇಂದಿಗೆ ದಾಸರಾಗಿದ್ದಾರೆ. ಸೇಂದಿ ಬೆಲೆ ಸಹ ಲಾಕ್‍ಡೌನ್ ಹಿನ್ನೆಲೆ ಡಬಲ್ ಆಗಿದೆಯಂತೆ. ಲಾಕ್‍ಡೌನ್‍ನಿಂದ ಸಿಎಚ್ ಪೌಡರ್ ಸಹ ಸಿಗದಿರುವುದರಿಂದ ಅದರಲ್ಲೂ ನಕಲಿ ಸೇಂದಿ ತಯಾರಾಗುತ್ತಿದ್ದು ಕಳ್ಳ ಮಾರ್ಗದಲ್ಲಿ ಅದನ್ನೇ ಕುಡಿಯುತ್ತಿದ್ದಾರೆ.

    ಮೂಟೆ ಹೊತ್ತು ಸುಸ್ತಾಗುವ ನಮಗೆ ಎಣ್ಣೆ ಇಲ್ಲದಿದ್ದರೆ ಹೇಗೆ? ದುಡಿದು ದುಡ್ಡು ಏನು ಮಾಡುವುದು ಎಂದು ಹಮಾಲಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಆದಷ್ಟು ಬೇಗ ಮದ್ಯದ ಅಂಗಡಿಗಳನ್ನು ತೆರೆಯಬೇಕು ಎಂದು ಬಹಿರಂಗವಾಗಿ ಬೇಡಿಕೆ ಇಟ್ಟಿದ್ದಾರೆ. ಒಂದೆಡೆ ಕೊರೊನಾ ಭೀತಿಯಿಂದ ಭತ್ತ ನೇರವಾಗಿ ಮಿಲ್ ಗಳಿಗೆ ಹೋಗುತ್ತಿದೆ. ಹೀಗಾಗಿ ಎಪಿಎಂಸಿಯಲ್ಲಿ ಕೆಲಸ ಕಡಿಮೆಯಿದೆ. ಇನ್ನೊಂದೆಡೆ ಅಕ್ರಮವಾಗಿ ಮದ್ಯವನ್ನು ದುಬಾರಿ ಬೆಲೆಗೆ ಕೊಂಡುಕೊಳ್ಳಬೇಕಿದೆ ಅಂತ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಹಾಗೂ ಪೊಲೀಸರು ನಿರಂತರ ದಾಳಿಗಳನ್ನು ಮಾಡಿ ಅಕ್ರಮ ಮದ್ಯ, ಕಳ್ಳಭಟ್ಟಿ, ಸಿಎಚ್ ಪೌಡರ್ ಕಲಬೆರಕೆ ಸೇಂದಿ ಮಾರುವವರನ್ನ ಬಂಧಿಸಿದ್ದು, ಪ್ರತಿದಿನ ಪ್ರಕರಣಗಳನ್ನ ಭೇದಿಸುತ್ತಿದ್ದಾರೆ. ಆದರೂ ಅಕ್ರಮ ಮಾರಾಟ ನಡೆಯುತ್ತಿದೆ.

    ತೆಲಂಗಾಣದ ಗದ್ವಾಲ್, ಕೃಷ್ಣಾದಿಂದ ಈ ಹಿಂದೆ ಅಕ್ರಮ ಸೇಂದಿ ಹಾಗೂ ಸಿಎಚ್ ಪೌಡರ್ ಬರುತ್ತಿತ್ತು. ಈಗ ರೈಲು ಮಾರ್ಗ ಬಂದ್ ಆಗಿದೆ. ಅಂತರರಾಜ್ಯ ಚೆಕ್ ಪೋಸ್ಟ್‍ಗಳು ಇರುವುದರಿಂದ ಸಿಎಚ್ ಪೌಡರ್ ಸರಬರಾಜು ನಿಂತಿದೆ. ಆದರೆ ದಂಧೆ ಕೋರರು ನಕಲಿ ಕಲಬೆರಕೆ ಹೆಂಡ ತಯಾರಿ ಕೂಲಿಕಾರ್ಮಿಕರಿಗೆ, ಹಮಾಲಿಗಳಿಗೆ ಮಾರುತ್ತಿರುವುದು ಬೆಳಕಿಗೆ ಬಂದಿದೆ.