Tag: half lockdown

  • ಶಿವಮೊಗ್ಗದಲ್ಲಿ ನಾಳೆಯಿಂದ ಹಾಫ್ ಲಾಕ್‍ಡೌನ್

    ಶಿವಮೊಗ್ಗದಲ್ಲಿ ನಾಳೆಯಿಂದ ಹಾಫ್ ಲಾಕ್‍ಡೌನ್

    -ಬೆಳಗ್ಗೆ 5 ರಿಂದ ಮಧ್ಯಾಹ್ನ 12ರವರೆಗೆ ವ್ಯಾಪಾರ

    ಶಿವಮೊಗ್ಗ: ಕೊರೊನಾ ನಿಯಂತ್ರಣದ ಕ್ರಮವಾಗಿ ಶಿವಮೊಗ್ಗ ಜಿಲ್ಲೆಯಾದ್ಯಂತ ನಾಳೆಯಿಂದ ಮುಂದಿನ ಆದೇಶದವರೆಗೆ ಮುಂಜಾನೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದ ಬಳಿಕ ಈ ತೀರ್ಮಾನ ಪ್ರಕಟಿಸಿದರು. ಪೆಟ್ರೋಲ್ ಬಂಕ್‍ಗಳು, ಮದ್ಯದ ಅಂಗಡಿಗಳು, ಕಚೇರಿಗಳು ಸೇರಿದಂತೆ ಎಲ್ಲಾ ವ್ಯಾಪಾರ ವಹಿವಾಟುಗಳನ್ನು ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಕೈಗಾರಿಕಾ ಚಟುವಟಿಕೆಗಳಿಗೆ ಸಮಯ ನಿರ್ಬಂಧ ವಿಧಿಸಿರುವುದಿಲ್ಲ. ಆದರೆ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಹೊಂದಿರಬೇಕು. ಕಾರ್ಮಿಕರಿಗೆ ಗುರುತಿನ ಚೀಟಿಯನ್ನು ಒದಗಿಸುವುದು ಮಾಲೀಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

    ಹಬ್ಬ ಹರಿದಿನಗಳನ್ನು ಸಾಮೂಹಿಕವಾಗಿ ಆಚರಿಸಲು ಅವಕಾಶವಿರುವುದಿಲ್ಲ. ಎಲ್ಲಾ ಹಬ್ಬಗಳನ್ನು ಮನೆಗಳಲ್ಲಿಯೇ ಆಚರಿಸಬೇಕು. ಮದುವೆ, ಅಂತ್ಯಸಂಸ್ಕಾರ ಚಟುವಟಿಕೆಗಳಿಗೆ ಈ ಹಿಂದೆ ನಿಗದಿಪಡಿಸಲಾಗಿದ್ದ ಮಾನದಂಡವನ್ನು ಕಟ್ಟುನಿಟ್ಟಿನಿಂದ ಪಾಲಿಸಲು ಸೂಚಿಸಲಾಗಿದೆ ಎಂದರು.

    ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಗುಂಪುಗೂಡುವುದು, ಮಾಸ್ಕ್ ಧರಿಸದೇ ಇರುವುದು ಸೇರಿದಂತೆ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದರು.

    ಇದಕ್ಕೂ ಮೊದಲು ನಡೆದ ಸಮಾಲೋಚನಾ ಸಭೆಯಲ್ಲಿ ಚೇಂಬರ್ ಆಫ್ ಕಾಮರ್ಸ್, ಲಾರಿ ಮಾಲೀಕರ ಸಂಘ, ಅಟೋ ಕಾಂಪ್ಲೆಕ್ಸ್ ಸಂಘ, ಸಗಟು ತರಕಾರಿ ವ್ಯಾಪಾರಿಗಳ ಸಂಘ, ಮಾಚೇನಹಳ್ಳಿ ಕೈಗಾರಿಕಾ ವಸಾಹತು ಸಂಘ, ವಿಶ್ವೇಶ್ವರಯ್ಯ ಸಣ್ಣ ಕೈಗಾರಿಕೆಗಳ ಸಂಘ, ಬಸ್ ಮಾಲೀಕರ ಸಂಘ, ಜವಳಿ ವರ್ತಕರ ಸಂಘ, ರಿಕ್ಷಾ ಚಾಲಕರ ಒಕ್ಕೂಟ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

