Tag: HALSINA HANNU KADUBU

  • ಇಂದು ಮಾಡಿ ಹಲಸಿನ ಹಣ್ಣಿನ ಕಡುಬು

    ಇಂದು ಮಾಡಿ ಹಲಸಿನ ಹಣ್ಣಿನ ಕಡುಬು

    ಲಸಿನ ಹಣ್ಣಿನ ಕಡುಬು ಕರಾವಳಿಯ ಭಾಗದಲ್ಲಿ ಹೆಚ್ಚಾಗಿ ಮಾಡುತ್ತಾರೆ. ಇದು ಹಲಸಿನ ಹಣ್ಣಿನ ಸೀಸನ್‍ಅಲ್ಲಿ ಮಾತ್ರ ಮಾಡಬಹುದಾದ ತಿಂಡಿಯಾಗಿದೆ. ಮಳೆಗಾಲದಲ್ಲಿ ಬಿಸಿಬಿಸಿಯಾದ ಈ ಕುಡುಬು ಜೊತೆಗೆ ತುಪ್ಪ ಹಾಕಿ ತಿನ್ನಬೇಕು. ಹೆಚ್ಚು ಸಿಹಿ ಇರದೆ ಇರುವುದರಿಂದ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ.

    ಬೇಕಾಗುವ ಸಾಮಗ್ರಿಗಳು:

    * ಹಲಸಿನ ಹಣ್ಣು- 2 ಕಪ್
    * ಬೆಲ್ಲ – ಅರ್ಧ ಕಪ್
    * ಏಲಕ್ಕಿ ಪುಡಿ – ಕಾಲು ಚಮಚ
    * ತೆಂಗಿನಕಾಯಿ – 2 ಕಪ್
    * ಅಕ್ಕಿ – 2 ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಬಾಳೆ ಎಲೆ

    ಮಾಡುವ ವಿಧಾನ:
    * 2 ಕಪ್ ಅಕ್ಕಿ ತೊಳೆದು 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
    * ಹಲಸಿನ ಹಣ್ಣನ್ನು ಬಿಡಿಸಿಕೊಂಡು, ರುಬ್ಬಲು ಸುಲಭವಾಗುವ ರೀತಿಯಲ್ಲಿ ಕತ್ತರಿಸಿಟ್ಟುಕೊಳ್ಳಿ.

    * ರುಬ್ಬುವ ಜಾರ್ ತೆಗೆದುಕೊಂಡು 2 ಕಪ್ ಕತ್ತರಿಸಿದ ಹಲಸಿನ ಹಣ್ಣು, ಬೆಲ್ಲ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ನೀರು ಹಾಕದೇ ರುಬ್ಬಿಕೊಳ್ಳಬೇಕು.

    * ಈಗ ತಯಾರಾದ ಹಲಸಿನ ಹಣ್ಣಿನ ಮಿಶ್ರಣಕ್ಕೆ ತೆಂಗಿನಕಾಯಿ ಮತ್ತು ನೆನೆಸಿದ ಅಕ್ಕಿಯನ್ನು ಸೇರಿಸಿ. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ, ನೀರು ಸೇರಿಸದೇ ಎಲ್ಲವನ್ನೂ ರುಬ್ಬಿಕೊಳ್ಳಬೇಕು.

    * ಮಿಶ್ರಣ ಸಿದ್ಧವಾದ ನಂತರ, ಬಾಳೆ ಎಲೆಗಳನ್ನು ತೆಗೆದುಕೊಂಡು ಅದಕ್ಕೆ ಮಿಶ್ರಣವನ್ನು ಎಲೆಯ ಮೇಲೆ ಹರಡಿ. ಈಗ 4 ಬದಿಗಳಿಂದ ಎಲೆಗಳನ್ನು ಮುಚ್ಚಿ. ಇಡ್ಲಿ ಸ್ಟೀಮರ್ ನಲ್ಲಿ ಎಲ್ಲಾ ಎಲೆಗಳನ್ನು ಇದೇ ರೀತಿ ಮಾಡಿ ಒಳಗಿಟ್ಟು ಚೆನ್ನಾಗಿ ಬೇಯಿಸಿದರೆ ರುಚಿಯಾದ ಹಲಸಿನ ಹಣ್ಣು ಕಡುಬು ಸವಿಯಲು ಸಿದ್ಧವಾಗುತ್ತದೆ.