    ಕೈಗಾರಿಕೆಗಳಿಗೆ ವಿನಾಯಿತಿ ನೀಡಬೇಕು, ಅಟೋ ಕಾಂಪ್ಲೆಕ್ಸ್ ನಲ್ಲಿ ಸಂಜೆ 6 ರವರೆಗೆ ಚಟುವಟಿಕೆಗಳಿಗೆ ಅವಕಾಶ ನೀಡಬೇಕು, ಸೀಲ್‍ಡೌನ್ ಪ್ರದೇಶದಲ್ಲಿರುವ ಬಡವರಿಗೆ ಜಿಲ್ಲಾಡಳಿತದ ವತಿಯಿಂದ ಉಚಿತವಾಗಿ ತರಕಾರಿ, ದಿನಸಿ ವಿತರಿಸಬೇಕು, ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕು ಇತ್ಯಾದಿ ಸಲಹೆಗಳು ಬಂದವು.

    ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಅರಗ ಜ್ಞಾನೇಂದ್ರ, ಆಯನೂರು ಮಂಜುನಾಥ್, ಪ್ರಸನ್ನ ಕುಮಾರ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯತ್ ಸಿಇಒ ಎಂ.ಎಲ್.ವೈಶಾಲಿ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಮತ್ತಿತರರು ಉಪಸ್ಥಿತರಿದ್ದರು.

  • ಹಾಫ್ ಲಾಕ್‍ಡೌನ್- ಯಶವಂತಪುರ ಮಾರುಕಟ್ಟೆಗೆ ಸಮಯ ನಿಗದಿ

    ಹಾಫ್ ಲಾಕ್‍ಡೌನ್- ಯಶವಂತಪುರ ಮಾರುಕಟ್ಟೆಗೆ ಸಮಯ ನಿಗದಿ

    ಬೆಂಗಳೂರು: ನಗರದ ಜನನಿಬಿಡ ಪ್ರದೇಶದಲ್ಲಿ ಹಾಫ್ ಲಾಕ್‍ಡೌನ್ ಜಾರಿ ಆಗುತ್ತಿದೆ. ಯಶವಂತಪುರದ ಮಾರುಕಟ್ಟೆಯ ವ್ಯಾಪಾರಕ್ಕೆ ಬಿಬಿಎಂಪಿ ಸಮಯ ನಿಗದಿ ಮಾಡಿದೆ.

    ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಕೊಡಲಾಗಿದೆ. ಯಶವಂತಪುರ ಮಾರ್ಕೆಟ್ ಹೂವು, ಹಣ್ಣು, ತರಕಾರಿ, ದಿನಸಿ ಅಂಗಡಿಗಳ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ಕೊರೊನಾ ಅಬ್ಬರ ಹೆಚ್ಚಾದ ಹಿನ್ನೆಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

    ಇತ್ತ ಶಾಂತಿನಗರದಲ್ಲಿ ಸೆಲ್ಫ್ ಲಾಕ್‍ಡೌನ್ ಮಾಡಿಕೊಳ್ಳುವಂತೆ ಶಾಸಕ ಎನ್.ಎ.ಹ್ಯಾರಿಸ್ ವ್ಯಾಪಾರಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಇಂದು ಬೆಳಗ್ಗೆ ಶಾಂತಿನಗರದ ಪ್ರಮುಖ ರಸ್ತೆಗಳಲ್ಲಿ ಸೆಲ್ಫ್ ಲಾಕ್‍ಡೌನ್ ಮಾಡುವ ಕುರಿತು ಅಭಿಯಾನ ಆರಂಭಿಸಿದ್ದಾರೆ. ಸಚಿವರ ಅಭಿಯಾನಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಾಂತಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಂ.ಜಿ.ರೋಡ್, ಬ್ರಿಗೇಡ್, ಚರ್ಚ್ ಸ್ಟ್ರೀಟ್ ನಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ಆರಂಭವಾಗಿದ್ರೆ, ಕೆಲ ವ್ಯಾಪಾರಿಗಳು ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಕೊಂಡಿದ್ದಾರೆ.

  • ಹಾಫ್ ಲಾಕ್‍ಡೌನ್ ಜಾರಿಯಾದ್ರೆ ಯಾವ ನಿಯಮಗಳಿರುತ್ತೆ?

    ಹಾಫ್ ಲಾಕ್‍ಡೌನ್ ಜಾರಿಯಾದ್ರೆ ಯಾವ ನಿಯಮಗಳಿರುತ್ತೆ?

    ಬೆಂಗಳೂರು: ಕೊರೊನಾ ಅಟ್ಟಹಾಸದ ನಡುವೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಗಿದಿದೆ. ಈಗ ಹಾಫ್ ಲಾಕ್‍ಡೌನ್ ಬಗ್ಗೆ ಚರ್ಚೆ ಶುರುವಾಗಿದೆ. ಯಾವಾಗಿನಿಂದ ಹಾಫ್ ಲಾಕ್‍ಡೌನ್ ಜಾರಿ ಮಾಡ್ತಾರೆ? ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಏನೆಲ್ಲಾ ಕ್ರಮ ಕೈಗೊಳ್ಳುತ್ತೆ ಎಂಬ ಪ್ರಶ್ನೆಗಳು ಎದ್ದಿವೆ. ಈ ಬೆನ್ನಲ್ಲೇ ಹಾಫ್ ಲಾಕ್‍ಡೌನ್ ಬಗ್ಗೆ ತಜ್ಞರು ನೀಡಿದ್ದ ವರದಿಯನ್ನು ಮರು ಪರಿಶೀಲಿಸಲು ಸರ್ಕಾರ ಮುಂದಾಗಿದೆ.

    ಈ ಬಗ್ಗೆ ಇಂದು ಕೂಡ ಟಾಸ್ಕ್ ಫೋರ್ಸ್ ಸಭೆ ನಡೆಸಿದ ಸಿಎಂ, ತಾತ್ಕಾಲಿಕವಾಗಿ ಸಚಿವರಿಗೆ ಕೆಲವೊಂದು ಜವಾಬ್ದಾರಿಗಳನ್ನು ಹಂಚಿಕೆ ಮಾಡಿದ್ದಾರೆ. ಹೆಚ್ಚು ಸೋಂಕಿತರು ಕಂಡು ಬರುವ ಸ್ಥಳಗಳಲ್ಲಿ ಸೀಲ್‍ಡೌನ್ ಹೆಚ್ಚಿಸಿ ಬಿಗಿ ಗೊಳಿಸಲು ಸೂಚನೆ ನೀಡಿದ್ದಾರೆ. ಬೀದಿ ಬದಿ ವ್ಯಾಪಾರಿಗಳಿಗೆ, ಹಣ್ಣು ತರಕಾರಿ ವ್ಯಾಪಾರಿಗಳಿಗೆ, ಆದ್ಯತೆ ಮೇರೆಗೆ ಕೊರೊನಾ ಪರೀಕ್ಷೆ ನಡೆಸಲು ಸೂಚಿಸಿದ್ದಾರೆ. ಜೊತೆಗೆ ಸಿಎಂ ಯಡಿಯೂರಪ್ಪ ನಾಡಿದ್ದು ಅಂದ್ರೆ ಸೋಮವಾರ ಬೆಂಗಳೂರಿನ ಎಲ್ಲಾ ಪಕ್ಷಗಳ ಶಾಸಕರ ಸಭೆ ಕರೆದಿದ್ದಾರೆ.

    ಈ ಸಭೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿ, ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಅಂತಿಮವಾಗಿ ಗುರುವಾರ ನಡೆಯೋ ಸಚಿವ ಸಂಪುಟ ಸಭೆಯಲ್ಲಿ ಹಾಫ್ ಲಾಕ್‍ಡೌನ್ ಬಗ್ಗೆ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿ ನಿರ್ಧರಿಸಲಿದ್ದಾರೆ.

    ಹಾಫ್ ಲಾಕ್‍ಡೌನ್ ಹೇಗಿರುತ್ತೆ?
    ಬೆಂಗಳೂರಿನ ಎಲ್ಲಾ ವಲಯಗಳಲ್ಲಿ ಅರ್ಧ ಚಟುವಟಿಕೆ, ಅರ್ಧ ನಿರ್ಬಂಧ ಮಾಡಬಹುದು. ಕಾರ್ಮಿಕರು, ಸರ್ಕಾರಿ & ಖಾಸಗಿ ಉದ್ಯೋಗಿಗಳಿಗೆ ರೊಟೇಷನ್ (ಪಾಳಿ) ಪದ್ಧತಿಯನ್ನು ಜಾರಿಗೆ ತರುವಂತೆ ಸೂಚಿಸಬಹುದು. ಸರ್ಕಾರಿ/ಖಾಸಗಿ ಉದ್ಯೋಗಿಳಿಗೆ ವರ್ಕ್ ಫ್ರಂ ಹೋಮ್‍ಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆಗಳಿವೆ. ಬೆಂಗಳೂರಿನೊಳಗೆ ಸೀಮಿತ ಓಡಾಟಕ್ಕೆ ಮಾತ್ರ ಅವಕಾಶ ನೀಡಬಹುದು.

    ಬಿಎಂಟಿಸಿ ಬಸ್‍ಗಳ ಸಂಚಾರ ಪ್ರಮಾಣದಲ್ಲಿ ಶೇ.50 ರಷ್ಟು ಇಳಿಕೆ ಮಾಡಬಹುದು. ಟ್ಯಾಕ್ಸಿ, ಆಟೋ, ಬೈಕ್ ಸಂಚಾರಕ್ಕೆ ಸಮ-ಬೆಸ ಪದ್ಧತಿ ಜಾರಿ ತರಬಹುದು. ಅಂಗಡಿ ಮುಂಗಟ್ಟು, ಶಾಪಿಂಗ್ ಕಾಂಪ್ಲೆಕ್ಸ್, ಮಾಲ್ ತೆರೆಯಲು ಮತ್ತು ದೇವಸ್ಥಾನ ಸೇರಿ ಧಾರ್ಮಿಕ ಕೇಂದ್ರಗಳ ಓಪನ್‍ಗೆ ಸಮಯ ನಿಗದಿ ಮಾಡಬಹುದು. ಗೌರಿ ಗಣೇಶ ಹಬ್ಬದ ಆಚರಣೆಗೂ ಕೆಲವು ನಿಯಮ ಜಾರಿ ಸಂಭವವಿದೆ.

  • ಬೆಂಗಳೂರಿನಲ್ಲಿ ಜುಲೈ 7ರ ಬಳಿಕ `ಹಾಫ್’ ಲಾಕ್‍ಡೌನ್ ಸಾಧ್ಯತೆ – ಯಾವುದೆಲ್ಲ ಬಂದ್‌ ಇರಬಹುದು?

    ಬೆಂಗಳೂರಿನಲ್ಲಿ ಜುಲೈ 7ರ ಬಳಿಕ `ಹಾಫ್’ ಲಾಕ್‍ಡೌನ್ ಸಾಧ್ಯತೆ – ಯಾವುದೆಲ್ಲ ಬಂದ್‌ ಇರಬಹುದು?

    ಬೆಂಗಳೂರು: ಎಲ್ಲದ್ದಕ್ಕೂ 7ನೇ ತಾರೀಖಿನವರೆಗೆ ಕಾಯಿರಿ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಸರ್ಕಾರ ಲಾಕ್‌ಡೌನ್‌ ಮಾಡುತ್ತಾ ಎಂಬ ಪ್ರಶ್ನೆ ಎದ್ದರೂ ಲಾಕ್‌ಡೌನ್‌ ಬದಲು ಹಾಫ್‌ ಲಾಕ್‌ಡೌನ್‌ ಮಾಡುವ ಸಾಧ್ಯತೆಯಿದೆ.

    ಹೌದು. 7ನೇ ತಾರೀಖಿನನವರೇ ಕಾಯಿರಿ. ನಂತರ ಮುಖ್ಯಮಂತ್ರಿಗಳು ಹಲವಾರು ಬದಲಾವಣೆಗಳನ್ನು ತೆಗೆದುಕೊಳ್ಳಲಿದ್ದಾರೆ. 7ರ ನಂತರ ಮತ್ತಷ್ಟು ಕಠಿಣ ಕ್ರಮಗಳನ್ನು ಪ್ರಕಟಿಸುತ್ತೇವೆ ಎಂಬುದಾಗಿ ಆರ್‌.ಅಶೋಕ್‌ ತಿಳಿಸಿದ ಬೆನ್ನಲ್ಲೇ ಮತ್ತೆ ಲಾಕ್‌ಡೌನ್‌ ಕುರಿತ ಚರ್ಚೆ ಆರಂಭವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಪೂರ್ಣವಾಗಿ ಲಾಕ್‌ಡೌನ್‌ ಮಾಡುವುದು ಅನುಮಾನ ಎನ್ನಲಾಗುತ್ತಿದ್ದು ಸೀಮಿತವಾಗಿ ಲಾಕ್‌ಡೌನ್‌ ಮಾಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

    ಹಾಫ್‌ ಲಾಕ್‌ಡೌನ್‌ ಸಾಧ್ಯತೆ ಹೇಗಿರಬಹುದು?
    ಶನಿವಾರ, ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಜನ ರಸ್ತೆಗೆ ಇಳಿಯುತ್ತಾರೆ. ಜನ ಸಂಚಾರವನ್ನು ಕಡಿಮೆ ಮಾಡಿದರೆ ಕೊರೊನಾ ಹರಡುವ ವೇಗ ಕಡಿಮೆ ಮಾಡಬಹುದು ಎಂದು ತಜ್ಞರು ಸಲಹೆ ನೀಡಿದ್ದರು. ಈಗಾಗಲೇ ಭಾನುವಾರ ಲಾಕ್‌ಡೌನ್‌ ನಿರ್ಧಾರ ಪ್ರಕಟವಾಗಿದೆ. ಈಗ ಶನಿವಾರವೂ ಲಾಕ್‌ಡೌನ್‌ ಮಾಡುವ ನಿರ್ಧಾರ ಪ್ರಟವಾಗುವ ಸಾಧ್ಯತೆಯಿದೆ.

    ಬೆಂಗಳೂರಿಗೆ ಹೊಂದಿಕೊಂಡಿರುವ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ ರಸ್ತೆಗಳನ್ನು ಬಂದ್ ಮಾಡಿ. ಜಿಲ್ಲೆಗಳಿಂದ ಬೆಂಗಳೂರಿಗೆ ಉದ್ಯೋಗ, ಇನ್ನಿತರೆ ಕೆಲಸಕ್ಕೆ ಜನ ಜಾಸ್ತಿ ಬರುತ್ತಾರೆ. ಮೊದಲು ಬೆಂಗಳೂರಿನ ವಾಹನ ದಟ್ಟಣೆ ಜನ ದಟ್ಟಣೆ ಕಡಿಮೆ ಮಾಡಬೇಕು. ಇದು ತಕ್ಷಣ ಆಗಬೇಕು. ಬೆಂಗಳೂರಿಗೆ ಮೂರು ವಾರ ಹೊರ ಜಿಲ್ಲೆಯಿಂದ ಬರುವವರನ್ನು ಬಿಡಬೇಡಿ . ಅಂತರ್ ರಾಜ್ಯ ಓಡಾಟಕ್ಕೆ 3 ವಾರ ಕಡಿವಾಣ ಹಾಕಿದರೆ ಕೊರೊನಾ ಹರಡುವ ಪ್ರಮಾಣ ಕಡಿಮೆಯಾಗಬಹುದು ಎಂದು ತಜ್ಞರು ಸಿಎಂಗೆ ಸಲಹೆ ನೀಡಿದ್ದರು. ಈ ಸಲಹೆಯಂತೆ ಸರ್ಕಾರ ಅಂತರ್‌ ಜಿಲ್ಲಾ ವಾಹನ ಸಂಚಾರಕ್ಕೆ ನಿರ್ಬಂಧ ಹೇರುವ ಸಾಧ್ಯತೆ ಹೆಚ್ಚಿದೆ.

    ಸುದ್ದಿಗೋಷ್ಠಿಯಲ್ಲಿ ಆರ್‌.ಅಶೋಕ್‌, ಪಾರ್ಕ್‌ಗಳಿಗೆ ಜನ ಜಾಸ್ತಿ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ವಾಕಿಂಗ್‌ ಮಾಡುವ ಜೊತೆ ಅಲ್ಲೇ ಕುಳಿತುಕೊಳ್ಳುತ್ತಾರೆ. ಹೀಗಾಗಿ ಪಾರ್ಕ್‌ಗಳನ್ನು ಬಂದ್‌ ಮಾಡಿ ಎಂಬ ಸಲಹೆ ಬಂದಿದೆ ಎಂದು ತಿಳಿಸಿದ್ದರು. ಹೀಗಾಗಿ ಜುಲೈ 7ರ ನಂತರ ಪಾರ್ಕ್‌ ಸೇರಿದಂತೆ ಹೆಚ್ಚು ಜನದಟ್ಟಣೆ ಸೇರುವ ಜಾಗಗಳನ್ನು ಬಂದ್‌ ಮಾಡುವ ಸಾಧ್ಯತೆಯಿದೆ.

    ಜುಲೈ 7ರಿಂದ ಯಾಕೆ?
    ಈಗಾಗಲೇ ಆರಂಭಗೊಂಡಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಜುಲೈ 3 ಶುಕ್ರವಾರಕ್ಕೆ ಕೊನೆಯಾಗಲಿದೆ. ಭಾನುವಾರ ಹೇಗೂ ಲಾಕ್‌ಡೌನ್‌ ಇದೆ. ಹೀಗಾಗಿ ಜುಲೈ 7 ಮಂಗಳವಾರಿಂದ ಬೆಂಗಳೂರಿನಲ್ಲಿ ಮಾತ್ರ ಹಾಫ್‌ ಲಾಕ್‌ಡೌನ್‌ ಜಾರಿ ಬಗ್ಗೆ ಚರ್ಚೆ ನಡೆಯುತ್ತಿದೆ.

    ಲಾಕ್‌ಡೌನ್‌ ಯಾಕಿಲ್ಲ?
    ಬೆಂಗಳೂರಿನಲ್ಲಿ ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ಪ್ರಕರಣ ವರದಿಯಾದರೆ ಲಾಕ್‌ಡೌನ್‌ ಮಾಡಿ ಎಂದು ತಜ್ಞರು ಸಲಹೆ ನೀಡಿದ್ದರು. ಈ ಸಲಹೆಗೆ ಪೂರ್ಣವಾಗಿ ಲಾಕ್‌ಡೌನ್‌ ಮಾಡಿದರೆ ಸರ್ಕಾರಕ್ಕೆ ಆದಾಯ ಬರುವುದು ನಿಂತು ಹೋಗುತ್ತದೆ. ಸರ್ಕಾರ ನಡೆಸುವುದೇ ಕಷ್ಟವಾಗಬಹುದು. ಯಾವುದೇ ಕಾರಣಕ್ಕೂ ಪೂರ್ಣವಾಗಿ ಲಾಕ್‌ಡೌನ್‌ ಮಾಡುವುದಿಲ್ಲ ಎಂದು ಸಿಎಂ ಬೆಂಗಳೂರಿನ ಶಾಸಕರ ಜೊತೆಗಿನ ಸಭೆಯನ್ನು ತಿಳಿಸಿದ್ದರು. ಈ ಕಾರಣಕ್ಕೆ ಸರ್ಕಾರ ಹಾಫ್‌ಲಾಕ್‌ಡೌನ್‌ ಮಾಡುವ ಸಾಧ್ಯತೆ ಹೆಚ್ಚಿದೆ.